ಅಮ್ಮ, ಅತ್ತೆ, ಅಜ್ಜಿ ಹೇಗಿದ್ದೀರಿ? ಅಲ್ಲಿ ಎಲ್ಲ ವ್ಯವಸ್ಥೆ ಸರಿಯಾಗಿದೆಯಷ್ಟೆ? ತೊಂದರೆ ಏನೂ ಇಲ್ಲ ತಾನೆ? ಈಗ ಪತ್ರ ಬರೆಯುವ ಪದ್ಧತಿ ಕ್ಷೀಣವಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿರುವ ಸಮಯದಲ್ಲಿ ನಾವ ನಿಮಗೆ ಮಿಂಚಂಚೆಯಲ್ಲಿ ಕಳುಹಿಸಲು ಈ ಪತ್ರ ಕುಟ್ಟುತ್ತಿರುವೆವು.
ನೀವು ೨೦೧೮ ಜನವರಿ ೧ರಂದು ಬೆಳಗಿನ ಝಾವ ಅವಸರಾವಸರವಾಗಿ ರೈಲು ಹತ್ತಿ ಮಾವನ ಬಳಿಗೆ ಹೋಗಿಯೇಬಿಟ್ಟಿರಿ. ಅನಂತರ ಇಲ್ಲಿ ಏನೇನಾಯಿತು ಎಂಬುದನ್ನು ನಾನು ನಿಮಗೆ ಈ ಪತ್ರದ ಮೂಲಕ ತಿಳಿಸಲು ಪ್ರಯತ್ನ ಮಾಡುತ್ತೇವೆ.
ನಿಮ್ಮ ಮರಣಾನಂತರ ನಿಮಗಿದ್ದ ಇಚ್ಛೆಯಂತೆಯೇ ನಿಮ್ಮ ದೇಹವನ್ನು ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿಗೆ ಒಪ್ಪಿಸಿದೆವು. ಜೀವವಿದ್ದಾಗ ಚೆನ್ನಾಗಿ ನೋಡಿಕೊಳ್ಳಬೇಕು. ಜೀವ ಹೋದಮೇಲೆ ಅದ್ದೂರಿಯಾಗಿ ತಿಥಿ ಮಾಡಿದರೆ ಏನು ಉಪಯೋಗ ಎಂದು ನೀವು ಯಾವಾಗಲೂ ಹೇಳುತ್ತಿದ್ದಿರಲ್ಲ. ಅದಕ್ಕೆ ಬದ್ಧರಾಗಿ ನಾವು ನಿಮ್ಮ ಉತ್ತರಕ್ರಿಯೆ ನಡೆಸಲು ಮುಂದಾಗಲಿಲ್ಲ. ಹಾಗೆ ನಡೆಸುವುದೂ ನಿಮಗೆ ಬೇಡವಾಗಿತ್ತು. ದ.ಕ. ಜಿಲ್ಲೆಯ ಕನ್ಯಾನದಲ್ಲಿರುವ ಭಾರತ ಸೇವಾಶ್ರಮದಲ್ಲಿರುವ ವೃದ್ಧರೂ ಮಕ್ಕಳೂ ಸೇರಿ ಸುಮಾರು ೬೦೦ ಮಂದಿಗೆ ನಿಮ್ಮ ನೆನಪಿನಲ್ಲಿ ಸಿಹಿ ಊಟದ ವ್ಯವಸ್ಥೆ ಮಾಡಿಸಿದ್ದೆವು. ಆ ಕಾರ್ಯ ನಮಗೆ ಸಾರ್ಥಕವೆನಿಸಿತ್ತು. ನಿಮಗೂ ತೃಪ್ತಿಯಾಗಿರಬಹುದು. ಆ ಸಂಸ್ಥೆಗೆ ಹಿಂದೆ ನೀವು ಭೇಟಿ ಕೊಟ್ಟು, ಅವರ ಕಾರ್ಯವೈಖರಿಯನ್ನು ಮೆಚ್ಚಿದ್ದಿರಿ. ೧೩ನೇ ದಿನ ಇಲ್ಲಿ ಮನೆಯಲ್ಲಿ ತಿಲ ಹೋಮವನ್ನು (ಹಿಂದೆ ಮಾವ ತೀರಿದಾಗ ನಡೆಸಿದಂತೆಯೇ) ಚಿಕ್ಕದಾಗಿ ಚೊಕ್ಕವಾಗಿ ದಿವಾಕರ ಅಗ್ನಿಹೋತ್ರಿ ಹಾಗೂ ಸುರೇಶ ಅವರು ನಡೆಸಿಕೊಟ್ಟರು. ತದನಂತರ ಅದೇದಿನ ಕೃಷ್ಣಧಾಮದಲ್ಲಿ ೧೧ ಗಂಟೆಗೆ ನಿಮ್ಮ ಸ್ಮರಣೆಯನ್ನು ಅಚ್ಚುಕಟ್ಟಾಗಿ ಮಾಡಿದೆವು. ಮಾತು, ಹಾಡು ಎಂದು ಒಟ್ಟು ಹದಿನಾಲ್ಕು ಮಂದಿ ನಿಮ್ಮ ಸ್ಮರಣೆ ಮಾಡಿದರು.
ಮೊದಲಿಗೆ ನಿಮ್ಮ ಹಿರಿಯ ಪುತ್ರ ಅಶೋಕ ನಿಮ್ಮ ಬಗ್ಗೆ ಇದ್ದ ಸವಿ ನೆನಪುಗಳನ್ನು ಚಿಕ್ಕಚೊಕ್ಕವಾಗಿ ಹಂಚಿಕೊಂಡರು.
ಎರಡನೆಯವಳಾಗಿ, ನಿಮ್ಮ ಅಣ್ಣನ ಮಗಳು ನಳಿನಿ ಮಾತಾಡುತ್ತ, ಅಚ್ಚುಕಟ್ಟುತನ, ಹೊಲಿಗೆ ಇತ್ಯಾದಿಗೆ ನೀವೇ ಅವಳಿಗೆ ಸ್ಫೂರ್ತಿ ಎಂಬುದನ್ನು ನೆನಪಿಸಿಕೊಂಡಳು.
ಮೂರನೆಯದಾಗಿ, ನಿಮ್ಮ ಮೈದುನ ರಾಘವೇಂದ್ರರ ಮಗಳು ಜಯಲಕ್ಷ್ಮೀ ಒಟ್ಟು ಮೂರು ಹಾಡಿನ ಮೂಲಕ ನಿಮಗೆ ನಮನ ಸಲ್ಲಿಸಿದಳು.
ನಾಲ್ಕನೆಯವರಾಗಿ, ನಿಮ್ಮ ತಮ್ಮನೆಂದೇ ನೀವು ಭಾವಿಸಿದ್ದ ರಾಘವೇಂದ್ರಭಟ್ಟರು ನಿಮ್ಮೊಡನೆ ಕಳೆದ ಸವಿನೆನಪುಗಳನ್ನು ಬಿಚ್ಚಿಟ್ಟರು.
ಐದನೆಯವರಾಗಿ, ನಿಮ್ಮ ನೆಚ್ಚಿನ ಗೆಳತಿ ಕಮಲಾಕ್ಷಿ ಮಾತಾಡಲ್ಲ ಎಂದವರು, ಮಾತಾಡದೆ ಇರಲು ಸಾಧ್ಯವೇ ಇಲ್ಲ ಎಂದು ಹುರುಪಿನಿಂದ ಎದ್ದು ನಿಮ್ಮೊಡನೆ ಕಳೆದ ದಿನಗಳನ್ನು ನೆನಪಿಸಿಕೊಂಡರು.
ಆರನೆಯವರಾಗಿ, ನಿಮ್ಮ ತಮ್ಮನ ಮಗಳು ಕುಸುಮನ ಗಂಡ ಸದಾಶಿವ ಮಾತಾಡಿ, ನೀವು ಮತ್ತು ಮಾವ ಅವನಿಗೆ ಮಾಡಿದ ಸಹಾಯವನ್ನೂ, ನಿಮ್ಮಿಂದ ಜೀವನದ ಶಿಸ್ತು ಕಲಿತದ್ದನ್ನೆಲ್ಲ ಸವಿಸ್ತಾರವಾಗಿ ಹೃದಯಂಗಮವಾಗಿ ಹಂಚಿಕೊಂಡರು.
ಏಳನೆಯವರಾಗಿ, ಗಂಗಾಧರಭಟ್ (ಸಂಸ್ಕೃತ ಉಪನ್ಯಾಸಕರು, ಮಹಾರಾಜ ಸಂಸ್ಕೃತ ಪಾಟಶಾಲೆ, ಮೈಸೂರು) ದೇಹದಾನದ ಮಹತ್ತನ್ನು, ನಾವೇಕೆ ದೇಹದಾನಮಾಡಬೇಕು ಎಂಬ ವಿಷಯವನ್ನು ಅರ್ಥವಾಗುವ ಹಾಗೆ ವಿವರಿಸಿದರು. ಅವರು ಕಾಲುನೋವಿನಿಂದ ಬಳಲುತ್ತಿದ್ದರೂ ಅದನ್ನು ಲೆಕ್ಕಿಸದೆ ನಮ್ಮ ಕರೆಗೆ ಓಗೊಟ್ಟು ಬಂದು ನಿಮ್ಮ ಮೇಲಿರುವ ಪ್ರೀತಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
ಎಂಟನೆಯವರಾಗಿ, ನಿಮ್ಮ ಮೈದುನ ದಿವಾಕರ ರಾವ್ ಅತ್ತಿಗೆ ಅಂದರೆ ತಾಯಿಸಮಾನಳು ಎಂದು ನಿಮ್ಮಗಳ ಮನೆಯಲ್ಲಿ ಕಳೆದ ಬಾಲ್ಯದ ಘಟನೆಗಳ ನೆನಪನ್ನು ತೆರೆದಿಟ್ಟರು.
ಒಂಭತ್ತನೆಯವರಾಗಿ, ನಿಮ್ಮ ಚಿಕ್ಕಪ್ಪನ ಮಗ ಎ.ವಿ. ಗೋವಿಂದರಾವ್ ನಿಮ್ಮೊಡನೆ ಮಾತಾಡಲು ಬರುತ್ತಿದ್ದುದನ್ನು, ವೈಚಾರಿಕ ಮನೋಭಾವವನ್ನು, ನಿಮ್ಮ ನೆನಪಿನ ಶಕ್ತಿಯನ್ನು ನೆನಪಿಸಿಕೊಂಡರು.
ಹತ್ತನೆಯವರಾಗಿ, ನಿಮ್ಮ ಎರಡನೆ ಸೊಸೆ ಜಯಶ್ರೀಯ ತಮ್ಮ ಪ್ರಸಾದ ಅವನು ರಾಮಕೃಷ್ಣ ಶಾಲೆಯಲ್ಲಿ ಕಲಿಯುತ್ತಿರುವಾಗ ಇಲ್ಲಿ ಮನೆಗೆ ಬಂದಾಗಿನ ಸವಿ ನೆನಪುಗಳನ್ನು ಹಂಚಿದರು.
ಹನ್ನೊಂದನೆಯವರಾಗಿ, ನಿಮ್ಮ ಮೈದುನ ಜಿ. ಆರ್. ಸದಾಶಿವ ರಾವ್ ಮಾತಾಡಿದರು.
ಹನ್ನೆರಡನೆಯವಳಾಗಿ, ದಿವಾಕರ ಮಾವನ ಸೊಸೆ ಮೇಘ ಹಾಡಿನ ಮೂಲಕ ನಿಮಗೆ ನುಡಿನಮನ ಸಲ್ಲಿಸಿದಳು.
ಹದಿಮೂರನೆಯವನಾಗಿ, ನಿಮ್ಮ ಏಕೈಕ ಮೊಮ್ಮಗ ಅಭಯಸಿಂಹ ಮಾತಾಡಿದ. ಅಜ್ಜನ ವೈಜ್ಞಾನಿಕ ಮನೋಭಾವ ಹಾಗೂ ಅಜ್ಜಿಯ ವೈಚಾರಿಕತೆ ಹೀಗೆ ಎರಡೂ ವಿಷಯಗಳನ್ನೂ ನಮ್ಮ ಜೀವನದಲ್ಲಿ ಹೇಗೆ ಸಮನ್ವಯವಾಗಿ ಬೆರೆಸಿ ಮುನ್ನಡೆಯಬಹುದು ಎಂಬುದನ್ನು ತೋರಿಸಿಕೊಟ್ಟವರು ಅಜ್ಜ ಅಜ್ಜಿ ಎಂದು ತನ್ನ ನೆನಪಿನ ಬುತ್ತಿಯನ್ನು ತೆರೆದಿಟ್ಟ.
ಹದಿನಾಲ್ಕನೆಯವರಾಗಿ, ಮೋಹನರಾಯರು ಒಂದೆರಡು ಭಜನೆ ಹಾಡಿ ನಿಮಗೆ ನಮನವನ್ನರ್ಪಿಸಿದರು.
ಕೊನೆಗೆ ಜಯಲಕ್ಷ್ಮೀ ಹಾಡಿನ ಮೂಲಕ ನಿಮ್ಮ ನೆನಪಿನ ಸಭೆಗೆ ಮಂಗಳ ಹಾಡಿದಳು.
ನಳಿನಿ ಅಚ್ಚುಅಕಟ್ಟಾಗಿ ಈ ಸಭೆಯನ್ನು ಮುನ್ನಡೆಸಿದಳು. ನೆಂಟರಿಷ್ಟರು, ಸ್ನೇಹಿತ, ಸ್ನೇಹಿತೆ, ಬಂಧು ಬಳಗ ಎಂದು ಸಾಕಷ್ಟು ಮಂದಿ ಸೇರಿದ್ದೆವು.
ನಿಮ್ಮ ಪ್ರೀತಿಯ ದ್ಯೋತಕವಾಗಿ ಸುಮಾರು ೨೦೦ ಮಂದಿ ಬಂದಿದ್ದರು. ೧೨.೪೫ಕ್ಕೆ ಸರಿಯಾಗಿ ಊಟದ ಏರ್ಪಾಡು ಮಾಡಲಾಗಿತ್ತು. ಬೆಲ್ಲದ ಲಾಡು, ನಿಮ್ಮ ತಂಗಿ ಸೀತಾ ಅಕ್ಕನ ಪ್ರೀತಿಯರ್ಥ ಮಾಡಿಸಿ ತಂದ ಹೋಳಿಗೆ, ತುಪ್ಪ, ಅನ್ನ, ಸಾರು, ಸಾಂಬಾರು, ಮಜ್ಜಿಗೆಹುಳಿ, ಪಲ್ಯ, ಕೋಸಂಬರಿ, ಚಿತ್ರಾನ್ನ, ಪಾಯಸ ಇವಿಷ್ಟಿದ್ದ ಸುಗ್ರಾಸ್ಯ ಭೋಜನ ಎಲ್ಲರಿಗೂ ಇಷ್ಟವಾಯಿತು.
ಒಟ್ಟಿನಲ್ಲಿ ನಿಮ್ಮ ನೆನಪಿನ ಈ ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯಿತು. ಬಂದಿದ್ದ ಎಲ್ಲರೂ ಖುಷಿಪಟ್ಟರು.
ಎಲ್ಲರಿಗೂ "ಯೋಗ ನಮಸ್ಕಾರ ಪಂಚಕ" ಎಂಬ ಯೋಗ ಪುಸ್ತಕವನ್ನು ಕೊಡಲಾಯಿತು. ಅದೇ ದಿನ ಸಂಜೆ ಮೂಡಲಪಾಯ ಯಕ್ಷಗಾನ ವಾಲಿವಧೆ ಏರ್ಪಡಿಸಲಾಗಿತ್ತು,
ಎಲ್ಲರಿಗೂ "ಯೋಗ ನಮಸ್ಕಾರ ಪಂಚಕ" ಎಂಬ ಯೋಗ ಪುಸ್ತಕವನ್ನು ಕೊಡಲಾಯಿತು. ಅದೇ ದಿನ ಸಂಜೆ ಮೂಡಲಪಾಯ ಯಕ್ಷಗಾನ ವಾಲಿವಧೆ ಏರ್ಪಡಿಸಲಾಗಿತ್ತು,
ಎ.ಪಿ. ಮಾಲತಿ ಅವರನ್ನು ನಿಮ್ಮ ಬಗ್ಗೆ ಮಾತಾಡಿ ಎಂದು ಕೇಳದೆ ಇದ್ದದ್ದು, ಕಮಲಾಕ್ಷಿ ಮಾತಾಡುವಾಗ ಪಟ ತೆಗೆಯಲು ಮರೆತದ್ದು ಇವು ಒಂದೆರಡು ಕೊರತೆಗಳು ಆಮೇಲೆ ಎದ್ದು ಕಂಡಿತು. ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂದು ಸಮಾಧಾನ ಪಟ್ಟುಕೊಂಡೆ!
ಮಗಂದಿರು, ಸೊಸೆಯಂದಿರು, ಮೊಮ್ಮಕ್ಕಳು ನಿಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರು. ಏನಾದರೂ ತಪ್ಪುಗಳು ಆಗಿದ್ದರೆ ಅದನ್ನು ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿಬಿಡಿ ಲಕ್ಷ್ಮಮ್ಮ. ನೀವು ಅವನ್ನೆಲ್ಲ ನೆನಪಿಟ್ಟುಕೊಳ್ಳುವವರಲ್ಲ ಎಂದು ಗೊತ್ತು ನಮಗೆ.
ನಿಮ್ಮ ಸೊಸೆ ಜಯಶ್ರೀ ೧೪ರಂದು ಅಮೇರಿಕಾಗೆ ಹೋದಳು. ಮಗ ಸೊಸೆಯರಾದ ಅಶೋಕ ದೇವಕಿಯರು ೧೬ರಂದು ಮಂಗಳೂರಿನೆಡೆಗೆ ತೆರಳಿದರು. ಈಗ ನೀವಿಲ್ಲದ ಈ ಮನೆಯಲ್ಲಿ ನಾವಿಬ್ಬರೇ ಇದ್ದೇವೆ. ನಿಮ್ಮ ಮಗ ಅನಂತ ಊಟ ಮಾಡಲು ಕೂರುವಾಗ ಅಬ್ಬೆಯನ್ನು ಊಟಕ್ಕೆ ಕರಿ ಎಂದು ಹೇಳುತ್ತಿರುತ್ತಾನೆ. ನೀವು ಆಗಾಗ ಹೇಳುತ್ತಿದ್ದ ಮಾತು ‘ಕಾಲಂ ಮಾರಿ ಪೋಚಿ’ ನೆನಪಾಗುತ್ತಿದೆ!
ನೀವೀಗ ಆ ಲೋಕದಲ್ಲಿ (ನಮಗೆ ಅದೃಶ್ಯಲೋಕವದು, ಅದನ್ನು ನಾವು ಕಲ್ಪನೆಯಲ್ಲಿ ಊಹೆ ಮಾಡಿಕೊಳ್ಳುತ್ತೇವೆ) ಮಾವನೊಡನೆ ಚೆನ್ನಾಗಿರಬಹುದು ಎಂದು ಭಾವಿಸುವೆವು. ನೀವು ಸಂಗೀತ, ಸಾಹಿತ್ಯ ಎಂದು ಸಭೆ ಸಮಾರಂಭಗಳಿಗೆ ಹೋಗುತ್ತ ಇರಬಹುದು ಎಂದು ಊಹಿಸುವೆವು. ನೀವು ಹೇಳಿದಂತೆ ಮಾವ ಈಗಲಾದರೂ ಕೇಳುತ್ತಿದ್ದಾರ?!
ಅಲ್ಲಿ ಶಾರದಮ್ಮನ ಭೇಟಿ ಆಯ್ತೆ? ಹೌದಾ ಅಲ್ವಾ ಲಕ್ಷ್ಮಮ್ಮ ನೀವೇ ಹೇಳಿ ಎಂದು ಮಾತು ಮಾತಿಗೂ ಶಾರದಮ್ಮ ಅಲ್ಲೂ ಹೇಳುತ್ತಿರುತ್ತಾರಾ?! ನೀವಿಬ್ಬರು ಇಲ್ಲಿ ಬಾಗಿಲ ಬಳಿ ಮೆಟ್ಟಲಲ್ಲಿ ಕೂತು ಮಾತಾಡುತ್ತಿದ್ದುದು ನೆನಪಾಗುತ್ತಿದೆ. ಆ ನೆನಪಿನ ಚಿತ್ರವನ್ನಿಲ್ಲಿ ಹಾಕಿರುವೆ.
ಇಲ್ಲಿ ಸಿದ್ದಮ್ಮ ಪ್ರತೀದಿನ ನಿಮ್ಮನ್ನು ನೆನಪಿಸಿಕೊಳ್ಳುತ್ತಿರುತ್ತಾಳೆ. ನಮ್ಮ ಅಮ್ಮಾವರು, ಬುದ್ಢಿಯವರು ಒಟ್ಟಿಗೆ ಇರುವ ಪೋಟೋ ಕೊಡಿ, ಮನೆಯಲ್ಲಿಟ್ಟುಕೊಳ್ಳುತ್ತೇನೆ. ಅವರೇ ನಮಗೆ ಜೀವನ ಕೊಟ್ಟವರು ಎಂದಿದ್ದಾಳೆ. ಅವಳಿಗೆ ನಿಮ್ಮ ಕಿವಿಯೋಲೆ ಕೊಟ್ಟಿದ್ದೇವೆ. ಅದನ್ನು ಬಲು ಪ್ರೀತಿಯಿಂದ ಹಾಕಿಕೊಂಡಿದ್ದಾಳೆ. ಯಾವತ್ತೂ ಅದನ್ನು ಕಿವಿಯಿಂದ ತೆಗೆಯುವುದಿಲ್ಲ ಎಂದಿದ್ದಾಳೆ.
ನಿಮ್ಮ ಜೀವನೋತ್ಸಾಹ ನಮಗೆಲ್ಲ ಪಾಟ. ನಿಮಗಿದ್ದ ವಾತದ ಅಸಾಧ್ಯ ನೋವಿನಲ್ಲೂ ನೀವು ಛಲದಿಂದ ನಿಮ್ಮ ಕೆಲಸವನ್ನು ನೀವೇ ಮಾಡುತ್ತಿದ್ದಿರಲ್ಲ. ನಡೆಯಲು ಕಷ್ಟವಾದರೂ ಛಲದೊಳ್ ದುರ್ಯೋಧನನಂತೆ ಎಂಬ ಭಾಷ್ಯದಂತೆ ಛಲ ಬಿಡದೆ ಓಡಾಡುತ್ತಿದ್ದಿರಿ. ನಿಮಗಿದ್ದ ಓದುವ ಉತ್ಸಾಹ ಎಲ್ಲ ಕಣ್ಣಿಗೆ ಕಟ್ಟುತ್ತಿದೆ.
ನೀವು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯಲು ಪ್ರಯತ್ನಿಸುತ್ತ, ಈ ಜೀವನರಥವನ್ನು ಮುನ್ನಡೆಸುತ್ತೇವೆ. ಇಲ್ಲಿಗೆ ಈ ಪತ್ರಕ್ಕೆ ಕೊನೆಹಾಡುತ್ತೇವೆ.
- ಇತಿ ನಿಮ್ಮ 3 ಮಗಂದಿರು, 3 ಸೊಸೆಯಂದಿರು, 4 ಮೊಮ್ಮಕ್ಕಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ