ಶನಿವಾರ, ಫೆಬ್ರವರಿ 24, 2018

ಅಜ್ಜಿಯೊಡನಾಟದ ಮಧುರ ನೆನಪುಗಳ ಬುತ್ತಿ

     ಅಕ್ಷರಿ ಅವಳಜ್ಜಿಯ ನೆನಪುಗಳ ಬುತ್ತಿಯನ್ನು ಇಲ್ಲಿ ಹಂಚಿಕೊಂಡಿದ್ದಾಳೆ. 

 ಅಜ್ಜಿಯೊಡನೆ ಕಳೆದ ದಿನಗಳು ನಿನ್ನೆ ಮೊನ್ನೆ ಎಂಬಂತೆ ಅನಿಸುತ್ತಿದೆ. ಮನಸ್ಸು ಭಾರವಾಗುತ್ತದೆ.   ಅಜ್ಜಿ ಇನ್ನು ಮುಂದೆ ನೆನಪು ಮಾತ್ರ ಎಂದು ಯೋಚಿಸಲು ಹಿಂಸೆ ಆಗುತ್ತದೆ.   ಹಾರ್ಟ್ ಅಟ್ಯಾಕ್ ಆಗಿ ನಿದ್ದೆಯಲ್ಲಿ ಪ್ರಾಣ ಹೋಗಿಬಿಡಬೇಕು,  ಇನ್ನು ನಾನು ಎಷ್ಟು ನೋವು ಅನುಭವಿಸುವುದು ಎಂದು ಅಜ್ಜಿ  ತೀರಿಹೋಗುವ ಒಂದು ವಾರದ ಮೊದಲು ಹೇಳಿದ್ದರು . ( ಅಜ್ಜಿ ವಾತದ ನೋವಿನಿಂದ ಬಳಲಿದ್ದರು). ೧.೧.೨೦೧೮ರ ಬೆಳಗಿನ ಝಾವ ಅಜ್ಜಿಯ ಇಚ್ಛೆಯಂತೆಯೇ ನಿದ್ದೆಯಲ್ಲೆ  ತೀರಿ ಹೋಗಿದ್ದರು. 

    ಅಜ್ಜಿಯನ್ನು ನಾನು ಏಕವಚನದಲ್ಲಿ    ಸಂಬೋಧಿಸುವಷ್ಟು   ಸಲಿಗೆ ಪ್ರೀತಿ.  ಬಾಲ್ಯದ ದಿನಗಳಲ್ಲಿ ಅಜ್ಜಿ ಎಷ್ಟೊಂದು ಕಥೆ ಹೇಳಿದ್ದರು,  ದೇವರ ಸ್ತೋತ್ರ ಹೇಳಿಕೊಟ್ಟಿದ್ದರು , ರಂಗೋಲಿಬಿಡಿಸಲು ಕಲಿಸಿದ್ದರು.  ಮನೆಯ ಅಂಗಳದ ತುಂಬ ನನ್ನ ರಂಗೋಲಿ (ಹೆಸರಿಗೆ ಮಾತ್ರ  ರಂಗೋಲಿ) ಕಂಗೊಳಿಸಿತ್ತು.  ಶಾಲೆಯಿಂದ ಬಂದು ಕಾಲು ನೋವು ಸೆಳೆತ ಎಂದು ರಾಗ ತೆಗೆದರೆ ಸಾಕು   ಪಂಚವಲ್ಲಿ  ತೈಲ ಮತ್ತು   ಕ್ರೇಪ್  ಬ್ಯಾಂಡೇಜ್   ಜೊತೆ ಹಾಜರು. ಚೆನ್ನಾಗಿ ಎಣ್ಣೆ ಹಾಕಿ ಮಾಲಿಷ್ ಮಾಡಿ  ಬ್ಯಾಂಡೇಜ್ ಕಟ್ಟಿದರೆ ಆಹಾ! ಏನು ಸುಖ.  ಒಂದನೆಯ ತರಗತಿಯಲ್ಲಿ ಇದ್ದಾಗ   ಲೆಕ್ಕ  ಪಾಠ ಹೊಸದು. ಕೈ ಕಾಲುಗಳು ನೋಡಿ ಕೂಡಿ ಕಳೆದು ಮಾಡಬೇಕಿತ್ತು.   ಶಾಲೆಗೆ ಶೂಸ್ ಹಾಕಿ ಬರಬೇಕೆಂಬ  ಕಟ್ಟುನಿಟ್ಟು ನಿಯಮವಿತ್ತು.  ನನಗೆ ಚಿಂತೆ.  ಹೇಗೆ ಕೂಡಿ-ಕಳೆದು ಮಾಡುವುದು ಕಾಲು ಬೆರಳು ನೋಡದೆ! ಎಂದು. ಅಜ್ಜಿ  ಆಪದ್ಭಾಂಧವಳಾಗಿ ಬಂದಳು ರಕ್ಷಣೆಗೆ.   ಕಾಲಿನ ಬೆರಳಿಗೆ ದೊಡ್ಡ ಬ್ಯಾಂಡೇಜ್ ಕಟ್ಟಿದಳು. ಕಾಲಿಗೆ ಗಾಯವಾಗಿದೆ ಎಂದು ಚಪ್ಪಲಿ ಹಾಕಿ ಹೋದೆ.    ಕಾಲು ಬೆರಳಿನ ಸಹಾಯದೊಂದಿಗೆ ಲೆಕ್ಕ ಮಾಡಿದೆ! ಈ ನೆನಪು ಹಚ್ಚಹಸಿರಾಗಿದೆ.   ಮನೆಯಲ್ಲಿ ಯಾರಾದರೂ    ಕೆಮ್ಮಿದರೆ  ಸಾಕು ಅಜ್ಜಿಗೆ ತಲೆಬಿಸಿ  ಶುರು.  ಜೇಷ್ಠಮಧು ಕೊಡಲ, ಕಷಾಯ ಕೊಡಲ ಎಂದು ಹಿಂದೆ ಮುಂದೆ ಓಡಾಡುತ್ತಿದ್ದಳು. 
         ಚಕ್ಕುಲಿ, ಕೋಡುಬಳೆ,  ತಂಬಿಟ್ಟುಂಡೆ ಹೀಗೆ ನಾನಾ ರೀತಿ ತಿಂಡಿ  ಮಾಡಿ ಕೊಡುತ್ತಿದ್ದಳು. ಒಂದು ಕಾಲದಲ್ಲಿ ಅಜ್ಜಿ ಮಾಡುವ ಕೇಸರಿ ಬಾತ್  ಮಾತ್ರ ನನಗೆ ಸೇರುತ್ತಿದ್ದುದು. ಸಣ್ಣವಳಾಗಿದ್ದಾಗ, ಎಲ್ಲಿಯೇ ಕೇಸರಿಬಾತ್ ತಿಂದರೂ ಅಜ್ಜಿ ಮಾಡುವ ಹಾಗಿಲ್ಲ ಎಂದು  ಮನಸ್ಸಿನಲ್ಲಿ  ಅಂದುಕೊಳ್ಳುತ್ತಿದ್ದೆ.  ರುಚಿಯಾದ  ಹುಣಸೆಗೊಜ್ಜು ಬೆಲ್ಲ ಕಡಿಮೆ ಹಾಕಿ ನನಗೆ ಬೇಕಾದ ಹಾಗೆ ಮಾಡಿಕೊಡುತ್ತಿದ್ದುದನ್ನು ಮರೆಯುವ ಹಾಗೇ ಇಲ್ಲ .  ಅದು ನನಗೆ ಅತ್ಯಂತ ಪ್ರಿಯ, ಪುಳಿಯೋಗರೆ ಗೊಜ್ಜು ಎಂದು ಸವಿಯುತ್ತಿದ್ದೆ.  ಮುಂದೆ ಅಜ್ಜಿಯ ವಾತ   ನೋವಿನಿಂದಾಗಿ ಅಡಿಗೆ ಮನೆಯಿಂದ ನಿವೃತ್ತಿ  ಹೊಂದಿದರೂ ಅಮ್ಮ  ಊರಿಗೆ ಹೋದ ಸಂದರ್ಭದಲ್ಲಿ ನಾನು ಹೇಳಿದೆ ಎಂದು ಅದನ್ನು ಮಾಡಿ  ಕೊಡುತ್ತಿದ್ದಳು. ಅಜ್ಜಿಯ ಅತ್ಯಂತ ಪ್ರಿಯ ಅಡಿಗೆ ಪಾಯಸ! ವಾರಕ್ಕೊಮ್ಮೆಯಾದರೂ ಪಾಯಸ ಮಾಡಬೇಕು ಎನ್ನುತ್ತಿದ್ದಳು.






ಶಾಲಾ ದಿನಗಳಲ್ಲಿ ನಮ್ಮ ಹುಟ್ಟುಹಬ್ಬದಂದು ಪ್ರತಿ ವರ್ಷ ಒಂದು ಗಿಡ ನೆಡಿ ಎಂದು ಹೇಳಿದ್ದರು. ನಾನು ಅತ್ಯಂತ ಉತ್ಸಾಹದಿಂದ  ಚಿಕ್ಕು ಗಿಡ ನೆಟ್ಟು ನೀರು ಹಾಕುತ್ತಿದ್ದೆ. ಸೋಂಬೇರಿತನ ಹೆಚ್ಚಾದಾಗ ಅಜ್ಜಿಯೇ ನನ್ನ ಪರವಾಗಿ ನೀರು ಹಾಕುತ್ತಿದ್ದಳು. ಶಾಲೆಯಿಂದ ಬಂದ ನಂತರ ಬುತ್ತಿ ತೊಳೆಯುವುದು ಎಂದರೆ ನನಗೆ ಬಹು ಉದಾಸೀನ ವಿಷಯ. ಅಜ್ಜಿಗೆ ಪುಸಲಾಯಿಸಿದರೆ ಸಾಕು ಅವಳೇ ತೊಳೆದಿಡುತ್ತಿದ್ದಳು. ನಾನು ತಪ್ಪು ಮಾಡಿ ಅಮ್ಮನ ಕೈಯಲ್ಲಿ ಬೈಗುಳ ಅಥವಾ ಒದೆ ತಿನ್ನುವ ಸಂದರ್ಭ ಬಂದರೆ ಸಾಕು ಅಜ್ಜೀ............. ಎಂಬ ಗಟ್ಟಿ ಕೂಗಿಗೆ ಬಂದು ನನಗೆ ರಕ್ಷಣೆ ನೀಡುತ್ತಿದ್ದಳು. ಹೋಗಲಿ ಬಿಡು ಇನ್ನೊಮ್ಮೆ ಇಂಥಹ ತಪ್ಪು ಮಾಡುವುದಿಲ್ಲ ಎಂದು ಸಮಜಾಯಿಷಿ ನೀಡಿ ನನಗೂ ಒಳ್ಳೆಯ ಬುದ್ಧಿಮಾತು ಹೇಳಲು ಮರೆಯುತ್ತಿರಲಿಲ್ಲ. ಸಣ್ಣವಳಿದ್ದಾಗ ಕೆಲವೊಮ್ಮೆ ತಟ್ಟೆಯಲ್ಲಿ ಹಾಕಿಕೊಂಡ ಊಟ ಅಥವಾ ತಿಂಡಿ ಹೆಚ್ಚಾದಾಗ ಮೆಲ್ಲಗೆ ಯಾರಿಗೂ ಕಾಣದಂತೆ ಅವಳ ತಟ್ಟೆಗೆ ದಾಟಿಸುತ್ತಿದ್ದೆ. ನಂತರ ನನಗೆ ಎಷ್ಟು ಬೇಕೋ ಅಷ್ಟೇ ಹಾಕಿಸಿಕೊಳ್ಳಬೇಕು, ಯಾವತ್ತೂ ತಟ್ಟೆಯಲ್ಲಿ ಬಿಡಬಾರದು ಎಂದು ಬುದ್ಧಿ ಮಾತು ಹೇಳಲು ಮರೆಯುತ್ತಿರಲಿಲ್ಲ.  ತುಂಬಾ ಚಿಕ್ಕವಳಿದ್ದಾಗ ನನ್ನನ್ನು ಎತ್ತಿಕೊಂಡು ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದಳಂತೆ. ಅವಳ ಸ್ನೇಹಿತೆಯರು ಬಯ್ಯುತ್ತಿದ್ದರಂತೆ, ಅವಳನ್ನು ಕೆಳಗೆ ಇಳಿಸಿ ಯಾಕೆ ಹೊರುತ್ತೀರ ಎಂದು. ಅವಳೇ ಅಗಾಗ ಈ ವಿಷಯ ಹೇಳಿ ನಗುತ್ತಿದ್ದಳು!  ನಾನು ತಲೆ ಕೂದಲಿಗೆ ಎಣ್ಣೆ ಹಾಕಿ  ಬೈತಲೆ   ಮಾಡಿ ಬಾಚಬೇಕು ಎಂದು ಸದಾ ಹೇಳುತ್ತಿದ್ದಳು. ಪ್ರತಿದಿನ ತಲೆಗೆ ಎಣ್ಣೆ ಹಾಕಿದ್ಯ  ಎಂದು ಕೇಳದಿದ್ದರೆ  ಸಮಾಧಾನವೇ ಆಗುತ್ತಿರಲಿಲ್ಲ. ಕೂದಲನ್ನು ಎತ್ತಿ ಬಾಚಬಾರದು  ಹಣೆ ಮೇಲೆ ಹೋಗುತ್ತದೆ, ಅಗಲ ಆಗುತ್ತದೆ  ಎನ್ನುತ್ತಿದ್ದಳು.   ಅಜ್ಜಿಯೊಡನೆ ಜಗಳವಾಗಿ ವಾದ ವಿವಾದ ಆದಾಗ ನಾನು  ಕೋಪಿಸಿಕೊಂಡರೆ ಕೋಪವೇಕೆ ತಾಪವೇಕೆ ಸುಬ್ಬಿ ಎಂದು ರಾಗವಾಗಿ ಹಾಡುತ್ತಿದ್ದಳು.  ಹುಬ್ಬುಗಂಟು ಹಾಕಿದರೆ ಹಣೆಯಲ್ಲಿ ನೆರಿಗೆ ಹೆಚ್ಚಾಗಿ ಮುಖದ ಚಂದ ಹೋಗುತ್ತದೆ ಎಂದು ಹೇಳುತ್ತಿದ್ದಳು. ನಾನು ಶಾಲಾ ಕಾಲೇಜಿಗೆ ಆಗಲಿ ಬೇರೆ ಎಲ್ಲೇ ಹೊರಗೆ  ಹೋಗುವ ಸಂದರ್ಭದಲ್ಲಿ ಪ್ರತಿದಿನ ಎಚ್ಚರಿಕೆ ನುಡಿಗಳಾಡಿ ಸಂಜೆ ಬೇಗ ಬಾ ಕತ್ತಲಾಗುವ ಮೊದಲು ಮನೆಗೆ ಬಾ ಎಂದು  ಹೇಳಲು ಮರೆಯುತ್ತಿರಲಿಲ್ಲ.  ತಡವಾದರೆ  ನಾನು  ಮನೆಗೆ ವಾಪಾಸು ಬರುವವರೆಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು.  ಈಗ ಏಳೆಂಟು ವರ್ಷಗಳಿಂದ ಯಾರೇ ಮನೆಗೆ ಬರಲು ತಡವಾದರೆ ಆತಂಕ ಪಡುತ್ತಿದ್ದಳು.  ಮನೆ ತಲುಪಿದೊಡನೆ ಅಬ್ಬಾ!  ಬಂದ್ಯಲ್ಲ  ಎಂದು    ಸಂತೋಷ ಪಡುತ್ತಿದ್ದಳು.  ಎಲ್ಲಿಗಾದರೂ  ಒಬ್ಬಳೇ ಹೊರಟರೆ ಅವಳಿಗೆ ಆಗುತ್ತಿದ್ದ ಆತಂಕ,  ಭಯ ಕಣ್ಣಿಗೆ ಕಟ್ಟುತ್ತದೆ.  ನಾನು ಈಗ  ದೊಡ್ಡ  ಹುಡುಗಿ ಯಾಕಿಷ್ಟು ಆತಂಕ ಪಡುತ್ತಿ  ಎಂದು ನಾನು ಕೋಪಿಸಿದರೆ  ನಿನಗೆ ಏನೂ ತಿಳಿಯುವುದಿಲ್ಲ.  ನೀನು ಇನ್ನೂ ಸಣ್ಣವಳು ಎಂದು ನನ್ನ ಬಾಯಿ  ಮುಚ್ಚಿಸಿ ಬಿಡುತ್ತಿದ್ದಳು. 









ನಮ್ಮ ಮದುವೆಯಾಗಿ ಚೆನ್ನೈನಲ್ಲಿ ಮನೆ ಮಾಡಿದಾಗ ನನ್ನ ಹಠದ ಮೇರೆಗೆ  ನಮ್ಮಲ್ಲಿ ಬಂದು ಎರಡು ದಿನ ಇದ್ದಳು.  ಶತಾಬ್ದಿ ರೈಲು ಇಳಿದು  ಪ್ಲಾಟ್ ಫಾರ್ಮ್ ಗಾಡಿ ಸಿಗದೆ ಕಾರಿನವರೆಗೆ ಕಷ್ಟವಾದರೂ ಸುಮಾರು ನಡೆದಿದ್ದಳು.  ಅಜ್ಜಿಗೆ ಬೇಕಾದ ಅಡಿಗೆ,  ಪಾಯಸ ಮಾಡಿದಾಗ ಬಾಯಿತುಂಬಾ ಹೊಗಳಿ   ಶಹಭಾಸ್ ಗಿರಿ ಕೊಟ್ಟಿದ್ದಳು.  ಎಲ್ಲಾ ಕೆಲಸ ಮಾಡುತ್ತಿ,  ಮನೆಯನ್ನು ಚೆನ್ನಾಗಿ  ಇಟ್ಟುಕೊಂಡಿದ್ದೀಯಾ ನೀನು ನನ್ನ ಮೊಮ್ಮಗಳೇ ಸರಿ ಎಂದು ಅಭಿನಂದಿಸಿದ್ದಳು.  ನಮ್ಮ ಪಕ್ಕದ ಮನೆಯವರು ಡಯಾಬಿಟಿಕ್  ಸ್ನೇಹಿ ಬಿಸ್ಕತ್ತು ಕೊಟ್ಟು ಅಜ್ಜಿಯ  ಕಾಲಿಗೆ ನಮಸ್ಕರಿಸಿದಾಗ ವಯಸ್ಸಾದ ಮುದುಕಿ ಖಂಡಿತಾ ಸಕ್ಕರೆ ಕಾಯಿಲೆ ಇದೆ ಎಂದು ತಿಳಿದಿರಬೇಕು ನಾನು ಉಪ್ಪಿನಕಾಯಿ ನೆಂಚಿ ಕೊಂಡ ಹಾಗೆ ಬೆಲ್ಲ ನೆಂಚಿ ಕೊಳ್ಳುತ್ತೇನೆ ಸಕ್ಕರೆ ಖಾಯಿಲೆ ಇಲ್ಲ ನನಗೆ  ಎಂದು ಅವರಿಗೆ  ಗೊತ್ತಿಲ್ಲ ಪಾಪ  ಎಂದು ಬಾಯಿ ತುಂಬಾ  ನಗಾಡಿದ್ದು ನೆನಪು. 

ಅಜ್ಜಿಯ  ನೆನಪಿನ ಶಕ್ತಿಯ ಬಗ್ಗೆ ಒಂದೆರಡು ಮಾತು ಹೇಳಲೇಬೇಕು.  ಅವಳು ಪ್ರವಾಸ  ಹೋದ ಜಾಗಗಳ ವಿವರಗಳನ್ನು ಆಗಾಗ ನಮಗೆ ಹೇಳುತ್ತ ನೆನಪಿಸಿಕೊಳ್ಳುತ್ತಿದ್ದಳು. ಪ್ರವಾಸ ಮಾಡಬೇಕು, ಹೊಸ ಊರು, ಜಾಗ ನೋಡಬೇಕು ಎಂದು ನಮಗೆ ಉಪದೇಶಿಸುತ್ತಿದ್ದಳು.  ಅವಳು ಹೋದ  ಜಾಗಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದಳು.  ನಮಗೋ   2 ವರ್ಷ  ಹಿಂದೆ ಹೋದ ಜಾಗವೂ ನೆನಪಿಲ್ಲವಲ್ಲ ಎಂದು  ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದೆವು. ನಮಗೆ ಯಾವುದಾದರೂ ವಿಷಯದ ಬಗ್ಗೆ ಮಾರನೆಯ ದಿನ ನೆನಪಿಸಬೇಕು ಎಂದು ರಾತ್ರಿ ವಿಷಯ ಹೇಳಿದರೆ ಸಾಕು, ಬೆಳಗ್ಗೆ ಆದ ಕೂಡಲೇ ನೆನಪಿಸುತ್ತಿದ್ದಳು. ಮಿತವ್ಯಯ ಯಾವತ್ತೂ ಒಳ್ಳೆಯದು. ಅನಾವಶ್ಯಕ ಖರ್ಚು ಮಾಡಬಾರದು ಹಣವನ್ನು ಉಳಿತಾಯ ಮಾಡಬೇಕು ಎಂದು ಯಾವತ್ತೂ ಹೇಳುತ್ತಿದ್ದಳು. ಅವಳು ಹೇಗೆ ಹಣ ಉಳಿಸಿ,  ಸಂಸಾರ ಸಾಗಿಸಿದಳು ಎಂದು ಗತ ನೆನಪಿಗೆ ಜಾರುತ್ತಿದ್ದಳು. ಅವಳ ನೆನಪಿನ ಶಕ್ತಿ ನೋಡಿ ನಮಗೆ ಯಾವತ್ತೂ ನಾಚಿಕೆಯಾಗುತ್ತಿತ್ತು. ಪ್ರತಿಯೊಂದು ಸಣ್ಣ ವಿಷಯವೂ ಅವಳಿಗೆ ನೆನಪಿರುತ್ತಿತ್ತು.. ಹೇಗೆ ಮೈಸೂರಿನ ಮನೆ ಕೊಂಡುಕೊಂಡದ್ದು, ಪ್ಲಾನ್ ಮಾಡಿ ಉಪ್ಪರಿಗೆಯಲ್ಲಿ ಕೋಣೆ ಕಟ್ಟಿಸಿದ್ದು ಎಂದು ಆಗಾಗ ವಿವರುಸುವುದಿತ್ತು. ಅವಳಿಗೆ ಹೊಸ ಮನೆ ಕಟ್ಟಲು ಪ್ಲಾನ್ ಮಾಡುವುದು ಭಾರೀ ಪ್ರಿಯವಾದ ವಿಷಯ. ಎಲ್ಲರೂ ಸ್ವಂತ ಮನೆ ಮಾಡಿಕೊಳ್ಳಬೇಕು, ಮನೆ ಇದ್ದರೆ ಎಷ್ಟೋ ಧೈರ್ಯ ಎಂದು ಹುರಿದುಂಬಿಸುತ್ತಿದ್ದಳು. ಎಷ್ಟೋ ಜನರಿಗೆ ಸ್ವಂತ ಮನೆ ಮಾಡಲು ಸ್ಪೂರ್ಥಿಯಾಗಿದ್ದಾಳೆ, ಪ್ರೋತ್ಸಾಹಿಸಿದ್ದಾಳೆ, ಒತ್ತಾಯವೂ ಮಾಡಿದ್ದಾಳೆ.  ಮನೆ ಮಾಡುವ ಪ್ಲಾನ್ ಎಲ್ಲಿವರೆಗೆ ಬಂತು ಎಂದು ಕಂಡಾಗಲೆಲ್ಲ ಪ್ರಶ್ನೆ ಮಾಡಿ, ಆದಷ್ಟು ಬೇಗ ಕೆಲಸ ಶುರು ಮಾಡಿ ಎಂದು ನೆನಪಿಸಲು ಮರೆಯುತ್ತಿರಲಿಲ್ಲ. ಮನೆಯಲ್ಲಿ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿ  ತುಂಬಾ ಉಪಯುಕ್ತ ಎಂದು ಹೇಳಲು ಮರೆಯುತ್ತಿರಲಿಲ್ಲ.  ಹೊಸ ಮನೆ ನೋಡುವುದು ಅವಳಿಗೆ ಅತ್ಯಂತ ಇಷ್ಟದ ವಿಷಯ. ಅವಳ ಸಂಭ್ರಮ ಕಣ್ಣ ಮುಂದೆ ಬರುತ್ತದೆ. ಅವಳಿಗೆ ಇನ್ನೊಂದು ಪ್ರಿಯ ವಿಚಾರವೆಂದರೆ ಹಾಡು ಹೇಳು ಎಂದು ಹೇಳುವುದು. ಒಂದು ಕನ್ನಡ ಹಾಡು ಹಾಡು ಎಂದು ಯಾವತ್ತೂ ಹೇಳುತ್ತಿದ್ದಳು ನನಗೆ. ಯಾರೇ ಹಾಡಲು ಗೊತ್ತಿರುವವರು ಮನೆಗೆ ಬಂದರೂ ಅವರಲ್ಲಿ ಹಾಡಿಸದೆ ಬಿಡುತ್ತಿರಲಿಲ್ಲ. ಹಾಡು ಕೇಳಲು ಅಷ್ಟು ಇಷ್ಟ ಅವಳಿಗೆ. ಮನೆಗೆ ಬಂದ ಪ್ರತಿಯೊಬ್ಬ ನೆಂಟರೊಡನೆ, ಅವರು ಕೆಲಸ ಮಾಡುವ ಕ್ಷೇತ್ರ, ವಿಷಯದ ಬಗ್ಗೆ ಪ್ರಶ್ನೆ ಕೇಳುವ ಅಜ್ಜಿಯ  ಕಲೆಗೆ, ಜಾಣ್ಮೆಗೆ ನಾವು ಮೂಕವಿಸ್ಮಿತರಾಗುತ್ತಿದ್ದೆವು. ಪ್ರತಿ ವಿಷಯದಲ್ಲೂ ಅತೀವ ಆಸಕ್ತಿ, ಕುತೂಹಲ.  

    ಅವಳಿಂದ ನಮಗೆ ಕಲಿಯಲು ಅನೇಕ ವಿಷಯಗಳಿವೆ. ಅವಳ ಶ್ರದ್ಧೆ, ಭಕ್ತಿ, ಜಾಣ್ಮೆ, ತಾಳ್ಮೆ, ಹಾಸ್ಯಪ್ರವೃತ್ತಿ, ಸ್ವಾವಲಂಬನೆ  ಪರೋಪಕಾರ, ಅಚ್ಚುಕಟ್ಟುತನ, ಛಲ, ಓದುವ ಹವ್ಯಾಸ, ಹೀಗೆ ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಅವಳಿಗೆ ಜೀವನದ ಮೇಲಿದ್ದ ಪ್ರೀತಿ, ಒಲವು ಇತರರಿಗೆ ಮಾದರಿ. ವಾತನೋವಿನಿಂದ ನರಳುತ್ತಿದ್ದರೂ ಅವಳ ಜೀವನೋತ್ಸಾಹ ಯಾವತ್ತೂ ಇನಿತೂ  ಕುಂದಿರಲಿಲ್ಲ. ಅವಳ ಕೆಲಸ ಅವಳೇ ಮಾಡಿಕೊಳ್ಳುತ್ತಿದ್ದಳು. ಅವಳ ಈ ಸ್ವಾವಲಂಬನೆ ನಮಗೆ ಮಾದರಿ.   



ನನಗೆ ಅತೀ ಪ್ರಿಯವಾದ ಮನೆ ಅಜ್ಜ ಮತ್ತು ಅಜ್ಜಿ ಇಬ್ಬರೂ ನಮ್ಮೊಡನೆ ಈಗ ಇಲ್ಲ ಎಂದು ನೆನೆಸಿಕೊಳ್ಳುವಾಗ ಬಹು ದುಃಖವಾಗುತ್ತದೆ. ಜೀರ್ಣಿಸಲು ಕಷ್ಟವಾಗುತ್ತದೆ. ಕೆಲವೊಮ್ಮೆ ಅವರಿಲ್ಲ ಎಂಬುದು ಕನಸೇನೋ ಎಂದು ಅನಿಸುತ್ತದೆ.  ಅಜ್ಜಿ ಯಾವತ್ತೂ  ಹೇಳುತ್ತಿದ್ದ ಮಾತು ‘ಶ್ರೀನಿವಾಸ ದೈವಲೀಲೆ’, ‘ಧರ್ಮಸ್ಥಳದ ಮಂಜುನಾಥ ಕಾಪಾಡಪ್ಪ ಅನವರತ,’  ‘ಕಾಲಂ ಮಾರಿಪೋಚಿ’ ಸದಾ ನೆನಪಾಗುತ್ತಿರುತ್ತದೆ. ಅಜ್ಜಿ ಅಜ್ಜ ಸಂತೋಷದಿಂದ ತುಂಬು ಜೀವನ ನಡೆಸಿದರು ಎನ್ನುವುದು ನಮಗೆ ತೃಪ್ತಿ ಮತ್ತು ಅವರು ಕಲಿಸಿದ ಮಾರ್ಗದಲ್ಲಿ ನಾವು ಮುನ್ನಡೆಯುವುದೇ ನಾವು ಅವರಿಗೆ ತೋರುವ ಶ್ರದ್ಧಾಂಜಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ