ಭಾನುವಾರ, ಜನವರಿ 15, 2017

ಉತ್ತರಕರ್ನಾಟಕದ ಶಿಲ್ಪಕಲೆಯ ವೈಭವ ಹಂಪೆ, ಬಾದಾಮಿ, ಐಹೊಳೆ,ಬಿಜಾಪುರ, ಗದಗ ಭಾಗ -೩

ಬಿಜಾಪುರ ಯಾನೆ ವಿಜಯಪುರ

 ಐಹೊಳೆಯಿಂದ ಬಿಜಾಪುರಕ್ಕೆ ೧೨೦ಕಿಮೀ. ತಲಪಲು ೩ ಗಂಟೆ ಬೇಕು. ದಾರಿಯಲ್ಲಿ ಅಮೀನಗಡದ ಪ್ರಸಿದ್ಧ ಖಾದ್ರಿ ಕರದಂಟು ತೆಗೆದುಕೊಂಡೆವು. ಕಿಲೋಗೇ ರೂ. ೮೦೦. ನಮ್ಮ ವಾಹನದಲ್ಲಿ ನಾವು ೧೪ ಮಂದಿ. ಮಂಜುನಾಥ, ಶೋಭಾ, ಸುಬ್ಬಲಕ್ಷ್ಮಿ, ರುಕ್ಮಿಣಿಮಾಲಾ, ಚಿತ್ಕಲಾ, ಜಯಶ್ರೀ, ಸುವರ್ಣ, ಶೈಲಜಾ, ರಮೇಶ, ಐದು ಮಕ್ಕಳಾದ ಸೌಪರ್ಣಿಕಾ, ಮೋನಿಶಾ, ಚರಿತಾ ಇವರು ಒಂದೇ ಶಾಲೆಯಲ್ಲಿ ಒಂಬತ್ತನೆ ಈಯತ್ತೆಯಲ್ಲಿ ಓದುತ್ತಿರುವವರು. (ಮೂರೂ ಮಂದಿಯೂ ಸ್ನೇಹಿತೆಯರು.) ಸ್ನೇಹ (ಇಂಜಿನಿಯರಿಂಗ್) ಹಾಗೂ ಸುಷ್ಮಾ (ಪದವಿ) ಓದುತ್ತಿರುವರು. ಮಂಜುನಾಥ ಹಾಗೂ ಈ ಮಕ್ಕಳು ಕಲ್ಲನ್ನೂ ಮಾತಾಡಿಸುವ ಸ್ವಭಾವದವರಾದ ಕಾರಣ ಪ್ರಯಾಣದ ಏಕತಾನತೆ ಕಾಡಲೇ ಇಲ್ಲ. ಸೀಬೆಹಣ್ಣು ಹೆಚ್ಚುತ್ತ, ಅದಕ್ಕೆ ಕಾರದ ಪುಡಿ (ಒಳೆಮೆಣಸು, ಕೆಂಪುಮೆಣಸಿನಪುಡಿಗೆ ಉಪ್ಪು ಬೆರೆಸಿ ಮಂಜುನಾಥ ತಂದಿದ್ದರು) ಹಾಕಿ ತಿನ್ನುತ್ತ, ಕೋಡುಬಳೆ, ಪುರಿ, ಖಾರಸೇವು ಇತ್ಯಾದಿ ಕುರುಕಲು ತಿಂಡಿ ಕೆಲವರು ತಂದಿದ್ದರು. ನಾನು ಕಿತ್ತಳೆ ತೆಗೆದುಕೊಂಡು ಹೋಗಿದ್ದೆ. ಅವನ್ನೆಲ್ಲ ಹಂಚಿಕೊಂಡು ಕೈಬಾಯಿಗೆ ಕೆಲಸ ಕೊಡುತ್ತ ಪ್ರಯಾಣದ ಮಜ ಅನುಭವಿಸಿದೆವು. ದಾರಿಯುದ್ದಕ್ಕೂ ಮಕ್ಕಳು ದೊಡ್ಡವರು ಸೇರಿ ಅಂತ್ಯಾಕ್ಷರೀ ನಡೆಯಿತು. ನಮ್ಮ ವಾಹನದ ಚಾಲಕ ವಿಷ್ಣು. ೨೨ರ ಪ್ರಾಯದವನು. ಪ್ರಾರಂಭದಲ್ಲಿ ನಗು ಮಾತು ಏನೂ ಇರಲಿಲ್ಲ. ಬಿಗುವಾಗಿಯೇ ಇದ್ದ.  ಕೆಲವೇ ಗಂಟೆಯಲ್ಲಿ ಅವನ ಮುಖದಲ್ಲಿ ನಗು ಅರಳಿಸುವಲ್ಲಿ ಮಂಜುನಾಥ ಯಶಸ್ವೀಯಾದರು! ವಿಷ್ಣು ತನ್ನ ೧೮ನೇ ವಯಸ್ಸಿನಲ್ಲೆ ಕಾರು ಚಾಲನೆ ಕಲಿತು ಈ ವೃತ್ತಿಗೆ ಬಂದಿದ್ದಂತೆ. ಈಗ ಸ್ವಂತಕ್ಕೆ ಕಾರು ಕೊಂಡು ಬೆಂಗಳೂರಿನ ಇನ್ಫೋಸಿಸ್ ಕಂಪನಿಗೆ ಬಾಡಿಗೆಗೆ ಓಡಿಸಲು ಕೊಟ್ಟಿರುವನಂತೆ. ಊರು ಕುಂದಾಪುರ. ವಾಸ ಹುಬ್ಬಳ್ಳಿ. ಅಲ್ಲೇ ಅಪ್ಪ ಅಮ್ಮ ಇರುವುದಂತೆ.
  ವಿಷ್ಣು ಈಗಿನ ಕಾಲದ ಚಲನಚಿತ್ರ ಗೀತೆಗಳನ್ನು ವಾಹನ ಚಾಲನೆವೇಳೆ ಹಾಕುತ್ತಿದ್ದ. ನಾವು ಕೆಲವರು, ಕೆಲವು ಗೀತೆಗಳನ್ನು ಕೇಳಲು ಆಗುವುದಿಲ್ಲ, ಹಳೆ ಗೀತೆಗಳನ್ನು ಹಾಕಪ್ಪ ಎಂದಾಗ ಅವನ್ನು ಹಾಕುತ್ತಿದ್ದ. ಆಗ ಮಕ್ಕಳು ಹಿಂದಿನಿಂದ ‘ಬ್ರೋ, ಹಾಡು ಚೇಂಜ್ ಮಾಡಿ ಎಂದಾಗ ಖುಷಿಯಾಗಿ ಈಗಿನ ಜಮಾನದ ಜಗಮಗ ಗೀತೆಗಳನ್ನು ಹಾಕುತ್ತಿದ್ದ. ಬ್ರೋ ಎಂದರೆ ಏನು ಎಂದು ಅರ್ಥವಾಗದೆ ಅದೇನೆಂದು ಕೇಳಿದೆ ಮಕ್ಕಳನ್ನು. ಬ್ರದರ್ ಎಂಬುದರ ಹ್ರಸ್ವ ರೂಪವೇ ‘ಬ್ರೋ’! ಅದು ಈಗಿನ ಸ್ಟೈಲಂತೆ! ವಿಷ್ಣುವನ್ನು ಆಗಾಗ ರೇಗಿಸುತ್ತಲೇ ಅವನ ಚಾಲನೆಯ ನೀರಸತನದಿಂದ ಹೊರತಂದು ಖುಷಿಯಾಗಿಸುವಲ್ಲಿ ಮಂಜುನಾಥ ಅವರು ವಿಜಯೀದಾದರು. ನಿನಗೆ ಒಳ್ಳೆಯ ಹುಡುಗಿ ನೋಡುತ್ತೇನೆ. ನಿನ್ನ ಫೋಟೋ ತೆಗೆದುಕೊಂಡಿದ್ದೇನೆ. ಜಾತಕ ಎಲ್ಲ ಬೇಡ. ಜಾತಕ ನೋಡಿ ನಾನು ಮದುವೆಯಾಗಿದ್ದೇನಲ್ಲ ನೋಡು ನನ್ನ ಪಾಡು ಎಂದು ತಮಾಷೆ ಮಾಡುತ್ತಲೇ ಅವನ ಮೊಗ ಕೆಂದಾವರೆಯಂತೆ ಅರಳುತ್ತಿತ್ತು. ವಿಷ್ಣು ಆಗಾಗ ಅಡಿಕೆ ಜರ್ದಾ ಜಗಿಯುತ್ತಿದ್ದ. ನಾವೆಲ್ಲರೂ ಅವನಿಗೆ ಈ ಅಭ್ಯಾಸ ಬಿಟ್ಟುಬಿಡಪ್ಪ ಎಂದು ಸಲಹೆ ಕೊಟ್ಟೆವು. ಅವನೂ ನಾಳೆಯಿಂದಲೇ (ಆ ಸಲಹೆಯನ್ನು!) ಬಿಡುವೆ ಎಂದು ಸ್ವೀಕರಿಸಿದ.
     ದಾರಿಯುದ್ದಕ್ಕೂ ರಸ್ತೆ ಚೆನ್ನಾಗಿತ್ತು.  ಇಳಕಲ್ಲು ಊರಿನ ಫಲಕ ಕಂಡಾಗ ಇಳಕಲ್ಲು ಸೀರೆ ನೆನಪಿಗೆ ಬಂತು. ಆದರೆ ನಿಲ್ಲಿಸಲಿಲ್ಲ. ರಾತ್ರೆಯೊಳಗೆ ವಿಜಯಪುರ ಸೇರುವ ಗುರಿ ಇತ್ತಲ್ಲ. ದಾರಿ ಮಧ್ಯೆ ಒಂದು ಹೊಟೇಲಲ್ಲಿ ಊಟಕ್ಕೆ ನಿಲ್ಲಿಸಿದರು. ಅಲ್ಲಿ ಊಟ ಮಾಡಿ ಬಿಜಾಪುರ ತಲಪುವಾಗ ರಾತ್ರೆ ೧೦ ಗಂಟೆಯಾಗಿತ್ತು. ನಮ್ಮ ಕೋಣೆಯಲ್ಲಿ ನಾವು ನಾಲ್ಕು ಮಂದಿ (ಮೂರು ಮಂದಿ ಮಂಚದಲ್ಲಿ ಒಬ್ಬರು ನೆಲದಲ್ಲಿ ಹಾಸಿಗೆ ಹಾಕಿ) ಮಲಗಿದೆವು. 

ಬೆಂಗಳೂರ ಹೋಟೇಲು

 ೨೬-೧೨-೧೬ರಂದು ಬೆಳಗ್ಗೆ ಎದ್ದು ನಿತ್ಯ ಕರ್ಮಾದಿ ಮುಗಿಸಿ (ಬಿಸಿನೀರು ಇತ್ತು) ೮ ಗಂಟೆಗೆ ಹೊರಟು ನಮ್ಮ ವಸತಿ ಗೃಹದ ಹತ್ತಿರವೇ ಇದ್ದ ಬೆಂಗಳೂರ ಹೊಟೇಲಿಗೆ ಹೋದೆವು. ೨೯ ಮಂದಿ ಒಂದೊಂದು ತರಹದ ತಿಂಡಿ ಹೇಳಿದ್ದು ಕೇಳಿದ ಸರ್ವರ್ ಕಕ್ಕಾಬಿಕ್ಕಿ! ಅವರ ಸಹಾಯಕ್ಕೆ ಮಂಜುನಾಥ ಮುಂದಾದರು. ಒಂದು ಚೀಟಿ ಪಡೆದು ಪ್ರತಿಯೊಂದು ಮೇಜಿನ ಬಳಿ ಹೋಗಿ ಏನು ತಿಂಡಿ ಹೇಳಿದರೋ ಅದನ್ನು ಬರೆದುಕೊಂಡು ಟೇಬಲ್ ಸಂಖ್ಯೆ ಹಾಕಿ ಸರ್ವರ್ ಕೈಗೆ ಕೊಟ್ಟರು. ಅದೇ ತರಹವೇ ತಿಂಡಿ ಸರಬರಾಜಿಗೂ ನೆರವಾದರು. ಹೊಟೇಲು ಮಾಲೀಕರಲ್ಲಿ ಹೋಗಿ ಕೆಲಸ ಇದ್ದರೆ ಕೊಡಿ ಮಾಡುವೆ ಎಂದು ಹೆಳಿದರಂತೆ! ಮಾಲೀಕರಿಗೆ ಮಂಜುನಾಥರನ್ನು ಎಷ್ಟು ಖುಷಿಯಾಯಿತೆಂದರೆ ಅವರಿಗೆ ತಿಂಡಿ ಸರಬರಾಜು ಮಾಡಲು ಮುತುವರ್ಜಿ ವಹಿಸಿದರು. ತಿಂದ ತಿಂಡಿಗೆ ದುಡ್ಡು ಬೇಡ ಎಂದರಂತೆ. ಮಂಜುನಾಥ ಅವರು ತಾವು ತಿಂದ ತಿಂಡಿಗೂ ದುಡ್ಡು ಕೊಟ್ಟು ನಾನೇನೂ ಏಜೆಂಟ್ ಅಲ್ಲ. ಗೊಂದಲ ಆಗಬಾರದು ಹಾಗೂ ಬೇಗ ಬೇಗ ಆಗಬೇಕು ಎಂದು ನೆರವಾದದ್ದಷ್ಟೇ ಎಂದು ಹೇಳಿದರಂತೆ. ನಾನು ಈರುಳ್ಳಿ ದೋಸೆ ಮತ್ತು ಒಂದು ವಡೆ ತಿಂದೆ. ಬಲು ರುಚಿಯಾಗಿತ್ತು.

  ಗೋಳಗುಮ್ಮಟ- ಪಿಸುಗುಟ್ಟುವ ಗ್ಯಾಲರಿ

ನಾವು ಅಲ್ಲಿಂದ ಅನತಿ ದೂರದಲ್ಲೇ ಇದ್ದ ವಿಶ್ವವಿಖ್ಯಾತ ಗೋಳಗುಮ್ಮಟ ನೋಡಲು ಹೋದೆವು. ಅಲ್ಲಿ ಶ್ರೀಮಂತ ಕಟ್ಟೀಮನಿ ನಮ್ಮ ಬರುವನ್ನು ಕಾಯುತ್ತಿದ್ದರು. ಗೋಳಗುಮ್ಮಟ ದೂರಕ್ಕೆ ಒಂದೇ ಕಟ್ಟಡದಂತೆ ಭಾಸವಾಗುತ್ತದೆ. ಆದರೆ ಗುಮ್ಮಟದ ಎದುರು ಎರಡು ಕಟ್ಟಡಗಳಿವೆ.  ಮುಂದಿನ ಕಟ್ಟಡದಲ್ಲಿ ವಸ್ತು ಸಂಗ್ರಹಾಲಯ ಇದೆ. ನಾವು ಒಳಗೆ ಹೋಗಲಿಲ್ಲ. ಎರಡನೇ ಕಟ್ಟಡ ದಾಟಿ ಗೋಳಗುಮ್ಮಟ ಕಟ್ಟಡಕ್ಕೆ ಹೋದೆವು. ಏಳು ಮಹಡಿ ಹತ್ತಿ ಪಿಸುಗುಟ್ಟುವ ಗ್ಯಾಲರಿ ಎಂದು ಪ್ರಸಿದ್ಧವಾದ ಗೋಳಗುಮ್ಮಟದ ಮೇಲೆ ಹೋದೆವು. ಅಲ್ಲಿ ನಾವು ಮಾತಾಡಿದರೆ ಪ್ರತಿಧ್ವನಿ ಏಳುಸಲ ಕೇಳುತ್ತದೆ. ಕೇವಲ ಪಿಸುಗುಟ್ಟಿದರೂ ಸಾಕು ಆ ಧ್ವನಿ ದೊಡ್ಡದಾಗಿಯೇ ಕೇಳುತ್ತದೆ. ಇದರ ವ್ಯಾಸ ೪೪ ಮೀ. ಇಲ್ಲಿನ ವಿಶಾಲವಾದ ಮೇಲ್ಛಾವಣಿ ಹೊದಿಕೆ ಗುಮ್ಮಟದಿಂದ ಶಬ್ದತರಂಗಗಳು ಪ್ರತಿಧ್ವನಿಸಿ ವಿಶಿಷ್ಟ ಪರಿಣಾಮ ಉಂಟು ಮಾಡುತ್ತವೆ. ಪಿಸುಮಾತು, ಚಪ್ಪಾಳೆ, ಸಿಳ್ಳೆ ಏನೇ ಮಾಡಿದರೂ ಅದು ಏಳಕ್ಕೂ ಹೆಚ್ಚುಬಾರಿ ಮಾರ್ದನಿಸುತ್ತದೆ. ಜೊತೆಗೆ ಒಂದೆಡೆ ಮಾಡುವ ಸಣ್ಣ ಸದ್ದು ಈ ಗ್ಯಾಲರಿಯ ಯಾವುದೇ ಭಾಗದಲ್ಲಿ ಅಂದರೆ ೧೨೫ ಅಡಿ ದೂರದಲ್ಲಿ ಸ್ಪಷ್ಟವಾಗಿ ಕೇಳುತ್ತದೆ. ಹೀಗಾಗೆ ಇದಕ್ಕೆ ಪಿಸುಗುಟ್ಟುವ ಗ್ಯಾಲರಿ ಎಂದು ಹೆಸರು.
   ಶ್ರೀಮಂತಕಟ್ಟೀಮನಿ ಗೋಳಗುಮ್ಮಟದ ತಯಾರಿಯಲ್ಲಿಂದ ಹಿಡಿದು ಅದರ ಇತಿಹಾಸವನ್ನು ನಮ್ಮೆದುರು ತೆರೆದಿಟ್ಟರು. ಈ ಕಟ್ಟಡ ನಿರ್ಮಾಣಗೊಳ್ಳಲು ಮೂವತ್ತು ವರ್ಷ ಬೇಕಾಯಿತಂತೆ. (ಕ್ರಿಶ. ೧೬೨೬ರಲ್ಲಿ ಪ್ರಾರಂಭಿಸಿ ೧೬೫೬ರಲ್ಲಿ ಪೂರ್ಣಗೊಂಡಿತು) ಕೆಲಸಗಾರರಿಗೆ ಉಳಿದುಕೊಳ್ಳಲೆಂದು ಹೊರಗೆ ಸಾಲಾಗಿ ಕಟ್ಟಡಗಳಿತ್ತು. ಈಗ ಕೆಲವೆಲ್ಲ ಪಾಳುಬಿದ್ದಿವೆ.
  ನಾವು ಅಲ್ಲಿ ಚಪ್ಪಾಳೆ ತಟ್ಟಿ, ಮಾತಾಡಿ ಅದರ ಪ್ರತಿಧ್ವನಿ ಆಲಿಸಿ ಹರ್ಷಿಸಿದೆವು. ಶ್ರೀಮಂತಕಟ್ಟೀಮನಿ ನಮ್ಮನ್ನು ಒಂದು ಕಡೆ ನಿಲ್ಲಿಸಿ ಅವರು ನಮ್ಮ ಎದುರುಭಾಗಕ್ಕೆ ಹೋಗಿ ಅಲ್ಲಿಂದ ಮಾತಾಡಿದರು. ಅದು ನಮಗೆ ಕೇಳಿಸಿತು. ಅವರು ಕರವಸ್ತ್ರ ಕೊಡವಿದ, ಕೆಮ್ಮಿದ ಸದ್ದು ಕೇಳಿತು. ನಾಲ್ಕಾರು ಸಲ ಓಂಕಾರ ಹಾಕಿದರು. ಅದಂತೂ ಮಾರ್ದನಿಸಿದ ಪರಿಗೆ ಕೆಲವರೆಲ್ಲ ಕಣ್ಣುಮುಚ್ಚಿ ಧ್ಯಾನಸ್ಥರಾಗಿ ಕುಳಿತರು. ನಾವೂ ಓಂಕಾರ ಹಾಕಿ ಖುಷಿಪಟ್ಟೆವು.
ಗೋಳಗುಮ್ಮಟ ವಿಶ್ವದ ಎರಡನೇ ಅತಿ ದೊಡ್ಡ ಗುಮ್ಮಟ ಎಂಬ ಖ್ಯಾತಿ ಪಡೆದಿದೆ. ಬಿಜಾಪುರದಲ್ಲೇ ಅತ್ಯಂತ ಎತ್ತರದ ಕಟ್ಟಡವಾಗಿದ್ದು, ಸುಮಾರು ದೂರದವರೆಗೂ ಕಾಣುತ್ತದೆ. ಪ್ರಪಂಚದಲ್ಲೇ ಅತಿ ವಿಸ್ತಾರವಾದ ಹಜಾರವನ್ನು ಕಂಬಗಳ ಆಸರೆ ಇಲ್ಲದೆ ಕಟ್ಟಿದ ಮೇಲ್ಚಾವಣಿ ಇರುವ ಬೃಹತ್ ಗುಮ್ಮಟ. ಕಟ್ಟಡದ ಹೊರಮೈಯ ವಿನ್ಯಾಸ ಸುಂದರವಾಗಿ ರೂಪಿತವಾಗಿದೆ. ವಿಶಾಲ ಚಾವಣಿಯ ಮೇಲೆ ಮಧ್ಯದಲ್ಲಿರುವ ಬೃಹತ್ ಗುಮ್ಮಟ ಅರೆಗೋಳಾಕಾರದ್ದು. ಇದರ ತಳ ಕೂಡ ಮೀನಾರುಗಳ ಮೇಲಿರುವ ಚಿಕ್ಕ ಗುಮ್ಮಟಗಳಂತೆ ಪದ್ಮದಳಗಳಿಂದ ಸುತ್ತುವರಿಯಲ್ಪಟ್ಟಿದೆ. ಅಲ್ಲದೆ ಗೋಡೆಗಳ ಮೇಲೆಲ್ಲ ಗಾರೆಯಲ್ಲಿ ಅನೇಕ ಬಗೆಯ ವಿನ್ಯಾಸಗಳ ಅಲಂಕಾರವಿದೆ. ಈ ವಾಸ್ತು ಮತ್ತು ಅಲಂಕರಣ ಪರಸ್ಪರ ಪೂರಕವಾಗಿ, ಗೋಳಗುಮ್ಮಟವನ್ನು ಮೋಹಕ ಕೃತಿಯನ್ನಾಗಿ ಮಾಡಿವೆ. ಈ ಕಟ್ಟಡವನ್ನು ಹತ್ತಿರದಿಂದ ನೋಡುವವರಿಗೆ, ಇದರ ದೈತ್ಯಾಕಾರದ ಎದುರು ತಮ್ಮ ವಾಮನತ್ವದ ಅನುಭವವಷ್ಟೇ ಆದರೂ ದೂರದಿಂದ ನೋಡಿದಲ್ಲಿ ಈ ಸೌಂದರ್ಯದ ಸ್ವರೂಪ ಸ್ಪಷ್ಟವಾಗುತ್ತದೆ.
    ಗೋಳಗುಮ್ಮಟದ ಒಳಹಜಾರದ ಮಧ್ಯೆ ದೊಡ್ಡ ಚೌಕ ಕಟ್ಟೆಯ ಮೇಲೆ ಮಹಮ್ಮದನ ಮತ್ತು ಅವನ ಸಮೀಪ ಸಂಬಂಧಿಗಳ ಕೃತಕ ಗೋರಿಗಳಿವೆ. ಹೆಂಗಸರ ಸಮಾಧಿ ಚಪ್ಪಟೆಯಾಕರದಲ್ಲೂ, ಗಂಡಸರ ಸಮಾಧಿ ಗೋಳಾಕಾರದಲ್ಲಿಯೂ ಇವೆ. ನಿಜವಾದ ಗೋರಿಗಳು ಇದರ ಕೆಳಗೆ ನೆಲಮಾಳಿಗೆಯಲ್ಲಿವೆ. ಅಲ್ಲಿಗೆ ಪ್ರವಾಸಿಗರಿಗೆ ಈಗ ಪವೇಶವಿಲ್ಲ. ಮಹಮ್ಮದ ತನ್ನ ಆಳ್ವಿಕೆಯ ಉತ್ತರಾರ್ಧದಲ್ಲಿ ಈ ಕಟ್ಟಡವನ್ನು ಕಟ್ಟಲಾರಂಭಿಸಿ, ತನ್ನ ಕೊನೆಗಾಲದವರೆಗೂ ಮುಂದುವರಿಸಿದ. ಆದರೆ ಆ ಹೊತ್ತಿಗೂ ಕಟ್ಟಡದ ಗಾರೆಯ ಅಲಂಕರಣ ಮುಗಿದಿರಲಿಲ್ಲವಾಗಿ ಆ ಭಾಗಗಳು ಇಂದೂ ಅಪೂರ್ಣವಾಗಿಯೇ ಉಳಿದಿವೆ. ಮಹಮ್ಮದ್ ಆದಿಲ್ ಶಾ ತನ್ನ ಗೋರಿಗಾಗಿ ಬಹಳ ಆಸ್ಥೆ ವಹಿಸಿದ್ದನೆಂದೂ, ತನ್ನ ಸಮಾಧಿಗಾಗಿ ಅಸೀಮ ಆಸಕ್ತಿಯಿಂದಾಗಿ ಜಗತ್ತಿನ ಉತ್ತಮ ವಾಸ್ತುರಚನೆಯೊಂದು ಮೈತಳೆದಂತಾಯಿತು.
   ಅಲ್ಲಿಂದ ಹೊರಬಂದು ಹುಲ್ಲುಹಾಸಿನಲ್ಲಿ ನಮ್ಮ ತಂಡದ ಭಾವಚಿತ್ರ ಶ್ರೀಮಂತರು ಕ್ಲಿಕ್ಕಿಸಿದರು. ನಾವು ಅಲ್ಲಿಂದ ಹೊರಬಂದಾಗ ಗಂಟೆ ೧೧.೩೦. ಪ್ರವೇಶ ಸಮಯ ಬೆಳಗ್ಗೆ ೬ರಿಂದ ಸಂಜೆ ೬ರವರೆಗೆ. ಬೆಳಗ್ಗೆ ಬೇಗ ಹೋದರೆ ಒಳ್ಳೆಯದು.












ಮಾಲಿಕ್- ಇ- ಮೈದಾನ್

೫೫ ಟನ್ ತೂಕದ ಕಂಚಿನ ದೊಡ್ಡ ಫಿರಂಗಿಯನ್ನು ನೋಡುತ್ತಿರುವಾಗ ಗತಕಾಲದ ಇತಿಹಾಸವನ್ನು ತೆರೆದಿಟ್ಟರು ಶ್ರೀಮಂತಕಟ್ಟಿ. ತುರ್ಕಿ ದೇಶದಿಂದ ಬಂದು ನೆಲೆಸಿದ್ದ ಅಧಿಕಾರಿಯೊಬ್ಬ ೧೫೪೯ರಲ್ಲಿ ಅಹ್ಮದ್ ನಗರದಲ್ಲಿ ಈ  ಫಿರಂಗಿಯನ್ನು ತಯಾರಿಸಿದನೆಂದು ಇದರ ಮೇಲೆ ಕೆತ್ತಲಾಗಿರುವ ಪಾರಸೀ ಮತ್ತು ಅರಬ್ಬೀ ಶಾಸನಗಳಿಂದ ತಿಳಿಯುತ್ತದೆ. ೧೫೬೫ರಲ್ಲಿ ನಡೆದ ತಾಳೀಕೋಟೆ ಕದನ ಸಂದರ್ಭದಲ್ಲಿ ಇದನ್ನು ತೆಗೆದುಕೊಂಡು ಹೋಗಲಾಗಿತ್ತಂತೆ. ೧೬೩೨ರಲ್ಲಿ ಬಿಜಾಪುರದ ಅರಸರು‌ಇದನ್ನು ವಶಪಡಿಸಿಕೊಂಡು ವಿಜಯದ ಕುರುಹಾಗಿ ಇಲ್ಲಿ ಇಟ್ಟಿದ್ದಾರೆ.

ಇಬ್ರಾಹಿಂ ರೋಜಾ

 ಫಿರಂಗಿಯ ಇತಿಹಾಸ ಕೇಳಿ ಮುಗಿಸುತ್ತಿದ್ದ ಹಾಗೆಯೇ ಅಲ್ಲಿಂದ ಇಬ್ರಾಹಿಂ ರೋಜಾ ಮಸೀದಿಗೆ ಹೋದೆವು. ಬಲು ಸುಂದರವಾದ ಕಟ್ಟಡವಿದು.  ಕ್ರಿಶ. ೧೬೨೬ರಲ್ಲಿ ಕಟ್ಟಿದ ಎರಡನೆ ಇಬ್ರಾಹಿಮ್ ಆದಿಲ್ ಶಾ ಅವನ ಸಮಾಧಿ ಸ್ಥಳವಿದು. ಇದನ್ನು ತನ್ನ ಪತ್ನಿ ತಾಜ್ ಸುಲ್ತಾನಳ ನೆನಪಿಗಾಗಿ ಕಟ್ಟಿಸಿದ್ದಂತೆ. ಆದರೆ ಪತ್ನಿಗಿಂತ ಮೊದಲೆ ಪತಿ ತೀರಿದ ಕಾರಣ ಇದಕ್ಕೆ ರಾಜನ ಹೆಸರೇ ಇಡಲಾಯಿತಂತೆ. ಇದನ್ನು ಕಪ್ಪು ತಾಜ್ ಮಹಲ್ ಎಂದೂ ಕರೆಯುತ್ತಾರೆ. ತಾಜ್ ಮಹಲನ್ನು ಕಟ್ಟುವ ಮೊದಲು ಇಬ್ರಾಹಿಂ ರೋಜಾ ಕಟ್ಟಡವನ್ನು ಪರಿಶೀಲಿಸಲಾಗಿತ್ತಂತೆ. 


 
 .


 ಬಾರಾ ಕಮಾನು- ಅಲಿರೋಜಾ -೨ 
 ರಾಜರು ತಮ್ಮ ಸಮಾಧಿಗಳಿಗಾಗಿ ಎಷ್ಟೊಂದು ಖರ್ಚು ಮಾಡಿ ಸುಂದರ ಕಟ್ಟಡ ಕಟ್ಟಿಕೊಳ್ಳುತ್ತಾರಲ್ಲ ನಿಜಕ್ಕೂ ಇದು ಬೇಕಾ ಎಂದು ಆಶ್ಚರ್ಯಗೊಳ್ಳುತ್ತಲೇ ಅಲ್ಲಿಂದ ಬಾರಾಕಮಾನು ಅಲಿರೋಜಾ-೨ ನೋಡಲು ಹೋದೆವು. ಇದೊಂದು ಅಪೂರ್ಣ ಕಟ್ಟಡ. ಅರ್ಧ ಕಟ್ಟಿದ ಕಮಾನುಗಳಿಂದ ನೋಡಲು ಆಕರ್ಷಕವಾಗಿದೆ. ಕ್ರಿಶ. ೧೬೭೨ರಲ್ಲಿ ಈ ಕಟ್ಟಡ ಕಟ್ಟಲು ಪ್ರಾರಂಭಿಸಿದ್ದಂತೆ. ಕಟ್ಟಡ ಪೂರ್ಣಗೊಳ್ಳುವ ಮೊದಲೇ ಅಲಿರೋಜ ತೀರಿಹೋದ ಕಾರಣ ಕಟ್ಟಡದ ಕೆಲಸವನ್ನು ಅಲ್ಲಿಗೆ ನಿಲ್ಲಿಸಲಾಯಿತಂತೆ. ಅಲಿ ಅವನ ಹೆಂಡತಿ ಹಾಗೂ ೧೧ ಜನ ಹೆಣ್ಣುಮಕ್ಕಳ ಗೋರಿಗಳು ಇವೆ. 
 


 


   ಕೂಡಲಸಂಗಮ

ಬಿಜಾಪುರದಿಂದ ಕೂಡಲ ಸಂಗಮಕ್ಕೆ ೩೪ ಕಿಮೀ. ನಾವು ಕೂಡಲ ಸಂಗಮ ತಲಪುವಾಗ ಗಂಟೆ ೪ ಆಗಿತ್ತು. ಹುನಗುಂದ ತಾಲೂಕಿನಲ್ಲಿರುವ ಕೂಡಲ ಸಂಗಮ ಬಸವಣ್ಣನವರ ಐಕ್ಯಸ್ಥಳ. ಕೃಷ್ಣ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಸಂಗಮವಾಗುವ ಸ್ಥಳ.  ಚಾಲುಕ್ಯ ಶೈಲಿಯಲ್ಲಿ ಕಟ್ಟಿರುವ ಸಂಗಮೇಶ್ವರ ದೇವಾಲಯವಿದೆ. ಜನಸಂದಣಿ ವಿಪರೀತವಾಗಿತ್ತು. ಒಂದೆಡೆ ಹೆಂಗಸರು, ಗಂಡಸರು, ಮಕ್ಕಳು ಉರುಳು ಸೇವೆ ಸಲ್ಲಿಸುತ್ತಿದ್ದರು, ಇನ್ನೊಂದೆಡೆ ದೇವಾಲಯದೊಳಗೆ ತೆರಳಲು ಸರತಿ ಸಾಲಿನಲ್ಲಿ ನಿಂತಿದ್ದ ಜನ. ನಾವೂ ಸರತಿ ಸಾಲಿನಲ್ಲಿ ಸೇರಿಕೊಂಡು ದೇವಾಲಯದೊಳಗೆ ಹೋಗಿ ದೇವರ ದರ್ಶನ ಮಾಡಿ ಹೊರಬಂದೆವು. ನದಿ ಮಧ್ಯೆ ಇರುವ ಬಸವಣ್ಣನ ಐಕ್ಯಸ್ಥಳ ನೋಡಲು ಸರತಿ ಸಾಲಿನಲ್ಲಿ ಹೋದೆವು. ನೂರಾರು ಮೆಟ್ಟಲು ಇಳಿದು ಕೆಳಗೆ ಹೋಗಬೇಕು. ಅಲ್ಲಿಂದ ನದಿ ಬಳಿಗೆ ಬಂದು ಮೂರು ನದಿಗಳು ಸಂಗಮಗೊಂಡು ಹರಿಯುವುದನ್ನು ನೋಡಿದೆವು. ಪ್ರವಾಸಿಗರು ಎಲ್ಲ ಕಡೆ ಕಸ ಹಾಕಿ ದೇವಾಲಯದ ಸುತ್ತಮುತ್ತ ವಿಪರೀತ ಗಲೀಜು ಮಾಡಿದ್ದರು.
  ಅಲ್ಲಿಂದ ಸಂಜೆ ಆರು ಗಂಟೆಗೆ ಹೊರಬಂದೆವು. ಹೊರಗೆ ಒಬ್ಬ ಸಾಧು ತಂತಿಯನ್ನು ತುಟಿಯಿಂದ ಬಾಯಿಯೊಳಗೆ ಸಿಕ್ಕಿಸಿ ಕಬ್ಬಿಣದ ಮೊಳೆಯಲ್ಲಿ ನಿಂತು ಆಶೀರ್ವಾದ ಮಾಡುತ್ತಿರುವ ದೃಶ್ಯ ನೋಡಿದೆವು. ಅಲ್ಲೇ ಹೊರಗಡೆ ಚಹಾ ಸೇವಿಸಿ ಬಸ್ ಹತ್ತಿದೆವು. 







  ಗದಗ

ಕೂಡಲಸಂಗಮದಿಂದ ಗದಗದೆಡೆಗೆ ಪ್ರಯಾಣ ಬೆಳೆಸಿದೆವು.   ಬಿಜಾಪುರದಿಂದ ಗದಗಕ್ಕೆ ಸುಮಾರು ೨೦೦ಕಿಮೀ. ನಾಲ್ಕು ಗಂಟೆ ಬೇಕಾಗುತ್ತದೆ. ನಾವಿದ್ದ ಗಾಡಿ ಸ್ವಲ್ಪ ತೊಂದರೆ ಕೊಟ್ಟಿತ್ತು. ರಸ್ತೆ ಸುಗಮವಾಗಿದ್ದರೂ ಮೂರನೇಗೇರಿನಿಂದ ನಾಲ್ಕು ಐದನೇ ಗೇರು ಹಾಕಲು ಸಾಧ್ಯವಾಗದೆ ನಿಧಾನವಾಗಿಯೇ ಗಾಡಿ ಚಲಾಯಿಸಬೇಕಾಯಿತು. ನಾಲ್ಕನೇ ಗೇರಿಗೆ ಬೀಳದೆ ಗರಗರ ಸದ್ದು ಮಾಡುತ್ತಿತ್ತು. ಒಂದು ಎರಡು, ಮೂರು ಗೇರುಗಳ ಉಪಯೋಗದಿಂದಲೆ ವಿಷ್ಣು ಗಾಡಿ ಚಲಾಯಿಸಿ ನಾಲ್ಕು ಗಂಟೆಗಳಲ್ಲಿ ನಮ್ಮನ್ನು ಗದಗ ಮುಟ್ಟಿಸಿದ. ನಾವು ಗದಗ ತಲಪುವಾಗ ರಾತ್ರಿ ಹತ್ತು ಗಂಟೆ. ಇನ್ನೊಂದು ಗಾಡಿ ೯.೩೦ಗೇ ತಲಪಿ ಊಟಮುಗಿಸಿದ್ದರು. ಒಂದು ಖಾನಾವಳಿಯಲ್ಲಿ ಜೋಳದ ರೊಟ್ಟಿ, ಚಪಾತಿ, ಪಲ್ಯ, ಅನ್ನ ಸಾರು ಊಟ ಮಾಡಿದೆವು. ಊಟವಾಗಿ ಶಿವಾನಿ ಇನ್ ಎಂಬ ವಸತಿಗೃಹ ಸೇರುವಾಗ ಗಂಟೆ ೧೧. ಒಂದು ಕೋಣೆಯಲ್ಲಿ ನಾವು ಮೂರು ಮಂದಿ ಸುಬ್ಬಲಕ್ಷ್ಮೀ, ಶೋಭಾ, ನಾನು ಆರಾಮವಾಗಿ ಮಲಗಿದೆವು. ಕೋಣೆ ದೊಡ್ಡದಾಗಿ ತುಂಬ ಚೆನ್ನಾಗಿತ್ತು ವ್ಯವಸ್ಥೆ. 

ಬಸವಣ್ಣ ಪ್ರತಿಮೆ

೨೭-೧೨-೨೦೧೬ರಂದು ಬೆಳಗ್ಗೆ ಎಚ್ಚರವಾಗುವಾಗ ಗಂಟೆ ೬.೪೫. ಗಡಬಡಿಸಿ ಎದ್ದು ಸ್ನಾನಾದಿ ಮುಗಿಸಿ ಹೊರಬಂದಾಗ ೭.೪೫. ಎಲ್ಲರೂ ಹೊರಡುತ್ತಿದ್ದರಷ್ಟೆ. ೮ ಗಂಟೆಗೆ ಅನತಿ ದೂರದಲ್ಲಿದ್ದ ಹೊಟೇಲಿಗೆ ಹೋಗಿ ಅವಲಕ್ಕಿ, ದೋಸೆ ತಿಂದೆವು. ೯ ಗಂಟೆಗೆ ಕೋಣೆ ಕಾಲಿ ಮಾಡಿ ಹೊರಟು ತಯಾರಾದೆವು. ರೂಮಿನಿಂದ ನಮ್ಮ ಬ್ಯಾಗ್ ಒಯ್ಯಲು ಎರಡು ಹುಡುಗರು ತಾ ಮುಂದು ಎಂದು ಧಾವಿಸಿ ಬಂದರು. ಬೇಡಪ್ಪ ಎಂದು ಹೇಳಿದರೂ ಕೇಳಲಿಲ್ಲ. ಹತ್ತನೇ ತರಗತಿ ಓದಿ ಮುಂದೆ ಓದಲು ಇಷ್ಟವಿಲ್ಲದೆ ಅಲ್ಲಿ ಕೆಲಸಕ್ಕೆ ಸೇರಿದ್ದರಂತೆ. ಕೆಲಸ ಖುಷಿ ಇದೆಯಂತೆ ಅವರಿಗೆ. ಚೂಟಿಯಾಗಿ ನಗುನಗುತ್ತ ಕೆಲಸ ಮಾಡುತ್ತಿದ್ದರು. ಅವರ ಉತ್ಸಾಹ ನೋಡಿ ನಾವು ಅವರಿಗೆ ಇನಾಮು ಕೊಟ್ಟೆವು. ವಿಷ್ಣು ನಮ್ಮ ಗಾಡಿ ಅಡಿಯಲ್ಲಿ ಮಲಗಿ ಗೇರ್ ರಿಪೇರಿ ಮಾಡುತ್ತಿದ್ದ. ಅಂತೂ ವಾಹನ ರಿಪೇರಿಯಾಗಿ ಹೊರಡುವಾಗ ೯.೩೦. 
   ನಾವು ಬಸವಣ್ಣನ ಬೃಹತ್ ಪ್ರತಿಮೆ ಇದ್ದ ಸ್ಥಳಕ್ಕೆ ಬಂದೆವು. ಅಲ್ಲಿ ಒಂದು ಸುತ್ತು ಹಾಕಿ ಮುಂದುವರಿದೆವು.

 ಲಕ್ಕುಂಡಿ ಮ್ಯೂಸಿಯಂ

ಗದಗದ ಪ್ರಸಿದ್ಧ ಲಕ್ಕುಂಡಿ ಇತಿಹಾಸ ಮ್ಯೂಸಿಯಂಗೆ ಹೋದೆವು. ಒಳಗೆ ಹೋಗಲು ಪ್ರವೇಶದರವಿದೆ. ಅಲ್ಲಿ ಅಬ್ದುಲ್ ರಜಾಕ್ ನಮಗೆ ಮಾರ್ಗದರ್ಶಕರಾಗಿದ್ದು, ಲಕ್ಕುಂಡಿ ಇತಿಹಾಸವನ್ನು ಎಳೆ‌ಎಳೆಯಾಗಿ ತೆರೆದಿಟ್ಟರು. ಮಧ್ಯೆ ಪ್ರಶ್ನೆ ಕೇಳಿದರೆ ಮುಂದೆ ಹೇಳುವೆ ಎನ್ನುತ್ತಿದ್ದರು. ಅವರು ಕಳೆದ ನಲವತ್ತು ವರ್ಷಗಳಿಂದ ಈ ವೃತ್ತಿಯಲ್ಲಿರುವರಂತೆ. ಅವರಿಗೆ ಸ್ಥಿರದೂರವಾಣಿಯಾಗಲಿ, ಸಂಚಾರಿವಾಣಿಯಾಗಲಿ ಇಲ್ಲವಂತೆ. ಯಾವುದಕ್ಕೂ ಪತ್ರ ಬರೆಯಿರಿ ಎಂದರು.  ಉತ್ಸಾಹ ಇರುವವರು ಮ್ಯೂಸಿಯಂ ನೋಡಿದರು ಇಲ್ಲದವರು ಹೊರಗೆ ಜಮಖಾನ ವ್ಯಾಪಾರ ಮಾಡಿದರು.
ಉತ್ಖನನದಲ್ಲಿ ನಾಲ್ಕಾರು ದೇವಾಲಯಗಳನ್ನು ಪತ್ತೆ ಹಚ್ಚಿದ್ದಾರೆ. ಮ್ಯೂಸಿಯಂ ಪಕ್ಕ ಜಿನದೇವಾಲಯ ಸೊಗಸಾಗಿದೆ. ಅದನ್ನು ನೋಡಿ ಮಾಣಿಕೇಶ್ವರ, ಕಾಶಿ ವಿಶ್ವೇಶ್ವರ, ಸೂರ್ಯ ದೇವಾಲಯಕ್ಕೆ ಹೋದೆವು. ಆ ದೇವಾಲಯದ ಪುಷ್ಕರಿಣಿ ಒಣಗಿದೆ. ನಾಲ್ಕಾರು ವರ್ಷಗಾಳಾಯಿತು ಕೆರೆಯಲ್ಲಿ ನೀರಿಲ್ಲ. ಎಂದು ಅಲ್ಲಿ ಬೋರೆಹಣ್ಣು ಮಾರುತ್ತಿದ್ದ ಹೆಂಗಸು ಹೇಳಿದಳು. ದೇವಾಲಯ ನೋಡಿ ಹೊರಬರುವಾಗ ಹೊಲದಲ್ಲಿ ಹೆಂಗಸರು ಹಸಿಮೆಣಸು ಕೊಯ್ಯುವುದು ಕಂಡಿತು. ನಮ್ಮಲ್ಲಿ ಕೆಲವರು ಹತ್ತು ರೂಪಾಯಿ ಕೊಟ್ಟು ಮೆಣಸು ಕೊಂಡರು. ಅಲ್ಲಿಂದ ಕಪ್ಪತ್ತಗಿರಿಗೆ ಹೋಗುವುದೆಂದು ತೀರ್ಮಾನವಾಯಿತು. ರಜಾಕ್ ಅವರಿಗೆ ವಿದಾಯ ಹೇಳಿದೆವು. 










 ಕಪ್ಪತ್ತಗಿರಿ ಕ್ಷೇತ್ರ: ಎಪ್ಪತ್ತು ಗಿರಿಯ ಬದಲು ಒಂದು ಕಪ್ಪತ್ತಗಿರಿ ನೋಡು
 ವಾಹನದಲ್ಲಿ ಹೋಗುತ್ತ ದಾರಿಯಲ್ಲಿ ಒಂದೆಡೆ ಕಡ್ಲೆಕಾಯಿ ಬೀಜ ರಾಶಿ ಮಾಡುತ್ತಿರುವುದು ಕಂಡಿತು. ಆಗ ಗಂಟೆ ಒಂದು ಆಗಿತ್ತು. ಹೊಟ್ಟೆ ಹಸಿದಿತ್ತು. ಕಡ್ಲೆಕಾಯಿ ಕಾಣುವಾಗ ಹಸಿವು ಇನ್ನೂ ಹೆಚ್ಚಾಯಿತು. ಒಂದೆರಡು ಕಿಲೋ ಕೇಳಿ ತನ್ನಿ ಎಂದು ಮಂಜುನಾಥರಿಗೆ ಹೇಳಿದೆ. ವಿಷ್ಣು ಗಾಡಿ ನಿಲ್ಲಿಸಿದರು. ನಾವು ಕೆಲವರು ಇಳಿದು ಓಡಿದೆವು. ಕಡ್ಲೆ ಕಾಯಿ ತಗೊಳ್ಳಿ ಬೊಗಸೆ ತುಂಬ. ಆದರೆ ದುಡ್ಡು ಬೇಡ. ಎಂದರು. ನೀವು ಇವನ್ನು ಬೆಳೆಯಲು ಎಷ್ಟು ಶ್ರಮ ವಹಿಸಿದ್ದೀರಿ, ಬೀಜಕ್ಕೆ ದುಡ್ಡು ಹಾಕಿ, ಕೂಲಿಗಳಿಗೆ ಮಜೂರಿ ಕೊಟ್ಟು ತುಂಬ ಖರ್ಚಾಗಿರುತ್ತೆ. ದಯವಿಟ್ಟು ದುಡ್ದು ಪಡೆಯಿರಿ ಎಂದೆ. ಇದೆಲ್ಲ ದೇವರು ಕೊಟ್ಟದ್ದು. ನಮಗೆ ಬೇಕಷ್ಟು ದೇವರು ಕೊಟ್ಟಿದ್ದಾನೆ. ಹಾಗೆಲ್ಲ ದುಡ್ಡು ಪಡೆಯುವಂಗಿಲ್ರಿ ಎಂದಾಗ ನಾವು ಅವರ ಮುಂದೆ ಕುಬ್ಜರಾದೆವು. ಸ್ವಾರ್ಥರಹಿತ, ಪ್ರೀತಿ ಚೆಲ್ಲುವ ಬದುಕು ಅವರದು. ನಾವು ಒಂದಷ್ಟು ಕಡ್ಲೆಬೀಜ ತೆಗೆದುಕೊಂಡು ನಮ್ಮ ಕೃತಜ್ಞತೆ ಸಲ್ಲಿಸಿ ಬಸ್ ಹತ್ತಿದೆವು. ಗರಿಗರಿ ಕಡ್ಲೆಕಾಯಿ ಬಹಳ ರುಚಿಯಾಗಿತ್ತು. ಹಸಿದ ಹೊಟ್ಟೆಗೆ ಹೆಚ್ಚು ತಿನ್ನಬೇಡಿ ಎಂದು ಕೆಲವರು ಎಚ್ಚರಿಸಿದರು.


   ಒಂದು ಬಸ್ಸಿನಲ್ಲಿ ಊಟ ತೆಗೆದುಕೊಂಡು ಬರುತ್ತೇವೆ. ಇನ್ನೊಂದು ಬಸ್ ಮುಂದೆ ಹೋಗಲಿ. ಅಲ್ಲಿ ಕಾದಿರಿ ಎಂದು ತೀರ್ಮಾನವಾಗಿ ಅದರಂತೆ ಚಾಲಕ ಮುತ್ತು ಇರುವ ಗಾಡಿ ಮುಂದೆ ಹೋಯಿತು. ನಮ್ಮ ಕೆಲವರನ್ನು ಆ ಗಾಡಿಗೆ ಹತ್ತಲು ಹೇಳಿದರು. ನಾವು ಕಪ್ಪತ್ತಗಿರಿ ಕ್ಷೇತ್ರ ತಲಪುವಾಗ ೨ ಗಂಟೆ. ಆದರೆ ಇನ್ನೊಂದು ಗಂತೆ ಮೂರಾದರೂ ಬರುವುದು ಕಾಣಲಿಲ್ಲ. ನಾವು ಬಂದ ದಾರಿಯಲ್ಲಿ ಅವರು ಬರಲಿಲ್ಲ. ನಾವು ದಾರಿ ತಪ್ಪಿದ್ದೆವು. ಗುಡ್ಡದ ಮೇಲೆ ಪವನ ಕೆಂದ್ರ ಇರುವ ಕಡೆ ನಾವು ಹೋಗಬೇಕಿತ್ತಂತೆ. ಅಂತೂ ಫೋನ್ ಸಂಪರ್ಕ ಸಾಧಿಸಿ ನಾವು ಇಂಥ ಕಡೆ ಇದ್ದೇವೆ ಎಂದು ಹೇಳಿ ಅವರೂ ಇಲ್ಲಿಗೇ ಬರುವುದು ಎಂದು ಮಾತುಕತೆಯಾಯಿತು. ಸಮಯ ಉಳಿಸಲು ಹೊರಟು ಸಮಯ ಹಾಳುಗೆಡವಿದ ಹಾಗಾಯಿತು. ಒಮ್ಮೊಮ್ಮೆ ನಾವು ಯೋಚಿಸಿದ ಹಾಗೆ ಆಗುವುದಿಲ್ಲ. ಇಲ್ಲಿ ಸುಮ್ಮನೆ ಕಾಯುವುದೇಕೆ ಎಂದು  ನಾವು ಕೆಲವರು ಗುಡ್ಡ ಏರಿದೆವು.
 ಎಪ್ಪತ್ತು ಗಿರಿಯ ಬದಲು ಒಂದು ಕಪ್ಪತ್ತಗಿರಿ ನೋಡು ಎಂಬುದು ಅಲ್ಲಿಯ ನಾಣ್ನುಡಿ. ಕಪ್ಪತ್ತಗಿರಿ ಮಳೆಗಾಲದಲ್ಲಿ ಹಸುರಾಗಿ ಬಲು ಸುಂದರವಾಗಿ ಕಂಗೊಳಿಸುತ್ತದೆಯಂತೆ. ಈಗ ಎಲ್ಲ ಒಣಗಿತ್ತು. ಕಪ್ಪತ್ತಗಿರಿ ಈಗ ಭಾರೀ ಸುದ್ದಿಯಲ್ಲಿದೆ. ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲು ಸರ್ಕಾರ ಸಮ್ಮತಿಸಿದೆ ಎಂದು ಅದರ ವಿರುದ್ಧ ಹೋರಾಡಲು ಪರಿಸರ ಸಂರಕ್ಷಿಸುವ ಜನರು, ಸ್ವಾಮೀಜಿಗಳು ಮುಂದಾಗಿದ್ದಾರೆ. ಕಪ್ಪತ್ತಗಿರಿ ಔಷಧೀವನಕ್ಕೆ ಹೆಸರಾಗಿದೆ. ಪವನ ವಿದ್ಯುತ್ ಕೇಂದ್ರವೂ ಹೌದು. ಅದರ ದ್ಯೋತಕವಾಗಿ ಗುಡ್ಡದಲ್ಲಿ ಗಾಳಿಗೆ ರೆಕ್ಕೆಗಳು ತಿರುಗುವುದು ಕಾಣುತ್ತವೆ.
   ಮೇಲೆ ಎರಡು ಗುಡಿಗಳಿವೆ. ಅವನ್ನೆಲ್ಲ ನೋಡಿ ನಾವು ಕೆಳಗೆ ಬರುವಾಗ ಬಸ್ ಬಂದಿತ್ತು. ಹೆಚ್ಚಿನವರು ಊಟ ಮುಗಿಸಿದ್ದರು. ಜೋಳದ ರೊಟ್ಟಿ, ಚಪಾತಿ, ಕಾಳು ಪಲ್ಯ, ಎಣ್ಣೆಗಾಯಿ, ಚಟ್ನಿಪುಡಿ, ಹಪ್ಪಳ, ಚಿತ್ರಾನ್ನ, ಅನ್ನ ಸಾಂಬಾರು, ಮಜ್ಜಿಗೆ. ಅಲ್ಲಿಯ ಕಟ್ಟಕಡೆಯ ಒಂಟಿ ಮನೆ ಎದುರು ನಾವು ಊಟ ಮಾಡಿರುವುದು. ಮುನ್ನೂರು ವರ್ಷಗಳಾಗಿದೆಯಂತೆ ಮನೆಗೆ. ತಾತ ಮುತ್ತಾತರ ಕಾಲದಿಂದಲೂ ಇದೆಯಂತೆ ಮನೆ. ಈಗ ಹತ್ತು ಮಂದಿ ಇದ್ದಾರಂತೆ ಆ ಮನೆಯಲ್ಲಿ. ಕಪ್ಪತ್ತಗಿರಿಯಲ್ಲಿ ಸುಮಾರು ೨೫ಕ್ಕೂ ಹೆಚ್ಚು ಔಷಧೀ ಸಸ್ಯಗಳು ಇವೆಯಂತೆ. ಆ ಮನೆಯವರಿಗೆ  ಎಲ್ಲ ಔಷಧೀ ಸಸ್ಯಗಳ ಪರಿಚಯ ಇದೆಯಂತೆ. ಹಾಗೂ ಔಷಧಿ ನೀಡುತ್ತಾರಂತೆ.   ನಮ್ಮ ತಂಡದ ಚಿತ್ರ ತೆಗೆಸಿಕೊಂಡು ೪.೩೦ಗೆ ಹೊರಟೆವು.









 ಬಂದೇವ ನಾವು ಹುಬ್ಬಳ್ಳಿಗೆ
  ನಾವು ರಾತ್ರೆ ಏಳು ಗಂಟೆಗೆ ಹುಬ್ಬಳ್ಳಿ ರೈಲು ನಿಲ್ದಾಣ ತಲಪಿದೆವು. ನಮ್ಮನ್ನು ನಾಲ್ಕು ದಿನಗಳ ಕಾಲ ಊರೂರು ತೋರಿಸಿ ಸುರಕ್ಷಿತವಾಗಿ ಕರೆತಂದು ಬಿಟ್ಟ ವಿಷ್ಣು ತಂಡದವರಿಗೆ ನಾವು ಕೃತಜ್ಞತೆ ಹೇಳಿ ಬೀಳ್ಕೊಂಡೆವು.  ನಮಗೆ ೮.೧೫ಕ್ಕೆ ಮೈಸೂರಿಗೆ ರೈಲು. ಕಾಮತ್ ಖಾನಾವಳಿಯಲ್ಲಿ ದೋಸೆ ತಿಂದು, ಆಗ ತಿಂಡಿ ತಿನ್ನದವರಿಗೆ ರಾತ್ರಿ ಊಟ ಕಟ್ಟಿಸಿಕೊಂಡು ನಾವು ರೈಲೇರಿದೆವು. ಸ್ವರ್ಣಜಯಂತೀ ಎಕ್ಸ್ ಪ್ರೆಸ್ ರೈಲು ೮.೩೦ಕ್ಕೆ ಹುಬ್ಬಳ್ಳಿ ಬಿಟ್ಟು ಹೊರಟಿತು.
 ಸ್ಕೌಟ್ ಗೈಡ್ಸಿನ ಅಶಿಸ್ತಿನ ಗುರುಗಳು ಹಾಗೂ ಮಕ್ಕಳು 
  ರೈಲಲ್ಲಿ ಕಾಲು ಹಾಕಲಾಗದಷ್ಟು ಜನಸಂದಣಿ ಹಾಗೂ ಸಾಮಾನು ಸರಂಜಾಮು. ದಶಂಬರ ೨೯ರಿಂದ ಜನವರಿ ೪ರವರೆಗೆ ಮೈಸೂರಲ್ಲಿ ನಡೆಯುವ ೧೭ನೇ ಜಾಂಬೂರಿ ಸ್ಕೌಟ್ ಮತ್ತು ಗೈಡ್ಸ್ ಉತ್ಸವದಲ್ಲಿ ಭಾಗಿಯಾಗಲು ಮಕ್ಕಳು ಶಿಕ್ಷಕರು ನಿಜಾಮುದ್ದೀನಿಂದ ಬಂದಿದ್ದರು. (ಮೈಸೂರಿನ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾಪ್ರದೇಶದಲ್ಲಿ ೩೫೦ಕ್ಕೂ ಹೆಚ್ಚಿನ ಎಕರೆ ಪ್ರದೇಶದಲ್ಲಿ, ೨೫ಸಾವಿರಕ್ಕೂ ಹೆಚ್ಚು ಮಕ್ಕಳು ಇದರಲ್ಲಿ ಭಾಗಿಯಾಗಿದ್ದು, ಐದು ಸಾವಿರಕ್ಕೂ ಹೆಚ್ಚು ಗಣ್ಯರು, ವಿದೇಶೀಯರು ಸೇರಿದಂತೆ ಸುಮಾರು ೪೦ ಸಾವಿರ ಮಂದಿ ಸೇರಿರುತ್ತಾರೆ. ನಾಲ್ಕು ವರ್ಷಗಳಿಗೊಮ್ಮೆ ಈ ಜಾಂಬೂರಿ ಉತ್ಸವ ನಡೆಯುತ್ತದೆ. ೧೯೫೦, ನವಂಬರ ೧೭ರಂದು ಭಾರತದಲ್ಲಿ ದಿ. ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯಾಗಿ ರೂಪುಗೊಂಡಿತು. ಕರ್ನಾಟಕದಲ್ಲಿ ಪ್ರಾರಂಭಗೊಂಡಿದ್ದು ೧೯೧೭ರಲ್ಲಿ. ಹಾಗಾಗಿ ಕರ್ನಾಟಕದ ಸ್ಕೌಟ್ ಮತು ಗೈಡ್ಸ್‌ಗೆ ಈಗ ಶತಮಾನ ವರ್ಷ. ಈ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು) ನಮಗೆ ನಿಗದಿಯಾಗಿದ್ದ ಸ್ಥಳದಲ್ಲಿ ಅವರೆಲ್ಲ ಕೂತಿದ್ದರು. ನಾವು ನಮ್ಮ ಸೀಟು ಬಿಟ್ಟು ಕೊಡಲು ಹೇಳಿದೆವು. ಮನಸ್ಸಿಲ್ಲದ ಮನದಿಂದ ಎದ್ದು ಹೋದರು. ನಾವು ನಮ್ಮ ಸಾಮಾನು ಇಟ್ಟು ಕೂತೆವು.  ಅವರ ಸಾಮಾನುಗಳನ್ನು ನೋಡಿದರೆ ತಲೆ ತಿರುಗಬಹುದು. ಅಷ್ಟು ಬ್ಯಾಗ್, ಟ್ರಂಕುಗಳು ಇದ್ದುವು. ಮಕ್ಕಳ ಗದ್ದಲ ಜೋರಿತ್ತು. ಅಂತ್ಯಾಕ್ಷರಿ ನಿರಂತರವಾಗಿ ನಡೆಯುತ್ತಲೇ ಇತ್ತು. ರಾತ್ರೆ ೧೦.೩೦ ಆದರೂ ಗದ್ದಲ ಕಡಿಮೆ ಆಗಲಿಲ್ಲ. ಆಗ ನಮ್ಮಲ್ಲಿ ಕೆಲವರು ಇನ್ನು ಸಾಕು ಮಾಡಿ. ಮಲಗಬೆಕು. ನೀವೂ ಮಲಗಿ ಎಂದು ಕೆಳಿಕೊಂಡರು. ಆಗ ನಮ್ಮ ಸೀಟಲ್ಲಿ ಕುಳಿತಿದ್ದ ಶಿಕ್ಷಕಿ, ಮಕ್ಕಳಿಗೆ ಇನ್ನೂ ಜೋರಾಗಿ ಹಾಡಿ ಎಂದು ಹೇಳಿದಳು. ಮಕ್ಕಳೂ ಜೋರಾಗಿ ರಘುಪತಿ ರಾಘವ ರಾಜಾರಾಮ್ ಎಂದು ಹಾಡಲು ಸುರುಮಾಡಿದರು. ಗದ್ದಲ ಕಡಿಮೆ ಮಾಡಿ ಎಂದು ನಾವು ಹೇಳಿದಷ್ಟೂ ಸಲವೂ ಜಾಸ್ತಿ ಮಾಡುತ್ತಿದ್ದರು. ನೀವು ಹೀಗೆ ಗದ್ದಲ ಮಾಡಿದರೆ ನಾವು ದೂರು ಕೊಡುತ್ತೇವೆ ಎಂದು ಒಬ್ಬರೆಂದದ್ದಕ್ಕೆ ಆ ಶಿಕ್ಷಕಿ ಕೊಡಿ, ನಾವು ೭೦ ಮಂದಿ ಇದ್ದೇವೆ. ನೋಡಿಕೊಳ್ಳುತ್ತೇವೆ ಎಂದರು. ಅಬ್ಬ ಇವರೆಲ್ಲ ಸ್ಕೌಟ್ ಗೈಡ್ಸ್ ಶಿಕ್ಷಣ ಕಲಿತವರೆ? ಶಿಸ್ತು, ಸಂಯಮ, ಸಹಬಾಳ್ವೆ ಒಂದೂ ಇಲ್ಲದ ಇವರೆಂಥ ಸ್ಕೌಟ್ ಗೈಡ್ಸಿನಲ್ಲಿ ಭಾಗಿಯಾಗುವುದು? ಅದರಿಂದ ಏನು ಪ್ರಯೋಜನ? ಶಿಕ್ಷಕಿಯೇ ಸರಿ ಇಲ್ಲದೆ (ಜೊತೆಗೆ ಶಿಕ್ಷಕರೂ ದನಿಸೇರಿಸಿದ್ದರು) ಅಸಭ್ಯ ಧೋರಣೆ ಬೆಳೆಸಿಕೊಂಡರೆ ಮಕ್ಕಳಿಗೇನು ಶಿಸ್ತು ಕಲಿಸಿಯಾರು ಎನಿಸಿ ಬಲು ಖೇದವೆನಿಸಿತು. ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತನ್ನು ಬೆಳೆಸಬೇಕೆಂಬುದು ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಣದ ಮುಖ್ಯ ಉದ್ದೇಶ. ಮಕ್ಕಳಿಗೆ ದೇಶಪ್ರೇಮ, ನೈತಿಕಶಿಕ್ಷಣದೊಂದಿಗೆ ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆ ಮೂಡಿಸಿ ದೇಶದ ಏಕತೆಯನ್ನು ಸಾರುವ ಸಂಸ್ಥೆ ಸ್ಕೌಟ್ ಮತ್ತು ಗೈಡ್ಸ್. ಈ ಮೂಲೋದ್ದೇಶವೇ ಇವರಲ್ಲಿ ಮಾಯವಾಗಿತ್ತು. ನಾವು ಹೇಳಿದಷ್ಟೂ ಅವರು ಹೆಚ್ಚು ಮಾಡುತ್ತಾರೆ. ಬೊಬ್ಬೆ ಹಾಕಲಿ. ಎಷ್ಟು ಹೊತ್ತೂಂತ ಹಾಕಲು ಸಾಧ್ಯ. ಸುಸ್ತಾದಮೇಲೆ ಅವರೇ ನಿಲ್ಲಿಸುತ್ತಾರೆ ಎಂದೆ. ಹಾಗೆಯೇ ಹನ್ನೆರಡು ಘಂಟೆಗೆ ಸ್ತಬ್ಧಗೊಂಡರು. ಮತ್ತೆ ನಾವೂ ಮಲಗಿದೆವು.

  ಮರಳಿ ಗೂಡು ಸೇರಿದೆವು

೨೮-೧೨-೨೦೧೬ರಂದು ಬೆಳಗ್ಗೆ ೫.೧೫ಕ್ಕೆ ಮೈಸೂರು ತಲಪಿದೆವು. ನಾಲ್ಕು ದಿನಗಳ ಬಯಲುಸೀಮೆಯ ಈ ಪಯಣ ತುಂಬ ಖುಷಿ ಕೊಟ್ಟಿತು. ಸಾಕಷ್ಟು ಸ್ನೇಹ ಸಂಪಾದನೆ ಆಯಿತು. ನಮ್ಮನ್ನು ಕರೆದುಕೊಂಡು ಹೋಗಿದ್ದ ಶಿವಶಂಕರರು ಸಾಧುಸಜ್ಜನರು. ಇಷ್ಟು ಗಂಟೆಗೆ ಹೊರಡಿ ಎಂದು ಕಟ್ಟುನಿಟ್ಟಾಗಿ ಹೇಳಲೂ ಸಂಕೋಚಪಡುವ ಸ್ವಭಾವದವರು. ಎಲ್ಲ ಕಡೆ ಪ್ರವೇಶ ಧನ ಪಾವತಿಸಿದ್ದರಿಂದ ಖರ್ಚು ಜಾಸ್ತಿಯಾಗಿ ಹೆಚ್ಚುವರಿಯಾಗಿ ನಮ್ಮಿಂದ ರೂ. ೨೦೦ ಕೇಳಲೂ ಅವರಿಗೆ ಬಲು ಸಂಕೋಚವೇ ಆಯಿತು.  ಅವರು ನಮಗೆ ಏನೂ ತೊಂದರೆಯಾಗದಂತೆ ಬಲು ಮುತುವರ್ಜಿ ವಹಿಸಿ ಈ ಪ್ರವಾಸವನ್ನು ಕೈಗೊಂಡು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದರು. ಅವರಿಗೆ ನಮ್ಮ ತಂಡದ ಎಲ್ಲರ ಪರವಾಗಿ ಧನ್ಯವಾದಗಳು.
ಮುಗಿಯಿತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ