ಶುಕ್ರವಾರ, ಏಪ್ರಿಲ್ 16, 2021

ಮೈಸೂರುನಗರದ ಲೇಖಕಿಯರ ಪರಿಚಯ ಭಾಗ ೧

ಟಿಪ್ಪಣಿ

     ಮೈಸೂರಿನಲ್ಲಿ ವಾಸವಾಗಿರುವ  ಲೇಖಕಿಯರ ಸ್ಠೂಲ ಪರಿಚಯವನ್ನು  ಬಿ. ಆರ್. ನಾಗರತ್ನ ಹಾಗೂ ಸಿ.ಎನ್. ಮುಕ್ತಾ ಇಲ್ಲಿ ಪೋಣಿಸಿ   ಕೊಟ್ಟಿದ್ದಾರೆ.  ಇದೇನೂ ಪರಿಪೂರ್ಣವಲ್ಲ. ಲೇಖಕಿಯರ ಸಂಖ್ಯೆ ದಿನೇ ದಿನೇ ಹೆಚ್ಚಬಹುದು, ಕೆಲವರ ಹೆಸರು ಬಿಟ್ಟು ಹೋಗಿರಲೂ ಬಹುದು. ಅವರ ಗಮನಕ್ಕೆ ಬಂದದ್ದಷ್ಟನ್ನು ಕ್ರೋಢೀಕರಿಸಿದ್ದಾರೆ. ಅವರ ಈ ಕೆಲಸ ಸ್ತುತ್ಯರ್ಹವಾದುದು. ಒಟ್ಟು ನಾಲ್ಕು ಭಾಗಗಳಲ್ಲಿ ವಿಂಗಡಿಸಿ  ಬರೆದಿರುವರು. ಅವನ್ನಿಲ್ಲಿ  ಹಾಕಲು ನನಗೆ ಸಂತೋಷವೆನಿಸಿದೆ.  ನಿಮಗೆ ಗೊತ್ತಿರುವ ಲೇಖಕಿಯರ ಹೆಸರು ಇಲ್ಲಿ ಬಿಟ್ಟು ಹೋಗಿದ್ದು ನಿಮ್ಮ ಗಮನಕ್ಕೆ ಬಂದರೆ ತಿಳಿಸಬಹುದು.  ಮೊದಲ ಭಾಗವನ್ನು ಇಲ್ಲಿ ಹಾಕಿರುವೆನು. 

 ಪ್ರಾಸ್ತಾವಿಕ ನುಡಿ

ಇಪ್ಪತ್ತನೆಯ ಶತಮಾನ ’ಕನ್ನಡ ಸಾಹಿತ್ಯಲೋಕ’ ಅಪಾರ ಬದಲಾವಣೆ ಕಂಡಕಾಲ. ವಸಾಹತು ಶಾಹಿಯಿಂದ ಭಾರತೀಯ ಸಮಾಜದಲ್ಲಿ ಅನೇಕ ಸಮಸ್ಯೆಗಳು ಹುಟ್ಟಿದುವು ಎನ್ನುವುದರಲ್ಲಿ ಎರಡು ಮಾತಿಲ್ಲ. ಬ್ರಿಟೀಷರ ಆಡಳಿತ ಪ್ರಪಂಚದ ನಕ್ಷೆಯನ್ನೇ ಬದಲಾಯಿಸಿತು. ಅವರ ಆಡಳಿತ ಕಾಲ ಭಾರತೀಯರ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಜೀವನದಲ್ಲಿ ಅಚ್ಚರಿ ಹುಟ್ಟಿಸುವಂತಹ ಬದಲಾವಣೆ ತಂದಿದ್ದಲ್ಲದೆ, ವಿಚಾರಕ್ರಾಂತಿಗೆ ಕಾರಣವಾಯಿತು. ಮಹಿಳೆಯರು ತಮ್ಮ ಬಗ್ಗೆ ತಮ್ಮ ಸ್ಥಿತಿ-ಗತಿಗಳ ಬಗ್ಗೆ ಚಿಂತಿಸಲು ಆರಂಭಿಸಿದರು. ಪರಿಣಾಮವಾಗಿ ಅನೇಕ ಕಥೆಗಾರ್ತಿಯರೂ, ಕವಿಗಳೂ, ಸಮಾಜ ಸುಧಾರಕರೂ ಹುಟ್ಟಿಕೊಂಡರು. ಇಂದು ಕನ್ನಡ ಸಾಹಿತ್ಯದಲ್ಲಿ ಮಹಿಳಾ ಬರಹಗಾರರ ಸಂಖ್ಯೆ ೩,೫೦೦ರ ಗಡಿದಾಟಿದೆ. ನಮ್ಮ ಲೇಖಕಿಯರು ಕಥೆ, ಕಾದಂಬರಿ, ಕಾವ್ಯ, ನಾಟಕ, ಶಿಶುಸಾಹಿತ್ಯ, ಗ್ರಂಥ ಸಂಪಾದನೆ, ಸಂಶೋಧನೆ-ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ; ಮಾಡುತ್ತಲಿದ್ದಾರೆ.

ಮೈಸೂರು ನಗರದಲ್ಲಿರುವ ಮಹಿಳಾ ಬರಹಗಾರರ ಸಂಖ್ಯೆ ನೂರು ಅಥವಾ ಅದಕ್ಕೂ ಹೆಚ್ಚಿನದು. ಮೈಸೂರಿನ ಲೇಖಕಿಯರನ್ನು ಪರಿಚಯಿಸುವ ಒಂದು ಸ್ತುತ್ಯಾರ್ಹ ಕಾರ್ಯವನ್ನು ನನ್ನ ಆತ್ಮೀಯರಾದ ಲೇಖಕಿ ಶ್ರೀಮತಿ ಬಿ.ಆರ್.ನಾಗರತ್ನ ಮಾಡಿದ್ದಾರೆ. ಇವರು ’ಮೈಸೂರು ನಗರದಲ್ಲಿರುವ ಕನ್ನಡ ಲೇಖಕಿಯರ ಪರಿಚಯ’ ಎಂಬ ಕಿರುಹೊತ್ತಿಗೆ ಹೊರತಂದಿದ್ದಾರೆ. ಇದನ್ನು ರುಕ್ಮಿಣಿಮಾಲಾ ಅವರ ಬ್ಲಾಗಿನಲ್ಲಿ ಹಾಕಲು ಸಮ್ಮತಿಸಿದ್ದಾರೆ. ಈ ಮಾಹಿತಿಗಳು ಎಲ್ಲಾ ಓದುಗರನ್ನು ತಲುಪಬೇಕು ಎನ್ನುವುದೇ ನಮ್ಮ ಉದ್ದೇಶ.  ಇದೇನೂ ಪರಿಪೂರ್ಣವಲ್ಲ,   

ಬಿ.ಆರ್. ನಾಗರತ್ನ

ಸಿ.ಎನ್. ಮುಕ್ತಾ


ಪರಿವಿಡಿ

ಭಾಗ ೧

ಮಹಾಕಾವ್ಯ / ಸಂಶೋಧನೆ/ ದಾಸ ಸಾಹಿತ್ಯ/ ಆಧ್ಯಾತ್ಮ 

೧. ಡಾ|| ಲತಾರಾಜಶೇಖರ್

೨. ಡಾ|| ಲೀಲಾಪ್ರಕಾಶ್

೩. ಡಾ. ಸರಸ್ವತಿ ರಾಜೇಂದ್ರ

೪. ಡಾ|| ವೈ.ಸಿ. ಭಾನುಮತಿ

೫. ಡಾ|| ಟಿ.ಎನ್. ನಾಗರತ್ನ

೬. ಡಾ|| ಚಂದ್ರಮತಿ ಸೋಂದಾ

೭. ಡಾ|| ಜಯಲಕ್ಷ್ಮಿ ಸೀತಾಪುರ

೮. ಡಾ. ಕೆ.ಆರ್. ಪ್ರೇಮಲೀಲಾ

೯. ಡಾ. ಎಸ್.ಪಿ. ಉಮಾದೇವಿ

೧೦. ಡಾ|| ಎಂ. ಕನ್ನಿಕಾ

೧೧. ಲೀಲಾವತಿ ಎಸ್.ರಾವ್.

೧೨. ಡಾ. ಟಿ.ಎಸ್. ಶ್ರೀವಳ್ಳಿ

೧೩. ಬಿ.ಎಸ್. ರುಕ್ಕಮ್ಮ

೧೪. ಡಾ. ತುಳಸಿ ರಾಮಚಂದ್ರ

೧೫. ವಿ. ಭ್ರಮರಾಂಬ ಮಹೇಶ್ವರಿ

೧೬. ಡಾ. ಸಿ.ಜಿ. ಉಷಾದೇವಿ

೧೭. ಡಾ. ವಿಜಯಾಹರನ್


ಭಾಗ ೧)

                                            ೧)   ಡಾ|| ಲತಾರಾಜಶೇಖರ್

ಲೇಖಕಿಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಶ್ರೀಮತಿ ಡಾ|| ಲತಾ ರಾಜಶೇಖರ್ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಐದು ಮಹಾಕಾವ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರು ಮಂಡ್ಯ ಜಿಲ್ಲೆಯ ಅಂಬಿಗರಹಳ್ಳಿಯವರು. ತಂದೆ ಶ್ರೀ ಎಂ. ಕೃಷ್ಣೇಗೌಡ, ತಾಯಿ ಶ್ರೀಮತಿ ಕೆ.ಎಸ್. ಕಾವೇರಮ್ಮ. ಇವರು ಎಂ.ಎ., ಪಿ.ಎಚ್.ಡಿ. ಪದವೀಧರರು. ಇವರ ಪತಿ ಡಾ|| ಎಚ್.ಬಿ. ರಾಜಶೇಖರ್ ಮಕ್ಕಳ ತಜ್ಞರು ಹಾಗೂ ಮೈಸೂರಿನ ರಾಜಶೇಖರ್ ಮೆಡಿಕಲ್ ಫೌಂಡೇಶನ್ನಿನ ಅಧ್ಯಕ್ಷರು.

ಬರವಣಿಗೆ ಆರಂಭಿಸಿದಾಗ ಕವನ, ಕಾದಂಬರಿ ರಚನೆಯಲ್ಲಿ ಆಸಕ್ತಿ ಹೊಂದಿದ್ದ ಲತಾ ಕ್ರಮೇಣ ಮಹಾಕಾವ್ಯಗಳ ರಚನೆಯತ್ತ ಮನಸ್ಸು ಮಾಡಿದರು.

ಡಾ|| ಲತಾ ರಾಜಶೇಖರ್ ಕೃತಿಗಳು

೧. ಕವನ ಸಂಗ್ರಹಗಳು 

೧. ಕೋಗಿಲೆ ಕೂಗಿದಂತೆ

೨. ಬೆಳಕಿನ ಹನಿಗಳು

೩. ಶೇಫಾಲಿಕ

೨. ಕಾದಂಬರಿ

೧. ಈ ಸ್ನೇಹ ಈ ಜೀವನ

೩. ಮಹಾಕಾವ್ಯಗಳು

೧. ಬಸವ ಮಹಾದರ್ಶನ

೨. ಬುದ್ಧ ಮಹಾದರ್ಶನ

೩. ಯೇಸು ಮಹಾದರ್ಶನ

೪. ಮಹಾವೀರ ಮಹಾದರ್ಶನ

೫. ಶ್ರೀರಾಮ ಮಹಾದರ್ಶನ

೪. ಸಂಶೋಧನಾ ಕೃತಿ 

’ಕುವೆಂಪು ಕಾವ್ಯದಲ್ಲಿ ಪ್ರಕೃತಿ’

ಇವರ ಮಹಾಕಾವ್ಯಗಳು ಬಸವ ಮಹಾದರ್ಶನ, ಬುದ್ಧ ಮಹಾದರ್ಶನ ಆಂಗ್ಲಭಾಷೆಗೆ ಅನುವಾದವಾಗಿವೆ. ಇವರ ಕವನಗಳು ಇಂಗ್ಲೀಷ್ ಮತ್ತು ಹಿಂದಿಗೆ ಅನುವಾದವಾಗಿವೆ. ಇವರ ಕವನಗಳ ಎರಡು ಧ್ವನಿಸಾಂದ್ರಿಕೆಗಳು ಹೊರಬಂದಿವೆ. ಇವರ ಸಂಪಾದಕತ್ವದಲ್ಲಿ ಎರಡು ಧ್ವನಿಸಾಂದ್ರಿಕೆಗಳು ಹೊರಬಂದಿವೆ. ಇವರ ಸಂಪಾದಕತ್ವದಲ್ಲಿ ಅನೇಕ ಅಭಿನಂದನಾ ಗ್ರಂಥಗಳು ಹೊರಬಂದಿವೆ.

ಇವರಿಗೆ ಸಂದಿರುವ ಪ್ರಶಸ್ತಿ, ಪುರಸ್ಕಾರಗಳು ಅಸಂಖ್ಯಾತ. ಮುಖ್ಯವಾದುವುಗಳನ್ನು ಉಲ್ಲೇಖಿಸಲಾಗಿದೆ.

೧. ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿ

೨. ಅಬುದಾಬಿಯ ’ವಿಶ್ವಕವಿ’ ಪ್ರಶಸ್ತಿ

೩. ರಾಷ್ಟ್ರಕವಿ ಕುವೆಂಪು ಪ್ರಶಸ್ತಿ

೪. ಅಂತರ ರಾಷ್ಟ್ರೀಯ ಮಹಿಳಾ ವರ್ಷದ ’ವರ್ಷದ ಮಹಿಳೆ ಪ್ರಶಸ್ತಿ’

೫. ಭಾರತೀಯ ವಿದ್ಯಾಭವನದ ಡಾ|| ಕೆ.ಎಂ. ಮುನ್ಷಿಪುರಸ್ಕಾರ

೬. ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ

೭. ಅತ್ತಿಮಬ್ಬೆ ಕಾವ್ಯ ಪ್ರಶಸ್ತಿ

೮. ದೇ.ಜ.ಗೌ. ಸಾಹಿತ್ಯ ಪ್ರಶಸ್ತಿ - ಇತ್ಯಾದಿ.

* * *

                                        ೨)   ಡಾ|| ಕೆ. ಲೀಲಾಪ್ರಕಾಶ್

ಪ್ರವಚನಪಟು, ವಿದ್ಯಾನಿಧಿ, ಸಾಹಿತ್ಯ ಸೇವಾರತ್ನ, ಸಾಹಿತ್ಯ ಸರಸ್ವತಿ ಹಾಗೂ ಚಾಣಕ್ಯಶ್ರೀ ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರೀಮತಿ ಡಾ|| ಕೆ. ಲೀಲಾ ಪ್ರಕಾಶ್, ಕನ್ನಡ ನಾಡಿನ ಪ್ರಖ್ಯಾತ ತ್ರಿಭಾಷಾ ವಿದ್ವಾಂಸರಾಗಿದ್ದ ವಿದ್ಯಾಸಾಗರ ಡಾ|| ಕೆ.ಕೃಷ್ಣಮೂರ್ತಿ ಮತ್ತು ಶ್ರೀಮತಿ ಸರೋಜಮ್ಮನವರ ಪುತ್ರಿ. ಇವರು ಎಂ.ಎ., ಪಿ.ಎಚ್.ಡಿ (ಸಂಸ್ಕೃತ) ಮತ್ತು ಎಂ.ಎಸ್.ಸಿ. (ಮನೋವಿಜ್ಞಾನ) ಪದವೀಧರರು.

ಇವರ ಪತಿ ಶ್ರೀ ಸಿ.ಎನ್.ಕೇಶವ ಪ್ರಕಾಶ್ ಮಹಿಕೋ ಹೈಬ್ರೀಡ್ ಸೀಡ್ಸ್ ಮತ್ತು ಕ್ರಿಮಿನಾಶಕಗಳ ಹಂಚಿಕೆದಾರರು. ಡಾ|| ಲೀಲಾ ಪ್ರಕಾಶ್ ೨೦೧೦ರಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ಕೆ. ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ (ರಿ.) ಆರಂಭಿಸಿ, ಸಂಸ್ಥಾಪಕ ನಿರ್ದೇಶಕರಾಗಿ ಸುಮಾರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತಮ್ಮ ತಂದೆ ಶ್ರೀ ಕೃಷ್ಣಮೂರ್ತಿಯವರ ೫೦ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 

ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕಾದಂಬರಿ, ಕವನ, ಚುಟುಕ, ಕಾವ್ಯ ವಿಮರ್ಶೆ, ವ್ಯಾಕರಣ, ಅನುವಾದ, ಪ್ರವಾಸಕಥನ - ಈ ಎಲ್ಲಾ ಕ್ಷೇತ್ರಗಳಲ್ಲೂ ಕೃತಿಗಳನ್ನು ರಚಿಸಿ, ತಮ್ಮ ವಾಗ್‌ವೈಭವ ತೋರಿದ್ದಾರೆ. ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳಲ್ಲಿ ವಿದ್ಯುಲ್ಲೇಖನಗಳನ್ನು ಮಂಡಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಮಾಯಣ, ಭಗವದ್ಗೀತೆ ಹಾಗೂ ಅಧ್ವೈತ ದರ್ಶನದ ಬಗ್ಗೆ ವಿಧ್ವತ್ಪೂರ್ಣ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ರೇಡಿಯೋ ಮತ್ತು ಟಿ.ವಿ. ಮಾಧ್ಯಮಗಳಲ್ಲಿ ನಿರಂತರವಾಗಿ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಅನೇಕ ಸಾಹಿತ್ಯ ದಿಗ್ಗಜರ, ವಿಧ್ವಾಂಸರ ಕೃತಿಗಳಿಗೆ ಮುನ್ನುಡಿ ಬರೆದಿದ್ದಾರೆ. ಈ ಮುನ್ನುಡಿಗಳು ೨೦೧೯ರಲ್ಲಿ ’ಮುನ್ನುಡಿ-ಹೊನ್ನುಡಿ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.

ಸಾಹಿತ್ಯ ಪ್ರಪಂಚಕ್ಕೆ ಡಾ|| ಲೀಲಾಪ್ರಕಾಶ್ ಇವರ ಕೊಡುಗೆ ಅಪಾರ. ಕೆಲವನ್ನಷ್ಟೇ ಕೆಳಗೆ ಉಲ್ಲೇಖಿಸಲಾಗಿದೆ.

ಡಾ|| ಲೀಲಾಪ್ರಕಾಶ್ - ಕೃತಿಗಳು

ಕವನ ಸಂಕಲನಗಳು

೧. ೧. ಕವನ ಸಂಕಲನ - 

೧. ಸಮನ್ವಿತ ೨. ಕಾವ್ಯವಲ್ಲರಿ ೩. ಸಮುದ್ಯತಾ ೪. ಸಂಕಲಿತಾ ಇತ್ಯಾದಿ

೨. ಆಧ್ಯಾತ್ಮಕ ಕವನಗಳು - 

೧. ಲೀಲಾಪ್ರಿಯನ ಆಧ್ಯಾತ್ಮ ವಿಕಸನ

೩. ವೈಚಾರಿಕ ಕವನಗಳು - 

೧. ಓ ಮನುಜ (ವಚನ-ನಿರ್ವಚನ)

೨. ಜೀವನಾಮೃತವಾಣಿ (ಸಮಕ್ತಿ -ಸಂಗ್ರಹ)

೨. ಕಾದಂಬರಿ : ವಿಮಲಾ

೩. ಸಣ್ಣ ಕಥೆಗಳು : ಅನಿವಾಸ ಮತ್ತು ಇತರ ಕಥೆಗಳು

೪. ಕಾವ್ಯ ವಿಮರ್ಶೆ : 

೧. ಕವಿ -ಕಾವ್ಯ ವಿವೇಚನೆ

೨. ವಸ್ತು ವೈವಿಧ್ಯ

೩. ಲೇಖನೋಲ್ಲಾಸ

೪. ಸತ್ಯಂ ಶಿವಂ ಸುಂದರ

೫. ಚಿಂತನ-ಮಂಥನ : 

೧. ಚಿಂತನಧಾರಾ

೨. ಚಿಂತನ ಚಿತ್ತಾರ

೬. ಅನುವಾದ : 

೧. ಕನ್ನಡ ಭಗವದ್ಗೀತಾ

೨. ಸಿರಿಗನ್ನಡ ಭಗವದ್ಗೀತಾ

೩. ಆಯುರ್ವೇದೀಯ ಪವಿತ್ರ ಪ್ರಭೋಧೆಗಳು

೪. ವೈದ್ಯಕೀಯ ವಿಚಾರ ವಿಶ್ಲೇಷಣೆ

೫. ಶಂಕರಾಚಾರ್ಯರ ಮೋಹಮುದ್ಗರ

ಅನೇಕ ಹೆಸರಾಂತ ಸಾಹಿತಿಗಳು, ಅಭಿಮಾನಿಗಳು, ಮಿತ್ರರು ೨೦೨೦ರಲ್ಲಿ ಲೀಲಾಪ್ರಕಾಶ್ -ಇವರ ಷಷ್ಠ್ಯಬ್ಧಿ ಸಮಾರಂಭದಲ್ಲಿ ’ಲೀಲಾಭಾರತಿ’ ಎಂಬ ಗೌರವ ಗ್ರಂಥವನ್ನು ಸಮರ್ಪಿಸಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು

೧. ೨೦೦೧ - ಸುವರ್ಣಕರ್ನಾಟಕ ಹೊಯ್ಸಳ ಪ್ರಶಸ್ತಿ

೨. ೨೦೦೨ - ಉದಯ ಟಿ.ವಿ. ಕವಿಪ್ರತಿಭೆ ಪ್ರಶಸ್ತಿ

೩. ೨೦೦೬ - ಕೆ.ಎಸ್. ನರಸಿಂಹಸ್ವಾಮಿ ಪ್ರಶಸ್ತಿ

೪. ೨೦೦೭ - ಸದೋದಿತಾ ಸಂಶೋಧನಾ ಪ್ರಶಸ್ತಿ

೫. ೨೦೧೩ - ಸಾವಿತ್ರಮ್ಮ ದೇ.ಜ.ಗೌ ರಾಜ್ಯಮಟ್ಟದ ಪ್ರಶಸ್ತಿ

೬. ೨೦೧೫ - ವಿದ್ಯಾರಣ್ಯ ಪ್ರಶಸ್ತಿ

೭. ಬೆಂಗಳೂರಿನ ಎಂ.ಜಿ. ರಾಮನಾಥನ್ ಪ್ರಶಸ್ತಿ - ಇತ್ಯಾದಿ.

                                                                           * * *                               

                              ೩) ಡಾ|| ಸರಸ್ವತಿ ರಾಜೇಂದ್ರ

ಶ್ರೀಮತಿ ಡಾ|| ಸರಸ್ವತಿ ರಾಜೇಂದ್ರ ಸಮಾಜಸೇವೆಯ ಜೊತೆ ಸಾಹಿತ್ಯದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವವರು. ಇವರ ವಿದ್ಯಾಭ್ಯಾಸ ಎಂ.ಎ., ಪಿ.ಎಚ್.ಡಿ. ತಂದೆ ಶ್ರೀ ಮಾದಯ್ಯಗೌಡ, ತಾಯಿ ಶ್ರೀಮತಿ ಟಿ.ಶಾರದಮ್ಮ ಇವರ ಪತಿ ಡಾ|| ಡಿ.ಕೆ. ರಾಜೇಂದ್ರ ನಿವೃತ್ತ ಪ್ರಾಧ್ಯಾಪಕರು

ಇವರು ಕವನ, ಮಕ್ಕಳ ಸಾಹಿತ್ಯ, ಸಣ್ಣಕಥೆ, ವಿಮರ್ಶೆ, ಪ್ರಬಂಧ - ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.

ಡಾ|| ಸರಸ್ವತಿ ರಾಜೇಂದ್ರ - ಇವರ ಕೃತಿಗಳು

೧. ನಾನೊಂದು ಲೋಲಕ (ಕವನ ಸಂಕಲನ)

೨. ಸಂಕಥನ

೩. ಸಂವರ್ಧನ ವಿಮರ್ಶಾ ಕೃತಿಗಳು

೪. ಸಂಚೇತನ 

೫. ಮಾತು ಮುತ್ತು (ಮಕ್ಕಳ ಸಾಹಿತ್ಯ)

೬. ಉತ್ತರ ರಾಮಕಥಾ ಕಾವ್ಯಗಳು (ಪ್ರೌಢಪ್ರಬಂಧ)

೭. ಚೆಲ್ಲಾಪಿಲ್ಲಿ (ಸಣ್ಣ ಕಥೆಗಳು) ಅಚ್ಚಿನಲ್ಲಿ

ಇವರ ಇತರ ಹವ್ಯಾಸಗಳು ಆಧ್ಯಾತ್ಮದಲ್ಲಿ ಆಸಕ್ತಿ ಸಮಾಜಸೇವೆ. ಶ್ರೀ ರಾಮಕೃಷ್ಣಾಶ್ರಮದಲ್ಲಿ ಸ್ವಯಂಸೇವಕಿಯಾಗಿ ಸೇವೆ.

ಪ್ರಶಸ್ತಿಗಳು

೧. ಮುಕ್ತ ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳಲ್ಲಿ ಐದು ಚಿನ್ನದ ಪದಕಗಳು ದೊರೆತಿವೆ.

೨. ’ಕವಿರತ್ನ’ ಪ್ರಶಸ್ತಿ (ಕವಿಗೋಷ್ಠಿಗಳಲ್ಲಿ ಭಾಗವಹಿಸುವಿಕೆಗೆ)

                                                             * * *

             ೪) ಡಾ|| ವೈ.ಸಿ. ಭಾನುಮತಿ

ಡಾ|| ವೈ.ಸಿ. ಭಾನುಮತಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಮತ್ತು ಗ್ರಂಥ ಸಂಪಾದನಾ ವಿಭಾಗದಲ್ಲಿ ಹಿರಿಯ ಸಂಶೋಧನಾ ಸಹಾಯಕರಾಗಿ ನಿವೃತ್ತರಾಗಿದ್ದಾರೆ. ಭಾನುಮತಿ ಪ್ರಾಚೀನ ಹಸ್ತಪ್ರತಿಗಳಲ್ಲಿರುವ ಕವಿಪದ್ಯಗಳನ್ನು ಪರಿಷ್ಕರಿಸಿ ಹೊಸಸಂಶೋಧಕರಿಗೆ ಮಾರ್ಗದರ್ಶಕರಾಗಿದ್ದಾರೆ.

೧೯೫೩ರ ಜನವರಿ ೧೪ರಂದು ಬೇಲೂರು ತಾಲ್ಲೂಕು ಯಮಸಂಧಿ ಎಂಬ ಗ್ರಾಮದಲ್ಲಿ ಶ್ರೀ ವೈ.ಬಿ. ಚನ್ನೇಗೌಡ ಮತ್ತು ಶ್ರೀಮತಿ ಎಚ್.ಎಸ್. ಜಯಮ್ಮ ದಂಪತಿಗಳಿಗೆ ಜನಿಸಿದ ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್.ಸಿ., ಎಂ.ಎ., ಪಿ.ಎಚ್.ಡಿ. ಪದವಿ ಪಡೆದು ಸುಮಾರು ೪೦ ವರ್ಷಗಳ ಕಾಲ ಸಂಶೋಧಕಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಇವರ ಪತಿ ಶ್ರೀ ಯು.ಎಸ್.ರಾಮಣ್ಣ. ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯದ ನಿವೃತ್ತ ಕ್ಯುರೇಟರ್ ಹಾಗೂ ಹವ್ಯಾಸಿ ರಂಗ ಕಲಾವಿದರು.

ಡಾ|| ವೈ.ಸಿ. ಭಾನುಮತಿ -ಇವರ ಪ್ರಕಟಿತ ಕೃತಿಗಳು ೫೪. ಸಂಶೋಧನಾ ಲೇಖನಗಳು ನೂರೈವತ್ತಕ್ಕೂ ಹೆಚ್ಚು. ಕೃತಿಗಳಲ್ಲಿ ಹಳೆಗನ್ನಡ ಗ್ರಂಥಸಂಪಾದನೆಗೆ ಸಂಬಂಧಿಸಿರುವ ಕೃತಿಗಳು ೨೮, ಜಾನಪದ ಕೃತಿಗಳು ೧೧, ವಿಮರ್ಶೆ, ಸಂಶೋಧನೆ ೦೭, ಆಧುನಿಕ ಸಾಹಿತ್ಯ ಸಂಪಾದನೆಗೆ ಸಂಬಂಧಿಸಿರುವುದು ೦೨. ಇತರರ ಸಹಭಾಗಿತ್ವದಲ್ಲಿ ೦೫.

ಶ್ರೀಮತಿ ವೈ.ಸಿ. ಭಾನುಮತಿ -ಇವರ ಕೃತಿಗಳು

೧. ಪುರಾತನರ ಚರಿತ್ರೆ

೨. ಬತ್ತೀಸ್ ಪುತ್ಥಳಿಕಥೆ

೩. ಅಜ್ಞಾತಕವಿಯ ’ಸಹ್ಯಾದ್ರಿ ಖಂಡ’

೪. ಸೂಳೆಕೆರೆಯ ದೃಷ್ಟಾಂತವುಳ್ಳ ಸಿದ್ಧಲಿಂಗಕಾವ್ಯ

೫. ಬಸವ ಮಹತ್ವದ ಸಾಂಗತ್ಯ

೬. ಪುಟ್ಟಮಲ್ಲಿಗೆ ಹಿಡಿತುಂಬ

೭. ಇತ್ತೀಚಿನ ಜಾನಪದ ಕಥೆಗಳು

೮. ಜಾನಪದ ಆಂತರ್ಯ

೯. ಮಲೆನಾಡಿನ ಶೈವ ಒಕ್ಕಲಿಗರು

೧೦. ಜನಪದ ಭಿತ್ತಿ

ಮಹಿಳಾ ಸಾಹಿತ್ಯ ಚರಿತ್ರೆಯ ಸಂಪುಟದಲ್ಲಿ ಕೆಲಸ ಮಾಡಿದ್ದಾರೆ.

ಡಾ|| ವೈ.ಸಿ. ಭಾನುಮತಿಯವರ ಸಾಹಿತ್ಯ ಸೇವೆಗೆ ಸಂದಿರುವ ಪ್ರಶಸ್ತಿ ಸನ್ಮಾನಗಳು ಅಪಾರ.

೧. ಪಿ.ಎಚ್.ಡಿ. ಪ್ರಬಂಧಕ್ಕೆ ಡಾ. ಆ.ನೇ. ಉಪಾಧ್ಯೆ ಚಿನ್ನದ ಪದಕ

೨. ಗುಂಡ್ಮಿ ಚಂದ್ರಶೇಖರ ಐತಾಳ ಸ್ಮಾರಕ ಪ್ರಶಸ್ತಿ

೩. ಫ.ಗು. ಹಳಕಟ್ಟಿ ಪ್ರಶಸ್ತಿ

೪. ಸಾವಿತ್ರಮ್ಮ ಸಂಶೋಧನಾ ಪ್ರಶಸ್ತಿ

೫. ಹ.ಕ. ರಾಜೇಗೌಡ ಗ್ರಂಥ ಸಂಪಾದನೆ ಪ್ರಶಸ್ತಿ - ಇತ್ಯಾದಿ.

ಇವುಗಳಲ್ಲದೆ ಬಿ.ಎಂ. ಶ್ರೀ ಪ್ರತಿಷ್ಠಾನದಿಂದ ೨ ಪ್ರಶಸ್ತಿಗಳು ಕನ್ನಡ ಸಾಹಿತ್ಯ ಪರಿಷತ್ತಿನಿಂದ ೩ ಪ್ರಶಸ್ತಿಗಳು. ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ - ಇತ್ಯಾದಿ ದೊರಕಿವೆ.

                                                                      * * *

೫) ಡಾ|| ಟಿ.ಎನ್. ನಾಗರತ್ನ

ಶ್ರೀಮತಿ ಡಾ|| ಟಿ.ಎನ್. ನಾಗರತ್ನ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಿರಂತರವಾಗಿ ೩೫ ವರ್ಷಗಳ ಕಾಲ ಸೇವೆಸಲ್ಲಿಸಿ, ಹರಿದಾಸ ಸಾಹಿತ್ಯ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರಾಗಿದ್ದಾರೆ. ಶಿವಮೊಗ್ಗದಲ್ಲಿ ವ್ಯಾಸಂಗಮಾಡಿ ಪದವಿ ಪರೀಕ್ಷೆಯಲ್ಲಿ ರ್‍ಯಾಂಕ್, ಐಚ್ಛಿಕ ಕನ್ನಡ ವಿಷಯದಲ್ಲಿ ಚಿನ್ನದ ಪದಕ ಪಡೆದು ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ. ಪರೀಕ್ಷೆಯಲ್ಲಿ (೧೯೬೭) ಪ್ರಪ್ರಥಮವಾಗಿ ಚಿನ್ನದ ಪದಕದೊಡನೆ ತೇರ್ಗಡೆಹೊಂದಿದೆ ಹಿರಿಮೆ ಇವರದು. ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಪ್ರಥಮ ಮಹಿಳೆ ಇವರು.

ಶ್ರೀಮತಿ ನಾಗರತ್ನ ತಮ್ಮ ವಿದ್ವತ್ ಪ್ರತಿಭೆಯನ್ನು ಹರಿದಾಸ ಸಾಹಿತ್ಯ ಸಂಶೋಧನೆ, ವಿಶ್ಲೇಷಣೆ, ಸಂಪಾದನೆಗೆ, ಪ್ರಕಟಣೆಗೆ ಮೀಸಲಾಗಿಟ್ಟವರು. ಇವರು ಸ್ನಾತಕೋತ್ತರ ಪದವಿ ತರಗತಿಗಳಿಗೆ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಕೃತಿಗಳ ಸಂಖ್ಯೆ ಅಪಾರ ಮುಖ್ಯವಾದವು.

೧. ಶ್ರೀ ವಾದಿರಾಜರ ದೀರ್ಘ ಕೃತಿಗಳು

೨. ಶ್ರೀ ಗೋಪಾಲದಾಸರ ಕೃತಿಗಳು

೩. ಶ್ರೀ ಕನಕದಾಸರ ಕೀರ್ತನೆಗಳು

೪. ಶ್ರೀ ವ್ಯಾಸರಾಯರ ಕೃತಿಗಳು

೫. ಶ್ರೀ ರಾಮದಾಸರ ಕೃತಿಗಳು

೬. ಹರಪನಹಳ್ಳಿಯ ಭೀಮವ್ವನ ಹಾಡುಗಳು

೭. ದಾಸ ಸಾಹಿತ್ಯ ವೈಭವ

೮. ಹರಿದಾಸ ಸಾಹಿತ್ಯ - ಉಗಮ, ವಿಕಾಸ, ಸಾಧನೆ, ಸಿದ್ಧಿ

೯. ದಾಸ ಸಾಹಿತ್ಯ ದರ್ಪಣ

೧೦. ಮಕ್ಕಳ ಸಾಹಿತ್ಯ - ಹೈಹೈ ಕುದುರೆ

ಪ್ರಶಸ್ತಿ ಪುರಸ್ಕಾರಗಳು

೧. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ

೨. ಮಂತ್ರಾಲಯ ಶ್ರೀ ರಾಘವೇಂದ್ರ ಮಹಾಸ್ವಾಮಿಗಳಿಂದ ’ಹರಿದಾಸ ಸಾಹಿತ್ಯ ವಿದ್ವನ್ಮಣಿ’ ಬಿರುದು

೩. ಕರ್ನಾಟಕ ಸರ್ಕಾರದ ’ಕನಕಶ್ರೀ’ ಪ್ರಶಸ್ತಿ

೪. ಬೆಂಗಳೂರಿನ ಗುರುರಾಜ ಸೇವಾ ಸಮಿತಿಯಿಂದ ೨೦೧೬ರಲ್ಲಿ ’ಮಧ್ವ ಪುರಂಧರ ಪ್ರಶಸ್ತಿ’ ಇತ್ಯಾದಿ.

****

೬) ಡಾ|| ಚಂದ್ರಮತಿ ಸೋಂದಾ

ತಮ್ಮ ಅಂಕಣಬರಹಗಳಿಂದ ಚಿರಪರಿಚಿತರಾಗಿರುವ ಡಾ|| ಚಂದ್ರಮತಿ ಸೋಂದಾ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ., ಪಿ.ಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಹದಿನೈದು ವರ್ಷಗಳ ಕಾಲ ಸಂಶೋಧನಾ ಕಾರ್ಯದಲ್ಲಿ, ಎಂಟುವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಪತಿ ಡಾ|| ರಾಮಕೃಷ್ಣ ಜೋಶಿ

ಚಂದ್ರಮತಿ ಸೋಂದಾ ಒಟ್ಟು ೧೨ ಕೃತಿಗಳನ್ನು ಪ್ರಕಟಿಸಿದ್ದಾರೆ.

೧. ವಿಮರ್ಶಾ ಕೃತಿಗಳು : 

೧. ಮಾನಸ-ಮಾನಸಿ

೨. ಚಿಪ್ಪೊಡೆದಮೌನ

೩. ಹೆಣ್ಣಲ್ಲ ನಮಗೆ ರವಿಚಿನ್ನ

೪. ಶಬ್ಧದೊಳಗಣ ನಿಶ್ಯಬ್ಧ

೨. ಸಂಪಾದಿತ ಕೃತಿಗಳು :

೧. ಜಯಲಕ್ಷ್ಮಿ ದೇವಿ ವ್ಯಕ್ತಿ -ಅಭಿವ್ಯಕ್ತಿ

೨. ಮಹಿಳಾ ಸಾಂಸ್ಕೃತಿಕ ಕೋಶ ಭಾಗ -೩

೩. ಅಂಕಣ ಬರಹಗಳು : 

೧. ನಾರಿಮಿಡಿತ

೨. ಅಂತರಂಗದ ಅನಾವರಣ

೩. ನಾರಿಭಾವ

೪. ಆಟಕ್ಕೂ ಉಂಟು ಲೆಕ್ಕಕ್ಕೂ ಉಂಟು.

                                                                              * * *

೭) ಡಾ. ಜಯಲಕ್ಷ್ಮಿ ಸೀತಾಪುರ

ಗ್ರಾಮೀಣ ಬದುಕಿನ ಮೂಲದಿಂದ ಬಂದು ಜನಪದ ವಿಷಯವನ್ನು ಅಧ್ಯಯನ ಮಾಡಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ವಿಶ್ರಾಂತಿ ಜೀವನ ನಡೆಸುತ್ತಿರುವ ವಿದ್ವಾಂಸರು ಡಾ|| ಜಯಲಕ್ಷ್ಮಿ ಸೀತಾಪುರ. ಇವರ ತಂದೆ ಶ್ರೀ ತಿಮ್ಮೇಗೌಡ. ತಾಯಿ ಶ್ರೀಮತಿ ಬೋರಮ್ಮ. ಇವರು ಮೈಸೂರು ವಿಶ್ವವಿದ್ಯಾನಿಲಯದ ಜನಪದ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ಇವರ ಪತಿ ಪ್ರೊ. ರಾಜಶೇಖರ್ ನಿವೃತ್ತ ಪ್ರಾಂಶುಪಾಲರು. ಇವರು ಕವನ, ಜೀವನ ಚರಿತ್ರೆ, ನಾಟಕ ಎಲ್ಲವೂ ಸೇರಿ ಒಟ್ಟು ೩೦ ಕೃತಿಗಳನ್ನು ರಚಿಸಿದ್ದಾರೆ.

ಜನಪದ ಸಾಹಿತ್ಯ ಇವರ ಬದುಕು. ಜನಪದಕ್ಕೆ ತನ್ನತನ, ಸ್ವಶಕ್ತಿಯೊಂದು ಇದ್ದೇ ಇದೆ. ಕಾವ್ಯ, ನಾಟಕಗಳಿಗೆ ಮೂಲವಾಗಿದೆ ಎನ್ನುತ್ತಾರೆ.


ಪ್ರಶಸ್ತಿ, ಪುರಸ್ಕಾರ

೧. ಜಾನಪದ ಲೋಕ ಪ್ರಶಸ್ತಿ

೨. ಹಲಗೇಗೌಡ ಸಾಹಿತ್ಯ ಪ್ರಶಸ್ತಿ

೩. ಮುದ್ದು ಮಾದಪ್ಪ ಪ್ರಶಸ್ತಿ - ಇತ್ಯಾದಿ.

                                                           * * *

೮) ಪ್ರೊ. ಕೆ.ಆರ್. ಪ್ರೇಮಲೀಲಾ

ಪ್ರೊ. ಕೆ.ಆರ್. ಪ್ರೇಮಲೀಲಾ ಜೆ.ಎಸ್.ಎಸ್. ಸಂಸ್ಥೆಯ ಕಾಲೇಜಿನಲ್ಲಿ ೩೫ ವರ್ಷ ಸಂಸ್ಕೃತ ಪ್ರಾಧ್ಯಾಪಕಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿಯೂ ಅಪಾರ ಆಸಕ್ತಿ ಇರುವ ಇವರು ತುಮಕೂರು ಜಿಲ್ಲೆಯ ಕುಣಿಗಲ್‌ನವರು. ತಂದೆ ಶ್ರೀ ಕೆ.ಎ. ರೇವಣ್ಣಸಿದ್ಧಪ್ಪ, ತಾಯಿ ಶ್ರೀಮತಿ ಬಿ.ಎ. ಗೌರಮ್ಮ. ಇವರು ಎಂ.ಎ. (ಸಂಸ್ಕೃತ) ಎಂ.ಎ. (ಇಂಗ್ಲೀಷ್) ಮತ್ತು ಸ್ನಾತಕ್ಕೋತ್ತರ ಡಿಪ್ಲಮೋ ಇನ್ ಇಂಗ್ಲೀಷ್ - ಪದವಿಗಳನ್ನು ಪಡೆದಿದ್ದಾರೆ. ಇವರು ಬಿ.ಎ., ಎಂ.ಎ. ಪರೀಕ್ಷೆಗಳಲ್ಲಿ ಐದು ಸುವರ್ಣ ಪದಕಗಳನ್ನು ಗಳಿಸಿದ್ದಾರೆ.


ಪ್ರಕಟಿತ ಕೃತಿಗಳು

೧. ಕವನ ಸಂಕಲನಗಳು (೬)

೧. ಭಾವಯಾನ ೨. ಕಾವ್ಯಾಂಬರ

೩. ಕಾವ್ಯವಿನೋದ (ಹಾಸ್ಯ ಕವನಗಳು) ೪. ನವನೀತ

೫. ಒಲುಮೆಯ ಸಿರಿ (ಇಂಗ್ಲೀಷ್ ಕವಿತೆಗಳ ಅನುವಾದ)

೬. ಶರಣಜೀವಾಳ

೨. ವಚನ ಸಂಗ್ರಹ

೧. ಪ್ರೇಮಾಂಜಲಿ (ಆಧುನಿಕ ವಚನಗಳು) ೨.ವಚನ ಸಾಂಪ್ರತ (ಆಧುನಿಕ ವಚನಗಳು)

೩. ವಚನ ವಿನೂತನ (ಆಧುನಿಕ ವಚನಗಳು)

೩. ಮುಕ್ತಕಗಳು - ಮಿಂಚುಗಳು

೪. ಹಾಸ್ಯಲೇಖನಗಳು - ಪ್ರಬಂಧ ಬಂದುರ

೫. ವಿಮರ್ಶಾ ಲೇಖನಗಳು - ಸಾಹಿತ್ಯ ಮೋದ

೬. ವ್ಯಕ್ತಿ ಚಿತ್ರಣ - ಪ್ರೀಮಿಯರ್ ಸ್ಟುಡಿಯೋ ಬಸವರಾಜಯ್ಯ

೭. ಅಂಗಜೋಡಣೆ ಬಗ್ಗೆ (ಮೃತ್ಯುತ್ವದಿಂದ ಅಮೃತತ್ವದೆಡೆಗೆ)

ಪ್ರಶಸ್ತಿಗಳು

೧. ರತ್ನಮ್ಮ ದತ್ತಿ ಪ್ರಶಸ್ತಿ (ಕ.ಸಾ.ಪ ಬೆಂಗಳೂರು)

೨. ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಮೈಸೂರು

೩. ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ - ಇತ್ಯಾದಿ.

                                                       * * *

೯) ಡಾ|| ಎಸ್.ಪಿ. ಉಮಾದೇವಿ

ಮೈಸೂರಿನ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಮುಖ್ಯಸ್ಥರಾಗಿರುವ ಡಾ|| ಎಸ್.ಪಿ. ಉಮಾದೇವಿ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವವರು. ಶ್ರೀ ಎಸ್.ಎಂ. ಪ್ರಭುಸ್ವಾಮಿ ಮತ್ತು ಶ್ರೀಮತಿ ಶಿವನಾಗಮ್ಮ ದಂಪತಿಗಳ ಪುತ್ರಿ. ಇವರು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪಿ.ಎಚ್.ಡಿ.ಗಳಿಸಿದ್ದಾರೆ. ಇವರ ಪತಿ ಡಾ|| ಎಂ.ಸಿ. ಶಾಂತಮೂರ್ತಿ ಸಂಸ್ಕೃತ ಪ್ರಾಧ್ಯಾಪಕರು.

ಪ್ರಕಟಿತ ಕೃತಿಗಳು

ಸಂಶೋಧನಾ ವಿಷಯ - (ಮೂರನೆಯ ಮಂಗರಸನ ಕಾವ್ಯಗಳು : ಸಾಂಸ್ಕೃತಿಕ ಅಧ್ಯಯನ)

೧. ಕವನ ಸಂಕಲನಗಳು  

೧. ಮೌನದನಿಯ ಮಾತು

೨. ಅನುರಣನ

೨. ಶರಣ ಸಾಹಿತ್ಯ ಕುರಿತ ಪ್ರಬಂಧಗಳು

೧. ಅನಾವರಣ

೨. ಅನುಸಂಧಾನ

೩. ಅಕ್ಷತೆ (ಆಕಾಶವಾಣಿಯಲ್ಲಿ ಪ್ರಸಾರವಾದ ಚಿಂತನಗಳ ಸಂಗ್ರಹ)

೪. ಥೇಮ್ಸ್ ನದಿಯ ನಾಡಿನಲ್ಲಿ (ಇಂಗ್ಲೇಂಡ್ ಪ್ರವಾಸ ಕಥನ)

೫. ವಿಧಿಯಲೀಲೆ ಸಾವಿತ್ರಿ (ಸಂಪಾದಕಿ, ತಂದೆಯವರ ಕಾದಂಬರಿಗಳು)

೬. ಅಂಜಲಿ (ಆಧುನಿಕ ವಚನಗಳು)

ಪ್ರಶಸ್ತಿ ಪುರಸ್ಕಾರಗಳು

೧. ಪ್ರೊ. ಭೈರವಮೂರ್ತಿಯವರ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ

೨. ’ಕದಳಿಸಿರಿ’ ಪ್ರಶಸ್ತಿ

೩. ರೋಟರಿ ಸಂಸ್ಥೆಯಿಂದ ’ದತ್ತ ಟೀಚರ್ಸ್ ಅವಾರ್ಡ್’

                                                      * * *

೧೦) ಡಾ|| ಎಂ. ಕನ್ನಿಕಾ

ಡಾ|| ಎಂ. ಕನ್ನಿಕಾ ಕನ್ನಡ, ಇಂಗ್ಲೀಷ್, ಜಾನಪದ - ಈ ಮೂರು ವಿಷಯಗಳಲ್ಲಿಯೂ ಎಂ.ಎ. ಪದವಿ ಪಡೆದು, ಜಾನಪದದಲ್ಲಿ ಪಿ.ಎಚ್.ಡಿ.ಗಳಿಸಿದ್ದಾರೆ. (ಯುಜಿಸಿ ನವದೆಹಲಿ) ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಾನಿಲಯ. ಇವರ ತಂದೆ ಶ್ರೀ ಮಹದೇವಯ್ಯ, ತಾಯಿ ಶ್ರೀಮತಿ ಪುಟ್ಟಮ್ಮ.

ಪ್ರಕಟಿತ ಕೃತಿಗಳು

೧. ಕಥಾಸಂಕಲನ 

೧. ನಮ್ಮವರ ತುಳಿದವರು ನಾವು

೨. ಆತ್ಮಪೂರ್ತಿ

೩. ತಲೆಮಾರಿನ ಪೈಸ

೨. ಕವನ ಸಂಕಲನ

೧. ದಲಿತ ದೇಹ ದುಡಿಯುತಿದೆ ನೋಡಾ

೨. ಅಜಾತ ಶತ್ರು ನಾನಲ್ಲ

೩. ಜಾನಪದ ಕೃತಿಗಳು (ಸಂಶೋಧನಾ ಸಾಹಿತ್ಯ)

೧. ಜಾನಪದ ಅಂತರ

೨. ಜಾಗತಿಕ ಜನಪದ

೩. ಜನಜಾಗೃತಿ ಜಾನಪದ

೪. ಸ್ಪರ್ಶ ಜಾನಪದ

೫. ದೇಶೀ ಆಹಾರ ಸ್ಥಿತ್ಯಂತರ

ಪ್ರಶಸ್ತಿ ಪುರಸ್ಕಾರಗಳು

೧. ಬುದ್ಧ, ಇಂಟರ್‌ನ್ಯಾಷನಲ್ ಸೋಷಿಯಲ್ ಅವಾರ್ಡ್

೨. ನಿಟ್ಟೂರು ಶ್ರೀನಿವಾಸರಾವ್ ಅವಾರ್ಡ್

೩. ಮೈಸೂರು ರತ್ನ ಪ್ರಶಸ್ತಿ (ಸ್ಥಳೀಯ ಸಂಸ್ಥೆಗಳಿಂದ)

೪. ಮೈಸೂರು ನಕ್ಷತ್ರ ಪ್ರಶಸ್ತಿ (ಸ್ಥಳೀಯ ಸಂಸ್ಥೆಗಳಿಂದ)

೫. ಸಾರ್ಥಕ ಸಾಧಕ ಪ್ರಶಸ್ತಿ (ಸ್ಥಳೀಯ ಸಂಸ್ಥೆಗಳಿಂದ)

                                                    * * *                      

೧೧) ಲೀಲಾವತಿ ಎಸ್.ರಾವ್.

 ಶ್ರೀಮತಿ ಲೀಲಾವತಿ ಎಸ್.ರಾವ್ ಜನಿಸಿದ್ದು ದಿನಾಂಕ ೧೦ ಜುಲೈ ೧೯೪೩ರಲ್ಲಿ ದಾವಣಗೆರೆಯಲ್ಲಿ. ಇವರ ತಂದೆ ಶ್ರೀ ಪಿ.ಎಚ್.ಸೇತುರಾವ್, ತಾಯಿ ಶ್ರೀಮತಿ ಶಾಂತಾಬಾಯಿ. ಇವರು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾನಸಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ’ದಾಸ ಸಾಹಿತ್ಯ’ ವಿಭಾಗದಲ್ಲಿ ಎರಡುವರ್ಷ ಸಂಶೋಧನ ಸಹಾಯಕಿಯಾಗಿ, ಅನಂತರ ಸೂರತ್ಕಲ್ಲಿನ ’ಗೋವಿಂದದಾಸ್ ಕಾಲೇಜ್’ನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ೩೦ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಪತಿ ಶ್ರೀ ಪಿ. ಶ್ರೀನಿವಾಸರಾವ್ ನಿವೃತ್ತ ಇಂಜಿನಿಯರ್.

ಲೀಲಾವತಿ ಎಸ್.ರಾವ್ ಕೃತಿಗಳು

೧. ವಿಮರ್ಶೆಗಳು

೧. ದಾಸಸಾಹಿತ್ಯದ ಕೆಲವು ನೋಟಗಳು ೨. ಪ್ರಾಚೀನ ಸಾಹಿತ್ಯದಲ್ಲಿ ಮಹಿಳೆ

೨. ವ್ಯಕ್ತಿ ಪರಿಚಯ 

೧. ಸೀತಾದೇವಿ ೨. ಡುರೋಣಿ

೩. ಸಂಪಾದಿತ ಕೃತಿಗಳು

೧. ಹೆಳವನ ಕಟ್ಟೆ ಗಿರಿಯಮ್ಮನ ಕೀರ್ತನೆಗಳು

೨. ನಿಡಗುರುಕಿ ಜೀವೂ ಬಾಯಿಯವರ ಕೀರ್ತನೆಗಳು

೩. ನಡುಗನ್ನಡ ಕಾವ್ಯ

೪. ಮಕ್ಕಳ ಕೃತಿಗಳು

೧. ಕಿರಿಯರಿಗೆ ಹಿರಿಯರ ಕೃತಿಗಳು

೨. ಏರುವ ಬಾ ಕೇದಾರ

೩. ಅಜ್ಜಿ ಹೇಳಿದ ಅದ್ಭುತ ಕಥೆಗಳು

ಲೀಲಾವತಿಯವರು ಪಡೆದ ಪ್ರಶಸ್ತಿ ಪುರಸ್ಕಾರಗಳು

೧. ದಾಸಸಾಹಿತ್ಯಕ್ಕೆ ’ಶ್ರೀ ಗುರುಗೋವಿಂದ’ ಪ್ರಶಸ್ತಿ

೨. ರಾಜರತ್ನಂ ಪುರಸ್ಕಾರ

೩. ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ

೪. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಲಭಿಸಿದೆ.

                                                        * * *                        

೧೨) ಡಾ. ಟಿ.ಎಸ್. ಶ್ರೀವಳ್ಳಿ

ಸಾಹಿತ್ಯ, ಸಂಗೀತ, ನಾಟಕ, ಅಭಿನಯ, ನಿರ್ದೇಶನ, ಬರವಣಿಗೆ ಮುಂತಾದ ಬಹುಮುಖ ಪ್ರತಿಭೆಯ ಲೇಖಕಿ ಡಾ|| ಟಿ.ಎಸ್. ಶ್ರೀವಳ್ಳಿಯವರು. ೧೯೪೭ರ ಮೇ ೨೦ರಂದು ಮೈಸೂರಿನ ಶ್ರೀ ಟಿ. ಸುಬ್ರಹ್ಮಣ್ಯ ಮತ್ತು ಎಸ್. ನಾಗರತ್ನಮ್ಮ ದಂಪತಿಗಳಿಗೆ ಜನಿಸಿರುವ ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ., ಪಿ.ಎಚ್.ಡಿ ಪದವೀಧರರು. ವೃತ್ತಿಯಿಂದ ಜೀವವಿಮಾ ನಿಗಮದ ಪ್ರತಿನಿಧಿಗಳು. ಇವರ ಪತಿ ಪ್ರೊ. ಎಸ್. ಬಾಲಸುಬ್ರಹ್ಮಣ್ಯ ಪ್ರಾಧ್ಯಾಪಕರು, ಲೇಖಕರು, ಕಲಾವಿದರು.

ಶ್ರೀವಳ್ಳಿಯವರ ಕೃತಿಗಳು :

೧. ಗಿರಿಬಾಲೆ ಅಕ್ಕನ ಓಲೆಗಳು ೨೦೧೩

೨. ಪಿ.ಎಚ್.ಡಿ.ಗಾಗಿ ಪ್ರೌಢಪ್ರಬಂಧ ’ಸರಸ್ವತಿ ಬಾಯಿ ರಾಜವಾಡೆ’ ಒಂದು ಅಧ್ಯಯನ (೨೦೦೦)

೩. ಗೋವಿಂದ ಪೈ ಪತ್ರಬಂಧ (೧೯೯೯)

೪. ಗಿರಿಬಾಲೆ (೧೯೯೪)

೫. ಸತ್ಯಕಾಮ

೬. ಗಿರಿಬಾಲೆ ಚಿಂತನಲಹರಿ

ಇವುಗಳಲ್ಲದೆ ಮಕ್ಕಳಿಗಾಗಿ ನಾಟಕಗಳನ್ನು ರಚಿಸಿದ್ದಾರೆ.

ಮಕ್ಕಳಿಗಾಗಿ ಬೇಸಿಗೆ ಶಿಬಿರಗಳನ್ನೂ, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ೧೯೯೬ರಿಂದ ಈವರೆಗೆ ನಡೆಸುತ್ತಿದ್ದಾರೆ.

                                                                             * * *

೧೩) ಬಿ.ಎಸ್. ರುಕ್ಕಮ್ಮ

೦೫-೦೯-೧೯೩೪ರಲ್ಲಿ ಶ್ರೀ ಬಿ.ಟಿ. ಶ್ರೀನಿವಾಸ ಅಯ್ಯಂಗಾರ್ ಮತ್ತು ಬಿ.ಎಸ್. ಸೀತಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಶ್ರೀಮತಿ ಬಿ.ಎಸ್.ರುಕ್ಕಮ್ಮ ಸ್ನಾತಕೋತ್ತರ ಪದವೀಧರರು. ಕನ್ನಡ ಭಾಷಾ ಉಪನ್ಯಾಸಕಿಯಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರುಕ್ಕಮ್ಮ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿ, ಸಾಹಿತ್ಯಲೋಕಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ಪತಿ ಪ.ವಿ. ಚಂದ್ರಶೇಖರ್. ಇವರ ನಿರಂತರ ಪ್ರೋತ್ಸಾಹದಿಂದ ಲೇಖಕಿ ಬರವಣಿಗೆಯಲ್ಲಿ ತೊಡಗಿಸಿಕೊಂಡು, ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ.

ಶ್ರೀಮತಿ ಬಿ.ಎಸ್. ರುಕ್ಕಮ್ಮ ಇವರ ಕೃತಿಗಳು

೧. ವಿಜ್ಞಾನ ಸಾಹಿತ್ಯಕ್ಕೆ ಕೊಡುಗೆ

೧. ’ಕೀಟಗಳ ಒಡನಾಡಿ ಫೇಬರ್’ (೧೯೫೯-೬೦) (ಕನ್ನಡ ಸಂಸ್ಕೃತಿ-ಇಲಾಖೆಯಿಂದ ಬಹುಮಾನಿತ)

೨. ಮೇರಿಕ್ಯೂರಿ (ಜೀವನ ಚರಿತ್ರೆ ೧೯೬೮) ಪದವಿಪೂರ್ವ ಮತ್ತು ಬಿ.ಕಾಂ. ತರಗತಿಗಳಿಗೆ ಪಠ್ಯಪುಸ್ತಕವಾಗಿ (ತಿರುಪತಿ ವಿಶ್ವದ್ಯಾಲಯ) ಪಠ್ಯಪುಸ್ತಕವಾಗಿ ಆಯ್ಕೆಯಾಗಿ ಹೆಗ್ಗಳಿಕೆಗೆ ಪಾತ್ರವಾಗಿದೆ.

೨. ಸಂಪಾದಿತ ಕೃತಿಗಳು

೧. ಪ.ವಿ. ಚಂದ್ರಶೇಖರ್ -ಅವರೊಡನೆ ’ಸಂಯುಕ್ತ ಕೌಮುದಿ ಸಂಗ್ರಹ’

೨. ಪಂಚಾಮೃತ ಕನ್ನಡದ ಕಥೆಗಳು (ನೆಹರು ಬಾಲ ಪುಸ್ತಕಾಲಯ ಪ್ರಕಟಿತ)

೩. ಮಕ್ಕಳಸಾಹಿತ್ಯ (೧೯೮೪) ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಿತ

೩. ಶಿಶುಸಾಹಿತ್ಯಕ್ಕೆ ಕೊಡುಗೆ

೧. ಅಮ್ಮನಿಗೆ ಪಾಪು ಹೇಳಿದ ಕಥೆಗಳು (೧೯೭೦) (ಭಾರತ ಸರ್ಕಾರದಿಂದ ಬಹುಮಾನಿತ)

೨. ಶಾಲೆಯ ಮಕ್ಕಳು

೩. ಮೇಕೆ ಮತ್ತು ಮೂರು ಮರಿಗಳು

೪. ಜಂಟಿ ಮತ್ತು ಜಾನಿ (ಈ ೨ ಪುಸ್ತಕಗಳೂ ರುಮೇನಿಯಾ ಸರ್ಕಾರದಿಂದ ಪ್ರಕಟಿತ)

೫. ನಂದಗೋಪಿ ಮತ್ತು ಕೃಷ್ಣ

೬. ವ್ಯಾಪಾರಿ ಮಂಗಣ್ಣ 

೭. ಕೆಂಡಸಂಪಿಗೆ

೭. ಕಚ ಮತ್ತು ಹರಿಹರ (೧೯೮೦) (ಭಾರತ ಭಾರತಿ ಪುಸ್ತಕ ಸಂಪದರಿಂದ ಪ್ರಕಟಿತ ಕುವೆಂಪು, ತಳುಕಿನ ವೆಂಕಯ್ಯ, ಆ.ರಾ.ಕೃ, ಆರ್ಯಾಂಬ ಪಟ್ಟಾಭಿ ಸಂಭಾವನ ಗ್ರಂಥಗಳಲ್ಲಿ -ಇವರ ಲೇಖನಗಳು ಪ್ರಕಟವಾಗಿವೆ.

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.

                                                                 * * *      

೧೪) ಡಾ|| ತುಳಸೀ ರಾಮಚಂದ್ರ

ಶ್ರೀಮತಿ ಡಾ|| ತುಳಸೀ ರಾಮಚಂದ್ರ ಸಾಹಿತ್ಯ, ಸಂಗೀತ, ನೃತ್ಯ - ಈ ಮೂರು ಕ್ಷೇತ್ರಗಳಲ್ಲೂ ಸಾಧನೆಮಾಡಿರುವವರು. ಇವರ ಜನನ ಡಿಸೆಂಬರ್ ೨೧, ೧೯೫೧. ತಂದೆ ಎಂ.ಎಸ್. ಮಾಧವರಾವ್. ತಾಯಿ ಶ್ರೀಮತಿ ರುಕ್ಮಿಣಿಯಮ್ಮ. ಇವರು ಬಿ.ಎಸ್.ಸಿ., ಎಂ.ಎ.(ಕನ್ನಡ), ಪಿ.ಎಚ್.ಡಿ. ಪದವೀಧರರು.

ಶ್ರೀಮತಿ ತುಳಸಿ ರಾಮಚಂದ್ರ ಇವರ ಪತಿ ಶ್ರೀ ಕೆ. ರಾಮಚಂದ್ರ ನಿವೃತ್ತ ಕಾರ್ಯಪಾಲಕ ಇಂಜಿನಿಯರ್.

ಶ್ರೀಮತಿ ತುಳಸಿ ರಾಮಚಂದ್ರ ಇವರ ಕೃತಿಗಳು

೧. ಪದಗತಿ ಪಾದಗತಿ

೨. ಗೌಂಡಲೀ ಪ್ರೇರಣೆ

೩. ವೀರಶೈವ ಕಾವ್ಯಗಳಲ್ಲಿ ನೃತ್ಯ ಪ್ರಸಂಗ

೪. ಮಾಸ್ತಿಯವರ ನವರಾತ್ರಿ

೫. ಸಂಗೀತ ಮಕರಂದ (ಸಂಪಾದಿತ, ಅನುವಾದ)

ಶ್ರೀಮತಿ ತುಳಸಿ ರಾಮಚಂದ್ರ ಇವರ ಸಾಧನೆಗಳನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಪ್ರಶಸ್ತಿ ನೀಡಿ ಗೌರವಿಸಿದೆ.

೧. ೨೦೦೪ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ

೨. ಕರ್ನಾಟಕ ಕಲಾಶ್ರೀ ಗೌರವ

೩. ರೋಟರಿ ನಮನ ಪ್ರಶಸ್ತಿ

೪. ಹೊಯ್ಸಳ ಪ್ರಶಸ್ತಿ - ಇತ್ಯಾದಿ

                                                                           * * * 


೧೫) ವಿ. ಭ್ರಮರಾಂಬ ಮಹೇಶ್ವರಿ

ಶ್ರೀಮತಿ ಭ್ರಮರಾಂಬ ಮಹೇಶ್ವರಿ ಸಾಹಿತ್ಯ, ಸಂಗೀತ, ವೇದ, ಉಪನಿಷತ್‌ಗಳ ಅಧ್ಯಯನ ಮುಂತಾದ ಹಲವು ಆಸಕ್ತಿಗಳನ್ನು ಬೆಳೆಸಿಕೊಂಡು ಇತರರಿಗೂ ಪ್ರೇರಣೆ ನೀಡುತ್ತಿದ್ದಾರೆ. ತಂದೆ ಶ್ರೀ ಎಸ್. ಪ್ರಸನ್ನಮೂರ್ತಿ. ತಾಯಿ ಶ್ರೀಮತಿ ಸಿ. ಲೀಲಾವತಿ. ಇವರು ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರ ಪತಿ ಶ್ರೀ ಕೆ.ಸಿ. ವಿಜಯಕುಮಾರ್ ನಿವೃತ್ತ ಇಂಜಿನಿಯರ್.

ಭ್ರಮರಾಂಬ ಮಹೇಶ್ವರಿ ರಚಿಸಿರುವ ಕೃತಿಗಳೆಲ್ಲಾ ಆಧ್ಯಾತ್ಮ ವಿಷಯಗಳನ್ನು ಕುರಿತಿದ್ದಾಗಿದೆ.

ಕೃತಿಗಳು

೧. ಗಾಯಿತ್ರಿ ಮಂತ್ರದ ಅಸಂಖ್ಯ ಶಕ್ತಿಗಳು ಹಾಗೂ ಸ್ತ್ರೀಯರಿಗೆ ಗಾಯಿತ್ರಿಯ ಅಧಿಕಾರ

೨. ವೇದಗಳ ಹಿರಿಮೆ

೩. ಸಂಸ್ಕಾರಗಳ ಮಹತ್ವ

೪. ವೇದೋಪನಿಷತ್ತು ಮತ್ತು ಶರಣ ಸಾಹಿತ್ಯದ ತೌಲನಿಕ ಅಧ್ಯಯನ

೫. ಮನುಸ್ಮೃತಿಯಲ್ಲಿ ಸ್ತ್ರೀಯರ ಸ್ಥಾನಮಾನ - ಇತ್ಯಾದಿ

ಇವರು ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

೧. ಮೈಸೂರಿನ ದಸರಾ ಮಹಿಳಾ ಪ್ರಶಸ್ತಿ - ೨೦೦೮

೨. ಬಸವನ ಬಾಗೇವಾಡಿಯ ’ಬಸವ ಭೂಷಣ’ ಪ್ರಶಸ್ತಿ

೩. ಬಿಜಾಪುರದ ಹಿಪ್ಪರಿಗೆ ಪ್ರತಿಷ್ಠಾನದ ಪ್ರಶಸ್ತಿ -೨೦೧೧

೪. ಮೈಸೂರಿನ ಸಂಘ ಸಂಸ್ಥೆಗಳಿಂದ ಸನ್ಮಾನ

೫. ಕರ್ಣಾಟಕ ಸರ್ಕಾರದ ’ಕಿತ್ತೂರು ರಾಣಿಚೆನ್ನಮ್ಮ’ ಪ್ರಶಸ್ತಿ

೬. ಹುಬ್ಬಳ್ಳಿಯ ’ಅವ್ವ’ ಪ್ರತಿಷ್ಠಾನದಿಂದ ’ಅವ್ವ’ ಪ್ರಶಸ್ತಿ.

               * * *

೧೬) ಡಾ|| ಸಿ.ಜಿ. ಉಷಾದೇವಿ

ಕನ್ನಡ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾಗಿರುವ ಡಾ|| ಸಿ.ಜಿ. ಉಷಾದೇವಿ ಮಹಿಳಾ ಸಾಹಿತ್ಯ, ವಚನ ಸಾಹಿತ್ಯಗಳೆರಡರಲ್ಲೂ ಆಸಕ್ತಿ ಇರುವ ಲೇಖಕರು. ಇವರ ತಂದೆ ಶ್ರೀ ಸಿ.ಎಸ್. ಗುರುಸಿದ್ಧಪ್ಪ, ತಾಯಿ ಶ್ರೀಮತಿ ಭ್ರಮರಾಂಬ. ಉಷಾದೇವಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ., ಬಿ.ಎಡ್., ಪಿ.ಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಟಿ.ನರಸೀಪುರದ ವಿದ್ಯೋದಯ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.

ಇವರು ರಚಿಸಿ ಪ್ರಕಟಿಸಿರುವ ಕೃತಿಗಳು ಐದು.

೧. ಕನ್ನಡದಲ್ಲಿ ಐತಿಹಾಸಿಕ ನಾಟಕಗಳು (ಪ್ರೌಢ ಪ್ರಬಂಧ)

೨. ಕನ್ನಡದಲ್ಲಿ ಐತಿಹಾಸಿಕ ನಾಟಕಗಳು (ಸಂಕ್ಷಿಪ್ತ)

೩. ಶರಣೆ ಬೊಂತಾದೇವಿ

೪. ಶಿವಾನಂದ ಶರ್ಮ

೫. ಬೆಳಕಿಗೊಂದು ಹೆಜ್ಜೆ (ರೇಡಿಯೋ ಚಿಂತನಗಳ ಸಂಗ್ರಹ)

ಉಷಾದೇವಿಯವರ ಇತರ ಹವ್ಯಾಸಗಳು ಲೇಖನರಚನೆ, ಪ್ರಬಂಧಮಂಡನೆ, ಭಾಷಣ ನೀಡುವುದು, ಸಾಹಿತ್ಯ ಅಧ್ಯಯನ ಮತ್ತು ಸಂಗೀತ.

* * *

      ೧೭) ಡಾ. ಎಂ.ಎಸ್. ವಿಜಯಾಹರನ್

ಡಾ. ವಿಜಯಾಹರನ್ ಇವರ ಜನನ ೨೦ ಜುಲೈ ೧೯೫೨ರಂದು ಕೋಲಾರಜಿಲ್ಲೆಯ ಕೆ.ಜಿ.ಎಫ್.ನಲ್ಲಿ ತಂದೆ ಶ್ರೀ ಎಂ.ವಿ. ಶ್ರೀನಿವಾಸಮೂರ್ತಿ. ತಾಯಿ ಶ್ರೀಮತಿ ನರಸಮ್ಮ. ಇವರು ಎಂ.ಎ., ಪಿ.ಹೆಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಮೈಸೂರು ಆಕಾಶವಾಣಿಯ ನಿಲಯ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.

ಪ್ರಸಾರ ಕ್ಷೇತ್ರದಲ್ಲಿ ಹಲವು ಹೊಸ ಸಾಧನೆಗಳನ್ನು ಮಾಡಿದ್ದಾರೆ. ಬಹು ಮಾಧ್ಯಮ ಸಂದರ್ಭದಲ್ಲೂ, ಆಕಾಶವಾಣಿಯ ಸಾಮರ್ಥ್ಯ, ಪ್ರಸ್ತುತಿಯನ್ನು ಉಳಿಸಿಕೊಳ್ಳಲು ರೈತ ಬಂಧುಗಳಿಗೆ, ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ’ಬಾನುಲಿ ಬೆಳಗು’ ಎಂಬ ವಿಶೇಷ ಕಾರ್ಯಕ್ರಮಗಳ ಸರಣಿ ಪ್ರಸಾರವನ್ನೂ ತರಬೇತಿಗಳನ್ನೂ ಆಯೋಜಿಸಿದ್ದು ಪ್ರಸಾರ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಜನಮನ್ನಣೆಗಳಿಸಿತ್ತು.

ಆಕಾಶವಾಣಿಯ ಸಾಹಿತ್ಯ ಸಮ್ಮೇಳನವನ್ನು ಆಕಾಶವಾಣಿಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮೈಸೂರಿನಲ್ಲಿ ನಡೆಸಿದ್ದು ಅವರ ದೂರದೃಷ್ಟಿ. ಮಹತ್ವಾಕಾಂಕ್ಷೆಗೂ ಸಾಕ್ಷಿಯಾಗಿದೆ. ಅವರು ನಿರ್ಮಿಸಿದ ಅನೇಕ ಕಾರ್ಯಕ್ರಮಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಆಕಾಶವಾಣಿ ವಾರ್ಷಿಕ ಪ್ರಶಸ್ತಿಗಳು ಲಭ್ಯವಾಗಿವೆ.

ಸಾಹಿತ್ಯದ ಗಂಭೀರ ವಿದ್ಯಾರ್ಥಿನಿಯಾಗಿ, ಸಮೂಹ ಮಾಧ್ಯಮದ ಗಟ್ಟಿಗೊಂಡ ಸಾಂಸ್ಕೃತಿಕ ಕಾಳಜಿ ಇರುವ ಇವರು ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ.

ಆನಂದರ ಬದುಕು ಬರಹ - ಒಂದು ಅಧ್ಯಯನ

’ಅಲೋಕ’ - ಸಾಹಿತ್ಯಿಕ ಪ್ರಬಂಧಗಳ ಸಂಕಲನ

ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ ಗಾದೆಗಳು - ಸಂಶೋಧನಾತ್ಮಕ ಕೃತಿ

ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಓದುಗರ ಮನದಾಳದ ಮಾತು - ನಮ್ಮ ಭೈರಪ್ಪನವರು

’ಗಾದೆ ಗದ್ದುಗೆ -ನೂರಾರು ಗಾದೆಗಳ ಪ್ರಸಾರದ ಪುಸ್ತಕರೂಪ

ಸಂಪಾದಿತ ಕೃತಿಗಳು -ಸಂಕೇತಿ ಬೇಸಾಯದ ಬದುಕು

ಆನಂದ ಅವರ ಸಮಗ್ರ ಕತೆಗಳು

ಆಕಾಶವಾಣಿ ಸಾಹಿತ್ಯ, ಮೈಸೂರು ಆಕಾಶವಾಣಿಯ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಇತ್ಯಾದಿ. ಇವರ ಪತಿ ಡಾ.ಬಿ.ಎಸ್. ಪ್ರಣತಾರ್ತಿ ಹರನ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.

ಇವರ ಮಾತೃಭಾಷೆ ಕನ್ನಡ. ತಿಳಿದಿರುವ ಇತರ ಭಾಷೆಗಳು ತೆಲುಗು, ತಮಿಳು, ಸಂಕೇತಿ, ಇಂಗ್ಲೀಷ್, ಹಿಂದಿ, ಸಂಸ್ಕೃತ.

ಇವರ ಸೇವೆಗೆ ಸಂದಿರುವ ಪ್ರಶಸ್ತಿಗಳು

೧) ಕನ್ನಡ ಲೇಖಕಿಯರ ಸಂಘ ಮೈಸೂರಿನಿಂದ ಸನ್ಮಾನ.

೨) ರೋಟರಿ ಸಂಸ್ಥೆಯಿಂದ ’ವರ್ಷದ ಶ್ರೇಷ್ಠ ಸಾಧಕಿ’ ವಿಶೇಷ ಸನ್ಮಾನ

೩) ಗಮಕ ಕಲಾ ಪರಿಷತ್ ಹಾಸನ ಶಾಖೆಯ ಸನ್ಮಾನ

೪) ಸಮುದ್ಯತಂ ಶ್ರೋತೃ ಸಂಘದಿಂದ ಸನ್ಮಾನ ಹಾಗೂ ಹಲವು ಸ್ಥಳೀಯ ಸಂಘ ಸಂಸ್ಥೆಗಳಿಂದ ಸನ್ಮಾನಗಳು ಲಭಿಸಿವೆ.

* * *


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ