ಸೋಮವಾರ, ಏಪ್ರಿಲ್ 19, 2021

ಮೈಸೂರುನಗರದ ಲೇಖಕಿಯರ ಪರಿಚಯ ಭಾಗ ೨

                                    ಟಿಪ್ಪಣಿ

     ಮೈಸೂರಿನಲ್ಲಿ ವಾಸವಾಗಿರುವ  ಲೇಖಕಿಯರ ಸ್ಠೂಲ ಪರಿಚಯವನ್ನು  ಬಿ. ಆರ್. ನಾಗರತ್ನ ಹಾಗೂ ಸಿ.ಎನ್. ಮುಕ್ತಾ ಇಲ್ಲಿ ಪೋಣಿಸಿ   ಕೊಟ್ಟಿದ್ದಾರೆ.  ಇದೇನೂ ಪರಿಪೂರ್ಣವಲ್ಲ. ಲೇಖಕಿಯರ ಸಂಖ್ಯೆ ದಿನೇ ದಿನೇ ಹೆಚ್ಚಬಹುದು, ಕೆಲವರ ಹೆಸರು ಬಿಟ್ಟು ಹೋಗಿರಲೂ ಬಹುದು. ಅವರ ಗಮನಕ್ಕೆ ಬಂದದ್ದಷ್ಟನ್ನು ಕ್ರೋಢೀಕರಿಸಿದ್ದಾರೆ. ಅವರ ಈ ಕೆಲಸ ಸ್ತುತ್ಯರ್ಹವಾದುದು. ಒಟ್ಟು ನಾಲ್ಕು ಭಾಗಗಳಲ್ಲಿ ವಿಂಗಡಿಸಿ  ಬರೆದಿರುವರು. ಅವನ್ನಿಲ್ಲಿ  ಹಾಕಲು ನನಗೆ ಸಂತೋಷವೆನಿಸಿದೆ.  ನಿಮಗೆ ಗೊತ್ತಿರುವ ಲೇಖಕಿಯರ ಹೆಸರು ಇಲ್ಲಿ ಬಿಟ್ಟು ಹೋಗಿದ್ದು ನಿಮ್ಮ ಗಮನಕ್ಕೆ ಬಂದರೆ ತಿಳಿಸಬಹುದು.  ದ್ವಿತೀಯ ಹಾಗೂ ಕೊನೆಯ ಭಾಗವನ್ನು ಇಲ್ಲಿ ಹಾಕಿರುವೆನು. ಮೊದಲ ಭಾಗ ವೀಕ್ಷಿಸಲು ಈ ಕೊಂಡಿಯನ್ನು ಒತ್ತಿರಿ

https://rukminimalanisarga.blogspot.com/2021/04/blog-post.html

 ಪ್ರಾಸ್ತಾವಿಕ ನುಡಿ

ಇಪ್ಪತ್ತನೆಯ ಶತಮಾನ ’ಕನ್ನಡ ಸಾಹಿತ್ಯಲೋಕ’ ಅಪಾರ ಬದಲಾವಣೆ ಕಂಡಕಾಲ. ವಸಾಹತು ಶಾಹಿಯಿಂದ ಭಾರತೀಯ ಸಮಾಜದಲ್ಲಿ ಅನೇಕ ಸಮಸ್ಯೆಗಳು ಹುಟ್ಟಿದುವು ಎನ್ನುವುದರಲ್ಲಿ ಎರಡು ಮಾತಿಲ್ಲ. ಬ್ರಿಟೀಷರ ಆಡಳಿತ ಪ್ರಪಂಚದ ನಕ್ಷೆಯನ್ನೇ ಬದಲಾಯಿಸಿತು. ಅವರ ಆಡಳಿತ ಕಾಲ ಭಾರತೀಯರ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಜೀವನದಲ್ಲಿ ಅಚ್ಚರಿ ಹುಟ್ಟಿಸುವಂತಹ ಬದಲಾವಣೆ ತಂದಿದ್ದಲ್ಲದೆ, ವಿಚಾರಕ್ರಾಂತಿಗೆ ಕಾರಣವಾಯಿತು. ಮಹಿಳೆಯರು ತಮ್ಮ ಬಗ್ಗೆ ತಮ್ಮ ಸ್ಥಿತಿ-ಗತಿಗಳ ಬಗ್ಗೆ ಚಿಂತಿಸಲು ಆರಂಭಿಸಿದರು. ಪರಿಣಾಮವಾಗಿ ಅನೇಕ ಕಥೆಗಾರ್ತಿಯರೂ, ಕವಿಗಳೂ, ಸಮಾಜ ಸುಧಾರಕರೂ ಹುಟ್ಟಿಕೊಂಡರು. ಇಂದು ಕನ್ನಡ ಸಾಹಿತ್ಯದಲ್ಲಿ ಮಹಿಳಾ ಬರಹಗಾರರ ಸಂಖ್ಯೆ ೩,೫೦೦ರ ಗಡಿದಾಟಿದೆ. ನಮ್ಮ ಲೇಖಕಿಯರು ಕಥೆ, ಕಾದಂಬರಿ, ಕಾವ್ಯ, ನಾಟಕ, ಶಿಶುಸಾಹಿತ್ಯ, ಗ್ರಂಥ ಸಂಪಾದನೆ, ಸಂಶೋಧನೆ-ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ; ಮಾಡುತ್ತಲಿದ್ದಾರೆ.

ಮೈಸೂರು ನಗರದಲ್ಲಿರುವ ಮಹಿಳಾ ಬರಹಗಾರರ ಸಂಖ್ಯೆ ನೂರು ಅಥವಾ ಅದಕ್ಕೂ ಹೆಚ್ಚಿನದು. ಮೈಸೂರಿನ ಲೇಖಕಿಯರನ್ನು ಪರಿಚಯಿಸುವ ಒಂದು ಸ್ತುತ್ಯಾರ್ಹ ಕಾರ್ಯವನ್ನು ನನ್ನ ಆತ್ಮೀಯರಾದ ಲೇಖಕಿ ಶ್ರೀಮತಿ ಬಿ.ಆರ್.ನಾಗರತ್ನ ಮಾಡಿದ್ದಾರೆ. ಇವರು ’ಮೈಸೂರು ನಗರದಲ್ಲಿರುವ ಕನ್ನಡ ಲೇಖಕಿಯರ ಪರಿಚಯ’ ಎಂಬ ಕಿರುಹೊತ್ತಿಗೆ ಹೊರತಂದಿದ್ದಾರೆ. ಇದನ್ನು ರುಕ್ಮಿಣಿಮಾಲಾ ಅವರ ಬ್ಲಾಗಿನಲ್ಲಿ ಹಾಕಲು ಸಮ್ಮತಿಸಿದ್ದಾರೆ. ಈ ಮಾಹಿತಿಗಳು ಎಲ್ಲಾ ಓದುಗರನ್ನು ತಲುಪಬೇಕು ಎನ್ನುವುದೇ ನಮ್ಮ ಉದ್ದೇಶ.  ಇದೇನೂ ಪರಿಪೂರ್ಣವಲ್ಲ,   

ಬಿ.ಆರ್. ನಾಗರತ್ನ

ಸಿ.ಎನ್. ಮುಕ್ತಾ

ಪರಿವಿಡಿ

ಭಾಗ - ೨

ಕಥೆ/ಕಾದಂಬರಿ/ಲಲಿತ ಪ್ರಬಂಧ/ಕವನ.... ಇತ್ಯಾದಿ

೧. ವಸುಮತಿ ಉಡುಪ

೨. ಡಾ|| ಎಂ.ಎಸ್. ವೇದಾ

೩. ಆರ್‍ಯಾಂಭ ಪಟ್ಟಾಭಿ

೪. ಮಂಗಳಾ ಸತ್ಯನ್

೫. ವಿಜಯಾ ಚಂದ್ರಮೌಳೀಶ್ವರ

೬. ಉಷಾನರಸಿಂಹನ್

೭. ಬಿ.ಆರ್. ನಾಗರತ್ನ

೮. ಲೀಲಾಮಣ್ಣಾಲ

೯. ಸಿ.ಎನ್. ಮುಕ್ತಾ

೧೦. ಡಾ|| ಗೀತಾ ಸೀತಾರಾಂ

೧೧. ನಾಗಲಕ್ಷ್ಮಿ ಹರಿಹರೇಶ್ವರ

೧೨. ಸವಿತಾ ಪ್ರಭಾಕರ್

೧೩. ಚಂಚಲಾ ವೇಣು

೧೪. ಸುಧಾ ಹರೀಶ್

೧೫. ಪದ್ಮಜಾ ಸುಂದರೇಶ್

೧೬. ಕೆ.ಜೆ. ಚಂಪಾವತಿ ಶಿವಣ್ಣ

೧೭. ಶ್ಯಾಮಲಾ ಮೂರ್ತಿ

೧೮. ಲತಾ ಮೋಹನ್

೧೯. ಅಲಕಾ ಕಟ್ಟೆಮನೆ

ಭಾಗ -೩

(ಅನುವಾದ ಸಾಹಿತ್ಯ / ಕನ್ನಡ - ಆಂಗ್ಲ - ತೆಲುಗು - ತಮಿಳು)

೧. ವಿಜಯಾ ಶಂಕರ

೨. ಜಯಂತಿ ಅಮೃತೇಶ್

೩. ಶಶಿಕಲಾ ಸುಬ್ಬಣ್ಣ

೪. ಟಿ.ಎಸ್. ಲಲಿತ

೫. ಡಾ|| ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವ ಪ್ರಸಾದ್)

ಭಾಗ ೪

 ಉದಯೋನ್ಮುಖ ಲೇಖಕಿಯರು 

೧. ವಾಣಿಸುಬ್ಬಯ್ಯ

೨. ಶಾಂತಾ ಜಗದೀಶ್

೩. ಇಂದಿರಾಗೋವಿಂದ್

೪. ಭ್ರಮರಾಂಬ (ಸಿಂಧೂರಿ)

೫. ಹೇಮಮಾಲಾ ಬಿ

೬. ವಿದ್ಯಾವೆಂಕಟೇಶ್

೭. ಸಿ. ತ್ರಿವೇಣಿ

೮. ಅನಸೂಯ

೯. ಡಾ|| ಎನ್. ಸಂಧ್ಯಾಕೇಶವ್

೧೦. ಎ. ಹೇಮಗಂಗಾ

೧೧. ಯಶೋಧಾನಾರಾಯಣ್

೧೨. ಬಿ. ಸುಜಾತ

೧೩. ಡಾ|| ಎಸ್. ಸುಧಾ

೧೪. ಬಿ.ಕೆ. ಮೀನಾಕ್ಷಿ

೧೫. ಎಂ.ಎ. ನೀಲಾಂಬಿಕಾ

೧೬. ಡಾ|| ಎಚ್.ವಿ. ರಮಾ

೧೭. ಮುಳಿಯ ಸರಸ್ವತಿ

೧೮. ಮಂಗಳಾ ಮುದ್ದುಮಾದಪ್ಪ

೧೯. ತುಳಸಿ.ಸಿ. ವಿಜಯಕುಮಾರಿ

೨೦. ಎಂ.ಎಸ್. ಭಾರತಿ

೨೧. ಇಂದಿರಾ ಪಾಟೀಲ್

೨೨. ಡಾ|| ಕೆ.ಎನ್. ಲಾವಣ್ಯ ಪ್ರಭಾ

೨೩. ಸಿ.ಪಿ. ವೇದವತಿ

೨೪. ರುಕ್ಮಿಣಿಮಾಲಾ 

-------------------------------------------

ಭಾಗ ೨

 ೧. ವಸುಮತಿ ಉಡುಪ

ಕನ್ನಡದ ಜನಪ್ರಿಯ ಲೇಖಕಿ, ಮನೆಮನೆಯ ಕಥೆಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಸುಮತಿ ಉಡುಪ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯವರು. ವಾಸ್ತವಿಕತೆಯ ತಳಹದಿಯ ಮೇಲೆ ಬರೆಯುವ ವಸುಮತಿ, ಯಾವುದೇ ಇಸಂಗಳಿಂದ ದೂರವಿರುವವರು. ೪೫ ವರ್ಷಕ್ಕಿಂತ ಹೆಚ್ಚುಕಾಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಲೇಖಕಿ. ತಮ್ಮ ಸುತ್ತಮುತ್ತ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅದನ್ನು ಬರಹರೂಪಕ್ಕಿಳಿಸುವ ನೈಪುಣ್ಯತೆ ಹೊಂದಿದ್ದಾರೆ. ಇವರ ಪತಿ ಶ್ರೀ ಪಾಂಡುರಂಗ ಉಡುಪ; ನಿವೃತ್ತ ಪ್ರಾಂಶುಪಾಲರು. ತಂದೆ ಶ್ರೀ ರಂಗಭಟ್ಟರು. ತಾಯಿ ಶ್ರೀಮತಿ ತ್ರಿಪುರಾಂಭ.

ಇವರು ಕಥೆ, ಕಾದಂಬರಿ, ಪ್ರಬಂಧ, ನಾಟಕ, ಶಿಶು ಸಾಹಿತ್ಯ, ಅಂಕಣ ಬರಹ -ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಕೃಷಿ ಮಾಡಿದ್ದಾರೆ. ವಸುಮತಿ ಉಡುಪ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ವಸುಮತಿ ಉಡುಪ ಇವರ ಕೃತಿಗಳು

೧.  ೧೦ ಕಾದಂಬರಿಗಳು ಕಾಕಿಗಿಡ, ಅನವರತ, ಅವ್ಯಕ್ತ, ಮನ್ವಂತರ ಪರಿವರ್ತನೆ - ಇತ್ಯಾದಿ

೨.  ೨೦ ಕಥಾ ಸಂಕಲನಗಳು - ಬಂದನಾ ಹುಲಿರಾಯನು, ಸಂಕ್ರಮಣ, ಶೇಷಪ್ರಶ್ನೆ, ವಿಕಲ್ಪ, ಅಂತರಂಗದ ಪಿಸುನುಡಿ, ಬದುಕು ಮಾಯೆಯಮಾಟ - ಇತ್ಯಾದಿ

೩.  ಪ್ರಬಂಧ ಸಂಕಲನ : ಸೀತಾಳ ದಂಡೆ

ವಸುಮತಿ ಉಡುಪಗಳಿಸಿರುವ ಪ್ರಶಸ್ತಿಗಳು

೧.  ಅಳಸಿಂಗ ಪ್ರಶಸ್ತಿ

೨.  ಎಂ.ಕೆ. ಇಂದಿರಾ ಪ್ರಶಸ್ತಿ

೩.  ಗೀತಾದೇಸಾಯಿ ದತ್ತಿನಿಧಿ ಬಹುಮಾನ

೪.  ವಸುದೇವ ಭೂಪಾಲಂ ದತ್ತಿನಿಧಿ ಬಹುಮಾನ

೫.  ಕಥಾರಂಗ ಸಂಸ್ಥೆಯಿಂದ ಕನ್ನಡ ಕವಿತಾ ಪ್ರಶಸ್ತಿ

೬.  ೨೦೧೯ - ಅಂಕಿತ ಪುಸ್ತಕ ಪುರಸ್ಕಾರ - ವರ್ಷದ ಲೇಖಕಿ

* * *

೨) ಡಾ|| ಎಂ.ಎಸ್. ವೇದಾ

’ಕನ್ನಡದ ವಿಶಿಷ್ಟಲೇಖಕಿ’ ಎಂದು ಗುರುತಿಸಿಕೊಂಡಿರುವ ಡಾ|| ಎಂ.ಎಸ್. ವೇದಾ ಪ್ರಸ್ತುತ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ. ತಂದೆ ಶ್ರೀ ಸಿ. ಶಿವಣ್ಣ, ತಾಯಿ ದೇವೀರಮ್ಮ. ಪತಿ ಡಾ|| ವಿಶ್ವನಾಥ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಹಪ್ರಾಧ್ಯಾಪಕರು.

ಎಂ.ಎಸ್. ವೇದಾ ಕವನ, ಸಣ್ಣ ಕಥೆ, ಕಾದಂಬರಿ, ನಾಟಕ-ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ೧೯೮೫ರಲ್ಲಿ ’ಕಾವ್ಯಕೂಸು’ ಎನ್ನುವ ಕವನ ಸಂಕಲನದಿಂದ ಕನ್ನಡ ಸಾಹಿತ್ಯಲೋಕ ಪ್ರವೇಶಿಸಿದ ಲೇಖಕಿ ’ಗಂಗೋತ್ರಿಯಲ್ಲಿ’ ’ಬಿಳಿಲುಗಳು’ ’ದಾಖಲಾಗುವುದು ಬೇಡ’ ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕಥಾ ಸಂಕಲನಗಳು ’ಪ್ರೀತಿ ಮತ್ತು ಸಾವು’ ’ಪಾಲು’ ’ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ’ ’ಮುಳ್ಳಮನೆಯ ಮೇಲೆ’ ಲೇಖಕಿ ಕಾದಂಬರಿ ಕ್ಷೇತ್ರಕ್ಕೂ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ.

೧.  ಜಮೀನು

೨.  ಜಯ

೩.  ಕಪ್ಪು ಕಿವಿಯ ಬಿಳಿಕುದುರೆಗಳು

೪.  ರಾಜ ಒಡೆಯರು

’ಉತ್ತರ ಶಾಕುಂತಲ’ ಎಂಬ ನಾಟಕವನ್ನೂ ರಚಿಸಿದ್ದಾರೆ.

 ಮೂವತ್ತೈದು ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ವೇದಾ ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.

೧.  ಅಖಿಲ ಕರ್ನಾಟಕ ಸಂಘ ಬೆಂಗಳೂರು ಕೊಡ ಮಾಡುವ ’ಗೀತಾ ದೇಸಾಯಿ ದತ್ತಿ ನಿಧಿ’ ಪ್ರಶಸ್ತಿ

೨.  ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ

೩.  ಶ್ರೀ ಹಾವನೂರು ಪ್ರಶಸ್ತಿ

೪.  ಗೊರೂರು ಸಾಹಿತ್ಯ ಪ್ರಶಸ್ತಿ

೫.  ಭಾರತೀಸುತ ಕಾದಂಬರಿ ಪ್ರಶಸ್ತಿ

೬.  ಇನ್‌ಫೋಸಿಸ್ ಸಾಹಿತ್ಯ ಪ್ರಶಸ್ತಿ

೭.  ತ್ರಿವೇಣಿ ಪ್ರಶಸ್ತಿ - ಇತ್ಯಾದಿ.

* * *

೩ ಆರ್‍ಯಾಂಭ ಪಟ್ಟಾಭಿ

ಕನ್ನಡ ಸಾಹಿತ್ಯಲೋಕದ ಹಿರಿಯ ಲೇಖಕಿ. ೧೯೬೩ನೇ ಇಸವಿ ಮಾರ್ಚ್ ೧೨ರಂದು ಬಿ.ಎಂ. ಕೃಷ್ಣಸ್ವಾಮಿ, ತಂಗಮ್ಮ ದಂಪತಿಗಳಿಗೆ ಜನಿಸಿದ ಆರ್‍ಯಾಂಭ. ಸಾಹಿತ್ಯ ದಿಗ್ಗಜಗಳ ಕುಟುಂಬಕ್ಕೆ ಸೇರಿದವರು. ಇವರ ದೊಡ್ಡಪ್ಪ ಕನ್ನಡದ ಕಣ್ವರೆನ್ನಿಸಿಕೊಂಡ ಶ್ರೀ ಬಿ.ಎಂ. ಶ್ರೀಕಂಠಯ್ಯನವರು. ಇವರ ಚಿಕ್ಕಮ್ಮ ಪ್ರಸಿದ್ಧ ಕಾದಂಬರಿಗಾರ್ತಿ ಶ್ರೀಮತಿ ವಾಣಿ. ಅಕ್ಕ ಕರ್ಣಾಟಕದ ಮನೆಮನೆಯ ಲೇಖಕಿ ತ್ರಿವೇಣಿಯವರು.

ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿಗಳಿಸಿರುವ ಆರ್‍ಯಾಂಭ ಪಟ್ಟಾಭಿ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಡಿದ್ದಾರೆ. ಇವರ ಪತಿ ಶ್ರೀ ಪಟ್ಟಾಭಿಯವರು ಸ್ವಂತ ಉದ್ಯೋಗಿಗಳು.

ಮೈಸೂರಿನ ಕರ್ನಾಟಕ ಲೇಖಕಿಯರ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರು. ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ೩೪ ಕಾದಂಬರಿಗಳು, ಐದು ಕಥಾಸಂಕಲನಗಳು, ೧೨ ಮಕ್ಕಳ ಸಾಹಿತ್ಯ ಕೃತಿಗಳು, ೩ ಜೀವನ ಚರಿತ್ರೆಗಳು, ೬ ನಾಟಕಗಳು, ೧ ಕ್ರೀಡಾ ಸಾಹಿತ್ಯ ’ಟೆನಿಸ್’ (ಲೇಖಕಿ ಉತ್ತಮ ಟೆನಿಸ್ ಆಟಗಾರ್ತಿ) ಒಂದು ಪ್ರವಾಸ ಸಾಹಿತ್ಯ, ಒಂದು ವಿಚಾರ ಸಾಹಿತ್ಯ, ಒಂದು ಪ್ರಬಂಧ ಸಂಕಲನ, ೨ ಸಂಪಾದಿತ ಕೃತಿಗಳು.

ಇವರ ಕಾದಂಬರಿಗಳು ಕಪ್ಪುಬಿಳುಪು, ಎರಡು ಮುಖ, ಸವತಿಯನೆರಳು, ಮರಳಿಗೂಡಿಗೆ - ಚಲನಚಿತ್ರಗಳಾಗಿ ಪ್ರಶಸ್ತಿಗಳಿಸಿವೆ.

ಆರ್‍ಯಾಂಭ ಪಟ್ಟಾಭಿಯವರಿಗೆ ಸಂದಿರುವ ಪ್ರಶಸ್ತಿಗಳು

೧.  ಶ್ರೀಮತಿ ಸಾವಿತ್ರಮ್ಮ ದೇ.ಜ.ಗೌ. ಮಹಿಳಾ ಪ್ರಶಸ್ತಿ

೨.  ಪದ್ಮವಿಭೂಷಣ ಡಾ|| ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ

೩.  ಅತ್ತಿಮಬ್ಬೆ ಪ್ರಶಸ್ತಿ

೪.  ಆರ್ಯಭಟ ಅಂತರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ

೫.  ಕರ್ಣಾಟಕ ಚೇತನ ಪ್ರಶಸ್ತಿ

೬.  ಕರ್ಣಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ.

ರಾಜ್ಯ ಲೇಖಕ ಲೇಖಕಿಯರು ’ಉನ್ಮೀಲನಾ’ ಎಂಬ ಅಭಿನಂದನಾ ಗ್ರಂಥ ಸಮರ್ಪಿಸಿದ್ದಾರೆ.

* * *

೪) ಮಂಗಳಾ ಸತ್ಯನ್

ಕಾದಂಬರಿ ಪ್ರಿಯರಿಗೆ ಮಂಗಳಾಸತ್ಯನ್ ಚಿರಪರಿಚಿತವಾದ ಹೆಸರು. ೧೯೪೦ರ ಏಪ್ರಿಲ್ ೧೦ರಂದು ಹೊಳೆನರಸೀಪುರದ ಅಡ್ವೋಕೇಟ್ ಶ್ರೀ ಸಾಲಗಾಮೆ ಸುಬ್ಬರಾಯರು ಶ್ರೀಮತಿ ಗುಂಡಮ್ಮ ದಂಪತಿಗಳಿಗೆ ಜನಿಸಿದ ಇವರು ಮದುವೆಯಾದ ನಂತರ ಮೈಸೂರಿನಲ್ಲಿ ನೆಲೆಸಿ ತಮ್ಮ ಸಾಹಿತ್ಯ ಸೇವೆ ಆರಂಭಿಸಿದರು. ಇವರ ಪತಿ ಶ್ರೀ ಎನ್. ಸತ್ಯನಾರಾಯಣ ಕೇಂದ್ರ ಆಹಾರ ಸಂಶೋಧನಾ ಸಂಸ್ಥೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಮಂಗಳಾಸತ್ಯನ್ ಸಾಹಿತ್ಯ, ಸಂಗೀತ, ಸಂಘಟನೆ, ಸಮಾಜಸೇವೆಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದಾರೆ. ೧೫೦ ಸಣ್ಣ ಕಥೆಗಳು, ೪೦ಕ್ಕೂ ಹೆಚ್ಚು ಕಾದಂಬರಿಗಳು, ಮಹಿಳಾಪರ ಲೇಖನಗಳು, ರೇಡಿಯೋ ನಾಟಕಗಳು - ಇತ್ಯಾದಿ ರಚಿಸಿದ್ದಾರೆ. ಎರಡು ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಕೆಲವು ಕಾದಂಬರಿಗಳು ಮೈಸೂರು ಆಕಾಶವಾಣಿಯಲ್ಲಿ ಧಾರಾವಾಹಿಗಳಾಗಿ ಪ್ರಸಾರವಾಗಿವೆ. ನಾಲ್ಕು ಕಾದಂಬರಿಗಳು ಚಲನಚಿತ್ರಗಳಾಗಿವೆ. ಸ್ತ್ರೀ ಶಕ್ತಿ ಪ್ರತಿಷ್ಠಾನವೆಂಬ ಸಂಸ್ಥೆ ಸ್ಥಾಪಿಸಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇವರ ಸಂಪಾದಕತ್ವದಲ್ಲಿ ಅನೇಕ ’ಸ್ಮರಣ ಸಂಚಿಕೆಗಳು’ ಹೊರಬಂದಿವೆ.

 ಇವರ ಕೃತಿಗಳು

೧.  ಕಾದಂಬರಿಗಳು (೪೦)

   ಆದರ್ಶಪುರುಷ, ಬಂಗಾರಭೂಷಿತೆ, ಉದಾರಶೀಲ, ಸ್ವರ್ಗಸನ್ನಿಧಿ, ಅತಿಮಧುರ ಅನುರಾಗ, ಮುರುಳಿಗಾನ ಅಮೃತಪಾನ - ಇತ್ಯಾದಿ.

೨.  ಕಥಾಸಂಕಲನ

   ಸೋತುಗೆದ್ದವಳು

೩.  ಚಲನಚಿತ್ರವಾಗಿರುವ ಕಾದಂಬರಿಗಳು

   ೧. ಮುಗ್ಧಮಾನವ  

   ೨. ಭಾಗ್ಯಜ್ಯೋತಿ

   ೩. ಆ ಮುಖ

   ೪. ಮುರುಳಿಗಾನ ಅಮೃತಪಾನ

೪.  ಸಂಭಾಷಣೆ ಬರೆದಿರುವ ಚಲನಚಿತ್ರಗಳು

   ೧. ಸ್ವಾತಿ

   ೨. ಹೂವೊಂದು ಬೇಕು ಬಳ್ಳಿಗೆ

ಶ್ರೀಮತಿ ಮಂಗಳಾ ಸತ್ಯನ್ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅನೇಕ ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ.

೧.  ಮೈಸೂರು ನಾಗರೀಕ ಸೇವಾ ಸಮಿತಿಯ ’ಸಾಹಿತ್ಯ ಕಲಾ ಶಾರದೆ’ ಪ್ರಶಸ್ತಿ.

೨.  ಮೈಸೂರಿನ ರಾಜ್ಯೋತ್ಸವ ಸಮಿತಿಯಿಂದ ’ಕಲಾಕೇಸರಿ’ ಪ್ರಶಸ್ತಿ.

೩.  ಬೆಂಗಳೂರು ಅತ್ತಿಮಬ್ಬೆ ಪ್ರತಿಷ್ಠಾನದ ಅತ್ತಿಮಬ್ಬೆ ಪ್ರಶಸ್ತಿ (೨೦೦೦ರಲ್ಲಿ)

೪.  ಪಿರಿಯಾಪಟ್ಟಣದ ವಿಪ್ರಮಹಿಳಾವೇದಿಕೆಯಿಂದ ’ವಿಪ್ರರತ್ನ’ ಪ್ರಶಸ್ತಿ

೫.  ಹೊಯ್ಸಳ ಕನ್ನಡಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದಿಂದ ಕನ್ನಡ ರಾಜ್ಯೋತ್ಸವ ಹೊಯ್ಸಳ ಪ್ರಶಸ್ತಿ - ಇತ್ಯಾದಿ

೨೦೦೩ರಲ್ಲಿ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶ್ರೀಮತಿ ಮಂಗಳಾಸತ್ಯನ್ ಅಭಿನಂದನಾ ಸಮಿತಿಯಿಂದ ’ಸತ್ಯಮಂಗಳಾ’ ಗ್ರಂಥವನ್ನು ಸಮರ್ಪಿಸಲಾಗಿದೆ.

* * *

೫) ವಿಜಯ ಚಂದ್ರಮೌಳೇಶ್ವರ್

ಈಗಾಗಲೇ ತಮ್ಮ ಬರಹಗಳಿಂದ ಓದುಗರಿಗೆ ಪರಿಚಿತರಾಗಿರುವ ಶ್ರೀಮತಿ ವಿಜಯ ಚಂದ್ರಮೌಳೇಶ್ವರ್ ಆಂಗ್ಲಭಾಷೆಯಲ್ಲಿ ಎಂ.ಎ. ಮಾಡಿದ್ದಾರೆ. ಹಿಂದಿಭಾಷೆಯ ’ಸಾಹಿತ್ಯರತ್ನ’ ಮತ್ತು ’ಪ್ರವೀಣ್’ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಹಿಂದಿಭಾಷೆಯಲ್ಲಿ ಪರಿಣಿತರಾಗಿದ್ದಾರೆ. ತಂದೆ ಶ್ರೀ ಚಂದ್ರಮೌಳೇಶ್ವರ್, ತಾಯಿ ಜಯಮ್ಮ. ಅಧ್ಯಾಪಕ ವೃತ್ತಿಯ ಜೊತೆ ಬರವಣಿಗೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಕನ್ನಡ, ಹಿಂದಿ, ಇಂಗ್ಲೀಷ್ ಮೂರು ಭಾಷೆಗಳಲ್ಲೂ ಪಾಂಡಿತ್ಯ ಹೊಂದಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ಸಾಮಾಜಿಕ, ಪೌರಾಣಿಕ ಹಾಗೂ ಚಾರಿತ್ರಿಕ ಕಾದಂಬರಿಗಳನ್ನು ನೀಡಿರುವ ಹೆಗ್ಗಳಿಕೆ ಇವರದು. ಇವರ ಕಥೆ, ಕವನ, ಕಾದಂಬರಿ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿ ಅಪಾರ ಜನಮನ್ನಣೆಗಳಿಸಿವೆ.

ಇವರ  ಕೃತಿಗಳು

೧.  ೧೦ ಕಾದಂಬರಿಗಳು (ಸಾಮಾಜಿಕ) : ಕಂಚಿನಕುದುರೆ, ಬೇರುಮುರಿದಮರ, ಪ್ರೇಮಗಂಗೆ

೨. ಪೌರಾಣಿಕ ಕಾದಂಬರಿಗಳು - ಕುಂತಿಪುತ್ರಕರ್ಣ, ಪೃಧೆ ತೆರೆದ ಪುಟಗಳು

೩. ಐತಿಹಾಸಿಕ ಕಾದಂಬರಿ : ಮಂಜು ಮುಸುಕಿದ ಸಂಜೆ

೪.  ಕಥಾಸಂಕಲನಗಳು : ೧. ಚುಕ್ಕಿ ಸೀರೆ ೨. ಪುನರ್ಮಿಲನ ೩. ಮಂಗಳಜ್ಯೋತಿ, ಕುಸುಮಾಂಜಲಿ

೫.  ಶಿಶುಸಾಹಿತ್ಯ - ರಜ ತಂದ ಮಜ

೬.  ಕವನ ಸಂಕಲನಗಳು (೪) : ಶುಭೋದಯ, ನಂದಾದೀಪ, ಮಂಗಳಜ್ಯೋತಿ, ಕುಸುಮಾಂಜಲಿ

೭.  ಮನ್ವಂತರ - (ರೇಡಿಯೋ ನಾಟಕಗಳ ಸಂಗ್ರಹ)

೮.  ಪಂಚಮಿ (ಪ್ರಬಂಧ ಸಂಕಲನ)

೯.  ಹೂದಾನಿ (ಲೇಖನಗಳ ಗುಚ್ಛ)

೧೦. ಆಧ್ಯಾತ್ಮಿಕ ಗ್ರಂಥ - ತಂತ್ರಶಾಸ್ತ್ರದಲ್ಲಿ ಅಮೃತ ಬಿಂದುಗಳು

ಇವರು ಆಂಗ್ಲಭಾಷೆಯಲ್ಲೂ ಕೃತಿಗಳನ್ನು ರಚಿಸಿದ್ದಾರೆ.

 ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.

೧)  ಅತ್ತಿಮಬ್ಬೆ ಪ್ರಶಸ್ತಿ

೨) ಗೊರೂರು ಪ್ರಶಸ್ತಿ

೩)  ದಸರಾಕವಿ ಪ್ರಶಸ್ತಿ

೪) ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ

೫)  ಮೈಸೂರಿನ ಪ್ರತಿಷ್ಠಿತ ದೇ.ಜ.ಗೌ ಟ್ರಸ್ಟಿನ ’ಸಾವಿತ್ರಮ್ಮ ದೇ.ಜ.ಗೌ ಮಹಿಳಾ ಪ್ರಶಸ್ತಿ’ ಇತ್ಯಾದಿ

* * *

೬  ಉಷಾನರಸಿಂಹನ್

ಕನ್ನಡ ಸಾಹಿತ್ಯಲೋಕಕ್ಕೆ ಬರಹಗಾರರಾಗಿ ಕಾಲಿಟ್ಟ ದಿನದಿಂದಲೇ ಕುತೂಹಲ, ವಿಸ್ಮಯಗಳ ತರಂಗಗಳನ್ನು ಎಬ್ಬಿಸುತ್ತಾ ಎಲ್ಲಾ ಕಡೆ ಪ್ರಸರಿಸುವ ಧಾವಂತದಿಂದಿರುವ ಅದ್ಭುತ ಲೇಖಕಿ ಉಷಾನರಸಿಂಹನ್. ೧೯೬೪ರ ಜೂನ್ ೧೦ರಂದು ಶ್ರೀ ಎನ್.ವಿ. ಸಂಪತ್, ರಾಜಲಕ್ಷ್ಮಿ ಸಂಪತ್ ದಂಪತಿಗಳಿಗೆ ಜನಿಸಿದ ಉಷಾನರಸಿಂಹನ್ ನಗರದ ನಾಗರೀಕ ಜೀವನ, ಹಳ್ಳಿಯ ಕೃಷಿಕ ಜೀವನದ ಅನುಭವ ಇರುವವರು. ಇವರ ಪತಿ ಶ್ರೀ ಆರ್. ಅನಂತ ನರಸಿಂಹನ್ ಕೃಷಿಕರಾಗಿದ್ದು, ಕಟ್ಟಡ ಗುತ್ತಿಗೆದಾರರಾಗಿ ವೃತ್ತಿನಿರತರು.

ಉಷಾನರಸಿಂಹನ್ ಕಥೆ, ಕಾದಂಬರಿ, ಕವನ, ನಾಟಕ, ಪ್ರಬಂಧ - ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.

ಇವರ  ಕೃತಿಗಳು :

೧.  ಕಾದಂಬರಿಗಳು - ಕಾಮಿನೀತಲ್ಪ, ಕೃಷ್ಣಮೃಗ, ಪರ್ಷಿಯಾ ಪರಿiಳ, ಬೀಬೀನಾಚ್ಯಾರ್.

೨.  ಕವನ ಸಂಕಲನಗಳು - ಗಂಧವಾಹ, ಅಂಗರಾಗ, ಪಯಣಕ್ಕೂ ಮುನ್ನ

೩.  ಕಥಾ ಸಂಕಲನ :

   ೧. ಮಾಮಿ ಮತ್ತು ಇತರ ಕಥೆಗಳು

   ೨. ತಾವರೆದೇಟು

   ೩. ಹರಿವನೀರೂ ಕೊರೆವ ಬಂಡೆ

   ೪. ಸರಸ್ವತಿಯ ಸಾಕ್ಷಿ

೪.  ನಾಟಕಗಳು :

   ೧. ಕಂಚು ಕನ್ನಡಿ   ೨. ಬೆಳಕು ಬೆಂಕಿಯಾಯಿತಲ್ಲೋ

ಸದಾ ಪ್ರಯೋಗಶೀಲರಾಗಿದ್ದು, ಬರವಣಿಗೆಯಲ್ಲಿ ತಮ್ಮದೇ ವಿಶಿಷ್ಠ ಛಾಪು ಮೂಡಿಸಿರುವ ಲೇಖಕಿ ಉಷಾನರಸಿಂಹನ್ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

೧)  ಇವರ ಕಾಮಿನೀತಲ್ಪ, ಕೃಷ್ಣಮ್ಮಗ ಕಾದಂಬರಿಗಳಿಗೆ ೨೦೧೦, ೨೦೧೧ರಲ್ಲಿ ಮಾಸ್ತಿ ಕಾದಂಬರಿ ಪುರಸ್ಕಾರ ದೊರೆತಿದೆ.

೨) ಲೇಖಕಿಯರ ಸಂಘದ ತ್ರಿವೇಣಿ ಸ್ಮಾರಕ ಸುಧಾಮೂರ್ತಿ ದತ್ತಿ ಪ್ರಶಸ್ತಿ

೩)  ತುಷಾರ ಕಥಾಸ್ಪರ್ಧೆಯಲ್ಲಿ ಬಹುಮಾನ

೪) ಸುಧಾ ಯುಗಾದಿ ವಿಶೇಷಾಂಕ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ

೫)  ಜಗಜ್ಯೋತಿ ಕಲಾವೃಂದ ಮುಂಬೈ - ಇವರ ಕಥಾಸಂಕಲನ ಸ್ಪರ್ಧೆಯಲ್ಲಿ ಸುಶೀಲಾಶೆಟ್ಟಿ ಸ್ಮಾರಕ ಪ್ರಶಸ್ತಿ (೨೦೦೯) -ಇತ್ಯಾದಿ.

***

೭  ಬಿ.ಆರ್. ನಾಗರತ್ನ

ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕೃಷಿ ಮಾಡುತ್ತಿರುವ ಶ್ರೀಮತಿ ಬಿ.ಆರ್. ನಾಗರತ್ನ ಮೂಲತಃ ತುಮಕೂರಿನವರು. ಡಿಸೆಂಬರ್೨, ೧೯೫೧ರಲ್ಲಿ ಶ್ರೀ ಬಿ.ಎಸ್. ರುದ್ರಮೂರ್ತಿ ಮತ್ತು ಶ್ರೀಮತಿ ಶಾರದಮ್ಮ ದಂಪತಿಗಳಿಗೆ ಜನಿಸಿರುವ ನಾಗರತ್ನ ಎಂ.ಎ.(ಕನ್ನಡ) ಪದವೀಧರರು. ಇವರ ಸಾಹಿತ್ಯಕೃಷಿಗೆ ಸರ್ವರೀತಿಯಲ್ಲೂ ಪ್ರೋತ್ಸಾಹ ನೀಡುತ್ತಿರುವ ಪತಿ ಶ್ರೀ ಎಸ್.ಎಂ. ಚೆನ್ನಮಲ್ಲಶೆಟ್ಟಿ ನಿವೃತ್ತ ಅಧೀಕ್ಷಕ ಇಂಜಿನಿಯರ್.

ನಾಗರತ್ನ ಕಥೆ, ಹಾಸ್ಯಲೇಖನ, ಶಿಶುಸಾಹಿತ್ಯ, ಕವನ, ಪ್ರಬಂಧ, ವ್ಯಕ್ತಿಚಿತ್ರ, ಪುಸ್ತಕ ಪರಿಚಯ - ಇತ್ಯಾದಿ ಸಾಹಿತ್ಯದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಹಲವು ಸಾಹಿತ್ಯ ಸಂಘಗಳ ಸಕ್ರಿಯ ಸದಸ್ಯರಾಗಿರುವ ಲೇಖಕಿ ಉತ್ತಮ ವಾಗ್ಮಿ.

ಬಿ.ಆರ್. ನಾಗರತ್ನ -ಇವರ ಕೃತಿಗಳು :

೧.  ಕವನ ಸಂಕಲನ (೨)

   ೧. ನಾಗಸಂಪಿಗೆ    ೨. ಬಿಡಿಹೂಗಳ ಮಾಲೆ

೨.  ಚುಟುಕು ಸಂಕಲನ (೨)    

   ೧. ರತ್ನಶತಕ ೨. ಮೆಲುಕು

೩.  ಕಥಾ ಸಂಕಲನ (೭)

   ೧. ಮತ್ತೆ ಮೂಡಿತು ವಸಂತ

   ೨. ಹೊಣೆ  

   ೩. ಸೂರ್ಯನ ಬೆಳಕು

   ೪. ಸೂತ್ರವಿಲ್ಲದ ಗಾಳಿಪಟ ಇತ್ಯಾದಿ

೪.  ಹಾಸ್ಯಲೇಖನ (೪)

   ೧. ನಾಗೋಲ್ಲಾಸ

   ೨. ಚುರುಮುರಿ

   ೩. ತಿಳಿನಗೆಯ ತುಣುಕು

   ೪. ಮೆಲುನಗೆಯ ಹಾಸ್ಯ

೫.  ಮಕ್ಕಳ ಸಾಹಿತ್ಯ (೨)

   ೧. ಮಹಾಭಾರತದಿಂದ ಆಯ್ದ ಮಕ್ಕಳ ಕಥೆಗಳು

   ೨. ಮಕ್ಕಳಿಗಾಗಿ ರಾಮಾಯಣದ ರಮ್ಯ ಕಥೆಗಳು

೬.  ಭಿತ್ತಿ ಚಿತ್ರಗಳು (೨)

   ೧. ಮರೆತು ಮಲಗುವ ಮುನ್ನ

   ೨. ಮರೆತನೆಂದರೆ ಮರೆಯಲಿ ಹೇಗೆ

 ಲತಾರಾಜಶೇಖರ್ - ಇವರ ಬಸವಮಹಾದರ್ಶನ ಮಹಾಕಾವ್ಯದ ಗದ್ಯರೂಪ ’ಬಸವಬಿಂಬ ದರ್ಶನ’ ಪ್ರಕಟಿಸಿದ್ದಾರೆ.

ಇವುಗಳಲ್ಲದೆ ಆಧುನಿಕ ವಚನಗಳು, ವೈಚಾರಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಸುಪ್ರಸಿದ್ಧ ಲೇಖಕ-ಲೇಖಕಿಯರ ಪುಸ್ತಕಗಳನ್ನು ಪರಿಚಯಿಸುವ ೨ ಹೊತ್ತಿಗೆಗಳನ್ನು ಹೊರತಂದಿದ್ದಾರೆ.

’ಸ್ನೇಹಬಳಗ’ ಹೊರತಂದಿರುವ ’ಕಥಾಸಂಚಯ’ ಕವನ ಸಂಚಯ, ಅನುವಾದ ಸಾಹಿತ್ಯ ಸಂಚಯ - ಇತ್ಯಾದಿ ಮಾಲಿಕೆಯಲ್ಲಿ ಸಂಪಾದಕರಾಗಿ ಸಹ ಸಂಪಾದಕರಾಗಿ ಕೆಲಸಮಾಡಿದ್ದಾರೆ.

ಬಿ.ಆರ್. ನಾಗರತ್ನ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

೧)  ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಸಂಘದಿಂದ ’ದ.ರಾ.ಬೇಂದ್ರೆ’ ಪ್ರಶಸ್ತಿ

೨) ಬೆಂಗಳೂರು ಲೇಖಕಿಯರ ಸಂಘದಿಂದ ಅತ್ತಿಮಬ್ಬೆ ಪ್ರಶಸ್ತಿ

೩)  ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ

೪) ಬಿಜಾಪುರ ಕನ್ನಡ ಸಂಘದಿಂದ ’ಕುಮಾರರಾಮ’ ಪ್ರಶಸ್ತಿ ಇತ್ಯಾದಿ.

ಇತ್ತೀಚೆಗೆ ಬಿ.ಆರ್. ನಾಗರತ್ನ ’ನೆಮ್ಮದಿಯ ನೆಲೆ’ ಎನ್ನುವ ಕಿರುಕಾದಂಬರಿ ರಚಿಸಿ ಕಾದಂಬರಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.

 * * *

೮   ಲೀಲಾಮಣ್ಣಾಲ

ಲೀಲಾಮಣ್ಣಾಲ ಎಂಬ ಕಾವ್ಯನಾಮದಿಂದ ಸಾಹಿತ್ಯಲೋಕದಲ್ಲಿ ಪರಿಚಿತರಾಗಿರುವ ಲೀಲಾವತಿ. ಜಿ. ದಕ್ಷಿಣ ಕನ್ನಡ ಜಿಲ್ಲೆಯವರು. ಇವರು ಇತಿಹಾಸ, ಕನ್ನಡ - ಎರಡು ವಿಷಯಗಳಲ್ಲೂ ಸ್ನಾತಕೋತ್ತರ ಪದವಿ ಪಡೆದಿರುವ ಲೀಲಾಮಣ್ಣಾಲ ೩೦ ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕಿಯಾಗಿ ಕೆಲಸಮಾಡಿ ನಿವೃತ್ತರಾಗಿದ್ದಾರೆ. ಇವರ ತಂದೆ ಶ್ರೀ ಗಿಳಿಯಾಲ ಈಶ್ವರಭಟ್, ತಾಯಿ ಪಾರ್ವತಿ ಅಮ್ಮ. ಇವರ ಪತಿ ಶ್ರೀ ಸಿ. ರಘುರಾಮಶಾಸ್ತ್ರಿ ವಿಜಯಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ನಿವೃತ್ತರು.

ಇವರ ಪ್ರಕಟಿತ ಕೃತಿಗಳು ೨೪. ಇವುಗಳಲ್ಲಿ ೪ ಕಥಾಸಂಕಲನಗಳು, ೨ ಕಾದಂಬರಿಗಳು, ೩ ನಾಟಕಗಳು, ೫ ಮಕ್ಕಳ ಸಚಿತ್ರ ಸಾಹಿತ್ಯ ಕೃತಿಗಳು, ೨ ಜೀವನ ಚರಿತ್ರೆಗಳು, ೧ ವಿಚಾರ ಲಹರಿ, ೧ ಕವನ ಸಂಕಲನ, ೨ ಪಾಕಶಾಸ್ತ್ರದ ಪುಸ್ತಕಗಳು, ೧ ಸಂಪಾದಿತ ಕೃತಿ.

೧.  ಕಥಾ ಸಂಕಲನಗಳು

   ೧. ಹೊಣೆ ಮತ್ತು ಇತರ ಕಥೆಗಳು

   ೨. ತೆರೆ

   ೩. ಮುಸ್ಸಂಜೆಯ ಹಕ್ಕಿಗಳು

   ೪. ಮತ್ತೆ ಬಂದಿದೆ ಯುಗಾದಿ

೨.  ಕಾದಂಬರಿಗಳು     

   ೧. ವಿಭಿನ್ನರು ಮತ್ತು ಅನಾವರಣ

   ೨. ನಿಮ್ನ ನಿನಾದ ಮತ್ತು ಕೆಂಪುಚಿನ್ನ

೩.  ನಾಟಕಗಳು

   ೧. ನವರಸಾಭಿನಯ       ೨. ರಸವರ್ಷ      ೩. ಭಾವರಸಧಾರೆ.

ಲೀಲಾಮಣ್ಣಾಲ -ಇವರ ಹವ್ಯಾಸಗಳು- ಸಂಗೀತ, ಪ್ರವಾಸ, ಯೋಗಾಭ್ಯಾಸ ಮತ್ತು ನಾಟಕ

ಸಾಹಿತ್ಯಕ್ಕೆ ಲೀಲಾಮಣ್ಣಾಲ ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿದ್ದಾರೆ.

೧.  ಧಾರವಾಡ, ಕರ್ನಾಟಕ ಸಂಘದಿಂದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ

೨.  ಶಿವಮೊಗ್ಗ ಕರ್ನಾಟಕ ಸಂಘದಿಂದ ಶ್ರೀಮತಿ ಎಂ.ಕೆ. ಇಂದಿರಾ ಪ್ರಶಸ್ತಿ

೩.  ’ಗೌರೀಕಲ್ಯಾಣ’ ಸಣ್ಣಕಥೆಗೆ ಕೊಡಗಿನ ಗೌರಮ್ಮ ಪ್ರಶಸ್ತಿ

೪.  ’ತರಂಗ’ ಪತ್ರಿಕೆಯ ತಿಂಗಳ ಕಥಾ ಪ್ರಶಸ್ತಿ - ಇತ್ಯಾದಿ

 * * *

೯   ಸಿ.ಎನ್. ಮುಕ್ತಾ

ಜನಪ್ರಿಯ ಕಾದಂಬರಿಗಾರ್ತಿಯೆಂದು ಪ್ರಸಿದ್ಧರಾಗಿರುವ ಶ್ರೀಮತಿ ಸಿ.ಎನ್. ಮುಕ್ತಾ ಸಣ್ಣಕಥೆ, ಪ್ರಬಂಧ, ಮಕ್ಕಳ ಕಥೇಗಳು ಹಾಗೂ ಲೇಖನಗಳ ರಚನೆಯಲ್ಲೂ ಆಸಕ್ತಿ ಹೊಂದಿದ್ದಾರೆ. ೩೦-೦೪-೧೯೫೧ರಲ್ಲಿ ಚಿತ್ರದುರ್ಗದಲ್ಲಿ ಜನಿಸಿರುವ ಸಿ.ಎನ್. ಮುಕ್ತಾ ಸುಮಾರು ೩೫ ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆ ಶ್ರೀ ಸಿ.ಬಿ. ನರಸಿಂಹಮೂರ್ತಿ, ತಾಯಿ ಶ್ರೀಮತಿ ಕಮಲಮ್ಮ. ಶ್ರೀಯುತ ನವರತ್ನರಾಮರಾಯರು ತಂದೆಯ ಸೋದರಮಾವ. ಇವರ ದೊಡ್ಡಪ್ಪ ಶ್ರೀ ಸಿ.ಬಿ. ಜಯರಾಯರು ಬೆಂಗಳೂರು ಆಕಾಶವಾಣಿಯಲ್ಲಿ ಕೆಲಸಮಾಡುವುದರ ಜೊತೆಗೆ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದರು. ಅಕ್ಕ ಪದ್ಮಜಾ ಸುಂದರೇಶ್ ಕೂಡ ಲೇಖಕಿ.

ಸಿ.ಎನ್.ಮುಕ್ತಾ ಈವರೆಗೆ ೬೫ ಕಾದಂಬರಿಗಳನ್ನೂ, ಒಂಭತ್ತು ಕಿರುಕಾದಂಬರಿಗಳನ್ನೂ, ೧೪ ಕಥಾ ಸಂಕಲನಗಳನ್ನೂ, ೨ ಪ್ರಬಂಧ ಸಂಕಲನಗಳನ್ನೂ, ೩ ಮಕ್ಕಳ ಕಥಾ ಸಂಗ್ರಹವನ್ನೂ ಹೊರತಂದಿದ್ದಾರೆ. ಪ್ರೌಢಶಾಲಾ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ೩೪ ವರ್ಷ ಸೇವೆ ಸಲ್ಲಿಸಿರುವ ಲೇಖಕಿ ಈಗ ಸಂಪೂರ್ಣ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನಿವೃತ್ತಿಯ ನಂತರ ಕರ್ನಾಟಕ ಲೇಖಕಿಯರನ್ನು ಓದುಗರಿಗೆ ಪರಿಚಯಿಸುವ ಉದ್ದೇಶದಿಂದ ಸಮಾನ ಮನಸ್ಕರಾದ ಶ್ರೀಮತಿ ಬಿ.ಆರ್. ನಾಗರತ್ನ, ಸವಿತಾ ಪ್ರಭಾಕರ್ ಮತ್ತು ರಾಜೇಶ್ವರಿ ಭಾರತಿ - ಇವರ ಜೊತೆ ಸೇರಿ ’ಸ್ನೇಹ ಬಳಗ’ ಎಂಬ ಸಂಘ ಸ್ಥಾಪಿಸಿ, ಲೇಖಕಿಯರ ಕಥಾ ಸಂಚಯ (೪) ಲೇಖಕಿಯರ ಮಕ್ಕಳ ಕಥಾ ಸಂಚಯ (೨), ಕವನ ಸಂಕಲನ (೧), ಅನುವಾದಿತ ಕಥೆಗಳ ಸಂಚಯ (೧) ಲಲಿತ ಪ್ರಬಂಧಗಳ ಸಂಚಯ (೧) ಹಾಸ್ಯ ಲೇಖನಗಳ ಸಂಚಯ (೧) - ಒಟ್ಟು ೧೦ ಸಂಗ್ರಹಗಳನ್ನು ಹೊರತಂದಿದ್ದಾರೆ. ಶ್ರೀ ಎನ್.ಎಸ್. ಶಂಕರ್, ಚಂದ್ರಕಾಂತ್, ಕಟ್ಟೆರಾಮಚಂದ್ರ, ಪಿ. ಶೇಷಾದ್ರಿ -ಇವರ ನಿರ್ದೇಶನದಲ್ಲಿ ಇವರ ಕಾದಂಬರಿಗಳು ದೂರದರ್ಶನ ಧಾರಾವಾಹಿಗಳಾಗಿ ಪ್ರಸಾರವಾಗಿವೆ. ಶ್ರೀಯುತ ರಾಜೇಂದ್ರಸಿಂಗಬಾಬು ನಿರ್ದೇಶನದಲ್ಲಿ ’ದೋಣಿ ಸಾಗಲಿ’, ಶ್ರೀ ಕೋಡ್ಲು ರಾಮಕೃಷ್ಣ - ನಿರ್ದೇಶನದಲ್ಲಿ ’ಮೇಘ ಮಂದಾರ’ (ಮಿಸ್ ಕ್ಯಾಲಿಫೋರ್ನಿಯ) ಚಲನಚಿತ್ರಗಳಾಗಿವೆ.

ಶ್ರೀಯುತ ಟಿ.ಎನ್. ಸೀತಾರಾಂ- ಇವರ ನಿರ್ದೇಶನದಲ್ಲಿ ಇವರ ಸಣ್ಣ ಕಥೆಗಳು ’ಪಾಲು’, ’ಮುಖವಾಡ’ ಕಿರುಚಿತ್ರಗಳಾಗಿವೆ.

ಶ್ರೀಮತಿ ಸಿ.ಎನ್.ಮುಕ್ತಾ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

೧)  ಆರ್ಯಭಟ ಪ್ರಶಸ್ತಿ  ೨) ಗೊರೂರು ಪ್ರತಿಷ್ಠಾನದ ಅತ್ತಿಮಬ್ಬೆ ಪ್ರಶಸ್ತಿ

೩)  ತ್ರಿವೇಣಿ ಪ್ರಶಸ್ತಿ     ೪) ಕರ್ನಾಟಕ ರಾಜ್ಯ ಪ್ರಶಸ್ತಿ (ಚಲನಚಿತ್ರ ಕಥಾ ಸಾಹಿತ್ಯ ಪ್ರಶಸ್ತಿ)

೫)  ಕರ್ನಾಟಕ ಲೇಖಕಿಯರ ಸಂಘದಿಂದ ’ಬನಶಂಕರಮ್ಮ’ ಪ್ರಶಸ್ತಿ.

* * *

೧೦   ಡಾ|| ಗೀತಾ ಸೀತಾರಾಂ

ಸಂಗೀತ ಮತ್ತು ಸಾಹಿತ್ಯ ಎರಡು ಕ್ಷೇತ್ರಗಳಲ್ಲೂ ಸಾಧನೆಮಾಡಿರುವ ಡಾ|| ಗೀತಾಸೀತಾರಾಂ ೧೯ನೇ ಜುಲೈ ೧೯೫೩ರಲ್ಲಿ ಶ್ರೀ ಕಲ್‌ಬಾಗಲ್ ನರಸಿಂಹ ಅಯ್ಯಂಗಾರ್, ಶ್ರೀಮತಿ ಜಯಾಕಲ್‌ಬಾಗಲ್ ದಂಪತಿಗಳಿಗೆ ಜನಿಸಿದ್ದಾರೆ. ಇವರು ಮನಶಾಸ್ತ್ರದಲ್ಲಿ ಎಂ.ಎ. ಮತ್ತು ಗ್ರಂಥಾಲಯ ಶಾಸ್ತ್ರದಲ್ಲಿ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಇವರ ಪತಿ ಯೋಗಶ್ರೀ ಡಾ|| ಎ.ಆರ್. ಸೀತಾರಾಮ್. ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರು.

ಡಾ|| ಗೀತಾ ಸೀತಾರಾಂ ’ಗೀತಾಂಜಲಿ ಸ್ಕೂಲ್ ಆಫ್ ಫೈನ್ ಆರ್ಟ್ಸ್‌ನ ನಿರ್ದೇಶಕಿಯಾಗಿ ಕಳೆದ ೪೦ ವರ್ಷಗಳಿಂದ ಸಂಗೀತದಲ್ಲಿ ಶಿಷ್ಯೆಯರನ್ನು ತಯಾರು ಮಾಡುತ್ತಿದ್ದಾರೆ. ಡಾ|| ಗೀತಾ ಅಮೇರಿಕಾ ಹಾಗೂ ಯೂರೋಪ್‌ಗಳಲ್ಲಿ ಸಂಗೀತ ಕಛೇರಿಗಳನ್ನೂ, ಕಾರ್ಯಾಗಾರಗಳನ್ನೂ ನಡೆಸಿದ್ದಾರೆ.

ಇವರ ಸಾಹಿತ್ಯ ಕೃತಿಗಳು

೧.  ಕಥಾ ಸಂಕಲನಗಳು (೪)

   ೧. ಕಡಲು

   ೨. ಸಾಸಿವೆಯಲ್ಲಿ ಸಾಗರ

   ೩. ಅಂಗೈಯಲ್ಲಿ ಆಗಸ

   ೪. ಬದುಕು ಪಾರಿಜಾತ

೨.  ಕಾದಂಬರಿ ಸಂಕಲನಗಳು

   ೧. ಪೃಥಾ / ಉಂಗುರ

   ೨. ಸಪ್ತಸ್ವರ

   ೩. ಬೇಲಿ

   ೪. ನೆಳಲು

೩.  ಲೇಖನ ಸಂಗ್ರಹ - ಜನನಿ

೪.  ಹಾಸ್ಯ ಬರಹಗಳು - ಗೀತಲಹರಿ

೫.  ವೈಚಾರಿಕ ಸಾಹಿತ್ಯ - ಶ್ರೀಮತಿ ಶಾರದಾದೇವಿ

೬.  ಶಿಶು ಸಾಹಿತ್ಯ -

   ೧. ಪುಸ್ತಕ ನಿಮಗೆಷ್ಟು ಗೊತ್ತು?

   ೨. ಸಂಗೀತ ನಡೆದು ಬಂದ ದಾರಿ

೭.  ರಂಗದರ್ಶನ (೨ ನಾಟಕಗಳು)

   ಸ್ವಾತಿ ತಿರುನಾಳ್ / ಪಿಟೀಲು ಚೌಡಯ್ಯ

ಇವರು ಭೀಷ್ಮ/ಊರ್ಮಿಳಾ/ಜಯಚಾಮರಾಜೇಂದ್ರ ಒಡೆಯರನ್ನು ಕುರಿತಂತೆ ನಾಟಕಗಳನ್ನು ರಚಿಸಿದ್ದಾರೆ.

ಇವರು ತಮಿಳು ಭಾಷೆಯಿಂದ ಎರಡು ಕಾದಂಬರಿಗಳನ್ನು ಟಿ.ಪಿ. ಕೈಲಾಸಂ -ಇವರ ಇಂಗ್ಲೀಷ್ ನಾಟಕವನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಂಗೀತ ಕ್ಷೇತ್ರದಲ್ಲೂ ಡಾ|| ಗೀತಾ ಸೀತಾರಾಂ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಇವರ ಸಾಧನೆ ಗುರುತಿಸಿ ಅನೇಕ ಸಂಘಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.

೧)  ವಿಶ್ವೇಶ್ವರಯ್ಯ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ

೨) ಪುಟ್ಟಣ್ಣ ಕಣಗಾಲ್ ಚಿತ್ರಕಥಾ ಪ್ರಶಸ್ತಿ

೩)  ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣಕಥೆ ಪ್ರಶಸ್ತಿ

೪) ಸಿ.ಎಸ್.ಪಿ.ಆರ್. ಪ್ರಶಸ್ತಿ (ಸಂಗೀತ ಸಂಯೋಜನೆಗೆ)

ಡಾ|| ಗೀತಾ -ಇವರಿಗೆ ೨೦೧೭ರಲ್ಲಿ ’ನಾಟ್ಯ-ಸಾಹಿತ್ಯ ಶಾರದೆ’ ಬಿರುದು ಲಭಿಸಿದೆ.

* * *

೧೧  ನಾಗಲಕ್ಷ್ಮಿ ಹರಿಹರೇಶ್ವರ

ನಾಗಲಕ್ಷ್ಮಿ ಹರಿಹರೇಶ್ವರ ಕನ್ನಡದ ಕಂಪನ್ನು ವಿದೇಶದಲ್ಲಿಯೂ ತಮ್ಮ ಪತಿಯೊಡನೆ ಪಸರಿಸುತ್ತಾ, ಬರವಣಿಗೆಯಲ್ಲೂ ಆಸಕ್ತಿಹೊಂದಿದ್ದು, ಸದಾ ಕನ್ನಡದ ಸೇವೆಗಾಗಿ ತುಡಿಯುವ ಅಪರೂಪದ ಲೇಖಕಿ. ತಂದೆ ಶ್ರೀ ಎಂ.ವಿ. ಗುಂಡಪ್ಪ, ತಾಯಿ ಶ್ರೀಮತಿ ಸೀತಾಲಕ್ಷ್ಮಿ. ಇವರು ಕನ್ನಡ ಎಂ.ಎ. ಪದವೀಧರರಾಗಿ ಕೆಲವು ಕಾಲ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಪತಿಯ ಸಾಹಿತ್ಯಕ ಚಟುವಟಿಕೆಗಳಲ್ಲಿ ಸಹಭಾಗಿಯಾಗಿ ಹೆಜ್ಜೆ ಹಾಕಿದ್ದಾರೆ. ಸಾಹಿತ್ಯ, ಸಮಾಜಸೇವೆಯ ಜೊತೆಗೆ ಆಪ್ತಸಮಾಲೋಚಕರಾಗಿ ಕೆಲಸಮಾಡುತ್ತಿದ್ದಾರೆ. ಪತಿಕಾಲವಾದನಂತರ ಅವರ ಕೃತಿಗಳನ್ನು ಪೂರ್ತಿಮಾಡಿ ಪ್ರಕಟಿಸಿದ ಕೀರ್ತಿ ಇವರದ್ದು.

ಇವರ  ಕೃತಿಗಳು

೧.  ಕಿಶೋರಿ (ಕವನ ಸಂಕಲನ)

೨.  ಕಥಾ ಸಂಕಲನ :

   ೧. ಗಂಡಭೇರುಂಡ ಮತ್ತು ಇತರ ಕಥೆಗಳು

   ೨. ಸೆಳೆತ ಮತ್ತು ಮರುಭೂಮಿ

೩.  ಪ್ರಬಂಧ ಸಂಕಲನಗಳು

   ೧. ಚಿಂತನೆಯ ಅಲೆಗಳು

   ೨. ಏಕಲವ್ಯ ಮತ್ತು ಇತರ ಪ್ರಬಂಧಗಳು

   ೩. ಹರಿಯ ಕಾಣಿಕೆ ಸಂಪುಟ ೧ ಮತ್ತು ೨.

೪.  ಮೌನ ಮಾತಾಡಿದಾಗ

   (ಹರಿಹರೇಶ್ವರ್ ಆತ್ಮಕಥನ - ನಾಗಲಕ್ಷ್ಮಿಯವರು ಪೂರ್ಣಗೊಳಿಸಿದ್ದಾರೆ.)

೫.  ಯಾತ್ರಿ - (ಜೀವನಾಧಾರಿತ ಕೃತಿ)

   ಅಮೇರಿಕನ್ನಡ - ದ್ವೈಮಾಸಿಕ ಸಂಪಾದಕಿಯ ಸಂಪಾದಕಿ

   ಅಮೇರಿಕಾದಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನಗಳ ಸದಸ್ಯೆಯಾಗಿ, ಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ.

ಪ್ರಶಸ್ತಿ - ಸನ್ಮಾನಗಳು

೧.  ನ್ಯೂಜೆರ್ಸಿಯ ತ್ರಿವೇಣಿ ಕನ್ನಡ ಸಂಘದ ಪ್ರಶಸ್ತಿ

೨.  ಟೆಕ್ಸಾಸ್‌ರಾಜ್ಯದ ಹ್ಯೂಸ್ಟನ್ ಕನ್ನಡ ಸಂಘದ ಪ್ರಶಸ್ತಿ

೩.  ಮಿಸ್ಟೌರಿಯ ಸೆಂಟ್‌ಲೂಯಿಸ್ ಕನ್ನಡ ಸಂಸ್ಥೆಯ ಪ್ರಶಸ್ತಿ

೪.  ವಾಷಿಂಗ್ ಟನ್ ಡಿ.ಸಿ.ಯ ಕಾವೇರಿ ಕನ್ನಡ ಸಂಘ - ಇತ್ಯಾದಿ ಸಂಘಗಳು ಸನ್ಮಾನಿಸಿವೆ.

ಮೈಸೂರಿನ ಹೊಯ್ಸಳ ಕನ್ನಡ ಸಂಘ, ಸರ್ವಜ್ಞ ಕನ್ನಡ ಸಂಘ, ರೋಟರಿ ಸಂಸ್ಥೆ, ಕದಳಿ ಮಹಿಳಾ ವೇದಿಕೆ- ನಾಗಲಕ್ಷ್ಮಿಯವರನ್ನು ಸನ್ಮಾನಿಸಿವೆ.

 * * *

೧೨  ಸವಿತಾ ಪ್ರಭಾಕರ್

ಈಗಾಗಲೇ ತಮ್ಮ ಬರಹಗಳಿಂದ ಓದುಗರಿಗೆ ಪರಿಚಿತರಾಗಿರುವ ಸವಿತಾ ಪ್ರಭಾಕರ್ ಗೃಹಿಣಿ ಬಿ.ಎಸ್.ಸಿ ಪದವೀಧರೆ. ಶ್ರೀ ಕೆ.ವಿ.ಶ್ರೀಕಂಠಯ್ಯ ಹಾಗೂ ಲಲಿತಮ್ಮ ದಂಪತಿಗಳಿಗೆ ೨/೮/೧೯೫೬ರಲ್ಲಿ ಜನಿಸಿರುವ ಸವಿತಾ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ. ಬರವಣಿಗೆಯ ಜೊತೆ ಮಕ್ಕಳಿಗೆ ಭಗವದ್ಗೀತೆ, ಲಘುಸಂಗೀತ, ಆಸಕ್ತರಿಗೆ ’ಸಂಸ್ಕೃತ’ಭಾಷೆಯ ಪರಿಚಯ ಮಾಡಿಸುತ್ತಿದ್ದಾರೆ. ಪ್ರತಿವರ್ಷ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಸುತ್ತಿದ್ದು, ಮಕ್ಕಳಿಗೆ ಸಂಗೀತ ಸ್ಪರ್ಧೆ, ಭಾಷಣ ಸ್ಪರ್ಧೆ, ಜಾನಪದ ಆಟಗಳ ಸ್ಪರ್ಧೆ ನಡೆಸಿ ಬಹುಮಾನ ಕೊಡುತ್ತಿದ್ದಾರೆ. ಮಕ್ಕಳಿಗಾಗಿ ನಾಟಕಗಳನ್ನು ನಿರ್ದೇಶಿಸುತ್ತಿದ್ದಾರೆ. ಇವರ ಪತಿ ಶ್ರೀ ಪ್ರಭಾಕರ್ ನಿವೃತ್ತ ಇಂಜಿನಿಯರ್.

ಇವರು ಕಥೆ, ಕಾದಂಬರಿಗಳು, ಹಾಸ್ಯಬರಹ, ಚುಟುಕ ನಾಟಕಗಳು- ಇತ್ಯಾದಿ ರಚಿಸಿದ್ದಾರೆ. ’ಸ್ನೇಹಬಳಗ’ ಸಂಪಾದಿಸಿರುವ ಕಥಾ ಸಂಚಯ, ಮಕ್ಕಳ ಕಥಾ ಸಂಚಯ- ಇತ್ಯಾದಿಗಳಲ್ಲಿ ಸಂಪಾದಕರಾಗಿ, ಸಹ ಸಂಪಾದಕರಾಗಿ ಕೆಲಸಮಾಡಿದ್ದಾರೆ.

ಇವರ ಕೃತಿಗಳು

೧.  ಕಾದಂಬರಿ / ಮಿನಿ ಕಾದಂಬರಿಗಳು (೮)

   ೧. ಹೊಸ ಹೆಜ್ಜೆ     ೨. ನೆಲೆ     ೩. ಪ್ರೀತಿಯ ಪಥ   ೪. ನೂಪುರ ನಿನಾದ

   ೫. ಪಾವನಿ- ಇತ್ಯಾದಿ

೨.  ಕಥಾ ಸಂಕಲನಗಳು (೫)

   ೧. ಸಖೀ ನೀ ಸ್ನೇಹಮಯಿ       ೨. ಬೆಳಗು ಬಾ ಹಣತೆಯನು

   ೩. ೧೦೮ ಹನಿ ಮಿನಿ ಕಥೆಗಳು      ೪. ತಿರುಗುಬಾಣ ಇತ್ಯಾದಿ

೩.  ಮಕ್ಕಳ ಸಾಹಿತ್ಯ (೫)

   ೧. ನಕ್ಷತ್ರಲೋಕ     ೨. ಗಣೇಶನ ಜಾಣತನ     ೩. ರಾಣಿ ಎತ್ತಿದ ಆನೆ. ಇತ್ಯಾದಿ

೪.  ಆಧ್ಯಾತ್ಮಿಕ - ಓಂ ನಮಃ ಶಿವಾಯ

೫.  ವ್ಯಕ್ತಿ ಚಿತ್ರಣ - ನನ್ನ ಅಣ್ಣ ನಾನು ಕಂಡಂತೆ

ಸವಿತಾ ಪ್ರಭಾಕರ್ ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.

೧.  ಅತ್ತಿಮಬ್ಬೆ ಪ್ರತಿಷ್ಠಾನದ ಅತ್ತಿಮಬ್ಬೆ ಪ್ರಶಸ್ತಿ

೨.  ವಿಪ್ರ ಮಹಿಳಾ ಟ್ರಸ್ಟ್, ಮೈಸೂರು - ಇವರಿಂದ, ಕಮಲಮ್ಮ ನರಸಿಂಹಮೂರ್ತಿ ಬಳಗದಿಂದ ಸನ್ಮಾನ, ಪುಟ್ಟರಂಗಪ್ಪ ಟ್ರಸ್ಟ್ ಹಬಸೂರು - ಇವರಿಂದ ಸನ್ಮಾನ.

****

೧೩    ಚಂಚಲಾವೇಣು

 ಚಂಚಲಾವೇಣು ಪತ್ರಿಕೆ, ನಿಯತಕಾಲಗಳಲ್ಲಿ ಸಣ್ಣಕಥೆ ಲೇಖನಗಳನ್ನು ಬಹಳ ವರ್ಷಗಳಿಂದ ಬರೆಯುತ್ತಿದ್ದು ಓದುಗರಿಗೆ ಚಿರಪತಿಚಿತರು. ೧೯೬೧ರ ಡಿಸೆಂಬರ್ ೧೧ರಂದು ಮೈಸೂರಿನಲ್ಲಿ ಶ್ರೀ ಎಚ್.ಎಸ್. ಸತ್ಯನಾರಾಯಣರಾವ್, ಶ್ರೀಮತಿ ಎಚ್.ಎಸ್. ಸುಭದ್ರ -ಇವರಿಗೆ ಜನಿಸಿರುವ ಚಂಚಲ ಬಿ.ಎಸ್.ಸಿ., ಕನ್ನಡ ಎಂ.ಎ. ಪದವೀಧರರು. ಇವರ ಪತಿ ಶ್ರೀ ಕೆ. ವೇಣುಗೋಪಾಲರಾವ್ ನಿವೃತ್ತ ಬ್ಯಾಂಕ್ ಮ್ಯಾನೇಜರ್.

ಇವರ ಒಟ್ಟು ಪ್ರಕಟಿತ ಕೃತಿಗಳು - ೯

೧.  ಕಥಾ ಸಂಕಲನ -೩

   ೧. ಚಿಗುರುಗಳು

   ೨. ಮಾಧವಿ

   ೩. ಮೌನದಾಚೆಯ ಮನಸು

೨.  ಕವನ ಸಂಕಲನ ೧ - ಸುಭದ್ರೆ

೩.  ಹಾಸ್ಯ ಲೇಖನಗಳು ೧ -ನಗೆನಂದನ

೪.  ಪ್ರವಾಸ ಕಥನ ೨ -

   ೧. ಉತ್ತರ ವಿಹಾರ        ೨.    ನೆದರ್ಲೆಂಡ್ ನೆಲದ ಮೇಲೆ

೫.  ಮಕ್ಕಳ ಕಥಾ ಸಂಕಲನ -

   ೧. ಚಿಗುರು ಚಿನ್ನಾರಿ ೨. ಚಿಗುರು ಚಿಂಗಾರಿ

 ಪಡೆದಿರುವ ಪ್ರಶಸ್ತಿ, ಪುರಸ್ಕಾರ.

೧.  ತುಷಾರ ಪತ್ರಿಕೆಯ ಎಚ್.ಎಂ.ಟಿ. ಕಥಾಸ್ಪರ್ಧೆಯಲ್ಲಿ ಬಹುಮಾನ

೨.  ’ಸಂಯುಕ್ತ ಕರ್ನಾಟಕ’ ದೈನಿಕದ ತಿಂಗಳ ಕಥಾಸ್ಪರ್ಧೆಯಲ್ಲಿ ಬಹುಮಾನ

೩.  ಗಂಗರಾಜ ಪುರೋಹಿತ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಸತತ ಮೂರು ಬಾರಿ ಬಹುಮಾನ

೪.  ಪಡುಕೋಣೆ ರಮಾನಂದರಾಯರ ಹಾಸ್ಯಲೇಖನ ಸ್ಪರ್ಧೆಯಲ್ಲಿ ಬಹುಮಾನ

೫.  ಮಂಡ್ಯದ ’ಕೊಳಲು’ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಬಹುಮಾನ

೬.  ’ಉತ್ಥಾನ’ ಪತ್ರಿಕೆಯ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಬಹುಮಾನ - ಇತ್ಯಾದಿ

* * *

೧೪   ಸುಧಾಹರೀಶ್

 ಸುಧಾಹರೀಶ್ ವೃತ್ತಿಯಿಂದ ವಕೀಲರು ಮತ್ತು ನೋಟರಿ. ಮೈಸೂರಿನ ಹತ್ತಾರು ಪ್ರತಿಷ್ಠಿತ ಸಂಘಟನೆಗಳ ಸದಸ್ಯರಾಗಿ, ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದಲ್ಲೂ ಆಸಕ್ತರು. ಇವರ ತಂದೆ ಶ್ರೀ ಎಚ್.ಎನ್. ವೆಂಕಟರಾವ್ ಚಾರ್ಟರ್ಡ್ ಅಕೌಂಟೆಂಟ್. ತಾಯಿ ಶ್ರೀಮತಿ ಸರೋಜ. ಸುಧಾ ಹರೀಶ್ ಬಿ.ಎಸ್.ಸಿ., ಎಲ್.ಎಲ್.ಬಿ., ಎಂ.ಎ.(ಜನಪದ) ಪದವೀಧರರು. ವ್ಯಂಗ್ಯಚಿತ್ರಕಲೆ ಮತ್ತು ಚಿತ್ರಕಲೆಯಲ್ಲಿ ಡಿಪ್ಲೊಮೋ ಪಡೆದಿದ್ದಾರೆ. ಇವರ ಪತಿ ಶ್ರೀ ಟಿ.ಆರ್. ಹರೀಶ್ ಆಡಿಟರ್ ಮತ್ತು ಕಾನೂನು ಸಲಹೆಗಾರರು.

ಇವರು ಕಥೆ, ಕಾದಂಬರಿ, ನಾಟಕ, ಹನಿಗವನ, ಮುಕ್ತಕ- ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ೪೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಇವರ ಕೃತಿಗಳು

೧.  ಕಾದಂಬರಿಗಳು -

   ೧. ಮನ ಮಿಡಿದಾಗ

   ೨. ಚಂದನದ ಮುರುಳಿ

   ೩. ಸಂಶಯದ ನೆರಳು

   ೪. ಮಧುರ ಸಂಗಮ

   ೫. ಸೂರ್ಯೋದಯ

   ೬. ಯಾತ್ರೆ

   ೭. ವರ್ತುಲ - ಇತ್ಯಾದಿ.

೨.  ಕವನ ಸಂಕಲನ -

   ೧. ಸುಧಾಸಿಂಧು    ೨. ತರಂಗಬಿಂದು

   ೩. ನಾದ ನಿನಾದ   ೪. ಭಾವದೀಪ್ತಿ

೩.  ಕಥಾ ಸಂಕಲನ - ನೀಲಿ ಗಾಜಿನ ಚೂರು

೪.  ಮಕ್ಕಳ ಕಥಾ ಸಂಕಲನಗಳು -

   ೧. ಚಿಕ್ಕ ಕಾಡಿನ ರಹಸ್ಯ          ೨.    ಕಡಲಡಿಯ ಶಂಖು

   ೩. ವಿಜ್ಞಾನ ವಿಹಾರ - ಇತ್ಯಾದಿ.

 ಪ್ರಶಸ್ತಿಗಳು :

೧.  ಆರ್ಯಭಟ ಪ್ರಶಸ್ತಿ

೨.  ಅಂಬರೀಶ್ ಸಾಹಿತ್ಯ ಪ್ರಶಸ್ತಿ

೩.  ಕುವೆಂಪು ಸಾಹಿತ್ಯ ಪ್ರಶಸ್ತಿ

೪.  ತ್ರಿವೇಣಿ ಸಾಹಿತ್ಯ ಪ್ರಶಸ್ತಿ

೫.  ದಸರಾ ಕವಿಯತ್ರಿ ಪ್ರಶಸ್ತಿ , ಇತ್ಯಾದಿ.

 ***

೧೫  ಪದ್ಮಜಾ ಸುಂದರೇಶ್

ತಮ್ಮ ಕಾದಂಬರಿ, ಸಣ್ಣಕಥೆಗಳು, ಲೇಖನಗಳಿಂದ ಓದುಗರಿಗೆ ಚಿರಪರಿಚಿತರಾಗಿರುವ ಶ್ರೀಮತಿ ಪದ್ಮಜಾ ಸುಂದರೇಶ್ ೩೩ ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ತಂದೆ ಶ್ರೀಯುತ ಸಿ.ಬಿ. ನರಸಿಂಹಮೂರ್ತಿ, ತಾಯಿ ಶ್ರೀಮತಿ ಸಿ.ಎನ್. ಕಮಲಮ್ಮ. ಇವರ ತಂದೆಯ ಸೋದರಮಾವ ನವರತ್ನರಾಮರಾಯರು ಉತ್ತಮ ಬರಹಗಾರರಾಗಿದ್ದರು.

ದಿ| ಮ.ನ. ಮೂರ್ತಿಯವರ ಪ್ರೋತ್ಸಾಹದಿಂದ ಇವರು ರಚಿಸಿದ್ದ ಮೊದಲ ಕಾದಂಬರಿ ’ಅನಿರೀಕ್ಷಿತ’ ಪ್ರಜಾಮತದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಅಪಾರ ಜನಮನ್ನಣೆಗಳಿಸಿತ್ತು. ಓದುಗರ ಪ್ರೋತ್ಸಾಹವೇ ಇವರು ಬೇರೆ ಕಾದಂಬರಿಗಳನ್ನು ಬರೆಯಲು ಪ್ರೇರಣೆಯಾಯಿತು. ಅಸ್ತಮಾನ, ಅರಸಿಬಂದ ಅದೃಷ್ಟ, ಭಾವನಾ, ಅಜ್ಞಾತೆ, ಪೌರ್ಣಿಮೆಯ ಸಂಜೆಗಳು - ಇವರ ಇತರ ಕಾದಂಬರಿಗಳು. ಈ ಲೇಖಕಿಯ ಸಣ್ಣಕಥೆಗಳು ಮಂಗಳಾ, ಕರ್ಮವೀರ, ಪ್ರಿಯಾಂಕಗಳಲ್ಲಿ ಆಗಾಗ್ಗೆ ಪ್ರಕಟವಾಗುತ್ತಿರುತ್ತವೆ.

ಇತ್ತೀಚೆಗೆ ಅಪರೂಪದ ಸಸ್ಯಗಳನ್ನೂ, ಹಣ್ಣುಗಳನ್ನೂ ಓದುಗರಿಗೆ ಪರಿಚಯಿಸುವಂತಹ ಲೇಖನಗಳನ್ನೂ ಬರೆಯುತ್ತಿದ್ದಾರೆ. ’ಹೊಸ ರುಚಿ’ ವಿಭಾಗಕ್ಕೆ ಲೇಖನ ಬರೆಯುವುದೂ ಕೂಡ ಇವರ ಆಸಕ್ತಿಗಳಲ್ಲಿ ಒಂದು.

* * *

೧೬ ಕೆ.ಜೆ. ಚಂಪಾವತಿ ಶಿವಣ್ಣ

ಚಂಪಾವತಿ ಶಿವಣ್ಣ ಕವಿಯತ್ತಿ, ಸಮಾಜಸೇವಕಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ. ಸಾಗರ ತಾಲೂಕಿನ ಜೋಗ್‌ನಲ್ಲಿ ೧೯೫೭ರಲ್ಲಿ ಶ್ರೀ ಡಿ.ಎ. ಜಗದೀಶ್ ಮತ್ತು ಶ್ರೀಮತಿ ಗಂಗಾಜಗದೀಶ್ ದಂಪತಿಗಳಿಗೆ ಜನಿಸಿರುವ ಇವರು ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಭಾಷಾ ವಿಶಾರದ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಪತಿ ದಿ| ಶ್ರೀ ಎಂ.ಆರ್. ಶಿವಣ್ಣ ಪತ್ರಕರ್ತರಾಗಿದ್ದರು.

ಪ್ರಕಟಿತ ಕೃತಿಗಳು :

೧.  ಕವನ ಸಂಕಲನಗಳು (೧೩)

   ೧. ಕನಸಿನ ಮನಸು       ೨. ಪಾರಿಜಾತ

   ೩. ಸೌಗಂಧಿಕ           ೪. ಮಲೆನಾಡ ಮಲ್ಲಿಗೆ

   ೫. ವನಸುಮ (ನಿಸರ್ಗ ಕವಿತೆಗಳು)

   ೬. ಒಲುಮೆ - ಚಿಲುಮೆ (೧೦೧ ಪ್ರೇಮ ಕವಿತೆಗಳು) ಇತ್ಯಾದಿ.

೨.  ಹನಿಗವನ ಸಂಕಲನಗಳು (೨)

   ೧. ಸೀತಾಳ ದಂಡೆ        ೨. ಚೆಂಗುಲಾಬಿ

೩.  ವಚನ ಸಂಕಲನ (೧)

   ೧. ವಚನ ಕುಸುಮಾಂಜಲಿ

೪.  ಕಥಾ ಸಂಕಲನ (೩)

   ೧. ದಾರಿ    ೨. ದುರ್ಗಾಬರೆಯುತ್ತಾಳೆ         ೩. ಹುವ್ವಿ

೫.  ಕಿರುನಾಟಕ - ರಾಣಿ ಅಬ್ಬಕ್ಕಾದೇವಿ

 ಅಭಿನಂದನಾ ಗ್ರಂಥಗಳ ಸಂಪಾದಕಿಯಾಗಿ -

೧) ಹಳ್ಳಿ ಹೈದ (ಡಾ| ದೊಡ್ಡ ರಂಗೇಗೌಡರ ೭೨ನೇ ಜನ್ಮದಿನಕ್ಕೆ ಅರ್ಪಿಸಿದ ಅಭಿನಂದನಾ ಗ್ರಂಥದ ಸಂಪಾದಕಿ)

೨) ಸಾಹಿತಿ ಸಾತನೂರ್ ದೇವರಾಜರ ಅಭಿನಂದನಾ ಗ್ರಂಥದ ಕಾರ್ಯಕಾರಿ ಸಮಿತಿ ಸದಸ್ಯೆ.

೩)  ದೊಡ್ಡ ರಂಗೇಗೌಡರ ೭೫ನೇ ಜನ್ಮದಿನಕ್ಕೆ ಅರ್ಪಿಸುತ್ತಿರುವ ಅಭಿನಂದನಾ ಗ್ರಂಥದ ಸಂಪಾದಕಿ

* * *

೧೭  ಶ್ಯಾಮಲಾಮೂರ್ತಿ

ಹಿರಿಯಲೇಖಕಿ, ಸಾಮಾಜಿಕ ಸೇವಾಕರ್ತರು, ಅಸಂಖ್ಯಾತ ಪ್ರಶಸ್ತಿ ಸನ್ಮಾನಗಳಿಂದ ಪುರಸ್ಕೃತರಾಗಿರುವವರು ಶ್ರೀಮತಿ ಶ್ಯಾಮಲಾಮೂರ್ತಿ. ಇವರು ತುಮಕೂರು ಜಿಲ್ಲೆಯ ಸಂಪಿಗೆ ಗ್ರಾಮದವರು. ತಂದೆ ಶ್ರೀ ನರಸಿಂಹಯ್ಯ, ತಾಯಿ ಶ್ರೀಮತಿ ಯೆಂಕಟಲಕ್ಷಮ್ಮ. ಇವರು ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯಿಂದ ಪ್ರವೀಣ್ ಪದವಿ ಪಡೆದಿದ್ದಾರೆ. ಇವರ ಪತಿ ಶ್ರೀ ಎ.ಎನ್.ಮೂರ್ತಿ ಜೀವವಿಮಾ ನಗಮದ ನಿವೃತ್ತ ಸೀನಿಯರ್ ಬ್ರ್ಯಾಂಚ್ ಮ್ಯಾನೇಜರ್.

ಶ್ಯಾಮಲಾಮೂರ್ತಿ ೪೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕಥೆ, ಕಾದಂಬರಿ, ಚುಟುಕುಗಳು, ಆಧುನಿಕ ವಚನಗಳು, ಮಕ್ಕಳ ಸಾಹಿತ್ಯ, ಕೃತಿಗಳು, ಪ್ರವಾಸ ಸಾಹಿತ್ಯ - ಇತ್ಯಾದಿ ಸಾಹಿತ್ಯದ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.

ಪ್ರಕಟಿತ ಕೃತಿಗಳು

೧.  ಕವನ ಸಂಕಲನ -

   ೧. ಚಿತ್ರಾಂಜಲಿ     ೨. ತೂಗಿರೆ ಕಾವ್ಯವ ಹಾಡಿರೇ ಕವನವ (೧೦೦ ಕವನಗಳು)

೨.  ಕಾದಂಬರಿ - ೧. ಜೀವನರಾಗ ೨. ಹೆಜ್ಜೆಗಳು ೩. ಮಧುಸ್ಮಿತಾ ೪. ದೀರ್ಘ ಸುಮಂಗಲಿ

೩.  ಆಧ್ಯಾತ್ಮಿಕ - ೧. ಶಿವಮಂದಾರ ಮಾಲೆ -ದೇವಿ ದರ್ಶನಂ

೪.  ವಚನಗಳು - ೧. ವಚನಂ ಮಧುರಂ  ೨. ಯೋಗ ಮಾಯಿ ವಚನಗಳು

೫.  ಚುಟುಕ ಸಂಕಲನ - ೧. ಚುಕ್ಕಿ ಚೆಂದ ಚುಟುಕುಗಳು

೬.  ಪ್ರವಾಸ ಕಥನಗಳು - ೧. ಗೋವಾ ಪ್ರವಾಸ ಕಥನ  ೨.   ಕನ್ಯಾಕುಮಾರಿ ಪ್ರವಾಸ ಕಥನ

   ೩. ವೈದ್ಯಕಾಶಿ (ಉದಕ ಮಂಡಲ)  ೪.  ಧರ್ಮ ತಪಸ್ವಿನಿ ವಾಸವೀದೇವಿ

   ೫. ಸೈಲೆಂಟ್‌ವ್ಯಾಲಿ (ಕುದುರೆಮುಖ) ಇತ್ಯಾದಿ

 ಪ್ರಶಸ್ತಿ ಪುರಸ್ಕಾರ

೧.  ಅತ್ತಿಮಬ್ಬೆ ಪ್ರತಿಷ್ಠಾನದ ’ಅತ್ತಿಮಬ್ಬೆ ಪ್ರಶಸ್ತಿ’

೨.  ಕುವೆಂಪು ಸಾಹಿತ್ಯರತ್ನ ಪ್ರಶಸ್ತಿ ೨೦೧೪

೩.  ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಮೈಸೂರು - ಜೀವಮಾನ ಸಾಧನೆ ಪ್ರಶಸ್ತಿ

೪.  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ (೨೦೧೨-೧೩)

೫.  ಸಾರ್ಥಕ ಸಾಧಕರು ಪ್ರಶಸ್ತಿ (ಕನ್ನಡ ಸಂಸ್ಕೃತಿ ಇಲಾಖೆ ಕ.ಸಾ.ಪ. ಮೈಸೂರು) ಇತ್ಯಾದಿ.

* * *

೧೮  ಲತಾ ಮೋಹನ್

ಲತಾಮೋಹನ್ ಪತ್ರಕರ್ತರಾಗಿ ಕೆಲಸಮಾಡುತ್ತಿದ್ದಾರೆ. ಹಾಗೂ ಸಾಹಿತ್ಯ ಸಂಸ್ಕೃತಿಯ ’ಸ್ನೇಹ ಸಿಂಚನ ಟ್ರಸ್ಟ್’ ಸಂಘಟಿಸಿ ಅಧ್ಯಕ್ಷರಾಗಿ ಕೆಲಸಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಇವರ ಪತಿ ಶ್ರೀ ಎಸ್.ಆರ್. ಮೋಹನ್‌ಕುಮಾರ್ ಪೋಲಿಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಲತಾಮೋಹನ್ ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ.

೧.  ಕವನ ಸಂಕಲನ - ಭಾವಪಲ್ಲಕ್ಕಿ

೨.  ಲೇಖನಗಳ ಸಂಕಲನ -

   ೧. ಹೃನ್ಮನದಿಂದ

   ೨. ಹಬ್ಬಗಳ ಹೂರಣ - ಸಂಸ್ಕೃತಿಯ ತೋರಣ

೩.  ವೈಚಾರಿಕ ಲೇಖನಗಳು - ವಿಚಾರ ವೈವಿಧ್ಯ

ಇವರ ಇತರ ಹವ್ಯಾಸಗಳು - ಕಿರುಚಿತ್ರ, ಸಾಕ್ಷ್ಯ ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದು, ನಿರ್ದೇಶನ ಮಾಡುವುದು, ಸಮಾಜ ಸೇವೆ.

 ಲತಾಮೋಹನ್ - ಇವರಿಗೆ ಲಭಿಸಿರುವ ಸನ್ಮಾನಗಳು :

೧.  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

೨.  ಕಾಮಧೇನು ಕಲ್ಪವೃಕ್ಷ ಪ್ರಶಸ್ತಿ

೩.  ಸ್ತ್ರೀರತ್ನ ಪ್ರಶಸ್ತಿ

೪.  ಪತ್ರಿಕಾರಂಗದ ’ಚೇತನ’ ಬಿರುದು

೫.  ಸಾಹಿತ್ಯ ಸಿಂಧು ಬಿರುದು.

ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

 * * *

೧೯  ಅಲಕಾ ಕಟ್ಟೆಮನೆ

ಅಲಕಾ ಕಟ್ಟೆಮನೆಯವರು ಮೈಸೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರದ ಐದು ವರ್ಷಗಳು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ತಂದೆ ಡಾ|| ರಾಮಕೃಷ್ಣಜೋಶಿ. ತಾಯಿ ಡಾ|| ಚಂದ್ರಮತಿ ಸೋಂದಾ. ಇವರ ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಇವರ ಪ್ರಥಮ ಕಥಾಸಂಕಲನ ’ಶಾಲ್ಮಲೆಯ ಹೊನಲಲ್ಲಿ’ ಬಿಡುಗಡೆಯಾಗಿದೆ. ಇತ್ತೀಚೆಗೆ ಅಲಕಾಕಟ್ಟೆಮನೆಯವರ ಮತ್ತೊಂದು ಕಥಾ ಸಂಕಲನ "ಹೊರಳುಹಾದಿಯ ನೋಟ" ಓದುಗರ ಮೆಚ್ಚುಗೆ ಗಳಿಸಿದೆ.

ಅಲಕಾ ಕಟ್ಟೆಮನೆ ಪಡೆದಿರುವ ಪುರಸ್ಕಾರ, ಪ್ರಶಸ್ತಿಗಳು :

೧.  ೨೦೦೬ರ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ.

೨.  ೨೦೦೭ರ ಕನ್ನಡಪ್ರಭ ಸಂಕ್ರಾಂತಿ ಕಥಾಸ್ಪಧೆರ್ಯಲ್ಲಿ ಮೂರನೇ ಬಹುಮಾನ

೩.  ೨೦೧೧ರ ’ಪ್ರಜಾವಾಣಿ’ ದೀಪಾವಳಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ

೪.  ೨೦೧೩ರ ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ಸಾಹಿತ್ಯ ಪುರಸ್ಕಾರ

೫.  ಬಿ.ಎಂ.ಶ್ರೀ ಪ್ರತಿಷ್ಠಾನದ ಶಾ, ಬಾಲುರಾವ್ ಯುವ ಸಾಹಿತ್ಯ ಪುರಸ್ಕಾರ ಲಭಿಸಿವೆ.

* * *

ಭಾಗ ೩

೧   ವಿಜಯಾ ಶಂಕರ

 ’ವಿಜಯಾಶಂಕರ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಶ್ರೀಮತಿ ಎ. ವಿಜಯಕುಮಾರಿ ಎಂ.ಎ.ಬಿ.ಎಡ್. ಮಾಡಿ, ಪ್ರೌಢಶಾಲಾ ಶಿಕ್ಷಕಿಯಾಗಿ, ಕನ್ನಡ ಪಂಡಿತ್ ವಿಭಾಗದಲ್ಲಿ ಭಾಷಾ ಉಪನ್ಯಾಸಕಿಯಾಗಿ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ಪದವಿಪೂರ್ವಕಾಲೇಜಿನ ಭಾಷಾ ಉಪನ್ಯಾಸಕಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಉತ್ತಮವಾಗ್ಮಿ. ಮೈಸೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ೧೯೭೪ರಿಂದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಬಸವ ಸಮಿತಿಯ ಸಕ್ರಿಯ ಸದಸ್ಯರಾಗಿ ’ಶರಣ ಸಾಹಿತ್ಯ’ಕ್ಕೆ ಸಂಬಂಧಪಟ್ಟ ಧಾರ್ಮಿಕ ಉಪನ್ಯಾಸಗಳನ್ನು ನೀಡುತ್ತಿದ್ದಾರೆ.

ತೆಲುಗು ಭಾಷೆಯಿಂದ ಅನೇಕ ಕೃತಿಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸಿದ್ದಾರೆ. ಅನೇಕ ಕೃತಿಗಳು ಸುಧಾ, ತರಂಗ, ಮಂಗಳಾ ವಾರಪತ್ರಿಕೆಗಳಲ್ಲಿ ’ಧಾರಾವಾಹಿ’ಗಳಾಗಿ ಪ್ರಕಟವಾಗಿವೆ.

ಅನುವಾದ ಸಾಹಿತ್ಯ

೧.  ಕಾದಂಬರಿಗಳು : 

   ೧. ಇದು ಯಾವ ನ್ಯಾಯ (ಎರಡು ಮುದ್ರಣ) ೨. ಅರಾಲ್ದೇಟ್

   ೩. ಆ ದಿನಗಳು                       ೪. ಆತ್ಮ ಸಖ

   ೫. ಶಿವ (ಜಾನಪದ)    ೬.೨೬/೧೧ (ಭಯೋತ್ಪಾದಕರ ಬರ್ಬರ ಕೃತ್ಯಕ್ಕೆ ನಲುಗಿದ ಮುಂಬೈ)

   ೭. ಶಿರಡಿಯ ಸಿರಿ      ೮. ಸ್ವರ್ಣಖಡ್ಗ

   ೯. ಖೈದಿ ಇತ್ಯಾದಿ

೨.  ಕಥಾ ಸಂಕಲನಗಳು :

   ೧. ಅನಾವರಣ (ಸ್ವತಂತ್ರಕೃತಿ)

   ೨. ಬೊಗಸೆನೀರು

   ೩. ಮರಣದಿಂದ ಮರಣದವರೆಗೆ

೩.  ಕನ್ನಡದಿಂದ ತೆಲುಗಿಗೆ (ಶ್ರೀಮತಿ ವಾಣಿಯವರ ಬಾಳೆಯನೆರಳು) : ಅರಟಿನೀಡ

೪.  ವಸುಧೆ - (ಸಂಪಾದಿತಕೃತಿ)

ಇವರ ಅನೇಕ ಕಥೆಗಳು ತೆಲುಗಿನ ’ವಿಪುಲ; ’ಚತುರ’ಗಳಲ್ಲಿ ಪ್ರಕಟವಾಗಿವೆ. ಇವರ ಭಾಷಣಗಳು, ಚಿಂತನಗಳು, ಹೊಸ ಪುಸ್ತಕ ಪರಿಚಯ ಕಾರ್ಯಕ್ರಮಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.

* * *

೨   ಜಯಂತಿ ಅಮೃತೇಶ್

 ಜಯಂತಿ ಅಮೃತೇಶ್ ಬಹಳ ವರ್ಷಗಳ ಕಾಲ ಮುಂಬೈನಲ್ಲಿ ವಾಸಮಾಡಿದ್ದು, ಪತಿ ನಿವೃತ್ತರಾದ ನಂತರ ಮೈಸೂರುನಗರಕ್ಕೆ ಬಂದು ನೆಲೆಸಿದ್ದಾರೆ. ಇವರ ತಂದೆ ಶ್ರೀ ವೆಂಕಟನಾಥ್, ತಾಯಿ ಶ್ರೀಮತಿ ಲಲಿತಮ್ಮ. ಇವರು ಬಿ.ಎ. ಪದವೀಧರೆ. ಇವರ ಪತಿ ಶ್ರೀ ಎಸ್. ಅಮೃತೇಶ್ ನಿವೃತ್ತ ಮ್ಯಾನೇಜರ್ ದಿಟೈಮ್ಸ್ ಆಫ್ ಇಂಡಿಯಾ (ಮುಂಬೈ)

ಶ್ರೀಮತಿ ಜಯಂತಿ ಅಮೃತೇಶ್ - ಇವರ ಪ್ರಕಟಿತ ಕೃತಿಗಳು ಐದು. ಕನ್ನಡದಲ್ಲಿ ಒಂದು. ಆಂಗ್ಲಭಾಷೆಯಲ್ಲಿ ಒಂದು. ಅನುವಾದಿತ ಕೃತಿಗಳು ಮೂರು.

೧.    ಭದ್ರಾಚಲ ರಾಮದಾಸರ ಸಮಗ್ರ ಸಾಹಿತ್ಯವನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

೨.    ಗಾನಸರಸ್ವತಿ ಎಂ.ಎಸ್. ಸುಬ್ಬಲಕ್ಷ್ಮಿಯವರ ಬಗ್ಗೆ ಬರೆದ ಲೇಖನಗಳ ಸಂಕಲನವನ್ನು ತಮಿಳಿನಿಂದ ಕನ್ನಡಕ್ಕೆ ಅನುವಾಸಿಸಿದ್ದಾರೆ.

೩.    ವಾಗ್ಗೇಯಕಾರ ಸದಾಶಿವರಾಯರ ಕೃತಿಗಳನ್ನು ಕನ್ನಡದಿಂದ ಇಂಗ್ಲೀಷ್‌ಗೆ ಸ್ವರ ಸಾಹಿತ್ಯ ಸಹಿತ ಅನುವಾದಮಾಡಿದ್ದಾರೆ.

ಇವರ ಹಲವಾರು ಲೇಖನಗಳು ೧೯೯೩ರಿಂದ ಪ್ರಸಿದ್ಧ ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.

ಇವರ ಇತರ ಹವ್ಯಾಸಗಳು ಓದು ಮತ್ತು ಸಂಗೀತ.

 * * *

೩   ಶಶಿಕಲಾ ಸುಬ್ಬಣ್ಣ

  ಶಿಕ್ಷಕಿಯಾಗಿ, ಅನುವಾದಕಿಯಾಗಿ, ಲೇಖಕಿಯಾಗಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಶಶಿಕಲಾ ಸುಬ್ಬಣ್ಣ ಜನಿಸಿರುವುದು ಮೈಸೂರಿನಲ್ಲಿ. ಇವರ ತಂದೆ ಶ್ರೀ ಬಿ.ಎಂ. ತಿಪ್ಪೇಸ್ವಾಮಿ. ತಾಯಿ ಶ್ರೀಮತಿ ಪುಟ್ಟತಾಯಮ್ಮ. ಬಿ‌ಎಸ್.ಸಿ. ಪದವೀಧರರಾದ ಶಶಿಕಲಾ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲೆರಡರಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಪತಿ ಶ್ರೀಯುತ ಬಿ.ಡಿ. ಸುಬ್ಬಣ್ಣನವರು. ಜೆ.ಎಸ್.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲರು.

ಶಶಿಕಲಾ ಸುಬ್ಬಣ್ಣ ಕನ್ನಡಭಾಸೆಯಲ್ಲಿ ಎರಡು ಕವನ ಸಂಕಲನಗಳು, ಮೂರು ನಾಟಕಗಳು ಮತ್ತು ಮೂವತ್ತಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ರಚಿಸಿದ್ದಾರೆ.

ಇವರು ಹಿಂದಿಯಿಂದ ಅನುವಾದ ಮಾಡಿರುವ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ.

೧.    ಮೈಥಿಲಿ ಶರಣಗುಪ್ತರ ’ಯಶೋಧರಾ’

೨.    ಹರಿವಂಶರಾಯ್ ಬಚ್ಚನ್ - ಇವರ ’ಮಧುಶಾಲಾ’ ’ಮಧುಬಾಲಾ’ ’ಮಧುಕಳಸ’ ಕಾವ್ಯಗಳ ಅನುವಾದ

೩.    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀಲಾಲ್‌ಶುಕ್ಲರವರ ಕಾದಂಬರಿ ’ಸೂನಿ ಘಾಟ್ಕಾ ಸೂರಜ್’ ಅನುವಾದ.

೪.    ಪಂಡಿತ ದೀನದಯಾಳ್ ಉಪಾಧ್ಯಾಯರ ಸಮಗ್ರ ಕೃತಿಗಳ ಭಾಗಶಃ ಅನುವಾದ

೫.    ಇಂಗ್ಲೀಷ್ ಭಾಷೆಯಿಂದ ರವೀಂದ್ರನಾಥ್ ಠಾಗೂರರ ’ಗೀತಾಂಜಲಿ’ಯ ಅನುವಾದ, ಇತ್ಯಾದಿ.

 ಕನ್ನಡದಿಂದ ಹಿಂದಿಗೆ

೧.    ಎಚ್. ತಿಪ್ಪೇರುದ್ರಸ್ವಾಮಿಯವರ ’ಕರ್ತಾರನ ಕಮ್ಮಟ’ ಅನುವಾದ

೨.    ಕುವೆಂಪು-ಇವರ ಶ್ರೀಸಾಮಾನ್ಯರ ದೀಕ್ಷಾಗೀತೆ ಮನೆಮನೆಯ ತಪಸ್ವಿಗಳ ಅನುವಾದ

೩.    ಬೋಳುವಾರ್ ಮೊಹಮದ್ ಕುಂಞರವರ ಕಥೆ ’ಅಂಕ’ ಅನುವಾದ, ಇತ್ಯಾದಿ.

* * *

೪ ಟಿ.ಎಸ್. ಲಲಿತ

  ಟಿ.ಎಸ್. ಲಲಿತಾ ಉತ್ತಮ ಅನುವಾದಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ತಂದೆ ಶ್ರೀ ಜಿ.ಎ.ಸುಬ್ಬರಾವ್, ತಾಯಿ ಶ್ರೀಮತಿ ಜಾನಕಮ್ಮ. ಇವರ ಪತಿ ಎಚ್.ಆರ್. ಸುಂದರೇಶನ್ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ರೀಜನಲ್ ಮ್ಯಾನೇಜರಾಗಿದ್ದು ನಿವೃತ್ತರು.

೨೦೧೧ರಲ್ಲಿ ಇವರ ಸ್ವತಂತ್ರ ಕಥೆಗಳ ಸಂಕಲನ ’ಹಂದರ’ ಪ್ರಕಟವಾಗಿದೆ.

ಶ್ರೀಮತಿ ಲಲಿತಾ-ಇವರು ಮಾಡಿರುವ ಅನುವಾದಗಳು ಮಹತ್ತರವಾದುದು.

೧.    ಹಿಂದಿಯಿಂದ ಕನ್ನಡಕ್ಕೆ ಮುನ್ಷಿ ಪ್ರೇಮಚಂದರ ೩೫ ಕಥೆಗಳು

೨.    ಇಂಗ್ಲೀಷ್‌ನಿಂದ ಕನ್ನಡಕ್ಕೆ ಅಲೆಗ್ಜಾಂಡರ್ ಡ್ಯೂಮಾಸ್’ನ ’ದಿ. ಕೌಂಟ್ ಆಫ್ ಮಾಂಟೆಕ್ರಿಸ್ಟೋ’ ಕಾದಂಬರಿ.

೩.    ಇಂಗ್ಲೀಷ್‌ನಿಂದ ಕನ್ನಡಕ್ಕೆ ಭಾರತೀಯ ವಿದ್ಯಾಭವನದ ಭಾರತೀಯ ಇತಿಹಾಸಮಾಲಿಕೆಯ ಹತ್ತು ಸಂಚಿಕೆಗಳು, ’ದಿ ಹಿಸ್ಟರಿ ಆಫ್ ಇಂಡಿಯನ್ ಪೀಪಲ್’.

೪.    ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಗಾಗಿ ವಿಲ್ ಡ್ಯೂರಾಂಟರ ’ದಿ ಸ್ಟೋರಿ ಆಫ್ ಸಿವಿಲಿಜೇಷನ್ನಿನ ಆಯ್ದ ಅಧ್ಯಾಯಗಳು’ (೨೦೦೮)

೫.    ’ಸ್ವಾಮಿ ವಿವೇಕಾನಂದ- ದಿ ಪ್ರಾಫಟ್ ಆಫ್ ವೇದಾಂತಿಕ್ ಸೋಷಿಯಲಿಸಂ’ ಅನುವಾದ

೬.    ಕೆ.ಎಂ. ಮುನ್ಷಿಯವರ ’ಕೃಷ್ಣಾವತಾರ’ ಎರಡನೆಯ ಭಾಗದ ಅನುವಾದ ಇತ್ಯಾದಿ.

ಇವರ ಇತರ ಹವ್ಯಾಸಗಳು ಓದು, ಬರಹ, ಸಂಘ-ಸಂಸ್ಥೆಗಳ ಒಡನಾಟ.

 * * *

೫  ಡಾ|| ಎಂ.ಸಿ. ಮೋಹನಕುಮಾರಿ

(ಗೀತಾ ಮಹದೇವಪ್ರಸಾದ್)

   ಮಾಜಿ ಸಚಿವ ದಿ || ಶ್ರೀ ಎಚ್.ಎಸ್. ಮಹದೇವಪ್ರಸಾದ್ - ಇವರ ಧರ್ಮಪತ್ನಿ ಡಾ|| ಎಂ.ಸಿ. ಮೋಹನಕುಮಾರಿ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದು ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ. ೪ ಫೆಬ್ರವರಿ ೧೯೬೧ರಂದು ಮೈಸೂರಿನ ಶ್ರೀ ಪಿ.ಎಂ. ಚೆನ್ನಬಸವಣ್ಣ ಮತ್ತು ಶ್ರೀಮತಿ ಎಚ್.ಎನ್. ಸರೋಜ -ದಂಪತಿಗಳಿಗೆ ಜನಿಸಿರುವ ಗೀತಾ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. (ಇಂಗ್ಲೀಷ್) ಪಿ.ಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ.

೧.  ಕನ್ನಡದ ಕೃತಿಗಳು

   ೧. ಕವನ ಸಂಕಲನಗಳು

   ೨. ತಾಯಿಗಾಗಿ

   ೩. ನಿವೇದನೆ

೨. ಆಂಗ್ಲ ಭಾಷೆಯ ಕೃತಿಗಳು -

   ೧. ದಿ ಇಂಟೀರಿಯರ್ (ಕವನ ಸಂಗ್ರಹ)

   ೨. ಮೈ ವಿಸಿಟ್ ಟು ಯು.ಎಸ್.ಎ. (ಪ್ರವಾಸ ಸಾಹಿತ್ಯ)

 ಇವರ ಪಿ.ಎಚ್.ಡಿಯ ಪ್ರೌಢಪ್ರಬಂಧ

೧೦೪ ವಿಮೆನ್ ವಿಲ್ ಇನ್‌ಸ್ಟೈರ್.

 * * *

ಭಾಗ ೪

೧   ವಾಣಿ ಸುಬ್ಬಯ್ಯ

ವಾಣಿ ಸುಬ್ಬಯ್ಯ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಪಠ್ಯದ ಜೊತೆಗೆ ಮಕ್ಕಳಿಗೆ ಗಮಕ, ಸುಸಂಸ್ಕೃತಿಯ ಪಾಠ ಕಲಿಸುತ್ತಾ, ಅವರಲ್ಲಿ ಸಾಹಿತ್ಯಾಸಕ್ತಿ ಹುಟ್ಟಿಸಿರುವ ಉತ್ಸಾಹಿಗಳು. ತಂದೆ ಶ್ರೀ ಎ.ಆರ್. ಸುಬ್ಬಕೃಷ್ಣಶಾಸ್ತ್ರಿ. ತಾಯಿ ಶ್ರೀಮತಿ ಎ.ಎಸ್. ಕಮಲಮ್ಮ. ಇವರು ವಿವಾಹದ ನಂತರ ವಿದ್ಯಾಭ್ಯಾಸ ಮುಂದುವರೆಸಿ ಬಿ.ಎ., ಎಂ.ಎ., ಬಿ.ಇಡಿ. ಪದವಿ ಪಡೆದು, ಪ್ರೌಢಶಾಲಾ ಶಿಕ್ಷಕಿಯಾದವರು. ಗಮಕಕಲೆ ಮತ್ತು ಸಂಗೀತ, ದೇವರನಾಮ ಪರೀಕ್ಷೆಗಳಲ್ಲೂ ಉತ್ತೀರ್ಣರಾದವರು. ಪತಿ ಶ್ರೀ ಬಿ.ವಿ. ವೆಂಕಟಸುಬ್ಬಯ್ಯ. ನಿವೃತ್ತ ಐಡಿಯಲ್‌ಜಾವಾ ನೌಕರರು.

 ಇವರ ಕೃತಿಗಳು

೧.  ಶಾರದಾವಾಣಿ ಪ್ರಕಾಶನದ ಪುಸ್ತಕಗಳು

   ೧. ಹೂಬನ       ೨.    ಭಾವ ಪುಷ್ಪಾಂಜಲಿ

   ೩. ಭಾವತರಂಗ    ೪.    ಭಕ್ತಿ ಗಾನಾಮೃತ

   ೫. ಹರ್ಷಗಾನ ೬.    ಮುಕ್ತಕ ವಾಣಿ

   ೭. ಪುಟ್ಟಿ ಕಲರವ, ಅಜ್ಜಿ ಗೀತರವ (ಶಿಶುಗೀತೆಗಳು ಮತ್ತು ಕಥೆಗಳು)

ಇವರು ಆಶುಕವಿತೆ ರಚನೆ, ಭಕ್ತಿಗೀತೆಗಳ ರಚನೆಯಲ್ಲಿ ಸಿದ್ಧಹಸ್ತರು.

೧.  ಡಿ.ಎಸ್.ಇ.ಆರ್.ಟಿ. ಕನ್ನಡ ೨ನೇ ತರಗತಿ ಪಠ್ಯಪುಸ್ತಕದಲ್ಲಿ ’ಕಡಲು’ ಪದ್ಯ ಆಯ್ಕೆಯಾಗಿದೆ.

೨.  ಇ-ಟೆಕ್. ಕನ್ನಡ ೩ನೇ ತರಗತಿ ಪಠ್ಯಪುಸ್ತಕದಲ್ಲಿ ’ನಮ್ಮ ಹಾಡು’ ಪದ್ಯ ಪ್ರಕಟವಾಗಿದೆ.

ಇವರು ಆಕಾಶವಾಣಿಯ ನಾಟಕ ವಿಭಾಗದ ’ಬಿ’ ಗ್ರೇಡ್‌ಕಲಾವಿಧರು.

 ಪ್ರಶಸ್ತಿ - ಪುರಸ್ಕಾರ

೧.  ಡಾ. ಕೆ.ಎಸ್. ರತ್ನಮ್ಮ ಸಾಹಿತ್ಯ ಪ್ರಶಸ್ತಿ

೨.  ವಿಶ್ವಮಾನ್ಯ ಕನ್ನಡ ಪ್ರಶಸ್ತಿ

೩.  ಡಿ.ಎಲ್. ವಿಜಯಕುಲಾರಿ ಸಾಹಿತ್ಯ ಪ್ರಶಸ್ತಿ

೪.  ಕುಮಾರವ್ಯಾಸ ಪೀಠ ಸನ್ಮಾನ (ಕೋಳಿವಾಡ-ಗದಗ)

೫.  ಜರ್ಮನಿಯಲ್ಲೂ ಗಮಕವಾಚನ, ವ್ಯಾಖ್ಯಾನ, ಸನ್ಮಾನ.

ಮೂವತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಇವರ ಮುಡಿಗೇರಿವೆ.

 * * *

೨   ಶಾಂತಾ ಜಗದೀಶ್

 ಶಾಂತಾ ಜಗದೀಶ್ ಮೈಸೂರಿನ ಪ್ರಮುಖ ಸುಗಮ ಸಂಗೀತ ಗಾಯಕರಲ್ಲಿ ಒಬ್ಬರು. ಜೊತೆಗೆ ಲೇಖಕಿ, ಕವಿಯತ್ರಿ, ಆಧುನಿಕ ವಚನಗಾರ್ತಿಯಾಗಿದ್ದಾರೆ. ಇವರ ತಂದೆ ಶ್ರೀ ಬಿ.ಕೆ. ರಾಜಶೇಖರಯ್ಯ, ತಾಯಿ ಶ್ರೀಮತಿ ಆರ್. ಸರ್ವಮಂಗಳಮ್ಮ. ಇವರ ಪತಿ ದಿ. ಡಾ|| ಜಗದೀಶ್, ಸರ್ಕಾರಿ ವೈದ್ಯಾಧಿಕಾರಿಯಾಗಿದ್ದರು.

ಆಕಾಶವಾಣಿಯ ಸುಗಮಸಂಗೀತ ಕಲಾವಿಧೆಯಾಗಿರುವ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೋಂದಾಯಿತ ಕಲಾವಿದರೂ ಆಗಿದ್ದಾರೆ. ಹಳೆಗನ್ನಡಕಾವ್ಯ, ಶಾಸನ ಪದ್ಯಗಳು, ಇಂದಿನ ಗೀತೆಗಳು ಯಾವುದಕ್ಕಾದರೂ ರಾಗ ಸಂಯೋಜನೆ ಮಾಡಿ ಹಾಡಬಲ್ಲ ಸಾಮರ್ಥ್ಯ ಹೊಂದಿರುವವರು. ವಚನಗಾಯನವನ್ನೇ ಸತತ ಮೂರು ಗಂಟೆಗಳ ಅವಧಿಗೆ ವಿಸ್ತರಿಸಿ ಕಾರ್ಯಕ್ರಮ ನಡೆಸಿಕೊಟ್ಟ ಮೊದಲಿಗರು.

ಇವರು ರಚಿಸಿ ಪ್ರಕಟಿಸಿರುವ ಸಾಹಿತ್ಯ -ಕೃತಿಗಳು ಐದು. ಇವುಗಳಲ್ಲಿ ಮೂರು ಕವನಸಂಕಲನಗಳು, ಒಂದು ವಿಮರ್ಶಾ ಲೇಖನಗಳ ಸಂಕಲನ ಮತ್ತು ಒಂದು ಆಧುನಿಕ ವಚನಗಳ ಸಂಕಲನ. ಇವರು ಒಟ್ಟು ಏಳು ಧ್ವನಿಸಾಂದ್ರತೆಗಳನ್ನು ಹೊರತಂದಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು :

ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. ಅನೇಕ ಪ್ರಶಸ್ತಿಗಳು ಇವರ ಮುಡಿಗೇರಿವೆ.

೧.  ಕನ್ನಡ ಲೇಖಕಿಯರ ಪರಿಷತ್ತಿನಿಂದ ತ್ರಿವೇಣಿ ಪ್ರಶಸ್ತಿ.

೨.  ಮೈಸೂರು ರೋಟರಿ (ಉತ್ತರ) ರಾಜ್ಯೋತ್ಸವ ಪ್ರಶಸ್ತಿ

೩.  ಅಖಿಲಭಾರತ ಅಂಬರೀಷ್ ಪ್ರಕಾಶನದವರಿಂದ ರಾಜ್ಯಮಟ್ಟದ ಪ್ರಶಸ್ತಿ

 ಸನ್ಮಾನಗಳು :

೧)  ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳು ಸನ್ಮಾನಿಸಿದೆ.

೨) ಮೈಸೂರು ಜಿಲ್ಲಾ ಬರಹಗಾರರ ಬಳಗ ಸನ್ಮಾನಿಸಿದೆ.

೩)  ಕನ್ನಡ ಕ್ರಾಂತಿದಳ ಮೈಸೂರಿನಿಂದ ಸನ್ಮಾನ.

೪) ಶ್ರೀಶೈಲ ನಿಡುಮಾಮಿಡಿ ಸಂಸ್ಥಾನ ಸಾರಂಗಧರ ಮಠದಿಂದ ಸನ್ಮಾನ.

 ೩  ಇಂದಿರಾ ಗೋವಿಂದ್

 ಇಂದಿರಾ ಗೋವಿಂದ್ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರು. ತಂದೆ ಶ್ರೀ ಆರ್. ನಟರಾಜನ್. ತಾಯಿ ಶ್ರೀಮತಿ ಎಸ್. ವಿಜಯಲಕ್ಷ್ಮಿ. ಇವರು ಎಂ.ಎ., ಬಿ.ಎಡ್. ಪದವಿ ಪಡೆದು, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಪತಿ ಶ್ರೀ ಗೋವಿಂದ್ ನಿವೃತ್ತ ಮುಖ್ಯ ಇಂಜಿನಿಯರ್.

ಬರವಣಿಗೆಯಲ್ಲಿ ಆಸಕ್ತಿಯಿರುವ ಇವರು ಕಥೆ, ಕವನ, ಲೇಖನಗಳನ್ನು ಬರೆದಿದ್ದಾರೆ. ಖ್ಯಾತಲೇಖಕಿ ದಿ||ಪ್ರೇಮಲತಾ ಸುಂದರೇಶನ್ ಬದುಕು, ಬರಹ ಕುರಿತಂತೆ ಇವರು ಬರೆದಿರುವ ಕೃತಿ ’ಪ್ರೇಮಾಂತರಂಗದ ಸುಂದರ ಕಲ್ಪನಾ ಸ್ವರೂಪ’ ೨೦೧೦ರಲ್ಲಿ ಪ್ರಕಟವಾಗಿದೆ.

 * * *

೪  ಭ್ರಮರಾಂಭ (ಸಿಂಧೂರಿ)

’ಸಿಂಧೂರಿ’ ಎನ್ನುವ ಕಾವ್ಯನಾಮದಿಂದ ಕಥೆ, ಕಾದಂಬರಿ, ಕವನ, ನಾಟಕಗಳನ್ನು ಬರೆಯುವ ಶ್ರೀಮತಿ ಭ್ರಮರಾಂಭ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ. ತಂದೆ ಶ್ರೀ ಎಂ. ಮಲ್ಲಣ್ಣ, ತಾಯಿ ಶ್ರೀಮತಿ ಎಸ್. ಲೀಲಾವತಮ್ಮ. ಪತಿ ಶ್ರೀ ನಾಗರಾಜು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ವ್ಯವಸ್ಥಾಪಕ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಶ್ರೀಮತಿ ಭ್ರಮರಾಂಬ ಈವರೆಗೆ ಆರು ಕಾದಂಬರಿಗಳು, ಮೂರು ನಾಟಕಗಳು ಒಂದು ಕವನ ಸಂಕಲನ, ಒಂದು ಭಕ್ತಿಗೀತಾ ಸಂಕಲನ ಹೊರತಂದಿದ್ದಾರೆ.

 * * *

೫  ಹೇಮಮಾಲಾ ಬಿ.

ಹೇಮಮಾಲಾ.ಬಿ. ಮೂಲತಃ ನೆರೆಯ ಕೇರಳ ರಾಜ್ಯದ ಕಾಸರಗೋಡಿನವರು. ಗಡಿನಾಡ ಕನ್ನಡತಿ. ಮೈಸೂರಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸವಾಗಿದ್ದಾರೆ.

ಕುಂಬಳೆಯಲ್ಲಿ ಪ್ರೌಢಶಾಲಾ ಶಿಕ್ಷಣ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ವಿವೇಕಾನಂದ ಕಾಲೇಜಿನಲ್ಲಿ ಬಿ.ಎಸ್ಸಿ.

ತದನಂತರ ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಎಂ.ಬಿ.ಎ ಪದವಿ.

ಮೈಸೂರಿನಲ್ಲಿರುವ ಜರ್ಮನಿ ಮೂಲ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ (ಕ್ಲ್ಯೂಬರ್ ಲ್ಯುಬ್ರಿಕೇಶನ್ ಪ್ರೈವೇಟ್ ಲಿಮಿಟೆಡ್) ಒಟ್ಟು ೨೨ ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಉದ್ಯೋಗ ನಿರ್ವಹಿಸಿ ೨೦೧೬ರಲ್ಲಿ ಸ್ವಯಂ ನಿವೃತ್ತಿ ನಂತರ ಹವ್ಯಾಸವಾಗಿ "ಸುರಹೊನ್ನೆ" ತಿತಿತಿ.suಡಿಚಿhoಟಿಟಿe.ಛಿom  ಎಂಬ ಅಂತರ್ಜಾಲ ಪತ್ರಿಕೆಯನ್ನು ನಿರ್ವಹಿಸುತ್ತಿದ್ದಾರೆ.

ಪ್ರವಾಸ ಹಾಗೂ ಬರವಣಿಗೆಯಲ್ಲಿ ಆಸಕ್ತಿಯಿರುವ ಇವರ ಕೆಲವು ಬರಹಗಳು ಉದಯವಾಣಿ, ಪ್ರಜಾವಾಣಿ, ವಿಜಯವಾಣಿ, ಮಂಗಳಾ, ಸುಧಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪ್ರಕಟಿತ ಕೃತಿಗಳು

೧) ಚಾರ್ ಧಾಮ್  ೨) ಮೇಘದ ಅಲೆಗಳ ಬೆನ್ನೇರಿ

ಲಭಿಸಿರುವ ಪ್ರಶಸ್ತಿ ಪುರಸ್ಕಾರಗಳು

೧)  ಚಾರ್ ಧಾಮ್ ಕೃತಿಗೆ ೨೦೨೨ರಲ್ಲಿ ಕೇರಳದ "ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು" ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.

೨) ’ಬೆಳಕು’ ಎಂಬ ಹೆಸರಿನ ಕಥೆಗೆ ೨೦೨೦ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಲಭಿಸಿದೆ. ತಿಳಿದಿರುವ ಇತರೆ ಭಾಷೆಗಳು ಇಂಗ್ಲೀಷ್, ಹಿಂದಿ, ತುಳು, ಕೊಂಕಣಿ.

ಇವರ ಪತಿ ಗಣೇಶ.ವಿ. ಫಾಲ್ಕಾನ್ ಟೈರ್‍ಸ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಇತ್ತೀಚೆಗೆ ನಿವೃತ್ತಿಯಾಗಿದ್ದಾರೆ.

 * * *

೬  ವಿದ್ಯಾವೆಂಕಟೇಶ್

ವಿದ್ಯಾವೆಂಕಟೇಶ್ ಕಾರ್ಯಕ್ರಮ ನಿರೂಪಕಿಯಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಪರಿಚಿತರಾಗಿದ್ದಾರೆ. ಇವರು ಉತ್ಸಾಹಿ ಉದಯೋನ್ಮುಖ ಲೇಖಕಿ. ೧೯೬೭ರ ಆಗಸ್ಟ್ ೧ ರಂದು ಮೈಸೂರಿನಲ್ಲಿ ಜನಿಸಿದ ಇವರ ತಂದೆ ಶ್ರೀ ಟಿ. ಗೋಪಾಲಸ್ವಾಮಿ, ತಾಯಿ ಶ್ರೀಮತಿ ಕೌಸಲ್ಯ.

ಇವರ ಪತಿ ಮೂಲವೆಂಕಟೇಶ್ ಬಿ.ಇ.ಎಂ.ಎಲ್ ಮೈಸೂರಿನಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿದ್ದಾರೆ.

ಇವರು ಪ್ರಕಟಿಸಿರುವ ೨ ಕವನ ಸಂಕಲನಗಳು

೧.  ಸೋಲದಿರು ಸಖಿ   ೨.    ನವಿಲುಗರಿ

ಆಧುನಿಕ ವಚನ ಸಂಕಲನ ಸಿದ್ಧವಾಗುತ್ತಿದೆ.

ಇವರ ಹವ್ಯಾಸಗಳು ಕಲೆ, ಸಂಗೀತ. ಇವರು ರಾಜ್ಯಮಟ್ಟದ ಕವನ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿದ್ದಾರೆ. ಆರೂಢ ಜ್ಯೋತಿ ಪ್ರಶಸ್ತಿಗಳಿಸಿದ್ದಾರೆ.

 * * *

೭  ಸಿ. ತ್ರಿವೇಣಿ

ಉದಯೋನ್ಮುಖ ಲೇಖಕಿಯರಲ್ಲಿ ಭರವಸೆ ಹುಟ್ಟಿಸುವಂತಹವರು ಸಿ. ತ್ರಿವೇಣಿ. ತಂದೆ ಶ್ರೀ ಚೆನ್ನಪ್ಪ, ತಾಯಿ ಶ್ರೀಮತಿ ಮಣಿ. ಇವರು ಎಂ.ಎಸ್ಸಿ. (ಭೌತಶಾಸ್ತ್ರೆ) ಎಂ.ಫಿಲ್. ಪದವಿಗಳಿಸಿದ್ದಾರೆ. ಇವರು ವೃತ್ತಿಯಲ್ಲಿ ಅಧ್ಯಾಪಕಿ.

ಸಿ. ತ್ರಿವೇಣಿ ಇವರ ಕೃತಿಗಳು

೧)  ಕವನ ಸಂಕಲನಗಳು (೨)

೨) ಧಾರ್ಮಿಕ ವಿಷಯಗಳ ಕೃತಿಗಳು (೨)

೩)  ಮಕ್ಕಳಿಗೆ ಕಥಾಸಾಹಿತ್ಯ (ಸಚಿತ್ರ)

ಇವರು ಇಂಗ್ಲೀಷ್‌ನಲ್ಲಿ ’ದಿ ಘೋರ್ ಇಂಡಿಯನ್ ಫಿಲಾಸಫರ್‍ಸ್ ಆಫ್ ಎಜುಕೇಷನ್’ ಎಂಬ ಕೃತಿ ರಚಿಸಿದ್ದಾರೆ.

* * *

 ೮  ಎಸ್. ಅನಸೂಯ

 ಎಸ್. ಅನಸೂಯ ೧೦ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ತಂದೆ ಎಸ್.ವಿ. ಶ್ರೀನಿವಾಸರಾವ್. ತಾಯಿ ಶ್ರೀಮತಿ ನಳಿನಾಕ್ಷಮ್ಮ. ಇವರು ಬಿ.ಎಸ್.ಸಿ. ಪದವೀಧರರು. ದಕ್ಷಿಣಭಾರತ ಪ್ರಚಾರಸಭಾದ ರಾಷ್ಟ್ರಭಾಷಾ ಪ್ರವೀಣ್ ಪದವಿ ಪಡೆದಿದ್ದಾರೆ. ಇವರ ಪತಿ ದಿ. ಎಸ್.ಕೆ. ಆನಂದತೀರ್ಥ. ಕಾಲೇಜು ಪ್ರಿನ್ಸಿಪಾಲ್‌ರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.

ಇವರು ಕಥೆ, ಮಕ್ಕಳ ಕಥೆ, ಹಾಸ್ಯಲೇಖನ, ಮುಕ್ತಕಗಳು - ಈರೀತಿ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿಮಾಡಿ ಕೆಲವು ಕೃತಿಗಳನ್ನು ಹೊರತಂದಿದ್ದಾರೆ.

೧.  ಮುಕ್ತಕಗಳ ಸಂಕಲನ

೨.  ಕವನ ಸಂಕಲನ

೩.  ಮಕ್ಕಳ ಕಥಾ ಸಂಕಲನ

ಇವರು ಬರೆದ ’ಹಾಸ್ಯಲೇಖನ’ಕ್ಕೆ ’ಸುಧಾ’ ವಾರಪತ್ರಿಕೆಯ ಹಾಸ್ಯಲೇಖನ ಸ್ಪರ್ಧೆಯಲ್ಲಿ ಬಹುಮಾನ ದೊರೆತಿದೆ.

* * *

೯   ಡಾ|| ಎನ್. ಸಂಧ್ಯಾಕೇಶವ್

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಸಾಹಿತ್ಯರಚನೆ, ವೇದಕಲಿಕೆ, ದಾಸ ಸಾಹಿತ್ಯದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭಾನ್ವಿತರು. ಡಾ|| ಎನ್. ಸಂಧ್ಯಾಕೇಶವ್. ತಂದೆ ಶ್ರೀ ಬಿ. ನಾಗರಾಜ್. ತಾಯಿ ಶ್ರೀಮತಿ ಎಚ್.ಎಸ್. ಕಮಲಮ್ಮ. ಇವರ ಪತಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸೇವಾನಿವೃತ್ತರು. ಶ್ರೀಮತಿ ಸಂಧ್ಯಾ ಕೇಶವ್ ಸಮಾಜಶಾಸ್ತ್ರದಲ್ಲಿ ಎಂಎ. ಮೌಲ್ಯಶಿಕ್ಷಣದಲ್ಲಿ ಪಿ.ಎಚ್.ಡಿ. ಹಾಗೂ ಎಂ.ಎಡ್. ಪದವಿಗಳಿಸಿದ್ದಾರೆ.

ಕೃತಿಗಳು

   ೧.  ಕವನ ಸಂಕಲನ

   ೨.  ಸಮಾಜ ಶಾಸ್ತ್ರ ಭಾಗ ೧ ಮತ್ತು ೨ (ಮುಕ್ತ ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ಆಕರಗ್ರಂಥವಾಗಿದೆ)

   ೩.  ಆಂಗ್ಲಭಾಷೆಯಲ್ಲಿ ದೆಹಲಿ ಪ್ರಕಾಶನದಿಂದ ಹೊರತಂದಿರುವ ’ವ್ಯಾಲ್ಯೂ ಎಜುಕೇಷನ್’ ಒಂದು ಸಂಪನ್ಮೂಲ ಕೃತಿಯಾಗಿದೆ.

ಪ್ರಶಸ್ತಿಗಳು : ೧. ಮೈಸೂರಿನ ’ಚಿಗುರು ಸಾಹಿತ್ಯ ಪ್ರಶಸ್ತಿ’.    ೨.  ಕು.ವೆಂ.ಪು. ಪ್ರಶಸ್ತಿ.

* * *

೧೦  ಎ. ಹೇಮಗಂಗಾ

ಎ. ಹೇಮಗಂಗಾ ಮೈಸೂರಿನ ಸಾಹಿತ್ಯಕೂಟ ’ಸಿರಿಗನ್ನಡ ವೇದಿಕೆ’ಯ ಸಕ್ರಿಯ ಸದಸ್ಯರು. ಇವರು ಭೌತಶಾಸ್ತ್ರದಲ್ಲಿ ಎಂ.ಎಸ್.ಸಿ. ಪದವಿಯನ್ನು ತೃತೀಯ ರ್‍ಯಾಂಕ್‌ನೊಡನೆ ಪಡೆದು, ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇವರ ಪತಿ ಡಾ|| ಶ್ರೀಧರ್. ಮೈಸೂರಿನ ಕೇಂದ್ರ ಆಹಾರ ಮತ್ತು ತಾಂತ್ರಿಕ ಸಂಶೋಧನಾಲಯದಲ್ಲಿ ವಿಜ್ಞಾನಿ. ಇವರ ತಂದೆ ಶ್ರೀ ಎಸ್. ಅಶ್ವತ್ಥನಾರಾಯಣ್, ತಾಯಿ ಶ್ರೀಮತಿ ಲಕ್ಷ್ಮಿ.

ಪ್ರಕಟಿತ ಕೃತಿಗಳು : ೧. ಭಾವಗೀತೆಗಳ ಸಂಕಲನ   ೨. ಮುಕ್ತ ವಚನಗಳ ಸಂಕಲನ

ಇವರು ಉತ್ತಮ ಸಿತಾರ್ ವಾದಕಿ. ಚಿತ್ರರಚನೆ, ತೋಟಗಾರಿಕೆ- ಇತರ ಹವ್ಯಾಸಗಳು.

ಇವರಿಗೆ ೨೦೧೫ರಲ್ಲಿ ಮೈಸೂರಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ’ಸಾಹಿತ್ಯ ಸಿಂಧು’ ಪ್ರಶಸ್ತಿ ದೊರಕಿದೆ.

* * *

೧೧  ಯಶೋಧಾ ನಾರಾಯಣ್

ಯಶೋಧಾನಾರಾಯಣ್ ಪ್ರತಿಭಾವಂತ ಮಕ್ಕಳನ್ನು ಬೆಳೆಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ’ಯಶು ಚಿಲ್ಡ್ರನ್ ಅಕಾಡೆಮಿ’ಯನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ಕಳೆದ ೧೫ ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಇದರ ಜೊತೆ ಸಾಹಿತ್ಯಾಸಕ್ತಿ, ಬರವಣಿಗೆ, ಸಂಘ-ಸಂಸ್ಥೆಗಳ ಒಡನಾಟದಲ್ಲೂ ಇದ್ದಾರೆ. ಇವರ ತಂದೆ ಶ್ರೀ ಚೆನ್ನಮ್ಮ. ತಾಯಿ ಶ್ರೀಮತಿ ಲಕ್ಷ್ಮಮ್ಮ. ಇವರ ಪತಿ ಶ್ರೀ ನಾರಾಯಣ್ ವಾಣಿಜ್ಯೋದ್ಯಮಿಯಾಗಿದ್ದಾರೆ.

 ಕೃತಿಗಳು :

೧.  ಪ್ರೀತಿಯ ಕಡಲು (ಹನಿಗವನ ಸಂಕಲನ)

೨.  ಆಧುನಿಕ ವಚನಗಳ ಸಂಕಲನ (ಅಚ್ಚಿನಲ್ಲಿದೆ)

೩.  ಹೊಂಬೆಳಕು (ಅಚ್ಚಿನಲ್ಲಿದೆ)

ಪ್ರಶಸ್ತಿ, ಪುರಸ್ಕಾರಗಳು :

೧)  ಮಾಲ್ಟೀವ್ಸ್ ಕನ್ನಡ ಬಳಗದ ವಾರ್ಷಿಕೋತ್ಸವದಲ್ಲಿ "ಅಂತರಾಷ್ಟ್ರೀಯ ವರ್ಷದ ವ್ಯಕ್ತಿ (೨೦೧೩) ಪ್ರಶಸ್ತಿ.

೨) ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ’ಸಮಾಜಸೇವಾರತ್ನ’ ಪ್ರಶಸ್ತಿ

೩)  ಸಿರಿಗನ್ನಡ ವೇದಿಕೆ ಮಂಡ್ಯದಿಂದ ’ಕಾಯಕಯೋಗಿ’ (೨೦೧೫) ಪ್ರಶಸ್ತಿ.

* * *

೧೨  ಬಿ. ಸುಜಾತ

ಬಿ. ಸುಜಾತ ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮದವರು. ತಂದೆ ಶ್ರೀ ಬಿ. ಗಣಪತಿರಾವ್ ತಾಯಿ ಶ್ರೀಮತಿ ಸುಲೋಚನ ಜಿ. ರಾವ್. ಇವರು ಬಿ.ಕಾಂ. ಕನ್ನಡಭಾಷೆಯಲ್ಲಿ ಎಂ.ಎ. ಸಮೂಹ ಸಂಕಲನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಡಿಪ್ಲಮೋಗಳಿಸಿದ್ದಾರೆ. ಪ್ರಸ್ತುತ ಮೈಸೂರಿನ ಮಾಂಡೋವಿ ಮೋಟಾರ್‍ಸ್ ವೆಹಿಕಲ್ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪತಿ ಶ್ರೀ ಬಿ. ನಾರಾಯಣರಾವ್ ಹೋಟಲ್ ಉದ್ಯಮಿ.

 ಪ್ರಕಟಿತ ಕೃತಿ :

’ಮನದೊಳಗಿನ ಮಾತುಗಳು’ ಕವನ ಸಂಕಲನ

ಇವರ ಇತರ ಹವ್ಯಾಸಗಳು : ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಕವಿಗೋಷ್ಠಿಗಳಲ್ಲಿ ಭಾಗವಹಿಸುವುದು.

ಗಳಿಸಿರುವ ಬಹುಮಾನ ಪ್ರಶಸ್ತಿಗಳು :

೧.  ’ಮೈಸೂರು ಮಿತ್ರ’ ಕಥಾ ಸ್ಪರ್ಧೆಯಲ್ಲಿ ಮೂರು ಬಾರಿ ಪ್ರಥಮ ಬಹುಮಾನ.

೨.  ಲೇಖಕಿಯರ ಟ್ರಸ್ಟ್ ಏರ್ಪಡಿಸಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.

೩.  ಗಂಗಾ ರಾಜಪುರೋಹಿತ್ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಇತ್ಯಾದಿ.

* * *

೧೩  ಡಾ|| ಎಸ್. ಸುಧಾ

ಡಾ|| ಸುಧಾ ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಲೇಖಕಿ. ತಂದೆ ಶ್ರೀ ಎಸ್. ಸುಬ್ರಹ್ಮಣ್ಯಂ, ತಾಯಿ ಶ್ರೀಮತಿ ಸೀತಾಲಕ್ಷಮ್ಮ. ಇವರು ಪ್ರಾಣಿಶಾಸ್ತ್ರದಲ್ಲಿ ಎಂ.ಎಸ್.ಸಿ. ಮಾಡಿ ಪಿ.ಎಚ್.ಡಿ. ಪಡೆದಿದ್ದಾರೆ. ಪತಿ ಶ್ರೀ ಕೆ. ರಮೇಶ್ ಎಂ.ಇ. ಶಿವಮೊಗ್ಗ ಸ್ಟೀಲ್ಸ್ ಮೈಸೂರಿನ ನಿವೃತ್ತ ತಾಂತ್ರಿಕ ನಿರ್ದೇಶಕರು.

ಕೃತಿಗಳು :

೧.  ಚಿತ್ತಚೋರ (ಅನುಭವ ಮಾಲಿಕೆ)

೨.  ನಯಾಗರ ನಾಡಿನಲ್ಲಿ ನಾವು (ಪ್ರವಾಸ ಸಾಹಿತ್ಯ)

೩.  ಪುರಾತನ ಹೊನ್ನೆಸಳುಗಳು (ಪುರಾಣ ಕತೆಗಳು)

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಕತೆಗಳು, ಲೇಖನಗಳು ಪ್ರಕಟವಾಗಿವೆ. ಇವರ ಹವ್ಯಾಸಗಳು ತೋಟಗಾರಿಕೆ, ಅಂಚೆ-ಚೀಟಿ ಸಂಗ್ರಹಣೆ. ದೇಶ ವಿದೇಶಗಳ ಆನೆ ಬೊಂಬೆ ಸಂಗ್ರಹಣೆ.

 ಪ್ರಶಸ್ತಿಗಳು :

೧.  ಗಂಗಾರಾಜಪುರೋಹಿತ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ

೨.  ತರಂಗದಲ್ಲಿ ಪ್ರಕಟವಾದ ಆಗಸ್ಟ್ ೨೦೧೫ರ ಲೇಖನಕ್ಕೆ ಪ್ರಥಮ ಬಹುಮಾನ.

೩.  ಡಾ. ಡಿ.ಎಲ್. ವಿಜಯಕುಮಾರಿ ಸಾಹಿತ್ಯ ಪ್ರಶಸ್ತಿ ೨೦೦೯.

* * *

 ೧೪ ಬಿ.ಕೆ. ಮೀನಾಕ್ಷಿ

 ಬಿ.ಕೆ. ಮೀನಾಕ್ಷಿ ವೃತ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿ. ತಂದೆ ಶ್ರೀ ಬಿ.ಟಿ. ಕೆಂಪಾಚಾರ್ಯ. ತಾಯಿ ಶ್ರೀಮತಿ ರುಕ್ಮಿಣಿ. ಪತಿ ಶ್ರೀ ಎಸ್. ಹೇಮಪ್ರಕಾಶ್. ಖಾಸಗಿ ಉದ್ಯೋಗದಲ್ಲಿದ್ದಾರೆ.

ಕೃತಿಗಳು :

೩ ಕವನ ಸಂಕಲನಗಳು -

ಕಾಗದದ ಹೂವು

ಭಾವದೊಂದು ಬಿಂದು

ಮರುಹುಟ್ಟು

ಅಚ್ಚಿನಲ್ಲಿ : ಕಥಾಸಂಕಲನ

ಲೇಖನಗಳ ಸಂಕಲನ

ಪ್ರಬಂಧ ಸಂಕಲನ

ಪ್ರಶಸ್ತಿ ಬಹುಮಾನಗಳು :

೧.  ಕಥೆಗಳಿಗೆ ’ಕನ್ನಡ ಸಂಘರ್ಷ ಸಮಿತಿ’ ಬೆಂಗಳೂರಿನಿಂದ ರಾಜ್ಯಮಟ್ಟದ ಬಹುಮಾನ.

೨.  ಅಂಬರೀಷ್ ಯುವಕಸಂಘ ಏರ್ಪಡಿಸಿದ್ದ ವಿಮರ್ಶಾಲೇಖನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.

೩.  ಗದಗ್‌ನಲ್ಲಿ ಕವನ ಸಂಕಲನಕ್ಕೆ ಉತ್ತಮ ಕವನ ಸಂಕಲನವೆಂಬ ಪ್ರಶಸ್ತಿ.

ಸ್ಥಳೀಯ ಕೆಲವು ಸಂಘ ಸಂಸ್ಥೆಗಳಿಂದ ಬಹುಮಾನಗಳು ದೊರೆತಿವೆ.

 * * *

೧೫  ಎಂ.ಎ. ನೀಲಾಂಬಿಕಾ

ಎಂ.ಎ. ನೀಲಾಂಬಿಕಾ ವೃತ್ತಿಯಿಂದ ಶಿಕ್ಷಕಿಯಾಗಿ ನಿವೃತ್ತರಾಗಿದ್ದರೂ, ಪ್ರವೃತ್ತಿಯಿಂದ ಶರಣಸಾಹಿತ್ಯದ ಹರಿಕಾರರಾಗಿ ಸಮ್ಮನಡುವೆ ಇರುವ ಲೇಖಕಿ. ಇವರ ತಂದೆ ಶ್ರೀ ಸಿ. ಅಂಕಪ್ಪ. ತಾಯಿ ಶ್ರೀಮತಿ ಪುಟ್ಟದೇವಮ್ಮ. ಇವರು ಎಂ.ಎ., ಬಿ.ಎಡ್. ಪದವೀಧರರು. ಜಾನಪದ ಸಾಹಿತ್ಯದಲ್ಲಿ ಡಿಪ್ಲೊಮೋ ಮತ್ತು ಶರಣ ಸಾಹಿತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮೋ ಪದವಿಗಳನ್ನು ಪಡೆದಿದ್ದಾರೆ. ಇವರು ಜೆ.ಎಸ್.ಎಸ್. ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸಮಾಡಿ ನಿವೃತ್ತರಾಗಿದ್ದಾರೆ.

ಶ್ರೀಮತಿ ನೀಲಾಂಬಿಕಾ ಒಟ್ಟು ೩೨ ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆ, ಸ್ವರಚಿತವಚನ, ಕವನ, ನಾಟಕ, ಜೀವನಚರಿತ್ರೆ, ಸಂಪಾದನೆ - ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ರಸಪ್ರಶ್ನೆ ಕುರಿತ ಕೃತಿಗಳನ್ನೂ ಪ್ರಕಟಿಸಿದ್ದಾರೆ.

ನೀಲಾಂಬಿಕ - ಇವರ ಇತರ ಹವ್ಯಾಸಗಳು ನಾಟಕಗಳನ್ನು ಬರೆದು ನಿರ್ದೇಶನ ಮಾಡುವುದು.

ಪ್ರಶಸ್ತಿ - ಪುರಸ್ಕಾರಗಳು :

೧.  ಇಳಕಲ್ಲಿನ ಮಹಾಂತ ಶ್ರೀಗಳವರಿಂದ ’ಬಸವಗುರು ಕಾರುಣ್ಯ ಪ್ರಶಸ್ತಿ’.

೨.  ಬಸವಾನುಭವ ಪ್ರಶಸ್ತಿ.

೩.  ಬಸವಶ್ರೀ ಉತ್ತಮ ಶಿಕ್ಷಕಿ ಪ್ರಶಸ್ತಿ.

೪.  ಕುವೆಂಪು ಪ್ರಶಸ್ತಿ.

೫.  ಶ್ರೀ ಸುತ್ತೂರು, ಸಿದ್ಧಗಂಗೆ, ದೇವನೂರು ಮುಂತಾದ ಮಠಾಧೀಶರಿಂದ ಸನ್ಮಾನಗಳು.

 * * *

೧೬ ಡಾ|| ಎಚ್.ವಿ. ರಮಾ

ವೈದ್ಯರಾಗಿ ಕಾರ್ಯನಿರ್ವಹಿಸುತ್ತಾ ಜೊತೆಯಲ್ಲೇ ಸಾಮಾಜಿಕ ಅರಿವು ಮೂಡಿಸುವಂತಹ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಡಾ|| ಎಚ್.ವಿ. ರಮಾ ವೈದ್ಯಕೀಯ ವಿಷಯಗಳ ಬಗ್ಗೆ ಮೌಲಿಕವಾದ ಸಾಹಿತ್ಯ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ತಂದೆ ಶ್ರೀ ವೆಂಕಟನರಸಪ್ಪ. ತಾಯಿ ಶ್ರೀಮತಿ ಪದ್ಮಾಕ್ಷಮ್ಮ. ವೈದ್ಯಾಧಿಕಾರಿಯಾಗಿ ಜೆ.ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಪತಿ ಡಾ|| ನಾಗೇಂದ್ರ ಪ್ರಸಾದ್. ಕುಟುಂಬವೈದ್ಯರು ಮತ್ತು ಆಪ್ತಸಲಹಾಗಾರರಾಗಿದ್ದಾರೆ.

ಮೂರು ದಶಕಗಳಕಾಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವಾಗ ರೋಗಿಗಳಿಗೆ, ಸಮಾಜಕ್ಕೆ ಅಲ್ಪಮಟ್ಟಿಗೆ ಕೊಡುಗೆ ನೀಡಿದ್ದೇನೆ ಎನ್ನುವುದಕ್ಕಿಂತ ಅವರಿಂದ ನಾನೇ ಹೆಚ್ಚು ಕಲಿತಿದ್ದೇನೆ ಎಂದು ವಿನಯವಾಗಿ ಹೇಳುತ್ತಾರೆ.

 ಡಾ|| ಎಚ್.ವಿ. ರಮಾ - ಇವರ ಕೃತಿಗಳು

೧.  ತಾಯಿ - ಮಗು

೨.  ಅರಿವಿನೆಡೆಗೆ

೩.  ಋತುಸ್ರಾವ

೪.  ಬಿಚ್ಚುಮಾತು

೫.  ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ

೬.  ಎದೆ ಹಾಲು

೭.  ಮಹಿಳೆಯರ ಮಾನಸಿಕ ಸಮಸ್ಯೆಗಳು - ಇತ್ಯಾದಿ.

 ಪ್ರಶಸ್ತಿ, ಸನ್ಮಾನಗಳು :

೧.  ವುಮೆನ್ ಅಛೀವರ್ ಅವಾರ್ಡ್ ೨೦೧೨ (ಇನ್ನರ್‌ವೀಲ್ ಮೈಸೂರು ಮಿಡ್‌ಟೌನ್)

೨.  ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮೈಸೂರು ಬ್ರಾಂಚ್ ಮತ್ತು ಎಸ್.ಬಿ.ಐ. ಆಫೀಸರ್‍ಸ್ ಅಸೋಸಿಯೇಷನ್‌ನಿಂದ ಮಹಿಳಾ ಸಾಧಕಿ ಪ್ರಶಸ್ತಿ (೨೦೧೩)

೩.  ಇನ್ನರ್‌ವೀಲ್ ಸೆಂಟ್ರಲ್ - ಮೈಸೂರು -ಇವರಿಂದ ೨೦೧೫ರಲ್ಲಿ ಸನ್ಮಾನ.

 * * *

೧೭  ಮುಳಿಯ ಸರಸ್ವತಿ

ಮುಳಿಯ ಸರಸ್ವತಿಯವರು ಸಾಹಿತ್ಯ, ಸಂಗೀತದ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ದಕ್ಷಿಣಕನ್ನಡದ ’ವಿಟ್ಲ’ ಗ್ರಾಮದ ಶ್ರೀ ಚಕ್ರಕೋಡಿ ನಾರಾಯಣಶಾಸ್ತ್ರಿ. ಶ್ರೀಮತಿ ಕುಸುಮಾಂಬಿಕ ಎಸ್.ಶಾಸ್ತ್ರಿ ದಂಪತಿಗಳ ಪುತ್ರಿ. ಬಿ.ಎ. ಪದವೀಧರೆ. ಗೃಹಿಣಿ. ಇವರ ಪತಿ ಮುಳಿಯ ಶ್ರೀ ರಾಘವಯ್ಯ. ವಿಶ್ರಾಂತ ಅಧಿಕಾರಿಗಳು. ಬಿ.ಎ.ಆರ್.ಸಿ. ವಿಜ್ಞಾನ ಲೇಖಕರು.

ಇವರು ಒಂದು ಕಥಾಸಂಕಲನ, ಒಂದು ಲಘು ಪ್ರಬಂಧ ಸಂಕಲನ ಪ್ರಕಟಿಸಿದ್ದಾರೆ. ಇವರ ಸಣ್ಣಕಥೆಗಳು, ವ್ಯಕ್ತಿಪರಿಚಯ, ಹಾಸ್ಯಬರಹಗಳು, ಪ್ರವಾಸ ಕಥನಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಚಿಂತನಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.

 ಪ್ರಶಸ್ತಿ, ಪುರಸ್ಕಾರಗಳು :

೧.  ಪಡುಕೋಣೆ ರಮಾನಂದರಾವ್ ಪ್ರಶಸ್ತಿ - (’ಅಪರಂಜಿ’ ಪತ್ರಿಕೆಯ ಲೇಖನಕ್ಕೆ)

೨.  ಸಣ್ಣ ಕಥೆಗೆ ’ಕುಮಾರರಾಮ’ ಪ್ರಶಸ್ತಿ ದೊರಕಿದೆ.

 * * *

೧೮  ಮಂಗಳಾ ಮುದ್ದುಮಾದಪ್ಪ

 ಮಂಗಳಾ ಮುದ್ದುಮಾದಪ್ಪ ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮರಿಮಲ್ಲಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಸಾಹಿತ್ಯದಲ್ಲೂ ಕ್ರಿಯಾಶೀಲ ಲೇಖಕರು. ಇವರು ಎಂ.ಎ., ಬಿ.ಎಡ್. ಪದವೀಧರರು. ಇವರ ತಂದೆ ಶ್ರೀ ಕಂಚಿಮಲ್ಲಪ್ಪ. ತಾಯಿ ಶ್ರೀಮತಿ ಮಲ್ಲಮ್ಮ. ಇವರ ಪತಿ ದಿ. ಮುದ್ದುಮಾದಪ್ಪನವರು ಕ್ಷೇತ್ರಶಿಕ್ಷಣಾಧಿಕಾರಿಯಾಗಿದ್ದರು.

 ಕೃತಿಗಳು :

೧.  ಕನ್ನಡ ವ್ಯಾಕರಣ

೨.  ಮೂರು ಕವನ ಸಂಕಲನಗಳು

೩.  ಸಂಪಾದಿತ ಕೃತಿ (೧)

ಕೆಲವು ಮಕ್ಕಳನಾಟಕಗಳು ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಿವೆ.

ಪ್ರಶಸ್ತಿ, ಪುರಸ್ಕಾರ :

೧.  ಶಿಕ್ಷಣ ಇಲಾಖೆ. ಇನ್ನರ್‌ವೀಲ್ ರೋಟರಿ ಸಂಸ್ಥೆಗಳಿಂದ ’ಆದರ್ಶ ಶಿಕ್ಷಕಿ’ ಪ್ರಶಸ್ತಿ.

೨.  ಕರ್ನಾಟಕ ಪ್ರತಿಭಾ ಅಕಾಡೆಮಿ ಬೆಂಗಳೂರು - ಇವರಿಂದ ಡಾ. ಎಸ್. ರಾಧಾಕೃಷ್ಣನ್ ಪ್ರಶಸ್ತಿ.

೩.  ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ

 * * *

೧೯  ತುಳಸಿ ಸಿ. ವಿಜಯಕುಮಾರಿ

 ತುಳಸಿ ಸಿ. ವಿಜಯಕುಮಾರಿ ಚಿಂತಾಮಣಿಯವರು ತಂದೆ ಶ್ರೀ ವೆಂಕಟಾಚಲಮಯ್ಯ. ತಾಯಿ ಶ್ರೀಮತಿ ರಾಜಮ್ಮ. ಇವರು ಸಾಂಪ್ರದಾಯಿಕ ವಾಣಿಜ್ಯ ಕುಟುಂಬದಿಂದ ಬಂದವರು. ಇವರ ಪತಿ ಶ್ರೀ ಟಿ.ವಿ. ಚಂದ್ರಶೇಖರ್. ಆಭರಣ ವರ್ತಕರು.

ಇವರು ಒಟ್ಟು ೫ ಕೃತಿಗಳನ್ನು ಪ್ರಕಟಿಸಿದ್ದಾರೆ.

೧.  ವಚನ ಸಂಕಲನ (೨)

೨.  ಮಕ್ಕಳ ಕವನಗಳು ೧

೩.  ಕಾಗುಣಿತ ಚಮತ್ಕಾರ

೪.  ಅಕ್ಷರ ವಿಸ್ಮಯ

ಇವರ ಇತರ ಹವ್ಯಾಸ ಮೈಸೂರು ಮತ್ತು ತಂಜಾವೂರು ಶೈಲಿಗಳಲ್ಲಿ ವರ್ಣಚಿತ್ರ ರಚನೆ. ಹೊಲಿಗೆ, ಹೂಗಳ ವೈವಿಧ್ಯ ಜೋಡಣೆ ಇತ್ಯಾದಿ.

 ಪ್ರಶಸ್ತಿ, ಸನ್ಮಾನಗಳು :

೧.  ಆರ್‍ಯವೈಶ್ಯ ಸಭೆ, ಬೆಂಗಳೂರು ’ವಿಶೇಷ ಮಹಿಳೆ’ ಪ್ರಶಸ್ತಿ.

೨.  ಮೈಸೂರಿನ ಹಲವಾರು ವೈಶ್ಯ ಸಂಘಟನೆಗಳಿಂದ ಪ್ರಶಸ್ತಿ.

೩.  ಮೈಸೂರಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ’ಸಾಹಿತ್ಯಸಿಂಧು’ ಪ್ರಶಸ್ತಿ.

೪.  ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಸಾಂಪ್ರದಾಯಕ ಮೈಸೂರು ಶೈಲಿಯ ಚಿತ್ರಕ್ಕೆ ಬಹುಮಾನ ದೊರೆತಿದೆ.

* * *

೨೦  ಎಂ.ಎಸ್. ಭಾರತಿ

ಎಂ.ಎಸ್. ಭಾರತಿಯವರು ಮೈಸೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಕೆಲಸಮಾಡುತ್ತಲೇ ಹಲವಾರು ಸಮಾಜಸೇವಾ ಸಂಸ್ಥೆಗಳಲ್ಲೂ ಕೈ ಜೋಡಿಸಿರುವ ಪ್ರಜ್ಞಾವಂತ ಲೇಖಕಿ. ತಂದೆ ಶ್ರೀ ಎ. ಶ್ರೀನಿವಾಸಯ್ಯ. ತಾಯಿ ಶ್ರೀಮತಿ ಆರ್. ನಾಗರತ್ನಮ್ಮ. ಇವರು ಕನ್ನಡಭಾಷೆ ಹಾಗೂ ಪತ್ರಿಕೋದ್ಯಮ ಎರಡು ವಿಷಯಗಳಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಪತಿ ಶ್ರೀ ಎಸ್. ಉದಯಶಂಕರ. ಪತ್ರಕರ್ತರು. ಕನ್ನಡಪ್ರಭ ಪತ್ರಿಕೆ ಟಿ.ನರಸೀಪುರ.

ಶ್ರೀಮತಿ ಎಂ.ಎಸ್. ಭಾರತಿ ’ಕಾಡಮಲ್ಲಿಗೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಕವನಗಳು ಸಂಪಾದಿತ ಸಂಕಲನಗಳಲ್ಲಿ, ಅನೇಕ ವಾರಪತ್ರಿಕೆ ಮತ್ತು ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪಡೆದಿರುವ ಪ್ರಶಸ್ತಿ, ಪುರಸ್ಕಾರಗಳು :

೧.  ಇಳಕಲ್ಲಿನ ಮಹಂತಶ್ರೀಗಳವರಿಂದ ’ಬಸವಗುರು ಕಾರುಣ್ಯ ಪ್ರಶಸ್ತಿ.’

೨.  ಬಸವಾನುಭವ ಪ್ರಶಸ್ತಿ.

೩.  ದಸರಾ ಕವಿಗೋಷ್ಠಿ ಪ್ರಶಸ್ತಿ

೪.  ಕುವೆಂಪು ಪ್ರಶಸ್ತಿ.

೫.  ಅನೇಕ ಮಠಾಧೀಶರಿಂದ, ಸಂಘ ಸಂಸ್ಥೆಗಳಿಂದ ಸನ್ಮಾನ.

* * *

೨೧  ಇಂದಿರಾಪಾಟೀಲ್

ಇಂದಿರಾಪಾಟೀಲ್ ೧೯೮೩ರಲ್ಲಿ ಜನಿಸಿದವರು. ಇವರ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ. ಮಟ್ಟದಲ್ಲೇ ಕೊನೆಗೊಂಡಿದ್ದರೂ ಸಾಹಿತ್ಯದ ಆಸಕ್ತಿ ಮುಂದುವರೆದು ಇಂದು ರಾಷ್ಟ್ರಮಟ್ಟದ ಕವಿಯಿತ್ರಿಯರ ಸಾಲಿನಲ್ಲಿ ಸೇರಿದ್ದಾರೆ. ಸಾಹಿತ್ಯ ಪ್ರಕಾರಗಳಲ್ಲಿ ’ಕಾವ್ಯ’ ಮೆಚ್ಚುವ ಇವರು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಕವನ ಬರೆಯುತ್ತಿದ್ದಾರೆ.

ಪ್ರಕಟಿತ ಕೃತಿಗಳು :

೧.  ಇಂದಿರಾಯಣ (ಕಥಾ ಸಂಕಲನ)

೨.  ಅರಳುಮೊಗ್ಗು (ಕವನ ಸಂಕಲನ)

೩.  ಮುತ್ಸಂಜೆ (ಕವನ ಸಂಕಲನ)

 ಪ್ರಶಸ್ತಿ, ಪುರಸ್ಕಾರಗಳು :

೧.  ’ಇಂದಿರಾಯಣ’ ಕಥಾಸಂಕಲನಕ್ಕೆ ೨೦೦೪ರಲ್ಲಿ ಗೊರೂರು ಪ್ರತಿಷ್ಠಾನದಿಂದ ’ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ.’

೨.  ೨೦೧೨ರಲ್ಲಿ ಅಖಿಲಭಾರತ ಕವಿಯತ್ರಿಯರ ಸಮ್ಮೇಳನ ಹುಬ್ಬಳ್ಳಿಯಲ್ಲಿ ನಡೆದಾಗ ’ಮುತ್ಸಂಜೆ’ಗೆ ಸಾಹಿತ್ಯ ಪ್ರಶಸ್ತಿ.

೩.  ಸಂಘಮಿತ್ರೆ ಪ್ರಶಸ್ತಿ, ಇತ್ಯಾದಿ.

* * *

೨೨   ಡಾ|| ಕೆ.ಎನ್. ಲಾವಣ್ಯಪ್ರಭಾ

ಡಾ|| ಲಾವಣ್ಯಪ್ರಭಾ ಬಿ.ಎಸ್.ಸಿ., ಎಂ.ಎ. (ಕನ್ನಡ) ಪಿ.ಎಚ್.ಡಿ. ಪದವೀಧರರು. ತಂದೆ ಶ್ರೀ ಕೆ.ಎಸ್.ನಾಗರಾಜಯ್ಯ. ತಾಯಿ ಶ್ರೀಮತಿ ಮುಕ್ತಾಂಬ. ಇಬ್ಬರೂ ನಿವೃತ್ತ ಶಿಕ್ಷಕರು. ಲಾವಣ್ಯಪ್ರಭಾ - ಇವರ ಪತಿ ಶ್ರೀ ಬಿ.ವಿ. ಅರುಣಕುಮಾರ್ ವೃತ್ತಿಯಿಂದ ಗುತ್ತಿಗೆದಾರರು. ಇವರು ರಚಿಸಿರುವ ಕೃತಿಗಳು, ಕವನಸಂಕಲನಗಳು,

ಇವರ ಕವಿತೆಗಳು, ಪ್ರಬಂಧಗಳು ಕನ್ನಡ ದೈವಿಕ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅನೇಕ ಕವಿಗೋಷ್ಠಿಗಳಲ್ಲಿ ಇವರು ಭಾಗವಹಿಸಿದ್ದಾರೆ.

ಇವರಿಗೆ ಸಂದಿರುವ ಪ್ರಶಸ್ತಿ, ಪುರಸ್ಕಾರಗಳು :

೧.  ಕ್ರೈಸ್ತ ಕಾಲೇಜಿನ ದ.ರಾ.ಬೇಂದ್ರೆ ಸ್ಮೃತಿ ಪ್ರಶಸ್ತಿ.

೨.  ಮುಂಬಯಿಯ ದೊಂಬಿವಿಲಿ ಕರ್ನಾಟಕ ಸಂಘದ ಬಹುಮಾನ.

೩.  ಗುಡಿಬಂಡಿ ಪೂರ್ಣಿಮಾ ದತ್ತಿನಿಧಿ ಬಹುಮಾನ ಎರಡುಬಾರಿ.

೪.  ಕನ್ನಡ (ರಾಜ್ಯಮಟ್ಟದ) ಸಾಹಿತ್ಯ ಪರಿಷತ್ತಿನ ಸ್ಪರ್ಧೆಯಲ್ಲಿ ಬಹುಮಾನ.

* * *

೨೩  ಸಿ.ಪಿ. ವೇದವತಿ

 ಸಿ.ಪಿ. ವೇದಾವತಿ ಮಂಡ್ಯದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಸೇವೆಸಲ್ಲಿಸಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಪಠ್ಯ ವಿಷಯಗಳ ಬೋಧನೆಯೊಡನೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಎಳೆಯರ ಸುಪ್ತ ಪ್ರತಿಭೆ ಹೊರಹೊಮ್ಮಲು ಶ್ರಮಿಸುತ್ತಿದ್ದುದು ಒಂದು ವಿಶೇಷ. ಇವರು ’ಜಿಲ್ಲೆಯ ಉತ್ತಮ ಶಿಕ್ಷಕಿ’ ಹಾಗೂ ’ಕೆ.ವಿ. ಶಂಕರಗೌಡ ಅಂಕಣಶ್ರೀ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಓದುವುದು, ಪ್ರವಾಸ, ಕವಿಗೋಷ್ಠಿಗಳಲ್ಲಿ ಭಾಗವಹಿಸುವುದು ಇವರ ಹವ್ಯಾಸ.

 ಇವರ ಕೃತಿಗಳು :

೧.  ಮುತ್ತಿನ ತೆನೆ (ಮಕ್ಕಳ ಪದ್ಯಗಳ ಸಂಕಲನ)

೨.  ಮಕ್ಕಳಿಗಾಗಿ ಪೌರಾಣಿಕ ಕಥೆಗಳು

೧)  ಕಥಾಮೃತ ಧಾರೆ - ಭಾಗ ೧

೨) ಕಥಾಮೃತ ಧಾರೆ - ಭಾಗ ೨

೩)  ಕಥಾಮೃತ ಧಾರೆ - ಭಾಗ ೩ (ಅಚ್ಚಿನಲ್ಲಿ)

* * *

೨೪  ರುಕ್ಮಿಣಿಮಾಲಾ

 ರುಕ್ಮಿಣಿಮಾಲಾ ಸಾಹಿತ್ಯದೊಟ್ಟಿಗೆ ಪ್ರವಾಸ, ಚಾರಣಗಳಂತಹ ಹವ್ಯಾಸಗಳನ್ನು ಹೊಂದಿರುವ ಲೇಖಕಿ. ಇವರ ತಂದೆ ಶ್ರೀ ಕೃಷ್ಣಭಟ್. ತಾಯಿ ಶ್ರೀಮತಿ ಭಾರತಿ. ಪತಿ ಶ್ರೀ ಅನಂತವರ್ಧನ ಚಾರ್ಟೆಡ್ ಅಕೌಂಟೆಂಟ್. ಮಾವ ವಿಜ್ಞಾನ ಲೇಖನಗಳನ್ನು ಬರೆದು ಓದುಗರಿಗೆ ಚಿರಪರಿಚಿತರಾಗಿದ್ದ ಶ್ರೀ ಜಿ.ಟಿ. ನಾರಾಯಣರಾವ್. ಮಾವನವರಿಂದ ಬರವಣಿಗೆಯ ಶೈಲಿ, ವಾಕ್ಯ ರಚನೆಯ ರೀತಿ ಕಲಿಯಲು ಸಾಧ್ಯವಾಯಿತು ಎಂದು ಸ್ಮರಿಸುತ್ತಾರೆ.

ಇವರ ಕೃತಿಗಳು

೧.  ಮಕ್ಕಳ ನೀತಿಕಥಾ ಸಂಕಲನ

೨.  ಮಂದಹಾಸ (ಹಾಸ್ಯ ಲೇಖನಗಳ ಸಂಗ್ರಹ)

೩.  ಚಾರಣ -ಹೂರಣ

೪. ಹಿಮಾಲ್ಯದ ಸನ್ನಿಧಿಯಲ್ಲಿ

ರುಕ್ಮಿಣಿಮಾಲಾ - ಇವರ ಹಾಸ್ಯ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.


ಉಪ-ಸಂಹಾರ

 ಬಿ.ಆರ್.ನಾಗರತ್ನ,  ಹಲವು ಮೈಸೂರು ಲೇಖಕಿಯರನ್ನು ಸಂಪರ್ಕಿಸಿದರೂ ಅವರು ಮಾಹಿತಿ ಒದಗಿಸಿಲ್ಲ. ಕಥೆಗಳಿಂದ, ವಿಮರ್ಶೆಗಳಿಂದ, ಸಂಶೋಧನೆ, ನಾಟಕ- ಇತ್ಯಾದಿ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಈ ಲೇಖಕಿಯರ ಹೆಸರುಗಳನ್ನು ಕೆಳಗೆ ನಮೂದಿಸಲಾಗಿದೆ.

೧.  ಡಾ|| ಧರಣೀದೇವಿ ಮಾಲಗತ್ತಿ

೨.  ಡಾ|| ಆರ್. ಇಂದಿರಾ

೩.  ಡಾ|| ಅನಸೂಯ ಕೆಂಪನಹಳ್ಳಿ

೪.  ಸ.ನ. ಗಾಯತ್ರಿ

೫.  ಪ್ರೀತಿ ಶುಭಚಂದ್ರ

೬.  ಡಾ|| ಸಿ. ತೇಜೋವತಿ

೭.  ಡಾ. ಎಚ್.ಟಿ. ಶೈಲಜಾ

೮.  ರತ್ನಾ ಹಾಲಪ್ಪಗೌಡ

೯.  ಮಂಜುಳಾ ಮಾನಸ

೧೦. ಎನ್.ಆರ್. ರೂಪಶ್ರೀ

೧೧.  ಬಿ. ಲೀಲಾವತಿ ಭಟ್

೧೨. ಕೆ.ಟಿ. ಶ್ರೀಮತಿ

೧೩. ಎಚ್.ಆರ್. ಲೀಲಾವತಿ

೧೪. ಪಿ.ಎಸ್. ಅನುರಾಧ

೧೫. ಮೀನ ಹರೀಶ್ ಕೋಟ್ಯಾನ್

ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ಈ ಕೆಳಕಂಡವರು ಇಂದು ನಮ್ಮೊಡನಿಲ್ಲ. ಆದರೆ ಅವರ ಕೃತಿಗಳು ಅವರ ಸಾಧನೆಯನ್ನು ಇಂದಿಗೂ ಹೇಳುವಂತಿವೆ.

೧.  ಸಿ.ಎನ್.ಜಯಲಕ್ಷ್ಮಿದೇವಿ (ಕಾದಂಬರಿ, ನಾಟಕ, ಕಥೆ....)

೨.  ಬಿ.ಎಸ್. ಮಯೂರ (ವಿಜ್ಞಾನ ಸಾಹಿತ್ಯ)

೩.  ಲೀಲಾವತಿ ರಾಮಕೃಷ್ಣ (ಕಥೆ, ನಾಟಕ, ಕವನ, ಕಾದಂಬರಿ, ಶಿಶುಸಾಹಿತ್ಯ)

೪.  ಪ್ರೇಮಲತಾ ಸುಂದರೇಶ್ (ಕಾದಂಬರಿ, ಕಥೆ)

೫.  ಡಾ. ಕೆ.ಎಸ್. ರತ್ನಮ್ಮ (ಸಂಶೋಧನೆ ವಿಮರ್ಶೆ)