ಮಂಗಳವಾರ, ಫೆಬ್ರವರಿ 27, 2018

ಸ್ಕಂದಗಿರಿ, ನಂದಿಬೆಟ್ಟ, ಮಾಕಳಿದುರ್ಗ

ಎರಡು ದಿನದಲ್ಲಿ ಮೂರು  ಬೆಟ್ಟಗಳ ಚಾರಣ 
ಸ್ಕಂದಗಿರಿ ಬೆಟ್ಟದ ಬಗ್ಗೆ ಯಾವುದೋ ಪತ್ರಿಕೆಯಲ್ಲಿ ಲೇಖನ ಬಂದದ್ದನ್ನು ಓದಿದಾಗ ಆ ಬೆಟ್ಟ ಹತ್ತಿ ಸೂರ್ಯೋದಯ ನೋಡಬೇಕು ಎಂಬ ಆಸೆ ಮೊಳೆತಿತ್ತು. ಆ ಆಸೆ ಬಲುಬೇಗ ಈಡೇರಿತು.
      ನಾವು ೨೦ ಮಂದಿ ೨೬-೧-೨೦೧೮ರಂದು ರಾತ್ರೆ ಮೈಸೂರಿನಿಂದ ಮಿನಿಬಸ್ಸಿನಲ್ಲಿ ಹೊರಟೆವು. ೯ ಗಂಟೆಗೆ ಎಲ್ಲರೂ ವಾರ್ತಾಭವನದ ಬಳಿ ಹಾಜರಿರಬೇಕು ಎಂದು ಆಯೋಜಕರು ಹೇಳಿದ್ದರು. ೮.೫೫ಕ್ಕೆ ಬಸ್ ವಾರ್ತಾಭವನದ ಬಳಿ ತಲಪಿತ್ತು. ೯.೩೦ಗೆ ಎಲ್ಲರೂ ಬಂದು ಬಸ್ ಹತ್ತಿದರು. ಆದರೂ ಬಸ್ ಹೊರಡುತ್ತಿಲ್ಲ. ಕಾರಣವೇನೆಂದರೆ ಬಸ್ಸಿನ ದಾಖಲೆ ಪತ್ರ ತರುವುದನ್ನು ಚಾಲಕ ಮರೆತಿದ್ದರು! ಅಂತೂ ಪತ್ರ ಕೈಸೇರಿ ಬಸ್ ಹತ್ತು ಗಂಟೆಗೆ ಮೈಸೂರು ಬಿಟ್ಟಿತು. ನಾಗೇಂದ್ರಪ್ರಸಾದ್ ಚಾಲಕ ಸುರೇಶ್ ಅವರ ಬಳಿಯೇ ಕೂತು ಮಾತಾಡಿಸುತ್ತ, ಅವರಿಗೆ ನಿದ್ರೆ ಬರದಂತೆ ಕಾಳಜಿ ವಹಿಸಿದ್ದರು. ಎರಡು ಮೂರು ಕಡೆ ನಿಲ್ಲಿಸಿ ಚಹಾ ಕುಡಿದು ಸುಧಾರಿಸಿ, ಬೆಂಗಳೂರು ಹೈದರಾಬಾದ್ ರಸ್ತೆಯಾಗಿ ಚಿಕ್ಕಬಳ್ಳಾಪುರದ ಪಾಪಾಗ್ನಿಮಠ ತಲಪಿದಾಗ ೨೭-೧-೧೮ರಂದು ಬೆಳಗ್ಗೆ ಗಂಟೆ ೨.೪೫. ಅಲ್ಲಿಯ ಓಂಕಾರಾಶ್ರಮದಲ್ಲಿ ಮುಖಮಾರ್ಜನ ಮುಗಿಸಿ ಹೊರಟು ತಯಾರಾದೆವು.


 ಸ್ಕಂದಗಿರಿಗೆ ಕತ್ತಲೆಯಲ್ಲಿ ಚಾರಣ
ಎಲ್ಲರೂ ಸೇರಿ ಬೆಳಗ್ಗೆ ೩.೩೦ಕ್ಕೆ ಬೆಟ್ಟದತ್ತ ನಡಿಗೆ ಪ್ರಾರಂಭಿಸಿದೆವು.. ಸಮುದ್ರ ಮಟ್ಟದಿಂದ ಸುಮಾರು 1530 ಮೀಟರ್‌ ಎತ್ತರದಲ್ಲಿರುವ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಸ್ಕಂದಗಿರಿಗೆ  ಕಳವಾರ ಗ್ರಾಮದ ಪಾಪಾಘ್ನಿ ಮಠದ ಹಿಂಬದಿಯಿಂದ ನಡೆಯಲು ಪ್ರಾರಂಭಿಸಬೇಕು.
 
 ಅರಣ್ಯ ಇಲಾಖೆಯ ಸಿಬ್ಬಂದಿಗಳು ಇರುವ ಮರದ ಮನೆ ಎದುರು ತಲಪಿ, ಅಲ್ಲಿ  ಶುಲ್ಕ ಪಾವತಿಸಿ ಅವರಿಂದ ಅನುಮತಿ ಪಡೆದು ಸಾಗಿದೆವು. ಒಬ್ಬರಿಗೆ  ರೂ.೪೫೦. ಅಂತರ್ಜಾಲದಲ್ಲೂ  ಪ್ರವೇಶ ಶುಲ್ಕ ಕಟ್ಟಿ ದಿನ ಕಾದಿರಿಸಬಹುದಂತೆ. ಅರಣ್ಯ ಇಲಾಖೆಯ ಶ್ರೀಕಲಾ ಎಸ್.ವಿ. ಅವರನ್ನು ಚರವಾಣಿಯಲ್ಲಿ ೯೯೦೧೮೫೨೭೫೨ ಸಂಪರ್ಕಿಸಬಹುದು. ಒಂದು ದಿನಕ್ಕೆ ನೂರಕ್ಕಿಂತ ಹೆಚ್ಚು ಮಂದಿಗೆ ಪ್ರವೇಶ ಕೊಡುವುದಿಲ್ಲವಂತೆ. ಪಾಪಾಗ್ನಿಮಠದಿಂದ ಕೇವಲ ಎರಡು ಕಿ.ಮೀ ದೂರ ಸ್ಕಂದಬೆಟ್ಟಕ್ಕೆ. ಅಂಥ ಕಷ್ಟದ ದಾರಿಯಲ್ಲ ಎಂದು ಅರಣ್ಯ ಇಲಾಖೆಯವರು ಫಲಕದಲ್ಲಿ ಹಾಕಿದ್ದರು.
ಎಲ್ಲರ ಕೈಯಲ್ಲಿ ಟಾರ್ಚ್ ಬೆಳಗುತ್ತಿತ್ತು. ಮುಂದೆ ಯಾರಿದ್ದಾರೆ, ಹಿಂದೆ ಯಾರಿದ್ದಾರೆ? ದಾರಿ ಹೇಗಿದೆ ಕಾಣುತ್ತಿರಲಿಲ್ಲ. ಟಾರ್ಚ್ ಬೆಳಕು ಬಿದ್ದ ದಾರಿಯಷ್ಟೇ ಗೋಚರ. ಟಾರ್ಚ್ ಬೆಳಕಿನಲ್ಲಿ ಅಲ್ಲಲ್ಲಿ ಸಣ್ಣಕಲ್ಲು , ದೊಡ್ದಕಲ್ಲುಗಳಷ್ಟೇ ನಮಗೆ ಕಾಣುತ್ತಿದ್ದುದು.ಕೆಲವೆಡೆ ಬಂಡೆ ಏರಬೇಕಿತ್ತು, ಇನ್ನು ಕೆಲವುಕಡೆ ಬಂಡೆಗಳ ನಡುವೆ ನುಸುಳಬೇಕಿತ್ತು. ನಡೆದಷ್ಟೂ ಗಮ್ಯ ಸ್ಥಾನ ಸಿಗಲೊಲ್ಲದು. ಅಲ್ಲಲ್ಲಿ ನಿಲ್ಲುತ್ತ, ವಿಶ್ರಮಿಸುತ್ತ, ಹಿಂದಿದ್ದವರು ಬಂದಮೇಲೆ ಮುಂದೆ ನಡೆದೆವು. ಇನ್ನೂ ಎಷ್ಟು ಹತ್ತಬೇಕಪ್ಪ ಎಂಬ ಭಾವ ಆಗಾಗ ಮನದಲ್ಲೇಳುತ್ತಲಿತ್ತು.


     ಇದುವರೆಗೆ ಹತ್ತಿಪ್ಪತ್ತು ಬೆಟ್ಟಗಳಿಗೆ ಚಾರಣ ಹೋಗಿರುವೆ, ಆದರೆ ರಾತ್ರೆ ಟಾರ್ಚ್ ಬೆಳಕಲ್ಲಿ ನನ್ನ ಚಾರಣ ಇದೇ ಸುರುವಿನದಾಗಿತ್ತು. ತಂಗಾಳಿಯಲ್ಲಿ ನಡೆಯುವುದೇ ವಿಶಿಷ್ಟ ಅನುಭವ. ಬೆಟ್ಟ ಹತ್ತುತ್ತ, ಹಿಂದೆ ತಿರುಗಿ ನೋಡಿದಾಗ ದೂರದಲ್ಲಿ ಪಟ್ಟಣದ ಬೀದಿದೀಪಗಳು ಫಳ ಫಳ ಹೊಳೆಯುವುದು ನೋಡಲು ಬಲು ಸೊಗಸಾಗಿತ್ತು. ದಾರಿಯಲ್ಲಿ ನಮಗೆ ಯಾವುದೇ ಕೀಟಗಳು, ವಿಷ ಜಂತುಗಳು ಕಾಣಲಿಲ್ಲ. ಕೀಟಗಳ ಸದ್ದೂ ಕೇಳಿರಲಿಲ್ಲ. ಸದ್ದೆಲ್ಲ ಮನುಜರದ್ದೇ. ನಮ್ಮ ಮುಂದೆ ಸುಮಾರು ಮಂದಿ ಬೆಟ್ಟ ಹತ್ತುತ್ತಿದ್ದರು. ಅವರ ಮಾತು ಬೊಬ್ಬೆ ಕೇಳುತ್ತಲಿತ್ತು. ಎರಡು ಕಿಮೀ.ಅಲ್ಲವೇ ಅಲ್ಲ. ಎಷ್ಟು ದೂರವಿದೆ. ಇದಂತೂ ಸುಲಭದ ದಾರಿಯಲ್ಲ ಎಂದು ಕೆಲವರು ಉದ್ಗರಿಸಿದರು. ನಾವು ನಡೆದೆವು, ನಡೆದೆವು. ಅಂತೂ  ಬೆಳಗ್ಗೆ ಆರು ಗಂಟೆಗೆ ಸ್ಕಂದಬೆಟ್ಟದ ತುದಿ ತಲಪಿದೆವು. ಹತ್ತಲು ಒಟ್ಟು ಎರಡು ಗಂಟೆ ಸಮಯ ಬೇಕಾಯಿತು. ಬೆಳಕು ಇನ್ನೂ ಪಸರಿಸಿರಲಿಲ್ಲ. ಬೆಟ್ಟದಮೇಲೆ ಪಾಳುಬಿದ್ದ ಗುಡಿ ಇದೆ. ಗುಡಿಯೊಳಗೆಶಿವಲಿಂಗ, ಬಸವನ ಮೂರ್ತಿಗಳಿವೆ. ನಮಗಿಂತ ಮೊದಲು ಬಂದ ಬೇರೆ ಊರಿನವರು ಚಳಿ ತಡೆಯಲಾರದೆ  ಶೂ ಧರಿಸಿಯೇ ಗುಡಿಯೊಳಗೆ ಕೂತಿದ್ದರು. ಬಾಳೆಹಣ್ಣು ತಿಂದು ಸಿಪ್ಪೆ ಕೂಡಅಲ್ಲೇ ಎಸೆದಿದ್ದನ್ನು ನೋಡಿ ವಿಷಾದವಾಯಿತು.


   ಬೆಟ್ಟದ ಮೇಲೆ ಕುಳಿರ್ಗಾಳಿ ಬೀಸಿ ನರನಾಡಿಗಳಲ್ಲಿ ಸಂವೇದನೆ ಮೂಡಿಸುತ್ತಿತ್ತು. ಅಲ್ಲಿ  ಕೆಲವರು ಅಲ್ಲಲ್ಲಿ ಬೆಂಕಿ ಹಾಕಿ ಚಳಿ ಕಾಯಿಸುತ್ತ ಕೂತಿದ್ದರು. ನಮ್ಮವರೂ ಚಳಿ ತಡೆಯಲಾಗದವರು ಬೆಂಕಿ ಬಳಿ ಕೂತರು. ಕೆಲವರು ಚಳಿಅಂಗಿ ಧರಿಸಿರಲಿಲ್ಲ.ಅವರಿಗಂತೂ ಚಳಿ ತಡೆಯುವುದು ಕಷ್ಟವಾಗಿತ್ತು. ವೈದ್ಯನಾಥ್ ವಿಜಯಲಕ್ಷ್ಮೀ ದಂಪತಿಗಳು ಅಗ್ನಿಸಾಕ್ಷಿಯಾಗಿ ಚಳಿ ಕಾಯಿಸಿದ್ದನ್ನು ಕ್ಯಾಮರಾದಲ್ಲಿ ಸೆರೆಹಿಡಿದೆ!


   


ಬೆಳಗಿನ ಝಾವದಲ್ಲಿ ಬೆಟ್ಟದ ತುದಿಯಲ್ಲಿ ನಿಂತು ಸುತ್ತಲೂ ನೋಡುವುದು ಆಹಾ ಎಂಥ ಆನಂದದ ಕ್ಷಣವದು. ಸೂರ್ಯನ ದರ್ಶನ ಇನ್ನೂ  ಆಗಿರಲಿಲ್ಲ. ಆಗಸ ನಸು ಕೆಂಬಣ್ಣದಲ್ಲಿ ಕಾಣುವಾಗ ಭಾಸ್ಕರ ಏಳಲು ತಯಾರಿ ನಡೆಸುತ್ತಿದ್ದಾನೆಂದು ಅರ್ಥ!  ಆರೂವರೆಯಾಯಿತು. ಇನ್ನೂ ಸೂರ್ಯ ಮೇಲೇಳಿರಲಿಲ್ಲ. ಯಾಕೋ ಸತಾಯಿಸುತ್ತೀಯಾ? ನಿನ್ನ ನೋಡಲೆಂದು ನಾವು ನಿದ್ದೆ ಬಿಟ್ಟು ಕಷ್ಟಪಟ್ಟುರಾತ್ರೆ ಬೆಟ್ಟ ಹತ್ತಿ ಬಂದಿದ್ದೇವೆ. ಬೇಗ ಬಾರೋ ಎಂದು  ಎಲ್ಲ ಬೊಬ್ಬೆ ಹಾಕಿದರು. ಅಂತೂ ೬.೫೫ಕ್ಕೆ ಮಿತ್ರ ಕೆಂಪುಚೆಂಡಿನಂತೆ ಕಂಡು ಮೆಲ್ಲನೆ ಇಣುಕಿ ನೋಡಲು ಸುರುಮಾಡಿದ. ಎಂಥ ಚಂದದ ನೋಟವದು.  ಸಣ್ಣ ಮಗುವನ್ನು ತಾಯಿ ನಿದ್ದೆಯಿಂದ ಎಬ್ಬಿಸಿದಾಗ ಕಣ್ಣುಜ್ಜುತ್ತ ಮೇಲೆ ಏಳುತ್ತಲ್ಲ ಹಾಗೆಯೇ ಈ ಬಾಲಸೂರ್ಯನೂ ಕಣ್ಣುಜ್ಜುತ್ತ ಎದ್ದಂತೆ ಭಾಸವಾಯಿತು. ಎಂಥ ಮನಮೋಹಕ ದೃಶ್ಯವದು. ಆಗಸದ ಬಣ್ಣ ಕ್ಷಣಕ್ಕೊಮ್ಮೆ ಬದಲಾಗುತ್ತ, ಸೂರ್ಯ ಸ್ವಲ್ಪ ಸ್ವಲ್ಪವೇ ಮೇಲೇರಿ ಬರುವ, ಮೇಲೆಬಂದಂತೆ ಪ್ರಖರತೆ ಜಾಸ್ತಿ ಆಗುತ್ತ ಹೋಗುವ ದೃಶ್ಯ ನೋಡುವುದೇ ಬಲು ಸೊಗಸು.







  ಹೀಗೆ ರಾತ್ರಿ ನಿದ್ದೆಕೆಟ್ಟು, ಟಾರ್ಚ್ ಹಿಡಿದು  ಬೆಟ್ಟ ಏರಿ ಸೂರ್ಯೋದಯ ನೋಡಲು ಹೋಗಬೇಕಾ? ನಿಮ್ಮೂರಲ್ಲೇ ಸೂರ್ಯ ಉದಯ ಕಾಣುವುದಿಲ್ಲವೆ? ಎಂಬ ಪ್ರಶ್ನೆ ಬರಬಹುದು. ಆದರೆ, ತಂಗಾಳಿಯಲ್ಲಿ ನಡುಗುತ್ತ, ಹೀಗೆ ಒಟ್ಟಿಗೆ ನಿಂತು, ಹರಟುತ್ತ ಭಾಸ್ಕರನ ಆಗಮನಕ್ಕೆ ಕಾಯುವುದಿದೆಯಲ್ಲ ಅದರಲ್ಲಿ ಸಿಕ್ಕುವ ಆನಂದ ವರ್ಣಿಸಲು ಸಾಧ್ಯವಿಲ್ಲ. ಬೆಟ್ಟದ ತುದಿಯಲ್ಲಿ ಕುಳಿತು ಬೆಟ್ಟದ ಕೆಳಗೆ, ಸುತ್ತಲಿನ ಪ್ರಕೃತಿ ವೈವಿಧ್ಯವನ್ನು ನೋಡುತ್ತ ಕಾಲ ಕಳೆದೆವು.





















   ಭಾನು  ಮೆಲ್ಲಮೆಲ್ಲನೆ ಮೇಲೆಬಂದು ತನ್ನ ಪ್ರಖರತೆಯನ್ನು ಹೆಚ್ಚುಗೊಳಿಸಿದ. ತೀಕ್ಷಗೊಂಡ ಸೂರ್ಯನನ್ನು ನೋಡಲು ಯಾರಿಗೂ ಉಮೇದಿಲ್ಲ! ಇನ್ನು ಹೊರಡೋಣವೆಂದು ಆಯೋಜಕರು ಎಲ್ಲರನ್ನೂ ಹೊರಡಿಸಿದರು. ನಮ್ಮ ತಂಡದ ಚಿತ್ರ ತೆಗೆಸಿಕೊಂಡು ೭.೩೦ಕ್ಕೆ ಬೆಟ್ಟ ಇಳಿಯಲು ತೊಡಗಿದೆವು. ಬೆಳಕು ಹರಿದಾಗ ನಾವು  ಬಂದ ದಾರಿಯನ್ನು ನೋಡಿ ಓಹೋ ನಾವು ಇಂಥ ಸ್ಥಳದಲ್ಲಿ ಹತ್ತಿ ಬಂದಿದ್ದೇವಲ್ಲ ಎಂದು ಉದ್ಘರಿಸಿದೆವು. ಕುರುಚಲು ಪೊದೆಗಳಿಂದ ಕೂಡಿದ ಸಸ್ಯಗಳಿದ್ದುವು. ಬಂಡೆಗಳನ್ನು ಇಳಿಯಲು ಕೆಲವರಿಗೆ ತುಸು ಕಷ್ಟವಾಯಿತು. ಇಳಿಯಲು ಕಷ್ಟವಾಗುವವರ ಕೈ ಹಿಡಿದು ಸುರಕ್ಷಿತವಾಗಿ ಇಳಿಸಿಕೊಳ್ಳಲು  ನಮ್ಮ ತಂಡದ ಕಲವರು ನೆರವಾದರು . ೯ ಗಂಟೆಗೆ ನಾವು ಪಾಪಾಗ್ನಿಮಠ ತಲಪಿದೆವು. ಇನ್ನು ಕೆಲವು ಮಂದಿ ಬಂದು ಸೇರುವಾಗ ೯.೪೫  ಗಂಟೆಯಾಗಿತ್ತು. ಇಡ್ಲಿ, ವಡೆ ಚಟ್ನಿ ತಿಂದೆವು.

 ಪಾಪಾಗ್ನಿಮಠದ ಕಾಶಿವಿಶ್ವನಾಥ ದೇವಾಲಯ ನೋಡಿದೆವು. ಅಲ್ಲಿಯ ಅರ್ಚಕರಿಗೆ ಕನ್ನಡ ಬಾರದು. ಅಲ್ಲಿಯ ಸ್ಥಳಪುರಾಣವನ್ನು ತೆಲಗು ಭಾಷೆಯಲ್ಲಿ ಅವರು ಏನು ಹೇಳಿದರೆಂದು ನನಗರ್ಥವಾಗಲಿಲ್ಲ. ತೆಲುಗು ಲೇದು ಎಂದೆ! ಮುನಿಯಮ್ಮ, ತಿಮ್ಮರಾಯಮ್ಮ ಇತ್ಯಾದಿ ಕೆಲವು ಹೆಂಗಸರು ದೇವಾಲಯದ ಸುತ್ತ ಭಿಕ್ಷೆ ಬೇಡುತ್ತ ಇರುವುದು ಕಂಡಿತು. ಮೊದಲು ನಾವೂ ಕೆಲಸ ಮಾಡುತ್ತಿದ್ದೆವು. ಈಗ ವಯಸ್ಸಾಯಿತು ಕೆಲಸ ಮಾಡಲು ಆಗುತ್ತಿಲ್ಲ ಅದಕ್ಕೆ ಭಿಕ್ಷೆ ಕೇಳುತ್ತಿದ್ದೇವೆ. ವಿಶ್ವನಾಥ ದಾರಿ ತೋರಿಸುತ್ತಾನೆ. ಎಂದು ಅವರು ಸಮಜಾಯಿಸಿ ಕೊಟ್ಟರು. ಮುನಿರಾಯಮ್ಮಳಿಗೆ ಮಾರುದ್ದದ ಜಟೆ ಇದೆ. ಫೋಟೋ ತೆಗೆಯಬಹುದಾ ಎಂದು ಅವಳನ್ನು ಕೇಳಿ ಅವಳನುಮತಿ ಸಿಕ್ಕಮೇಲೆ ಕ್ಲಿಕ್ಕಿಸಿದೆ.





ವಿಶ್ವೇಶ್ವರಯ್ಯನ ಹುಟ್ಟೂರು ಮುದ್ದೇನಹಳ್ಳಿ
 ನಾವು ೧೦.೩೦ ಗಂಟೆಗೆ ಪಾಪಾಗ್ನಿಮಠದಿಂದ ಹೊರಟು ೨-೩ಕಿಮೀ ದೂರದ ಮುದ್ದೇನಹಳ್ಳಿಗೆ ಹೋದೆವು. ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟೂರು. ಅಲ್ಲಿ ಅವರ ಸಮಾಧಿ ಸ್ಥಳ, ಮ್ಯೂಸಿಯಂ ಹಾಗೂ ಅವರ ಮನೆ ನೋಡಿದೆವು. ಅವರಲ್ಲಿದ್ದ ಕತೃತ್ತ್ವ ಶಕ್ತಿಯಲ್ಲಿ ಒಂದು ಬಿಂದುವಿನಷ್ಟಾದರೂ ನಮಗೂ ಬಂದರೆ ಸಾಕು ಎಂದು ಅವರ ಸಮಾಧಿಗೆ ನಮಸ್ಕರಿಸಿದೆವು. ಅಲ್ಲಿ ನಮ್ಮ ತಂಡದ ಫೋಟೋ ತೆಗೆಸಿಕೊಂಡೆವು. ವಸ್ತು ಸಂಗ್ರಹಾಲಯದಲ್ಲಿ ಭಾರತರತ್ನ ಪ್ರಶಸ್ತಿ, ಇತರೆ ಪ್ರಶಸ್ತಿ ಫಲಕಗಳು, ಗಣ್ಯರೊಂದಿಗಿನ ಫೋಟೋಗಳು, ಅವರು ಉಪಯೋಗಿಸುತ್ತಿದ್ದ ದೊಣ್ಣೆ, ಪೆನ್ನು, ಮಂಚ, ಅವರ  ಪ್ರತಿಮೆ ಇತ್ಯಾದಿಗಳನ್ನು ಮೂರು ಕೋಣೆಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಿಟ್ಟಿದ್ದಾರೆ. ಉಚಿತ ಪ್ರವೇಶವಿದೆ.   ಅವರು ವಾಸವಾಗಿದ್ದ ಮನೆಗೆ ಪ್ರವೇಶವಿಲ್ಲ.




ನಂದಿಗ್ರಾಮದ ಬೋಗನಂದೀಶ್ವರ ದೇವಾಲಯ
  ಮುದ್ದೇನಹಳ್ಳಿಯಿಂದ ಹೊರಟು ಅನತಿ ದೂರದಲ್ಲಿರುವ ನಂದಿಗ್ರಾಮದ ಭೋಗನಂದೀಶ್ವರ ದೇವಾಲಯಕ್ಕೆ ಹೋದೆವು. ಬಲು ಪ್ರಾಚೀನವಾದ ಈ ದೇವಾಲಯದ ಪ್ರಾಂಗಣವೇ ಕೆಲವು ಎಕರೆಗಳಷ್ಟಿವೆ. ಪಾರ್ವತಿ ಮತ್ತು ಭೋಗನಂದೀಶ್ವರ ದೇವಾಲಯದ ಒಳಗೆ ಬಲು ಸುಂದರವಾದ ಕೆತ್ತನೆಗಳಿರುವ ಮಂಟಪಗಳಿವೆ. ಕಲ್ಲಿನಲ್ಲೇ ಕೆತ್ತಿರುವ ಛತ್ರಿಯಂತೂ ಗಮನಸೆಳೆಯುತ್ತದೆ.  ದೇವಾಲಯ ನೋಡಿ ಪುಷ್ಕರಿಣಿ ನೋಡಿದೆವು. ಕೊಳದ ನೀರು ಕೊಳಚೆಗಟ್ಟಿದೆ. ದೇವಾಲಯದ ಎದುರು ಕಲ್ಲಿನ ಚಕ್ರಗಳಿರುವ ಬಂಡಿ ಇದೆ. ಅದರಲ್ಲೇ ತೇರನ್ನು ಎಳೆಯುವುದಂತೆ.
   ನಂದಿ ಗ್ರಾಮದಲ್ಲಿ ಸುಮಾರು ಕ್ರಿ.ಸ.806 ರಲ್ಲಿ ನಿರ್ಮಾಣವಾಗಿರುವ ಭೋಗನಂದೀಶ್ವರ ದೇವಾಲಯವು ದ್ರಾವಿಡ ಶೈಲಿಯಲ್ಲಿದ್ದು, ರತ್ನಾವಳಿ ರಾಜವಂಶದ ಬಾಣನಿಂದ ನಿರ್ಮಿಸಲ್ಪಟಿರುತ್ತದೆ.  ಭೋಗನಂದೀಶ್ವರ ದೇವಾಲಯವು ಪ್ರಾಚೀನ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದು, ಇದಕ್ಕೆ ಹೂಂದಿಕೊಂಡಂತೆ  ಶ್ರೀ ಅರುಣಾಚಲೇಶ್ವರ ದೇವಾಲಯವನ್ನು ಬಳಪದ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ದೇವಾಲಯಗಳಲ್ಲಿ ಗಂಗ, ಚೋಳರು ಮತ್ತು ಹೊಯ್ಸಳ ವಾಸ್ತುಶೈಲಿಯನ್ನು ಕಾಣಬಹುದು. ಇಲ್ಲಿ ಅರುಣಾಚಲೇಶ್ವರ, ಉಮಾಮಹೇಶ್ವರ ದೇವಾಲಯಗಳೂ ಇವೆ. ಇಲ್ಲಿಯ ತುಲಾಭಾರ ಮಂಟಪ ಹಾಗೂ ವಸಂತಮಂಟಪಗಳನ್ನು ವಿಜಯನಗರ ಅರಸರು ನಿರ್ಮಿಸಿದರು. 













ನಂದಿಬೆಟ್ಟದತ್ತ ನಮ್ಮಯ ನಡಿಗೆ


ದೇವಾಲಯ ನೋಡಿ ನಾವು  ಕೆಲವುಕಿಮೀ ಸಾಗಿ ಸುಲ್ತಾನಪೇಟೆಗೆ ಹೋದೆವು. ಅಲ್ಲಿ ಬಸ್ಸಿಳಿದು ನಾವು ನಂದಿಬೆಟ್ಟಕ್ಕೆ ಮೆಟ್ಟಲೇರಲು ತೊಡಗಿದೆವು. ಅಲ್ಲೊಬ್ಬಳು ಹೆಂಗಸು  ಸೊಪ್ಪು ಸವರುತ್ತ ಸೌದೆ ಸೇರಿಸುತ್ತಿದ್ದಳು. ನಡೆದುಕೊಂಡು ಬೆಟ್ಟಕ್ಕೆ ಹೋಗುತ್ತೀರ? ಈ ಬಿಸಿಲಿನಲ್ಲಿ? ಈ ಹಾಳೂರಿನಲ್ಲಿ ಏನು ನೋಡಲು ಬಂದಿರಿ? ನಾನು ಇದನ್ನು ಹಾಳೂರು ಅಂತಲೇ ಕರೆಯುವುದು. ನನ್ನೂರು ಕೊಳ್ಳೆಗಾಲ. ಮದುವೆಯಾಗಿ ಇಲ್ಲಿಗೆ ಬಂದಿರುವುದು. ನಾನು ಇದುವರೆಗೆ ಬೆಟ್ಟ ಹತ್ತಿಲ್ಲ. ಅಲ್ಲಿ ನೋಡಲುಏನಿದೆ ಮಣ್ಣು?ಎಂದು ನುಡಿದು ಯಾವುದೋ ಗಾದೆ ಮಾತು ಹೇಳಿದಳು. ಅವಳು ಹೇಳಿದ ಆ ಗಾದೆ ಈಗ ಮರೆತುಹೋಗಿದೆ. ನಮಗೆ ಬೆಟ್ಟ ಹತ್ತುವುದೇ ಒಂದು ಹುಚ್ಚು ಎಂದು ಅವಳಿಗೆ ಗೊತ್ತಿಲ್ಲ! ಅದಾಗಲೇ ಗಂಟೆ ೧೨.೩೦ ದಾಟಿತ್ತು. ಮೆಟ್ಟಲು ಹತ್ತಲು ಕಾಲು ಅಷ್ಟೊಂದು ಸಹಕರಿಸುತ್ತಿರಲಿಲ್ಲ. ಒಂದು ಮೆಟ್ಟಲಿಗೂ ಇನ್ನೊಂದು ಮೆಟ್ಟಲಿಗೂ ಅಂತರ ಬಲು ಕಡಿಮೆ. ಹಾಗಾಗಿ ಹತ್ತಲು ಕಷ್ಟವಿಲ್ಲ. ಹತ್ತಿಪ್ಪತ್ತು ಮೆಟ್ಟಲು ಹತ್ತಿ ಸುಧಾರಿಸಿಕೊಳ್ಳಲು ನಿಲ್ಲುತ್ತಿದ್ದೆವು. ಅಲ್ಲಲ್ಲಿ ಕೆಲವು ಮಂಟಪಗಳಿವೆ. ಅಲ್ಲಿ ತುಸು ವಿರಮಿಸಿ, ನೀರು ಕುಡಿದು ಮುಂದುವರಿದೆವು. ಒಂದು ಮರದಲ್ಲಿ ನಾಲ್ಕೈದು  ದೊಡ್ಡದಾದ ಜೇನುಗೂಡುಗಳು ಕಾಣಿಸಿತು.
   ಇನ್ನು ಎಷ್ಟು ಮೆಟ್ಟಲುಗಳಿರಬಹುದು? ಎಂದು ಯೋಚಿಸುತ್ತಿರುವಾಗ ಅರಣ್ಯ ಇಲಾಖೆಯ ಸಿಬ್ಬಂದಿ ಸಿಕ್ಕಿದರು. ಇನ್ನೇನು ಜಾಸ್ತಿ ಇಲ್ಲ. ನಿಧಾನವಾಗಿ ಹತ್ತಿ, ಅಲ್ಲಿ ಪಾರ್ಕಲ್ಲಿ ಕೂತು ತಂಪಾಗಿ ಊಟ ಮಾಡಿ. ನಂದಿಬೆಟ್ಟಕ್ಕೆ ಒಟ್ಟು ಮೂರುಸಾವಿರ ಮೆಟ್ಟಲುಗಳಿವೆ ಎಂದು ಹೇಳಿ ಅವರು ಊಟಕ್ಕೆ ಕೂತರು. ಊಟ ಮಾಡುತ್ತೀರ ಎಂದು ನಮಗೆ ಕೇಳಿದರು. ಇಲ್ಲ, ನಾವು ಊಟ ತಂದಿದ್ದೇವೆ. ನೀವು ಮಾಡಿ ಎಂದು ನಾವು ಮುಂದುವರಿದೆವು. ಮೇಲೆ ಹೋಗುತ್ತ ಕೋತಿಗಳ ಕಾಟ ಇದೆ. ಕೈಯಲ್ಲಿ ಏನೂ ಇಟ್ಟುಕೊಳ್ಳಬೇಡಿಜಾಗ್ರತೆ ಎಂದರು.
ಇನ್ನು ಜಾಸ್ತಿ ದೂರ ಇಲ್ಲ. ಎಂದದ್ದೇ ನಮಗೆ ಹತ್ತಲು ಹುರುಪು ಬಂತು. ನಿಜಕ್ಕೂ ನಾವು ಬೆಟ್ಟ ಹತ್ತುತ್ತ ಇರುವಾಗ ಇನ್ನು ಎಷ್ಟು ದೂರ ಎಂದು  ಇಳಿಯುವವರನ್ನು ಕೇಳಿದಾಗ, ದೂರ ಇದ್ದರೂ, ಇನ್ನು ಜಾಸ್ತಿ ದೂರ ಇಲ್ಲಎಂದು ಅವರು ಎನ್ನುವಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ಓಹೋ, ಇನ್ನು ಸ್ವಲ್ಪ ಹತ್ತಿದರೆ ಆಯಿತು ಎಂದು ಮುಂದೆ ಹತ್ತಲು ಹುರುಪು ಬರುತ್ತದೆ.

  ಉಸ್ಸಪ್ಪ ಎನ್ನುತ್ತ ಮೆಟ್ಟಲು ಹತ್ತುತ್ತ ಸಾಗಿದೆವು. ಕೆಲವರು ಊಟಕ್ಕೆ ಕೂತೇ ಬಿಟ್ಟರು. ಊಟ ಮಾಡಿದಮೇಲೆ ಹತ್ತುವುದು ಕಷ್ಟವೆಂದು ನಾವು ಕೆಲವರು ಊಟ ಮಾಡದೆಯೇ ಮುಂದುವರಿದಿವು. ಮುಂದೆ ವೀರಭದ್ರೇಶ್ವರ ದೇವಾಲಯ ಕಂಡಾಗ ನಾವು ಊಟಕ್ಕೆ ಕೂತೆವು. ಆಗಲೇ ಗಂಟೆ 2.30 ದಾಟಿತ್ತು. ಟೊಮೆಟೊ ಭಾತ್ ಪೊಟ್ಟಣ ಬಿಚ್ಚಿ ತಿಂದೆವು. ದೇವಾಲಯ ನೋಡಿ ಮತ್ತೆ ಹತ್ತೈವತ್ತು ಮೆಟ್ಟಲು ಹತ್ತಿದಾಗ ನಂದಿಬೆಟ್ಟ ತಲಪಿದೆವು. ಟಿಪ್ಪುವ ಬೇಸಿಗೆ ಅರಮನೆ, ಕೊಳ ನೋಡಿ, ಬೆಟ್ಟದುದ್ದಕ್ಕೂ ಒಂದುಸುತ್ತು ಹೊಡೆದೆವು.





 ಚಹಾ ಕಾಫಿ ಕುಡಿದು ಮುಂದುವರಿದು ದೇವಸ್ಥಾನ ನೋಡಿ ಭಾವಚಿತ್ರ ತೆಗೆಸಿಕೊಂಡು ಪ್ರಸಿದ್ಧಪಟ್ಟ ಟಿಪ್ಪುಡ್ರಾಪ್ ನೋಡಿದೆವು. ಮತ್ತೆ ಮೆಟ್ಟಲಿಳಿಯಲು ಹೆಚ್ಚಿನವರಿಗೆ ತ್ರಾಣವಿರಲಿಲ್ಲ. ಹಾಗಾಗಿ ವಾಹನವನ್ನು ಬೆಟ್ಟಕ್ಕೆ ಕರೆಸಿಕೊಂಡಾಗಿತ್ತು. ಸೋಡಾ ಕುಡಿದು ನಾವು ವಾಹನವೇರಿದೆವು.
ಘಾಟಿ ಸುಬ್ರಹ್ಮಣ್ಯ
             ನಂದಿಬೆಟ್ಟದಿಂದ 5 ಗಂಟೆಗೆ ಹೊರಟು ಸುಮಾರು 50 ಕಿಮೀ ದೂರವಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ  ಘಾಟಿಸುಬ್ರಹ್ಮಣ್ಯ 6 ಗಂಟೆಗೆ ತಲಪಿದೆವು. ಅಲ್ಲಿ ವೈದ್ಯನಾಥ ಅವರ ಅಕ್ಕನ ಮಗಳಾದ ಲೀಲಾ ನಮ್ಮ ಬರುವನ್ನೇ ಕಾದಿದ್ದು, ನಮ್ಮನ್ನು ಎದುರ್ಗೊಂಡರು. ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಮಗಾಗಿ ಕೋಣೆ ಕಾದಿರಿಸಿದ್ದರು. ಅಲ್ಲಿಗೆ ಕರೆದುಕೊಂಡು ಹೋದರು. ಅಲ್ಲಿ ಒಂದು ಕೋಣೆ ಅಂದರೆ ಪುಟ್ಟ ಮನೆ ಎನ್ನಬಹುದು, ನಾವು ಎಂಟು ಮಹಿಳೆಯರು ಸೇರಿಕೊಂಡೆವು. ಸೋಲಾರಿನಿಂದ ಬರುವ ಬಿಸಿನೀರಿನಲ್ಲಿ ಸ್ನಾನ ಮಾಡಿ ತಯಾರಾದೆವು.
   ಏಳು ಇಪ್ಪತ್ತಕ್ಕೆ ಎಲ್ಲರೂ ತಯಾರಾಗಿ ಹೊರಗೆ ಬರಬೇಕೆಂದು ನಾಗೇಂದ್ರಪ್ರಸಾದ್ ಆಜ್ಞೆ ಮಾಡಿದ್ದರು. ಅವರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ್ದೆವು. ಎಲ್ಲರೂ ಸಮಯಕ್ಕೆ ಸರಿಯಾಗಿ ಹೊರಟು ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಪ್ರವೇಶಿಸಿದೆವು. ಸುಬ್ರಹ್ಮಣ್ಯನಿಗೆ ಮಹಾಮಂಗಳಾರತಿಯಾಗಿ ತೀರ್ಥ ಪ್ರಸಾದ ಸ್ವೀಕರಿಸಿದೆವು.



    ಇಲ್ಲಿಯ ದೇವಾಲಯದ ವಿಶೇಷತೆ ಎಂದರೆ ಸುಬ್ರಹ್ಮಣ್ಯಮೂರ್ತಿಯ ಹಿಂದೆ ನರಸಿಂಹನ ಮೂರ್ತಿ ಇದೆ. ಇಬ್ಬರಿಗೂ ಪೂಜೆ ಸಲ್ಲುತ್ತದೆ. ನರಸಿಂಹನ ಮೂರ್ತಿ ಎದುರು ಕನ್ನಡಿ ಇಟ್ಟಿದ್ದಾರೆ.  ಕನ್ನಡಿ ಮುಖಾಂತರ ನಮಗೆ ನರಸಿಂಹನ ಮೂರ್ತಿ ಕಾಣುತ್ತದೆ. ಇಲ್ಲಿಯ ದೇವಾಲಯದ ಬಗ್ಗೆ ಪ್ರತೀತಿಗೊಂಡ ಕಥೆಯನ್ನು ಲೀಲಾ ಸ್ವಾರಸ್ಯವಾಗಿ ಸಂಕ್ಷಿಪ್ತವಾಗಿ ವಿವರಿಸಿದರು: ‘‘ಓಂಕಾರದ ಅರ್ಥ ಹೇಳು ಎಂದು ಒಮ್ಮೆ ಸುಬ್ರಹ್ಮಣ್ಯ ಬ್ರಹ್ಮನಿಗೆ ಕೇಳುತ್ತಾನೆ. ನೀನು ಇನ್ನೂ ಸಣ್ಣವನು. ಅದರ ಅರ್ಥ ಈಗ ಬೇಡ. ದೊಡ್ಡವನಾದ ಮೇಲೆ ತಿಳಿಯುತ್ತದೆ ಎನ್ನುತ್ತಾನೆ. ಅದಕ್ಕೆ ಸುಬ್ರಹ್ಮಣ್ಯ, ‘ನನಗೆ ಹೇಳುವುದಿಲ್ಲವ? ನಾನು ಶಿವನ ಮಗ. ನನಗೆ ಎಲ್ಲ ಅರ್ಥವಾಗುತ್ತದೆ’ ಎಂದು ಬ್ರಹ್ಮನನ್ನು ಕಟ್ಟಿಹಾಕುತ್ತಾನೆ. ಆಗ ಸೃಷ್ಟಿ ಕಾರ್ಯ ನಿಂತು ಎಲ್ಲ ಲಯವಾಗಲು ದೇವಾದಿದೇವತೆಗಳು ವಿಷ್ಣು ಹಾಗೂ ಶಿವನ ಬಳಿ ಹೋಗಿ ನಡೆದ ಸಂಗತಿ ತಿಳಿಸುತ್ತಾರೆ.  ಸುಬ್ರಹ್ಮಣ್ಯ ನೀನು ಮಾಡಿದ್ದು ತಪ್ಪು. ಬ್ರಹ್ಮನನ್ನು ಕಟ್ಟಿ ಹಾಕಿದರೆ ಸೃಷ್ಟಿ ಕಾರ್ಯ ನಿಂತು ಹೋಗುತ್ತದೆ. ನಿನಗೆ ಓಂಕಾರದ ಅರ್ಥ ಬೇಕು ತಾನೆ. ಮೂರ್ತಿ ಸ್ವರೂಪನೇ ಓಂಕಾರ ಎಂದು ಹೇಳಿದಾಗ, ಸುಬ್ರಹ್ಮಣ್ಯ ಬ್ರಹ್ಮನನ್ನು ಬಿಡಿಸಿ, ‘ನಾನು ಎಂಥ ತಪ್ಪು ಕೆಲಸ ಮಾಡಿದೆ. ಸೃಷ್ಟಿಕರ್ತನಾದ ತಂದೆಯನ್ನೇ ಕಟ್ಟಿಹಾಕಿದಂತಾಯಿತಲ್ಲ. ನಾನು ಕ್ಷುದ್ರರೂಪಿಯಾಗುವೆ’ ಎಂದು ತನಗೆ ತಾನೆ ಶಾಪ ಹಾಕಿಕೊಂಡ. ಹಾಗಾಗಿ ಅವನು ಹಾವಿನ ರೂಪದಲ್ಲಿ ಭೂಲೋಕದಲ್ಲಿದ್ದ. ಹಾವಿಗೆ ವೈರಿ ಗರುಡ. ಗರುಡನಿಂದ ತನ್ನ ರಕ್ಷಣೆ ಮಾಡು ಎಂದು ವಿಷ್ಣುವನ್ನು ಕೇಳಿಕೊಂಡ. ಆಗ ವಿಷ್ಣು, ನಾನು ನಿನ್ನ ಬೆನ್ನಹಿಂದೆಯೇ ಇರುವೆನು ಎಂದು ಅಭಯವಿತ್ತ. ಹಾಗಾಗಿ ಇಲ್ಲಿಯ ದೇವಾಲಯದಲ್ಲಿ  ಸುಬ್ರಹ್ಮಣ್ಯನ ಬೆನ್ನಹಿಂದೆ ನರಸಿಂಹನ ಮೂರ್ತಿ ಸ್ಥಾಪನೆಯಾಗಿದೆ.
 ಘಟಕಾಸುರ ಎಂಬ ರಾಕ್ಷಸನ ಸಂಹಾರಕ್ಕೋಸ್ಕರ ಸುಬ್ರಹ್ಮಣ್ಯ ಭೂಮಿಗೆ ಬರಬೇಕಾಯಿತು. ಸುಬ್ರಹ್ಮಣ್ಯ ಭೂಮಿಗೆ ಬರಲೋಸ್ಕರ ಬ್ರಹ್ಮನನ್ನು ಕಟ್ಟಿಹಾಕಬೇಕಾಯಿತು. ಹೀಗೆ ಅದರ ಹಿಂದಿರುವ ಕಥೆ ಬಹಳ ಚೆನ್ನಾಗಿದೆ.  ಘಾಟಿ ಸುಬ್ರಹ್ಮಣ್ಯ ಎಂದು ಹೆಸರು ಬರಲು ಕಾರಣ ಘಟಕಾಸುರನ ಸಂಹಾರವಾಗಿ ಘಟಕಾಪುರಿ ಎಂದಿದ್ದದ್ದು, ಕ್ರಮೇಣ ಆಡುಭಾಷೆಯಲ್ಲಿ ಘಾಟಿ ಸುಬ್ರಹ್ಮಣ್ಯ ಎಂದಾಯಿತು.”

  ಪುಷ್ಕಳ ಭೋಜನ

ನಾವು ಅಲ್ಲಿಂದ ಅನತಿ ದೂರದಲ್ಲಿರುವ ಗುರುನಾಥ ಅವರ ಮನೆಗೆ ಹೋದೆವು. ಅಲ್ಲಿ ನಮಗೆ ಊಟ. ಪೂರಿ,ಸಾಗು, ಅನ್ನ ಸಾರು, ಟೊಮೊಟೊ ಚಟ್ನಿ, ಮಜ್ಜಿಗೆ ಇವಿಷ್ಟು ಬಗೆಯ ಪುಷ್ಕಳ ಭೋಜನ. ಬಹಳ ಮುತುವರ್ಜಿಯಿಂದ ಲೀಲಾ ಅವರು ನಮಗೆ ಭೋಜನದ ವ್ಯವಸ್ಥೆ ಮಾಡಿಸಿದ್ದರು. ನೆಲದಲ್ಲಿ ಕೂತು ಊಟ ಮಾಡಿದೆವು. ಹಸಿದ ಹೊಟ್ಟೆಗೆ ಬಿಸಿಸಾರು ಅನ್ನ ಅಮೃತದ ಸಮಾನ.  ಲೀಲಾ, ಅವರ ಮಗಳು ಸುಪ್ರಿಯ, ಗುರುನಾಥರ ಮಗಳು ರಚಿತಾ, ಹಾಗೂ ಇಬ್ಬರು ಹೆಂಗಸರು ಉತ್ಸಾಹದಿಂದ ಬಡಿಸಿದರು. ಗುರುನಾಥರು ಮನೆಯಲ್ಲಿ ಚಿಕ್ಕದಾಗಿ ಕೇಟರಿಂಗ್ ನಡೆಸುತ್ತಿದ್ದಾರೆ. ಊಟವಾಗಿ ನಮ್ಮ ಕೋಣೆಗೆ ಬಂದು ನಿದ್ರೆ ಮಾಡಿದೆವು
ಮಾಕಳಿದುರ್ಗದ ವಿವರಣೆ ಮುಂದಿನ ವಾರ ನಿರೀಕ್ಷಿಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ