ಶುಕ್ರವಾರ, ಸೆಪ್ಟೆಂಬರ್ 8, 2017

ಮಳೆಯ ಜೊತೆಯಲಿ ಮಳೆ ಮಲ್ಲೇಶ್ವರಬೆಟ್ಟಕ್ಕೆ ಚಾರಣ

     ಕೊಡಗುಜಿಲ್ಲೆಯಲ್ಲಿ ಸುಂದರವಾದ ಸಾಕಷ್ಟು ಬೆಟ್ಟಗಳಿವೆ. ಸೋಮವಾರಪೇಟೆ ತಾಲೂಕಿನ, ಮಾಲಂಬಿ ಗ್ರಾಮದಲ್ಲಿರುವ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಹೋಗುವ ಸಲುವಾಗಿ ನಾವು ೨೩ ಮಂದಿ ಮಿನಿ ಬಸ್ಸಿನಲ್ಲಿ ೨೭-೮-೧೭ರಂದು ೬ ಗಂಟೆಗೆ ಮೈಸೂರಿನಿಂದ ಸರಿಯಾದ ಸಮಯಕ್ಕೆ ಹೊರಟೆವು. ೭.೪೫ಕ್ಕೆ ಕುಶಾಲನಗರ ತಲಪಿ ಅಲ್ಲಿ ಬೈಪಾಸ್  ರಸ್ತೆಯ ಮೈಲಾರ್ ಕೆಫೆಯಲ್ಲಿ  ಇಡ್ಲಿ, ವಡೆ, ಕಾಫಿಯಾಗಿ ಹೊರಡುವಾಗ ೮.೪೫. ಬಿ.ಪಿ. ಕೃಷ್ಣಮೂರ್ತಿ ಹಾಗೂ ಬಿ.ಪಿ. ಶ್ರೀನಾಥ ತಮ್ಮ ಮನೆಯಲ್ಲೇ  ಶುಚಿಯಾಗಿ ಆಹಾರ ತಯಾರಿಸುತ್ತಾರೆ. ಅವರ ಸಂಪರ್ಕ ಸಂಖ್ಯೆ 7899974445, 9060190603 ಸೋಮಾವಾರಪೇಟೆ-ಗೋಣಿಮರೂರು-ಬಾಣಾವರ- ಆಲೂರು ಸಿದ್ದಾಪುರ ಹಾದು ಮಾಲಂಬಿ ತಲಪುವಾಗ ಗಂಟೆ ೧೦ ದಾಟಿತ್ತು. ನಮ್ಮ ಬಸ್ಸಿನ ಚಾಲಕ ಕೊಡಗಿನವರೇ. ಈ ದಾರಿಯಲ್ಲಿ ಬಂದು ಸುಮಾರು ೨೦ಕಿಮೀ ಸುತ್ತು ಬಳಸಿ ಬಂದಾಗಾಯಿತು ಎಂದು ಹೇಳಿದರು. 

    ಅಲ್ಲಿ ನಾವೆಲ್ಲ ಸ್ವ ಪರಿಚಯ ಮಾಡಿಕೊಂಡು ಸೌತೆಕಾಯಿ, ಕ್ಯಾರೆಟ್ ಪಡೆದು ಹೊರಡುವಾಗ ೧೦.೩೦. ಮಾಲಂಬಿ ಊರಿನಿಂದ ಮಳೆ ಮಲ್ಲೇಶ್ವರ ದೇವಾಲಯ ಎಂಬ ಫಲಕ ಇರುವಲ್ಲಿ ಬಲಕ್ಕೆ ಡಾಮರು ರಸ್ತೆಯಲ್ಲಿ ಸಾಗಿದೆವು. ದೂರದಲ್ಲಿ ಹಸುರು ಹೊದ್ದ ದೇವಾಲಯವಿರುವ ಬೆಟ್ಟ ಕಾಣುತ್ತಲಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಕಾಫಿ ತೋಟ. ಹಸಿರು ತೋಟದ ಮಧ್ಯೆ ಹಕ್ಕಿಗಳ ಕಲರವ ಕೇಳುತ್ತ, ಚಿಟ್ಟೆಗಳ ನರ್ತನ ನೋಡುತ್ತ, ಮಾತಿನ ರಸಧಾರೆ ಹರಿಸುತ್ತ, ತಲೆಮೇಲೆ ಬಿಸಿಲಿಲ್ಲದೆ ನಡೆಯುವುದೇ ಸೊಗಸು. ಮೋಡದ ಮರೆಯಲ್ಲೇ ಇದ್ದು ಭಾನು ನಮಗೆ ಬಹಳವಾಗಿ ಸಹಕರಿಸಿದ್ದ. ನಮ್ಮೊಡನೆ ಒಂದು ನಾಯಿಯೂ ಜೊತೆಗೂಡಿತ್ತು. ಅದು ಮುಂದೆ ಮುಂದೆ ಹೋದಾಗ, ನಾವು ಬರದೆ ಇರುವುದು (ನಾವು ಅಲ್ಲಲ್ಲಿ ನಿಂತು ನಿಧಾನವಾಗಿ ನಡೆಯುತ್ತಲಿದ್ದೆವು) ಕಂಡಾಗ ವಾಪಾಸು ಹಿಂದಕ್ಕೆ ಬಂದು ನಮ್ಮೊಡನೆ ಅಲ್ಲೇ ನಿಲ್ಲುತ್ತಲಿತ್ತು. ನಾವು ಮುಂದೆ ಹೆಜ್ಜೆ ಹಾಕಿದಮೇಲೆ ಅದೂ ಮುನ್ನಡೆಯುತ್ತಲಿತ್ತು! ಕೆಲವು ಊರುಗಳಲ್ಲಿ ನಾಯಿಯೊಂದು ನಮ್ಮೊಡನೆ ಬೆಟ್ಟದ ತುದಿ ತನಕ ಬರುತ್ತಲಿದ್ದುದನ್ನು ಸುಮಾರು ಕಡೆ ಬೆಟ್ಟ ಹತ್ತುವಾಗ ಗಮನಿಸಿರುವೆ. 


    ಒಂದೆರಡು ಕಿಮೀ ಮಾತ್ರ ಡಾಂಬರು ರಸ್ತೆ. ಮತ್ತೆ ಮಣ್ಣು ರಸ್ತೆ. ಮಳೆಗೆ ಕೆಲವು ಕಡೆ ಕೆಸರಿನ ಹೊಂಡಗಳಾಗಿತ್ತು. ಕೆಲವೆಡೆ ಕಾಲಿಟ್ಟರೇ ಜಾರುತ್ತಲಿತ್ತು. ಎಚ್ಚರದಿಂದ ರಸ್ತೆಯಲ್ಲಿ ಎಲ್ಲಿ ಕಾಲಿದಬಹುದು ಎಂದು ನೋಡಿ ನಡೆಯಬೇಕಿತ್ತು. ನೋಡದೆ ಒಬ್ಬರು ಜಾರಿ ಬಿದ್ದು ಬಟ್ಟೆ ಎಲ್ಲ ಮಣ್ಣು ಮಾಡಿಕೊಂಡಿದ್ದರು. ರಸ್ತೆಯುದ್ದಕ್ಕೂ ಸುತ್ತಲೂ ನೂರಾರು ಎಕರೆ ಕಾಫಿ ತೋಟವಿದೆ. ಅದರ ಮಾಲೀಕರು ಬೆಂಗಳೂರಿನಲ್ಲಿದ್ದಾರಂತೆ. ಆ ತೋಟದ ನಿರ್ವಾಹಕರು ಮಾತಾಡಿಸಿದರು. ಆ ರಸ್ತೆಯಲ್ಲಿ ಮಳೆಗಾಲದಲ್ಲಿ ಮಾತ್ರ ವಾಹನ ಹೋಗುವುದಿಲ್ಲವಂತೆ. ಬಾಕಿ ಸಮಯದಲ್ಲಿ ಅವರ ಜೀಪ್ ಓಡಾಟ ಇದೆಯಂತೆ. 

    ಮೂರು ನಾಲ್ಕು ಕಿಮೀ ಸಾಗಿಯಾಗುವಾಗ ತುಂತುರು ಮಳೆ ಸುರುವಾಯಿತು. ಕೆಲವರೆಲ್ಲ ಮಳೆಯಲ್ಲಿ ನೆನೆಯುವ ಆನಂದ ಅನುಭವಿಸಿದರು. ನಾವು ಕೆಲವರು ಮಳೆ‌ಅಂಗಿ ಧರಿಸಿ (ಕ್ಯಾಮರಾ ಕಾಪಾಡುವ ಸಲುವಾಗಿ) ನಡೆದೆವು. ಮತ್ತೆ ದಟ್ಟಮಂಜು ಆವರಿಸಿತು. ಮುಂದೆ ನಮಗೆ ಏನೂ ಕಾಣಿಸುತ್ತಿರಲಿಲ್ಲ. ಪ್ರಕೃತಿಯ ಈ ವಿಸ್ಮಯವನ್ನು ಕಣ್ಣಾರೆ ನೋಡುತ್ತ ಮಂಜಿಗೆ ಮುಖ ಒಡ್ಡಿ ಆನಂದಿಸಿದೆವು. ಯಾರೊ ಒಬ್ಬರು ಹುರಿದ ಸಾಬಕ್ಕಿ ಕೊಟ್ಟರು. ಆಗ ಅದು ಬಲು ರುಚಿಯೆನಿಸಿ ಪದೇ ಪದೇ ಅವರ ಮುಂದೆ ಕೈ ಒಡ್ಡಿದೆವು! 
  ಸುಮಾರು ೫ಕಿಮೀ ಸಾಗಿದಾಗ ದೇವಾಲಯಕ್ಕೆ ಹೋಗಲು ಸುಮಾರು ೧೦೦ ಮೆಟ್ಟಲುಗಳೆದುರಾದುವು. ಅಲ್ಲಿ ಮಂಜು ಮುಸುಕಿದ ವಾತಾವರಣವನ್ನು ನೋಡುತ್ತ ತುಸು ವಿರಮಿಸಿದೆವು. ಮೆಟ್ಟಲು ಏರಿ ದೇವಾಲಯ ತಲಪಿದೆವು. ದೇವಾಲಯ ಬಾಗಿಲು ಹಾಕಿತ್ತು. ಬಾಗಿಲ ಸಂದಿಯಲ್ಲಿ ಶಿವಲಿಂಗ ಮತ್ತು ಉದ್ಭವ ಕಲ್ಲು ಕಂಡಿತು.  ಪ್ರತೀ ಸೋಮಾವಾರ ಮಾತ್ರ ಪೂಜೆ ನಡೆಯುತ್ತದಂತೆ. ನಾವು ಅಲ್ಲಿ ತಲಪುವಾಗ ಗಂಟೆ ೧ ಆಗಿತ್ತು. ಎಲ್ಲರ ಹೊಟ್ಟೆ ತಾಳ ಹಾಕಲು ಸುರುಮಾಡಿತ್ತು. ‘ಈಗ ಬಿಸಿಬಿಸಿ ಅನ್ನ ಸಾರು, ಅದರ ಮೇಲೆ ತುಪ್ಪ ಇದ್ದರೂ ಆದೀತು. ಒಂದೆರಡು ಸಂಡಿಗೆ, ಬಾಳ್ಕ ಮೆಣಸು ಇದ್ದರೆ. . . . . . . ಆಹಾ ಅದರ ಸವಿ ವರ್ಣಿಸಲು ಸಾಧ್ಯವಿಲ್ಲ’ ಎಂದು ಕಿಣಿ ರಸವತ್ತಾಗಿ ಹೇಳುವಾಗ ನಾವು ಕಲ್ಪನೆಯಲ್ಲೆ ಆ ಊಟ ಸವಿದು ತೃಪ್ತಿ ಪಟ್ಟೆವು!   ದೇವಾಲಯದಲ್ಲಿ ಒಬ್ಬಟ್ಟು, ತುಪ್ಪ, ಚಿಕ್ಕಿ ತಿಂದು ಹಸಿದ ಹೊಟ್ಟೆಯನ್ನು ತೃಪ್ತಿ ಪಡಿಸಿದಾಗ ಅಲ್ಲಿಂದ ವಾಪಾಸು ಹೋಗಲು ಶಕ್ತಿ ಸಂಚಯನವಾಯಿತು. ಅಲ್ಲಿ ಸುತ್ತಮುತ್ತ ನೋಡುವಾಗ ನಮಗೆ ದಟ್ಟ ಮಂಜು ಬಿಟ್ಟರೆ ಬೇರೇನೂ ಕಾಣಲಿಲ್ಲ. ಕೊಡಗಿನ ಮೇಲೆ ಮಂಜು ಎಂಬ ಹಾಡು ಗುನುಗಲು ಏನೇನೂ ಅಡ್ಡಿ ಬರಲಿಲ್ಲ! ಪ್ರಕೃತಿಯ ಮಂಜಿನ ಮುಸುಕು ನೋಡಲು ಬಲು ಹುರುಪು. ಜೊತೆಯಲಿ ತುಂತುರುಮಳೆ. ಆಗ ನೋಡಬೇಕು ಹಸುರುಡುಗೆ ತೊಟ್ಟ ಇಳೆಯ ಕಳೆ. ಅದನ್ನೇ ನೋಡುತ್ತ, ಹರಟೆ ಹೊಡೆಯುತ್ತ ವಿರಮಿಸಿ ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ೧.೪೫ಕ್ಕೆ ಹೊರಡಲು ತಯಾರಾದೆವು. ನಾಯಿಯೂ ದೇವಾಲಯಕ್ಕೆ ನಮ್ಮೊಡನೆಯೇ ಬಂದಿತ್ತು. ನಾಯಿಪ್ರಿಯರು ಅದನ್ನು ಸಾಕಷ್ಟು ಮುದ್ದುಮಾಡಿದರು. ಅದೂ ಸುಖವಾಗಿ ಬಾಲ ಅಲ್ಲಾಡಿಸುತ್ತ ಮುದ್ದು ಮಾಡಿಸಿಕೊಂಡಿತ್ತು. ವಾಪಾಸು ನಮ್ಮೊಡನೆಯೇ ಹೊರಟಿತು! 


   ರಸ್ತೆ ಇಡೀ ಕೊಚ್ಚೆಮಯ. ನಮ್ಮ ಕಾಲಿನಲ್ಲಿ ಶೂ! ಶೂ ಎಲ್ಲ ಕೆಸರುಮಯ. ಒಮ್ಮೆ ಶೂ ಬಿಚ್ಚಿದರೆ ಸಾಕಪ್ಪ ಎಂಬ ಸ್ಥಿತಿ! ದಾರಿಯಲ್ಲಿ ಎಲ್ಲೂ ಜಿಗಣೆ ಇರಲಿಲ್ಲ. ಹಾಗಾಗಿ ನಾವು ಬಚಾವ್! ಇಳಿಯುವಾಗ ಬಹಳ ಎಚ್ಚರದಿಂದ ಇಳಿಯಬೇಕಿತ್ತು. ರಸ್ತೆಯಲ್ಲಿ ಕಾಲಿಟ್ಟರೆ ಜಾರುತ್ತಿತ್ತು. ಜಾಗರೂಕತೆಯಿಂದ ಕಾಲಿಟ್ಟು ನಡೆಯುತ್ತ ಸಾಗುವಾಗ ಕಾಫಿ ತೋಟದಲ್ಲಿ ಕೆಲಸ ಮಾಡುವ ಹೆಂಗಸರು ಮಾತಾಡಿಸಿದರು. ಕಳೆಕೀಳುವ ಕೆಲಸ ಮಾಡುವುದಂತೆ ಅವರು. ತೋಟದಲ್ಲಿ ಅಲ್ಲಲ್ಲಿ ಜೇಡನ ಬಲೆಗಳು ಕಾಣಿಸಿತು. ಎಂಥ ನೈಪುಣ್ಯ ಜೇಡನದು. ಅದರ ಬಲೆ ನೋಡುವುದೇ ಸೊಗಸು. ವಿಧವಿಧದ ಜೇಡಗಳ ದರ್ಶನವಾದುವು. ಅವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದೆವು. ಮಳೆ ಹನಿ ಹಾಕುತ್ತಲೇ ಇತ್ತು. 
  ಅಂತೂ ಮೂರು ಗಂಟೆಗೆ ನಾವು ಮಾಲಂಬಿ ತಲಪಿದೆವು. ಅಲ್ಲಿ ಊಟಕ್ಕೆ ಸೊಗಸಾದ ಸ್ಥಳ ಪತ್ತೆ ಮಾಡಿದೆವು. ಕನ್ನಂಬಾಡಿ ದೇವಾಲಯದ ವಿಸ್ತಾರವಾದ ಜಗಲಿಯಲ್ಲಿ ನಾವು ಊಟ ಮಾಡಿದೆವು. ಪಲಾವ್, ಮೊಸರು ಗೊಜ್ಜು, ಮೊಸರನ್ನ,  ಮಸಾಲೆವಡೆ, ಸೌತೆಕಾಯಿ ಇಷ್ಟು ಬಗೆಗಳಿದ್ದ ಪುಷ್ಕಳ ಭೋಜನ. ಪಲಾವ್ ಬಹಳ ರುಚಿಯಾಗಿತ್ತು. ಮೈಲಾರಿ ಹೋಟೇಲಿನವರು ಬೆಳಗ್ಗೆಯೇ ನಮಗೆ ಈ ಅಡುಗೆ ತಯಾರಿಸಿ ಕೊಟ್ಟಿದ್ದರು. 

 ರಮಣೀಯ ಮಲ್ಲಳ್ಳಿ ಜಲಪಾತ

ಊಟವಾಗಿ ಮಾಲಂಬಿ ಬಿಟ್ಟಾಗ ಗಂಟೆ ೪.೧೫. ಸುಮಾರು ೨೨ ಕಿಮೀ ದೂರದ  ಸೋಮವಾರಪೇಟೆ ಹಾದು ಮುಂದೆ ಹತ್ತು ಕಿಮೀ ಸಾಗಿ ಶಾಂತಳ್ಳಿ ತಲಪಿ ಅಲ್ಲಿಂದ  ಮೂರು ಕಿಮೀ ಪ್ರಯಾಣಿಸಿ ಮೆಲ್ಲಳ್ಳಿ ತಲಪಿದೆವು. ಚಾಲಕನ ಚಾಕಚಕ್ಯತೆಗೆ ಮೆಚ್ಚಬೇಕು. ದಾರಿಯುದ್ದಕ್ಕೂ ತುಂತುರು ಮಳೆ ಜೊತೆಗೆ ದಟ್ಟಮಂಜು ತುಂಬಿ ದಾರಿಯೇ ಕಾಣಿಸುತ್ತಲಿರಲಿಲ್ಲ. ಮೊದಲು ಶಾಂತಳ್ಳಿಯಿಂದ ಮೂರು ಕಿಮೀ ದೂರ ನಡೆದೇ ಹೋಗಬೇಕಿತ್ತು. ಈಗ ಸಿಮೆಂಟು ರಸ್ತೆಯಾಗಿ ವಾಹನ ಸಂಚಾರ ಸರಾಗವಾಗಿದೆ. ಅಲ್ಲಿ ಗೇಟಿನಲ್ಲಿ ವಾಹನ ಶುಲ್ಕ ಪಾವತಿಸಬೇಕು. ಮಿನಿ ಬಸ್ಸಿಗೆ ೨೦೦ ರೂ. ನಾವು ತಲಪುವಾಗ ಗಂಟೆ ೫.೩೦. ಮೇಲಿಂದಲೇ ಜಲಪಾತ ವೀಕ್ಷಿಸುವುದು. ಕೆಳಗೆ ಮೆಟ್ಟಲು ಇಳಿಯಲಿಲ್ಲ. ಸಮಯಾವಕಾಶವಿಲ್ಲ ಎಂದು ಹೇಳಿದ್ದರು. ನಾವು ತಲಪಿದಾಗ ದಟ್ಟ ಮಂಜು. ಜಲಪಾತ ಕಾಣುತ್ತಲೇ ಇರಲಿಲ್ಲ. ಆಲಪಾತ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಬೋರ್ಗರೆತ ಮಾತ್ರ ಕೇಳುತ್ತಲಿತ್ತು. ಅಯ್ಯೋ! ಇಷ್ಟು ದೂರ ಬಂದು ಜಲಪಾತ ನೋಡಲು ಸಿಕ್ಕಲಿಲ್ಲವಲ್ಲ ಎಂದು ಎಲ್ಲರೂ ಹತಾಶರಾಗಿ ನಿಂತಿದ್ದೆವು. ಈಗ ಮಂಜು ಮರೆಯಾಗಿ ಜಲಪಾತ ಕಾಣುತ್ತೇನೋ ಎಂದು ಜಲಪಾತದೆಡೆಗೇ ದಿಟ್ಟಿ ಹಾಯಿಸಿ ಚಾತಕ ಪಕ್ಷಿಯಂತೆ ಕಾಯುತ್ತಲಿದ್ದೆವು. ಅಗೋ ಮಂಜು ತೆರೆ ಸರಿಸಿ ಬೋರ್ಗರೆಯುವ ಜಲಪಾತ ನಮ್ಮೆದುರು ಪ್ರತ್ಯಕ್ಷ. ಓಹ್! ಆ ಕ್ಷಣವಂತೂ ಬಹಳ ಸುಂದರ. ಪ್ರಕೃತಿ ನಮಗೆ ಮೋಸ ಮಾಡಲಿಲ್ಲ. ರಮಣೀಯವಾದ ಜಲಪಾತ ನೋಡುತ್ತ ಮನೋಲ್ಲಾಸಗೊಂಡೆವು.  ಯಾರಿಗೂ ಅಲ್ಲಿಂದ ಕದಲಲು ಮನಸು ಬಾರದು. ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ನೋಡಿದಷ್ಟೂ ಕಣ್ಣು ತಣಿಯದು ಎಂಬಂಥ ಸ್ಥಿತಿ! ಪುಷ್ಪಗಿರಿ ತಪ್ಪಲಲ್ಲಿ ಹುಟ್ಟಿ ಸುಮಾರು 390 ಅಡಿ ಎತ್ತರದಿಂದ ಹರಿಯುವ ನೀರು ಮುಂದೆ ಹರಿದು ಸುಬ್ರಮಣ್ಯದಲ್ಲಿ ಕುಮಾರಧಾರಾ ನದಿ ಸೇರುತ್ತದೆ. ಈ ಹಿಂದೆ ಎರಡು ಸಲ ನೀರಿಲ್ಲದಿರುವಾಗ ಮೆಲ್ಲಳ್ಳಿ ಜಲಪಾತಕ್ಕೆ ಹೋಗಿದ್ದೆ. ಈಗ ನೀರಿರುವಾಗ ಹೋದದ್ದು ಸಾರ್ಥಕವೆನಿಸಿತು. ಇಲ್ಲಿಗೆ ಹೋಗಲು ಪ್ರಶಕ್ತ ಕಾಲವೆಂದರೆ ಜುಲೈ ನಿಂದ  ದಶಂಬರ ತಿಂಗಳು.

 ಅಂತೂ ಎಲ್ಲರನ್ನೂ ಅಲ್ಲಿಂದ ಹೊರಡಿಸಲು ಸಂಘಟಕರು ಹರಸಾಹಸವೇ ಮಾಡಬೇಕಾಯಿತು. ಸಂಜೆ ಆರೂವರೆಗೆ ನಾವು ಅಲ್ಲಿಂದ ನಿರ್ಗಮಿಸಿದೆವು. ಕುಶಾಲನಗರಕ್ಕೆ ೮ ಗಂಟೆಗೆ ಬಂದು ಮೈಲಾರಿಯಲ್ಲಿ ಕಾಫಿ ಕುಡಿದು ಹೊರಟು ಮೈಸೂರು ತಲಪುವಾಗ ರಾತ್ರಿ ಹತ್ತೂವರೆ ದಾಟಿತ್ತು. ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಯೋಗೇಂದ್ರ, ಶೈಲಜೇಶ, ಪಾಂಡುರಂಗ ಕಿಣಿ ಈ ಚಾರಣ ಹಮ್ಮಿಕೊಂಡು ಕರೆದುಕೊಂಡು ಹೋಗಿ ಯಶಸ್ವಿಯಾಗಿ ವಾಪಾಸು ಕರೆತಂದಿದ್ದರು. ಈ ತ್ರಿಮೂರ್ತಿಗಳಿಗೆ ನಮ್ಮೆಲ್ಲರ ಪರವಾಗಿ ಧನ್ಯವಾದಗಳು.

   ಅಂತಾರಾಷ್ಟ್ರೀಯ ಯೂಥ್ ಹಾಸ್ಟೆಲಿನ ಜನಕ ಜರ್ಮನಿಯ  ರಿಚರ್ಡ್ ಷೆರ್ಮನ್ . ಅವರು ಶಾಲಾ ಶಿಕ್ಷಕರಾಗಿದ್ದವರು.   ಶಾಲಾಮಕ್ಕಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ೧೯೦೯ರಲ್ಲಿ ರಿಚರ್ಡ್ ಷೆರ್ಮನ್‌ರಿಂದ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಯೂಥ್ ಹಾಸ್ಟೆಲ್‌ಗೆ ಈಗ ಶತಮಾನ ದಾಟಿದೆ. ಮೈಸೂರಿನಲ್ಲಿ ಯೂಥ್ ಹಾಸ್ಟೆಲ್ ೧೯೪೯ರಲ್ಲಿ ಪ್ರಾರಂಭಗೊಂಡಿತು. ಮೈಸೂರಿನ ಗಂಗೋತ್ರಿ ಘಟಕ ೧೯೮೮ರಲ್ಲಿ ಪ್ರಾರಂಭವಾಗಿ ಅನಂತರ ಕರ್ನಾಟಕದಲ್ಲೇ ಅತ್ಯಂತ ಪ್ರಭಾವೀ ಘಟಕವಾಗಿ ಬೆಳೆದದ್ದು ಖುಷಿಯ ವಿಚಾರ. ಸದಸ್ಯರಿಗೆ, ಇತರರಿಗೆ ಒಂದು ಅಥವಾ ಎರಡು ದಿನಗಳ  ಚಾರಣ, ಸೈಕಲ್ ಸವಾರಿ, ಟ್ಯೂಬ್ ರ್‍ಯಾಪ್ಟಿಂಗ್, ಸಾಹಸ ಕ್ರೀಡೆಗಳಾದ ಶಿಲಾರೋಹಣ, ಕೃತಕ ಗೋಡೆಗಳನ್ನು ಹತ್ತುವುದು ಇತ್ಯಾದಿ ವರ್ಷದಲ್ಲಿ ೫೦ಕ್ಕೂ ಹೆಚ್ಚು ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಯೋಜಿಸುತ್ತ ಬಂದಿರುವುದು ಈ ಘಟಕದ ಸಾಧನೆಯೇ ಸರಿ. 
    ರಿಚರ್ಡ್ ಷೆರ್ಮನ್ ಅವರ ನೆನಪಿನಲ್ಲಿ ಯೂಥ್  ಹಾಸ್ಟೆಲ್ ಗಂಗೋತ್ರಿ ಘಟಕ ೨೬-೮-೧೭ರಂದು ಸರಸ್ವತೀಪುರದ ರಾಮಮಂದಿರದಲ್ಲಿ ಘಟಕದ ಸದಸ್ಯರಿಗೆ ಕೆಲವು ಸ್ಪರ್ಧೆಗಳನ್ನು ನಡೆಸಿದ್ದರು. ಅವರ ಜೀವನ ಸಾಧನೆಯ ಚಿತ್ರಣವನ್ನು  ಬಿಡಿಸಿಟ್ಟು ಆ ದಿನವನ್ನು ಸಾರ್ಥಕವಾಗುವಂತೆ ಮಾಡಿದ್ದರು.  ರಾಮಮಂದಿರದ ಎದುರು ಎರಡು ಗಿಡ ನೆಟ್ಟು ಹಸಿರಿದ್ದರೆ ಉಸಿರು ಎಂಬ ಸಂದೇಶವನ್ನು ರವಾನಿಸಿದ್ದು ಅತ್ಯಂತ ಶ್ಲಾಘನೀಯ ಕೆಲಸ.  

ಬುಧವಾರ, ಆಗಸ್ಟ್ 23, 2017

ಮುದಿಯರೂ ಹತ್ತಿದ ಮುದಿಬೆಟ್ಟ!ಮಂಡ್ಯಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಮುದಿಬೆಟ್ಟಕ್ಕೆ ಚಾರಣ ಕಾರ್ಯಕ್ರಮ ಎಂದು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ದಿನ ನಿಗದಿಗೊಳಿಸಿದ ಮಾಹಿತಿ ಹೊರಬಿದ್ದಾಗ ಪೂರ್ತಿ ಮುದಿಯಾದಮೇಲೆ ಮುದಿಬೆಟ್ಟ ಹತ್ತುವ ಬದಲು ಅರ್ಧ ಮುದಿಯಾಗಿದ್ದಾಗಲೇ ಹೋಗುವುದೊಳ್ಳೆಯದೆಂದು ರೂ. ೩೫೦ ಶುಲ್ಕ ಕಟ್ಟಿ ಹೆಸರು ನೋಂದಾಯಿಸಿದೆ! 
   ತಾರೀಕು ೨೦-೮-೨೦೧೭ರಂದು ಮೈಸೂರಿನ ವಾರ್ತಾಭವನದ ಬಳಿ ಎಲ್ಲರೂ ಸುಮಾರು ೪೭ ಮಂದಿ ಒಟ್ಟು ಸೇರಿ ೨ ಮಿನಿ ವ್ಯಾನ್ ಮತ್ತು ಒಂದು ಕಾರಿನಲ್ಲಿ ಹೊರಡುವಾಗ (೬.೩೦ಗೆ ಹೊರಡಬೇಕಿದ್ದವರು)  ಬೆಳಗ್ಗೆ ಬರೋಬ್ಬರಿ ೭.೧೫. ಮೈಸೂರಿನಿಂದ ಶ್ರೀರಂಗಪಟ್ಟಣವಾಗಿ ಕೆ.ಆರ್.ಪೇಟೆ ತಲಪಿ, ಅಲ್ಲಿಂದ ನಾಗಮಂಗಲ ರಸ್ತೆಯಲ್ಲಿ ಸಾಗಿ ಬನುಮೇನಹಳ್ಳಿಯ ತೋಟದ ಮನೆ ತಲಪುವಾಗ ಗಂಟೆ ೮.೩೦ ದಾಟಿತ್ತು. ಮೈಸೂರಿನಲ್ಲಿ ವಾಸವಾಗಿರುವ ಸತೀಶ್ ಎಂಬವರಿಗೆ ಸೇರಿದ ತೋಟವದು. ಈ ಚಾರಣದ ಆಯೋಜಕರಾದ ಜಗದೀಶ ಅವರ ಸ್ನೇಹಿತರೇ ಸತೀಶ್. ಅವರು ಉದಾರತೆಯಿಂದ ತೋಟದಮನೆಯಲ್ಲಿ ನಮಗೆ ಸಕಲ ವ್ಯವಸ್ಥೆ ಮಾಡಿಸಿದ್ದರು. ತೋಟದ ಉಸ್ತುವಾರಿ ನೋಡಿಕೊಳ್ಳುವ ವೆಂಕಟೇಶ್ ನಮಗಾಗಿ ತಿಂಡಿ ತರಿಸಿಟ್ಟು ಕಾದಿದ್ದರು. ಬಿಸಿಬಿಸಿ ಉಪ್ಪಿಟ್ಟು, ಕೇಸರಿಭಾತ್, ಕಾಫಿ ಸೇವನೆಯಾಯಿತು. ತಿಂಡಿ ತಿಂದು ಅಲ್ಲಿಂದ ೯.೩೦ಗೆ ಹೊರಟೆವು. 
    ಸುಮಾರು ಏಳೆಂಟು ಕಿಮೀ ಸಾಗಿ ರಾಯಸಮುದ್ರ ತಲಪಿ ಅಲ್ಲಿಂದ ಮುಂದೆ ಸಾಗುವಾಗ ಬಲಕ್ಕೆ ನಾರಾಯಣದುರ್ಗಕ್ಕೆ ದಾರಿ ಎಂಬ ಫಲಕ ಕಾಣುತ್ತದೆ. ನಾವು ಎಡಕ್ಕೆ ಸಾಗಿದೆವು. ಸುಮಾರು ಮೂರು ನಾಲ್ಕು ಕಿಮೀ ಸಾಗಿದಾಗ ಮರುಗುನಕೊಪ್ಪಲು ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಮುದಿಬೆಟ್ಟ ಕಾಣುತ್ತದೆ. ಅಲ್ಲಿ ಬಸ್ಸಿಳಿದು ಕಾಲುದಾರಿಯಲ್ಲಿ ಹೋಗಿ ಬೆಟ್ಟದ ಬುಡ ತಲಪಿ ಬೆಟ್ಟದೆಡೆಗೆ ಸಾಗುವಾಗ ಗಂಟೆ ಹತ್ತೂಕಾಲು.

 ನೋಡಲು ಅಷ್ಟೇನೂ ಎತ್ತರವಿಲ್ಲದ ಬೆಟ್ಟ. ಆದರೆ ಹತ್ತುತ್ತ ಹತ್ತುತ್ತ ಇನ್ನೂ ಎಷ್ಟು ದೂರ ಎಂದು ಅನಿಸಲು ತೊಡಗಿತ್ತು. ಕುರುಚಲುಗಿಡ, ಮಜ್ಜಿಗೆಹುಲ್ಲು, ಪೊದೆಗಳಿಂದ ಕೂಡಿದ ಎಲ್ಲಿ ನೋಡಿದರೂ ಕಲ್ಲುಬಂಡೆಗಳೇ ಕಾಣುವ ಹಾದಿಯಲ್ಲಿ ಸಾಗಿದೆವು.


 ಬೆಟ್ಟ ಏರಲು ಮೆಟ್ಟಲುಗಳಿಲ್ಲ. ಸರಿಯಾದ ಹಾದಿ ಇದೆಯೋ ನಮಗೆ ಗೊತ್ತಿಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ನಾವು ನಡೆದದ್ದೇ ದಾರಿಯಾಗಿತ್ತು. ಕೆಲವೆಡೆ ಬಂಡೆಹತ್ತಿ ಇಳಿದು ಸಾಗಬೇಕಿತ್ತು. ಬೋರೆದೇವರಬೆಟ್ಟದಲ್ಲಿ ಪುಟ್ಟ ದೇವಾಲಯವಿದೆ ಎಂದಿದ್ದರು. ನಮಗೆ ಕೆಲವರಿಗೆ ದೇವಾಲಯ ಕಂಡಿರಲಿಲ್ಲ. ನಾವು ಹೋದ ದಾರಿ ತಪ್ಪಿತ್ತು. ಸರಿಯಾದ ಹಾದಿಯಲ್ಲಿ ಸಾಗಿದ ಕೆಲವರಿಗೆ ಬಂಡೆಯಡಿಯಲ್ಲಿ ಪುಟ್ಟ ದೇವಾಲಯ ಕಾಣಿಸಿತ್ತಂತೆ. ನಾವೂ ಅಲ್ಲಿಯ ಸ್ಥಳೀಯರಾದ ಯಾರಾದರೊಬ್ಬರನ್ನು ಕರೆದುಕೊಂಡು ಹೋಗಿದ್ದರೆ ಬಹಳ ಒಳ್ಳೆಯದಿತ್ತು ಎನಿಸಿತ್ತು. ಕರೆದುಕೊಂಡು ಹೋಗದ ಕಾರಣ ಬೋರೆದೇವರ ಗುಡಿಯನ್ನು ನಮಗೆ ನೋಡಲಾಗಲಿಲ್ಲ. 
   ಇದು ಸಣ್ಣ ಬೆಟ್ಟವಾ? ಓಹ್ ತುಂಬ ಸುಸ್ತಾಯಿತು. ಎಂದು ಬೆಟ್ಟ ಹತ್ತುತ್ತ ಕೆಲವರು ಹೇಳಿದರು! ಆಯೋಜಕರಾದ ಸೋಮಶೇಖರ್ ಹಾಗೂ ಜಗದೀಶರು ಇದು ಬಹಳ ಸಣ್ಣಬೆಟ್ಟ ಎಂದು ನುಡಿದಿದ್ದರಂತೆ! ಇನ್ನೇನು ಬೆಟ್ಟದ ತುದಿ ಕಾಣುತ್ತಲಿದೆ. ಸ್ವಲ್ಪವೇ ಏರಿದರಾಯಿತು ಎಂದು ಎಲ್ಲರನ್ನು ಹುರುದುಂಬಿಸಿ ಸಾಗಿದೆವು. ಕೆಲವು ಬಂಡೆಗಲ್ಲುಗಳ ಎಡೆಯಲ್ಲಿ ಪುಟ್ಟ ಸಸಿಗಳು ಹುಟ್ಟಿದ್ದು ಕಂಡಾಗ ಬಂಡೆಯೊಳು ಸಸಿನೆಟ್ಟು ನೀರೆರೆದವರು ಯಾರು? ಎಂದು  ಗುನುಗುತ್ತ ಸಾಗಿದೆ. 


ಬಿಸಿಲಿಲ್ಲದೆ ಹವೆಯೂ ನಮಗೆ ಸಹಕರಿಸಿತ್ತು. ಅಂತೂ ಬೆಟ್ಟದ ತುದಿ ತಲಪಿದೆವು. ಅಲ್ಲಿ ವಿಶಾಲವಾದ ಸಮತಟ್ಟು ಪ್ರದೇಶ. ಅದರ ಪಕ್ಕದಲ್ಲಿ ಮತ್ತೊಂದು ಬೆಟ್ಟ. ದೊಡ್ಡ ಬಂಡೆಗಲ್ಲು ಕಂಡಿತು. 
ಕೆಲವರೆಲ್ಲ ಅದನ್ನು ಏರಿ ನಿಂತಿದ್ದರು. ಒಹೊ ಇನ್ನೂ ಹೋಗಬೇಕಾ? ನಮ್ಮಿಂದ ಸಾಧ್ಯವಿಲ್ಲ ಎಂದು ಕೆಲವರು ಅಲ್ಲೇ ಕೂತರು.   ಇನ್ನೂ ಕೆಲವರು ಹಿಂದಿದ್ದು, ನಿಧಾನವಾಗಿ ಹತ್ತುತ್ತ ಬರುತ್ತಿದ್ದರು.  ನಾವು ಕೆಲವರು ಉತ್ಸಾಹದಿಂದ ಆ ಬಂಡೆಗಲ್ಲನ್ನು ಕೋತಿಗಳು ಏರುವಂತೆ ಏರಿದೆವು. ಅಲ್ಲೂ ವಿಶಾಲ ಬಯಲು. ಕೂತು ದಣಿವಾರಿಸುತ್ತಿರಬೇಕಾದರೆ ನಮ್ಮಿಂದ ಸಾಧ್ಯವಿಲ್ಲ ಎಂದು ಕೆಳಗೆ ಕೂತವರು ಬಂಡೆ ಏರಿ ಮೇಲೆ ಬಂದದ್ದು ಕಂಡಿತು! ಇಷ್ಟು ಹತ್ತಿದ ಮೇಲೆ ಈ ಬಂಡೆ ಯಾವ ಲೆಕ್ಕ ಎಂದು ಅವರನ್ನು ಹುರಿದುಂಬಿಸಿ ಮೇಲೆ ಹತ್ತಿಸುವಲ್ಲಿ ಗೋಪಕ್ಕ ಯಶಸ್ವಿಯಾಗಿದ್ದರು. ಅವರೆಲ್ಲರೂ ಹತ್ತಿ ಬಂದು ತುಂಬ ಖುಷಿಪಟ್ಟರು. ಮೂರು ನಾಲ್ಕು ಮಂದಿ ವಯಸ್ಸು ೬೫ ಮೀರಿದವರು ಯಶಸ್ವಿಯಾಗಿ ಮುದಿಬೆಟ್ಟ ಏರಿದ್ದರು. ಬೆಟ್ಟದ ತುದಿಯಲ್ಲಿ ನಿಂತು ಸುತ್ತ ಕಣ್ಣು ಹಾಯಿಸುವಾಗ ಒಂದೆಡೆ ದೂರದಲ್ಲಿ ಮೇಲುಕೋಟೆ, ಪಕ್ಕದಲ್ಲಿ ನಾರಾಯಣದುರ್ಗ ಎಲ್ಲ ಕಾಣುತ್ತಲಿತ್ತು. ಅಲ್ಲಿ ಅರ್ಧ ಗಂಟೆ ಕುಳಿತು ಗಾಳಿಯ ಸುಖವನ್ನು ಆಸ್ವಾದಿಸುತ್ತ ಪ್ರಕೃತಿಯ ಚೆಲುವನ್ನು ನೋಡುತ್ತ ಕಾಲ ಕಳೆದೆವು. 


ನಾರಾಯಣದುರ್ಗದ ತಲೆಮೇಲೆ ಮೋಡದ ಚಿತ್ತಾರ

  ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ಮತ್ತೆ ಕೆಳಗೆ ಇಳಿಯಲು ಮುಂದಾದೆವು. ಇಳಿಯಲು ಹೆದರಿಕೆ ಇರುವವರ ಕೈ ಹಿಡಿದು ಇಳಿಸಿದೆವು. 

ಆ ಬಂಡೆಗಲ್ಲು ಇಳಿದಾಗುವಾಗ ಸಣ್ಣಗೆ ಮಳೆಹನಿಯಲು ಸುರುವಾಯಿತು. ಮಳೆ‌ಅಂಗಿ ತಂದವರು ಹಾಕಿಕೊಂಡು ಮಳೆಯಲ್ಲೆ ಇಳಿಯಲು ತೊಡಗಿದೆವು. ಏನೂ ತಾರದಿದ್ದವರು ಬಂಡೆ ಅಡಿ ಕೂತರು. ಮಳೆ ಹೆಚ್ಚು ತೊಂದರೆ ಕೊಡದೆ ಕೆಲವೇ ನಿಮಿಷಗಳಲ್ಲಿ ನಿಂತಿತು. ಮಳೆ ಬಂದ ಕಾರಣ ಎಚ್ಚರಿಕೆಯಿಂದ ಬೆಟ್ಟ ಇಳಿಯಬೇಕಿತ್ತು. ಕೆಲವೆಡೆ ಬಂಡೆ ಒದ್ದೆಯಾಗಿ ಜಾರುತ್ತಿತ್ತು. ಅದಾಗಲೇ ಮಧ್ಯಾಹ್ನ ಒಂದು ಗಂಟೆ ದಾಟಿತ್ತು. ಕೆಲವೆಡೆ ಜಾರುಬಂಡೆಯಂತೆ ಕುಳಿತು ಜಾರಿ ಇಳಿದೆವು. ನನಗಂತೂ ಮುದಿಬೆಟ್ಟ ಹತ್ತಿ ಇಳಿಯಲು ತುಂಬ ಖುಷಿಯೆನಿಸಿತು. ಬೆಟ್ಟಕ್ಕೆ ಸರಿಯಾಗಿ ಮೆಟ್ಟಲಿದ್ದು ಅದನ್ನು ಏರಲು ಅಂಥ ಖುಷಿ ಎನಿಸುವುದಿಲ್ಲ. ಇಂಥ ಬಂಡೆ ಏರಿ ಇಳಿಯುವುದರಿಂದಲೇ ನಿಜವಾದ ಚಾರಣ ಸುಖ ಲಭಿಸುವುದು ಎಂಬುದು ನನ್ನ ಅಭಿಮತ. ನಾವು ಏರಿದ ದಾರಿ ತಪ್ಪಿ ಬೇರೆ ಸ್ವಲ್ಪ ಕಷ್ಟದ ದಾರಿಯಲ್ಲಿ ಬೆಟ್ಟ ಇಳಿದೆವು! ಎಲ್ಲರೂ ಬೆಟ್ಟ ಇಳಿದಾಗುವಾಗ ಗಂಟೆ ೨.೩೦ ದಾಟಿತ್ತು. ನಮ್ಮ ತಂಡದಲ್ಲಿ ಅನೇಕರು ಇದೇ ಮೊದಲಬಾರಿಗೆ ಚಾರಣ ಬಂದವರಿದ್ದರು. ಮೊದಲ ಚಾರಣವೇ ಕಷ್ಟವಾದರೂ ಯಶಸ್ವಿಯಾಗಿ ಮಾಡಿದೆವು ಎಂದು ಅವರಿಗೆ ಖುಷಿಯೋ ಖುಷಿ. ಇನ್ನು ಆಗಾಗ ಇಂಥ ಚಾರಣದಲ್ಲಿ ತಪ್ಪದೆ ಭಾಗಿಯಾಗುತ್ತೇವೆ ಎಂದು ಹೇಳಲು ಮರೆಯಲಿಲ್ಲ. ಒಮ್ಮೆ ಈ ಘಟಕದ ವತಿಯಿಂದ ಚಾರಣಕ್ಕೆಂದು ಬಂದವರು ಪುನಃ ಮತ್ತೆ ಬಾರದೆ ಇರುವುದಿಲ್ಲ. ಅಷ್ಟು ಸುರಕ್ಷಿತವಾಗಿ ಚೆನ್ನಾದ ವ್ಯವಸ್ಥೆಯಿಂದ ಚಾರಣ ಕರೆದೊಯ್ಯುತ್ತಾರೆ. ಇದು ಗಂಗೋತ್ರಿ ಘಟಕಕ್ಕೆ ಸಿಕ್ಕಿದ ದೊಡ್ಡ ಹಿರಿಮೆಯೇ ಹೌದು ಎಂದು ಅದರ ಸದಸ್ಯಳಾಗಿ ಹೆಮ್ಮೆಯಿಂದ ಹೇಳುವೆ. 
  ಮತ್ತೆ ಅಲ್ಲಿಂದ ಒಂದು ಕಿಮೀ ನಡೆದು  ಬಸ್ ನಿಲ್ಲಿಸಿದ ಸ್ಥಳ ಮರುಗುನಕೊಪ್ಪಲಿಗೆ  ಹೋದೆವು. ಅಲ್ಲಿ ಸ್ಥಳೀಯರಾದ ಪುಟ್ಟತಾಯಮ್ಮ ಸಿಕ್ಕಿ ನಮ್ಮನ್ನು ಮಾತಾಡಿಸಿದರು. ‘ಬೋರೆದೇವರು ನಿಮ್ಮ ಮನೆದೇವರ? ದೇವರಿಗೆ ಪೂಜೆ ಮಾಡಿಸಲು ಬಂದಿದ್ದೀರ? ಏಕೆ ಕೇಳಿದೆನೆಂದರೆ ನಾರಾಯಣದುರ್ಗಕ್ಕೆ ತುಂಬ ಜನ ಹೋಗುತ್ತಾರೆ. ಆದರೆ ಮುದಿಬೆಟ್ಟಕ್ಕೆ ಯಾರೂ ಹೋಗಲ್ಲ’ ಎಂದು ಕೇಳಿದಳು. ಎಲ್ಲಿಯೋ ಇರುವ ಯಾವುದೇ ಬೆಟ್ಟವಾದರೂ ಸರಿ. ಅದೇ ನಮ್ಮ ದೇವರು ಎಂದು ಹೇಳಬೇಕೆನಿಸಿತು! ಆದರೆ ಅವರೆದುರು ಹಾಗೆ ಹೇಳಲಿಲ್ಲ. ಅವರು ಮಾತಾಡುತ್ತ ಬೆಟ್ಟದ ಕತೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ಊರಲ್ಲಿ ಅಣ್ಣತಮ್ಮನಿಗೆ ಜಗಳವಾಯಿತು. ಅಣ್ಣನಾದವ ಓಡಿ ಹೋಗಿ ಬೆಟ್ಟ ಹತ್ತಿದನಂತೆ. ತಮ್ಮನಿಗೆ ಕಾಲುನೋವಿನಿಂದ ಹತ್ತಲಾಗಲಿಲ್ಲವಂತೆ. ಆಗ ಅಲ್ಲಿ ಒಬ್ಬ ಮುದುಕಪ್ಪ ಪ್ರತ್ಯಕ್ಷವಾಗಿ ಜಗಳ ಯಾಕೆ ಮಾಡುತ್ತಿದ್ದೀರಿ ಎಂದು ಕೇಳಿದರಂತೆ.  ನನ್ನನ್ನೂ ಕರಕ್ಕೊಂಡು ಹೋಗು ಎಂದು ತಮ್ಮ ಹೇಳಿದನಂತೆ. ಒಂದು ಬಂಡೆ ಉರುಳಿಸುತ್ತೇನೆ. ನೀನು ಅದನ್ನು ಹಿಡಿಯಬೇಕು. ಹಾಗಾದರೆ ಕರೆದುಕೊಂಡು ಹೋಗುತ್ತೇನೆ ಅಂದನಂತೆ ಅಣ್ಣ. ಅಣ್ಣ ಬಂಡೆ ಉರುಳಿಸಿದಾಗ ತಮ್ಮ ಅದನ್ನು ಕಿರುಬೆರಳಿನಿಂದ ಹಿಡಿದು ನಿಲ್ಲಿಸಿದನಂತೆ. ಹಾಗೆ ಮುದುಕಪ್ಪ ಅಣ್ಣ ತಮ್ಮರಿಗೆ ರಾಜಿ ಮಾಡಿಸಿದನಂತೆ. ಅಣ್ಣ ತಮ್ಮನನ್ನು ಬೆಟ್ಟಕ್ಕೆ ಕರೆದುಕೊಂಡು ಹೋದನಂತೆ. ಮತ್ತೆ ಕೆಳಗೆ ಬಂದು ನೋಡಿದರೆ ಮುದುಕಪ್ಪ ಪತ್ತೆಯೇ ಆಗಲಿಲ್ಲವಂತೆ. ಹಾಗಾಗಿ ಇದಕ್ಕೆ ಮುದಿಬೆಟ್ಟ ಎಂದು ಹೆಸರು ಬಂದದ್ದು ಎಂದು ಹೇಳಿ ಕಥೆ ನಿಲ್ಲಿಸಿದಳು! 

  ‘ಊಟಕ್ಕೆ ಏನು ಮಾಡುವಿರಿ?’ ಎಂದು ಅವಳು ನಮ್ಮನ್ನು ಕೇಳಿದಾಗ, ಯಾರೊ ಒಬ್ಬರು ತಮಾಷೆಗಾಗಿ ನಿಮ್ಮ ಮನೆಗೆ ಬರುತ್ತೇವೆ ಎಂದಾಗ, ‘ಓ ಅದಕ್ಕೇನಂತೆ. ನೀವು ಮೊದಲೇ ಹೇಳಿದ್ದರೆ ಪಲಾವ್, ಮೊಸರನ್ನ ತಯಾರಿಸಿ ಇಟ್ಟಿರುತ್ತಿದ್ದೆ. ನಾವು ಹಸು ಸಾಕುತ್ತೇವೆ. ಹತ್ತು ಲೀಟರು ಹಾಲು ಡೈರಿಗೆ ಹಾಕದೆ ಮೊಸರು ಮಾಡುತ್ತಿದ್ದೆ ಅಷ್ಟೆ.’ ಎಂದಳು. ನಾವು ೫೦ ಮಂದಿ ಇದ್ದೇವೆ ಎಂದಾಗ ೫೦ ಅಲ್ಲ ನೂರು ಮಂದಿ ಬೇಕಾದರೂ ಬನ್ನಿ. ಊಟ ಹಾಕಲು ನಾವೇನು ಕಾಸು ತೆಗೆದುಕೊಳ್ಳುವುದಿಲ್ಲ. ಆದರೆ ಮೊದಲೇ ಹೇಳಿ ಬನ್ನಿ ಎಂದು ತಮ್ಮ ಹೃದಯವಂತಿಕೆ ಮೆರೆದರು. ಅವರ ಈ ಪ್ರೀತಿಯ ಮುಂದೆ ನಾವೇ ಸೋತೆವು. ಒಂದು ತೋಟದ ಮನೆಯಲ್ಲಿ ನಮಗೆಲ್ಲ ಊಟದ ವ್ಯವಸ್ಥೆಯಾಗಿದೆ ಎಂದು ಹೇಳಿ ಅವರನ್ನು ಬೀಳ್ಕೊಂಡು ಬಸ್ ಹತ್ತಿದೆವು. 
    ಅಲ್ಲಿಂದ ಸೀದಾ ಬನುಮೇನಹಳ್ಳಿಯ ತೋಟದಮನೆಗೆ ಹೋದೆವು. ತೋಟದ ಮಾಲೀಕರಾದ ಸತೀಶ್ ಅವರು ಕುಟುಂಬ ಸಮೆತರಾಗಿ ಬಂದು ಅಲ್ಲಿ ನಮ್ಮನ್ನು ಸ್ವಾಗತಿಸಿದರು. ಸುಮಾರು ಹತ್ತು ಎಕರೆ ತೋಟದಲ್ಲಿ ಮಾವು, ತೆಂಗು, ಅಡಿಕೆ, ಸಾಗುವಾನಿ ಇತ್ಯಾದಿ ಮರಗಳಿವೆ. ನವಿಲುಗಳ ಕಾಟದಿಂದ ಬೇರೇನೂ ಬೆಳೆ ಬೆಳೆಯಲಾಗುವುದಿಲ್ಲವೆಂದು ಸತೀಶ್ ಅವರ ತಾಯಿ ಜಯಮ್ಮ ಹೇಳಿದರು. ಮನೆ ಪಕ್ಕವೇ ಸುಸಜ್ಜಿತವಾದ ಈಜುಕೊಳವೂ ಇದೆ.  
   ೩ ಗಂಟೆಗೆ ನಾವು ಸಾಲಾಗಿ ಊಟಕ್ಕೆ ಕೂತೆವು. ಬಾಳೆಲೆಯಲ್ಲಿ ಪಲ್ಯ, ಅನ್ನ, ಸಾರು, ಮಜ್ಜಿಗೆಹುಳಿ, ಪಕೋಡ, ಹೋಳಿಗೆ ತುಪ್ಪದಿಂದ ಕೂಡಿದ ಭರ್ಜರಿ ಊಟ. ಊಟದನಂತರ ಬಾಳೆಹಣ್ಣು ಸಮಾರಾಧನೆ. ಊಟವಾದಮೇಲೆ ಈಜುವ ಕಾರ್ಯಕ್ರಮ ಸುರುವಾಯಿತು. ಈಜುವ ಅಭ್ಯಾಸವಿದ್ದವರು ಸುಮಾರು ಮಂದಿ ಇದ್ದರು. ಅವರೆಲ್ಲ ಕೊಳಕ್ಕೆ ಧುಮುಕಿದರು. ಭರ್ಜರಿ ಊಟವಾದ ಕೂಡಲೇ ಹೇಗೆ ಈಜುತ್ತಾರಪ್ಪ ಎಂದು ಈಜಲು ಬರದ ನಾನು ಆಶ್ಚರ್ಯದಿಂದ ಈಜುವವರನ್ನು ನೋಡುತ್ತ ಕುಳಿತೆ. ಇನ್ನು ಕೆಲವರು ನೀರು ಪ್ರಿಯರು ಕೊಳಕ್ಕೆ ಕಾಲು ಹಾಕಿ ಕಟ್ಟೆಯಲ್ಲಿ ಕೂತು ಅರ್ಧಂಮರ್ಧ ಒದ್ದೆಯಾಗಿ ಸಂತೋಷಪಟ್ಟರು. ಕೆಲವರು ಮೇಲಿನಿಂದ ಕೊಳಕ್ಕೆ ಡೈವ್ ಹೊಡೆದು ಈಜಿದರು. ಸಂಜೆ ೫ ಗಂಟೆವರೆಗೂ ಕೊಳದಲ್ಲಿ ಕಾಲ ಕಳೆದರು. 


   ನಮಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನನ ಊಟವನ್ನು ಸತೀಶ್ ಅವರೇ ಪ್ರಾಯೋಜಿಸಿದ್ದರು. ಸತೀಶ್ ಕುಟುಂಬದವರಿಗೆ ನೆನಪಿನ ಕಾಣಿಕೆಯಾಗಿ ೨೦೧೪ರಲ್ಲಿ ಗಂಗೋತ್ರಿ ಘಟಕದ ವತಿಯಿಂದ ಪ್ರಕಟಪಡಿಸಿದ ಚಾರಣಶ್ರೀ ನೆನಪಿನ ಸಂಚಿಕೆಯನ್ನು ಸೋಮಶೇಖರ್ ನೀಡಿ, ನಮಗೆ ಸಕಲ ವ್ಯವಸ್ಥೆ ಮಾಡಿದ ಅವರಿಗೆ ಧನ್ಯವಾದ ಅರ್ಪಿಸಿದರು. ಅವರಿಗೆ ವಂದನೆ ಸಲ್ಲಿಸಿ ನಾವು ಬಸ್ಸೇರಿದೆವು. 

   ಅಲ್ಲಿಂದ ಹೊರಟು ಕೆಲವು ಕಿಮೀ ದೂರದಲ್ಲಿರುವ ಅಗ್ರಹಾರಬಾಚಹಳ್ಳಿಗೆ ಹೋದೆವು. ಅಲ್ಲಿ ಪುರಾತನವಾದ ಹುಣಸೇಶ್ವರ ದೇವಾಲಯ ನೋಡಿದೆವು. ಧರ್ಮಸ್ಥಳದ ಧರ್ಮೋಸ್ಥಾನ ಟ್ರಸ್ಟ್ ವತಿಯಿಂದ ಹಾಗೂ ಊರವರು ಸೇರಿ ಹೊಯ್ಸಳರ ಕಾಲದ ಈ ದೇವಾಲಯವನ್ನು ಕೆಲವು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಳಿಸಿದ್ದಾರೆ. ಅಲ್ಲಿ ಕೆಲವು ಶಾಸನಗಳು, ವಿಗ್ರಹಗಳನ್ನು, ವೀರಗಲ್ಲುಗಳನ್ನು ಸಾಲಾಗಿ ನಿಲ್ಲಿಸಿದ್ದಾರೆ. 
ಅಲ್ಲಿಂದ ಆರು ಗಂಟೆಗೆ ಹೊರಟು ಎಲ್ಲೂ ನಿಲ್ಲದೆ ರಾತ್ರಿ ಎಂಟು ಗಂಟೆಗೆ ಮೈಸೂರು ಸೇರಿದೆವು. ಈ ಚಾರಣವನ್ನು ಜಗದೀಶ್ ಹಾಗೂ ಸೋಮಶೇಖರ್ ಯಶಸ್ವಿಯಾಗಿ ನಿರ್ವಹಿಸಿದ್ದರು. ಅವರಿಗೆ ತಂಡದವರೆಲ್ಲರ ಪರವಾಗಿ ಧನ್ಯವಾದ.