ಬುಧವಾರ, ಜನವರಿ 22, 2020

ಅಮೇರಿಕಾ ಪರ್ಯಟನ ಭಾಗ ೮

ಹಿಂದೂ ಟೆಂಪಲ್ ಆಫ್ ವಿಸ್ಕಾನ್ಸಿನ್ (N4063, W243, Pewaukee Rd, WI 53074 USA)

ನಾವು ೧೫-೭-೧೮ರಂದು ಬೆಳಗ್ಗೆ ೧೦.೩೦ಗೆ ಮಿಲ್ವಾಕಿಯಿಂದ ಹೊರಟು ಹಿಂದೂ ಟೆಂಪಲ್ ಆಪ್ ವಿಸ್ಕಾನ್ಸಿನ್ ನೋಡಲು ಹೋದೆವು. ಇಲ್ಲಿ ಬಾಲಾಜಿ, ಗಣಪತಿ, ಶಿವ, ವಿಷ್ಣು, ರಾಮ, ರಾಧಾಕೃಷ್ಣ ಪ್ರತಿಮೆಗಳು ಒಂದೇ ಕಡೆ ಇವೆ. ಯಾರ್ಯಾರಿಗೆ ಯಾವ ದೇವ ನಾಮರು ಬೇಕೋ ಅವರನ್ನು ಪೂಜಿಸಿದರಾಯಿತು! ಪಕ್ಕದಲ್ಲೆ ಜೈನ ದೇವಾಲಯವೂ ಇದೆ. 
   ೧೯೯೭ರಲ್ಲಿ ೨೨ ಎಕರೆ ಸ್ಥಳವನ್ನು ೨೫೨೦೦೦ ಡಾಲರ್ ವೆಚ್ಚದಲ್ಲಿ ಕೊಳ್ಳಲಾಯಿತು. ರಮೇಶ ಕಫೂರರು ದೇವಾಲಯದ ವಾಸ್ತುಶಿಲ್ಪಿ. ೨೬೦೦೦ ಚದರ ವಿಸ್ತೀರ್ಣದಲ್ಲಿ ಈ ಹಿಂದೂ ದೇವಾಲಯವನ್ನು ಹಾಗೂ ೫೦೦೦ ಚದರ ವಿಸ್ತೀರ್ಣದಲ್ಲಿ ಜೈನ ದೇವಾಲಯವನ್ನು ನಿರ್ಮಿಸಲಾಯಿತು. ೧೯೯೯ರಲ್ಲಿ ದೇವಾಲಯದ ನಿರ್ಮಾಣ ಪ್ರಾರಂಭವಾಗಿ ಜೂನ್ ೨೦೦೦ ಇಸವಿಯಲ್ಲಿ ಪೂರ್ಣಗೊಳಿಸಲಾಯಿತು. ಅಲ್ಲಿ ಪ್ರತೀ ಶನಿವಾರ ಭಾನುವಾರದಂದು ಕೆಫೆಟೇರಿಯಾದಲ್ಲಿ ಊಟ ದೊರೆಯುತ್ತದೆ. ನಾವು ದೇವಾಲಯ ನೋಡಿ ಅಲ್ಲಿಂದ ತೆರಳಿದೆವು. 

ಲೆಫಮ್ ಪೀಕ್ (Lapham Peak State park, N 329, N 846 county Rd, C Delafield WI 53018 USA) 


ನಾವು ಲೇಫಮ್ ಪೀಕ್ ಸ್ಟೇಟ್ ಪಾರ್ಕ್ ತಲಪಿದೆವು. ೭೦ ಮೆಟ್ಟಲು ಹತ್ತಿ ಅಲ್ಲಿರುವ ವೀಕ್ಷಣಾ ಗೋಪುರ ಏರಿದೆವು. ಗೋಪುರದ ಮೇಲಿಂದ ಆಗ್ನೇಯ ವಿಸ್ಕಾನ್ಸಿನ್ ಮತ್ತು ಇಲಿನಾಯ್ಸ್‌ನ ಉತ್ತರ ತುದಿಯ ಸುಂದರ ನೋಟವನ್ನು ವೀಕ್ಷಿಸಿದೆವು. ವೀಕ್ಷಣಾ ಗೋಪುರದಿಂದ ಸರೋವರ ಹಾಗೂ ಬೆಟ್ಟಗಳು ಬಹಳ ಸುಂದರವಾಗಿ ಕಾಣುತ್ತವೆ.


   ಲೇಫಮ್ ಪಾರ್ಕನ್ನು ೧೮೫೧ರಲ್ಲಿ ಚಾರ್ಲ್ಸ್ ಹ್ಯಾನ್ಸನ್ ಅಭಿವೃದ್ಧಿಗೊಳಿಸಿ, ಪ್ರವಾಸೀಕೇಂದ್ರವನ್ನಾಗಿ ಮಾಡಿದರು. ಅಲ್ಲಿ ೨೦ ಅಡಿ ಎತ್ತರದ ಗೋಪುರ ನಿರ್ಮಿಸಿದರು. ತದನಂತರ ೧೯೩೯ರಲ್ಲಿ ೫೦ ಎಕರೆ ಭೂಮಿಯನ್ನು ಉದ್ಯಾನವನ ಮಾಡಿ ೪೫ ಅಡಿ ಎತ್ತರದ ಗೋಪುರ ನಿರ್ಮಿಸಿದರು. ಪಿಕ್ನಿಕ್ ಮೈದಾನ, ವಿಶ್ರಾಂತಿಗೆ ಬೆಂಚುಗಳು, ಕಾಡೊಳಗೆ ಚಾರಣ ಹಾದಿಗಳು ಇತ್ಯಾದಿ ಅಭಿವೃದ್ಧಿಗೊಳಿಸಿದರು. ಒಂದು ದಿನದ ವಿಹಾರಕ್ಕೆ ಬಹಳ ಚೆನ್ನಾಗಿದೆ. ಪ್ರಶಾಂತ ಪರಿಸರ, ಒಂದಷ್ಟು ಚಾರಣಕ್ಕಾಗಿ ಇಂಥ ಪಾರ್ಕಿಗೆ ಭೇಟಿಕೊಡಬಹುದು. ಅಮೇರಿಕನ್ನರ ಜೊತೆ ನಾಯಿ ಇದ್ದೇ ಇರುತ್ತದೆ.ಹೆಚ್ಚಿನ ಪಾರ್ಕ್ಗಗಳಿಗೂ ನಾಯಿಗಳಿಗೂ ಅನುಮತಿ ಇದೆ. ಒಂದು ನಾಯಿ ಸಹ ಗೋಪುರ ಹತ್ತಿ ಏದುಸಿರು ಬಿಟ್ಟಿತು!





   ಪ್ರವೇಶ ಸಮಯ: ವರ್ಷಪೂರ್ತಿ ಬೆಳಗ್ಗೆ ೬ರಿಂದ ರಾತ್ರೆ ೯ ಗಂಟೆವರೆಗೆ. ಪಾರ್ಕ್ ಪ್ರವೇಶಿಸಲು ಶುಲ್ಕವಿದೆ. ವಾರ್ಷಿಕವಾಗಿ ಶುಲ್ಕ ಪಾವತಿಸಿ ಒಂದು ಸ್ಟಿಕರ್ ಪಡೆದು ಕಾರಿನ ಗಾಜಿಗೆ ಅಂಟಿಸಿದರೆ ಟಿಕೆಟ್ ತೆಗೆಯುವ ಪ್ರಮೇಯವಿಲ್ಲ. ಸಮಯ ಉಳಿತಾಯ ಮಾಡಬಹುದು ಹಾಗೂ ಶುಲ್ಕವಿರುವ ಎಲ್ಲ ಪಾರ್ಕ್‌ಗಳನ್ನು ಕಡಿಮೆ ವೆಚ್ಚದಲ್ಲಿ ಪ್ರವೇಶಿಸಬಹುದು. ಸ್ಟಿಕರ್‌ಗಳಿಗೆ ವಾರ್ಷಿಕ ದರ ಸರಿ ಸುಮಾರು ೧೫ ಡಾಲರ್ ಇರುತ್ತದೆ. ಇದರಿಂದ ವರ್ಷವಿಡೀ ಅಲ್ಲಿಯ ಎಲ್ಲಾ ಪಾರ್ಕ್‌ಗಳಿಗೂ ಪ್ರವೇಶ ಪಡೆಯಬಹುದು. ಷಿಕಾಗೋ, ವಿಸ್ಕಾನ್ಸಿನ್ ರಾಜ್ಯದಲ್ಲಿ ಈ ನಮೂನೆಯ ಪಾರ್ಕ್‌ಗಳು ಬಹಳಷ್ಟು ಸಂಖ್ಯೆಗಳಲ್ಲಿವೆ. ಅಕ್ಷರಿ ಮಹೇಶರು ಇಂಥ ಸುಮಾರು ಪಾರ್ಕ್‌ಗಳಿಗೆ ಹೋಗಿ ಅಡ್ಡಾಡಿ ಬಂದಿದ್ದಾರೆ. 

ಅಜ್ಲಾನ್ ಸ್ಟೇಟ್ ಪಾರ್ಕ್ (Aztlan State park N6200 county Rd, Q, Jefferson, WI 53549 USA)

  ನಾವು ಲೇಫಮ್ ಪಾರ್ಕಿನಿಂದ ಕೆಲವು ಮೈಲಿ ದೂರದಲ್ಲಿರುವ ಅಜ್ಲಾನ್ ಸ್ಟೇಟ್ ಪಾರ್ಕಿಗೆ ಹೋದೆವು. ಗೂಗಲಿನಲ್ಲಿ ಜಾಲಾಡಿ ಈ ಪಾರ್ಕ್ ಶೋಧ ಮಾಡಿದ್ದ ಮಹೇಶ. ತನ್ನ ಮಾವನಿಗೆ ಅಂಗಡಿ ಮಳಿಗೆಗಳಿಗೆ ಹೋದರೆ ಇಷ್ಟವಾಗುವುದಿಲ್ಲ, ಚರಿತ್ರೆ ಹೊಂದಿರುವ ಪಾರ್ಕ್ ಇಷ್ಟವಾಗಬಹುದು ಎಂದು ಅಲ್ಲಿಗೆ ಕರೆದೊಯ್ದ. ಅವನು ಗ್ರಹಿಸಿದಂತೆ ಮಾವನಿಗೆ ಇಷ್ಟವಾದದ್ದೂ ಹೌದು. ಮೂಲ ನೇಟಿವ್ ಅಮೇರಿಕನ್ನರ ಸ್ಥಳವಿದು. ಇಲ್ಲಿ ೧೦೦೦ ವರ್ಷಗಳ ಹಿಂದೆ ನಿರ್ಮಿಸಿದ ಮನೆ ಪ್ರತಿಕೃತಿ ಕಾಣಬಹುದು. ಇಲ್ಲಿ ಮೂರು ದಿಬ್ಬಗಳಿವೆ. ಒಂದು ದಿಬ್ಬ ಬಹಳ ದೊಡ್ಡದಾಗಿದೆ. ದಿಬ್ಬಗಳ ಬದಿಯಲ್ಲಿ ಒಂದಷ್ಟು ಮರದ ದಿಣ್ಣೆಗಳನ್ನು ಸಾಲಾಗಿ ಜೋಡಿಸಿಟ್ಟಿದ್ದಾರೆ. ಅಲ್ಲಿ ಒಂದಷ್ಟು ಸುತ್ತಿದೆವು. ಪಾರ್ಕಿನಲ್ಲಿ ಕುಳಿತು (ಪಾಲಕ್ ಪಲಾವ್) ಬುತ್ತಿಯೂಟ ಮಾಡಿದೆವು.










   ೧೯೫೨ರಲ್ಲಿ ಸ್ಥಾಪಿಸಲಾದ ಈ ಪಾರ್ಕನ್ನು ೧೯೬೪ರಲ್ಲಿ ರಾಷ್ಟ್ರೀಯ ಐತಿಹಾಸಿಕ ಸ್ಥಳವೆಂದು ಗುರುತಿಸಲಾಯಿತು. ಈ ಪಾರ್ಕ್ ಕ್ರಾಫಿಶ್ ನದಿಯುದ್ದಕ್ಕೂ ೧೭೨ ಎಕರೆ ಪ್ರದೇಶದಷ್ಟು ವಿಸ್ತಾರವಾಗಿದೆ.  ಇಲ್ಲಿ ಚಾರಣ, ಸ್ಕೀಯಿಂಗ್, ಮೀನು ಹಿಡಿಯುವಿಕೆ ಇತ್ಯಾದಿ ಮಾಡಲು ಅವಕಾಶವಿದೆ. ಪಿಕ್ನಿಕ್ ತಾಣವಿದು.
    ಪ್ರವೇಶ ಸಮಯ: ಬೆಳಗ್ಗೆ ೬ರಿಂದ ರಾತ್ರೆ ೧೦ ಗಂಟೆವರೆಗೆ. ಪ್ರವೇಶಧನವಿದೆ. ಕಾರಿಗೆ ಸ್ಟಿಕರ್ ಅಂಟಿಸಿರಬೇಕು ಇಲ್ಲವೆ ಟಿಕೆಟ್ ಅಲ್ಲೆ ಪಡೆಯಬಹುದು. ಕೆಲವು ಜನ ಅಧಿಕಾರಿಗಳು ಕಾರು ಪಾರ್ಕ್ ಮಾಡಿದಲ್ಲಿಗೆ ಬಂದು ಕಾರಿಗೆ ಸ್ಟಿಕರ್ ಇದೆಯಾ ಎಂದು ಪರೀಕ್ಷಿಸುವುದನ್ನು ಕಂಡೆವು. ಅಲ್ಲೂ ಮೋಸ ಮಾಡುವವರು ಇರುತ್ತಾರೆಂದಾಯಿತು! 

ಹೋಲಿ ಹಿಲ್ ಚರ್ಚ್ (Holly hill church, 1525, carmel RD, Hubertus, WI 53033 

   ನಾವು ಅಜ್ಲಾನ್ ಪಾರ್ಕಿನಿಂದ ಕೆಲವು ಮೈಲಿ ದೂರದಲ್ಲಿದ್ದ ಹೋಲಿ ಹಿಲ್ ಚರ್ಚಿಗೆ ಹೋದೆವು. ಪುರಾತನಕಾಲದ ಚರ್ಚ್ ನೋಡಲು ಚೆನ್ನಾಗಿದೆ. ಚರ್ಚ್ ಒಳಗೆ ೧೭೮ ಮೆಟ್ಟಲು ಹತ್ತಿ ಮೇಲೆ ಹೋದೆವು. ಅಲ್ಲಿ ನಿಂತು ನೋಡಿದರೆ ಹಸುರಿನಿಂದ ಕೂಡಿದ ಮರಗಳು, ನದಿ ಬಹಳ ಚೆನ್ನಾಗಿ ಕಾಣುತ್ತವೆ. ಹಿಮಾವೃತಗೊಂಡಾಗ, ಮರಗಳ ಎಲೆ ಬಣ್ಣ ಬದಲಿದಾಗ ಇಲ್ಲಿ ಹತ್ತಿ ನೋಡುವುದೇ ಬಲು ಸೊಗಸಂತೆ. ಹಿಮಬೀಳುವ ಕಾಲ ಮತ್ತು ಮರಗಳ ಎಲೆ ಬಣ್ಣ ಬದಲುವ ಕಾಲದಲ್ಲಿ ಇಲ್ಲಿಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರಂತೆ. ಅಲ್ಲಿಯ ಪ್ರಾರ್ಥನಾ ಕೋಣೆಯೂ ಸೊಗಸಾಗಿದೆ. 
    ಇಸವಿ ೧೮೬೩ ಮೇ ೨೪ರಂದು ೨೧ ಎಕರೆ ಪ್ರದೇಶದಲ್ಲಿ ಈ ಚರ್ಚ್ ನಿರ್ಮಿಸಲ್ಪಟ್ಟಿದೆ. ಇದರ ವಾಸ್ತುಶಿಲ್ಪಿ ಹರ್ಮನ್ ಜೆ.ಗೌಲ್, ರಿಚರ್ಡ್ ಫಿಲಿಪ್. ಇದು ರೋಮನೆಸ್ಕ್ ರಿವೈವಲ್ ಶೈಲಿಯಲ್ಲಿದೆ. ೨೦೦೨ ಮತ್ತು ೨೦೦೬ರಲ್ಲಿ ನವೀಕರಣಗೊಂಡಿದೆ. ೨೦೧೩ರಲ್ಲಿ ಪ್ರವೇಶ ಬಾಗಿಲನ್ನು ಕಂಚಿನಿಂದ ನಿರ್ಮಿಸಿದರು. ಚರ್ಚ್‌ನ್ನು ವಿಸ್ತಾರವಾಗಿ ನೋಡಿ, ಅಲ್ಲಿಯ ಕಾಡುದಾರಿಯಲ್ಲಿ ಸುತ್ತಿದೆವು. ಒಂದೆರಡು ಚಿತ್ರ ಕ್ಲಿಕ್ಕಿಸಿಕೊಂಡು ಅಲ್ಲಿಂದ ನಿರ್ಗಮನ. 












ಪೈಕ್ ಲೇಕ್ (Kettle Moraine state forest pike lake unit, 3544 kettle Moraine Rd, Hartford, WI 53027, USA) 

    ನಾವು ಚರ್ಚ್‌ನಿಂದ ಪೈಕ್ ಲೇಕ್ ನೋಡಲು ಹೋದೆವು. ನಾವು ಹೋದಾಗ ಅಲ್ಲಿ ಸರೋವರದಲ್ಲಿ ತುಂಬ ಮಂದಿ ಆಟ ಆಡುತ್ತಿದ್ದರು, ಕೆಲವರು ದಡದಲ್ಲಿ ಅಂಗಾತ ಮಲಗಿ ವಿರಮಿಸಿದ್ದರು. ಅಮೇರಿಕನ್ನರು ವಾರಾಂತ್ಯದಲ್ಲಿ ಹೀಗೆ ಆರಾಮವಾಗಿ ವಿಹರಿಸಲು ನೂರಾರು ಮೈಲಿ ಕ್ರಮಿಸಿ ಬರುತ್ತಾರೆ. ವಾರಾಂತ್ಯದ ರಜಾದಿನವನ್ನು ಬಹಳ ಮಜವಾಗಿ ಕಳೆಯುತ್ತಾರೆ. ಹೆಚ್ಚಿನವರು ಇಂಥ ಪಾರ್ಕ್‌ಗಳಿಗೆ ಹೋಗಿ ಅಲ್ಲೆ ಊಟ ಮಾಡಿ ಸಂಜೆವರೆಗೂ ವಿಹರಿಸಿ ಮನೆಗೆ ತೆರಳುತ್ತಾರೆ. ಇನ್ನು ಕೆಲವರು ಸರೋವರಗಳಿಗೆ ಅವರದೇ ಬೋಟ್, ದೋಣಿ ಕಟ್ಟಿಕೊಂಡು ಹೋಗಿ ಅಲ್ಲಿ ಮನದಣಿಯೆ ವಿಹರಿಸಿ ಸಂತೋಷಿಸುವುದನ್ನೂ ನೋಡಿದೆವು. ಅವರ ಜೀವನೋಲ್ಲಾಸ ನೋಡಿ ನಾವೂ ಖುಷಿಪಟ್ಟೆವು. ವಿಸ್ಕಾನ್ಸಿನ್ ರಾಜ್ಯದಲ್ಲೇ ಸುಮಾರು ೧೫ ಸಾವಿರ ಸರೋವರಗಳಿವೆಯಂತೆ!
      ೬೭೮ ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಹಬ್ಬಿದೆ. ೧೯೬೦ರಲ್ಲಿ ಇದನ್ನು ಸ್ಥಾಪಿಸಲಾಯಿತು. ಇಲ್ಲಿ ಕ್ಯಾಂಪ್ ಮಾಡಲು, ಬೀಚಿಗಿಳಿಯಲು, ನಡೆಯಲು, ಸೈಕಲ್ ಸವಾರಿ ಎಲ್ಲದಕ್ಕೂ ಅವಕಾಶಗಳಿವೆ. ನಾವು ಅಲ್ಲಿ ಸ್ವಲ್ಪ ಹೊತ್ತು ಸರೋವರ ನೋಡುತ್ತ ಕುಳಿತೆವು.








     ಪ್ರವೇಶ ಸಮಯ ಬೆಳಗ್ಗೆ ೬ರಿಂದ ರಾತ್ರೆ ೧೧ ಗಂಟೆವರೆಗೆ. ಪ್ರವೇಶ ಶುಲ್ಕವಿದೆ. 
      ಅಲ್ಲಿಂದ ಹೊರಟು ಮಾಯರ್ ಅಂಗಡಿಗೆ ಹೋದೆವು. ಅನಂತ ಎರಡು ದಿನದಲ್ಲಿ ಭಾರತಕ್ಕೆ ಹೊರಡುವ ಕಾರಣ ಅಲ್ಲಿಂದ ಒಂದಷ್ಟು ಚಾಕಲೇಟ್ ಕೊಂಡುಕೊಂಡ ಮಹೇಶ. 

ಹಾರ್ಲೆ ಡೇವಿಡ್ಸನ್ ಬೈಕ್ ಮ್ಯೂಸಿಯಂ (400 W, canal St, Milwaukee WI 53201 USA) 

        ಹಾರ್ಲೆ ಡೇವಿಡ್ಸನ್ ಬೈಕ್ ಮ್ಯೂಸಿಯಂ ನೋಡಲೇಬೇಕು ಎಂದು ಮಹೇಶ ಹೇಳುತ್ತಲೇ ಇದ್ದ. ಆದರೆ ಅಲ್ಲಿಗೆ ಹೋಗಲು ಇಷ್ಟು ದಿನದಲ್ಲಿ ಸಮಯ ಹೊಂದಿ ಬಂದಿರಲಿಲ್ಲ. ಇನ್ನು ಅನಂತ ಭಾರತಕ್ಕೆ ನಾಳೆ ಹೊರಡುವುದು ಎಂದಾಗ ವಿಸ್ಕಾನ್ಸಿನ್‌ನಲ್ಲಿ ವಾಸವಾಗಿದ್ದೂ ಅಲ್ಲಿಗೆ ಹೋಗದೆ ಇದ್ದರೆ ಅಮೇರಿಕಾ ಯಾತ್ರೆ ಪರಿಪೂರ್ಣವಾಗುವುದಿಲ್ಲವೆಂದು ೧೬.೭.೧೮ರಂದು ಸಂಜೆ ಕಚೇರಿಯಿಂದ ಮಹೇಶ ಬೇಗ ಮನೆಗೆ ಬಂದ. ನಾವು ೪.೩೫ಕ್ಕೆ ಮನೆಯಿಂದ ಹೊರಟು ಮಿಲ್ವಾಕಿ ಡೌನ್ ಟೌನಿನಲ್ಲಿರುವ ಹಾರ್ಲೆ ಬೈಕ್ ಮ್ಯೂಸಿಯಂಗೆ ಹೋದೆವು. ಮನೆಯಿಂದ ೨೦ ನಿಮಿಷದ ಹಾದಿ. ಅಕ್ಷರಿ ಈ ಮೊದಲೇ ಅದನ್ನು ನೋಡಿರುವ ಕಾರಣದಿಂದ ಪುನಃ ನೋಡುವ ಉಮೇದು ತೋರದೆ ಮನೆಯಲ್ಲೇ ಉಳಿದಳು. 
     ಮ್ಯೂಸಿಯಂ ಮುಂಭಾಗ ೧೭ ಅಡಿ ಎತ್ತರದ ಸ್ಟೀಲಿನಲ್ಲಿ ಮಾಡಿದ ಹಾರ್ಲೆ ಡೇವಿಡ್ಸನ್ ಚಿಹ್ನೆಯು ದೂರದಿಂದಲೆ ಗಮನ ಸೆಳೆಯುತ್ತದೆ.

     ಈ ಮ್ಯೂಸಿಯಂ ಮೊನೊಮೊನಿ ನದಿ ದಂಡೆಯುದ್ದಕ್ಕೂ ೨೦ ಎಕರೆಯಲ್ಲಿ ೧೩೦೦೦ ಚದರಡಿಯಲ್ಲಿ ಒಟ್ಟು ಮೂರು ಕಟ್ಟಡವಿದೆ. ೪೫೦ಕ್ಕೂ ಹೆಚ್ಚು ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್‌ಗಳು, ನೂರಾರು ಕಲಾಕೃತಿಗಳು ಇಲ್ಲಿಯ ಮ್ಯೂಸಿಯಂನಲ್ಲಿವೆ. ಮೊಟ್ಟ ಮೊದಲು ತಯಾರಿಸಿದ ಮೋಟಾರ್ ಸೈಕಲ್, ಅದರ ವಿನ್ಯಾಸದಲ್ಲಿ ಕ್ರಮೇಣ ಹೇಗೆ ಮಾರ್ಪಾಡುಗಳಾದುವು ಎಂಬುದನ್ನು ಹಂತಹಂತವಾಗಿ ಅಲ್ಲಿ ಪ್ರದರ್ಶನ ಮಾಡಿದ್ದಾರೆ. ೧೯೦೩ರಲ್ಲಿ ಹಾರ್ಲೆ ಡೇವಿಡ್ಸನ್ ಮೊದಲ ಬೈಕ್ ನಿರ್ಮಿಸಲಾಯಿತು. ಪೊಲೀಸರು, ಮಿಲಿಟರಿ ಅಧಿಕಾರಿಗಳು, ಸೈನಿಕರು ಉಪಯೋಗಿಸುವ ಮೋಟಾರು ಸೈಕಲಿನಿಂದ ಹಿಡಿದು ಈಗಿನ ಆಧುನಿಕ ಬೈಕ್‌ಗಳು ಅಲ್ಲಿ ಪ್ರದರ್ಶನಗೊಂಡಿವೆ. ನಾನಾ ನಮೂನೆಯ ಹಳೆ ಮಾದರಿಯ ಸೈಕಲ್‌ಗಳೂ ಇವೆ. ಹಾರ್ಲೆ ಬೈಕ್ ಕಂಪೆನಿಯು ೧೧೦ ವರ್ಷಗಳ ಇತಿಹಾಸ ಹೊಂದಿದೆ. 
     ಈ ಮ್ಯೂಸಿಯಂನ್ನು ೨೦೦೮ ಜುಲೈ ೨ರಂದು ಲೋಕಾರ್ಪಣೆಗೊಳಿಸಲಾಯಿತು. ಇಲ್ಲಿಗೆ ವರ್ಷದಲ್ಲಿ ೩೦೦೦೦೦ ಪ್ರವಾಸಿಗರು ಭೇಟಿ ನೀಡುತ್ತಾರಂತೆ. ಈ ಮ್ಯೂಸಿಯಂಗೆ ಪ್ರವೇಶ ಶುಲ್ಕ ಒಬ್ಬರಿಗೆ ೨೦ ಡಾಲರ್. ಪ್ರವೇಶ ಶುಲ್ಕ ದುಬಾರಿಯಾದರೂ ಬೈಕ್, ವಾಹನ ಪ್ರಿಯರು ಒಮ್ಮೆ ಇಲ್ಲಿಗೆ ಭೇಟಿ ನೀಡಬಹುದು. ಪ್ರವೇಶ ಸಮಯ ಬೆಳಗ್ಗೆ ೧೦ಗಂಟೆಯಿಂದ ಸಂಜೆ ೬ರವರೆಗೆ. ಗುರುವಾರ ಮಾತ್ರ ಬೆಳಗ್ಗೆ ೧೦ರಿಂದ ೮ ಗಂಟೆವರೆಗೆ.












     ನಾವು ಮೂರು ಮಹಡಿ ಹತ್ತಿ ಸವಿಸ್ತಾರವಾಗಿ ಬೈಕ್‌ಗಳನ್ನು ನೋಡಿ ಬೆರಗಾದೆವು. ೬ ಗಂಟೆಗೆ ಹೊರ ಬಂದು ಈಗಿನ ಹೊಸ ಮಾದರಿಯ ಬೈಕಿನಲ್ಲಿ ಕೂತು ಪಟ ಕ್ಲಿಕ್ಕಿಸಿಕೊಂಡೆವು. ಭಾರತದಲ್ಲಿ ಹಾರ್ಲೆ ಬೈಕಿಗೆ ೫ ಲಕ್ಷ ರೂಪಾಯಿ ಇದೆಯಂತೆ. ನನಗೆ ಈ ಬೈಕ್ ಬೇಡವೇ ಬೇಡವೆಂದು ತೀರ್ಮಾನ ಮಾಡಿಕೊಂಡೆ! 
     ಅಲ್ಲಿ ಬೈಕ್ ಅನ್ನು ಎಲ್ಲ ಕಾಲದಲ್ಲೂ (ಚಳಿ ಹಿಮ ವಿಪರೀತವಿರುವ ಕಾರಣ) ರಸ್ತೆಗಿಳಿಸಿ ಓಡಿಸಲು ಆಗದ ಕಾರಣ ಬೇಸಿಗೆಯಲ್ಲಿ ಮಾತ್ರ ಬೈಕ್ ಸವಾರಿ ಅಪರೂಪವಾಗಿ ಕಾಣುತ್ತದೆ. 
ಬೆಂಡರ್ ಪಾರ್ಕ್

    ಮ್ಯೂಸಿಯಂ ಚಂದವನ್ನು ನೋಡಿ ಖುಷಿಪಟ್ಟು ಮನೆಗೆ ಬಂದು ಅಕ್ಷರಿಯನ್ನು ಹತ್ತಿಸಿಕೊಂಡು ನಾವು ಬೆಂಡರ್ ಪಾರ್ಕಿಗೆ ಹೋದೆವು. ಈ ಪಾರ್ಕ್ ಬಹಳ ಚೆನ್ನಾಗಿದೆ. ಪಾರ್ಕ್ ಎದುರು ವಿಸ್ತಾರವಾದ ಮಿಷಿಗನ್ ಸರೋವರ. ನಮಗೆ ತುಂಬ ಖುಷಿಯಾದ ಸ್ಥಳವದು. ಅನಂತ ಮರುದಿನ ಭಾರತಕ್ಕೆ ಹೊರಡುವ ಕಾರಣ ಕೊನೇ ಸಲ ಒಮ್ಮೆ ಅಲ್ಲಿ ಅಡ್ಡಾಡಿದೆವು. ಅಲ್ಲಿ ನಡೆಯಲು ಅಚ್ಚುಕಟ್ಟಾದ ದಾರಿ ಮಾಡಿದ್ದಾರೆ. ೨-೩ಕಿಮೀ ನಡೆದೆವು. ಸರೋವರದ ಚಂದ ನೋಡುತ್ತ ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ಮನೆಗೆ ಬಂದೆವು. 
ಮರಳಿ ತಾಯ್ನಾಡಿಗೆ


      ತಾರೀಕು ೧೭.೭.೧೮ರಂದು ಬೆಳಗ್ಗೆ ಸ್ಯಾಂಡಿ (ಎದುರುಮನೆಯಾಕೆ) ಮನೆಗೆ ಬಂದು ಅನಂತನಿಗೆ ಪ್ರಯಾಣಕ್ಕೆ ಶುಭ ಹಾರೈಸಿ ದಾರಿ ಖರ್ಚಿಗೆಂದು ಒಂದಷ್ಟು ಹಣ್ಣು, ಚಾಕಲೆಟ್ ಕೊಟ್ಟು ಹೋದರು. ನಾವು ಚಪಾತಿ ಮಾಡಿ ಬುತ್ತಿಕಟ್ಟಿ ಚೀಲಕ್ಕೆ ಹಾಕಿದೆವು. ಸೂಟ್ಕೇಸ್ ಕೊನೆ ಹಂತದಲ್ಲಿ ತುಂಬಿತು! ಅನಂತ ಓಕ್ ಕ್ರೀಕ್ ಮನೆಗೆ ವಿದಾಯ ಹೇಳಿ ಹೊರಟ. ನಾನೂ ಕಾರು ಹತ್ತಿಕೊಂಡೆ. ಬೆಳಗ್ಗೆ ೯ ಗಂಟೆಗೆ ಹೊರಟು ಷಿಕಾಗೋ ಒಹಾರೆ ವಿಮಾನ ನಿಲ್ದಾಣಕ್ಕೆ ೧೦.೩೦ಗೆ ತಲಪಿ ಅನಂತನನ್ನು ಒಳಗೆ ಕಳುಹಿಸಿ ನಾವು ವಾಪಾಸಾದೆವು. 

ವಾಯುವಿಹಾರ 

    ಸಂಜೆ ಹೊತ್ತಿನಲ್ಲಿ ನಾನೂ ಅಕ್ಷರಿಯೂ ದಿನಾ ಓಕ್ ಕ್ರೀಕ್ ಸುತ್ತಮುತ್ತ ಒಂದಷ್ಟು ಮೈಲಿ ನಡೆಯುತ್ತಿದ್ದೆವು. ನಡೆಯಲು ಕಾಲು ದಾರಿ ಬಹಳ ಚೆನ್ನಾಗಿದ್ದುವು ಅಲ್ಲಿ. ಎಲ್ಲ ಕಡೆಯೂ ಒಂದಷ್ಟು ಮನೆಗಳ ಸಮುಚ್ಛಯ- ಆಮೇಲೆ ಕೆಲವಾರು ಮರಗಳಿರುವ ಪುಟ್ಟ ಕಾಡು. ಆಮೇಲೆ ಪುನಃ ವಸತಿ ವಠಾರ. ಮನೆ ಎದುರು ವಾಹನ ನಿಲ್ಲಿಸಲು ವಿಶಾಲ ಸ್ಥಳ. ಮನೆ ಹಿಂಭಾಗ ವಿಸ್ತಾರವಾದ ಹುಲ್ಲುಹಾಸು. ಅಕ್ಷರಿ ಮಹೇಶ ವಾಸವಾಗಿದ್ದ ಟ್ಯಾಂಗಲ್ ವುಡ್ ವಠಾರ ಬಹಳ ಪ್ರಶಾಂತವಾಗಿ ಚೆನ್ನಾಗಿತ್ತು. ಅವನ ಕಛೇರಿಯೂ ಅಲ್ಲಿಗೆ ಸಮೀಪವೇ ಇತ್ತು. 






ಸುರಕ್ಷಿತ ಪಯಣ

    ತಾರೀಕು ೧೮-೭-೧೮ರಂದು ಭಾರತದ ರಾತ್ರೆ ೮ ಗಂಟೆಗೆ ಅನಂತ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು, ರವಿಕುಮಾರ್ ಅವರು ಕಾರಿನಲ್ಲಿ ರಾತ್ರೆ ೧೧ ಗಂಟೆಗೆ ಸುರಕ್ಷಿತವಾಗಿ ಮೈಸೂರು ಮನೆ ತಲಪಿಸಿದರು. 
      ಸಂಜೆ ನಾವು ಓಕ್ ಕ್ರೀಕ್ ನಲ್ಲಿರುವ ಡ್ರೆಕ್ಸೆಲ್ ಟೌನ್ ಸ್ಕ್ವೇರ್, ಮಾಯರ್, ವುಡ್ ಮನ್ಸ್ ಅಂಗಡಿಗಳಿಗೆ ಹೋಗಿ ಮನೆಗೆ ಬೇಕಾದ ಸಾಮಾನು ಕೊಂಡೆವು. ಅಲ್ಲೇ ಪಕ್ಕದ ಬೀದಿಯಲ್ಲಿ ಫುಡ್ ಟ್ರಕ್ ಟೂರ್ (ಆಹಾರಮೇಳ) ನಡೆಯುತ್ತಲಿತ್ತು. ಯಾವ ದೇಶವೇ ಇರಲಿ ತಿನ್ನುವುದರಲ್ಲಿ ಮನುಜನಷ್ಟು ಬೇರೆ ಯಾವ ಪ್ರಾಣಿಗಳೂ ಮುಂದಿಲ್ಲ ಎಂದು ಅಲ್ಲಿ ಜನಸಾಗರ ನೋಡಿ ಮನದಟ್ಟಾಯಿತು! ಆಹಾರ ಮೇಳಗಳಿಗೆ ಭೇಟಿ ಕೊಡುವಾಗಲೆಲ್ಲ ಪ್ರತೀಸಲ ಇದರ ಅರಿವು ಆಗುತ್ತಲೇ ಇರುತ್ತದೆ! 

ಸಿನೆಮಾ ವೀಕ್ಷಣೆ

     ಅಮೇರಿಕಾದಲ್ಲಿ ೩೧ ದಿನದಲ್ಲಿ ಅಕ್ಷರಿ ಮಹೇಶರ ಮನೆಯಲ್ಲಿ ಒಟ್ಟು ೩೩ ಸಿನೆಮಾ ನೋಡಿರುವೆ. ಪ್ರತೀದಿನ ಮಧ್ಯಾಹ್ನ ಊಟವಾಗಿ ಒಂದು ಸಿನೆಮಾ (ಕೆಲವು ದಿನ ಎರಡು) ವೀಕ್ಷಿಸುತ್ತಿದ್ದೆ. ಅಕ್ಷರಿ, ಮಹೇಶ ಕೆಲವು ಸಿನೆಮಾ ನೋಡಲು ಕಂಪೆನಿ ಕೊಟ್ಟರು. 
      ಮಲೆಯಾಳ ಸಿನೆಮಾ ನೋಡಬೇಕು. ಎಷ್ಟು ನೈಜವಾಗಿ ಬಹಳ ಚೆನ್ನಾಗಿರುತ್ತದೆ. ನೀನು ಒಮ್ಮೆಯಾದರೂ ನೋಡಬೇಕು ಎಂದು ನಮ್ಮ ಅತ್ತೆಯ ತಮ್ಮ ಗೋವಿಂದಭಟ್ ನನಗೆ ಸುಮಾರು ಸಲ ಹೇಳಿದ್ದರು. ಆದರೆ ಅವರು ಬದುಕಿದ್ದಾಗ ಮಲೆಯಾಳ ಸಿನೆಮಾ ನೋಡಲು ಕಾಲ ಕೂಡಿ ಬಂದಿರಲೇ ಇಲ್ಲ. ಅವರು ಹೇಳಿದ ಮಾತು ನೆನಪಿನಲ್ಲಿದ್ದ ಕಾರಣ (ಅವರನ್ನು ನೆನಪು ಮಾಡಿಕೊಳ್ಳುತ್ತಲೇ) ಮಲೆಯಾಳ ಸಿನೆಮಾ ಹಾಕಿ ಕೊಡಲು ಅಕ್ಷರಿಗೆ ಹೇಳಿದೆ. ಹೌದು. ಒಂದು ಮಲೆಯಾಳ ಸಿನೆಮಾ ನೋಡಿದಾಗಲೇ ಅವರು ಹೇಳಿದ ಮಾತು ನಿಜ ಎಂದೆನಿಸಿತ್ತು. ಮತ್ತೆ ನಾನು ಒಟ್ಟು ೧೪ ಮಲೆಯಾಳ ಸಿನೆಮಾ ನೋಡಿದ್ದೇ ಇದಕ್ಕೆ ಸಾಕ್ಷಿ! ನಾನು ಮಲೆಯಾಳ ಸಿನೆಮಾ ನೋಡಿದ್ದು ಗೋವಿಂದಭಟ್ ಅವರಿಗೆ ತೃಪ್ತಿಯಾಗಿರಬಹುದೀಗ. ನಾನು ಅಲ್ಲಿ ನೋಡಿದ ಒಟ್ಟು ಸಿನೆಮಾಗಳ ಪಟ್ಟಿ ಹೀಗಿದೆ: 
    ೧) ಬಾಸ್ ೨) ಹೌ ಓಲ್ಡ್ ಆರ್ ಯೂ ೩) ದ ಸಾಲ್ಟ್ ಮ್ಯಾಂಗೊ ಟ್ರೀ, ೪) ಅಂಕಲ್, ೫) ನಾರ್ಥ್ ೨೪ ಕತಮ್ ೬) ಉಸ್ತಾದ್ ಹೊಟೇಲ್ ೭)ಮ್ಯಾಡ್ ಡ್ಯಾಡ್ ೮) ಲೈಫ್ ಆಫ್ ಜೋಸುಟ್ಟಿ ೯) ಮಿಲಿ ೧೦) ಬೈಸಿಕಲ್ ಥೀವ್ಸ್ ೧೧) ೨ ಕಂಟ್ರಿ ೧೨) ಎಬಿಸಿಡಿ ೧೩) ಓಂಶಾಂತಿ ಓಶಾನ ೧೪) ಬೆಂಗಳೂರು ಡೇಸ್ ೧೫) ಭಾಸ್ಕರ್ ದಿ ರ್‍ಯಾಸ್ಕಲ್ ೧೬)ಬಿ.ಟೆಕ್ ೧೭)ರಾಜ಼ಿ, ೧೮) ಅಮೇರಿಕನ್ ಬಾರ್ನ್ ಕನ್ಪ್ಯೂಸ್ಡ್ ದೇಸಿ ೧೯) ಕಾಳ ೨೦) ಟಾಯಿಲೆಟ್ ೨೧) ಪೀಕು ೨೨) ರಾಜ್ ವಿಷ್ಣು ೨೩) ದಂಗಲ್ ೨೪) ಪೇಯಿಂಗ್ ಗೆಸ್ಟ್ ೨೫) ಪ್ಯಾಡ್ ಮ್ಯಾನ್ ೨೬) ಎಂ.ಎಸ್.ದೋನಿ ೨೭) ಹೆಬ್ಬುಲಿ ೨೮) ಗೂಗ್ಲಿ ೨೯) ಬಾಹುಬಲಿ-೧ ೩೦) ಬಾಹುಬಲಿ ೨ ೩೧) ಏರ್ ಲಿಫ್ಟ್ ೩೨) ೧೦೨ ನಾಟ್ ಔಟ್ ೩೩) ಪರಮಾಣು
      ದಾಖಲಿಸಲು ಬಿಟ್ಟುಹೋಗಿರುವ ಇನ್ನೂ ಕೆಲವು ಸಿನೆಮಾ ಇರಬಹುದು. ಪರಮಾಣು ಹಾಗೂ ಪ್ಯಾಡ್ ಮ್ಯಾನ್ ಹಿಂದಿ ಸಿನೆಮಾ ಅದ್ಭುತವಾಗಿತ್ತು. ನನಗೆ ಬಹಳ ಇಷ್ಟವಾಗಿತ್ತು. ಇನ್ನು ಎರಡು ವರ್ಷ ಸಿನೆಮಾ ವೀಕ್ಷಣೆ ಮಾಡದಿದ್ದರೂ ಪರವಾಗಿಲ್ಲ! 

ಓಕ್ ಲೀಫ್ ಟ್ರಯಲ್ (Oak Leaf Trail)

     ತಾರೀಕು ೧೯-೭-೧೮ರಂದು ಸಂಜೆ ಓಕ್ ಕ್ರೀಕ್‌ನಲ್ಲಿರುವ ಓಕ್ ಲೀಫ್ ಟ್ರಯಲ್ ಎಂಬ ದಾರಿಯಲ್ಲಿ ಕೆಲವಾರು ಮೈಲಿ ನಡೆದೆವು. ನಡೆಯಲು ಹಾಗೂ ಸೈಕಲ್ ಸವಾರಿಗೆ ಬಹಳ ಅಚ್ಚುಕಟ್ಟಾದ ದಾರಿಯಿದೆ. ಕೆಲವರು ಸೈಕಲ್ ಸವಾರಿ ನಡೆಸಿದ್ದರು. ಸೈಕಲ್ ಇದ್ದಿದ್ದರೆ ನಾವೂ ಸೈಕಲಲ್ಲೇ ಬರಬಹುದಿತ್ತು ಎಂದು ಅವರನ್ನು ನೋಡಿದಾಗ ನಮಗೆ ಅನಿಸಿತ್ತು. ಅಮೆರಿಕದಲ್ಲಿ ನಡೆಯುವ ಹಾಗೂ ಸೈಕಲ್ ಸವಾರಿಯ ಇಂಥ ದಾರಿಗಳಲ್ಲಿ ನಡೆಯುವುದೇ ಹಿತವಾದ ಅನುಭವ ಕೊಡುತ್ತದೆ. 
    ಓಕ್ ಲೀಫ್ ಟ್ರಯಲ್ ಒಟ್ಟು ೧೦೮ ಮೈಲಿಗಳಷ್ಟು ದಾರಿಯನ್ನು ಸುತ್ತುವರಿದಿದೆ. ಮೊದಲಿಗೆ ೧೯೩೯ರಲ್ಲಿ ವಕೀಲ ಹೆರಾಲ್ಡ್ ಜಿಪ್ ಮೋರ್ಗಾನ್ ೬೪ ಮೈಲಿ ದಾರಿಯನ್ನು ಸೈಕಲ್ ಸವಾರಿಗಾಗಿ ಗುರುತಿಸಿದರು. ಈ ದಾರಿಯು ಕೌಂಟಿಯ ಸುತ್ತಲೂ ನದಿಗಳು ಮತ್ತು ಸರೋವರದ ಎದುರು ವಿಸ್ತರಿಸಿತ್ತು. ಮಿಲ್ವಾಕಿ ಕೌಂಟಿ ಪಾರ್ಕ್ ಆಯೋಗವು ೧೯೬೬ರಲ್ಲಿ ಇಲ್ಲಿ ಉದ್ಯಾನವನದ ಹಾದಿಗಳನ್ನು ನಿರ್ಮಾಣ ಮಾಡಿತು. ಮುಂದೆ ೭೬ ಮೈಲಿಗಳಷ್ಟು ದೂರದ ಹಾದಿಯನ್ನು ಬೈಕ್ ಟ್ರಯಲ್ ಎಂದು ಕರೆಯಲಾಯಿತು. 
     ನಾವು ಅಲ್ಲಿಂದ ಕೋಲ್ (khol) ಎಂಬ ಬಟ್ಟೆ ಅಂಗಡಿಗೆ ಹೋದೆವು. ಅಲ್ಲಿ ಬಟ್ಟೆಗಳ ರಾಶಿಯ ಅಂದಚಂದ ನೋಡಿ ಒಂದೆರಡು ಧಿರಿಸು ಕೊಂಡಾಗುವಾಗ ಅಲ್ಲಿಗೆ ಮಹೇಶ ಕಾರಿನಲ್ಲಿ ಬಂದು ನಮ್ಮನ್ನು ಮನೆಗೆ ಕರೆದೊಯ್ದ. 

ಶಶಾಂಕನ ಆಗಮನ- ನಿರ್ಗಮನ

     ೨೦ನೇ ತಾರೀಕು ಮಳೆ ಜೋರಾಗಿ ಬಂತು. ಹಾಗಾಗಿ ಎಲ್ಲೂ ಅಲೆಯಲು ಹೋಗದೆ ಮನೆಯಲ್ಲೇ ಉಳಿದೆವು. ೨೧.೭.೧೮ರಂದು ಬೆಳಗ್ಗೆ ಶಶಾಂಕ (ತಂಗಿ (ಸವಿತ) ಮಗ) ಮಿನಿಯಾಪೊಲೀಸ್‌ನಿಂದ ಬಂದ. ೨೧, ೨೨ರಂದು ನಾವು ಕೆನೊಶಾ, ವಿಸ್ಕಾನ್ಸಿನ್ ಹಾರ್ಬರ್ ಪಾರ್ಕ್, ಬೆಂಡರ್ ಪಾರ್ಕ್, ಲೇಕ್ ವಿಸ್ತಾ ಪಾರ್ಕ್ ಎಂದು ಎರಡೂ ದಿನ ಸಂಜೆ ಸುತ್ತಿದೆವು. ಮಿಷಿಗನ್ ಲೇಕ್ ಅಬ್ಬರ ಬಹಳ ಜೋರಾಗಿತ್ತು. ನೋಡಲು ರುದ್ರರಮಣೀಯವಾಗಿತ್ತು. ೨೨ರಂದು ರಾತ್ರೆ ಶಶಾಂಕ ನಿರ್ಗಮಿಸಿದ. 



ಮನೆಯಲ್ಲಿ ಅಡುಗೆ ಕಾರ್ಯಾಗಾರ


ನಮಗೆ ಏನಾದರೂ ಹೊಸ ರುಚಿ ಮಾಡಿ ಬಡಿಸಬೇಕೆಂದು ಅಕ್ಷರಿಗೆ ಉಮೇದು. ಅವಳ ಉತ್ಸಾಹಕ್ಕೆ ಭಂಗ ತರದೆ ಅವಳು ಮಾಡಿದ ಖಾದ್ಯಗಳ ರುಚಿ ಖುಷಿಯಿಂದಲೇ ಸವಿದಿದ್ದೆವು. ಮಾವು ಐಸ್ಕ್ರೀಂ, ಸಮೋಸ, ಪಪ್ಸ್, ಬ್ರೆಡ್, ಪಾಯಸ, ಪತ್ರಡೆ, ಬರ್ಫಿ, ಪಾನಿಪೂರಿ, ಮಸಾಲೆಪೂರಿ, ಚಾಪ್ಚೋಲೆ, ಪಲಾವ್ ಇತ್ಯಾದಿ ನಾನಾತರಹದ ಅಡುಗೆ ಮಾಡಿದ್ದಳು. 
     ಸಂಜೆ ನಾನೂ ಅಕ್ಷರಿಯೂ ವಾಯುವಿಹಾರ ಮುಗಿಸಿ ಮನೆಯೊಳಗೆ ಬರುವಾಗ ಘಂ ಎಂದು ಸುವಾಸನೆ ಮೂಗಿನ ಹೊಳ್ಳೆಯನ್ನು ನಿಮಿರಿಸಿದರೆ ಆ ದಿನ ಮಹೇಶ ಏನಾದರೊಂದು ಅಡುಗೆ ಮಾಡಿದ್ದನೆಂದೇ ಅರ್ಥ! ತರತರಹದ ಸೂಫ್, ಬಜ್ಜಿ, ಬೋಂಡಾ, ರುಚಿಯಾದ ಉಪ್ಪಿಟ್ಟು, ಸಲಾಡ್, ಗೋಭಿ ಮಂಚೂರಿ, ಗುಲಾಬ್ ಜಾಮೂನ್ ಇತ್ಯಾದಿ ಮಾಡಿಟ್ಟಿರುತ್ತಿದ್ದ. ಅಮ್ಮ ಮಗಳಿಗೆ ಅವನ್ನು ಚಪ್ಪರಿಸುತ್ತ ಸ್ವಾಹಾ ಮಾಡುವುದೇ ಕೆಲಸ! ಇದೆಲ್ಲದರ ಪರಿಣಾಮ ನಾನೂ ಹಾಗೂ ಅನಂತನೂ ನಮ್ಮ ತಾಯಿನಾಡಿಗೆ (ಭೂಮಿಗೆ) ಭಾರವಾಗಿಯೇ ಕಾಲಿಟ್ಟಿದ್ದೆವು! ಕೆಲವು ಕೆಜಿ ತೂಕ ಏರಿಸಿಕೊಂಡ ಕಾರಣ ಪ್ಯಾಂಟ್ ಟೈಟ್ ಎಂದು ಅನಂತ ಪ್ಯಾಂಟ್ ಹಾಕುವಾಗಲೆಲ್ಲ ಪದೇ ಪದೇ ಹೇಳಿಕೊಳ್ಳುತ್ತಿದ್ದ! ನನಗೆ ಆ ಸಮಸ್ಯೆ ಕಾಡಲಿಲ್ಲ. ಕಾರಣ ನಾನು ಮುಂಜಾಗ್ರತೆಯಿಂದಲೇ ಧಿರಿಸನ್ನು ದೊಗಳೆಯೇ (ಸಡಿಲ) ಹೊಲಿಸಿಕೊಳ್ಳುತ್ತೇನೆ! 






ಕೆಫೆ ಮನ್ನಾ (Cefe Manna, 3815 N Brookfield Rd, Brookfield, WI 53045 USA) 

     ಎದುರು ಮನೆ ಸ್ಯಾಂಡಿ ಸ್ಟೀವ್ ದಂಪತಿ ನಮ್ಮನ್ನು ೨೭-೭-೧೮ರಂದು ಸಂಜೆ ೬.೧೫ಕ್ಕೆ ಕೆಫೆ ಮನ್ನಾ ಎಂಬ ಹೊಟೇಲಿಗೆ ಕರೆದುಕೊಂಡು ಹೋದರು. ಓಕ್ ಕ್ರೀಕಿನಿಂದ ೨೮ ಮೈಲಿ ದೂರ. ಸುಮಾರು ೪೦ ನಿಮಿಷದ ಹಾದಿ. ಮಿಲ್ವಾಕಿಯ ಬ್ರೂಕ್ ಫೀಲ್ಡ್‌ನಲ್ಲಿರುವ ಕೆಫೆ ಮನ್ನಾ ಹೊಟೇಲಿನಲ್ಲಿ ಸಸ್ಯಾಹಾರಿ, ಜೈನ ಆಹಾರ ಸಿಗುತ್ತದೆ. ಸ್ಯಾಂಡಿಯ ಅಚ್ಚುಮೆಚ್ಚಿನ ಹೊಟೇಲ್ ಅಂತೆ ಅದು. ಸಸ್ಯಾಹಾರ ಮಾತ್ರ ಸಿಗುವ ಹೊಟೇಲಿಗೆ ಕರೆದುಕೊಂಡು ಹೋಗಿ ನಮಗೆ (ಅಕ್ಷರಿಯ ಜನುಮದಿನದ ನಿಮಿತ್ತ ಕೂಡ) ಆತಿಥ್ಯ ನೀಡಬೇಕೆಂದು ಸ್ಯಾಂಡಿಯ ಇಚ್ಛೆಯಾಗಿತ್ತು. ಅನಂತ ಭಾರತಕ್ಕೆ ಹೋಗುವ ಮೊದಲೆ ಆಗಬೇಕೆಂದುಕೊಂಡರೂ ಅವರ ಅನಾರೋಗ್ಯ ಸಮಸ್ಯೆಯಿಂದ ಸಮಯ ಕೂಡಿ ಬಂದಿರಲಿಲ್ಲ. ಅಲ್ಲಿ ತಿಂದ ಸ್ಪೈಸೀ ಕ್ಯಾಷಿವ್ ಕಾಲಿಫ್ಲವರ್ ಖಾದ್ಯ ನನಗೆ ಅಷ್ಟೇನೂ ರುಚಿ ಎನಿಸಲಿಲ್ಲ. ತಿನ್ನದೆ ಇರುವಂತೆಯೂ ಇರಲಿಲ್ಲ. ಹಾಗಾಗಿ ಬಚಾವ್! ಮಿಶ್ರ ತರಕಾರಿ ಜೊತೆ ನೂಡಲ್ಸ್ ಮಿಶ್ರಣ. ಮಾತುಕತೆಯಾಡುತ್ತ ಖುಷಿಯಿಂದಲೆ ತಿಂದೆವು. ನಾವು ಎಲ್ಲವನ್ನೂ ಹೊಟ್ಟೆಯೊಳಗಿನ ಡಬ್ಬಕ್ಕೆ ಹಾಕಿಕೊಂಡೆವು. ಆದರೆ ಸ್ಯಾಂಡಿ ಸ್ಟೀವ್ ಅರ್ಧ ಭಾಗವನ್ನಷ್ಟೇ ತಿಂದು ಉಳಿದದ್ದನ್ನು ಪ್ರತ್ಯೇಕ ಡಬ್ಬದಲ್ಲಿ ಕಟ್ಟಿಕೊಂಡರು. (ಉಳಿಕೆ ತಿಂಡಿಯನ್ನು ಹೊಟೇಲಿನವರೇ ಕಟ್ಟಿಕೊಡುತ್ತಾರೆ) ನಮ್ಮ ಹೊಟ್ಟೆಡಬ್ಬ ದೊಡ್ಡದಾಗಿದೆ. ಅವರದು ಸಣ್ಣದಾಗಿ ಹಿಡಿಸುವುದಿಲ್ಲ ಹಾಗಾಗಿ ಪ್ರತ್ಯೇಕ ಡಬ್ಬ ಬೇಕು! 
     ಅಲ್ಲಿಂದ ಇನ್ನೇನು ಹೊರಡಬೇಕೆನ್ನುವಾಗ ಒಂದು ಕೇಕ್ ತಂದಿಟ್ಟರು. ನೋಡಿ ನಾವು ಆಶ್ಚರ್ಯ ಪಟ್ಟೆವು. ಅಕ್ಷರಿಯ ಜನುಮದಿನ ಇವತ್ತು ಎಂದು ತಿಂಡಿ ಸರಬರಾಜು ಮಾಡುವವರಿಗೆ ಈ ಮೊದಲೇ ಸ್ಯಾಂಡಿ ಹೇಳಿದ್ದರಂತೆ! ನಮಗೆ ಗೊತ್ತೇ ಇರಲಿಲ್ಲ. ಕೇಕ್ ಹಂಚಿ ಸಂಭ್ರಮ ಪಟ್ಟಳು ಅಕ್ಷರಿ. ಕೇಕನ್ನು ನಾವೂ ಪ್ರತ್ಯೇಕ ಡಬ್ಬಕ್ಕೇ ತುಂಬಿಕೊಂಡು ಹೊರಟೆವು! ಸ್ಯಾಂಡಿಯ ಪ್ರೀತಿಗೆ ವಂದನೆ ಸಲ್ಲಿಸಿದೆವು.




     ಹೊಟೇಲ್ ಸಮಯ: ಭಾನುವಾರ : ಬೆಳಗ್ಗೆ ೯ರಿಂದ ಮಧ್ಯಾಹ್ನ ೨, ಬಾಕಿ ದಿವಸ ಬೆಳಗ್ಗೆ ೧೧ರಿಂದ ರಾತ್ರಿ ೯ ಗಂಟೆವರೆಗೆ. ಬುಧವಾರ ರಜಾದಿನ.
      ಕಾರಿನಲ್ಲಿ ಬರುತ್ತ, ಕನ್ನಡ ಸಿನೆಮಾ ಹಾಡು ಹಾಕಿದ ಮಹೇಶ. ಸ್ಯಾಂಡಿ ಸ್ಟೀವ್ ಹಾಡಿನ ಲಯಕ್ಕೆ ಮನಸೋತರು. ಅದರಲ್ಲಿ ಬರುವ ಕೆಲವು ಸಾಲುಗಳನ್ನು ಅಕ್ಷರಿ ಆಂಗ್ಲಕ್ಕೆ ತರ್ಜುಮೆ ಮಾಡಿ ಹೇಳಿದಳು. ಅವರು ಖುಷಿಯಿಂದ ಕನ್ನಡ, ಹಿಂದಿ ಹಾಡು ಕೇಳಿದರು. ಕಾರಿನಲ್ಲಿ ಹೋಗುವಾಗ ಮೊಬೈಲಿನಲ್ಲಿ ಗೂಗಲಣ್ಣನ ದಾರಿಯನ್ನು ಹಾಕಿಕೊಂಡರೆ ಸ್ಟೀವ್ ಅವರಿಗೆ ಆಗದು. ಅವರ ಬಳಿ ಅಂಡ್ರಾಯ್ಡ್ ಮೊಬೈಲಿಲ್ಲ. ಅದಕ್ಕೆ ಒಮ್ಮೆ ನಾವು ದಾಸರಾದರೆ ನಮ್ಮ ನೆನಪಿನ ಶಕ್ತಿ ಕ್ಷೀಣಿಸುತ್ತದೆ. ಮೆದುಳಿಗೆ ಕೆಲಸ ಕಮ್ಮಿ ಆಗುತ್ತದೆ. ಎಂದೇ ಅವರ ದೃಢ ನಿಲುವು. ಮಹೇಶನಿಗೆ ಗೂಗಲಣ್ಣನ ಸಹಾಯ ಹಾಕಲು ಬಿಡದೆ ಅವರೇ ಸರಿ ದಾರಿ ತೋರಿ ಕರೆದೊಯ್ದಿದ್ದರು. ಅಲ್ಲಿ ತಲಪಿದಮೇಲೆ ಅವರ ನೆನಪಿನ ಶಕ್ತಿ ಬಗ್ಗೆ ಅವರೇ ಮೆಚ್ಚಿಕೊಂಡಿದ್ದರು ಕೂಡ! 
      ಸ್ಯಾಂಡಿ ಅವರಿಗೆ ಖಾರ ಖಾರವಾಗಿರುವ ತಿಂಡಿ ಇಷ್ಟ. ಸ್ಟೀವ್ ಅವರಿಗೆ ಖಾರ ಆಗದು. ಅಕ್ಷರಿ ಅಮೇರಿಕಾ ಬಿಟ್ಟು ಭಾರತಕ್ಕೆ ಬರುವ ಮೊದಲು ಸ್ಯಾಂಡಿಗೆ ನಾಲ್ಕೈದು ಬಗೆಯ ಅಡುಗೆ ವ್ಯಂಜನ ತಯಾರಿಸಿ ಕೊಟ್ಟಿದ್ದಳು. ಸ್ಯಾಂಡಿ ಅವನ್ನು ತಣ್ಣನೆ ಪೆಟ್ಟಿಗೆಯಲ್ಲಿಟ್ಟು ಜೋಪಾನ ಮಾಡಿ ತಿಂಗಳಾನುಗಟ್ಟಲೆ ಇಟ್ಟುಗೊಂಡು ಸ್ವಲ್ಪ ಸ್ವಲ್ಪವೇ ಬಳಸಿಕೊಂಡು ಸವಿಯುವಾಗ ಅಕ್ಷರಿಯನ್ನು ನೆನಪಿಸಿಕೊಂಡು ಖುಷಿಪಟ್ಟಿದ್ದರಂತೆ. ಅಕ್ಷರಿ ಮಹೇಶ ಭಾರತಕ್ಕೆ ಬಂದು ವರ್ಷವೇ ಕಳೆಯಿತು. ಈಗಲೂ ಸ್ಯಾಂಡಿಯ ಮಿಂಚಂಚೆ ಪತ್ರ ಅಕ್ಷರಿಗೆ ಬರುತ್ತಿರುತ್ತದೆ. ಅಕ್ಷರಿಯೂ ಅವರಿಗೆ ಪ್ರತ್ಯುತ್ತರ ಪತ್ರ ಕಳುಹಿಸುತ್ತಿರುತ್ತಾಳೆ. ಇತ್ತೀಚೆಗೆ ೧೪-೧೨-೧೮ರಂದು ಸ್ಯಾಂಡಿಯಿಂದ ಒಂದು ಪಾರ್ಸೆಲ್ ಬಂದಿದೆ. ಅದರಲ್ಲಿ ಒಣಹಣ್ಣು, ಅಕ್ಷರಿ ಮಹೇಶರ ಮಗ ಪುಟ್ಟ ಆರುಷನಿಗೆ ಆಟದ ಸಾಮಾನು ಇತ್ಯಾದಿ ಬಂದಿದೆ. ಅವರ ಈ ನಿರ್ವಾಜ್ಯ ಪ್ರೀತಿಗೆ ನುಡಿಯಲ್ಲಿ ಹೇಳಲು ಪದಗಳಿಲ್ಲ. ಅಕ್ಷರಿ ಮಹೇಶ ಪುನಃ ಅಮೇರಿಕಕ್ಕೆ ಬರುತ್ತಾರೆ ಎಂದೇ ಸ್ಯಾಂಡಿ ಬಲವಾಗಿ ನಂಬಿದ್ದಾರೆ. 
ವೆಹ್ರ್ ನೇಚರ್ ಸೆಂಟರ್ ಪಾರ್ಕ್ (Wehr Nature center , 9701 w college ave, Franklin WI 53132 USA) 

     ತಾರೀಕು ೩೧-೭-೧೮ರಂದು ನಾವು ಸಂಜೆ ವೆಹ್ರ್ ನೇಚರ್ ಪಾರ್ಕಿಗೆ ಹೋದೆವು. ವೆಹ್ರ್ ನೇಚರ್ ಸೆಂಟರ್ ಮಲ್ಲಾರ್ಡ್ ಸರೋವರದ ದಡದಲ್ಲಿದೆ. ಅಲ್ಲಿ ಕಾಡೊಳಗೆ ೨ ಮೈಲಿ ನಡೆದೆವು. ಕಾಡೊಳಗೆ ನಡೆಯುವಾಗ ಎತ್ತರದ ಮರಗಳಲ್ಲಿ ಜೇನುಗೂಡು ಕಂಡೆವು. ಪುಟ್ಟ ಜಲಪಾತ ನೋಡಿದೆವು. ಸರೋವರ ನೋಡುತ್ತ ಸ್ವಲ್ಪ ಹೊತ್ತು ಕುಳಿತೆವು. ಕಾಡಿನೊಳಗಿನ ನಡಿಗೆ ಎಲ್ಲವೂ ಖುಷಿಕೊಟ್ಟಿತು. ೨೨೦ ಪ್ರದೇಶದಷ್ಟು ವಿಸ್ತಾರವಾದ ಈ ಪಾರ್ಕ್ ಪ್ರಕೃತಿ ಪ್ರಿಯರಿಗೆ ವಿಹಾರ ನಡೆಸಲು ಸುಂದರ ತಾಣ. ಪ್ರವೇಶ ಉಚಿತ, ಕಾರ್ ಪಾರ್ಕಿಗೆ ಶುಲ್ಕವಿದೆ. ಸಮಯ ಬೆಳಗ್ಗೆ ೮ರಿಂದ ಸಂಜೆ ೪.೩೦ರ ತನಕ. 




ಬೋನರ್ ಬೊಟಾನಿಕಲ್ ಗಾರ್ಡನ್ (Boerner Botanical Gardens , 9400, Boerner Dr, hakes corners, WI 53130 USA) 

     ೨-೮-೧೮ರಂದು ಸಂಜೆ ಹೊಟ್ಟೆಬಿರಿಯ ಮಸಾಲೆಪೂರಿ ತಿಂದು (ಅಕ್ಷರಿಯೇ ತಯಾರಿಸಿರುವುದು) ನಾವು ಸೌತ್ ರಿಡ್ಜ್ ಮಾಲ್ ಸುತ್ತಿ ಅಲ್ಲಿಂದ ಬೊಟಾನಿಕಲ್ ಉದ್ಯಾನವನಕ್ಕೆ ಹೋದೆವು. ಗುಲಾಬಿ ಇನ್ನಿತರ ಹೂವಿನ ಗಿಡಗಳು ಇದ್ದುವು. ಅಲ್ಲಿ ಸಂಗೀತ ಸಂಜೆ ನಡೆಯುತ್ತಲಿತ್ತು. ತುಂಬ ಜನ ಅಲ್ಲಿ ನೆರೆದಿದ್ದರು. ಅಮೇರಿಕನ್ನರು ಎಷ್ಟು ಸಂತೋಷವಾಗಿ ಇಂಥ ಸಂಜೆಗಳನ್ನು ಕಳೆಯುತ್ತಾರೆ ಎಂದು ನೋಡಿಯೇ ನಾವು ಸಂತೋಷಪಟ್ಟೆವು. ತಿಂಡಿ ಮೆಲ್ಲುತ್ತಲೇ ಅವರು ಸಂಗೀತವನ್ನು ಕೇಳುತ್ತಿದ್ದರು. ಕೆಲವರು ಉತ್ಸಾಹಿಗಳು ಎದ್ದು ನೃತ್ಯ ಮಾಡುತ್ತಿದ್ದರು. ನಾವು ಅವರನ್ನೆಲ್ಲ ನೋಡುತ್ತ ಸಂಗೀತ ಕೇಳುತ್ತ ಸ್ವಲ್ಪ ಹೊತ್ತು ಕುಳಿತೆವು. ಕೆಲವರು ಮನೆಯಿಂದಲೇ ಕುರ್ಚಿ ತಂದು ಕುಳಿತಿದ್ದರು. ತರದವರು ಹುಲ್ಲುಹಾಸಿನ ಮೇಲೆ ವಿರಮಿಸಿದ್ದರು.



      ೧೯೩೦ರಲ್ಲಿ ಈ ಉದ್ಯಾನವನವನ್ನು ನಿರ್ಮಿಸಲಾಯಿತು. ಏಪ್ರಿಲ್ ಅಂತ್ಯದಿಂದ ನವೆಂಬರ ಪ್ರಾರಂಭದವರೆಗೆ ತೆರೆದಿರುತ್ತದೆ. ಚಳಿಗಾಲದಲ್ಲಿ ಮುಚ್ಚಲ್ಪಡುತ್ತದೆ. ಈ ಉದ್ಯಾನವನವನ್ನು ಚಾರ್ಲ್ಸ್ ಬಿ. ವಿಟ್ನಾಲ್ ಸ್ಥಾಪಿಸಿದರು. ವಿನ್ಯಾಸ ಮತ್ತು ವಾಸ್ತುಶಿಲ್ಪಿ ಅಲ್ಫ್ರೆಡ್ ಬೋರ್ನರ್. ಪ್ರವೇಶ ಸಮಯ ಬೆಳಗ್ಗೆ ೮ರಿಂದ ಸಂಜೆ ೬ರವರೆಗೆ. ಪ್ರವೇಶ ಶುಲ್ಕವಿದೆ. 
ಬೋಟ್ ಟೂರ್ ವಿಸ್ಕಾನ್ಸಿನ್ ಡೆಲ್ಸ್ (Dells boat Tour, 107, Broadway, Wisconsin Dells, WI 53 965, USA)


ಹಡಗಿನ ಪಯಣ ಭರ್ಜರಿ ಹೂರಣ

     ತಾರೀಕು ೪-೮-೧೮ರಂದು ನಾವು ಓಕ್‌ಕ್ರೀಕ್‌ನಿಂದ ಬೆಳಗ್ಗೆ ೧೦.೩೦ಗೆ ಹೊರಟು ೧೨.೪೫ಕ್ಕೆ ವಿಸ್ಕಾನ್ಸಿನ್ ತಲಪಿದೆವು. ಸುಮಾರು ೧೩೫ ಮೈಲಿ ದೂರ. ಅಲ್ಲಿ ಬುತ್ತಿಬಿಚ್ಚಿ ಫ್ರೈಡ್ರೈಸ್ ತಿಂದೆವು. 
    ವಿಸ್ಕಾನ್ಸಿನ್ ಡೆಲ್ಸ್‌ನ ನೈಸರ್ಗಿಕ ಸೌಂದರ್ಯ ಸವಿಯಲು ಬೋಟ್ ಪ್ರವಾಸ ಮಾಡಲೇಬೇಕು. ನಾವು ಅಪ್ಪರ್ ಡೆಲ್ಸ್ ಟೂರ್ ಹಾಗೂ ಲೋವರ್ ಡೆಲ್ಸ್ ಟೂರ್ ಎಂದಿದೆ. ನಾವು ಅಪ್ಪರ್ ಬೋಟಿನಲ್ಲಿ ಸಾಗಿದೆವು. ಪ್ರವೇಶ ಶುಲ್ಕ ಒಬ್ಬರಿಗೆ ೩೦ ಡಾಲರ್. ಬೋಟ್ ಹತ್ತಲು ನಮ್ಮ ಸರದಿ ಬರಲು ಕಾಲು ಗಂಟೆ ಕಾಯಬೇಕಾಯಿತು. ಆಗ ಅಲ್ಲಿ ಬಾತುಕೋಳಿ ನೀರಿನಲ್ಲಿ ವಿಹರಿಸುವುದನ್ನು ನೋಡುತ್ತ ಕೂತೆವು. 
      ಎರಡು ಗಂಟೆಯ ಈ ಪಯಣದಲ್ಲಿ ನೀರಿನಲ್ಲಿ ಬೋಟಿನಲ್ಲಿ ಕುಳಿತು ನದಿಯುದ್ದಕ್ಕೂ ಸಾಗುವಾಗ ಮಾರ್ಗದರ್ಶಕಿಯ ವೀಕ್ಷಕ ವಿವರಣೆಯೂ ಬೆರೆತು ಈ ಪಯಣ ಬಹಳ ಖುಷಿ ನೀಡುತ್ತದೆ. ನದಿಯ ಮೇಲಿರುವ ಡೆಲ್ಸ್‌ನ ಶಿಲಾ ರಚನೆಗಳು ಗಮನ ಸೆಳೆಯುತ್ತವೆ. ನದಿದಂಡೆ ಮೇಲಿರುವ ಎರಡೂ ಬದಿ ಪೈನ್ ಮರಗಳು ಹಸುರಾಗಿ ನೋಡಲು ಎರಡು ಕಣ್ಣು ಸಾಲದು. ನೀರಿನ ರಭಸದ ಚಿಮ್ಮುವಿಕೆಯಿಂದ ನಾನಾ ವಿನ್ಯಾಸದ ರಚನೆಗಳಿಂದ ನಿರ್ಮಾಣಗೊಂಡ ನೀರ್ಗಲ್ಲುಗಳನ್ನು ನೋಡುತ್ತ ನೀರಿನಲ್ಲಿ ಪಯಣ, ಕೆಲವರು ಸ್ಪೀಡ್ ಬೋಟಿನಲ್ಲಿ ರಭಸದಿಂದ ಸಾಗುವಾಗ ನೀರಿನ ಹಾರುವಿಕೆ ಇತ್ಯಾದಿ ನೋಡುವುದು ಓಹ್ ಅದೊಂದು ರಮ್ಯ ಘಳಿಗೆ ಎನ್ನಬಹುದು. ಹಡಗಿನ ಪಯಣ ಭರ್ಜರಿ ಹೂರಣ ಒದಗಿಸಿತು.











       ವಿಚ್ಸ್ ಗುಲ್ಟ್ ಮತ್ತು ಜರ್ಮನ್ ಶೆಪರ್ಡ್ ಡಾಗ್ ಸ್ಟ್ಯಾಂಡ್ ಎಂಬ ಸ್ಥಳದಲ್ಲಿ ೨ ಕಡೆ ಹಡಗು ನಿಲ್ಲಿಸುತ್ತಾರೆ. ೨ ಕಡೆ ಬೋಟ್ ಇಳಿದು ಕಾಡೊಳಗೆ ಪಯಣ. ಕಾಡೊಳಗೆ ಶಿಲಾಪದರಗಳನ್ನು ನೋಡುತ್ತ ನಡೆದೆವು. ನಿಸರ್ಗನಿರ್ಮಿತ ಶಿಲಾರಚನೆಗಳು ನೋಡಲು ಅದ್ಭುತವಾಗಿವೆ. ಕಾಡೊಳಗೆ ಒಂದು ಕಡೆ ಎತ್ತರದ ಬಂಡೆಯಿಂದ ಇನ್ನೊಂದು ಬಂಡೆಗೆ ನಾಯಿಯನ್ನು ಹಾರಿಸುತ್ತಾರೆ. ಜರ್ಮನ್ ಶೆಪರ್ಡ್ ಡಾಗ್ ಸ್ಟ್ಯಾಂಡ್‌ನಲ್ಲಿ ಬಹಳ ಹಿಂದೆ, ಕಾಡೊಳಗೆ ಒಂದು ಕಡೆ ಎತ್ತರದ ಬಂಡೆಯಿಂದ ಇನ್ನೊಂದು ಬಂಡೆಗೆ ಛಾಯಾಗ್ರಾಹಕ ಎಚ್ ಎಚ್ ಬೆನೆಟ್ ಅವರ ಮಗ ಹಾರಿದನಂತೆ. ಈಗ ಅದರ ನೆನಪಿಗೆ ಒಂದು ಬಂಡೆಯಿಂದ ಇನ್ನೊಂದು ಬಂಡೆಗೆ ನಾಯಿಯನ್ನು ಹಾರಿಸುತ್ತಾರೆ. ಆ ದೃಶ್ಯವನ್ನು ವೀಡಿಯೋ ಮಾಡಬೇಕೆಂದು ಅದರ ತಯಾರಿಯಲ್ಲಿರುವಾಗ ನಾಯಿ ಒಂದು ಸೆಕೆಂಡಿನಲ್ಲೇ ಆ ತುದಿ ಬಂಡೆಯಿಂದ ಇನ್ನೊಂದು ಬಂಡೆಗೆ ಹಾರಿ ಆಗಿತ್ತು. ಕಣ್ಣಿನ ಕ್ಯಾಮರಾದಲ್ಲಿ ಮೊದಲು ನೋಡಿ ಅನುಭವಿಸಿದಾಗ ಅದರ ಹಿತಾನುಭವವೇ ಬೇರೆ ರೀತಿಯದು. ಮತ್ತೆ ನಾನು ಅದನ್ನು ವೀಡಿಯೋದಲ್ಲೆ ನೋಡಬೇಕಾಗಿ ಬಂದದ್ದು ವಿಪರ್ಯಾಸ!








ಡೆಲ್ಸ್‌ನ ಇತಿಹಾಸ: ೧೮೫೦ರ ದಶಕದಲ್ಲೇ ಈ ತಾಣವನ್ನು ಗುರುತಿಸಿ ಪ್ರವಾಸೋದ್ಯಮವನ್ನು ಬೆಳೆಸಲಾಯಿತು. ಮೊದಲಿಗೆ ರೇಯಿಂಗ್ ದೋಣಿ, ಪೆಡಲ್ ಸ್ಟೀಮರ್ ತದನಂತರ ಆಧುನಿಕ ಬೋಟನ್ನು ಪರಿಚಯಿಸಲಾಯಿತು. ಈಗ ಸರಿಸುಮಾರು ೧೭ ಬೋಟ್‌ಗಳು ಪ್ರವಾಸಿಗರನ್ನು ವಿಸ್ಕಾನ್ಸಿನ್ ಡೆಲ್ಸ್‌ನ ಅದ್ಭುತ ತಾಣಗಳತ್ತ ಕರೆದೊಯ್ಯುತ್ತಿವೆ. ಪ್ರತೀವರ್ಷ ಅರ್ಧ ಮಿಲಿಯನ್ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರಂತೆ. 

      ಅದ್ಭುತ ಯಾನ ಮುಗಿಸಿ ಹೊರಬಂದು ಕಾರು ಹತ್ತಿದೆವು. ಕಚೇರಿಯಿಂದ ತುರ್ತು ಫೋನ್ ಕರೆ ಬರುವುದಿದ್ದರಿಂದ ಮಹೇಶ ಬೋಟ್ ಯಾನಕ್ಕೆ ಬಂದಿರಲಿಲ್ಲ. ಕಾರಿನಲ್ಲೇ ಕೂತು ಕರೆಗಾಗಿ ಕಾಯುತ್ತಲಿದ್ದ. ಕರೆ ಬಂದಿರಲಿಲ್ಲ. ನಾವು ಬರುವವರೆಗೆ ೨ ಗಂಟೆ ಕಾಲ ಕಾಯುತ್ತ ಕೂರುವುದು ಕಷ್ಟದ ಕೆಲಸ. 
ಡೆವಿಲ್ ಲೇಕ್ (Devil lake state park S 5975, park road, Baraboo WI 53913, USA)

     ನಾವು ಡೆಲ್ಸ್‌ನಿಂದ ೧೯ ಮೈಲಿ ದೂರದಲ್ಲಿರುವ ಸುಮಾರು ೨೫ನಿಮಿಷದ ಹಾದಿಯ ಡೆವಿಲ್ ಲೇಕಿಗೆ ಹೋದೆವು. ಅಲ್ಲಿಗೆ ಹಿಂದೊಮ್ಮೆ ಭೇಟಿಕೊಟ್ಟಾಗ ಚಾರಣ ಕೈಗೊಂಡಿದ್ದೆವು. ಈ ಸಲ ಸರೋವರದ ದಂಡೆಮೇಲೆ ಉದ್ದಕ್ಕೂ ನಡೆದೆವು. ಸರೋವರದ ಉದ್ದಕ್ಕೂ ನಡೆಯಲು ಕಾಲುದಾರಿ ಇದೆ, ಸರೋವರ ನೋಡುತ್ತ ಮಗಳು ಅಳಿಯನೊಡನೆ ಹರಟುತ್ತ ಸಂಜೆಯ ವೇಳೆಯಲ್ಲಿ ನಡೆಯುವುದೇ ಚೇತೋಹಾರಿ ಅನುಭವ. ನದಿ ದಂಡೆಯಲ್ಲಿ ಕೆಲವು ಮರಗಳನ್ನು ಕಡಿದಿದ್ದರು. ಅಲ್ಲಿ ಚಿಗುರೊಡೆದಿತ್ತು. ಅವು ಚಿಗುರಿ ನಳನಳಿಸುವುದನ್ನು ನೋಡುವಾಗ, ಮಾನವಾ! ನೀವು ಎಷ್ಟೇ ನಮ್ಮನ್ನು ಕಡಿದುರಿಳಿಸಿದರೂ ನಾವು ಮರಳಿ ಚಿಗುರುತ್ತೇವೆ ಎಂದು ಹೇಳುವಂತಿತ್ತು.







     ಡೆವಿಲ್ ಲೇಕಿಗೆ ವರ್ಷಕ್ಕೆ ಸುಮಾರು ೩ ಮಿಲಿಯನ್ ಪ್ರವಾಸಿಗರು ಭೇಟಿ ಕೊಡುತ್ತಾರಂತೆ. ವಾರಾಂತ್ಯದಲ್ಲಂತೂ ಜನರಿಂದ ತುಂಬಿರುತ್ತದೆ. ಕಾರ್ ಪಾರ್ಕಿಗೆ ಸ್ಥಳ ಸಿಗುವುದಿಲ್ಲ. ಪ್ರವೇಶ ಸಮಯ: ಬೆಳಗ್ಗೆ ೬ರಿಂದ ರಾತ್ರೆ ೧೧ರವರೆಗೆ. ಪ್ರವೇಶ ಶುಲ್ಕವಿದೆ. 
ಇಲಿನಾಯ್ ಬೀಚ್ ಸ್ಟೇಟ್ ಪಾರ್ಕ್ (Illinois Beach State Park, pArk office Lakefront Zion IL 60099,USA) 

      ತಾರೀಕು ೫-೮-೧೮ರಂದು ಬೆಳಗ್ಗೆ ೧೧ ಗಂಟೆಗೆ ಓಕ್ ಕ್ರೀಕ್ನಿಂದ ಹೊರಟು ೧೨.೪೫ಕ್ಕೆ ಷಿಕಾಗೊ ತಲಪಿ ಅಲ್ಲಿ ಸ್ವಾಮಿನಾರಾಯಣ ಮಂದಿರ ಬಾಪ್ಸ್‌ನ ಕೆಫೆಟೇರಿಯಾಗೆ ಹೋಗಿ ಬಿಸಿಬೇಳೆಭಾತ್, ದೋಕ್ಲಾ, ಚಪಾತಿ, ಮೆಂತೆ ಬೋಂಡಾ, ಪತ್ರಡೆ ಎಲ್ಲ ಸವಿದೆವು. ಚಕ್ಕುಲಿ, ಸೇಮೆ, ಇತ್ಯಾದಿ ಹುರಿದ ತಿಂಡಿಗಳನ್ನು ಕೊಂಡು ಅಲ್ಲಿಂದ ಹೊರಟು ಇಲಿನಾಯ್ ಬೀಚ್ ಸ್ಟೇಟ್ ಪಾರ್ಕಿಗೆ ಹೋದೆವು.


      ೧೯೪೮ರಲ್ಲಿ ೪೧೬೦ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಈ ಉದ್ಯಾನವನದಲ್ಲಿ ನದಿತೀರದಲ್ಲಿ ೬ ಮೈಲಿ ನಡೆಯಬಹುದು. ಇದಕ್ಕೆ ಹೊಂದಿಕೊಂಡಂತೆ ೨೪೪ ಕ್ಯಾಂಪ್ ಗ್ರೌಂಡ್ ತಾಣಗಳಿವೆ. ಇಲ್ಲಿ ಈಜು, ದೋಣಿ ವಿಹಾರ, ಪಿಕ್ನಿಕ್, ನಡಿಗೆ, ಗಾಳ ಹಾಕಿ ಮೀನು ಹಿಡುಯುವಿಕೆ ಇತ್ಯಾದಿ ಮನರಂಜನಾ ಚಟುವಟಿಕೆಗಳಿಗೆ ಅವಕಾಶವಿದೆ. ಇದು ಮಿಷಿಗನ್ ಸರೋವರದ ಒಂದು ಭಾಗ.
     ನಾವು ನದಿಗೆ ಇಳಿದು ಸ್ವಲ್ಪ ಹೊತ್ತು ಅಲ್ಲಿ ಅಡ್ಡಾಡಿದೆವು. ಅಲ್ಲಿ ಕೆಲವರು ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ಹಿಡಿದ ಮೀನನ್ನು ವಾಪಾಸು ನದಿಗೇ ಹಾಕಬೇಕು. ಒಯ್ಯುವಂತಿಲ್ಲ! ಮೀನು ಹಿಡಿಯುವವರನ್ನು ನೋಡಿದಾಗ ಇಷ್ಟು ಉದಾಸೀನದ ಕೆಲಸ ಬೇರೆ ಇರಲಿಕ್ಕಿಲ್ಲ ಎಂದೆನಿಸಿತು ನನಗೆ! ಇನ್ನು ಕೆಲವರು ಈಜು, ದೋಣಿ ವಿಹಾರ ನಡೆಸುತ್ತಿದ್ದರು. ನಾವು ಸರೋವರದ ಚಂದ ನೋಡಿ ಅಲ್ಲಿಂದ ನಿರ್ಗಮಿಸಿದೆವು.
ಪ್ಲೆಸೆಂಟ್ ಪ್ರೈರಿ ಪ್ರೀಮಿಯಂ ಮಳಿಗೆಗಳು (pleasant prairie premium outlets, 11211, 120th Ave, pleasant prairie, WI 53158 USA) 


     ವಿಸ್ಕಾನ್ಸಿನ್ ಕೆನೊಶಾ ಕೌಂಟಿಯ ಮಿಷಿಗನ್ ಸರೋವರದ ತೀರಕ್ಕೆ ಸಮೀಪ, ಇಲಿನಾಯ್ಸ್‌ನ ಮಿಲ್ವಾಕಿ ವಿಸ್ಕಾನ್ಸಿನ್ ಮತ್ತು ಷಿಕಾಗೋ ನಡುವೆ ಅಂತರರಾಜ್ಯ ಹೈವೇ ೯೪ರ ಪಕ್ಕದಲ್ಲಿರುವ ಪ್ಲೆಸೆಂಟ್ ಪ್ರೈರಿ ಮಳಿಗೆಗೆ ಕೊಳ್ಳಲು ಏನಿಲ್ಲದಿದ್ದರೂ ಸುಮ್ಮನೆ ಸುತ್ತುವ ಸಲುವಾಗಿ ನಾವು ಹೋದೆವು. ಶೂ, ಬ್ಯಾಗ್, ಬಟ್ಟೆ, ಇತ್ಯಾದಿ ಎಂದು ಇಲ್ಲಿ ವಿವಿಧ ಕಂಪೆನಿಗಳ ೯೪ ಮಳಿಗೆಗಳಿವೆ. ಪ್ರವೇಶ ಸಮಯ: ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ ೧೦ರಿಂದ ರಾತ್ರೆ ೯ರವರೆಗೆ. ಭಾನುವಾರ ಬೆಳಗ್ಗೆ ೧೦ರಿಂದ ರಾತ್ರೆ ೭ ರವರೆಗೆ. 
      ಹೆಚ್ಚಿನ ಅಂಗಡಿಗಳೂ ನಷ್ಟದಿಂದಾಗಿ ಮುಚ್ಚುವ ಸ್ಥಿತಿಗೆ ಬಂದಿವೆಯಂತೆ. ಹಾಗೆಂದು ಅಲ್ಲಿ ಫಲಕ ಹಾಕಿದ್ದರು. ಹಾಗಾಗಿ ಅಲ್ಲಿರುವ ವಸ್ತುಗಳಿಗೆ ಭಾರೀ ರಿಯಾಯಿತಿ ಬೆಲೆ ಘೋಷಿಸಿದ್ದರು. ಅಲ್ಲಿ ಬೆಲೆ ನೋಡಿದಾಗ ಕಡಿಮೆ ಬೆಲೆ ಎಂದು ನಮಗೆ ಅನಿಸಿರಲಿಲ್ಲ! ಅಲ್ಲಿಯ ಹೊಟೇಲಿನಲ್ಲಿ ಕಾಫಿ ಕುಡಿದು ನಾವು ಹೊರಟು ೭.೩೦ಕ್ಕೆ ಓಕ್ ಕ್ರೀಕ್ ಮನೆ ತಲಪಿದೆವು. 

ಕೊಲಂಬಿಯಾ ಪಾರ್ಕ್ (Columbia Park, N10340, calumet Harbor Rd, Malone, WI 53049, USA) 

     ತಾರೀಕು ೧೧.೮.೧೮ರಂದು ನಾವು ೧೧.೧೫ಕ್ಕೆ ಓಕ್ ಕ್ರೀಕಿನಿಂದ ಹೊರಟು ೧೨.೪೫ಕ್ಕೆ ಕೊಲಂಬಿಯಾ ಪಾರ್ಕ್‌ಗೆ ಹೋದೆವು. ಕಾರಿಳಿದು ಪಾರ್ಕಿನಲ್ಲಿ ಮೊದಲು ಮಾಡಿದ ಕೆಲಸ ನಾವು ಕಟ್ಟಿ ತಂದಿದ್ದ ಮೆಂತೆ ಚಿತ್ರಾನ್ನ ಹೊಟ್ಟೆಗೆ ಸೇರಿಸಿದೆವು. ಹೊಟ್ಟೆದೇವ ತೃಪ್ತಿಯಾದಮೆಲೆಯೇ ಅಲ್ಲೆ ಪಕ್ಕದಲ್ಲೇ ಇದ್ದ ೮೦ ಅಡಿ ಗೋಪುರಕ್ಕೆ ೧೭೩ ಮೆಟ್ಟಲು ಹತ್ತಿ ಮೇಲೆ ಹೋದೆವು. ಅಲ್ಲಿಂದ ವಿನ್ನೆಬಾಗೊ ಸರೋವರ (Lake Winnebago, ವಿನ್ನಿಬಾಗೋ ಸರೋವರ ೧೩೭,೭೦೦ ಎಕರೆ ಪ್ರದೇಶದಲ್ಲಿ ಹರಡಿದೆ. ಇದು ಈ ರಾಜ್ಯದಲ್ಲಿನ ಅತಿದೊಡ್ಡ ಸರೋವರವಾಗಿದೆ.), ನಯಾಗರ ಎಸ್ಕಾರ್ಪ್ಮ್ಂಟ್ (ಲೆಡ್ಜ್), ಪಾಂಡ್ ಡು ಲೇಕಿನ ವಿಹಂಗಮ ನೋಟ ನೋಡಿ ಬೆರಗಾದೆವು. ಕಣ್ಣ ಅಳತೆ ಮೀರಿ ಸರೋವರ ಉದ್ದವಿದೆ.









ಹೈ ಕ್ಲಿಫ್ ಸ್ಟೇಟ್ ಪಾರ್ಕ್ (High Cliff State park, calumet County, WI USA)

     ನಾವು ಕೊಲಂಬಿಯಾ ಪಾರ್ಕಿನಿಂದ ೨೨ ಮೈಲಿ ದೂರದಲ್ಲಿರುವ (೩೦ ನಿಮಿಷದ ದಾರಿ) ಹೈ ಕ್ಲಿಫ್ ಸ್ಟೇಟ್ ಪಾರ್ಕಿಗೆ ಹೋದೆವು. ಇದು ವಿಸ್ಕಾನ್ಸಿನ್ ರಾಜ್ಯದ ಶೆವ್ರುಡ್ ಪಟ್ಟಣದ ವಿನ್ನಿಬಾಗೊ ಸರೋವರದ ಈಶಾನ್ಯ ಮೂಲೆಯಲ್ಲಿದೆ. ಈ ಪಾರ್ಕ್ ೧೯೫೬ರಲ್ಲಿ ಸ್ಥಾಪಿಸಲ್ಪಟ್ಟು, ೧೧೮೭ ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿದೆ. ೧೯೯೭ರಲ್ಲಿ ಇದನ್ನು ಐತಿಹಾಸಿಕ ಸ್ಥಳವೆಂದು ಘೋಷಿಸಲಾಯಿತು.







     ಇಲ್ಲಿ ಬೋಟಿಂಗ್, ಈಜು, ಕ್ಯಾಂಪಿಂಗ್, ಸೈಕ್ಲಿಂಗ್, ಪಿಕ್ನಿಕ್, ಚಾರಣ ಇತ್ಯಾದಿ ಚಟುವಟಿಕೆಗಳಿಗೆ ಅವಕಾಶವಿದೆ. ಅಲ್ಲಿ ೬೫ ಮೆಟ್ಟಲಿರುವ ಗೋಪುರ ಏರಿದೆವು. ಇಲ್ಲಿಂದ ಕೂಡ ವಿನ್ನೆಬಾಗೊ ಸರೋವರದ ದೃಶ್ಯ ಬಹಳ ಚೆನ್ನಾಗಿ ಕಾಣುತ್ತದೆ. ಅಲ್ಲಿ ಪಟ ಕ್ಲಿಕ್ಕಿಸ್ಕೊಂಡು ಕೆಳಗೆ ಇಳಿದೆವು. ಇಲ್ಲಿ ಚಾರಣಕ್ಕೆ ವಿಫುಲ ಅವಕಾಶಗಳಿವೆ. ಹಲವು ದಾರಿಗಳಿವೆ. ನಾವು ಇಂಡಿಯನ್ ಮೌಂಡ್ ಟ್ರಯಲ್ ದಾರಿಯಲಿ ಒಂದು ಮೈಲಿ ನಡೆದೆವು. ಅಲ್ಲಿ ಕಾಡೊಳಗೆ ಕೆಲವರು ಟೆಂಟ್ ಹಾಕಿದ್ದರು. ೧೫೦ ವರ್ಷಗಳ ಹಿಂದೆ ಸ್ಥಳೀಯ ಅಮೇರಿಕನ್ನರು ನಿರ್ಮಿಸಿದ ಸುಣ್ಣದ ಕಲ್ಲುಗಳ ಪ್ರತಿಮೆಗಳ ದಿಬ್ಬವನ್ನು ಅಲ್ಲಿ ನೋಡಿದೆವು. ಅಲ್ಲಿಂದ ಸಂಜೆ ನಾಲ್ಕು ಗಂಟೆಗೆ ನಿರ್ಗಮಿಸಿದೆವು.
    ಪ್ರವೇಶ ಸಮಯ: ವರ್ಷಪೂರ್ತಿ ಬೆಳಗ್ಗೆ ೬ರಿಂದ ರಾತ್ರೆ ೧೧ ಗಂಟೆವರೆಗೆ. ಪ್ರವೇಶ ಶುಲ್ಕವಿದೆ.

ಬಿಸಿಬುಗ್ಗೆ ಹಾರಾಟದ ನೋಟ

ರಾಕ್ ಲೆಡ್ಜ್ ಪಾರ್ಕ್ (Rock Ledge park, pArk in Seymour, WI54165 USA) 

     ನಾವು ಸಂಜೆ ೫ ಗಂಟೆಗೆ ರಾಕ್ ಲೆಡ್ಜ್ ಪಾರ್ಕಿಗೆ ಹೋದೆವು. ಅಲ್ಲಿ ಬಿಸಿ ಬುಗ್ಗೆ ಹಾರಾಟದ ಪ್ರದರ್ಶನ (ಹಾಟ್ ಬಲೂನ್) ಇತ್ತು. ಅದಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರವರೇ ತಂದ ಖುರ್ಚಿ ಹಾಕಿ ಕುಳಿತಿದ್ದರು. ನಾವೂ ನಮ್ಮ ಕುರ್ಚಿಗಳನ್ನು ಹಾಕಿ ಕುಳಿತೆವು. ತಿನ್ನಲು ಕುಡಿಯಲು ಬೇಕಾದ ಆಹಾರ ಒಂದು ಕಡೆ ಸಿಗುತ್ತಿತ್ತು. ಅಲ್ಲಿ ಸಾಕಷ್ಟು ಜನ ನೆರೆದದ್ದು ಕಾಣುತ್ತಲಿತ್ತು. ಪಿಕ್ನಿಕ್ ತಾಣವಿದು. ನಾಲ್ಕೈದು ತಂಡ ಮೈದಾನದಲ್ಲಿ ಬೃಹತ್ ಬಲೂನಿಗೆ ಬಿಸಿ ಗಾಳಿ ತುಂಬಿಸುವುದರಲ್ಲಿ ಮಗ್ನರಾಗಿದ್ದದ್ದು ಕಂಡಿತು. ಅನಿಲದ ಸಹಾಯದಿಂದ ಬುಗ್ಗೆ ಮೇಲಕ್ಕೆ ಏರುತ್ತದೆ. ಬುಗ್ಗೆ ಕೆಳಗೆ ದೊಡ್ಡದಾದ ಬುಟ್ಟಿಯಲ್ಲಿ ೨-೩ ಜನ ನಿಂತು ಬಲೂನ್ ಸಮೇತ ಮೇಲಕ್ಕೆ ಹಾರುತ್ತಾರೆ. ಹೀಗೆ ಹತ್ತಾರು ವರ್ಣರಂಜಿತ ಬುಗ್ಗೆಗಳನ್ನು ಸಂಜೆ ೭ ಗಂಟೆಗೆ ಮೇಲಕ್ಕೆ ಹಾರಿಸಿದರು. ಸ್ವಲ್ಪ ದೂರ ಸಾಗಿ ಕೆಳಗೆ ಇಳಿಸಿದರು.











      ಮತ್ತೆ ರಾತ್ರೆ ೮ ಗಂಟೆಗೆ ಕತ್ತಲಾದಮೇಲೆ ಬಲೂನಿನಲ್ಲಿ ಲೈಟ್ ಉರಿಸಿ ಬಣ್ಣಬಣ್ಣದ ಬುಗ್ಗೆಗಳು ಆಕಾಶಕ್ಕೆ ಹಾರುವುದನ್ನು ನೋಡುವುದೇ ಸೊಗಸು. ಜೀವನದಲ್ಲಿ ಒಮ್ಮೆ ನೋಡತಕ್ಕ ಪ್ರದರ್ಶನವಿದು. ಇಂಥ ದೃಶ್ಯ ಇದೇ ಮೊದಲ ಸಲ ನಾನು ನೋಡಿರುವುದು. ಹಾರಾಟ ಮುಗಿದಮೇಲೆ, ಯಾವ ರೀತಿ ಬುಗ್ಗೆಗೆ ಅನಿಲ ತುಂಬುವುದು ಇತ್ಯಾದಿ ಹತ್ತಿರದಿಂದ ತೋರಿಸಿ ವಿವರಿಸಿದರು. ಉಚಿತ ಪ್ರದರ್ಶನವಿದು. ೮.೩೦ಗೆ ನಾವು ಅಲ್ಲಿಂದ ಹೊರಟು ಅರ್ಧ ಗಂಟೆ ಪಯಣದಲಿ ಬೇಮೊಂಟ್ ಹೊಟೇಲ್ ತಲಪಿ ಅಲ್ಲಿ ತಂಗಿದೆವು. ದಿನ ಬಾಡಿಗೆ ೬೬ ಡಾಲರ್.