ಶುಕ್ರವಾರ, ಜನವರಿ 26, 2018

ಕುಂದೂರು ಬೆಟ್ಟದ ತಪ್ಪಲಿನ ಏಳು ಕೆರೆಯ ಒಡೆಯ ಕಾಮೇಗೌಡರು

   ನಾವು ಐದು ಮಂದಿ(ಅನಂತ, ರುಕ್ಮಿಣಿ, ಅಶೋಕ, ದೇವಕಿ, ಜಯಶ್ರೀ) ೧೪-೧-೨೦೧೮ರಂದು ಸುತ್ತೂರು ಜಾತ್ರೆಗೆ ಹೋಗಲು ಅಣಿಯಾದೆವು. ಹೋಗುವ ದಾರಿಯಲ್ಲಿ‌ಉತ್ತನಹಳ್ಳಿ ತ್ರಿಪುರಸುಂದರಿ ದೇವಾಲಯಕ್ಕೆ ಭೇಟಿಕೊಟ್ಟೆವು. ಅಲ್ಲಿಂದ ಬರುತ್ತ, `ಇಲ್ಲೇ ಹತ್ತಿರ ಜಯರಾಮ ಪಾಟೀಲರ(ಅನಂತನ ಸ್ನೇಹಿತರು) ಮನೆ ಇರುವುದು ಹೋಗಬೇಕಾ?'ಎಂದು ಅನಂತ ಕೇಳಿದಾಗ, ಹೋಗುವ ಎಂದೆವು. ಅಲ್ಲಿಗೆ ಕರೆದುಕೊಂಡು ಹೋಗಬೇಕೆಂದು ಎಷ್ಟೋ ಸಮಯದಿಂದ ಹೇಳುತ್ತಿದ್ದೆ.
ಜಯರಾಮ ಪಾಟೀಲರು ಹಾಗೂ ಅವರ ಪತ್ನಿ ರಜನಿ ಪ್ರಾಣಿಪ್ರಿಯರು. ವಿಶಿಷ್ಟ ವ್ಯಕ್ತಿತ್ವದವರು. ಉತ್ತನಹಳ್ಳಿಯಿಂದ ಹದಿನಾರು ಗ್ರಾಮಕ್ಕೆ ಹೋಗುವ ರಸ್ತೆ ಬದಿ ಸುತ್ತಮುತ್ತ ಮನೆಗಳಿಲ್ಲದ ಸ್ಥಳದಲ್ಲಿ ಅವರು ಮನೆಕಟ್ಟಿ ವಾಸವಾಗಿದ್ದಾರೆ. ಅಲ್ಲಿ ಸುಮಾರು ಕೋತಿಗಳು ಅವರ ಅಂಗಳದ ಮರಗಳಲ್ಲೇ ಬೀಡುಬಿಟ್ಟಿವೆ. ಅವುಗಳಿಗೆ ನಿತ್ಯ ೧೫ಕಿಲೋ ಬಾಳೆಹಣ್ಣು ಕೊಡುತ್ತಾರೆ. ಹತ್ತಾರು ಬೀದಿನಾಯಿಗಳಿಗೆ ಆಹಾರ ಹಾಕುತ್ತಾರೆ. ನಾಲ್ಕಾರು ನಾಯಿ, ಬೆಕ್ಕುಗಳು ಮನೆಯಲ್ಲಿವೆ. ಆ ಪರಿಸರ ನೋಡುವ, ಅವರೊಡನೆ ಮಾತಾಡುವ ಕುತೂಹಲ ಉಳಿಸಿಕೊಂಡಿದ್ದೆ. ಈ ಸಂದರ್ಭದಲ್ಲಿ ಅದು ಈಡೇರಿತು. ಒಂದೊಂದು ಕೋತಿಗಳದೂ ಒಂದೊಂದು ಸ್ವಾರಸ್ಯವಾದ ಕತೆಗಳನ್ನು ರಜನಿಯವರು ಹೇಳಿದರು. ಈ ದಂಪತಿಗಳು ಅವರ ಜೀವನವನ್ನು ಪ್ರಾಣಿಗಳ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ.
ಪಾಟೀಲರು ಮಾತಾಡುತ್ತ, ರಮಾಬಾಯಿ ಪುರಸ್ಕಾರ ಆಮಂತ್ರಣ ಪತ್ರಿಕೆ ಬಂತಾ? ಎಂದು ಅನಂತನಲ್ಲಿ ಕೇಳಿದರು.
ಅದರ ಬಗ್ಗೆ ಮಾಹಿತಿ: ಶ್ರೀಮತಿ ಡಿ. ರಮಾಬಾಯಿ ಚಾರಿಟೇಬಲ್ ಫೌಂಡೇಶನ್ ಮತ್ತು ಶ್ರೀ ಎಂ. ಗೋಪಿನಾಥ ಶೆಣೈ ಚಾರಿಟೇಬಲ್ ಟ್ರಸ್ಟ್ ಮೈಸೂರು.ಶಿಕ್ಷಣ, ಆರೋಗ್ಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಸೇವಾಕೈಂಕರ್ಯದಲ್ಲಿ‌ಈ ಎರಡೂ ಸಂಸ್ಥೆಗಳು ನಿರತವಾಗಿವೆ. ೨೦೧೬ನೇ ಸಾಲಿನಿಂದ ಪ್ರತೀವರ್ಷ ರಮಾಗೋವಿಂದಪುರಸ್ಕಾರ ಎಂಬ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಳ್ಳುತ್ತಿವೆ.
ಜನಸಾಮುದಾಯದೊಡನೆ ಸಮಾಜಮುಖೀ ಜನಪರಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಗುರುತಿಸಿ, ಮೂರು ಲಕ್ಷ ರೂಪಾಯಿ ಪುರಸ್ಕಾರದೊಂದಿಗೆ ಅವರನ್ನು ಗೌರವಿಸಿ, ಅವರೊಡನೆ ಒಂದು ಸಾಂಸ್ಕೃತಿಕ ಸಂಜೆಯನ್ನು ಜೊತೆಯಾಗಿ ಕಳೆಯುವ ಸದಾಶಯವನ್ನು‌ಈ ಸಂಸ್ಥೆಗಳ ಪ್ರವರ್ತಕರಾದ ರಾಮನಾಥಶೆಣೈ, ಜಗನ್ನಾಥಶೆಣೈ, ಗೋಪಿನಾಥಶೆಣೈ ಕುಟುಂಬದವರು ಹೊಂದಿದ್ದಾರೆ. ನೀನಾಸಂಸಂಸ್ಥೆಗೆ ಮತ್ತು, ಶ್ರೀಮತಿ ಗೋದಾವರಿ ಡಾಂಗೆ (ಉಸ್ಮಾನಾಬಾದ್ ತುಳಜಾಪುರ ತಾಲ್ಲೂಕು, ಮಹಾರಾಷ್ಟ್ರ) ಹಾಗೂ ಶ್ರೀ ಕಾಮೇಗೌಡ ಮಳವಳ್ಳಿ, ಮಂಡ್ಯಜಿಲ್ಲೆ. ಇವರುಗಳು ಈ ಸಾಲಿನ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ೨೮-೧-೨೦೧೮ರಂದು ಮೈಸೂರಿನ ಕಲಾಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
     ಕಾಮೇಗೌಡರ ಬಗ್ಗೆ ನಮಗೆ ಕುತೂಹಲವಿತ್ತು. ಅವರ ಕಥೆಯನ್ನು ಜಯರಾಮ ಪಾಟೀಲರು ಸವಿಸ್ತಾರವಾಗಿ ವರ್ಣಿಸಿದರು. ಕಾಮೇಗೌಡರು ಸುಮಾರು ೭೫ರ ಮೇಲಿನ ವಯಸ್ಸಿನವರು. ದಾಸನದೊಡ್ಡಿ ಗ್ರಾಮದಲ್ಲಿ  ಹೆಂಡತಿ, ಎರಡು  ಗಂಡುಮಕ್ಕಳು ಸೊಸೆಯಂದಿರು ಮೊಮ್ಮಕ್ಕಳೊಡನೆ ವಾಸವಾಗಿದ್ದಾರೆ. ಮನೆಯವರ ವಿರೋಧದ ನಡುವೆಯೂ, ಮಳವಳ್ಳಿಯ ಕುಂದೂರು ಬೆಟ್ಟದ ಕೆಳಗೆ  ಏಕಾಂಗಿಯಾಗಿ ಸಾಲಾಗಿ ಏಳು ಕೆರೆಗಳನ್ನು ಸಾಲಸೋಲ ಮಾಡಿ ತೋಡಿದ್ದಾರೆ ಎಂದು ವಿವರಿಸಿದರು. ಪಾಟೀಲರೊಡನೆ ನಾಲ್ಕು ಮಾತಾಡಿ ನಾವು ಅಲ್ಲಿಂದ ಹೊರಟು ಸುತ್ತೂರಿಗೆ ಹೋದೆವು. ಸುತ್ತೂರಿನಲ್ಲಿ ಜನ ಮರುಳೋ ಜಾತ್ರೆ ಮರುಳೋ ಎಂಬ ಮಾತಿನಂತೆ ಜನಸಾಗರವಿತ್ತು.

 ನಾವು ಸುತ್ತೂರಿನಿಂದ ವಾಪಾಸಾಗುತ್ತಿರುವಾಗಲೇ ಅಶೋಕಭಾವನ ತಲೆಯಲ್ಲಿ ಕಾಮೇಗೌಡರೇ ಸುತ್ತುತ್ತಿದ್ದಿರಬೇಕು. ‘ನಾವು ನಾಳೆ ಮಳವಳ್ಳಿಗೆ ಕಾಮೇಗೌಡನ ಕೆರೆ ನೋಡಿಯೇ ನಾಡಿದ್ದು ಮಂಗಳೂರಿಗೆ ಹೋದರೆ ಹೇಗೆ? ಎಂದು ಪತ್ನಿ ದೇವಕಿಗೆ ಕೇಳಿದರು. ದೇವಕಿಯವರೂ ಸಮ್ಮತಿಯಿತ್ತರು.
  ರಾತ್ರೆ ಮನೆಯಲ್ಲಿ ಈ ವಿಷಯ ಮಾತಾಡುತ್ತಿರಬೇಕಾದರೆ, ಮಳವಳ್ಳಿಯ ಕಾಮೇಗೌಡರ ಕುಂದೂರುಬೆಟ್ಟಕ್ಕೆ ಹೋಗಲು ದಾರಿ ಹೇಗೆ ಎಂಬ ಮಾತು ಬಂತು. ಜಯರಾಮ ಪಾಟೀಲರಿಗೇ ದೂರವಾಣಿ ಮಾಡಿಕೇಳಿ. ಅವರು ಹೋಗಿದ್ದಾರಲ್ಲಎಂದು ಸಲಹೆ ಕೊಟ್ಟೆ. ರಾತ್ರೆ ಹತ್ತಕ್ಕೆ ಅವರಿಗೆ ಕರೆ ಮಾಡಿ ದಾರಿ ಕೇಳಿ ತಿಳಿದಿದ್ದಾಯಿತು. ಮರುಕ್ಷಣವೇ ಅವರಿಂದ ಮರುಕರೆ ‘ನೀವೆಲ್ಲ ನಾಳೆ ನಮ್ಮಲ್ಲಿಗೆ ಬನ್ನಿ. ನಾನೂ ಬರುವೆ. ಒಟ್ಟಿಗೆ ಹೋಗೋಣ ಎಂದರವರು ಉತ್ಸಾಹದಿಂದ.
ಸಂಕ್ರಾಂತಿ ಹಬ್ಬದಂದು (೧೫.೧.೨೦೧೮) ನಾವು  ನಾಲ್ವರು (ಜಯಶ್ರೀ ಅವಳೂರಿಗೆ ಹೋಗಿಯಾಗಿತ್ತು) ಬೆಳಗ್ಗೆ ೯ ಗಂಟೆಗೆ ಜಯರಾಮಪಾಟೀಲರ ಮನೆ ತಲಪಿದೆವು. ನಿಮ್ಮ ಕಾರನ್ನು ಒಳಗಿಡಿ. ನಮ್ಮ ಕಾರಿನಲ್ಲೆ ಹೋಗುವ ಎಂದರವರು. ಕಾರು ಬಾಗಿಲು ತೆರೆದು ಒಳಗೆ ಹತ್ತುವಾಗ ಘಂ ಎಂದು ಸೆಂಟು ನಾಥ ಮೂಗಿಗೆ ಬಡಿಯಿತು. ಆಯಿತು ನನ್ನ ಕಥೆ ಎಂದು ಮನದಲ್ಲೇ ಹೇಳಿಕೊಂಡೆ. ಅನಂತನಿಗಂತೂ ಖುಷಿಯೇ ಖುಷಿ ನನ್ನ ಅವಸ್ಥೆ ನೋಡಿ. ಸೆಂಟ್ ಎಂಬ ಹೆಸರೇಳಿದರೆ ಮಾರುದೂರ ಓಡುವವಳು ನಾನು!
 ಸಾಲದ್ದದಕ್ಕೆ ಕಾರು ಗಾಜನ್ನು ಏರಿಸಿ ಕೃತಕ ತಾಪಮಾನದ ವ್ಯವಸ್ಥೆ! ಅಂತೂ ಮೂಗುಮುಚ್ಚಿಕೊಂಡೇ ಕುಳಿತೆ. ಅಬ್ಬ ಕಾರಿನೊಳಗಿನ ಎಸಿಗಿಂತ ಹೊರಗಿನ ಸೆಗಣಿ , ಧೂಳು ವಾಸನೆಯಾದರೂ ಎಷ್ಟೋ ಸುಖ ಎಂದು ಮನದಲ್ಲೇ ಹೇಳಿಕೊಂಡೆ. ಗಮ್ಯ ಸ್ಥಾನ ಬಂದು ಕಾರಿಳಿಯುವಾಗ ಗಮನಕ್ಕೆ ಬಂದದ್ದು. ನಾನು ಕೂತ ಬಾಗಿಲಲ್ಲೇ ಸೆಂಟು ಡಬ್ಬ (ಕಾರು ಫ್ರೆಷ್ನರ್ ಎಂಬ ಹೆಸರಿದೆ ಅದಕ್ಕೆ)ಇದೆಯೆಂಬುದಾಗಿ! ಅದಕ್ಕೇ ಅಷ್ಟು ವಾಸನೆ ಬಡಿದದ್ದು ಎಂದರಿವಾಯಿತು.   ಕೊಳ್ಳೇಗಾಲ ದಾಟಿ ಮಳವಳ್ಳಿ ತಲಪಿ ಅಲ್ಲಿಂದ ಹತ್ತು ಕಿಮೀ ದೂರದಲ್ಲಿರುವ ದಾಸನದೊಡ್ಡಿ ಗ್ರಾಮ ತಲಪಿದಾಗ ೧೦.೩೦. ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರ ಮನೆ ಬಳಿ ಬಂದಾಗ ಕಾಮೇಗೌಡ ಮಳವಳ್ಳಿಗೆ ಹೋಗಿರುವರೆಂದು ತಿಳಿಯಿತು. ಮಗನಿಗೆ ದೂರವಾಣಿ ಕರೆ ಮಾಡಿ ಹೇಳಿದ್ದೆ. ಮಗ ಅವರಿಗೆ ಹೇಳಲೇ ಇಲ್ಲ ನೋಡಿ. ಹೀಗಿದೆ ಅಪ್ಪ ಮಕ್ಕಳ ಸಂಬಂಧ ಎಂದು ಪಾಟಿಲರು ಹೇಳಿಕೊಂಡರು.
 ಜಯರಾಮ ಪಾಟೀಲರಿಗೆ ಕಾಮೇಗೌಡರು ಕಟ್ಟಿಸಿದ ಕೆರೆಗಳಿಗೆ ದಾರಿ ಗೊತ್ತಿತ್ತು. ಅವರೇ ನಮ್ಮನ್ನು  ಕುಂದೂರು(ಕುಂದನಿ) ಬೆಟ್ಟದ ತಪ್ಪಲಿಗೆ ಕರೆದುಕೊಂಡು ಹೋದರು. ಕಾಮೇಗೌಡ ಇದ್ದಿದ್ದರೆ ಬಲು ಚೆನ್ನಾಗಿತ್ತು. ಒಂದೊಂದು ಕೆರೆಯ ಬಗ್ಗೆಯೂ ಚೆನ್ನಾಗಿ ವಿವರಿಸುತ್ತಿದ್ದರು. ಅವರಷ್ಟು ಚೆನ್ನಾಗಿ ಮಾತಾಡಲು ಬರದಿದ್ದರೂ ಕಾಮೇಗೌಡ ನನಗೆ ವಿವರಿಸಿದ್ದನ್ನು ನಾನು  ನಿಮಗೆ ಹೇಳುತ್ತೇನೆ ಎಂದರು.





  ವಿಶಾಲವಾಗಿ ಹರಡಿರುವ ಕುಂದನಿಬೆಟ್ಟ ನೋಡಲು ಬಲು ಸೊಗಸಾಗಿದೆ. ಬೆಟ್ಟದ ಕೆಳಗೆ ಸಾಲಾಗಿ ಏಳು ಕೆರೆಗಳು. ಒಂದೊಂದು ಕೆರೆ ತುಂಬಿದರೂ ಇನ್ನೊಂದು ಕೆರೆಗೆ ಕೋಡಿ ಹರಿಯುವಂತೆ ರಚನೆ. ಐದು ಕೆರೆಗಳಲ್ಲಿ ನೀರು ಇವೆ. ಆರು ಮತ್ತು ಏಳನೆಯದು ಇತ್ತೀಚೆಗೆ  ಮಳೆಗಾಲ ಕಳೆದಮೇಲೆ ಅಗೆದದ್ದು. ಹಾಗಾಗಿ ನೀರು ಇಲ್ಲ. ಎಲ್ಲ ಕೆರೆಗಳಿಗೂ ನಾಲ್ಕು ಕಲ್ಲಿಟ್ಟು ಸುತ್ತಲೂ ಚೌಕಟ್ಟು ಹಾಕಿದ್ದಾರೆ.  ಆ ಕಲ್ಲುಗಳಿಗೆ ಸುಣ್ಣ ಬಳಿದಿದ್ದಾರೆ. ಕೆರೆಗಳ ಅನತಿ ದೂರದಲ್ಲಿ ಎರಡು ಕಲ್ಲುಗಂಬ ನೆಟ್ಟಿದ್ದಾರೆ. ಇದೇಕೆ ಕಲ್ಲುಗಂಬ ಎಂದು ಕೇಳಿ. ನೀವು ಪ್ರಶ್ನೆ ಮಾಡಬೇಕು. ನಾನು ಉತ್ತರಿಸಬೇಕು ಎಂದು ಕಾಮೇಗೌಡ ಪಾಟೀಲರಿಗೆ ಹೇಳಿದ್ದರಂತೆ. ಈ ಕಲ್ಲು ಏಕೆ ಇಲ್ಲಿ ನೆಟ್ಟಿದ್ದಾರೆ ಕೇಳಿ. ಎಂದು ಹಾಗೆಯೇ ಪಾಟೀಲರು ನಮಗೆ ಕೇಳಿದರು.! ಜಾನುವಾರುಗಳು ಕೆರೆಯಲ್ಲಿ ನೀರು ಕುಡಿದು ಬಂದು ಮೈ ಉಜ್ಜಿಕೊಳ್ಳಲು ಆ ಕಲ್ಲುಗಂಬಗಳಂತೆ. ಅಬ್ಬ. ಕಾಮೇಗೌಡರದು ಎಷ್ಟು ಕಾಳಜಿ, ಮುಂದಾಲೋಚನೆ ಎಂದು ಹುಬ್ಬೇರಿಸಿದೆವು.






ಮಳವಳ್ಳಿ ಪಟ್ಟಣದಿಂದ ಸುಮಾರು ೧೦ ಕಿ.ಮೀ ದೂರದಲ್ಲಿ ಇರುವ ಈ ಪರ್ವತವನ್ನು ಕುಂದನಿಬೆಟ್ಟ, ಕುಂದೂರು ಬೆಟ್ಟ ಎಂದೂ ಕರೆಯುತ್ತಾರೆ. ಬೆಟ್ಟದ ತಪ್ಪಲಲ್ಲಿ ಸಾಲಾಗಿ ದಾಸನದೊಡ್ಡಿ, ಪಂಡಿತಹಳ್ಳಿ, ಹೊಸದೊಡ್ಡಿ, ತಿರುಮಳ್ಳಿ, ಪಣತಹಳ್ಳಿ ಎಂದು ಸುಮಾರು ಹತ್ತಾರು ಊರುಗಳಿವೆ. ಈ ಬೆಟ್ಟದ ಸುತ್ತಮುತ್ತ ನೂರಾರು ಗಿಡಗಳನ್ನು ಕಾಮೇಗೌಡರು ನೆಟ್ಟು ಬೆಳೆಸಿದ್ದಾರೆ.ಈಗಲೂ ಅವುಗಳನ್ನು ಜತನದಿಂದ ನೋಡಿಕೊಳ್ಳುತ್ತಿದ್ದಾರೆ.
ಅಕ್ಷರ ಬರೆಯಲು ಓದಲು ಬಾರದ ಕಾಮೇಗೌಡರು ಬೆಟ್ಟದ ಮಧ್ಯ ಭಾಗದಿಂದ ಕೊನೆಯವರೆಗೂಏಳುಕೆರೆಗಳನ್ನು ಕಟ್ಟಿದ್ದಾರೆ. ಒಂದು ಕೆರೆ ತುಂಬಿದರೆ ಸಾಕು, ಎಲ್ಲ ಕೆರೆಗಳಿಗೂ ನೀರು ಬಸಿದು ಹೋಗುವಂತ ವ್ಯವಸ್ಥೆ ಮಾಡಿದ್ದಾರೆ.ಬೆಟ್ಟದ ಮೇಲೆ ಬಿದ್ದ ಮಳೆನೀರು ಹರಿದು ಈ ಕೆರೆಗಳಿಗೆ ಬರುವಂತೆ ಮಾಡಿದ್ದಾರೆ. ಯಾವ ಜಿಲ್ಲೆ ಬರದಿಂದ ತತ್ತರಿಸಿದರೂ ಈ ಕುಂದೂರು ಬೆಟ್ಟದ ತಪ್ಪಲಿನ ಗ್ರಾಮಗಳ ಜನ–ಜಾನುವಾರುಗಳಿಗೆ ಎಂದೂ ಕುಡಿಯುವ ನೀರಿಗೆ ತತ್ತ್ವಾರವಿಲ್ಲವಂತೆ.ನೂರಿನ್ನೂರು ಮೀಟರು ದೂರದಲ್ಲಿ ಸಾಲಾಗಿ ತುಂಬಿದ ಕೆರೆಗಳನ್ನು ನೋಡುವಾಗ ಆಹಾ ಎಂಥ ಆನಂದ. ಕಾಮೇಗೌಡರ ಬಗ್ಗೆ  ಗೌರವ  ನೂರ್ಮಡಿಗೊಂಡಿತು. ಗ್ರಾಮಸ್ಥರು ಕೆಲವು ಕೆರೆಗಳಲ್ಲಿ ಹಸು ಎಮ್ಮೆಗಳಿಗೆ ಸ್ನಾನ ಮಾಡಿಸುತ್ತಿದ್ದುದನ್ನು ನೋಡಿದೆವು. ಕೆರೆ ಬಳಿ ಕಲ್ಲಿನಲ್ಲಿ, ‘ಪರಿಸರ ಸಂರಕ್ಷಣೆ ನಾಗರಿಕರ ಹೊಣೆ’, ಧರ್ಮರಾಯ ಅರಣ್ಯದಲ್ಲಿದ್ದರೂ ಧರ್ಮಪಾಲನೆಯಲ್ಲಿದ್ದರು, ದುರ್ಯೋಧನ ಅರಮನೆಯಲ್ಲಿದ್ದರೂ ದುಷ್ಟತನದಲ್ಲಿದ್ದರು’ ಎಂದು ಬರೆಸಿದ್ದಾರೆ. ಕೆರೆ ಬಳಿ ಕೂರಲು ಚಪ್ಪಡಿಕಲ್ಲುಗಳನ್ನು ಹಾಕಿದ್ದಾರೆ. ಸಿದ್ದಪ್ಪಾಜಿ ದೇವಾಲಯದ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಕಾಮೇಗೌಡರು ಸ್ವಂತ ಖರ್ಚಿನಿಂದ ಪಾಯಿಖಾನೆ ಕಟ್ಟಿಸಲು ಹೊರಟಿದ್ದರಂತೆ. ಪರಿಸರ ಹಾಳಾಗದಂತೆ ಪಾಯಿಖಾನೆ ಇದ್ದರೆ ಒಳ್ಳೆಯದು ಎಂದು ಅವರ ಆಲೋಚನೆ.ಆದರೆ ಊರವರ ವಿರೋಧದಿಂದ ಸಾಧ್ಯವಾಗಲಿಲ್ಲವಂತೆ.



ಎಲ್ಲ ಕೆರೆಗಳನ್ನು ನೋಡಿ ಕಾಮೇಗೌಡರ ಬಗ್ಗೆ ಹೆಮ್ಮೆಪಟ್ಟುಕೊಂಡು ನಾವು ವಾಪಾಸು ಮೈಸೂರಿಗೆ ಹೊರಟೆವು. ಮಳವಳ್ಳಿ ಹತ್ತಿರ ತಲಪುವಾಗ ಪಾಟೀಲರಿಗೆ ಚರವಾಣಿ ಕರೆಬಂತು. ಕಾಮೇಗೌಡರು ಮನೆಗೆ ಬಂದಿದ್ದಾರೆ. ನಿಮ್ಮನ್ನು ಕಾಯುತ್ತಿದ್ದಾರೆ. ಪಾಟೀಲರು ವಾಪಾಸು  ದಾಸನದೊಡ್ಡಿಯೆಡೆಗೆ ಕಾರು ತಿರುಗಿಸಿಯೇಬಿಟ್ಟರು. ನೀವು ಕಾಮೇಗೌಡರನ್ನು ನೋಡಲೇಬೇಕು. ಇಲ್ಲೀವರೆಗೂ ಬಂದಮೇಲೆ ಅವರನ್ನು ನೋಡದೆ ಹೋಗುವುದು ಸರಿಯಲ್ಲ ಎಂದರು. ನಮಗೂ ಕಾಮೇಗೌಡರನ್ನು ಪ್ರತ್ಯಕ್ಷ ನೋಡುವ ಅವರೊಡನೆ ಮಾತಾಡುವ ಹಂಬಲ ಇದ್ದೇ ಇತ್ತು. ನಾವು ಸೈ ಎಂದೆವು.  
  ಕಾಮೇಗೌಡರು ನಮ್ಮನ್ನು ಬರಮಾಡಿಕೊಂಡು ನಮ್ಮ ಪರಿಚಯ ಮಾಡಿಕೊಳ್ಳುವಷ್ಟರಲ್ಲಿ ಅವರ ಸೊಸೆ ನಮಗೆಲ್ಲ ನಿಂಬೆ ಶರಬತ್ತು ಮಗಳ ಕೈಯಲ್ಲಿ ಕಳುಹಿಸಿಕೊಟ್ಟರು. ಸುಮಾರು ೭೫ ವಯಸ್ಸಿನ ಕಾಮೆಗೌಡರಿಗೆ  ಪೊರೆ ಬಂದು ಕಣ್ಣು ಮಂಜಾಗಿದೆಯಂತೆ. ಕ್ಯಾಂಪಿನಲ್ಲಿ ಅಪರೇಷನ್ ಮಾಡಿಸಿಕೊಳ್ಳಿ ಎಂದು ಸಲಹೆ ಕೊಟ್ಟಾಗ,ಅಯ್ಯೊ ಎಲ್ಲಾದರೂ ಉಂಟೆ? ಕ್ಯಾಂಪಿನಲ್ಲಿ ಕಣ್ಣು ಅಪರೇಷನ್ ಮಾಡಿಸಿ ಮತ್ತೆ ಕಣ್ಣು ಕಾಣದೆ ಹೋದರೆ ? ಬೇಡವೇ ಬೇಡ. ಸ್ವಲ್ಪ ಕಾಣುತ್ತೆ ಈಗ. ನನಗೊಬ್ಬನಿಗೇ ಮಾಡಿಸುವುದಾದರೆ ಮಾತ್ರ ಮಾಡಿಸಿಕೊಳ್ಳುವೆ ಎಂದರು! ಕೆರೆ ಕಟ್ಟಲು ಈಗಾಗಲೇ ೬ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ. ಕೆರೆ ಕಟ್ಟಲು ದುಡ್ಡು ಸಾಲದೆ ಬಂದಾಗ ಸಾಕಿದ ಕುರಿಗಳನ್ನೆಲ್ಲ ಮಾರಿದ್ದರಂತೆ. ಮನೆಯಲ್ಲಿದ್ದ ಪಾತ್ರೆ ಪಗಡ ಸಾಮಾನನ್ನೆಲ್ಲ ವಿಲೇವಾರಿ ಮಾಡಿದ್ದರಂತೆ! ಅದಕ್ಕಾಗಿ ಮನೆಯವರ ವಿರೋಧ ಕಟ್ಟಿಕೊಂಡಿದ್ದಾರಂತೆ. ಇಬ್ಬರು  ಮಗಂದಿರು ದರ್ಜಿಗಳು. ಅಪ್ಪ ನಮಗೇನೂ ಆಸ್ತಿ ಮಾಡಿಲ್ಲ ಎಂದು ಆ ಮಕ್ಕಳಿಗೆ ಕೋಪವಂತೆ. ಓದಿಸಿ, ಜೀವನಕ್ಕೆ ಒಂದು ದಾರಿ ಮಾಡಿಕೊಟ್ಟಿದ್ದೇನಲ್ಲ ಇನ್ನು ಅವರೇ ದುಡಿಯಬೇಕು ಎಂದು ಕಾಮೇಗೌಡರ ವಾದ. ಮಗಂದಿರು ಸೊಸೆಯಂದಿರು ಊಟ ಹಾಕಿದಾಗ ಒಂದೊತ್ತು ಊಟ ಮಾಡುತ್ತಾರಂತೆ.‘ನೀವೇ ಹೇಳಿ ಸ್ವಾಮಿ,ಹೌದು. ಕಾಮೇಗೌಡ ಸಾಕಷ್ಟು ಬಂಗಾರ ಕೊಂಡುಕೊಂಡ, ಮನೆಯಲ್ಲಿ  ದುಡ್ಡು ಕೂಡಿಟ್ಟುಕೊಂಡಿದ್ದಾನೆ ಎಂದು ನಾನು ಸತ್ತ ಮೇಲೆ ಹೇಳಿದರೆ  ಆ ಮಾತು ಮೂರು ದಿನ ಉಳಿದೀತಲ್ವೆ? ಅದರಿಂದ  ಏನು ಪ್ರಯೋಜನ? ಕಾಮೆಗೌಡರು ಕಟ್ಟಿಸಿದ ಕೆರೆ ಎಂದು ಜನ ಮಾತಾಡಿಕೊಳ್ಳುವುದು ಶಾಶ್ವತವಾಗಿ ಉಳಿಯುತ್ತದೆ.ಕೆರೆ ನೀರು ಕುಡಿಯುತ್ತಪಶುಪಕ್ಷಿಗಳು ಸಂತೋಷದಿಂದ ಇರುತ್ತವೆ.ನಾನು  ಮಾಡಿದ್ದು ತಪ್ಪು ಕೆಲಸವಾ? ನೀವೇ ಹೇಳಿ ಸ್ವಾಮಿ’ ಎಂದು ನಮ್ಮನ್ನು ಕೇಳಿದರು. ಇನ್ನು ಮೂರು ಕೆರೆ ಕಟ್ಟಿಸಲು ಬಾಕಿ ಇದೆಯಂತೆ. ಆಗ ಒಟ್ಟು ಹತ್ತು ಕೆರೆ ಕಟ್ಟಿಸಿದ ಹಾಗಾಗುತ್ತದೆ. ಮೊಮ್ಮಕ್ಕಳು ಹೇಳಿದ್ದಾರಂತೆ. ತಾತ ನನ್ನ ಹೆಸರಲ್ಲಿ ಕೆರೆ ಕಟ್ಟಿಸು ಎಂದು. ಮೂರು ಮೊಮ್ಮಕ್ಕಳ ಹೆಸರಲ್ಲಿ ಕೆರೆ ಕಟ್ಟಿಸುತ್ತಾರಂತೆ. ಒಂದೊಂದು ಕೆರೆಗೂ ಹೆಸರನ್ನಿಟ್ಟಿದ್ದಾರೆ. ಒಂದು ಕೆರೆಗೆ ಅಕ್ಷಯ ಎಂದು ಹೆಸರು. ಅದು ಬತ್ತುವುದೇ ಇಲ್ಲವಂತೆ. ಕೆ. ಆರ್. ಎಸ್. ಬತ್ತಿದರೂ ಕಾಮೇಗೌಡರ ಕೆರೆ ಬತ್ತಲಿಕ್ಕಿಲ್ಲವಂತೆ.


ಅವರೊಡನೆ ಮಾತಾಡುತ್ತ ಕೂತರೆ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಅಷ್ಟು ವಿಷಯ ಇದೆ. ಒಬ್ಬ ಸಂತನೆದುರು ನಾವು ಕೂತಂತ ಭಾವನೆ ಬರುತ್ತದೆ. ಅವರಿಂದ ಬೀಳ್ಕೊಂಡು ನಾವು ಪಾಟೀಲರ ಮನೆಗೆ ಬಂದು ಅಲ್ಲಿ ರಜನಿಯವರು ಹಾಗೂ ಅವರ ಸಹಾಯಕಿ ಮಂಗಳಾ ಮಾಡಿದ ರುಚಿಯಾದ ಬದನೆಭಾತು, ಪಚ್ಚಡಿ, ಅನ್ನ ಸಾರು,  ಬದನೆ ಕಾವಲಿ ಪೋಡಿ ಪುಷ್ಕಳ ಊಟ ಮಾಡಿ, ಪಾಟೀಲ ದಂಪತಿಗೆ ಧನ್ಯವಾದವನ್ನರ್ಪಿಸಿ ಮನೆಗೆ ಬಂದೆವು. ಕುಂದೂರು ಬೆಟ್ಟದ ತುದಿಗೆ ಹತ್ತುವ ಆಸೆ ಹಾಗೆಯೇ ಉಳಿಯಿತು. ಮುಂದೆ ಯಾವಾಗಲಾದರೂ ಬೆಟ್ಟ ಹತ್ತಬೇಕು.
  ರಮಾಬಾಯಿ ಪುರಸ್ಕಾರ ಕಾಮೆಗೌಡರಿಗೆ ಕೊಡುವುದು ಆ ಪುರಸ್ಕಾರಕ್ಕೆ  ಗರಿಮೆ ಬಂದಂತೆ. ಪ್ರಶಸ್ತಿಗೆ ಅರ್ಹರ ಹುಡುಕಾಟದಲ್ಲಿ ಪಾಟೀಲರ ಶ್ರಮ ನಿಜಕ್ಕೂ ಪ್ರಶಂಸಾರ್ಹವಾದುದು. 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ