ಗುರುವಾರ, ಫೆಬ್ರವರಿ 2, 2017

ಮೂರು ಪರ್ವತಗಳನೇರಿದ ಸಾಹಸ ( ಉದಯಪರ್ವತ, ಅಮೇದಿಕಲ್, ಎತ್ತಿನಭುಜ)

                           ಮೂರು ಪರ್ವತಗಳನೇರಿದ ಸಾಹಸ

                       ಉದಯಪರ್ವತ, ಅಮೇದಿಕಲ್, ಎತ್ತಿನಭುಜ


     ಎತ್ತಿನಭುಜದ ಬಗ್ಗೆ ಪತ್ರಿಕೆಗಳಲ್ಲಿ ಬಂದ ಚಿತ್ರಲೇಖನ ಓದಿ ಅಲ್ಲಿಗೆ ಚಾರಣ ಹೋಗಲೇಬೇಕೆಂಬುದು ನನ್ನ ಕನಸಾಗಿತ್ತು. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದಿಂದ ದಶಂಬರ ತಿಂಗಳಲ್ಲಿ ೩ ದಿನ ಕಮರೊಟ್ಟು ಚಾರಣ (ಎತ್ತಿನಭುಜ ಸೇರಿತ್ತು) ಎಂದು ಹೇಳಿದಾಗ ಛೆ! ನನಗೆ ಹೋಗಲು ಆಗುವುದಿಲ್ಲವಲ್ಲ ಎಂದು ಬಹಳ ಬೇಸರವಾಗಿತ್ತು. ಆ ಸಮಯದಲ್ಲಿ ಅಕಾಲಿಕ ಮಳೆ ಸುರಿದ ಕಾರಣ ಅಲ್ಲಿಗೆ ಹೋಗುವುದನ್ನು ಜನವರಿ ತಿಂಗಳಿಗೆ ಮುಂದೂಡಿದ ಮಾಹಿತಿ ಬರುತ್ತಿದ್ದಂತೆಯೇ, ಸೀಟು ಇದೆಯಾ ಎಂದು ಫೋನಿಸಿದೆ. ಇದೆ ಎಂದಾಗ ಬಹಳ ಖುಷಿಯಾಯಿತು. ಬಹುಶಃ ನನಗಾಗಿಯೇ ಈ ಚಾರಣ ಮುಂದೂಡುವ ಹಾಗಾದದ್ದು ಎಂದು ಭಾವಿಸಿದೆ.
ಪ್ರಯಾಣದಾರಂಭ
   ೬-೧-೧೭ರಂದು ರಾತ್ರೆ ಮೈಸೂರಿನಿಂದ ಮಲ್ಲಿಕಾರ್ಜುನ ಎಂಬ ಹೆಸರಿನ ಖಾಸಗಿ ಬಸ್ಸಲ್ಲಿ ೧೦.೩೦ಗೆ ನಮ್ಮ ಪ್ರಯಾಣ ಪ್ರಾರಂಭ. ಬಸ್ ಹಾಸನ ಸಕಲೇಶಪುರ ಶಿರಾಡಿ ಘಾಟಿಯಲ್ಲಿ ಸಾಗಿತು. ನಾನು ಚಾಲಕನ ಹಿಂದಿನ ಸೀಟಲ್ಲಿ ಕುಳಿತಿದ್ದೆ. ರಾತ್ರೆ ಎಷ್ಟೊತ್ತಿಗೋ ಕಣ್ಣುಬಿಟ್ಟು ನೋಡುತ್ತೇನೆ ರಸ್ತೆ ಎದುರು ಕಾಣುವುದೇ ಇಲ್ಲ. ಅಷ್ಟು ಮಂಜು. ಬಸ್ ಎದುರಿನಿಂದ ಬರುವಾಗ ಇನ್ನೇನು ತಾಗಿ ಬಿಡುತ್ತದೆ ಎಂಬಷ್ಟು ಹತ್ತಿರ ಬರುವಾಗ ಸರಕ್ಕನೆ ನಮ್ಮ ಬಸ್ ಎಡಗಡಗೆ ಬರುತ್ತಿತ್ತು. ಜೀವ ಬಾಯಿಗೆ ಬಂದ ಅನುಭವ. ರಸ್ತೆ ನೋಡಿದರೆ ತಾನೆ ಇಂಥ ಗೊಂದಲ ಎಂದು ಕಣ್ಣಿಗೆ ಬಟ್ಟೆ ಕಟ್ಟಿದೆ. ಗುಂಡ್ಯದಲ್ಲಿ ಒಮ್ಮೆ ಚಹಾಕ್ಕೆ ಬಸ್ ನಿಲ್ಲಿಸಿದರು. ಮುಂದೆ ಎಲ್ಲು ನಿಲ್ಲದೆ ಮುಂದುವರಿದೆವು.

ಧರ್ಮಸ್ಥಳದ ಮಂಜುನಾಥ ಕಾಪಾಡಪ್ಪ ಅನವರತ
೮-೧-೨೦೧೭ರಂದು ಬೆಳಗ್ಗೆ ೪.೧೫ಕ್ಕೆ ನಾವು ಧರ್ಮಸ್ಥಳ ತಲಪಿದೆವು. ಅಲ್ಲಿ ಸಾಕೇತ ವಸತಿಗೃಹದಲ್ಲಿ ಕೋಣೆಯಲ್ಲಿ ಸ್ವಲ್ಪಹೊತ್ತು ವಿರಮಿಸಿದೆವು. ಬೆಳಗ್ಗೆ ನಿತ್ಯಕರ್ಮ ಮುಗಿಸಿ ಏಳುಗಂಟೆಗೆ ನಾವು ದೇವಾಲಯಕ್ಕೆ ಹೋದೆವು. ದೇವರ ದರ್ಶನಕ್ಕೆ ಚಕ್ರವ್ಯೂಹದೊಳಗೆ ಹೋಗಬೇಕು. ಕಬ್ಬಿಣದ ಜಾಲರಿ ಹಾಕಿದ ದಾರಿಯಲ್ಲಿ ಸುಮಾರು ಅರ್ಧಕಿಮೀ ನಡೆಯಬೇಕು. ಮುಕ್ಕಾಲುಗಂಟೆ ಸರತಿಸಾಲಿನಲ್ಲಿ ನಿಧಾನವಾಗಿ ಸಾಗಿ ದೇವರದರ್ಶನ ಮಾಡಿದೆವು. ನಮ್ಮ ಅತ್ತೆಯವರು ಪ್ರತಿನಿತ್ಯ ದಿನಕ್ಕೆ ಮೂರುಸಲವಾದರೂ ಧರ್ಮಸ್ಥಳದ ಮಂಜುನಾಥ ಕಾಪಾಡಪ್ಪ ಅನವರತ ಎಂದು ಹೇಳುತ್ತಿರುತ್ತಾರೆ. ಮಂಜುನಾಥನನ್ನು ನೋಡಿದಾಗ ಅತ್ತೆಯವರ ಈ ಮಾತು ನೆನಪಿಗೆ ಬಂತು. ದೇವಾಲಯದಿಂದ ಹೊರಗೆ ಬಂದಾಗ ವೀರೇಂದ್ರ ಹೆಗಡೆಯವರು ತುಲಾಭಾರ ನಡೆಯುವಲ್ಲಿ ಗಂಭೀರವದನರಾಗಿ ಕುಳಿತಿದ್ದುದು ಕಂಡಿತು.
   ದೇವಾಲಯದ ಅನತಿ ದೂರದಲ್ಲಿ ಇರುವ ತೃಪ್ತಿ ಹೊಟೇಲಿನಲ್ಲಿ ಇಡ್ಲಿ ವಡೆ ಕಾಫಿ ಕುಡಿದು ವಾಪಾಸು ಕೋಣೆಗೆ ಬಂದೆವು. ೯.೩೦ಗೆ ಕೋಣೆ ಖಾಲಿ ಮಾಡಿ ಬಸ್ ಹತ್ತಿದೆವು.



ಸೌತಡ್ಕ ಗಣಪ
ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ರಸ್ತೆಯಲ್ಲಿ ಸಾಗಿದೆವು. ಮುಂದೆ ಬಲಭಾಗಕ್ಕೆ ತಿರುಗಿದಾಗ ಸೌತಡ್ಕ ದೇವಾಲಯ ಎಂಬ ದೊಡ್ಡ ಕಮಾನು ಕಾಣುತ್ತದೆ. ಆ ದಾರಿಯಲ್ಲಿ ಸುಮೂರು ೨-೩ಕಿಮೀ ಸಾಗಿದರೆ ಸೌತಡ್ಕ ದೇವಾಲಯ ಕಾಣುತ್ತದೆ. ಬಯಲು ಆಲಯದಲ್ಲಿರುವ, ಗಿಡಮರಗಳೇ ನೆರಳು ಇಲ್ಲಿಯ ಗಣಪನಿಗೆ. ಗಣಪನನ್ನು ನೋಡಿ ಸಿಹಿ‌ಅವಲಕ್ಕಿ ಪ್ರಸಾದ ತಿಂದೆವು. ನಮಗೆ ಆ ದಿನ ಊಟ ದೇವಾಲಯದಲ್ಲೇ ಎಂದು ತೀರ್ಮಾನವಾಗಿತ್ತು. ಊಟಕ್ಕೆ ಇನ್ನೂ ವೇಳೆ ಇತ್ತು. ದೇವಾಲಯದ ಮುಂಭಾಗ ಮರದ ನೆರಳಿನಲ್ಲಿ ನಾವು ಕುಳಿತು ಪರಸ್ಪರ ಪರಿಚಯ ಮಾಡಿಕೊಂಡೆವು. ನಾವು ಒಟ್ಟು ೪೫ ಮಂದಿ ಇದ್ದೆವು. ಡಾ. ಸತೀಶ ಅವರು ತಮ್ಮ ಗತಕಾಲದಲಿ ಪ್ರೀತಿಸಿ ಮದುವೆಯಾಗಿ ಯಶಸ್ವಿಯಾದ ಕಥೆಯನ್ನು ಸ್ವಾರಸ್ಯವಾಗಿ ಹೇಳಿದರು. ವೈದ್ಯಕೀಯ ವ್ಯಾಸಂಗ ಮಾಡುತ್ತಿರುವಾಗ ರಾಮಕೃಷ್ಣಾಶ್ರಮದ ನಂಟು ಇತ್ತಂತೆ. ಮುಂದೆ ಸತೀಶಾನಂದರಾಗುವ ಗುರಿ. ಆಗ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವೀಣಾ ಅವರ ಪರಿಚಯ ಆಯಿತಂತೆ. ಅವರ ಹಿಂದೆ ಬಿದ್ದರಂತೆ. ಈ ಮದುವೆಗೆ ನಮ್ಮ ತಂದೆ ಒಪ್ಪುತ್ತಿಲ್ಲ ಎಂದು ವೀಣಾ ಅವರು ನಿರಾಕರಿಸಿದರಂತೆ. ಇವರು ಹತಾಶೆಯಿಂದ ಪೊನ್ನಂಪೇಟೆಯಲ್ಲಿ ರಾಮಕೃಷ್ಣಾಶ್ರಮದಲ್ಲಿ ವೈದ್ಯರಾಗಿ ಸೇರಿದರಂತೆ. ಆದರೂ ವೀಣಾರ ನೆನಪು ಬಿಡದೆ ಕಾಡಿ ಅವರಿಗೆ ಇಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ನಿಮಗೆ ವಿಪುಲ ಅವಕಾಶವಿದೆ ಬನ್ನಿ ಎಂದು ಕಾಗದ ಹಾಕಿದರಂತೆ ಮೂರು ನಾಲ್ಕು ಸಲ. ಅವರಿಂದ ಉತ್ತರ ಬರಲಿಲ್ಲವಂತೆ. ಮತ್ತೂ ಒಂದು ಸಲ ಕಾಗದ ಹಾಕಿದಾಗ ಉತ್ತರ ಬಂತಂತೆ. ನೀವು ಮದುವೆಯಾಗುವುದಾದರೆ ನಾನು ಅಲ್ಲಿಗೆ ಬರುವೆ ಎಂದು ಬರೆದರಂತೆ. ಅಲ್ಲಿಗೆ ಅವರು ಸತೀಶಾನಂದರಾಗುವ ಪ್ರಯತ್ನಕ್ಕೆ ಎಳ್ಳುನೀರು ಬಿಟ್ಟರಂತೆ! ಮುಕ್ಕಾಲು ಗಂಟೆ ಅವರ ಪ್ರೇಮಕಥೆಯನ್ನು ಬಿಡಿಸಿಟ್ಟರು. ನಮ್ಮೊಡನೆ ಬಂದಿದ್ದ ಮದುವೆಯಾಗದ ಕೆಲವು ಯುವಕರು ಅವರ ಕಥೆಯನ್ನು ತಲ್ಲೀನರಾಗಿ ಕೇಳಿ ಮೈಮರೆತು ಕನಸುಕಾಣಲು ತೊಡಗಿರಬಹುದು! ಆಗ ಗಂಟೆ ೧೨.೧೫. ಮಹಾಮಂಗಳಾರತಿ ಆಯಿತು. ೧೨.೩೦ಗೆ ಊಟಕ್ಕೆ ಹೋದೆವು. ಅನ್ನ, ಪಲ್ಯ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ಉಪ್ಪಿನಕಾಯಿ ಪುಷ್ಕಳ ಭೋಜನವಾಗಿ ನಾವು ೧.೧೫ಕ್ಕೆ ಅಲ್ಲಿಂದ ಹೊರಟೆವು.



 



 

ಶಿಶಿಲಕ್ಷೇತ್ರದೆಡೆಗೆ ಪಯಣ
ನಾವು ಸೌತಡ್ಕದಿಂದ ಕೊಕ್ಕಡ ಮಾರ್ಗವಾಗಿ ಶಿಶಿಲಕ್ಕೆ ಬಂದೆವು. ೨.೩೦ಗೆ ನಾವು ಗಣೇಶ ತಂತ್ರಿಗಳ ಮನೆಗೆ ಹೋದೆವು. ನಮಗೆ ಅಲ್ಲಿ ಉಳಿಯಲು ಏರ್ಪಾಡು ಮಾಡಿದ್ದರು ಪುರುಷೋತ್ತಮರಾಯರು. ಅಚ್ಚುಕಟಾಗಿ ಸಕಲ ವ್ಯವಸ್ಥೆ ಮಾಡಿದ್ದರು. ನಾಲ್ಕು ಕೋಣೆಗಳನ್ನು ನಮಗೆ ಬಿಟ್ಟುಕೊಟ್ಟಿದ್ದರು. ಅಲ್ಲಿ ನಮ ಚೀಲವಿಳಿಸಿ ಹಗುರಾದೆವು. ಕಲ್ಲಂಗಡಿ ಶರಬತ್ತು ತಂಪಾಗಿ ಹೊಟ್ಟೆಗೆ ಇಳಿದಾಗ ಮುಂದಿನ ಪಯಣಕ್ಕೆ ಶಕ್ತಿ ಸಂಚಯನವಾಯಿತು.

                                     ಉದಯಪರ್ವತ

     ನಾವು ೩ ಗಂಟೆಗೆ ತಯಾರಾದೆವು. ಸಮೀಪದ ಉದಯಪರ್ವತವನ್ನು ಹತ್ತುವುದು ನಮ್ಮ ಗುರಿಯಾಗಿತ್ತು. ಇದು ನಮ್ಮ ಚಾಮುಂಡಿಬೆಟ್ಟದಷ್ಟು ಇರಬಹುದು ಎಂದು ಆಯೋಜಕರು ಹೇಳಿದ್ದರು. ನಮಗೆ ಚೆನ್ನಪ್ಪ ಮಾರ್ಗದರ್ಶಕರಾಗಿ ಮುಂದೆ ಹೊರಟರು. ಬೇಗ ಬೇಗ ಬರಬೇಕು. ಕತ್ತಲೆಯಾಗುವ ಮೊದಲೇ ನಾವು ಬೆಟ್ಟ ಇಳಿದಾಗಬೇಕು. ಸಂಜೆ ೫ ಗಂತೆಯೊಳಗೆ ಇಳಿಯಲೇಬೇಕು. ಮೇಲೆ ತಲಪದಿದ್ದರೂ ಸರಿಯೆ ಎಲೀವರೆಗೆ ತಲಪಿರುತ್ತೀರೋ ಅಲ್ಲಿಂದ ವಾಪಾಸು ಹಿಂದಕ್ಕೆ ತಿರುಗಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು ಚೆನ್ನಪ್ಪ.
    ನಮ್ಮ ಸವಾರಿ ಬೆಟ್ಟದೆಡೆಗೆ ಹೊರಟಿತು. ಸ್ವಲ್ಪ ದೂರ ಎಲ್ಲರೂ ಹುರುಪಿನಿಂದಲೇ ಹೆಜ್ಜೆ ಹಾಕಿದೆವು. ಬೆಟ್ಟ ಏರು ಸುರುವಾಗುವಾಗ ಕೆಲವರ ಕಾಲು ನಿಧಾನಗತಿಗೆ ಬಂತು. ಬಿಸಿಲುಬೇರೆ, ಸರಿಯಾಗಿ ನಿದ್ರೆ ಇಲ್ಲದಿರುವುದು ಎಲ್ಲ ಸೇರಿ ನಡಿಗೆಗೆ ವೇಗ ಬರಲೆ ಇಲ್ಲ. ಅರ್ಧ ಬೆಟ್ಟ ಹತ್ತಿ ಆಗುವಾಗ ಚಾಮುಂಡಿಬೆಟ್ಟದಷ್ಟಂತೆ. ಅಲ್ಲವೇ ಅಲ್ಲ. ಅದರ ಎರಡರಷ್ಟು ಇದೆ ಎಂಬ ತೀರ್ಮಾನ ಬಂತು ಕೆಲವರಿಂದ!  ಕುರುಚಲು ಸಸ್ಯ, ಹುಲ್ಲಿನಿಂದ ಆವೃತವಾದ ಬೆಟ್ಟ. ಮರಗಳು ಇಲ್ಲವೇ ಇಲ್ಲ. ಅಂತೂ ನಾವು ೪.೩೦ಗೆ ಉದಯಪರ್ವತದ ಮೇಲೆ ನಿಂತಿದ್ದೆವು. ಅಲ್ಲಿಂದ ಅಮೇದಿಗುಡ್ಡ, ಎತ್ತಿನಭುಜ ಪಿಲಿಬೆಟ್ಟ ಎಲ್ಲ ಕಾಣುತ್ತಿತ್ತು. ಶಿಶಿಲ ನದಿ ಹರಿಯುವುದು ಸೊಗಸಾಗಿ ಕಾಣುತ್ತಿತ್ತು. ಅರ್ಧ ಗಂಟೆ ಅಲ್ಲಿ ಬಿಸಿಲಲ್ಲೇ ಕುಳಿತೆವು. ಅಲ್ಲೊಂದು ಧ್ವಜ ನೆಟ್ಟಿದ್ದರು. ಛಾಯಾಚಿತ್ರ ಕ್ಲಿಕ್ಕಿಸಿಕೊಂಡೆವು. ಐದು ಗಂಟೆಗೆ ಎಲ್ಲರನ್ನೂ ಎಬ್ಬಿಸಿದ ಚೆನ್ನಪ್ಪ ಇಳಿಯಿರಿ ಬೇಗ ಬೇಗ ಕತ್ತಲೆ ಆಗುತ್ತದೆ ಎಂದು ಹೊರಡಿಸಿಯೇ ಬಿಟ್ಟರು. ನಾವು ಕೆಲವರು ದಾಪುಗಾಲು ಹಾಕಿ ಕೆಳಗೆ ಇಳಿದೆವು. ಆರು ಗಂಟೆಗೆ ತಂತ್ರಿಗಳ ಮನೆ ಸೇರಿದೆವು. ಕಾಫಿ, ಶ್ಯಾವಿಗೆ ಉಪ್ಪಿಟ್ಟು ಹಸಿದ ಹೊಟ್ಟೆಗೆ ಬಲು ರುಚಿಯಾಗಿತ್ತು.
   ತಂತ್ರಿಗಳ ಮನೆಯ ಸಕಲ ಉಸ್ತುವಾರಿ ವಹಿಸುತ್ತ ಇರುವಾಕೆ ಗೌರಿ. ಬಲು ಚುರುಕಿನ ಹೆಂಗಸು. ನಮಗೆ ಒಲೆ ಉರಿಹಾಕಿ ಬಿಸಿನೀರು ಧಾರಾಳಾವಾಗಿ ಮಾಡಿಟ್ಟಿದ್ದರು. ಗಂಡಸರಿಗೆ ಹೊರಗೆ ದೊಡ್ಡ ಒಲೆ ಹಾಕಿ ಹಂಡೆಯಲ್ಲಿ ನೀರು ಕಾಯಿಸಿಟ್ಟಿದ್ದಳು. ಅಲ್ಲಿ ಅವಳು ಮಾಡುವ ಕೆಲಸ ಹತ್ತಾರು. ತೋಟಕ್ಕೆ ನೀರು ಬಿಡುವುದು, ಹಟ್ಟಿಯಲ್ಲಿ ದನಕರುಗಳ ಸಾಕಣೆ, ಹಾಲು ಕರೆಯುವುದು ಇತ್ಯಾದಿ ಅಲ್ಲಿಯ ಸರ್ವ ಕೆಲಸವೂ ಅವಳದೇ. ಸ್ನಾನ ಮಾಡಿ ವಿಶ್ರಾಂತಿ ಪಡೆಯುತ್ತಿರುವಾಗ ಉಳಿದ ಕೆಲವು ಮಂದಿ ಚೆನ್ನಪ್ಪನವರೊಡನೆ ಬಂದು ತಲಪುವಾಗ ಗಂಟೆ ೭ ಕಳೆದಿತ್ತು. ಎಲ್ಲರೂ ತಿಂಡಿ ತಿಂದು ಸುಧಾರಿಸಿಕೊಂಡರು. ಕೆಲವರು ಸಂಜೆಯ ತಿಂಡಿಯನ್ನೆ ತಿಂದು ಊಟ ಬಿಟ್ಟರು.   ೮ ಗಂಟೆಗೆ ಬಿಸಿ ಟೊಮೆಟೊ ಸೂಪು ಕುಡಿದೆವು.





   ಬೆಂಕಿ ಇಲ್ಲದ ಫಯರ್ ಕ್ಯಾಂಪ್- ಭೋಜನ- ನಿದ್ರೆ
    ಎಲ್ಲರೂ ಸ್ನಾನ ಮುಗಿಸಿ ಅಂಗಳದಲ್ಲಿ ಕುಳಿತೆವು. ಅಂಗಳಕ್ಕೆ ಶಾಮಿಯಾನ ಹಾಕಿದ್ದರು. ಆದಿನದ ಕಾರ್ಯಕ್ರಮದ ಬಗ್ಗೆ ತಮ್ಮ ಅನುಭವಗಳನ್ನು ಹೊಸದಾಗಿ ಚಾರಣಕ್ಕೆ ಬಂದವರು ಹೇಳಿದರು. ಹತ್ತು ಹನ್ನೆರಡು ಮಂದಿ ಯುವಕ ಯುವತಿಯರು ಬಂದಿದ್ದರು. ಗಗನಚಕ್ರವರ್ತಿ, ಫತೇಖಾನ್, ಡಾ. ಸತೀಶ, ಗೋಪಕ್ಕ, ಒಂದಿಬ್ಬರು ಹುಡುಗಿಯರು ಗಾನವಿನೋದ ನಡೆಸಿಕೊಟ್ಟರು. ಅಷ್ಟರಲಿ ಪುರುಷೋತ್ತಮ ರಾವ್ ಊಟದೊಂದಿಗೆ ಹಾಜರಾದರು. ಅನ್ನ, ಸಾರು, ಬಾಳೆಕಾಯಿ ಪಲ್ಯ, ಸಾಂಬಾರು, ಶ್ಯಾವಿಗೆ ಪಾಯಸ, ಹಪ್ಪಳ, ಬಾಳ್ಕ ಮೆಣಸು, ಮಜ್ಜಿಗೆ. ಉತ್ತಮ ಊಟವಾಗಿ ತಿಂದು ತೇಗಿದೆವು. ನಾವು ಎಂಟು ಮಂದಿ ಒಂದು ಕೋಣೆಯಲ್ಲಿ ಮಲಗಿದೆವು.

                                              ಬೆರಗಿನ ಅಮೇದಿಕಲ್ಲು 

  ಬೆಳಗ್ಗೆ ೮-೧-೧೭ರಂದು ೫.೩೦ಗೆ ಎದ್ದು ಹೊರಟು ತಯಾರಾದೆವು. ತಿಂಡಿ ಬರುವಾಗ ೭.೩೦. ಇಡ್ಲಿ ಚಟ್ನಿ, ಸಾಂಬಾರು, ಬನ್ಸ್, ಕಾಯಿಬರ್ಫಿ. ಬನ್ಸ್‌ಗೆ ಬೇಡಿಕೆ ಬಹಳ. ಕಾಫಿ, ಚಹಾ. ಕಾಫಿ ತುಂಬ ರುಚಿಯಾಗಿತ್ತು. ಅದಕ್ಕೆ ಚಹಾ ಕುಡಿಯುವ ಅಭ್ಯಾಸ ಇರುವವರೂ ಕಾಫಿ ರುಚಿಗೆ ಮಾರುಹೋಗಿ ಕಾಫಿ ಕಾಫಿ ಎಂದು ಕೇಳುತ್ತಿದ್ದರು.  ಬುತ್ತಿಗೆ ತುಪ್ಪದನ್ನ (ಗೀರೈಸ್) ತುಂಬಿಸಿ ನಾವು ೮.೩೦ಗೆ ತಯಾರಾಗಿ ನಿಂತೆವು. ಎಲ್ಲ ಸೇರಿದರಾ ಎಂದು ತಲೆಲೆಕ್ಕ ಹಾಕಿ ಹೊರಟೆವು. ಶಿಶಿಲದಿಂದ ಹೊಳೆಗುಂಡಿ ಮಾರ್ಗದಲಿ ಏಳು ಕಿಮೀ ಹೋಗಿ ಬಸ್ಸಿಳಿದೆವು. ಅಲ್ಲಿಂದ ಎಡಕ್ಕೆ ಕಾಡು ದಾರಿಯಲ್ಲಿ ನಮ್ಮ ಪಯಣ ಸಾಗಿತು. ಚೆನ್ನಪ್ಪ ಮತ್ತು ಆನಂದ ನಮ್ಮ ಮಾರ್ಗದರ್ಶಕರು. ಆನಂದ ಬಿರುಸಾಗಿ ನಡೆಯುವ ಗುಂಪಿಗೆ, ನಿಧಾನ ಬರುವ ಗುಂಪಿಗೆ ಚೆನ್ನಪ್ಪ. ಮುಂದಿನವರು ಸ್ವಲ್ಪ ದೂರ ಹೋದಮೇಲೆ ಹಿಂದೆ ಬರುವವರ ತಲೆ ಕಾಣುವಲ್ಲಿವರೆಗೆ ಕಾಯಬೇಕು ಎಂಬ ಅಪ್ಪಣೆ ಆಯಿತು. ಗುಡ್ಡ ಏರಬೇಕು. ಒಮ್ಮೆ ಸಮತಟ್ಟಾದ ದಾರಿ ಸಿಕ್ಕರೆ ಮಗದೊಮ್ಮೆ ತೀವ್ರ ಏರು. ಹೀಗೆ ಸಾಗಿದೆವು. ಒಟ್ಟು ನಾಲ್ಕು ಗುಂಪುಗಳಾದುವು. ಕೆಲವರು ಕಾಲು ಭಾಗ ನಡೆದು ವಾಪಾಸು ಹಿಂದಕ್ಕೆ ಹೋಗುವವರಿದ್ದರು. ಅವರನ್ನು ವಾಪಾಸು ಕರೆದೊಯ್ಯಲು ಚೆನ್ನಪ್ಪನ ಮಗ ಬರುವವನಿದ್ದ. ಇನ್ನೊಂದಷ್ಟು ಮಂದಿ ಅರ್ಧ ಭಾಗ ಹತ್ತಿದರು. ನಾವು ಕೆಲವರು ತೀರ ಬಿರುಸಾಗಿ ಅಲ್ಲದೆ ನಿಧಾನವಾಗಿ ಸಾಗಿದೆವು.  ಕೆಲವೆಡೆ ದಟ್ಟ ಕಾಡು. ಮುಂದೆ ಹೋದ ಯುವಕರ ತಂಡ ನಾವು ಹೋಗುವಾಗ ಕುಳಿತು ಬಲು ಜೋರಾಗಿ ಆಂಗ್ಲ ಪದ ಕೋರಸ್ಸಿನಲ್ಲಿ ಹಾಡುತ್ತಿದ್ದರು. ‘ಇವರೇನು ಹೀಗೆ? ಕಾಡುದಾರಿಯಲ್ಲಿ ಮಾತಾಡದೆ ನಡೆಯಬೇಕು. ಹಾಡು ಬೇರೆ. ಮೌನವಾಗಿ ನಡೆಯುವಾಗ ಹಕ್ಕಿಗಳ ಕೂಗು ಕೇಳಿಸುತ್ತದೆ. ಅದನ್ನು ಕೇಳಬೇಕು. ಇವರಿಗೆ ಹೇಳುವವರು ಯಾರು?’ ಎಂದು ಆನಂದ ನಮ್ಮಲ್ಲಿ ಹೇಳಿಕೊಂಡರು.  ಆದರೆ ನಮ್ಮ ಹೆಚ್ಚಿನವರಿಗೂ ಕಾಡು ದಾರಿಯಲ್ಲಿ ಹೇಗೆ ಸಾಗಬೇಕೆಂಬ ಅರಿವಿಲ್ಲ. ಜೋರಾಗಿ ಮಾತಾಡುತ್ತ ಬೊಬ್ಬೆ ಹಾಕುತ್ತ, ನಡೆಯುತ್ತಿದ್ದರು. ಅರಿವಿಲ್ಲ ಎನ್ನುವಂತಿಲ್ಲ, ಇದು ಶುದ್ಧ ಉಡಾಫೆಯೇ ಎಂದು ನನ್ನ ಭಾವನೆ.  ಏಕೆಂದರೆ ಹೇಳಿದರೂ ತಿಳಿದುಕೊಳ್ಳದಂತ ಅವಿದ್ಯಾವಂತರಲ್ಲವಲ್ಲ. ಯಾರೂ ಗಲಾಟೆ ಮಾಡಬೇಡಿ. ಆನೆ ಇಲ್ಲಿ ಈಗಷ್ಟೆ ಹೋಗಿದೆಯಂತೆ. ಎಂದು ಚೆನ್ನಪ್ಪ ಫೋನ್ ಮಾಡಿ ಎಚ್ಚರಿಸಿದರು ಆನಂದನಿಗೆ. ಅದನ್ನು ಆನಂದ ಹೇಳಿದ್ದಕ್ಕೆ ಆನೆ ಕಂಡರೆ ನಮಗೆ ಭಯವಿಲ್ಲವಪ್ಪ ಎಂದು ಅದಕ್ಕೂ ತಮಾಷೆಯಾಗಿ ಮಾತಾಡುತ್ತ, ನಗುತ್ತ ಸಾಗುತ್ತಿದ್ದರು. ಇವರೊಡನೆ ನಾವು ಸಾಗುವುದು ಬೇಡ. ಸ್ವಲ್ಪ ನಿಧಾನವಾಗಿ ಹೋಗುವ ಎಂದು ನಾವು ಕೆಲವರು ಹಿಂದುಳಿದೆವು. ಮರದ ಕೊಂಬೆಗಳು ಮುರಿದದ್ದು, ಆನೆ ಆಗಷ್ಟೇ ಸಾಗಿ ಹೋದದ್ದಕ್ಕೆ ಕುರುಹಾಗಿ ಅದು ಹೋದ ಜಾಗದಲ್ಲೆಲ್ಲ ಹುಲ್ಲು ಮಡಚಿಕೊಂಡಿದ್ದುದು ಕಂಡು ಆನೆ ಹೋದದ್ದು ಹೌದು ಎಂದು ನಮಗೆ ಮನವರಿಕೆಯಾಯಿತು. ಕೆಲವೆಡೆಯಲ್ಲಿ ಸಾಗುವಾಗ ಯಾವುದೋ ಪ್ರಾಣಿಗಳ ವಾಸನೆ ಜೋರಾಗಿ ಬರುತ್ತಿತ್ತು.
     ಹೀಗೆ ಸಾಗುತ್ತಿರಬೇಕಾದರೆ ಇಬ್ಬರು ಯುವತಿಯರು ವಾಪಾಸಾಗುತ್ತಿದ್ದದ್ದು ಕಂಡು ಅವರನ್ನು ಮಾತಾಡಿಸಿದೆ. ಅವರಿಬ್ಬರು ಬೆಂಗಳೂರಿನವರು. ನಿನ್ನೆ ಅಮೇದಿಕಲ್ಲು ಕೆಳಗೆ ನೀರು ಸಿಗುವ ಸ್ಥಳದಲ್ಲಿ ಟೆಂಟು ಹಾಕಿ ಉಳಿದು ಈಗ ಬೆಳಗ್ಗೆ ಎದ್ದು ವಾಪಾಸಾಗುತ್ತಿರುವುದಂತೆ. ನಾವು ಮೇಲೆ ಹತ್ತಲಲ್ಲಿ ಎಂದರು. ಅವರ ಮಾತು ಕೇಳಿದಾಗ ಈ ಸಾಹಸಕ್ಕೆ ಮೆಚ್ಚಬೇಕೆನಿಸಲಿಲ್ಲ. ಹುಚ್ಚುತನ, ಬೇಜವಾಬ್ದಾರಿ ವರ್ತನೆ ಎಂದು ಖಂಡಿಸುವ ಮನಸ್ಸಾಯಿತು. ಇಬ್ಬರೇ ಆ ರಾತ್ರೆಯಲ್ಲಿ ಕಾಡಿನಲ್ಲಿ ಟೆಂಟು ಹಾಕಿ ಮಲಗಿದ್ದಾರಲ್ಲ. ಕಾಡುಪ್ರಾಣಿಗಳು ಬಂದರೆ ಏನು ಮಾಡಬೇಕಿತ್ತು? ಜೀವಕ್ಕೆ ಹಾನಿಯಾದರೆ ಹೊಣೆ ಯಾರು?  ಅದೂ ಮಾರ್ಗದರ್ಶಕನಾಗಿದ್ದುದು ಸಣ್ಣಪ್ರಾಯದ ಒಬ್ಬ ಯುವಕ ಮಾತ್ರ. ಇದು ಸಾಹಸ ಹೇಗಾದೀತು? ಇವರ ಇಂಥ ಹೊಣೆಗೇಡಿತನಕ್ಕೆ ಹೆತ್ತವರು ಪಾಪ ಏನು ಮಾಡಿಯಾರು? ಇಂಥ ಹುಚ್ಚುತನಗಳಿಗೆ ಸ್ಥಳೀಯ ಮಾರ್ಗದರ್ಶಕರು ಅವಕಾಶ ಮಾಡಿಕೊಡಬಾರದು. ಹತ್ತು ಮಂದಿ ಗುಂಪಿನಲ್ಲಿ ಬಂದರೆ ಮಾತ್ರ ಕರೆದೊಯ್ಯುತ್ತೇವೆಂದು ಕಟ್ಟುನಿಟ್ಟಾಗಿ ಹೇಳಬೇಕು.
     ಮುಂದೆ ಸಾಗಿದಂತೇ ಸಖತ್ ಏರುದಾರಿ. ಹೆಜ್ಜೆ ಹೆಜ್ಜೆಗೂ ಉಸ್ಸಪ್ಪ ಎಂದು ತುಸು ನಿಂತು ಮುಂದುವರಿಯುವ ಹಾಗಾಗುತ್ತಿತ್ತು. ಸುಸ್ತು ಆದಾಗಲೆಲ್ಲ ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತ ಸಾಗಿದೆ. ಹೆಚ್ಚು ನೀರು ಕುಡಿಯುವ ಆಸೆ ಆಗುತ್ತಿತ್ತು. ಆದರೆ ನೀರು ಮುಗಿಯುವ ಭಯ. ಮುಂದೆ ಒಂದು ಕಡೆ ಮಾತ್ರ ನೀರು ಸಿಗುತ್ತದೆ ಎಂದಿದ್ದರು. ಕಡ್ಲೆಚಿಕ್ಕಿ ತಿಂದು ನೀರು ಕುಡಿದು ಮುಂದೆ ಸಾಗಿದೆವು. ಕೆಲವು ಯುವಕ ಯುವತಿಯರು ಇನ್ನು ಮುಂದೆ ಹೋಗಲು ಸಾಧ್ಯವೇ ಇಲ್ಲ ಎಂದು ಅರ್ಧದಲ್ಲೇ ವಾಪಾಸಾಗುವ ನಿರ್ಧಾರ ಕೈಗೊಂಡರು.  ಸುಮಾರು ಅರ್ಧ ದಾರಿ ಸಾಗುವಾಗ ಅಮೇದಿಗುಡ್ಡದ ಕಲ್ಲುಬಂಡೆ ಬುಡ ಕಾಣುತ್ತದೆ. ಅಬ್ಬ ಇದನ್ನು ಮುಂದೆ ನಾವು ಏರಬೇಕಲ್ಲ. ಇನ್ನೂ ಎಷ್ಟು ಹೋಗಬೇಕು ಎಂದು ಆನಂದ ಅವರನ್ನು ಕೇಳಿದರೆ, ‘ನೀವೀಗ ಅರ್ಧ ಮಾತ್ರ ಬಂದಿರುವುದು. ಇನ್ನೂ ಹೋಗಬೇಕು ಹೀಗೆ ನಿಧಾನ ಮಾಡಿದರೆ ಆಗಲಿಕ್ಕಿಲ್ಲ. ಬೇಗ ಬೇಗ ಹೋಗಬೇಕು. ನಿಂತರೆ ಅಷ್ಟೆ ಮೇಲೆ ಹೋಗಲು ಸಾಧ್ಯವಾಗದೆ ಹಿಂದೆ ಹೋಗಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಈ ಎಚ್ಚರಿಕೆಯಿಂದ ಜಾಗೃತರಾಗಿ ನಿಲ್ಲದೆ ನಡೆದೆವು ನಡೆದೆವು. ಸುಮಾರು ೫ಕಿಮೀ ಕಾಡುದಾರಿಯಲ್ಲಿ ನಡೆದಾಗುವಾಗ ಬೃಹತ್ ಅಮೇದಿಕಲ್ಲು ಕಾಣುತ್ತದೆ. ಅಂತೂ ಆ ಬಂಡೆಗಲ್ಲು ಬುಡ ಕೈಗೆ ಸಿಕ್ಕಿದಾಗ ಬಂಡೆಯೇ, ನಿನಗೊಂದು ನಮಸ್ಕಾರ, ನಿನ್ನ ತುದಿಗೆ ಏರುವಂತ ಶಕ್ತಿ ದಯಪಾಲಿಸಪ್ಪ ಎಂದು ಒಂದು ನಮಸ್ಕಾರ ಹಾಕಿದೆ. ಆ ಬಂಡೆ ತುದಿ ತಲಪಲು ಮತ್ತೆ ಮೂರು ನಾಲ್ಕು ಕಿಮೀ ಸಾಗಬೇಕು. ಒಂದಷ್ಟು ದೂರ ಸಾಗಿದಾಗ ನಾನು ಸೌಮ್ಯ ಕೂತು ವಿರಮಿಸಿದೆವು. ಕಾವ್ಯ ಜೊತೆಗಿದ್ದವಳು ಮುಂದೆ ಹೋದಳು. ಇನ್ನು ನಮ್ಮಿಂದ ಸಾಧ್ಯವಾದೀತ ಈ ಬಂಡೆ ಏರಲು? ಇಲ್ಲಿಗೆ ಸಾಕು ಮಾಡೋಣವೇ? ಎಂದು ನಾವು ಮಾತಾಡುತ್ತ ಇದ್ದಾಗ ಫತೇಖಾನ್ ಅಲ್ಲಿಗೆ ಬಂದರು. “ಬನ್ನಿ ಬನ್ನಿ ಸಾಧ್ಯ’’ ಎಂದು ಹೇಳಿದ ಅವರು ಮುಂದೆ ಸಾಗಿದರು. ಅವರ ಮಾತಿನಿಂದ ಹುರುಪುಗೊಂಡು, ಎಷ್ಟು ಸಾಧ್ಯವೋ ಅಷ್ಟು ಮುಂದೆ ಹೋಗೋಣ. ಅವರು ಹೇಳಿದ ಸಮಯದೊಳಗೆ ತುದಿ ಮುಟ್ಟಿದರೆ ಆಯಿತು. ಇಲ್ಲಾಂದರೆ ಅಲ್ಲಿಂದಲೆ ಮರಳೋಣ ಎಂದು ಸೌಮ್ಯ ಅವರಿಗೆ ಹೇಳಿದೆ. ಕೆಲವೆಡೆ ಬಂಡೆ ಏರುತ್ತ, ಹುಲ್ಲು ದಾರಿಯಲ್ಲಿ ಸಾಗುತ್ತ, ಚಡಾವು ಏರುತ್ತಲೇ ಉಸಿರು ಹೊರಹಾಕುತ್ತ, ನಿಂತು ಸುಧಾರಿಸುತ್ತ ನಡೆದೆವು. ಪ್ರಾರಂಭದಲ್ಲಿ ಹುಲ್ಲು, ಮರ, ಏನೇ ಕಂಡರೂ ಫೋಟೋ ತೆಗೆಯುತ್ತಿದ್ದವಳು ಸುಸ್ತಾಗಿ ಕ್ಯಾಮರಾ ಬ್ಯಾಗಿನಲ್ಲಿರಿಸಿದೆ. ಫೋಟೋವೂ ಬೇಡ ಏನೂ ಬೇಡ. ಮೇಲೆ ತಲಪಿದರೆ ಸಾಕು ಎಂಬ ವೈರಾಗ್ಯ ಆವರಿಸಿತ್ತು. ಅಷ್ಟು ಸುಸ್ತಾದರೆ ಮಾತ್ರ ಫೋಟೋದ ವಿಷಯದಲ್ಲಿ ನನಗೆ ಅಂತ ವೈರಾಗ್ಯ ಬರುತ್ತದೆ! ಅಂತೂ ಅಮೇದಿಗುಡ್ಡವನ್ನು ನಾವು ೨೫ ಮಂದಿ ಏರಿಯೇ ಬಿಟ್ಟೆವು. ಬಂಡೆ ಏರಿ ಸುಸ್ತಾಗಿ ಒಂದು ಕಡೆ ಕುಳಿತಾಗ ಓಹ್ ಇದನ್ನು ಏರಲು ನಮಗೆ ಸಾಧ್ಯವಾಯಿತಲ್ಲ ಎಂಬ ಹರ್ಷವೂ ಆವರಿಸಿತು. ಸುತ್ತಲೂ ಹಸುರಿನಿಂದ ಕೂಡಿದ ಕಾಡು, ಪರ್ವತಗಳನ್ನು ನೋಡುವಾಗ ಸುಸ್ತು ಎಂಬ ಪದವೇ ಇಲ್ಲದಂತೆ ಮನ ಉಲ್ಲಾಸಗೊಂಡಿತು. ಅರ್ಧ ಗಂಟೆ ಅಲ್ಲಿ ವಿರಮಿಸಿದೆವು. ಬುತ್ತಿ ಬಿಚ್ಚಿದೆ. ಆದರೆ ಒಂದು ತುತ್ತು ತಿನ್ನಲೂ ಸಾಧ್ಯವಾಗಲಿಲ್ಲ. ಒಳಗೆ ಇಳಿಯಲೆ ಇಲ್ಲ. ಬುತ್ತಿ ಮುಚ್ಚಿ ಚೀಲಕ್ಕೆ ಸೇರಿಸಿದೆ. ಬೀಸಾಡಲು ಮನ ಒಪ್ಪಲಿಲ್ಲ. ತಂತ್ರಿಗಳ ಮನೆಗೆ ಹೋಗಿ ನಾಯಿಗೆ ಹಾಕಬಹುದು ಎನಿಸಿತು. ಕುಪ್ಪಿಯ ತಳದಲ್ಲಿದ್ದ ಒಂದು ಗುಟುಕು ನೀರು ಕುಡಿದು ಸುಧಾರಿಸಿದೆ. ಸೌಮ್ಯ ನೀರು ಕೊಟ್ಟರು. ಕುಡಿದಾಗ ತೃಪ್ತಿ ಆಯಿತು. ಎದುರು ಭಾಗದಲ್ಲಿ ಎತ್ತಿನಭುಜ ಕಾಣುತ್ತದೆ. ಅದು ಇಲ್ಲಿಗೂ ಬನ್ನಿ ಎಂದು ಆಹ್ವಾನಿಸಿದಂತೆ ಭಾವಿಸಿದೆ. ಇನ್ನು ಇಳಿಯಿರಿ. ಕತ್ತಲಾಗುವ ಮೊದಲು ತಲಪಬೇಕು. ಎಂದು ಬಂದೆ ಅಡಿಯಲ್ಲಿ ಮಲಗಿದ್ದ ಆನಂದ ಎಲ್ಲರಿಗೂ ಇಳಿಯಲು ಹೇಳಿದರು. ಅಮೇತಿಗುಡ್ಡದಿಂದ ಕೆಳಗೆ ಇಳಿಯಲು ತೊಡಗಿದೆವು. ಇಳಿಯಲು ಕಷ್ಟವಾಗುವ ಸುಮಾರು ಮಂದಿಗೆ ಸತೀಶಬಾಬು ಅವರು ಕೈಹಿಡಿದು ನೆರವಾದರು. ನನಗೆ ಇಳಿಯಲು ಯಾವುದೇ ತರಹದ ಕಷ್ಟವಿಲ್ಲ. ಎಂಥ ಬಂಡೆಗಲ್ಲನ್ನಾದರೂ ಕುಳಿತು ಇಳಿದುಬಿಡುತ್ತೇನೆ. ಏರು ಹತ್ತುವುದೇ ಕಷ್ಟ ನನಗೆ. ಇಳಿಯುವಾಗ ಬಲು ಎಚ್ಚರದಿಂದ ಇಳಿಯಬೇಕಿತ್ತು. ಹುಲ್ಲು ಕಾಲಿಟ್ಟರೆ ಜಾರುವಂತಿತ್ತು. ಕೆಲವು ಕಡೆ ಕುಳಿತೇ ಇಳಿಯಬೇಕಿತ್ತು. ಅಷ್ಟು ಇಳಿಜಾರು. ಸ್ವಲ್ಪ ದೂರ ಬಂದಾಗುವಾಗ ಗಂಟಲು ಒಣಗಿ ನೀರು ನೀರು ಎಂಬ ಹಪಹಪಿಕೆ ಸುರುವಾಗಿತ್ತು. ಕಾವ್ಯ, ಸೌಮ್ಯ ಅವರುಗಳು ನೀರು ಕೊಟ್ಟು ನನ್ನ ದಣಿವಾರಿಸಿದರು. ಅಮೃತ ಎಂಬುದು ಹೇಗಿದ್ದಿರಬಹುದು ಎಂಬುದು ಆ ನೀರು ಕುಡಿದಾಗುವಾಗ ನನಗೆ ಗೊತ್ತಾಯಿತು. ಅಷ್ಟೂ ರುಚಿಯಾಗಿತ್ತು ನೀರು. ಬೇಕಷ್ಟು ಕುಡಿಯಿರಿ. ಇನ್ನೂ ನೀರಿದೆ ಎಂದರು ಅವರು ಉದಾರತೆಯಿಂದ. ಒಂದೆರಡು ಕಡೆ ಕೂತು ದಣಿವಾರಿಸಿಕೊಂಡೆವು.
  ಸುಮಾರು ಮೂರು ಕಿಮೀ ಇಳಿದಾಗುವಾಗ ನೀರು ಇರುವ ಸ್ಥಳ ಸಿಕ್ಕಿತು. ಹುಡುಗರು ಕೆಲವರು ಹೋಗಿ ನೀರು ತುಂಬಿಸಿ ತಂದರು. ಆಹಾ ಎಷ್ಟು ರುಚಿಯಾದ ನೀರು. ನೀರಿಗೂ ಇಂಥ ರುಚಿ ಇರುತ್ತದೆ ಎಂದು ಗೊತ್ತಾದ ಕ್ಷಣವದು. ಬಾಯಾರಿದ ನಾನು ಒಂದು ಲೀಟರು ನೀರು ಗಟಗಟ ಕುಡಿದು ತೃಪ್ತಿ ಅನುಭವಿಸಿದೆ. ಆಯಾಸವೆಲ್ಲ ಮಾಯ. ಊಟ ಮಾಡದೆ ಇರುವುದು ಏನೂ ಬಾಧಕವೆನಿಸಲಿಲ್ಲ. ಚಿಕ್ಕಿ ಬಾಯಿಗೆ ಹಾಕಿಕೊಂಡೆ. ಅಲ್ಲಿಂದ ಮುಂದೆ ಎಲ್ಲೂ ನಿಲ್ಲದೆ ಸೀದಾ ನಡೆದೆವು. ಬಸ್ಸಿನ ಬಳಿ ಬರುವಾಗ ಸಂಜೆ ೬.೧೫. ಎಲ್ಲರೂ ಬಂದು ತಲಪುವಾಗ ೬.೪೫.









  ಶ್ರೀಶೈಲ ಕ್ಯಾಂಟೀನಿನಲ್ಲಿ ಗೋಳಿಭಜೆ
ಪುರುಷೋತ್ತಮರಾವ್ ಅವರ   ಶ್ರೀಶೈಲ ಕ್ಯಾಂಟೀನ್ ನಾವು ತಲಪಿದಾಗ ಮುಸ್ಸಂಜೆ ಏಳು ಗಂಟೆ ಕಳೆದಿತ್ತು. ಅಲ್ಲಿ ಅವಲಕ್ಕಿ, ಗೋಳಿಭಜೆ ಕಾಪಿ, ಚಹಾ ಸಿದ್ಧಮಾಡಿಟ್ಟಿದ್ದರು. ಹಸಿದ ನಾವು ಸರಿಯಾಗಿ ತಿಂದೆವು. ಅವಲಕ್ಕಿ ಮತ್ತಷ್ಟು ಹಾಕಿಸಿಕೊಂಡೆವು. ಅಲ್ಲಿಂದ ಗಣೇಶತಂತ್ರಿಗಳ ಮನೆಗೆ ತಲಪಿ ಸ್ನಾನಾದಿ ಮುಗಿಸಿ ಹರುಷಗೊಂಡು ಕೂತೆವು.
  ಪುಸ್ ಬಸ್ ಆಟ
  ಸೌಮ್ಯ ಒಂದು ಹೊಸ ಆಟ ಆಡಿಸಿದರು. ಸಾಲಾಗಿ ಕುಳಿತು ಒಬ್ಬೊಬ್ಬರೇ ಒಂದರಿಂದ ಅಂಕಿ ಹೇಳುತ್ತ ಹೋಗಬೇಕು. ೦ ಸಂಖ್ಯೆಗೆ ಪುಸ್ ಅಂತಲೂ ೫ ಸಂಖ್ಯೆಗೆ ಬಸ್ ಎಂದೂ ಹೇಳಬೇಕು. ಉದಾಹರಣೆಗೆ ನಮ್ಮ ಸರದಿಯಲ್ಲಿ ೫ ಎಂಬ ಅಂಕೆ ಬಂದಾಗ ಬಸ್ ಎನ್ನಬೇಕು. ಹತ್ತು ಎಂಬ ಅಂಕೆ ಬಂದಾಗ ೧ ಪುಸ್ ಎನ್ನಬೇಕು. ಪ್ರಾರಂಭದಲ್ಲಿ ಗೊಂದಲಗೊಂಡು ಬಸ್ ಪುಸ್ ಎನ್ನುವ ಗೊಂದಲದಲ್ಲಿ ನಾವು ಕೆಲವರು ಬೇಗ ಟುಸ್ ಎಂದು ಔಟಾದೆವು! ತಪ್ಪು ಹೇಳಿದವರು ಆಟದಿಂದ ನಿರ್ಗಮನ. ಸಂಗೀತ ಕುರ್ಚಿ ತರಹವೇ. ಬಲು ತಮಾಶೆಯಾಗಿ ವಿನೋದದಿಂದ ನಗುತ್ತಲೇ ನಾವು ಆಟ ಆಡಿದೆವು. ಗಮನವಿಟ್ಟು ಏಕಾಗ್ರತೆಯಿಂದ ನಮ್ಮ ಸರದಿ ಬಂದಾಗ ಕ್ಷಣದಲ್ಲಿ ಪುಸ್ ಬಸ್ ಹೇಳಬೇಕು. ಕೊನೆಗೆ ಮೂರು ಮಂದಿಗೆ ಬಹುಮಾನ ಲಭಿಸಿತು. ಅವರಿಗೆ ಸೌಮ್ಯ ಒಣಹಣ್ಣುಗಳನ್ನು ಬಹುಮಾನವಾಗಿ ನೀಡಿದರು. ಈ ಆಟದಲ್ಲಿ ಹೊತ್ತು ಸರಿದದ್ದೇ ಗೊತ್ತಾಗಲಿಲ್ಲ. ಆ ದಿನದ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಕೆಲವರು ಹೇಳಿದರು. ಒಂದೆರಡು ಮಂದಿ ಹಾಡಿಯಾಗುವಾಗ ಊಟ ಬಂದಿತ್ತು.


ಗೌರಿ. ಪಟ ಕ್ಲಿಕ್ಕಿಸುವಾಗ ಫ್ಲಾಶ್ ಗೆ ಕಣ್ಣು ಮುಚ್ಚಿದ್ದು!

ಪುಷ್ಕಳ ಊಟ- ನಿದ್ದೆ
ಬೀನ್ಸ್ ಪಲ್ಯ, ಎಳೆಹಲಸಿನ ಸಾಂಬಾರು, ಸಾರು, ಸಂಡಿಗೆ ಬಾಳ್ಕಮೆಣಸು, ಗೋದಿ ಪಾಯಸ, ಮಜ್ಜಿಗೆ, ಉಪ್ಪಿನಕಾಯಿ. ಭರ್ಜರಿ ಊಟ ಹೊಟ್ಟೆ ಸೇರಿತು. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕಕ್ಕೆ ಸೇರಿ ಚಾರಣ ಹವ್ಯಾಸ ಬೆಳೆಸಿಕೊಳ್ಳುವ ಮೊದಲು ಡೊಳ್ಳುಹೊಟ್ಟೆಯೇ ಇರಲಿಲ್ಲ. ಈಗ ಚಾರಣಕ್ಕಿಂತ ಹೆಚ್ಚು ಭರ್ಜರಿ ಊಟವಾಗಿ ಹೊಟ್ಟೆ ಬಂದಿದೆ ಎಂದು ಒಬ್ಬರು ತಮ್ಮ ಹೊಟ್ಟೆ ಸವರುತ್ತ ಹೇಳಿದರು! ೧೦.೩೦ಗೆ ಮಲಗುವ ತಯಾರಿ ನಡೆಸಿದೆವು.
ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ