ಮಂಗಳವಾರ, ಅಕ್ಟೋಬರ್ 24, 2017

ಇಬ್ಬನಿ ತಬ್ಬಿದ ಕೋಪೆಟ್ಟಿಬೆಟ್ಟದ ಸೊಬಗು

ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿಘಟಕದ ವತಿಯಿಂದ ೧೫-೧೦-೧೭ರಂದು ಕೊಡಗಿನಲ್ಲಿರುವ ಕೋಪೆಟ್ಟಿಬೆಟ್ಟಕ್ಕೆ ಚಾರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ನಾವು ೨೩ ಮಂದಿ ಭಾಗವಹಿಸಿದ್ದೆವು. 
ಬೆಳ್ಳಂಬೆಳಗ್ಗೆ ದಾರಿಬಿಡು
ಮೈಸೂರಿನಿಂದ ನಾವು ನಸುಕಿನ ೫.೩೦ ಗಂಟೆಗೆ ಸಂಘಟಕರು ನಿಗದಿಗೊಳಿಸಿದ್ದ ಸಮಯಕ್ಕೆ ಸರಿಯಾಗಿ ಶಿಸ್ತುಬದ್ಧವಾಗಿ ಹೊರಟೆವು. ೭.೩೦ಕ್ಕೆ  ಕುಶಾಲನಗರಕ್ಕೆ ತಲಪಿದೆವು. ಅಲ್ಲಿ ಮೈಲಾರಿ ಹೊಟೇಲಿನಲ್ಲಿ ಇಡ್ಲಿ, ವಡೆ, ಕಾಫಿಯಾಗಿ ನಮ್ಮ ಬುತ್ತಿಗೆ ಪಲಾವ್, ಮೊಸರನ್ನ ಹಾಕಿಸಿಕೊಂಡು ಹೊರಡುವಾಗ ೮.೧೦.
 ಅಲ್ಲಿಂದ ಮಡಿಕೇರಿ- ಭಾಗಮಂಡಲ ರಸ್ತೆಯಲ್ಲಿ ಸಾಗಿ ಚೇರಂಬಾಣೆ ದಾಟಿ ಸುಮಾರು ಮೂರು ಕಿಮೀ ಸಾಗಿದಾಗ ಬಲಭಾಗಕ್ಕೆ ವಿಷ್ಣುಮೂರ್ತಿ ದೇವಾಲಯ ಎಂದು ಬರೆದ ಕಮಾನು ಕಾಣುತ್ತದೆ. ಆ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದಾಗ ಸಮುದಾಯ ಭವನದ ವಿಶಾಲ ಬಯಲು ಎದುರಾಗುತ್ತದೆ. ಅಲ್ಲಿ ಬಸ್ಸಿನಿಂದ ಇಳಿದೆವು. ತಂಡದಲ್ಲಿದ್ದ ನಮ್ಮ ನಮ್ಮ ಪರಿಚಯ ಮಾಡಿಕೊಂಡೆವು. ಸೌತೆಕಾಯಿ ಚೀಲಕ್ಕೆ ಹಾಕಿಕೊಂಡೆವು. 
ನಮ್ಮಯ ಲಕ್ಷ್ಯ ಕೋಪೆಟ್ಟಿಬೆಟ್ಟದತ್ತ 
 ನಾವು ಹತ್ತು ಗಂಟೆ ಹತ್ತು ನಿಮಿಷಕ್ಕೆ ಸರಿಯಾಗಿ ನಡಿಗೆ ಪ್ರಾರಂಭಿಸಿದೆವು. ರಸ್ತೆಯ ಎರಡೂ ಕಡೆ ಕಾಫಿತೋಟಗಳು. ಸ್ವಲ್ಪ ದೂರ ರಸ್ತೆ ಚೆನ್ನಾಗಿತ್ತು. ಮುಂದೆ ಕಲ್ಲುಗಳು ಗುಂಡಿಗಳಿಂದ ಕೂಡಿದ ಹದಗೆಟ್ಟ ರಸ್ತೆ. ಮಳೆಗಾಲದಲ್ಲಿ ಜೀಪು ಕೂಡ ಸಾಗಲು ಸಾಧ್ಯವಿಲ್ಲ. ಹೆಚ್ಚಿನ ಕಡೆಯೂ ಏರು ರಸ್ತೆಯೇ. ಆಹ್ಲಾದಕರ ವಾತಾವರಣದಲ್ಲಿ ನಾವು ಮಾತಾಡುತ್ತ ದಾರಿ ಸವೆಸಿದೆವು. ತಂಪು ಹವೆಯಲ್ಲಿ ನಮಗೆ ನಡೆದದ್ದು ಆಯಾಸವಾಗದಂತೆ ಭಾಸ್ಕರ ಮೋಡದ ಮರೆಯಲ್ಲಿ ಅಡಗಿ ಕುಳಿತು ಸಂಪೂರ್ಣ ಸಹಕಾರ ನೀಡಿದ್ದ. ಅಲ್ಲಲ್ಲಿ ಕೆಲವು ಕಡೆ ದೂರ ದೂರದಲ್ಲಿ ಒಂದೊಂದು ಮನೆಗಳು ಕಾಣಿಸಿದುವು. 


  ಹೀಗೆ ಸಾಗುತ್ತಿರಬೇಕಾದರೆ ಏರು ರಸ್ತೆಯ ಮೇಲ್ತುದಿಯಲ್ಲಿ ವಯಸ್ಸಾದವರಿಬ್ಬರು ಕೆಳಗೆ ಬರುತ್ತಿರುವುದು ಕಾಣಿಸಿತು. ಅವರನ್ನು ಮಾತಾಡಿಸಿದೆವು. ಕೋಪೆಟ್ಟಿಯಲ್ಲಿರುವ ತಮ್ಮನನ್ನು ನೋಡಿ ಈ ಅಣ್ಣ ಅಕ್ಕ ವಾಪಾಸಾಗುತ್ತಿದ್ದರು. ಅವರು ಬಸ್ ಹಿಡಿಯಲು ಸುಮಾರು ಮೂರು ಕಿಮೀ ನಡೆದೇ ಸಾಗಬೇಕಿತ್ತು. ಅವರು ಬೆಂಗಳೂರಿನಲ್ಲಿರುವುದಂತೆ. ಮೂಲಮನೆಯಲ್ಲಿರುವ ಕುಟುಂಬದವರನ್ನು ನೋಡಲು ಈ ಆಧುನಿಕ ಯುಗದಲ್ಲೂ ಯಾವ ವಾಹನ ಸೌಕರ್ಯವೂ ಇಲ್ಲದ ಇಂಥ ದಾರಿಯಲ್ಲಿ ನಡೆದೇ ಸಾಗಬೇಕಾದ ಅನಿವಾರ್ಯತೆಯನ್ನು ನಾವು ಕೆಲವು ಕಡೆ ಈಗಲೂ ಕಾಣಬಹುದು.  


   ಮೂಲಸೌಕರ್ಯಗಳಿಲ್ಲದೆಯೂ ಆನಂದದಿಂದ ಜೀವನ ಸಾಗಿಸುವ ದಂಪತಿಯ ಭೇಟಿ
ಸುಮಾರು ಮೂರುಕಿಮೀ ಸಾಗಿದಾಗ ರಸ್ತೆ ಕೊನೆಗೊಳ್ಳುತ್ತದೆ. ಅಲ್ಲಿ ಒಂದು ಮನೆ ಕಾಣಿಸಿತು. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು. ಆಗ ಮನೆಯೊಡೆಯರಾದ ಬೋಪಯ್ಯ, ಪೂವಮ್ಮ ದಂಪತಿಗಳು ಹೊರಗೆ ಬಂದು ನಮ್ಮನ್ನು ಮಾತಾಡಿಸಿದರು. ನಮಗೆ ದಾರಿಯಲ್ಲಿ ಕಂಡ ಅಣ್ಣನೂ ಅಕ್ಕನೂ ತಮ್ಮನಾದ ಈ ಬೋಪಯ್ಯನವರನ್ನು ನೋಡಲೆಂದೇ ಬಂದು ಹಿಂದಿರುಗಿದ್ದಂತೆ. ಬೋಪಯ್ಯ ದಂಪತಿಗಳಿಗೆ ಒಟ್ಟು ಆರು ಮಕ್ಕಳು. ಅವರಲ್ಲಿ ಇಬ್ಬರು ಈಗಿಲ್ಲ. ನಾಲ್ಕು ಗಂಡು ಮಕ್ಕಳಿಗೂ ಮದುವೆಯಾಗಿ ಇಲ್ಲೇ ಸುತ್ತಮುತ್ತ ಬೇರೆ ಬೇರೆ ಮನೆ ಮಾಡಿ ವಾಸವಾಗಿದ್ದಾರೆ. ಸ್ವತಂತ್ರವಾಗಿ  ಬೇರೆ ಮನೆ ಮಾಡಿ ಇರಿ ಎಂದು ಹೇಳಿದ್ದೆ. ಹಾಗೆ ಮನೆ ಮಾಡಿ ಚೆನ್ನಾಗಿದ್ದಾರೆ. ಮೊಮ್ಮಕ್ಕಳು ಇದ್ದಾರೆ ಎಂದರು. ಒಟ್ಟು ೫ ಎಕರೆ ಕಾಫಿ ತೋಟವಿದೆಯಂತೆ ಅವರಿಗೆ. ಅವರ ಮಕ್ಕಳು ತೋಟ ನೋಡಿಕೊಳ್ಳುತ್ತಾರಂತೆ. ಅವರು ಕಾಫಿ ಗಿಡದ ನರ್ಸರಿ ಮಾಡುತ್ತಾರಂತೆ. ಈಗಿನ ಮೂಲಭೂತ ಸೌಕರ್ಯಗಳಾದ ಅಡುಗೆ ಅನಿಲ, ವಿದ್ಯುತ್ ಇಲ್ಲದೆ, ಸೀಮೆ ಎಣ್ಣೆ ಒಲೆ ಹಾಗೂ ದೀಪಗಳ ನೆರವಿನಿಂದಲೇ ನಿತ್ಯಜೀವನವನ್ನು ಖುಷಿಯಿಂದಲೆ ಸಾಗಿಸುತ್ತಿದ್ದಾರೆ ಬೋಪಯ್ಯ ದಂಪತಿಗಳು. ಆ ಮನೆಯಲ್ಲಿ ಅವರಿಬ್ಬರೇ ಇರುವುದು. ವಿದ್ಯುತ್, ಗ್ಯಾಸ್ ಇನ್ನೂ ಇಲ್ಲಿಗೆ  ಬರಲಿಲ್ಲವೆ? ಎಂದು ಕೇಳಿದೆ.  ಅರ್ಜಿ ಹಾಕಿದ್ದೇವೆ. ಬರುವ ತಿಂಗಳು ಬರುತ್ತದೆ ಮಾವ ಎಂದು ನಮ್ಮ ಸೊಸೆ (ಪಂಚಾಯತಿ ಸದಸ್ಯೆ ಅವಳು) ಹೇಳಿದ್ದಾಳೆ. ಕಾಯುತ್ತ ಇದ್ದೇವೆ. ಬಂದಾಗ ಬರುತ್ತದೆ ಎಂದರು. ಅವರನ್ನು ಬೀಳ್ಕೊಳ್ಳುವಾಗ ‘ಮಳೆಗಾಲ ಮುಗಿದಮೇಲೆ ಇನ್ನೊಮ್ಮೆ ಬನ್ನಿ. ಆಗ ಜಿಗಣೆಗಳ ಕಾಟ ಇರುವುದಿಲ್ಲ’ ಎಂದು ಪ್ರೀತಿಯ ಆಹ್ವಾನವನ್ನಿತ್ತರು. 


  ಜಿಗಣೆಯೊಂದಿಗೆ ಪ್ರೇಮಸಲ್ಲಾಪ
ಬೋಪಯ್ಯರ ಮನೆಯಿಂದ ಹೊರಡುವ ಮೊದಲು ಜಿಗಣೆಯಿಂದ ಪಾರಾಗಲು ನಿಂಬೆಹಣ್ಣು ಎರಡು ಭಾಗ ಮಾಡಿ ಅದಕ್ಕೆ ಉಪ್ಪು ಸವರಿ ಇಟ್ಟುಕೊಂಡೆವು. ಅಲ್ಲಿಂದ ಕಾಡಿನೊಳಗೆ ಸುಮಾರು ಎರಡು ಕಿಮೀ ನಡೆಯಬೇಕು. ಎಲ್ಲೂ ನಿಲ್ಲುವ ಹಾಗಿಲ್ಲ. ನಿಂತರೆ ಜಿಗಣೆಗಳು ಮುತ್ತುತ್ತವೆ ಎಂದು ಸಂಘಟಕರು ಎಚ್ಚರಿಸಿದ್ದರು. ಸ್ವಲ್ಪ ಮುಂದೆ ಸಾಗಿದಾಗ ದಾರಿ ತಪ್ಪಿದ್ದೇವೆ ಎಂಬ ಅರಿವು ರಾಮಪ್ರಸಾದರಿಗಾಯಿತು. ಅವರು ಈ ಮೊದಲು ಪೈಲೆಟ್ ಟ್ರೆಕ್ ಮಾಡಿದ್ದರು. ಈ ದಾರಿಯಲ್ಲಿ ಬಂದ ಹಾಗಿರಲಿಲ್ಲ. ನೀರು ಹರಿಯುವ ದಾರಿ ದಾಟಿ ಹೋಗಬೇಕು ಎಂದರು. ಸರಿದಾರಿಯಲ್ಲಿ ನಡೆಯಲು ಹಿಂದಿದ್ದವರು ಮುಂದಾದರು. ಮುಂದಿದ್ದವರು ಹಿಂದುಳಿದರು. ಇಂಥ ದಾರಿಯಲ್ಲಿ ಸಾಗುವಾಗ ಸ್ಥಳೀಯ ಮಾರ್ಗದರ್ಶಕರನ್ನು ತಪ್ಪದೆ ಕರೆದೊಯ್ಯುವುದು ಯಾವತ್ತೂ ಕ್ಷೇಮಕರ ಎಂದು ನಾವು ಕೆಲವರು ಮಾತಾಡಿಕೊಂಡೆವು.  ದಾರಿ ತಪ್ಪಿದ್ದರಿಂದ ಜಾಸ್ತಿ ಕಾಡು ನೋಡಿದ್ದು, ಜಿಗಣೆಗಳ ಸಹವಾಸ ಸ್ವಲ್ಪ ಹೆಚ್ಚು ಆದದ್ದು ಲಾಭವೆನಿಸಿತು! 

 ಕಾಡಿನೊಳಗೆ ಸಾಗುತ್ತಿರುವಾಗ ನಮ್ಮ ಅಕ್ಕಪಕ್ಕ ಯಾವ ಮರಗಳಿವೆ? ಇತ್ಯಾದಿ ಏನೂ ಕಾಣಿಸಲಿಲ್ಲ. ನಮಗಿದ್ದುದೊಂದೇ ಅರ್ಜುನ ಲಕ್ಷ್ಯ. ಹಾದಿಯಲ್ಲಿದ್ದ ಜಿಗಣೆ ಕಾಲಿನ ಶೂಗೆ ಹತ್ತಿದೆಯಾ? ಹತ್ತಿದರೆ ಆ ಕೂಡಲೇ ನಿಂಬೆಹಣ್ಣಿನ ಕಡಿಯಿಂದ ಜಿಗಣೆಯನ್ನು ಕೆಳಗೆ ಬೀಳಿಸುವುದರೆಡೆಗೇ ನಮ್ಮ ಗಮನ! ಒಂದಿಬ್ಬರಂತೂ ಜಿಗಣೆ ಹತ್ತಿದ್ದು ಕಂಡಕೂಡಲೇ ಬೊಬ್ಬೆ ಹೊಡೆಯುತ್ತಿದ್ದರು. ಆಗ ಮುಂದೆ, ಹಿಂದಿದ್ದವರು ಉಪ್ಪಿನ ಚೀಲದಿಂದ ಅದನ್ನು ಕೆಳಗೆ ಬೀಳಿಸಿ ಅವರ ಭಯವನ್ನು ಶಮನಗೊಳಿಸುವ ಕೆಲಸ ಮಾಡುತ್ತಿದ್ದರು. ಜಿಗಣೆಯೊಡನೆ ಸಲ್ಲಾಪ ನಡೆಸಿಕೊಳ್ಳುತ್ತ, ಅವನ್ನು ಉದುರಿಸುತ್ತ ಮುಂದೆ ಸಾಗಿದೆವು. 
   ‘ಈ ಜಿಗಣೆಗಳಿಗೆ ಏಕೆ ಹೆದರುತ್ತೀರಿ? ಅವು ರಕ್ತ ಕುಡಿದರೆ ಒಳ್ಳೆಯದು. ನಿಮಗೆ ಹೃದಯಾಘಾತ ಆಗುವ ಸಾಧ್ಯತೆಗಳಿರುವುದಿಲ್ಲ. ಒಂದೆರಡು ಕಚ್ಚಲಿ ಬಿಡಿ’ ಎಂದು ಜಿಗಣೆಗಳಿಗೆ ಹೆದರುವವರಿಗೆ ಜಾನ್ ಅವರು ಹೇಳುತ್ತಲೆ ಇದ್ದರು. ಕೆಲವರಿಗಂತೂ  ಕಾಲೊಳಗೆ ಏನೋ ಹರಿದಂತೆ, ತುರಿಕೆಯಾದಂತೆ ಜಿಗಣೆ ಸೇರಿದೆ ಎಂದೇ ಭ್ರಮೆ ಆಗಲು ತೊಡಗಿತು. ಕೆಲವರು ಡೆಟ್ಟಾಲ್, ಉಪ್ಪು ಶೂ ಮೇಲೆ, ಒಳಗೆ ಸುರಿದಿದ್ದರು. ಒಂದಿಬ್ಬರು ಸ್ಪೆಷಲ್ ಕಾಲುಚೀಲ ಧರಿಸಿ ಜಿಗಣೆಗಳಿಗೆ ಕಾಲು ಕಾಣದಂತೆ ಬಂದೋಬಸ್ತ್ ಮಾಡಿ ಬಂದಿದ್ದರು. ತಮಾಶೆ ಅಂದರೆ ಅಂಥ ಕಾಲುಚೀಲ ಹಾಕಿದವರ ಶೂ ಒಳಗೆಯೇ ಜಿಗಣೆಗಳು ಜಾಸ್ತಿ ಇದ್ದುದು! ಮಂಡ್ಯದ ಉಮಾಶಂಕರ್ ಜಿಗಣೆಗಳಿಗೆ ಏನೇನೂ ಹೆದರಲಿಲ್ಲ. ಹಾಗಾಗಿ ಅವರ ಶೂ ಒಳಗೆ  ೧೦-೧೨ ಜಿಗಣೆಗಳು ಸೇರಿಕೊಂಡು ಚೆನ್ನಾಗಿ ರಕ್ತಹೀರಿ ಪ್ರೇಮಚುಂಬನ ನಡೆಸಿದ್ದುವು. ಇಚ್ಛೆಯಷ್ಟು ರಕ್ತ ಹೀರಲಿ ಎಂದು ಉಮಾಶಂಕರ್ ಅವುಗಳಿಗೆ ಸದರ ಕೊಟ್ಟಿದ್ದರು! ನನ್ನ ಬೂಟಿಗೂ ಜಿಗಣೆಗಳು ಸಾಕಷ್ಟು ಹತ್ತಿದ್ದುವು. ಅಲ್ಲಲ್ಲೇ ನಿಂಬೆಹಣ್ಣಿನ ಕಡಿಯಿಂದ ಅವುಗಳನ್ನು ಕೆಳಗೆ ಉದುರಿಸಿದ್ದೆ. ಹಾಗಾಗಿ ರಕ್ತ ಹೀರಲು ಅವಕಾಶವಾಗಿರಲಿಲ್ಲ. ಏ ನಿಮ್ಮ ಶೂಮೇಲೆ ಜಿಗಣೆ ಎಂದು ಒಬ್ಬರಿಗೊಬ್ಬರು ಹೇಳುತ್ತ ಅವುಗಳನ್ನು ಉದುರಿಸುತ್ತಲೇ ನಾವು ಜಾಸ್ತಿ ಜಿಗಣೆಗಳಿದ್ದ ಕಾಡನ್ನು ದಾಟಿ ಮುಂದೆ ಒಂದೊಂದು ಜಿಗಣೆಗಳಿದ್ದ ಶೋಲಾ ಕಾಡಿಗೆ ಪ್ರವೇಶಿಸಿದ್ದೆವು.

    ಕೊಡಗಿಗೂ ಮಂಜಿಗೂ ಅವಿನಾಭಾವ ಸಂಬಂಧ 
   ಆಗ ಮುಂದೆ ಹಿಂದೆ ಮಂಜಿನ ಪರದೆ ತೆರೆದುಕೊಂಡಿತು. ಮಂಜಿನ ಹನಿ ನಮ್ಮ ಮೇಲೆ ಬಿದ್ದು ವಾತಾವರಣ ತಂಪೆನಿಸಿತು. ಆ ತಂಪಿನಲ್ಲೇ ನೆನೆಯುತ್ತಲೇ ನಾವು ಖುಷಿಯಾಗಿ ಬೆಟ್ಟ ಏರಲು ಪ್ರಾರಂಭಿಸಿದೆವು. ಸಪೂರಕ್ಕೆ ಮಧ್ಯೆ ನಡೆಯುವ ಕಾಲು ದಾರಿ ಮಾತ್ರವಿದ್ದು ಸುತ್ತಮುತ್ತ ಎಲ್ಲ ಹುಲ್ಲುಮಯ ಅದು ನೋಡಲು ಸೊಬಗು. ಮಂಜಿನಲ್ಲಿ ನಡೆಯುವುದೇ ಸೊಗಸು. ಸುತ್ತ ನೋಡುತ್ತ ತಂಪು ಗಾಳಿಯ ಸುಖವನ್ನು ಅನುಭವಿಸುತ್ತ ಅಲ್ಲಲ್ಲಿ ನಿಂತು ಸಾಗಿದೆವು. ಹೋದಷ್ಟೂ ದಾರಿ ಮುಗಿಯದು. ಮುಂದೆ ಇನ್ನೂ ಮೇಲಕ್ಕೇರಿ ಬನ್ನಿ ಎಂದು ಬೆಟ್ಟ ಗೋಚರ. ಮಂಜಿನಲ್ಲೇ ಸಾಗಿ ನಾವು ೧೨.೪೫ಕ್ಕೆ ಕೋಪೆಟ್ಟಿ ಬೆಟ್ಟ ಏರಿ ನಿಂತೆವು. ಅಲ್ಲಿ ಮಂಜಿನ ಹನಿ ಇನ್ನೂ ಜೋರಾಯಿತು.  ಮಳೆ ಅಂಗಿ ಧರಿಸಿದೆವು. ಗಾಳಿ ಜೋರಾಗಿ ಬೀಸುತ್ತಿತ್ತು. ಕೆಲವರಿಗೆ ಚಳಿಯಿಂದ ಕೈ ಮರಗಟ್ಟಲು ಸುರುವಾಯಿತು. ಕಿವಿಗೆ ಹತ್ತಿ ಹಾಕಿಕೊಂಡಾಗ ಸರಿ ಆಯಿತು. 


   ಸುತ್ತಲೂ ಮಂಜು ಮಂಜು ಮಂಜು ಅಷ್ಟೇ. ಬೇರೇನೂ ಕಾಣುತ್ತಿರಲಿಲ್ಲ. ಬೆಟ್ಟ ಹತ್ತಿ ಬಂದಿದ್ದೀರಲ್ಲ. ನಿಮಗೇಕೆ ನಿರಾಶೆ ಎಂದೋ ಏನೋ ಒಂದು ಕ್ಷಣ ಮಂಜು ಮಾಯವಾಗಿ ಸುತ್ತಲೂ ಹಸುರಿನ ಉಡುಗೆ ತೊಟ್ಟ ಬೆಟ್ಟಗಳು ಗೋಚರ. ಆಹಾ ಪ್ರಕೃತಿಯ ಈ ಸೌಂದರ್ಯದ ಖನಿಯನ್ನು ವಿವರಿಸಲು ಸಾಧ್ಯವಿಲ್ಲ. ಆ ಸುಖವನ್ನು ನೋಡಿಯೇ ಅನುಭವಿಸಬೇಕು. ಮಂಜು ಆವರಿಸಿದ್ದರಿಂದ ಕ್ಯಾಮರಾಕ್ಕೆ ಹೆಚ್ಚು ಕೆಲಸವಿರಲಿಲ್ಲ. ಕಣ್ಣಿನ ಕ್ಯಾಮರದಲ್ಲೆ ಪ್ರಕೃತಿಯ ಈ ವಿಸ್ಮಯವನ್ನು ತುಂಬಿಕೊಂಡು ಆತ್ಮಾನುಭೂತಿ ಪಡೆದೆವು. ಓಹ್! ಮಂಜಿನ ಪರದೆ ಸರಿದು ಸುತ್ತ ಹಸುರನ್ನು ನೋಡುತ್ತ ಕಣ್ತುಂಬಿಕೊಳ್ಳುತ್ತಿರುವಂತೆಯೇ ಪುನಃ ಮಂಜು ಆವರಿಸಿ ಏನೂ ಕಾಣದು. ಮೋಡದ ಮಂಜಿನ ಈ ಚಿನ್ನಾಟವನ್ನು ಒಂದು ಗಂಟೆಗಳ ಕಾಲ ನೋಡುತ್ತ ನಿಂತು ತಣಿದೆವು. ನಮ್ಮ ಗುಂಪಿನ ಚಿತ್ರವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದೆವು. ಗಾಳಿ ಮಂಜಿನಿಂದಾಗಿ ಬೆಟ್ಟದಲ್ಲಿ ಹೆಚ್ಚು ಹೊತ್ತು ಕಳೆಯಲು ಸಾಧ್ಯವಾಗಲಿಲ್ಲ. ಅಲ್ಲಿ ಊಟಮಾಡುವ ಆಸೆಯೂ ಈಡೇರಲಿಲ್ಲ. ಇಲ್ಲಿ ಹೆಚ್ಚು ಹೊತ್ತು ಕಳೆಯುವುದು ಅಪಾಯ. ಬೋಳು ಬೆಟ್ಟದಲ್ಲಿ ಸಿಡಿಲು ಬಡಿದರೆ ಕಷ್ಟ ಎಂದು ಕೆಲವರು ಹೇಳಿದರು. ೧.೪೫ಕ್ಕೆ ನಾವು ಬೆಟ್ಟದಿಂದ ಇಳಿಯಲು ತೊಡಗಿದೆವು.





   ಮರಳಿ ಮಣ್ಣಿಗೆ
 ಎಚ್ಚರದಿಂದ ಬೆಟ್ಟ ಇಳಿಯಬೇಕಿತ್ತು. ಸ್ವಲ್ಪ ಕೆಳಗೆ ಇಳಿದ ಕೂಡಲೇ ಮಂಜು ಗಾಳಿ ಮಾಯವಾಯಿತು. ಅಯ್ಯೋ! ಈಗ ನಾವು ಬೆಟ್ಟದ ಮೇಲಿರಬೇಕಿತ್ತು. ಎಷ್ಟು ಚೆನ್ನಾಗಿರುತ್ತಿತ್ತು. ಎಂದು ಕೆಲವರು ಉದ್ಗಾರ ತೆಗೆದರು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬುದು ನೆನಪಾಯಿತು! ಪ್ರಕೃತಿಯ ಈ ಎಲ್ಲ ಚಮತ್ಕಾರಗಳನ್ನೂ ನೋಡುವುದೇ ಸೊಬಗು. ಮಳೆಗಾಲದಲ್ಲಿ ಜಿಗಣೆಗಳ ಮಧ್ಯೆ ಬೆಟ್ಟ ಹತ್ತುವ ಅನುಭವವೂ ಸೊಗಸು!
  ವಾಪಾಸು ಹೋಗುವಾಗಲೂ ಇದೇ ದಾರಿಯಾ? ಎಂದು ಕೆಲವರು ಕೇಳಿದ್ದರು. ಜಿಗಣೆಗಳಿಲ್ಲದ ದಾರಿ ಇದ್ದರೆ ಎಷ್ಟು ಒಳ್ಳೆಯದಿತ್ತು ಎಂಬುದು ಅವರ ಆಲೋಚನೆ! ಶೋಲಾ ಕಾಡು ದಾಟಿ ನಾವು ಜಿಗಣೆಗಳ ಆವಾಸಸ್ಥಾನವಾದ ದಟ್ಟಕಾಡು  ಪ್ರವೇಶಿಸಿದೆವು. ಜಿಗಣೆಗಳೂ ಮಿಕಕ್ಕಾಗಿ ಎದುರು ನೋಡುತ್ತಿದ್ದುವು. ಕಾಲಿಟ್ಟೊಡನೆಯೇ ಪ್ರೀತಿಯಿಂದ ಶೂ ಏರಲು ಪ್ರಯತ್ನ ನಡೆಸಿದುವು. ನಾವೂ ಅಷ್ಟೇ ಒಲವಿನಿಂದಲೇ ಅವನ್ನು ಕೆಳಗೆ ಬೀಳಿಸುತ್ತ ನಡೆದು ಬೋಪಯ್ಯನವರ ಮನೆ ತಲಪಿದೆವು. ಅಲ್ಲಿ ಊಟ ಮಾಡಲು ಸಾಧ್ಯವೆ? ಎಂದು ನೋಡಿದಾಗ ಅಲ್ಲಿ ಅವರ ಅಂಗಳದಲ್ಲೂ ಜಿಗಣೆಗಳಿರುವುದು ಕಂಡು ಅಲ್ಲಿಂದ ನಿರ್ಗಮಿಸಿದೆವು. 
   ಸುಮಾರು  ೨೦ ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತಗೊಂಡ ತರುಣರೊಬ್ಬರು ನಮ್ಮೊಡನೆ ಬಂದಿದ್ದರು. ಅವರಿಗಂತೂ ಈ ಚಾರಣ ತುಂಬ ಖುಷಿ ಕೊಟ್ಟಿತು. ‘ಇದು ನನಗೆ ಹೊಸ ಅನುಭವ’ ಎಂದರು. ಅವರು ಪ್ರಧಾನಿ ಮೋದಿಯವರ ಗುಣಗಾನ ಮಾಡಿದರು. ಮುಂದೆಯೂ ೫ ವರ್ಷ ಅವರೆ ಪ್ರಧಾನಿಯಾಗಬೇಕು. ಆಗ ನಮ್ಮ ದೇಶ ಇನ್ನೂ ಪ್ರಗತಿ ಕಾಣುವುದರಲ್ಲಿ ಸಂಶಯವಿಲ್ಲ ಎಂದದ್ದು ಕೇಳಿ ತುಂಬ ಖುಷಿ ಆಯಿತು.  
ಊಟದ ವಿರಾಮ
   ರಸ್ತೆಯಲ್ಲೇ ಸಾಗಿ ಸುಮಾರು ೨ಕಿಮೀ ಬಂದಾಗ ಒಳ್ಳೆಯ ಸ್ಥಳವೊಂದು ಕಂಡಿತು. ಜಿಗಣೆಗಳಿಲ್ಲವೆಂದು ಖಾತ್ರಿ ಮಾಡಿಕೊಂಡು ಅಲ್ಲಿ ಕುಳಿತು ಬುತ್ತಿ ಬಿಚ್ಚಿದೆವು. ಈಗ ತಾನೆ ತಂಗಳು ಪೆಟ್ಟಿಗೆಯಿಂದ ಹೊರತೆಗೆದಂತೆ ಪಲಾವ್  ತಣ್ಣಗೆ ಇತ್ತು. ಪಲಾವ್ ಹದಾ ಖಾರವಾಗಿ ಚೆನ್ನಾಗಿತ್ತು. ಮೊಸರನ್ನ ತಣ್ಣಗೆ ತುಂಬ ಚೆನ್ನಾಗಿದೆ. ಹುಳಿ ಆಗಲಿಲ್ಲ ಎಂದರು ಮೊಸರನ್ನಪ್ರಿಯರು. ಕೆಲವರು ಪಲಾವ್ ತಿನ್ನದೆ ಚೆಲ್ಲಿದ್ದು ಕಂಡೆ. ನಮಗೆ ಎಷ್ಟು ಬೇಕೋ ಅಷ್ಟೇ ಹಾಕಿಸಿಕೊಳ್ಳಬೇಕು. ಅನ್ನ ಚೆಲ್ಲುವ ಮುನ್ನ ಹಸಿದವರು ಈ ಪ್ರಪಂಚದಲ್ಲಿ ಎಷ್ಟು ಜನ ಇದ್ದಾರೋ? ಅಕ್ಕಿ ಬೆಳೆಯಲು ರೈತ ಅದೆಷ್ಟು ಕಷ್ಟ ಪಟ್ಟಿರುತ್ತಾನೆ. ಈ ಪಲಾವ್ ತಯಾರಿಸಲು ಅಡುಗೆಯವರು ಬೆಳಗ್ಗೆ ಎದ್ದು ತಮ್ಮ ಅಮೂಲ್ಯ ವೇಳೆ ಹಾಗೂ ಶ್ರಮವನ್ನು ಹಾಕಿರುತ್ತಾರೆ ಎಂಬುದನ್ನು ನಾವು ಆಲೋಚಿಸಬೇಕು. ಅಲ್ಲಿ ಅರ್ಧ ಗಂಟೆಗಳ ಕಾಲ ಇದ್ದು ಊಟ ಮುಗಿಸಿ ಹೊರಟೆವು. 

ಬಂದ ದಾರಿಗೆ ಸುಂಕವಿಲ್ಲ!
  ನಾಲ್ಕು ಗಂಟೆಗೆ ನಾವು ಬಸ್ ನಿಲ್ಲಿಸಿದ ಸ್ಥಳ ತಲಪಿದೆವು. ನಮ್ಮ ಶರೀರದಲ್ಲಿ ಜಿಗಣೆಗಳೆಲ್ಲ ಎಲ್ಲೆಲ್ಲಿ ಹತ್ತಿ ಮುತ್ತಿಕ್ಕಿವೆ ಎಂದು ಪರೀಕ್ಷಿಸಿಕೊಂಡೆವು. ಕೆಲವರು ಬಟ್ಟೆಯನ್ನೆ ಬದಲಾಯಿಸಿ ತೃಪ್ತಿ ಪಟ್ಟರು. ಸುಮಾರು ಹನ್ನೆರಡು ಕಿಮೀ ಚಾರಣ ಮಾಡಿದ ನೆಮ್ಮದಿಯೊಂದಿಗೆ ಬಸ್ ಹತ್ತಿ ಕೋಪೆಟ್ಟಿಗೆ ವಿದಾಯ ಹೇಳಿದೆವು. ಚಾಲಕ ಸುರೇಶ ಜಾಗರೂಕತೆಯಿಂದ ಬಸ್ ಚಾಲಿಸಿದರು. ಕುಶಾಲನಗರದಲ್ಲಿ ಅವರವರ ಕಾಸಿನಿಂದ ಕಾಫಿ ಕುಡಿದು ಮೈಸೂರು ತಲಪಿದಾಗ ರಾತ್ರೆ ೯ ಗಂಟೆ ದಾಟಿತ್ತು. ರಾಮಪ್ರಸಾದ, ಶೈಲಜೇಶ ಈ ಚಾರಣ ಕಾರ್ಯಕ್ರಮವನ್ನು (ರೂ. ೬೫೦) ಯಶಸ್ವಿಯಾಗಿ ಪರಿಪೂರ್ಣಗೊಳಿಸಿದ್ದರು. ಅವರಿಗೆ ಎಲ್ಲ ಚಾರಣಿಗರ ಪರವಾಗಿ ಹಾರ್ದಿಕ ಧನ್ಯವಾದ. 
 ನಮ್ಮ ಸಹ ಚಾರಣಿಗರು ಕ್ಲಿಕ್ಕಿಸಿದ ಕೆಲವು ಛಾಯಾಚಿತ್ರಗಳನ್ನು ಇದರಲ್ಲಿ ಬಳಸಿಕೊಂಡಿರುವೆ. ಅವರಿಗೆಲ್ಲ ‍ಧನ್ಯವಾದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ