ಬುಧವಾರ, ಡಿಸೆಂಬರ್ 30, 2020

ದುರ್ಗಕ್ಕೆ ಭೈರವದುರ್ಗವೆ ಸಾಟಿ

ಅನವರತ ಚಾರಣ ಕೈಗೊಳ್ಳುತ್ತಿದ್ದವರಿಗೆ ದೀರ್ಘಕಾಲ ಮನೆಯೊಳಗೇ ಕೂರುವುದು ಬಲು ಕಠಿಣ ಶಿಕ್ಷೆಯೇ! ಕೊರೊನಾ ವೈರಾಣು ಹಾವಳಿಯಿಂದಾಗಿ ಇಸವಿ ೨೦೨೦ ಮರೆಯಲಾರದ ಪಾಟ ಕಲಿಸಿದೆ. ಈ ಹತ್ತು ತಿಂಗಳು ಎಲ್ಲೂ ಹೋಗಲುಸಾಧ್ಯವಾಗದೆ ಕಾಲೆಲ್ಲ ಜಡುಗಟ್ಟಿದ್ದು, ಅದನ್ನು ಸಡಿಲಗೊಳಿಸುವ ಸುದಿನ ಬಂದೇ ಬಂತು. ಇದು ಈ ವರ್ಷದ ಕೊನೆಯ ಚಾರಣ ಕೂಡ. ೨೭-೧೨-೨೦೨೦ರಂದು ಬೆಳಗ್ಗೆ ೬ ಗಂಟೆಗೆ ಮೈಸೂರಿನಿಂದ ಹೊರಟು ೧೦ ಗಂಟೆಗೆ ಭೈರವದುರ್ಗ ತಲಪಿದೆವು. ನಾವು ಒಟ್ಟು ೨೨ ಮಂದಿ (೧೦ ವರ್ಷದಿಂದ ತೊಡಗಿ, ೭೮ ವಯಸ್ಸಿನವರೆಗೆ) ಇದ್ದೆವು.
ದಾರಿ ಮಧ್ಯೆ ತಿಂಡಿ ಸೇವನೆಯಾಯಿತು. ಕೆಸ್ತೂರು ದುಂಡನಹಳ್ಳಿ ಮಧ್ಯೆ ಒಂದು ಮಾನವ ನಿರ್ಮಿತ ನೀರಿಲ್ಲದ ಕೆರೆ ಇದೆ. ಅದರ ಸುತ್ತ ಹೂ ಗಿಡ, ಅಲಂಕಾರಿಕ ಸಸ್ಯ ಬೆಳೆಸಿ, ಅಲ್ಲಲ್ಲಿ ಸಿಮೆಂಟ್ ಬೆಂಚು ಹಾಕಿದ್ದಾರೆ. ಸ್ಠಳ ಬಹಳ ಚೊಕ್ಕವಾಗಿದೆ. ತಿಂಡಿ ಊಟ ಮಾಡಲು ಪ್ರಶಸ್ತವಾದ ಸ್ಠಳ. ಜಲಭಾಧೆ ತೀರಿಸಿಕೊಳ್ಳಲು ಪಾಯಿಖಾನೆ ಇದೆ. ಕಸ ಹಾಕಲು ತೊಟ್ಟಿಯೂ ಇದೆ. ಉಸ್ತುವಾರಿಗೆ ಕಾವಲುಗಾರ ಇದ್ದಾನೆ. ರಸ್ತೆ ಹೆದ್ದಾರಿ ಕಾಮಗಾರಿ ವೇಳೆಯಲ್ಲಿ ರಸ್ತೆ ಗುತ್ತಿಗೆದಾರನ ಮುತುವರ್ಜಿಯಿಂದ ಈ ಕೆರೆ ನಿರ್ಮಿಸಿದ್ದಂತೆ. ತಿಂಡಿ ತಿಂದು ಬುತ್ತಿಗೆ ಮಧ್ಯಾಹ್ನದ ಊಟವನ್ನು ಹಾಕಿಸಿಕೊಂಡು ಹೊರಟೆವು.
(ಬೆಂಗಳೂರಿನ ಸುತ್ತಮುತ್ತ ಕೆಂಪೇಗೌಡರು ೯ ದುರ್ಗ ಕಟ್ಟಿಸಿದ್ದರಂತೆ. ಆ ನವದುರ್ಗಗಳು, ೧) ನಂದಿ ದುರ್ಗ (೪೮೫೧ ಅಡಿ) ೨) ಮಾಕಳಿದುರ್ಗ (೩೬೬೪ ಅಡಿ) ೩)ಚನ್ನರಾಯನ ದುರ್ಗ ( ೩೯೪೦ ಅಡಿ) ೪) ದೇವರಾಯನ ದುರ್ಗ ( ೩೭೪೩ ಅಡೀ) ೫)ಭೈರವದುರ್ಗ (೨೩೦೦ ಅಡಿ) ೬) ಹುಲಿಯೂರು ದುರ್ಗ(೨೭೭೨ ಅಡಿ) ೭) ಸಾವನದುರ್ಗ(೧೨೨೬ ಅಡಿ) ೮)ಕಬ್ಬಾಲದುರ್ಗ(೩೬೦೦ ಅಡಿ) ೯) ಹುತ್ರಿ ದುರ್ಗ( ೨೭೦೦ ಅಡಿ) (ಇವುಗಳಲ್ಲಿ ೫ ದುರ್ಗಗಳನ್ನು ಏರುವ ಭಾಗ್ಯ ನನಗೆ ಲಭಿಸಿದೆ.) ಶೈವಗುರು ಗಗನದಾರ್ಯರು ಶಿವೈಕ್ಯರಾದ ಸ್ಥಳವೇ ಭೈರವದುರ್ಗ ಎಂಬುದು ಪ್ರತೀತಿ. ಚಾರಣಿಗರಿಗೆ ಹತ್ತಲು ಅತ್ಯಂತ ಸಂತೋಷ ತರುವ ಬೆಟ್ಟವಿದು. ಮಾಗಡಿ ಮತ್ತು ಹುಲಿಕಲ್ ನಡುವೆ ಇರುವ ಏಕಶಿಲಾ ಬೆಟ್ಟವೇ ಕುದೂರಿನ ಭೈರವದುರ್ಗ. ಕೆಂಪೇಗೌಡರ ಸೇನಾ ನೆಲೆಯಾಗಿದ್ದ ಈ ಬೆಟ್ಟ ಸಮುದ್ರಮಟ್ಟದಿಂದ ಸುಮಾರು ೩೦೦೦ ಮೀಟರು (೨೩೦೦ ಅಡಿ) ಎತ್ತರದಲ್ಲಿದೆ. ಕ್ರಿ.ಶ. ೧೭ನೇ ಶತಮಾನದಲ್ಲಿ ಇಲ್ಲಿ ಕೋಟೆಯನ್ನು ನಿರ್ಮಿಸಲಾಗಿದೆ. ಅದರ ಅವಶೇಷವನ್ನು ಅಲ್ಲಿ ಈಗ ಕಾಣಬಹುದಾಗಿದೆ. (ಮಾಹಿತಿ ಕೃಪೆ: ಅಂತರ್ಜಾಲ) ನಮ್ಮ ಚಾಲಕ ನಿಧಾನವೇ ಪ್ರಧಾನದವ. ಹಾಗಾಗಿ ಸಾವಕಾಶವಾಗಿಯೇ ನಾವು ೧೦.೧೫ಕ್ಕೆ ಭೈರವ ದುರ್ಗದ ಬುಡ ತಲಪಿದೆವು. ಮುಖ್ಯ ರಸ್ತೆಯಿಂದ ತಿರುಗುವ ಸ್ಥಳದಲ್ಲಿ ಭೈರವೇಶ್ವರ ದೇವಾಲಯ ಎಂಬ ಫಲಕವಿರುವ ದೊಡ್ಡ ಕಮಾನು ಇದೆ.
ಸಾಮಾನ್ಯವಾಗಿ ಆಯೋಜಕರು ಪೂರ್ವಭಾವಿಯಾಗಿ ಸ್ಠಳೀಯರ ನೆರವಿನಿಂದ ಬೆಟ್ಟ ಏರಿ ನೋಡಿ ಬರುತ್ತಾರೆ. ಆದರೆ ಈ ಸಲ ಆ ಕೆಲಸ ಮಾಡದೆಯೇ ಗೂಗಲಿನಲ್ಲಿ ಜಾಲಾಡಿ ಮಾಹಿತಿ ಸಂಗ್ರಹಿಸಿ ಧೈರ್ಯವಾಗಿ ಗುಂಪನ್ನು ಹೊರಡಿಸಿದ್ದರು. ಹಾಗಾಗಿ ಮಾರ್ಗದರ್ಶಕರಿಲ್ಲದೆ ಹೋಗಲು ಸಾಧ್ಯವಿಲ್ಲವೆಂದು ಅಲ್ಲೇ ಆಟವಾಡುತ್ತಿದ್ದ ಸ್ಥಳೀಯ ಇಬ್ಬರು ಹುಡುಗರನ್ನು ವಿಚಾರಿಸಿದರು. ಹುಡುಗರೇನೋ ಬರಲೊಪ್ಪಿದರು. ಆದರೆ ಅರ್ಧ ದಾರಿ ಮಾತ್ರ. ಮೇಲೆ ಬರಲು ನಮ್ಮಜ್ಜಿ ಬಿಡುವುದಿಲ್ಲ. ಸೂತಕ ಇದೆ ಎಂದರು. ಇನ್ನೊಬ್ಬ ಬಂದು ಮೇಲೆವರೆಗೆ ದಾರಿ ತೋರುತ್ತೇನೆಂದೊಪ್ಪಿದವನೇ ದಯಾನಂದ. ಈಗ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವನು. ಮಿತಭಾಷಿ. ನಮ್ಮ ತಂಡದ ಪರಸ್ಪರ ಪರಿಚಯ ವಿನಿಮಯ ಮಾಡಿಕೊಂಡು ಮುಂದುವರಿದೆವು. ಮುಂದೆ ದಯಾನಂದ, ಹಿಂದೆ ಇನ್ನಿಬ್ಬರು ಹುಡುಗರು ಮಧ್ಯೆ ನಾವು ಸಾಗಿದೆವು. ಅಲ್ಲೇ ಬಯಲಲ್ಲಿ ಒಂದಷ್ಟು ಯುವಕರು ಕ್ರಿಕೆಟ್ ಆಡುತ್ತಿದ್ದರು. ರಾಕ್ಲೈನ್ ವೆಂಕಟೇಶ್ ಅವರ ಇಬ್ಬರು ಮಕ್ಕಳು ಇದ್ದಾರೆ. ಅಲ್ಲಿ ಕಾಣುವ ತೋಟ ಅವರದೇ ಎಂಬ ಮಾಹಿತಿ ಭಿತ್ತರವಾಯಿತು! ಭೈರವೇಶ್ವರ ದೇವಾಲಯಕ್ಕೆ ಹೋಗಲು ಇರುವ ಮೆಟ್ಟಲಿನ ಎಡಭಾಗದಲ್ಲಿ ಬೆಟ್ಟಕ್ಕೆ ತೆರಳಲು ದಾರಿ. ಆದರೆ ಈ ಹುಡುಗರು ನಮ್ಮನ್ನು ಇನ್ನೊಂದು ದಾರಿಯಲ್ಲಿ ಕರೆದೊಯ್ದರು. ಮೊದಲಿಗೆ ಕುರುಚಲು ಸಸ್ಯ, ಪೊದೆಗಳ ಮಧ್ಯೆ ತೆರಳಿದೆವು. ಹುಲ್ಲು ಮನುಷ್ಯರಿಗಿಂತ ಎತ್ತರವಾಗಿ ಬೆಳೆದದ್ದು ನೋಡುವಾಗ ಈ ಬೆಟ್ಟಕ್ಕೆ ಯಾರೂ ಇತ್ತೀಚೆಗೆ ಕಾಲಿಟ್ಟಿಲ್ಲವೆಂದು ಭಾವಿಸಬಹುದು. ಅಲ್ಲಿ ದಾರಿ ಇದೆಯೆಂದೇ ಗೊತ್ತಾಗುತ್ತಿರಲಿಲ್ಲ. ಅಜ್ಜಿ ತಾತಂದಿರು ನಿಧಾನಕ್ಕೆ ಬನ್ನಿ ಎಂದು ಆ ಹುಡುಗರು ಆಗಾಗ ಎಚ್ಚರಿಸಿದ್ದರು!

ಮುಂದೆ ಏರುಮುಖವಾಗಿ ಬಂಡೆ ಹತ್ತಬೇಕು. ಬೃಹತ್ ಬಂಡೆ. ಮೆಟ್ಟಲು ಇಲ್ಲ. ಬಗ್ಗಿ ಎದ್ದು ಬಂಡೆ ಏರಿದೆವು. ಮುಂದೆ ಇದ್ದರವ ಬಳಿ ಒಂದು ವಾಕಿಟಾಕಿ, ಹಿಂದೆ ಇದ್ದವರ ಬಳಿ ಇನ್ನೊಂದು ವಾಕಿಟಾಕಿ. ಅದರಲ್ಲಿ ಮಾತಾಡುತ್ತ, ಎಷ್ಟು ಹಿಂದೆ ಇದ್ದೀರಿ ಎಂದು ವಿಚಾರಿಸುತ್ತ, ಹಿಂದಿನವರಿಗೆ ಅಲ್ಲೇ ಕೂತು ಕಾಯುತ್ತ, ಅವರ ತಲೆ ಕಂಡದ್ದೇ ಮುಂದುವರಿಯುತ್ತ ಸಾಗಿದೆವು. ಚಾರಣದ ತೃಪ್ತಿಯ ಅನುಭವ ಈ ಬಂಡೆ ಏರಿದಾಗ ಲಭಿಸಿತು. ಏರಲು ಭಯಪಡುವವರನ್ನು ಕೈಹಿಡಿದು ಹತ್ತಿಸುತ್ತ, ಮತ್ತು ಕೆಲವರಿಗೆ ದಯಾ ದಯೆ ತೋರಿ ಅವರನ್ನು ಮೇಲೆ ಕರೆತಾರಪ್ಪ ಎಂದು ದಯಾನಂದನಿಗೆ ವಿನಂತಿಸುತ್ತ ನಡೆದೆವು. 


 ೧೦.೫೦ಕ್ಕೆ ಹೊರಟು ಬೆಟ್ಟದ ತುದಿ ತಲಪಿದಾಗ ೧೨.೩೦ ಆಗಿತ್ತು. ಮೇಲೆ ಮೂರು ಬೃಹತ್ ಬಂಡೆಗಳು ಪಕ್ಕ ಪಕ್ಕ ನಿಂತಿವೆ. ಬೆಟ್ಟದಲ್ಲಿ ಎರಡು ಬಂಡೆಗಳ ನಡುವೆ ಮಳೆನೀರು ಸಂಗ್ರಹಕ್ಕೆ ಕೈಗೊಂಡ ಒಂದು ದೊಣೆಯೂ ಇದೆ. ಅದರಲ್ಲಿ ಈಗ ನೀರು ಇದೆ. ಅದಕ್ಕೆ ಇಳಿಯಲು ಮೆಟ್ಟಲುಗಳಿವೆ. ಬಂಡೆಗಳು ಕೂಡಿಕೊಳ್ಳಬಾರದೆಂದು ಮಧ್ಯೆ ದೊಡ್ಡ ಬಂಡೆಯನ್ನು ಅಡ್ಡಲಾಗಿ ಇರಿಸಿದ ಅದರ ಹಿಂದಿರುವ ಯೋಜನೆಯ ಜಾಣ್ಮೆ ಮೆಚ್ಚತಕ್ಕದ್ದು. ಕೆಲವರು ಕೆಳಗೆ ಇಳಿದು ನೀರು ಮುಖಕ್ಕೆ ಸೋಕಿಸಿಕೊಂಡರು.

 
 ಬೆಟ್ಟದ ಮೇಲೆ ಬಂಡೆಗಳ ನಡುವೆ ತಂಪಾದ ವಾತಾವರಣದಲ್ಲಿ ಕೂತು, ನಿಂತು ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ನೋಡಿದಾಗ ಇದುವೆ ಸ್ವರ್ಗ ಎಂಬ ಭಾವ ಮೂಡುತ್ತದೆ. ಕಷ್ಟಪಟ್ಟು ಬೆಟ್ಟ ಏರಿದ್ದರ ಫಲ ಈ ಸುಖ. ಬೆಟ್ಟದ ತುದಿಯಲ್ಲಿ ವೃತ್ತಾಕಾರದ ಬಂಡೆಯ ಮಧ್ಯೆ ಪುಟ್ಟ ಪಾದ, ಹದಾ ಪಾದ, ದೊಡ್ಡ ಪಾದ ಹೀಗೆ ಮೂರು ಪಾದಗಳ ಗುರುತು ಇದೆ. ಇದು ಏನು? ಎಂದು ದಯಾನಂದನನ್ನು ಕೇಳಿದೆ. ಇದು ಆಂಜನೇಯನ ಪಾದದ ಗುರುತು ಎಂದುತ್ತರ ಕೊಟ್ಟ.



ತಂದಿದ್ದ ಬುತ್ತಿ ತೆರೆದು ಊಟ ಮಾಡಿದೆವು. ೨.೩೦ ವರೆಗೂ ಅಲ್ಲೇ ಕುಳಿತು ಹರಟೆ ಹೊಡೆದೆವು. ಎತ್ತರದ ಬಂಡೆಯನ್ನು ಕೆಲವರು ಏರಿದರು. ಅಲ್ಲಿ ಭುವನೇಶ್ವರಿಯ ಚಿತ್ರವಿದೆ. ನವೆಂಬರ ಒಂದರಂದು ಆ ಬಂಡೆ ಏರಿ ಬಾವುಟ ಹಾರಿಸುತ್ತಾರೆಂದು ದಯಾನಂದ ಹೇಳಿದ. ನಾನೂ ಪ್ರಯತ್ನಪಟ್ಟೆ. ಧೈರ್ಯ ದಯೆ ತೋರದೆ, ಕಾಲು ಮೇಲೇರಲು ಸಹಕರಿಸಲಿಲ್ಲ! ಅಲ್ಲಿಯ ಬಂಡೆಗಲ್ಲುಗಳಲ್ಲಿ ಹೂ ಸಾಕಷ್ಟು ಇತ್ತು. ಅವುಗಳಲ್ಲಿ ಬಹಳ ಕ್ಯಾಲ್ಸಿಯಂ ಇರುತ್ತವಂತೆ. ಗ್ರಂದಿಗೆ ಅಂಗಡಿಯಲ್ಲಿ ಸಿಗುತ್ತವಂತೆ್. ಬಹಳ ಕ್ರಯವಿದೆ ಎಂಬ ಮಾಹಿತಿ ಸಿಕ್ಕಿತು. ಅಲ್ಲಿಯ ಬಂಡೆಗಳಲ್ಲಿ ಕೈತುರಿಕೆಯವರ ಕುರುಹು ಕಂಡೆವು.
 
ತಂಡದ ಪಟ ತೆಗೆಸಿಕೊಂಡು ನಿಧಾನವಾಗಿ ಬೆಟ್ಟ ಇಳಿಯಲು ತೊಡಗಿದೆವು.
ನಮ್ಮ ಮಾರ್ಗದರ್ಶಕ ದಯಾನಂದ ತುರ್ತು ಕೆಲಸವಿದೆ ಎಂದು ಹೋಗಿ ಆಗಿತ್ತು. ಅವನಿಗೆ ರೂ. ೫೦೦ ಭಕ್ಷೀಸು ಕೊಟ್ಟು ಕಳುಹಿಸಿದರು. ವಾಪಾಸು ಹೋಗಲು ದಾರಿ ಗೊತ್ತಾಗಬಹುದೆ? ಎಂಬ ಭಾವನೆ ಬಂತು. ನಮ್ಮ ತಂಡದ ತರುಣ ನಂದೀಶ ಮೊದಲಿಗೆ ಇಳಿದು ಸರಿಯಾದ ದಾರಿ ತೋರಿದ. ಬಂಡೆಗಲ್ಲನ್ನು ಇಳಿಯುವಾಗ ಕೂತು ಎರಡೂ ಕೈಗಳ ರೆಟ್ಟೆಗೆ ಬಲ ಕೊಟ್ಟು ಜಾರಿ ಇಳಿದೆವು. (ಆ ನೋವು ಒಂದು ದಿನ ಜೋರಾಗಿ ಬೆಟ್ಟದ ನೆನಪನ್ನು ಮಾಡಿಸಿತ್ತು!) ನಾವು ಒಂದಷ್ಟು ಮಂದಿ ಅಲ್ಲಲ್ಲಿ ನಿಲ್ಲುತ್ತ, ಸಂಜೆ ನಾಲ್ಕು ಗಂಟೆಗೆ ಕೆಳಗೆ ಇಳಿದೆವು. ೪.೩೦ಗೆ ಎಲ್ಲರೂ ಸುರಕ್ಷಿತವಾಗಿ ಕೆಳಗಿಳಿದರು.
  ಭೈರವೇಶ್ವರ ದೇಗುಲ 
 ಅಲ್ಲಿಂದ ನಾವು ಭೈರವೇಶ್ವರ ದೇವಾಲಯಕ್ಕೆ ಹೋದೆವು. ಸುಮಾರು ೧೫೦ ಮೆಟ್ಟಲು ಹತ್ತಬೇಕು. ಹೊಸದಾಗಿ ಕಟ್ಟಿದ ಸುಮಾರು ೫೦ ಮೆಟ್ಟಲಿನ ಅಂತರ ಬಹಳ ಕಡಿಮೆ ಇದೆ. ಬಂಡೆಯಲ್ಲಿ ಜೇನುಹುಳಗಳು ಹಾರಾಡುವುದು ಕಂಡಿತು. ನಮ್ಮ ತಲೆಯಿಂದ ಸಾಕಷ್ಟು ಎತ್ತರದಲ್ಲಿ ಹಾರಿದ್ದರಿಂದ ಭಯವೇನೂ ಇರಲಿಲ್ಲ. ಬಂಡೆಯಡಿಯಲ್ಲಿ ದೇವಾಲಯ ಕಾಣುತ್ತದೆ. ಬಂಡೆಯೇ ಶಿವಲಿಂಗಕ್ಕೆ ಛಾವಣಿ. ದೇವಾಲಯದ ಎದುರು ಭಾಗದಲ್ಲಿ ಕಟ್ಟಡ ಕಟ್ಟಿದ್ದಾರೆ. ಆದರೆ ಬಾಗಿಲು ಇಲ್ಲ. ಎಷ್ಟು ಹೊತ್ತಿಗೆ ಯಾರು ಬೇಕಾದರೂ ದೇವರ ದರ್ಶನ ಪಡೆಯುಬಹುದು! ನಾವು ಭೇಟಿ ಇತ್ತ ಸಮಯದಲ್ಲಿ ಬೆಳಗ್ಗೆ ದೇವರ ಪೂಜೆ ಮಾಡಿದ ಕುರುಹಾಗಿ ಸಾಕಷ್ಟು ಹೂವು ಹಾಕಿ ಅಲಂಕಾರ ಮಾಡಿದ್ದರು. ದೇವಾಲಯದೊಳಗೆ ಬೃಹತ್ ಕಾಣಿಕೆ ಡಬ್ಬಿ ಇದೆ. ಕಳ್ಳರ ಗಮನ ಅತ್ತ ಹೋಗಲಿಲ್ಲವೋ? ಅಥವಾ ಹುಂಡಿ ಎದುರು ಇರುವ ನಾಗನ ಚಿತ್ರದ ಹೆದರಿಕೆಯೊ ಗೊತ್ತಿಲ್ಲ.
ಅಲ್ಲಿ ತುಸು ಹೊತ್ತು ಕುಳಿತು, ಮೆಟ್ಟಲಿಳಿದು ಬಂದು ಸಂಜೆ ೬ ಗಂಟೆಗೆ ಬಸ್ ಹತ್ತಿದೆವು. ಆಗ ಶೋಭಕ್ಕ, ಅಯ್ಯೊ ನನ್ನ ಬಿದಿರಿನ ಕೋಲು ಅಲ್ಲೇ ಮೆಟ್ಟಲು ಬಳಿ ಬಾಕಿ. ಕೋಲು ಬೇಕೇ ಬೇಕು. ಚಾರಣದ ಸಂಗಾತಿ ಅದು. ಹೋಗಿ ತರುತ್ತೇನೆ ಎಂದು ಬಸ್ ಇಳಿದರು. ನಮ್ಮ ಬಸ್ ಇದ್ದ ಜಾಗದಿಂದ ಅಲ್ಲಿಗೆ ಸುಮಾರು ೧ಕಿಮೀ ಇರಬಹುದು. ಬೆಂಗಳೂರಿನಿಂದ ಕಾರಿನಲ್ಲಿ ಬಂದವರು, ಕಾರಿನಲ್ಲಿ ಅಲ್ಲಿಗೆ ಹೋಗಿ ಶೋಭಕ್ಕನ ದೊಣ್ಣೆ ತಂದು ಕೊಟ್ಟು ಉಪಕರಿಸಿದರು. ಶೋಭಕ್ಕ ನಿಧಿ ಸಿಕ್ಕಂತೆ ಅದನ್ನು ಜೋಪಾನವಾಗಿ ಇಟ್ಟುಕೊಂಡರು! ನೆಲಮಂಗಲ ರಸ್ತೆಯಲ್ಲಿ ಸಾಗಿದಾಗ, ಬೆಂಗಳೂರಿಗೆ ಹೋಗುವ ಸಾಲು ಸಾಲು ಕಾರುಗಳನ್ನು ನೋಡಿ ದಂಗಾದೆವು. ರಾತ್ರೆ ೭.೪೫ಕ್ಕೆ ಮದ್ದೂರಿನ ಶಿವಲೀಲಾ ಹೊಟೇಲಿನಲ್ಲಿ ಮಸಾಲೆದೋಸೆ ಕಾಫಿ ಸೇವನೆಯಾಗಿ ಮೈಸೂರು ತಲಪುವಾಗ ರಾತ್ರೆ ೯.೪೫ ಆಗಿತ್ತು. ಚಾರಣದಾಟ ಯಶಸ್ವಿಯಾಗಿ ಮುಗಿದಿತ್ತು. ಚಾರಣ ಶುಲ್ಕ: ರೂ. ೧೦೦೦/- ಬೆಳಗ್ಗೆ ಚಹಾ, ತಿಂಡಿಗೆ ಪೊಂಗಲ್ ಕೇಸರಿಭಾತ್, ಬೆಟ್ಟ ಹತ್ತಲು ಶಕ್ತಿವರ್ಧಕಕಳಾಗಿರುವ ಕಿತ್ತಳೆ, ಸೌತೆಕಾಯಿ, ಕಡ್ಲೆಚಿಕ್ಕಿ, ಮಧ್ಯಾಹ್ನ ಊಟಕ್ಕೆ ಬಿಸಿಬೇಳೆಭಾತ್, ಬೂಂದಿ, ಮೊಸರನ್ನ, ರಾತ್ರೆ ಮಸಾಲೆದೋಸೆ, ಕಾಫಿ. ಹೊಟ್ಟೆಯಂತೂ ಪುಷ್ಟಿ! ಹೋಗುವ ದಾರಿ: ಮೈಸೂರಿನಿಂದ ೧೩೫ಕಿಮೀ ದೂರ. ಮೈಸೂರು-ಮಂಡ್ಯ-ಮದ್ದೂರು- ಕುಣಿಗಲ್-ಅಂಚೆಪಾಳ್ಯ-ಪರ್ವತಪುರ(ಬಾಯ್ಸ್ ಹಾಸ್ಟೆಲ್) ಬೆಂಗಳೂರಿನಿಂದ ಸುಮಾರು ೬೨ಕಿಮೀ. ಬೆಂಅಗಳೂರು-ತುಮಕೂರು ರಸ್ತೆ- ನೆಲಮಂಗಲ ಬೈಪಾಸ್- ಮಂಗಳುರು ರಸ್ತೆ- ಸೋಲೂರು- ಮರೂರು ಹ್ಯಾಂಡ್ಪೋಸ್ಟ್-ಕುದೂರು ಯೂಥ್ ಹಾಸ್ಟೆಲ್ ಮೈಸೂರಿನ ಗಂಗೋತ್ರಿ ಘಟಕದ ವತಿಯಿಂದ ಸುಬ್ರಹ್ಮಣ್ಯ ಈ ಚಾರಣ ಹಮ್ಮಿಕೊಂಡು ಯಶಸ್ವಿಯಾಗಿ ಪೂರೈಸಿದರು. ಅವರಿಗೆ ಮುನೀಶ್ ಸಹಕಾರ ಕೊಟ್ಟರು. ನಮ್ಮ ತಂಡದ ಪರವಾಗಿ ಅವರಿಗೆ ಧನ್ಯವಾದ.