ಬುಧವಾರ, ಫೆಬ್ರವರಿ 15, 2017

ಕೆ. ಆರ್.ಎಸ್. ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಸೈಕಲ್ ಸವಾರಿ

ಮೈಸೂರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಕೃಷ್ಣರಾಜ ಸಾಗರದ ಬಳಿ ನಿರ್ಮಿಸುತ್ತಿರುವ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ೨೯-೧-೨೦೧೭ರಂದು ಸೈಕಲ್ ಸವಾರಿ ಇದೆ ಎಂದು ಸತೀಶಬಾಬು ಪ್ರಕಟಣೆ ಕೊಟ್ಟಿದ್ದರು. ಸೈಕಲ್ ಸವಾರಿ ಮಾಡುವುದೆಂದರೆ ನನಗೆ ಬಲು ಖುಷಿ.  ರೂ. ೧೫೦ ಕೊಟ್ಟು ಹೆಸರು ನೋಂದಾಯಿಸಿದೆ.
  ೨೯ನೇ ತಾರೀಕು ಬೆಳಗ್ಗೆ ೭.೨೫ಕ್ಕೆ ಸರಸ್ವತೀಪುರದ ಗಂಗೋತಿ ಘಟಕದ ಕಛೇರಿ ಎದುರಿನಿಂದ ನಾವು ಹತ್ತು ಮಂದಿ ಸೈಕಲಿಗರು ಹೊರಟೆವು. ಶಾರದಾದೇವಿನಗರ ದಾಟಿ ವರ್ತುಲ ರಸ್ತೆಯಲ್ಲಿ ಸಾಗಿ ಹುಣಸೂರು ರಸ್ತೆ ಸೇರಿ ಮುಂದೆ ಹೂಟಗಳ್ಳಿ ತಲಪಿದೆವು. ಆಗ ಗಂಟೆ ೮.೩೦. ಗ್ರೀನ್ ಹೊಟೇಲಿನಲ್ಲಿ ಸೆಟ್ ದೋಸೆ ವಡೆ ತಿಂದು ಕಾಫಿ ಕುಡಿದು ೯ ಗಂಟೆಗೆ ಅಲ್ಲಿಂದ ಹೊರಟೆವು. ಕೈಗಾರಿಕಾ ಪ್ರದೇಶ ದಾಟಿ ಕೃಷ್ಣರಾಜ ರಸ್ತೆ ಸೇರಿದೆವು. ಮಧ್ಯೆ ಎರಡು ಕಡೆ ಐದು ನಿಮಿಷ ವಿಶ್ರಾಂತಿ ತೆಗೆದುಕೊಂಡಿದ್ದೆವು. ನಮ್ಮೊಡನೆ ಗಾನವಿ ಎಂಬ ಹತ್ತು ವರ್ಷದ ಬಾಲಕಿ ಸೈಕಲ್ ಸವಾರಿ ನಡೆಸಿದ್ದಳು. ಹುಣಸೂರು ರಸ್ತೆ ಸೇರುವಲ್ಲಿವರೆಗೂ ಅವಳೇ ಸೈಕಲ್ ತುಳಿದಿದ್ದಳು. ಅವಳ ಉತ್ಸಾಹವನ್ನು ಮೆಚ್ಚಬೇಕು. ಗಾನವಿಯ ತಂದೆ ಜಯಕುಮಾರ್ ಟಾಟ ಮೊಬೈಲ್ ಜೀಪಲ್ಲಿ ನಮ್ಮನ್ನು ಹಿಂಬಾಲಿಸಿದ್ದರು.  
XL
  XL
XL
 
ನೀರಿಲ್ಲದ ಕೃಷ್ಣರಾಜ ಸಾಗರ
 ನಾವು ೧೦ ಗಂಟೆಗೆ ಕೃಷ್ಣರಾಜಸಾಗರ ತಲಪಿದೆವು. ಸಾಗರದಲ್ಲಿ ನೀರಿನ ಹರಿವು ಸ್ವಲ್ಪ ಇತ್ತಷ್ಟೆ. ರಸ್ತೆಯ ಇಕ್ಕೆಲಗಳಲ್ಲೂ ಭತ್ತದ ಗದ್ದೆ. ಭತ್ತ ಕೊಯಿದಾಗಿ ಗದ್ದೆ ಬೋಳಾಗಿತ್ತು. ಅಲ್ಲಿಂದ ಮುಂದೆ ನಾವು ಹೊಸಕನ್ನಂಬಾಡಿಕಟ್ಟೆ ಕಡೆಗೆ ಮತ್ತೂ ಐದು ಕಿಮೀ ಹೋಗಬೇಕಿತ್ತು. ಅಲ್ಲಿಂದ ದಾರಿ ಏರು ಸುರುವಾಗಿತ್ತು. ನಾನು ಸೈಕಲಿನಿಂದ ಇಳಿಯದೆಯೇ ಕುಳಿತೇ ೧*೨ ಮತ್ತು ೧*೧ ಗೇರಿನಲ್ಲೇ ಏರು ದಾರಿಯನ್ನು ಹತ್ತಿಸಿದೆ. ಗೇರ್ ಸೈಕಲಾದರೆ ಏರು ಬರುವಾಗ ನಾವು ಇಳಿಯಬೇಕಿಲ್ಲ. ಆ ಅನುಕೂಲ ಗೇರ್ ಸೈಕಲ್ ನಮಗೆ ನೀಡುತ್ತದೆ.  ಇಳಿಯದೆಯೇ ದಮ್ಮುಕಟ್ಟಿ ಚಡಾವನ್ನು ಸೈಕಲ್ ತುಳಿಯುತ್ತಲೇ ಏರಬಹುದು. ಗಾನವಿಯೂ ಕೆ.ಆರ್.ಎಸ್ ನಿಂದ ಸೈಕಲ್ ಹತ್ತಿ  ಮೊದಲಿಗಳಾಗಿ ಹೊಸಕನ್ನಂಬಾಡಿಕಟ್ಟೆಯ ವೇಣುಗೋಪಾಲಸ್ವಾಮಿ ದೇವಾಲಯ ತಲಪಿ ಖುಷಿಪಟ್ಟಳು. ಮಕ್ಕಳು ಇಂಥ ಸಾಹಸ ಕಾರ್ಯವನ್ನು ಬೆಳೆಸಿಕೊಳ್ಳುವುದು ಬಹಳ ಒಳ್ಳೆಯದು. ನಾವು ೧೦.೪೫ಕ್ಕೆ ಅಲ್ಲಿ ತಲಪಿದ್ದೆವು. ಸುಮಾರು ೩೦ಕಿಮೀ ದೂರ ಕ್ರಮಿಸಿದ್ದೆವು. ಕೆಲವಾರು ಪ್ರವಾಸಿಗರು ಆಗಲೆ ಅಲ್ಲಿದ್ದರು.
  ಅಲ್ಲಿ ಬಾಳೆಹಣ್ಣು ತಿಂದು ದೇವಾಲಯದೊಳಗೆ ಹೋದೆವು. ದೇವಾಲಯ ನೋಡಿ ಅಲ್ಲಿ ವಿಶ್ರಮಿಸಿದೆವು. ತಂಡದ ಛಾಯಾಚಿತ್ರ ತೆಗೆಸಿಕೊಂಡೆವು. ವೇಣುಗೋಪಾಲ ಸ್ವಾಮಿ ದೇವಾಲಯ ಕೃಷ್ಣರಾಜಸಾಗರದಲ್ಲಿ ಮುಳುಗಡೆಯಾಗಿತ್ತು. ೨೦೦೨ರಲ್ಲಿ ಜಲಾಶಯ ಬತ್ತಿದಾಗ ಆ ದೇವಾಲಯದ ಉಳಿದ ಅವಶೇಷಗಳನ್ನು ಸಾಗಿಸಿ ತಂದು ಹೊಸದಾಗಿ ಈ ದೇವಾಲಯವನ್ನು ಶ್ರೀ ಹರಿಖೋಡೆಯವರು ನಿರ್ಮಿಸಲು ಹೊರಟು ಈಗಲೂ (೨೦೧೭) ಕೆಲಸ ನಡೆಯುತ್ತಲೇ ಇದೆ. ನವೆಂಬರದಲ್ಲಿ ಹರಿಖೋಡೆಯವರು ನಿಧನ ಹೊಂದಿದರು. ಅವರ ಜೀವಿತಾವಧಿಯಲ್ಲಿ ಈ ದೇವಾಲಯದ ಪ್ರತಿಷ್ಟಾಪನೆ ಕಾರ್ಯ ನೆರವೇರಲಿಲ್ಲ. ಬಲು ಸುಂದರವಾಗಿ ವಿಶಾಲ ಸ್ಥಳದಲ್ಲಿ ಕೃಷ್ಣರಾಜಸಾಗರದ ಹಿನ್ನೀರಿನ ಬಳಿಯಲ್ಲಿ ಕೆಲವಾರು ಕೋಟಿ ಖರ್ಚು ಮಾಡಿ  ದೇವಾಲಯವನ್ನು ನಿರ್ಮಿಸಿದ್ದಾರೆ. ಸುಮಾರು ೨೦ಕ್ಕೂ ಹೆಚ್ಚು ದೇವರ ವಿಗ್ರಹಗಳು ಕೆತ್ತನೆಗೊಂಡು ಅವನ್ನು ಭತ್ತದಲ್ಲಿ ಮುಳುಗಿಸಿ ದೇವಾಲಯದ ಪ್ರಾಂಗಣದಲ್ಲಿರಿಸಿದ್ದಾರೆ. ಯಾವಾಗ ಪ್ರತಿಷ್ಠಾಪನೆಯಾಗುತ್ತದೋ ಗೊತ್ತಿಲ್ಲ. ಪ್ರವಾಸಿಗರಿಗೆ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಿದು. ನಾವು ಹೋದಾಗ ಕೃಷ್ಣರಾಜಸಾಗರದಲ್ಲಿ ಸ್ವಲ್ಪವೇ ನೀರಿತ್ತು. ಜಲಾಶಯ ತುಂಬಿದಾಗ ಇಲ್ಲಿಗೆ ಭೇಟಿ ಕೊಟ್ಟೇ ಅದರ ಸೌಂದರ್ಯವನ್ನು ಕಣ್ಣುತುಂಬ ನೋಡಬೇಕು.

XL
 XL
XL
 XL
 
XL
 L
 XL
 
XL
 XL
 XL
 XL
 XL
 XL
 
XL
 XL
   ನಾವು ಅಲ್ಲಿಂದ ೧೨ ಗಂಟೆಗೆ ಹೊರಟೆವು. ದೇವಸ್ಥಾನಕ್ಕೆ ಬರುವವರ ವಾಹನ ಕಾಯುವ ಕಾವಲುಗಾರ ನಮಗೆ ನದಿಯಲ್ಲೇ ಹೋಗಿ. ಒಂದೆರಡು ಕಿಮೀ ಅಷ್ಟೆ ಇರುವುದು ಕೆ.ಆರ್. ಎಸ್ ಗೆ. ತುಂಬ ಹತ್ತಿರದ ದಾರಿ  ಬೇಗ ತಲಪಬಹುದು ಎಂದ. ಬರಿದಾದ ನದಿಗೆ ನಾವು ಸೈಕಲ್ ಇಳಿಸಿ ಸವಾರಿ ಮಾಡಿ ಕೃಷ್ಣರಾಜಸಾಗರ ತಲಪಿದೆವು. ನಾವು ಅಲ್ಲಿ ತಲಪುವುದಕ್ಕೂ ಜಯಕುಮಾರರು ಜೀಪಿನಲ್ಲಿ ಅಲ್ಲಿಗೆ ಬಂದು ಸೇರುವುದಕ್ಕೂ ಸರಿಯಾಗಿತ್ತು. ಬಿಸಿಲು ಜೋರಾಗೇ ಇತ್ತು. ನಮ್ಮ ನಮ್ಮ ಖರ್ಚಿನಲ್ಲೇ ರೂ. ೨೦ಕ್ಕೆ ಎಳನೀರು ಕುಡಿದೆವು. ಅದರಿಂದ ಶಕ್ತಿಯೂಡಿ ಸೈಕಲ್ ತುಳಿಯಲು ಹುರುಪು ಬಂತು. ಗೇರ್ ಸೈಕಲ್ ಆದಕಾರಣ ಎಲ್ಲೂ ಸೈಕಲಿನಿಂದ ಇಳಿದು ನೂಕುವ ಪ್ರಮೇಯ ಬರಲಿಲ್ಲ. ತೀವ್ರ ಏರಿನಲ್ಲಿ ಮಾತ್ರ ನಾನು ಗೇರ್ ಬದಲಾಯಿಸಿದ್ದು. ಮತ್ತೆಲ್ಲ ೨*೬ ಗೇರಿನಲ್ಲೇ ಸಾಗಿದ್ದೆ.
XL
  ಬಂದ ದಾರಿಯಲ್ಲೇ ಮುನ್ನಡೆದೆವು. ವಾಪಾಸು ಹೋಗುವಾಗ ನಾನು ಕೆಲವೊಮ್ಮೆ ಚಡಾವು ಏರುವಲ್ಲಿ ಹಿಂದೆ ಉಳಿಯುತ್ತಿದ್ದೆ. ಬಾಕಿದ್ದವರೆಲ್ಲ ಮುಂದೆ ಸಾಗಿದಾಗ ಸತೀಶಬಾಬು ಅವರು ನನ್ನ ಹಿಂದೆಯೇ ನಿಧಾನವಾಗಿ ಸೈಕಲ್ ತುಳಿಯುತ್ತ ಬರುತ್ತಿದ್ದರು. ಹೀಗೆ ನಾನು ‘ಹಿಂದುಳಿದವಳಾ’ದಾಗ, “ಯಾವಾಗಲೂ ಸೈಕಲ್ ಅಭ್ಯಾಸ ಮಾಡುತ್ತಿರಬೇಕು. ಆಗ ಕ್ಷಮತೆ ಹೆಚ್ಚುತ್ತದೆ. ಹೀಗೆ ಹಿಂದಾಗುವ ಪ್ರಮೇಯ ಬರುವುದಿಲ್ಲ’’ ಎಂದು ಕಿವಿಮಾತು ಹೇಳಿದಾಗ ಹೌದು ದಿನಾ ಸೈಕಲ್ ತುಳಿದು ಬಲ ಹೆಚ್ಚಿಸಿಕೊಳ್ಳಬೇಕು ಎಂದು ಒಪ್ಪಿಕೊಂಡಿತು ಮನಸ್ಸು. ಒಂದೆಡೆ ಏರು ತುಳಿದು ಸುಸ್ತಾದಾಗ ನೆರಳಲ್ಲಿ ತುಸು ವಿಶ್ರಮಿಸೋಣ ಎಂದು ಸತೀಶರಲ್ಲಿ ಭಿನ್ನವಿಸಿಕೊಂಡೆ. ಅವರು ಮುಂದೆ ಹೋಗಿ ಮುಂದಿನ ಸವಾರರಿಗೆ ನಿಲ್ಲಲು ಹೇಳಿದರು. ನಾವೆಲ್ಲ ಐದು ನಿಮಿಷ ದಣಿವಾರಿಸಿ ನೀರು ಕುಡಿದು ಮುಂದೆ ಸಾಗಿ ಹೂಟಗಳ್ಳಿ ತಲಪಿದಾಗ ಮಧ್ಯಾಹ್ನ ೧.೩೦ ಗಂಟೆ. ಅಲ್ಲಿ ಸೌತೆಕಾಯಿ ತಿಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮುಂದುವರಿದು ಹುಣಸೂರು ರಸ್ತೆ ಸೇರುವಲ್ಲಿ ಪ್ರಿಯದರ್ಶಿನಿ ಖಾನಾವಳಿಯಲ್ಲಿ ಊಟಕ್ಕೆ ಹೋದೆವು. ಎಲ್ಲರೂ ಊಟ ಮಾಡಿದರು. ನಾನು ಸೆಟ್ ಮಸಾಲೆದೋಸೆ (೨ದೋಸೆ) ತಿಂದೆ. ಊಟವಾಗಿ ಎಲ್ಲೂ ನಿಲ್ಲದೆ ಹುಣಸೂರು ರಸ್ತೆಯಲ್ಲಿ ಸಾಗಿ ವರ್ತುಲ ರಸ್ತೆಯಲ್ಲೇ ಮುಂದುವರಿದು ಭೋಗಾದಿ ತಲಪಿ ಅಲ್ಲಿಂದ ಸರಸ್ವತೀಪುರದ ನಮ್ಮ ಮನೆ ತಲಪುವಾಗ ಗಂಟೆ ೩.೧೫.

XL
 XL
 ಮನೆಗೆ ಬಂದು ವಿದ್ಯುತ್ ಪಂಕದ ಕೆಳಗೆ ಕೂತು ವಿಶ್ರಾಂತಿ ಪಡೆಯುವಾಗ ಕಾಲು ನೋಯುತ್ತಿತ್ತು. ಸ್ನಾನ ಮಾಡಿಯಾಗುವಾಗ ಕಾಲು ನೋವು ಮಾಯವಾಗಿತ್ತು. ಆದರೆ ರಾತ್ರೆ ವರೆಗೂ ಬೇರೇನೂ ಕೆಲಸ ಮಾಡುವ ಉಮೇದು ಇರದೆ ಕಾಲುಚಾಚಿ ಮಲಗಿಯೇ ಕಾಲಕಳೆದೆ. ಮಾರನೆದಿನ ಎಂದಿನಂತೆಯೇ ಕೆಲಸಕಾರ್ಯದಲ್ಲಿ ಭಾಗಿಯಾಗಲು ಏನೂ ತೊಂದರೆಯೆನಿಸಲಿಲ್ಲ.
  ನಾವು ಮೂರುಮಂದಿ ಹೆಂಗಸರು ಸೈಕಲ್ ಸವಾರಿ ಮಾಡಿದ್ದೆವು. ಈ ಸೈಕಲ್ ಸವಾರಿ ಕಾರ್ಯಕ್ರಮವನ್ನು  ಸತೀಶಬಾಬು ಬಹಳ ಚೆನ್ನಾಗಿ ಆಯೋಜಿಸಿದ್ದರು. ಅವರಿಗೆ ನಮ್ಮ ಸೈಕಲಿಗಳೆಲ್ಲರ ಪರವಾಗಿ ಧನ್ಯವಾದಗಳು. ವಿಶೇಷವಾಗಿ ಗಾನವಿಯ ಉತ್ಸಾಹಭರಿತ ಸವಾರಿಗೆ ಹ್ಯಾಟ್ಸಾಪ್.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ