ಶುಕ್ರವಾರ, ಸೆಪ್ಟೆಂಬರ್ 8, 2017

ಮಳೆಯ ಜೊತೆಯಲಿ ಮಳೆ ಮಲ್ಲೇಶ್ವರಬೆಟ್ಟಕ್ಕೆ ಚಾರಣ

     ಕೊಡಗುಜಿಲ್ಲೆಯಲ್ಲಿ ಸುಂದರವಾದ ಸಾಕಷ್ಟು ಬೆಟ್ಟಗಳಿವೆ. ಸೋಮವಾರಪೇಟೆ ತಾಲೂಕಿನ, ಮಾಲಂಬಿ ಗ್ರಾಮದಲ್ಲಿರುವ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಹೋಗುವ ಸಲುವಾಗಿ ನಾವು ೨೩ ಮಂದಿ ಮಿನಿ ಬಸ್ಸಿನಲ್ಲಿ ೨೭-೮-೧೭ರಂದು ೬ ಗಂಟೆಗೆ ಮೈಸೂರಿನಿಂದ ಸರಿಯಾದ ಸಮಯಕ್ಕೆ ಹೊರಟೆವು. ೭.೪೫ಕ್ಕೆ ಕುಶಾಲನಗರ ತಲಪಿ ಅಲ್ಲಿ ಬೈಪಾಸ್  ರಸ್ತೆಯ ಮೈಲಾರ್ ಕೆಫೆಯಲ್ಲಿ  ಇಡ್ಲಿ, ವಡೆ, ಕಾಫಿಯಾಗಿ ಹೊರಡುವಾಗ ೮.೪೫. ಬಿ.ಪಿ. ಕೃಷ್ಣಮೂರ್ತಿ ಹಾಗೂ ಬಿ.ಪಿ. ಶ್ರೀನಾಥ ತಮ್ಮ ಮನೆಯಲ್ಲೇ  ಶುಚಿಯಾಗಿ ಆಹಾರ ತಯಾರಿಸುತ್ತಾರೆ. ಅವರ ಸಂಪರ್ಕ ಸಂಖ್ಯೆ 7899974445, 9060190603 ಸೋಮಾವಾರಪೇಟೆ-ಗೋಣಿಮರೂರು-ಬಾಣಾವರ- ಆಲೂರು ಸಿದ್ದಾಪುರ ಹಾದು ಮಾಲಂಬಿ ತಲಪುವಾಗ ಗಂಟೆ ೧೦ ದಾಟಿತ್ತು. ನಮ್ಮ ಬಸ್ಸಿನ ಚಾಲಕ ಕೊಡಗಿನವರೇ. ಈ ದಾರಿಯಲ್ಲಿ ಬಂದು ಸುಮಾರು ೨೦ಕಿಮೀ ಸುತ್ತು ಬಳಸಿ ಬಂದಾಗಾಯಿತು ಎಂದು ಹೇಳಿದರು. 

    ಅಲ್ಲಿ ನಾವೆಲ್ಲ ಸ್ವ ಪರಿಚಯ ಮಾಡಿಕೊಂಡು ಸೌತೆಕಾಯಿ, ಕ್ಯಾರೆಟ್ ಪಡೆದು ಹೊರಡುವಾಗ ೧೦.೩೦. ಮಾಲಂಬಿ ಊರಿನಿಂದ ಮಳೆ ಮಲ್ಲೇಶ್ವರ ದೇವಾಲಯ ಎಂಬ ಫಲಕ ಇರುವಲ್ಲಿ ಬಲಕ್ಕೆ ಡಾಮರು ರಸ್ತೆಯಲ್ಲಿ ಸಾಗಿದೆವು. ದೂರದಲ್ಲಿ ಹಸುರು ಹೊದ್ದ ದೇವಾಲಯವಿರುವ ಬೆಟ್ಟ ಕಾಣುತ್ತಲಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಕಾಫಿ ತೋಟ. ಹಸಿರು ತೋಟದ ಮಧ್ಯೆ ಹಕ್ಕಿಗಳ ಕಲರವ ಕೇಳುತ್ತ, ಚಿಟ್ಟೆಗಳ ನರ್ತನ ನೋಡುತ್ತ, ಮಾತಿನ ರಸಧಾರೆ ಹರಿಸುತ್ತ, ತಲೆಮೇಲೆ ಬಿಸಿಲಿಲ್ಲದೆ ನಡೆಯುವುದೇ ಸೊಗಸು. ಮೋಡದ ಮರೆಯಲ್ಲೇ ಇದ್ದು ಭಾನು ನಮಗೆ ಬಹಳವಾಗಿ ಸಹಕರಿಸಿದ್ದ. ನಮ್ಮೊಡನೆ ಒಂದು ನಾಯಿಯೂ ಜೊತೆಗೂಡಿತ್ತು. ಅದು ಮುಂದೆ ಮುಂದೆ ಹೋದಾಗ, ನಾವು ಬರದೆ ಇರುವುದು (ನಾವು ಅಲ್ಲಲ್ಲಿ ನಿಂತು ನಿಧಾನವಾಗಿ ನಡೆಯುತ್ತಲಿದ್ದೆವು) ಕಂಡಾಗ ವಾಪಾಸು ಹಿಂದಕ್ಕೆ ಬಂದು ನಮ್ಮೊಡನೆ ಅಲ್ಲೇ ನಿಲ್ಲುತ್ತಲಿತ್ತು. ನಾವು ಮುಂದೆ ಹೆಜ್ಜೆ ಹಾಕಿದಮೇಲೆ ಅದೂ ಮುನ್ನಡೆಯುತ್ತಲಿತ್ತು! ಕೆಲವು ಊರುಗಳಲ್ಲಿ ನಾಯಿಯೊಂದು ನಮ್ಮೊಡನೆ ಬೆಟ್ಟದ ತುದಿ ತನಕ ಬರುತ್ತಲಿದ್ದುದನ್ನು ಸುಮಾರು ಕಡೆ ಬೆಟ್ಟ ಹತ್ತುವಾಗ ಗಮನಿಸಿರುವೆ. 


    ಒಂದೆರಡು ಕಿಮೀ ಮಾತ್ರ ಡಾಂಬರು ರಸ್ತೆ. ಮತ್ತೆ ಮಣ್ಣು ರಸ್ತೆ. ಮಳೆಗೆ ಕೆಲವು ಕಡೆ ಕೆಸರಿನ ಹೊಂಡಗಳಾಗಿತ್ತು. ಕೆಲವೆಡೆ ಕಾಲಿಟ್ಟರೇ ಜಾರುತ್ತಲಿತ್ತು. ಎಚ್ಚರದಿಂದ ರಸ್ತೆಯಲ್ಲಿ ಎಲ್ಲಿ ಕಾಲಿದಬಹುದು ಎಂದು ನೋಡಿ ನಡೆಯಬೇಕಿತ್ತು. ನೋಡದೆ ಒಬ್ಬರು ಜಾರಿ ಬಿದ್ದು ಬಟ್ಟೆ ಎಲ್ಲ ಮಣ್ಣು ಮಾಡಿಕೊಂಡಿದ್ದರು. ರಸ್ತೆಯುದ್ದಕ್ಕೂ ಸುತ್ತಲೂ ನೂರಾರು ಎಕರೆ ಕಾಫಿ ತೋಟವಿದೆ. ಅದರ ಮಾಲೀಕರು ಬೆಂಗಳೂರಿನಲ್ಲಿದ್ದಾರಂತೆ. ಆ ತೋಟದ ನಿರ್ವಾಹಕರು ಮಾತಾಡಿಸಿದರು. ಆ ರಸ್ತೆಯಲ್ಲಿ ಮಳೆಗಾಲದಲ್ಲಿ ಮಾತ್ರ ವಾಹನ ಹೋಗುವುದಿಲ್ಲವಂತೆ. ಬಾಕಿ ಸಮಯದಲ್ಲಿ ಅವರ ಜೀಪ್ ಓಡಾಟ ಇದೆಯಂತೆ. 

    ಮೂರು ನಾಲ್ಕು ಕಿಮೀ ಸಾಗಿಯಾಗುವಾಗ ತುಂತುರು ಮಳೆ ಸುರುವಾಯಿತು. ಕೆಲವರೆಲ್ಲ ಮಳೆಯಲ್ಲಿ ನೆನೆಯುವ ಆನಂದ ಅನುಭವಿಸಿದರು. ನಾವು ಕೆಲವರು ಮಳೆ‌ಅಂಗಿ ಧರಿಸಿ (ಕ್ಯಾಮರಾ ಕಾಪಾಡುವ ಸಲುವಾಗಿ) ನಡೆದೆವು. ಮತ್ತೆ ದಟ್ಟಮಂಜು ಆವರಿಸಿತು. ಮುಂದೆ ನಮಗೆ ಏನೂ ಕಾಣಿಸುತ್ತಿರಲಿಲ್ಲ. ಪ್ರಕೃತಿಯ ಈ ವಿಸ್ಮಯವನ್ನು ಕಣ್ಣಾರೆ ನೋಡುತ್ತ ಮಂಜಿಗೆ ಮುಖ ಒಡ್ಡಿ ಆನಂದಿಸಿದೆವು. ಯಾರೊ ಒಬ್ಬರು ಹುರಿದ ಸಾಬಕ್ಕಿ ಕೊಟ್ಟರು. ಆಗ ಅದು ಬಲು ರುಚಿಯೆನಿಸಿ ಪದೇ ಪದೇ ಅವರ ಮುಂದೆ ಕೈ ಒಡ್ಡಿದೆವು! 




  ಸುಮಾರು ೫ಕಿಮೀ ಸಾಗಿದಾಗ ದೇವಾಲಯಕ್ಕೆ ಹೋಗಲು ಸುಮಾರು ೧೦೦ ಮೆಟ್ಟಲುಗಳೆದುರಾದುವು. ಅಲ್ಲಿ ಮಂಜು ಮುಸುಕಿದ ವಾತಾವರಣವನ್ನು ನೋಡುತ್ತ ತುಸು ವಿರಮಿಸಿದೆವು. ಮೆಟ್ಟಲು ಏರಿ ದೇವಾಲಯ ತಲಪಿದೆವು. ದೇವಾಲಯ ಬಾಗಿಲು ಹಾಕಿತ್ತು. ಬಾಗಿಲ ಸಂದಿಯಲ್ಲಿ ಶಿವಲಿಂಗ ಮತ್ತು ಉದ್ಭವ ಕಲ್ಲು ಕಂಡಿತು.  ಪ್ರತೀ ಸೋಮಾವಾರ ಮಾತ್ರ ಪೂಜೆ ನಡೆಯುತ್ತದಂತೆ. ನಾವು ಅಲ್ಲಿ ತಲಪುವಾಗ ಗಂಟೆ ೧ ಆಗಿತ್ತು. ಎಲ್ಲರ ಹೊಟ್ಟೆ ತಾಳ ಹಾಕಲು ಸುರುಮಾಡಿತ್ತು. ‘ಈಗ ಬಿಸಿಬಿಸಿ ಅನ್ನ ಸಾರು, ಅದರ ಮೇಲೆ ತುಪ್ಪ ಇದ್ದರೂ ಆದೀತು. ಒಂದೆರಡು ಸಂಡಿಗೆ, ಬಾಳ್ಕ ಮೆಣಸು ಇದ್ದರೆ. . . . . . . ಆಹಾ ಅದರ ಸವಿ ವರ್ಣಿಸಲು ಸಾಧ್ಯವಿಲ್ಲ’ ಎಂದು ಕಿಣಿ ರಸವತ್ತಾಗಿ ಹೇಳುವಾಗ ನಾವು ಕಲ್ಪನೆಯಲ್ಲೆ ಆ ಊಟ ಸವಿದು ತೃಪ್ತಿ ಪಟ್ಟೆವು! 



  ದೇವಾಲಯದಲ್ಲಿ ಒಬ್ಬಟ್ಟು, ತುಪ್ಪ, ಚಿಕ್ಕಿ ತಿಂದು ಹಸಿದ ಹೊಟ್ಟೆಯನ್ನು ತೃಪ್ತಿ ಪಡಿಸಿದಾಗ ಅಲ್ಲಿಂದ ವಾಪಾಸು ಹೋಗಲು ಶಕ್ತಿ ಸಂಚಯನವಾಯಿತು. ಅಲ್ಲಿ ಸುತ್ತಮುತ್ತ ನೋಡುವಾಗ ನಮಗೆ ದಟ್ಟ ಮಂಜು ಬಿಟ್ಟರೆ ಬೇರೇನೂ ಕಾಣಲಿಲ್ಲ. ಕೊಡಗಿನ ಮೇಲೆ ಮಂಜು ಎಂಬ ಹಾಡು ಗುನುಗಲು ಏನೇನೂ ಅಡ್ಡಿ ಬರಲಿಲ್ಲ! ಪ್ರಕೃತಿಯ ಮಂಜಿನ ಮುಸುಕು ನೋಡಲು ಬಲು ಹುರುಪು. ಜೊತೆಯಲಿ ತುಂತುರುಮಳೆ. ಆಗ ನೋಡಬೇಕು ಹಸುರುಡುಗೆ ತೊಟ್ಟ ಇಳೆಯ ಕಳೆ. ಅದನ್ನೇ ನೋಡುತ್ತ, ಹರಟೆ ಹೊಡೆಯುತ್ತ ವಿರಮಿಸಿ ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ೧.೪೫ಕ್ಕೆ ಹೊರಡಲು ತಯಾರಾದೆವು. ನಾಯಿಯೂ ದೇವಾಲಯಕ್ಕೆ ನಮ್ಮೊಡನೆಯೇ ಬಂದಿತ್ತು. ನಾಯಿಪ್ರಿಯರು ಅದನ್ನು ಸಾಕಷ್ಟು ಮುದ್ದುಮಾಡಿದರು. ಅದೂ ಸುಖವಾಗಿ ಬಾಲ ಅಲ್ಲಾಡಿಸುತ್ತ ಮುದ್ದು ಮಾಡಿಸಿಕೊಂಡಿತ್ತು. ವಾಪಾಸು ನಮ್ಮೊಡನೆಯೇ ಹೊರಟಿತು! 






   ರಸ್ತೆ ಇಡೀ ಕೊಚ್ಚೆಮಯ. ನಮ್ಮ ಕಾಲಿನಲ್ಲಿ ಶೂ! ಶೂ ಎಲ್ಲ ಕೆಸರುಮಯ. ಒಮ್ಮೆ ಶೂ ಬಿಚ್ಚಿದರೆ ಸಾಕಪ್ಪ ಎಂಬ ಸ್ಥಿತಿ! ದಾರಿಯಲ್ಲಿ ಎಲ್ಲೂ ಜಿಗಣೆ ಇರಲಿಲ್ಲ. ಹಾಗಾಗಿ ನಾವು ಬಚಾವ್! ಇಳಿಯುವಾಗ ಬಹಳ ಎಚ್ಚರದಿಂದ ಇಳಿಯಬೇಕಿತ್ತು. ರಸ್ತೆಯಲ್ಲಿ ಕಾಲಿಟ್ಟರೆ ಜಾರುತ್ತಿತ್ತು. ಜಾಗರೂಕತೆಯಿಂದ ಕಾಲಿಟ್ಟು ನಡೆಯುತ್ತ ಸಾಗುವಾಗ ಕಾಫಿ ತೋಟದಲ್ಲಿ ಕೆಲಸ ಮಾಡುವ ಹೆಂಗಸರು ಮಾತಾಡಿಸಿದರು. ಕಳೆಕೀಳುವ ಕೆಲಸ ಮಾಡುವುದಂತೆ ಅವರು. ತೋಟದಲ್ಲಿ ಅಲ್ಲಲ್ಲಿ ಜೇಡನ ಬಲೆಗಳು ಕಾಣಿಸಿತು. ಎಂಥ ನೈಪುಣ್ಯ ಜೇಡನದು. ಅದರ ಬಲೆ ನೋಡುವುದೇ ಸೊಗಸು. ವಿಧವಿಧದ ಜೇಡಗಳ ದರ್ಶನವಾದುವು. ಅವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದೆವು. ಮಳೆ ಹನಿ ಹಾಕುತ್ತಲೇ ಇತ್ತು. 








  ಅಂತೂ ಮೂರು ಗಂಟೆಗೆ ನಾವು ಮಾಲಂಬಿ ತಲಪಿದೆವು. ಅಲ್ಲಿ ಊಟಕ್ಕೆ ಸೊಗಸಾದ ಸ್ಥಳ ಪತ್ತೆ ಮಾಡಿದೆವು. ಕನ್ನಂಬಾಡಿ ದೇವಾಲಯದ ವಿಸ್ತಾರವಾದ ಜಗಲಿಯಲ್ಲಿ ನಾವು ಊಟ ಮಾಡಿದೆವು. ಪಲಾವ್, ಮೊಸರು ಗೊಜ್ಜು, ಮೊಸರನ್ನ,  ಮಸಾಲೆವಡೆ, ಸೌತೆಕಾಯಿ ಇಷ್ಟು ಬಗೆಗಳಿದ್ದ ಪುಷ್ಕಳ ಭೋಜನ. ಪಲಾವ್ ಬಹಳ ರುಚಿಯಾಗಿತ್ತು. ಮೈಲಾರಿ ಹೋಟೇಲಿನವರು ಬೆಳಗ್ಗೆಯೇ ನಮಗೆ ಈ ಅಡುಗೆ ತಯಾರಿಸಿ ಕೊಟ್ಟಿದ್ದರು. 

 ರಮಣೀಯ ಮಲ್ಲಳ್ಳಿ ಜಲಪಾತ

ಊಟವಾಗಿ ಮಾಲಂಬಿ ಬಿಟ್ಟಾಗ ಗಂಟೆ ೪.೧೫. ಸುಮಾರು ೨೨ ಕಿಮೀ ದೂರದ  ಸೋಮವಾರಪೇಟೆ ಹಾದು ಮುಂದೆ ಹತ್ತು ಕಿಮೀ ಸಾಗಿ ಶಾಂತಳ್ಳಿ ತಲಪಿ ಅಲ್ಲಿಂದ  ಮೂರು ಕಿಮೀ ಪ್ರಯಾಣಿಸಿ ಮೆಲ್ಲಳ್ಳಿ ತಲಪಿದೆವು. ಚಾಲಕನ ಚಾಕಚಕ್ಯತೆಗೆ ಮೆಚ್ಚಬೇಕು. ದಾರಿಯುದ್ದಕ್ಕೂ ತುಂತುರು ಮಳೆ ಜೊತೆಗೆ ದಟ್ಟಮಂಜು ತುಂಬಿ ದಾರಿಯೇ ಕಾಣಿಸುತ್ತಲಿರಲಿಲ್ಲ. ಮೊದಲು ಶಾಂತಳ್ಳಿಯಿಂದ ಮೂರು ಕಿಮೀ ದೂರ ನಡೆದೇ ಹೋಗಬೇಕಿತ್ತು. ಈಗ ಸಿಮೆಂಟು ರಸ್ತೆಯಾಗಿ ವಾಹನ ಸಂಚಾರ ಸರಾಗವಾಗಿದೆ. ಅಲ್ಲಿ ಗೇಟಿನಲ್ಲಿ ವಾಹನ ಶುಲ್ಕ ಪಾವತಿಸಬೇಕು. ಮಿನಿ ಬಸ್ಸಿಗೆ ೨೦೦ ರೂ. ನಾವು ತಲಪುವಾಗ ಗಂಟೆ ೫.೩೦. ಮೇಲಿಂದಲೇ ಜಲಪಾತ ವೀಕ್ಷಿಸುವುದು. ಕೆಳಗೆ ಮೆಟ್ಟಲು ಇಳಿಯಲಿಲ್ಲ. ಸಮಯಾವಕಾಶವಿಲ್ಲ ಎಂದು ಹೇಳಿದ್ದರು. ನಾವು ತಲಪಿದಾಗ ದಟ್ಟ ಮಂಜು. ಜಲಪಾತ ಕಾಣುತ್ತಲೇ ಇರಲಿಲ್ಲ. ಆಲಪಾತ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಬೋರ್ಗರೆತ ಮಾತ್ರ ಕೇಳುತ್ತಲಿತ್ತು. ಅಯ್ಯೋ! ಇಷ್ಟು ದೂರ ಬಂದು ಜಲಪಾತ ನೋಡಲು ಸಿಕ್ಕಲಿಲ್ಲವಲ್ಲ ಎಂದು ಎಲ್ಲರೂ ಹತಾಶರಾಗಿ ನಿಂತಿದ್ದೆವು. ಈಗ ಮಂಜು ಮರೆಯಾಗಿ ಜಲಪಾತ ಕಾಣುತ್ತೇನೋ ಎಂದು ಜಲಪಾತದೆಡೆಗೇ ದಿಟ್ಟಿ ಹಾಯಿಸಿ ಚಾತಕ ಪಕ್ಷಿಯಂತೆ ಕಾಯುತ್ತಲಿದ್ದೆವು. ಅಗೋ ಮಂಜು ತೆರೆ ಸರಿಸಿ ಬೋರ್ಗರೆಯುವ ಜಲಪಾತ ನಮ್ಮೆದುರು ಪ್ರತ್ಯಕ್ಷ. ಓಹ್! ಆ ಕ್ಷಣವಂತೂ ಬಹಳ ಸುಂದರ. ಪ್ರಕೃತಿ ನಮಗೆ ಮೋಸ ಮಾಡಲಿಲ್ಲ. ರಮಣೀಯವಾದ ಜಲಪಾತ ನೋಡುತ್ತ ಮನೋಲ್ಲಾಸಗೊಂಡೆವು.  ಯಾರಿಗೂ ಅಲ್ಲಿಂದ ಕದಲಲು ಮನಸು ಬಾರದು. ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ನೋಡಿದಷ್ಟೂ ಕಣ್ಣು ತಣಿಯದು ಎಂಬಂಥ ಸ್ಥಿತಿ! ಪುಷ್ಪಗಿರಿ ತಪ್ಪಲಲ್ಲಿ ಹುಟ್ಟಿ ಸುಮಾರು 390 ಅಡಿ ಎತ್ತರದಿಂದ ಹರಿಯುವ ನೀರು ಮುಂದೆ ಹರಿದು ಸುಬ್ರಮಣ್ಯದಲ್ಲಿ ಕುಮಾರಧಾರಾ ನದಿ ಸೇರುತ್ತದೆ. ಈ ಹಿಂದೆ ಎರಡು ಸಲ ನೀರಿಲ್ಲದಿರುವಾಗ ಮೆಲ್ಲಳ್ಳಿ ಜಲಪಾತಕ್ಕೆ ಹೋಗಿದ್ದೆ. ಈಗ ನೀರಿರುವಾಗ ಹೋದದ್ದು ಸಾರ್ಥಕವೆನಿಸಿತು. ಇಲ್ಲಿಗೆ ಹೋಗಲು ಪ್ರಶಕ್ತ ಕಾಲವೆಂದರೆ ಜುಲೈ ನಿಂದ  ದಶಂಬರ ತಿಂಗಳು.





 ಅಂತೂ ಎಲ್ಲರನ್ನೂ ಅಲ್ಲಿಂದ ಹೊರಡಿಸಲು ಸಂಘಟಕರು ಹರಸಾಹಸವೇ ಮಾಡಬೇಕಾಯಿತು. ಸಂಜೆ ಆರೂವರೆಗೆ ನಾವು ಅಲ್ಲಿಂದ ನಿರ್ಗಮಿಸಿದೆವು. ಕುಶಾಲನಗರಕ್ಕೆ ೮ ಗಂಟೆಗೆ ಬಂದು ಮೈಲಾರಿಯಲ್ಲಿ ಕಾಫಿ ಕುಡಿದು ಹೊರಟು ಮೈಸೂರು ತಲಪುವಾಗ ರಾತ್ರಿ ಹತ್ತೂವರೆ ದಾಟಿತ್ತು. ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಯೋಗೇಂದ್ರ, ಶೈಲಜೇಶ, ಪಾಂಡುರಂಗ ಕಿಣಿ ಈ ಚಾರಣ ಹಮ್ಮಿಕೊಂಡು ಕರೆದುಕೊಂಡು ಹೋಗಿ ಯಶಸ್ವಿಯಾಗಿ ವಾಪಾಸು ಕರೆತಂದಿದ್ದರು. ಈ ತ್ರಿಮೂರ್ತಿಗಳಿಗೆ ನಮ್ಮೆಲ್ಲರ ಪರವಾಗಿ ಧನ್ಯವಾದಗಳು.

   ಅಂತಾರಾಷ್ಟ್ರೀಯ ಯೂಥ್ ಹಾಸ್ಟೆಲಿನ ಜನಕ ಜರ್ಮನಿಯ  ರಿಚರ್ಡ್ ಷೆರ್ಮನ್ . ಅವರು ಶಾಲಾ ಶಿಕ್ಷಕರಾಗಿದ್ದವರು.   ಶಾಲಾಮಕ್ಕಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ೧೯೦೯ರಲ್ಲಿ ರಿಚರ್ಡ್ ಷೆರ್ಮನ್‌ರಿಂದ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಯೂಥ್ ಹಾಸ್ಟೆಲ್‌ಗೆ ಈಗ ಶತಮಾನ ದಾಟಿದೆ. ಮೈಸೂರಿನಲ್ಲಿ ಯೂಥ್ ಹಾಸ್ಟೆಲ್ ೧೯೪೯ರಲ್ಲಿ ಪ್ರಾರಂಭಗೊಂಡಿತು. ಮೈಸೂರಿನ ಗಂಗೋತ್ರಿ ಘಟಕ ೧೯೮೮ರಲ್ಲಿ ಪ್ರಾರಂಭವಾಗಿ ಅನಂತರ ಕರ್ನಾಟಕದಲ್ಲೇ ಅತ್ಯಂತ ಪ್ರಭಾವೀ ಘಟಕವಾಗಿ ಬೆಳೆದದ್ದು ಖುಷಿಯ ವಿಚಾರ. ಸದಸ್ಯರಿಗೆ, ಇತರರಿಗೆ ಒಂದು ಅಥವಾ ಎರಡು ದಿನಗಳ  ಚಾರಣ, ಸೈಕಲ್ ಸವಾರಿ, ಟ್ಯೂಬ್ ರ್‍ಯಾಪ್ಟಿಂಗ್, ಸಾಹಸ ಕ್ರೀಡೆಗಳಾದ ಶಿಲಾರೋಹಣ, ಕೃತಕ ಗೋಡೆಗಳನ್ನು ಹತ್ತುವುದು ಇತ್ಯಾದಿ ವರ್ಷದಲ್ಲಿ ೫೦ಕ್ಕೂ ಹೆಚ್ಚು ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಯೋಜಿಸುತ್ತ ಬಂದಿರುವುದು ಈ ಘಟಕದ ಸಾಧನೆಯೇ ಸರಿ. 
    ರಿಚರ್ಡ್ ಷೆರ್ಮನ್ ಅವರ ನೆನಪಿನಲ್ಲಿ ಯೂಥ್  ಹಾಸ್ಟೆಲ್ ಗಂಗೋತ್ರಿ ಘಟಕ ೨೬-೮-೧೭ರಂದು ಸರಸ್ವತೀಪುರದ ರಾಮಮಂದಿರದಲ್ಲಿ ಘಟಕದ ಸದಸ್ಯರಿಗೆ ಕೆಲವು ಸ್ಪರ್ಧೆಗಳನ್ನು ನಡೆಸಿದ್ದರು. ಅವರ ಜೀವನ ಸಾಧನೆಯ ಚಿತ್ರಣವನ್ನು  ಬಿಡಿಸಿಟ್ಟು ಆ ದಿನವನ್ನು ಸಾರ್ಥಕವಾಗುವಂತೆ ಮಾಡಿದ್ದರು.  ರಾಮಮಂದಿರದ ಎದುರು ಎರಡು ಗಿಡ ನೆಟ್ಟು ಹಸಿರಿದ್ದರೆ ಉಸಿರು ಎಂಬ ಸಂದೇಶವನ್ನು ರವಾನಿಸಿದ್ದು ಅತ್ಯಂತ ಶ್ಲಾಘನೀಯ ಕೆಲಸ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ