ಗುರುವಾರ, ಆಗಸ್ಟ್ 4, 2022

ಮಳೆಯಲಿ ಜೊತೆಯಲಿ ಗೋವಾ ಚಾರಣ _ ಭಾಗ ೨

             ಸುಲ್ ಸುಲೊ ಜಲಪಾತ (SULSULO waterfall) 

ತಾರೀಕು ೨೫.೭.೨೦೨೨ರಂದು ಎಂದಿನಂತೆ ೬ ಗಂಟೆಗೆ ಎದ್ದು ತಯಾರಾಗಿ ೭.೧೫ಕ್ಕೆ ತಿಂಡಿ ನೂಡಲ್ಸ್ ತಿಂದು ೮.೧೫ಕ್ಕೆ ಬುತ್ತಿಗೆ ಪೂರಿ ಪಲ್ಯ, ಸಿಹಿ ಉಂಡೆ ತುಂಬಿ ತಯಾರಾದೆವು. ಈ ದಿನ ನಡೆಯುವುದು ಸ್ವಲ್ಪ ಜಾಸ್ತಿ ಇರುತ್ತದೆ ಎಂದಿದ್ದರು. ಕೆಲವು ಮಂದಿ ಜ್ವರದಿಂದ ಬಳಲಿದ ಕಾರಣ ಚಾರಣಕ್ಕೆ ಗೈರು ಘೋಷಿಸಿದ್ದರು. 

ಸತ್ತಾರಿಯ ಶೆಲೋಪ್ ಬುಡ್ರುಕ್ ಹಳ್ಳಿಯಲ್ಲಿರುವ ಹಚ್ಚಹಸಿರಿನ ಕಾಡುಗಳಲ್ಲಿ ನಡೆಯುತ್ತ ಸಾಗಿದೆವು.  ಈ ದಿನ ಒಟ್ಟು ನಾಲ್ಕು ಸುಲ್ ಸುಲೊ ಜಲಪಾತ ನೋಡುವುದಿತ್ತು. ಸುಲ್ ಸುಲೊ ಅಂದರೆ ಜಾರುವುದು ಎಂದರ್ಥವಂತೆ. ಹಾಗಾಗಿ ಎಚ್ಚರದಿಂದ ಹೆಜ್ಜೆ ಇಡಿ ಎಂದು  ಮೊದಲೇ ಎಚ್ಚರಿಸಿದ್ದರು. ಮೊದಲಿಗೆ ಒಂದು ಪುಟ್ಟ ಜಲಪಾತ ಎದುರಾಯಿತು. ಅಲ್ಲಿ ಅರ್ಧ ಗಂಟೆ ನೀರಲ್ಲಿ ಇದ್ದು ಎದ್ದು ಮುಂದೆ ನಡೆದೆವು.


ಮಧ್ಯೆ ಮಧ್ಯೆ ತೊರೆಗಳನ್ನು ದಾಟಿ  ಸಾಗಿದೆವು.  ಕಾಡು ದಾರಿಯ ನೆಲದಲ್ಲಿ ಸೊಪ್ಪುಗಳು ಕೊಳೆತು ಜಾರುತ್ತಲಿತ್ತು. ನಾವು ಹತ್ತಿಪ್ಪತ್ತು ಮಂದಿ ಮುಂದಿದ್ದೆವು. ಅಷ್ಟರಲ್ಲಿ ಸುದ್ದಿ ಬಂತು. ಮೈಸೂರಿನ ಪ್ರಮೀಳಾ ಎಂಬವರು ಜಾರಿ ಬಿದ್ದರು. ಬೀಳುವಾಗ ಕೈ ಊರಿ ಮಣಿಗಂಟಿನ ಬುಡದಲ್ಲಿ ಕೂದಲಳತೆಯ ಮುರಿತ ಆಗಿ, ಅಲ್ಲೇ ಇದ್ದ ಮೂಳೆ ವೈದ್ಯರು (ಗುಜರಾತಿನವರು) ಪ್ರಥಮ ಚಿಕಿತ್ಸೆ ನೀಡಿ ಕ್ರೇಪ್ ಬ್ಯಾಂಡೇಜು ಬಿಗಿಯಾಗಿ ಕಟ್ಟಿದರು. ಅವರೂ ಕೈ ಕಟ್ಟಿಕೊಂಡೇ ಮುಂದೆ ಚಾರಣ ಮುಂದುವರಿಸಿದರು.

     ಎರಡನೇ ಪುಟ್ಟ ಜಲಪಾತ ಎದುರಾಯಿತು. ನಾವು ಕೆಲವರು ಅದರಲ್ಲಿ ಇಳಿಯುವ ಮನಸ್ಸು ಮಾಡದೇ ದೂರದಿಂದಲೇ  ನೋಡಿ ತೃಪ್ತಿ ಹೊಂದಿದೆವು. ಮುಂದೆ ನಡೆದು ಮೂರನೇ ಜಲಪಾತದ ಬಳಿ ಬಂದೆವು. ಅಲ್ಲಿ ನೀರೊಳಗೆ ಕೂತು ಜಲ ಥೆರಪಿ ಪಡೆದುಕೊಂಡೆವು! ನೀರ ರಭಸದ ಹರಿವಿನಿಂದ ನಾನು ಹಾಗೂ ತಂಗಿ ಸವಿತಳೂ ಓಲಾಡುತ್ತಲಿದ್ದೆವು. ಸವಿತಾ ಲೋಕೇಶ್ (ಜಿಮ್ ಕಸರತ್ತು ವ್ಯಾಯಾಮದಿಂದ ಸದೃಢವಾದ ಶರೀರ ಅವಳದು) ನಮ್ಮನ್ನು ಗಟ್ಟಿಯಾಗಿ ಹಿಡಿದುಕೊಂಡಕಾರಣ ನಾವು ತುಸು ಹೊತ್ತು ನೀರಧಾರೆಗೆ ಮೈ ಒಡ್ಡಿ ನಿಲ್ಲಲು ಸಾಧ್ಯವಾಯಿತು!



 

ಮುಂದೆ ನಾಲ್ಕನೇ ಜಲಪಾತದೆಡೆಗೆ ಹೋದೆವು. ಈ ಎಲ್ಲ ಜಲಪಾತಗಳು ಇದ್ದುದು ಕಾಡಿನೊಳಗೊಂದು ವೃತ್ತ ಸುತ್ತು ಬಂದಂತೆ. ಆಗ ಜಲಪಾತ ದರ್ಶನವಾಗುತ್ತದೆ.  ನಾಲ್ಕನೇ ಜಲಪಾತ ಕೂಡ ಸಣ್ಣದೇ. ವಿಶಾಲವಾಗಿ ನೀರು ಹರಿಯುತ್ತಲಿತ್ತು. ಅಲ್ಲಿ ಕೂತು ಊಟ ಮಾಡಿದೆವು. ೨.೩೦ಗೆ ತಲೆ ಲೆಕ್ಕ ಮಾಡಿ ಅಲ್ಲಿಂದ ಹೊರಟೆವು. ಹೋಗುವ ದಾರಿ ಬೇರೆಯೇ. ಸು್ಮಾರು ೧೦ಕಿಮೀ ಊರೊಳಗೆ ನಡೆದು ನಾವು ಪಂಚಾಯತ್ ಕಟ್ಟಡ ತಲಪಿದಾಗ ೪.೩೦ ಗಂಟೆ.  ರಸ್ತೆ ದಾರಿಯಲ್ಲಿ ಸಿಕ್ಕಿದ ಬೈಕ್, ಸ್ಕೂಟರಿನಲ್ಲಿ ಸುಸ್ತಾದವರು ಕೆಲವರು ಗಮ್ಯ ತಲಪಿಕೊಂಡರು. ಸುಸ್ತಾದವರು ಗಾಡಿ ಹತ್ತಿ ಬರಬಹುದು ಎಂದು ಮುಕ್ತ ಅವಕಾಶ ಮೊದಲೇ ಕೊಟ್ಟಿದ್ದರು.


   ಪ್ರಮೀಳಾ ಅವರನ್ನು ವಾಲ್ಪೋಯಿಗೆ ಕರೆದುಕೊಂಡು ಹೋಗಿ ಕೈ ಕ್ಷಕಿರಣ ಮಾಡಿಸಿದಾಗ ಎಡಕೈ ಮಣಿಕಟ್ಟಿನ ಬಳಿ ಕೂದಲಳತೆಯ ಮುರಿತ ಆದದ್ದು ಹೌದೆಂದು ತಿಳಿಯಿತು. ಕೈಗೆ ಬ್ಯಾಂಡೇಜು ಕಟ್ಟಿ ಬಿಟ್ಟರು. ೧೫ ದಿನ ಹಾಗೆಯೇ ಇಟ್ಟುಕೊಳ್ಳಬೇಕು ಎಂದರಂತೆ.

    ಒಣಗಿದ ಬಟ್ಟೆ ಧರಿಸಿ ಬಂದು ಬಿಸಿ ಬಿಸಿ ಆಲೂ, ಮೆಣಸಿನ  ಬಜ್ಜಿ ಸವಿದೆವು. ರಾತ್ರಿ ೮ಕ್ಕೆ ಊಟ (ಅನ್ನ ಸಾರು, ಬೆಂಡೆ ಪಲ್ಯ, ಹಪ್ಪಳ, ಕಡ್ಲೆ, ಸಾಗು ಪಾಯಸ, ಪಾವು ಬಾಜಿ) ರಾತ್ರೆ ೯ಕ್ಕೆ ಎಂದಿನಂತೆ ವಿಚಾರವಿನಿಮಯ, ಚಾರಣ ಅನುಭವ ಇತ್ಯಾದಿ ನಡೆಯಿತು. ಆಗ ಬಂದ ಸುದ್ದಿ ಅಂದರೆ ನಮ್ಮ ತಂಡದಲ್ಲಿದ್ದವರು ಹತ್ತು ಮಂದಿ ಆಲ್ಕೋಹಾಲ್ ಸೇವಿಸಿ ಅನುಚಿತವಾಗಿ ನಡೆದುಕೊಂಡಿದ್ದರಂತೆ. (ಗುಜರಾತಿನವರೆಂದು ತೋರುತ್ತದೆ.) ಹಾಗಾಗಿ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿದರಂತೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಎಲ್ಲ ವಿದ್ಯಾವಂತರೇ ಇದ್ದುದು. ಇನ್ನು ಒಂದು ದಿನ ತಡೆದು ಚಾರಣ ಎಲ್ಲ ಮುಗಿಸಿ ಅಲ್ಲಿಂದ ತೆರಳಿದ ಬಳಿಕ ಮನಸೋ ಇಚ್ಛೆ ಕುಡಿಯಬಹುದಿತ್ತಲ್ಲ. ಆ ಒಂದು ದಿನ ಕುಡಿಯದೆ ಇರಲು ಸಾಧ್ಯವಾಗಲಿಲ್ಲವೆ? ಅವರಿಗೆ ಎಂದು ನಾವು ಮಾತಾಡಿಕೊಂಡೆವು.    ನಶೆ ಬಲು ಕೆಟ್ಟದು ನೋಡಣ್ಣ .

ಕುಮ್ತಾಲ್ ಜಲಪಾತ kumthal waterfall

   ತಾರೀಕು ೨೬.೭.೨೦೨೨ರಂದು ಬೆಳಗ್ಗೆ ೬ಕ್ಕೆ ಎದ್ದು ತಯಾರಾಗಿ ಬಿಸಿ ಬಿಸಿ ಚನ್ನ ಬತೂರ  ತಿಂದು ಬುತ್ತಿಗೆ ಪೂರಿ ಪಲ್ಯ (ಮೂರು ದಿನದಿಂದ ಪೂರಿ ಪಲ್ಯ!) ಸಿಹಿ ಉಂಡೆ ಹಾಕಿಕೊಂಡು ತಯಾರಾದೆವು. ೯ ಗಂಟೆಗೆ ಬಸ್ಸಿನಲ್ಲಿ ಸವರ್ಡೆ ಹಳ್ಳಿಗೆ ಹೋಗಿ ಅಲ್ಲಿಂದ ಕಾಡೊಳಗೆ ೪ಕಿಮೀ ನಡೆದು ಕುಮ್ತಾಲ್ ಜಲಪಾತದೆಡೆಗೆ ಹೋದೆವು. ಶ್ವೇತ ಜಲಲ ಜಲಧಾರೆ ಹರಿಯುತ್ತಲಿತ್ತು. ಇದೇ ನಮ್ಮ ಕೊನೆಯ ಜಲಪಾತ ಭೇಟಿ. ಹಾಗಾಗಿ ನೀರೊಳಗೆ ಇಳಿದು ಚೆನ್ನಾಗಿ ಆಟವಾಡಬೇಕು ಎಂಬುದು ಎಲ್ಲರ ತುಡಿತ. ನೀರೊಳಗೆ ಇಳಿದವರು ಅಲ್ಲಿಂದ ಮೇಲೆ ಬರಲು ಒಪ್ಪುತ್ತಲೇ ಇರಲಿಲ್ಲ. ಎಮ್ಮೆಗಳು ನೀರೊಳಗೆ ಇಳಿದರೆ ಹೇಗೆ ಹೊರಗೆ ಬರುವುದಿಲ್ಲವೋ ಹಾಗೆಯೇ ಇಲ್ಲಿ ಕೂಡ ಅದೇ   ಸ್ಥಿತಿಯಂತಿತ್ತು!

                              

   ನಾವೂ ನೀರೊಳಗೆ  ಕಾಲು ಹಾಕಿಕೊಂಡು ಕೂತೆವು. ಅಷ್ಟರಲ್ಲಿ ಧಾರಾಕಾರ ಮಳೆ ಸುರಿಯಿತು. ನಾವು ಬರುವಾಗ ಇದ್ದ ಶುಭ್ರ  ಜಲಪಾತ ಈಗ ಸಂಪೂರ್ಣ ಬೇರೆಯೇ ರೂಪ ತಳೆಯಿತು. ನೀರ ಹರಿವು ಹೆಚ್ಚಿ  ಕೆಂಪುವರ್ಣಕ್ಕೆ ತಿರುಗಿತು. ಒಂದೇ ಜಲಪಾತ ಎರಡು ವಿಧದಲ್ಲಿ ನೋಡುವ ಭಾಗ್ಯ ನಮಗೆ ದೊರೆಯಿತು.  ಮಳೆಯಲ್ಲೇ ಊಟ ಮಾಡಿದೆವು. ಮಧ್ಯಾಹ್ನ ೨.೩೦ ವರೆಗೆ ಅಲ್ಲೇ ಕಾಲ ಕಳೆದೆವು. ಧಾರಾಕಾರ ಮಳೆಯಲ್ಲಿ ನೆನೆದದ್ದರಿಂದಾಗಿ ಕೆಲವರಿಗೆ ಚಳಿ ತಡೆದುಕೊಳ್ಳಲು ಕಷ್ಟವಾಯಿತು.








      ಅಲ್ಲಿಂದ ಅರ್ಧ ಕಿಮೀ ದೂರ ಗುಡ್ಡ ಮೇಲೆ ಹತ್ತಿ ರಸ್ತೆಗೆ ಬಂದೆವು. ಅಲ್ಲಿ ನಮ್ಮ ಬಸ್ ನಿಂತಿತ್ತು. ಅಲ್ಲಿ ನಮ್ಮ ತಂಡದ ಪಟ ತೆಗೆಸಿಕೊಂಡು ಬಸ್ ಹತ್ತಿದೆವು.  ಒಂದು ಗಂಟೆ ಪಯಣಿಸಿ ನಾವು ಸತ್ತಾರಿನ ಪಂಚಾಯತ್ ಕಟ್ಟಡ ತಲಪಿದೆವು.
ಅಲ್ಲಿಗೆ ಉತ್ತರ ಗೋವಾದ  ಜಲಪಾತ ವೈಭವ ಮುಕ್ತಾಯವಾಯಿತು. 

   

ಆ ದಿನ ಬಟ್ಟೆ ಒಣಗಲು ಸಮಯ  ಇರಲಿಲ್ಲ. ಒದ್ದೆ ಬಟ್ಟೆಯನ್ನು ಹಾಗೆಯೇ ಚೀಲಕ್ಕೆ ತುಂಬಿ ನಮ್ಮ ಸಾಮಾನೆಲ್ಲವನ್ನೂ ಚೀಲಕ್ಕೆ ತುಂಬಿ ತಯಾರಾದೆವು. ನಮಗೆ ಕೊಟ್ಟ ಬಟ್ತಲು, ಲೋಟ, ಚಮಚ, ಜಮಾಖಾನವನ್ನು ಹಿಂದಿರುಗಿಸಿದೆವು. ನಾಲ್ಕು ದಿನ ಚಾರಣದಲ್ಲಿ ಭಾಗವಹಿಸಿದ್ದಕ್ಕಾಗಿ ಸರ್ಟಿಫಿಕೇಟ್ ಕೊಟ್ಟರು. 

   ಸಂಜೆ ಬಿಸಿಬಿಸಿ ಈರುಳ್ಳಿ ಪಕೋಡ ಚಟ್ನಿ ಸವಿದೆವು. ರಾತ್ರೆ ಊಟಕ್ಕೆ ಪಲಾವ್ ಬುತ್ತಿಗೆ ತುಂಬಿಕೊಂಡೆವು. ಕಿರಣ ಶಾನಭೋಗ್ ಹಾಗೂ ಮೂರು ಮಂದಿ ಸಹಾಯಕ ಬಾಣಸಿಗರು ರುಚಿಕಟ್ಟಾಗಿ ಅಷ್ಟು ದಿನವೂ ಅಡುಗೆ ತಯಾರಿಸಿದ್ದರು. ಕಿರಣ ಅವರು ಕುಮಟದವರು ಕನ್ನಡಿಗರು. ಗೋವಾದ ದೇವಾಲಯವೊಂದರಲ್ಲಿ ಕೆಲಸವಂತೆ. ಒಂದು ತಿಂಗಳಿನ ಮಟ್ಟಿಗೆ ಇಲ್ಲಿಗೆ ಬಂದದ್ದೆಂದು ತಿಳಿಸಿದರು. 

   ಮರಳಿ ವಾಸ್ಕೋ

    ರಾತ್ರೆ ೧೦.೨೦ಕ್ಕೆ ಹೊರಡುವ ವಾಸ್ಕೋ – ಯಶವಂತಪುರ  ರೈಲಿಗೆ ಟಿಕೆಟ್ ಕಾದಿರಿಸಿದ್ದೆವು. ಹಾಗಾಗಿ ನಾವು ಅಲ್ಲಿಂದ ಹೊರಡಬೇಕಿತ್ತು. ರಾತ್ರೆಯ ಬಿಳ್ಕೊಡುಗೆ ಸಮಾರಂಭಕ್ಕೆ ನಾವು ಗೈರಾದಾವು. ಅಲ್ಲಿಂದ ಹೊರಡುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಸತ್ತಾರಿಯಿಂದ ಸಂಜೆ ೪.೪೫ಕ್ಕೆ ವಾಲ್ಪೋಯಿಗೆ ಕೊನೆಯ ಬಸ್ ಇದೆ. ಮತ್ತೆ ವಾಲ್ಪೋಯಿಯಿಂದ ಪಣಜಿಗೆ ಒಂದು ಬಸ್, ಪಣಜಿಯಿಂದ ವಾಸ್ಕೋಗೆ ಇನ್ನೊಂದು ಬಸ್ ಹಿಡಿದು ಹೋಗಬೇಕು. ನಮ್ಮ ಲಗೇಜ್ ಹೊತ್ತುಕೊಂಡು ಮೂರು ಬಸ್ ಬದಲಾಯಿಸಿ ಹೋಗುವುದು ಕಷ್ಟ ಸಾಧ್ಯ ಎನಿಸಿದ್ದರಿಂದ ನಾವು ಪಣಜಿಗೆ ಬಂದ ನಿಂಗು ಅವರಿಗೆ ಪೋನಾಯಿಸಿದೆವು. ಅವರು ರಜಾದಲ್ಲಿದ್ದರು. ಆದರೆ ಪರ್ಯಾಯ ಚಾಲಕನ ದೂರವಾಣಿ ಸಂಖ್ಯೆ ಕೊಟ್ಟು ಸಹಕರಿಸಿದರು. ಹನುಮಂತ ಎಂಬ ಕನ್ನಡಿಗ ಕರೆ ಮಾಡಿ ೧೩ ಆಸನಗಳಿರುವ ವಿಂಗರ್ ಗಾಡಿ (ರೂ.೫೫೦೦) ತರುವೆ ಎಂದು ನುಡಿದರು. ಸಂಜೆ ೬ ಗಂಟೆಗೆ ವಿಂಗರ್‍ ಗಾಡಿಯಲ್ಲಿ ಹನುಮಂತನ ಆಗಮನವಾದಾಗ, ಸಾಕ್ಶಾತ್ ಹನುಮಂತನೇ ಪ್ರತ್ಯಕ್ಷನಾದಷ್ಟು ಸಂತೋಷವಾಗಿ ನಿರಾಳವಾಯಿತು.  ನಾವು ೯ ಮಂದಿ ಹಾಗೂ ಗುಜರಾತಿನ ನಾಲ್ಕು ಮಂದಿ ಅಲ್ಲಿದ್ದ  ಎಲ್ಲರಿಗೂ ವಿದಾಯ ಹೇಳಿ ಗಾಡಿ ಹತ್ತಿದೆವು. ೬.೩೦ ಗಂಟೆಗೆ ಹೊರಟು ನಾವು ವಾಸ್ಕೋ ತಲಪಿದಾಗ ಗಂಟೆ ೮.೩೦ ಆಗಿತ್ತು. ಹನುಮಂತ ನಮ್ಮನ್ನಿಳಿಸಿ ಅವರ ವಿಸಿಟಿಂಗ್ ಕಾರ್ಡ್ ಕೊಟ್ಟು ವಿನಮ್ರವಾಗಿ  ಮುಂದೆ ಹೋದರು. ವಾಸ್ಕೋ-ಡ- ಗಾಮದಲ್ಲಿ ಅವರದು ಟೂರ್ಸ್ ಆಂಡ್ ಟ್ರಾವೆಲ್ಸ್ ಅಂಗಡಿ ಇದೆ. ದಕ್ಷಿಣ ಗೋವಾ, ಉತ್ತರ ಗೋವಾದಲ್ಲಿ ಅವರದು ಸೈಟ್ ಸೀಯಿಂಗ್ ವ್ಯವಸ್ಥೆ ಬೆಳಗ್ಗೆ ೯ರಿಂದ ಸಂಜೆ ೬ ರ ತನಕ ಇದೆಯಂತೆ. ದಿನದ ೨೪ ಗಂಟೆ ಕಾರ್ ಸರ್ವಿಸ್ ಲಭಿಸುತ್ತದಂತೆ. ಹನುಮಂತ ಅವರ ಸಂಪರ್ಕ ಸಂಖ್ಯೆ: ೯೯೨೩೯೨೨೦೮೯, ೯೭೬೭೧೯೨೩೫೨, ೮೫೫೧೦೨೫೭೨೯.

    ನಾವು ವಾಸ್ಕೋ ನಿಲ್ದಾಣ ಪ್ರವೇಶಿಸಿದಾಗ ಗಾಡಿ ಅಲ್ಲಿ ನಿಂತಿತ್ತು. ಆದರೆ ರೈಲು ಬಾಗಿಲು ತೆರೆದಿರಲಿಲ್ಲ. ಬಾಗಿಲನು ತೆರೆದು ಸೇವೆಯನು ಕೊಡು ಎಂದು ಜಪಿಸುತ್ತ ಕೆಳಗೆ ಕೂತು ಊಟ ಮುಗಿಸಿದೆವು. ನಮ್ಮ ಮೊರೆ ಕೇಳಿತೇನೋ ಸ್ವಲ್ಪ ಸಮಯದಲ್ಲಿ ಬಾಗಿಲು ತೆರೆದರು! ರೈಲು ಹತ್ತಿದೆವು.

  ಸಾಮಾನ್ಯವಾಗಿ ಯೂಥ್ ಹಾಸ್ಟೆಲಿನ ಚಾರಣ ಕಾರ್ಯಕ್ರಮದಲ್ಲಿ ಸಸ್ಯಾಹಾರಿ ಊಟ ತಿಂಡಿಯನ್ನೇ ಕೊಡುವುದು. ಕೆಲವು ಕಡೆ ಮಾಂಸಾಹಾರವೆಂದು ಹೆಚ್ಚೆಂದರೆ ಮೊಟ್ಟೆ ಇರುತ್ತದಷ್ಟೆ. ಗೋವಾದ ಸ್ಪೆಷಲ್ ಎಂದು ಮೊಟ್ಟೆ, ಮೀನು ಪದಾರ್ಥ ಪ್ರತೀದಿನ ಇರುತ್ತಲಿತ್ತು.  ಕೊನೇ ದಿನ ರಾತ್ರೆ ಊಟಕ್ಕೆ ಚಿಕನ್ ಇತ್ತಂತೆ. ನಾವು ರಾತ್ರೆ ಊಟಕ್ಕೆ ಇರಲಿಲ್ಲ. ಹಾಗಾಗಿ  ಅತಿ ದೊಡ್ಡ ನಷ್ಟ ಆದದ್ದು ಎಂದರೆ ಸವಿತಾ ಲೋಕೇಶ್ ಅವರಿಗೆ ಚಿಕನ್ ಲಭ್ಯವಾಗಲಿಲ್ಲ ಎಂದು ಅವರನ್ನು ಕಿಚಾಯಿಸಿದೆವು. ಅಲ್ಲಿ ರಾತ್ರೆ ಊಟ ಮಾಡುತ್ತ ಎಲ್ಲರೂ ಚಿಕನ್ ಪಟ ತೆಗೆದು ಸವಿತಾ ಅವರಿಗೆ ಕಳುಹಿಸಿ ಹೊಟ್ಟೆ ಉರಿಸಿದ್ರಂತೆ.!

  ರೈಲು ಹತ್ತಿದ್ದೇ ನಮ್ಮ ನಮ್ಮ ಸೀಟಿನಲ್ಲಿ ಮಲಗಿ ನಿದ್ರಿಸಿದೆವು.

    ಮರಳಿ ಅರಸೀಕೆರೆ    

 ತಾರೀಕು ೨೭-೭-೨೦೨೨ರಂದು ಬೆಳಗ್ಗೆ ೬.೩೦ಗೆ ಎಚ್ಚರವಾಯಿತು. ಹಲ್ಲುಜ್ಜಿ ಬಂದು ಕುತಾಗುವಾಗ ಮಸಾಲೆದೋಸೆ ಬಂತು. ತಿಂಡಿ ತಿಂದು ಕೂತೆವು. ಬೆಳಗ್ಗೆ ೯.೧೫ಕ್ಕೆ ಅರಸೀಕೆರೆ ತಲಪಿ ಇಳಿದೆವು. ತಂಗಿ ಸವಿತಾ ಮಾತ್ರ ಯಶವಂತಪುರದೆಡೆಗೆ ತೆರಳಿದಳು.

   ನಮ್ಮೂರು ಮೈಸೂರು

ರೈಲಿಳಿದು ಅನತಿ ದೂರದಲ್ಲೇ ಇದ್ದ ಬಸ್ ನಿಲ್ದಾಣಕ್ಕೆ ಹೋಗಿ ಮೈಸೂರು ಬಸ್ ಹತ್ತಿದೆವು. ೯.೪೫ಕ್ಕೆ ಬಸ್ ಹೊರಟಿತು. ಮಧ್ಯಾಹ್ನ ೧.೩೦ಗೆ ಮೈಸೂರು ಮನೆ ತಲಪಿದೆವು. ಅಲ್ಲಿಗೆ ನಮ್ಮ ರೈನಥಾನ್ ಚಾರಣ ಕಾರ್ಯಕ್ರಮಕ್ಕೆ ತೆರೆ ಬಿತ್ತು.

       ಈ ಯಶಸ್ವೀ ಕಾರ್ಯಕ್ರಮದ ಹಿಂದೆ ಯೂಥ್ ಹಾಸ್ಟೆಲಿನ ಸಿಬ್ಬಂದಿ ವರ್ಗ ಹಾಗೂ ಅಲ್ಲಿಯ ಕಾರ್ಯಕರ್ತರ ಹಿಂಡೇ ಇದೆ. ಅವರೆಲ್ಲ ತಿಂಗಳ ಕಾಲ ತಮ್ಮ ಮನೆ ಕೆಲಸ ಬದಿಗೊತ್ತಿ ನಮ್ಮ ಅನುಕೂಲಕ್ಕಾಗಿ ಅಲ್ಲಿ ಬಂದು ದುಡಿದಿದ್ದಾರೆ. ಅಂಥ ಮಹನೀಯರಿಗೆಲ್ಲರಿಗೂ (ಜ್ಯೋತಿ, ಮನೋಜ  ಜೋಷಿ, ಕಿರಣ, ಪ್ರಸಾದ್, ಕೃಷ್ಣ, ಆಪಾ, ರೂಪಾ ನಾಯರ್, ಹಾಗೂ ಇತರರು) ಗೋವಾ ಚಾರಣಿಗರ ನಮ್ಮ ೫ ತಂಡದವರೆಲ್ಲರ ಪರವಾಗಿ ಧನ್ಯವಾದ. ನಾವು ಮೈಸೂರಿಗರು ಅವರಿಗೆಲ್ಲ ಮೈಸೂರು ಸ್ಯಾಂಡಲ್ ಅಗರಬತ್ತಿ, ಸ್ಯಾಂಡಲ್ ಟಾಲ್ಕಂ ಪೌಡರ್, ಸೆಂಟು ಬಾಟಲ್ ಉಡುಗೊರೆ ಕೊಟ್ಟೆವು. 

  ಗೋವಾದ ಯೂಥ್ ಹಾಸ್ಟೆಲ್ ಸಿಬ್ಬಂದಿ ಈ ಚಾರಣವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದ್ದರು. ಪ್ರತೀದಿನ ಊಟೋಪಚಾರ ಬಹಳ ಚೆನ್ನಾಗಿತ್ತು.  

ನಮಗೆ ಈ ಚಾರಣಕ್ಕೆ ಎಲ್ಲ ಖರ್ಚು ಸೇರಿ ಸರಿಸುಮಾರು ರೂ. ೭ಸಾವಿರ ಖರ್ಚಾಗಿತ್ತು. 

  ಈ ಚಾರಣಕ್ಕೆ ಅಂತರ್ಜಾಲದಲ್ಲಿ ಅರ್ಜಿ ಗುಜರಾಯಿಸುವಲ್ಲಿಂದ ಹಿಡಿದು, ರೈಲು ಟಿಕೆಟ್ (ರೂ. ೬೭೪) ಕಾದಿರಿಸುವಲ್ಲೀವರೆಗೆ ಸಹಾಯ ಮಾಡಿದ ಹೇಮಮಾಲಾ ಅವರಿಗೆ ನಮ್ಮೆಲ್ಲರ ಪರವಾಗಿ ಧನ್ಯವಾದ. 

ಮುಗಿಯಿತು      

  

ಬುಧವಾರ, ಆಗಸ್ಟ್ 3, 2022

ಮಳೆಯಲಿ ಜೊತೆಯಲಿ ಗೋವಾ ಚಾರಣ _ ಭಾಗ ೧

 

ಮಳೆಯಲಿ ಜೊತೆಯಲಿ

ಗೋವಾ ಚಾರಣ

ಮಳೆಗಾಲದಲ್ಲಿ ಗೋವಾ ಕಾಡಿನಲ್ಲಿ ಚಾರಣ ಮಾಡಬೇಕು ಬಹಳ ಚೆನ್ನಾಗಿರುತ್ತದೆ ಎಂದು ಈಗಾಗಲೇ ಆ ಚಾರಣ ಕೈಗೊಂಡ ಸ್ನೇಹಿತೆಯರು ಹೇಳಿದ್ದರು. ಇಸವಿ ೨೦೨೦ರಲ್ಲಿ ನಾವು ರೂ. ೪೮೦೦ ಕಟ್ಟಿ ಹೆಸರು ನೋಂದಾಯಿಸಿದ್ದೆವು. ಆದರೆ ಕೊರೋನಾ ಹಾವಳಿಯಿಂದ ಆಗ ಚಾರಣ ರದ್ದಾಗಿತ್ತು. ಈ ವರ್ಷ ಜುಲೈ ೨೨ರಿಂದ ೨೭ರ ತನಕದ ಚಾರಣಕ್ಕೆ ನಾವು ಹೋಗಿ ಬಂದಿದ್ದೆವು.

    ನಮ್ಮ ಚಾರಣದ ವಿವರ

ಮೊದಲ ದಿನ ೨೨.೭.೨೦೨೨ ಗೋವಾದ ಪಣಜಿಯ ಮಿರಾಮರ್ ನಲ್ಲಿರುವ ಯೂಥ್ ಹಾಸ್ಟೆಲ್ ತಲಪುವುದು. ಅಲ್ಲಿಂದ ಉತ್ತರ ಗೋವಾದ ಥಾಣೆಯ ಡೊಂಗುರ್ಲಿಯ  ಪಂಚಾಯತ್ ಕಟ್ಟಡಕ್ಕೆ ರವಾನೆ

 ೨೩-೭-೨೦೨೨ ಹಿವ್ರೆ ಜಲಪಾತ- ೧೦ಕಿಮೀ ಚಾರಣ

೨೪-೭-೨೦೨೨ ಪಾಲಿ ಜಲಪಾತ ೧೦ಕಿಮೀ ಚಾರಣ

೨೫-೭-೨೦೨೨ ಸುಲ್ ಸುಲ್ ಸುಲೊ ಜಲಪಾತ ೧೬ಕಿಮೀ ಚಾರಣ

೨೬-೭-೨೦೨೨ ಕುಮ್ತಾಲ್ ಜಲಪಾತ ೪ಕಿಮೀ ಚಾರಣ

೨೭-೭-೨೦೨೨ ಬೆಳಗ್ಗೆ  ಪಣಜಿಗೆ ವಾಪಾಸ್ .

   ಗೋವಾಗೆ ಪಯಣ

ನಾವು ಮೈಸೂರಿನಿಂದ ಅರಸೀಕೆರೆಗೆ ೨೧.೭.೨೦೨೨ರಂದು ಮಧ್ಯಾಹ್ನ ೧೨.೧೫ರ ಬಸ್ಸಿನಲ್ಲಿ (ರೂ.೧೪೬) ಹೊರಟೆವು. ಸಂಜೆ ೪ ಗಂಟೆಗೆ ಅರಸೀಕೆರೆ ತಲಪಿ, ನಾವು ೯ ಮಂದಿ (ಹೇಮಮಾಲಾ, ಸವಿತಾ, ಮಾಲಿನಿ, ಮಂಜುಳ, ರುಕ್ಮಿಣಿಮಾಲಾ, ಸವಿತಾ ಲೋಕೇಶ್, ಉಷಾ, ಆನಂದ ಗುಪ್ತ, ಪ್ರಭಾಕರ್) ೫.೧೦ರ ಯಶವಂತಪುರ- ವಾಸ್ಕೋ ರೈಲೇರಿದೆವು. ಹರಟುತ್ತ, ಮಧ್ಯೆ ಮಧ್ಯೆ ತಿಂಡಿ ಮೆಲ್ಲುತ್ತ ಸಮಯ ಕಳೆದೆವು.

 ಎತ್ತಣ ಮಾಮರ

ಹರಿಹರದಲ್ಲಿ ನಮ್ಮ ಬೋಗಿಗೇ ಸೆಂಥಿಲ್ ಎಂಬವರು ಹತ್ತಿದರು. ಲೋಕಾಭಿರಾಮವಾಗಿ ಅವರೊಡನೆ ಮಾತುಕತೆ ನಡೆಸಿದಾಗ, ಅವರು ರೈಲ್ವೇ ಇಲಾಖೆಯಲ್ಲಿ ಗೋವಾದಲ್ಲಿ ಕೆಲಸ, ಮೂಲತಃ ಚೆನ್ನೈಯವರು ಎಂಬುದು ತಿಳಿಯಿತು. ಬಹಳ ಚೆನ್ನಾಗಿ ಕನ್ನಡ ಮಾತಾಡುತ್ತಿದ್ದರು.  ನಾವು ಚಾರಣ  ಹೋಗುವ ವಿಷಯ ತಿಳಿಸಿದೆವು. ರೈಲಿಳಿದು ನಮಗೆ ಪಣಜಿಗೆ ಹೋಗುವ ಸಲುವಾಗಿ, ಅವರ ಸ್ನೇಹಿತರ ಬಾಡಿಗೆ ಕಾರು (ರೂ. ೧೫೦೦) ಮಾತಾಡಿದರು. ಆ ಚಾಲಕನಲ್ಲಿ‘ ಬರುತ್ತಿರುವವರು ನಮ್ಮ ದೊಡ್ಡಮ್ಮ, ಚಿಕ್ಕಮ್ಮಂದಿರು. ಚೆನ್ನಾಗಿ ನೋಡಿಕೋ ಎಂದು ಹೇಳಿದ್ದರು!

  ನಾವು ನಿರಾಳವಾಗಿ ಮಲಗಿದೆವು. ೨೨ರಂದು ಬೆಳಗ್ಗೆ ಎಚ್ಚರ ಆದಾಗ ರೈಲು ವಾಸ್ಕೋದಲ್ಲಿ ನಿಂತಿತ್ತು.  ಸೆಂಥಿಲ್ ಅವರು ಮಡಗಾಂವ್ ನಿಲ್ದಾಣದಲ್ಲಿ ಇಳಿದು ಹೋಗಿದ್ದರು. ಅಷ್ತರಲ್ಲಿ ಚಾಲಕನ ಕರೆಯೂ ಬಂತು. ನಾವು ರೈಲಿಳಿದು ಹೊರಗೆ ಬಂದಾಗ, ನಿಂಗು ಅವರು (ಉತ್ತರಕರ್ನಾಟಕದವರು ಕನ್ನಡಿಗರು.) ನಮಗಾಗಿ ಕಾಯುತ್ತಲಿದ್ದರು. ನಾವು ಅವರ ಎರ್ಟಿಗಾ ಕಾರೇರಿದೆವು.

ಪಣಜಿಯ ಯೂಥ್ ಹಾಸ್ಟೆಲ್

ಸುಮಾರು ೩೦ ಕಿಮೀ ದೂರದಲ್ಲಿರುವ ಪಣಜಿಯ ಮಿರಾಮರ್ ಕಡೆಗೆ ಹೊರಟೆವು. ಗೋವಾದ ಸಮುದ್ರದ ಹಿನ್ನಿರಿನಲ್ಲಿ ಅದೆಷ್ಟೊಂದು ಜೂಜು ಅಡ್ಡೆಗಳು ತೇಲುತ್ತಲಿದ್ದುವು. ಬೆಳಗ್ಗೆ ಗೋವಾ ನಗರ ದರ್ಶನವಾಯಿತು.  ಯೂಥ್  ಹಾಸ್ಟೆಲ್ ಕಟ್ಟಡದ ಎದುರು  ನಮ್ಮನ್ನು ಇಳಿಸಿದರು. ಬೆಳಗ್ಗೆ  ೬.೩೦ಗೆ ನಾವು ತಲಾ ರೂ. ೩೫೦ಕೊಟ್ಟು ಡಾಮೆಟ್ರಿಯಲ್ಲಿ ತಂಗಿದೆವು. ಬಿಸಿನೀರು ಸ್ನಾನವಾಗಿ  ತಿಂಡಿ ತಿನ್ನಲು ಹೊರಟೆವು. ಅಲ್ಲಿ ಯಾವ ಹೊಟೇಲ್ ತೆರೆದಿರಲಿಲ್ಲ. ೯.೩೦ ಮೇಲೆ ತೆರೆಯುವುದಂತೆ. ಹಾಗಾಗಿ ಟೀ ಶಾಪಿನಲ್ಲಿ ವಡಪಾವ್, ಪಾವು ಬಾಜಿ ತಿಂದೆವು. 

   ಮಿರಾಮರ್ ಕಡಲ ದಂಡೆ

ಮಿರಾಮರ್ ಕಡಲ ತಡಿಗೆ ಹೋದೆವು. ಅಲ್ಲಿ ಅಡ್ಡಾಡಿದೆವು. ನೀರಲ್ಲಿ ಆಟವಾಡುವವರು ನೀರಿಗೆ ಇಳಿದರು. ಕಡಲ ದಂಡೆ ಚೊಕ್ಕವಾಗಿತ್ತು.

ಅಲ್ಲೇ  ಎದುರು ಭಾಗದಲ್ಲಿರುವ ಹನುಮಂತ ದೇಗುಲಕ್ಕೆ ಹೋಗಿ ಅಲ್ಲಿಂದ ಯೂಥ್ ಹಾಸ್ಟೆಲಿಗೆ ಬಂದೆವು. ಅಲ್ಲಿ ಸಮುದ್ರದ ಬಳಿ ಸ್ವಲ್ಪ ಹೊತ್ತು ಕುಳಿತೆವು.


   ಸುಂದರ ಪರಿಸರದಲ್ಲಿರುವ ಯೂಥ್ ಹಾಸ್ಟೆಲಿನ ಕಟ್ಟಡ ನೋಡಿದರೆ ಬಹಳ ಬೇಸರ ಬರುವಂತಿತ್ತು. ಒಳಗೆ ಗೋಡೆಗಳ ಬಣ್ಣ ಮಾಸಿತ್ತು. ಸೀಲಿಂಗಿನ ಗಾರೆ ಉದುರಿ ವಿಕಾರವಾಗಿತ್ತು. ನಮ್ಮ ಮೇಲೆ ಉದುರದಿದ್ದರೆ ಸಾಕು ಎಂಬ ಭಾವ ಬರುವಂತಿತ್ತು. ಕಟ್ಟಡದ ಸಂರಕ್ಷಣೆಯ ಹೊಣೆ ಯಾರದೋ ತಿಳಿಯಲಿಲ್ಲ.

    ೧೨.೩೦ಗೆ ಒಂದು ಕಿಮೀ ನಡೆದು ಶೀತಲ್ ಎಂಬ  ಸಸ್ಯಾಹಾರಿ  ಹೊಟೇಲಿಗೆ ಊಟಕ್ಕೆ ಹೋಗಿ ಬಂದೆವು.

   ನೋಂದಣಿ- ಸತ್ತಾರಿಗೆ (sattari) ರವಾನೆ

ಚಾರಣಕ್ಕೆ ಸಂಬಂಧಿಸಿದ ನಮ್ಮ ಕೆಲವು ದಾಖಲೆಗಳನ್ನು ಪರಿಶೀಲಿಸಿದರು. ೨.೪೫ಕ್ಕೆ ಎರಡು ಬಸ್ಸಿನಲ್ಲಿ ಹೊರಟು ನಮ್ಮನ್ನು(೭೯ ಮಂದಿ, ನಾವು ಮೈಸೂರಿನಿಂದ ೧೬ ಜನ) ಉತ್ತರ ಗೋವಾದ ಥಾಣೆಯ ಸತಾರಿಯಲ್ಲಿರುವ ಪಂಚಾಯತ್ ಕಟ್ಟಡಕ್ಕೆ ಸಂಜೆ ೪.೩೦ಗೆ ತಲಪಿಸಿದರು.  ೨ ದೊಡ್ಡ ಸಭಾಂಗಣದಲ್ಲಿ ನಮಗೆ ವಾಸ್ತವ್ಯ ಕಲ್ಪಿಸಿದ್ದರು. ೬ ಪಾಯಿಖಾನೆ (ಮಹಿಳೆ-ಪುರುಷರಿಗೆ ಪ್ರತ್ಯೇಕ)ಗಳಿದ್ದುವು. ಆದರೆ ಸ್ನಾನಕ್ಕೆ ವ್ಯವಸ್ಥೆ ಇರಲಿಲ್ಲ. (ಮುಂದಿನ ನಾಲ್ಕು ದಿನವೂ ಸ್ನಾನ ಮಳೆಯಲ್ಲಿಯೇ ಹಾಗೂ ಜಲಪಾತದಲ್ಲಿ ಮಾತ್ರ!) (ಮುಂದಿನ ವರ್ಷ ಯೂಥ್ ಹಾಸ್ಟೆಲ್ ಸ್ವಂತ ಕಟ್ಟಡ ಹೊಂದುತ್ತದಂತೆ. ಸ್ಥಳ ಕೊಂಡುಕೊಂಡಿರುವರಂತೆ)

ಸತಾರಿಯಲ್ಲಿ ಒಟ್ಟು ೭೦ ಹಳ್ಳಿಗಳಿವೆ. ಮಾಂಡೋವಿ ನದಿಯ ಸುತ್ತ ಹಸಿರು ದಟ್ಟ ಅರಣ್ಯದಿಂದ ಆವೃತವಾಗಿವೆ. ಮಹದಾಯಿ ವನ್ಯಜೀವಿ ಅಭಯಾರಣ್ಯವು ೨೦೮ ಕಿಮೀ ಸುತ್ತಳತೆಯಲ್ಲಿ ವ್ಯಾಪಿಸಿದೆ.  ಅಲ್ಲಿ ಮಳೆಯೂ ಹೆಚ್ಚು.

   ತಿಂಡಿ-ಊಟದ ಸಮಯ

ಸಂಜೆ ನಮಗೆ ಒಂದು ತಟ್ಟೆ, ಲೋಟ, ಜಮಾಖಾನ ಕೊಟ್ಟರು. ಬಿಸಿ ಬಿಸಿ ನೀರುಳ್ಳಿ ಪಕೋಡ ಚಹಾ, ಕಾಫಿ ಕೊಟ್ಟರು. ಹೊಟ್ಟೆ ಬಿರಿಯುವಷ್ಟು ತಿನ್ನಬಹುದು!

ರಾತ್ರೆ ೮ ಗಂಟೆಗೆ ಊಟದ ಗಂಟೆ ಬಾರಿಸಿದರು. ನಾವು ತಟ್ಟೆ ಲೋಟದೊಂದಿಗೆ ಹಾಜರಾದೆವು. ಒಳಾಂಗಣ ಕ್ರೀಡಾಂಗಣದಲ್ಲಿ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದರು. ಅನ್ನ, ಸಾರು, ಪಲ್ಯ, ಹಪ್ಪಳ, ಪಾವು ಬಾಜಿ, ಕ್ಷೀರ.

  ವಿಚಾರ ವಿನಿಮಯ

ರಾತ್ರೆ ೯ ಗಂಟೆಗೆ ಕ್ರೀಡಾಂಗಣದೊಳಗೆ ಸೇರಿದೆವು. ಮರುದಿನದ ಚಾರಣದ ವಿವರ, ನೀತಿ ನಿಯಮಗಳ ಬಗ್ಗೆ ವಿವರಿಸಿದರು. ಯೂಥ್ ಹಾಸ್ತೆಲಿನ ವತಿಯ ಚಾರಣದಲ್ಲಿ ಚಡ್ದಿ ವಿರೋಧವಿದೆ. ಆದರೆ ಗೋವಾದ ವಿಶೇಷ ಎಂದು ಇಲ್ಲಿ ಚಡ್ದಿ ಧರಿಸಲು ಅವಕಾಶವಿದೆ, ಹಾಗೂ ಸಿಗರೇಟ್ ವಿರೋಧ. ಆದರೆ ಹೊರಗೆ ಹೋಗಿ ಸೇದಬಹುದು ಎಂಬ ರಿಯಾಯಿತಿ ಕೊಟ್ತರು! ಆದರೆ ಆಲ್ಕೋಹಾಲ್ ಮಾತ್ರ ಯಾವ ಕಾರಣಕ್ಕೂ ಸೇವಿಸಿ ಇಲ್ಲಿ ಇರುವಂತಿಲ್ಲ. ಯಾರಾದರೂ ಕದ್ದು ಸೇವಿಸಿದರೂ ನಮ್ಮ ಸಿಬ್ಬಂದಿಯವರಿಗೆ ವಾಸನೆಯಲ್ಲಿ ಗೊತ್ತಾಗುತ್ತದೆ. ಕೂಡಲೇ ಅವರನ್ನು ಶಿಬಿರದಿಂದ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.

  ತದನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ೧೦ ಗಂಟೆಗೆ ನಿದ್ದೆ.

   ಹಿವ್ರೆಂ ಜಲಪಾತ( Hivrem waterfall)

     ತಾರೀಕು ೨೩-೭-೨೦೨೨ರಂದು  ಬೆಳಗ್ಗೆ ೬ ಗಂಟೆಗೆದ್ದು ತಯಾರಾದೆವು. ಪ್ರತೀದಿನ ೬ ಗಂಟೆಗೆ ಚಹಾ ತಯಾರಿರುತ್ತಲಿತ್ತು. ೭.೩೦ಕ್ಕೆ ಉಪ್ಪಿಟ್ಟು ತಿಂಡಿ. ೮.೩೦ಗೆ ಬುತ್ತಿಗೆ ಪಲಾವ್. ೮.೪೫ಕ್ಕೆ ಎಲ್ಲರೂ ಒಂದೆಡೆ ಸೇರಿ ತಲೆ ಲೆಕ್ಕ ಹಾಕಿ ಚಾರಣ ಪ್ರಾರಂಭ. ಮುಂದೆ ಇಬ್ಬರು ಹಿಂದೆ ಇಬ್ಬರು ಮಾರ್ಗದರ್ಶಿಗಳು.  ಬಸ್ಸಿನಲ್ಲಿ  ೪ಕಿಮೀ ಚಲಿಸಿ ಹಿವ್ರೆ ಕುರ್ಡ್ ದೇವಾಲಯದವರೆಗೆ  ಹೋದೆವು. ಅಲ್ಲಿಂದ ಕಾಡಿನ ದಾರಿಯಲ್ಲಿ ಸುಮಾರು ೬ಕಿಮೀ ನಡೆದೆವು. ದೂರದಿಂದಲೇ ಮೂರು ಜಲಪಾತಗಳ ನೋಟ ಕಾಣುತ್ತದೆ. ಸ್ವಲ್ಪ ದೂರ ನಡೆದು ಮುಂದೆ ಹೋದಾಗ, ಸಣ್ಣಗೆ ಮಳೆ ಸುರಿಯಿತು. ಮಳೆಯಲ್ಲಿ ನೆನೆಯುತ್ತ ನಡೆಯುವುದು ಚೇತೋಹಾರಿ ಅನುಭವ. ಮಳೆಗಾಲದ ಚಾರಣಕ್ಕೆ ಬಂದು ಮಳೆ ಸುರಿಯದಿದ್ದರೆ ನಿರಾಶೆ ಆಗುತ್ತಿತ್ತು. ಅದರೆ ನಮಗೆ ಆ ನಿರಾಶೆ ಆಗದಂತೆ ಚಾರಣದ ನಾಲ್ಕೂ ದಿನವೂ ಮಳೆರಾಯ ಸಹಕರಿಸಿದ್ದ.


   ಮೊದಲಿಗೆ ಒಂದು ದೊಡ್ದ ಜಲಪಾತ ಎದುರಾಯಿತು. ಸ್ವಚ್ಛ ಜಲಧಾರೆ. ಮನದನಣಿಯೆ ಅಲ್ಲಿ ನೀರೊಳಗೆ ಕುಳಿತು (ಎಮ್ಮೆಗಳು ನೀರಿನಲ್ಲಿ ಬಿದ್ದಂತೆ) ಮಜಾ ಅನುಭವಿಸಿದೆವು.


ಅಲ್ಲಿಂದ ಏಳಲು ಯಾರಿಗೂ ಮನವಿಲ್ಲ. ಮುಂದೆ ಇನ್ನೂ ಎರಡು ಜಲಪಾತ ನೋಡಬೇಕು ಎಂಬ ಹುಮ್ಮಸ್ಸಿನಲ್ಲಿ ಮುಂದುವರಿದೆವು. ಮುಂದೆ ನಡೆದಂತೆ ಸಣ್ಣ ಝರಿ ಎದುರಾಯಿತು. ಶುಭ್ರ ಜಲವನ್ನು ಕುಡಿದು ಮುಂದೆ ಸಾಗಿದೆವು.

 ಧರಿಕಾ ಜಲಪಾತ.

   ದೂರದಿಂದಲೇ ಜಲಪಾತದ ಹರಿವಿನ ಸದ್ದು ಕೇಳಿಸುತ್ತಲೇ ಇತ್ತು. ಒಂದು ಕಿಮೀ ನಡೆದಾಗುವಾಗ ಎತ್ತರದಿಂದ ನೀರು ಧುಮುಕುವ ದೃಶ್ಯ ಎದುರಾಯಿತು. ಸ್ಥಳೀಯ ಮಾರ್ಗದರ್ಶಿ ಪ್ರಭಾಕರ ಗಾಂವ್ಕರ ಅವರ ಪ್ರಕಾರ ಇದು ಧರಿಕಾ ಜಲಪಾತ. ಧರಿಕಾ ಎಂಬ ಗ್ರಾಮವಿದೆಯಂತೆ. ಅದರ ಹೆಸರೇ ಅಂತೆ. ಮಳೆಗಾಲದ ಜಲಪಾತಗಳು ಒಂದಕ್ಕಿಂತ ಒಂದು ನೋಡಲು ಬಹಳ ಸುಂದರವಾಗಿರುತ್ತವೆ. ಸ್ವಚ್ಚ ಜಲದಲ್ಲಿ ಆಟ ಮನಸ್ಸಿಗೆ ಉಲ್ಲಾಸವೀಯುತ್ತದೆ.



     ಅಲ್ಲಿ ಒಂದು ಗಂಟೆಗಳ ಕಾಲ ಕಳೆದೆವು. ಅಷ್ಟರಲ್ಲಿ ಅವಘಡ ಸಂಭವಿಸಿತು. ಮೈಸೂರಿನ ಪ್ರಭಾಕರ ಎಂಬವರು ಜಲಪಾತದ ಬಳಿ ಕಾಲು ಜಾರಿ ಬಿದ್ದಾಗ ತಲೆ ಬಂಡೆಗೆ ಬಡಿದು ರಕ್ತ ಸೋರಿಕೆಯಾಯಿತು. ನಮ್ಮ ತಂಡದಲ್ಲಿದ್ದ ಸೂರತ್ತಿನ ನೀರಜ ಎಂಬ ವೈದ್ಯೆಯಿಂದ  ಕೂಡಲೇ ಪ್ರಥಮ ಚಿಕಿತ್ಸೆ ದೊರೆತ ಕಾರಣ ರಕ್ತಸ್ರಾವ ನಿಂತಿತು. ಹಾಗಾಗಿ ಹೆಚ್ಚಿನ ಅನಾಹುತವಾಗಲಿಲ್ಲ. ನಾಲ್ಕೈದು ಕಿಮೀ ನಡೆದೇ ಹೊರಟು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಾಲ್ಪೋಯಿಗೆ ಕರೆದೊಯ್ದರು. ೬ ಹೊಲಿಗೆ ಹಾಕಬೇಕಾಯಿತಂತೆ. ಅವರು ಬಲು ಉತ್ಸಾಹಿ ಚಾರಣಿಗರು. ಅವರಿಗೆ ಮುಂದಿನ ಚಾರಣಕ್ಕೆ ಬರಲಾಗದೆ ಇದ್ದದ್ದು ಬಹಳ ಬೇಸರದ ಸಂಗತಿ.

 

      ಜಲಪಾತದ ಬಳಿಯೇ ಕೂತು ಊಟ ಮಾಡಿದೆವು. ಮಳೆಯಲ್ಲಿ ಕೆಲವರು ಮಳೆ ಅಂಗಿ ಧರಿಸಿದ್ದರು, ನಾನು ತಲೆಗೆ ಮಾತ್ರ ಷವರ್ ಟೊಪ್ಪಿ ಹಾಕಿಕೊಂಡಿದ್ದೆ. ಮಳೆಯಲ್ಲಿ ನೆನೆಯುವುದು ನನಗೆ ಬಹಳ ಖುಷಿ. ಆದರೆ ಜಲಪಾತದಲ್ಲಿ ನೀರಿಗೆ ಇಳಿಯುವುದು ಬಲು ಅಪರೂಪ. ಇಲ್ಲಿ ಬಂದದ್ದೇ ನೀರಿಗೆ ಇಳಿಯಲು ಎಂಬ ಉದ್ದೇಶವಿದ್ದುದರಿಂದ ಇಲ್ಲಿ ಮಾತ್ರ ಎಲ್ಲ ಜಲಪಾತಗಳಲ್ಲೂ ನೀರಿಗೆ ಇಳಿದು ಸಂತೋಷ ಪಟ್ಟೆ.  ಮನ ತೃಪ್ತಿಯಾಗುವಷ್ಟು ಜಲದೊಳಗಿದ್ದು ಎದ್ದು ನಡೆದೆವು.

   ಮಧ್ಯಾಹ್ನ ೧.೪೦ಕ್ಕೆ ಹೊರಟು ವಾಪಾಸು ಬರುತ್ತ ಇರುವಾಗ ಮಳೆ ಆಗಾಗ ಸಿಕ್ಕಿತು. ಕಾಡು ದಾರಿ ಕ್ರಮಿಸಿ ರಸ್ತೆಗೆ ಬಂದೆವು., ಸುಮಾರು ೭ ಕಿಮೀ ನಡೆದೇ  ಪಂಚಾಯತ್ ಕಟ್ಟಡ ತಲಪಿದಾಗ ಗಂಟೆ ೪.೧೫ ಆಗಿತ್ತು. ಒದ್ದೆ ಬಟ್ಟೆ ತೆಗೆದು ಒಣಗಿದ ಬಟ್ಟೆ ಧರಿಸಿ ಕೂತಾಗುವಾಗ ತಿಂಡಿಯ ಸಮಯವಾಗಿತ್ತು.

   ವಡಾ ಪಾವ್ ತಿಂದು ಹರಟುತ್ತ ಕೂತೆವು.  ರಾತ್ರೆ ಊಟಕ್ಕೆ ಪರೋಟ, ಗಸಿ, ಹೆಸರುಬೇಳೆ ಪಾಯಸ, ಅನ್ನ ಸಾರು, ಪಲ್ಯ, ಹಪ್ಪಳ.

    ರಾತ್ರೆ ಒಂದು ಗಂಟೆಗಳ ಕಾಲ ಆ ದಿನದ ಚಾರಣ ಅನುಭವ, ಮುಂದಿನ ಚಾರಣದ ಬಗ್ಗೆ ಮಾತುಕತೆ, ಹಾಡು ಮುಗಿಸಿ ನಿದ್ದೆಗಿಳಿಯುವಾಗ ಹತ್ತು ದಾಟಿತ್ತು.

     ಪಾಲಿ ಜಲಪಾತ

    ತಾರೀಕು ೨೪-೭-೨೦೨೨ರಂದು ಬೆಳಗ್ಗೆ ೭.೩೦ಗೆ ತಿಂಡಿ ಅವಲಕ್ಕಿ ತಿಂದು ಬುತ್ತಿಗೆ ಪೂರಿ ಪಲ್ಯ, ಸಿಹಿ ಉಂಡೆ  ತುಂಬಿಸಿ ೮.೪೫ಕ್ಕೆ ತಯಾರಾಗಿ ನಿಂತೆವು. ಮಾರ್ಗದರ್ಶಕರ ನೆರವಿನಿಂದ ನಮ್ಮ ಚಾರಣ ಸುರುವಾಯಿತು. ಸುಮಾರು ೩ಕಿಮೀ ಕಾಡೊಳಗೆ ನಡೆದಾಗುವಾಗ ಒಂದು ಸಣ್ಣ ಜಲಪಾತ ಎದುರಾಯಿತು. ಅಲ್ಲಿ ನೀರಲ್ಲಿ ಇಳಿದು ಆಟವಾಡಿ ಮುಂದೆ ೫೦೦ಮೀಟರು ನಡೆದಾಗ ಪಾಲಿ ಯಾನೆ ಶಿವಲಿಂಗ ಜಲಪಾತದೆದುರು ತಲಪಿದೆವು. ಎತ್ತರದಿಂದ ನೀರು ಧುಮುಕಿ ಶಿವಲಿಂಗದಾಕಾರದ ಕಲ್ಲಿಗೆ ಎರಡು ಕವಲಾಗಿ ನೀರು ಹರಿಯುವ ಸೊಬಗನ್ನು ನೋಡುತ್ತ ಕೂತೆವು. ಜಲಪಾತದ ಚೆಲುವನ್ನು ನೋಡುತ್ತ ಕೂತರೆ ಹೊತ್ತು ಸರಿಯುವುದೇ ಗಮನಕ್ಕೆ ಬಾರದು.  ನೀರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದರು. ಬೇರೆ ಪ್ರವಾಸಿಗರೂ ಇದ್ದರು. ನೀರೊಳಗೇ ಕೂತು ಬೀರು ಕುಡಿಯುತ್ತಲಿದ್ದರು. ಕುಡಿದ ಡಬ್ಬವನ್ನು ಅಲ್ಲೇ ಎಸೆಯುತ್ತಲಿದ್ದರು.





    ಜಲಪಾತದ ಎದುರು ಭಾಗದಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಹಗ್ಗ ಕಟ್ಟಿ ಸೊಂಟಕ್ಕೆ ಬೆಲ್ಟ್  ಸಿಕ್ಕಿಸಿ ಒಂದು ಬದಿಯಿಂದ ಇನ್ನೊಂದು ಬದಿಗೆ ಹಗ್ಗದಲ್ಲಿ ಜಾರುತ್ತ ಸಾಗುವ ಆಟ ಆಡುತ್ತಲಿದ್ದರು.  ನಾವು ಊಟ ಮಾಡಿ ೨.೩೦ಕ್ಕೆ ಅಲ್ಲಿಂದ ಹೊರಟೆವು.


ನಾವು ನಿಧಾನವಾಗಿ ಮಳೆಯಲ್ಲಿ ನಡೆಯುತ್ತ, ಸಾಗಿ ೪.೩೦ಕ್ಕೆ ಸತ್ತಾರಿ ತಲಪಿದೆವು. ಬಟ್ಟೆ ಬದಲಿಸಿ ಬೇಲ್ ಪುರಿ ತಿಂದು ವಿಶ್ರಾಂತಿ ಪಡೆದೆವು.

ಸವಿತಾ ಎಂಬ ಬೆರಗು

ನಮ್ಮ ತಂಡದ ಮೈಸೂರಿನ ಸವಿತಾ ಲೋಕೇಶ್ ಎಂಬ ತರುಣಿ ಎಲ್ಲರ ಬಳಿ ಗಲ ಗಲ ಮಾತಾಡುತ್ತ, ನಮ್ಮೆಲ್ಲರನ್ನೂ ಹೊಟ್ಟೆತುಂಬ ನಗಿಸುತ್ತಿದ್ದಳು. ಕಲ್ಲನ್ನೂ ಮಾತಾಡಿಸಬಲ್ಲ ಕಲೆಗಾರಿಕೆ ಅವಳಲ್ಲಿತ್ತು. ಸಹಕಾರ ಮನೋಭಾವದ ಸವಿತಾ, ಗುಜರಾತ್, ಮಹಾರಾಷ್ಟ್ರ ಇತ್ಯಾದಿಗಳಿಂದ ಬಂದವರ ಜೊತೆಯಲ್ಲೂ ಸ್ನೇಹ ಸಂಪಾದಿಸಿ, ಅವರು ಕೊಟ್ಟ ತಿಂಡಿ ಮೆಲ್ಲುತ್ತ, ಅವರನ್ನು ಸಂತೋಷಪಡಿಸಿ, ನಮಗೂ ಅವರಿಂದ ತಿಂಡಿ ಕೊಡಿಸುತ್ತಿದ್ದಳು! ಅವಳ ಈ ಪರಿಯ ಮಾತುಗಾರಿಕೆ ನೋಡಿ ಬೆರಗಿನಿಂದ ನಾವೂ ಹಿಗ್ಗುತ್ತಿದ್ದೆವು. ಅವಳಿಂದ ರೀಲ್ (ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ) ಮಾಡುವ ಬಗ್ಗೆ ಪಾಟ ಕಲಿಯುತ್ತ, ಅವಳ ಕಾಲೆಳೆಯುತ್ತ ಕೂತರೆ ಸಂಜೆ ಕಾಲ ಸರಿಯುವುದೇ ಗೊತ್ತಾಗುತ್ತಿರಲಿಲ್ಲ. ಅಷ್ಟರಲ್ಲಿ ರಾತ್ರೆ ಊಟದ ಗಂಟೆ ಕೇಳಿಸುತ್ತಲಿತ್ತು.


   ರಾತ್ರೆ ಊಟ (ಅನ್ನ, ಸಾರು, ಹಪ್ಪಳ, ಪಲ್ಯ, ಶ್ಯಾವಿಗೆ ಕೀರು, ಪಾವ್ ಬಾಜಿ)ವಾಗಿ ವಿಚಾರವಿನಿಮಯ ನಡೆಸಿ ೧೦ ಗಂಟೆ ಮೇಲೆ ನಿದ್ದೆ.

ಸಶೇಷ

ಸೋಮವಾರ, ಆಗಸ್ಟ್ 1, 2022

ದೇವಲಾಪುರದ ತೋಟದಲ್ಲೊಂದು ದಿನ

 ಮೈಸೂರು ತಾಲೂಕಿನ ದೇವಲಾಪುರದ  (ಸೋಮೇಶ್ವರಪುರ) ಬಳಿ ಇರುವ ತೋಟಕ್ಕೆ ನಾವು ೩೧-೭-೨೦೨೨ರಂದು ಹತ್ತನ್ನೆರಡು ಕಾರುಗಳಲ್ಲಿ  ಸುಮಾರು ೬೦ ಮಂದಿ ಹೋಗಿದ್ದೆವು. ೯.೪೫ಕ್ಕೆ ಸಚ್ಚಿದಾನಂದ ಆಸಶ್ರ್ಮದ ಬಳಿ ಎಲ್ಲರೂ ಸೇರಿಕೊಳ್ಳಬೇಕು ಎಂದಿದ್ದರು. ಅಲ್ಲಿಂದ ಎಲ್ಲರೂ ಬಂದು ಹೊರಡುವಾಗ ೧೦.೩೦ ದಾಟಿತ್ತು! ಶ್ರೀನಿವಾಸ ಹಾಗೂ ಜಯಶ್ರೀ, ಶಾಮಸುಂದರ ಹಾಗೂ ರಾಜೇಶ್ವರಿ ನಮ್ಮನ್ನು ಆದರದಿಂದ ಬರಮಾಡಿಕೊಂಡರು. ಮೊದಲಿಗೆ ನಮ್ಮೆಲ್ಲರ ಸ್ವಪರಿಚಯ ಮಾಡಿಕೊಂಡು ತೋಟ ಸುತ್ತಲು ಹೊರಟೆವು. ಎಲ್ಲರಿಗೂ ತೋಟದ  ತಾಜಾ ರುಚಿಯಾದ ಎಳನೀರು ಕೊಟ್ಟರು. ನೆಲ್ಲಿಕಾಯಿ, ಸಿಹಿಯಾದ ದಾರೆಹುಳಿ ಸವಿದೆವು. 

 ಸುಮಾರು ೩೦ ಎಕರೆಯಲ್ಲಿ ವಿಶಾಲವಾದ ಮನೆ, ಸುತ್ತ ಆವರಣ ಗೋಡೆ, ತೆಂಗು, ಅಡಿಕೆ, ಮಾವು, ಸಪೋಟ,ನಿಂಬೆ ದಾಳಿಂಬೆ, ಪೇರಳೆ, ಇತ್ಯಾದಿ ಫಸಲು ಬರುವ ಮರಗಳು, ಮನೆ ಖರ್ಚಿಗೆ ತರಕಾರಿ ಬೆಳೆಸಿದ್ದಾರೆ, ಮನೆಯ ಅಂದಕ್ಕೆ ಹೂಗಿಡಗಳು ಶೋಭೆ ತಂದಿವೆ. ತೋಟವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಎಮ್ಮೆ, ದನಗಳು ಇವೆ. ತೋಟದ ಮಧ್ಯೆ ಕಾಲುವೆ ಹರಿಯುತ್ತದೆ. ಚಾಮುಂಡಿಬೆಟ್ಟದಿಂದ ಮಳೆಗಾಲದಲ್ಲಿ ಹರಿದು ಬರುವ ನೀರಂತೆ. ಅದಕ್ಕೆ ಟರ್ಬೈನ್ ಅಳವಡಿಸಿ ವಿದ್ಯುತ್ ಉತ್ಪಾದನೆಯನ್ನೂ ಮಾಡಿದ್ದಾರೆ.





    ಈಜು ಬಲ್ಲವರು ಅಲ್ಲಿದ್ದ ಎರಡು ದೊಡ್ಡ ಟ್ಯಾಂಕಿನಲ್ಲಿ ಈಜು ಹೊಡೆದರು.

   ತೋಟದಲ್ಲಿ ಹಸಿಯಾದ ನೆಲದಲ್ಲಿ ಚಿರತೆಯ ಹೆಜ್ಜೆ ಗುರುತನ್ನು ನೋಡಿದೆವು. ರಾತ್ರೆ ಹೊತ್ತು ಚಿರತೆಗಳು ಅಲ್ಲಿ ಓಡಾಡುತ್ತಿರುತ್ತವಂತೆ. 

    ಮದ್ಯಾಹ್ನ ಮನೆಯೊಳಗೆ ನೆಲದಲ್ಲಿ ಕುಳಿತು ಬಾಳೆಲೆಯಲ್ಲಿ ಸವಿ ಭೋಜನ. ಅನ್ನ ಸಾರು, ಎರಡು ಕೋಸಂಬರಿ, ಪಲ್ಯ, ಹಪ್ಪಳ, ಮೊಸರು,ಮಜ್ಜಿಗೆ ಉಪ್ಪಿನಕಾಯಿ, ಪಲಾವ್, ಮೊಸರು ಗೊಜ್ಜು, ಹಲಸಿನಹಣ್ಣು ಪಾಯಸ, ಹಾಲುಬಾಯಿ.

   ಶ್ರೀನಿವಾಸ ಅವರು ಬೀಡಾ ತಯಾರಿಸಿ ಇಟ್ಟಿದ್ದರು. ಎಲ್ಲರೂ ತಿಂದು ಖಾಲಿಯಾಗಿ ಪುನಃ ತಯಾರು ಮಾಡಬೇಕಾಯಿತು.

ಊಟದನಂತರ ಸಭಾ ಕಾರ್ಯಕ್ರಮ. ನಂಜನಗೂಡಿನ ಯೋಗಬಂಧುಗಳು ಯೋಗ ಪ್ರಾತ್ಯಕ್ಶಷಿ  ನಡೆಸಿಕೊಟ್ಟರು.  ಸೋಮಶೇಖರ್ ಮ್ಯಾಜಿಕ್ ಪ್ರದರ್ಶನ ನಡೆಸಿ ಮಕ್ಕಳನ್ನು ಸಂತೋಷಪಡಿಸಿದರು. ಹಿಮಾಲಯ ಚಾರಣ ಕುರಿತು ಗೋಪಕ್ಕ ಮಾಹಿತಿ ನೀಡಿದರು. ಅತಿಥಿಗಳಿಗೆ ಹೂ ಕೊಟ್ಟು ಗೌರವಿಸಿದರು. ತೋಟದ ಮಾಲೀಕರಿಗೆ ನೆನಪಿನ ಕಾಣಿಕೆ ಕೊಟ್ಟು ಸತ್ಕರಿಸಿದರು. ಚಹಾ ಮದ್ದೂರು ವಡೆ ವಿತರಣೆ ಬಳಿಕ ಕಾರ್ಯಕ್ರಮ ಮುಕ್ತಾಯವಾಯಿತು.

ಶ್ರೀನಿವಾಸರ ತಾಯಿ ೯೦ ವರ್ಷದ ಅಜ್ಜಿ ಲವಲವಿಕೆಯಿಂದ ನಮ್ಮೆಲ್ಲರಲ್ಲೂ ಮಾತಾಡಿದರು. ಅವರ ಕೆಲಸವನ್ನು ಅವರೇ ಮಾಡುತ್ತಾರಂತೆ. ದಿನವಿಡೀ ಓಡಾಡುತ್ತ ಏನಾದರೂ ಕೆಲಸ ಮಡುತ್ತಿರುತ್ತಾರಂತೆ. ಅಂಥ ಹಿರಿಯರಿದ್ದರೆ ಮನೆಗೆ ಶೋಭೆ. 





 

ಬಾಳೆಕಾಯಿ, ಬಾಳೆದಿಂಡು, ದೀಗುಜ್ಜೆ ಮನೆಗೊಯ್ಯಲು ಇಟ್ಟಿದ್ದರು.  

 ಈ ಕಾರ್ಯಕ್ರಮವನ್ನು ಮೈಸೂರಿನ ಯೂಥ್ ಹಾಸ್ಟೆಲಿನ ಗಂಗೋತ್ರಿ ಘಟಕದ ವತಿಯುಂದ ಸರೋಜ ಶೇಖರ್ ಹಾಗೂ ಪೂರ್ಣಿಮ ಸುರೇಶ್ (ತಲಾ ಒಬ್ಬರಿಗೆ ರೂ.೧೫೦) ಏರ್ಪಡಿಸಿದ್ದರು. ಅವರಿಗೆ ಹಾಗೂ ಅವಕಾಶ ಕಲ್ಪಿಸಿದ ತೋಟದ ಮಾಲೀಕರಿಗೆ ಮತ್ತು ರುಚಿಯಾದ ಊಟ ತಯಾರಿಸಿದ ಸುಬ್ರಹ್ಮಣ್ಯ ಹಾಗೂ ತಂಡದವರಿಗೆ ಹಾಗೂ ಅದನ್ನು ಸರಿಯಾದ ಸಮಯಕ್ಕೆ ತಂದ ಸುರೇಶ ಹಾಗೂ ಅವರ ಮಗಳಿಗೆ ಮತ್ತು ದೇಶಪಾಂಡೆಯವರಿಗೆ (ಅವರ ಕಾರಿನಲ್ಲಿ ನಾನು ಹೋದದ್ದು) ನಮ್ಮ ತಂಡದ ಪರವಾಗಿ ಧನ್ಯವಾದ.