ಗುರುವಾರ, ಜನವರಿ 4, 2018

ಲಕ್ಷ್ಮಮ್ಮ ರೈಲು ಹತ್ತಿಹೋಗಿಯೇಬಿಟ್ಟರು

ಅಕ್ಷರ ತೋರಣ
ಲಕ್ಷ್ಮಮ್ಮನ ರೈಲು ಪ್ರಯಾಣ
ಲಕ್ಷ್ಮೀದೇವಿ (೩-೧-೧೯೩೦) ನಮ್ಮ ಅತ್ತೆ ೮೮ ವರ್ಷ ತುಂಬುಜೀವನ ನಡೆಸಿ ೧-೧-೨೦೧೮ರಂದು ಇಹಲೋಕ ತ್ಯಜಿಸಿದರು. ಅವರ ತಂಗಿ ಮೀನಾಕ್ಷೀ ಹಿಂದೊಮ್ಮೆ ದೂರವಾಣಿಯಲ್ಲಿ ಮಾತಾಡುತ್ತ‘ಅಕ್ಕ, ನಮಗೆಲ್ಲ ಟಿಕೆಟ್ ಆಗಿದೆ. ಇನ್ನೂ ಬಂದಿಲ್ಲ ರೈಲು. ರೈಲನ್ನು ಕಾಯುತ್ತ ಇದ್ದೇವೆ.’ ಎಂದಿದ್ದರಂತೆ. ಆ ಮಾತು ಅತ್ತೆಗೆ ಬಲು ಖುಷಿಯಾಗಿತ್ತು. ಮೀನಾಕ್ಷಿ ಹೇಳಿದ್ದಾಳೆ. ಟಿಕೆಟ್ ಆಗಿದೆ ರೈಲು ಬಂದಿಲ್ಲ ಎಂದು ಎಲ್ಲರ ಬಳಿಯೂ ನಗು ನಗುತ್ತ ಹೇಳಿಕೊಳ್ಳುತ್ತಿದ್ದರು. ನಮ್ಮ ಅತ್ತೆ ಟಿಕೆಟ್ ಕಾದಿರಿಸಿದ ಆ ರೈಲು ೧.೧.೨೦೧೮ರಂದು ಬೆಳಗಿನ ಝಾವ ನಾಲ್ಕು ಗಂಟೆಗೆ ಅತ್ರಿ (ಅತ್ರಿ ನಮ್ಮ ಮನೆ ಹೆಸರು) ನಿಲ್ದಾಣಕ್ಕೆ ಬಂದು ನಿಂತಿತು. ಲಕ್ಷ್ಮಮ್ಮ ಯಾರಿಗೂ ಸುಳಿವು ಕೊಡದೆಯೇ ಮೆತ್ತಗೆ ಸಂಭ್ರಮದಿಂದಲೇ ಆ ರೈಲು ಹತ್ತಿ ಹೊರಟೇಬಿಟ್ಟರು. ನಮಗೆ ಗೊತ್ತಾಗುವಾಗ ರೈಲು ನಿಲ್ದಾಣ ಬಿಟ್ಟಾಗಿತ್ತು. ಅವರು ಒಂದೆರಡು ವರ್ಷಗಳಿಂದ ವಾತನೋವಿನಿಂದ ಬಳಲಿದ್ದರು. ಕೊನೆಗಾಲದಲ್ಲಿ ನಾಲ್ಕು ದಿನ ಸುಸ್ತು, ಕೆಮ್ಮು ಇತ್ತು. ಆಸ್ಪತ್ರೆಗೆ ಸೇರಿಸೋಣವೇ? ಎಂದು ಅವರನ್ನು ನೋಡಿಕೊಳ್ಳುವ ವೈದ್ಯ ಶ್ರೀನಿವಾಸ ಕೇಳಿದಾಗ, ‘ಬೇಡ. ನನಗೆ ಇನ್ನು ಬದುಕಿ ಏನೂ ಮಾಡಲೂ ಇಲ್ಲ. ನೀನೂ ಔಷಧಿ ಕೊಡು ಸಾಕು’ ಎಂದಿದ್ದರು. ಅದಾಗಿ ಮರುದಿನ ಬೆಳಗಿನ ಝಾವ ನಿದ್ದೆಯಲ್ಲೇ ಕಾಲನೆಡೆಗೆ ತೆರಳಿದ್ದರು.
ಅವರ ಇಚ್ಛೆಯಂತೆ ದೇಹವನ್ನು ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿಗೆ ದಾನಮಾಡಲಾಗಿದೆ. ===

೩೦ವರ್ಷದ ನಂಟು
 ಇಸವಿ ೧೯೮೭ರಲ್ಲಿ ಮದುವೆಯಾಗಿ ನಾನು ಅತ್ರಿ ಮನೆಗೆ ಕಾಲಿಟ್ಟದ್ದು. ಹಳ್ಳಿಮೂಲೆಯಿಂದ ಪೇಟೆ ಮನೆಗೆ ಬಂದ ನನಗೆ ಪ್ರೀತಿಯಿಂದ ಸಂಸಾರದ ಓನಾಮ ಕಲಿಸಿದವರು ನಮ್ಮತ್ತೆ. ತವರಿನಲ್ಲಿ ಇದ್ದದ್ದಕ್ಕಿಂತ ಹೆಚ್ಚು ವರ್ಷ ನಾನಿಲ್ಲಿರುವೆ.  ಬಂದ ಸುರುವಿನಲ್ಲಿ ಒಂಟಿಕೊಪ್ಪಲು ವೆಂಕಟರಮಣ ದೇವಾಲಯಕ್ಕೆ ಅವರೊಡನೆ ಪ್ರತೀ ಶನಿವಾರ ನಡೆದುಕೊಂಡು ಅಥವಾ ಬಸ್ಸಿನಲ್ಲಿ ಹೋಗುತ್ತಿದ್ದ ನೆನಪು ಹಸಿಯಾಗಿದೆ. ಆ ಕಾಲದಲ್ಲಿ ನಾನು ಚೂಡಿದಾರ ಯಾನೆ ಸೆಲ್ವಾರ್ ಕಮೀಜ್ ಉಡುಪು ಹಾಕುತ್ತಿರಲಿಲ್ಲ. ಸೀರೆಯೇ ಉಡುತ್ತಿದ್ದುದು. ಮೊದಲಿಗೆ ಅತ್ತೆಯೇ ಅಂಗಡಿಯಿಂದ ಕೇಸರಿ, ಬಿಳಿ ಬಣ್ಣದ ಸಿದ್ಧ ಉಡುಪು ಚೂಡಿದಾರವನ್ನು ತಂದು ಕೊಟ್ಟಿದ್ದರು. ಈಗ ಎಲ್ಲರೂ ಇಂಥ ಉಡುಪನ್ನೇ ಹಾಕುವುದು. ನೀನೂ ಹಾಕಿಕೋ ಎಂದಿದ್ದರು. ಅತ್ತೆ ಅಷ್ಟು ಆಧುನಿಕ ಮನೋಭಾವದವರಾಗಿದ್ದರು. ಈಗ ನನ್ನ ಅಚ್ಚುಮೆಚ್ಚಿನ ಉಡುಪು ಚೂಡಿದಾರವೇ ಆಗಿದೆ. ಅತ್ತೆ ಎಲ್ಲಾದರೂ ಪ್ರವಾಸ ಹೋಗಿದ್ದಾಗ ತಪ್ಪದೆ ಚೂಡಿದಾರ ತಂದು ಕೊಡಲು ಮರೆಯುತ್ತಿರಲಿಲ್ಲ. 


(ಈ ಕೆಳಗಿನ ಲೇಖನ ಸುಮಾರು ೨೫ ವರ್ಷದ ಹಿಂದೆ ಮೈಸೂರುಮಿತ್ರ ಪತ್ರಿಕೆಯಲ್ಲಿ ಅಚ್ಚಾಗಿತ್ತು)
ಅತ್ತೆಯೊಬ್ಬಳು ಮನೆಯೊಳಗಿದ್ದರೆ . . . . . .
     (ಈಗಿನ ಆಧುನಿಕ ಮನೋಭಾವದಿಂದಾಗಿ ಕುಟುಂಬ ಬಹಳ ಚಿಕ್ಕದಾಗುತ್ತಿದೆ. ಎಲ್ಲೂ ಒಟ್ಟುಕುಟುಂಬ ಕಂಡುಬರುತ್ತಿಲ್ಲ. ಅಣ್ಣತಮ್ಮ ಬೇರೆಬೇರೆಯೇ ವಾಸಿಸುತ್ತಾರೆ. ಕೆಲವು ಕಡೆಯಂತೂ ತಂದೆತಾಯಿ ಮಾತ್ರ ಬೇರೆಯೇ ವಾಸಿಸುತ್ತಾರೆ. ಮನೆಯಲ್ಲಿ ಗಂಡ ಹೆಂಡತಿ ಮಾತ್ರ ಇರಬೇಕು. ಮದುವೆಯಾಗಿ ಬರುವ ಮನೆಯಲ್ಲಿ ಅತ್ತೆಮಾವ ಇರಬಾರದು ಎಂಬ ಇಚ್ಛೆ ಈಗಿನ ಹೆಚ್ಚಿನ ಹೆಣ್ಣುಮಕ್ಕಳಿಗಿದೆ. ಕೆಲವು ಮಗಂದಿರೂ ಅಷ್ಟೆ. ತಂದೆತಾಯಿ ಬಳಿ ಇರಲು ಇಷ್ಟಪಡುವುದಿಲ್ಲ ಸ್ವತಂತ್ರವಾಗಿರಲು ಅಪೇಕ್ಷಿಸುತ್ತಾರೆ. ಎಲ್ಲ ಸಂಕುಚಿತ ಸ್ವಾರ್ಥ ಮನೋಭಾವ. ಅವರೂ ಕಾಲಕ್ರಮೇಣ ತಂದೆತಾಯಿಗಳಾಗಿ ತಮ್ಮ ಮಕ್ಕಳೂ ತಮ್ಮನ್ನು ತೊರೆದು ಬೇರೆ ವಾಸಿಸುವುದನ್ನು ಕಣ್ಣಾರೆ  ನೋಡಬೇಕಾಗುತ್ತದೆ ಎನ್ನುವುದನ್ನು ಆ ಘಳಿಗೆಯಲ್ಲಿ ಮರೆತಿರುತ್ತಾರೆ.
    ಹಿಂದೆ ಒಟ್ಟು ಕುಟುಂಬ ಇದ್ದು ಒಬ್ಬರಿಗೊಬ್ಬರು ಸಹಾಯಕ್ಕಾಗುತ್ತಿದ್ದರು. ಕೆಲಸ ಹಂಚಿಕೊಂಡು ಮಾಡುತ್ತಿದ್ದುದರಿಂದ ಹೆಚ್ಚಿನ ಹೊರೆ ಬೀಳುತ್ತಿರಲಿಲ್ಲ. ನೆಂಟರಲ್ಲಿಗೆ ಹೋಗಬೇಕಾದರೂ ಮನೆ ಯೋಚನೆಯೇ ಇಲ್ಲದೆ ಹೋಗಬಹುದಿತ್ತು. ಈಗ ಅಣ್ಣತಮ್ಮ ಒಟ್ಟಿಗೇ ವಾಸಿಸುವುದು ಹೋಗಲಿ ಮಕ್ಕಳು ಹೆತ್ತವರೊಂದಿಗೇ ಇರಲು ಇಷ್ಟಪಡದವರೇ ಹೆಚ್ಚು. ಈಗ ಹೆಚ್ಚಿನವರಿಗೂ ಒಂದು ಅಥವಾ ಎರಡು ಮಕ್ಕಳು. ಅವರೂ ವಿದೇಶದಲ್ಲಿ ವಾಸವಾಗಿರುತ್ತಾರೆ. ಭಾರತದಲ್ಲಿ ತಂದೆತಾಯಿ ಆ ಮಕ್ಕಳ ಬಗ್ಗೆಯೇ ಯೋಚಿಸುತ್ತ ಕಾಲಕಳೆಯುತ್ತಾರೆ. 
    ಮನೆಯಲ್ಲಿ ಅತ್ತೆ ಇದ್ದರೆ ಅದು ಸೊಸೆಗೆ ಲಾಭವೇ ಹೊರತು ನಷ್ಟವಲ್ಲ. ಅದನ್ನು ಸೊಸೆ ಅರ್ಥ ಮಾಡಿಕೊಳ್ಳುವುದಿಲ್ಲ. ಮನೆಯಲ್ಲಿ ಎಲ್ಲ ಕೆಲಸವನ್ನೂ ಅತ್ತೆ ಮಾಡಿಯೇ ಮಾಡುತ್ತಾರೆ. ಏಕೆಂದರೆ ಹಳೆಕಾಲದವರು ಅವರಿಗೆ ಸುಮ್ಮನೆ ಕುಳಿತು ಗೊತ್ತಿಲ್ಲ. ಏನಾದರೊಂದು ಕೆಲಸದಲ್ಲಿ ತೊಡಗಿಸಿಕೊಂಡೇ ಇರುತ್ತಾರೆ. (೧೦೦ಕ್ಕೆ ೯೦ ಭಾಗ ಇಂಥವರೇ ಇರಬಹುದು. ಎಲ್ಲೋ ೧೦ ಭಾಗ ಹಿಂಸಿಸುವವರೂ ಏನೂ ಕೆಲಸ ಮಾಡದವರೂ ಇರಬಹುದು. ಅಂಥವರೊಟ್ಟಿಗೆ ಜೀವಿಸುವುದು ಕಷ್ಟವೇ ಸರಿ.) ಸೊಸೆ ಬೆಳಗ್ಗೆ ಬೇಗ ಎದ್ದು ತಿಂಡಿ ಮಾಡಬೇಕಿಲ್ಲ. ಅತ್ತೆ ಬೇಗ ಎದ್ದು ತಿಂಡಿ ತಯಾರಿಯಲ್ಲಿ ತೊಡಗಿರುತ್ತಾರೆ. ಸೊಸೆ ನಿಧಾನದಲ್ಲಿ ಎದ್ದು ಒಂದಷ್ಟು ಅಡುಗೆಗೆ ಕೈ ಆಡಿಸಿದರೆ ಸಾಕು. ಮೊಮ್ಮಕ್ಕಳನ್ನು ಅವರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ತಮ್ಮ ಮಗನ ಕುಡಿ ಎಂದು ಹೆಚ್ಚು ಅಭಿಮಾನದಿಂದ ಮಗುವನ್ನಾಡಿಸುತ್ತಾರೆ. ಆ ಮಗುವಿನ ಯೋಚನೆ ಸೊಸೆ ಮಾಡಬೇಕಿಲ್ಲ. ಇನ್ನು ಗಂಡನ ಬಗ್ಗೆಯೂ ಅಷ್ಟೆ. ಅತ್ತೆ ತಮ್ಮ ಮಗನ ಯೋಗಕ್ಷೇಮ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅತ್ತೆ ಮಗನ ಬಗ್ಗೆ ಹೆಚ್ಚು ಕಾಳಜಿ ತೋರಿಸಿದರೆ ಹೊಟ್ಟೆಕಿಚ್ಚು ಪಡದಿರಿ. ನಿಮಗೆ ಕೆಲಸ ಸುಲಭವಾಯಿತು. ಗಂಡನ ಆರೋಗ್ಯದ ಬಗ್ಗೆ ಏನೂ ಚಿಂತಿಸಬೇಕಾಗಿಲ್ಲ. ಒಂದು ಕಾಲದಲ್ಲಿ ನೀವೂ ಅತ್ತೆಯ ಸ್ಥಾನಕ್ಕೆ ಬರುತ್ತೀರಿ ಎಂಬುದನ್ನು ಮರೆಯದಿರಿ. 
    ಸೊಸೆಗೆ ತವರಿಗೆ ಹೋಗಬೇಕೆನಿಸಿದರೆ ಇಲ್ಲಿ ಮನೆಯ ಬಗ್ಗೆ ಏನೊಂದೂ ಯೋಚನೆ ಇಲ್ಲದೆ ತವರಿನಲ್ಲಿ ಆರಾಮವಾಗಿ ಕಾಲಕಳೆಯಬಹುದು. ಗಂಡನಿಗೆ ಕಷ್ಟವಾಗುತ್ತದೆ ಎಂದು ಚಿಂತಿಸಬೇಕಾಗಿಲ್ಲ. ಅವರಮ್ಮನೇ ಇರುವಾಗ ಚಿಂತೆ ಏಕೆ? ಸೊಸೆ ಕೆಲಸದಲ್ಲಿದ್ದರೆ ಮಕ್ಕಳನ್ನು ಎಲ್ಲಿ ಬಿಡುವುದಪ್ಪ ಎಂದು ವ್ಯಥೆ ಪಡುವ ಅಗತ್ಯ ಇಲ್ಲ. ಅತ್ತೆ ಇರುವಾಗ ನೆಮ್ಮದಿಯಿಂದ ಆ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಬಹುದು. ಅತ್ತೆಯೊಬ್ಬಳಿದ್ದರೆ ಎಷ್ಟೆಲ್ಲ ಸುಖ ಸೌಲಭ್ಯಗಳು. ಇದನ್ನು ಸೊಸೆಯಂದಿರು ಅರ್ಥ ಮಾಡಿಕೊಳ್ಳದೆಯೇ ಅತ್ತೆ ಮಾವನನ್ನು ಬಿಟ್ಟು ಬೇರೆ ಮನೆಮಾಡಲು ತೊಡಗುತ್ತಾರಲ್ಲ ಅವರ ಬುದ್ಧಿಗೇನನ್ನಬೇಕು. ಅತ್ತೆಯೊಬ್ಬಳು ಮನೆಯೊಳಗಿದ್ದರೇ ನನಗದೆ ಕೋಟಿ ರೂಪಾಯಿ ಎಂದು ಹಾಡುವುದು ಬಿಟ್ಟು ಕೋಟಿ ರೂಪಾಯಿಯನ್ನು ಕಾಲಕಸದಂತೆ ನೋಡುತ್ತಾರಲ್ಲ. ಅತ್ತೆ ಸೊಸೆ ಅನ್ಯೋನ್ಯವಾಗಿ ಸೌಹಾರ್ದದಿಂದ ಇದ್ದರೆ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದನ್ನು ಮರೆಯಬಾರದು. ಮಾವ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆಯೇ ಮಾಡಬೇಕಿಲ್ಲ. ಮಾವನನ್ನು ೨ ಒಳ್ಳೆಯ ಮಾತಿನಿಂದ ಹೊಗಳಿದರೆ ಸಾಕು. ‘ಎಷ್ಟು ಚೆನ್ನಾಗಿ ನೀವು ಪಾಠ ಹೇಳಿಕೊಡುತ್ತೀರಿ. ನಿಮ್ಮ ಪ್ರಯತ್ನದಿಂದ ಮಗ ಹಾಗೂ ಮಗಳು ತರಗತಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನಿಮ್ಮಷ್ಟು ಚೆನ್ನಾಗಿ ಪಾಠ ಹೇಳಲು ನನಗೆ ಬರುವುದಿಲ್ಲ’ ಎಂದರೆ ಸಾಕು. ಮಾವ ಮತ್ತೂ ಹೆಚ್ಚಿನ ಕಾಳಜಿಯಿಂದ ಮೊಮ್ಮಕ್ಕಳಿಗೆ ಪಾಠ ಹೇಳಿಕೊಡುವ ಬಗ್ಗೆ ಗಮನವೀಯುತ್ತಾರೆ. ಮಕ್ಕಳು ದೊಡ್ಡವರಾದಾಗ ಅವರನ್ನು ಅತ್ತೆ ಮಾವನ ಜೊತೆಯಲ್ಲಿ ಬಿಟ್ಟು ಎಲ್ಲಾದರೂ ಹೊರಗೆ ಹೋಗಬಹುದು. ಮಕ್ಕಳನ್ನು ಎಲ್ಲಿ ಬಿಡುವುದೆಂದು ಚಿಂತಿಸಬೇಕಾಗಿಲ್ಲ. ಸೊಸೆಯಾದವಳು ಅತ್ತೆ ಮಾವನನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಆಗ ಅವರೂ ನಿಮ್ಮ ಬಗ್ಗೆ ಮಮತೆಯಿಂದಿರುತ್ತಾರೆ ಎಂಬುದನ್ನು ಮರೆಯದಿರಿ. ಪರಸ್ಪರ ಅರಿತು ಬಾಳಿದರೆ ಜೀವನ ಸೊಬಗು.)

ಅಂತಃಕರಣ ತುಂಬಿದ ಹಾಗೂ ಸದಾ ಉತ್ಸಾಹಭರಿತ ಕಾರುಣ್ಯ ಮೂರ್ತಿ
   ನಮ್ಮ ಅತ್ತೆಗೆ ಇತರರ ಬಗೆಗೆ ಅತಿಯಾದ ಕಾಳಜಿ. ಪಕ್ಕದ ಮನೆಯಲ್ಲಿ ಯಾರಾದರೂ ಕೆಮ್ಮಿದ್ದು ಕೇಳಿದರೆ ಕಷಾಯ ಮಾಡಿಕೊಟ್ಟು ಉಪಚರಿಸುವ ಮನೋಭಾವದವರು. ನಮ್ಮ ಮನೆಯಲ್ಲಿ ಯಾರೇ ಕೆಮ್ಮಿದರೂ ಕೆಮ್ಮಬಾರದು ಶಿವೆ ಎಂದು ಹೇಳ್ಳುತ್ತಲೇ, ಡಾಕ್ಟ್ರ ಹತ್ರ ಹೋಗಿ, ಕಷಾಯ ಮಾಡಿ ಕೊಡುವೆ ಕುಡಿಯಿರಿ ಎಂದು ಹೇಳುತ್ತಿದ್ದರು. 
 ಕೆಮ್ಮಲೂ ಸ್ವಾತಂತ್ರ್ಯವಿಲ್ಲೆನಗೆ ಮನೆಯಲ್ಲಿ
“ನೆಮ್ಮದಿಯ ಕೆಡಿಸುವಿರಿ’’ ಅರ್ಧಾಂಗಿ ಆದೇಶ
ಮೊಮ್ಮಗಳೋ? ಬಲು ಚೂಟಿ! “ಮನೆಯಲ್ಲಿ ಇರಬೇಕು
ಸುಮ್ಮಸುಮ್ಮನೆ ಅಲೆದು ತಡವಾಗಿ ಹಿಂತಿರುಗಿ
ನಮ್ಮ ಶಾಂತಿಯ ನೀನು ಕೆಡಿಸುತಿಹೆ!’’ ಎನ್ನುವಳು
ಬೊಮ್ಮ! ನನಗೇತಕೋ ವಿಧಿಸುವೆ ಈ ಶಿಕ್ಷೆ?
‘ಕೆಮ್ಮಲೂ ಸ್ವಾತಂತ್ರ್ಯವಿಲ್ಲ ಮನೆಯೊಳಗೆ’ ಎಂಬ ನನ್ನ ಲಘುಶೈಲಿಯ ಲೇಖನಕ್ಕೆ ಪ್ರತಿಯಾಗಿ ಮಾವ ೨೦೦೦ನೇ ಇಸವಿಯಲ್ಲಿ ಬರೆದದ್ದು ಈ ಮೇಲಿನ ಪದ್ಯವನ್ನು!  
 ಅತ್ತೆ ಪ್ರತೀ ವಾರದಲ್ಲಿ ಒಂದು ದಿನ ತಪ್ಪದೆ ಪಾಯಸ ಮಾಡುತ್ತಿದ್ದರು. ತಪಲೆಗಟ್ಟಲೆ ಪಾಯಸ ಮಾಡಿ, ಮನೆ ಮೇಲಿನ ಎರಡು ಕೋಣೆಗಳಲ್ಲಿ ಓದುವ ಹುಡುಗರಿಗೆ ಹಂಚುತ್ತಿದ್ದರು. ಆ ಹಬ್ಬ ಈ ಹಬ್ಬ ಎಂದು ತಿಂಗಳಿಗೆ ಮೂರು ನಾಲ್ಕು ದಿನವಾದರೂ ಆ ಹುಡುಗರಿಗೆ ಊಟವನ್ನೂ ಹಾಕುತ್ತಿದ್ದುದು ಇತ್ತು. ನಮ್ಮ ಮನೆ ಮಹಡಿಮೇಲಿನ ಕೋಣೆಯನ್ನು ನಾಮಕಾವಸ್ಥೆ ಬಾಡಿಗೆಗೆ ಕಾಲೇಜಿನಲ್ಲಿ ಓದುವ ಹುಡುಗರಿಗೆ ಕೊಡುತ್ತಿದ್ದರು. ಕೆಲವರಿಗೆ ಬಾಡಿಗೆ ತೆಗೆದುಕೊಳ್ಳದೆಯೇ ನಾಲ್ಕು ವರ್ಷ ಕೊಟ್ಟದ್ದೂ ಇತ್ತು. ಅವರೆಲ್ಲರ ಯೋಗಕ್ಷೇಮ ಚೆನ್ನಾಗಿ ನೋಡಿಕೊಂಡಿದ್ದರು. ಆ ಮಕ್ಕಳ ಹೆತ್ತವರಿಗೂ ‘ನಮ್ಮ ಮಕ್ಕಳು ಅಲ್ಲಿದ್ದರೆ ನಮಗಾವ ಚಿಂತೆಯೂ ಇಲ್ಲ’ ಎಂದಾಗಿರಬಹುದು. ಅವರನ್ನೆಲ್ಲ ಅತ್ತೆ ತಮ್ಮವರೆಂದೇ ತಿಳಿದು ಕಕ್ಕುಲತೆಯಿಂದ ನೋಡಿಕೊಂಡಿದ್ದರು. ಬೇರೆಯವರು ಕಷ್ಟದಲ್ಲಿದ್ದರೆ ಸದಾ ಅವರ ಮನ ಚಿಂತಿಸುತ್ತಲೇ ಇರುತ್ತಿತ್ತು. 
 ಈಗ್ಗೆ ನಾಲ್ಕೈದು ದಿನದ ಹಿಂದೆಯೂ ಒಂದು ಗಂಟೆ ರಾತ್ರಿಯಲ್ಲಿ ನನ್ನೊಡನೆ ಮಾತಾಡುತ್ತ, ‘ಪಾಪ ಸಿದ್ದಮ್ಮ, ಎಷ್ಟು ಕಷ್ಟಪಡುತ್ತಾಳೆ. ನಾಲ್ಕು ಮನೆ ಕೆಲಸ ಮಾಡಬೇಕು. ಮಾಡಿದ್ದನ್ನೇ ಮಾಡಬೇಕು. ಶಂಕರಿ ಅಮ್ಮ ಪಾಪ ಒಬ್ಬರೇ ಇದ್ದಾರೆ. ಅವರಿಗೂ ವಯಸ್ಸಾಯಿತು. ಯಾರಿದ್ದಾರೆ? ಮಕ್ಕಳೆಲ್ಲ ಪರದೇಶದಲ್ಲಿ ಹೋಗಿ ಕೂತಿದ್ದಾರೆ. ಕಮಲಾಕ್ಷಿಗೆ ಯಾರಿದ್ದಾರೆ? ನನಗಾದರೆ ನೀವೆಲ್ಲ ಇದ್ದೀರಿ’ ಎಂದು ಅವರ ನೋವಿನಲ್ಲೂ ಮನಸು ಬೇರೆಯವರಿಗಾಗಿ ಸದಾ ತುಡಿಯುತ್ತಲೆ ಇತ್ತು. 
   ಕೈ ಕಾಲು ಗಟ್ಟಿ ಇರುವಾಗ ತಮ್ಮ ಕೆಲಸವನ್ನು ತಾವೇ ಮಾಡಬೇಕೆಂಬುದು ಅವರ ನಿಲುವು.  ತಮ್ಮ ಬಟ್ಟೆಗಳನ್ನು ಅವರೇ ಒಗೆದುಕೊಳ್ಳುತ್ತಿದ್ದುದು. ಈಗ್ಗೆ ಎರಡು ವರ್ಷಗಳಿಂದ ಮಾತ್ರ ಕೈಲಾಗದ ಕಾರಣ ಬಿಟ್ಟಿದ್ದರು. ಆದರೆ ಕೊನೆವರೆಗೂ ತಿಂದು ಕುಡಿದ ತಟ್ಟೆ ಲೋಟಗಳನ್ನು ಅವರೇ ತೊಳೆದುಕೊಳ್ಳುತ್ತಿದ್ದುದು. ಚೆನ್ನಾಗಿದ್ದಾಗ ಗಿಡಕ್ಕೆ ನೀರು ಹಾಕುವುದು, ರಂಗೋಲಿ ಹಾಕುವುದು ಎಲ್ಲ ಮಾಡುತ್ತಿದ್ದರು. ಒಂದು ಕ್ಷಣ ಸುಮ್ಮನೆ ಕೂರುವ ಜೀವಿಯಲ್ಲ. ಸಾಕಷ್ಟು ಪುಸ್ತಕ ಓದುತ್ತಿದ್ದರು. ಅದನ್ನು ಸ್ನೇಹಿತರೊಡನೆ ಚರ್ಚಿಸುತ್ತಿದ್ದರು. ತಂಗಿಯಂದಿರಿಗೆ ದೂರವಾಣಿಸಿ ಈ ಪುಸ್ತಕ ಓದಿ, ಆ ಪುಸ್ತಕ ಓದಿ ಎಂದು ಹೇಳುತ್ತಿದ್ದರು. ಕೆಲವು ದಿನ ಕಳೆದು ಓದಿದಿರಾ? ಹೇಗಿತ್ತು? ಎಂದು ಮರೆಯದೆ ಕೇಳುತ್ತಿದ್ದರು. ಅವರಿಗೆ ನೆನಪುಶಕ್ತಿ ಅಗಾಧವಾಗಿತ್ತು.  ಕೊನೆವರೆಗೂ ಅದು ಹಾಗೆಯೇ ಇತ್ತು.
  ಕೇಶವಮೂರ್ತಿ ಮಹಡಿ ಕೋಣೆಯಲ್ಲಿದ್ದು ಓದಿದವ.  ಅತ್ತೆಗೆ ಸನ್ಮಾನ


2014ರಲ್ಲಿ




   ಮಗ - ಸೊಸೆಯರೊರಡನೆ
  ಅತ್ತೆಗೆ ಇತ್ತೀಚೆಗೆ ಬಾಯಿರುಚಿ ಹೋಗಿತ್ತು. ಹಾಗಾಗಿ ಊಟ ಮಾಡಲು ಆಸಕ್ತಿ ಇರುತ್ತಿರಲಿಲ್ಲ. ಮಜ್ಜಿಗೆಹುಳಿಗೆ ಕಾಯಿ ಸಣ್ಣವಾಗಲಿಲ್ಲ, ಬಾಯಿಗೆ ತರಿ ತರಿ ಸಿಗುತ್ತದೆ ಎಂದೋ, ಮೇಲೋಗರಕ್ಕೆ ಇವತ್ತು ಉಪ್ಪು ಜಾಸ್ತಿ ಎಂದೋ,ಉಪ್ಪು ಕಡಿಮೆ ಎಂದೋ ಹೀಗೆ ಏನಾದರೊಂದು ಸರಿ ಇಲ್ಲ ಎಂದು ಪ್ರತೀದಿನ ಊಟಮಾಡುವಾಗ ಹೇಳುತ್ತಿದ್ದರು. ಆಗ ನಾನು, ‘ಹೌದು, ನನಗೂ ಬಾಯಿಗೆ ತರಿತರಿ ಸಿಗುತ್ತದೆ. ಸಣ್ಣ ಆಗಲಿಲ್ಲ ಎನ್ನುತ್ತಿದ್ದೆ. ಆಗ ಕೂಡಲೆ ಅತ್ತೆ, ‘ತೊಂದರೆ ಇಲ್ಲ, ಒಂದೊಂದು ಸಲ ಹಾಗಾಗುತ್ತದೆ’ ಎಂದು ಖುಷಿಯಿಂದ ಹೇಳಿ ಊಟ ಮಾಡುತ್ತಿದ್ದರು! ಅತ್ತೆ ಏನೂ ಹೇಳದ ದಿವಸ, ಅಬ್ಬೆ, ಇವತ್ತು ಉಪ್ಪು ಜಾಸ್ತಿ ಅಲ್ವಾ? ಒಗ್ಗರಣೆಗೆ ಸಾಸಿವೆ ಸಾಲದು ಅಲ್ವಾ? ಎಂದು  ಮಗ ಅನಂತವರ್ಧನ ಅಮ್ಮನನ್ನು ಕೆಣಕುತ್ತ ಇದ್ದರೆ ಅವರಿಗೆ ಅದು ಖುಷಿಯಾಗುತ್ತಿತ್ತು. ಅತ್ತೆ ಊಟಾ ಮಾಡುವಾಗ ಯಾವಾಗಲೂ ಏನಾದರೂ ಒಂದು ವಿಷಯ ಮಾಟಾಡುತ್ತಲೇ ಊಟ ಮಾಡುತ್ತಿದ್ದುದು ರೂಢಿ. ವಾತದ ನೋವಿನಿಂದಲೊ ಒಮ್ಮೊಮ್ಮೆ ಮೌನವಾಗಿರುತ್ತಿದ್ದಾಗ ಮಗ, ಅಬ್ಬೆ ಎಂಥ ಮಾತಾಡುತ್ತಿಲ್ಲ ಎಂದು ಕೇಳಿದರೆ, ಊಟ ಮಾಡುವಾಗ ಮಾತಾಡಬಾರದು ಎಂದು ನೀನೇ ಹೇಳಿದ್ದಲ್ವ ಎನ್ನುತ್ತಿದ್ದರು. ಅತ್ತೆ ಊಟ ಮಾಡುವಾಗ ಮಾತಾಡಿದರೆ,‘ಮಾತು ಆಮೆಲೆ ಊಟ ಮಾಡು’ (ಮಾತಾಡಿದರೆ ಊಟ ಎಷ್ಟೊತ್ತಾದರೂ ಮುಗಿಯಲ್ಲ)ಎಂದು ಅನಂತ ಹೇಳುತ್ತಿದ್ದ. ಆಗ ನಾನು ಸರಿಯಾಗಿ ಹೇಳಿದಿರಿ ಲಕ್ಷ್ಮಮ್ಮ ಎನ್ನುತ್ತಿದ್ದೆ. ಅತ್ತೆಯ ಸ್ನೇಹಿತೆ ಶಾರದಮ್ಮ ಎಂಬವರು (ಈಗ ತೀರಿ ಹೋಗಿದ್ದಾರೆ) ಮಾತು ಮಾತಿಗೂ ಹೌದಾ ಅಲ್ವಾ ಲಕ್ಷ್ಮಮ್ಮ ನೀವೆ ಹೇಳಿ? ಎನ್ನುತ್ತಿದ್ದರು. ಹಾಗೆಯೇ ಅದನ್ನು ಅನುಕರಿಸುತ್ತ ನಾನು ಅತ್ತೆಗೆ ಹಾಗೆಯೇ ಕೇಳುತ್ತಿದ್ದೆ. ಆಗ ಅತ್ತೆ ಉತ್ಸಾಹದಿಂದ ಶಾರದಮ್ಮನನ್ನು ನೆನಪು ಮಾಡಿಕೊಳ್ಳುತ್ತ ಊಟ ಮಾಡುತ್ತಿದ್ದರು.  ‘ನೋಡಿ ಲಕ್ಷ್ಮಮ್ಮ, ನಿಮ್ಮ ಶ್ರೀನಿವಾಸ ಚಿಕ್ಕಯ್ಯ ಹೇಳಿದ್ದಿದು. ಬಳ್ಳಿ ತರಕಾರಿ ಬಹಳ ಒಳ್ಳೆಯದು ಲಕ್ಷ್ಮೀ’ ಎಂದು ಹೇಳುತ್ತ ಅವರಿಗೆ ತರಕಾರಿ ಹೋಳು ಹಾಕುತ್ತಿದ್ದೆ. ಆಗ ಬಲು ಖುಷಿಯಿಂದ ತಿನ್ನುತ್ತಿದ್ದರು. 
   ನಾವು ಎಲ್ಲಿಗಾದರೂ ಹೋಗಬೇಕಾದರೆ ದೊಡ್ಡಮಗ ಅಶೋಕ ಸೊಸೆ ದೇವಕಿ ಬಂದು ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಅದು ಅವರಿಗೆ ಬಹಳ ಸಮಾಧಾನ ನೀಡಿತ್ತು. ಬೇರೆಯವರ ಮನೆಗೆ ಹೋಗಿ ಇರುವುದೆಂದರೆ ಅವರಿಗೆ ಬಹಳ ಹಿಂಸೆ ಎನಿಸಿತ್ತು. 
  ಎರಡನೆ ಮಗ ಆನಂದವರ್ಧನ ಸೊಸೆ ಜಯಶ್ರೀ ಇರುವುದು ಅಮೆರಿಕಾದಲ್ಲಿ. ವರ್ಷಕ್ಕೊಮ್ಮೆ ತಪ್ಪದೆ ಬಂದು ಅವರೊಡನಿದ್ದು ಹೋಗುತ್ತಿದ್ದರು. ಇತ್ತೀಚೆಗೆ ಸೆಪ್ಟೆಂಬರದಲ್ಲಿ ಬಂದಿದ್ದಾಗ ಅವರಿಗೆ ವಾಕರ್ ತೆಗೆದು ಕೊಟ್ಟಿದ್ದರು. ಅದನ್ನು ಎಲ್ಲರಿಗೂ ತೋರಿಸಿ ಆನಂದ ತೆಗೆದುಕೊಟ್ಟಿದ್ದು ಎಂದು ಸಂಭ್ರಮದಿಂದ ಹೇಳಿಕೊಂಡಿದ್ದರು. ಅದನ್ನು ಈಗ ಅವರ ತಮ್ಮ ರಾಮನಾಥನಿಗೆ ಒಪ್ಪಿಸಿಯಾಯಿತು. 
  ಆನಂದಭಾವ ಹಾಗೂ ಅಕ್ಷರಿ ನಮ್ಮನ್ನು ಅಮೇರಿಕಾಗೆ ಬರಬೇಕು ಎಂದು ಯಾವಾಗಲೂ ಒತ್ತಾಯ ಮಾಡುತ್ತಿದ್ದರು. ಆಗ ಅತ್ತೆ,‘ಅನಂತನಿಗೆ ಆಫೀಸಿನಲ್ಲಿ ಎಷ್ಟು ಕೆಲಸ ಉಂಟು. ಅವನಿಗೆ ಅಷ್ಟು ದಿನ ರಜ ಹಾಕಲು ಸಾಧ್ಯವಿಲ್ಲ’ ಎಂದು ಕೂಡಲೇ ಉತ್ತರಿಸುತ್ತಿದ್ದರು. ಹಾಗಾಗಿ ನಮಗೆ ಉತ್ತರ ಕೊಡುವ ಪ್ರಸಂಗ ಇದುವರೆಗೆ ಬಂದಿರಲಿಲ್ಲ. ನಮಗೂ ಅತ್ತೆಯನ್ನು ಬಿಟ್ಟು ಒಂದೆರಡು ತಿಂಗಳು ಅಲ್ಲಿಗೆ ಹೋಗಲು ಸರ್ವಥಾ ಮನಸ್ಸಿರಲಿಲ್ಲ. ನಾವು ಹೋದರೆ ಅಜ್ಜಿಗೆ ಬಲು ಕಷ್ಟವಾಗುತ್ತದೆ. ಅಜ್ಜಿಯ ಈ ಇಳಿವಯಸ್ಸಿನಲ್ಲಿ ಅವರಿಗೆ ಕಷ್ಟ ಕೊಡಬಾರದು. ಹಾಗೊಂದು ವೇಳೆ ನಾವು ಬಂದರೂ ನಮಗೆ ಅಲ್ಲಿ ತಿರುಗುವ ಉತ್ಸಾಹ ಬರುವುದಿಲ್ಲ ಎಂದು ನಾನು ಮಗಳಿಗೆ ಹೇಳಿಯೂ ಇದ್ದೆ.  



ವೈದ್ಯೋನಾರಾಯಣೋ ಹರಿ
   ಅತ್ತೆಯ ಚಿಕ್ಕಪ್ಪನ ಮಗ ಗೋವಿಂದಶರ್ಮ. ಅವರ ಮಗ ಶ್ರೀನಿವಾಸ. ಅವರು ಎಂ.ಬಿ.ಬಿ.ಎಸ್ ವೈದ್ಯರು. ಅತ್ತೆಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದುದು ಅವರೇ. ಒಂದು ವರ್ಷದಿಂದ ಶ್ರೀನಿವಾಸರ ಕ್ಲಿನಿಕ್ಕಿಗೆ ಹೋಗಲು ಅತ್ತೆಗೆ ಕಷ್ಟವಾಗುತ್ತಿತ್ತು. ಅದಕ್ಕೆ ಶ್ರೀನಿವಾಸ ಅವರು ಮನೆಗೇ ಬಂದು ಚಿಕಿತ್ಸೆ ಮಾಡುತ್ತಿದ್ದರು. ಇತ್ತೀಚೆಗೆ ವಾರಕ್ಕೊಂದು ನೋವು ನಿವಾರಕ ಚುಚ್ಚುಮದ್ದು ಬೇಕೇ ಬೇಕಾಗಿತ್ತು. ಶ್ರೀನಿವಾಸ ಮನೆಗೆ ಬಂದು ಚುಚ್ಚುಮದ್ದು ಕೊಟ್ಟು ಹೋಗುತ್ತಿದ್ದುದು ರೂಢಿಯಾಗಿತ್ತು. ನಾವು ಯಾವಾಗ ಫೋನ್ ಮಾಡಿ ಹೇಳಿದರೂ ಶ್ರೀನಿವಾಸ ಅವರು ಮನೆಗೆ ಬಂದು ನೋಡಿ ಅತ್ತೆಗೆ ಎರಡು ಸಮಾಧಾನದ ಮಾತುಗಳನ್ನಾಡಿ ಧೈರ್ಯತುಂಬಿ ಹೋಗುತ್ತಿದ್ದುದು ಬಹಳ ತೃಪ್ತಿ ಕೊಟ್ಟಿತ್ತು. ಶ್ರೀನಿವಾಸ ಅವರಿಗೆ ಇದೋ ನಮ್ಮೆಲ್ಲರ ಹೃದಯಪೂರ್ವಕ ನಮನಗಳು. 
ಸಿದ್ದಮ್ಮ-ಲಕ್ಷ್ಮಮ್ಮನ ಬಂಧುತ್ವ
ನಮ್ಮ ಮನೆ ಕೆಲಸಕ್ಕೆ ಕಳೆದ ಸರಿಸುಮಾರು ೪೦ ವರ್ಷಗಳಿಂದ ಸಿದ್ದಮ್ಮ ಬರುತ್ತಿರುವಳು. ಅವಳ ಇಬ್ಬರು ಮಕ್ಕಳನ್ನು ಓದಿಸಿ ಮದುವೆ ಮಾಡಿಸಿದ್ದು ನಮ್ಮತ್ತೆ ಮಾವನೇ. ಅವಳಿಗೆ ಸೈಟ್ ತೆಗೆಸಿ ಮನೆ ಕಟ್ಟಲು ಸಹಾಯವನ್ನೂ ಮಾಡಿದ್ದಾರೆ. ಸಿದ್ದಮ್ಮನ ಮಗ ರವಿಗೆ ಕೆಲಸ ಕೊಡಿಸಿದ್ದು ಕೂಡ ಮಾವನವರೇ. ಆ ಸಹಾಯವನ್ನು ಅವಳು ಹಾಗು ಅವಳ ಮಕ್ಕಳು ಮರೆತಿಲ್ಲ. ನಮ್ಮ ಮನೆ ಅಂದರೆ ಸಿದ್ದಮ್ಮಳಿಗೆ ತನ್ನದೇ ಮನೆ ಎಂಬ ಭಾವದ ಜೊತೆ ಅದು ಹಕ್ಕಿನ ಮನೆ ಎಂದೇ ಲೆಕ್ಕ. ಅಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಾಳೆ. ಈಗ್ಗೆ ಎರಡು ವರ್ಷಗಳಿಂದ ನಮ್ಮತ್ತೆಗೆ ಎಲ್ಲ ಸಹಾಯವನ್ನೂ ಅವಳೇ ಮಾಡುತ್ತಿದ್ದದ್ದು. ಪ್ರತಿ ನಿತ್ಯ ಅತ್ತೆಯ (ವಾತದ ನೋವಿಗೆ) ಕೈ ಕಾಲಿಗೆ ಎಣ್ಣೆ ಮಸಾಜು ಮಾಡುತ್ತಿದ್ದುದು, ತಲೆ ಬಾಚುತ್ತಿದ್ದುದು ಎಲ್ಲ ಅವಳೇ. ಬಹಳ ಚೆನ್ನಾಗಿ ಶ್ರದ್ಧಾ ಭಕ್ತಿಯಿಂದ ಮಸಾಜು ಮಾಡುತ್ತಿದ್ದಳು. ಅತ್ತೆಗೆ ಸುಸ್ತು ಇದ್ದ ದಿನ ಸ್ನಾನವನ್ನೂ ಅಚ್ಚುಕಟ್ಟಾಗಿ ಮಾಡಿಸುತ್ತಿದ್ದಳು. ಅತ್ತೆಗೆ ಸ್ನಾನ ಮಾಡಿಸಿಕೊಳ್ಳಲು ಮನಸ್ಸು ಒಪ್ಪುತ್ತಿರಲಿಲ್ಲ. ಅನಿವಾರ್ಯವಾದರೆ ಮಾತ್ರ ಸಮ್ಮತಿಸುತ್ತಿದ್ದರು. ಅವಳು ಪಾತ್ರೆ ತಿಕ್ಕಿದಂತೆ ಮೈ ಉಜ್ಜುತ್ತಾಳೆ ಎಂದು ಒಮ್ಮೆ ನನ್ನಲ್ಲಿ ಹೇಳಿದ್ದರು! ಅತ್ತೆಗೆ ಬೇಕಾದ ಹಾಗೆಯೇ ಅವರಿಗೆ ತೃಪ್ತಿ ಆಗುವ ಹಾಗೆ ಯಾವೊಂದು ಗೊಣಗಾಟವಿಲ್ಲದೆಯೇ ಅವರ ಎಲ್ಲಾ ಕೆಲಸ ಮಾಡಿದ್ದಳು. ತಿಂಗಳು ಮುಗಿಯುವ ಮೊದಲೇ ನಮ್ಮ ಅತ್ತೆಯೂ ಅವಳಿಗೆ ಹೆಚ್ಚುವರಿಯಾಗಿ ರೂ. ೫೦೦ ಕೈಗಿಡುತ್ತಿದ್ದರು. ಬೇಡ ಎಂದು ಅವಳಂದರೆ, ‘ಬೇಡ ಅನ್ನಬಾರದು, ಕೊಟ್ಟದ್ದನ್ನು ತೆಗೆದುಕೊಳ್ಳಬೇಕು. ಈಗ ಎಲ್ಲದಕ್ಕೂ ಬೆಲೆ ಜಾಸ್ತಿ, ನಿನಗೂ ಖರ್ಚು ಇರುತ್ತದೆ’ ಎಂದು ಅಧಿಕಾರಯುತವಾಗಿ ಹೇಳುತ್ತಿದ್ದರು. 
 ‘ನಮ್ಮ ಅಮ್ಮಾವರು ನನ್ನನ್ನು ಮಕ್ಕಳನ್ನೂ ಸಾಕಿದವರು. ನನ್ನ ಕಷ್ಟ ಕಾಲದಲ್ಲಿ ತಿಂಗಳಿಗಾಗುವಷ್ಟು ಅಕ್ಕಿ, ನುಚ್ಚು ಕೊಡುತ್ತಿದ್ದರು. ನಮ್ಮನ್ನು ಉದ್ಧಾರ ಮಾಡಿದವರು ಅವರು. ಅವರಿಗೆ ಎಷ್ಟು ಸೇವೆ ಮಾಡಿದರೂ ಕಡಿಮೆಯೇ’ ಎಂದು ಅವಳೂ ನಮ್ಮ ಅತ್ತೆ ಬಗ್ಗೆ ಆಗಾಗ ನನ್ನೊಡನೆ ಹೇಳಿಕೊಳ್ಳುತ್ತ ಗುಣಗಾನ ಮಾಡುತ್ತಾಳೆ. ದಶಂಬರ ೨೯ನೇ ತಾರೀಕು ಬೆಳಗ್ಗೆ ಅವರ ಚೀಲದಿಂದ ರೂ. ೬೦೦ ತೆಗೆದುಕೊಡಲು ನನಗೆ ಹೇಳಿದರು. ಈ ಸಲ ಸಿದ್ದಮ್ಮನಿಗೆ ರೂ. ನೂರು ಜಾಸ್ತಿ ಕೊಡುತ್ತೇನೆ ಆಗದೆ? ಎಂದು ಕೇಳಿದರು. ಧಾರಾಳವಾಗಿ ಕೊಡಿ ಎಂದೆ. ಸಿದ್ದಮ್ಮನ ಬರುವನ್ನೇ ಕಾದವರು ಅವಳು ಬಂದ ಕೂಡಲೇ, ರೂಪಾಯಿಯನ್ನು ಕೊಟ್ಟು, ‘ಈಗಲೇ ತೆಗೆದುಕೊ, ಬರುವ ತಿಂಗಳು ಕೊಡಲು ನಾನಿರುತ್ತೇನೋ ಇಲ್ಲವೋ?’ ಎಂದಿದ್ದರಂತೆ. 
  ಅತ್ತೆಗೆ ಸ್ನಾನ ಮಾಡಿಸಲು ಹೋದರೆ ತುಂಬ ಸಂಕೋಚ ಪಡುತ್ತಿದ್ದರಂತೆ. ಅದಕ್ಕೆ ಅವಳು ನಾನು ನಿಮ್ಮ ಮಗಳು ಎಂದು ತಿಳಿದುಕೊಳ್ಳಿ. ನನ್ನಲ್ಲೇಕೆ ಸಂಕೋಚ ಎಂದು ಸಮಾಧಾನಿಸಿ ಸ್ನಾನ ಮಾಡಿಸಿದಾಕೆ ಸಿದ್ದಮ್ಮ. ಅವಳ ಈ ನಿಸ್ವಾರ್ಥ ಸೇವೆ ಅತ್ತೆಗೆ ಬಹಳ ಖುಷಿ ಕೊಟ್ಟಿದೆ. ಅತ್ತೆಯ ಅಮೇರಿಕನ್ ಡೈಮಂಡ್ ಕಿವಿಯೋಲೆಯನ್ನು ಹಾಗೂ ಒಂದು ರೇಷ್ಮೆ ಸೀರೆಯನ್ನು ಅತ್ತೆಯ ಜ್ಞಾಪಕಾರ್ಥವಾಗಿ ಸಿದ್ದಮ್ಮಳಿಗೆ ಪ್ರೀತಿಯಿಂದ ಒಪ್ಪಿಸಿದೆವು. 


 ನೆಂಟರಿಷ್ಟರು, ಸ್ನೇಹಿತರೊಡನಾಟ 
  ಅತ್ತೆ ಸ್ವತಂತ್ರರಾಗಿ ಹೊರಗೆ ಓಡಾಡುವುದನ್ನು ನಿಲ್ಲಿಸಿ ಸುಮಾರು ನಾಲ್ಕೈದು ವರ್ಷಗಳಾಗಿದ್ದುವು. ಈಗ್ಗೆ ಒಂದೆರಡು ವರ್ಷಗಳಿಂದ ಎಲ್ಲೂ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಮನೆಗೆ ಯಾರೇ ಬಂದರೂ ಬಲು ಸಂಭ್ರಮ ಪಡುತ್ತಿದ್ದರು. ಅವರೊಂದಿಗೆ ಉಸಿರುಕಟ್ಟಿ ಒಂದು ನಿಮಿಷ ವ್ಯರ್ಥವಾಗದಂತೆ ಮಾತಾಡುತ್ತಿದ್ದರು. ತಾನು ಮಾತು ನಿಲ್ಲಿಸಿದರೆ ಅವರು ಕೂಡಲೇ ಎದ್ದು ಹೊರಟು ಹೋದರೆ ಎಂಬ ಭಾವ ಅತ್ತೆಗೆ ಬರುತ್ತಿದ್ದುದಿರಬೇಕು. ಹೊರಗೆಲ್ಲೂ ಹೋಗಲು ಸಾಧ್ಯವಾಗದ ಕಾರಣ ಮಾತಾಡುವ ಹಪಹಪಿಕೆ ಅವರಲ್ಲಿತ್ತು. ಹಾಗಾಗಿ ಅವರು ಅಷ್ಟು ಮಾತಾಡುತ್ತಿದ್ದುದು ಎಂದು ನಾವು ಅವರ ಭಾವನೆಯನ್ನು ಅರ್ಥಮಾಡಿಕೊಂಡಿದ್ದೆವು. 
   ಸಣ್ಣ ಪ್ರಾಯದ ಹುಡುಗ ಹುಡುಗಿಯರು ಬಂದರೆ, ಅವರೊಂದಿಗೆ, ‘ನೀವು ಓದಲು ಬೇಕಾದರೆ ಅಮೇರಿಕಕ್ಕೆ ಹೋಗಿ. ಆದರೆ ಓದು ಮುಗಿದಬಳಿಕ ವಾಪಾಸು ಬನ್ನಿ. ಇಲ್ಲೆ ಕೆಲಸ ಮಾಡಬೇಕು. ನಮ್ಮ ದೇಶವೇ ನಮಗೆ ಚೆನ್ನ’ ಎಂದು ತಾಕೀತು ಮಾಡುವಂತೆ ಹೇಳುತ್ತಿದ್ದರು. ನನ್ನ ತಂಗಿ ಮಗ ಶರತ್ಚಂದ್ರ ಈಗ ಎಂಬಿಬಿ‌ಎಸ್ ಓದುತ್ತಿರುವನು. ಅವನು ಮನೆಗೆ ಬಂದರೆ ಬಹಳ ಖುಷಿ ಪಡುತ್ತಿದ್ದರು. ಅವನೊಂದಿಗೆ ವೈದ್ಯಕೀಯಕ್ಕೆ ಸಂಬಂಧಿಸಿದ, ನಮ್ಮ ಶರೀರದ ಬಗ್ಗೆ ತಾಸುಗಟ್ಟಲೆ ಪ್ರಶ್ನೆ ಕೇಳುತ್ತಿದ್ದರು. ಅವನೂ ಖುಷಿಯಿಂದಲೇ ಉತ್ತರ ಕೊಡುತ್ತಿದ್ದ. ನೀನು ಅಮೇರಿಕಾಕ್ಕೆ ಹೋಗಬೇಡ ಆಯಿತ? ಎಂದರೆ ಅವನು ‘ನಾನು ಹೋಗಲ್ಲಜ್ಜಿ. ಅಲ್ಲಿ ಎಂಥ ಉಂಟು? ನಾನು ಇಲ್ಲೇ ಓದುವುದು, ಇಲ್ಲೇ ಕೆಲಸ ಮಾಡುವುದು’ ಎನ್ನುತ್ತಿದ್ದ. ಈ ಪ್ರಶ್ನೆ ಏಕೆಂದರೆ ಅವನ ಅಣ್ಣ ಅಮೇರಿಕದಲ್ಲಿದ್ದಾನೆ!
    ಅವರ ಇಬ್ಬರು ತಂಗಿಯರಾದ ಮೀನಾಕ್ಷಿ, ಸೀತೆ ಜೊತೆ ದೂರವಾಣಿ ಸಂಪರ್ಕದಲ್ಲಿ ನಿರಂತರ ಕಷ್ಟ ಸುಖ ಹಂಚಿಕೊಳ್ಳುತ್ತಲಿದ್ದರು. ಅದು ಅವರಿಗೆ ಎಷ್ಟೋ ಖುಷಿ ನೀಡಿತ್ತು. ಸೀತೆ ಹೇಳಿದ್ದಾಳೆ. ಇದು ಗುಟ್ಟು. ನಿನಗೆ ಮಾತ್ರ ಹೇಳುತ್ತೇನೆ ಎಂದು ಕೆಲವೊಮ್ಮೆ ಕೆಲವು   ವಿಷಯಗಳನ್ನು ನನಗೆ ಹೇಳುವುದಿತ್ತು!
  ಅಕ್ಷಯ ನನ್ನ ಅಣ್ಣನ ಮಗ. ಅವನು ಬಂದರೆ ಬಹಳ ಖುಷಿ ಪಡುತ್ತಿದ್ದರು. ಅವನು ಹೋಗಿಬರುತ್ತೇನಜ್ಜಿ ಎಂದು ಹೋಗುವಾಗ ತಪ್ಪದೆ ಹೇಳುತ್ತಲಿದ್ದ. ಅದು ಅವರಿಗೆ ಹೆಚ್ಚು ಸಂತೋಷ ಕೊಟ್ಟಿತ್ತು.
 ಅವರ ಸ್ನೇಹಿತ ಸ್ನೇಹಿತೆಯರು ಆಗಾಗ ಮನೆಗೆ ಬಂದು ಅತ್ತೆಯ ಯೋಗಕ್ಷೇಮ ವಿಚಾರಿಸಿ ಹೋಗುತ್ತಿದ್ದರು. ಕಮಲಾಕ್ಷಿ, ಅವರ ಗಂಡ ರಾಘವೇಂದ್ರ ಭಟ್ಟರು (ಅವರನ್ನು ಪ್ರೀತಿಯ ತಮ್ಮ ಎಂದೇ ಭಾವಿಸಿದವರು). ಸತ್ಸಂಗ, ಭಜನೆ, ಸಂಗೀತ ಎಂದು ಕಮಾಲಾಕ್ಷಿಯವರ ಜೊತೆ ಮೈಲಿಗಟ್ಟಲೆ ನಡೆದುಕೊಂಡು ಹೋಗುತ್ತಿದ್ದರು. ಅವರಿಬ್ಬರೂ ನಮ್ಮ ಮನೆಯ ಸದಸ್ಯರೆಂದೇ ನಾವು ತಿಳಿದಿದ್ದೆವು. ಅಷ್ಟು ಆತ್ಮೀಯರು. ಭಟ್ಟರ ಜೊತೆ ಮಾತಾಡುವುದೆಂದರೆ ಅತ್ತೆಗೆ ಬಲು ಖುಷಿ ಹುರುಪು. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಎಷ್ಟೋ ವಿಷಯಗಳನ್ನು  ಚರ್ಚೆ ಮಾಡುತ್ತಿದ್ದರು. ಅಂಥ ಪ್ರೀತಿಯ ತಮ್ಮ ಈ ಅಕ್ಕನ ಪ್ರೀತಿಯರ್ಥ ೨-೧-೧೮ರಂದು ಬಂದು ಅಕ್ಕ ಉಪಯೋಗಿಸಿದ್ದ ಕೆಂಪು ದೊಣ್ಣೆಯನ್ನು ತೆಗೆದುಕೊಂಡರು. ನೀವು ಕೋಲು ಹಿಡಿದುಕೊಂದು ನಡೆಯಬೇಕು ಎಂದು ಅವರಿಗೆ ಅಕ್ಕ ಸಲಹೆ ಕೊಟ್ಟಿದ್ದರು! ಅಕ್ಕನ ಸಲಹೆಯನ್ನು ತಮ್ಮ ಶಿರಸಾವಹಿಸಿ ಪಾಲಿಸಿದ್ದು ಆ ಅಕ್ಕನಿಗೆ ತೃಪ್ತಿಯಾಗಿರಬಹುದು.
   ಅಮೃತೇಶ, ಅವರ ಪತ್ನಿ ಜಯಂತಿ ಆಗಾಗ ಬಂದು ಅತ್ತೆಯನ್ನು ಮಾತಾಡಿಸಿ ಹೋಗುತ್ತಿದ್ದರು. ಅವರಿಗೆ ಈ ಪುಸ್ತಕ ಓದಿ ಆ ಪುಸ್ತಕ ಓದಿ ಎಂದು ಸಲಹೆ ಕೊಡುತ್ತಿದ್ದರು! ಅಮೃತೇಶರು ಸಂಜೆ ಬಂದು  ಅತ್ತೆಯ ಮಾತು ಕೇಳುತ್ತ ಗಂಟೆಗಟ್ಟಲೆ ಕೂರುತ್ತಿದ್ದರು. ಅವರು ಮಿತಭಾಷಿಗಳು. ಆದರೆ ಅತ್ತೆಯ ಮಾತನ್ನು ಖುಷಿಯಿಂದ ಕೇಳುತ್ತಿದ್ದರು. ಇವರೂ ನನ್ನ ಇನ್ನೊಬ್ಬ ತಮ್ಮ ಎಂದು ಅತ್ತೆ ಹೇಳಿದ್ದರು. 
 ಸ್ನೇಹಿತೆ ನಾಗಮ್ಮ ಬಂದು ಕೂತು ಅತ್ತೆ ಜೊತೆ ಕಷ್ಟಸುಖ ಹಂಚಿಕೊಂಡು ಹೋಗುತ್ತಿದ್ದರು.
 ಅತ್ತೆಯ ಚಿಕ್ಕಪ್ಪನ ಮಗ ಎ.ವಿ. ಗೋವಿಂದರಾವ್ ತಪ್ಪದೆ ತಿಂಗಳಿಗೊಮ್ಮೆ ಬಂದು ಅಕ್ಕನ ಜೊತೆ ಅರ್ಧ ಗಂಟೆ ಮಾತಾಡಿ ಹೋಗುತ್ತಿದ್ದರು. 
  ಶ್ರೀಧರ ಭಟ್, ಗಿರಿಜಮ್ಮ ದಂಪತಿಗಳು, ಅಯ್ಯ, ಸುಂದರೀಮಣಿ ದಂಪತಿಗಳು ಒಮ್ಮೊಮ್ಮೆ ಯೋಗಕ್ಷೇಮ ವಿಚಾರಿಸಿಕೊಳ್ಳಲು ಬರುತ್ತಿದ್ದರು. ಅತ್ತೆಯ ಇಳಿವಯಸ್ಸಿನಲ್ಲಿ ಬಹಳ ಸಂತೋಷದಿಂದ ಇರಲು ಇವರೆಲ್ಲರ ಸಹಕಾರ ಧಾರಾಳವಾಗಿ ಲಭಿಸಿತ್ತು. ಅತ್ತೆಯನ್ನು ಕಾಣಲು ಬಂದ ಈ ಎಲ್ಲ ಮನಸ್ಸುಗಳಿಗೂ (ಇಲ್ಲಿ ಹೆಸರು ನಮೂದಿಸದ ಎಷ್ಟೋ ಮಂದಿ ಬಂದಿದ್ದಾರೆ. ಅವರಿಗೆಲ್ಲರಿಗೂ) ನಮೋನಮಃ 
  ನಮ್ಮ ಮನೆಗೆ ಯಾರೇ ಸ್ನೇಹಿತರು, ನೆಂಟರು ಬಂದರೂ ಅವರನ್ನು ಅತ್ತೆಯೊಂದಿಗೆ ಕೂರಿಸಿ ಪಟ ತೆಗೆಯುವುದನ್ನು ಇತ್ತೀಚೆಗೆ ರೂಢಿ ಮಾಡಿಕೊಂಡಿದ್ದೆ. ಒಂದೊಮ್ಮೆ ನನಗೆ ಮರೆತರೂ ಅತ್ತೆಯೇ ಪಟ ತೆಗೆಯುವುದಿಲ್ಲವೆ? ಎಂದು ನೆನಪು ಮಾಡುತ್ತಿದ್ದರು! ಅದೆಲ್ಲ ಈಗ ಸವಿ ನೆನಪುಗಳು. 

ಅಚ್ಚುಮೆಚ್ಚಿನ ನಾದಿನಿ ಮಾಲತಿ ಜೊತೆ

ತಮ್ಮ ರಾಮನಾಥ

ನನ್ನ ದೊಡ್ಡಮ್ಮನ ಜೊತೆ

ತಂಗಿಯಂದಿರು ಸೀತೆ, ಲಲಿತಾ, ಭವಾನಿ

ತಂಗಿಯರು ಮೀನಾಕ್ಷಿ, ಅನುರಾಧ ಮತ್ತು ಅವರ ಮಕ್ಕಳು

ಅಂತರಂಗದ ಗೆಳತಿ ಕಮಲಾಕ್ಷಿ ಜೊತೆ 

ರಾಘವೇಂದ್ರ ಭಟ್ಟರ ಜೊತೆ ಚರ್ಚೆಯಲ್ಲಿ
ಶಾರದಮ್ಮ ಜೊತೆ 

ಸುಂದರೀಮಣಿ, ಅಯ್ಯ ದಂಪತಿಗಳೊಂದಿಗೆ

ಗಿರಿಜಮ್ಮ ಶ್ರೀಧರಭಟ್ ಜೊತೆ 

ಅಮೃತೇಶರ ಜೊತೆ

ಜಯಂತಿ ಜೊತೆ

ತಂಗಿ ಅನುರಾಧ ಮತ್ತು ಭಾವ ಶಂಕರಭಟ್ಟರ ಜೊತೆ
ನನ್ನ ತಮ್ಮ ಹಾಗೂ ಅಕ್ಕನ ಮಕ್ಕಳ ಜೊತೆ

ನನ್ನ ಅಮ್ಮನೊಂದಿಗೆ 


ನನ್ನ ತಂಗಿಮಗ ಶರತ್ ಜೊತೆ
ಅಚ್ಚುಮೆಚ್ಚಿನ ವೈದ್ಯರು ಕೃಷ್ಣಮೂರ್ತಿ ಜೊತೆ  ದಶಂಬರ 22ನೇ ತಾರೀಕು

ಮೊಮ್ಮಕ್ಕಳೊಡನೆ ಬಾಂಧವ್ಯ
ನಮ್ಮ ಮಗಳು ಅಕ್ಷರಿ ೨೧ ವರ್ಷ ಅಜ್ಜಿ ಜೊತೆಗಿದ್ದಳು. ಅವಳನ್ನು ಸೊಂಟದಲ್ಲಿ ಕೂರಿಸಿಕೊಂಡು ಮೈಲಿಗಟ್ಟಲೆ ನಡೆದು ಸಂಗೀತ ಸಾಹಿತ್ಯ ಸಮಾರಂಭ ಎಂದು ತಿರುಗುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ. ಕೋಡುಬಳೆ, ಚಕ್ಕುಲಿ, ರವೆ‌ಉಂಡೆ, ಕೇಸರಿಭಾತು ಹೀಗೆ ನಾನಾ ತರಹದ ತಿಂಡಿ ಮಾಡಿ ಕೊಟ್ಟಿದ್ದರು. ಅವಳು ಮದುವೆಯಾಗಿ ಗಂಡನೊಂದಿಗೆ ಮದ್ರಾಸಿನಲ್ಲಿ ಮನೆ ಮಾಡಿದ್ದಾಗ ಶತಾಬ್ಧಿ ರೈಲಿನಲ್ಲಿ ಅಲ್ಲಿಗೆ ಹೋಗಿ ಒಂದೆರಡು ದಿನವಿದ್ದು ಬಂದಿದ್ದರು. ಮತ್ತೆ ಅವರು ಅಮೇರಿಕಾಕ್ಕೆ ಹೋದರು. ವರ್ಷಕ್ಕೆರಡು ಸಲ ಅಕ್ಷರಿ ಇಲ್ಲಿಗೆ ಬರುತ್ತಿದ್ದಳು. ಹಾಗಾಗಿ ಅವಳು ಪರದೇಶದಲ್ಲಿದ್ದರೂ ಅಷ್ಟು ಉದಾಸೀನವಾಗಿರಲಿಲ್ಲ. ಈಗ್ಗೆ ಒಂದೂವರೆ ವರ್ಷ ಅವಳಿಗೆ ಇಲ್ಲಿಗೆ ಬರಲು ವೀಸಾ ತೊಂದರೆಯಿಂದ ಆಗಿರಲಿಲ್ಲ. ಆಗ ಮಾತ್ರ ಅಜ್ಜಿ ಪ್ರತಿ ದಿನ ಅಕ್ಷರಿ ಯಾವಾಗ ಬರುತ್ತಾಳಂತೆ? ನಾನು ಜೀವ ಹಿಡಿದು ಕಾಯುತ್ತಿರುವುದು ಅವಳು ಬರಲಿ ಎಂದು ಎನ್ನುತ್ತಿದ್ದರು. 


ಗಣೇಶ ಗೌರಿ ಇಡುವ ಸಂಭ್ರಮ
ಮೊಮ್ಮಕ್ಕಳು
ಒಂದು ದಿನ ಬೆಳಗ್ಗೆ ಅತ್ತೆ ಎದ್ದಾಗ, ‘ಇವತ್ತು ಒಂದು ಕಥೆ ಆಗಿತ್ತು. ಬೆಳಗ್ಗೆ ೫ ಗಂಟೆಗೆ ಬೆಲ್ ಆಯಿತು. ಎದ್ದು ಹೋಗಿ ಬಾಗಿಲು ತೆರೆದರೆ ಎದುರಿಗೆ ಅಕ್ಷರಿ ನಿಂತಿದ್ದಾಳೆ. ಸರ್ಪ್ರೈಸ್ ಆಗಬೇಕೆಂದು ಯಾರಿಗೂ ಹೇಳಲಿಲ್ಲ ಎಂದು ಹೇಳಿ, ಅಜ್ಜಿ ನನಗೆ ಬಹಳ ಸುಸ್ತಾಗಿದೆ. ನಿನ್ನ ಮಂಚದ ಪಕ್ಕವೇ ಮಲಗುತ್ತೇನೆ ಎಂದು ಮಲಗಿದಳು’ ಎಂದು ಅವರಿಗೆ ಬಿದ್ದ ಕನಸನ್ನು ವರ್ಣಿಸಿದ್ದರು! ಅವಳು ಅಜ್ಜಿಯೊಂದಿಗೆ ದೂರವಾಣಿಯಲ್ಲಿ ಮಾತಾಡಿದಾಗಲೆಲ್ಲ ಒಂದೇ ಪ್ರಶ್ನೆ,‘ಯಾವಾಗ ಬರುತ್ತೀರಿ ಇಲ್ಲಿಗೆ? ಸಾಕು ಅಮೇರಿಕಾ. ಮಹೇಶ ಕೆಲಸ ಬಿಟ್ಟು ಬರಲಿ. ಇಲ್ಲಿ ಅವನಿಗೆ ಕೆಲಸ ಖಂಡಿತಾ ಸಿಕ್ಕೀತು. ನಮ್ಮ ದೇಶದಲ್ಲೇ ಕೆಲಸ ಮಾಡಬೇಕು. ಅವನ ಅಪ್ಪ ಅಮ್ಮನಿಗೆ ಅವನು ಒಬ್ಬನೇ ಮಗ. ಎಷ್ಟು ಬೇಜಾರ ಆದೀತು ಅವರಿಗೆ. ಆದಷ್ಟು ಬೇಗ ಬನ್ನಿ’ ಎಂದು ತಾಕೀತು ಮಾಡುತ್ತಿದ್ದರು. ವಾತದ ನೋವು ತೀವ್ರವಾದಾಗಲೆಲ್ಲ ಅಕ್ಷರಿ ಬರುವವರೆಗೆ ಇದ್ದರೆ ಸಾಕು. ಒಮ್ಮೆ ಅವಳ ಮುಖ ನೋಡಿಬಿಡುತ್ತೇನೆ. ಮತ್ತೆ ಏನಾದರೂ ತೊಂದರೆ ಇಲ್ಲ ಎಂದು ಹೇಳುತ್ತಿದ್ದರು. ಅಕ್ಷರಿ ಕ್ಷೇಮವಾಗಿ ಆದಷ್ಟು ಬೇಗ ಬರಲಿ ಎಂದು ಧರ್ಮಸ್ಥಳ ಮಂಜುನಾಥನಿಗೆ ಒಪ್ಪಿಸಲು ರೂ. ೫೦೦ ತೆಗೆದಿಟ್ಟಿದ್ದರು. ಅಂತೂ ಅವಳು ೧೦ ನವೆಂಬರ ೨೦೧೭ರಂದು ಇಲ್ಲಿಗೆ ಕಾಲಿಟ್ಟಾಗ ಅಜ್ಜಿ ಹರ್ಷಗೊಂಡರು. ಮರೆಯದೆ ಆ ಹಣವನ್ನು ಮಂಜುನಾಥನಿಗೆ ಮನಿಯಾರ್ಡರ್ ಮೂಲಕ ಕಳುಹಿಸಿ ಕೊಟ್ಟಾಗಿತ್ತು. 
  ಅಜ್ಜಿ ಪುಳ್ಳಿ ಎಂದಿನಂತೆ ತರ್ಕ ವಿತರ್ಕ ಮಾತಾಡಿಕೊಳ್ಳುತ್ತ ಖುಷಿಪಟ್ಟರು. ಮಹೇಶನೂ ನವಂಬರ ೨೫ಕ್ಕೆ ಬಂದಾಗ ಅವನೊಡನೆಯೂ ಎರಡು ದಿನ ಬಾಯಿತುಂಬ ಮಾತಾಡಿ ತೃಪ್ತಿ ಹೊಂದಿದರು. ಮಹೇಶ ಮಾತಿಗೆ ಮೊದಲೊಮ್ಮೆ ಅಜ್ಜಿ ಎಂದು ಮಾತಿನ ಕೊನೆಗೊಮ್ಮೆ ಅಜ್ಜಿ ಎಂದು ಹೇಳುತ್ತಾನಂತೆ. ಅದು ಅತ್ತೆಗೆ ಬಲು ಖುಷಿಯ ವಿಚಾರ. ಈ ಮುದುಕಿಯ ಬಳಿ ಏನು ಮಾತು ಎಂದು ಭಾವಿಸದೆ ಅವನು ಅಜ್ಜಿ ಜೊತೆ ಖುಷಿಯಿಂದ ಮಾತಾಡುತ್ತಾನಂತೆ. ಬಹಳ ಒಳ್ಳೆಯ ಹುಡುಗ ಎಂದು ಅಜ್ಜಿಯ ಪ್ರಶಂಸೆ ಸಿಕ್ಕಿತ್ತವನಿಗೆ. 
   ಮೊಮ್ಮಗ ಅಭಯ (ಮೊದಲ ಮಗ ಅಶೋಕವರ್ಧನನ ಮಗ), ಅವನ ಪತ್ನಿ ರಶ್ಮಿ, ಅವರ ಮಗಳು ಆಭಾ ಅಕ್ಷರಿ ಬಂದಾಗಲೇ ಮನೆಗೆ ಬಂದದ್ದು ಅಜ್ಜಿಗೆ ಬಹಳ ಹರ್ಷವಾಗಿತ್ತು.
  ದಶಂಬರ ೨೦೧೭ರಂದು ಮಹೇಶ ಮತ್ತು ಅಕ್ಷರಿ ವಾಪಾಸು ಹೊರಟಾಗ ‘ಇದು ನಿನಗೆ ಬಸ್ ಚಾರ್ಜಿಗೆ ಎಂದು ರೂ.೫೦೦ ಕೊಟ್ಟು ಆಶೀರ್ವದಿಸಿ, ‘ನೀನು ಇನ್ನೊಮ್ಮೆ ಬರುವಾಗ ನಾನು ಇರುತ್ತೇನೋ ಇಲ್ಲವೋ’ ಎಂದು ಅಜ್ಜಿ ಪುಳ್ಳಿ ಇಬ್ಬರೂ ಕಣ್ಣೀರು ಹಾಕಿಕೊಳ್ಳುತ್ತ ಬೀಳ್ಕೊಂಡಿದ್ದರು. 
   ಅನರ್ಘ್ಯ, ಐಶ್ವರ್ಯ (ಎರಡನೇ ಮಗ ಆನಂದವರ್ಧನನ ಮಕ್ಕಳು)೨೦೧೭ ದಶಂಬರ ೨೭ ಹಾಗೂ ೨೮ರಂದು ಎರಡು ದಿನವಿಡೀ ಅಜ್ಜಿ ಜೊತೆ ಸಮಯ ಕಳೆದರು. ಐಶ್ವರ್ಯ ಅಜ್ಜಿಗೆ ಸಂಗೀತಸೇವೆಯನ್ನೂ ಸಲ್ಲಿಸಿದಳು. ಅಜ್ಜಿಯ ಕಾಲು ತಿಕ್ಕಿದರು. ಅನರ್ಘ್ಯನ ಗಂಡ ಜೆಜೆ ಜೊತೆ ಆಂಗ್ಲದಲ್ಲಿ ಹಿಂದಿ ಶಬ್ಧ ಸೇರಿಸಿ ಮಾತಾಡಿ ಸಂತಸಪಟ್ಟಿದ್ದರು.
 ಅಜ್ಜಿಯು ತನ್ನ ಕೊನೆಗಾಲದಲ್ಲಿ ನಾಲ್ಕೂ ಮೊಮ್ಮಕ್ಕಳೊಡನೆ ಹಾಗೂ ಮರಿಮಗುವಿನ ಜೊತೆಯೂ ಖುಷಿಯಿಂದ ಕಾಲ ಕಳೆದದ್ದು ಆ ಮೊಮ್ಮಕ್ಕಳ ಭಾಗ್ಯವೇ ಸರಿ.

ಮರಿಮಗು ಆಭಾ ಜೊತೆ




ಅಕ್ಷರಿ ಮಹೇಶ ಹೊರಡುವ ದಿನದಂದು

(ಇದು 2016 ಫೆಬ್ರವರಿ ಹೊಸತು ಪತ್ರಿಕೆಯಲ್ಲಿ ಬಂದ ಓ ಮನಸೇ ಏನು ನಿನ್ನ ವರಸೆ? ಎಂಬ ಪ್ರಬಂಧದ  ಆಯ್ದ ಭಾಗ)
     ಹದಿಹರಯದ ಮನಸ್ಸಿಗೂ ಇಳಿವಯಸ್ಸಿನ ಮನಸ್ಸಿಗೂ ಆಗಾಗ ಘರ್ಷಣೆ ಆಗುತ್ತಲೇ ಇರುತ್ತದೆ. ನಮ್ಮ ಮನೆಯಲ್ಲಿ ೪ ಮಂದಿ ಇದ್ದೇವೆ. (ನಾವಿಬ್ಬರು, ನಮಗೊಬ್ಬಳು, ಅವಳಿಗೊಬ್ಬ ಅಜ್ಜಿ) ನಾಲ್ಕೂ ಜನರ ಮನಸ್ಸೂ ಒಂದೇ ಸಮ ಇರಲು ಸಾಧ್ಯವಿಲ್ಲ. ಈ ನಾಲ್ಕರಲ್ಲಿ ಎರಡು ಪ್ರೌಢ ಮನಸ್ಸು, ಒಂದು ಹದಿಹರಯ, ಇನ್ನೊಂದು ಇಳಿಮನಸ್ಸು ಎಂದು ವಿಂಗಡಿಸೋಣ. ನಮ್ಮ ಮನೆಯಲ್ಲಿರುವ ಪ್ರೌಢ ಮನಸ್ಸಿಗೂ ಇಳಿಮನಸ್ಸಿಗೂ ಹೆಚ್ಚು ತಾಕಲಾಟವಿಲ್ಲ. ಆಗೊಮ್ಮೆ ಈಗೊಮ್ಮೆ ಸಂಘರ್ಷ ಬರುತ್ತದೆ ಇಲ್ಲವೆಂದಲ್ಲ. ಆದರೆ ಇಳಿಮನಸ್ಸಿಗೂ ಹರಯದ ಮನಸ್ಸಿಗೂ ಆಗಾಗ ಘರ್ಷಣೆ ನಡೆಯುತ್ತಲೇ ಇರುತ್ತದೆ. ಮೊಮ್ಮಗಳು ಮಾಡಿದ್ದು ಅಜ್ಜಿಗೆ ಸರಿಕಾಣದು,  ಅದನ್ನು ಅಜ್ಜಿ ಮೊಮ್ಮಗಳಿಗೆ ಹೇಳುವುದು, ಅದು ಮೊಮ್ಮಗಳಿಗೆ ಕೋಪ ತರುವುದು. ಉದಾಹರಣೆಗೆ, ನೀನು ಸಿನೆಮಾದ ಹಾಗೆ ಮಾತಾಡುತ್ತಿದ್ದೀಯ ಎಂದು ಅಜ್ಜಿ ಅಂದರೆ ನೀನು ಸಿನೆಮದ ಅಜ್ಜಿಯಾಗೆ ಮಾತಾಡುತ್ತಿ ಎಂದು ಮೊಮ್ಮಗಳ ಪ್ರತಿಕ್ರಿಯೆ! ಪರಸ್ಪರ ಮಾತು ಪ್ರತಿಮಾತು ಬರುತ್ತಲೇ ಇರುತ್ತದೆ. ಇವು ಅಜ್ಜಿ ಮೊಮ್ಮಗಳಿದ್ದ ಎಲ್ಲಾ ಮನೆಗಳಲ್ಲಿ ಸ್ವಾಭಾವಿಕವಾಗಿ ಘಟಿಸುವಂಥ ವಿಚಾರ. ಅದು ಅಜ್ಜಿ ಮೊಮ್ಮಗಳ ಪ್ರೇಮಕೋಪ ಸಲ್ಲಾಪ. ಅಜ್ಜಿಗೂ ಮೊಮ್ಮಗಳಿಗೂ ಆಗಾಗ ಮಾತಿನ ಜಟಾಪಟಿ ನಡೆದರೂ ಅವು ಕೇವಲ ತಾತ್ಕಾಲಿಕ. ಅದರಲ್ಲಿ ಇಬ್ಬರಿಗೂ ಸಂತೋಷವಿದೆ.
  ಅಜ್ಜಿ ಮೊಮ್ಮಗಳ ನಡುವೆ  ನಮ್ಮ ಮನೆಯಲ್ಲಿ ಇತ್ತೀಚೆಗೆ ನಡೆದ ಸಂಭಾಷಣೆಯನ್ನಿಲ್ಲಿ ಕೊಡುತ್ತೇನೆ. 
ಮೊಮ್ಮಗಳು ಮಂಗಳೂರಿಗೆ ರಾತ್ರಿ ಬಸ್ಸಲ್ಲಿ ಪ್ರಯಾಣಿಸುವ ಸಲುವಾಗಿ ಟಿಕೆಟ್ ಕಾದಿರಿಸಿ ಆ ಸುದ್ದಿಯನ್ನು ಅಜ್ಜಿಗೆ ಬಿತ್ತರಿಸಿದಳು.
 ‘ನೀನೊಬ್ಬಳೇ ಹೋಗುವುದಾ?’ ಒಡನೆಯೇ ಅಜ್ಜಿಯಿಂದ ಬಂದ ಪ್ರಶ್ನೆ. (ಅಜ್ಜಿಗೆ ಹೆದರಿಕೆ ತುಸು ಜಾಸ್ತಿಯೇ. ಇದಕ್ಕೂ ಅವರ ಸಮಜಾಯಿಸಿ ಇದೆ. ನನಗೆ ಮೊದಲು ಇಷ್ಟು ಭಯ ಆಗುತ್ತಿರಲಿಲ್ಲ. ಈಗ ಎಲ್ಲದಕ್ಕೂ ಹೆದರಿಕೆ ಆಗುತ್ತದೆ. ಈಗ ಶರೀರಕ್ಕೆ ತಡೆದುಕೊಳ್ಳುವ ಶಕ್ತಿ ಇಲ್ಲ, ಅದಕ್ಕೇ ಬೇಗ ಆತಂಕವಾಗುವುದು.) 
‘ಅಲ್ಲ, ಅಜ್ಜಿ’ ಮೊಮ್ಮಗಳ ಚುಟುಕು ಉತ್ತರ.
‘ಮತ್ತೆ ಯಾರು ಬರುತ್ತಾರೆ ನಿನ್ನ ಜೊತೆಗೆ?’
‘ಬಸ್ಸಲ್ಲಿ ನನ್ನೊಡನೆ ತುಂಬ ಜನ ಇರುತ್ತಾರೆ ಅಜ್ಜಿ’ ಮೊಮ್ಮಗಳ ತುಂಟತನದ ಉತ್ತರ.
‘ಹಾಗಲ್ಲ, ನೀನು ಒಬ್ಬಳೆ ಅದೂ ರಾತ್ರಿ ಪ್ರಯಾಣ ಹೆದರಿಕೆ ಆಗುತ್ತದೆ. ಈಗಿನ ಕಾಲದ ಜನ ಸರಿ ಇಲ್ಲ’
ಅಜ್ಜೀ, ಭಯ ಏಕೆ? ನಾನು ಒಬ್ಬಳೇ ಅಲ್ಲ, ಎಷ್ಟೊಂದು ಜನ ಇರುತ್ತಾರಲ್ಲ ಬಸ್ಸಲ್ಲಿ. ಹೋಗಜ್ಜಿ ನೀನು ಎಲ್ಲದಕ್ಕೂ ಹೆದರುವುದು’ ಎಂದು ನುಡಿದವಳೇ ಮುಂದೆ ಅಜ್ಜಿಯ ಪ್ರಶ್ನೆಗಳ ಸುರಿಮಳೆಗೆ ಹೆದರಿ ಅಲ್ಲಿಂದ ಎದ್ದು ಹೋದಳು. 
   ದಿನವಿಡೀ ಇದೇ ಆಲೋಚನೆಯಲ್ಲಿ ಅಜ್ಜಿಯ ಮನಸ್ಸು ತಿಕ್ಕಾಟದಲ್ಲಿರುತ್ತದೆ. ಸಂಜೆವೇಳೆಗೆ ಅದರ ದುಷ್ಪರಿಣಾಮ ಶರೀರದಮೇಲೂ ಬೀರಿ, ಸುಸ್ತು, ಸಂಕಟ, ತಲೆತಿರುಗು ಇತ್ಯಾದಿಯಾಗಿ ವೈದ್ಯರನ್ನು ನೋಡದೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಏರ್ಪಡುತ್ತದೆ. ವೈದ್ಯರ ಬಳಿ ತೆರಳಿ ತಕ್ಕ ಔಷಧೋಪಚಾರವಾಗಿ ಮನೆಗೆ ಬರುತ್ತಾರೆ. 
 ಇತ್ತ, ಮೊಮ್ಮಗಳ ಮನಸ್ಸು ಈ ಅಜ್ಜಿಗೆ ಹೇಗೆ ಸಮಾಧಾನ ಹೇಳುವುದು? ಏನು ಹೇಳಿದರೆ ಅಜ್ಜಿಯ ಹೆದರಿಕೆ ಕಡಿಮೆ ಆಗಬಹುದು? ಎಂಬುದಾಗಿ ಚಿಂತಿಸುತ್ತಿರುತ್ತದೆ. ಮಾವನ ಮನೆಗೆ ಬಂದ ನೆಂಟರು ಅದೇ ಬಸ್ಸಲ್ಲಿ ಟಿಕೆಟ್ ಮಾಡಿದ್ದಾರೆ ಎಂದು ಅಜ್ಜಿಗೆ ಹೇಳುವ ಆಗದೇ? ಇಲ್ಲಾಂದರೆ ಅಜ್ಜಿ ರಾತ್ರಿ ನಿದ್ದೆ ಮಾಡಲಿಕ್ಕಿಲ್ಲ. ಅದೇ ಚಿಂತೆಯಲ್ಲಿ ಕೂತಾರು. ಆರೋಗ್ಯ ಇನ್ನೂ ಹದಗೆಟ್ಟೀತು. ಮತ್ತೆ ನಿಮಗೇ ಕಷ್ಟ. ನನಗೆ ಗೊತ್ತು ಅಜ್ಜಿಗೆ ನನ್ನದೇ ಚಿಂತೆ.  ಆ ಮಂಥನದ ಫಲವಾಗಿ ಕಂಡ ಪರಿಹಾರವನ್ನು ಅಮ್ಮನೊಡನೆ ಚರ್ಚಿಸುತ್ತಾಳೆ. ಸುಳ್ಳು ಹೇಳುವುದು ಸರಿಯೋ ತಪ್ಪೋ ಎಂಬ ಭಾವ ಆ ಕ್ಷಣದಲ್ಲಿ ಮೂಡಿದರೂ ಸರಿ ಅದೇ ಒಳ್ಳೆಯ ಉಪಾಯ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. 
   ಒಡನೆ ಮೊಮ್ಮಗಳು ಅಜ್ಜಿಯ ಬಳಿ ಕೂತು ‘ಅಜ್ಜೀ ನಿನಗೆ ಒಂದು ಸಂತಸದ ಸುದ್ದಿ ಹೇಳುವೆ’ ಎಂಬ ಪೀಠಿಕೆ ಹಾಕುತ್ತಾಳೆ. 
‘ನೀನು ರಾತ್ರಿ ಬಸ್ಸಲ್ಲಿ ಹೋಗದೆ ಹಗಲು ಹೋಗುತ್ತಿಯಾ?’ ಅಜ್ಜಿಯ ಆರ್ತ ಮೊರೆ.
‘ಟಿಕೆಟ್ ಮಾಡಿ ಆಗಿದೆಯಲ್ಲ. ರಾತ್ರೆಯೇ ಹೋಗುವುದು. ಅದೇ ಬಸ್ಸಿಗೆ ಮಾವನ ಮನೆಗೆ ಬಂದ ನೆಂಟರೊಬ್ಬರು ಟಿಕೆಟ್ ಮಾಡಿದ್ದಾರೆ. ಈಗ ನಾನು ಮಾವನ ಮನೆಯಿಂದಲೇ ಬಂದದ್ದು. ಆಗ ಗೊತ್ತಾಯಿತು ಈ ವಿಚಾರ’
‘ಅಬ್ಬ, ಈಗ ಸಮಾಧಾನವಾಯಿತು. ಯಾರಾದರೂ ಜೊತೆಗೆ ಇರಬೇಕು ಅದೂ ರಾತ್ರಿ ಪ್ರಯಾಣದಲ್ಲಿ. ಇನ್ನು ಯೋಚನೆ ಇಲ್ಲ’ ಅಜ್ಜಿಯ ನೆಮ್ಮದಿಯ ಮಾತು. 
     ಆದರೂ ಆ ಮನಕ್ಕೆ ಪೂರ ನೆಮ್ಮದಿ ಇಲ್ಲ. ಅವರು ಯಾರು? ಎಲ್ಲಿಗೆ ಹೋಗುವುದು? ಇಳಿಯುವುದು ಎಲ್ಲಿ? ಇತ್ಯಾದಿ ಪ್ರಶ್ನೆಗೆ ತೊಡಗುತ್ತಾರೆ. ಮೊಮ್ಮಗಳು ವಿವರವಾಗಿ ಮಾವ ಇದ್ದಾನಲ್ವ ಅವನ ಹೆಂಡತಿಯ ಚಿಕ್ಕಮ್ಮ ಊರಿಂದ.. .. ..  ಎಂಬ ಸವಿವರವನ್ನು ಕಲ್ಪಿಸಿಕೊಳ್ಳುತ್ತ ವಿವರಿಸುತ್ತಾಳೆ! ಮತ್ತು ಅಜ್ಜಿ ಇನ್ನೂ ಪ್ರಶ್ನೆ ಕೇಳಿದರೆ ಸುಳ್ಳು ಪೋಣಿಸುತ್ತ ಹೋಗುವುದು ಕಷ್ಟದ ಕೆಲಸ ಎಂದು ಅರಿವಾಗಿ ‘ಅಜ್ಜಿ, ನನಗೆ ಇನ್ನೂ ಬ್ಯಾಗಿಗೆ ಬಟ್ಟೆ ತುಂಬಿಸಿಯೇ ಆಗಿಲ್ಲ’ ಎಂದು ಅಲ್ಲಿಂದ ಪರಾರಿಯಾಗುತ್ತಾಳೆ!   
     ಇಷ್ಟೆಲ್ಲ ಹೇಳಿದರೂ ಅಜ್ಜಿಯ ಮನಸ್ಸಿಗೆ ಪೂರ್ಣ ಸಮಾಧಾನ ಸಿಗಲೊಲ್ಲದು. ಮಗ ರಾತ್ರಿ ಮನೆಗೆ ಬಂದೊಡನೆ ಮೊಮ್ಮಗಳ ಪ್ರಯಾಣದ ವಿಚಾರವಾಗಿ ಪ್ರಶ್ನಿಸುತ್ತಾರೆ. ‘ಅವಳೊಡನೆ ಬರುತ್ತಾರಲ್ಲ ಅವರ ಸೀಟ್ ನಂಬ್ರ ಎಷ್ಟು?’ ಎಂದು ವಿಚಾರಿಸುತ್ತಾರೆ. 
‘ಮೂರು’ ಮಗನಿಂದ ತಟ್ಟನೆ ಬರುತ್ತೆ ಉತ್ತರ.
‘ಇವಳದ್ದು ಎಷ್ಟು?’
‘ಇಪ್ಪತ್ತಮೂರು’ ಎಷ್ಟು ಸಹಜವಾಗಿ ಮಗರಾಯ ಸುಳ್ಳು ನುಡಿದನೆಂದರೆ ನಿಜಕ್ಕೂ ಗೊತ್ತಿದ್ದೇ ಹೇಳಿದ್ದು ಎಂದು ಭಾಸವಾಗಬೇಕು. ಎಷ್ಟಾದರೂ ಮೊಮ್ಮಗಳ ಅಪ್ಪನೇ ಅಲ್ಲವೆ!  
‘ಓ. ತುಂಬ ದೂರವಾಯಿತು. ಒಟ್ಟಿಗೆ ಸಿಕ್ಕಬೇಕಿತ್ತು’ ಅಜ್ಜಿಯ ಮನಸ್ಸು ಈ ರೀತಿ ಚಿಂತಿಸಲು ತೊಡಗುತ್ತದೆ. ಈ ಮಾತುಕತೆ ಕೇಳುತ್ತ ನನ್ನ ಮನ ಓ ಮನವೇ ಏನು ನಿನ್ನ ವರಸೆಯೇ? ಎಂದು ಬೆರಗುಗೊಳ್ಳುತ್ತದೆ. 
  ಇದೇ ವಿಚಾರವಾಗಿ ಮಿತಿ ಇಲ್ಲದೆ ಮನಸು ಹೇಗೆ ಮುಂದೆ ವಿಹರಿಸುತ್ತದೆ. ಅವರು ಎಷ್ಟು ಹೊತ್ತಿಗೆ ಬರುತ್ತಾರೆ? ಅವರನ್ನೂ ನೀವೇ ಕರೆದುಕೊಂಡು ಹೋಗುವುದ? ಇತ್ಯಾದಿ ಪ್ರಶ್ನೆಗಳು, ಆ ಪ್ರಶ್ನೆಗಳಿಗೆ ತಕ್ಕ ಸಮಂಜಸ ಉತ್ತರಗಳು ನಮ್ಮಿಂದ ಬರುತ್ತಲೇ ಇದ್ದುವು! ಈ ಎಲ್ಲ ಗೊಂದಲಗಳ ನಡುವೆ ಅಜ್ಜಿ ಸುಸ್ತಾಗಿ ಮಲಗಿರುತ್ತಾರೆ. ರಾತ್ರಿ ಮೊಮ್ಮಗಳು ಹೊರಡುವೆನೆಂದು ಹೇಳಿದಾಗ ತಟ್ಟನೆ ಎದ್ದು ಗೇಟಿನವರೆಗೂ ಬಂದು ‘ಬಸ್ಸಲ್ಲಿ ಮಧ್ಯೆ ಇಳಿಯಬೇಕಾದರೆ ಅವರ ಜೊತೆಯಲ್ಲೆ ಇಳಿ. ಒಬ್ಬಳೆ ಹೋಗಬೇಡ’ ಎಂದು ಬುದ್ಧಿಮಾತು ಹೇಳಿಯೇ ಬೀಳ್ಕೊಡುತ್ತಾರೆ. ಮೊಮ್ಮಗಳೂ ತಲೆ ಆಡಿಸಿ ಸಮ್ಮತಿಸುತ್ತಾಳೆ. 
   ಮೊಮ್ಮಗಳು ಹೇಳಿದ ಒಂದು ಸುಳ್ಳಿನಿಂದ ನಾವು ಎಷ್ಟು ಸುಳ್ಳುಗಳನ್ನು ಸೃಷ್ಟಿ ಮಾಡಬೇಕು, ಅದಕ್ಕೆ ಸಂಬಂಧಪಟ್ಟವರಿಗೂ ಈ ಬಗ್ಗೆ ಮಾಹಿತಿ ಕೊಡಬೇಕು, ಮಗಳು ಹೋಗಿ ತಲಪುವ ಮನೆಯವರ ಬಳಿ ಈ ಅಜ್ಜಿ ಅಡ್ಡ ಪ್ರಶ್ನೆ ಮಾಡುವ ಸಂಭವ ಇರುತ್ತದೆ. ಅವರೂ ಸುಳ್ಳು ಹೇಳಲು ತಯಾರಾಗಿರಬೇಕು. ಮಗಳ ಮಾವನಿಗೂ ಈ ಸುಳ್ಳಿನ ಬಗ್ಗೆ ತಿಳಿಸಬೇಕು. ಇನ್ನು ಒಂದೆರಡು ತಿಂಗಳು ಕಳೆದು ಅಜ್ಜಿ ಮಾವನನ್ನು ಭೇಟಿಯಾದರೂ ಮೊಮ್ಮಗಳ ಪ್ರಯಾಣದ ವಿಚಾರ ಕೇಳುವ ಸಂಭವ ಇರುತ್ತದೆ. ಏಕೆಂದರೆ ಅಜ್ಜಿಗೆ ನೆನಪಿನ ಶಕ್ತಿ ಅಗಾಧ. ಅದಕ್ಕೆ ತಕ್ಕ ಉತ್ತರ ಕೊಡಲು ಅವರೂ ತಯಾರಾಗಿರಬೇಕು. ಅಜ್ಜಿ ಕೇಳುವ ಪ್ರಶ್ನೆ ಎದುರು ತಡಬಡಾಯಿಸಬಾರದಲ್ಲ. ನಾವು ಹೇಳುವ ಸುಳ್ಳಿನಿಂದ ಒಬ್ಬರ ಮನಸ್ಸಿಗೆ ನೆಮ್ಮದಿ ಸಮಾಧಾನ ಸಿಗುತ್ತದೆ ಎಂದಾದರೆ ಸುಳ್ಳು ಹೇಳುವುದರಲ್ಲಿ ತಪ್ಪಿಲ್ಲವೇ ಇಲ್ಲ ಎಂದು ಮನಸ್ಸು ಸಮರ್ಥಿಸಿಕೊಳ್ಳುತ್ತದೆ. ಅಜ್ಜಿಯ ಮಾನಸಿಕ ನೆಮ್ಮದಿಗೆ ಅತ್ಯಂತ ಸುಲಭದ ಪರಿಹಾರ ಇದಾಗಿರುವುದರಿಂದ ನಾವು ಇಂಥ ಸುಳ್ಳುಸೂತ್ರವನ್ನು ಆಗಾಗ ಹೇಳಬೇಕಾಗಿ ಬರುತ್ತಲೇ ಇರುತ್ತದೆ. ಇದುವರೆಗೆ ನಾವು ಹತ್ತಾರು ಸುಳ್ಳುಗಳನ್ನು ಹೇಳಿ ಅದರಿಂದ ಅವರು ನೆಮ್ಮದಿ ಹೊಂದಿದ ಪ್ರಸಂಗಗಳು ಸಾಕಷ್ಟು ಇವೆ. ಅವೆಲ್ಲ ಇಲ್ಲಿ ಬರೆಯಹೊರಟರೆ ಒಂದು ಸುಲಲಿತ ಕಾದಂಬರಿಯಾದೀತು! 
ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ
ಹೊನಲು ನೂರೀ ಬಾಳ ಕಡಲನುಬ್ಬಿಸಲಿ
ತನುಬಂಧ ಕಳಚಿ, ಜೀವಖಂಡಚೇತನದ
ಕುಣಿತದಲಿ ಕೂಡಿರಲಿ __ ಮಂಕುತಿಮ್ಮ

ಇಲ್ಲಿಯ ಅಜ್ಜಿಗೆ ೮೬ ವರ್ಷ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆ ಬಿಟ್ಟರೆ ಚೆನ್ನಾಗಿದ್ದಾರೆ. ಅವರು ಉಟ್ಟ ಬಟ್ಟೆಯನ್ನು ನಿತ್ಯ ಅವರೇ ಒಗೆಯುತ್ತಾರೆ. ಬೆಳಗ್ಗೆ ಎದ್ದು  ರಂಗೋಲಿ ಹಾಕುತ್ತಾರೆ. ಯಾರಾದರೂ ನೆಂಟರು ಬರುತ್ತಾರೆ ಎಂದು ಗೊತ್ತಾದರೆ ಆ ದಿನ ಅಂಗಳದಲ್ಲಿ ಸುಸ್ವಾಗತ ಎಂಬ ರಂಗೋಲಿ ಹಾಕಿ ಸಂತಸಪಡುತ್ತಾರೆ. ಪೂಜೆಗೆ ಹೂ ಕೊಯುತ್ತಾರೆ. ಆದರೂ ಅವರಿಗೆ ಒಂದೇ ಕೊರಗು. ನನಗೇನೂ ಹೆಚ್ಚು ಕೆಲಸ ಮಾಡಲು ಕೈಲಾಗುತ್ತಿಲ್ಲವಲ್ಲ ಎಂದು. 
***
   ಈ ವೃದ್ಧಾಪ್ಯವೆನ್ನುವುದು ಬಲು ಕಷ್ಟದ ಜೀವನ. ಅವರ ಮನಸ್ಸನ್ನು ಅರ್ಥಮಾಡಿಕೊಳ್ಳುವ ಮನಸ್ಸು ಮನೆಯಲ್ಲಿರುವ ಹೆಚ್ಚಿನ ಸದಸ್ಯರಿಗೆ ಇರುವುದಿಲ್ಲ. ಅವರು ಏನು ಹೇಳಿದರೂ ಪಥ್ಯವಾಗುವುದಿಲ್ಲ. ಇದಕ್ಕೆ ಕಾರಣ ಜನರೇಷನ್ ಗ್ಯಾಪ್ ಎಂಬ ಆಂಗ್ಲ ಪದ ಬಳಸಿಬಿಡುತ್ತಾರೆ.  ವೃದ್ಧರು ಎಷ್ಟು ಕಷ್ಟ ಪಡುತ್ತಾರೋ? ಅವರಿಗೆ ಎಷ್ಟೆಲ್ಲ ನೋವುಗಳು ಇರುತ್ತವೋ ಏನೋ? ಅವರ ಮನಸ್ಸು ಏನೆಲ್ಲ ಚಿಂತಿಸುತ್ತಿರಬಹುದು? ಹಿಂದೆ ಎಷ್ಟೆಲ್ಲ ತಿರುಗಿದ್ದೇನೆ, ಕೆಲಸ ಮಾಡಿದ್ದೇನೆ. ಈಗ ಏನೂ ನನ್ನಿಂದ ಆಗುತ್ತಿಲ್ಲವಲ್ಲ, ಯಾರ ಸಹಾಯವೂ ಇಲ್ಲದೆ ಎಲ್ಲೂ ಹೊರಹೋಗಲು ಸಾಧ್ಯವಾಗುವುದಿಲ್ಲವಲ್ಲ ಹೀಗೆಲ್ಲ ಯೋಚಿಸುತ್ತಿರಬಹುದೆ ಎಂದು ವಯಸ್ಸಾದ ಯಾರನ್ನೇ ನೋಡಿದರೂ ನನ್ನ ಮನಸ್ಸು ಈ ರೀತಿ ಚಿಂತಿಸುತ್ತದೆ. ಮನೆಯಲ್ಲಿ ವಯಸ್ಸಾದವರನ್ನು (ಅತ್ತೆ ಇರಬಹುದು, ಮಾವ ಇರಬಹುದು, ಅಜ್ಜ, ಅಜ್ಜಿ ಯಾರೇ ಆಗಲಿ) ನಾವು ಹೆಚ್ಚು ಉಪಚರಿಸದೆ ಇದ್ದರೂ ಚಿಂತಿಲ್ಲ, ಆದರೆ ಅವರ ಮನಸ್ಸಿಗೆ ಈ ಇಳಿ ವಯಸ್ಸಿನಲ್ಲಿ ನೋವು ಮಾತ್ರ ಕೊಡಬಾರದು. ಎಷ್ಟೇ ಬಿಡುವಿಲ್ಲದ ಕಾರ್ಯ ನಮಗಿದ್ದರೂ ದಿನಕ್ಕೊಮ್ಮೆಯಾದರೂ ನಗುತ್ತ ಒಂದೆರಡು ಒಳ್ಳೆಯ ಮಾತು ಆಡಿದರೆ ಅಷ್ಟೇ ಸಾಕು. ಇದರಿಂದ ಅವರು ದಿನವಿಡೀ ನೆಮ್ಮದಿಯಿಂದ ಮನೆಯಲ್ಲಿ ಕಾಲಕಳೆಯಲು ಸಾಧ್ಯವಾಗುತ್ತದೆ. ಅವರಿಗೆ ನೆಮ್ಮದಿ ನೀಡಿದ ತೃಪ್ತಿ ನಮಗೆ ಸಿಗುತ್ತದೆ. 

ಜೋಪಾನವಾಗಿ ಇಳಿಸಿಕೊಳ್ಳಿ
ಹುಟ್ಟಿದ ಮನುಜ ಒಂದಲ್ಲ ಒಂದು ದಿನ ಸಾಯಲೇಬೇಕು. ಅದು ನಿಯಮ. ಹುಟ್ಟಿದವನಿಗೆ ಸಾವು ಅನಿವಾರ್ಯ ಕರ್ಮ. ಸತ್ತಾಗ ನಾವು ಅಳಬಾರದು. ವಯೋಸಹಜವಾಗಿ ಈ ಪ್ರಂಪಚದ ವ್ಯವಹಾರ ಸಮರ್ಪಕವಾಗಿ ಮುಗಿಸಿಯೇ ಅವರು ತೆರಳಿದ್ದು ತಾನೆ. ನಮ್ಮ ಮಾವ ರೈಲು ಹತ್ತಿಹೋಗಿ ಹತ್ತು ವರ್ಷವಾಗುತ್ತ ಬಂತು. (೨೭-೬-೨೦೦೮) ಈಗ ಮಾವನ ಜೊತೆ ಸೇರಲು ಅತ್ತೆ ರೈಲು ಹತ್ತಿ ಹೋಗಿದ್ದಾರೆ. ಅಲ್ಲಿ ಮಾವ ಅವರನ್ನು ಜೋಪಾನವಾಗಿ ಇಳಿಸಿಕೊಂಡಿರುತ್ತಾರೆ ಎಂಬ ನಂಬಿಕೆ ನಮಗಿದೆ. ಅತ್ತೆಗೆ ಇದೋ ನಮ್ಮ ಅಕ್ಷರ ನಮನಗಳು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ