ಶುಕ್ರವಾರ, ಫೆಬ್ರವರಿ 21, 2020

ಅಮೇರಿಕಾ ಪರ್ಯಟನ ಭಾಗ ೯

 ಸ್ಕೋಫ್ಸ್ ಹಿಲ್ ಟಾಪ್ ಡೈರಿ (Schopf`s Hilltop Dairy, 5169 country Rd, Sturgeon Bay, WI 54235 USA)
   ತಾರೀಕು ೧೨.೮.೧೮ರಂದು ಬೆಳಗ್ಗೆ ಹೊಟೇಲ್ ಕೋಣೆಯಿಂದ ಸ್ಕೋಫ್ಸ್ ಹಿಲ್ಟಾಪ್ ಡೈರಿ ವ್ಯೂ ಕಂಟ್ರಿ ಸ್ಟೋರ್‌ಗೆ ಹೋದೆವು. ಎದುರು ಭಾಗದಲ್ಲಿ ದೊಡ್ಡ ಹಸುವಿನ ಪ್ರತಿಮೆ ಇದೆ. ಅಕ್ಷರಿ ಧೈರ್ಯದಿಂದ ಅದನ್ನು ಮುಟ್ಟಿದಳು ಹಾಗೂ ಅದರ ಬಳಿ ನಿಂತು ಪಟ ತೆಗೆಸಿಕೊಂಡಳು!  ಅಲ್ಲಿ ಸುಮಾರು ೫೦೦ ದನಗಳು ಇವೆ. ಹತ್ತಿರದಿಂದ ದನಗಳ ವೀಕ್ಷಣೆ ಸಾಧ್ಯ. ಹಾಸ್ಟಿನ್ ದನಗಳು. ಹಾಲು ಕರೆಯಲು ಕೆಚ್ಚಲಿಗೆ ಯಂತ್ರಗಳನ್ನು ಹಾಕಿದ್ದರು. ಪ್ರತೀ ೮ ಗಂಟೆಗೊಮ್ಮೆ ಸರದಿಯಲ್ಲಿ ಪ್ರತೀದಿನ ೫೦೦ ಹಸುಗಳಿಂದ ಹಾಲು ಕರೆಯುತ್ತಾರೆ. ೧೦ ಗ್ಯಾಲನ್‌ಗಳಷ್ಟು ಹಾಲು ಸಿಗುತ್ತದಂತೆ. ಒಂದು ಹಸು ಸರಾಸರಿ ೩೭.೮ ಲೀಟರ್ ಹಾಲು ಕೊಡುತ್ತದಂತೆ. ಆ ದನಗಳ ಹೆಸರು ಕುಕ್ಕೀಸ್! ನಾವು ಹಸುಗಳನ್ನು ನೋಡಿದೆವು. ದೊಡ್ಡ ಗಾತ್ರದ ಹಸುಗಳು. ಅಲ್ಲಿಯ ಅಂಗಡಿಯಲ್ಲಿ ವಿವಿಧ ರೀತಿಯ ಐಸ್ಕ್ರೀಂ, ಚೀಸ್ ಇದ್ದುವು. ನಾವು ಐಸ್ಕ್ರೀಂ ತಿಂದೆವು.



   ಪ್ರತೀ ಹಸುವಿಗೆ ದಿನದಲ್ಲಿ ೨ ಪೌಂಡ್ ಹಸಿಹುಲ್ಲು (Hay), ೨೪ ಪೌಂಡ್ ಒಣಹುಲ್ಲು (hay lage), ೪೦ ಪೌಂಡ್ ಜೋಳದ ಹಿಂಡಿ (Corn silage), ೧೪ ಪೌಂಡ್ ಜೋಳದ ಹುಲ್ಲು (shell corn), ೧೦ ಪೌಂಡ್ ಪ್ರೊಟೀನ್ ಮಿಕ್ಸ್, ೧೮೯ ಲೀಟರ್ ನೀರು. ಕೊಡುತ್ತಾರಂತೆ. ಅಬ್ಬ! ಅಷ್ಟು ದನಗಳಿಗೆ ಎಷ್ಟಾಯಿತು? ಲೆಕ್ಕ ಹಾಕಿದರೆ ಮೂಕವಿಸ್ಮಿತರಾಗುತ್ತೇವೆ! 
  ಅಲ್ಲಿ ಕುದುರೆ, ಆಡುಗಳಿಗೆ ಪ್ರವಾಸಿಗರು ಪ್ರೊಟೀನ್ ಮಿಕ್ಸ್ ಹಾಕಬಹುದು. ೧ ಡಾಲರ್ ಕೊಟ್ಟರೆ ಪ್ರೊಟೀನ್ ಮಿಕ್ಸ್ ಕೊಡುತ್ತಾರೆ. ನಾವು ಹಾಕಿದೆವು. ಅವನ್ನು ತಿನ್ನಲು ಬಲಶಾಲಿ ಆಡುಗಳೇ ಮುಂದೆ ಬರುತ್ತವೆ! ಪಾಪದ ಆಡುಗಳಿಗೆ ಆಸ್ಪದವೇ ಇಲ್ಲದಂತೆ ಮಾಡುತ್ತವೆ. ಪ್ರಕೃತಿ ನಿಯಮವೇ ಹಾಗೆ. ಬಲಶಾಲಿಗಳೇ ಗೆಲ್ಲುವುದು!

 ಮರದ ಎಲೆ ಬಣ್ಣ ಬದಲುವುದನ್ನು ನಾವು ನೋಡಬೇಕೆಂದು ಅಕ್ಷರಿಗೆ ಆಸೆ ಇತ್ತು. ಛೆ! ನೀವು ಇನ್ನೂ ಒಂದು ತಿಂಗಳು ಇದ್ದರೆ ಅದರ ಚಂದವನ್ನೂ ನೋಡಬಹುದಿತ್ತು ಎಂದು ಹೇಳುತ್ತಲಿದ್ದಳು. ಅಲ್ಲಿ ಎದುರು ಭಾಗದಲ್ಲಿದ್ದ ಒಂದು ಮರದ ಎಲೆಗಳ ಬಣ್ಣ ಬದಲಲು ಸುರುವಾಗಿತ್ತು. ಅಕ್ಷರಿಗೆ ಅದನ್ನು ನೋಡಿ ಬಲು ಖುಷಿಯಾಗಿ ಅಲ್ಲಿ ನನ್ನನ್ನು ನಿಲ್ಲಿಸಿ ಪಟ ತೆಗೆದಳು! ಒಂದಾದರೂ ನೋಡಲು ಸಿಕ್ಕಿತಲ್ಲ ಎಂದು ಸಮಾಧಾನ ಪಟ್ಟಳು.


  ಡೋರ್ ಆರ್ಟಿಸನ್ ಚೀಸ್ ಕಂಪೆನಿ (Door Artison cheese copany, 5103, WI 42, Egg harbour WI 54209 USA)
 ಚೀಸ್ ತಯಾರಿ ಹೇಗೆ ಮಾಡುತ್ತಾರೆ ಎಂದು ನೋಡುವ ಸಲುವಾಗಿ ನಾವು ಡೋರ್ ಆರ್ಟಿಸನ್ ಚೀಸ್ ಕಂಪೆನಿಗೆ ಹೋದೆವು. ಆದರೆ ಆ ದಿನ ಚೀಸ್ ತಯಾರಿಕೆ ಇರಲಿಲ್ಲ. ಕಾರಣ ತಿಳಿಯಲಿಲ್ಲ. ಪ್ರದರ್ಶನ ಮಾರಾಟಕ್ಕೆ ಇಟ್ಟ ವಿವಿಧ ರೀತಿಯ ಚೀಸ್ ನೋಡಿ ಅಲ್ಲಿಂದ ಹೊರಟೆವು. ಎರಡೂ ಕಡೆಯೂ              (ಪೋರ್ಟ್ಲ್ಯಾಂಡ್) ನಮಗೆ ಚೀಸ್ ತಯಾರಿ ನೋಡುವ ಅದೃಷ್ಟ ಖುಲಾಯಿಸಿರಲಿಲ್ಲ. 
ಪ್ರವೇಶ ಸಮಯ: ಭಾನುವಾರ ಬೆಳಗ್ಗೆ ೧೦ರಿಂದ ಸಂಜೆ ೪ ಗಂಟೆವರೆಗೆ, ಉಳಿದ ದಿನ ಬೆಳಗ್ಗೆ ೧೦ರಿಂದ ಸಂಜೆ ೫ ಗಂಟೆವರೆಗೆ.
 ಚೆರಿ ತೋಟ ಸುತ್ತಾಟ
ಲಾಟೆನ್‌ಬ್ಯಾಕ್ ಓರ್ಚರ್ಡ್ ಕಂಟ್ರಿ ವೈನರಿ ಆಂಡ್ ಮಾರ್ಕೆಟ್(Lautenbach`s Orchard Country Winery and Market 9197, WI-42, Fish Creek, WI 54212, USA) 
  ಯಾವುದಾದರೂ ತೋಟಕ್ಕೆ ಹೋಗಿ ಚೆರಿ ಹೇಗೆ ಬೆಳೆಯುತ್ತಾರೆ ಎಂದು ನೋಡುವ ಆಸೆ ನನಗಿತ್ತು. ಅದರ ಸಲುವಾಗಿ ಡೋರ್ ಕೌಂಟಿಯಲ್ಲಿರುವ ಲಾಟೆನ್ ಬ್ಯಾಕ್ ತೋಟಕ್ಕೆ  ಹೋದೆವು.  ತೋಟದ ಮಾಲಿಕ ಬಾಬ್ ಲಾಟೆನ್ಬ್ಯಾಕ್. ಮೊದಲಿಗೆ ಚೆರಿ ತೋಟ ಸುತ್ತಿದೆವು. ಚೆರಿ ತೋಟದ ಬಗ್ಗೆ ಜೂಲಿಯಾ ಬಹಳ ಚೆನ್ನಾಗಿ ವಿವರಿಸಿದಳು.

   ಅಲ್ಲಿ ೧೦೦ ಎಕರೆ ಪ್ರದೇಶದಲ್ಲಿ ದ್ರಾಕ್ಷೆ, ಚೆರಿ, ಸೇಬು, ಮರಸೇಬು (ಪೇರ್) ರಾಸ್ಬೆರಿ ಇಷ್ಟು ವಿಧದ ಬೆಳೆ ಬೆಳೆಯುತ್ತಾರೆ. ಸಾಮಾನ್ಯವಾಗಿ ಚೆರಿ ಗಿಡ ಸುಮಾರು ೧೦೦ ವರ್ಷ ಬಾಳುತ್ತದೆ. ಈಗ ಯಂತ್ರ ಉಪಯೋಗಿಸಿ ಹಣ್ಣು ಕೊಯ್ಯುವ ಕಾರಣ ೪೫-೫೦ ವರ್ಷ ಮಾತ್ರ ಬಾಳುತ್ತದಂತೆ. ಅಲ್ಲಿ ಐದು ರೀತಿಯ ಚೆರಿ ಬೆಳೆಯುತ್ತಾರಂತೆ. ಮೂರರಿಂದ ನಾಲ್ಕು ವಾರ ಚೆರಿ ಕೊಯಿಲು ಇರುತ್ತದಂತೆ. ಸುಮಾರು ೩ ಲಕ್ಷದ ೫೦ ಸಾವಿರ ಪೌಂಡ್ ಚೆರಿ ಇಲ್ಲಿ ಬೆಳೆಯುತ್ತದಂತೆ. ಇಲ್ಲಿಯ ಕ್ಷಾರೀಯ ಮಣ್ಣು, ಹಾಗೂ ಸುಣ್ಣದಕಲ್ಲುಗಳು ಚೆರಿ ಚೆನ್ನಾಗಿ ಬೆಳೆಯಲು ಅನುಕೂಲಕಾರಿಯಾಗಿದೆಯಂತೆ. ಬೆಳೆ ಬೆಳೆಯಲು ಮಿಷಿಗನ್ ಸರೋವರದ ನೀರು ಬಳಸುತ್ತಾರಂತೆ.





  ಚೆರಿ ತೋಟದಲ್ಲಿ, ದ್ರಾಕ್ಷೆ ತೋಟದಲ್ಲಿ ಗಿಡಗಳಿಗೆ ಅಲ್ಲಲ್ಲಿ ಸಾಬೂನನ್ನು ಕಟ್ಟಿದ್ದರು. ಸಾಬೂನು ಕಟ್ಟಿದ ಉದ್ದೇಶ ಏನು ಎಂದು ಜೂಲಿಯಾ ಅವರನ್ನು ಕೇಳಿದೆ. ಸಾಬೂನು ಕಟ್ಟಿದರೆ ಯಾವುದೇ ಪ್ರಾಣಿಗಳು  (ಜಿಂಕೆ ಇತ್ಯಾದಿ ಪ್ರಾಣಿಗಳು ಗಿಡ ತಿನ್ನಲು ಬರುತ್ತವಂತೆ) ಬರುವುದಿಲ್ಲವಂತೆ. ಹೊಟೇಲುಗಳಲ್ಲಿ ಕೊಡುವ ಸಣ್ಣ ಸಾಬೂನು ಕಟ್ಟುವುದಂತೆ! 
   ಮೊದಲು ೧೨-೧೫ ಸಾವಿರ ಮಂದಿ ಚೆರಿ ಕೊಯ್ಯಲು ಡೋರ್ ಕೌಂಟಿಗೆ ವಲಸೆ ಬರುತ್ತಿದ್ದರಂತೆ. ಈಗ ಒಂದೇ ಒಂದು ಯಂತ್ರದ ಸಹಾಯದಿಂದ ಒಬ್ಬ ವ್ಯಕ್ತಿ ಕೆವಲ ೭ ಸೆಕೆಂಡಿನಲಿ  ೭ ಸಾವಿರ ಚೆರಿಯನ್ನು ಕೊಯ್ಲು ಮಾಡಲು ಸಾಧ್ಯವಾಗಿದೆಯಂತೆ. ಎಂಥ ಆವಿಷ್ಕಾರ!  ಚೆರಿಗಿಡ ೩ರಿಂದ ೪ ವರ್ಷದಲ್ಲಿ ಬೆಳೆದು ಕಾಯಿಬಿಡಲು ಪ್ರಾರಂಭಿಸುತ್ತದೆ. ಮರ ದೊಡ್ಡದಾಗಲು ೭ ವರ್ಷ ಬೇಕಾಗುತ್ತದಂತೆ.  ಮಿಷಿಗನ್ ರಾಜ್ಯವನ್ನು ಚೆರಿ ರಾಜಧಾನಿ ಎಂದು ಕರೆಯುತ್ತಾರಂತೆ. 
  ನಾವು ತೋಟ ಸುತ್ತಿ ಬರುವಾಗ ಒಂದು ಕಡೆ ಸಿಮೆಂಟಿನ ಅಂಗಳದಲ್ಲಿ ಚೆರಿ ಬೀಜ ಅಲ್ಲಲ್ಲಿ ಇದ್ದುದನ್ನು ಕಂಡೆವು. ಅದೇನು ಎಂದು ಕೇಳಿದಾಗ ಜೂಲಿಯಾ ಹೇಳಿದ್ದು: ಚೆರಿ ತಿಂದು ಅದರ ಬೀಜವನ್ನು ಎಷ್ಟು ದೂರ ಉಗಿಯಬಹುದು? ಅಂಥ ಸ್ಫರ್ಧೆಯನ್ನು ಅಲ್ಲಿ ಪ್ರತೀ ವರ್ಷ ನಡೆಸುತ್ತಾರಂತೆ. ಇದುವರೆಗೆ ನಡೆದ ಸ್ಪರ್ಧೆಯಲ್ಲಿ ಹೆಂಗಸು ೪೫ ಅಡಿ ದೂರ ಉಗಿದದ್ದು, ಗಂಡಸು ೪೮ ಅಡಿ ದೂರ ಉಗಿದದ್ದು ದಾಖಲೆಯಂತೆ. ಬರುವ ಸೆಪ್ಟೆಂಬರ ತಿಂಗಳಲ್ಲಿ ಸ್ಪರ್ಧೆ ನಡೆಯುತ್ತದೆ. ನೀವೂ ಬಂದು ಭಾಗವಹಿಸಿ ಬಹುಮಾನ ಗೆಲ್ಲಿ ಎಂದು ಜೂಲಿಯಾ ನಮಗೆ ಆಹ್ವಾನ ಕೊಟ್ಟಳು. ನಾವು ಸ್ಪರ್ಧೆಗೆ ಪೂರ್ವಭಾವಿಯಾಗಿ ಅಲ್ಲಿ ಚೆರಿ ತಿಂದು ಬೀಜ ಉಗಿದು ನೋಡಿದೆವು. ನಾವು ಉಗಿದ ಬೀಜ ಹತ್ತಡಿ ದೂರದಿಂದ ಹೆಚ್ಚು ಹಾರಲಿಲ್ಲ. ಹಾಗಾಗಿ ಸ್ಪರ್ಧೆಗೆ ಹೋಗಿ ಪ್ರಯೋಜನವಿಲ್ಲ ಎಂದು ಆ ಆಸೆ ಕೈಬಿಟ್ಟೆವು!

  ತೋಟ ಸುತ್ತಿ ಬಂದು ಒಳಗೆ ಸಭಾಂಗಣದಲ್ಲಿ ಕೂತೆವು. ಚೆರಿಯಿಂದ ವೈನ್ ತಯಾರಿ, ಚೆರಿ ತೋಟದ ಮಾಲಿಕ ಬಾಬ್ ಲಾಟೆನ್ ಬ್ಯಾಕ್ ಅವರ ಜೀವನದ ಬಗ್ಗೆ, ಅವರು ಚೆರಿ ತೋಟ ಬೆಳೆಸಿದ ಬಗ್ಗೆ ಸಣ್ಣ ವೀಡಿಯೋ ತುಣುಕನ್ನು ತೋರಿಸಿದರು. ಕೊನೆಗೆ, ವಿವಿಧ ಹಣ್ಣುಗಳಿಂದ (ಚೆರಿ, ದ್ರಾಕ್ಷೆ, ಸೇಬು) ತಯಾರಿಸಿದ ವೈನ್ ಕುಡಿಯಲು (ಸ್ವಲ್ಪ ಸ್ವಲ್ಪ) ಕೊಟ್ಟರು. ನಾವು ವೈನ್ ಬೇಡವೆಂದಿದ್ದೆವು. ಈ ತೋಟ ಸುತ್ತಲು ಪ್ರವೇಶ ಧನ ೫ ಡಾಲರ್. ವೈನ್ ಬೇಡವೆಂದವರಿಗೆ ೨ ಡಾಲರ್. ವೈನ್ ಕುಡಿಯಲು ಕೊಟ್ಟ ಗಾಜಿನ ಲೋಟ ಕೂಡ ಅವರವರಿಗೇ! ನಾವು ವೈನ್ ಬೇಡವೆಂದದ್ದು ಜೂಲಿಯಾಳಿಗೆ ಅತಿಥಿ ಸತ್ಕಾರ ಮಾಡಿದಂತಾಗಲಿಲ್ಲ ಎನಿಸಿತೋ ಏನೋ? ಮಹೇಶನಿಗೆ ಸೇಬು ರಸ (ಸೇಬು ಸಿಡಾರ್)ವನ್ನು ಕೊಟ್ಟು ಆ ಗ್ಲಾಸನ್ನೂ ಉಚಿತವಾಗಿ ಅವನಿಗೇ ಕೊಟ್ಟಳು. ನಾವು ಸೇಬುರಸ ಕೂಡ ಬೇಡವೆಂದಿದ್ದೆವು! ಹಾಗಾಗಿ ೨ ಲೋಟ ಸಿಗುವುದರಿಂದ ವಂಚಿತರಾದೆವು!


   ಮೊದಲು ಡೋರ್ ಕೌಂಟಿಯಲ್ಲಿ ಶೇಕಡ ೯೫ ಚೆರಿ ಉತ್ಪಾದನೆ ಇತ್ತು. ಹಾಗೂ ಮೊದಲ ಸ್ಥಾನದಲ್ಲಿತ್ತು.  ಈಗ ೫ನೇ ಸ್ಥಾನಕ್ಕೆ ಇಳಿದಿದೆ. ಈಗ ಮೊದಲ ಸ್ಥಾನ ಮಿಷಿಗನ್, ಎರಡನೇ ಸ್ಥಾನ ಯುಟ (UTAH) ಮೂರನೇ ಸ್ಥಾನ ನ್ಯೂಯಾರ್ಕ್.  
ಪ್ರವೇಶ ಸಮಯ ಭಾನುವಾರ, ಸೋಮವಾರ, ಗುರುವಾರ ಬೆಳಗ್ಗೆ ೧೦ರಿಂದ ಸಂಜೆ ೪, ಶುಕ್ರವಾರ ಶನಿವಾರ ೧೦ರಿಂದ ಸಂಜೆ ೫ ಗಂಟೆವರೆಗೆ  
ನಾವು ಅಲ್ಲಿ ಚೆರಿ ಕೊಂಡು, ಚೆರಿ ತೋಟ ನೋಡಿದ ಅನುಭವದ ಮೂಟೆ ಹೊತ್ತು ಅಲ್ಲಿಂದ ನಿರ್ಗಮಿಸಿದೆವು. ಅಲ್ಲಿ ಹಣ್ಣಿನ ರಸ (ವೈನ್)ವನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿ ಪೇರಿಸಿಟ್ಟ ರೀತಿ ನೋಡಲು ಬಲು ಚೆನ್ನಾಗಿತ್ತು.








 ಪೆನಿನ್ಸುಲಾ ಸ್ಟೇಟ್ ಪಾರ್ಕ್(Peninsula State Park, 9462, Shore Rd, Fish Creek, WI 54212, USA) 
 ನಾವು ಪೆನಿನ್ಸುಲಾ ಸ್ಟೇಟ್ ಪಾರ್ಕ್ ಪ್ರವೇಶಿಸಿ ಅಲ್ಲಿ ಬುತ್ತಿ ಊಟ (ಬ್ರೆಡ್ ಸ್ಯಾಂಡ್ವಿಚ್) ಮಾಡಿದೆವು. ಊಟ ಮಾಡಿ ಸ್ವಲ್ಪ ದೂರ ಪಾರ್ಕ್ ಸುತ್ತಿದೆವು. ೧೯೦೯ರಲ್ಲಿ ಸ್ಥಾಪಿಸಲ್ಪಟ್ಟ ಈ ಪಾರ್ಕ್ ೩೭೭೬ ಎಕರೆ ಪ್ರದೇಶದಲ್ಲಿದೆ.  ೧೯೧೦ರಲ್ಲಿ ರಾಜ್ಯ ಉದ್ಯಾನವನವನ್ನಾಗಿ ಘೋಷಿಸಲಾಯಿತು. ಪೆನಿನ್ಸುಲಾ ವಿಸ್ಕಾನ್ ಸಿನ್‌ನ ಮೂರನೇ ಅತಿದೊಡ್ಡ ರಾಜ್ಯ ಉದ್ಯಾನವನವಾಗಿದೆ. ಇಲ್ಲಿಗೆ ವರ್ಷದಲ್ಲಿ ಒಂದು ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ನಡೆಯಲು ಸುಮಾರು ಕಾಲುದಾರಿಗಳನ್ನು ಮಾಡಿದ್ದಾರೆ. 
ಪ್ರವೇಶ ಸಮಯ ಬೆಳಗ್ಗೆ ೬ರಿಂದ ರಾತ್ರೆ ೧೧ ಗಂಟೆ ವರೆಗೆ. ಪ್ರವೇಶ ಶುಲ್ಕವಿದೆ. (ಸ್ಟಿಕರ್ ಅಗತ್ಯವಿದೆ.)
 ಈಗಲ್ ಬ್ಲಫ್ ಲೈಟ್ ಹೌಸ್  (Fagle Bluff Lighthouse, 10249 Shore Rd, Fish Creek, WI 54212, USA) 
  ಈಗಲ್ ಬ್ಲಫ್ ಲೈಟ್ ಹೌಸಿಗೆ ಹೋದೆವು. ೪ ಎಕರೆ ಪ್ರದೇಶದಲ್ಲಿರುವ ಲೈಟ್ ಹೌಸ್‌ನ್ನು ೧೮೬೮ರಲ್ಲಿ ನಿರ್ಮಿಸಲಾಯಿತು. ೪೩ ಅಡಿ ಎತ್ತರದ ಚೌಕಾಕಾರದ ಗೋಪುರವಿದೆ.  ೧೯೭೦ರಲ್ಲಿ ಇದನ್ನು ಐತಿಹಾಸಿಕ ಸ್ಥಳವೆಂದು ಘೋಷಿಸಲಾಯಿತು. ಸುಂದರ ಪಿಕ್ನಿಕ್ ತಾಣವಿದು. ಎದುರು ಭಾಗದಲ್ಲಿ ದೊಡ್ಡ ಸರೋವರವಿದ್ದು, ನೋಡುತ್ತ ಕುಳಿತರೆ ಸಮಯ ಸರಿಯುವುದು ಗೊತ್ತಾಗುವುದಿಲ್ಲ. 
   ಎಲಿಸನ್ ಬ್ಲಫ್ ಸ್ಟೇಟ್ ನ್ಯಾಚುರಲ್ ಏರಿಯಾ (Ellison Bluff State Natural Area, Ellison Bluff Rd, Ellison Bay, WI 54210, USA)
  ನಾವು ಎಲಿಸನ್ ಬ್ಲಫ್ ಸ್ಟೇಟ್ ನ್ಯಾಚುರಲ್ ಏರಿಯಾ ಪ್ರವೇಶಿಸಿದೆವು. ಜೋಹಾನ್ ಎಲಿಯಾಸನ್ ೧೮೬೫ರಲ್ಲಿ ೮ ಸಾವಿರ ಎಕರೆ ಭೂಮಿಯಲ್ಲಿ ಎಲಿಸನ್ ಬ್ಲಫ್ ಸ್ಟೇಟ್ ನ್ಯಾಚುರಲ್ ಕೊಲ್ಲಿಯನ್ನು ಸ್ಥಾಪಿಸಿದರು. ೨೦೦೨ರಲ್ಲಿ ಇದನ್ನು ನೈಸರ್ಗಿಕ ಪ್ರದೇಶವೆಂದು ಘೋಷಿಸಲಾಯಿತು. ಕಾಡಿನಲ್ಲಿ ಆಸ್ಟರ್, ಮೇಫ್ಲವರ್, ಟ್ರಿಲ್ಲಿಯಂ ಇತ್ಯಾದಿ ಜಾತಿಯ ದೊಡ್ಡ ದೊಡ್ಡ ಮರಗಳಿವೆ.  ಒಂದು ಮೈಲಿ ಕಾಡೊಳಗೆ ಸಂಚರಿಸಿದೆವು. ಎರಡು ವೀಕ್ಷಣಾ ವೇದಿಕೆಗಳಿವೆ. ಇಲ್ಲಿಂದ ಸೂರ್ಯಾಸ್ತ ವೀಕ್ಷಿಸಬಹುದು. ಮಿಷಿಗನ್ ಲೇಕಿನ ಸುಂದರ ನೋಟವನ್ನು ಕಣ್ಣು ತುಂಬಿಕೊಳ್ಳಬಹುದು. ಅಲ್ಲಿ ನಿಂತು ಪ್ರಕೃತಿಯ ರಮ್ಯ ದೃಶ್ಯವನ್ನು ನೋಡಿ ಆನಂದಿಸಿ ಪಟ ಕ್ಲಿಕ್ಕಿಸಿಕೊಂಡು ಹೊರಟೆವು. 
ಪ್ರವೇಶ ಸಮಯ ಬೆಳಗ್ಗೆ ೬ರಿಂದ ರಾತ್ರೆ ೧೧ ಘಂಟೆವರೆಗೆ .
 ಡೋರ್ ಕೌಂಟಿ 
  ಡೋರ್ ಕೌಂಟಿಯ ತುದಿವರೆಗೆ ನಾವು ರಸ್ತೆಯಲ್ಲಿ ಸಾಗಿದೆವು. ಅಲ್ಲಿಂದ ವಾಷಿಂಗ್ಟನ್ ಐ ಲ್ಯಾಂಡ್ ಕಾಣುತ್ತದೆ. ಫೆರ್ರಿಯಲ್ಲಿ ನಮ್ಮ ಕಾರು ಸಮೇತ ದ್ವೀಪಕ್ಕೆ ಪಯಣಿಸಬಹುದು. ನಾವು ಹೋಗಲಿಲ್ಲ. ಅಲ್ಲಿ ತುಸು ಹೊತ್ತು ನಿಂತು ನೋಡಿ ಹಿಂದಿರುಗಿದೆವು. ಈ ರಸ್ತೆಯಲ್ಲಿ ಪಯಣಿಸಿ ರಸ್ತೆಯ ಅಂದಚಂದವನ್ನು ನಾನು ನೋಡಬೇಕು ಎಂದು ಅಕ್ಷರಿಯ ಬಯಕೆ. ಹೌದು. ಬಹಳ ಸುಂದರವಾದ ರಸ್ತೆ. ತಿರುವುಗಳು, ರಸ್ತೆಬದಿಯ ಮರಗಳು ಎಲ್ಲವೂ ಬಹಳ ಚಂದವಾಗಿತ್ತು. 
  ಕೇವ್ ಪಾಯಿಂಟ್ ಕೌಂಟಿ ಪಾರ್ಕ್ (Cave point county Park,5360, Schauer Rd, Sturgeon Bay, WI 54235, USA) 
 ನಾವು ಕೇವ್ ಪಾಯಿಂಟ್ ಕೌಂಟಿ ಪಾರ್ಕ್‌ಗೆ ಹೋದೆವು. ಅಬ್ಬ ಅಮೆರಿಕದಲ್ಲಿ ನಾವು ನೋಡಿದ ಉದ್ಯಾನವನಗಳು ಒಂದಕ್ಕಿಂತ ಒಂದು ಸುಂದರವಾಗಿದ್ದುವು. ಎಲ್ಲವೂ ಒಂದು ದಿನದ ವಿಹಾರಕ್ಕೆ ಹೇಳಿ ಮಾಡಿಸಿದ ತಾಣಗಳು.  ಇಲ್ಲಿ ನೀರೊಳಗಿನ ಗುಹೆ, ಚಾರಣಕ್ಕೆ ವಿವಿಧ ಜಾಡುಗಳು, ಸುಣ್ಣದ ಕಲ್ಲಿನ ನೀರ್ಗಲ್ಲುಗಳನ್ನು ಹಾಗೂ ಮಿಷಿಗನ್ ಸರೋವರದ ಸುಂದರ ನೋಟವನ್ನು ನೋಡಬಹುದು.   ನಾವು ಕಾಲುದಾರಿಯಲ್ಲಿ ಕೆಲವು ಮೈಲಿ ನಡೆದು ನಿಸರ್ಗದ ಸಿರಿಯನ್ನು ಕಣ್ಣಲ್ಲಿ ತುಂಬಿಕೊಂಡೆವು. 
   ನೆಗೆದು ಈಜುವ ಆಟ ಅಮೇರಿಕನ್ನರ ಪರಿಪಾಟ
ಅಲ್ಲಿ ಮಿಷಿಗನ್ ಸರೋವರ ನೋಡುತ್ತ ಹೆಜ್ಜೆ ಹಾಕುತ್ತಿರಬೇಕಾದರೆ ಒಂದು ಕಡೆ ಕೆಲವು ಮಂದಿ ಬಂಡೆಯಿಂದ ನೀರಿಗೆ ಜಿಗಿದು ಈಜುವುದು ಕಂಡಿತು. ಅವರ ಜಿಗಿದಾಟ ಈಜಾಟವನ್ನು ನೋಡುತ್ತ, ವೀಡಿಯೋ, ಪಟ ಕ್ಲಿಕ್ಕಿಸುತ್ತ ನಿಂತೆವು. ನೋಡಿದಾಗ ಅಬ್ಬ ಅವರ ಧೈರ್ಯವೇ ಎಂದೆನಿಸಿತು. ಬಂಡೆಯಿಂದ ನೀರಿಗೆ ನೆಗೆದು ತುಸು ಈಜಿ ಪುನಃ ಬಂಡೆಗೆ ಹತ್ತಿ ನೀರಿಗೆ ನೆಗೆಯುತ್ತಿದ್ದರು. ಅವರ ಈ ಆಟವನ್ನು ನೋಡುತ್ತ ನಿಂತದ್ದರಲ್ಲಿ ಸಮಯ ಸರಿದದ್ದೇ ತಿಳಿಯಲಿಲ್ಲ. ಅಷ್ಟು ಹೊತ್ತಾದರೂ ಅವರ ಈಜಾಟ ನಿಲ್ಲಲಿಲ್ಲ. ನಾವು ಅಲ್ಲಿಂದ ಹೊರಟು ಮನೆಗೆ ಹಿಂದಿರುಗಿದೆವು.







  ಜಯಶ್ರೀ ಆಗಮನ- ನಿರ್ಗಮನ
ತಾರೀಕು ೧೪.೮.೧೮ರಂದು ನಾವು ಮಧ್ಯಾಹ್ನ ೧ ಗಂಟೆಗೆ ಹೊರಟು ಷಿಕಾಗೋದಲ್ಲಿರುವ ಮ್ಯಾಡಿಸನ್ ವಿಮಾನ ನಿಲ್ದಾಣಕ್ಕೆ ಹೋದೆವು. ಪೋರ್ಟ್ ಲ್ಯಾಂಡಿನಿಂದ ಹೊರಟ ಜಯಶ್ರೀ ಸಂಜೆ ೪.೧೫ಕ್ಕೆ ಇಲ್ಲಿ ಇಳಿದಳು. ಅವಳನ್ನು ಕರೆದುಕೊಂದು ನಾವು ಮನೆಯೆಡೆಗೆ ತೆರಳಿದೆವು.
  ದಾರಿಮಧ್ಯೆ ಎತ್ತರದ ಸೇತುವೆ ಮೇಲೆ ಇರುವ ಹೊಟೇಲಿಗೆ ಹೋದೆವು. ಅಲ್ಲಿ ಕಾಫಿ ಹೀರುತ್ತ, ಕೆಳಗೆ ರಸ್ತೆಯಲ್ಲಿ ಪ್ರವಾಹದಂತೆ ಸಾಗುವ ಕಾರುಗಳ ಸಾಲುಗಳನ್ನು ಗಾಜಿನ ಕಿಟಕಿ ಬಾಗಿಲಿನಿಂದ ನೋಡುವುದೇ ಸೊಗಸು. ಮನೆ ತಲಪುವಾಗ ಸಂಜೆ ೬.೩೦ ಆಗಿತ್ತು. ಜಯಶ್ರೀ ೧೬.೮.೧೮ರಂದು ಬೆಳಗ್ಗೆ ಷಿಕಾಗೋದಿಂದ ಭಾರತಕ್ಕೆ ವಿಮಾನ ಹತ್ತಿದಳು.

  ಲೇಕ್ ವಿಸ್ತಾ ಪಾರ್ಕ್ (Lake vista park, 4001, E lakeside Ave, Oak Creek, WI 53154 USA)
 ಸಂಜೆ ಆಲೂ ಚಾಪ್ ಚೋಲೆ ಮೈಸೂರುಪಾಕ್ ಮಾಡಿದಳು ಅಕ್ಷರಿ. ಅದನ್ನು ತಿಂದು ನಾವು ಲೇಕ್ ವಿಸ್ತಾ ಪಾರ್ಕ್ ನೋಡಲು ಹೋದೆವು. ಅಲ್ಲಿ ಒಂದಷ್ಟು ನಡೆದು, ಆರಾಮವಾಗಿ ಕೂತು ಹರಟುತ್ತ, ಮಿಷಿಗನ್ ಸರೋವರ ನೋಡುತ್ತ ಕೂತೆವು. ಕತ್ತಲಾವರಿಸಿದಮೇಲೆ ಮನೆಗೆ ಹಿಂತಿರುಗಿದೆವು. ಈ ಪಾರ್ಕಿಗೆ ಎಷ್ಟು ಸಲ ಹೋದರೂ ಬೇಸರವಿಲ್ಲ. ಅಷ್ಟು ಚೆನ್ನಾಗಿದೆ.



  ಅಲ್ಯೂಮಿನಿಯಂ ಪೇಪರಲ್ಲಿ ಕಡುಬು
ತಾರೀಕು ೧೫.೮.೧೮ರಂದು ನಾವು ಜುಕುನಿ ಕಡುಬು ಮಾಡಿದೆವು. ಜುಕುನಿ ನೋಡಲು ನಮ್ಮಲ್ಲಿಯ ಸೌತೆಕಾಯಿಯಂತೆ ಇದೆ. ಜಯಶ್ರೀ ಬರುವಾಗ ಅವಳ ಹಿತ್ತಲಲ್ಲಿ ಬೆಳೆದ ಜುಕುನಿಯನ್ನು ತಂದಿದ್ದಳು.  ಬಾಳೆ ಎಲೆಯ ಬದಲು ಅಲ್ಯೂಮಿನಿಯಂ ಫಾಯಲಲ್ಲಿ ಕಡುಬು ಮಾಡಲಾಗುತ್ತದೆ ಎಂದು ಜಯಶ್ರೀ ತೋರಿಸಿಕೊಟ್ಟಳು. ಬಾಳೆಲೆಯ ಘಮ ಇಲ್ಲದಿದ್ದರೂ ಕಡುಬು ಬಹಳ ರುಚಿಯಾಗಿತ್ತು.

ಗುಡ್ ವಿಲ್ ಎಂಬ ಅಂಗಡಿ
೧೬.೮.೧೮ರಂದು ಸಂಜೆ ನಾವು ಗುಡ್ ವಿಲ್ ಎಂಬ ಅಂಗಡಿಗೆ ಹೊದೆವು. ಯಾರ್ಯಾರೋ ದಾನ ನೀಡಿದ ವಸ್ತುಗಳನ್ನು ಅಲ್ಲಿ ಮಾರಾಟಕ್ಕೆ ಇಟ್ಟಿರುತ್ತಾರೆ. ಅಲ್ಲಿ ವಸ್ತುಗಳನ್ನು ಮಾರಿ ಬಂದ ಹಣವನ್ನು ದಾನ ನೀಡುತ್ತಾರಂತೆ. ನಮಗೆ ಬೇಡದ ಸುಸ್ಥಿತಿಯಲ್ಲಿರುವ ವಸ್ತುಗಳನ್ನು ಅಲ್ಲಿಗೆ ಕೊಡಬಹುದು. ಹಳೆಯ ಬಟ್ಟೆಗಳಿಂದ ಹಿಡಿದು, ಪಾತ್ರೆ, ಪೀಠೋಪಕರಣ, ಮಕ್ಕಳ ಆಟಿಕೆಗಳು ಹೀಗೆ ಅಲ್ಲಿ ವೈವಿಧ್ಯ ಸರಕುಗಳಿದ್ದುವು. ನಿಜಕ್ಕೂ ಒಳ್ಳೆಯ ಕೆಲಸವದು. ಭಾರತೀಯರು ಅಮೇರಿಕಾ ಬಿಟ್ಟು ಸ್ವದೇಶಕ್ಕೆ ಹಿಂದಿರುಗುವಾಗ ಮನೆಯಲ್ಲಿದ್ದ ವಸ್ತುಗಳೆಲ್ಲವನ್ನೂ ವಾಪಾಸು ತರಲಾಗುವುದಿಲ್ಲ. ಅವುಗಳನ್ನು ಕೆಲವರು ರಸ್ತೆ ಬದಿ, ಕಸದ ಡಬ್ಬಗಳ ಬದಿ ಎಸೆಯುತ್ತಾರೆ. ಅದರ ಬದಲು ಗುಡ್ ವಿಲ್ ಅಂಗಡಿಗಳಿಗೆ ಕೊಟ್ಟರೆ ಬಹಳ ಒಳ್ಳೆಯದು. ಟ್ಯಾಂಗಲ್ ವುಡ್ ವಠಾರದ ಕಸದ ತೊಟ್ಟಿ ಬಳಿ ಟೇಬಲ್, ಹಾಸಿಗೆ, ಇತ್ಯಾದಿ ಒಳ್ಳೊಳ್ಳೆಯ ವಸ್ತುಗಳನ್ನು ಬೀಸಾಕಿದ್ದನ್ನು ನಾನು ನೋಡಿದ್ದೇನೆ.



ಪೋರ್ಮಿಂಗ್ ಪಾರ್ಕ್
ಅಕ್ಷರಿ ಅಲ್ಲಿಯ ವಾಯುವಿಹಾರ ನಡೆಸುವ ದಾರಿ ಹಾಗೂ ಸುಮಾರು ಉದ್ಯಾನವನಗಳಿಗೆ ಎದುರು ಮನೆ ಸ್ಯಾಂಡಿ ಜೊತೆ ಹೋಗಿದ್ದಳು. ಹಾಗಾಗಿ ಅವಳಿಗೆ ಎಲ್ಲ ಕಾಲುದಾರಿಗಳ ಪರಿಚಯವಿತ್ತು.  ಅಲ್ಲಿ ನಾನಿದ್ದಷ್ಟು ದಿನವೂ ಸಮಯವಾದಾಗಲೆಲ್ಲ ಒಂದೊಂದು ಕಡೆಗೆ ನನ್ನನ್ನು ವಾಯುವಿಹಾರಕ್ಕೆ ಕರೆದುಕೊಂಡು ಹೋಗಿದ್ದಳು. ೧೭.೮.೧೮ರಂದು ಪೋರ್ಮಿಂಗ್ ಪಾರ್ಕಿಗೆ ನಡೆಯುವ ಎಂದಳು. ನಾವು ಸುಮಾರು ೭ ಕಿಮೀ ನಡೆದು ಆ ಪಾರ್ಕಿಗೆ ಹೋದೆವು. ಅಲ್ಲಿ ಕಾಡೊಳಗೆ ನಡೆಯಲು ಕಾಲುದಾರಿ ಚೆನ್ನಾಗಿದ್ದುವು. ವಾಪಾಸ್ ಬರಲು ಮಹೇಶ ಕಾರು ತಂದಿದ್ದ. ಮನೆಯೊಳಗೆ ಪ್ರವೇಶಿಸುವಾಗ ಮೂಗಿನ ಹೊಳ್ಳೆಗಳು ಅರಳಿದುವು. ಏನೆಂದು ಅಡುಗೆ ಕೋಣೆಗೆ ಹೋಗಿ ನೋಡಿದಾಗ ಗೋಭಿ ಮಂಚೂರಿ ಮಾಡಿಟ್ಟಿದ್ದ! ನಮಗಿಬ್ಬರಿಗೂ ಇಷ್ಟದ ತಿಂಡಿ. ಆಹಾ ರುಚಿಯಾಗಿದೆ ಎಂದು ಅಮ್ಮನೂ ಮಗಳೂ ಕೈ ಬಾಯಿಗೆ ಕೆಲಸ ಕೊಟ್ಟೆವು!

ಫಾರ್ಮರ್ ಮಾರ್ಕೆಟ್ 
ನಾವು ೧೮-೮-೨೦೧೮ರಂದು ಬೆಳಗ್ಗೆ ೧೦ ಗಂಟೆಗೆ ಹೊರಟು ಓಕ್ ಕ್ರೀಕಿನ ಫಾರ್ಮರ್ ಮಾರ್ಕೆಟಿಗೆ ಹೋದೆವು. ಅಲ್ಲಿ ಸ್ಥಳೀಯವಾಗಿ ತಾವೇ ಬೆಳೆದ ಹಣ್ಣು ತರಕಾರಿಗಳನ್ನು ರೈತರು ನೇರ ಮಾರಾಟ ಮಾಡುತ್ತಾರೆ. ಪ್ರತೀ ಶನಿವಾರ ಬೆಳಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆವರೆಗೆ. ಆಹಾರಪ್ರಿಯರಿಗಾಗಿ ತಿಂಡಿತಿನಿಸುಗಳೂ ಲಭ್ಯ. ನಾವು ಕೆಲವು ತರಕಾರಿ ಕೊಂಡು ಹೊರಟೆವು.

 ಹಂಬೋಲ್ಟ್ ಪಾರ್ಕ್ (Humboldt park 3000 s Howell Ave, Milwaukee WI53207)
  ನಾವು ಹಂಬೋಲ್ಟ್ ಪಾರ್ಕಿಗೆ ತಲಪುವಾಗ ೧೦.೩೦ ಗಂಟೆಯಾಗಿತ್ತು. ಅಲ್ಲಿಯ ವಿಶಾಲವಾದ ಉದ್ಯಾನವನದಲ್ಲಿ ಆ ದಿನ ಸ್ವಾತಂತ್ರ್ಯ ದಿನಾಚರಣೆ ಬಾಬ್ತು ಇಂಡಿಯಾ ಫೆಸ್ಟ್ ಮಿಲ್ವಾಕಿ ಉತ್ಸವ.  ಪ್ರತೀ ವರ್ಷ ಈ ಉತ್ಸವ ನಡೆಸುತ್ತಾರಂತೆ. ಇದು ೬ನೆಯ ವರ್ಷದ ಕಾರ್ಯಕ್ರಮವಂತೆ. ಮಿಲ್ವಾಕಿಯಲ್ಲಿ ನೆಲೆಸಿರುವ ಭಾರತೀಯರೆಲ್ಲ ಒಟ್ಟು ಸೇರಿ ನಡೆಸುವ ಹಬ್ಬವಿದು. ಮೊದಲಿಗೆ ಭಾರತದ ತ್ರಿವರ್ಣ ಧ್ವಜ ಹಿಡಿದು ಸ್ವಲ್ಪ ದೂರ ಮೆರವಣಿಗೆ ನಡೆಯಿತು. ನಾವೂ ಭಾಗಿಯಾದೆವು. ಅಮೇರಿಕಾ ನೆಲದಲ್ಲಿ ಭಾರತದ ಧ್ವಜ ಹಿಡಿದು ನಡೆದದ್ದು ಖುಷಿಯಾಯಿತು. ತದನಂತರ ಮಿಲ್ವಾಕಿಯ ಪ್ರಜೆಯಿಂದ ಧ್ವಜಾರೋಹಣ. ನಮ್ಮ ರಾಷ್ಟ್ರಗೀತೆ. ಅನಂತರ ಅಮೇರಿಕಾ ಧ್ವಜಾರೋಹಣ ಅವರ ರಾಷ್ಟ್ರಗೀತೆ. ಅನಂತರ ಮಕ್ಕಳಿಂದ ವಿವಿಧ ನೃತ್ಯಗಳು ನಡೆದುವು. ಕಾರ್ಯಕ್ರಮ ನೋಡಲು ಸ್ಥಳೀಯರು ಕೆಲವರು ಬಂದಿದ್ದರು. ಅಲ್ಲಿ ಒಂದು ಗಂಟೆ ಕುಳಿತು ಸಾಂಸ್ಕೃತಿಕ ಹಬ್ಬ ನೋಡಿದೆವು. ಹಬ್ಬ ಅಂದಮೇಲೆ ತಿಂಡಿ ತಿನಿಸಿನ ಅಂಗಡಿಗಳೂ ಸಾಕಷ್ಟು ಇದ್ದುವು. ಅಲ್ಲಿ ವಡಾಪಾವ್ ತಿಂದು ಅಲ್ಲಿಂದ ನಿರ್ಗಮಿಸಿ ಮಿಲ್ವಾಕಿಯಲ್ಲಿರುವ ಪಂಜಾಬಿ ಹೊಟೇಲಿಗೆ ಹೋಗಿ ಊಟ ಮಾಡಿದೆವು.
ಈ ಪಾರ್ಕಿಗೆ ಬೆಳಗ್ಗೆ ೬ಗಂಟೆಯಿಂದ ರಾತ್ರೆ ೧೦ರ ವರೆಗೆ ಪ್ರವೇಶ.



 ಸೌತ್ ಶೋರ್ ಪಾರ್ಕ್ (South Shore Park, 2900 S shore, Dr. Milwaukee, WI  53207) 
 ಇಲ್ಲಿ ಮಿಷಿಗನ್ ಲೇಕ್ ಬೀಚ್, ಮಿಲ್ವಾಕಿ ಡೌನ್ ಟೌನ್ ಎಲ್ಲ ಸುತ್ತಾಡಿದೆವು. ಅಲ್ಲಿಂದ ನಾವು ಲೇಕ್ ವಿಸ್ತಾ ಪಾರ್ಕಿಗೆ ಹೋಗಿ ಅಲ್ಲಿ ನಡೆದು, ಮೀಷಿಗನ್ ಸರೋವರ ನೋಡುತ್ತ ಹರಟುತ್ತ ಕಾಲ ಕಳೆದೆವು. ಲೇಕ್ ವಿಸ್ತಾ ಪಾರ್ಕಿಗೆ ನಾವು ಅಲ್ಲಿದ್ದಾಗ ಬಹಳ ಸಲ ಹೋಗಿದ್ದೆವು. ಬಹಳ ಖುಶಿಯಾದ ಸ್ಥಳವದು.
ಈ ಪಾರ್ಕಿಗೆ ಬೆಳಗ್ಗೆ ೬ಗಂಟೆಯಿಂದ ರಾತ್ರೆ ೧೦ರ ವರೆಗೆ ಪ್ರವೇಶ.
ಬರುತ್ತ ಕಾರು ಬಿಟ್ಟು ನೋಡಿ ಎಂದು ಮಹೇಶ ಒತ್ತಾಯಿಸಿದ. ತುಸು ಧೈರ್ಯ ತಂದುಕೊಂಡು ಸ್ವಲ್ಪ ದೂರ ಕಾರು ಚಲಾಯಿಸಿದೆ.


ಮಾಥಿಸನ್ ಸ್ಟೇಟ್ ಪಾರ್ಕ್ (Matthiessen State Park, 2500, IL-178 Oglesby, IL 61348 USA 
 ನಾವು ೧೯-೮-೨೦೧೮ರಂದು ಬೆಳಗ್ಗೆ ೯.೩೦ಗೆ ಓಕ್ ಕ್ರೀಕಿನಿಂದ ಹೊರಟು ೧೬೪ ಮೈಲಿ ದೂರದಲ್ಲಿರುವ ಮ್ಯಾಥಿಸನ್ ಸ್ಟೇಟ್ ಪಾರ್ಕಿಗೆ ೨.೩೦ ಗಂಟೆ ಕಾರಿನಲ್ಲಿ ಪಯಣಿಸಿ ತಲಪಿದೆವು. ಅಲ್ಲಿ ೨೮೮ ಮೆಟ್ಟಲು ಹತ್ತಿ ಮೇಲೆ ಹೋದೆವು. ಕಣಿವೆಗಳು, ಗುಹೆಗಳು, ಕಾಡು, ಸಮೃದ್ಧ ಸಸ್ಯವರ್ಗಗಳು, ಬಂಡೆಗಳ ಸುಂದರ ರಚನೆಗಳನ್ನು ಅಲ್ಲಿಂದ ನೋಡಬಹುದಾಗಿದೆ. ಇದಕ್ಕೆ ಜಿಂಕೆ ಪಾರ್ಕ್ ಎಂದೂ ಹೆಸರಿತ್ತು. ಇಲ್ಲಿ ಜಿಂಕೆಗಳು ಸಮೃದ್ಧಿಯಾಗಿದ್ದುವಂತೆ.




 ಫೆಡ್ರಿಕ್ ವಿಲಿಯಂ ಮ್ಯಾಥಿಸನ್ ಎಂಬ ಉದ್ಯಮಿ ಲಾಸೆಲ್ಲೆಯಲ್ಲಿ ೧೯ನೇ ಶತಮಾನದ ಕೊನೆಗೆ ೧೭೬ ಎಕರೆ ಭೂಮಿಯನ್ನು ಖರೀದಿಸಿ ಕಾಲುದಾರಿ, ಸೇತುವೆ, ಮೆಟ್ಟಲುಗಳ ಸಾಲು, ಅಣೆಕಟ್ಟು ನಿರ್ಮಿಸಲು ೫೦ ಮಂದಿಯನ್ನು ನೇಮಿಸಿದ್ದನು. ಅನೇಕ ವರ್ಷಗಳ ಕಾಲ ಇದು ಖಾಸಗಿ ಉದ್ಯಾನವನವಾಗಿತ್ತು. ೧೯೧೮ರಲ್ಲಿ ಮ್ಯಾಥಿಸನ್ ಕಾಲಾನಂತರ ಈ ಪಾರ್ಕನ್ನು ಇಲಿನಾಯ್ಸ್ ರಾಜ್ಯಕ್ಕೆ ದೇಣಿಗೆ ನೀಡಲಾಯಿತು. ೧೯೪೩ರಲ್ಲಿ ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದರು. ಮುಂದೆ ಈ ಉದ್ಯಾನವನ ೧೯೩೮ ಎಕರೆಗೆ  ವಿಸ್ತಾರಗೊಂಡಿತು. ಇಲ್ಲಿ ಕುದುರೆ ಸವಾರಿ ಹಾದಿಗಳು, ಬೈಕ್ ಸವಾರಿ ರಸ್ತೆ, ಐದು ಮೈಲಿ ನಡಿಗೆಗೆ ದಾರಿ ಎಲ್ಲ ವ್ಯವಸ್ಥಿತವಾಗಿವೆ. ನಾವು ಪಾರ್ಕಿನಲ್ಲಿ ಅಡ್ಡಾಡಿ, ಒಂದೆಡೆ ಕುಳಿತು ಬುತ್ತಿ ತೆರೆದು ಜೀರಾ ರೈಸ್ ತಿಂದು ಅಲ್ಲಿಂದ ಹೊರಟೆವು.

  ಸ್ಟಾರ್‍ವುಡ್ ರಾಕ್ ಸ್ಟೇಟ್ ಪಾರ್ಕ್ (Starved Rock State Park, 2668 E 875th Rd, Oglesby, IL 61348 USA) 
 ಇಲಿನಾಯ್ ರಾಜ್ಯದ ಲಾಸೆಲ್ಲೆ ಕೌಂಟಿಯಲ್ಲಿರುವ ಇಲಿನಾಯ್ಸ್ ನದಿಯ ಬ್ಲಫ್‌ನಲ್ಲಿರುವ ಸ್ಟಾರ್‍ವುಡ್ ರಾಕ್ ಸ್ಟೇಟ್ ಪಾರ್ಕಿಗೆ ಹೋದೆವು. ಇದು ಅತ್ಯಂತ ಸುಂದರ ಉದ್ಯಾನವನವಾಗಿದೆ. ಈ ಉದ್ಯಾನವನದ ೧೮ ಕಣಿವೆಗಳು ಹಿಮನದಿ ಕರಗಿಸುವ ನೀರಿನಿಂದ ರಚಿಸಲ್ಪಟ್ಟ ಪಾಚಿ ಆವೃತವಾದ ಕಲ್ಲಿನ ಲಂಬವಾದ ಗೋಡೆಗಳನ್ನು ಹೊಂದಿದೆ. ಮರಗಳಿಂದ ಕೂಡಿದ ಮರಳುಗಲ್ಲಿನ ಬ್ಲಫ್‌ಗಳಿಂದ ನಾಲ್ಕು ಮೈಲಿವರೆಗೆ ಸ್ಟಾರ್‍ವುಡ್ ರಾಕ್ ಆವರಿಸಿದೆ. ಈ ಉದ್ಯಾನವನ ೨೬೩೦ ಎಕರೆ ಪ್ರದೇಶದಷ್ಟು ವಿಸ್ತೀರ್ಣತೆ ಹೊಂದಿದೆ. ೧೩.೩ ಮೈಲಿಗಳಲ್ಲಿ ಒಟ್ಟು ೧೬ ಕಾಲುದಾರಿಗಳಿವೆ. ೧) ಸೈಂಟ್ ಲೂಯಿಸ್ ಕ್ಯಾನಿಯನ್ ೨) ಸ್ಟಾರ್‍ವುಡ್ ರಾಕ್ ೩) ಫ್ರೆಂಚ್ ಕ್ಯಾನಿಯನ್ ೪) ಲವರ್ಸ್ ಲೀಫ್ ೫)ಈಗಲ್ ಕ್ಲಿಫ್ ೬) ಬೀ ಹೈವ್ ೭) ಓವರ್ ಲುಕ್ ೮) ವೈಲ್ಡ್ ಕ್ಯಾಟ್ ಕ್ಯಾನಿಯನ್ ೯) ಸ್ಯಾಂಡ್ ಸ್ಟೋನ್ ಪಾಯಿಂಟ್ ೧೦) ಟೊಂಟಿ ಕ್ಯಾನಿಯನ್ ೧೧) ಲಾಸಲ್ಲೆ ಕ್ಯಾನಿಯನ್ ೧೨) ಪಾರ್ಕ್ ಮನ್ಸ್ ಪ್ಲೈನ್ ೧೩) ಹೆನ್ನೆ ಪಿನ್ ಕ್ಯಾನಿಯನ್ ೧೪) ಒಟ್ಟಾವ ಕ್ಯಾನಿಯನ್ ೧೫) ಕೌನ್ಸಿಲ್ ಓವರ್ ಹ್ಯಾಂಗ್ ೧೬) ಕಸ್ಕಾಸ್ಕಿಯಾ ಕ್ಯಾನಿಯನ್.
  ಇಷ್ಟು ಕಾಲುದಾರಿಗಳಲ್ಲಿ ನಾವು ಸ್ಟಾರ್‍ವುಡ್ ರಾಕ್, ಫ್ರೆಂಚ್ ಕ್ಯಾನಿಯನ್, ಲವರ್ಸ್ ಲೀಫ್, ಈಗಲ್ ಕ್ಲಿಫ್ ಎಂಬ ನಾಲ್ಕು ದಾರಿಗಳಲ್ಲಿ ಮಾತ್ರ ನಡೆದೆವು.  ಅಲ್ಲಿಂದ ನದಿಯ ಸೊಬಗನ್ನು ಕಣ್ಣುತುಂಬಿಸಿಕೊಂಡೆವು. ಇಲ್ಲಿ ಮನುಷ್ಯರೊಡನೆ ಅವರ ಸಾಕು ನಾಯಿಗಳು ವಿಹಾರ ಬರುತ್ತವೆ. ಮನುಜರಿಗಿಂತ ನಾಯಿಗಳ ಸಂಖ್ಯೆಯೇ ಅಧಿಕವಾಗಿತ್ತು! ನಾಯಿಗಳ ನಡುವೆ ನಮಗೆ ನಡೆಯಲು ಸ್ವಲ್ಪ ತೊಂದರೆಯೇ ಆಗಿತ್ತು.







 ಈ ಎಲ್ಲ ೧೬ ಕಾಲು ದಾರಿಗಳಲ್ಲಿ ನಡೆಯಲು ಒಂದು ಇಡೀ ದಿನ ಬೇಕು. ನಾವು ಅಲ್ಲಿಂದ ೫.೩೦ ಗೆ ಹೊರಟು ೮.೩೦ ಗೆ ಓಕ್ ಕ್ರೀಕ್ ಮನೆ ತಲಪಿದೆವು.

 ಮರೆತೇನಂದ್ರೂ ಮರೆಯಲಾಗದ ಸ್ಮೃತಿ ವರಮಹಾಲಕ್ಷ್ಮೀ ವ್ರತ
  ತಾರೀಕು ೨೪-೮-೨೦೧೮ರಂದು ಬೆಳಗ್ಗೆ ಸಣ್ಣಗೆ ಸೋನೆಮಳೆ ಸುರಿಯುತ್ತಲಿತ್ತು. ಅಕ್ಷರಿ ಮನೆಯ ವಠಾರದಲ್ಲೇ ಇರುವ ಸ್ಮೃತಿ ಕನ್ನಡಿಗರು. ಅವರ ಮನೆಯಲ್ಲಿ ವರಮಹಾಲಕ್ಷ್ಮೀ ವ್ರತದ ಬಾಬ್ತು ನಮ್ಮನ್ನು ಕರೆದಿದ್ದರು. ಗಂಟೆ ಮಧ್ಯಾಹ್ನ ೧೨.೩೦ ಆದಾಗ ನಾನು ಮಗಳಿಗೆ ಹೇಳಿದೆ. ಇನ್ನು ಅವರ ಮನೆಗೆ ಹೋಗುವ. ಊಟಕ್ಕೆ ಆಗುವಾಗ ಹೋದರೆ ಚೆನ್ನಾಗಿರುವುದಿಲ್ಲ ಎಂದು.  ಇಲ್ಲ ಅವರ ಮನೆಯಲ್ಲಿ ಬಹಳ ತಡ ಊಟ. ಇಷ್ಟು ಬೇಗ ಹೋಗುವುದು ಬೇಡ ಎಂದು ಮಗಳು ಹೇಳಿದಳು. ಒಮ್ಮೆ ಹಾಗಾದ್ದಕ್ಕೆ ಇವತ್ತೂ ತಡ ಆಗಬೇಕೇಂದೇನೂ ಇಲ್ಲ ಎಂದು ಅವಸರವಾಗಿ ಮಗಳನ್ನು ಹೊರಡಿಸುವಲ್ಲಿ ಯಶಸ್ವಿಯಾದೆ. ಇರುವ ಒಂದು ಕೊಡೆಯಲ್ಲಿ ನಾವಿಬ್ಬರೂ ತಲೆ ತೂರಿಸಿಕೊಂಡು ನಡೆದೆವು.
ಸ್ಮೃತಿ ಬಾಗಿಲು ತೆರೆದು ಸ್ವಾಗತಿಸಿದರು. ಇನ್ನೂ ಅವರ ಯಾವ ಕೆಲಸವೂ ಆಗಿರಲಿಲ್ಲವಂತೆ. ನಾವು ಒಳಗೆ ಕಾಲಿಟ್ಟದ್ದೇ ಇಷ್ಟು ಬೇಗ ಬಂದಿರಾ ಎಂಬಂತಿತ್ತು ಅವರ ಮುಖಭಾವ! ಒಳಗೆ ಅಡುಗೆ ಮನೆಯಲ್ಲಿ ಅಡುಗೆ ತಯಾರಾಗುತ್ತಿತ್ತು. ನಾವು ಹೋಗಿ ಏನಾದರೂ ಸಹಾಯ ಮಾಡುವ ಅಂದರೆ ಮಡಿಯೋ ಮಡಿ. ಅಲ್ಲಿ ಸೇರಿದ ೮-೧೦ ಮಂದಿ ನಾವು ಸುಮ್ಮನೆ ಪರಸ್ಪರ ಮುಖ ನೋಡುತ್ತ ಕೂತೆವು. ಅಂಥ ಮಡಿವಂತರನ್ನು ಈ ಕಾಲದಲ್ಲಿ ನಾನು ಎಲ್ಲಿಯೂ ನೋಡಿರಲಿಲ್ಲ. ನಮಗೆಲ್ಲ ಕೂರಲು ನೆಲಕ್ಕೆ ಹಾಕಿದ ಬಟ್ಟೆಯನ್ನು ಅವರು ಸೋಕಿಸಿಕೊಳ್ಳುವಂತಿರಲಿಲ್ಲ. ಆ ಸ್ಥಳದಲ್ಲಿದ್ದ ಯಾವುದೋ ವಸ್ತು ತರಲು ಮಗನಿಗೆ ಹೇಳಿದರು! ಅವರ ಇಂಥ ಮಡಿನಿಷ್ಠೆಯನ್ನು ಮೆಚ್ಚಿಕೊಂಡೆ! ಈ ಕಾಲದಲ್ಲೂ ಅದೂ ಅಮೇರಿಕಾ ದೇಶದಲ್ಲಿ ಆಚರಿಸಿಕೊಂಡು ಬರುತ್ತಿದ್ದಾರಲ್ಲ! ಜೈ ಮಡಿ! ನೆರೆಮನೆಯಾಕೆ ಸಂಧ್ಯಾ ತಲೆಸ್ನಾನ ಮಾಡಿ ಬಂದಿದ್ದರು. ಅವರಿಗೆ ಸ್ಮೃತಿಯವರ ಅಡುಗೆ ಕೋಣೆಗೆ ಪ್ರವೇಶ ದೊರೆತಿತ್ತು! ಅವರು ಬಜ್ಜಿ ಕರಿಯಲು ಸಹಕರಿಸಿದರು!  ಅಂತೂ ಪೂಜೆ ಮಂಗಳಾರಾತಿಯಾಗುವಾಗ (ನಮ್ಮ ಹೊಟ್ಟೆಯೊಳಗೂ ಪುಜೆ ಸುರುವಾಗಿತ್ತು) ಗಂಟೆ ೩ ದಾಟಿತ್ತು! ಮಗಳು ಆಗಾಗ ಕೋಪದಿಂದ ದುರುಗುಟ್ಟಿ ನನ್ನ ಮುಖ ನೋಡುತ್ತಿದ್ದಳು! ನಾನು ಅವಳನ್ನು ನೋಡಿಯೂ ನೋಡದಂತೆ ಎತ್ತಲೋ ದೃಷ್ಟಿ ಹಾಯಿಸುತ್ತಿದ್ದೆ! ನಾನು ಹೇಳಲಿಲ್ಲವೆ ಹೀಗೇ ಆಗುತ್ತದೆಂದು ಎಂಬ ಭಾವ ಮಗಳ ಮುಖದಲ್ಲಿ ಗೋಚರಿಸಿತು!

  ಮೊದಲಿಗೆ ಅಲ್ಲಿಗೆ ಬಂದ ಮಕ್ಕಳಿಗೆ ಊಟ ಬಡಿಸಲಾಯಿತು. ತಟ್ಟೆಯಲ್ಲಿ ಊಟ ಇಟ್ಟುಕೊಂಡು ಟಿವಿ ಎದುರು ಕೂತಿದ್ದ ಮಕ್ಕಳ ಗಮನ ಟಿವಿಯೆಡೆಗಲ್ಲದೆ ಊಟದ ತಟ್ಟೆ ಕಡೆ ಹರಿಯಲೇ ಇಲ್ಲ. ಯಾರೋ ಪುಣ್ಯಾತ್ಮರು ಟಿವಿ ನಂದಿಸಿದರು. ಅನಂತರ ಚುರುಕಾಗಿ ತಟ್ಟೆ ಖಾಲಿಯಾಯಿತು! ನಮ್ಮ ಊಟದ ಸರದಿ ಬಂದಾಗ ೩.೩೦ ದಾಟಿತ್ತು! ೨ ಬಗೆ ಸಿಹಿತಿಂಡಿ, ಪಾಯಸ, ಪಲಾವ್, ಅನ್ನ ಸಾರು, ಪಲ್ಯ ಬಜ್ಜಿ ಇಷ್ಟು ಬಗೆಗಳಿದ್ದ ಊಟ ರುಚಿಯಾಗಿತ್ತು. ಕುಂಕುಮ ಪಡೆದು ಅಲ್ಲಿಂದ ಹೊರಡುವಾಗ ಸಂಜೆ ೪ ಗಂಟೆ ಕಳೆದಿತ್ತು!


  ಅಚ್ಚುಕಟ್ಟಾದ ವ್ಯವಸ್ಥೆಯ ಸುಚಿತ್ರಾ ವರಮಹಾಲಕ್ಷ್ಮೀ ವ್ರತ
   ಅದೇ ದಿನ ಸಂಜೆ ಸುಚಿತ್ರಾ ಪ್ರಕಾಶ ದಂಪತಿಗಳು ವರಮಹಾಲಕ್ಷ್ಮೀ ಹಬ್ಬದ ಸಲುವಾಗಿ ಕರೆದಿದ್ದರು. ಅವರ ಮನೆಗೆ ಮಹೇಶ ನಮ್ಮನ್ನು ಕರೆದುಕೊಂಡು ಹೋದ. ಮಹೇಶ ಪ್ರಕಾಶ ಒಂದೇ ಕಂಪೆನಿಯಲ್ಲಿ ಕೆಲಸದಲ್ಲಿದ್ದರು. ಅವರು ಬೆಂಗಳೂರಿಗರು. ಬಹಳ ಜೋರಾದ ಪೂಜೆ ತಯಾರಿ ಆಗಿತ್ತು. ೩೦ ಮಂದಿ ಬಂದಿದ್ದರು. ಊಟಕ್ಕೆ ಮನೆಯ ನೆಲ ಮಹಡಿಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರು. ಬಾದಾಮಿ ಪೂರಿ, ಉದ್ದಿನ ವಡೆ, ದೊಡ್ಡಮೆಣಸು ಭಾತ್, ಅನ್ನ ಸಾರು ಪಲ್ಯ ಇತ್ತು. ಎಲ್ಲವನ್ನೂ ಸುಚಿತ್ರಾ ಅವರೇ ತಯಾರಿಸಿದ್ದರಂತೆ. ಅವರಿಗೆ ತರ ತರಹದ ಅಡುಗೆ ಮಾಡಲು ಬಹಳ ಇಷ್ಟವಂತೆ. ಬಹಳ ಖುಷಿಯಿಂದ ಮಾತಾಡಿಸಿದರು. ನಾವು ಹರಟುತ್ತ ಊಟ ಮಾಡಿ ಮನೆಗೆ ಹಿಂತಿರುಗಿದೆವು.


  ಕೆಟಲ್ ಮೊರೈನ್ ಫಾರೆಸ್ಟ್ ಸದರನ್ ಯೂನಿಟ್ 
 ಕಾಡೊಳಗೆ ಟೆಂಟ್ ಹಾಕಿ ಒಂದು ರಾತ್ರೆ ಕಳೆಯುವ ಅನುಭವ ನನಗೆ ಸಿಗಬೇಕೆಂದು ಅಕ್ಷರಿ ಹೇಳುತ್ತಲೇ ಇದ್ದಳು. ಕೊನೆ ಘಳಿಗೆಯಲ್ಲಿ ಅದೂ ಕೂಡಿ ಬಂತು. ೨೫-೮-೨೦೧೮ರಂದು ಕೆಟಲ್ ಮೊರೈನ್ ಫಾರೆಸ್ಟ್ ಸದರನ್ ಯೂನಿಟ್‌ಗೆ ಹೋಗಿ ಟೆಂಟ್ ಹಾಕಿ ಮಕ್ಕಳೂ ಸೇರಿ ಒಟ್ಟು ೨೦ ಮಂದಿ ಕನ್ನಡಿಗರು ಒಟ್ಟಿಗೆ ಎರಡು ದಿನ ಕಾಲ ಕಳೆಯುವ ಎಂದು ಗುರುಮೂರ್ತಿ ಯೋಜನೆ ಹಾಕಿಕೊಂಡಿದ್ದರು. ಆ ದಿನ ಬೆಳಗ್ಗೆ ೨೫ ಚಪಾತಿ, ಅದಕ್ಕೆ ೨ ಬಗೆಯ ಕೂಟು ಮಾಡಿ ನಾವು ಕಟ್ಟಿಕೊಂಡು, ಟೆಂಟ್ ಸಾಮಾನು ಸರಂಜಾಮು ಒಂದುಗೂಡಿಸಿ ೧೦ ಗಂಟೆಗೆ ನಾವು ಓಕ್ ಕ್ರೀಕಿನಿಂದ ಹೊರಟು ಎರಡು ದಿನದ ಕ್ಯಾಂಪ್‌ಗಾಗಿ ೪೫ ಮೈಲಿ ದೂರದಲ್ಲಿರುವ ಕೆಟಲ್ ಮೊರೈನ್ ಫಾರೆಸ್ಟ್‌ಗೆ ೧೧ ಗಂಟೆಗೆ ಹೋದೆವು.  ಕುದುರೆಯೊಡನೆ ಹೋದರೆ ಮಾತ್ರ ಅಲ್ಲಿ ಕ್ಯಾಂಪ್ ಹಾಕಲು ಅವಕಾಶ ಎಂದು ಅಲ್ಲಿಗೆ ಹೋದಮೇಲೆ ತಿಳಿಯಿತು!
ವಾಪಾಸು ಮನೆಗೆ ಹೋಗುವುದಾ? ಆಂಟಿಗೆ (ನನಗೆ) ನಿರಾಸೆ ಮಾಡುವುದು ಬೇಡ ಬೇರೆ ಜಾಗ ನೋಡೋಣ ಎಂದು ಅಲ್ಲೆ ಅರ್ಧ ಗಂಟೆ ಚರ್ಚೆ ಆಯಿತು. ಗೂಗಲ್ ತಡಕಾಡಿದಾಗ ಅಲ್ಲಿಂದ ೧೫ ಮೈಲಿ ದೂರದಲ್ಲಿ ಕೆಟಲ್ ಮೊರೈನ್ ವೈಟ್ ವಾಟರ್ ಲೂಪ್ ಎಂಬ ಸ್ಥಳದಲ್ಲಿ ಅವಕಾಶವಿದೆ ಎಂದು ಗೊತ್ತಾಯಿತು.

ಕೆಟಲ್ ಮೊರೈನ್ ವೈಟ್ ವಾಟರ್ ಲೂಪ್ (kettle Moraine Whitewater loop, W7796 kettle Moraine DE, whitewater, WI 53190 USA)
  ವೈಟ್ ವಾಟರ್ ಲೂಪ್ ಗೆ ನಾವು ೨೦ ನಿಮಿಷದಲ್ಲಿ ತಲಪಿದೆವು. ಅಲ್ಲಿ ನಮ್ಮ ಒಟ್ಟು ತಂಡಕ್ಕೆ ಟೆಂಟ್ ಹಾಕಲು ಸ್ಥಳವಿಲ್ಲದೆ ನಾಲ್ಕು ಕ್ಯಾಂಪಿಂಗ್ ಸೈಟ್ ಬುಕ್ ಮಾಡಿದರು.  ನಾವು ಒಟ್ಟು  ಮಕ್ಕಳೂ ಸೇರಿ ೨೦ ಮಂದಿ. ಗುರುಮೂರ್ತಿ ಸಂಧ್ಯಾ ದಂಪತಿ (ಕಾಸರಗೋಡಿನವರು), ಅವರ ಮಕ್ಕಳು ಮೇಧಾ, ಮೇಘ. ವಂದನಾ, ಪ್ರಸಾದ್ ದಂಪತಿ, ಅವರ ಮಗಳು ಅನಘ. ಚಂದ್ರು, ಉಮಾ ದಂಪತಿ, ಅವರ ಮಕ್ಕಳು ಅನನ್ಯಾ, ಆರಾಧ್ಯಾ. ನರಸಿಂಹ ಸುಮನಾ ದಂಪತಿ. ಮೊನಿಶ್ ಪಲ್ಲವಿ ದಂಪತಿ. ಮಂಜು ಸ್ನೇಹಾ ದಂಪತಿ. ಮಹೇಶ್ ಅಕ್ಷರಿ ದಂಪತಿ ಹಾಗೂ ನಾನು.

 ಒಂದೊಂದು ಸೈಟಲ್ಲೂ ಎರಡು ಟೆಂಟ್. ನಮ್ಮ ಸೈಟಲ್ಲಿ ಮಾತ್ರ ನಮ್ಮದು ಒಂದೇ ಟೆಂಟ್. ನಮ್ಮ ನಮ್ಮ ಟೆಂಟುಗಳನ್ನು ಕಟ್ಟಿದೆವು. ಅನತಿ ದೂರದಲ್ಲೇ ಪಾಯಿಖಾನೆ ವ್ಯವಸ್ಥೆ ಇತ್ತು. ಸ್ನಾನಕ್ಕೆ ಮಾತ್ರ ಅನುಕೂಲವಿರಲಿಲ್ಲ. ಒಂದು ಕಡೆ ಕುಡಿಯುವ ನೀರು ದೊರೆಯುತ್ತಲಿತ್ತು. ಅಲ್ಲಿಂದ ಬಾಲ್ದಿಯಲ್ಲಿ ನೀರು ತಂದು ಅಡುಗೆ ಪಾತ್ರೆ ತೊಳೆಯಲು ನೀರಿನ ವ್ಯವಸ್ಥೆ ಮಾಡಿಕೊಂಡೆವು. ಒಂದು ಸೈಟ್ ಬಹಳ ದೊಡ್ಡದಿತ್ತು. ಅಲ್ಲಿ ಎರಡು ಟೆಂಟ್ ಹಾಕಿ, ಊಟ, ಅಡುಗೆಗೆ ಶೀಟ್ ಹಾಕಲು ಸ್ಥಳವಿತ್ತು. ಕಟ್ಟಿ ತಂದಿದ್ದ ಚಪಾತಿ, ಪುಳಿಯೋಗರೆ ಎಲ್ಲ ಹಂಚಿಕೊಂಡು ಊಟ ಮಾಡಿದೆವು.


  ಊಟವಾಗಿ ಕೆಲವರು ಯುನೋ ಆಟ ಆಡಿದರು. ಕೆಲವರು ಹರಟೆ ಹೊಡೆಯುತ್ತ ಕಾಲ ಕಳೆದರು. ಮಕ್ಕಳು ಅವರ ಆಟದ ಲೋಕದೊಳಗೆ ಮುಳುಗಿದ್ದರು.








  ವೈಟ್ ವಾಟರ್ ಲೇಕ್ 
 ಅನತಿ ದೂರದಲ್ಲೆ ಇದ್ದ ವೈಟ್ ವಾಟರ್ ಲೇಕಿಗೆ ಹೋದೆವು. ಅಲ್ಲಿ ನೀರಿಗೆ ಇಳಿದು ಮಕ್ಕಳು ದೊಡ್ಡವರು ಎಲ್ಲ ಆಟ ಆಡಿದರು. ಮಕ್ಕಳಿಗಂತೂ ಖುಷಿಯೋ ಖುಷಿ. ದಂಡೆಯಲ್ಲಿ ಕುಳಿತು ನಾನು ಅವರೆಲ್ಲರ ಖುಷಿಯನ್ನು ನೋಡುತ್ತ, ಕ್ಯಾಮರಾದಲ್ಲಿ ಸೆರೆ ಹಿಡಿದೆ. ನೀರಿನಿಂದ ಎದ್ದು ಬರಲು ಯಾರಿಗೂ ಮನಸಿರಲಿಲ್ಲ. ಅಂತೂ ಎಲ್ಲರನ್ನೂ ಹೊರಡಿಸಿ ೫.೧೫ಕ್ಕೆ ಹೊರಟು ಕ್ಯಾಂಪಿಗೆ ಬಂದೆವು.



 ಭರ್ಜರಿ ತಿಂಡಿ
ಒಲೆಯಲ್ಲಿ ಎಣ್ಣೆ ಇಟ್ಟು ನೀರುಳ್ಳಿ ಬಜ್ಜಿ ತಯಾರಿಸಿದರು. ಪಾನಿಪೂರಿ, ಅನಾನಸು, ಕೆಂಡದಲ್ಲಿ ಸುಟ್ಟ ಗೆಣಸು, ಜೋಳ, ಅಸ್ಪರಾಗಸ್ ಎಂಬ ತರಕಾರಿ ಅದನ್ನು ಕೆಂಡದಲ್ಲಿ ಸುಟ್ಟದ್ದು. (ಅದು ಅಷ್ಟು ರುಚಿ ಇರಲಿಲ್ಲ.) ಇಷ್ಟೆಲ್ಲ ತಿಂಡಿ ತಿಂದು ಹರಟುತ್ತ ಮಜವಾಗಿ ಕಾಲ ಕಳೆದೆವು.






 ರಾತ್ರೆ ಭೋಜನ - ಆಟ
ರಾತ್ರೆಗೆ ಆಲೂ ಪರೋಟ, ಬದನೆ ಗೊಜ್ಜು, ಚಪಾತಿ, ಅನ್ನ, ಸಾರು ಊಟ. ದೀಪದ ಬೆಳಕಿನಲ್ಲಿ ರಾತ್ರಿ ಸಿನೆಮಾ ಹೆಸರಿನ ಅಂತ್ಯಾಕ್ಷರಿ ಸುರುವಾಯಿತು. ಅದು ಬಹಳ ಗಮ್ಮತ್ತಿತ್ತು. ೨ ತಂಡದವರೂ ಬಹಳ ಹುಮ್ಮಸ್ಸಿನಿಂದಲೇ ಆಡಿದರು. ನಾವು ಒಂದಿಬ್ಬರು ಯಾವ ತಂಡಕ್ಕೂ ಸೇರದೆ ಎರಡೂ ತಂಡಗಳಿಗೂ ಹೆಸರು ಸೂಚಿಸುತ್ತಿದ್ದೆವು! ಯಾರೂ ಸೋಲಲಿಲ್ಲ. ಗಂಟೆ ೧೧ ಆದ್ದರಿಂದ ಆಟ ನಿಲ್ಲಿಸಿ ಟೆಂಟ್ ಒಳ ಹೊಕ್ಕು ನಿದ್ದೆ.

ಟೆಂಟಿನ ದಿನಚರಿ
೨೬-೮-೨೦೧೮ರಂದು ಬೆಳಗ್ಗೆ ೬.೩೦ಗೆ ಎದ್ದು ಒಂದಷ್ಟು ದೂರ ನಡೆದೆವು. ಅಕ್ಷರಿ ಉಮಾ ಸೇರಿ ತಿಂಡಿಗೆ ದಪ್ಪ ಅವಲಕ್ಕಿ ತಯಾರಿಸಿದರು. ಸ್ನೇಹ ಮಂಜು ಮೈಕೈ ನೋವೆಂದು (ಹಿಂದಿನ ದಿನ ನೀರಿನಲ್ಲಿ ಆಟ ಜಾಸ್ತಿಯಾಗಿ) ತಿಂಡಿ ತಿಂದು ತೆರಳಿದರು. ನಾವು ತಿಂಡಿ ಮುಗಿಸಿ ಅಲ್ಲಿಂದ ೧೫ ನಿಮಿಷ ದಾರಿಯಲ್ಲಿ ಕೆಟೆಲ್ ಮೊರೈನ್ ಸೌತ್ ಹಾರ್ಸ್ ಕ್ಯಾಂಪ್ ಗೆ ಹೋದೆವು. ಅಲ್ಲಿ ಸ್ನಾನಾದಿ ಮುಗಿಸಿದೆವು.
ಕುದುರೆಯೊಂದಿಗೆ ಕ್ಯಾಂಪಿಗೆ ಬಂದಿದ್ದ ಒಂದಿಬ್ಬರು ಅಮೇರಿಕನ್ ಮಹಿಳೆಯರೊಂದಿಗೆ ಮಾತಾಡಿದೆವು. ಅವರ ಕುದುರೆ ನೋಡಿದೆವು. ಅವರೂ ತುಂಬ ಖುಷಿ ಪಟ್ಟರು. ಮಕಳನ್ನು ತಮ್ಮ ಕುದುರೆ ಮೇಲೆ ಕೂರಿಸಿ ಸವಾರಿ ನಡೆಸಿದರು. ಮಕ್ಕಳಿಗೆ ಖುಷಿಯೋ ಖುಷಿ.


 ಅಲ್ಲಿಂದ ನಾವು ಟೆಂಟ್ ಕ್ಯಾಂಪಿಗೆ ಬಂದೆವು. ಟೆಂಟ್ ಹಾಕಿದ ಸ್ಥಳದ ಸುತ್ತ ಹತ್ತಾರು ಮರಗಳು ಮಧ್ಯ ಖಾಲಿ ಜಾಗ ಪ್ರಶಾಂತವಾಗಿ ಬಹಳ ಚೆನ್ನಾಗಿತ್ತು. ಟೆಂಟ್ ಬಿಚ್ಚಿ ಕಾರಿಗೆ ತುಂಬಿದೆವು.

 ಮಧ್ಯಾಹ್ನ ಊಟದ ತಯಾರಿ
ಬರುವಾಗಲೇ ದೋಸೆ ಹಿಟ್ಟು ತಂದಿದ್ದರು. ಗುರುಮೂರ್ತಿ ದೋಸೆ ಹೊಯ್ಯಲು ಕೂತರು. ಪ್ರೋಸನ್ ಪರೋಟ ಬೇಯಿಸಿ, ಅನ್ನ ಸಾಂಬಾರು ತಯಾರಿಸಿ ಭರ್ಜರಿ ಊಟ ಹೊಟ್ಟೆ ಸೇರಿತು. ಊಟವಾಗಿ ಅಲ್ಲೇ ಚಾರಣ ಹೋಗಬೇಕೆಂದು ಕೆಲವರಿಗೆ (ನನಗೂ) ಮನಸ್ಸಿತ್ತು. ಆದರೆ ಬಿಸಿಲು ಬಹಳ ಜೋರಾಗಿದೆ ಎಂದು ಕೆಲವರು ತೀರ್ಮಾನಿಸಿ ಹೋಗುವುದು ಬೇಡವೆಂದು ಒಮ್ಮತದ ತೀರ್ಮಾನವಾಯಿತು. ಅಡುಗೆ ಮಾಡಲು ಹಾಕಿದ್ದ ಶೀಟ್ ಬಿಚ್ಚಿ ಸಾಮಾನು ಜೋಡಿಸಿ ಕಾರಿಗೆ ತುಂಬಿದೆವು. ಅಲ್ಲಿಯ ಸ್ಥಳವನ್ನು ಚೊಕ್ಕ ಮಾಡಿದೆವು. ಗುರುಮೂರ್ತಿ ಸಂಧ್ಯಾ ದಂಪತಿ ಈ ಕ್ಯಾಂಪ್ ಯಶಸ್ವಿಗೊಳಿಸಲು ಬಹಳ ಕೆಲಸ ಮಾಡಿದ್ದರು. ಒಂದೂವರೆ ದಿನ ಕನ್ನಡಿಗರೆಲ್ಲರೂ ಒಟ್ಟು ಸೇರಿ ಬಹಳ ಸಂತೋಷವಾಗಿ ಕಾಲ ಕಳೆದದ್ದು ಬಹಳ ಖುಷಿ ಕೊಟ್ಟಿತು. ೨ ಗಂಟೆಗೆ ಒಬ್ಬರಿಗೊಬ್ಬರು ಬೀಳ್ಕೊಟ್ಟು ಅಲ್ಲಿಂದ ಹೊರಟು ೩ ಗಂಟೆಗೆ ಓಕ್ ಕ್ರೀಕ್ ಮನೆ ತಲಪಿದೆವು. ಕ್ಯಾಂಪಿನ ಅನುಭವ ನನಗೆ ಒದಗಿಸಿದ ಗುರುಮೂರ್ತಿ ದಂಪತಿಗೆ ಧನ್ಯವಾದ.

ಹೊರಡುವ ಸಂಭ್ರಮ
೨೭-೮-೨೦೧೮ರಂದು ಸೂಟ್ಕೇಸಿಗೆ ಬಟ್ಟೆ ತುಂಬಿಸಿಟ್ಟೆ. ಗುರುಮೂರ್ತಿ ಸಂಧ್ಯಾ ಮಕ್ಕಳು ಬಂದು ನನಗೆ ಸಿಹಿಕೊಟ್ಟು ಶುಭ ವಿದಾಯ ಕೋರಿ ಹೋದರು. ಸ್ಯಾಂಡಿ ಮನೆಗೆ ಬಂದು ಚಾಕಲೆಟ್ ಕೊಟ್ಟು ವಿದಾಯ ಹೇಳಿದರು. ಹಜೀರ ಬಂದು ರಸಗುಲ್ಲ ಕೊಟ್ಟು ಪಯಣಕ್ಕೆ ಶುಭ ಕೋರಿ ಹೋದರು. ಇವರೆಲ್ಲರ ಪ್ರೀತಿಗೆ ನಮೋನಮಃ. ಸಂಜೆ ಲೇಕ್‌ವಿಸ್ತಾ ಪಾರ್ಕಿಗೆ ಹೋಗಿ ಅಲ್ಲಿ ಅಡ್ಡಾಡಿ ಪಾರ್ಕಿಗೆ ನಾನು ವಿದಾಯ ಹೇಳಿದೆ!


  ತಾಯಿನಾಡಿಗೆ ಪಯಣ
ತಾರೀಕು ೨೮-೮-೧೮ರಂದು ಬೆಳಗ್ಗೆ ಮಹೇಶ ಉಪ್ಪಿಟ್ಟು ತಯಾರಿಸಿದ. ಅದನ್ನು ತಿಂದು (ಬಹಳ ರುಚಿಯಾಗಿತ್ತು.) ಅಕ್ಷರಿ ವಾಂಗಿಭಾತ್ ಮಾಡಿದ್ದನ್ನು ಬುತ್ತಿಗೆ ತುಂಬಿ ಓಕ್ ಕ್ರೀಕ್‌ಗೆ ವಿದಾಯ ಹೇಳಿ ೯ ಗಂಟೆಗೆ ಹೊರಟೆವು. ೧೦.೩೦ಗೆ ಶಿಕಾಗೋದ ಒಹಾರೆ ವಿಮಾನ ನಿಲ್ದಾಣ ತಲಪಿ, ಅಲ್ಲಿ ಬ್ಯಾಗ್ ತಪಾಸಣೆ ಮುಗಿದ ಬಳಿಕ ಅಕ್ಷರಿ ಮಹೇಶರಿಗೆ ವಿದಾಯ ಹೇಳಿ ನಾನು ಒಳಗೆ ಹೊರಟೆ. ಗೇಟ್ ಎಂ. ನಾಲ್ಕರಲ್ಲಿ ಕಾದು ಕುಳಿತೆ. ಆಗ ಅಲ್ಲಿ ಯಲ್ಲಾಪುರದ ನಾರಾಯಣ ಪಾರ್ವತಿ ದಂಪತಿ ಪರಿಚಯವಾಯಿತು. ಅವರ ಮಗಳು ಶಿಕಾಗೋದಲ್ಲಿ ೧೨ ವರ್ಷಗಳಿಂದ ಇದ್ದಾರಂತೆ. ೧೨.೧೫ಕ್ಕೆ ವಿಮಾನ ಏರಿದೆ. ರುಚಿಯಾದ ವಾಂಗಿಬಾತ್ ತಿಂದೆ. ೧.೧೦ಕ್ಕೆ ಹೊರಡಬೇಕಿದ್ದ ವಿಮಾನ ತಡವಾಗಿ ೨ ಗಂಟೆಗೆ ಹಾರಿತು. ನನ್ನ ಪಕ್ಕ ಯಾರೂ ಇಲ್ಲದೆ ಇದ್ದದ್ದರಿಂದ ಆರಾಮವಾಗಿ ಕೂತೆ. ೩ ಗಂಟೆಗೆ ಊಟ ಕೊಟ್ಟರು. ಊಟ ಬೇಡವೆಂದೆ. ವಿರಾಮದಲ್ಲಿ ಕೂತು ಗುಲ್ಟು ಕನ್ನಡ ಸಿನೆಮಾ, ಓಂ ಶಾಂತಿ ಓಂ, ಚೆಫ್ ಸಿನೆಮಾ ನೋಡಿದೆ. ನಿರಂತರ ೧೪ ಗಂಟೆ ಪಯಣದಲ್ಲಿ ಸ್ವಲ್ಪ ನಿದ್ದೆ, ಎಚ್ಚರ, ಮಂಪರು ಸ್ಥಿತಿಯಲ್ಲಿ ಕಾಲ ಕಳೆಯಿತು.

   ಅಬುದಾಬಿ
೨೯-೮-೧೮ರಂದು ಮಧ್ಯಾಹ್ನ ೧೨ ಗಂಟೆಗೆ ಅಬುದಾಬಿ ವಿಮಾನ ನಿಲ್ದಾಣದಲ್ಲಿ ವಿಮಾನವಿಳಿದು ಇನ್ನೊಂದು ವಿಮಾನ ಏರಲು ಸೆಕ್ಯೂರಿಟಿ ತಪಾಸಣೆಯಾಗಿ ಗೇಟ್ ೫ಕ್ಕೆ ಬರಲು ಸುಮಾರು ದೂರ ನಡೆಯಬೇಕು. ಅಲ್ಲಿ ೨ ಗಂಟೆ ಕಾಲ ಕಳೆದು ೨.೩೦ಕ್ಕೆ ವಿಮಾನ ಹತ್ತಿದೆ. ೩.೩೦ಕ್ಕೆ ಹೊರಟಿತು ವಿಮಾನ. ಊಟ ಬೇಡವೆನಿಸಿತು. ಬ್ರೆಡ್ ಸಲಾಡ್ ತಿಂದೆ. ರಾತ್ರೆ ೮ ಗಂಟೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನವಿಳಿದು ಹೊರಬಂದಾಗ ನಮ್ಮ ನೆಲಕ್ಕೆ ಕಾಲಿಟ್ಟದ್ದು ಬಹಳ ಖುಷಿಯೆನಿಸಿತು. ೮.೩೦ಗೆ ಸೂಟ್ಕೇಸ್ ಪಡೆದು ಹೊರಬಂದಾಗ ಮೈಸೂರಿನ ರವಿಕುಮಾರ್ ಕಂಡರು. ಸಿದ್ದಮ್ಮನ ಮೊಮ್ಮಗ ಮನೋಜನೂ ಇದ್ದ. ಕಾರೇರಿ ೮.೪೫ಕ್ಕೆ ಹೊರಟು ಮೈಸೂರು ಮನೆ ತಲಪಿದಾಗ ಮಧ್ಯರಾತ್ರೆ ೧೨ ಗಂಟೆ ಆಗಿತ್ತು. ಅಲ್ಲಿಗೆ ೩ ತಿಂಗಳ ಅಮೇರಿಕಾ ಪ್ರವಾಸಕ್ಕೆ ತೆರೆಬಿತ್ತು.
  ಉಪಕಾರ ಸ್ಮರಣೆ

 ನಮ್ಮ ಅಮೇರಿಕಾ ಪ್ರವಾಸದಲ್ಲಿ ಸುಮಾರು ಊರುಗಳಿಗೆ ಕರೆದುಕೊಂಡು ಹೋಗಲು ಪೂರ್ವತಯಾರಿಯನ್ನು ಅಕ್ಷರಿ ಮಹೇಶ ಗೂಗಲ್ ಹೊಕ್ಕು ಅದರಲ್ಲಿ ಜಾಲಾಡಿ ಪ್ರತಿಯೊಂದು ಊರು, ಅಲ್ಲಿ ಉಳಿಯಲು ಹೊಟೇಲ್ ಹುಡುಕಿ ಸುಮಾರು ಕೆಲಸ ಮಾಡಿದ್ದರು. ಅಲ್ಲೆಲ್ಲ ಹೋದಾಗ ನಮ್ಮ ಹೊಟ್ಟೆ ಬಗ್ಗೆಯೂ ಮುಖ್ಯವಾಗಿ ಗಮನಹರಿಸಬೇಕಿತ್ತು. ನಮಗೆ ಒಗ್ಗುವ ಆಹಾರ ಅಲ್ಲಿ ಬೇಕೆಂದಾಗ ಸಿಗುವುದಿಲ್ಲ. ಅದಕ್ಕಾಗಿ ಆಹಾರ ಸರಂಜಾಮು ಜೋಡಿಸಿಕೊಂಡೇ ಹೊರಡಬೇಕಿತ್ತು. ಹೀಗೆ ಒಂದೂರಿಗೆ ಹೊರಡಬೇಕೆಂದರೆ ಅದರ ಪೂರ್ವ ತಯಾರಿ ಜೋರಾಗಿತ್ತು. ಅವೆಲ್ಲವನ್ನೂ ಅಕ್ಷರಿ ನಿಭಾಯಿಸಿದ್ದಳು.  ನಮ್ಮ ಭಾರತದಲ್ಲಾದರೆ ಒಳ್ಳೆಯ ಹೊಟೇಲ್ ಹಾಗೂ ಅಲ್ಲಿ ಸಸ್ಯಾಹಾರ ರುಚಿಯಾದ ಆಹಾರ ಸಿಗುತ್ತದೆ. ಮಹೇಶ ಅವನ ಕಛೇರಿ ಕೆಲಸಗಳ ಮಧ್ಯೆ ರಜೆ ಹೊಂದಾಣಿಕೆ ಮಾಡಿ ದಿನಗಟ್ಟಲೆ ರಜಾ ಹಾಕಿ ದಿನಕ್ಕೆ ಸಾವಿರಾರು ಮೈಲಿ ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಓಡಿಸುವ ಜವಾಬ್ದಾರಿ ಬಲು ದೊಡ್ಡದು. ಅದನ್ನು ಯಶಸ್ವಿಗೊಳಿಸಿದ್ದ. ಆನಂದಭಾವ ಜಯಶ್ರೀ ನಮ್ಮನ್ನು ಪೋರ್ಟ್‌ಲ್ಯಾಂಡಿಗೆ ಅವರದೇ ಖರ್ಚಿನಲ್ಲಿ ಕರೆಸಿಕೊಂಡು ಅಲ್ಲಿಂದ  ಕಾರಿನಲ್ಲಿ ಸಾವಿರಾರು ಮೈಲಿ ಸುತ್ತಾಡಿಸಿ ಸುಮಾರು ಊರುಗಳಿಗೆ ಕರೆದುಕೊಂಡು ಹೋಗಿದ್ದರು. ಇವರಿಗೆಲ್ಲ ನಮೋನಮಃ. 
 ಅಮೇರಿಕಾ ಪ್ರವಾಸವನ್ನು ವ್ಯವಸ್ಥಿತವಾಗಿ ಯಶಸ್ವಿಗೊಳಿಸಿದ ಅಕ್ಷರಿ, ಮಹೇಶ, ಆನಂದಭಾವ, ಜಯಶ್ರೀ, ಅನರ್ಘ್ಯ, ಐಶ್ವರ್ಯ ಇವರಿಗೆಲ್ಲ ಧನ್ಯವಾದ.
ಮೂರು ತಿಂಗಳು ಮೈಸೂರು ಮನೆಯ ಚಿಂತೆ ನಮಗೆ ಭಾದಿಸದಂತೆ ಸಿದ್ದಮ್ಮ ಅವಳ ಮಗ ರವಿ  ಅಚ್ಚುಕಟ್ಟಾಗಿ ನೋಡಿಕೊಂಡಿದ್ದರು. ಅವರಿಗೂ ವಂದನೆ.
ಅಮೆರಿಕಾದಾಲ್ಲಿ ನನಗೆ ಇಷ್ಟವಾದ ಸಂಗತಿಗಳು
೧) ವಿವಿಧ ಬಗೆಯ ಹಣ್ಣುಗಳು. ನಾನು ಪಟ್ಟಿ ಮಾಡಿದವುಗಳು ಇಂತಿವೆ: ಇವುಗಳಲ್ಲಿ ೫-೬ ನಮೂನೆಯ ಹಣ್ಣುಗಳನ್ನು ತಿಂದಿರುವೆ. ಚೆರ್ರಿ ನನಗೆ ಬಹಳ ಇಷ್ಟವಾಗಿತ್ತು. ಚೆರ್ರಿಯಲ್ಲೇ ಮೂರು ನಾಲ್ಕು ಬಗೆಯವು ಇವೆ. ಅವುಗಳಲ್ಲಿ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸ ಇತ್ತು.  1) (cherry) 2) (strawbury) 3) (peach)4) (Nectarine) 5) (Apricot) 6) (plum) 7) (raspberry) 8) (blackberry) 9) (blueberry)10) (Boysenberry) 11) (Marion berry)12) (Huckleberry)
೨) ಅಲ್ಲಿಯ ಉದ್ಯಾನವನಗಳು, ನಡೆಯುವ ಕಾಲು ದಾರಿಗಳು
೩) ಅಲ್ಲಿಯ ರಸ್ತೆಗಳು
೪) ನದಿಗಳು, ಸರೋವರಗಳು. ಅದರಲ್ಲು ಮಿಷಿಗನ್ ಲೇಕ್ ಬಹಳ ಖುಷಿಯಾಗಿತ್ತು
೫) ವಾರಾಂತ್ಯದಲ್ಲಿ ಅಲ್ಲಿಯ ಮಂದಿ ಕಳೆಯುವ ಸಂತಸದ ಕ್ಷಣಗಳ ನೋಟ.
೬) ಮನೆಯಲ್ಲಿ ಧೂಳು, ಜಿರಳೆ, ಸೊಳ್ಳೆಗಳು ಇಲ್ಲದಿರುವುದು
೭) ಕೃಷಿ ಭೂಮಿಗಳು, ವಿಸ್ತಾರವಾದ ಹೊಲಗದ್ದೆಗಳು, ಹೊಲಕ್ಕೆ ಹೋಗಲು ಪ್ರತ್ಯೇಕ ರಸ್ತೆ
೮) ಕಾಡುಗಳು
೯) ಮನೆಯ ವಠಾರ, ಅಲ್ಲಿಯ ಮನೆಗಳ ಶೈಲಿ ಇತ್ಯಾದಿ.
೧೦) ಹೈವೇ ದಾರಿಯಲ್ಲಿ ಅಲ್ಲಲ್ಲಿ ರೆಸ್ಟ್ ಹೌಸ್
೨೭-೧೨-೨೦೧೯ರಲ್ಲಿ ಈ ಕಥನವನ್ನು ಕೈಲಿ ಬರೆದು ಮುಗಿಸಿದ್ದೆ. ಗಣಕಕ್ಕೆ ಪೂರ್ತಿ ಹಾಕಲು ಸಾಧ್ಯವಾಗಿದ್ದು ೨೦-೨-೨೦೨೦ರಂದು. ಅಂತೂ ಕೊನೆಗೂ ಅಮೇರಿಕಾ ಪ್ರವಾಸ ಕಥನ ಗಜಗರ್ಭದಿಂದ ಹೊರಬಂದಿತು!  
                                                                    ಸಮಾಪ್ತಿ