ಗುರುವಾರ, ಮಾರ್ಚ್ 30, 2017

ಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟ

   ಮಂಡ್ಯ ತಾಲೂಕಿನ ಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟಕ್ಕೆ ೧೯-೩-೨೦೧೭ರಂದು ಚಾರಣ ಏರ್ಪಡಿಸಿದ್ದೇವೆ ಎಂದು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರಿನವರು ಪ್ರಕಟಣೆ ಹೊರಡಿಸಿದ್ದರು. ಮಾರ್ಚ್ ತಿಂಗಳಿನಲ್ಲಿ ಬಿಸಿಲು ಜಾಸ್ತಿ. ಚಾರಣ ಹೋಗುವುದಾ ಬೇಡವಾ ಎಂಬ ಜಿಜ್ಞಾಸೆ ಎದುರಾಯಿತು. ಬಿಸಿಲೇ ಇರಲಿ ಮಳೆಯೇ ಬರಲಿ ಅದಕ್ಕೆಲ್ಲ ಅಂಜಿದರೆ ಏನು ಶಿವಾ? ಬಿಸಿಲು, ಮಳೆನಾಡಿನಲ್ಲಿ ಜನಿಸಿದ ನಾನು ಅವಕ್ಕಂಜಿದರೆ ನಾನು ಹುಟ್ಟಿದ ತಾಯಿನಾಡಿಗೇ ಅವಮಾನ ಎಂದು ತೀರ್ಮಾನಿಸಿ ಚಾರಣ ಹೊರಡುವುದೆಂದು ರೂ. ೫೫೦ ಕಟ್ಟಿ ರಸೀತಿ ಪಡೆದೆ. 
   ಆ ದಿನ ಬೆಳಗ್ಗೆ ೬.೩೦ಗಂಟೆಗೆ ನಾವು ೩೨ ಮಂದಿ ಸಣ್ಣ ಬಸ್ಸಿನಲ್ಲಿ ಮೈಸೂರಿನಿಂದ ಹೊರಟು ಶ್ರೀರಂಗಪಟ್ಟಣವಾಗಿ ನಾಗಮಂಗಲಕ್ಕೆ ೭.೫೦ಕ್ಕೆ ತಲಪಿದೆವು. ಅಲ್ಲಿಯ ವಸಂತ ಖಾನಾವಳಿಯಲ್ಲಿ ಇಡ್ಲಿ ವಡೆ ಕಾಫಿ ಸೇವನೆಯಾಯಿತು. ನನ್ನ ಪಕ್ಕ ಕೂತವರೊಬ್ಬರು ವಡೆ ಮುರಿಯುತ್ತ ತುಂಬ ಎಣ್ಣೆ ಇದೆ ಏನೂ ಚೆನ್ನಾಗಿಲ್ಲ ಎಂದು ಅರ್ಧ ವಡೆ ತಟ್ಟೆಯಲ್ಲೇ ಬಿಟ್ಟರು. ಛೇ! ಎಂಥ ಅನ್ಯಾಯವಿದು. ಅಂಥ ರುಚಿಯ ವಡೆಯನ್ನು ಬಿಡುವುದುಂಟೆ? ಎಣ್ಣೆ ಇಲ್ಲದೆ ವಡೆ ಹೇಗೆ ಮಾಡುವುದು? ನಾನು ಎರಡು ವಡೆ ತಿಂದು ಆಹಾ ಎಂಥ ರುಚಿ ಎಂದು ಮನದಲ್ಲೇ ಹೇಳಿಕೊಂಡೆ. ತಿಂಡಿಯಾಗಿ ೮.೨೦ಕ್ಕೆ ಹೊರಟು ನೆಲ್ಲೀಗೆರೆ ಹಾದು ಅಲ್ಲಿಂದ ಬಲಕ್ಕೆ ಹಾಸನ ಬೆಂಗಳೂರು ಹೈವೇಯಲ್ಲಿ ಮುಂದೆ ಸಾಗುವಾಗ ಟೋಲ್ ಸಿಗುತ್ತದೆ. ಮತ್ತೂ ಸಾಗಿ ಸ್ವಲ್ಪವೇ ದೂರದಲ್ಲಿ ಎಡಕ್ಕೆ ತಿರುಗಿದಾಗ ಹನುಮಂತರಾಯ ಬೆಟ್ಟಕ್ಕೆ ಹೋಗುವ ಸಲುವಾಗಿ ದೊಡ್ಡ ಕಮಾನು ಕಾಣುತ್ತದೆ. ಅಲ್ಲಿಂದ ಕೆಲವೇ ಕಿಮೀ ಸಾಗಿದಾಗ ಭೈರಸಂದ್ರ ಊರು ಸಿಗುತ್ತದೆ. ಬೆಟ್ಟದ ಬುಡದವರೆಗೆ ಹೋಗಿ ನಾವು ಬಸ್ಸಿಂದ ಇಳಿದೆವು. ಬಾಲರವಿಯೂ ನಮ್ಮೊಡನೆಯೇ ಸಾಗುತ್ತ ಬಂದು ಕ್ರಮೇಣ ಪ್ರಖರವಾಗಿ ನಾವು ಕಿಟಕಿಯಿಂದ ತಲೆ ಹೊರಹಾಕದಂತೆ ಚಳಕ ತೋರಿಸಿದ. ಹದ್ದಿನಕಲ್ಲು ಒಂದು ಪುಟ್ಟಬೆಟ್ಟ. ಅಗಲವಾಗಿ ವಿಶಾಲವಾಗಿ ನಮ್ಮೆದುರು ಕಾಣುತ್ತದೆ. ನಾವು ಬೆಟ್ಟ ಹತ್ತಲು ಪ್ರಾರಂಭಿಸಿದಾಗ ಗಂಟೆ ೯.೧೫. ನಾಲ್ಕೈದು ಮಂದಿ ಮೊದಲ ಬಾರಿಗೆ ಚಾರಣ ಬಂದವರಿದ್ದರು. ಅವರೂ ಹುರುಪಿನಿಂದಲೇ ಹತ್ತಲು ತೊಡಗಿದರು. ಬೆಟ್ಟ ಹತ್ತಲು ಮೆಟ್ಟಲುಗಳಿವೆ. ಚಪ್ಪಲಿ ಶೂ ಧರಿಸಿ ಬೆಟ್ಟ ಹತ್ತಬಾರದು ಎಂದು ಸ್ಥಳೀಯರು ಬಲವಾಗಿ ವಿರೋಧಿಸಿದರು. ಅಲ್ಲಿ ಹಾಗೆ ಫಲಕ ಹಾಕಿದ್ದು ಕಂಡಿತು. ಆದರೆ ನಾವು ಅವರ ಮಾತನ್ನು ಮಾನ್ಯ ಮಾಡದೆ ಚಪ್ಪಲಿ ಶೂ ಸಮೇತವೇ ಅಡಿ ಇಟ್ಟೆವು. ಪ್ರಾರಂಭದಲ್ಲಿ ಹತ್ತಿಪ್ಪತ್ತು ಮೆಟ್ಟಲು ಚಪ್ಪಡಿಕಲ್ಲುಗಳಿಂದ ಹೊಸದಾಗಿ ಕಟ್ಟಿದ್ದರು. ಮುಂದೆ ನಿಸರ್ಗನಿರ್ಮಿತ ಕಲ್ಲುಗಳ ಮೆಟ್ಟಲುಗಳು. ಬೆಟ್ಟದ ತುದಿವರೆಗೂ ಹಳೆಮೆಟ್ಟಲುಗಳನ್ನು ತೆಗೆದು ಹೊಸದಾಗಿ ಮೆಟ್ಟಲುಗಳನ್ನು ಕಟ್ಟಿಸುತ್ತಾರಂತೆ. ಅದಕ್ಕಾಗಿ ಭಕ್ತಾದಿಗಳು ತುಂಬ ಮಂದಿ ರೂ. ದಾನ ಮಾಡಿದ್ದರ ಬಗ್ಗೆ ಫಲಕ ಹಾಕಿದ್ದರು. ಬಿಸಿಲು ಜೋರಾಗಿತ್ತು. ಬೆಟ್ಟ ಹತ್ತುತ್ತಿದ್ದಂತೆ ಬೆವರು ಇಳಿಯುತ್ತಿತ್ತು. ನಾವು ಅಲ್ಲಲ್ಲಿ ನಿಲ್ಲುತ್ತ ನಿಧಾನವಾಗಿಯೇ ಮೆಟ್ಟಲು ಹತ್ತಿದೆವು. ಸ್ವಲ್ಪ ದೂರ ಹತ್ತಿದಾಗ ಹದ್ದಿನ ಬಾಯಿ ತೆರೆದಂತೆ ಎರಡು ಬೃಹತ್‌ಬಂಡೆಗಳು ಕಾಣುತ್ತವೆ. ಸುತ್ತಲೂ ಬೃಹದಾಕಾರದ ಬಂಡೆಗಳು ಸಾಕಷ್ಟಿವೆ. ಆ ಬಂಡೆಗಳ ಮೇಲೆಲ್ಲ ಆಂಜನೇಯನ ಚಿತ್ರವನ್ನು ಸೊಗಸಾಗಿ ಬಣ್ಣದಲ್ಲಿ ರಚಿಸಿದ್ದಾರೆ. ಆಕಾಶದಲ್ಲಿ ಏಳೆಂಟು ನಿಜ ಹದ್ದುಗಳು ಗಸ್ತು ತಿರುಗುತ್ತಿದ್ದುದು ಕಂಡುಬಂತು. 

    ಹದ್ದಿನಕಲ್ಲು ಬೆಟ್ಟದಲ್ಲಿ ಗಿಡಮರಗಳು ಕಡಿಮೆ. ಇದ್ದದ್ದೂ ಬಿಸಿಲಿಗೆ ಒಣಗಿದ್ದುವು. ನೆರಳಿಗಾಗಿ ಒಂದೂ ಮರ ಇರಲಿಲ್ಲ. ಕೋತಿಗಳು ಸುಮಾರಿದ್ದುವು. ಕೆಲವು ಕೋತಿಗಳು ಬಡವಾಗಿ ಮೂಳೆಚಕ್ಕಳ ಎದ್ದು ಕಾಣುತ್ತಿತ್ತು. ಬಸ್ಸಲ್ಲಿ ನಮಗೆ ಎರಡು ಸೌತೆಕಾಯಿ, ಎರಡು ಕಿತ್ತಳೆ, ಕೋಡುಬಳೆ ಒಬ್ಬಟ್ಟು ಇದ್ದ ಚೀಲ ಕೊಟ್ಟಿದ್ದರು. ರಾಜೇಂದ್ರ ಹಾಗೂ ರಶೀದ್ ಅವರಿಗೆ ಕೋತಿಗಳ ಆ ಸ್ಥಿತಿ ಕಂಡು ಕನಿಕರ ಉಕ್ಕಿ ಸೌತೆಕಾಯಿಗಳನ್ನು ಅವುಗಳಿಗೆ ಹಂಚಿದರು.  ಮುಕ್ಕಾಲುಭಾಗ ಹತ್ತಿಯಾಗುವಾಗ ಸಣ್ಣ ಕೊಳ ಸಿಗುತ್ತದೆ. ಅದರ ನೀರು ಪಾಚಿಕಟ್ಟಿ ಹಸಿರಾಗಿತ್ತು. ಮತ್ತು ಅದರಲ್ಲಿ ಪ್ಲಾಸ್ಟಿಕ್ ಕಸ ಧಾರಾಳವಾಗಿತ್ತು. ಭಕ್ತಾದಿಗಳ ಕೆಟ್ಟ ಚಾಳಿ ಕೆರೆಯಲ್ಲಿ ಕಾಣುತ್ತಿತ್ತು. ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಚಪ್ಪಲಿ ಹಾಕಿ ಹತ್ತಬಾರದು ಎಂದು ಹೇಳುವ ಬದಲು ಕಸ, ಪ್ಲಾಸ್ಟಿಕ್ ಹಾಕಬಾರದು ಎಂದು ಕಟ್ಟುನಿಟ್ಟಾಗಿ ಹೇಳಿ ಅದರ ಆಚರಣೆಗೆ ಮನಸ್ಸು ಮಾಡಲಿ ಎಂದು ನಮ್ಮ ತಂಡದವರೊಬ್ಬರು ಹೇಳಿಕೊಂಡರು.

 ಕೆಲವೆಡೆ ಮರಗಳ, ಗಿಡಪೊದೆಗಳಮೇಲೆಲ್ಲ ಹಳೆಬಟ್ಟೆ ನೇಲುತ್ತಿದ್ದುದು ಕಂಡಿತು. ಇದೇನು ಹರಕೆಗಳು ಇರಬಹುದು? ಎಂದು ಮನದಲ್ಲಿ ಪ್ರಶ್ನೆ ಎದ್ದಿತು. ಹೊಸಬರಿಗೆ ಹುರಿದುಂಬಿಸುತ್ತ ಮೆಟ್ಟಲು ಹತ್ತಿ ಬೆಟ್ಟದ ತುದಿ ತಲಪಿದಾಗ ಗಂಟೆ ೧೦.೪೫. 


  ಅಲ್ಲಿ ಆಂಜನೇಯನ ಪುಟ್ಟ ದೇವಾಲಯವಿದೆ. ನಿಜವಾದ ಹನುಮರು (ಕೋತಿಗಳು) ಸಾಕಷ್ಟಿದ್ದರು. ಈ ಹನುಮಂತ ದೇವಾಲಯ ೧೨ನೇ ಶತಮಾನದಲ್ಲಿ ಸ್ಥಾಪನೆಯಾದದ್ದಂತೆ. ಚೋಳರ ಕಾಲದಲ್ಲಿ ದೊಡ್ಡ ಕಲ್ಲುಕಂಬದಲ್ಲಿರುವ ಹನುಮನನ್ನು ಬೇಲೂರಿನಿಂದ ತಂದು ಸ್ಥಾಪನೆ ಮಾಡಿದ್ದಂತೆ. ಭಾರವಾದ ಈ ಕಂಬವನ್ನು ಹೇಗೆ ಬೆಟ್ಟದ ಮೇಲಕ್ಕೆ ಒಯ್ಯುವುದು ಎಂದು ಜನರೆಲ್ಲ ಚಿಂತಿತರಾಗಿದ್ದಾಗ ಕಲ್ಲುಕಂಬ ಬಹಳ ಹಗುರವಾಗಿತ್ತಂತೆ. ಏನೊಂದೂ ಕಷ್ಟವಿಲ್ಲದೆ ಹೂ ಎತ್ತಿದಂತೆ ಕಲ್ಲುಕಂಬವನ್ನು ಬೆಟ್ಟದಮೇಲಕ್ಕೆ ಸಾಗಿಸಿದರಂತೆ. ಮೊದಲಿಗೆ ಆಲಯವಿಲ್ಲದೆ ಬಯಲಲ್ಲೇ ಕಲ್ಲುಕಂಬವಿದ್ದದ್ದಂತೆ. ಇತ್ತೀಚೆಗೆ ಮೇಲಕ್ಕೆ ಶೀಟ್ ಹಾಕಿ ಸುತ್ತಲೂ ಕಬ್ಬಿಣದ ಜಾಲರಿ ಹಾಕಿ ಕೋತಿಗಳು ಒಳಗೆ ಬರದಂತೆ ಬಂದೋಬಸ್ತ್ ಮಾಡಿದ್ದಾರೆ. ಕಲ್ಲುಕಂಬದಲ್ಲಿ ಒಂದೆಡೆ ಹನುಮ, ಹನುಮನ ಕಾಲ ಕೆಳಗೆ ಇಂದ್ರಜಿತ್, ಇನ್ನೊಂದು ಪಾರ್ಶ್ವದಲ್ಲಿ ನರಸಿಂಹ, ಮತ್ತೊಂದು ಭಾಗದಲ್ಲಿ ಗಣಪತಿ ಕಾಣಬಹುದು. ಬೆಟ್ಟದಮೇಲೆ ಮೊದಲು ಪ್ರಾಣಿ ಬಲಿ ಕೊಡುವುದು ಇತ್ತಂತೆ. ಈಗ ಅದು ಬೆಟ್ಟದಕೆಳಗೆ ನಡೆಯುತ್ತದಂತೆ. ಅಲ್ಲಿ ಇಂದ್ರಜಿತ್ ಮೂರ್ತಿ ಇರುವ ಸ್ಥಳದಲ್ಲಿ ಪ್ರಾಣಿಬಲಿ ಕೊಡುತ್ತಾರಂತೆ. ಇಲ್ಲಿಯ ಹನುಮಂತನ ವೈಶಿಷ್ಟ್ಯವೆಂದರೆ ಗಾಳಿ ಬಿಡಿಸುವುದಂತೆ. ಗಾಳಿ ಬಿಡಿಸುವುದು ಎಂದರೆ ಏನು? ಎಂದು ಯಾರೊ ಒಬ್ಬರು ಕೇಳಿದರು. ಅಂದರೆ ಭೂತ, ಪಿಶಾಚಿ ಮೈಮೇಲೆ ಬರುವುದು ಎಂದು ಅರ್ಚಕರಾದ ಕೃಷ್ಣಮೂರ್ತಿ ಹೇಳಿದರು. ನೀವು ವಿದ್ಯಾವಂತರು ಇದನ್ನು ನಂಬಲಿಕ್ಕಿಲ್ಲ, ಆದರೆ ನಾನು ಕಣ್ಣಾರೆ ನೋಡಿದ್ದೇನೆ. ಭೂತ ಪಿಶಾಚಿ ಮೈಮೇಲೆ ಬಂದವರು ಇಲ್ಲಿ ಬಂದು ಹನುಮನಲ್ಲಿ ಕೇಳಿಕೊಂಡರೆ ಅವರು ಈ ಕಾಯಿಲೆಯಿಂದ ಮುಕ್ತರಾಗಿ ವಾಪಾಸಾಗುತ್ತಾರೆ. ಇಷ್ಟೇ ದುಡ್ಡು ಕೊಡಿ ಎಂದು ಕೇಳುವುದಿಲ್ಲ. ತಮ್ಮ ಇಚ್ಛೆಗೆ ಅನುಸಾರ ಎಷ್ಟಾದರೂ ಕಾಣಿಕೆ ಹಾಕಬಹುದು. ಹನುಮನಿಗೆ ಒಂದು ಹೂ ಹಾಕಿ ಪ್ರಾರ್ಥನೆ ಮಾಡಿಕೊಳ್ಳಬಹುದು ಎಂದು ಅರ್ಚಕರು ಹೇಳಿದರು. ಅವರವರ ನಂಬಿಕೆ ಅವರವರಿಗೆ.  
 ಭೂತ ಹಿಡಿದವರು ದೇವಾಲಯಕ್ಕೆ ಬಂದು ಪೂಜೆ ಮಾಡಿಸಿ ಹೋಗುವಾಗ ತೊಟ್ಟುಕೊಂಡು ಬಂದಿದ್ದ ಬಟ್ಟೆಯನ್ನು ಅಲ್ಲಿ ಹಾಕಿ ಹೋಗುವುದಂತೆ. ಬಟ್ಟೆ ಬೀಸಾಕದೆ ಕೊಂಡೋಗಿ. ಬಟ್ಟೆಯಿಂದ ಏನೂ ತೊಂದರೆ ಇಲ್ಲ ಎಂದು ಎಷ್ಟು ಹೇಳಿದರೂ ಕೇಳದೆ ಬಟ್ಟೆ ಬೀಸಾಕಿಯೇ ಹೋಗುತ್ತಾರೆಂದು ಅರ್ಚಕರು ಹೇಳಿದರು.  ಮನಸ್ಸಿಗೆ ಹೊಕ್ಕಿದ ಮೌಡ್ಯನಂಬಿಕೆಯನ್ನು ಹೋಗಲಾಡಿಸುವುದು ಬಹಳ ಕಷ್ಟ. ನನ್ನ ಮನದಲ್ಲೆದ್ದ ಪ್ರಶ್ನೆಗೆ ಉತ್ತರ ಸಿಕ್ಕಿತು! 

ತಾತ ಮುತ್ತಾತನ ಕಾಲದಿಂದಲೂ ಅರ್ಚಕರ ಕುಟುಂಬದವರೇ ಇಲ್ಲಿ ಪೂಜೆ ಸಲ್ಲಿಸುತ್ತ ಬರುತ್ತಿದ್ದಾರಂತೆ.  
ನಾವು ಅಲ್ಲಿ ಒಂದು ಗಂಟೆ ವಿರಮಿಸಿದೆವು. ತಂಪಾದ ಗಾಳಿ ಬೀಸುತ್ತಿತ್ತು. ವೈದ್ಯನಾಥನ್, ಅಹಲ್ಯಾ ಭಕ್ತಿಗೀತೆಗಳನ್ನು ಹಾಡಿದರು. ಅರ್ಚಕರು ಮಂಗಳಾರತಿ ಮಾಡಿ ತೀರ್ಥ ಕೊಟ್ಟರು.  ತಂಡದ ಛಾಯಾಚಿತ್ರ ಕ್ಲಿಕ್ಕಿಸಿಕೊಂಡು ಅಲ್ಲಿಂದ ನಾವು ೧೧.೪೫ಕ್ಕೆ ಬೆಟ್ಟ ಇಳಿಯಲು ತೊಡಗಿದೆವು. 

 ಸ್ವಲ್ಪ ಕೆಳಗೆ ಬರುತ್ತಿರಬೇಕಾದರೆ ಮಗುವನ್ನೆತ್ತಿಕೊಂಡಿದ್ದ ದಂಪತಿಗಳು ಮೆಟ್ಟಲಲ್ಲಿ ಬಸವಳಿದು ಕೂತಿದ್ದರು. ಅವರನ್ನು ಮಾತಾಡಿಸಿದಾಗ, ಅವರು ತಂದ ನೀರು ಖಾಲಿಯಾಗಿ, ಮೇಲೆ ದೇವಾಲಯಕ್ಕೆ ಬರಲೆ ಇಲ್ಲವಂತೆ. ಬೆಟ್ಟದಮೇಲೆ ಕುಡಿಯಲು ನೀರು ಸಿಗುವುದಿಲ್ಲ ಎಂದು ಯಾರೋ ಹೇಳಿದರಂತೆ. ಈಗಲೆ ಬಾಯಾರಿಕೆಯಾಗಿದೆ. ಇನ್ನೂ ಮೇಲೆ ಹತ್ತಿಹೋದರೆ ಕಷ್ಟ ಎಂದು ಇಳಿಯಲು ತೊಡಗಿದ್ದರು. ಇನ್ನು ಐದು ನಿಮಿಷ ಹತ್ತಿದ್ದರೆ ದೇವಾಲಯ ಕಾಣುತ್ತದೆ ಹೋಗಬಹುದಿತ್ತು ಎಂದೆ. ನೀರಿಲ್ಲದೆ ಹೋಗಲು ಅವರಿಗೆ ಧೈರ್ಯವಾಗದೆ ಹಿಂತಿರುಗಿದರಂತೆ. ಅವರು ಬರಿಕಾಲಲ್ಲಿ ಬಂದಿದ್ದರು. ಮೆಟ್ಟಲಿನ ಕಲ್ಲು ಕಾದು ಕಾಲಿಗೆ ಸರಿಯಾಗಿ ಶಾಖ ಕೊಡುತ್ತಿತ್ತು. ಕಾಲಿಡಲೇ ಕಷ್ಟ ಪಡುತ್ತಿದ್ದರು. ಭಕ್ತಿ ಇರಬೇಕು ನಿಜ. ಆದರೆ ಅತೀ ಭಕ್ತಿಯಾದರೆ ಈ ಕಷ್ಟ ಎಂದೆನಿಸಿತು. ಅವರ ಕಷ್ಟ ನೋಡಲಾರದೆ ನಾನು ಹಾಕಿಕೊಂಡಿದ್ದ ಕಾಲುಚೀಲ (ಸಾಕ್ಸ್) ಬಿಚ್ಚಿ ಆ ಹೆಂಗಸಿಗೆ ಕೊಟ್ಟೆ. ಅವಳು ಖುಷಿಯಿಂದ ಪಡೆದು ಹಾಕಿಕೊಂಡು ಮೆಟ್ಟಲಿಳಿದಳು. ಅವರ ಮಗುವಿಗೆ ಟೊಪ್ಪಿ ಕೊಟ್ಟರು ಸುಬ್ಬಲಕ್ಷ್ಮೀ. ಕೆಳಗೆ ೧೨.೩೦ಗೆ ಇಳಿದು ಕಬ್ಬಿನ ಹಾಲು ಕುಡಿದೆವು. ರಾಜೇಂದ್ರ ಅವರು ಎಲ್ಲರಿಗೂ ಅವರ ವತಿಯಿಂದ ಕಬ್ಬಿನ ಹಾಲು ಕೊಡಿಸಿದರು.
ಆಂಜನೇಯ ದೇವಾಲಯ
 ಅಲ್ಲಿಂದ ಬಸ್ ಹತ್ತಿ ಭೈರಸಂದ್ರದ ಆಂಜನೇಯ ದೇವಾಲಯಕ್ಕೆ ಬಂದೆವು. ಈ ದೇವಾಲಯ ಇತ್ತೀಚೆಗೆ ನಿರ್ಮಾಣಗೊಂಡಿರುವುದು. ಬೃಹತ್ ಆಂಜನೇಯ ವಿಗ್ರಹ ಸೊಗಸಾಗಿದೆ. ಏಳು ವರ್ಷದ ಮೊದಲು ಪುಟ್ಟದಾಗಿರುವ ಗುಡಿ ಇತ್ತಂತೆ. 

ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯ  ನಾಗಮಂಗಲ

ನಾವು ಅಲ್ಲಿಂದ ನಾಗಮಂಗಲದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯಕ್ಕೆ ಹೋದೆವು. ಸರಿಯಾಗಿ ಮಹಾಮಂಗಳಾರತಿಯ ಸಮಯವಾಗಿತ್ತು. ದೇವಾಲಯದೊಳಗೆ ಸುಮಾರು ಹಣತೆಗಳನ್ನು ಹಚ್ಚಿಟ್ಟಿದ್ದರು. ಅದು ಬಹಳ ಸೊಗಸಾಗಿ ಕಾಣುತ್ತಿತ್ತು. ಭಕ್ತಾದಿಗಳು ಸಾಕಷ್ಟಿದ್ದರು.
 ಕ್ರಿಶ. ೧೨ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಬಹಳ ವಿಶಾಲವಾದ ದೇವಾಲಯವಿದು. ಏಳು ಅಂತಸ್ತಿನ ದ್ರಾವಿಡ ಶೈಲಿಯ ರಾಯಗೋಪುರವು ವಿಜಯನಗರ ವಾಸ್ತಿಶಿಲ್ಪದ ಶೈಲಿಯಲ್ಲಿದೆ. ಇದು ತ್ರಿಕೂಟಾಚಲ ದೇವಾಲಯವಾಗಿದ್ದು, ವಿಶಾಲ ತಳಹದಿಯಮೇಲೆ ನಿರ್ಮಾಣವಾಗಿದೆ. ನಾಲ್ಕು ಅಡಿ ಎತ್ತರದ ನಕ್ಷತ್ರಾಕಾರದ ಕೋನದಿಂದ ಕೂಡಿದ ವಿಶಾಲವಾದ ಐದು ಅಂತಸ್ತುಗಳ ಜಗತಿ ಇದೆ. ಮೂರು ಗರ್ಭಗೃಹಗಳಿದ್ದು, ಪೂರ್ವಕ್ಕೆ ಮುಖ್ಯಗುಡಿಯಲ್ಲಿ ಏಳು‌ಅಡಿ ಎತ್ತರದ ಸುಂದರವಾದ ಸೌಮ್ಯಕೇಶವ ವಿಗ್ರಹವಿದೆ. ನಾಲ್ಕು ಕೈಗಳಿದ್ದು, ಮೇಲಿನ ಬಲ ಹಾಗೂ ಎಡ ಕೈಗಳಲ್ಲಿ ಶಂಖ ಚಕ್ರಗಳಿದ್ದು, ಕೆಳಗಿನ ಬಲ ಹಾಗೂ ಎಡಗೈಗಳಲ್ಲಿ ಪದ್ಮ ಹಾಗೂ ಗದೆಗಳಿವೆ. ಉತ್ತರದ ಗರ್ಭಗೃಹದಲ್ಲಿ ಹೊಯ್ಸಳಕಾಲದ ಲಕ್ಷ್ಮೀನಾರಸಿಂಹ, ದಕ್ಷಿಣಭಾಗದ ಗರ್ಭಗೃಹದಲ್ಲಿ ವೇಣುಗೋಪಾಲ, ರುಕ್ಮಿಣಿ ಮತ್ತು ಸತ್ಯಭಾಮೆಯರ ಸುಂದರ ವಿಗ್ರಹಗಳಿವೆ. 
ಈ ದೇವಾಲಯದ ಮುಂಭಾಗ ಐದು ಅಡಿ ಪೀಠದ ಮೇಲೆ ಸುಮಾರು ೪೭ ಅಡಿ ಎತ್ತರದ ಏಕಶಿಲಾ ದೀಪಸ್ತಂಭವಿದ್ದು, ಸರಪಳಿ ಮೂಲಕ ಕಂಬದ ಮೇಲೆ ದೀಪ ಹೊತ್ತಿಸುವ ಯಾಂತ್ರಿಕ ವ್ಯವಸ್ಥೆ ಇಂದಿಗೂ ಕೂಡ ಸುಸ್ಥಿತಿಯಲ್ಲಿದೆ. ಈ ದೇವಾಲಯ ವಿಶಾಲವಾಗಿ ಬಹಳ ಸುಂದರವಾಗಿದೆ.  

ನಾವು ದೇವಾಲಯ ನೋಡಿಯಾದಮೆಲೆ ೧.೩೦ಗೆ ಊಟಕ್ಕೆ ಅಣಿಯಾದೆವು. ದೇವಾಲಯದ ಹೊರಭಾಗದ ಪಾರ್ಶ್ವದಲ್ಲಿರುವ ಕಟ್ಟಡದಲ್ಲಿ ಪ್ರತೀ ಶನಿವಾರ ಭಾನುವಾರಗಳಂದು ಪ್ರಸಾದ ಭೋಜನವನ್ನು ಸತತ ಎರಡು ವರ್ಷಗಳಿಂದ ದೇವಾಲಯದ ವತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ನೆಲದಲ್ಲಿ ಕುಳಿತು ಬಾಳೆಲೆಯಲ್ಲಿ ಊಟ. ಅನ್ನ, ಪಲ್ಯ, ಸಾಂಬಾರು, ಚಿತ್ರಾನ್ನ, ಪಾಯಸ, ಮಜ್ಜಿಗೆ ಇವಿಷ್ಟಿದ್ದ ಪುಷ್ಕಳ ಊಟ ಮಾಡಿದೆವು. ದೇವಾಲಯಗಳಲ್ಲಿ ಊಟ ಮಾಡುವುದೆಂದರೆ ನನಗೆ ಬಹಳ ಇಷ್ಟ ಮತ್ತು ಅಷ್ಟೇ ರುಚಿಯೂ ಆಗುತ್ತದೆ. ಭೋಜನಕ್ಕೆ ಕೈಲಾದ ದೇಣಿಗೆ ಕೊಡಬಹುದು. ನಮ್ಮ ತಂಡದ ವತಿಯಿಂದ ದೇಣಿಗೆ ನೀಡಿ ನಿರ್ಗಮಿಸಿದೆವು. 
 ಮೇಲುಕೋಟೆಯ ಧನುಷ್ಕೋಟಿಗೆ ಪಯಣ
 ನಾವು ಊಟವಾಗಿ ೨ ಗಂಟೆಗೆ ಹೊರಟು ೨೫ಕಿಮೀ ದೂರದಲ್ಲಿರುವ ಮೇಲುಕೋಟೆಗೆ ಹೋದೆವು. ಧನುಷ್ಕೋಟಿ ನೋಡಲೇಬೇಕು ಎಂದು ಸರ್ವಾನುಮತದಿಂದ ತೀರ್ಮಾನವಾಗಿ ಅಲ್ಲಿಗೆ ಹೋದೆವು. ಹತ್ತಿಪ್ಪತ್ತು ಮೆಟ್ಟಲು ಹತ್ತಿ ಹೋಗಬೇಕು. ರಾಮ ಲಕ್ಷ್ಮಣ ಸೀತೆ ವನವಾಸದ ಸಂದರ್ಭದಲ್ಲಿ ಮೇಲುಕೋಟೆಗೆ ಹೋಗಿದ್ದಾಗ ಸೀತೆಗೆ ಭಯಂಕರ ಬಾಯಾರಿಕೆಯಾದಾಗ ರಾಮ ಅಲ್ಲಿದ್ದ ಒಂದು ದೊಡ್ಡ ಬಂಡೆಗೆ ಬಾಣಬಿಟ್ಟಾಗ ನೀರು ಒಸರಿತಂತೆ. ಅದೇ ಸ್ಥಳವೀಗ ಧನುಷ್ಕೋಟಿ ಎಂದು ಹೆಸರಾಗಿದೆ. ಅಲ್ಲಿ ರಾಮನ ಪಾದುಕೆ ಹಾಗೂ ರಾಮ ಸೀತೆ ಲಕ್ಷ್ಮಣರ ಪುಟ್ಟ ದೇಗುಲವೂ ಇದೆ. ಬಂಡೆ ಕೆಳಗೆ ನೀರಿನ ಒರತೆ ಇದೆ. ಅಲ್ಲಿ ಒಬ್ಬ ಮೂಗ ಹುಡುಗಿ ಪೂಜೆ ಮಾಡುತ್ತ, ಸೌತೆಕಾಯಿ, ಇತ್ಯಾದಿ ವ್ಯಾಪಾರ ಮಾಡುತ್ತ ಕುಳಿತಿರುವುದು ಕಂಡಿತು. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ ತಂಡದ ಛಾಯಾಚಿತ್ರ ಕ್ಲಿಕ್ಕಿಸಿಕೊಂಡು ಹೊರಟೆವು. 


ಚೆಲುವರಾಯಸ್ವಾಮಿ ದೇವಾಲಯ 
ಅಲ್ಲಿಂದ ಚೆಲುವರಾಯಸ್ವಾಮಿ ದೇವಾಲಯ ನೋಡಿದೆವು. ಜನಸಂದಣಿ ಇರಲಿಲ್ಲ. ಹೊರಗೆ ರಸ್ತೆಯಲ್ಲಿ ಉದ್ದಕ್ಕೂ ಪುಳಿಯೋಗರೆ ಪುಡಿ, ಗೊಜ್ಜು, ಮತ್ತು ಪುಳಿಯೋಗರೆ, ಸಕ್ಕರೆ ಪೊಂಗಲ್ ಮಾರಾಟ ಜೋರಾಗಿತ್ತು. ಅವರ ಗಾಡಿಗಳಲ್ಲಿ ಆಕರ್ಷಕ ಫಲಕ ಹಾಕಿದ್ದು ಗಮನಸೆಳೆಯಿತು. ‘ಎಲ್ಲಾ ನೀನೇ ಎಲ್ಲಾ ನಿಂದೇ ಪ್ರಾಡೆಕ್ಟ್’  ‘ರ್ರೀ, ಸ್ವಾಮಿ, ಒಂದ್ಸಲ ರುಚಿ ನೋಡ್ರಿ ಇದು ಸ್ವರ್ಗಲೋಕದ ಮೃಷ್ಟಾನ್ನ ಕಣ್ರಿ’ 

ಯೋಗಾನರಸಿಂಹ ದೇವಾಲಯ
ಯೋಗಾನರಸಿಂಹನನ್ನು ನೋಡಬೇಕಾದರೆ ಸುಮಾರು ೩೬೦ ಮೆಟ್ಟಲು ಹತ್ತಬೇಕು. ವಾನರರು ನಮಗೆ ಸ್ವಾಗತಕೋರಲು ಸಜ್ಜಾಗಿ ನಿಂತಿರುವುದು ಕಾಣುತ್ತದೆ. ದೇವರಪೂಜೆಗೆಂದು ಕೈಯಲ್ಲಿ ಹಣ್ಣು ತೆಂಗಿನಕಾಯಿ ಹಿಡಿದಿರೋ ನಿಮಗೇಕೆ ಒಯ್ಯುವ ಕಷ್ಟವೆಂದು ಅವು ನಿಮ್ಮ ಕೈಯಿಂದ ಕ್ಷಣಮಾತ್ರದಲ್ಲಿ ಅವನ್ನು ಪಡೆಯುತ್ತ ಸ್ವಾಹಾ ಮಾಡುತ್ತವೆ. ಅಲ್ಲಿ ನಾಲ್ಕೈದು ಮಂದಿ ಕ್ಯಾಮಾರ ಹಿಡಿದು ಸಜ್ಜಾಗಿ ನಿಂತು ನಮ್ಮ ಪಟ ತೆಗೆದು ಅಲ್ಲೇ ಪ್ರಿಂಟ್ ಹಾಕಿ ಕೊಡುತ್ತಾರೆ.  ಅವರು ಹೊಟ್ಟೆಪಾಡಿಗಾಗಿ ಮಾಡುವ ಈ ಕೆಲಸದಿಂದ ಅಲ್ಲಿ ಬರುವ ಭಕ್ತಾದಿಗಳು ನೆನಪಿಗೋಸ್ಕರ ತಮ್ಮ ಪಟ ತೆಗೆಸಿಕೊಳ್ಳುತ್ತ ನೆನಪನ್ನು ಶಾಶ್ವತವಾಗಿ ಕಾಪಾಡಿಕೊಳ್ಳುತ್ತಿರುತ್ತಾರೆ. ಒಂದು ಪ್ರತಿಗೆ ರೂ. ೫೦ ಪಡೆಯುತ್ತಾರೆ. ವಯರಿನಿಂದ ಹೂಬುಟ್ಟಿ ಹೆಣೆದು ಮಾರುವ ಮಹಿಳೆಯರು, ಮಜ್ಜಿಗೆ ಮಾರುವ ಮಕ್ಕಳು ಕಾಣುತ್ತಾರೆ. ಭವ್ಯ ಚೆಲುವನಾರಾಯಣನನ್ನು ನೋಡಿ ನಾವು ಕೆಳಗೆ ಇಳಿದು ಪುಷ್ಕರಣಿ ಬಳಿ ಸ್ವಲ್ಪ ಹೊತ್ತು ಕುಳಿತಿದ್ದು ಬಸ್ ಏರಿದಾಗ ಗಂಟೆ ಸಂಜೆ ಆರು ದಾಟಿತ್ತು.  ಮರಳಿ ಮೈಸೂರು
ನಾಗಮಂಗಲದಲ್ಲಿ ಚಹಾ-ಕಾಫಿ ಸೇವನೆಯಾಯಿತು. ಬಸ್ಸಲ್ಲಿ ಅಂತ್ಯಾಕ್ಷರಿ ಬಹಳ ಸೊಗಸಾಗಿ ನಡೆಯಿತು. ರವಿಬಾಹುಸಾರ್ ಇದ್ದಲ್ಲಿ ನಗುವಿಗೆ ಬರವಿಲ್ಲ. ರವಿ, ಸುಜಾತ, ನಾಗೇಂದ್ರಪ್ರಸಾದ್, ವೈದ್ಯನಾಥನ್, ಉಮಾಶಂಕರ್, ಇತ್ಯಾದಿ ಮಂದಿ ಬಲು ಹುರುಪಿನಿಂದ ಪುಂಖಾನುಪುಂಖವಾಗಿ ಹಾಡಿದರು. ಹಾಡದೆ ಇದ್ದವರು ಹಾಡು ಕೇಳುತ್ತ ಅವರ ಈ ಸಂತೋಷದಲ್ಲಿ ಭಾಗಿಯಾಗಿ ಖುಷಿ ಅನುಭವಿಸಿದೆವು. ಇಷ್ಟು ಬೇಗ ಮೈಸೂರು ತಲಪಿತೆ ಎಂದು ಅಂತ್ಯಾಕ್ಷರೀ ಹಾಡಿನಲ್ಲಿ ಭಾಗಿಯಾದವರಿಗೆ ಅನಿಸಿತು. ನಾವು ಮೈಸೂರು ತಲಪಿದಾಗ ರಾತ್ರಿ ೮.೧೫.
  ಈ ಚಾರಣವನ್ನು ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದ ನಾಗೇಂದ್ರಪ್ರಸಾದ್, ವೈದ್ಯನಾಥನ್ ಜೋಡಿ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಅವರಿಗೆ ನಮ್ಮೆಲ್ಲರ ಧನ್ಯವಾದ.