ಬುಧವಾರ, ಜನವರಿ 11, 2017

ಉತ್ತರಕರ್ನಾಟಕದ ಶಿಲ್ಪಕಲೆಯ ವೈಭವ

ಉತ್ತರಕರ್ನಾಟಕದ ಶಿಲ್ಪಕಲೆಯ ವೈಭವ

ಹಂಪೆ, ಬಾದಾಮಿ,ಪಟ್ಟದಕಲ್ಲು, ಐಹೊಳೆ, ಬಿಜಾಪುರ, ಗದಗ

ಭಾಗ -೧

‘ಕಾಲಿದ್ದರೆ ಹಂಪೆ ಸುತ್ತು, ಕಣ್ಣಿದ್ದರೆ ಕನಕಗಿರಿ ನೋಡು, ಕಾಸಿದ್ದರೆ ತಿರುಪತಿಗೆ ಹೋಗು’ ಎಂಬುದೊಂದು ಪ್ರಸಿದ್ಧ ನಾಣ್ನುಡಿ. ಕರ್ನಾಟಕದಲ್ಲಿ ಜನಿಸಿ ಹಂಪೆಯ ಗತವೈಭವವನ್ನು ಅದು ನಾಶವಾಗುವ ಮೊದಲೇ ನೋಡದಿದ್ದರೆ ಹೇಗೆ? ಹಂಪೆಗೆ ಹೋಗಬೇಕೆಂಬುದು ನನ್ನ ಬಹುವರ್ಷದ ಕನಸಾಗಿತ್ತು. ನನ್ನ ವಯಸ್ಸು ಅರ್ಧಶತಮಾನದತ್ತ ದಾಪುಗಾಲಿಡುತ್ತಿತ್ತು. ಆದರೆ ಅಲ್ಲಿಗೆ ಇನ್ನೂ ಹೋಗಲಿಲ್ಲವಲ್ಲ? ಯಾವಾಗ ಹೋಗುವುದು? ಎಂದು ಮನಸು ಪದೇ ಪದೇ ಕೇಳಲು ತೊಡಗಿತ್ತು. ನನ್ನ ಮನಸಿನ ಮಾತು ಪೀಪಲ್ ಟ್ರೀ ಸಂಸ್ಥೆಯ ಶಿವಶಂಕರರಿಗೆ ಅದು ಹೇಗೆ ಕೇಳಿಸಿತೋ ನಾನರಿಯೆ! ಉತ್ತರಕರ್ನಾಟಕದ ಸುತ್ತ ಮುತ್ತ ಇತಿಹಾಸ ಪ್ರಸಿದ್ಧ ತಾಣಗಳಿಗೆ ನಾಲ್ಕುದಿನದ ಪ್ರವಾಸ ಏರ್ಪಡಿಸಿದ್ದೇವೆ (ಅದರಲ್ಲಿ ಹಂಪೆಯೂ ಸೇರಿತ್ತು)ಎಂದು ನವೆಂಬರ ಮೊದಲ ವಾರದಲ್ಲಿ ವಾಟ್ಸಪ್ ಸಂದೇಶ ಬಂತು! ಈ ಅವಕಾಶ ಬಿಟ್ಟರೆ ಉಂಟೆ ಎಂದು ಕೂಡಲೇ ರೂ. ೪೫೦೦ ಕೊಟ್ಟು ಹೆಸರು ನೋಂದಾಯಿಸಿದೆ.
 ರೈಲು ಪ್ರಯಾಣ
ಅವಶ್ಯ ಬೇಕಾದ ವಸ್ತುಗಳು, ಬಟ್ಟೆಬರೆ ಚೀಲಕ್ಕೆ ತುಂಬಿಸಿ ೨೩.೧೨. ೧೬ರಂದು ರಾತ್ರೆ ಏಳುಗಂಟೆಗೆ ಹೊರಡುವ ಹಂಪೆ ಎಕ್ಸ್‌ಪ್ರೆಸ್ ರೈಲಿನಲ್ಲಿ ನಾವು ೩೧ ಮಂದಿ ಹೊಸಪೇಟೆಗೆ ಪ್ರಯಾಣ ಬೆಳೆಸಿದೆವು. ಈ ಸಲ ರೈಲಿನ ಭೋಗಿಯ ಮಧ್ಯಭಾಗದಲ್ಲಿ (ಸಂಖ್ಯೆ ೪೧ ನೇ) ಸೀಟ್ ದೊರೆತಿತ್ತು. ಹಾಗಾಗಿ ವಾಸನೆ ಆಘ್ರಾಣಿಸಿಕೊಳ್ಳುವ ಪ್ರಮೇಯ ಬರಲಿಲ್ಲ. ನಾನು, ಶೋಭಾ, ಸುಬ್ಬಲಕ್ಷ್ಮಿ ಒಂದೇ ಭಾಗದಲ್ಲಿದ್ದೆವು. ಹೊಸದಾಗಿ ಜಯಶ್ರೀ, ವೀಣಾ ಅವರ ಪರಿಚಯವಾಯಿತು. ಮಂಜುನಾಥ ಯಾನೆ ಮಂಜಣ್ಣ ಅವರೂ ನಮ್ಮ ಜೊತೆಗಿದ್ದರು. ಅವರಿದ್ದರೆ ಅಲ್ಲಿ ನಗು ಹರಟೆಗೆ ಬರವಿಲ್ಲ. ಶಿವಶಂಕರರು ಚಪಾತಿ ಮಾಡಿಸಿ ತಂದಿದ್ದರು. ಚಪಾತಿಗೆ ನೆಂಚಿಕೊಳ್ಳಲು ತಂದಿದ್ದ ತೊಕ್ಕು ಬಹಳ ರುಚಿಯಾಗಿತ್ತು. ಆ ರುಚಿಗೆ ಮನಸೋತ ನಾಲಿಗೆ ಒಂದೊಂದು ಚಪಾತಿ ಹೆಚ್ಚಿಗೆ ತಿನ್ನುವಂತೆ ಪ್ರೇರೇಪಿಸಿತು! ಹತ್ತೂವರೆಗೆ ನಿದ್ದೆಗೆ ಜಾರಿದೆವು.
ಹೊಸಪೇಟೆ
  ಬೆಳಗ್ಗೆ ೨೪.೧೨.೨೦೧೬ರಂದು ೫.೩೦ಗೆ ಎದ್ದೆವು. ನೀರು ಸಣ್ಣಗೆ ಬರುತ್ತಿದೆ. ಬೇಗ ಹಲ್ಲುಜ್ಜಿ ಮುಖ ತೊಳೆಯಿರಿ ಎಂದರೊಬ್ಬರು. ಗಡಬಡಿಸಿ ಕಾರ್ಯೋನ್ಮುಖರಾದೆವು. ಆದರೆ ನೀರು ಸರಿಯಾಗಿ ಬರುತ್ತಿತ್ತು!  ರೈಲಲ್ಲೇ ಮುಖಮಾರ್ಜನ ಮುಗಿಸಿ ಹೊರಟು ತಯಾರಾಗಿರಬೇಕು. ಹೊಸಪೇಟೆಯಲ್ಲಿ ಕೋಣೆ ಕಾದಿರಿಸಿಲ್ಲ. ಸೀದಾ ನಾವು ಹಂಪೆಗೇ ಹೋಗುವುದು. ಕೋಣೆಗೆ ಹೋಗಿ ಎಲ್ಲರೂ ತಯಾರಾಗಿ ಬರಲು ತುಂಬ ಸಮಯ ಹಿಡಿಯುತ್ತದೆ. ದಯವಿಟ್ಟು ಒಂದು ದಿನ ಸ್ನಾನ ಮಾಡದೆಯೇ ಪ್ರೆಶ್! ಆಗಿ ಸಹಕರಿಸಿ ಎಂದು ಈ ಮೊದಲೇ ಕೇಳಿಕೊಂಡಿದ್ದರು.
 ಬೆಳಗ್ಗೆ ೭.೪೫ಕ್ಕೆ ಹೊಸಪೇಟೆಯಲ್ಲಿ ರೈಲಿಳಿದೆವು. ಹುಬ್ಬಳ್ಳಿಯಿಂದ ಮಿನಿ ಬಸ್ ಹಾಗೂ ಟಿಟಿ (ಟೆಂಪೋ ಟ್ರಾವೆಲರ್) ವಾಹನಗಳಲ್ಲಿ ಬಂದ ಅವುಗಳ ಚಾಲಕರಾದ ಮುತ್ತು, ವಿಷ್ಣು, ಸಹಾಯಕರಾದ ಪ್ರಸಾದ್, ನವೀನ್ ನಮ್ಮ ಬರುವನ್ನು ಎದುರು ನೋಡುತ್ತಿದ್ದರು. ನಮ್ಮ ಲಗೇಜಿನ ಸಮೇತ ಎರಡು ವಾಹನಗಳೇರಿ ಹಂಪೆಯತ್ತ ಸಾಗಿದೆವು. ಹೊಸಪೇಟೆಯಿಂದ ಹಂಪೆಗೆ ೧೨ಕಿಮೀ.  ದಾರಿ ಮಧ್ಯೆ ನೀರಿರುವಲ್ಲಿ ತಿಂಡಿಗೆ ನಿಲ್ಲಿಸಿದೆವು. ಮೆಂತೆ ಪರೋಟ, ಗೊಜ್ಜು ತಂದಿದ್ದರು. ನಾವು ಕಸ ಸೃಷ್ಟಿಸದೆ ಎಡಕೈಯನ್ನೇ ತಟ್ಟೆಯಾಗಿಸಿ ಪರೋಟ ತಿಂದೆವು. ಮತ್ತೆ ಎಲ್ಲೂ ನಿಲ್ಲದೆ ಹಂಪೆಯೆಡೆಗೆ ಸಾಗಿದೆವು. 


  ವಿಜಯನಗರದ ಗತಕಾಲದ ವೈಭವದ ಅನಾವರಣ: ಹಂಪೆ
 ಹಂಪೆಯು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ. ೧೩೩೬ರಿಂದ ೧೫೬೫ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು ‘ಪಂಪಾ’ ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ಮುಂದೆ ಇದು ‘ವಿಜಯನಗರ’ ಮತ್ತು ‘ವಿರುಪಾಕ್ಷಪುರ’ ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ವಿಶ್ವ ಪರಂಪರೆಯ ತಾಣ ಎಂದು ಯುನೆಸ್ಕೋ ಘೋಷಿಸಿದೆ. ಇಲ್ಲಿಗೆ ಹೊಸಪೇಟೆಯಿಂದ ಸಾರಿಗೆ ಬಸ್ಸಿನ ಸೌಲಭ್ಯ ಬೆಳಗ್ಗೆ ೬ ಗಂಟೆಯಿಂದ ರಾತ್ರೆ ೮ ಗಂಟೆವರೆಗೆ ಇದೆಯಂತೆ.
   ಹಂಪೆಯ ಸಾಸುವೆಕಾಳು ಗಣಪತಿ ಮುಂದೆ ೯.೩೦ಗೆ ಇಳಿದೆವು. ಅಲ್ಲಿ ಗೈಡ್ ಬಸಯ್ಯ ಯಾನೆ ಬಸವರಾಜು ನಮ್ಮನ್ನು ಬರಮಾಡಿಕೊಂಡರು. ಬಸಯ್ಯ ಕಳೆದ ೨೦ ವರ್ಷಗಳಿಂದ ಹಂಪೆಯಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದವರಿಗೆ ಪ್ರವಾಸಿಗರಿಂದ ರೂ. ೨೦೦೦ ಪಡೆಯುತ್ತಾರಂತೆ. ಸರ್ಕಾರದಿಂದ ಬೇರೆ ಸಂಬಳ ಸವಲತ್ತು ಅವರಿಗೆ ಇಲ್ಲವಂತೆ. ಬಸವರಾಜು ಸಣ್ಣ ಮೈಕ್ ಇಟ್ಟುಕೊಂಡು ಹಂಪೆಯ ಇತಿಹಾಸವನ್ನು ನಿರರ್ಗಳವಾಗಿ ನಮ್ಮೆದುರು ಅನಾವರಣಗೊಳಿಸುವ ಪರಿಗೆ ನಾವು ಬೆರಗಾದೆವು. 
  ಬೇಗ ಬೇಗ ಹೆಜ್ಜೆ ಹಾಕಬೇಕು. ಇಲ್ಲಾಂದರೆ ಹಂಪೆ ಸುತ್ತಲು ಸಾಧ್ಯವಿಲ್ಲ. ನೋಡುವಂಥ ಸ್ಥಳಗಳು ಸಾಕಷ್ಟಿವೆ. ಇವತ್ತು ಒಂದು ದಿನದಲ್ಲಿ ಎಲ್ಲವನ್ನೂ ನೋಡಲು ಸಾಧ್ಯವಿಲ್ಲ. ಪ್ರಮುಖವಾದ ಸ್ಥಳಗಳನ್ನು ಆದಷ್ಟು ತೋರಿಸಲು ಪ್ರಯತ್ನ ಮಾಡುವೆ. ನೀವು ಸಹಕರಿಸಬೇಕು ಎಂದು ಬಸವರಾಜು ಹೇಳಿದರು.
 ಸಾಸುವೆ ಕಾಳು ಗಣಪ
   ಹೇಮಕೂಟದ ಈಶಾನ್ಯ ದಿಕ್ಕಿನಲ್ಲಿ ತೆರೆದ ಮಂಟಪದಲ್ಲಿದಲ್ಲಿರುವ ಏಕಶಿಲೆಯ ಈ ಚತುರ್ಭುಜ ಸಾಸಿವೆಕಾಳು ಗಣೇಶ ಮೂರ್ತಿಯನ್ನು ನೋಡಿದೆವು. ೧೨ ಅಡಿ ಎತ್ತರವಿದೆ. ಈ ವಿಗ್ರಹದ ಇನ್ನೊಂದು ವಿಶೇಷತೆ ಅಂದರೆ ಗಣಪನ ಬೆನ್ನಿನ ಭಾಗದಲ್ಲಿ ತಾಯಿ ಪಾರ್ವತಿಯನ್ನು ಕೆತ್ತಿರುವುದು. ಇಂಥ ಮೂರ್ತಿ ಇರುವುದು ಬಲು ಅಪರೂಪ.  ಸಾಸಿವೆ ಮಾರುತ್ತಿದ್ದ ವರ್ತಕನೊಬ್ಬ ಈ ಗಣೇಶನನ್ನು ಅಲ್ಲಿ ಪ್ರತಿಷ್ಠಾಪಿಸಿದ ಸಲುವಾಗಿ ಸಾಸಿವೆ ಗಣೇಶನೆಂದು ಹೆಸರು ಬರಲು ಕಾರಣವಂತೆ. ಕ್ರಿ.ಶ. ೧೫೦೬ರಲ್ಲಿ ಸಾಳುವ ವಂಶದ ಇಮ್ಮಡಿ ನರಸಿಂಹನ (ಕ್ರಿ.ಶ. ೧೪೯೧-೧೫೦೫) ನೆನಪಿಗಾಗಿ ತಿರುಪತಿ ಸಮೀಪದ ಚಂದ್ರಗಿರಿಯ ಒಬ್ಬ ವ್ಯಾಪಾರಿ ಇದನ್ನು ನಿರ್ಮಿಸಿದ್ದಾಗಿ ಅಲ್ಲಿರುವ ಶಿಲಾಶಾಸನದಲ್ಲಿ ದಾಖಲಾಗಿವೆ.


ಕಡ್ಲೆಕಾಳು ಗಣಪ
 ಅಲ್ಲಿಂದ ತುಸು ದೂರದಲ್ಲೇ ಕಡ್ಲೆಕಾಳು ಗಣಪನ ಗುಡಿ ಇದೆ. ಗಣೇಶನ ಬೃಹದಾಕಾರದ ಮೂರ್ತಿ ಗರ್ಭಗುಡಿಯೊಳಗಿದೆ. ೧೮ ಅಡಿ ಎತ್ತರದ ಈ ಮೂರ್ತಿ ಏಕಶಿಲೆಯಿಂದ ನಿರ್ಮಿಸಿದ್ದಾಗಿದೆ. ಗರ್ಭಗೃಹದ ಮುಂಭಾಗ ಅನೇಕ ಕಂಬಗಳನ್ನು ಒಳಗೊಂಡ ವಿಶಾಲ ರಂಗಮಂಟಪವಿದೆ. ಕಡ್ಲೆಕಾಳು ಗಣೇಶ ಎಂದು ಹೆಸರು ಬರಲು ಕಾರಣ ಕಡ್ಲೆಕಾಳು ಮಾರುತ್ತಿದ್ದ ವರ್ತಕ ಈ ಗಣಪನನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಂತೆ. ಅಲ್ಲಿ ನಮ್ಮ ಗುಂಪಿನ ಛಾಯಾಚಿತ್ರ ತೆಗೆಸಿಕೊಂಡು ಮುಂದುವರಿದೆವು. 





 ವಿರೂಪಾಕ್ಷ ದೇವಾಲಯ
   ವಿರೂಪಾಕ್ಷ ದೇವಾಲಯ ಭವ್ಯವಾಗಿದೆ. ಮೂರು ಗೋಪುರಗಳು ಗಮನ ಸೆಳೆಯುತ್ತವೆ. ಮೊದಲನೆಯದು ರಾಯ ಗೋಪುರ. ಇದು ೧೬೫ ಅಡಿ ಎತ್ತರವಿದೆ. ಇದನ್ನು ಶ್ರೀ ಕೃಷ್ಣದೇವರಾಯ ತನ್ನ ಪಟ್ಟಾಭಿಷೇಕದ ನೆನಪಿಗಾಗಿ ನಿರ್ಮಿಸಿದನಂತೆ. ಮಹಾದ್ವಾರದ ಒಳಗೆ ಹೋದರೆ ದೊಡ್ಡ ಪ್ರಾಕಾರವಿದೆ. ಸುಮಾರು ೫೧೦ ಅಡಿ ಅಗಲ, ೧೩೦ ಅಡಿ ಉದ್ದವಾಗಿದೆ. ಪ್ರಾಕಾರದ ನೆಲಕ್ಕೆ ಕಲ್ಲುಗಳನ್ನು ಹಾಕಿದ್ದಾರೆ. ಪ್ರಾಕಾರದ ನಡುವೆ ಕಾಲುವೆ ಇದೆಯಂತೆ. ಅದರಲ್ಲಿ ತುಂಗಾಭದ್ರಾ ನದಿ ನೀರು ಹರಿಯುತ್ತದಂತೆ. ಅದನ್ನು ಕಲ್ಲಿನಿಂದ ಮುಚ್ಚಿದ್ದಾರೆ. ಪ್ರಾಕಾರದ ಎಡಭಾಗದಲ್ಲಿ ದೊಡ್ಡದಾದ ಪಾಕಶಾಲೆಯಿದೆ. ಈಗ ಅಲ್ಲಿಗೆ ಪ್ರವಾಸಿಗರಿಗೆ ಪ್ರವೇಶವಿಲ್ಲವಂತೆ. ಬಲಗಡೆ ಕಲ್ಯಾಣಮಂಟಪವಿದೆ.  
  ವಿರೂಪಾಕ್ಷ ದೇವಾಲಯ ಅತ್ಯಂತ ಪ್ರಾಚೀನವಾದದ್ದು. ಈ ದೇವಾಲಯಕ್ಕೆ ಪೂರ್ವ, ದಕ್ಷಿಣ, ಉತ್ತರ ಮೂರು ಕಡೆಗಳಿಂದಲೂ ಬಾಗಿಲುಗಳಿವೆ. ಆದರೆ ಪೂರ್ವದಿಂದ ಪ್ರವೇಶಿಸಲು ಅವಕಾಶವಿಲ್ಲ. ವಿರೂಪಾಕ್ಷನೆಂಬ ಹೆಸರು ಬರಲು ಕಾರಣವೇನು ಎಂಬುದಕ್ಕೆ ಪೌರಾಣಿಕ ಕಥೆ ಇದೆ.  ಇಂದ್ರಲೋಕದಲ್ಲಿ  ರಾಕ್ಷಸರ ಹಾವಳಿ ಮಿತಿಮೀರಿ ದೇವತೆಗಳಿಗೆ ನೆಮ್ಮದಿ ಇಲ್ಲದಂತಾಗಲು, ಅವರೆಲ್ಲ ಬ್ರಹ್ಮನ ಮೊರೆಹೊಕ್ಕರು. ಈ ರಕ್ಕಸರನ್ನು ಸಂಹರಿಸಲು ಶಿವನ ಕುಮಾರನಿಂದ ಮಾತ್ರ ಸಾಧ್ಯ. ಶಿವ ಪಾರ್ವತಿಯನ್ನು ತೊರೆದು ತಪೋನಿರತನಾದ ಕಾರಣ ಕುಮಾರಸಂಭವ ಸಾಧ್ಯವಿಲ್ಲ. ಹಾಗಾಗಿ ಶಿವನ ತಪಸ್ಸನ್ನು ಭಂಗಗೊಳಿಸಿದರೆ ಮಾತ್ರ ಸಾಧ್ಯ ಎಂದು ಬ್ರಹ್ಮ ನುಡಿಯುತ್ತಾನೆ. ದೇವತೆಗಳೆಲ್ಲರೂ ಆಲೋಚಿಸಿ, ಈ ಕೆಲಸಕ್ಕೆ ಮನ್ಮಥನೇ ಸರಿಯಾದ ವ್ಯಕ್ತಿ ಎಂದು ತೀರ್ಮಾನಿಸಿ ಮನ್ಮಥನಿಗೆ ನಿವೇದಿಸಿಕೊಳ್ಳುತ್ತಾರೆ. ಮನ್ಮಥ ಹೇಮಕೂಟಕ್ಕೆ ಬರುತ್ತಾನೆ. ಅಲ್ಲಿ ಪಂಪಾದೇವಿ ಶಿವನ ಪೂಜೆಗೆ ಅಣಿಯಾಗುವ ಸಮಯಕ್ಕೆ ಸರಿಯಾಗಿ ಮನ್ಮಥ ಪುಷ್ಪಬಾಣಗಳನ್ನು ಬಿಟ್ಟು ಶಿವನ ತಪಸ್ಸು ಕೆಡಿಸುತ್ತಾನೆ. ಶಿವನ ತಪೋಭಂಗವಾಗಿ ಅದರಿಂದ ಕೋಪಗೊಂಡ ಶಿವ ಮೂರನೇ ಕಣ್ಣಿಂದ ಮನ್ಮಥನನ್ನು ಸುಟ್ಟುಬಿಡುತ್ತಾನೆ. ಈ ಘಟನೆಯನ್ನು ನೋಡುತ್ತಲಿದ್ದ ದೇವಾದಿದೇವತೆಗಳು ಶಿವನ ಮೊರೆಹೊಕ್ಕಾಗ ಶಿವ ಶಾಂತನಾಗಿ ಮನ್ಮಥನಿಗೆ ರೂಪವಿಲ್ಲದೆಯೇ ಜೀವಿಸಲು ಅನುಗ್ರಹಿಸುತ್ತಾನೆ. ದೇವತೆಗಳೆಲ್ಲರೂ ಶಿವನಿಗೆ ಪಂಪಾಂಬೆಯೊಡನೆ ವಿವಾಹ ಏರ್ಪಡಿಸುತ್ತಾರೆ. ಅವರಿಗೊಬ್ಬ ಕುಮಾರ ಜನಿಸುತ್ತಾನೆ. ಕುಮಾರಸ್ವಾಮಿ ರಾಕ್ಷಸರನ್ನು ಸಂಹರಿಸುತ್ತಾನೆ. ಶಿವನಿಗೆ ವಿರೂಪಾಕ್ಷನೆಂದೂ, ಪಂಪಾದೇವಿಯನ್ನು ಮದುವೆಯಾದ ಕಾರಣ ಪಂಪಾಪತಿ ಎಂದೂ ಹೆಸರು ಬಂತು.
  ದೇವಾಲಯದ ಹಿಂಭಾಗಕ್ಕೆ ಬಂದು ಮೆಟ್ಟಲು ಹತ್ತಿ ಬಲಭಾಗದ ಕೋಣೆಗೆ ಬಂದರೆ ಅಲ್ಲಿ ಪೂರ್ವದಿಕ್ಕಿನಲ್ಲಿ ಒಂದು ಸಣ್ಣ ಕಿಂಡಿ ಇದೆ. ಆ ಕಿಂಡಿಯಿಂದ ಬರುವ ಬೆಳಕು ಪಶ್ಚಿಮ ಗೋಡೆಗೆ ಬೀಳುತ್ತದೆ. ಮುಂಭಾಗದ ಗೋಪುರದ ತಲೆಕೆಳಗಾದ ಬಿಂಬವು ಆ ಬೆಳಕಿನಲ್ಲಿ ಕಾಣುತ್ತೇವೆ.
 ಮುಂದೆ ನಾಲ್ಕು ಮೆಟ್ಟಲು ಹತ್ತಿದರೆ ಶ್ರೀ ವಿದ್ಯಾರಣ್ಯರ ದೇವಾಲಯವಿದೆ.
  ದೇವಾಲಯ ನೋಡಿ ಹೊರಗೆ ಬಂದರೆ ಗೋಪುರದ ಎದುರು ಉದ್ದದ ರಾಜಬೀದಿ ಬಲು ಸುಂದರವಾಗಿ ಕಾಣುತ್ತದೆ. ಬೀದಿಯ ಎರಡೂ ಬದಿ ಪಾಳು ಬಿದ್ದ ಮಂಟಪಗಳನ್ನು ನೋಡುತ್ತೇವೆ. ಹಿಂದೆ ಅಲ್ಲಿ ಮುತ್ತು ರತ್ನ ವ್ಯಾಪಾರ ನಡೆಯುತ್ತಿತ್ತಂತೆ. ಸೇರಿನಲ್ಲಿ ಅಳೆದು ಕೊಡುತ್ತಿದ್ದರಂತೆ.
 ದೇವಾಲಯದ ಎದುರು ಭಾಗದಲ್ಲಿ  ದೂರದಲ್ಲಿ ಮಾತುಂಗಪರ್ವತ ಕಾಣುತ್ತದೆ. ಅಲ್ಲಿಗೆ ಹೋಗಲು ೬೦೦ ಮೆಟ್ಟಲು ಹತ್ತಬೇಕಂತೆ. ಒಂದು ದಿನ ಹಂಪೆಯಲ್ಲಿ ಉಳಿದರೆ ಮಾತ್ರ ಹೋಗಬಹುದು. ಇಲ್ಲಾಂದರೆ ಸಮಯ ಸಾಲದು ಎಂದು ಬಸಯ್ಯ ಹೇಳಿದರು. ನಾವು ದೂರದಿಂದಲೆ ಅದನ್ನು ನೋಡಿ ತೃಪ್ತಿ ಪಟ್ಟುಕೊಂಡೆವು. 

 ಉಗ್ರನರಸಿಂಹ
ನಮ್ಮ ವಾಹನ ಹತ್ತಿ ಅನತಿ ದೂರದಲ್ಲಿದ್ದ ಉಗ್ರನರಸಿಂಹ ಯಾನೆ ಯೋಗಲಕ್ಷ್ಮೀನರಸಿಂಹ ದೇವಾಲಯಕ್ಕೆ ಬಂದೆವು. ೨೨ ಅಡಿ ಎತ್ತರದ ಬೃಹತ್ ಮೂರ್ತಿ. ೧೫೨೮ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಶಿಲ್ಪಿ ಆರ್ಯಕೃಷ್ಣಭಟ್ಟ ಇದನ್ನು ಕೆತ್ತಿದ್ದಂತೆ. ತಲೆಯ ಹಿಂದೆ ಹೆಡೆಬಿಚ್ಚಿದ ಸರ್ಪ, ತೊಡೆಯಮೇಲೆ ಲಕ್ಷ್ಮೀ ವಿಗ್ರಹವಿದೆ. ಪುಂಡರ ದಾಳಿಯಿಂದ ವಿಗ್ರಹ ಭಿನ್ನಗೊಂಡಿದೆ. ಹಿಂದೆ ಗರ್ಭಗುಡಿ ಇದ್ದಿರಬಹುದು. ಈಗ ಗರ್ಭಗುಡಿ ಇಲ್ಲದೆ ಬಯಲಿನಲ್ಲಿದೆ.  


ಬಡವಿಲಿಂಗ
 ನರಸಿಂಹನ ಅನತಿ ದೂರದಲ್ಲೆ ಬೃಹತ್ ಶಿವಲಿಂಗವಿರುವ ದೇವಾಲಯವಿದೆ. ೩.೩ಮೀಟರು ಎತ್ತರವಿದೆ. ಇದು ಎರಡನೆಯ ದೊಡ್ಡ ಶಿವಲಿಂಗವಂತೆ. (ಮೊದಲನೆಯದು ತಂಜಾವೂರಿನ ಬೃಹದೇಶ್ವರ ದೇವಾಲಯದಲ್ಲಿದೆಯಂತೆ). ಬಡವಿ ಎಂಬ ಬಡಹೆಂಗಸು ಇದನ್ನು ಪ್ರತಿಷ್ಠಾಪಿಸಿದ್ದಂತೆ. ಅದಕ್ಕೆ ಬಡವಿಲಿಂಗ ಎಂದು ಹೆಸರು ಬಂದಿರಬಹುದು. ಗರ್ಭಗುಡಿ ಇದೆ. ಶಿವಲಿಂಗವು ನೀರಿನಮೇಲೆ ಇದೆ. ಕಾಲುವೆಮೇಲೆ ಈ ದೇವಾಲಯ ಇರುವುದರಿಂದ ಯಾವಾಗಲೂ ಮೂರು ಅಡಿ ಶಿವಲಿಂಗವು ನೀರಿನಲ್ಲಿ ಮುಳುಗಿರುತ್ತದೆ.

ಕಮಲ ಮಹಲ್
  ಎತ್ತರವಾದ ಕೋಟೆಯ ಒಳಗೆ ಹೋದರೆ (ಒಳಹೋಗಲು ಪ್ರವೇಶದರವಿದೆ) ವಿಶಾಲ ಮೈದಾನವಿದೆ. ನಾಲ್ಕೂ ಸುತ್ತು ಕಾವಲು ಗೋಪುರವಿದೆ.  ಅದರ ಬಲಭಾಗದಲ್ಲಿ ಸುಂದರವಾದ ಕಮಲ ಮಹಲ್ ಎಂಬ ಮಂಟಪ ಕಾಣುತ್ತದೆ. ಇದನ್ನು ಲೋಟಸ್ ಮಹಲ್ ಎಂದೂ ಕರೆಯುತ್ತಾರೆ. ಹಿಂದೂ ಮುಸಲ್ಮಾನ ಎರಡೂ ಶೈಲಿಯನ್ನು ಹೋಲುವ ಕಟ್ಟಡ. ಸುಣ್ಣಗಾರೆಯಿಂದ ನಿರ್ಮಿಸಿದ ಎರಡು ಅಂತಸ್ತಿನ ಈ ಮಂಟಪ ಈಗಲೂ ತನ್ನ ಸೌಂದರ್ಯವನ್ನು ಕಳೆದುಕೊಂಡಿಲ್ಲ. ಮೇಲಿನ ಅಂತಸ್ತಿಗೆ ಹೋಗಲು ಮೆಟ್ಟಲುಗಳಿವೆ. ಈಗ ಪ್ರವಾಸಿಗರಿಗೆ ಮೇಲೆ ಹತ್ತಲು ಪ್ರವೇಶಾವಕಾಶವಿಲ್ಲ. ಈ ಹಿಂದೆ ಹತ್ತಿ ಹಾಳು ಗೈದಿದ್ದಾರಂತೆ. ಹಾಗಾಗಿ ಪ್ರವೇಶ ನಿರ್ಬಂಧಿಸಿದ್ದಾರೆ.
    ಎಡಭಾಗದಲ್ಲಿ ಕಟ್ಟಿಗೆಯಿಂದ ನಿರ್ಮಿತವಾದ ಅರಮನೆ ಇತ್ತಂತೆ. ಅದೆಲ್ಲ ಸುಟ್ಟು ಈಗ ಬರೀ ಕಲ್ಲಿನ ತಳಪಾಯ ಮಾತ್ರ ಇದೆ. ಯವನರು ಬೆಂಕಿ ಹಚ್ಚಿ ನಿರ್ನಾಮ ಮಾಡಿದ್ದಂತೆ. ರಾಜನಿಗೆ ೧೬ ಮಂದಿ ಹೆಂಡತಿಯರಿದ್ದರಂತೆ. ಅವರಿಗೆ ವಾಸಕ್ಕಾಗಿ ಈ ಅರಮನೆ ನಿರ್ಮಿಸಿದ್ದಂತೆ. ಅಲ್ಲಿಯ ಕಾವಲುಗಾರರಾಗಿ ೩೦೦ ಶಿಖಂಡಿಗಳು ಇದ್ದರಂತೆ. ಒಂದು ಕಾಲದಲ್ಲಿ ವಿಜಯನಗರದ ವೈಭವ ಹೇಗಿತ್ತೆಂಬುದನ್ನು ಕಲ್ಪನೆ ಮಾಡಿದರೆ ಅಬ್ಬ ಎಂದು ಅಚ್ಚರಿಪಡುವಂತಾಗುತ್ತದೆ.

ಗಜಶಾಲೆ
 ಅರಸನ ಪಟ್ಟದಾನೆಗಳನ್ನು ಕಟ್ಟಲು ಸುಂದರ ಗಜಶಾಲೆ ನಿರ್ಮಿಸಿದ್ದಾರೆ. ಈ ಕಟ್ಟಡದ ಮೇಲ್ಭಾಗ ಗೋಳಾಕಾರವಾಗಿದ್ದು, ಕಮಾನುಗಳುಳ್ಳ ಹನ್ನೊಂದು ಕೊಟಡಿಗಳನ್ನು ಒಳಗೊಂಡು ಮನಮೋಹಕವಾಗಿದೆ. ಈಗಲೂ ಭದ್ರವಾಗಿಯೇ ಇದೆ. 

ಅಶ್ವಶಾಲೆ
ಗಜಶಾಲೆಯ ಎಡಭಾಗದಲ್ಲಿ ಅಶ್ವಗಳನ್ನು ಕಟ್ಟುತ್ತಿದ್ದ ಕಟ್ಟಡ ಕಾಣಬಹುದು. ಅದು ಕೆಲಸಗಾರರು ವಾಸವಾಗಿದ್ದ ಕಟ್ಟಡ ಎಂದೂ ಹೇಳುತ್ತಾರೆ. ಅಶ್ವಗಳಿತ್ತೊ, ಅಲ್ಲ ಕೆಲಸಗಾರರು ಅಲ್ಲಿ ವಾಸವಾಗಿದ್ದರೋ ಸರಿಯಾಗಿ ಹೇಳುವವರಿಲ್ಲ. ಆದರೆ ಕಟ್ಟಡ ಮಾತ್ರ ಭದ್ರವಾಗಿ ಚೆನ್ನಾಗಿದೆ.
ಮಹಾನವಮಿ ದಿಬ್ಬ
ರಾಜ ಪ್ರಾಂಗಣದಲ್ಲಿ ಪಶ್ಚಿಮಾಭಿಮುಖವಾಗಿ ನಿರ್ಮಿಸಲ್ಪಟ್ಟಿರುವ ಮೂರು ಸ್ತರದ ಮಹಾನವಮಿ ದಿಬ್ಬ ೮ ಮೀಟರು ಎತ್ತರ, ೮೦ ಅಡಿ ಉದ್ದ, ೮೦ ಅಡಿ ಅಗಲವಿದೆ. ಕಲ್ಲಿನಲ್ಲಿ ಕಟ್ಟಿದ ವಿಶಾಲವಾದ ವೇದಿಕೆಯೇ ಮಹಾನವಮಿ ದಿಬ್ಬ. ಪೂರ್ವ, ಪಶ್ಚಿಮ ಹಾಗೂ ದಕ್ಷಿಣದಿಕ್ಕಿನಲ್ಲಿ ಪ್ರವೇಶಿಸಲು ಮೆಟ್ಟಲುಗಳಿವೆ. ಶ್ರೀಕೃಷ್ಣದೇವರಾಯ ಒರಿಸ್ಸ ರಾಜ್ಯ ಗೆದ್ದ ಸವಿನೆನಪಿಗಾಗಿ ಇದನ್ನು ಕಟ್ಟಿಸಿದ್ದಂತೆ. ಒಂದೊಂದು ಹಂತದಲ್ಲೂ ಪೌರಾಣಿಕ ಚಿತ್ರಗಳನ್ನು ಕೆತ್ತಿಸಿದ್ದಾರೆ. ಮಹಾನವಮಿ (ವಿಜಯದಶಮಿ) ಹಬ್ಬದ ದಿನಗಳಲ್ಲಿ ಈ ದಿಬ್ಬದಲ್ಲಿ ವಿಜಯನಗರದ ಅರಸರು ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರೆಂದು ಉಲ್ಲೇಖಿಸಲಾಗಿದೆ. 

ಕರೆಕಲ್ಲಿನ ಕಲ್ಯಾಣಿ
  ದಿಬ್ಬದ ಹತ್ತಿರವೇ ಸುಂದರ ಕೆರೆ ಇದೆ. ಅದರ ವಿನ್ಯಾಸ ಬಹಳ ಚೆನ್ನಾಗಿದೆ. ಹಿಂದೆ ದಸರಾ ಸಮಯದಲ್ಲಿ ಭಾಗವಹಿಸಲು ಬರುತ್ತಿದ್ದ ಸಾಮಂತರುಗಳ ಆನೆ ಕುದುರೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಇದನ್ನು ನಿರ್ಮಿಸಿದ್ದೆಂದು ಹೇಳುತ್ತಾರೆ. 

ರಾಣಿಯರ ಸ್ನಾನಗೃಹ
  ಹಿಂದೂ ಹಾಗೂ ಮುಸಲ್ಮಾನ ಶೈಲಿಯಲ್ಲಿ ಕಟ್ಟಿರುವ ರಾಣಿಯರ ಸ್ನಾನಗೃಹ ಕಮಲ ಮಹಲ್ ಕಟ್ಟಡದ ಶೈಲಿಯಲ್ಲಿದೆ. ಮೇಲೆ ಉಪ್ಪರಿಗೆಯಿದ್ದು, ಕಟ್ಟಡದ ನಡುಭಾಗದಲ್ಲಿ ೮ ಅಡಿ ಆಳದ ಈಜುಕೊಳವಿದೆ. ಈ ತೊಟ್ಟಿಗೆ ನೀರು ಬರಲು ಹೊರಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿದ ಕಾಲುವೆಯಿದೆ. ಉಪಯೋಗಿಸಿದ ನೀರು ಹೊರಗೆ ಹೋಗಲು ನಾಲ್ಕು ತೂಬುಗಳಿವೆ.
   ಅವನ್ನೆಲ್ಲ ಬೆರಗಿನಿಂದ ನೋಡಿ, ಒಂದು ಕಾಲದಲ್ಲಿ ರಾಣಿಯರು ಇಲ್ಲಿ ಮನಸೋ ಇಚ್ಛೆ ಈಜಿ ಖುಷಿಪಟ್ಟಿರಬಹುದು ಎಂದು ಕಲ್ಪನೆ ಮಾಡಿಕೊಳ್ಳುತ್ತ ಹೊರ ಬಂದೆವು. ಹೊಟ್ಟೆ ಚುರುಚುರು ಎನ್ನುತ್ತಿತ್ತು. ಹೊರಗಿನ ವಿಶಾಲ ಮೈದಾನದಲ್ಲಿ ನಮಗೆ ಊಟದ ವ್ಯವಸ್ಥೆಯಾಗಿತ್ತು. ಊಟ ಬರುವ ಮೊದಲು ಸುಮ್ಮನೆ ಕೂರಲು ಆಗದ ಹದಿನೈದರ ಬಾಲೆ ಸೌಪರ್ಣಿಕ ಅಲ್ಲೆ ಇದ್ದ ದೊಡ್ಡ ಮರ ಏರಿ ಕೊಂಬೆಯಿಂದ ಕೊಂಬೆಗೆ ಹೋಗುತ್ತಲಿರುವುದು ನೋಡಿ, ಪೂರ್ವಜರ ಗುಣ ಸ್ವಲ್ಪಮಟ್ಟಿಗೆ ಅವಳಲ್ಲಿ ಇನ್ನೂ ಉಳಿದುಕೊಂಡದ್ದು ಖಾತ್ರಿ ಆಯಿತು! ಮರದಮೇಲಿರುವ ಅವಳ ಚಿತ್ರ ಕ್ಲಿಕ್ಕಿಸಿದೆ.
  ಹಂಪೆಯ ಸುತ್ತಮುತ್ತ ಹತ್ತಿರದಲ್ಲಿ ಹೊಟೇಲುಗಳಿಲ್ಲ. ಕೆಲವೆಡೆ ಪೆಟ್ಟಿಗೆ ಅಂಗಡಿಗಳಿವೆಯಷ್ಟೆ. ಗುಂಪಿನಲ್ಲಿ ಬರುವ ಪ್ರವಾಸಿಗಳಿಗೆ ಊಟದ ವ್ಯವಸ್ಥೆಯನ್ನು ಮೊದಲೇ ಹೇಳಿದರೆ ಮಾರ್ಗದರ್ಶಕರು ಏರ್ಪಾಡು ಮಾಡುತ್ತಾರೆ. ನಮಗೆ ಬಸಯ್ಯ ಊಟದ ವ್ಯವಸ್ಥೆ ಮಾಡಿದ್ದರು. ಜೋಳದ ರೊಟ್ಟಿ, ಚಪಾತಿ, ಎಣ್ಣೆಗಾಯಿ, ಕಾಳು ಪಲ್ಯ, ಅನ್ನ, ಸಾರು, ಸಾಂಬಾರು, ಹಪ್ಪಳ, ಮಜ್ಜಿಗೆ ಉಪ್ಪಿನಕಾಯಿ. ಇಷ್ಟು ಬಗೆ ಇದ್ದ ಒಂದು ಊಟಕ್ಕೆ ರೂ. ೮೦. ಪ್ರವಾಸಿಗರೆಲ್ಲ ಅದೇ ಸ್ಥಳದಲ್ಲಿ ಅಲ್ಲಲಿ ಊಟ ಮಾಡುತ್ತಿದ್ದರು. ವಿವಿಧ ಕಡೆಗಳಿಂದ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಬಂದಿದ್ದರು.
   ಊಟ ಮುಗಿಸಿದ ಕೂಡಲೆ ಬಸಯ್ಯ ಅವರಿಗೆ ತುರ್ತು ಕರೆ ಬಂತು. ಅವರ ಮಗಳು ಡೆಂಗ್ಯುವಿನಿಂದ ಆಸ್ಪತ್ರೆಯಲ್ಲಿದ್ದಾಳಂತೆ. ಅವಳಿಗೆ ರಕ್ತಕಣ ಕಡಿಮೆಯಾಗಿ ರಕ್ತ ಕೊಡಬೇಕು ಎಂದು ಅವರ ಪತ್ನಿ ಕರೆ ಮಾಡಿ ಬರಲು ಹೇಳಿದರಂತೆ. ಅವರು ನಮ್ಮ ಅನುಮತಿ ಕೇಳಿ ಬೇರೆ ಗೈಡ್ ವ್ಯವಸ್ಥೆ ಮಾಡಿ ತೆರಳಿದರು.
ವಿಜಯವಿಠ್ಠಲ
 ನಾವು ಊಟ ಮುಗಿಸಿ ವಿಜಯವಿಠ್ಠಲ ದೇವಾಲಯಕ್ಕೆ ಹೋದೆವು. ಅಲ್ಲಿಗೆ ಹೋಗಲು ಒಂದು ಕಿಮೀ ನಡೆಯಬೇಕು. ಇಲ್ಲವೇ ಬ್ಯಾಟರಿಚಾಲಿತ ವಾಹನದಲ್ಲಿ ಹೋಗಬಹುದು. ನಾವು ಕೆಲವರು ನಡೆದೇ ಹೊರಟೆವು. ಹೆಚ್ಚಿನಮಂದಿಯೂ ಬ್ಯಾಟರಿ ವಾಹನಕ್ಕೆ ಸರತಿ ಸಾಲಿನಲ್ಲಿ ಕಾದರು. ಅಲ್ಲಿಗೆ ತೆರಳುವ ರಸ್ತೆ ಮಣ್ಣುರಸ್ತೆ. ಬ್ಯಾಟರಿ ವಾಹನ ಹೋಗುವಾಗ ಬಹಳ ಧೂಳು ಏಳುತ್ತಿತ್ತು. ನಾವು ನಡೆಯುವವರು ಮೂಗುಮುಚ್ಚಿ ಸಾಗಬೇಕು. ವಾಹನ ಚಲಾಯಿಸುತ್ತಿದ್ದ ಚಾಲಕಿಯರು (ಹೆಂಗಸರೇ ವಾಹನ ಚಲಾಯಿಸುತ್ತಿದ್ದುದು) ಮೂಗಿಗೆ ಸದಾ ಬಟ್ಟೆ ಕಟ್ಟಿಕೊಂಡದ್ದು ಕಂಡಿತು. ಆಶ್ಚರ್ಯದ ಸಂಗತಿ ಎಂದರೆ ಆ ರಸ್ತೆಗೆ ಡಾಮಾರು ಹಾಕದಿದ್ದುದು ಏಕೆ? ವಿಶ್ವಪಾರಂಪರಿಕ ತಾಣವೆಂದು ರಸ್ತೆ ಹಾಳಾದರೂ ದುರಸ್ತಿ ಕೈಗೊಳ್ಳುವುದು ನಿಷಿದ್ಧವೆಂದಿದೆಯೋ ಏನೋ?  ಡಾಮರು ಹಾಕಿ ರಸ್ತೆಯನ್ನು ಸುಸ್ಥಿತಿಯಲ್ಲಿಟ್ಟರೆ ನಿತ್ಯ ಇಂಥ ಧೂಳು ಕುಡಿಯುವ ಪ್ರಮೇಯ ಬರಲಿಕ್ಕಿಲ್ಲ.
 ವಿಜಯನಗರದಲ್ಲಿ ವಾಸ್ತುಶಿಲ್ಪ ಶೈಲಿಯ ಒಂದು ಪರಿಪೂರ್ಣ ಸುಂದರ ದೇವಾಲಯವು ವಿಠ್ಠಲ ದೇವಾಲಯವೆನ್ನಬಹುದು. ಇಮ್ಮಡಿ ದೇವರಾಯನ ಕಾಲದಲ್ಲಿ (ಕಿ.ಶ.೧೪೨೨-೪೬) ನಿರ್ಮಾಣಗೊಂಡ ಈ ದೇವಾಲಯಕ್ಕೆ ಕೃಷ್ಣದೇವರಾಯನ ಕಾಲದಲ್ಲಿ (ಕಿ.ಶ.೧೫೦೯-೧೫೨೯) ಅನೇಕ ಭಾಗಗಳನ್ನು ಸೇರಿಸಲಾಯಿತು. ಮುಖ್ಯದೇಗುಲದ ನೈರುತ್ಯ ದಿಕ್ಕಿನ ನೂರು ಸ್ತಂಭಗಳ ಮಂಟಪ (ಕಿ.ಶ.೧೫೧೬) ಪೂರ್ವ ಹಾಗೂ ದಕ್ಷಿಣದ್ವಾರ ಗೋಪುರಗಳನ್ನು ಕೃಷ್ಣದೇವರಾಯ ಮತ್ತು ಅವರ ಅರಸಿಯರು ಕ್ರಿ.ಶ. ೧೫೧೩ರಲ್ಲಿ ಕಟ್ಟಿಸಿರುವುದಾಗಿ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಎಲ್ಲ ವಿವರಗಳನ್ನು ವಿಶ್ವನಾಥ ಮಾಳಗಿ ಸವಿಸ್ತಾರವಾಗಿ ಹೇಳಿದರು. ಅವರು ಆರು ವರ್ಷಗಳಿಂದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಜಯನಗರ ಸಾಮ್ರಾಜ್ಯ ವಿಷಯ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿರುವರಂತೆ.
 


ಸಪ್ತಸ್ವರ ಸಂಗೀತ ಹೊಮ್ಮಿಸುವ ಕಂಬಗಳು
ದೇವಾಲಯದ ಬಲಭಾಗದಲ್ಲಿ ಬಹಳ ಸುಂದರವಾದ ಕಟ್ಟಡವಿದೆ. ಆ ಕಟ್ಟಡದ ಕಂಬಗಳನ್ನು ತಟ್ಟಿದರೆ ಸಪ್ತಸ್ವರ ಕೇಳುತ್ತದಂತೆ. ಈಗ ಪ್ರವಾಸಿಗರಿಗೆ ಆ ಕಟ್ಟಡದ ಒಳಗೆ ಪ್ರವೇಶವಿಲ್ಲ. ಪ್ರವಾಸಿಗರು ಸಂಗೀತ ಹೊರಡಿಸಲು ಕಂಬ ತಟ್ಟಿ, ಕುಟ್ಟಿದ್ದರಲ್ಲಿ ಕೆಲವು ಕಂಬಗಳು ಶಿಥಿಲವಾಗಿವೆಯಂತೆ. ಆತುರ, ಕಾಳಜಿ ಇಲ್ಲದ ಸ್ವಭಾವಗಳಿಂದ ನಾವು ಎಷ್ಟೋ ಇಂಥ ಪಾರಂಪರಿಕ ತಾಣಗಳನ್ನು ಹಾಳುಗೆಡವಿ ನಾಶಮಾಡಲು ಕಾರಣಕರ್ತರಾಗಿದ್ದೇವೆ. ಇದು ನಿಜಕ್ಕೂ ಬೇಸರದ ಸಂಗತಿ.  ನಾವು ಕಟ್ಟಡಕ್ಕೆ ಒಂದು ಸುತ್ತು ಬಂದು ಕೇವಲ ಕಣ್ಣಿಂದ ನೋಡಿ ತೃಪ್ತಿಪಡಬೇಕಾಯಿತು.

ಸಂಗೀತ ಹೊಮ್ಮಿಸುವ ಕಲ್ಲುಕಂಬ ನಿರ್ಮಿಸುವ ಮೊದಲು ಮಾದರಿಗಾಗಿ ನಿರ್ಮಿಸಿದ ಮಂಟಪ

 ಕಲ್ಲಿನ ರಥ
ಹಂಪೆಯ ಕಲ್ಲಿನ ರಥ ಪುಸ್ತಕಗಳಲ್ಲಿ, ಚಿತ್ರಗಳಲ್ಲಿ ನೋಡಿದಾಗ ನನಗೆ ಇದನ್ನು ಕಣ್ಣಾರೆ ನೋಡಬೇಕೆಂಬ ಕುತೂಹಲ ಬಹಳವಿತ್ತು. ಅದನ್ನು ಮನದಣಿಯೆ ನೋಡಿ ಚಿತ್ರ ಕ್ಲಿಕ್ಕಿಸಿಕೊಂಡು ತೃಪ್ತಿಪಟ್ಟೆ.  ವಿಜಯನಗರ ವಾಸ್ತುಶಿಲ್ಪದ ಅದ್ಭುತ ಕೆತ್ತನೆ ಇದು ಎಂದು ಹೇಳಬಹುದು.
  ದೇವಾಲಯದ ಎದುರು ಹೊರಭಾಗದಲ್ಲಿ ವಿಶಾಲ ಮಾರುಕಟ್ಟೆ ಇದ್ದುದಕ್ಕೆ ಕಲ್ಲುಕಂಬಗಳ ಕುರುಹುಗಳಿವೆ.  ಅನತಿ ದೂರದಲ್ಲಿ ದೊಡ್ಡದಾದ ಕೊಳವಿದೆ. ಅದು ನೀರಿಲ್ಲದೆ ಒಣಗಿ ತನ್ನ ಅವನತಿಯ ಕಥೆಯನ್ನು ಸಾರುವಂತೆ ಭಾಸವಾಗುತ್ತದೆ.
  ದೇವಾಲಯ ಸುತ್ತು ಹೊಡೆದು ಎಲ್ಲ ಗತವೈಭವವನ್ನು ಕಣ್ಣುತುಂಬಿಕೊಂಡು ಅಲ್ಲಿಂದ ಹೊರಟೆವು. ನಾವು ಕೆಲವರು ನಡೆದೇ ಬಂದೆವು.  ಬಾಕಿದ್ದವರು ವಾಹನ ಕಾದು ಅದರಲ್ಲಿ ಬರಲು ಸುಮಾರು ಸಮಯ ಹಿಡಿಯಿತು. ನಾವು ನಮ್ಮ ವಾಹನದ ಬಳಿ ಕಾದು ಕಾದು ಸಾಕಾಯಿತು. ಮಂಜುನಾಥ ಅವರು ಕಲ್ಲಂಗಡಿ, ಪೈನಾಪಲ್ ಹಣ್ಣು ತೆಗೆಸಿಕೊಟ್ಟರು. ತಿಂದು ತಂಪಾದೆವು.  ಹಂಪೆಯ ಕಾಲುಭಾಗವನ್ನಷ್ಟೆ ನೋಡಿದ ನಾವು ಹಂಪೆ ಪೂರ್ತಿ ನೋಡಲಾಗದ ಅತೃಪ್ತಿಯಿಂದಲೇ ಹಂಪೆಗೆ ವಿದಾಯ ಹೇಳಿ ಅಂತೂ ಸಂಜೆ ಆರು ಗಂಟೆಗೆ  ನಮ್ಮ ವಾಹನ ಏರಿದೆವು. 

ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ