ಶನಿವಾರ, ಫೆಬ್ರವರಿ 11, 2017

ಮೂರು ಬೆಟ್ಟವೇರಿದ ಸಾಹಸ (ಉದಯಪರ್ವತ, ಅಮೇದಿಕ್ಕೆಲ್, ಎತ್ತಿನಭುಜ) - ಭಾಗ -೨

ಎತ್ತಿನಭುಜ ಏರಿದ ಸಾಹಸ

ಹೊರಡುವ ತಯಾರಿ

    ೯-೧-೧೭ರಂದು ನಾವು ಬೆಳಗ್ಗೆ ೫.೪೫ಕ್ಕೆ ಎದ್ದು ನಿತ್ಯಕರ್ಮ ಮುಗಿಸಿ ಹೊರಟು ತಯಾರಾದೆವು. ಪೂರಿ, ಅಲಸಂಡೆ ಕಾಳಿನ ಗಸಿ, ಅಕ್ಕಿಮುದ್ದೆ ಚಟ್ನಿ, ಕೇಸರಿಭಾತ್. ಎರಡೆರಡು ತಿಂಡಿ ಏಕೆ ಮಾಡುತ್ತೀರಿ? ಇಷ್ಟು ಮಂದಿಗೆ ಮಾಡಲು ಕಷ್ಟ ಅಲ್ಲವೆ? ಎಂದು ಪುರುಷೋತ್ತಮ ಅವರನ್ನು ಕೇಳಿದೆ. ನೀವು ಅಪರೂಪಕ್ಕೆ ಅಷ್ಟು ದೂರದಿಂದ ಬಂದಿದ್ದಿರಿ. ಅದೇನು ಕಷ್ಟವಲ್ಲ. ಬೆಳಗ್ಗೆ ೩.೩೦ಗೆ ಎದ್ದು ಮಾಡಿದ್ದು ಎಂದು ನುಡಿದು ತಿನ್ನಿ ಎಂದು ಒಂದು ಪೂರಿ ತೆಗೆದು ತಟ್ಟೆಗೆ ಹಾಕಿದರು!  ಬುತ್ತಿಗೆ ಪಲಾವ್ ತಯಾರಾಗಿತ್ತು. ನನಗೆ ತಿಂಡಿಯಲ್ಲಿ ಒಲವು ಜಾಸ್ತಿ ಹಾಗಾಗಿ ನಾನು ಬುತ್ತಿಗೆ ಮುದ್ದೆ, ಪೂರಿ ಹಾಕಿಸಿಕೊಂಡೆ.
 ಮೂಡಿಗೆರೆ-ಭೈರಾಪುರ-ಶಿಶಿಲ ಮಾರ್ಗವಾಗಿ ದಕ್ಷಿಣಕನ್ನಡಜಿಲ್ಲೆಯ ಧರ್ಮಸ್ಥಳ, ಮಂಗಳೂರು ನಗರಗಳಿಗೆ ಸಂಪರ್ಕ ಕಲ್ಪಿಸಲು ೬೫ಕಿಮೀ ಹೊಸರಸ್ತೆ ನಿರ್ಮಿಸಲು ರಾಜ್ಯಸರಕಾರ ಮುಂದಾಗಿದೆ. ಅದಕ್ಕಾಗಿ ೫೬ಕೋಟಿ ರೂಪಾಯಿ ಮೀಸಲಿಟ್ಟಿದೆಯಂತೆ. ಈ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದರೆ ಮರಗಳನ್ನು ಕಡಿಯುವುದರಿಂದ ಹಸಿರು ನಾಶವಾಗಿ ಪ್ರಾಣಿಗಳಿಗೆ ಬಹಳ ತೊಂದರೆಯಾಗಲಿದೆ. ಮತ್ತು ಈಗಾಗಲೇ ಮಳೆಯ ಕೊರತೆ ಎದುರಿಸುತ್ತಿದ್ದೇವೆ. ಇನ್ನೂ ಆ ಸಮಸ್ಯೆ ಉಲ್ಭಣಿಸಲಿದೆ. ಅಪರೂಪದ ಜೀವವೈವಿಧ್ಯ ತಾಣವಾಗಿರುವ ಶಿಶಿಲ ಭೈರಾಪುರ ಮಾರ್ಗದಲ್ಲಿ ರಸ್ತೆ ನಿರ್ಮಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ದುರುದ್ದೇಶದಿಂದ ಕೂಡಿದೆ. ರಸ್ತೆ ನಿರ್ಮಿಸದಂತೆ ಹೋರಾಟ ನಡೆಸಲು ಪರಿಸರಾಸಕ್ತರು ಮುಂದಾಗಿದ್ದಾರೆ. ಆದರೆ ಯಶ ಸಿಗುವುದು ಸಂಶಯ. ರಸ್ತೆ ನಿರ್ಮಿಸಲು ಮುಂದಾದವರಿಗೆ ಪರಿಸರ ಮುಖ್ಯವಲ್ಲ. ತಮ್ಮ ಸ್ವಾರ್ಥವಷ್ಟೆ ಮುಖ್ಯ. (ಕಾಂಚಾಣದ ಮುಂದೆ ಅವರಿಗೆ ಪರಿಸರ ಕುರುಡು) ಈ ಯೋಜನೆಯಲ್ಲಿ ಎತ್ತಿನಭುಜ ಎಂಬ ನಿಸರ್ಗ ಸೌಂದರ್ಯದ ಭಂಡಾರವೆನಿಸಿದ ಈ ಬೆಟ್ಟಕ್ಕೂ ಹಾನಿಯಾಗುವ ಸಂಭವವಿದೆಯಂತೆ. ಹಾನಿಯಾಗುವ ಮೊದಲು ಒಮ್ಮೆ ಕಣ್ಣುತುಂಬ ಈ ಬೆಟ್ಟದ ಚೆಲುವನ್ನು ಕಾಣಬೇಕು ಎಂಬುದು ನನ್ನ ಬಯಕೆಯಾಗಿತ್ತು. 

  ೮.೩೦ಗೆ ಹೊರಟು ಅರ್ಧಕಿಮೀ ದೂರದಲ್ಲಿ ನಿಂತಿದ್ದ ಬಸ್ಸಿಗೆ ಹೋದೆವು. ಬಸ್ ಹತ್ತಿ ಶಿಶಿಲದಿಂದ ಹೊಳೆಗುಂಡಿಗೆ ಹೋದೆವು. ಹೊಳೆಗುಂಡಿ ಊರಿನ ಕೊನೆ. ಅಣ್ಣೇಗೌಡರ ಮನೆವರೆಗೆ ರಸ್ತೆ ಅಲ್ಲಿಂದ ಮುಂದಕ್ಕೆ ರಸ್ತೆ ಇಲ್ಲ. ಅಲ್ಲಿಗೆ ಧರ್ಮಸ್ಥಳದಿಂದ ನಿತ್ಯ ಬಸ್ ವ್ಯವಸ್ಥೆ ಇದೆ. 


  ಎತ್ತಿನಭುಜ ಬೆಟ್ಟ ಹತ್ತಲು ಬಸ್ ಇಳಿದು ಹೊರಟೆವು. ಸ್ವಲ್ಪ ಮುಂದೆ ಹೋಗುವಾಗ ಹೊಳೆದಾಟಬೇಕು. ಶೂ ಬಿಚ್ಚಲೇಬೇಕು. ಅಷ್ಟು ನೀರಿತ್ತು. ನಾವು ಹೊರಡುವಾಗ ಕಾಲಿಗೆ ಯ್ಯಾಂಟಿಸೆಪ್ಟಿಕ್ ಪೌಡರ್ ಬಳಿದು, ಕಾಲುಚೀಲದೊಳಕ್ಕೂ ಅಷ್ಟು ಪೌಡರ್ ಉದುರಿಸಿ, ಬೆರಳುಗಳಿಗೆ ಅದೇನೋ ಮುಲಾಮು ಮೆತ್ತಿ  ಬೆರಳು ಉಜ್ಜಬಾರದೆಂದು ಪ್ಲಾಸ್ಟರ್ ಹಾಕಿ ತಯಾರಾದದ್ದು! ಇಲ್ಲಿ ಪೌಡರ್ ಬಳಿದ ಮುಲಾಮು ಮೆತ್ತಿದ ಕಾಲು ಹೊಳೆದಾಟುವಾಗ ತೊಳೆದು ಹೋಯಿತು! ನಮ್ಮೊಡನೆ ಬಂದಿದ್ದ ಮಾರ್ಗದರ್ಶಕರಿಬ್ಬರು ಆನಂದರು, ಮತ್ತೊಬ್ಬರು ಚೆನ್ನಪ್ಪ. ಅವರ ಕಾಲಲ್ಲಿ ಹವಾಯಿ ಸ್ಲಿಪ್ಪರ್! ನಾವು ಬೆಲೆಬಾಳುವ ಶೂ ಧರಿಸಿಯೂ ಕಾಲು ನೋವೆಂದು ಒದ್ದಾಡಿದ್ದೆವು!  ಹೊಳೆದಾಟಿ ಪುನಃ ಶೂ ಹಾಕಿ ಕಾಡು ದಾರಿಯೊಳಗೆ ನಡೆದೆವು. ಮೊದಲಿಗೆ ಸುಮಾರು ೨ಕಿಮೀ ನೇರ ದಾರಿ. ಮುಂದೆ ಚಡಾವು. ಮತ್ತೆ ಸಮತಟ್ಟು ದಾರಿ, ಹೀಗೆ ಒಮ್ಮೆ ನೇರ ಏರು, ಮಗದೊಮ್ಮೆ ಸಮತಟ್ಟು ಹೀಗೆಯೇ ಸಾಗಿದೆವು. ದಟ್ಟಕಾಡಿನೊಳಗೆ ನಡೆಯುವಾಗ ಖುಷಿ ಅನುಭವಿಸಿದೆವು. ಪ್ರತೀ ಮರ, ಗಿಡ, ಹುತ್ತ, ಜೇಡನ ಬಲೆ ನೋಡುತ್ತ ಎಷ್ಟು ಚಂದ ಈ ಹೂ, ಬಳ್ಳಿ, ಎಲೆ ಎಂದು ಮಾತಾಡಿಕೊಳ್ಳುತ್ತ ನಾನೂ ಕಾವ್ಯ ಹೆಜ್ಜೆ ಹಾಕುತ್ತಿದ್ದೆವು. ಮರದ ಎಳೆಚಿಗುರು, ಬೋಳಾದ ಮರ, ಹುತ್ತ, ಜೇಡನಬಲೆ, ಕಾಡುಹೂಗಳು ನಮ್ಮ ಕ್ಯಾಮರಾದೊಳಗೆ ಸೆರೆಯಾದುವು. 






   ಕಂಡೆವು ಎತ್ತಿನಭುಜ

 ಸುಮಾರು ನಾಲ್ಕು ಕಿಮೀ ನಡೆದು ಹೋಗುವಾಗ ನಮ್ಮೆದುರು ಎತ್ತಿನ ಭುಜ ಎಂಬ ಬೃಹತ್ ಬಂಡೆ ಕಾಣುತ್ತದೆ. ಅದನ್ನು ಏರಬೇಕಾದರೆ ಮತ್ತೂ ೩ಕಿಮೀ ನಡೆಯಬೇಕು. ಹುಲ್ಲುದಾರಿಯಲ್ಲಿ ಸಾಗಬೇಕು. ನೀರು ಎಲ್ಲ ಖಾಲಿ. ಆನಂದ ಹೇಳಿದರು ಮುಂದೆ ನೀರು ಸಿಗುತ್ತದೆ ಅಲ್ಲಿ ತುಂಬಿಸಿಕೊಡುವ ಎಂದು ಧೈರ್ಯ ಕೊಟ್ಟರು. ಈ ದಿನ ನಡೆದು ನಡೆದು ನನಗೆ ಸುಸ್ತು ಆಯಿತು. ಹಾಗಾಗಿ ಸಹಜವಾಗಿ ನಡಿಗೆ ನಿಧಾನಗತಿಯಲ್ಲಿ ಸಾಗಿತು. ಹಕ್ಕಿಯ ಗಾನ ಕೇಳುತ್ತ ನಡೆದು, ಸುಸ್ತಾದಾಗ ಅಲ್ಲಲ್ಲಿ ನಿಂತು ಶಕ್ತಿಯೂಡಿಕೊಂಡು ಮುಂದೆ ಸಾಗುತ್ತಿದ್ದೆವು. ಅಂತೂ ಮದ್ಯಾಹ್ನ ೧ ಗಂಟೆಗೆ ಎತ್ತಿನ ಬೆನ್ನಿನ ಭಾಗಕ್ಕೆ ಏರುವಲ್ಲಿವರೆಗೆ ತಲಪಿದೆವು. ಇನ್ನು ಊಟ ಮಾಡದೆ ಇದ್ದರೆ ನನಗೆ ನಡೆಯಲು ಕಷ್ಟ ಎಂದು ಕಾವ್ಯ ಬುತ್ತಿ ತೆರೆದಳು. ಮಾರ್ಗದರ್ಶಕರು ಅಲ್ಲಿವರೆಗೆ ಬಂದು ಬುತ್ತಿ ಬಿಚ್ಚಿದರು. ಇನ್ನು ನೀವು ಹೋಗಿ ನಾವು ಇಲ್ಲೇ ಇರುತ್ತೇವೆ. ನೀರು ತುಂಬಿಸಲು ಬಾಟಲುಗಳನ್ನು ಇಟ್ಟು ಹೋಗಿ ಎಂದರು. ನಾನು ನಿಧಾನವಾಗಿ ಹೋಗುತ್ತ ಇರುತ್ತೇನೆ ಎಂದು ಕಾವ್ಯಳಿಗೆ ನುಡಿದು ಎತ್ತಿನ ಬೆನ್ನನ್ನು ಏರುವ ಸಾಹಸಕ್ಕೆ ಅಣಿಯಾದೆ. ಸುಸ್ತು ಬಹಳವಾಗಿ ನಿಂತು ನಿಂತು ಸುಧಾರಿಸಿ ಬೆನ್ನು ತಲಪಿದೆ. ಬೆನ್ನು ತಲಪಿದರಾಯಿತೆ? ಅಲ್ಲಿಂದ ಭುಜವನ್ನೇರಲು ಮತ್ತೂ ಏರಬೇಕಿತ್ತು. ಓಹ್! ಸಾಕಾಯಿತು. ಇಲ್ಲಿಗೆ ನಿಲ್ಲಿಸುತ್ತೇನೆ. ಇಷ್ಟಕ್ಕೇ ತೃಪ್ತಿ ಹೊಂದುತ್ತೇನೆ. ಆಗಲೇ ೧.೧೫. ಭುಜ ಹಿಡಿಯುವ ಸಾಹಸ ಮಾಡಾಲಾರೆ ಎನಿಸಿತು. ಸಾಕು ಇಷ್ಟಾದರೂ ಬಂದಿಯಲ್ಲ. ಕೂತು ವಿರಮಿಸು ಎಂದು ಮನಸ್ಸು ಪಿಸುನುಡಿಯಿತು. ಇಷ್ಟು ಬಂದು ಭುಜ ಏರದಿದ್ದರೆ ಏನು ಪ್ರಯೋಜನ? ಕೊನೆಮುಟ್ಟಿಬಿಡು. ನಿಧಾನವಾಗಿ ಹತ್ತು ಸಾಧ್ಯ ನಿನ್ನಿಂದ. ಎಂದು ಒಳಮನಸ್ಸು ಹುರಿದುಂಬಿಸಿತು. ಕಾವ್ಯ ಊಟವಾಗಿ ಮೇಲೆ ಹತ್ತಿ ನನ್ನಿಂದ ಮುಂದಿದ್ದಳು. 



   ಹೌದಲ್ಲ! ಇಷ್ಟು ದೂರಬಂದು ಗಮ್ಯ ತಲಪದಿದ್ದರೆ ಅದು ನನಗೆ ಶೋಭೆಯಲ್ಲ ಎಂದು ನನಗೆ ನಾನೇ ಹೇಳಿಕೊಂಡು ಕಾಲು ಮುಂದಡಿ‌ಇಟ್ಟೆ. ಏರು ಅಂದರೆ ಏರು. ಕೆಲವು ಕಡೆ ಬಂಡೆಯನ್ನು ಕೋತಿಯಂತೆ ಏರಬೇಕು. ಅಂತೂ ೨ ಗಂಟೆಗೆ ಎತ್ತಿನಭುಜವನ್ನು ಏರಿ ಅಲ್ಲಿ ಉಸ್ಸಪ್ಪ ಎಂದು ಕುಳಿತು ನಿಟ್ಟುಸಿರುಬಿಟ್ಟೆ. ಅಲ್ಲಿ ಕುಳಿತು ಸುತ್ತಲೂ ಪ್ರಕೃತಿಯ ವಿಸ್ಮಯವನ್ನು ನೋಡುತ್ತಿರಬೇಕಾದರೆ ಮೇಲೆ ಹತ್ತಿ ಬಂದದ್ದು ಸಾರ್ಥಕ ಎಂಬ ಭಾವ ಮೂಡಿತು. ದೂರದಲ್ಲಿ ಅಮೇದಿಕಲ್ಲು, ಒಂಬತ್ತುಗುಡ್ಡ ಇತ್ಯಾದಿ ಬೆಟ್ಟಗಳು ಕಾಣುತ್ತವೆ. ಸುತ್ತಲೂ ಪರ್ವತರಾಶಿಗಳು ಹಸುರಿನಿಂದ ಕೂಡಿತ್ತು. ನಾವು ಮನದಣಿಯೆ ನೋಡಿದ್ದೂ ಅಲ್ಲದೆ ಕ್ಯಾಮರದೊಳಗೂ ಆ ನೆನಪನ್ನು ಕ್ಲಿಕ್ಕಿಸಿಕೊಂಡೆವು. ಎತ್ತಿನಭುಜದ ಮೇಲೆ ಒಂದು ಧ್ವಜ ಹಾರಾಡುತ್ತಿತ್ತು. ಅಲ್ಲಿ ಕುಳಿತು ಛಾಯಾಚಿತ್ರ ಕ್ಲಿಕ್ಕಿಸಿಕೊಂಡೆವು. ಹೆಚ್ಚು ಹೊತ್ತು ಕೂತಿರಬೇಡಿ. ಕೆಳಗೆ ಇಳಿದು ಕಾಡುದಾರಿಯಲ್ಲಿ ಊಟ ಮಾಡೋಣ ಎಂದು ಫತೇಖಾನ್ ಹೇಳಿದ್ದರು. ನಾವು ಬೆಟ್ಟ ಹತ್ತುವಾಗ ಮುಂದೆ ಹತ್ತಿದ್ದವರೆಲ್ಲ ಇಳಿಯಲು ತೊಡಗಿದ್ದರು. ಹಾಗಾಗಿ ನಾವು ಹೆಚ್ಚು ಹೊತ್ತು ಕೂರದೆ ೨.೩೦ಗೆ ಬೆಟ್ಟ ಇಳಿಯಲು ಅನುವಾದೆವು. ಸತೀಶಬಾಬು ಬಂಡೆಯಿಂದ ಕೆಳಗೆ ಇಳಿಸಲು ನೆರವಾದರು. 




  ನಾವು ಕೆಳಗೆ ಇಳಿದು ಕಾಡುದಾರಿಯಲ್ಲಿ ಸಾಗಿ ಮರದ ನೆರಳಿನಲ್ಲಿ ಕೂತು ಬುತ್ತಿ ಬಿಚ್ಚಿದೆವು. ನಮ್ಮ ಊಟ ಮುಗಿಯುವ ಮೊದಲು ಆನಂದರಿಬ್ಬರೂ ನೀರು ತುಂಬಿ ತಂದು ಕೊಟ್ಟರು. ಊಟವಾಗಿ ತುಸು ವಿರಮಿಸಿ ಮುಂದೆ ನಡೆದೆವು. ಬೆಟ್ಟ ಹತ್ತುವಾಗ ಆಗಿದ್ದ ಆಯಾಸ ಇಳಿಯುವಾಗ ಇಲ್ಲವಾಗಿತ್ತು. ಹಾಗಾಗಿ ಕ್ಯಾಮರಾ ಬ್ಯಾಗಿನಿಂದ ಹೆಗಲಿಗೇರಿತು. ಇಳಿಯುವಾಗ ಹೆಚ್ಚು ವಿಶ್ರಾಂತಿ ಬಯಸದೆ ಒಂದೆರಡುಕಡೆ ವಿರಮಿಸಿದ್ದು ಬಿಟ್ಟರೆ ಎಲ್ಲೂ ನಿಲ್ಲದೆ ನಡೆದೆವು.  ನಡೆದಷ್ಟೂ ಮುಗಿಯದ ದಾರಿ ಎನಿಸಿತ್ತು. ಮರದ ಬೊಡ್ಡೆಗಳು ದಾರಿಗಡ್ಡ ಬಿದ್ದದ್ದನ್ನು ಬಗ್ಗಿ ದಾಟುತ್ತ ಬರಬೇಕಾದರೆ ಅರೆ ಈ ಸಸ್ಯ ನೋಡು ಕಾವ್ಯ. ಎಲೆಗಳ ಚಂದ ನೋಡು. ಎಲೆಗಳಿಗೆ ಯಾರಿಟ್ಟರೂ ಈ ಚುಕ್ಕೆಗಳನ್ನು ಎಂದು ಹೇಳುತ್ತಲೇ ಅದರ ಫೋಟೋ ಕ್ಲಿಕ್ಕಿಸಿದೆ. ಕಾವ್ಯಳೂ ಹಾಗಲ್ಲ ಹೀಗೆ ಫೋಟೋ ಹೊಡೆಯಬೇಕು ಎಂದು ಶೂಟೀಂಗ್ ಪಾಟ ಮಾಡುತ್ತ ಅವಳೂ ಕ್ಲಿಕ್ಕಿಸಿದಳು. ಹೀಗೆಯೇ ಮರ ಕಡಿದ ಸ್ಥಳದಲ್ಲಿ ಟಿಸಿಲೊಡೆದು ಚಿಗುರಿದ ದೃಶ್ಯವೂ ಎಂಥ ಚಂದವದು ಎನ್ನುತ್ತ ಎಲ್ಲವನ್ನೂ ನಮ್ಮ ಕ್ಯಾಮರಾದೊಳಗೆ ಭದ್ರಪಡಿಸಿಕೊಳ್ಳುತ್ತಲೇ ಸಾಗಿದೆವು. ಮುಂದೆ ಬಂದಾಗ ಕೆಲವು ಯುವತಿಯರು ಅಲ್ಲಿ ಕೂತಿದ್ದರು. ನಾವು ಮೇಲೆ ಬರಲೆ ಇಲ್ಲ. ಇಲ್ಲೇ ಕೂತಿದ್ದೆವು. ಎರಡುಸಲ ಎಲ್‌ಎಂ. ಆಯಿತು. ಮಾತ್ರೆ ತಿಂದೆ ಎಂದು ಅವರು ಹೇಳಿದಾಗ ಈ ‘ಎಲ್‌ಎಂ’ ಅಂದರೆ ಏನು? ಎಂದು ನನಗೆ ಮೊದಲು ಅರ್ಥವಾಗಲೆ ಇಲ್ಲ. ಮತ್ತೆ ಹೊಳೆಯಿತು ‘ಎಲ್‌ಎಂ’ ಅಂದರೆ ಲೂಸ್ ಮೋಶನ್ ಎಂಬುದರ ಹ್ರಸ್ವರೂಪ ಎಂದು! 




ಜಲಥೆರಪಿ
   ಅಂತೂ ನಾವು ಹೊಳೆ ಬಳಿ ಸಂಜೆ ಆರೂಕಾಲಕ್ಕೆ ಬಂದೇ ಬಿಟ್ಟೆವು. ಶೂಬಿಚ್ಚಿ ಹೊಳೆದಾಟಿ ಬಂಡೆಮೇಲೆ ಕುಳಿತು ನೀರಿಗೆ ಕಾಲು ಹಾಕಿ ಕಾಲುಗಳು ಈಜು ಅಭ್ಯಾಸ ಮಾಡುತ್ತಲೇ ಇದ್ದುವು. ಬಾಕಿ ಎಲ್ಲರೂ ಬರುವಲ್ಲಿವರೆಗೂ ಅರ್ಧಗಂಟೆಗೂ ಹೆಚ್ಚುಕಾಲ ಕಾಲುಗಳು ಈಜುತ್ತಿದ್ದುವು. ಶೂಬಿಚ್ಚಿದಾಗ ಕಾಲುಬೆರಳುಗಳೆಲ್ಲ ನೋಯುತ್ತಿದ್ದುವು. ಇನ್ನು ಪುನಃ ಶೂ ಹಾಕಬೇಕಲ್ಲ ಎಂಬ ಚಿಂತೆ ಆಗಿತ್ತು. ಆದರೆ ಏನಾಶ್ಚರ್ಯ! ನೀರಿನಿಂದ ಎದ್ದಾಗ ಪಾದ ಹಾಗೂ ಬೆರಳುಗಳಲ್ಲಿ ನೋವೇ ಇಲ್ಲ. ಇದು ಜಲಥೆರಪಿಯ ಮ್ಯಾಜಿಕ್. ಇದು ನಮಗೆ ತುಂಬ ಖುಷಿ ಕೊಟ್ಟಿತು. ಕೆಲವರೆಲ್ಲ ನೀರಿಗೆ ಇಳಿದು ಮೈಚಾಚಿಕೊಂಡು ಒದ್ದೆಮುದ್ದೆಯಾಗಿ ಎದ್ದು ಚಳಿಯಲ್ಲಿ ನಡುಗಿದರು. ಎಲ್ಲರೂ ಬಸ್ ಬಳಿ ಬಂದು ಸೇರುವಾಗ ಗಂಟೆ ಏಳು ದಾಟಿತ್ತು.


   ಹೊಳೆಗುಂಡಿಯಿಂದ ಶಿಶಿಲ ತಲಪಿ ಪುರುಷೋತ್ತಮರ ಕ್ಯಾಂಟೀನಿನಲ್ಲಿ ಅವಲಕ್ಕಿ ಮಿಕ್ಶ್ಚರು ಕಷಾಯ, ಕಾಫಿ ಹೊಟ್ಟೆ ಸೇರಿದಾಗ ನೆಮ್ಮದಿ ಆಯಿತು. ಪುರುಷೋತ್ತಮರು ಬೇಕಷ್ಟು ತಿನ್ನಿ ತಿನ್ನಿ, ಕಷಾಯ ಕುಡಿದು ಹೇಗಿದೆ ಹೇಳಿ ಎನ್ನುತ್ತ ನಮಗೆಲ್ಲ ಆದರದ ಉಪಚಾರ ಮಾಡಿದ್ದರು. 

ಮರಳಿ  ಹೊರಡುವ ತಯಾರಿ
ಕ್ಯಾಂಟೀನ್ ಎದುರುಭಾಗದಲ್ಲಿರುವ ಶಿಶಿಲೆಶ್ವರ ದೇವಾಲಯ ನೋಡಿ ತಂತ್ರಿಗಳ ಮನೆ ತಲಪಿ ಸ್ನಾನವಾಗಿ ಚೀಲಕ್ಕೆ ಬಟ್ಟೆಬರೆ ತುಂಬಿ ೯.೩೦ಗೆ ತಯಾರಾದೆವು. ಅಷ್ಟರಲ್ಲಿ ಊಟದೊಂದಿಗೆ ಪುರುಷೋತ್ತಮರು ಹಾಜರಾಗಿಯೇಬಿಟ್ಟರು. 
ಭರ್ಜರಿ ಭೋಜನ
ಅನ್ನ, ಸಾರು, ಸಾಂಬಾರು, ಮೆಣಸುಕಾಯಿ, ಹಪ್ಪಳ, ಬಾಳ್ಕಮೆಣಸು, ಕಾಯಿಹೋಳಿಗೆ ಇವಿಷ್ಟು ಬಗೆಯನ್ನು ಚೆನ್ನಾಗಿ ಸವಿದೆವು. ಪುರುಷೋತ್ತಮರೇ ಆತ್ಮೀಯತೆಯಿಂದ ಹೋಳಿಗೆ ಬಡಿಸಿದ್ದರು. 



ಕೃತಜ್ಞತಾ ಸಮರ್ಪಣೆ
ನಾವೆಲ್ಲ ವೃತ್ತಾಕಾರವಾಗಿ ನಿಂತು ಪುರುಷೋತ್ತಮ ಮತ್ತು ಅವರ ಮಕ್ಕಳಿಗೆ, ಹಾಗೂ ಉಳಿದುಕೊಳ್ಳಲು ಜಾಗ ಕಲ್ಪಿಸಿಕೊಟ್ಟ ಗಣೇಶ ತಂತ್ರಿಗಳಿಗೆ ಮತ್ತು ನಮಗೆ ಅಲ್ಲಿ ಸಕಲ ವ್ಯವಸ್ಥೆ ಮಾಡಿಕೊಟ್ಟ ಗೌರಿಗೆ, ಹಾಗೂ ನಮಗೆ ಮೂರು ದಿನ ಮಾರ್ಗದರ್ಶಕರಾಗಿ ಬಂದ ಆನಂದರಿಬ್ಬರು ಹಾಗೂ ಚೆನ್ನಪ್ಪನವರಿಗೆ ಧನ್ಯವಾದ ಅರ್ಪಿಸಿದೆವು.  ಗೌರಿಯೂ ಮುಗ್ಧತೆಯಿಂದ ಚಪ್ಪಾಳೆ ತಟ್ಟುತ್ತ ನಮ್ಮೊಡನೆ ನಿಂತು ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿದ್ದಳು. 
ಭಾಷಾಪ್ರೇಮದ ಸೆಳೆತ
ನಾವು ನಾಲ್ಕೈದು ಮಂದಿಗೆ ತುಳು ಭಾಷೆ ಮಾತಾಡಲು ಬರುತ್ತಿತ್ತು. ನಾವು ಪುರುಷೋತ್ತಮರು ಹಾಗೂ ಗೌರಿ ಜೊತೆ ತುಳು ಮಾತಾಡುತ್ತಿದ್ದೆವು. ಹಾಗಾಗಿ ನಮಗೆ ಅವರೊಂದಿಗೆ ಹೆಚ್ಚು ಭಾಂದವ್ಯ ಬೆಳೆಯಿತು. ಹೊರಡುವ ಮುನ್ನ ಪುರುಷೋತ್ತಮರು ನಮಗೆ ಮನೆಗೆಂದು ಹೋಳಿಗೆ ಕಟ್ಟು ಕೊಟ್ಟಿದ್ದರು. ಅವರ ಈ ಪ್ರೀತಿಗೆ ಏನು ಹೇಳಲಿ? ಪದಗಳೇ ಇಲ್ಲ. ನಾವು ಯಾರೋ ಏನೋ? ಆದರೂ ಅವರು ನಮ್ಮಲ್ಲಿ ತೋರಿದ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಮೂರೂ ದಿನ ಬೆಳಗ್ಗೆ ಬೇಗ ಎದ್ದು ತಿಂಡಿ ಅಡುಗೆ ಮಾಡಿಸಿ ತಂದು ತುಂಬ ಚೆನ್ನಾಗಿ ನಮ್ಮ ಹೊಟ್ಟೆಯ ಯೋಗಕ್ಷೇಮ ನೋಡಿಕೊಂಡಿದ್ದರು. ಊಟ ಸರಿಯಾಗಿ ಮಾಡಿದಿರ? ಸೇರಿತ ನಿಮಗೆ? ಎಂದು ನಮ್ಮ ತಂಡದ ಪ್ರತಿಯೊಬ್ಬರನ್ನೂ ವಿಚಾರಿಸಿದ್ದರು. ಈ ಪ್ರೀತಿ ದುಡ್ಡಿಗೂ ಮೀರಿದ್ದು ಎಂದೇ ನನ್ನ ಭಾವನೆ. ಪುರುಷೋತ್ತಮರ ತಮ್ಮನ ಪುಟ್ಟಮಗಳು ಒಂದು ದಿನ ಬಂದು ನಮ್ಮೊಡನೆ ಸ್ವಲ್ಪ ಹೊತ್ತು ಇದ್ದು ಆಟವಾಡಿ ಹೋಗಿದ್ದಳು.  ಗೌರಿಯಂತೂ ಮೂರೂ ದಿನ ಅವಳ ಮನೆಗೂ ಹೋಗದೆ ಅಲ್ಲಿಯೇ ಉಳಿದುಕೊಂಡು ನಮ್ಮಲ್ಲಿ ಮಾತಾಡುತ್ತಲೇ ನಮ್ಮೊಳಗೊಬ್ಬಳಾಗಿದ್ದಳು. ಅವಳ ನಾಯಿ ಬೆಕ್ಕುಗಳೂ ನಮ್ಮ ಹಿಂದೆಮುಂದೆ ಸುತ್ತುತ್ತ ಪ್ರೀತಿ ತೋರುತ್ತಿದ್ದುವು. 
ವಿದಾಯ- ಮರಳಿ ಮನೆಗೆ
ಎಲ್ಲರಿಗೂ ವಿದಾಯ ಹೇಳಿ ರಾತ್ರಿ ೧೧ ಗಂಟೆಗೆ ಬಸ್ ಹತ್ತಿದೆವು. ೧೦-೧-೧೭ರಂದು ಬೆಳಗ್ಗೆ ೫.೩೦ ಗಂಟೆಗೆ ಮೈಸೂರು ತಲಪಿದೆವು. ಪ್ರತಿಯೊಬ್ಬರ ಮನೆ ಆಸುಪಾಸಿನಲ್ಲೇ ನಮ್ಮನ್ನೆಲ್ಲ ಇಳಿಸಿದ್ದರು. ಮೂರು ದಿನದ ಈ ಚಾರಣ ಕಾರ್ಯಕ್ರಮ ಕೇವಲ ರೂ ೨೬೦೦ರಲ್ಲಿ ಬಹಳ ಅಚ್ಚುಕಟ್ಟಾಗಿ ಚೆನ್ನಾಗಿ ನಡೆಯಿತು. ಇದನ್ನು ಆಯೋಜಿಸಿದ್ದು ಮೈಸೂರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರಾದ ಅಯ್ಯಪ್ಪ, ಪಲ್ಲವಿ, ಅಡಪ ಹಾಗೂ ಇವರಿಗೆ ಫತೇಖಾನ್, ಸತೀಶಬಾಬು ಸಂಪೂರ್ಣ ನೆರವನ್ನಿತ್ತು ಸಹಕರಿಸಿದ್ದರು ಮತ್ತು ಚಾರಣ ಸಮಯದಲ್ಲಿ ನಮ್ಮೆಲ್ಲರನ್ನೂ ಹುರಿದುಂಬಿಸಿ ಕರೆದೊಯ್ದಿದ್ದರು. ಇವರೆಲ್ಲರಿಗೂ ನಮ್ಮ ಚಾರಣಿಗರ ತಂಡದ ಪರವಾಗಿ ವಂದನೆಗಳು. 
   ಅಮೇದಿಕಲ್ಲು, ಎತ್ತಿನಭುಜ ಚಾರಣ ಹೋಗುವವರು ಆದಷ್ಟು ಗುಂಪಿನಲ್ಲಿ ಹೋಗಿ. ಶಿಶಿಲದಲ್ಲಿ ಅತ್ಯುತ್ತಮ ಊಟ ವಸತಿಗೆ ಪುರುಷೋತ್ತಮ ರಾವ್ ೮೭೬೨೯೨೧೧೫೪, ಸುಸೂತ್ರ ಚಾರಣ ಮಾರ್ಗದರ್ಶನಕ್ಕೆ ಚೆನ್ನಪ್ಪ ೯೪೮೧೭೩೫೮೯೫ ಇವರನ್ನು ಸಂಪರ್ಕಿಸಿ. 
     ಮೈಸೂರು ತಲಪಿದ ಮಾರನೆದಿನ ಪುರುಷೋತ್ತಮರಾಯರು ದೂರವಾಣಿ ಕರೆ ಮಾಡಿ ‘ಸರಿಯಾಗಿ ಮನೆ ತಲಪಿದಿರ? ವಿಶ್ರಾಂತಿ ತೆಗೆದುಕೋಂಡಿರ? ಸುಸ್ತು ಎಲ್ಲ ಪರಿಹಾರವಾಯಿತ?’ ಎಂದು ಯೋಗಕ್ಷೇಮ ವಿಚಾರಿಸಿದ್ದರು.  ಇವರ ಈ ವಿಶ್ವಾಸಕ್ಕೆ ನಮೋನಮಃ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ