ಬುಧವಾರ, ಅಕ್ಟೋಬರ್ 26, 2022

ಮಾಲೇಕಲ್ಲು ತಿರುಪತಿ ಬೆಟ್ಟ, ಜೇನುಕಲ್ಲು ಸಿದ್ದೇಶ್ವರ ಬೆಟ್ಟ

     ಹಾಸನ ಜಿಲ್ಲೆಯ ಅರಸೀಕೆರೆ  ಗ್ರಾಮದಲ್ಲಿರುವ ಅಮರಗಿರಿ ಮಾಲೇಕಲ್ಲು ತಿರುಪತಿ ಕರ್ನಾಟಕದ ತಿರುಪತಿ ಎಂದೇ ಹೆಸರಾಗಿದೆ೨೩.೧೦.೨೦೨೨ರಂದು ಅಲ್ಲಿಗೆ ಹೋಗುವ ಅವಕಾಶ ಲಭಿಸಿತು. ದಿನ ಬೆಳಗ್ಗೆ .೩೦ಗೆ ಮೈಸೂರಿನ ವಾರ್ತಾ ಭವನದ ಎದುರು ನಾವು ಹಾಜರಾಗಿ ಕರಾರಸಾನಿ (ಒಪ್ಪಂದದ ಮೇರೆಗೆ) ಬಸ್ ಏರಿದೆವು. .೪೫ಕ್ಕೆ ಹೊರಟು .೩೦ಗೆ ಅರಸೀಕೆರೆ ತಲಪಿದೆವುಬಸ್ಸಲ್ಲಿ ತಿಂಡಿ (ಉಪ್ಪಿಟ್ಟು, ಕೇಸರಿಭಾತ್) ತಿಂದಿದ್ದೆವು. ನಾವು ೫೫ ಮಂದಿ ಒಟ್ಟು ಸೇರಿ ನಮ್ಮ ಹೆಸರು ಹೇಳಿ ಮುಂದೆ ಬೆಟ್ಟ ಹತ್ತಲು ಮುನ್ನಡೆದೆವು. ನಮ್ಮ ಬಸ್ಸಿನ ಚಾಲಕ ಸಂತೋಷ್ ಕೂಡ ನಮ್ಮೊಂದಿಗೆ ಸೇರಿಕೊಂಡರು. ಕೆಲವು ಜನ  ಮೊದಲ ಬಾರಿ ಚಾರಣ ಬಂದವರಿದ್ದರು. 

    ಮೊದಲಿಗೆ ಗುಂಡಮ್ಮ ದೇವಿಯ ದರ್ಶನವಾಗುತ್ತದೆ, ಬೆಟ್ಟಕ್ಕೆ ತೆರಳುವ ಮೆಟ್ಟಲಿನ ಬಳಿ ಆಂಜನೇಯನ ದರ್ಶನ. 

ಮಾಲೇಕಲ್ಲು ತಿರುಪತಿ ಬೆಟ್ಟ ಹತ್ತಲು ಸುಸಜ್ಜಿತವಾದ ಮೆಟ್ಟಲುಗಳಿವೆ. ಉದ್ದಕ್ಕೂ ಬಲವಾದ ಕೈತಾಂಗುಗಳಿವೆ. ಕೈತಾಂಗುಗಳ ಮೇಲೆ ವೆಂಕಟೇಶ್ವರ ನಾಮಾವಳಿಗಳ ಫಲಕ ಕೂಡ ಹಾಕಿದ್ದಾರೆ. ಅವನ್ನು ಓದುತ್ತ ದೇವ ಸ್ಮರಣೆ ಮಾಡುತ್ತಲೇ ಮೆಟ್ಟಲು ಹತ್ತಬಹುದು. ನಾವು .೫೫ಕ್ಕೆ ಮೆಟ್ಟಲು ಹತ್ತಲು ತೊಡಗಿದೆವು. ಬಿಸಿಲು ಜೋರಾಗಿತ್ತು. ಕಲ್ಲುಬಂಡೆಗಳಿರುವ ಬೆಟ್ಟದಲ್ಲಿ ಕುರುಚಲು ಸಸ್ಯ ಬಿಟ್ಟರೆ ಮರಗಳಿಲ್ಲ. ಗಾಳಿಯೂ ಬೀಸದೆ ಬಿಸಿಲ ಝಳದಿಂದ ಉಸ್ ಬುಸ್ ಎನ್ನುತ್ತ, ಆಗಾಗ ತುಸು ವಿಶ್ರಮಿಸುತ್ತ ಸಾಗಿದೆವು. ಸಾವಿರಮೆಟ್ಟಲ ಬಳಿ ಬಂದಾಗ ಅಲ್ಲಿ ಬಂಡೆಮೇಲೆ ಆಂಜನೇಯನ ಮೂರ್ತಿ ಕಂಡೆವು. ಮುಂದೆ ಸಾಗಿದಂತೆ ಬಂಡೆಮೇಲೆ ಗಣಪತಿ ದರ್ಶನ, ೧೧೨೫ ಮೆಟ್ಟಲು ಹತ್ತಿ ದೇಗುಲ ತಲಪಿದಾಗ ಗಂಟೆ ೧೧.೧೦. ಅಲ್ಲಲ್ಲಿ ಮೆಟ್ಟಲುಗಳು ಕಡಿದಾಗಿವೆ. ನಮ್ಮ ಚಾಮುಂಡಿಬೆಟ್ಟ ಏರಿ ಅಭ್ಯಾಸ ಇದ್ದವರಿಗೆ ಬೆಟ್ಟ ಏರುವುದು ಏನು ಕಷ್ಟವಲ್ಲ.
   ದೊಡ್ಡದಾದ ದೇಗುಲ, ಬಾಗಿಲು ಹಾಕಿತ್ತು. ವೆಂಕಟೇಶ್ವರ ಹಾಗೂ ಪದ್ಮಾವತಿದೇವಿಯರ ವಿಗ್ರಹಗಳಿವೆ.  ಪ್ರತೀ ಶನಿವಾರ ಮಾತ್ರ ಪೂಜೆ ನಡೆಯುವುದಂತೆ. ದೇಗುಲದ ನಿರ್ವಹಣೆ ಮಾತ್ರ ನಿರಾಶಾದಾಯಕವಾಗಿತ್ತು. ಸುತ್ತ ಮುತ್ತ ಹುಲ್ಲು ಬೆಳೆದಿತ್ತು. ದೇಗುಲದ ಕೋಟೆ ಗೋಡೆ ಒಂದೆಡೆ ಕುಸಿದಿತ್ತು. ನಮ್ಮ ಜನಜಂಗುಳಿ ಬಿಟ್ಟರೆ ಬೇರೆ ಜನ ಒಂದಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಭಾನುವಾರ ಜನಸಂದಣಿ ಇರಬಹುದೆಂದು ಭಾವಿಸಿದ್ದೆವು.
  ದೇಗುಲದ ಎದುರು ದೊಡ್ಡ ಎತ್ತರದ ಬಂಡೆ ಇತ್ತು. ಅದಕ್ಕೆ ಏಣಿ ಇಟ್ಟಿದ್ದರು.   ಸಂತೋಷ್ ಅದನ್ನು ಏರುವ ಸಾಹಸ ಮಾಡಿದರು. ಒಂದಿಬ್ಬರು ಅರ್ಧಭಾಗ ಹತ್ತಿಳಿದರು. ಅಲ್ಲಿ ಒಂದು ಗಂಟೆ ಕಾಲ ಕಳೆದೆವು.
 ವಸಿಷ್ಠ ಮುನಿಗಳು ಹೀರೆಕಲ್ ಬೆಟ್ಟದಲ್ಲಿ ವೆಂಕಟೇಶ್ವರ ಮೂರ್ತಿ ಪ್ರತಿಷ್ಟಾಪಿಸಿ ಪೂಜಿಸುತ್ತ, ಅಲ್ಲಿ ತಪವನ್ನಾಚರಿಸಿದ್ದರು. ವಸಿಷ್ಟರು ಅಲ್ಲಿಂದ ತೆರಳಿದ ಬಳಿಕ ಆ ವಿಗ್ರಹಕ್ಕೆ ಪೂಜೆ ನಡೆಯದೆ ಕ್ರಮೇಣ ನಶಿಸಿ ಭೂಗರ್ಭ ಸೇರಿತು..  ಕ್ರಿ.ಶ. ೧೨-೧೩ನೆಯ ಶತಮಾನದಲ್ಲಿ ಚಿತ್ರದುರ್ಗದ ಪಾಳೇಗಾರನಾಗಿದ್ದ ತಿಮ್ಮಪ್ಪನಾಯಕನಿಗೆ ಸ್ವಾಮಿ ಕನಸಿನಲ್ಲಿ ದರ್ಶನ ಕೊಟ್ಟು, ಅರಸೀಕೆರೆಯ ಬೆಟ್ಟದಲ್ಲಿ ಇರುವುದಾಗಿಯೂ ಅಲ್ಲಿ ಗುಡಿ ಕಟ್ಟಿಸುವಂತೆ ಸೂಚಿಸಿದನು. ತಿಮ್ಮಪ್ಪ ನಾಯಕ ಸ್ವಾಮಿಯ ಅಣತಿಯಂತೆ ಕೈಯಲ್ಲಿ ತುಳಸಿಮಾಲೆ ಹಿಡಿದು ಅರಸೀಕೆರೆಯ ಬೆಟ್ಟದಲ್ಲಿ ಸಾಗುತ್ತಿದ್ದಾಗ ಕೈಯಲ್ಲಿದ್ದ ತುಳಸೀಮಾಲೆ ಒಂದು ಕಲ್ಲಿನ ಮೇಲೆ ಬಿತ್ತು. ಆ ಸ್ಥಳದಲ್ಲಿ ವಿಗ್ರಹ ದೊರಕಿತು. ಮಾಲೆ ಕಲ್ಲಿನ ಮೇಲೆ ಬಿದ್ದ ಕಾರಣ ಮಾಲೇಕಲ್ಲು ಎಂದು ಹೆಸರು ಬಂತು. ಅಲ್ಲಿ ದೇವಾಲಯ ಕಟ್ಟಿಸಿದರು ಎಂಬುದು ದಂತಕಥೆ.
     ತಂಡದ ಪಟ ತೆಗೆಸಿಕೊಂಡು ನಾವು ಬೆಟ್ಟ ಇಳಿಯಲು ತೊಡಗಿದಾಗ ೧೨.೩೦. ಮೆಟ್ಟಲು ಏರುವಾಗ ಆಗುವ ಕಷ್ಟ ಇಳಿಯುವಾಗ ಆಗುವುದಿಲ್ಲ.  ಕಾಡು ಹೂಗಳು ಕೆಲವು ಕಂಡುವು.  ೧.೧೦ಕ್ಕೆ ಕೆಳಗೆ ತಲಪಿದ್ದೆವು.


ಮಾಲೇಕಲ್ಲಿಗೆ ಬೆಂಗಳೂರಿನಿಂದ ಸುಮಾರು ೧೯೭ಕಿಮೀ. ಮೈಸೂರಿನಿಂದ ಸುಮಾರು ೧೪೯ಕಿಮೀ.

   ಗುಂಡಮ್ಮದೇವಿಯಗುಡಿಯಲ್ಲಿ ಕೋಳಿಬಲಿ ನಡೆಯುತ್ತದೆಂದು ತೋರುತ್ತದೆ. ಸಾಕ್ಷಿಯಾಗಿ, ಕೋಳಿಪುಕ್ಕ, ಹಸಿರಕ್ತಹರಿದ ಗುರುತು ಕಂಡಿತು. ಗುಡಿಯೊಳಗೆ ಗುಂಡಮ್ಮದೇವಿಯ ಸುಂದರ ಪ್ರತಿಮೆ ಇದೆ. ಚೆನ್ನಾಗಿ ಅಲಂಕಾರ ಮಾಡಿದ್ದರು. ಒಳಗೆ ಕೆಲವು ಮಹಿಳೆಯರು ಕೂತಿದ್ದರು. ತಾಯಿ ಉತ್ತರ ಕೊಡು. ಇನ್ನೂ ಉತ್ತರ ಕೊಟ್ಟಿಲ್ಲ ತಾಯಿ. ಎಷ್ಟೂಂತ ಕಾಯಬೇಕು? ಎಂದು ಕೇಳಿಕೊಳ್ಳುತ್ತಲಿದ್ದರು. ಉತ್ತರ ಕೊಡುವುದೆಂದರೆ ಹೇಗೆ ಎಂದು ಕೇಳಿದೆ.ಅವರು ಅವರ ಕಷ್ಟ, ಸಮಸ್ಯೆ ಹೇಳಿಕೊಂಡಮೇಲೆ ವಿಗ್ರಹದಿಂದ ಹೂ ಉದುರಬೇಕಂತೆ. ಗುಂಡಮ್ಮ ತಾಯಿ ಎಲ್ಲರಿಗೂ ಒಳ್ಳೆಯದು ಮಾಡಮ್ಮ ಎಂದು ಕೇಳಿಕೊಂಡು ನಾವು ಅಲ್ಲಿಂದ ನಿರ್ಗಮಿಸಿದೆವು.

ಕರಿನಾಯಿಯೊಂದು ನಮ್ಮೊಂದಿಗೆ ಬೆಟ್ಟಕ್ಕೆ ಬಂದು ವಾಪಾಸು ಹಿಂದಿರುಗಿತು. ಆಶ್ಚರ್ಯದ ಸಂಗತಿ ಎಂದರೆ ನಾವು ಯಾವುದೇ ಊರಿನ ಬೆಟ್ಟ ಹತ್ತುವಾಗಲೂ ಅಲ್ಲಿಯ ನಾಯಿಯೊಂದು ನಮ್ಮೊಡನೆ ಬೆಟ್ಟಕ್ಕೆ ಬರುತ್ತದೆ. 

ಗೋವಿಂದರಾಜ ದೇಗುಲ

ಬೆಟ್ಟದ ತಪ್ಪಲಿನ ಕೆಳಭಾಗದಲ್ಲಿ ದೊಡ್ಡದಾದ ಗೋವಿಂದರಾಜ ದೇಗುಲ ಇದೆ. ಎದುರು ಭಾಗದಲ್ಲಿ ಸುಂದರ ಕೊಳವೂ ಇದೆ. ಈ ಕೊಳ ಎಂದೂ ಬತ್ತುವುದಿಲ್ಲವಂತೆ. 

ದೇಗುಲದೊಳಗೆ ಹೋದೆವು. ದೇಗುಲದ ಎದುರು  ಬೃಹತ್ ರಾಜಗೋಪುರ ಇದೆ. ಈ ಗೋಪುರ (೨೦೨೧) ಹೊಸದಾಗಿ ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿ ಮಲಗಿದ ಭಂಗಿಯಲ್ಲಿರುವ ವೆಂಕಟೇಶ್ವರನ ಪ್ರತಿಮೆ ಇದೆ. ಸುಮಾರು ೮೫೦ ವರ್ಷದಷ್ಟು ಹಳೆಯದಾದ ದೇಗುಲ ತಿಮ್ಮಪ್ಪ ನಾಯಕನ ಕಾಲದಲ್ಲಿ ಕಟ್ಟಲಾಗಿದೆಯೆಂದು ಅರ್ಚಕರು ತಿಳಿಸಿದರುಪ್ರವೇಶ ಸಮಯ: ಬೆಳಗ್ಗೆ ೭ರಿಂದ ಮಧ್ಯಾಹ್ನ , ಸಂಜೆ ೪ ರಿಂದ ೭ರವರೆಗೆ

ಭೋಜನಕಾಲೇ ಹರಹರ

ದೇಗುಲದ ಹೊರ ಆವರಣದಲ್ಲಿ ಗ್ರಂದಿಗೆ ಶ್ರೀ ನಂಜುಂಡ ವಾಸವಿ ಶ್ರೇಷ್ಠಿ ಎಂಬ ಹಳೆಯಕಾಲದ ಕಲ್ಯಾಣಮಂಟಪದಲ್ಲಿ ನಮಗೆ ಭೋಜನದ ವ್ಯವಸ್ಥೆ ಮಾಡಿದ್ದರು. ಬಾಳೆಲೆಯಲ್ಲಿ ಭೂರೀಭೋಜನ.(ಪಾಯಸ,ಕೋಸಂಬರಿ,ಸಂಡಿಗೆ, ಪಕೋಡ,ಜಹಂಗೀರ್, ಪಲಾವ್, ಮೊಸರುಗೊಜ್ಜು, ಮಜ್ಜಿಗೆ ಹುಳಿ, ಅನ್ನ,ಸಾರು,ಮೊಸರು, ಉಪ್ಪಿನ ಕಾಯಿ)ಇಷ್ಟೆಲ್ಲ ಬಗೆಯ ಊಟ ಹಾಕಿ ನಮ್ಮ ಹೊಟ್ಟೆದೇವರನ್ನು ತೃಪ್ತಿ ಪಡಿಸಲು ಶ್ರಮವಹಿಸಿದವರು ಹಾಸನದ ಮಂಜಣ್ಣನವರು.


ಶಿವಾಲಯ

 ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ ಅರಸೀಕೆರೆಯ ಪುರಾತನ ಶಿವದೇಗುಲಕ್ಕೆ ಹೋದೆವು. ಗರ್ಭಗೃಹ, ಸುಕನಾಸಿ, ನವರಂಗ, ಮುಖಮಂಟಪಗಳು, ನಕ್ಷತ್ರಾಕಾರದಲ್ಲಿ ಕಲಾತ್ಮಕ ಕುಸುರಿ ಕೆತ್ತನೆಯುಳ್ಳ ದೇಗುಲದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ನಿತ್ಯ ಪೂಜಾ ಸೇವೆ ನಡೆಯುತ್ತಲಿದೆ. ದೇಗುಲ ಹಳೆಯದಾದರೂ ನೋಡಲು ಆಕರ್ಷಣೆ ಕಳೆದುಕೊಂಡಿಲ್ಲ.  ಪಕ್ಕದಲ್ಲೇ ಇರುವ ಜಿನಾಲಯದಲ್ಲಿ ಕೂಡ ಶಿವಲಿಂಗವಿದ್ದು ಪೂಜೆ ನಡೆಯುತ್ತಿಲ್ಲ.

ಎರಡನೆಯ ಬಲ್ಲಾಳನ ಕಾಲದಲ್ಲಿ ಈ ದೇಗುಲ ಕಟ್ಟಲ್ಪಟ್ಟಿತು ಎಂಬ ಉಲ್ಲೇಖವಿದೆ.

ಜೇನುಕಲ್ಲು ಸಿದ್ದೇಶ್ವರ ಬೆಟ್ಟ

 ಅರಸೀಕೆರೆಯಿಂದ ಸುಮಾರು ೮ಕಿಮೀ ದೂರದಲ್ಲಿರುವ ಯಾದಾಪುರ ಗ್ರಾಮದಲ್ಲಿರುವ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಬೆಟ್ಟದ ಬುಡಕ್ಕೆ ಬಸ್ಸಲ್ಲಿ ಹೋದೆವು. ಅಲ್ಲಿ ಬಸ್ಸಿಳಿದು ಬೆಟ್ಟ ಹತ್ತಲು ಅನುವಾದೆವು. ಬೆಟ್ಟಕ್ಕೆ ಹೋಗುವ ದ್ವಾರದಲ್ಲಿ ಬೃಹತ್ ಗೋಪುರವಿದೆ.

ಅಲ್ಲಿ ಚಪ್ಪಲಿ ಕಳಚಿ ಬರಿಗಾಲಲ್ಲಿ ಬೆಟ್ಟ ಏರಬೇಕು. ಸುಮಾರು ೬೫೦ ಮೆಟ್ಟಲು ಹತ್ತಬೇಕು. ಮೆಟ್ಟಲು ಮೇಲಕ್ಕೆ ಮೇಲ್ಛಾವಣಿ ಹಾಕಿದ್ದಾರೆ. ಸುಲಭವಾಗಿ ಏರಬಹುದು. ನಾವು ಅರ್ಧ ಗಂಟೆಯಲ್ಲಿ ಬೆಟ್ಟ ತಲಪಿದ್ದೆವು.

ಅಲ್ಲಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಪಾದದ ಗುರುತು ಎಂದು ಹೇಳಲ್ಪಡುವ ಎರಡು ಹೆಜ್ಜೆಯ ಗುರುತುಗಳಿವೆ. ಸುತ್ತಲೂ ಬಂಡೆಗಳಿವೆ.‌ ಪಾದಗಳಿಗೆ ಅಭಿಷೇಕ ಮಾಡುತ್ತಾರೆ. ಅಲ್ಲಿ ಯಾವುದೇ ಬೇಯಿಸಿದ ಪದಾರ್ಥ ತರುವಂತಿಲ್ಲ, ಹಣ್ಣು ಹಂಪಲು, ತಂಬಿಟ್ಟು ಅಷ್ಟೇ ನೈವೇದ್ಯವಂತೆಸಿದ್ದೇಶ್ವರರು ಬೇಯಿಸಿದ ಆಹಾರ ಸೇವಿಸುತ್ತ ಇರಲಿಲ್ಲವಂತೆ. ಸಿದ್ದೇಶ್ವರರು ಯಾವ ಸಮಯದಲ್ಲಿ ಅಲ್ಲಿದ್ದರು ಎಂಬುದು ಎಲ್ಲಿಯೂ ದಾಖಲಾಗಲಿಲ್ಲವಂತೆ. ಅವರು ಯಾರಿಗೂ ಸಿಗುವವರು ಅಲ್ಲವಂತೆ. ಅವರು ಜಾಗದಲ್ಲಿ ತಪಸ್ಸು ಮಾಡಿದ್ದರಂತೆಜೇನುಹುಳಗಳೂ ಅಲ್ಲಿದ್ದುವಂತೆ. ಅವರ ಬಳಿ ಒಬ್ಬ ಸೇವಕನಿದ್ದನಂತೆಅವನು ಅನಾಚಾರ ಮಾಡಿದ್ದನಂತೆ. ಅವನನ್ನು ಜೇನುಹುಳಗಳು ಕಚ್ಚಿ ಸಾಯಿಸಿದುವಂತೆಅಲ್ಲಿಂದ ಮುಂದೆ ಯಾರೆ ಕೆಟ್ಟ ಕೆಲಸ ಮಾಡಿ  ಜಾಗಕ್ಕೆ ಕಾಲಿಟ್ಟರೂ ಜೇನುಹುಳಗಳು ದಾಳಿ ಮಾಡುತ್ತವಂತೆ. ಒಬ್ಬ ಕೆಟ್ಟಕಾರ್ಯ ಮಾಡಿದವನಿಂದಾಗಿ ಆಗ ಅಲ್ಲಿದ್ದವರಿಗೆಲ್ಲರಿಗೂ ಹುಳಗಳು ಕಡಿಯುತ್ತವಂತೆ. ಪ್ರತೀ ಹುಣ್ಣಿಮೆಯ ದಿನ ಭಕ್ತರ ದಂಡೇ ಅಲ್ಲಿಗೆ ಬರುತ್ತಾರಂತೆ. ನಾನಾ ಕಡೆಯಿಂದ ತಮ್ಮ ಕಷ್ಟಗಳಿಗೆ, ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಅಲ್ಲಿ ಬರುತ್ತಾರಂತೆ. ಸಮಸ್ಯೆ ನಿವಾರಣೆಯಾದಾಗ ಅಲ್ಲಿಗೆ ಬಂದು ೧೦೧ ತಂಬಿಟ್ಟು, ಬಾಳೆಹಣ್ಣು, ವೀಳ್ಯದೆಲೆ ಎಡೆ ಇಟ್ಟು ಪ್ರಸಾದ ಎಲ್ಲರಿಗೂ ಹಂಚಿ ತೆರಳುತ್ತಾರಂತೆ. ೧೦೧ ಮಂದಿ ಯತಿಮುನಿಗಳು ಅಲ್ಲಿ ತಪಸ್ಸುಗೈದಿದ್ದರಂತೆ. ಪುರಾವೆಯಾಗಿ ಅಡಿಗೆ ಮಾಡಿದ ಕುರುಹುಗಳು, ಇತ್ಯಾದಿ ದೊರೆತಿದ್ದುವಂತೆ. ಈಗಲೂ ಬಂಡೆಗಳ ಬಳಿ ಜೇನುಹುಳಗಳು ಸಾಕಷ್ಟು ಇವೆಯಂತೆ. ವಿಷಯಗಳನ್ನು ಅಲ್ಲಿದ್ದವರು ತಿಳಿಸಿದರು.

ಅಲ್ಲಿ ಒಂದು ಕೊಳಗದಲ್ಲಿ ಎಣ್ಣೆ ಇಟ್ಟಿದ್ದರುಹಿರಿಯರಾದವರು ಕಿರಿಯರಿಗೆ ಎಣ್ಣೆ ತೆಗೆದು ತಲೆಗೆ ಹಚ್ಚಿ, ಮನಸ್ಸಿನಲ್ಲಿ ಕೇಳಿಕೊಂಡದ್ದು ಈಡೇರಲಿ ಒಳ್ಳೆಯದಾಗಲಿ, ಎಂದು ಹರಸುತ್ತಾರಂತೆ.

ಜಾಗದ ಬಗ್ಗೆ ಇಷ್ಟೆಲ್ಲ ಕಾರಣಿಕ ಇರುವ ಬಗ್ಗೆ ಕೇಳುತ್ತ ನಾವು ಅಲ್ಲಿ ಅರ್ಧಗಂಟೆ  ಕುಳಿತಿದ್ದೆವು.

ಮೆಟ್ಟಲು ಇಳಿದು .೩೦ಗೆ ಕೆಳಗೆ ಬಂದೆವು.ಕೆಳಗೆ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ಅನ್ನದಾಸೋಹ ಇದೆ.

 ಸಮೋಸ, ಜಿಲೇಬಿ, ಚಹಾ ಏರ್ಪಾಡನ್ನು ಮಂಜಣ್ಣನವರು ನಮಗಾಗಿ ಪ್ರಾಯೋಜಿಸಿದ್ದರು. ಅವರ ಪ್ರೀತಿಗೆ ನಮೋನಮಃ.
      ೬ .೧೫ಗಂಟೆಗೆ ನಾವು ಬಸ್ ಹತ್ತಿ ಅಲ್ಲಿಂದ ಹೊರಟೆವು. ಚನ್ನರಾಯಪಟ್ಟಣದಲ್ಲಿ ಮಂಜಣ್ಣ ಬಸ್ ಇಳಿದರುತಮ್ಮ ಕೆಲಸ ಬದಿಗೊತ್ತಿ ಹಾಸನದಿಂದ ಬಂದು ಇಡೀ ದಿನ ನಮಗಾಗಿ ಮೀಸಲಿಟ್ಟು, ರುಚಿಕಟ್ಟಾದ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಸಿ, ಸಂಜೆಯ ಚಹಾ ತಿಂಡಿ ಪ್ರಾಯೋಜಿಸಿ ನಮ್ಮೊಂದಿಗೆ ಭಾಗಿಯಾಗಿದ್ದ ಮಂಜಣ್ಣನವರಿಗೆ ಕೃತಜ್ಞತೆ ಸಲ್ಲಿಸಿ ಬೀಳ್ಕೊಟ್ಟೆವು.
ರಾತ್ರಿ ಊಟಕ್ಕೆ ಚನ್ನರಾಯಪಟ್ಟಣ ದಿಂದ ಪಲಾವ್ ಪೊಟ್ಟಣ, ಉದ್ದಿನ ವಡೆ ಸರಬರಾಜಾಯಿತು. ಅದರ ಮಧ್ಯೆ ಖಾರ ಮಂಡಕ್ಕಿ ವಿತರಣೆಯಾಯಿತು. ಯಾವುದೇ ಚಾರಣದಲ್ಲೂ ಚಾರಣಿಗರ  ಕ್ಯಾಲರಿ ಒಂದಷ್ಟೂ ಕಡಿಮೆಯಾಗದಂತೆ, ಹೆಚ್ಚೇ ಆಗುವಂತೆ ಆಯೋಜಕರು ಸಾಕಷ್ಟು ಮುತುವರ್ಜಿ ವಹಿಸುತ್ತಾರೆಅದಕ್ಕೆ ಸರಿಯಾಗಿ ನಮ್ಮ ಹೊಟ್ಟೆದೇವರೂ ಸಂತೃಪ್ತರಾಗುತ್ತಾರೆ! ಇದಕ್ಕೆ ಸಾಕ್ಷಿಯಾಗಿ ೧೧೨೫ ಮೆಟ್ಟಲು ಹತ್ತಿ ಇಳಿದು, ಮತ್ತೆ ೬೫೦ ಮೆಟ್ಟಲು ಹತ್ತಿಳಿದರೂ ಒಂದಿಂಚು ಕ್ಯಾಲರಿ ಕಡಿಮೆಯಾಗದಿರುವುದು!
ಬಸ್ಸಿನಲ್ಲಿ ಅರಸೀಕೆರೆಯಿಂದ ಪ್ರಾರಂಭವಾದ ಅಂತ್ಯಾಕ್ಷರಿ ಹಾಡು ಚನ್ನರಾಯಪಟ್ಟಣ ತಲಪುವವರೆಗೂ ಸೊಗಸಾಗಿ ಸಾಗಿತು. ರಾತ್ರೆ ೧೦.೧೫ಕ್ಕೆ ಮೈಸೂರು ತಲಪಿದೆವು.
   ಈ ಚಾರಣ ಕಾರ್ಯಕ್ರಮವನ್ನು ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದ (ರೂ. ೮೦೦) ಉಮಾಶಂಕರ್ ಮತ್ತು ರವಿಶಂಕರ್ ಆಯೋಜಿಸಿದ್ದರು. ಅವರಿಬ್ಬರಿಗೂ ಹಾಗೂ ಅವರಿಗೆ ಸಹಕಾರವಿತ್ತ ಮಂಜಣ್ಣ ಮತ್ತು ಅವರ ತಂಡದವರಿಗೆ ಮತ್ತು ನಮ್ಮ ಸಾರಥಿ ಸಂತೋಷ್ ಅವರಿಗೆ ನಮ್ಮ ಸಹಚಾರಣಿಗರೆಲ್ಲರ ಪರವಾಗಿ ಧನ್ಯವಾದ.
ಬೆಳಗ್ಗೆ ತಮ್ಮ ಕಾರಿನಲ್ಲಿ ನನ್ನನ್ನು ವಾರ್ತಾಭವನದ ಬಳಿಗೆ ಕರೆದೊಯ್ದ ಹಾಗು ರಾತ್ರಿ ವಾರ್ತಾ ಭವನದ ಬಳಿಯಿಂದ ಮನೆಗೇ ತಲಪಿಸಿದ ಸಹಚಾರಣಿಗರಾದ ಲೋಕೇಶ್ ರತ್ನಾ ದಂಪತಿಗೆ ಧನ್ಯವಾದ.