ಶುಕ್ರವಾರ, ಜನವರಿ 13, 2017

ಉತ್ತರಕರ್ನಾಟಕದ ಶಿಲ್ಪಕಲೆಯ ವೈಭವ ಹಂಪೆ, ಬಾದಾಮಿ, ಐಹೊಳೆ,ಬಿಜಾಪುರ, ಗದಗ ಭಾಗ -೨

ಬಾದಾಮಿ 
 ಸಂಜೆಯ ಚಹಾ ಕೊಡಿಸಲಿಲ್ಲವೆಂದು ಕೆಲವರು ಆಕ್ಷೇಪವೆತ್ತಿದ ಕಾರಣ ಸಂಜೆ ಏಳು ಗಂಟೆಗೆ ಚಹಾಕ್ಕೆ ನಿಲ್ಲಿಸಲಾಯಿತು. ಹತ್ತು ಮಂದಿ ಚಹಾ ಕುಡಿಯಲು ಬರೋಬ್ಬರಿ ಅರ್ಧ ಗಂಟೆ ವ್ಯಯವಾಯಿತು. ಅಲ್ಲಿಂದ ಮುಂದೆ ಎಲ್ಲೂ ನಿಲ್ಲದೆ ಬಾದಾಮಿ ತಲಪುವಾಗ ಗಂಟೆ ರಾತ್ರೆ ಹತ್ತು. ಅಲ್ಲಿಯ ಒಂದು ಭೋಜನಾಲಯದಲ್ಲಿ ಊಟ ಮಾಡಿದೆವು. ಹಂಪೆಯಿಂದ ಬಾದಾಮಿಗೆ ೧೪೦ಕಿಮೀ. ನಾಲ್ಕು ಗಂಟೆ ಬೇಕಾಯಿತು.
ಹೊಂದಾಣಿಕೆ ಇಲ್ಲದ ಜೀವನ.. ..
 ಅನ್ನ ತಣ್ಣಗೆ, ಚಪಾತಿ ಒಣಗಿದೆ, ಎಂಬ ಆಕ್ಷೇಪ ಕೆಲವರಿಂದ ಬಂತು. ನಾವು ಊಟಕ್ಕೆ ಹೋದದ್ದು ರಾತ್ರೆ ಹತ್ತು ಗಂತೆಗೆ. ಬಿಸಿ ಇರಲು ಹೇಗೆ ಸಾಧ್ಯ? ಅವೇಳೆಯಲಿ ಹೋಗಿದ್ದೇವೆ. ಹಸಿದ ಹೊಟ್ಟೆಗೆ ಅಷ್ಟಾದರೂ ಕೊಟ್ಟಿದ್ದಾರಲ್ಲ. ಹಸಿವೆಗೆ ಒಂದಷ್ಟು ಆಹಾರ ಹಾಕಿದರೆ ಸಾಕು ಎಂಬ ಮನೋಸ್ಥಿತಿ ಬೆಳೆಸಿಕೊಳ್ಳಬೇಕು ಎನಿಸಿತು. ಊಟವಾಗಿ ವಸತಿಗೃಹ ಸೇರುವಾಗ ಗಂಟೆ ೧೧. ಮೂವತ್ತೊಂದು ಮಂದಿಗೆ ೩ ಕೋಣೆಗಳಿತ್ತು. ಬೇರೆ ಖಾಲಿ ಕೋಣೆ ಇರಲಿಲ್ಲ. ಹೇಗೋ ಹೊಂದಾಣಿಕೆ ಮಾಡಿ ಮಲಗಿ ಎಂದು ಹೇಳಿದರು. ನಾವು ೧೯ ಮಂದಿ ಹೆಂಗಸರು ಇದ್ದುದು. ೧೦+೯ ಎಂದು ಎರಡು ಕೋಣೆಗಳಲ್ಲಿ ಏಳು ಮಂಚ ಇದ್ದುದದನ್ನು ಜೋಡಿಸಿ ಅನುಸರಿಸಿ ಮಲಗಿದೆವು. ತಣ್ಣೀರು ಸ್ನಾನ ಮಾಡಿ ಮಲಗುವಾಗ ಹನ್ನೆರಡು ಗಂಟೆ. ಗಂಡಸರಲ್ಲಿ ಒಬ್ಬರು ಇಂಥ ವ್ಯವಸ್ಥೆಗೆ ಅಸಮಾಧಾನವ್ಯಕ್ತಪಡಿಸಿದ್ದು ಕಂಡಿತು. ಇದೇನು ಹೀಗೆ ಒಟ್ಟಿಗೆ ಮಲಗುವುದು ಹೇಗೆ? ಗಂಡ ಹೆಂಡತಿಗೆ ಒಂದು ರೂಮು ಮಾಡಬೇಕಿತ್ತು.  ಬೇರೆ ಬೇರೆ ಮಾಡಿ ನೀವೇನು ದುಡ್ಡು ಉಳಿಸುತ್ತಿದ್ದೀರ? ನಾವು ದುಡ್ಡು ಕೊಟ್ಟಿಲ್ಲವೆ? ಎಂದೆಲ್ಲ ಕೂಗಾಡಿಬಿಟ್ಟರಂತೆ. ಅವರ ಮಾತು ಕೇಳಿ ವ್ಯವಸ್ಥಾಪಕರಿಗೆ ಬಲು ಬೇಸರವಾಯಿತು. ಪ್ರತ್ಯೇಕ ರೂಮು ಮಾಡಲು ಅಲ್ಲಿ ಕಾಲಿ ಇರಬೇಕಲ್ಲ. ಅಷ್ಟು ಸಾಮಾನ್ಯ ಜ್ಞಾನವೂ ಇಲ್ಲದ ವ್ಯಕ್ತಿಗಳಿರುತ್ತಾರಲ್ಲ. ಸಿಟ್ಟಿನಿಂದ ಆ ದಂಪತಿಗಳು ಮಾರನೆದಿನ ಎದ್ದು ಕೊಟ್ಟ ದುಡ್ಡಲ್ಲಿ ಮುಕ್ಕಾಲು ದುಡ್ಡನ್ನು ಪಡೆದು ವಾಪಾಸು ಹೋಗಿಯೇಬಿಟ್ಟರಂತೆ. ಅಂಥ ಮಂದಿ ಈ ತರಹ ಪ್ರವಾಸ ಬಂದಿದ್ದಾದರೂ ಏಕೆ? ಪ್ರತ್ಯೇಕವಾಗಿ ಅವರೇ ಹೋಗಬಹುದಿತ್ತಲ್ಲ ಎನಿಸಿತು. ಒಂದು ದಿನ ಇಷ್ಟು ಸಣ್ಣ ವಿಷಯಕ್ಕೂ ಹೊಂದಾಣಿಕೆ ಮಾಡದ ಅವರ ಜೀವನ.. .. ಈ ಚುಕ್ಕಿಗಳ ಮುಂದಿನ ಸರಿಯಾದ ಪದ ನೀವೇ ಊಹಿಸಿಕೊಳ್ಳಿ!  




ಬಾದಾಮಿ ಗುಹಾಲಯ
೨೫-೧೨-೨೦೧೬ರಂದು ಬೆಳಗ್ಗೆ ಗಂಟೆ ೮ಕ್ಕೆ ಹತ್ತಿರದಲ್ಲೆ ಇದ್ದ ಉಡುಪಿ ಹೋಟೆಲಿಗೆ ಹೋದೆವು. ಅಲ್ಲಿ ಬೇ‌ಕಾದ ತಿಂಡಿ (ಸೆಟ್ದೋಸೆ) ತಿಂದು ಹೊರಡುವಾಗ ೯.೩೦. ಮೊದಲಿಗೆ ಬಾದಾಮಿ ಗುಹಾಲಯಕ್ಕೆ ಹೋದೆವು. ಮಾರ್ಗದರ್ಶಕರಾದ ಮಲ್ಲಿಕಾರ್ಜುನ ಕಲ್ಮಠ ಅವರು ಗುಹಾಲಯದ ಇತಿಹಾಸವನ್ನು ತೆರೆದಿಟ್ಟರು. ಕಳೆದ ೪೦ ವರ್ಷಗಳಿಂದ ನಿರಂತರವಾಗಿ ಇಲ್ಲಿ ಬರುವ ಪ್ರವಾಸಿಗರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರಂತೆ. ಪ್ರವಾಸಿಗರಿಂದ ದಿನಕ್ಕೆ ೧೫೦೦ ರೂ. ಪಡೆಯುತ್ತಾರಂತೆ. ಒಂದು ನಿಮಿಷ ಇಲ್ಲಿ ಕೇಳಿ ಎಂದು ಕಂಚಿನಕಂಠದಲ್ಲಿ ಸುರು ಮಾಡಿದರೆ ನಾವು ಅಲ್ಲೇ ಸ್ತಬ್ಧವಾಗಿ ನಿಂತು ಅವರ ಮಾತು ಕೇಳಲೇಬೇಕು. ಹಾಗಿತ್ತು ಅವರ ಶೈಲಿ.
ಪ್ರವೇಶಶುಲ್ಕ ರೂ. ೧೫. ವಿದೇಶಿಗರಿಗೆ ರೂ.೨೦೦.  ವಿದೇಶದವರಿಗೆ ಇಷ್ಟೊಂದು ದುಡ್ಡು ಪಡೆಯುವುದು ಇದು ಅನ್ಯಾಯ. ತೆರೆಯುವ ವೇಳೆ: ಬೆಳಗ್ಗೆ ೬ರಿಂದ ಸಂಜೆ ೬ರವರೆಗೆ.
ನಾವು ಹೆಂಗಸರೇ ಸ್ಟ್ರಾಂಗು ಗುರು ಎಂದು ರುಜುವಾತುಪಡಿಸಲು ಪ್ರತ್ಯೇಕ ಚಿತ್ರ ಕ್ಲಿಕ್ಕಿಸಿಕೊಂಡೆವು.


   ಬಾದಾಮಿಯಲ್ಲಿ ನಾಲ್ಕು ಗುಹಾಂತರ ದೇವಾಲಯಗಳಿವೆ. ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ವೈಭವವನ್ನು ಈ ದೇವಾಲಯಗಳಲ್ಲಿ ನೋಡಬಹುದು. ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಚಾಲುಕ್ಯ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಗುಡ್ಡದಲ್ಲಿ ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಕ್ರಿ.ಶ. ೬೪೨ರಲ್ಲಿ ಇಮ್ಮಡಿ ಪುಲಿಕೇಶಿಯ ಕೊನೆಗಾಲದಲ್ಲಿ ಪಲ್ಲವರು ಬಾದಾಮಿಯನ್ನು ಮುತ್ತಿ ಹಾಳುಗೆಡವಿದರು. ೧೩ ವರ್ಷಗಳ ನಂತರ ಪುಲಿಕೇಶಿಯ ಮಗ ವಿಕ್ರಮಾದಿತ್ಯ ಪಲ್ಲವರನ್ನು ಸೋಲಿಸಿ ರಾಜ್ಯವನ್ನು ವಶಪಡಿಸಿಕೊಂಡ. ಕ್ರಿ.ಶ. ೭೫೦ರ ವೇಳೆಗೆ ಸಾಮ್ರಾಜ್ಯ ಬಲಗುಂದುತ್ತಿತ್ತು. ೭೫೩ರಲ್ಲಿ ರಾಷ್ಟ್ರಕೂಟರ ವಂಶದವನಾದ ದಂತಿದುರ್ಗ ಸಾಮ್ರಾಟ ಇಮ್ಮಡಿ ಕೀರ್ತಿವರ್ಮನನ್ನು ಕೆಳಗಿಳಿಸಿ ತನ್ನ ರಾಜವಂಶವನ್ನು ಸ್ಥಾಪಿಸಿದ.


೧) ಶೈವ ಗುಹಾಲಯ

ಇಲ್ಲಿ  ನಟರಾಜ, ಮಹಿಷಾಸುರಮರ್ಧಿನಿ, ಅರ್ಧನಾರೀಶ್ವರ, ಹರಿಹರ ವಿಗ್ರಹಗಳನ್ನು ಏಕಶಿಲೆಯಲ್ಲಿ ಸುಂದರವಾಗಿ ಕೆತ್ತಿರುವುದು ಗಮನಸೆಳೆಯುತ್ತವೆ.
) ನಟರಾಜ: ಈ ಮೂರ್ತಿಯಲ್ಲಿ ೧೮ ಕೈಗಳಲ್ಲಿ ನೃತ್ಯದ ವಿವಿಧ ಭಂಗಿಗಳು ಗಮನ ಸೆಳೆಯುತ್ತವೆ. ನಾಟ್ಯಶಾಸ್ತ್ರದಲ್ಲಿ ಬರುವ ವಿವಿಧ ರೀತಿಗಳನ್ನು ಇದೊಂದೇ ವಿಗ್ರಹದಿಂದ ಅರಿಯಬಹುದಾಗಿದೆ. ೮೧ ಭಂಗಿಗಳಿವೆಯಂತೆ. ಶಿವನ ನರ್ತನ ನೋಡಿ ಗಣೇಶ ಕೂಡ ಎದ್ದು ನರ್ತಿಸುವ ಬಗೆ, ಅವರಿಬ್ಬರ ನಾಟ್ಯಕ್ಕೆ ತಂಡು ಎಂಬ ಸಂಗೀತಗಾರ ತ್ರಿಪುಷ್ಕರ ವಾದ್ಯ ನುಡಿಸುವ, ಪಕ್ಕದಲ್ಲಿ ನಂದಿ ತಲೆದೂಗುತ್ತಿರುವ ಈ ಶಿಲಾಮೂರ್ತಿಯ ಸವಿವರಣೆ ಹೇಳುವ ಮಲ್ಲಿಕಾರ್ಜುನ ಅದನ್ನು ಕೇಳುತ್ತ ನಾವು ನೋಡುತ್ತಿದ್ದರೆ ಸಮಯ ಕಳೆಯುವುದೇ ಗೊತ್ತಾಗದು.
ಆ)    ಮಹಿಷಾಸುರ ಮರ್ದಿನಿ: ತ್ರಿಶೂಲದಿಂದ ಮಹಿಷನೆಂಬ ರಕ್ಕಸನನ್ನು ದೇವಿ ಮರ್ದನ ಮಾಡುತ್ತಿರುವ, ದೇವಿಯ ಬಲಭಾಗದಲ್ಲಿ ನವಿಲಿನ ಮೇಲೆ ಕುಳಿತ ಕಾರ್ತಿಕೇಯ, ಎದುರು ಗಣೇಶನಿರುವ ಈ ವಿಗ್ರಹ ಸುಂದರವಾಗಿದೆ.
ಇ)     ಅರ್ಧನಾರೀಶ್ವರ: ಅರ್ಧಭಾಗ ಪಾರ್ವತಿ, ಇನ್ನರ್ಧ ಭಾಗ ಶಿವ ಇರುವ ಈ ವಿಗ್ರಹದಲ್ಲಿ, ಕರ್ಣಕುಂಡಲ, ಬಳೆ, ತೋಳಬಂದಿ, ನೂಪುರ, ಕೈಯಲ್ಲಿ ಕಮಲ ಹಿಡಿದಿರುವ ಭಾಗ ಪಾರ್ವತಿಯದು, ಕಪಾಲ, ಅರ್ಧಚಂದ್ರ, ಹುಲಿಚರ್ಮ, ನಾಗಬಂಧವಿರುವ ಭಾಗ ಶಿವನದು. ಸ್ತ್ರೀಗಿಂತ ಪುರುಷ ಹೆಚ್ಚಲ್ಲ, ಪುರುಷನಿಗಿಂತ ಸ್ತ್ರೀ ಮೇಲಲ್ಲ ಎಂಬುದನ್ನು ನಾವು ಈ ವಿಗ್ರಹದಿಂದ ತಿಳಿಯಬಹುದು.
ಈ)    ಹರಿಹರ:  ಒಂದೇ ವಿಗ್ರಹದಲ್ಲಿ ಎರಡುಭಾಗವಿರುವ ಇದರಲ್ಲಿ ಶಿವ ಅರ್ಧಚಂದ್ರ,ಕಪಾಲ, ಹುಲಿಧರ್ಮ ಧರಿಸಿದ್ದು, ಕಿರೀಟ, ಮಣಿಯಿರುವ ತೋಳ್ಬಂದಿ, ಕೈಯಲ್ಲಿ ಶಂಖ ಇರುವ ಭಾಗ ವಿಷ್ಣುವನ್ನು ಪ್ರತಿನಿಧಿಸುತ್ತದೆ. ಲಕ್ಷ್ಮೀ, ಪಾರ್ವತಿ ಮತ್ತು ನಂದಿ ಇರುವ ಈ ಶಿಲ್ಪ ಮನಮೋಹಕವಾಗಿದೆ. ಪಕ್ಕದಲ್ಲಿ ಗಜವೃಷಭ ಶಿಲ್ಪವಿದೆ. ಈ ವಿಗ್ರಹ ಕೆತ್ತಿದ ಶಿಲ್ಪಿ ಮಹಾಪ್ರತಿಭಾವಂತನಿರಬೇಕು. ಅವನ ಜಾಣ್ಮೆ ಮೆಚ್ಚಬೇಕು. ಎರಡು ಪ್ರಾಣಿಗಳು. ಆದರೆ ಅವೆರಡಕ್ಕೂ ಒಂದೇ ಮುಖ. ಆನೆ ಮತ್ತು ನಂದಿ ಇರುವ ಈ ಶಿಲ್ಪ ಬಹಳ ಅಪರೂಪವಾಗಿದೆ.

   ೨)  ವೈಷ್ಣವ ಗುಹಾಲಯ:

ಅ) ತ್ರಿವಿಕ್ರಮ: ಇಲ್ಲಿ ವಿಷ್ಣುವಿನ ದಶಾವತಾರಗಳಲ್ಲಿ ಐದನೆಯ ಅವತಾರವಾದ ವಾಮನಾವತಾರದ ವಿಗ್ರಹವಿದೆ. ವಿಷ್ಣು ವಾಮನಾವತಾರದಲ್ಲಿ ಬಲಿ ಚಕ್ರವರ್ತಿ ಆಸ್ಥಾನಕ್ಕೆ ಬಂದು ಮೂರು ಪಾದಗಳನ್ನು ಇಡಲು ಸ್ಥಳ ಕೇಳಿದಾಗ ಬಲಿಯ ಗುರು ಶುಕ್ರಾಚಾರ್ಯರು ಸ್ಥಳ ಕೊಡಬೇಡ. ಬಾಲಕನ ವೇಶದಲ್ಲಿ ಬಂದವನು ಸಾಕ್ಷಾತ್ ವಿಷ್ಣು. ಎಂದು ಹೇಳಿದರೂ ಬಲಿ ವರ ಕೊಡುತ್ತಾನೆ. ವಿಷ್ಣು ಒಂದು ಪಾದವನ್ನು ಆಕಾಶಕ್ಕೆ, ಇನ್ನೊಂದು ಪಾದ ಭೂಮಿಗೆ, ಮೂರನೇ ಪಾದವನ್ನು ಬಲಿಯ ತಲೆಮೇಲಿಟ್ಟು ಪಾತಾಳಕ್ಕೆ ತುಳಿಯುತ್ತಾನೆ. ಕೆಳಗಡೆ ಬಲಿಯ ಮಗ ನಮುಚಿ ವಿಷ್ಣುವಿನ ಕಾಲು ಹಿಡಿದಿರುವುದು, ಬಲಿಯ ಹೆಂಡತಿ ವಿಂದ್ಯಾವಳಿ ಮತ್ತು ವಾಮನ ರೂಪದಲ್ಲಿರುವ ವಿಷ್ಣುವಿನ ಈ ವಿಗ್ರಹ ನೋಡುತ್ತಲಿರಬೇಕಾದರೆ ಮಲ್ಲಿಕಾರ್ಜುನ ಅವರ ಕರೆ ‘ಬೇಗ ಬೇಗ ನೋಡಿ ಫೋಟೋ ಹೊಡೆದು ಜರೂರು ಬನ್ನಿ. ಸಮಯ ಹೆಚ್ಚಿಲ್ಲ’. 


  ಆ) ನರವರಾಹ: ವಿಷ್ಣುವಿನ ಮೂರನೇ ಅವತಾರದಲ್ಲಿ ಹಿರಣ್ಯಕಶಿಪುವಿನ ಸಹೋದರ ಹಿರಣ್ಯಾಕ್ಷ ಭೂದೇವಿಯನ್ನು ಅಪಹರಿಸಿ ಪಾತಾಳದಲ್ಲಿ ಇಟ್ಟಿರುತ್ತಾನೆ. ಆಗ ವಿಷ್ಣು ಹಂದಿಯಮುಖ ಹಾಗೂ ಮನುಷ್ಯದೇಹದಿಂದ ತನ್ನ ಕೋರೆಯಿಂದ ಭೂಮಂಡಲ ಕೊರೆದು ಪಾತಾಳಕ್ಕೆ ಹೋಗಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂದೇವಿಯನ್ನು ಕಮಲಪೀಠದ ಮೇಲೆ ರಕ್ಷಣೆ ಮಾಡಿರುವ ಈ ವಿಗ್ರಹ ನೋಡುತ್ತ, ಮಲ್ಲಿಕಾರ್ಜುನ ಅವರ ಸುಂದರ ವಿವರಣೆ ಕೇಳುತ್ತ ನಾವು ಮುಂದಿನ ಗುಹೆಯತ್ತ ದೌಡಾಯಿಸಿದೆವು. ವರಾಹವು ಚಾಲುಕ್ಯರ ರಾಜಲಾಂಛನದ ಭಾಗವಾಗಿತ್ತು. ವಿಜಯನಗರ ಸಾಮ್ರಾಜ್ಯದ ಅರಸರೂ ಕೂಡ ವರಾಹವನ್ನೇ ತಮ್ಮ ಲಾಂಛನವಾಗಿಸಿಕೊಂಡರು.
ಇ) ಬೌದ್ಧ ಗುಹಾಲಯ : ಕ್ರಿ.ಶ.೫೭೮ರಲ್ಲಿ ಮಂಗಳೇಶನು ಈ ಗುಹೆಯನ್ನು ಕೊರೆಸಿ ತನ್ನ ಅಣ್ಣ ಮೊದಲನೆಯ ಕೀರ್ತಿವರ್ಮ ೧೨ ವರ್ಷ ರಾಜ್ಯ ಆಳ್ವಿಕೆ ಮಾಡಿದ ಸವಿನೆನಪಿಗಾಗಿ ಈ ಗುಹೆಯನ್ನು ಅಣ್ಣನಿಗೆ ಅರ್ಪಿಸಿದನು ಎಂದು ಒಳಗಿರುವ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
ಬೃಹತ್ ಬುದ್ಧನ ಮೂರ್ತಿಯ ಬಳಿ ಭಕ್ತನೊಬ್ಬ ಕೈಮುಗಿದು ಕುಳಿತ ಭಂಗಿಯ ಈ ವಿಗ್ರಹದ ಬಗ್ಗೆ  ಮಲ್ಲಿಕಾರ್ಜುನ ಅವರು ವಿವರಣೆ ನೀಡಿದರು. ವಿಜಯನರಸಿಂಹ ಮೂರ್ತಿ, ಮಹಾವಿಷ್ಣುವಿನ ಮೂರ್ತಿಗಳಿರುವ ಈ ಗುಹೆಯಲ್ಲಿ ವಾಸ್ತುಶಿಲ್ಪ ವೈಭವವನ್ನು ಪ್ರತಿಯೊಂದು ಕಂಬದಲ್ಲೂ ನೋಡಬಹುದು. ಅತ್ಯಂತ ಚಂದದ ಗುಹಾಲಯವಿದು.
ಈ) ಜೈನಗುಹಾಲಯ:   ಇಲ್ಲಿ ಪಾರ್ಶ್ವನಾಥ, ಬಾಹುಬಲಿ, ವರ್ಧಮಾನ ಮಹಾವೀರ ಇವರ ವಿಗ್ರಹಗಳು ಇವೆ.
ಬರೋಬ್ಬರಿ ೧.೩೦ ಗಂಟೆಗಳ ಕಾಲ ನಾವು ಈ ಗುಹೆಗಳನ್ನು ನೋಡಿದೆವು. ನಮ್ಮ ತಂಡದ ಚಿತ್ರ ಕ್ಲಿಕ್ಕಿಸಿಕೊಂಡೆವು.  ಅಲ್ಲಿಂದ ಕೆಳಗೆ ನೀರುತುಂಬಿದ ವಿಶಾಲವಾದ ಅಗಸ್ತ್ಯ ಕೆರೆ ಕಾಣುತ್ತದೆ. ಕೆರೆಯ ಇನ್ನೊಂದು ಭಾಗದಲ್ಲಿ ಜಂಬುಲಿಂಗಗುಡಿ, ಕೆಳಗಿನ ಶಿವಾಲಯ ಇತ್ಯಾದಿ ಮಂದಿರಗಳು ಇವೆ. ನಮಗೆ ಅಲ್ಲಿಗೆ ಹೋಗಲು ಸಮಯಾವಕಾಶವಾಗಲಿಲ್ಲ.
ಬಂಡೆಯ ನಡುವೆ ಒಂದು ಗಿಡ ಬಾಳಲು ಮಣ್ಣನೇ ಬೇಡೆನು ನಾನು ಬಂಡೆಯಾದರೇನು ಶಿವ ಎಂದು ಚಿಗುರೊಡೆದು ಬಂದಿರುವುದು ಸೃಷ್ಟಿಯ ಸೋಜಿಗ


  ಬನಶಂಕರಿ

ಬಾದಾಮಿಯ ಗುಹಾಲಯ ನೋಡಿ ತೃಪ್ತರಾಗಿ ನಾವು ಬನಶಂಕರಿ ದೇವಾಲಯಕ್ಕೆ ಬಂದೆವು. ದೇವಾಲಯದ ಎದುರು ವಿಶಾಲ ಕಲ್ಯಾಣಿ ಇದೆ. ಅದರಲ್ಲಿ ಪಟ್ಟಪಸೆ ಇಲ್ಲ. ಚಾಪೆ ಹಾಕಿ ಮಲಗಬಹುದು. ೨೦೦೭ರಲ್ಲಿ ಬತ್ತಿದ ಕೆರೆ ಮತ್ತೆ ತುಂಬಲೇ ಇಲ್ಲವಂತೆ. ಮಳೆ ಬಹಳ ಕಡಿಮೆಯಾಗಿದೆ ಎಂದು ಸ್ಥಳೀಯರು ಹೇಳಿದರು.
 ದೇವಾಲಯದೊಳಗೆ ಹೋಗಬೇಡಿ. ತುಂಬ ರಶ್. ಹೋದರೆ ನಮಗೆ ಪಟ್ಟದಕಲ್ಲಿಗೆ ಹೋಗಲು ತಡವಾಗುತ್ತದೆ. ಹೊರಗಿನಿಂದ ಸುತ್ತು ಹಾಕಿ ಬನ್ನಿ ಎಂದು ಮಲ್ಲಿಕಾರ್ಜುನ ಎಚ್ಚರಿಸಿದ್ದರು. ಹೊರ‌ಆವರಣದಲ್ಲಿ ಒಂದು ಸುತ್ತು ಬರುವಾಗ ದೇವಾಲಯದೊಳಗಿಂದ ಹೊರಬರುವ ದಾರಿಯಲ್ಲಿ ನಮ್ಮ ಕೆಲವರು ನುಗ್ಗಿದರು. ನನ್ನನ್ನೂ ಒಳಬರುವಂತೆ ಆಹ್ವಾನಿಸಿದರು. ತಪ್ಪು ದಾರಿಯಲ್ಲಿ ನುಗ್ಗಿ ದೇವಿಯ ದರ್ಶನ ಮಾಡಿದೆ. ಬನಶಂಕರಿಯ ದಿವ್ಯ ಮೂರ್ತಿಗೆ ಚೆನ್ನಾಗಿ ಹೂವಿನ ಅಲಂಕಾರ ಮಾಡಿದ್ದರು. ಹದಿನೈದು ನಿಮಿಷ ಸರದಿ ಸಾಲಿನಲ್ಲಿ ನಿಂತಿದ್ದರೆ ದೇವಿ ದರ್ಶನ ಎಲ್ಲರಿಗೂ ಲಭ್ಯವಾಗಿರುತ್ತಿತ್ತು. ಒಳಗೆ ಅಂಥ ಜನರಿರಲಿಲ್ಲ. ಮಾರ್ಗದರ್ಶಕರು ನಮ್ಮ ದಾರಿತಪ್ಪಿಸಿದ್ದರು. ದೇವಾಲಯಕ್ಕೆ ಬಂದು ಒಳಗೆ ಹೋಗದೆ ಇದ್ದದ್ದು ಕೆಲವರಿಗೆ ಬೇಸರ ತರಿಸಿತು.
  ಚಾಲುಕ್ಯರ ಕಾಲದಲ್ಲಿ ರಾಜರು ಯುದ್ಧಕ್ಕೆ ಹೊರಡುವ ಮೊದಲು ಈ ದೇವಿಯನ್ನು ಪೂಜಿಸಿ ತೆರಳುತ್ತಿದ್ದುದಂತೆ. 
  ಅಲ್ಲಿ ಹೊರಗೆ ಒಂದಿಬ್ಬರು ಹೆಂಗಸರು ಬುಟ್ಟಿಯಲ್ಲಿ ಜೋಳದರೊಟ್ಟಿ, ಪಲ್ಯ, ಮೊಸರು ಮಾರುತ್ತಿದ್ದರು. ಊಟಮಾಡಿ ಎಂದು ನಮ್ಮನ್ನು ಕೇಳಿಕೊಳ್ಳುತ್ತಿದ್ದರು. ಕೆಲವರು ಅವರಿಂದ ಮಜ್ಜಿಗೆ ಕೊಂಡು ಕುಡಿದರು.



ಮಹಾಕೂಟ


   ನಾವು ಅಲ್ಲಿಂದ ಹೊರಟು ಮಹಾಕೂಟ ದೇವಾಲಯಕ್ಕೆ ಹೋದೆವು.  ದೇವಾಲಯ ಸುತ್ತಮುತ್ತ ಸಾಕಷ್ಟು ಗಲೀಜು ಮಾಡಿದ್ದರು. ಭಕ್ತರ ಸಾಲು ಇತ್ತು. ಪುಷ್ಕರಣಿಯಲ್ಲಿ ಅಯ್ಯಪ್ಪ ಭಕ್ತರು ಸ್ನಾನಾದಿಗಳಲ್ಲಿ ತೊಡಗಿದ್ದರು. ದೇವಾಲಯದಲ್ಲಿ ತೀರ್ಥ ಕೊಡುವ ಹಸುವಿನಾಕಾರದ ಚೊಂಬು ಬಹಳ ಚೆನ್ನಾಗಿತ್ತು.
  ಕ್ರಿ ಶ ೬೦೨ರಲ್ಲಿ ಚಾಳುಕ್ಯರ ಮಂಗಳೇಶನು ತನ್ನ ಯುದ್ಧ-ವಿಜಯಗಳ ನೆನಪಿಗಾಗಿ ಇಲ್ಲಿ ಅನೇಕ ಶಿವಲಿಂಗಗಳ ದೇವಾಲಯಗಳನ್ನು ಕಟ್ಟಿಸಿದ್ದಾನೆ. ಶಿವಭಕ್ತರಿಗೆ ಇಂದಿಗೂ ಇದೊಂದು ಪುಣ್ಯಸ್ಥಳವಾಗಿದ್ದು ‘ದಕ್ಷಿಣಕಾಶಿ’ ಎಂದೇ ಪ್ರಸಿದ್ಧವಾಗಿದೆ. ಅನೇಕ ಶಿವಾಲಯಗಳ ಸಮುಚ್ಚಯವಾಗಿರುವುದರಿಂದ ಇದಕ್ಕೆ ‘ಮಹಾಕೂಟ’ ಎಂದು ಹೆಸರು ಬಂದಿದೆ. ಇಲ್ಲಿನ ಮುಖ್ಯ ದೇವಾಲಯವೊಂದರ ಶಾಸನದಲ್ಲಿ ‘ಅನ್ಯ ಕ್ಷೇತ್ರಗಳಲ್ಲಿ ಮಾಡಿದ ಪಾಪವು ಪುಣ್ಯ ಕ್ಷೇತ್ರಗಳಲ್ಲಿ ತೊಳೆಯಲ್ಪಡುತ್ತದೆ ಆದರೆ ಪುಣ್ಯಕ್ಷೇತ್ರಗಳಲ್ಲಿ ಪಾಪ ಮಾಡಿದರೆ ಅದು ವಜ್ರಲೇಪದಂತೆ’ ಎಂದು ಎಚ್ಚರಿಕೆ ಶಾಸನ ಬರೆಸಲಾಗಿದೆ. ಆದರೆ ಇದಾವುದರ ಪರಿವೆಯಿಲ್ಲದ ಭಕ್ತರು ಇಲ್ಲಿ ಗಲೀಜು ಮಾಡುತ್ತಲಿರುವುದು ಕಾಣುವಾಗ ಬೇಸರವಾಗುತ್ತದೆ. ಇಲ್ಲಿನ ಕಾಶಿ ತೀರ್ಥ ಹಾಗು ಶಿವಪುಷ್ಕರಣಿಯಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುವುದೆಂಬ ಮೂಢ ಗಾಢನಂಬಿಕೆಯಿಂದ ಅವುಗಳು ಮಲೀನವಾಗಿವೆ. ವಿರಳ ಹಾಗೂ ಬಹು ಅಪರೂಪದ ಗಿಡಮರಗಳಿಂದ ಕೂಡಿದ ಕಾನನ ಪ್ರದೇಶದಲ್ಲಿ ನಸುಗೆಂಪು ಮರಳು ಕಲ್ಲಿನ ಎರಡು ಬೆಟ್ಟಗಳ ನಡುವೆ ಇರುವುದೇ ಮಹಾಕೂಟವೆಂಬ ಪುಣ್ಯಕ್ಷೇತ್ರ.ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬೆಟ್ಟಗಳ ಸಾಲಿನ ನಡುವೆ, ಹಸಿರುವನ ರಾಶಿಯ ನಡುವೆ ಕಂಗೊಳಿಸುವ ಈ ದೇಗುಲಗಳು ರಮಣೀಯವಾಗಿ ಕಾಣುತ್ತವೆ. ದೇವಾಲಯದ ಸುತ್ತ ಅಗಸ್ತೇಶ್ವರ, ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ.
ದೇವಾಲಯದ ಹೊರ ಪಾರ್ಶ್ವದಲ್ಲಿ ಆಲದ ಮರವಿದೆ. ಅದಕ್ಕೆ ಮುನ್ನೂರು ವರ್ಷಗಳು ದಾಟಿದೆಯಂತೆ.




ಪಟ್ಟದಕಲ್ಲು


ನಾವು ಅಲ್ಲಿಂದ ಹೊರಟು ಪಟ್ಟದಕಲ್ಲು ಐತಿಹಾಸಿಕ ದೇವಾಲಯದ ಬಳಿಗೆ ಬಂದೆವು. ಬಾದಾಮಿಯಿಂದ ಪಟ್ಟದಕಲ್ಲಿಗೆ ಸುಮಾರು ೨೩ ಕಿಮೀ. ಬಾಗಲಕೋಟೆಜಿಲ್ಲೆಯ ಬಾದಾಮಿ ತಾಲೂಕಿನ ಮಲಪ್ರಭನದಿಯ ಬಳಿ ಪಟ್ಟದಕಲ್ಲು ಇದೆ. ಆಗ ಗಂಟೆ ೧.೩೦ ದಾಟಿತ್ತು. ಊಟ ಮಾಡಿಯೇ ಒಳಗೆ ಹೋಗುವ ಎಂದು ತೀರ್ಮಾನವಾಯಿತು. ಅಲ್ಲಿ ಹೊಟೇಲ್ ಚಾಲುಕ್ಯದಲ್ಲಿ ಜೋಳದ ರೊಟ್ಟಿ, ಚಪಾತಿ, ಬದನೆಕಾಯಿ ಎಣ್ಣೆಗಾಯಿ, ಕಾಳುಪಲ್ಯ, ಅನ್ನ, ಸಾರು, ಹಪ್ಪಳ, ಸಾಂಬಾರು ಬಹಳ ರುಚಿಯಾಗಿತ್ತು. ಊಟವಾದ ಮೇಲೆ ಒಬ್ಬರು ‘ನಿಮಗೆ ಗೊತ್ತಾಯಿತ? ಇದು ಮುಸ್ಲಿಮರ ಹೊಟೇಲು’ ಎಂದರು. ಹೌದು ಗೊತ್ತಾಗಿದೆ. ಶುಚಿರುಚಿಯಾಗಿ ಶಾಖಾಹಾರಿ ಅಡುಗೆಯನ್ನು ಯಾರೇ ಮಾಡಿ ಬಡಿಸಿದರೂ ಅಲ್ಲಿ ಊಟ ಮಾಡುತ್ತೇನೆ. ನನಗೇನೂ ಅನಿಸುವುದಿಲ್ಲ ಎಂದೆ. ಅಲ್ಲಿ ರೊಟ್ಟಿ ಮಾಡುತ್ತಿದ್ದ ಮಹಿಳೆ ಜಲೀಲ ಎಂದೇನೋ ಹೆಸರು ಹೇಳಿದ್ದರು. ಸೌದೆ ಒಲೆಯಲ್ಲಿ ನಮ್ಮ ಎದುರೇ ರೊಟ್ಟಿ ಮಾಡಿ ಬಡಿಸಿದರು. ಸಾವಧಾನದಿಂದ ನಮ್ಮ ತಂಡಕ್ಕೆ ಊಟ ಬಡಿಸಿದ್ದರು.  ಹೊಟೇಲ್ ಎದುರು ಹೋಟೇಲ್ ಚ್ಯಾಲುಕ್ಯ ಎಂದೂ ಬಲಗಡೆಗೆ ಇಸ್ಲಾಂ ಸಾಬಕಿ ದುವಾ, ಎಡಗಡೆಗೆ ಶ್ರೀ ಬಸವೇಶ್ವರ ಪ್ರಸನ್ನ ಎಂದೂ ಹಿಂದೂ ಮುಸ್ಲಿಮ್ ಶೈಲಿಯಲ್ಲಿ ಬರೆಸಿದ್ದ ಫಲಕ ಗಮನ ಸೆಳೆಯಿತು.    
  ಊಟವಾಗಿ ನಾವು ಪಟ್ಟದಕಲ್ಲು ನೋಡಲು ಒಳಗೆ ಹೋದೆವು. ಪ್ರವೇಶದರ ಇದೆ. ವಿಶಾಲವಾದ ಹುಲ್ಲುಹಾಸಿನ ಮಧ್ಯೆ ದೇವಾಲಯಗಳ ಸಂಕೀರ್ಣ ದೂರದಿಂದಲೇ ಬಲು ಸುಂದರವಾಗಿ ಕಂಗೊಳಿಸುತ್ತವೆ.
ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ವೈವಿಧ್ಯಗಳನ್ನು  ಪಟ್ಟದಕಲ್ಲು ದೇವಾಲಯಗಳಲ್ಲಿ ನೋಡಬಹುದು. ಇಲ್ಲಿಯ ಶಿಲ್ಪಕಲೆಯು ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿಯಲ್ಲಿವೆ.


ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವ೦ಶದ ರಾಜಧಾನಿಯಾಗಿದ್ದಿತು. ಚಾಲುಕ್ಯ ವ೦ಶದ ಅರಸರು ಏಳನೇ ಮತ್ತು ಎ೦ಟನೇ ಶತಮಾನಗಳಲ್ಲಿ ಇಲ್ಲಿಯ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒ೦ಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಅವುಗಳು, ಕಾಡಸಿದ್ದೇಶ್ವರ, ಜಂಬುಲಿಂಗ ದೇವಾಲಯ, ಗಳಗನಾಥ ದೇವಾಲಯ, ಸಂಗಮೇಶ್ವರ ದೇವಾಲಯ, ವಿರೂಪಾಕ್ಷ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಪಾಪನಾಥ ದೇವಾಲಯ. ಎಲ್ಲಕ್ಕಿ೦ತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ.  ಇಲ್ಲಿರುವ ಇತರ ಮುಖ್ಯ ದೇವಾಲಯಗಳೆಂದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ.
   ವಿರೂಪಾಕ್ಷ ಹಾಗು ಮಲ್ಲಿಕಾರ್ಜುನ ದೇವಾಲಯಗಳ ವಿಶೇಷತೆಯೆಂದರೆ ಇವುಗಳನ್ನು ೨ನೇ ವಿಕ್ರಮಾದಿತ್ಯನು ತಮ್ಮ ಸಾಂಪ್ರದಾಯಿಕ ವೈರಿಗಳಾಗಿದ್ದ ಪಲ್ಲವರ ಮೇಲೆ ಸಾಧಿಸಿದ ದಿಗ್ವಿಜಯದ ನೆನಪಿಗಾಗಿ ಅವನ ಇಬ್ಬರು ರಾಣಿಯರು ಕಟ್ಟಿಸಿರುವುದು. ಇವು ಕಂಚಿಯಲ್ಲಿನ ಕೈಲಾಸ್‌ನಾಥರ್ ದೇವಾಲಯದ ವಾಸ್ತುವಿನಿಂದ ಪ್ರಭಾವಿತವಾಗಿದೆಯಂತೆ.
     ವಿರೂಪಾಕ್ಷ ದೇವಾಲಯ ಕ್ರಿ ಶ ೭೪೦ರಲ್ಲಿ ಹಿರಿಯ ರಾಣಿಯಾದ ಲೋಕಮಹಾದೇವಿಯಿಂದ ಕಟ್ಟಿಸಲ್ಪಟ್ಟಿದೆ. ಇದು ಪೂರ್ವಾಭಿಮುಖವಾಗಿದ್ದು ಮುಂದಿರುವ ತೆರೆದ ಮಂಟಪದಲ್ಲಿ ಸುಂದರವಾದ ನಂದಿ ವಿಗ್ರಹವಿದೆ. ಪಶ್ಚಿಮ ದಿಕ್ಕನ್ನು ಹೊರತುಪಡಿಸಿ ಉಳಿದೆಲ್ಲ ದಿಕ್ಕುಗಳಲ್ಲಿ ಮುಖಮಂಟಪವಿದ್ದು ದೇವಾಲಯದ ಒಳಗೆ ಸಭಾಮಂಟಪ ಹಾಗು ಪ್ರದಕ್ಷಿಣಾ ಪಥವಿದೆ. ಪ್ರವೇಶದಲ್ಲೇ ಇರುವ ವೇದಿಕೆ ಮೇಲೆ ವಸ್ತ್ರಾಭರಣಗಳಿಂದ ಶೋಭಿತರಾದ ರಾಜ ದಂಪತಿಗಳ ವಿವಿಧ ಭಂಗಿಯ ಶಿಲ್ಪಗಳು ಮನಸೆಳೆಯುತ್ತವೆ. ಈ ದೇವಾಲಯದ ಶಿಲ್ಪಿ ಸರ್ವಸಿದ್ಧಿ ಆಚಾರಿ. ಇಂಥ ಸುಂದರ ದೇವಾಲಯವೇ ಮುಂದೆ ರಾಷ್ಟ್ರಕೂಟರ ೧ನೇ ಕೃಷ್ಣನು ಎಲ್ಲೋರದಲ್ಲಿ ಕಟ್ಟಿಸಿದ ಕೈಲಾಸನಾಥ ಗುಹಾಲಯಕ್ಕೆ ಮುಖ್ಯ ಸ್ಫೂರ್ತಿಯಾಯಿತು.
    ಮಲ್ಲಿಕಾರ್ಜುನ ದೇವಾಲಯವನ್ನು ವಿಕ್ರಮಾದಿತ್ಯನ ಮತ್ತೊಬ್ಬ ರಾಣಿ ತ್ರೈಲೋಕ್ಯದೇವಿಯು ಕ್ರಿ ಶ ೭೪೩ರಲ್ಲಿ ನಿರ್ಮಿಸಿದಳು. ಇದು ಕೂಡ ವಾಸ್ತು ವಿನ್ಯಾಸದಲ್ಲಿ ವಿರೂಪಾಕ್ಷ ದೇವಾಲಯವನ್ನು ಹೋಲುತ್ತದೆ.
 ಜಿನಾಲಯದಲ್ಲಿನ ಕಲ್ಲಿನ ಆನೆಗಳು ಹಾಗು ಮೇಲ್ಮಹಡಿಗೆ ಹೋಗಲು ಇರುವ ಕಲ್ಲಿನ ಏಣಿಗಳು ತುಂಬ ಆರ್ಷಕವಾಗಿವೆ.
 ಈ ಸ್ಥಳವನ್ನು ಯುನೆಸ್ಕೋ ೧೯೮೭ ರಲ್ಲಿ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.
   ಪಟ್ಟದಕಲ್ಲು ಚಾಲುಕ್ಯರಿಗೆ ಅತ್ಯಂತ ಪ್ರಮುಖ ಸ್ಥಳ. ಚಾಲುಕ್ಯರ ಎಲ್ಲ ದೊರೆಗಳು ಇಲ್ಲಿನ ಉತ್ತರವಾಹಿನಿಯಲ್ಲಿ ಸ್ನಾನಮಾಡಿದಮೇಲೆಯೇ ಪಟ್ಟಾಭಿಷಿಕ್ತರಾಗುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ ‘ಪಟ್ಟದಕಲ್ಲು’ ಎಂಬ ಹೆಸರು ಬಂದಿದೆ.
  ನಾವು ಎಲ್ಲಾ ದೇವಾಲಯದೊಳಗೆ ಹೋಗಲಿಲ್ಲ. ಮೂರು ದೇವಾಲಯದೊಳಗೆ ಹೋಗಿ ಬಾಕಿದ್ದದ್ದನ್ನು ಹೊರಗಿನಿಂದಲೇ ಸುತ್ತು ಹಾಕಿ ಸಂಜೆ ನಾಲ್ಕು ಗಂಟೆಗೆ ಅಲ್ಲಿಂದ ನಿರ್ಗಮಿಸಿದೆವು. 






ಐಹೊಳೆ

ಪಟ್ಟದಕಲ್ಲಿನಿಂದ ಐಹೊಳೆಗೆ ೧೩ಕಿಮೀ. ನಾವು ಐಹೊಳೆಯಲ್ಲಿ ಎಲ್ಲಾ ದೇವಾಲಯಗಳನ್ನು ನೋಡಲಿಲ್ಲ. ಸುಮಾರು ೨೯ ದೇವಾಲಯಗಳು, ಸುಮಾರು ಬಸದಿಗಳು ಇವೆಯಂತೆ.
  ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿ ಐಹೊಳೆಯಾಗಿತ್ತು. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಶಾಸನಗಳಲ್ಲಿ  ಐಹೊಳೆಯ ಹೆಸರು ಆರ್ಯಪುರ ಎಂದು ಉಲ್ಲೇಖಿಸಲ್ಪಟ್ಟಿದೆ. ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿ‌ ಐಹೊಳೆಯಾಯಿತು. ಶಾಸನದಲ್ಲಿ ಈ ಸ್ಥಳವನ್ನು ಅಯ್ಯವೊಳೆ-ಆಯಿವೊಳೆ-ಐಯಾವೊಳಿ-ಆರ್ಯಪುರ ಮುಂತಾಗಿ ಉಲ್ಲೇಖಿಸಲಾಗಿದ್ದು, ಮುಂದೆ ಇದು ಐಹೊಳೆ ಆಗಿರುವ ಸಾಧ್ಯತೆ ಇದೆ. ಇದಲ್ಲದೇ ಐನೂರು ಪಂಡಿತರು ಇದ್ದದ್ದರಿಂದ ಐಹೊಳೆ ಎಂದಾಯ್ತೆಂತಲೂ ಪರುಶುರಾಮನು ಕ್ಷತ್ರಿಯರನ್ನು ನಿರ್ನಾಮ ಮಾಡಿ ರಕ್ತ ಸಿಕ್ತ ಪರಶುವನ್ನು ಇಲ್ಲಿನ ಹೊಳೆಯೊಂದರಲ್ಲಿ ತೊಳೆದಾಗ ಇಡೀ ನದಿ ನೀರು ಕೆಂಪಾಗಿತ್ತಂತೆ. ಇದನ್ನು ಕಂಡ ಊರಿನ ಮಹಿಳೆಯರು, ‘ಅಯ್ಯಯ್ಯೋ ಹೊಳಿ’ ಎಂದು ಉದ್ಗರಿಸಿದ್ದೇ ಮುಂದೆ ಐಹೊಳೆಯಾಯಿತೆಂಬ ಪೌರಾಣಿಕ ಕಥೆಗಳು ಈ ಊರಿನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿವೆ.
  ದುರ್ಗದ ದೇವಾಲಯ: ಈ ದೇವಾಲಯ ಗಜಪೃಷ್ಠಾಕಾರವಾಗಿದ್ದು ಬಲು ಸುಂದರವಾಗಿದೆ. ಇದು ಮೂಲತ: ಸೂರ್ಯದೇವಾಲಯವಾಗಿದ್ದು, ಕೋಟೆ ಅಂದರೆ ದುರ್ಗಕ್ಕೆ ಹತ್ತಿರವಿರುವುದರಿಂದ ದುರ್ಗ ದೇವಾಲಯವೆಂದು ಪ್ರಸಿದ್ಧವಾಗಿದೆ. ಕ್ರಿ. ಶ. ೭೪೨ರಲ್ಲಿ ೨ನೇ ವಿಕ್ರಮಾದಿತ್ಯನ ಅಳಿಯ ಕೋಮಾರಸಿಂಗ ಎಂಬುವವ ಇದನ್ನು ಕಟ್ಟಿಸಿದ. ಎತ್ತರದ ಜಗತಿ ಮೇಲೆ ಕಟ್ಟಲಾಗಿದ್ದು ಗಜಪೃಷ್ಠಾಕಾರದಲ್ಲಿ ಇರುವುದು ಇದರ ವಿಶೇಷತೆ. ಇದರ ಅಸಂಖ್ಯ ಕಲ್ಲಿನ ಕಂಬಗಳು ಹಾಗು ಇಂಗ್ಲೀಷ ಅಕ್ಷರದ U ಆಕಾರದ ವಿಶಿಷ್ಠ ರಚನೆಯಿಂದ ಹೊರನೋಟಕ್ಕೆ ದೆಹಲಿಯ ಸಂಸತ್ ಭವನವನ್ನು ನೆನಪಿಸುತ್ತದೆ. ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿ.ಶ ೫ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ.
 ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.
  ರಾಮಲಿಂಗೇಶ್ವರ ದೇವಾಲಯ ಮಲಪ್ರಭಾ ನದಿಯ ಬಳಿ ಇದೆ. ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ.
ಐಹೊಳೆಯ ಇತಿಹಾಸವನ್ನು ಮಲ್ಲಿಕಾರ್ಜುನ ವಿವರಿಸುತ್ತಿರಬೇಕಾದರೆ ಅಂದಕಾಲತ್ತಿನಲ್ಲಿ ನಮ್ಮ ಇತಿಹಾಸ ಉಪನ್ಯಾಸಕರು ಪಾಟ ಮಾಡಿದ್ದು ಸ್ವಲ್ಪ ಸ್ವಲ್ಪ ನೆನಪಿಗೆ ಬರುವಂತಾಗಿತ್ತು.
  ವಸ್ತು ಸಂಗ್ರಹಾಲಯ: ಇಲ್ಲಿ ಬಾದಾಮಿ ವಾಲುಕ್ಯರ ಕಾಲದ ವಿಗ್ರಹಗಳು ಸಾಕಷ್ಟಿವೆ. ಪ್ರವೇಶ ದರ ರೂ.೫ .   ೧೫ವರ್ಷಗಳೊಳಗಿನ ಮಕ್ಕಳಿಗೆ ಉಚಿತ ಪ್ರವೇಶ. ಸಂಜೆ ೫ ಗಂಟೆಗೆ ಬಾಗಿಲು ಹಾಕುತ್ತಾರೆ.
 ನಾವು ದೇವಾಲಯ ಸಂಕೀರ್ಣದಲ್ಲಿ ಸುತ್ತಿ ಸುಳಿದು, ಮಲ್ಲಿಕಾರ್ಜುನ ಅವರ ವಿವರಣೆ ಕೇಳಿ ಅಲ್ಲಿಂದ ಹೊರಗೆ ಬಂದು ಚಹಾ ಕುಡಿದು ಮಲ್ಲಿಕಾರ್ಜುನ ಅವರಿಗೆ ವಿದಾಯ ಹೇಳಿ ಹೊರಡುವಾಗ ಗಂಟೆ ಸಂಜೆ ಆರು ದಾಟಿತ್ತು.









ಮಲ್ಲಿಕಾರ್ಜುನರಿಗೆ ವಿದಾಯ, ಕೆಂಪುಕೋಟು ಹಾಕಿದವರು ನಮ್ಮ ತಂಡದ ರೂವಾರಿ ಶಿವಶಂಕರ

ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ