ಭಾನುವಾರ, ಆಗಸ್ಟ್ 29, 2021

ಭಾರತದ ಮುಕುಟಮಣಿ ಹಿಮಾಲಯ

   ಜಮ್ಮು, ವೈಷ್ಣೋದೇವಿ, ಶ್ರೀನಗರ, ಕಾರ್ಗಿಲ್, ಲಡಾಖ್, ಲೇಹ್,  ಮನಾಲಿ, ಚಂಡೀಗಢ

   ದೇಶ ಸುತ್ತು ಕೋಶ ಓದು ಎಂಬುದು ನಾಣ್ನುಡಿ. ದೇಶ ಸುತ್ತಿದರೇ ನಮಗೆ ಜನಜೀವನದ ಅರಿವಾಗುವುದು. ಕೋಶ ಓದಿದರೆ ಜ್ಞಾನ ವೃದ್ಧಿಯಾಗುವುದು. ದೇಶ ಸುತ್ತಲು ನಾನು ಸದಾ ತಯಾರು!   ಕಳೆದ ೨೪ ವರ್ಷಗಳಿಂದ ಹಿಮಾಲಯ ಪರಿವಾರ ಮತ್ತು ಸಿಂಧೂ ಯಾತ್ರಾ ಸಮಿತಿ ಸಿಂಧೂ ಯಾತ್ರೆಯನ್ನು ಆಯೋಜಿಸುತ್ತಿದೆ. ಈವರ್ಷ ೨೫ನೇ ವರ್ಷದ ಯಾತ್ರೆಯನ್ನು ಅದ್ದೂರಿಯಿಂದ ಮಾಡಬೇಕೆಂದು ಯೋಜಿಸಿದ್ದರು. ಆದರೆ ಕೊರೊನಾ ಕಾರಣದಿಂದ ಸಾಧ್ಯವಾಗಲಿಲ್ಲ. ಕೇವಲ ಸಾಂಕೇತಿಕವಾಗಿ ನಡೆಸುವುದೆಂದು ತೀರ್ಮಾನಿಸಿದರು. (ಕಳೆದವರ್ಷ ನಡೆಸಲು ಸಾಧ್ಯವಾಗಲೇ ಇಲ್ಲ.) ಅದರಲ್ಲಿ ಭಾಗಿಯಾಗುವ ಸದವಕಾಶ ನಮಗೆ ದೊರೆಯಿತು.

ಯೂಥ್  ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರಿನ ಕೆಲವು ಸ್ನೇಹಿತರ ಮೂಲಕ ಸಿಂಧೂ ಯಾತ್ರೆಯ ಬಗ್ಗೆ ಮಾಹಿತಿ ತಿಳಿಯಿತು. ೨೦೨೦ ದಶಂಬರ ತಿಂಗಳಿನಲ್ಲಿ ರೂ. ೫೦೦ ಕಟ್ಟಿ ಹೆಸರು ನೋಂದಾಯಿಸಿದೆವು. ಜೂನ್ ತಿಂಗಳಿನಲ್ಲಿ ೧೨ ದಿನದ ಯಾತ್ರೆ ಎಂದು ನಿಗದಿಯಾಗಿತ್ತು. ತಲಾ ರೂ. ೨೪೦೦೦ ಕಟ್ಟಿ ನಾವು ೧೧ ಮಂದಿ (ಹೇಮಮಾಲಾ-ಗಣೇಶ, ಮಂಗಲಗೌರಿ-ಬಾಲಸುಬ್ರಹ್ಮಣ್ಯ, ಸವಿತಾ-ರವಿಶಂಕರ್, ರುಕ್ಮಿಣಿಮಾಲಾ-ಅನಂತವರ್ಧನ, ಶಾರದಾ-ನರಸಿಂಹಕುಮಾರ್, ಶೋಭಾ)  ಯಾತ್ರೆ ಹೊರಡಲು ಹಸಿರು ನಿಶಾನೆ ಪಡೆದುಕೊಂಡೆವು! ವಿಮಾನದಲ್ಲಿ ಸೀಟು ಲಭಿಸದೆ ಇದ್ದರೆ ಎಂದು ಊರಿಗೆ ಮೊದಲೇ ಟಿಕೆಟ್ ಮಾಡಿಕೊಂಡೆವು.  ಇಷ್ಟೆಲ್ಲ ಕೆಲಸ ಆಗುವಾಗ ಫೆಬ್ರವರಿ ದಾಟಿತ್ತು. ಕೊರೊನಾ ಎರಡನೇ ಅಲೆ ಆಗ ತಾನೆ ಮುಂದಡಿ ಇಟ್ಟು ಮಾರ್ಚ್ ತಿಂಗಳಲ್ಲಿ ತೀವ್ರವಾಗಿ ಹರಡಿತ್ತು. ಹಾಗಾಗಿ ನಮ್ಮ ಯಾತ್ರೆಯೂ ಮುಂದೂಡಲ್ಪಟ್ಟಿತು.  ಜುಲೈ ತಿಂಗಳಲ್ಲಿ  ಯಾತ್ರೆಯೇ ರದ್ದಾದ ಸಂದೇಶ ಬಂತು.

    ವಿಮಾನದ ಟಿಕೆಟ್ ಹಣ ನಷ್ಟವಾಗುತ್ತದೆ ಎಂಬ ಚಿಂತೆ, ಯಾತ್ರೆ ಹೋಗುವುದೆಂದು ಕಾಲಿಟ್ಟಾಗಿದೆ, ಎಲ್ಲಿಗಾದರೂ ಹೋಗುವುದೇ ಎಂದು ನಮ್ಮ ಅಕ್ಕ ಭಾವ ಹೇಳಿದರು. ಏನು ಮಾಡುವುದು ಎಂಬ ಸಂದಿಗ್ಧ ಪರಿಸ್ಥಿತಿ. ನಮ್ಮ ವೈದ್ಯ ಮಿತ್ರರಲ್ಲಿ ಸಮಾಲೋಚನೆ ಮಾಡಿದಾಗ, ದುಡ್ಡು ಕಟ್ಟಿ ಆಗಿದ್ದರೆ ಹೋಗಿ. ಕೊರೊನಾ ಇದು ಇನ್ನು ನಮ್ಮಲ್ಲೇ ಇರುವುದೇ. ಹೋಗುವಂಥದ್ದಲ್ಲ. ಮಾಸ್ಕ್, ಅಂತರ ಕಾಪಾಡುತ್ತ ಎಚ್ಚರಿಕೆಯಿಂದ ಹೋಗಿ ಬನ್ನಿ ಎಂದು ಧೈರ್ಯ ತುಂಬಿದರು. ನಾವೇ ಯೋಜಿಸಿಕೊಂಡು ಹೋಗುವುದೆಂದು ತೀರ್ಮಾನಿಸಿದಾಗ, ಸಿಂಧೂ ಯಾತ್ರಾ ಸಮಿತಿಯಿಂದ ಮಾಹಿತಿ ಬಂತು. ಬರುವವರು ಬನ್ನಿ, ಸಾಂಕೇತಿಕವಾಗಿ ಏರ್ಪಾಡು ಮಾಡುತ್ತೇವೆ. ೨೦೦ ಮಂದಿಗಷ್ಟೇ ಅವಕಾಶ. ಇದು ಕೇಳಿದ್ದೇ ದೊಡ್ಡ ಭಾರದ ಹೊರೆ ಇಳಿಸಿದಷ್ಟು ತೃಪ್ತಿ ಆಯಿತು.

   ತಾರೀಕು ೨  ಆಗಸ್ಟ್ ೨೦೨೧ರಿಂದ ೧೩ರ ವರೆಗೆ ನಮ್ಮ ಯಾತ್ರೆ ನಿಗದಿಯಾಗಿತ್ತು. ವಿಮಾನದ ಟಿಕೆಟನ್ನು ಆ ದಿನಕ್ಕೆ ಸರಿಯಾಗಿ ಮಾಡಿಸಿಕೊಂಡೆವು. ನಮ್ಮ ತಯಾರಿ ಸಾಗಿತು. ಕೊರೊನಾ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಇಟ್ಟುಕೊಂಡೆವು. 

    ನಮ್ಮ ಲಗೇಜು ಹೇಗಿದ್ದರೆ ಚೆನ್ನ

 ನಮ್ಮ ಬಟ್ಟೆಬರೆ ಲಗೇಜು ಸೂಟಕೇಸಿನಲ್ಲಿ ಅಥವಾ ಬ್ಯಾಗಿನಲ್ಲಿ ೧೫ ಕಿಲೋಗಷ್ಟೇ ವಿಮಾನದಲ್ಲಿ ಅವಕಾಶ.  ಹಾಗಾಗಿ ೧೩ಕಿಲೋ ಒಳಗೆ ಮಿತಿಗೊಳಿಸುವುದು ಯುಕ್ತಏಕೆಂದರೆ ಶ್ರೀನಗರದಿಂದಲೋ ಮನಾಲಿಯಿಂದಲೋ ಯಾವುದಾದರೂ ವಸ್ತು ಕಂಡು ಮೋಹಗೊಂಡು ಇದನ್ನುಕೊಳ್ಳದಿದ್ದರೆ ನಾವು ಇಲ್ಲಿಗೆ ಬಂದದ್ದೂ ವ್ಯರ್ಥ ಎಂದು ಭಾವಿಸಿ ಕೊಂಡರೆ ಅದರ ತೂಕಎಷ್ಟಿರುತ್ತದೊ ಬಲ್ಲವರಾರುಆದಷ್ಟು ವಸ್ತುಗಳ ಬಗ್ಗೆ ಮೋಹ ಹೊಂದದಂತೆ ಜಾಗ್ರತೆ ವಹಿಸೋಣ!  ಹಾಗಾಗಿ ಮೊದಲೇ ಎಚ್ಚರದಿಂದ ನಮ್ಮ ಬಟ್ಟೆಯ ಆಯ್ಕೆ ಮಾಡೋಣ.

ನಮ್ಮ ಪ್ರವಾಸದ ದಿನಗಳು ೧೪ನಮಗೆ ಎಷ್ಟು ಬಟ್ಟೆ ಬೇಕುನಾವು ಸುಮಾರು - ದಿನ ಚಳಿ ಇರುವ ಊರಲ್ಲಿ ಇರುವುದರಿಂದ  ಸಮಯದಲ್ಲಿ ಎರಡು ದಿನ ಒಂದೇ ಬಟ್ಟೆ ಉಪಯೋಗಿಸಬಹುದು.  ಹಾಗಾಗಿ ೧೪ ದಿನಕ್ಕೆ ಸುಮಾರು - ಪ್ರತಿಬಟ್ಟೆ ಸಾಕುಒಳಬಟ್ಟೆ ಮಾತ್ರ ಸರಿಯಾಗಿರಲಿ.  ಲಗೇಜು ಕಡಿಮೆ ಇದ್ದಷ್ಟೂ ಪ್ರವಾಸ ಸುಗಮಒಂದೇ ಕಡೆ ೩ ದಿನ ಇರುವಾಗ ಬೇಕಾದ ಬಟ್ಟೆ ಒಗೆದುಕೊಳ್ಳಬಹುದು.

ಚಳಿ ತಡೆಯುವಂಥ ಸ್ವೆಟರ್ ,ಟೊಪ್ಪಿಗೆ  ಅವಶ್ಯ ಇರಲಿಬ್ಯಾಗಲ್ಲಿ ಕಾಲುಚೀಲ,ಶೂ ಇರಲಿ.

ಬೆನ್ನಚೀಲ ಒಂದು ಇರಲಿಅದರ ತೂಕ  ಕಿಲೊ ಒಳಗಿರಲಿ.

ಅವಶ್ಯಕ ವಸ್ತುಗಳ ಪಟ್ಟಿ

) ಆಧಾರಕಾರ್ಡ್ (ಅತೀ ಅವಶ್ಯ)

) ನೀರಿಗೆ ಬಾಟಲ್

)ಕಿಟ್ ( ಸಾಬೂನು, ಬ್ರಷ್, ಪೇಸ್ಟ್, ಬಾಚಣಿಗೆ, ತಲೆಗೆ ಎಣ್ಣೆ, ಕತ್ತರಿ, ಚೂರಿ ಇತ್ಯಾದಿತ್ಯಾದಿ) ಇವನ್ನು ಲಗೇಜು ಬ್ಯಾಗ್ ಒಳಗೇ ಹಾಕಬೇಕು. ಕೈಚೀಲದಲ್ಲಿ ಒಯ್ಯುವಂತಿಲ್ಲ.) ಮರೆತು ಕೈಚೀಲದಲ್ಲಿ ಒಯ್ದ ಒಂದು ಚೂರಿ ಕಳೆದುಕೊಂಡಿರುವೆ. ದಿನವಿಡೀ (ಈಗ ಇದನ್ನು ಬರೆಯುವಾಗಲೂ!) ಚೂರಿಯ ಹಿಂದೆಯೇ ನನ್ನ ಮನ ಓಡಿತ್ತು.

)ಮೊಬೈಲ್+ ಚಾರ್ಜರ್

) ಪೋಸ್ಟ್ ಪೈಡ್ ಫೋನ್ಅಲ್ಲಿ ಪ್ರಿಪೈಡ್ ಕೆಲಸ ಮಾಡುವುದಿಲ್ಲವಂತೆ.(ಮನೆಗೆ ಮಾತಾಡಲು ಅವಶ್ಯವಿದ್ದರೆ. ಪ್ರಿಪೈಡನ್ನು ತಾತ್ಕಾಲಿಕವಾಗಿ ಪೋಸ್ಟ್ ಪೈಡ್ಗೆ ಪರಿವರ್ತಿಸಿಕೊಳ್ಳಿ. )

) ಬಟ್ಟೆಬರೆ

) ಅವಶ್ಯಕತೆ ಇರುವ ಔಷಧಿ 

)ಚಳಿಗೆ ಬೆಚ್ಚನೆ ಬಟ್ಟೆ, ಟೊಪ್ಪಿಗೆ

) ಲೋಟ ( ಚಾಕಾಫಿ ಕುಡಿಯುವವರಿಗೆ ಅವರು ಕೊಡುವ ಕಾಗದದ ಲೋಟ ಬಳಸಲು ಇಷ್ಟವಿಲ್ಲದಿದ್ದರೆ)

೧೦) ಕಾಲುಚೀಲ, ಶೂ 

೧೧) ಹೊದಿಕೆ (ಬೆಡ್ ಶೀಟ್) (ಕೊರೊನ ಕಾಲದಲ್ಲಿ ಹೊದೆಯಲು ಒಂದು ಹೊದಿಕೆ ನಮ್ಮದೇ ಇದ್ದರೆ ಸುಖವಾದೀತು

೧೨) ಚಿಕ್ಕಿ , ಒಣಹಣ್ಣು 

೧೩)ಟಾರ್ಚ್ (ಮೊಬೈಲಲ್ಲಿ ಟಾರ್ಚ್ ಇದ್ದರೂ ಅದರ ಬ್ಯಾಟರಿ ನಮಗೆ ಫೋಟೊ ಕ್ಲಿಕ್ಕಿಸಲು ಬೇಕಲ್ಲ)

೧೪) ಮಳೆಗಾಲವಾದ್ದರಿಂದ ಹಗುರವಾದ ಮಳೆಯಂಗಿ ಇರಲಿ

೧೫) ಹಣ

೧೬) ಮುಖ ಕವಚ ಮಾಸ್ಕ್ ಮೂಗುಬಾಯಿಮುಚ್ಚ 

೧೭) ಕೈತೊಳೆಯುವ ದ್ರಾವಣ ಬೇಕಾದರೆ (ಕೊರೊನಾ ಕಾರಣ)

೧೮) ಪ್ರಯಾಣ ಕಾಲದಲ್ಲಿ ಚಿನ್ನದ ಆಭರಣ ಆದಷ್ಟೂ ಕಡಿಮೆಇರಲಿ.ಹಾಕಿಕೊಳ್ಳದಿದ್ದರೆ ಒಳ್ಳೆಯದು.

೧೯) ಹಗ್ಗ (ಒಗೆದ ಬಟ್ಟೆ ಹರಗಲು)

    ಪ್ರಯಾಣ ಪ್ರಾರಂಭ

ತಾರೀಕು ೩೧-೭-೨೧ರಂದು ರಾತ್ರೆ ೧೨.೩೦ಗೆ ಮೈಸೂರಿನಿಂದ ತವೇರ ಗಾಡಿಯಲ್ಲಿ ಹೊರಟು ಮಾರನೇದಿನ ಬೆಳಗ್ಗೆ ೪.೩೦ಗೆ ವಿಮಾನ ನಿಲ್ದಾಣ ತಲಪಿದೆವು. ೧ನೇ ತಾರೀಕು ಭರಣೀ ಕೃತಿಕೆ. ಭರಣೀಕೃತಿಕೆಯಂದು ಹೊರಟರೆ ಪ್ರಯಾಣ ಅಂತ್ಯವಾಗುವುದೇ ಇಲ್ಲ ಎಂದು ನಮ್ಮ ಸ್ನೇಹಿತರ ತಾಯಿ ಹೇಳಿದರಂತೆ. ನಾವೋ ಪ್ರಯಾಣ ಪ್ರಿಯರು. ಅಂತ್ಯವಾಗದಿದ್ದರೆ ಖುಷಿಯೇ ಎಂದು ಅದೇ ದಿನ ಹೊರಟೆವು! 

  ಬೆಳಗ್ಗೆ ೭.೪೫ಕ್ಕೆ ಗೋ ಏರ್ ವಿಮಾನ. ನಮ್ಮ ಲಗೇಜು ಹಾಕಿ ವೆಬ್ ಚೆಕ್ ಇನ್ ಮಾಡಲು ಅನುವಾದಾಗ, ನೀವು ೭೨ ಗಂಟೆ ಮೊದಲೇ ಮಾಡಬೇಕಿತ್ತು. ರೂ. ೨೦೦ ಕಟ್ಟಬೇಕು ಎಂದರು. ಇದು ಹೊಸ ಕಾನೂನು ಎಂದು ಶಪಿಸುತ್ತ ದಂಡ ಕಟ್ಟಿದೆವು. ನಾವು ..೨೦೨೧ರಂದು ಬೆಂಗಳೂರಿನಿಂದ ದೆಹಲಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಹಾರಿದೆವು. ಕಟ್ಟಿ ತಂದಿದ್ದ ಚಪಾತಿ ತಿಂದೆವು. ೧೦.೩೦ಗೆ ದೆಹಲಿಯಲ್ಲಿಳಿದೆವು.  ಭಾವ ರೂ.೧೯೦ ಕೊಟ್ಟು ಕಾಫಿ ಸವಿಯನ್ನು ಅನುಭವಿಸಿದ! ಪಟ್ಟಾಂಗ ಹೊಡೆಯುತ್ತ ಉಳಿದ ಚಪಾತಿ ತಿನ್ನುತ್ತ ಕಾಲ ನೂಕಿದೆವು. ೧೨.೫೦ಕ್ಕೆ ದೆಹಲಿಯಿಂದ ಜಮ್ಮುವಿಗೆ ವಿಮಾನ ಹಾರಿತು. ಮಧ್ಯಾಹ್ನ ೨.೩೦ಕ್ಕೆ ಇಳಿಯಿತು. ನಾವು ಅಕ್ಕ್ಷ ತಂಗಿ ನಮ್ಮ ನಮ್ಮ ಗಂಡ ಹೀಗೆ ನಾವು ಒಟ್ಟಿಗೆ ೬ ಮಂದಿ ಪ್ರವಾಸ ಕೈಗೊಂಡದ್ದು ಖುಷಿ ಕೊಟ್ಟಿತು. 

ಕಟ್ರಾ

 ಬಾಡಿಗೆ ಕಾರಿನಲ್ಲಿ ಕಟ್ರಾದ ನಿಹಾರಿಕಾ ಯಾತ್ರಿ ನಿವಾಸಕ್ಕೆ ಹೋದೆವು.  ಜಡಿಮಳೆಯ ಸ್ವಾಗತ ಸಿಕ್ಕಿತು. ಅಲ್ಲಿ ಉಳಿದೆವು. ಅಲ್ಲಿ ವೈಷ್ಣೋದೇವಿ ಯಾತ್ರಾ ಸಮಿತಿ ವತಿಯಿಂದ ಉಳಿದುಕೊಳ್ಳಲು ರಿಯಾಯಿತಿ ದರದಲ್ಲಿ ಕೊಠಡಿಗಳು ದೊರೆಯುತ್ತವೆ. ಕಟ್ರಾ ಬೀದಿಯಲ್ಲಿ ಸುತ್ತಾಡಿದೆವು. ಕುಲ್ಚಾ ಮಾರುವ ಸೈಕಲಿನಲ್ಲಿ ದೊಡ್ಡದಾದ ಕಂಚಿನ ಪಾತ್ರೆ ಕುತೂಹಲಕಾರಿಯಾಗಿತ್ತು. ಒಣಹಣ್ಣುಗಳ ಅಂಗಡಿಗಳು ಸಾಕಷ್ಟು ಇದ್ದುವು. ಬೆಲೆ ಮಾತ್ರ ಗಗನದೆತ್ತರದಷ್ಟಿತ್ತು. ಕಣ್ಣಿನಿಂದ ನೋಡಲು ಕಾಸು ಖರ್ಚಿಲ್ಲ. ನೋಡಿಯೇ ಖುಷಿಪಟ್ಟೆವು. ರಾಜ್ಮಾ ಕಾಳು ಅಲ್ಲಿ ಪ್ರಮುಖ ಧಾನ್ಯ. ನಿಹಾರಿಕಾದಿಂದ ವೈಷ್ಣೋದೇವಿ ಬೆಟ್ಟ ಹಸುರಿನಿಂದ ಕಂಗೊಳಿಸಿರುವುದು ಬಲು ಸುಂದರವಾಗಿ ಕಾಣುತ್ತದೆ.






   ಹೊಟೇಲ್ ಅನ್ನಪೂರ್ಣದಲ್ಲಿ ರಾತ್ರಿ ಊಟ ಮಾಡಿದೆವು. ಅಲ್ಲಿ ರಿಯಾಯತಿ ದರದಲ್ಲಿ ತಿಂಡಿ ಊಟ ಲಭ್ಯ. ರಾತ್ರೆ ೭.೩೦ ಆದರೂ ಬೆಳಕು ಇತ್ತು. ಸೂರ್ಯಾಸ್ತ ೭.೨೮ಕ್ಕೆ. ಸೂರ್ಯೋದಯ ೫.೪೫ಕ್ಕೆ. ಅಲ್ಲಿಯ ಸ್ವಾರಸ್ಯವೆಂದರೆ ಪ್ರತಿ ದಿನ ಸೂರ್ಯೋದಯ ಸೂರ್ಯಾಸ್ತದ ವೇಳೆಯಲ್ಲಿ ಬದಲಾವಣೆ.  ಒಂದು ಕೊಟಡಿಯಲ್ಲಿ ನಾವು ೫ ಮಂದಿ ಹೆಂಗಸರು ವಿಶ್ರಾಂತಿ ಪಡೆದೆವು.  

ವೈಷ್ಣೋದೇವಿ

   ೨ನೇ ತಾರೀಕು ಬೆಳಗ್ಗೆ ೩ ಗಂಟೆಗೆದ್ದು ಸ್ನಾನಾದಿ ಮುಗಿಸಿ, ಹೊಟೇಲ್ ಕೋಣೆ ಕಾಲಿ ಮಾಡಿ, ನಮ್ಮ ಲಗೇಜನ್ನು ಯಾತ್ರಾ ನಿವಾಸದ ಒಂದು ಕೊಟಡಿಯಲ್ಲಿ (ಲಾಕ್ ರೂಮ್) ಇರಿಸಿ, ೬ ಗಂಟೆಗೆ ರಿಕ್ಷಾದಲ್ಲಿ ನಾವು ಹೆಲಿಪ್ಯಾಡ್ ಸ್ಥಳಕ್ಕೆ ಹೋದೆವು. ಅಲ್ಲಿ ಒಂದು ಗಂಟೆ ಕಾದೆವು. ಅಲ್ಲಿರುವ ಹೊಟೇಲಿನಲ್ಲಿ ಕಾಫಿ ಕುಡಿದೆವು.

   ಕತ್ರಾದಿಂದ ಹೆಲಿಕಾಪ್ಟರಿನಲ್ಲಿ ೭.೩೦ಗೆ ವೈಷ್ಣೋದೇವಿಗೆ ಹಾರಿದೆವು. ಹೆಲಿಪ್ಯಾಡಿನಲ್ಲಿ ಇಳಿದು,  ದೇವಾಲಯಕ್ಕೆ ಹೋಗಲು ಕಿಮೀ ನಡೆಯಬೇಕು. ಆಗ ಒಬ್ಬ ನಮಗೆ ಗಂಟುಬಿದ್ದ. ನಮ್ಮ ಹೆಗಲಚೀಲ ಬಲವಂತದಿಂದ ಅವನು ಪಡೆದ. ನಿಮಗೆ ನಾನು ಮಾರ್ಗದರ್ಶಕನಾಗುವೆ. ಎಲ್ಲ ಕಡೆ ಕರೆದೊಯ್ಯುವೆ ಎಂದು ಮುನ್ನಡೆದ. ಕೋಲೆಬಸವನಂತೆ ಅವನ ಹಿಂದೆ ನಡೆದೆವು! ಕೊರೊನಾದಿಂದ ಪ್ರವಾಸಿಗರು ಬರದೆ ಬಹಳ ಕಷ್ಟವಾಗಿದೆ. ಎರಡು ಚಿಕ್ಕ ಮಕ್ಕಳು ಇದ್ದಾರೆ ಎಂದೆಲ್ಲ ನಮಗೆ ಕರುಣೆ ಉಕ್ಕುವಂತೆ ಹೇಳಿದ. ಒಂದು ಅಂಗಡಿಯಲ್ಲಿ ನಮ್ಮ ಮೊಬೈಲ್, ಚೀಲ ಎಲ್ಲವನ್ನೂ ಇರಿಸಿದ. ದೇವಾಲಯದ ಒಳಗೆ ಮೊಬೈಲ್ ಕೊಂಡೋಗುವಂತಿಲ್ಲವಂತೆ.

  ಸಣ್ಣ ಸರತಿ ಸಾಲಿನಲ್ಲಿ ನಾವು ಸಾಗಿ ದೇವಿ ದರ್ಶನ ಮಾಡಿದೆವು. ಯಾತ್ರಾರ್ಥಿಗಳ ಸಂಖ್ಯೆ ಕಡಿಮೆ ಇದ್ದದ್ದರಿಂದ ಬೇಗ ದೇವಿ ದರ್ಶನ ನಮಗೆ ಲಭಿಸಿತು. ಕಾಳಿ, ವೈಷ್ಣೋದೇವಿ, ಸರಸ್ವತಿ ಮುಖವಾಡವಿರುವ ಗರ್ಭಗುಡಿ. ಮೊದಲು ಗುಹೆಯ ಒಳಗಿನಿಂದ ನುಸುಳಿ ಹೋಗಬೇಕಿತ್ತು. ಈಗ ಬೇರೆ ಸುಸಜ್ಜಿತ ಗುಹಾದಾರಿ ಮಾಡಿದ್ದಾರೆ. 

ನಾವು ಕನ್ನಡ ಮಾತಾಡುವುದು ಕಂಡು,  ಅಲ್ಲಿರುವ ದೇವಾಲಯದ ಸಿಬ್ಬಂದಿಯೋರ್ವರು, ಅವರ ಬೆಂಗಳೂರಿನಲ್ಲಿರುವ ಭಾವನಿಗೆ ತಲಪಿಸಲು ೨ಲೀಟರು ತೀರ್ಥ, ಪ್ರಸಾದದ ಪೊಟ್ಟಣ ಕೊಟ್ಟರು. ತಂಗಿ ಹಾಗೂ ಭಾವ ಸೌಜನ್ಯದಿಂದ ಪಡೆದು, ಚೀಲದ ಭಾರವನ್ನು ಹೆಚ್ಚುಮಾಡಿಕೊಂಡರು!

   ಆಗಲೇ ಗಂಟೆ ೯ ದಾಟಿತ್ತು. ಹೊಟ್ಟೆ ಹಸಿಯುತ್ತಲಿತ್ತು. ಆಗ ನಮ್ಮ ಭಾವ ಸಿಹಿ ಸಜ್ಜಿಗೆ ಪೊಟ್ಟಣ ಹಿಡಿದು ಬಂದರು. ಹಸಿದ ಹೊಟ್ಟೆಗೆ ಅದು ಅಮೃತ ಸಮಾನವೆನಿಸಿತು. ಅಲ್ಲಿಂದ ಹೊರಟು  ನಮ್ಮ ಮೊಬೈಲ್, ಚೀಲ ಪಡೆದು ಭೈರವನಾಥನ ದರ್ಶನಕ್ಕೆ ಕೇಬಲ್ ಕಾರಿನಲ್ಲಿ ಹೋಗುವುದೆಂದು ತೀರ್ಮಾನಿಸಿದೆವು. ಆಗ ನಮ್ಮ ದಾರಿ ತಪ್ಪಿಸಿದ  ಮಾರ್ಗದರ್ಶಕ. ಅದು ತುಂಬ ದೂರ. ಹೋಗಿ ಬರಲು ಸಮಯ ಸಾಕಾಗದು, ನಿಮಗೆ ಹೆಲಿಕಾಫ್ಟರ್ ಸಿಗದು ಎಂದೆಲ್ಲ ನಮಗೆ ಹೆದರಿಸಿ, ನಾವು ಅಲ್ಲಿಗೆ ಹೋಗದಂತೆ ಮಾಡಿದ. ಅವನು ನಮಗೆ ಮಾಡಿದ ಉಪಕಾರವೆಂದರೆ ನಮ್ಮ ಚೀಲ ಹೊತ್ತದ್ದು ಮಾತ್ರ. ರೂ. ಸಾವಿರ ಅವನಿಗೆ ಇನಾಮು ಕೊಟ್ಟೆವು. ಆದರೆ ಅವನಿಗೆ ತೃಪ್ತಿ ಎಂಬುದೇ ಇಲ್ಲ. ನಮ್ಮ ಪ್ರತಿಯೊಬ್ಬರ ಬಳಿಯೂ ಹಣ ಕೊಡಿ ಎಂದು ಪೀಡಿಸುತ್ತಿದ್ದ.   

ನಾವು ನಡೆದು ೧೦.೪೦ಕ್ಕೆ ಹೆಲಿಪ್ಯಾಡಿಗೆ ಬಂದೆವು. ಅಕ್ಕ ಡೋಲಿಯಲ್ಲೂ,(ರೂ.೧೫೦೦,) ಭಾವ ಕುದುರೆಯಲ್ಲೂ (ರೂ.೪೦೦)  ಬಂದರು. ಹೆಲಿಕಾಫ್ಟರ್ ಹಾರಲು ಹವಾಮಾನ ಸಹಕರಿಸಲಿಲ್ಲ. ಮೋಡ ಮಂಜು ಮರೆಯಾಗುವುದನ್ನು ನೋಡುತ್ತ ೧.೪೫ರ ವರೆಗೆ ಕಾದೇ ಕಾದೆವು. ಇನ್ನು ಕಾದು ಪ್ರಯೋಜನವಿಲ್ಲ ಎಂದು ಟಿಕೆಟನ್ನು ರದ್ದುಗೊಳಿಸಲು ವಿನಂತಿಸಿ, (ಹಣವನ್ನು ನಮ್ಮ ಖಾತೆಗೆ ಜಮಾ ಮಾಡುತ್ತೇವೆಂದು ತಿಳಿಸಿದ ಬಳಿಕ) ನಾವು ಅಲ್ಲಿಂದ ಹೊರಟೆವು.

   ನಡೆದು ವೈಷ್ಣೋದೇವಿಗೆ ಹೋಗಬೇಕು ಎಂದು ನನಗೆ ಇತ್ತು. ಆದರೆ ಸಮಯವಿಲ್ಲದಿದ್ದುದರಿಂದ ಹೆಲಿಕಾಫ್ಟರಿನಲ್ಲಿ ಹೋದದ್ದು. ನಡೆಯುವ ದಾರಿಯನ್ನಾದರೂ ನೋಡಿ ಆ ಆಸೆ ಈಡೇರಲಿ ಎಂದೋ ಏನೋ ವಾಪಾಸ್ ಹೆಲಿಕಾಫ್ಟರ್ ಸಿಗದೆ ಇದ್ದದ್ದು. ನಡೆದು ಕತ್ರಾ ತಲಪಬಹುದು. ಆದರೆ ಸಮಯ ನಮಗೆ ಇರಲಿಲ್ಲ. ಸಂಜೆ ೬ರ ಒಳಗೆ ನಾವು ಜಮ್ಮು ತಲಪಲೇಬೇಕಿತ್ತು.

  ಬೆಟ್ಟದ ಮೇಲಿರುವ ವೈಷ್ಣೋದೇವಿ ದೇವಾಲಯದ ನಡೆಯುವ ದಾರಿ ಬಹಳ ಚೆನ್ನಾಗಿದೆ. ಒಟ್ಟು ೧೩ಕಿಮೀ. ಮೇಲೆ ಬಿಸಿಲು ಮಳೆ ತಾಗದಂತೆ ಮಾಡು ಮಾಡಿದ್ದಾರೆ. ನಡೆಯುವ ದಾರಿಗೆ ಸಿಮೆಂಟು ಟೈಲ್ಸ್ ಹಾಸಿದ್ದಾರೆ. ದಾರಿ ಅಗಲವಾಗಿದೆ. ಕುದುರೆ ಸಾಗಲು, ಮನುಜರು ನಡೆಯಲು ಅಗಲವಾಗಿಯೇ ಇದೆ. ಅಲ್ಲಲ್ಲಿ ಶೌಚಾಲಯ, ಕುಡಿಯಲು ನೀರು, ಸುಸ್ತಾದರೆ ಕೂರಲು ಕಟ್ಟೆ, ಅಂಗಡಿ, ಹೊಟೇಲುಗಳು ಇವೆ.  ಕುದುರೆ ಲದ್ದಿಯನ್ನು ಅಲ್ಲಲ್ಲೇ ತೆಗೆದು ಸ್ವಚ್ಚಗೊಳಿಸಲು ಸಿಬ್ಬಂದಿ ಸದಾ ಸಿದ್ದರಾಗಿರುವುದು ಕಂಡಿತು.  ಈಗ ವೈಷ್ಣೋದೇವಿ ಗೆ ಹೋಗಲು ಬೇಕಾದಷ್ಟು ವ್ಯವಸ್ಥೆ ಇದೆ. ಹೆಲಿಕಾಪ್ಟರ್, ಡೋಲಿ, ಕುದುರೆ, ಬ್ಯಾಟರಿ ಕಾರು, ನಡೆದು ಹೋಗಬಹುದು.




 ನಾಲ್ಕು ಜನರಿಗೆ ಅಲ್ಲಿಯೇ ಕುದುರೆ ಲಭಿಸಿತು. ಉಳಿದವರು ಒಂದಷ್ಟು ದೂರ ನಡೆದಾಗುವಾಗ ಕುದುರೆ ಲಭ್ಯವಾಯಿತು. ನಾವು ಕುದುರೆ ಏರಿದೆವು. ಅನಂತನಿಗೆ ಮಾತ್ರ ಕುದುರೆ ಸಿಕ್ಕದೆ ೬-೭ ಕಿಮೀ ನಡೆಯುವ ಭಾಗ್ಯ ಸಿಕ್ಕಿತು. ಅನಂತನಿಗೆ ಕುದುರೆ ಸಿಕ್ಕಿಲ್ಲ ಎಂದು ನಾನೇರಿದ ಕುದುರೆಯ ಮಾಲಿಕನಿಗೆ  ಸಂಕಟ. ನಿರಂತರ ಫೊನ್ ಮೂಲಕ ಕುದುರೆಗೆ ಪ್ರಯತ್ನಿಸುತ್ತಲೇ ಇದ್ದ. ಅಂತೂ ಕುದುರೆ ಹಿಡಿದು ಅನಂತನನ್ನು ಕುದುರೆಗೇರಿಸುವಲ್ಲಿ ಸಫಲನಾದ! ಕತ್ರಾ ತಲಪಲು ಕುದುರೆಗೆ ರೂ.೧೧೦೦. ೧.೪೫ಕ್ಕೆ ಕುದುರೆ ಏರಿದವರು ೪.೧೫ಕ್ಕೆ ಕತ್ರಾ ತಲಪಿದೆವು.   

  ಪೌರಾಣಿಕ  ಕಥೆ

   ಒಮ್ಮೆ ಪರ್ವತಗಳ ತಾಯಿ ವೈಷ್ಣೋ ದೇವಿಯು ತನ್ನ ಪ್ರೀತಿಯ ಭಕ್ತನಾದ ಪಂಡಿತ್ಶ್ರೀಧರ್ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷಳಾಗುವುದರ ಮೂಲಕ ಇಡೀ ಸೃಷ್ಟಿಗೆ ತನ್ನು ಇರುವಿಕೆಯನ್ನು ಪ್ರದರ್ಶಿಸಿದಳೆಂಬ ನಂಬಿಕೆಯಿದೆ. ಇಂದಿನ ಕತ್ರಾ ಪಟ್ಟಣದಿಂದ ಸುಮಾರು ಕಿಲೋಮೀಟರ್ದೂರದಲ್ಲಿರುವ ಹಂಸಾಲಿ ಗ್ರಾಮದಲ್ಲಿ ತಾಯಿ ವೈಷ್ಣೋದೇವಿಯ ಪರಮ ಭಕ್ತ ಶ್ರೀಧರ್ವಾಸಿಸುತ್ತಿದ್ದನು. ಆತನಿಗೆ ಮದುವೆಯಾಗಿ ಎಷ್ಟೇ ವರ್ಷ ಕಳೆದರೂ ಕೂಡ ಮಕ್ಕಳಾಗಿರಲಿಲ್ಲ. ಆದ್ದರಿಂದ ಆತ ವೈಷ್ಣೋದೇವಿಯನ್ನು ಪೂಜಿಸುತ್ತಿದ್ದನು. ಒಂದು ದಿನ ನವರಾತ್ರಿಯಂದು ಶ್ರೀಧರ್ಕನ್ಯೆಯರನ್ನು ಹಬ್ಬಕ್ಕೆ ಕರೆದರು. ಕನ್ಯೆಯರಲ್ಲಿ ವೈಷ್ಣೋ ದೇವಿ ಕೂಡ ಸೇರಿಕೊಂಡಳು. ಪೂಜೆ ಮುಗಿದ ನಂತರ ಎಲ್ಲಾ ಕನ್ಯೆಯರು ಪ್ರಸಾದವನ್ನು ಸ್ವೀಕರಿಸಿ ಹೊರಡುತ್ತಾರೆ. ಆದರೆ ವೈಷ್ಣೋ ದೇವಿ ಅಲ್ಲೇ ಇದ್ದು, ತನ್ನ ಭಕ್ತ ಶ್ರೀಧರನಲ್ಲಿ ಎಲ್ಲರನ್ನು ಮನೆಗೆ ಬರುವಂತೆ ಆಹ್ವಾನಿಸು ಎಂದು ಹೇಳುತ್ತಾಳೆ. ಶ್ರೀಧರ್ ಹುಡುಗಿಯ ಮಾತಿಗೆ ಒಪ್ಪಿಕೊಂಡು ಎಲ್ಲರನ್ನು ಆಹ್ವಾನಿಸುತ್ತಾನೆ.

ಭಕ್ತ ಶ್ರೀಧರನು ಗುರು ಗೋರಖನಾಥರನ್ನು ಮತ್ತು ಅವರ ಶಿಷ್ಯ ಬಾಬಾ ಭೈರವನಾಥರನ್ನು ಊಟಕ್ಕೆ ಆಹ್ವಾನಿಸಿದರು. ಗ್ರಾಮಸ್ಥರು ಪಂಡಿತ್ಶ್ರೀಧರ್ ಮನೆಗೆ ಭೋಜನಕ್ಕಾಗಿ ಬರುತ್ತಾರೆ. ಆಗ ತಾಯಿ ವೈಷ್ಣೋ ದೇವಿ ಎಲ್ಲರಿಗೂ ರಹಸ್ಯಮಯ ಪಾತ್ರೆಯಲ್ಲಿ ಊಟವನ್ನು ನೀಡಲು ಪ್ರಾರಂಭಿಸಿದಳು.

  ಕನ್ಯೆಯ ರೂಪದಲ್ಲಿದ್ದ ವೈಷ್ಣೋ ದೇವಿಯು ಗ್ರಾಮಸ್ಥರೆಲ್ಲರಿಗೂ ಭೋಜನವನ್ನು ಬಡಿಸುತ್ತಾ ಭೈರವನಾಥನ ಬಳಿಗೆ ಬರುತ್ತಾಳೆ. ಆಗ ಭೈರವನಾಥನು ನನಗೆ ಸಸ್ಯಹಾರ ಪದಾರ್ಥ ಬೇಡ ನನಗೆ ಮಾಂಸ ಹಾಗೂ ಕುಡಿಯಲು ಬೇಕೆಂದು ಹೇಳುತ್ತಾನೆ. ಆಗ ವೈಷ್ಣೋ ದೇವಿ ಬ್ರಾಹ್ಮಣರು ಮಾಂಸವನ್ನು ಸೇವಿಸುವುದು ಬಹಳ ಅಪರಾಧ, ಹಾಗಾಗಿ ಮಾಂಸವನ್ನು ಸೇವಿಸುವಂತಿಲ್ಲವೆಂದು ಹೇಳುತ್ತಾಳೆ. ಆದರೆ ಭೈರವನಾಥನು ಉದ್ಧೇಶಪೂರ್ವಕವಾಗಿ ನನಗೆ ಮಾಂಸಾಹಾರ ಬೇಕೇ ಬೇಕೆಂದು ಒತ್ತಾಯಿಸಿ ದೇವಿಯನ್ನು ಹಿಡಿಯಲು ಹೋಗುತ್ತಾನೆ ಆಗ ತಾಯಿಯು ಭೈರವನಾಥನ ವಿಶ್ವಾಸಘಾತುಕ ಗುಣವನ್ನು ಅರಿತು, ಗಾಳಿಯಲ್ಲಿ ಬದಲಾಗಿ ತ್ರಿಕೂಟ ಪರ್ವತಕ್ಕೆ ಹಾರುತ್ತಾಳೆ. ಅದೇ ಸಮಯದಲ್ಲಿ ದೇವಿಯನ್ನು ಭೈರವನಾಥ ಕೂಡ ಬೆಂಬಿಡದೇ ಅಟ್ಟಿಸಿಕೊಂಡು ಹೋಗುತ್ತಾನೆ. ಅದೇ ಸಮಯದಲ್ಲಿ ದೇವಿಯ ರಕ್ಷಣೆಗೆ ಹನುಮಂತನು ಕೂಡ ಬರುತ್ತಾನೆ. ನಂಬಿಕೆಗಳ ಪ್ರಕಾರ ತಾಯಿಯನ್ನು ರಕ್ಷಿಸಲು ಮುಂದಾದ ಹನುಮಂತನಿಗೆ ಬಾಯಾರಿಕೆಯಾಗುತ್ತದೆ. ಹನುಮಂತನು ತಾಯಿಯಲ್ಲಿ ತನಗೆ ಕುಡಿಯಲು ನೀರು ಬೇಕೆಂದು ಕೇಳುತ್ತಾನೆ. ಆಗ ವೈಷ್ಣೋ ದೇವಿ ಬಿಲ್ಲುಗಳಿಂದ ಪರ್ವತವನ್ನು ಸೀಳಿ ನೀರು ಹೊರಬರುವಂತೆ ಮಾಡುತ್ತಾಳೆ. ಅದೇ ನೀರಿನಲ್ಲಿ ಹನುಮಂತನು ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಾನೆ ಹಾಗೂ ತಾಯಿಯೂ ಕೂಡ ಅದೇ ನೀರಿನಲ್ಲಿ ತನ್ನ ಕೇಶವನ್ನು ತೊಳೆದಳೆಂದು ಹೇಳಲಾಗುತ್ತದೆ. ಆದ್ದರಿಂದ ನದಿಯನ್ನು ಬಾಣಗಂಗಾವೆಂದು ಕರೆಯಲಾಗುತ್ತದೆ ಹಾಗೂ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ಭಕ್ತರ ದಣಿವು ಮತ್ತು ಸಂಕಟ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

     ಸಮಯದಲ್ಲಿ ತಾಯಿ ವೈಷ್ಣೋ ದೇವಿಯು ಒಂದು ಗುಹೆಯನ್ನು ಪ್ರವೇಶಿಸುತ್ತಾಳೆ. ಹಾಗೂ ಅಲ್ಲಿ ಬರೋಬ್ಬರಿ 9 ತಿಂಗಳುಗಳ ಕಾಲ ಧ್ಯಾನವನ್ನು ಮಾಡುತ್ತಾಳೆ. ಅಲ್ಲಿಯೂ ಕೂಡ ಭೈರವನಾಥ ಆಕೆಯನ್ನು ಬಿಡಲಿಲ್ಲ. ಹಿಂಬಾಲಿಸಿಕೊಂಡೇ ಬರುತ್ತಾನೆ. ಆಗ ಗುಹೆಯಲ್ಲಿದ್ದ ಸನ್ಯಾಸಿಯು ಭೈರವನಾಥನಿಗೆ ಆಕೆ ಕನ್ಯೆಯಲ್ಲ, ಬದಲಾಗಿ ಆಕೆ ಆದಿಶಕ್ತಿ ಜಗದಂಬಾ ಎಂದು ವಿವರಿಸುತ್ತಾನೆ. ಆದರೂ ಕೂಡ ಭೈರವನಾಥ ಸನ್ಯಾಸಿಯ ಮಾತನ್ನು ಕೇಳದೆ ಆಕೆಯನ್ನು ಹಿಡಿಯಲು ಗುಹೆಯೊಳಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮಾತೆಯು ಗುಹೆಯ ಇನ್ನೊಂದು ಬದಿಯಿಂದ ಹೊರಹೋಗುತ್ತಾಳೆ. ಗುಹೆಯನ್ನು ಇಂದಿಗೂ ಕೂಡ ಅರ್ಧಕುಮಾರಿ ಅಥವಾ ಆದಿಕುಮಾರಿ ಅಥವಾ ಗರ್ಭಜೂನ್ ಎಂದು ಕರೆಯಲಾಗುತ್ತದೆ.

    ಗುಹೆಯ ಬಳಿ ಹನುಮಂತನಿಗೂ ಹಾಗೂ ಭೈರವನಾಥನಿಗೂ ಮಹಾಯುದ್ಧವೇ ನಡೆಯುತ್ತದೆ. ಹೋರಾಟದಲ್ಲಿ ಹನುಂತನು ದುರ್ಬಲನಾಗುತ್ತಾನೆ. ಆದ್ದರಿಂದ ಮಾತಾ ವೈಷ್ಣೋದೇವಿಯು ಮಹಾಕಾಳಿಯ ರೂಪವನ್ನು ಧರಿಸಿ, ಭೈರವನಾಥನನ್ನು ಕೊಲ್ಲುತ್ತಾಳೆ. ಭೈರವನಾಥನ ಶಿರಚ್ಛೇದ ಮಾಡಿ ಗುಹೆಯಿಂದ ಸುಮಾರು 8 ಕಿಲೋಮೀಟರ್ದೂರದಲ್ಲಿದ್ದ ತ್ರಿಕುಟಾ ಪರ್ವತದ ಭೈರವ ಕಣಿವೆಯಲ್ಲಿ ಎಸೆಯುತ್ತಾಳೆ. ಸ್ಥಳವನ್ನು ಭೈರೋನಾಥ ದೇವಾಲಯವೆಂದು ಕರೆಯಲಾಗುತ್ತದೆ. ಗುಹೆಯಲ್ಲಿ ತಾಯಿ ಕಾಳಿ, ತಾಯಿ ಸರಸ್ವತಿ ಮತ್ತು ತಾಯಿ ಲಕ್ಷ್ಮಿ ಯು ನೆಲೆಸಿದ್ದಾಳೆಂದು ಹೇಳಲಾಗುತ್ತದೆ.

    ತನ್ನ ಮೇಲೆ ಆಕ್ರಮಣ ಮಾಡುವುದರ ಹಿಂದಿನ ಭೈರವನ ಮುಖ್ಯ ಉದ್ದೇಶ ಮೋಕ್ಷವನ್ನು ಪಡೆಯುವುದೆಂದು ಮಾತೆ ವೈಷ್ಣೋ ದೇವಿ ಅರಿತಿದ್ದಳು. ಆದ್ದರಿಂದ ವೈಷ್ಣೋ ದೇವಿ ತನ್ನ ಪುನರ್ಜನ್ಮದ ಚಕ್ರದಿಂದ ಭೈರವನಾಥನಿಗೆ ಮೋಕ್ಷವನ್ನು ನೀಡುತ್ತಾಳೆ. ಹಾಗೂ ಆಕೆಯು ಆತನಲ್ಲಿ ಭಕ್ತರು ತನ್ನನ್ನು ಭೇಟಿ ನೀಡಿ ದರ್ಶನವನ್ನು ಪಡೆದ ನಂತರವೇ ನಿನ್ನ ದರ್ಶನವನ್ನು ಪಡೆಯಬೇಕೆಂದು ಹೇಳುತ್ತಾಳೆ. ಅದೇ ನಂಬಿಕೆಯಂತೆಯೇ ಇಂದಿಗೂ ಕೂಡ ಮಾತೆ ವೈಷ್ಣೋದೇವಿಯನ್ನು ಭೇಟಿ ಮಾಡಿದ ನಂತರವೇ ಭೈರವನಾಥನನ್ನು ಭೇಟಿ ಮಾಡುತ್ತಾರೆ. ಆದರೆ ಇತ್ತ ಪಂಡಿತ ಶ್ರೀಧರನು ಅಸಹನೆಗೆ ಒಳಗಾಗಿದ್ದನು. ಹಾಗೂ ಈತ ದೇವಿಯನ್ನು ನೋಡಲು ತ್ರಿಕುಟಾ ಪರ್ವತವನ್ನೇರಿ ಗುಹೆಯನ್ನು ತಲುಪುತ್ತಾನೆ. ಗುಹೆಯಲ್ಲಿ ದೇವಿಯನ್ನು ಆರಾಧಿಸಲು ಶ್ರೀಧರನು ಆರಂಭಿಸುತ್ತಾನೆ. ಆತನ ಭಕ್ತಿಗೆ ಒಲಿದು ತಾಯಿ ವೈಷ್ಣೋ ದೇವಿಯು ಆತನ ಮುಂದೆ ಪ್ರತ್ಯಕ್ಷಳಾಗಿ ಆಶೀರ್ವದಿಸುತ್ತಾಳೆ. ಅಂದಿನಿಂದ ಶ್ರೀಧರ ಮತ್ತು ಆತನ ವಂಶಸ್ಥರು ಮಾತೆ ವೈಷ್ಣೋ ದೇವಿಯನ್ನು ಪೂಜಿಸಿಕೊಂಡು ಬರುತ್ತಿದ್ದಾರೆ.

ವೈಷ್ಣೋದೇವಿಯ ಎರಡನೇ ಕಥೆ

ಹಿಂದೂ ಪೌರಾಣಿಕ ನಂಬಿಕೆಗಳ ಪ್ರಕಾರ, ಜಗತ್ತಿನಲ್ಲಿ ಧರ್ಮವು ಪತನದತ್ತ ಮುಖಮಾಡಿತ್ತು ಹಾಗೂ ಅಧರ್ಮವು ಹೆಚ್ಚಳವಾಗಲು ಪ್ರಾರಂಭವಾಯಿತು. ಇದರಿಂದ ಧರ್ಮವನ್ನು ರಕ್ಷಿಸಲು ಆದಿಶಕ್ತಿಯ ಸತ, ರಜ ಮತ್ತು ತಮ ಮೂರು ರೂಪ, ಮಹಾಸರಸ್ವತಿ, ಮಹಾಲಕ್ಷ್ಮಿ ಮತ್ತು ಮಹಾದುರ್ಗರ ಸಾಮೂಹಿಕ ಬಲದಿಂದ ಧರ್ಮವನ್ನು ರಕ್ಷಿಸಲು ಒಂದು ಹುಡುಗಿಯನ್ನು ಸೃಷ್ಟಿಸುತ್ತಾರೆ. ಅದೇ ಹುಡುಗಿಯು ತ್ರೇತಾಯುಗದಲ್ಲಿ ಭಾರತದ ದಕ್ಷಿಣ ಕರಾವಳಿಯ ರಾಮೇಶ್ವರದಲ್ಲಿ ಮಕ್ಕಳಿಲ್ಲದೇ ಕೊರಗುತ್ತಿದ್ದ ಪಂಡಿತ ರತ್ನಾಕರ ಅವರ ಪುತ್ರಿಯಾಗಿ ಜನಿಸುತ್ತಾಳೆ. ಪಂಡಿತ ರತ್ನಾಕರನು ಮಗಳಿಗೆ ತ್ರಿಕುಟಾ ಎಂದು ಹೆಸರಿಡುತ್ತಾನೆ. ಆದರೆ ಈಕೆ ವಿಷ್ಣುವಿನ ಭಾಗವೆಂದು ಗುರುತಿಸಿಕೊಂಡಿರುವುದರಿಂದ ವೈಷ್ಣವಿ ಯೆಂದೇ ಪ್ರಸಿದ್ಧಿಯನ್ನು ಪಡೆದಳು. ಈಕೆಗೆ ಸುಮಾರು 9 ವರ್ಷ ವಯಸ್ಸಾದಾಗ ವಿಷ್ಣು ಭಗವಾನ್ಶ್ರೀರಾಮನ ಅವತಾರವನ್ನು ಧರಿಸಿ ಭೂಮಿಗೆ ಬರುತ್ತಾನೆ. ನಂತರ ಈಕೆ ರಾಮನನ್ನು ವಿವಾಹವಾಗಲು ಕಠಿಣ ತಪಸ್ಸಿಗೆ ಕುಳಿತುಕೊಳ್ಳುತ್ತಾಳೆ.

ಶ್ರೀರಾಮನು ಸೀತೆ ಕಳೆದು ಹೋದಾಗ ಆಕೆಯನ್ನು ಹುಡುಕಿಕೊಂಡು ಬರುತ್ತಿರುವಾಗ ಕಡಲತೀರದಲ್ಲಿ ಒಂದು ಹುಡುಗಿ ಧ್ಯಾನ ಮಾಡುತ್ತಿರುವುದನ್ನು ನೋಡುತ್ತಾನೆ. ಆಗ ಆಕೆ ರಾಮನನ್ನು ನೋಡಿ ತನ್ನನ್ನು ವಿವಾಹವಾಗುವಂತೆ ಬೇಡಿಕೊಳ್ಳುತ್ತಾಳೆ. ಆಗ ಶ್ರೀರಾಮನು ಅದು ಸಾಧ್ಯವಿಲ್ಲ. ತಾನು ಸೀತೆಯನ್ನು ಹೊರತು, ಬೇರಾರನ್ನೂ ಕೂಡ ಹೆಂಡತಿಯಾಗಿ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾನೆ. ಆದರೆ ಕಲಿಯುಗದಲ್ಲಿ ನಾನು ಕಲ್ಕಿ ಅವತಾರದಲ್ಲಿ ನಿನ್ನನ್ನು ವಿವಾಹವಾಗುತ್ತೇನೆ ಅಲ್ಲಿಯವರೆಗೆ ನೀನು ಹಿಮಾಲಯದ ತ್ರಿಕುಟಾ ಪರ್ವತದಲ್ಲಿ ಹೋಗಿ ಧ್ಯಾನ ಮಾಡುತ್ತಾ ಭಕ್ತರ ನೋವುಗಳನ್ನು ನಿವಾರಿಸಲು ಹೇಳುತ್ತಾನೆ. ಶ್ರೀರಾಮನು ರಾವಣನ ವಿರುದ್ಧ ಗೆದ್ದಾಗ, ಇದೇ ಖುಷಿಯಲ್ಲಿ ವೈಷ್ಣವಿಯು ನವರಾತ್ರಿಯನ್ನು ಆಚರಿಸುತ್ತಾಳೆ. ಅಂದಿನಿಂದ ನವರಾತ್ರಿಯ 9 ದಿನಗಳಲ್ಲಿ ರಾಮಾಯಣವನ್ನು ಪಠಿಸುತ್ತಾರೆ ಹಾಗೂ ವೈಷ್ಣೋ ದೇವಿಯನ್ನು ಪೂಜಿಸುತ್ತಾರೆ.

ಜಮ್ಮು
ಕತ್ರಾದಲ್ಲಿ ಊಟ ಮಾಡಲು ಸಮಯವಿರಲಿಲ್ಲ. ಲಗೇಜು ಪಡೆದು ನಾವು ೪.೪೦ಕ್ಕೆ ಜಮ್ಮುಗೆ ಹೊರಟು ೫.೪೫ಕ್ಕೆ  ತಲಪಿದೆವು. ಅಲ್ಲಿ ನಮಗೆ ಕೊರೊನಾ ಪರಿಕ್ಷೆ (RTPCR) ಮಾಡಿದರು. ಲೇಹ್ ಗೆ ತೆರಳಲು ಅದು ಅವಶ್ಯವಿತ್ತು.  ಜಮ್ಮು ನಗರ ವೀಕ್ಷಣೆ ನಮಗೆ ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ. ಜಮ್ಮು ಇಂಟರ್ನ್ಯಾಷನಲ್ ಹೊಟೇಲಿನಲ್ಲಿ ನಮ್ಮ ವಾಸ್ತವ್ಯ.

ಸಿಂಧೂ ನದಿ ಯಾತ್ರೆಯ ಬಗ್ಗೆ ಸಣ್ಣ ಪರಿಚಯ.

ನಮ್ಮ ಹಿರಿಯರು ಪಠಿಸುತ್ತಿದ್ದ ಶ್ಲೋಕ ‘ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ ನರ್ಮದೇ ಸಿಂಧೂ ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು’ ಗಂಗೆ, ಯಮುನೆ, ಗೋದಾವರಿ, ನರ್ಮದೆ, ಸರಸ್ವತಿ, ಕಾವೇರಿ , ಸಿಂಧೂ, ನಮ್ಮ ದೇಶದಲ್ಲಿರುವ  ಪವಿತ್ರ ಸಪ್ತ ನದಿಗಳು.

ಇಸವಿ  ೧೯೯೯-೨೦೦೪ ರಲ್ಲಿ ಪ್ರಧಾನಿ ಶ್ರೀ ಅಟಲ ಬಿಹಾರಿ ವಾಜಪೇಯಿ  ಆಡಳಿತದಲ್ಲಿ  ಗೃಹ ಮಂತ್ರಿಯಾಗಿದ್ದ ಲಾಲ್ ಕೃಷ್ಣ ಅಡ್ವಾಣಿಯವರು ಚುನಾವಣೆ ಪ್ರಚಾರಕ್ಕೆ ಲಡಾಕ್ ಗೆ ಹೋಗಿದ್ದಾಗ,  ಜಮ್ಮು ಕಾಶ್ಮೀರದ ಸಂಘದ ಪ್ರಮುಖರಾಗಿದ್ದ ಇಂದ್ರೇಶ್ ಜಿ ಅವರು ಅಡ್ವಾಣಿಯವರನ್ನು ಭೇಟಿಯಾಗಿ, ಸಿಂಧೂ ನದಿಯನ್ನು ನೋಡಿ ಬಂದೆ. ನಮ್ಮ ಭಾರತದಲ್ಲಿಯೇ ಅದು ಹರಿಯುತ್ತಿದೆ ಎಂದರು ನದಿ ಭಾರತದಲ್ಲಿ ಹರಿಯುತ್ತಿಲ್ಲ ಎಂದು ಅಡ್ವಾಣಿ  ಗ್ರಹಿಸಿದ್ದರು. ಇಂದ್ರೇಶ್ ಜಿ ಅವರು ಅಡ್ವಾಣಿಯವರಿಗೆ ಸಿಂಧೂ ನದಿಯ ದರ್ಶನ ಮಾಡಿಸಿದರು.
 
ಭಾರತದ ಸರ್ವಪ್ರಜೆಗಳಿಗೆ ತಮ್ಮ ದೇಶದ ವ್ಯಾಪ್ತಿ, ಸಮೃದ್ಧಿ ತಿಳಿಯಬೇಕು, ದೇಶದ ಎಲ್ಲಾ ಭಾಗದ ಜನರೊಡನೆ ಪರಸ್ಪರ ಭಾಂದವ್ಯ ಮೂಡಬೇಕು ಎಂಬ ಮಹತ್ತರ ಸಂಕಲ್ಪದೊಡನೆ ಹಿಮಾಲಯ ಪರಿವಾರ ಸಮಿತಿ ಪ್ರತಿ ವರ್ಷ ಜೂನ್ ನಲ್ಲಿ ಸಿಂಧೂ ನದಿ ಯಾತ್ರೆ, ಡಿಸೆಂಬರದಲ್ಲಿ ಅಸ್ಸಾಂನ ತವಾಂಗ ನದಿ ಯಾತ್ರೆ ಮತ್ತು ಮಾರ್ಚಿಯಲ್ಲಿ ಅಂಡಮಾನ್ ಪ್ರವಾಸದ ಯೋಜನೆಯನ್ನು ೧೯೯೪ರಿಂದ ಆಯೋಜಿಸಿ ನಡೆಸಿಕೊಂಡು ಬರುತ್ತಿರುವರು. ಇಂದ್ರೇಶ್ ಜಿ ಅವರು ಇದರಲ್ಲಿ ಪ್ರಮುಖರು ಇದೀಗ ಕಳೆದ ಐದಾರು ವರ್ಷಗಳಿಂದ ಕೈಲಾಸ ಮಾನಸ ಸರೋವರ ಮತ್ತು ಚಾರ್ಧಾಮ  (ಕೇದರನಾಥ, ಬದರೀನಾಥ, ಗಂಗೋತ್ರಿ, ಯಮುನೇತ್ರಿ ಪುಣ್ಯಕ್ಷೇತ್ರಗಳ ಪ್ರವಾಸ), ಯಾತ್ರೆಯಂತೆ ಸಿಂಧೂ ನದಿ ಯಾತ್ರೆಯು ಬೃಹತ್ ಗಾತ್ರವನ್ನು ಪಡೆದುಕೊಂಡಿದೆ. ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ತಾನ ಸಿಂಧೂ ಯಾತ್ರೆಯ ಪ್ರವಾಸಿಗರಿಗೆ ರೂ ೧೦ ರಿಂದ ೨೦ ಸಾವಿರ ಅನುದಾನ ಕೊಡುತ್ತಿದೆಮುಂದಿನ ವರ್ಷದಿಂದ ಕರ್ನಾಟಕ ಸರಕಾರದಿಂದಲೂ ಅನುದಾನ ಕೊಡಬೇಕು ಎಂಬ ಮನವಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದಾರೆ. ಪ್ರವಾಸಿಗರು ನಿಗದಿತ ದಿನ ಜಮ್ಮುವಿಗೆ ಅವರ ಸ್ವಂತ ಖರ್ಚಿನಲ್ಲಿ ತಲುಪಬೇಕು. ಮತ್ತೆ ೧೨ ದಿನ ಹೊಟೇಲ್ ನಲ್ಲಿ ವಸತಿ, ಊಟ, ಜಮ್ಮು, ಕಾಶ್ಮೀರ,ಶ್ರೀನಗರ, ಕಾರ್ಗಿಲ್, ಲಡಕ್, ಲೇಹ್, ಸಿಂಧೂ ನದಿ, ಮನಾಲಿ ಇತ್ಯಾದಿ ಸ್ಥಳಗಳಿಗೆ ಕರೆದೊಯ್ಯುವರು. ಭಾರತದ ಹೆಮ್ಮೆಯ ಸೈನ್ಯದವರ ಕೆಲಸ ಕಾರ್ಯಗಳು, ಸಂಬಂಧಿಸಿದ ಅನುಮತಿ, ಮಾರ್ಗದರ್ಶನ ಎಲ್ಲಾ ಸೇರಿ ರೂ ೨೪ ಸಾವಿರ ಒಬ್ಬರಿಗೆ ಪಾವತಿಸಬೇಕು. ಸ್ಥಳೀಯವಾಗಿ ಆಚೀಚೆ ಹೋಗುವುದು ಇತ್ಯಾದಿ ಸಣ್ಣ ಪುಟ್ಟ ಖರ್ಚುಗಳು ನಮ್ಮದು. ವಾಪಾಸು ಚಂಡೀಗಡದಿಂದ ನಮ್ಮೂರಿಗೆ ಬರುವ ಖರ್ಚು ನಮ್ಮದೇ. ಗೂಗಲ್ ನಲ್ಲಿಯೂ ಇದರ ಬಗ್ಗೆ ಮಾಹಿತಿ ಲಭ್ಯ.)

sindhu darshan yatra samiti (Regd)1681,main Bazar, chitragupta mandir, pahar ganj, new delhi 110055,phone: 01123562095, mobile: 09999254446, website: www.sindhudarshan.in

email: sindhudarshan8@gmail.com, help line: 9821892711, more info contact: 9821892713, 9821892714

ಶ್ರೀನಗರ
ತಾರೀಕು ೩ರಂದು ಬೆಳಗ್ಗೆ ೫.೩೦ಗೆ ಎದ್ದು ತಯಾರಾಗಿ, ಲಗೇಜು ಸಮೇತ ಹೊರಟೆವು. ನಮ್ಮ ಮುಂದಿನ ಗುರಿ ಶ್ರೀನಗರ. ಒಟ್ಟು ಬಸ್ ೫. ನಮ್ಮ ಬಸ್ ಸಂಖ್ಯೆ ೫. ಆ ಬಸ್ಸಿಗೆ ನಮ್ಮ ಲಗೇಜು ಹಾಕಿ ಬಂದು ತಿಂಡಿ ತಿಂದೆವು. ಬಸ್ ಎದುರು ಪಟ ತೆಗೆಸಿಕೊಂಡೆವು. ೮ ಗಂಟೆಗೆ ಜಮ್ಮುವಿನಿಂದ ಶ್ರೀನಗರಕ್ಕೆ ಹೊರಟೆವು. ದಾರಿ ಚೆನ್ನಾಗಿದೆ.  ಜಮ್ಮುವಿನಿಂದ ಶ್ರೀನಗರ ದಾರಿಯಲ್ಲಿ ಸಾಗುವಾಗ ಪರ್ವತ ಶ್ರೇಣಿಗಳ ನೋಟ ಬಲು ಸುಂದರ. ಗಿಡ ಮರಗಳಿರುವ ಹಸುರು ತುಂಬಿದ ಪರ್ವತಗಳು.  ಹಸುರು ಭತ್ತದ ಗದ್ದೆಗಳ ನೋಟ ಅಪ್ಯಾಯಮಾನ. ಬಸ್ ಪಯಣದಲ್ಲಿ ಅಂತ್ಯಾಕ್ಷರಿ ನಡೆಯಿತು.

  ಮಧ್ಯಾಹ್ನ ೧೨ ಗಂಟೆಗೆ ಪೀರ (perah) ಎಂಬಲ್ಲಿ ಊಟಕ್ಕೆ ನಿಲ್ಲಿಸಿದರು. ಅನ್ನ ರಾಜ್ಮಾ ಕರಿ, ದಾಳಿಂಬೆ ಚಟ್ನಿ ಊಟ ಮಾಡಿದೆವು. ಹೊಟೇಲಲ್ಲಿ ನಿಂತು  ಜಿನಾಬ್ ನದಿಯ ಸೌಂದರ್ಯ ಕಂಡೆವು. ಪ್ಲಂ ಹಣ್ಣು (ಅಲ್ಲಿಯ ಭಾಷೆಯಲ್ಲಿ ಆಲೂಬುಕಾರ), ಸೇಬು ಕೊಂಡೆವು.




   ಮುಂದೆ ದಾರಿಯಲ್ಲಿ    ಪುಲ್ವಾಮ ಎಂಬ ಊರು ದಾಟಿದೆವು.  ಪುಲ್ವಾಮದಲ್ಲಿ ಹಿಂದೆ ಉಗ್ರರ ದಾಳಿ ಆಗಿತ್ತು. ಅಲ್ಲಿ ಒಂದು ಸೇತುವೆ ಇತ್ತು. ಅಲ್ಲಿ ಬಸ್ ನಿಲ್ಲಿಸಿ ಇಳಿದು ನೋಡುವುದು ಎಂದು ಹೇಳಿದ್ದರು. ಆದರೆ ಅಲ್ಲಿ ನೋಡಲು ಏನೂ ಇಲ್ಲ ಎಂದು ಬಸ್ ನಿಲ್ಲಿಸಲಿಲ್ಲ. ಆ ಸೇತುವೆ ಮೇಲೆ ಆಡು ಕುರಿಗಳ ದಂಡು ಚಲಿಸುವ ಸುಂದರ ದೃಶ್ಯ ನೋಡಲು ಸಿಕ್ಕಿತು.  ಅಲ್ಲಿ ಸುತ್ತಮುತ್ತ ಕ್ರಿಕೆಟ್ ಬ್ಯಾಟ್ ತಯಾರಿಸಿ ಮಾರುವುದನ್ನು ನೋಡಿದೆವು.  


ಕೇಸರಿ ಅಂಗಡಿಗೆ ಕರೆದುಕೊಂಡು ಹೋದರು. ಅಲ್ಲಿ ನೈಜ ಕೇಸರಿ ಕೊಂಡೆವು. ಕೇಸರಿ ಚಹಾ ವಿತರಿಸಿದರು. ಚಹಾಪುಡಿಯನ್ನೂ ಕೊಂಡೆವು.

    ಜಮ್ಮುವಿನಿಂದ ಶ್ರೀನಗರಕ್ಕೆ ರಸ್ತೆಯಲ್ಲಿ ಪಯಣಿಸುವಾಗ ನಿದ್ದೆ ಮಾಡಲು ಮನ ಒಪ್ಪುವುದಿಲ್ಲ. ಎಡಗಡೆಗೆ ತಿರುಗಿದ ಕುತ್ತಿಗೆ ಸರಿ ಮಾಡಿದ್ದು ಶ್ರೀನಗರ ತಲಪಿದಮೇಲೆಯೇ! ಪ್ರಕೃತಿಯ ವೈವಿಧ್ಯಮಯ ಪರ್ವತಗಳ ಶ್ರೇಣಿಯನ್ನು ನೋಡಿದಷ್ಟೂ ಕಣ್ಣು ದಣಿಯದು.


ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುವ ಎನ್.ಎಚ್ ೪೪ ಮಾರ್ಗದಲ್ಲಿ ೯.೨ ಕಿಮೀ ದೂರ (ಚೆನ್ನಾನಿ-ನಶ್ರಿ) ಅತ್ಯಾಧುನಿಕ ಸುರಂಗ ಮಾರ್ಗವಿದೆ. ಇದರಿಂದ ಒಂದೂವರೆ ಗಂಟೆ ಪ್ರಯಾಣದ ಅವಧಿ ಕಡಿಮೆ ಸಾಕಾಗುತ್ತದೆ. ಈ ಸುರಂಗವನ್ನು ೨೦೧೧ರಲ್ಲಿ ನಿರ್ಮಿಸಲು ತೊಡಗಿ ೨೦೧೭ರಲ್ಲಿ ಪೂರ್ಣಗೊಳಿಸಲಾಯಿತು.  ಇದನ್ನು ನಿರ್ಮಿಸಲು ೭ ವರ್ಷ ಬೇಕಾಯಿತು.  ಇದಕ್ಕೆ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಹೆಸರನ್ನು ಇಡಲಾಗಿದೆ. ಜವಾಹರಲಾಲ್ ನೆಹರು ಅವರ ಸಂಪುಟದಲ್ಲಿ ಇವರು ಕೈಗಾರಿಕಾ ಸಚಿವರಾಗಿದ್ದರು. ಭಾರತೀಯ ಜನಸಂಘವನ್ನು ಸ್ಥಾಪಿಸಿದವರು. ಪ್ರಧಾನಿ ನರೇಂದ್ರ ಮೋದಿಯವರು ೨ ಏಪ್ರಿಲ್ ೨೦೧೭ರಂದು ಊದ್ಘಾಟಿಸಿದರು.



 ಸಂಜೆ .೧೫ಕ್ಕೆ ಶ್ರೀನಗರ ತಲಪಿದೆವು. ಸುಮಾರು ೨೬೬ಕಿಮೀ ಪಯಣ. ಜಮ್ಮು ಕಾಶ್ಮೀರದಲ್ಲಿ ಬೆಳಗ್ಗೆ ರನಂತರ, ರಾತ್ರಿ ಮೊದಲು ಬೃಹತ್ ಗಾತ್ರದ ವಾಹನಗಳಿಗೆ ನಗರ ಪ್ರವೇಶಕ್ಕೆ ಅನುಮತಿ ಇಲ್ಲ. ಹಾಗಾಗಿ ಸ್ವಲ್ಪ ಹೊತ್ತು ನಗರದ ಹೊರಗೆ ಕಾಯಬೇಕಾಯಿತು.

     ಸ್ನೋಪ್ಯಾಲೇಸ್ ಹೊಟೇಲಿನಲ್ಲಿ ನಮ್ಮ ವಾಸ್ತವ್ಯ. ಕೋಣೆ ಚೆನ್ನಾಗಿತ್ತು. ೨೪ ಗಂಟೆಯೂ ಬಿಸಿನೀರು ಲಭ್ಯವಿತ್ತು. ಊಟವೂ ಚೆನ್ನಾಗಿತ್ತು. ಒಂದು ಕೋಣೆಯಲ್ಲಿ ಶೋಭಕ್ಕ, ಮಂಗಲಕ್ಕ, ನಾನು ಜೊತೆಯಾಗಿದ್ದೆವು.

ಗುಲ್ಮಾರ್ಗ್
ತಾರೀಕು ೪ರಂದು ಬೆಳಗ್ಗೆ ೫ ಗಂಟೆಗೆದ್ದು ತಯಾರಾಗಿ ೭ ಗಂಟೆಗೆ ತಿಂಡಿ ತಿಂದು ೭.೩೦ಗೆ ಹೊರಟು ಟಂಗ್ಮಾರ್ಗ್ ಹೋದೆವು.  ಾಲ್ಲಿ ತಂಪುಕನ್ನಡಕ ವ್ಯಾಪಾರಿಗಳು ಕನ್ನಡಕವನ್ನು ನಮ್ಮ ಮುಖಕ್ಕೇ ತಗಲಿಸಿ, ಇದು ನಿಮಗೆ ಬಹಳ ಚೆನ್ನಾಗಿ ಒಪ್ಪುತ್ತದೆ ಎಂದು ಹೇಳಿ ವ್ಯಾಪಾರ ಸುರು ಮಾಡುತ್ತಾರೆ! ಚೌಕಾಸಿ ಮಾಡಿದರೆ ಅವು ರೂ. ೫೦ಕ್ಕೆ ನಿಮಗೆ ಲಭಿಸಬಹುದು! ಅಲ್ಲಿಂದ ಬಾಡಿಗೆ ವಾಹನದಲ್ಲಿ ಗುಲ್ಮಾರ್ಗ್ ತಲಪಿದೆವು. ವಾಹನ ಸೀಮಿತ ಸಂಖ್ಯೆಯಲ್ಲಿದ್ದ ಕಾರಣ ಎಲ್ಲರೂ ಗುಲ್ಮಾರ್ಗ್ ತಲಪಲು ಸಮಯ ಹಿಡಿಯಿತು. ನಾವು ಗುಂಪಿನಿಂದ ಬೇರ್ಪಟ್ಟೆವು. ಗುಲ್ಮಾರ್ಗ್ ಒಂದು ಗಿರಿಧಾಮ.  ನಾವು ಆರೇಳು ಮಂದಿ ಅಲ್ಲಿ ಕೇಬಲ್ ಕಾರಿನಲ್ಲಿ ಪರ್ವತ ಪ್ರದೇಶಕ್ಕೆ ತೆರಳಿದೆವು. ಅಲ್ಲಿ ಹತ್ತಿರದಿಂದ  ಗುಲ್ಮಾರ್ಗ್  ಪರ್ವತಶ್ರೇಣಿಗಳನ್ನು ನೋಡಬಹುದು. ಮೇ ಜೂನ್ ತಿಂಗಳಲ್ಲಿ ಬಂದರೆ ಹಿಮದ ರಾಶಿಯನ್ನು ನೋಡಬಹುದು.



ಒಟ್ಟು ಎರಡು ಹಂತಗಳಿಗೆ ಕೇಬಲ್ ಕಾರಿನಲ್ಲಿ ತೆರಳಬಹುದು. ನಾವು ಒಂದು ಭಾಗಕ್ಕೆ ಮಾತ್ರ ಹೋಗಿ ಹಿಂದಿರುಗಿದೆವು. ಒಂದುಭಾಗಕ್ಕೆ ಹೋಗಿ ಬರಲು ರೂ. ೭೪೦.


   ಮಧ್ಯಾಹ್ನ ೧.೩೦ಗೆ ನಾವು ಟಂಗ್ಮಾರ್ಗಿಗೆ ಬಂದೆವು. ನಮಗಾಗಿ ತಂದಿದ್ದ ಊಟ ಮಾಡಲು ನೋಡಿದರೆ ಪಲಾವ್ ಹಳಸಿತ್ತು. ಹಣ್ಣು ಚಿಕ್ಕಿ ತಿಂದು ಸುಧಾರಿಸಿದೆವು.
 ಶಂಕರಾಚಾರ್ಯಮಂದಿರ
ಸಂಜೆ ೩ ಗಂಟೆಗೆ ಹೊರಟು ತಖ್ತ್ ಇ ಸುಲೈಮಾನ್ ಬೆಟ್ಟದ ಮೆಲಿರುವ ಶಂಕರಾಚಾರ್ಯ ಮಂದಿರಕ್ಕೆ ಹೋದೆವು.  ಮಂದಿರ ಸಾವಿರ ಅಡಿ ಎತ್ತರದಲ್ಲಿದೆ. ಈ ದೇವಾಲಯ ಪ್ರವೇಶಿಸಲು ಸುಮಾರು ೨೫೦ ಮೆಟ್ಟಲು ಹತ್ತಬೇಕು.  ಇಲ್ಲಿ ಶಂಕರಾಚಾರ್ಯ ಮಂದಿರದಲ್ಲಿ ಜ್ಯೇಷ್ಟೇಶ್ವರ  ಶಿವಲಿಂಗವಿದೆ.
ಉಗ್ರರೂಪಿ ದೇವಿಯನ್ನು ಶಾಂತಗೊಳಿಸುವ ಸಲುವಾಗಿ ಶಿವಲಿಂಗವನ್ನು ಶಂಕರಾಚಾರ್ಯ ರು ಪೂಜಿಸಿದರಂತೆ. ಅಲ್ಲಿ ಶಂಕರಾಚಾರ್ಯರು ತಪಗೈದ ಸ್ಥಳವನ್ನೂ ನೋಡಬಹುದು. ಈ ದೇವಾಲಯದ ಬೆಟ್ಟದ ಪ್ರದೇಶದ ಉಸ್ತುವಾರಿ ಸೇನಾ ಸಿಬ್ಬಂದಿಯವರದು. ಅಲ್ಲಿ ಕರ್ತವ್ಯದಲ್ಲಿದ್ದ ಧಾರವಾಡದ ಹುಡುಗನ ಭೇಟಿಯಾಯಿತು.

  ಕ್ರಿಸ್ತಪೂರ್ವ ೩೭೧ರಲ್ಲಿ ರಾಜಾ ಗೋಪಾದಿತ್ಯ ಈ ದೇವಾಲಯ ನಿರ್ಮಿಸಿದನೆಂಬ ಉಲ್ಲೇಖವಿದೆ. ಆ ಸಮಯದಲ್ಲಿ ದೇವಾಲಯವನ್ನುಗೋಪಾದ್ರಿ ಎಂದು ಕರೆಯಲಾಗುತ್ತಿತ್ತು. ಶ್ರೀ ಶಂಕರಾಚಾರ್ಯರು ಒಂಭತ್ತನೆಯ ಶತಮಾನದಲ್ಲಿ ಕಾಶ್ಮೀರಕ್ಕೆ ಭೆಟಿ ಇತ್ತಾಗ, ಇಲ್ಲಿ ತಂಗಿದ್ದರು.

ದೇವಾಲಯ ರಾತ್ರಿ ೮ರತನಕ ತೆರೆದಿರುತ್ತದೆ. ಸಂಜೆ ೫ರನಂತರ ವಾಹನಗಳಿಗೆ ಅನುಮತಿ ಇಲ್ಲವಂತೆ. ಮೊಬೈಲ್, ಕ್ಯಾಮರಾ ತೆಗೆದುಕೊಂಡು ಹೋಗುವಂತಿಲ್ಲ.
ನಿಶಾತ್ ಬಾಗ್ ಉದ್ಯಾನವನ

 ನಾವು ನಿಶಾತ್ ಬಾಗ್ ಉದ್ಯಾನವನ ಪ್ರವೇಶಿಸಿದೆವು. ಅದರ ಅಂದ ಚಂದ ನೋಡುತ್ತಿರುವಂತೆಯೇ ಅಲ್ಲಿ ಕಾಶ್ಮೀರಿ ಧಿರಿಸು ಧರಿಸಿ ಪಟ ತೆಗೆಯುವವರು ಕಂಡರು. ಾಂಥ ಧಿರಿಸು ಧರಿಸಿ ಪಟ ತೆಗೆಸಬೇಕು ಎಂದು ನಮ್ಮ ಮಕ್ಕಳು ಒತ್ತಾಯ ಹೇರಿದ್ದರು. ನನಗೆ ಕೂಡ ಆ ವೇಶ ತೊಡಿಸಬೇಕು ಎಂದು ನನ್ನ ಅಕ್ಕ, ತಂಗಿಗೆ ಗುಟ್ಟಾಗಿ ಮಗಳು ಹೇಳಿದ್ದಳಂತೆ. ಕಿರಿಕಿರಿಯಾದರೂ ಆ ವಸ್ತ್ರ ಹಾಕಿಕೊಂಡೆ. ಇದನ್ನು ಯಾರ್ಯಾರು ಹಾಕಿದ್ದಾರೋ ಎಂಬ ಮಡಿಭಾವವೂ ಮನದಲ್ಲಿ ನುಸುಳಿತ್ತು! ವೇಷ ಧರಿಸಿದರೆ ಸಾಕೆ? ಅವರು ಹೇಳಿದಂತೆ ಅಭಿನಯವೂ ಮಾಡಬೇಕಿತ್ತು. ಬುಟ್ಟಿ ಹಿಡಿದು, ಬಿಂದಿಗೆ ಹಿಡಿದು ಫೋಸ್ ಕೊಡಬೇಕಿತ್ತು!  ನಮ್ಮ ಎಲ್ಲರ ನಟನಾ ಕೌಶಲವನ್ನು ಸೆರೆ ಹಿಡಿದು ಪಟ ತೆಗೆದಾಗುವಾಗ ಬರೋಬ್ಬರಿ ಮುಕ್ಕಾಲು ಗಂಟೆಗೂ ಹೆಚ್ಚುಕಾಲ ಸಂದಿತ್ತು! ಹಾಗಾಗಿ ಉದ್ಯಾನವನದ ಸೌಂದರ್ಯವನ್ನು ಸ್ವಲ್ಪಬಾಗ ಮಾತ್ರ ನೋಡಲು ಸಾಧ್ಯವಾಯಿತು ಎಂಬುದು ಬಲು ಬೇಸರದ ಸಂಗತಿ.






    ದಲ್ ಸರೋವರದ ಎದುರು ಭಾಗದಲ್ಲಿ ಜಬರ್ವಾನ್ ಪರ್ವತದ ಕೆಳಗೆ ಇರುವ

೪೬ ಎಕರೆ ವಿಶಾಲವಾದ ಉದ್ಯಾವನದಲ್ಲಿ ವಿವಿಧ ಪುಷ್ಪಗಳ ಜೊತೆ ಗುಲಾಬಿ ಹೂವು ಕಂಗೊಳಿಸುತ್ತಿರುವುದನ್ನು ನೋಡಬಹುದು.  ನೂರ್ ಜೆಹಾನ್ ಅವರ ಹಿರಿಯ ಸಹೋದರ ಆಸಿಫ್ ಖಾನ್ ಅವರು ಈ ಉದ್ಯಾನವನವನ್ನು ನಿರ್ಮಿಸಿದರು. ಪ್ರವೇಶ ಉಚಿತ

ದಲ್ ಸರೋವರ

ದಲ್ ಸರೋವರ ನೋಡಲು ಹೋದೆವು. ರಾತ್ರಿ ದೋಣಿ ಸವಾರಿ ಮಾಡುವುದಿಲ್ಲ ಎಂದು ನಾವು ಮಾತಾಡಿಕೊಂಡಿದ್ದೆವು. ಆದರೆ ಎಲ್ಲರೂ ದೋಣಿ ಸವಾರಿ ತಲಾ ರೂ. ೧೦೦ಕ್ಕೆ ಮಾಡುವುದೆಂದು ತೀರ್ಮಾನವಾಯಿತು. ದೋಣಿ ಹತ್ತಿದೆವು.  ನಮ್ಮ ದೋಣಿಯ ನಾವಿಕ ದಲ್ ಸರೋವರದ ಬಗ್ಗೆ ಮಾಹಿತಿ ನೀಡಿದ. ದಲ್ ಸರೋವರವನ್ನು ನಾವು ದಾಲ್ ಎಂದು ತಪ್ಪಾಗಿ ಉಚ್ಚರಿಸುತ್ತೇವೆ. ದಲ್ ಅಂದರೆ ಒರತೆ ಎಂದರ್ಥವಂತೆ. ಸರೋವರದ ವಿಶೇಷತೆ ಅಂದರೆ ನೀರು ತೆಗದಷ್ಟೂ ತುಂಬುವುದಂತೆ. ಈ ಸರೋವರದಲ್ಲಿ ಕಮಲದ ಹೂವುಗಳು ಅರಳುತ್ತವೆ. ಅದಕ್ಕೆ ಹೂವಿನದಳದಂತೆ ದಳ ಸರೋವರ ಅಂತಲೂ ಹೆಸರು ಬಂತಂತೆ. ದಲ್ ಸರೋವರ ಶ್ರೀನಗರದ ಆಭರಣವಂತೆ. ಸರೋವರವು ಸುಮಾರು ೧೮ ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ೨೦ ಅಡಿ ಆಳವಿದೆ’. ಚಳಿಗಾಲದಲ್ಲಿ ಈ ಸರೋವರ ಹೆಪ್ಪುಗಟ್ಟಿ ಅದರಲ್ಲಿ ನಡೆದಾಡಬಹುದಂತೆ.  
  ಸರೋವರದಲ್ಲಿ ದೋಣಿಯಲ್ಲಿ ಪಾನಿಪೂರಿ ಇತ್ಯಾದಿ ಮಾರುವವರು, ಬಳೆ ಸರ ಸರಕು ಮಾರುವವರು ಇದ್ದರು. ಅವರ ದೋಣಿ ಪಕ್ಕ ಹೋಗಬೇಕಾ? ಕೊಳ್ಳುತ್ತೀರ ಎಂದು ನಮ್ಮನ್ನು ಕೇಳಿದ. ನಮಗೇನೂ ಬೇಡ, ಸೀದಾ ಹೋಗು ಎಂದದ್ದಕ್ಕೆ ಅವನು ಕಾಶ್ಮೀರಕ್ಕೆ ಬಂದು ಕ್ಯಾಶ್ ಖರ್ಚು ಮಾಡಬೇಕು. ಕಾಷ್ಮೀರ ಅಂದರೆ ಕ್ಯಾಶ್ ಖರ್ಚು ಮಾಡಬೇಕು ಎಂದ.ಅವನ ಈ ಪಂಚ್ ನಮಗೆ ಬಹಳ ಇಷ್ಟವಾಯಿತು.   
ದಲ್ ಸರೋವರದಲ್ಲಿ ಬೋಟ್ ಹೌಸಲ್ಲಿ ಉಳಿಯಬಹುದು, ಉದ್ದಕ್ಕೂ ನೂರಾರು ಬೋಟ್ ಮನೆಗಳನ್ನು ನೋಡಬಹುದು. ದೋಣಿ ಸವಾರಿ ಮಾಡಬಹುದು. ರಾತ್ರಿಯ ಈ ದೋಣಿಯಾನ ಚೆನ್ನಾಗಾಯಿತು.





 ರಾತ್ರಿ ೯.೩೦ಗೆ ಹೊಟೇಲ್ ತಲಪಿ ಗಡದ್ದು ಊಟವಾಗಿ ನಿದ್ದೆ.

ಮುಂದುವರಿಯುವುದು