ಶನಿವಾರ, ಜೂನ್ 3, 2017

ಕೊಡಗಿನ ಬೆಡಗಿನ ಕೋಟೆಬೆಟ್ಟ ಹತ್ತೋಣ ಬನ್ನಿರೋ


ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ  ಮೇ ತಿಂಗಳ ೨೧ ಮೇ ೨೦೧೭ರಂದು ಕೋಟೆಬೆಟ್ಟಕ್ಕೆ ಚಾರಣ ಎಂದು ನನಗೆ ತಿಳಿಯುವಷ್ಟರಲ್ಲಿ ಅದಾಗಲೆ ಸೀಟು ಭರ್ತಿಯಾಗಿತ್ತು. ಛೆ! ಕೋಟೆಬೆಟ್ಟ ನೋಡುವ ಭಾಗ್ಯ ಸಿಗುವುದಿಲ್ಲ ಎಂದು ಬೇಸರವಾಗಿತ್ತು. ಎರಡು ದಿನದ ಮೊದಲು ಒಂದು ಸೀಟು ಇದೆ ಬರ್ತೀರ ಎಂದು ಯೋಗೇಂದ್ರ ಕೇಳಿದಾಗ ಎರಡನೇ ಮಾತಿಲ್ಲದೆ ಬರುವೆನೆಂದು ಹೇಳಿದೆ. ಏಕೆಂದರೆ ಕೋಟೆಬೆಟ್ಟ ನೋಡಲೇಬೇಕೆಂದು ಎಷ್ಟೋ ಸಮಯದಿಂದ ಕಾಯುತ್ತಲಿದ್ದೆ. 
    ಮೈಸೂರು- ಮಡಿಕೇರಿ ದಾರಿಯಲ್ಲಿ ಸಾಗಿ ಮಡಿಕೇರಿ ಪೇಟೆಗೂ ಮೊದಲೇ ಬಲಕ್ಕೆ (ಮಡಿಕೇರಿಯಿಂದ ಸುಮಾರು ೨೨ಕಿಮೀ.) ಸೋಮವಾರಪೇಟೆ ರಸ್ತೆಯಲ್ಲಿ ತಿರುಗಿ ಮುಂದೆ ಹೋದಾಗ ಹಟ್ಟಿಹೊಳೆ ಎಂಬ ಫಲಕ ಕಾಣುವಲ್ಲಿ ಎಡಕ್ಕೆ ಹೊರಳಿ ಸುಮಾರು ೩-೪ಕಿಮೀ ಸಾಗಿದಾಗ ಮುಕ್ಕೋಡ್ಲು ಎಂಬ ಹಳ್ಳಿ ಕಾಣುತ್ತದೆ. ಅಲ್ಲಿ ಬಲಕ್ಕೆ ಕೋಟೆಬೆಟ್ಟಕ್ಕೆ ೭ಕಿಮೀ ಎಂಬ ತುಕ್ಕುಹಿಡಿದು ಮಾಸಲಾಗಿ ಬಿದ್ದ ಫಲಕ ಕಾಣುತ್ತದೆ. ಆ ರಸ್ತೆಯಲ್ಲಿ ಸುಮಾರು ೮-೯ ಕಿಮೀ ಸಾಗಿದರೆ ಕೋಟೆಬೆಟ್ಟ ತಲಪುತ್ತೇವೆ. ಸರಿಸುಮಾರು ೫ಕಿಮೀ ವರೆಗೂ ರಸ್ತೆ ಇದೆ. ಕೊಡಗಿನ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಕೋಟೆಬೆಟ್ಟ ಮೂರನೆಯ ಸ್ಥಾನದಲ್ಲಿದೆ. ಸಮುದ್ರಮಟ್ಟದಿಂದ ೫೨೭೬ಅಡಿ ಎತ್ತರದಲ್ಲಿದೆ. (ಮೊದಲೆರಡು ತಡಿಯಂಡಮೋಳ್, ಬ್ರಹ್ಮಗಿರಿ)

     ಮೈಸೂರಿನಿಂದ ಬೆಳಗ್ಗೆ ೬ ಗಂಟೆಗೆ ನಾವು ೨೩ ಮಂದಿ ಸಣ್ಣ ಬಸ್ಸಿನಲ್ಲಿ ಹೊರಟು ಹಟ್ಟಿಹೊಳೆ ದಂಡೆಯಲ್ಲಿ ಬೆಳಗ್ಗೆ ೯.೩೦ಗೆ ಇಡ್ಲಿ ವಡೆ, ಕೇಸರಿಭಾತ್ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡೆವು. ತಿಂಡಿ ತಿನ್ನುತ್ತಲೇ ಪರಸ್ಪರ ಪರಿಚಯ ಕಾರ್ಯ ಮುಗಿಸಿದೆವು. ಐದಾರು ಮಂದಿ ಯುವಕ ಯುವತಿಯರು ಇದೇ ಮೊದಲಬಾರಿ ಚಾರಣ ಕೈಗೊಂಡವರಿದ್ದರು. ಮುಂದೆ ದಾರಿಯಲ್ಲಿ ಜಿಗಣೆಗಳು ಇರಬಹುದು. ಅವುಗಳಿಗೆ ರಕ್ತದಾನ ಮಾಡುವ ಅವಕಾಶ ಲಭಿಸಬಹುದು ಎಂದು ತಂಡದ ಮುಖ್ಯಸ್ಥರು ಎಚ್ಚರಿಸಿದರು. ಬುತ್ತಿಗೆ ಬಿಸಿಬೇಳೆಭಾತ್, ಮೊಸರನ್ನ ತುಂಬಿಸಿ ಚೀಲಕ್ಕೇರಿಸಿ ಹಟ್ಟಿಹೊಳೆಯಿಂದ ನಮ್ಮ ಸವಾರಿ ೧೦.೧೫ಕ್ಕೆ ಕೋಟೆಬೆಟ್ಟದತ್ತ ಹೊರಟಿತು. ರಸ್ತೆಯ ಇಕ್ಕೆಲಗಳಲ್ಲೂ ಕಾಫಿತೋಟ, ಅಲ್ಲಲ್ಲಿ ಕೆಲವು ಮನೆಗಳು ಕಂಡಿತು. ಇಷ್ಟು ದೂರ ಮನೆಮಾಡಿ ವಾಸಮಾಡುತ್ತಿದ್ದಾರಲ್ಲ ಎಂದು ಪೇಟೆಮಂದಿ ಉದ್ಗಾರ ತೆಗೆದರು. ನಮ್ಮ ನಡಿಗೆ ರಸ್ತೆಯಲ್ಲೆ ಸಾಗಿತು. ಜಿಗಣೆಗಳಿಗೆ ರಕ್ತದಾನ ಮಾಡಲು ಮನಸ್ಸಿಲ್ಲದ ಕೆಲವರು  ಕೈಕಾಲುಗಳಿಗೆ ಡೆಟ್ಟಾಲ್ ಸವರಿಕೊಂಡರು. ಇನ್ನೊಬ್ಬರು ಸ್ಪೆಷಲ್ ಕಾಲುಚೀಲ ಹಾಕಿಕೊಂಡರು.  ಈ ಕಾಲುಚೀಲ ಹಾಕಿಕೊಂಡರೆ ಜಿಗಣೆಗಳು ಕಚ್ಚುವುದಿಲ್ಲ. ಜಿಗಣೆಗಳು ಹೆಚ್ಚು ಇರುವ ಸ್ಥಳಕ್ಕೆ ಚಾರಣ ಹೋಗಿದ್ದಾಗ ಒಂದೂ ಕಚ್ಚಿರಲಿಲ್ಲ ಎಂದರವರು. ನಾಲ್ಕಾರು ಮಳೆ ಬಿದ್ದ ಕಾರಣದಿಂದ ಎಲೆಗಳೆಲ್ಲ ನೆನೆದು ದಾರಿಯಲ್ಲಿ ಅವುಗಳಲ್ಲಿ ಅಲ್ಲಲ್ಲಿ ಜಿಗಣೆಗಳು ಕಾಣಿಸಿದುವು. ಅವನ್ನು ನೋಡಿದಾಗ ಒಂದು ಜಿಗಣೆ ತೆಗೆದು ಆ ಸ್ಪೆಷಲ್ ಕಾಲುಚೀಲಕ್ಕೆ ಹಾಕಿ ಪರೀಕ್ಷಿಸಬೇಕು ಎಂಬ ತುಡಿತ ಜಾಸ್ತಿ ಆದದ್ದನ್ನು ಹೇಗೋ ನಿಗ್ರಹಿಸಿಕೊಂಡೆ!
     ದಾರಿಯಲ್ಲಿ  ಬಸವನಹುಳು, ಕೆಲವು ಚಿಟ್ಟೆಗಳು ನಮ್ಮ ಕಣ್ಣಿಗೆ ಕಾಣಿಸಿಕೊಂಡವು. ಬಿರುಸಾಗಿ ನಡೆದು ಮುಂದೆ ಹೋಗುವವರು ಸ್ವಲ್ಪ ದೂರ ಹೋದರೂ, ಹಿಂದೆ ನಿಧಾನಗತಿಯಲ್ಲಿ ಬರುತ್ತ ಇರುವವರ ತಲೆ ಕಾಣುವಲ್ಲಿವರೆಗೆ ಅಲ್ಲಲ್ಲಿ ನಿಲ್ಲುತ್ತ  ಸಾಗಬೇಕು ಎಂದು ಆಯೋಜಕರು ಮೊದಲೇ ಎಚ್ಚರಿಸಿದ್ದರು. ಹಾಗಾಗಿ ನಾವು ಕೆಲವರು  ಮುಂದೆ ಸಾಗಿದರೂ ಅಲ್ಲಲ್ಲಿ ಕುಳಿತು ವಿಶ್ರಮಿಸುತ್ತ ದಾರಿ ಸವೆಸಿದೆವು. ೫ಕಿಮೀ ರಸ್ತೆ ಇರುವ ದಾರಿಯನ್ನು ಮಧ್ಯಾಹ್ನ ೧೨.೩೦ಕ್ಕೆ ಕ್ರಮಿಸಿದೆವು. ಕೋಟೆಬೆಟ್ಟ ತಲಪಲು ಇನ್ನೂ ೩ಕಿಮೀ ಹೋಗಬೇಕಿತ್ತು. ಅಲ್ಲಿಗೆ ಕೋಟೆಬೆಟ್ಟ ದೂರದಲ್ಲಿ ಕಾಣುತ್ತಿತ್ತು.  ಇಷ್ಟು ನಿಧಾನ ಹೋದರೆ ನಾವು ಅಲ್ಲಿ ತಲಪುವುದು ಯಾವಾಗ? ಎಂಬ ಪ್ರಶ್ನೆ ನಮ್ಮ ಮನದಲ್ಲಿ ಎದ್ದಿತು.
    ಮುಂದೆ ಕಾಡುದಾರಿಯಾಗಿ ಸಾಗಿದೆವು. ಏರುದಾರಿ ಪ್ರಾರಂಭವಾಗಿತ್ತು. ಸುಮಾರು ದೂರದವರೆಗೆ ದಾರಿ ತಪ್ಪಲು ಅವಕಾಶವಿಲ್ಲ. ಒಂದು ಕಡೆ ಮಾತ್ರ ಬಲಭಾಗಕ್ಕೆ ಹೊರಳಿದರೆ ಕೋಟೆಬೆಟ್ಟ ತಲಪುವ ಬದಲು ಮಾದಾಪುರದ ಕಡೆಗೆ ಸಾಗುವ ಅಪಾಯವಿತ್ತು. ಯಾರೂ ಮುಂದೆ ಹೋಗತಕ್ಕದ್ದಲ್ಲ ಎಂದು ಸಂಘಟಕರು ಮೊದಲೇ ಎಚ್ಚರಿಸಿದ್ದರು. ಹಾಗಾಗಿ ನಾವು ಯೋಗೇಂದ್ರ, ಅಮಾನ್ ಅವರ ಕಣ್ಗಾವಲಿನಲ್ಲೇ ಮುಂದುವರಿದೆವು. ಕುರುಚಲು ಸಸ್ಯ ಹಾಗೂ ಕೆಲವು ಮರಗಳಿರುವ ಕಾಡುದಾರಿ. ಕೆಲವು ಪಕ್ಷಿಗಳ ಕಲರವ ಕೇಳುತ್ತಲಿತ್ತು. ಆದರೆ ನಮ್ಮ ಕಣ್ಣಿಗೆ ಗೋಚರಿಸಲಿಲ್ಲ. ಒಂದೆಡೆ ವಿಶ್ರಮಿಸಿದ್ದಾಗ ಸಾವಿರಾರು ಜೇನುನೊಣಗಳ ಹಿಂಡು ನಮ್ಮ ತಲೆಮೇಲಿಂದಲೇ ಸವಾರಿ ಹೊರಟ ಸುಂದರ ದೃಶ್ಯ ನೋಡಿದೆವು. ಮಳೆ, ಬಿಸಿಲೂ ಇಲ್ಲದೆ ಮೋಡಕವಿದ ವಾತಾವರಣವಿದ್ದು ಪ್ರಕೃತಿ ನಮಗೆ ಬಹಳವಾಗಿ ಸಹಕರಿಸಿತ್ತು. ಗಾಳಿ ಬಹಳ ಕಡಿಮೆ ಇತ್ತು. ಒಮ್ಮೊಮ್ಮೆ ಜೋರಾಗಿ ಗಾಳಿಬೀಸಿದಾಗ ಒಂದುಕ್ಷಣ ನಿಂತು ಅದರ ಸುಖವನ್ನು ಅನುಭವಿಸಿ ಮುಂದೆ ಸಾಗುತ್ತಿದ್ದೆವು. ಒಂದು ಜಾತಿಯ ನೊಣ ನಮ್ಮನ್ನು ಮುತ್ತಿಗೆ ಹಾಕಿ ಕಚ್ಚುತ್ತಲಿತ್ತು. ಅದರ ಪೀಡೆಯಿಂದ ತಪ್ಪಿಸಿಕೊಳ್ಳಲು ಎಲೆಗಳಿದ್ದ ಕೊಂಬೆಯಿಂದ ಚಾಮರ ಬೀಸಿಕೊಳ್ಳುತ್ತಲೇ ನಡೆದೆವು. (ಅವು ಕಚ್ಚಿದ ಸ್ಥಳ ಕೆಂಪಾಗಿ ಅಸಾಧ್ಯ ತುರಿಕೆ ಸುರುವಾಗಿತ್ತು. ನನಗೆ ಬೆನ್ನು ಕೈಕಾಲುಗಳಲ್ಲಿ ಅದರ ಕುರುಹು ಕಂಡಿತು. ಸುಮಾರು ನಾಲ್ಕು ದಿನ ತುರಿಕೆ ಇತ್ತು).

ಕಾಡುಸುಮಗಳು ಅಲ್ಲಲ್ಲಿ ಬಿರಿದು ನಮ್ಮ ಮನಸು ಅರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಅದರ ಚಿತ್ರ ಕ್ಲಿಕ್ಕಿಸಿಕೊಂಡು ಮುಂದುವರಿದೆವು. ಮುಂದೆ ಸಾಗಿದಂತೆ ಆನೆಲದ್ದಿ ದರ್ಶನಭಾಗ್ಯವೂ ಲಭಿಸಿತು! ಆನೆಲದ್ದಿ ಲೆಕ್ಕ ಹಾಕಿ ಆನೆಗಣತಿಯನ್ನು ನಾವೂ ಮಾಡಿದೆವು!


  ಅಲ್ಲಲ್ಲಿ ಕುಳಿತು ಕಿತ್ತಳೆ, ಸೌತೆಕಾಯಿ ತಿನ್ನುತ್ತ ಶಕ್ತಿ ಊಡಿಕೊಂಡು,  ಹಿಂದೆ ಬರುವವರ ತಲೆ ಕಾಣುತ್ತಲೇ ನಡೆಮುಂದೆ ನುಗ್ಗಿ ನಡೆಮುಂದೆ ಎಂದು ಬೆಟ್ಟದತ್ತ ದೌಡಾಯಿಸಿದೆವು. ಮಧ್ಯಾಹ್ಯ ೨.೧೫ಕ್ಕೆ ನಾವು ಕೋಟೆಬೆಟ್ಟದಮೇಲೆ ತಲಪಿದೆವು. ಅಲ್ಲಿ ವಿಶಾಲ ಬಯಲು ಪ್ರದೇಶದಲ್ಲಿ ಶಿವನ ಪುಟ್ಟದಾದ ಗುಡಿ ಇದೆ. ಅದರ ಬಾಗಿಲಿಗೆ ಹಾಕಿದ ಬೀಗ ನೋಡಿದರೆ ಶಿವನ ಆಸ್ತಿಪಾಸ್ತಿ ಬಲು ಜೋರಿರಬೇಕು ಅನಿಸಿತು. ಬಾಗಿಲಿಗೆ ಮೂರು ದೊಡ್ಡ ಬೀಗದ ಪಲ್ಲೆಗಳು ಹಾಕಿದ್ದರು. ದೇವಾಲಯದ ಪಕ್ಕದಲ್ಲಿ ಎರಡು ಪುಟ್ಟ ಕೊಳಗಳಿವೆ. ಅದರಲ್ಲಿ ನೀರಿತ್ತು. ಅಲ್ಲಿ ಬರುವ ಪ್ರಾಣಿಗಳ ದಾಹ ನೀಗಿಸಲು ಆ ಕೊಳಗಳು ಸಹಕಾರಿಯಾಗಿವೆ.
  ಬೆಟ್ಟದ ಮೇಲೆ ಹೀಗೊಂದು ವಿಶಾಲ ಬಯಲು ಇದ್ದೀತೆಂಬ ಕಲ್ಪನೆಯೇ ನಮಗೆ ಅದನ್ನು ನೋಡುವ ಮೊದಲು ಬರಲು ಸಾಧ್ಯವಿಲ್ಲ. ಪ್ರಕೃತಿಯ ಈ ವೈವಿಧ್ಯದ ಬಗ್ಗೆ ಬಲು ವಿಸ್ಮಯವೆನಿಸುತ್ತದೆ. ಸುತ್ತಲೂ ಬೆಟ್ಟಗಳು ಮೋಡದಿಂದ ಆವೃತವಾಗಿ ಬಲು ಸುಂದರವಾಗಿ ಕಂಗೊಳಿಸುತ್ತಿದ್ದುವು. ಪ್ರಕೃತಿಯ ಆಟವನ್ನು ನೋಡುತ್ತಲೇ ಕಣ್ಣುತುಂಬಿಸಿಕೊಂಡು ತಂದ ಬುತ್ತಿ ಬಿಚ್ಚಿ ಹೊಟ್ಟೆಯನ್ನೂ ತುಂಬಿಸಿಕೊಂಡೆವು. ಮೋಡಗಳ ಚಿತ್ತಾರ ಎಷ್ಟು ನೋಡಿದರೂ ಸಾಕೆನಿಸದು.   ಮೂರು ಗಂಟೆಗೆ ಅಲ್ಲಿಂದ ಸ್ವಲ್ಪ ದೂರದಲ್ಲಿ ಮುಂದೆ ಕಾಣುವ ಗುಡ್ಡವನ್ನು ನಾವು ಕೆಲವರು ಹತ್ತಿದೆವು. ಏರುದಾರಿಯನ್ನು ಉಬ್ಬಸ ಬಿಡುತ್ತ ಹತ್ತಿದೆವು.  ಅಲ್ಲೂ ಕೂಡ ವಿಶಾಲವಾದ ಬಯಲು ಪ್ರದೇಶ. ಅಲ್ಲಿ ತುಸು ವಿರಮಿಸಿ ಸುತ್ತಲೂ ಪ್ರಕೃತಿಯ ಅಗಾಧ ಹಸುರು ರಾಶಿಯನ್ನು ಕಂಡು ಪುಳಕಗೊಂಡೆವು.  ಹೆಚ್ಚು ಹೊತ್ತು ವಿಳಂಬಮಾಡದೆ ಕೆಳಗೆ ಇಳಿದು ಬಂದೆವು.
  ಮೋಡದ ಚಿನ್ನಾಟವನ್ನು ನೋಡುತ್ತಲೇ ಪರಸ್ಪರ ಹರಟೆ ಹೊಡೆಯುತ್ತ ಸಂಜೆ ನಾಲ್ಕು ಗಂಟೆವರೆಗೆ ಅಲ್ಲಿ ಕಾಲ ಕಳೆದೆವು. ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ಹೊರಡಲು ಯಾರಿಗೂ ಮನವಿಲ್ಲದಿದ್ದರೂ, ಎಲ್ಲರನ್ನೂ ಹೊರಡಿಸುವಲ್ಲಿ ಅಮಾನ್ ಹಾಗೂ ಯೋಗೇಂದ್ರ    ಯಶಸ್ವಿಯಾದರು. ನಾವು ಬೆಟ್ಟ ಇಳಿಯುತ್ತಲಿರುವಾಗ ಕೆಲವು ಯುವಕ ಯುವತಿಯರು ಬೆಟ್ಟ ಹತ್ತುತ್ತಿದ್ದರು. ಅದಾಗಲೇ ಸಂಜೆಯಾಗಿತ್ತು. ಇನ್ನು ಇವರು ಹಿಂದೆ ಬರುವಾಗ ರಾತ್ರಿಯಾಗುತ್ತದೆ. ಕೈಯಲ್ಲಿ ನೀರಿಲ್ಲ, ಟಾರ್ಚ್ ಇಲ್ಲ. ಸಾಲದ್ದದಕ್ಕೆ ಕಾಲಿನಲ್ಲಿ ಹೈಹೀಲ್ಡ್ ಚಪ್ಪಲಿ! ಎಂಥ ಅವಸ್ಥೆ ಅವರದು ಎಂದು ನಮಗನಿಸಿತ್ತು.

  ದಾರಿಯಲ್ಲಿ ಬರುತ್ತಿರಬೇಕಾದರೆ ಸ್ಥಳೀಯರು ನಮ್ಮನ್ನು ನಿಲ್ಲಿಸಿ ‘ನಮ್ಮ ತೋಟದ ಕಬ್ಬು ಕಿತ್ತದ್ದು ಯಾಕೆ? ಎಲ್ಲ ಹಾಳುಮಾಡಿದ್ದೀರಲ್ಲ? ಕೇಳಿದರೆ ನಾವೇ ಕಿತ್ತು ಕೊಡುತ್ತಿದ್ದೆವಲ್ಲ?’  ಎಂದು ತರಾಟೆಗೆ ತೆಗೆದುಕೊಂಡರು. ನಮ್ಮ ತಂಡದ ಯಾರೂ ಅಂಥ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ. ನಾವು ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರು ಎಂದು ಹೆಮ್ಮೆಯಿಂದ ಉತ್ತರಿಸಿದೆ. ‘ಹೌದಾ? ನಾವೂ ಹಿಂದೆ ಮೈಸೂರಿನ ಯೂಥ್ ಹಾಸ್ಟೆಲಿಗೆ  ಹೋಗಿದ್ದೆವು’ ಎಂದರು. ಕಬ್ಬು ಮುರಿದದ್ದು ಯಾರಿರಬಹುದು? ಎಂಬ ಜಿಜ್ಞಾಸೆ ಕಾಡಿತು.
    ಕೆಲವರಿಗೆ ಬೆಟ್ಟ ಹತ್ತುವುದು ಬಲು ಸಲೀಸು. ಆದರೆ ಇಳಿಯಲು ಬಲು ಕಷ್ಟ. ನನಗೋ ಬೆಟ್ಟ ಹತ್ತುವುದು ಕಷ್ಟ, ಇಳಿಯುವುದು ಬಲು ಸುಲಭ. ಒಟ್ಟೊಟ್ಟಿಗೇ ಇಳಿಯಬೇಕು ಯಾರೂ ಮುಂದೆ ಹೋಗತಕ್ಕದ್ದಲ್ಲ ಎಂದು ಆಯೋಜಕರು ಹೇಳಿದ ಕಟ್ಟಪ್ಪಣೆಯನ್ನು ನಾವು ಪಾಲಿಸಿದೆವು. ತಂಡದ ಮುಖ್ಯಸ್ಥರು ಹೇಳಿದ ಕಟ್ಟಪ್ಪಣೆಯನ್ನು ನಾವು ಪಾಲಿಸಿದೆವು. (ಬೇಗನೆ ಇಳಿದರೂ ಅಲ್ಲಲ್ಲಿ ಕೂತು ವಿರಮಿಸಿದೆವು. ಆಗ ಕಂಡಿತು ನನ್ನ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದ ಗುರುತು. ಓಹೋ ನಾನು ಜಿಗಣೆಗೆ ರಕ್ತದಾನ ಮಾಡಿದ್ದೆ ಎಂದು ಖುಷಿಯಾಯಿತು! ಒ ಪಾಸಿಟಿವ್ ಗುಂಪಿನ ರಕ್ತ ಸ್ವೀಕರಿಸಿದ ಆ ಇಂಬಳುವಿನ ಗತಿ ಏನಾಯಿತೋ ತಿಳಿಯದಾಯಿತು! ಅದರ ರಕ್ತದ್ದು ಯಾವ ಗುಂಪೋ? ಬೇರೆ ಯಾರೂ ರಕ್ತದಾನ ಮಾಡಲಿಲ್ಲ.)   ಬೆಟ್ಟ ಇಳಿದು ರಸ್ತೆ ಸಿಗುವಲ್ಲಿವರೆಗೆ ಇಂಥ ಕಟ್ಟುಪಾಡು. ಮುಂದೆ ದಾರಿ ತಪ್ಪುವ ಯಾವ ಭಯವೂ ಇಲ್ಲದ ಕಾರಣ, ಅದಾಗಲೇ ಗಂಟೆ ೫.೩೦ ದಾಟಿರುವುದರಿಂದ ನಾವು ಏಳೆಂಟು ಮಂದಿ ಮುಂದೆ ಎಲ್ಲೂ ನಿಲ್ಲದೆ ನಮ್ಮ ಬಸ್ ನಿಂತಿದ್ದ ಸ್ಥಳದೆಡೆಗೆ ಸಾಗಲು ಗಮನವಿತ್ತೆವು. ೬.೧೫ಕ್ಕೆ ನಾವು ಗುರಿಮುಟ್ಟಿದೆವು. ಎಲ್ಲರೂ ಬಂದು ಸೇರುವಾಗ  ೬.೪೫ .

  ನಾವು ಬಸ್ ಬಳಿ ಬಂದಾಗ ಕೆಲವು ಯುವಕರು ಅಲ್ಲಿದ್ದರು. ಅವರ ತಂಡದವರೇ ಬೆಟ್ಟ ಹತ್ತಲು ಹೋದದ್ದಂತೆ. ಅವರೂ ಸ್ವಲ್ಪ ದೂರ ಹೋಗಿ ಇನ್ನು ಮುಂದೆ ಹೋದರೆ ಬರುವಾಗ ರಾತ್ರಿಯಾದೀತು ಎಂದು ಹೆದರಿ ಹಿಂದೆ ಬಂದರಂತೆ. ಈ ಯುವಕ ಯವತಿಯರು ಬೆಂಗಳೂರಿನಿಂದ ಬಂದದ್ದಂತೆ.  ಈ ಯುವಕರು ಹೋಗುತ್ತ ಅಲ್ಲಿ ತೋಟಕ್ಕೆ ನುಗ್ಗಿ ಕಬ್ಬು ಕಿತ್ತು ತಿಂದದ್ದೆಂದು ನಮಗೆ ಹೇಳಿದರು. ನೀವು ಮಾಡಿದ ತಪ್ಪು ಕೆಲಸದಿಂದ ನಾವು ಬೈಸಿಕೊಳ್ಳಬೇಕಾಯಿತು ಎಂದು ಹೇಳಿದೆ.  ನಾವು ಅಲ್ಲಿ ನಮ್ಮ ತಂಡದವರ ಆಗಮನವನ್ನು ಕಾಯುತ್ತಲಿದ್ದಾಗ ಕಾರಿನಲ್ಲಿ ಒಬ್ಬ ಯುವಕ ಯುವತಿ ಕೋಟೆಬೆಟ್ಟದತ್ತ ತೆರಳಲು ಬಂದರು. ಈಗ ಹೋಗಬೇಡಿ. ೮ಕಿಮೀ ಇದೆ. ರಸ್ತೆ ೫ಕಿಮೀ ಮಾತ್ರ. ಮತ್ತೆ ನಡೆಯಬೇಕು. ರಾತ್ರಿಯಾಗುತ್ತದೆ ಎಂದು ನಾವು ಹೇಳಿದೆವು. ನಮ್ಮ ಮಾತನ್ನು ಕೇಳದೆಯೇ ಅವರು ಹೋದರು. ಕಾಲುಗಂಟೆಯಲ್ಲೆ ವಾಪಾಸಾಗಿ ‘ಮಾದಾಪುರದಿಂದ ಹೋಗಲು ಸಾಧ್ಯವೇ?’ ಎಂದು ಕೇಳಿದರು. ಇಲ್ಲ. ಯಾವ ದಾರಿಯಿಂದಲೂ ಇವತ್ತು ಇನ್ನು ಸಾಧ್ಯವಿಲ್ಲ ಎಂದುತ್ತರಿಸಿದೆವು. 
  ಕೋಟೆಬೆಟ್ಟಕ್ಕೆ ತೆರಳಲು ಒಟ್ಟು ಮೂರು ದಾರಿಗಳಿವೆಯಂತೆ.  ೧) ಮಾದಾಪುರದಿಂದ ೪-೫ಕಿಮೀ. ನಡಿಗೆ ೨) ಹಟ್ಟಿಹೊಳೆಯಿಂದ ೮-೯ಕಿಮೀ. ನಡಿಗೆ ೩) ಕೋಟೆಬೆಟ್ಟದ ಉತ್ತುಂಗದ ನೇರ ಪಾದದಲ್ಲಿರುವ ದೇವಸ್ಥಾನದ ಬಳಿಯಿಂದ ಸಾಗುವ ಹಾದಿ. 
  ಏಳುಗಂಟೆಗೆ ನಾವು ಬಸ್ಸೇರಿ ಮೈಸೂರಿಗೆ ಹೊರಟೆವು. ಹುಣಸೂರಿನಲ್ಲಿ ಊಟವಾಗಿ ಮೈಸೂರು ತಲಪುವಾಗ ರಾತ್ರಿ ೧೧ ಗಂಟೆ. ಅವರವರ ಮನೆ ಬಳಿ ಇಳಿಸಿದರು. ಯೂಥ್ ಹಾಸ್ಟೆಲಿನ ಗಂಗೋತ್ರಿ ಘಟಕದ ವತಿಯಿಂದ ಅಮಾನ್ ಮತ್ತು ಯೋಗೇಂದ್ರ ಈ ಚಾರಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಅವರಿಗೆ ಎಲ್ಲ ಚಾರಣಿಗರ ಪರವಾಗಿ ಧನ್ಯವಾದ.