ನಾವು ಒಟ್ಟು ೧೩ ಮಂದಿ ಒಟ್ಟು ಕುಟುಂಬದಲ್ಲಿ ಸುಮಾರು ನಲವತ್ತು ಐವತ್ತು ವರ್ಷಗಳ ಹಿಂದೆ ವಾಸವಾಗಿದ್ದೆವು. ದೊಡ್ಡಪ್ಪ(ಮಹಾಬಲೇಶ್ವರ ಭಟ್ ೧೯೨೯-೨೦೦೦) ದೊಡ್ಡಮ್ಮ (ಕಮಲಾ ೧೯೩೪-೨೦೧೮) ಅವರಿಗೆ ಮೂವರು ಮಕ್ಕಳು.
ಅಪ್ಪ(ಕೃಷ್ಣ ಭಟ್ ೧೯೩೯-೨೦೧೭) ಅಮ್ಮ ಭಾರತಿ. ನಾವು ೫ ಮಕ್ಕಳು. ಅಜ್ಜಿ. ದೊಡ್ಡಮ್ಮ, ಅಮ್ಮ ಎಲ್ಲರೂ ಸೌಹಾರ್ದದಿಂದ ಅನ್ಯೋನ್ಯವಾಗಿದ್ದೆವು. ದೊಡ್ಡಪ್ಪನ ಮಕ್ಕಳಾದ ದೊಡ್ಡಣ್ಣ ಶಾಮಭಟ್, ಅಕ್ಕಂದಿರಾದ ಲಕ್ಷ್ಮೀ,ಹಾಗೂ ಗೀತಾಪರಮೇಶ್ವರಿ ಇವರೊಡನೆ ನಾವು ಐವರೂ (ಅಣ್ಣ ಸತೀಶ, ಅಕ್ಕ ಮಂಗಲಗೌರಿ, ರುಕ್ಮಿಣಿಮಾಲಾ (ನಾನು), ತಂಗಿ ಸವಿತಾ, ತಮ್ಮ ಶ್ರೀಪತಿ) ಒಡಹುಟ್ಟಿದ ಅಣ್ಣ ಅಕ್ಕಂದಿರಂತೆಯೇ ಯಾವ ಭೇದವಿಲ್ಲದೆಯೇ ನಾವು ಬೆಳೆದೆವು. ದೊಡ್ಡಮ್ಮನಿಗೂ ಅಷ್ಟೆ ತನ್ನ ಮಕ್ಕಳು ಬೇರೆಯಲ್ಲ ಮೈದುನನ ಮಕ್ಕಳು ಬೇರೆಯಲ್ಲ ಎಂದು ನಮ್ಮನ್ನು ನೋಡಿಕೊಂಡವರು.
ನಮ್ಮದು ಹಳ್ಳಿಯಲ್ಲಿ ಸಾಕಷ್ಟು ದೊಡ್ಡದಾದ ಮನೆ. ಮನೆ ಮುಂದೆ ವಿಶಾಲವಾದ ಅಂಗಳ. ಅಲ್ಲಿ ಮಳೆಗಾಲದಲ್ಲಿ ತರಕಾರಿ ಬೆಳೆಯುತ್ತಿದ್ದರು. ನಮ್ಮ ಬಾಲ್ಯದಲ್ಲಿ ಅದನ್ನು ಕೊಯ್ಯಲು ನಾವು ದೊಡ್ಡಮ್ಮನೊಡನೆ ಹೋಗುತ್ತಿದ್ದದ್ದು ಈಗ ಮಧುರ ನೆನಪು. ಯಾವುದೇ ಹಣ್ಣು ಪೇಟೆಯಿಂದ ತಂದರೆ (ಅಥವಾ ಮನೆ ಹಿತ್ತಲಲ್ಲೇ ಬೆಳೆದದ್ದಾದರೂ) ಅವನ್ನು ಹೆಚ್ಚಿ ೧೩ ಮಂದಿಗೆ ಸಮ ಪಾಲು ಮಾಡುವ ಕೆಲಸವನ್ನು ದೊಡ್ಡಮ್ಮ ಅಚ್ಚುಕಟ್ಟಾಗಿ ಮಾಡುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟುತ್ತಿದೆ. ಮಾವಿನಹಣ್ಣು ಹೆಚ್ಚಿ ಉಳಿದ ಗೊರಟನ್ನು ಚೀಪಲು ನಾವು ತಯಾರಾಗಿರುತ್ತಿದ್ದೆವು. ದೊಡ್ಡಮ್ಮ ಎಷ್ಟು ಚೆನ್ನಾಗಿ ಮಾವು ಹೆಚ್ಚುತ್ತಿದ್ದರೆಂದರೆ ಗೊರಟಿನಲ್ಲಿ ಮತ್ತೆ ಚೀಪಲು ಏನೂ ಉಳಿಯುತ್ತಿರಲಿಲ್ಲ! ದೊಡ್ಡಮ್ಮ ಸೊಗಸಾಗಿ ಕಥೆ ಹೇಳುತ್ತಿದ್ದರು. ಅದನ್ನು ಕೇಳುತ್ತ ಕೂರುವುದೆಂದರೆ ನಮಗೆ ಬಹಳ ಖುಷಿ.
ಕಾಲಕ್ರಮೇಣ ದೊಡ್ಡಣ್ಣನೂ ಕೆಲಸಕ್ಕೆ ಮೈಸೂರು ಸೇರಿ ಅಲ್ಲೇ ನೆಲೆನಿಂತ. ಅಕ್ಕಂದಿರಿಗೆ ಮದುವೆಯಾಗಿ ಮನೆ ಬಿಟ್ಟು ತೆರಳಿದರು. ತದನಂತರ ದೊಡ್ಡಪ್ಪ ದೊಡ್ಡಮ್ಮ ಮಗನ ಮನೆ ಮೈಸೂರು ಸೇರಿದರು. ನಾನೂ ಮದುವೆಯಾಗಿ ಮೈಸೂರಿಗೇ ಬಂದೆ. ದೊಡ್ಡಮ್ಮನ ಸಹವಾಸ ನನಗೆ ಹೆಚ್ಚು ಲಭಿಸಿತು. ದೊಡ್ಡಪ್ಪ ತೀರಿಹೋಗಿ (೨೦೦೦) ೧೮ ವರ್ಷ ಕಳೆಯಿತು. ದೊಡ್ಡಣ್ಣ ಅತ್ತಿಗೆ ಎಲ್ಲಾದರೂ ಬೇರೆ ಊರಿಗೆ ಹೋಗಬೇಕಾಗಿ ಬಂದಾಗ ದೊಡ್ಡಮ್ಮ ನಮ್ಮ ಮನೆಗೆ ಬರುತ್ತಿದ್ದರು. ಆಗ ನಮ್ಮ ಅತ್ತೆಯೂ ಅವರೂ ಖುಷಿಯಲ್ಲಿ ಮಾತಾಡುತ್ತ ಕೂರುತ್ತಿದ್ದಾಗ ಅವರಿಬ್ಬರ ಮಾತು ಕೇಳುವುದೇ ನನಗೆ ಬಲು ಇಷ್ಟವಿತ್ತು.
ದೊಡ್ಡಮ್ಮ ಸಾಹಿತ್ಯಪ್ರೇಮಿಯಾಗಿದ್ದರು. ಅವರ ವೃದ್ದಾಪ್ಯದಲ್ಲಿ ಅವರಿಗೆ ಜೊತೆಯಾಗಿ ಇದ್ದದ್ದೇ ಪುಸ್ತಕಗಳು. ಹಾಗಾಗಿ ಅವರಿಗೆ ಮನೆಯಲ್ಲಿ ಹೊತ್ತು ಕಳೆಯುವುದು ಕಷ್ಟವೆನಿಸಲಿಲ್ಲ. ಅವರು ಎಷ್ಟು ಪುಸ್ತಕಗಳನ್ನು ಓದಿರಬಹುದೆಂಬುದಕ್ಕೆ ಲೆಕ್ಕವಿಡಲು ಸಾಧ್ಯವಿಲ್ಲ. ಅವರು ಸುಮಾರು ಕವನಗಳನ್ನು ಬರೆದಿದ್ದರು. ಅವರು ಕವನ ಬರೆಯುತ್ತಿದ್ದರು ಎಂದು ನನಗೆ ಚಿಕ್ಕಂದಿನಲ್ಲಿ ಗೊತ್ತೇ ಇರಲಿಲ್ಲ. ಅವರು ಬರೆದ ಕವನವನ್ನು ಓದಲು ಮೈಸೂರಿನಲ್ಲಿ ಕೊಟ್ಟಿದ್ದರು. ಅವುಗಳಲ್ಲಿ ಕೆಲವು ಕವನಗಳನ್ನು ಅನಂತ ಮಹಲಿಂಗೇಶ್ವರ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಿದ್ದ. ಕೆಲವು ಕವನಗಳನ್ನು ಪತ್ರಿಕೆಗೆ ಕಳುಹಿಸಿದ್ದೆ. ಅವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
೧) ಉಲ್ಕಾಪಾತ
ಸಂಜೆಗತ್ತಲು ಕವಿಯೆ ಎತ್ತಲು ಮಂದಮಾರುತ ಸುಳಿಯಲು
ಮಂಜು ಮುಸುಕಿದೆ ಭುವಿಗೆ, ಬಾನಿಗೆ ಶೋಭೆ ಕಾಣದು ಎತ್ತಲು
ಕವಿಯೆ ಕತ್ತಲು, ಸುತ್ತುಮುತ್ತಲು ಎತ್ತ ನೋಡಿದಡತ್ತಲು
ಜವದೆ ತಾರೆಗಳೆಲ್ಲ ಬಾನಲಿ, ಭುವಿಯ ನೋಡುತ ನಿಲ್ಲಲು
ಕತ್ತನೆತ್ತುತ ಕಲ್ಲು ಮಣ್ಣಿನ ಗಿರಿಯ ಶಿಖರವ ನೋಡುತ
ಮತ್ತೆ ಆಗಸದಲ್ಲಿ ಬೆಳ್ನಗೆ ಬೆಳ್ಳಿ ಬೆಳಕನು ಸುರಿಸುತ
ಇತ್ತು ತಾರಾನಿವಹ ತನ್ನಯ ನಗೆಯ ನೋಟವ ಬೀರುತ
ಸುತ್ತುಮುತ್ತಲ ಮಂಜುರಾಶಿಗೆ ಬೆಳಕ ಮಲ್ಲಿಗೆ ಚೆಲ್ಲುತ
ಬಿದಿಗೆ ಚಂದಿರ ಮೇಘ ಮಂಡಲದೆಡೆಯೆ ನಗುತಲಿ ಬಂದನು
ಬದಿಗೆ ಸರಿಸುತ ಮೋಡಗಳನವಸರದೆ ಏರುತ ಬಂದನು
ಬರಲು ಏತಕೆ? ಇಷ್ಟು ತಡ ಎಂದೆನುತೆ ತಾರೆಗಳ್ನಕ್ಕವು
ಸರಸರನೆ ಏರುತ್ತ ಚಂದಿರ ತಾರಾನಿವಹಕೆ ಉಸುರಿದ
ಬೇಗ ಬರಲೆನಗಾಗಲಿಲ್ಲವು ಕರವ ಹಿಡಿದಿಹ ಮಡದಿಯು
ಹೋಗಿ ಬರುವೆನು ಎಂದೆನುತ ಸಮಾಧಾನವಿತ್ತರೆ ಕೇಳಳು
ಬಹಳ ಹೊತ್ತಿನ ತನಕ ನಮ್ಮಲಿ ನಡೆಯಿತೀವಾಗ್ವಾದವು
ಅಹಹ ಚೆನ್ನಾಯ್ತು ವೇಳೆಯು ಬಹಳ ಕಳೆಯಿತೆಂದನು
ಹೊರಟು ಅವಸರದಿಂದ ಸರಸರ ಏರಿ ಬಂದೆನು ಎನ್ನುತ
ಕಿರಣಮಾಲೆಯ ಭುವಿಗೆ ಬೀರುತ ನಗೆಯ ಬೆಳಕನು ಚೆಲ್ಲಿದ
ಥಳಕು ಥಳಕೆಂದೆನುತ ತಾರೆಗಳೆಲ್ಲ ಮಿನುಗುತಲಿರುತಿರೆ
ಹೊಳೆವ ಚಂದ್ರನ ಕಿರಣ ಮಂಜಿನಮೇಲೆ ನರ್ತಿಸುತಿರೆತಿರೆ
ಮುತ್ತುಮಣಿಗಳ ತೆರದಿ ಮಂಜಿನ ಹನಿಗಳೆಲ್ಲವು ಹೊಳೆಯಲು
ಮುತ್ತು ನೋಡಿರಿ ಎಂದೆನುತಲಾತಾರನಿವಹವು ನಕ್ಕಿತು
ಮಂಜು ಮುತ್ತಿನ ಮಾಲೆ ಮಾಡಿರಿ ನೀರಹನಿಗಳನೆನ್ನುತ
ಮಂಜು ಮುಸುಕಿದ ಭುವಿಯ ಸೊಬಗನು ಮೆಲ್ಲ ನೋಡಿದ ಚಂದ್ರಮ
ಇಷ್ಟರಲ್ಲೇ ಏನೋ ಸದ್ದು ಆಗಸದಲಿ ಕೇಳಲು
ಅಷ್ಟ ದಿಕ್ಕುಗಳನ್ನು ನೋಡುತ ತಾರಾನಿವಹವು ಕೇಳಿತು
ಏನು ಸದ್ದು ಆಗಸದಲಿ ಬೇಗ ಹೇಳಲೊ ಚಂದ್ರಮಾ
ಏನು ಘರ್ಜನೆ ಎಂದು ತಾರಾನಿವಹವೆಲ್ಲೆಡೆ ನೋಡಿತು
ಹೆದರದಿರಿ, ಅಂಜದಿರಿ, ಘರ್ಜನೆ ಅಲ್ಲ ಇಲ್ಲಿ ಕೇಳಿರಿ
ಅದುವೆ ವಾಯು ‘ವಿಮಾನ’ ರೆಕ್ಕೆಗಳಿಹವು ಪಕ್ಷಿಯ ತೆರದಲಿ
ಅದರ ಒಳಗಡೆ ಕುಳಿತು ಪಯಣವ ಮಾಡುತಿರುವರು ಮನುಜರು
ಮುದದಿ ಜನರಿದ ಮಾಡುತಿರುವರು ಆಗಸದಲಿ ಹಾರಲು
ಚಂದ್ರನಾಡಿದ ನುಡಿಯ ಕೇಳುತಲಿತ್ತು ತಾರಾನಿವಹವು
ಚಂದ್ರ ತಾರೆಗಳೆಲ್ಲ ನೋಡಲು ಹಾರತಿತ್ತು ವಿಮಾನವು
ಗರ್ವವಿರುತಿಹ ಒಂದು ತಾರೆಯು ಹೆಮ್ಮೆಯಿಂದಲಿ ನಕ್ಕಿತು
ಆವ ಹೆಚ್ಚಿನ ವಿಷಯ ವಾಯು ವಿಮಾನ ಎಂದರೆ ಎಂದಿತು
ಓಹೊ ಹಾಗೇನೆಂದು ಚಂದ್ರಮ ನುಡಿಯೆ ತಾರೆಗಳ್ನುಡಿದವು
ಅಹುದು ನೀನೂ ಕೂಡ ಅಂತೆಯೆ ಹಾರಬಲ್ಲೆಯ? ಎಂದುವು
ಅಹುದು ಮತ್ತೇನೀಗ ನಾನು ಹಾರಬಲ್ಲೆನು ಎನ್ನುತ
ಬಹಳ ಹೆಮ್ಮೆಯಪಟ್ಟು ನುಡಿಯಿತು ಗರ್ವದಿಂದಲಿ ತಾರೆಯು
ಸರಿಯೆ! ತಿಳಿಯಿತು ಅಂತೆ ಆದರೆ ಹಾರು ನೋಡಿಯೆ ಬಿಡುವೆವು
ಕಿರಿಯ ನಗೆಯನು ಸೂಸಿ ಮೆಲ್ಲನೆ ತಾರಾನಿವಹವು ನುಡಿಯಿತು
ಹಾರಬಲ್ಲೆನು ನಾನು ನೋಡಿರಿ ಈಗಲೆನ್ನುತ ತಾರೆಯು
ಹಾರೆ!ಬಿದ್ದಿತು ತಾರೆ ಭೂಮಿಯ ಸಾಲು ಬೆಟ್ಟದ ಎಡೆಯಲಿ
ಹೆಮ್ಮೆ ಮಾಡಿದಡಂತೆ ಆಗುವದೆಂದು ತಾರೆಗಳ್ನುಡಿದವು
ಒಮ್ಮೆ ನಗೆಯನು ಸೂಸಿ ಮೇಲಕೆ ಏರುತಿದ್ದನು ಚಂದ್ರಮ
ಕೆಳಗೆ ಬಿದ್ದಿಹ ತಾರೆಯಾ ಮೊಗ ಕಂದಿ ಕರ್ರಗೆ ಆಯಿತು
ಇಳೆಗೆ ಬಿದ್ದಿಹ ತಾರೆಯನ್ನು ‘ಉಲ್ಕೆ’ ಎಂದೇ ಕರೆವರು
೨) ಅದ್ಭುತ ಲೀಲೆ
ನೋಡಲ್ಲಿ! ನೋಡಲ್ಲಿ! ನೋಡಲ್ಲಿ ಮೇಲೆ
ಓಡೋಡಿ ಬರುತಿಹುದು ಮೇಘಗಳ ಮಾಲೆ
ಬಿಳಿದು ಕರಿ ಹಲವು ತರ ಬಣ್ಣಗಳ ಮುಗಿಲು
ಹೊಳೆ ಹೊಳೆವ ಮಿಂಚಿನೊಡ ಛಟಛಟಿಪ ಸಿಡಿಲು
ಭರಭರನೆ ಭರದಲ್ಲಿ ಬೀಸುತಿದೆ ಗಾಳಿ
ಚರ ಚರನೆ ಮುರಿಯುತಿವೆ ವೃಕ್ಷಗಳು ಸೀಳಿ
ಮಾಡಿಂದ ಹೆಂಚುಗಳು ಸಿಡಿದು ಹಾರುತಿವೆ
ಗುಡಿಸಲಿನ ಒಣಹುಲ್ಲು ನೆಲವ ಗುಡಿಸುತಿದೆ
ನೋಡಲ್ಲಿ ಬಾನಿಂದ ಇಳಿವ ಜಲಧಾರೆ
ನೋಡು ಇದು ದೇವನತ್ಯತ್ಭುತ ಲೀಲೆ
(ಈ ಕವನ ಉತ್ಥಾನ ೧೯೯೯ರಲ್ಲಿ ಪ್ರಕಟಗೊಂಡಿದೆ)
೩) ಮೂಡುತಿರುವ ಭಾಸ್ಕರ
ನೋಡುಕಂದ ಮೂಡಲಲ್ಲಿ
ಮೂಡುತಿಹನು ಬೆಳಕಚೆಲ್ಲಿ
ಬಿಳಿಯ ಮೋಡ ತೇಲುವಲ್ಲಿ
ಕುಳಿರುಗಳಿ ಬೀಸುವಲ್ಲಿ
ಕಿರಿಯ ಹಕ್ಕಿ ಹಿರಿಯ ದನಿಲಿ
ಹಾಡುತಿರಲು ಹರುಷದಲಿ
ಹೂವು ಕಂಪು ಸೂಸುತಿರಲು
ಮಾವು ಚಿಗುರು ತೂಗುತಿರಲು
ಇಂತ ಚೆಲುವು ಎಂತ ಸೊಗಸು
ಚಿಂತೆ ಮರೆತು ನಲಿಯೆ ಮನಸು
ಹಾಡೆ ಹಕ್ಕಿ ಇಂಚರ
ಮೂಡುತಿರುವ ಭಾಸ್ಕರ
ಮೂಡು ಕಡೆಯ ಮೋಡದೆಡೆಯೆ
ಕೆಂಪು ಕಿರಣ ಸಿಂಪಡಿಸಿಯೆ
ಸೊಗಸಿನಲ್ಲಿ ವೇಗದಲ್ಲಿ
ರಥವನೇರಿ ಆತುರದಲಿ
ನಿಶೆಯ ದೂಡಿ ಉಷೆಯ ಕೂಡಿ
ಗೆಲುವು ನಗೆಯು ಮೊಗದಿ ಮೂಡೆ
ಉರಿವ ಮುಖದಿ ಅರಿಯದಂತೆ
ಹರುಷ ಕಳೆಯ ಹರಿಸುತಿಂತು
ಭುವಿಯ ಬೆಳಗೆ ರವಿಯು ಬರುವ
ಉದಯ ಸಮಯ ದುಡಿಸಿ ಬರುವ
ಹಾಡೆ ಹಕ್ಕಿ ಇಂಚರ
ಮೂಡುತಿರುವ ಭಾಸ್ಕರ
(ಉತ್ಥಾನದಲ್ಲಿ ಪ್ರಕಟವಾಗಿದೆ)
೪) ಕರುಣಾಳು ದೇವ
ಕರುಣಾಳು ಓ ದೇವ ಮುಸುಕಿದೀ ಮಬ್ಬಿನಲಿ
ದಾರಿಯನು ತೋರಿಸೆನಗೆ
ಇರುಳು ಹಗಲೆನ್ನೆದೆಯ ಕತ್ತಲೆಯು ಮುಸುಕಿಹುದು
ಸರಿದಾರಿ ಬೆಳಕ ತೋರು
ಬೇಸರದಲನುದಿನವು ಗಾಸಿಯಾಗಿದೆ ಮನವು
ನೀ ಸಂತಸವನು ನೀಡು
ತೋರಿ ದಾರಿಯನೆನಗೆ ನಡೆಸೆನ್ನನುದಿನವು
ಕೋರೆ ಬೇರೊಂದು ವರವ
ಮುನ್ನ ಬೇಡಲೆ ಇಲ್ಲ, ಇಂದು ಬೇಡುವೆನಲ್ಲ
ಎನ್ನ ಸಲಹೆಂದು ದೇವಾ
ನಿನ್ನ ಧ್ಯಾನವ ಮಾಡದೆಯೆ ಕಳೆದೆನಿತು ದಿನ
ಎನ್ನ ಮನ್ನಿಸಿ ನಿನ್ನ ಸ್ಮರಣೆ ನೀಡು
ಇಹದ ಸುಖ ಸಾಕೆನಗೆ ಮುಂದಕಡಿ ಇಡಲಾರೆ
ಕೈ ಹೀಡಿದು ನಡೆಸು ನೀನು
ಇಷ್ಟು ದಿನ ಸಲಹಿರುವ ದೇವ ನೀ ಮುಂದಕೂ
ಕಷ್ಟ ಕೊಡದೆನ್ನ ಸಲಹೊ
ಸೃಷ್ಟಿಕರ್ತನೆ ಎನ್ನ ಭವದ ಬಂಧನ ಹರಿಸಿ
ಹುಟ್ಟಿಸದಿರಿನ್ನು ಜಗದಿ
(ಮಂಜುವಾಣಿಯಲ್ಲಿ ಪ್ರಕಟಗೊಂಡ ಕವನ)
೫) ಓ ! ಶಾಂತಿ!
ದೂರದಲಿ ನಿಂತೇಕೆ? ನೋಡಿತಿಹೆ ‘ಓ ಶಾಂತಿ’
ಬಾರೆನ್ನ ಹೃದಯ ಮಂದಿರದಿ ನೀ ನೆಲೆಸು
ಬರಲಾರೆ ಏಕೆ? ನೀ ನಿನ್ನ ಬರವನ್ನಿದಿರು
ನಿರುಕಿಸುತೆ ನಿನಗಾಗಿ ಕಾದು ಕುಳಿತೆ
ಬಂದೆನ್ನ ಹೃದಯದಲಿ ನೀ ನೆಲೆಸು ಓ ಶಾಂತಿ
ಎಂದಿಗೂ ನೀ ಎನ್ನ ಕೈಯ ಬಿಡಬೇಡ
ಇಂದಿದೋ ನಿನ್ನ ದರುಶನ ಭಾಗ್ಯ ಬರಲೆನಗೆ
ಚಂದದಲಿ ಬಾರೆನ್ನ ಹೃದಯ ಮಂದಿರಕೆ
ಶಾಂತಿಯೇ! ಶಾಂತಿಯೇ! ನೀನೇಕೆ
ನಗುತಿರುವೆ?
ಸಂತೋಷವೇ ನಿನಗೆ? ಎನ್ನ ಬೇಸರವು
ಚಿಂತೆಯ ದಳ್ಳುರಿಯು ದಹಿಸುತಿದೆ ಮನವಿದನು
ಶಾಂತಿಯೇ ಶಾಂತಿಯೇ ನೀ ಬಾರೆ ಏಕೆ?
ನಿನ್ನ ಬರವನು ಕಾದು ಎನಿತೊ ದಿನಗಳ ಕಳೆದೆ
ಎನ್ನಲ್ಲಿ ನಿನಗಿನಿತು ದಯೆ ಇಲ್ಲವೇಕೆ?
ಮುಪ್ಪಡರಿ ದೇಹವನು ಮನವು ದುರ್ಬಲವಾಗೆ
ತಪ್ಪದೆಯೆ ಸ್ಮರಿಪೆ ದೇವನ ‘ಶಾಂತಿ’ಗಾಗಿ
೬) ಜ್ಞಾನದ ಕಣ್ಣನು ತೆರೆಯುವೆನು
ಸುಂದರ ಸುಂದರ ಸ್ವಪ್ನದ ಮಂದಿರ ಮೂಡಿದೆ ಮನದಲ್ಲಿ
ಇಂದೆಲ್ಲವ ತೊರೆದೀಗಲೆ ದೇವನ ನೆನೆಯುವೆ ಹೃದಯದಲಿ
ಹೃದಯದ ಪೀಠದಿ ದಿವ್ಯ ಸುತೇಜದ ದೇವನ ನೆಲೆ ನಿಲಿಸಿ
ಮಧುರ ಸುವಾಸನೆ ಸದ್ವಿವೇಕದ ಹೂಗಳ ಸಂಗ್ರಹಿಸಿ
ಸದು ಹೃದಯದಿ, ಸಂತೋಷದಿ, ಹೂಗಳ ದೇವಗೆ ಅರ್ಪಿಸುವೆ
ಮಧುರದ ಸುಂದರ ಶಾಂತಿಯ ಫಲವನು ಬೇಡುವೆ ಕೈ ಮುಗಿದು
ಹೃದಯದ ದುರ್ಬಲತನವನು ಧೈರ್ಯದಿ ದೂರದೂರಕೆ ಓಡಿಸಿದೆ
ಉದುರಿತು ಆಗಲೆ ದುರ್ಬಲ ಹಣ್ಣೆಲೆ, ಚಿಗುರಿತು ಧೈರ್ಯದ ಹೊಸಚಿಗುರು
ಜೀವನದಲಿ ಅತಿ ಕಷ್ತವೆ ಬಂದರು ಸಹಿಸಿಯೆ ಸಹಿಸುವೆ ಧೈರ್ಯದಲಿ
ಭಾವಿಸಿ ನೋಡಲು ದೇವನೆ ಎಲ್ಲಕು ನಾವು ಕುಣಿಯುವ ಬೊಂಬೆಗಳು
ನಾವು ನಾಟಕದ ಪಾತ್ರಧಾರಿಗಳು ಆಡಿಸುವಾತನೆ ಪರಮಾತ್ಮ
ಸಾವು ನೋವುಗಳು ಎಲ್ಲವು ಒಂದೇ ದೇವ ದೇವನ ಲೀಲೆಗಳು
ಅದನೆಲ್ಲವ ಚೆನ್ನಾಗಿಯೇ ಅರಿತು ನಾನು ಬಾಳಿನಲಿ ಬಾಳುವೆನು
ಹೃದಯದಿ ಭಕ್ತಿಯ ಭಾವವ ತುಂಬುತ ಕರುಣಾಕರನನು ನೆನೆಯುವೆನು
ಮಧುರದ ಸುಂದರ ಸ್ವಪ್ನವ ಕಾಣುವ ‘ಮನಸಿನ’ ಕಣ್ಣನು ಮುಚ್ಚುವೆನು
ಮುದ್ದು ಮಾಧವನ ಮೂರ್ತಿಯ ನೋಡಲು ಜ್ಞಾನದ ಕಣ್ಣನು ತೆರೆಯುವೆನು
೭) ತೇಲಿಪೋಪೆನಾಂ
ಗಾಳಿಯಲಿ ಹಗುರಾಗಿ ಹತ್ತಿಯಂತೆ ಆಗಸದಲಿ
ತೇಲಿಪೋಪೆನಾಂ ಮೇಲೆ ತೇಲಿಪೋಪೆನಾಂ
ಭೂತಳಕ್ಕೆ ಇಳಿಯಲಾರೆ ಎಂದಿಗೂ ಇಳಿಯಲಾರೆ
ಸೋತು ಹಿಂದೆ ಸರಿಯದೆಯೆ ತೇಲಿಪೋಪೆನಾಂ
ಆಗಸದಲಿ ಸಂಚರಿಸುವ ಬಿಳಿಯ ತುಣುಕು ಮೋಡದಂತೆ
ವೇಗದಲ್ಲಿ ಗಾಳಿಯಲ್ಲಿ ತೇಲಿಪೋಪೆನಾಂ
ಗಾಳಿ ಭರದಿ ಬೀಸಿ ಬೀಸಿ ಧೂಳು ಮೇಲೆ ಹಾರಿಸಿದರು
ಬೀಳದೆಯೆ ಬಳಲದೆಯೆ ತೇಲಿಪೋಪೆನಾಂ
ಗುಡುಗು ಮೊಳಗಿ ಮಿಂಚು ಮಿಂಚಿ ವರ್ಷಧಾರೆ ಸುರಿಯುತಿರಲು
ನಡುಗಿ ಹಿಂದೆ ಸರಿಯದೆಯೆ ತೇಲಿಪೋಪೆನಾಂ
ಹಗಲು ರವಿಯ ತೀಕ್ಷ್ಣ ಕಿರಣ ಸುಡುತಲಿರಲು ಬಾನಿನಲ್ಲಿ
ನಗುತ ನಗುತ ಬೇಸರಿಸದೆ ತೇಲಿಪೋಪೆನಾಂ
ಇರುಳು ಚಂದ್ರ ಕಿರಣದಲ್ಲಿ ಹೊಳೆಯ ತಾರೆ ಗಗನದಲ್ಲಿ
ಸುರಿವ ‘ಅಮೃತ’ ವರ್ಷದಲ್ಲಿ ತೇಲಿಪೋಪೆನಾಂ
ಉಟ್ಟ ಉಡುಪು ‘ರೆಕ್ಕೆ’ಯಾಗಿ ಪುಟ್ಟದೊಂದು ಪಕ್ಷಿಯಾಗಿ
ನಿಟ್ಟಿಸುತ್ತ ಎಲ್ಲ ಕಡೆಗು ತೇಲಿಪೋಪೆನಾಂ
ದುಷ್ಟ ದಮನ ದುಃಖ ದೂರ ಶಿಷ್ಯ ರಕ್ಷ ದೇವನನ್ನು
ಸ್ಪಷ್ಟವಾಗಿ ಕಾಣಲೆಂದು ತೇಲಿಪೋಪೆನಾಂ
೮) ಅಂತ್ಯ ಕಾಣದ ದುಃಖ
ಹಗಲು ಕಳೆಯುವುದು, ರಾತ್ರಿ ಬರುವುದು
ಹೊಸದಿನವು ಹೊಸದೆನಿಸದು
ನೆನಪು ಮಾಸದು, ನೋವು ಕಳೆಯದು
ಮನದ ಬೇಗೆಯು ತಣಿಯದು
ವರುಷ ಕಳೆದರು, ಮನದಿ ಚಿಂತೆಯ
ಚಿತೆಯ ಉರಿಯದು ಆರದು
ಕಣ್ಣ ಎದುರಲೆ ಅಗಲಿದವರನು
ಮರೆಯಲಾರದು ಮನವಿದು
ಹುಟ್ಟು ಸಾವುಗಳೆಲ್ಲ ಸೃಷ್ಟಿಯ
ನಿಯಮ ಎನುವುದರಿತರೂ
ಇಷ್ಟ ಜನರಗಲಿಕೆಯ ವೇದನೆ
ಸಹಿಸುವುದು ಅತಿ ಕಷ್ಟವು
ಜತೆಯಲೇ ಸಂಸಾರ ರಥವನು
ಎಳೆದ ಹಸು ಎತ್ತುಗಳಲಿ
ಎತ್ತು ಬಿದ್ದರೆ? ಹಸುವು ಮಾತ್ರ
ರಥವನೆಳೆಯಲು ಸಾಧ್ಯವೆ?
ಬೇವು ಬೆಲ್ಲವ ಜೊತೆಗೆ ಮೆದ್ದರು
ಬೆಲ್ಲ ಕರಗಿತು ಬಾಯಲಿ
ಬೇವಿನ ಕಡು ಕಹಿಯು ಮಾತ್ರ
ನಾಲಗೆಯ ಮೇಲುಳಿಯಿತು
ಜೀವನದಲಿ ಸುಖ ದುಃಖ ಮಿಶ್ರವು
ಜಗದ ಜೀವರಿಗೆನುವರು
ಆದರೆನ್ನೆದೆಯಲಿ ಉಳಿಯಿತು
‘ಅಂತ್ಯ ಕಾಣದ’ ದುಃಖವು
(ಹೊಸತು ಪತ್ರಿಕೆಯಲ್ಲಿ ಪ್ರಕಟವಾಗಿತ್ತು)
೯) ಸ್ವಾಮಿ ವೆಂಕಟೇಶ
ದೇವ ನಿನ್ನ ಮಾಯೆಯನ್ನು ಅರಿಯದಾದೆನು
ನಿನ್ನ ಇಚ್ಛೆಯಂತೆ ನಡೆವೆನಡ್ಡಿ ಮಾಡೆನು
ಏಳುಬೆಟ್ಟದೊಡೆಯ ಸ್ವಾಮಿ ಶ್ರೀನಿವಾಸನೆ
ನೀಡು ದಯೆಯ ಎನ್ನಮೇಲೆ ವೆಂಕಟೇಶನೆ
ಸಪ್ತಗಿರಿಯ ಮೇಲೆ ಇರುವ ದೇವ ದೇವನೆ
ತಪ್ತನಾದ ಎನ್ನ ಮನಕೆ ತಂಪನೆರೆಯಾ ನೀ
ಹುತ್ತದೊಳಗೆ ಕುಳಿತು ತಪವ ಗೈದನಲ್ಲವೇ
ಮತ್ತೆ ಕೊರವಿಯಾಗಿ ‘ಕಣಿ’ಯ ನುಡಿದೆಯಲ್ಲವೇ
ಲೋಕಕೆಲ್ಲ ಒಡೆಯ ನಿನ್ನ ಪರಿಯದೇನಿದು?
ಆಕಾಶರಾಜ ಪುತ್ರಿಗೊಲಿದು ನಟನವಾಡಿದೆ
ಋಷಿಮುನಿಗಳು ನಿನ್ನ ಒಲಿಸೆ ತಪವಗೈವರು
ನೀನು ಯಾರಿಗಾಗಿ ತಪವಗೈವೆ ಶ್ರೀಹರಿ
ನಿನ್ನ ನೋಡೆ ಭಕ್ತಜನರು ದಿನವು ಬರುವರು
ಸ್ವಾಮಿ ನಿನ್ನ ದರುಶನದಲಿ ಕಣ್ಣ ತಣಿಪರು
ರಾಮನಾಗಿ ಕ್ರೂರ ರಕ್ಕಸರನು ವಧಿಸಿದೆ
ಕೃಷ್ಣನಾಗಿ ಭುವಿಯ ಭಾರವನ್ನು ಇಳುಹಿದೆ
ಕಲಿಯುಗದಲಿ ವೆಂಕಟಾದ್ರಿಯಲ್ಲಿ ನೆಲೆಸಿದೆ
ನಿನ್ನ ಭಕ್ತರಿಷ್ಟವನ್ನು ನೀನು ಸಲಿಸಿದೆ
ವೆಂಕಟೇಶ ಸ್ವಾಮಿ ನಿನ್ನ ದಯೆಯದೊಂದಿರೆ
ಮಂಕು ಮನುಜರಾದರೆಲ್ಲ ಜ್ಞಾನಿ ಎನಿಪರು
ಸ್ವಾಮಿ ಶ್ರೀನಿವಾಸ ನಿನ್ನ ನೆನೆವೆ ದಿನ ದಿನ
ಮತಿಯ ಮಾಯೆ ಹರಿಸುತೆನ್ನ ಪೊರೆಯೊ ಅನುದಿನ
ಕುಬೇರನಿಂದ ಮದುವೆಗಾಗಿ ಸಾಲ ಪಡೆದೆಯ
ಏನಿದೆಲ್ಲ ನಿನ್ನ ಮಾಯೆ ಜಗದ ಜನಕನೆ
ಅರಿವನಿತ್ತು ಸಲಹು ಎನ್ನ ವೆಂಕಟೇಶನೆ
೧೦) ಗೆಳತಿ ಬಾರಳಲ್ಲ
ಎಲ್ಲಿ! ಎಲ್ಲಿ! ನೀನೆಲ್ಲಿ ಇರುವೆ? ಓ
ಒಲುಮೆ ಗೆಳತಿ ಬಾರೆ
ಒಲ್ಲೆ ಏಕೆ ನೀ ಇಲ್ಲಿ ಗೈತರೆ
ಹೇಳು ಹೇಳು ಗೆಳತಿ
ನಿಲ್ಲು ನಿಲ್ಲು ನೀ ನಿಲ್ಲದಿದ್ದರೆ
ಕೇಳುವೆನೇ ನಾನು
ಬಲ್ಲೆ ಬಲ್ಲೆ ನಾ ನಿನ್ನ ಗುಣಗಳನು
ಒಲ್ಲದೀಗ ಬಾರೆ
ನೋಡಿ ನೋಡಿ ನಾ ನಿನ್ನ ದಾರಿಯನು
ಓಡಿ ಬಂದೆನೀಗ
ಬೇಡ ಬೇಡ ನೀ ಹೋಗಬೇಡವೊ
ಬೆರಗುಗಾತಿ ಗೆಳತಿ
ಒಂದೆ ಒಂದೆ ಇದು ಒಂದು ನುಡಿಯ ನೀ
ಬಂದು ಕೇಳಿ ಹೋಗು
ಇಂದಿಗೆನ್ನ ಬೇಸರವ ಕಳೆಯನೀ
ಬಂದುದದಲ್ಲವೇನು?
ಅಲ್ಲ, ಅಲ್ಲ ನೀನಲ್ಲಿಯಿಂದಲೇ
ಮೆಲ್ಲ ಹೋಗುತಿಹೆಯಾ
ಇಲ್ಲಿಗೊಮ್ಮೆ ನೀ ಬಂದು ಹೋಗಲು
ಒಲ್ಲೆ ಏಕೆ ಗೆಳತಿ!
ದೂರ ದೂರ ನೀ ಸರಿಯುತಿರುವೆಯ
ಬಾರೆ ಏಕೆ? ಗೆಳತಿ
ತೋರು ನಿನ್ನ ಮುಖ ಒಮ್ಮೆಯಾದರೂ
ಮರುಗುತಿರುವೆ ನಾನು
ಬಳಲಿ ಹೋದರೂ ಚಿಂತೆಯಲ್ಲಿ ನಾ
ಗೆಳತಿ ಬರಲೆ ಇಲ್ಲ
ಕಳೆಯಲೆನ್ನ ಬೇಸರವನೊಮ್ಮೆಯೂ
ಗೆಳತಿ ಬಾರಳಲ್ಲ!
೧೧) ‘ಅವದೇವ’
ಹಾಡಲು ಹಕ್ಕಿಗೆ
ಹಾಡನು ಕಲಿಸಿದ
ನೋಡಲು ಕಾಣದ ಇವನಾರೆ?
ಓಡುವ ಮುಗಿಲಿಗು
ತೀಡುವ ಗಾಳಿಗು
ಓಡೆ, ತೀಡೆ, ಕಲಿಸಿದನಾರೆ?
ನೀಲಿಯ ಬಾನಲಿ
ಹೊಳೆಯುವ ತಾರೆಯ
ಬೆಳಗಿ ತೊಳಗಿಸುತ್ತಿಹನಾರೆ?
ಹೊಳೆ ಗಿರಿ ಬನಗಳ
ಕಳಕಳಿಸುವ ಜಲ
ಕೊಳಗಳ ಮಾಡಿದನಿವನಾರೆ?
ಹಗಲಿನ ಸಮಯದಿ
ಗಗನದಿ ಬೆಳಗುವ
ಗಗನಮಣಿಯ ಬೆಳಗಿಪನಾರೆ?
ಇರುಳಲಿ ಶೀತಲ
ಚಂದ್ರ ಕಿರಣಗಳ
ತಿರೆಗೆ, ಸುರಿಸಿದವನಿವನಾರೆ?
ಅರಿಯದ ಈತನ
ಸ್ಮರಣೆಯ ಅನುದಿನ
ಸ್ಮರಿಸಲು ಕಂಡರೆ ಅವನಾಗ
ಪರಿ ಪರಿ ವಿಧದಲಿ
ಪೊರೆಯುವ ನಮ್ಮನು
ಪರಮ ಪ್ರೀತಿಯಲಿ ‘ಅವದೇವ’
೧೨) ಎಲ್ಲಿರುವೆ ಹರಿಯೆ?
ಎಲ್ಲಿರುವೆ! ಎಲ್ಲಿರುವೆ! ಎಲ್ಲಿರುವೆ ಹರಿಯೆ
ಇಲ್ಲಿ ನಿನಗಾಗಿ ಕಾತರಿಸುತಿರುವೆ
ಭವದ ಸಾಗರದಲಿ ‘ಈಜಾಡಿ’ ಬಳಲಿ
ನವೆದೆ ನಾ ಕೈಕಾಲು ಬಲವೆಲ್ಲ ಉಡುಗಿ
ಮುಳುಗುತಿಹೆನಿದೊ ಈಗ ಕಡಲಿನಾಳದಲಿ
ತಳುವದೆನ್ನನು ಮೇಲಕೆತ್ತು ಶ್ರೀಹರಿಯೆ
ಕಳೆದೆನೆನಿತೋ ದಿನವ ನಿನ್ನ ಸ್ಮರಿಸದೆಯೆ
ಕಳವಳಿಸಿದೆನು ಮನದಿ ನೆಮ್ಮದಿಯು ಇರದೇ
ಭವದ ಬಂಧನ ಬೇಡ ಎನ್ನ ನೀ ‘ಕರೆಸು’
ಜವದಿ ನಿನ್ನಯ ಚರಣ ಸೇವೆಯನು ಕೊಡಿಸು
ಕಾವವನು ನೀನು ನಿನ್ನಯ ದಯೆಯು ಬೇಕು
ದೇವ ನಿನ್ನಯ ಸ್ಮರಣೆಯೆನಗೊಂದೆ ಸಾಕು
(ಮಂಜುವಾಣಿಯಲ್ಲಿ ಪ್ರಕಟಗೊಂಡಿತ್ತು)
೧೩) ಚಂದ ಚಂದ ನಮ್ಮ ಪ್ರಕೃತಿ ಮಾತೆ ಬಲು ಚಂದ
ಅಮ್ಮ ನಾ ನಿನ್ನ ಬಣ್ಣಿಸಲರಿಯೆ ಮನದಲ್ಲಿ
ಧ್ಯಾನಿಸುತಲಿಹೆ ನಿನ್ನ ಸೊಬಗ
ಯಾವ ರೀತಿಯಲಿ, ನೋಡಿದರು ನೀನತಿ ಚೆಲುವೆ
ಹೇಗೆ ಹೇಳಲಿ? ಅದರ ಪರಿಯ
ಉದಯ ಸಮಯದಿ ಹಸುರು ಬಯಲಿನಲಿ ನಾ ಕಂಡೆ
ಅದ್ಬುತವನೊಂದ ನದನೆಂತು ನುಡಿವೆ
ಮಂಜುಹನಿಗಳ ಮೇಲೆ ಸೂರ್ಯ ಕಿರಣವು ಬಿದ್ದು
ಹೊಳೆ ಹೊಳೆದು ಕಂಗೊಳಿಪ ಪರಿಯ
ಅಮ್ಮ ನೀ ತೊಟ್ಟ ಮುತ್ತಿನ ಹಾರವದು ‘ಜಗುಳಿ”
ಬಯಲಲ್ಲಿ ಬಿದ್ದಿತೆಂದಾನನ್ನ ಕೈಯಲೇನಿರಲಿಲ್ಲ
ಅಯ್ಯೊ ಅದು ಬರಿ ಹನಿಯ ನೀರು
ಮೇಲೆ ನೋಡಿದರೆ ಬಾನಲಿ ಸೂರ್ಯ ಮೇಲೇರಿ
ನನ್ನೆಡೆಗೆ ನೋಡಿ ನಗುತಿದ್ದ
ಎಲ್ಲ ಮಣಿ ಮುತ್ತುಗಳು ಮಾಯವಾಗುತ ಕಡೆಗೆ
ಉಳಿದು ದೊಂದೇ ಹಸುರು ಬಯಲು
ಗಾಳಿ ಬೀಸುತ್ತಿರಲು ಗಿಡಮರವು ಬಾಗುತಿವೆ
ಪ್ರಕೃತಿ ಮಾತೆಗೆ ನಮಿಸುವಂತೆ
ಹೊಸದಿನದ ಸ್ವಾಗತಕೆ ಹೂವರಳಿ ತೂಗುತಿರೆ
ಪರಿಮಳವ ಜಗಕೆಲ್ಲ ಸೂಸಿ
ತಾಯೊಡಲಿಗೆ ಬಿಸಿಲಬೇಗೆ ತಾಗದೆ ಇರಲಿ
ಎಂದು ಕೊಂಬೆಗಳೆಲ್ಲವನ್ನು ಹರಡಿ
ನಿಂತು ಮುಗಿಲೆತ್ತರಕೆ ಬೆಳೆದ ವೃಕ್ಷದ ಪರಿಯ
ಏನು ಹೇಳುವೆ ಇದರ ಸೊಬಗ
ಮೈತುಂಬಿ ಹರಿವ ಹೊಳೆ ಜುಳು ಜುಳುನೆ ಹರಿವ ತೊರೆ
ಎಲ್ಲದಕು ಅದರದೇ ಸೊಗಸು
ನೋಡುವ ಕಣ್ಣಿರಲಿ ಕಾಂಬ ಹೃದಯವು ಇರಲಿ
ನಮ್ಮ ತಾಯಿಯ ಚೆಲುವ ಪರಿಯ
ಈ ತಾಯ ಮಡಿಲಲ್ಲಿ ಮಲಗಿ ನಿದ್ದೆಯ ಮಾಳ್ಪ
ಆತುರವು ನನ್ನ ಮನದಲ್ಲಿ
ತೂಕಡಿಕೆಯಿಂದ ಕಣ್ಣೆವೆ ಮುಚ್ಚುತಿದೆ ಅಮ್ಮ
ಎನ್ನ ಮಲಗಿಸಿಕೊ ಮಡಿಲಲ್ಲಿ!
೧೪) ಗೆಳತಿಗೆ
ಮೋಡ ಮುಸುಕಿದ ಬಾನು
ಚಂದ್ರನಿಲ್ಲದ ರಾತ್ರಿ
ದಾರಿ ನಡೆಯಲಿ ಎಂತು? ಹೇಳು ಗೆಳತಿ
ಮನದಿ ದುಗುಡವ ತುಂಬಿ
ನಗುನಗುತ ಜೀವನದಿ
ದಿನವ ಕಳೆಯುವ ಪರಿಯ ಹೇಳು ಗೆಳತಿ
ಜೀವನವವಿದೊಂದು ಬಂಡಿಯ ಪಯಣವಿದ್ದಂತೆ
ತಾ ಉಳಿವ ‘ತಾಣ’ ಬರೆ ಇಳಿವಂತೆ ಜನರು
ಮುಂದೊಂದು ದಿನ ನಾವು
ಜಗದ ಋಣ ಮುಗಿದಾಗ
ಪಯಣ ಮುಗಿಸುವ ಗೆಳತಿ ನಗುತ ನಗುತ
(೨೦೦೧ರಲ್ಲಿ ಬರೆದದ್ದು)
೧೫) ನೀವು ಹೋದಿರೆಲ್ಲಿಗೆ
ನನ್ನ ಸ್ವಾಮಿ ನನ್ನ ಪತಿಯೆ
ನೀವು ಹೋದಿರೆಲ್ಲಿಗೆ?
ನಾನು ಬರುವೆ ನಿಮ್ಮ ಜತೆಗೆ
ಕರೆಸಿರೆನ್ನನಲ್ಲಿಗೆ
‘ಬಾಗಿಲನ್ನು ಹಾಕಿಕೊ’ ಎಂದ ನಿಮ್ಮ ಮಾತಿಗೆ
ಮನದ ಕದವ ಮುಚ್ಚುವಂತೆ ಆಯಿತೆನ್ನ ಬಾಳಿಗೆ
ನಿಮ್ಮ ಕೊನೆಯ ನುಡಿಗಳ ನಾನು ಕೇಳದಾದೆನು
ನಿಮ್ಮ ಮಾತು ನಡತೆಗಳನ್ನು ಹೇಗೆ ನಾನು ಮರೆವೆನು?
ಸಾವಿನಲ್ಲು ನೆಮ್ಮದಿಯನು ನೀವು ಕಂಡುಕೊಂಡಿರಿ
ನನ್ನ ಕಣ್ಣ ಎದುರಿನಲ್ಲೆ ನೀವು ‘ಕಾಯ’ ತೊರೆದಿರಿ
ನಿದ್ದೆ ಮಾಡುತಿರುವ ತೆರದಿ ಶಾಂತಭಾವ ಮುಖದಲಿ
ವಿಷ್ಣುದೂತರೊಡನೆ ಆತ್ಮ ತೆರಳಿತೇನೊ ಸುಖದಲಿ
ಸಪ್ತಪದಿಯ ತುಳಿದು ಕೈಯ ಹಿಡಿದು ಬಂದ ಎನ್ನನು
ಬಿಟ್ಟು ನಡೆದಿರೇಕೆ ಮುಂದೆ ಎಂದು ಅರಿಯೆನು
ಕಾಯಿಲೆಯಲಿ ನಾನು ಮಲಗೆ ಎನ್ನ ಸೇವೆಗೈದಿರಿ!
ಯಾರ ಸೇವೆ ಪಡೆಯದೆಯೆ ಇಹವ ತೊರೆದು ಹೋದಿರಿ
ಎನ್ನ ಕಡೆಯ ಕಾಲದಲ್ಲಿ ನಿಮ್ಮ ಕೈಯ ನೀರನು
ಸವಿಯ ಬಯಸಿದಾನು ಈಗ ನಿಮಗೆ ನೀರನೆರೆದೆನು
ನಿಮ್ಮ ಕಷ್ಟ ಸುಖಗಳಲ್ಲಿ ಪಾಲುಗೊಂಡ ನನ್ನನು
ಒಂದು ಮಾತು ನುಡಿಸದೇಕೆ ಹೋದಿರೆಂದು ಅರಿಯೆನು
ಇಂದು ನನ್ನ ನೋವನ್ನೆಲ್ಲ ಯಾರ ಬಳಿಯೊಳುಸುರಲಿ?
ನನ್ನ ‘ಬಾಳದೋಣಿ’ ಉಳುಗಿ ಹೋಯ್ತು ‘ಜಗದ ಕಡಲಲಿ’
ನಿಮ್ಮನುಳಿದ ನನ್ನ ಬಾಳಿಗಿನ್ನು ಅರ್ಥವೇನಿದೆ?
ಬರಿದೆ ವ್ಯರ್ಥವಾದ ಬದುಕು ನೋವು ಸದಾ ಕೊರೆದಿದೆ.
(೨೦೦೨ರಲ್ಲಿ ಬರೆದುದು. ದೊಡ್ಡಪ್ಪನ ನೆನಪಿನಲ್ಲಿ)
೧೬) ಅಣ್ಣನಿಗೆ
ಏನು ಬರೆಯಲಿ?
ಅಣ್ಣ ಹೇಗೆ ಬರೆಯಲೀ!
ಮನದ ಒಳಗಿನ ಗಾಯ ಮುಚ್ಚಿ
ಮೇಲೆ ನಗುವಿನ ‘ಲೇಪ’ ಹಚ್ಚಿ
ಉಂಡು, ಉಟ್ಟು ದಿನವ ಕಳೆವ
ನನ್ನ ಪರಿಯ ಬರೆಯಲೇ?
ನಾನು ಏನು ಬರೆಯಲೀ?
ಅಣ್ಣ ಹೇಗೆ ಬರೆಯಲೀ!
ಬಾಳಿಗೊಂದು ಗುರಿಯು ಬೇಕು
ಅದನು ತಲಪೆ ಛಲವು ಬೇಕು
ಯಾವುದೊಮ್ಡು ಇಲ್ಲದಿರುವ
ನನ್ನ ‘ದಿನಚರಿ’ಯನು ಬರೆಯಲೇ?
ಏನು ಬರೆಯಲೀ?
ಅಣ್ಣ ಹೇಗೆ ಬರೆಯಲೀ!
ಮದುವೆ ಮುಂಜಿ ‘ಶುಭ’ದ ಕಾರ್ಯ
ಮುದುಡಿ ಹಿಂದೆ ಕುಳಿತು ನೋಳ್ಪ
ಅಶುಭ ಮುಖವು ನನ್ನದೆನುವ
ಮನದ ನೋವ ನುಡಿಯಲೇ?
ಏನು ಬರೆಯಲೀ?
ಅಣ್ಣ ಹೇಗೆ ಬರೆಯಲೀ!
ಮಕ್ಕಳಿಹರು ಯೋಗ್ಯರಾಗಿ
ಉಣಲು, ಉಡಲು ಕೊರತೆ ಇಲ್ಲ
ತಂಗಿ ನಿನಗೆ ಚಿಂತೆ ಏಕೆ?
ಎಂದು ನುಡಿವೆಯಾ? ಅಣ್ಣ
ಬರೆ ಎನುವೆಯಾ?
ನಾನು ಹೇಗೆ ಬರೆಯಲೀ!
ಒಡೆದು ಹೋದ ‘ಒಡ್ಡಿ’ನಿಂದ
ನೀರು ಮರಳಿ ಬರದು ಎನುವ
ಸತ್ಯವನ್ನು ತಿಳಿದರೂ, ಮನ
ನೋವ ಮರೆಯದು! ನಾನು
ಏನು ಬರೆಯಲೀ?
ಅಣ್ಣ ಹೇಗೆ ಬರೆಯಲೀ!
ಯೋಚಿಸುವ ತಲೆ ಖಾಲಿಯಾಗಿ
ಈಗ ಮನೆಯ ಮುದುಕಿಯಾಗಿ
ಕಾಯಿಲೆಗಳ ಜೊತೆಗೆ ನಲುಗಿ
ದಿನವ ಕಳೆವ ನಾನು ಎಂತು
ಕವಿತೆ ಬರೆಯಲೀ!
ಅಣ್ಣ ಹೇಗೆ ಬರೆಯಲೀ?
ಭಾವನೆಗಳ ಒರತೆ ಬತ್ತಿ
ಬರಡು ಭೂಮಿಯಾದ ಮನದಿ
ಕವಿತೆ ಬೀಜ ಮೊಳೆಯಲೆಂತು?
ನೀವೆ ತಿಳಿಸಿರಿ, ಅಣ್ಣ
ಹೇಗೆ ಬರೆಯಲೀ ನಾನು
ಏನು ಬರೆಯಲೀ?
ಮಾತ್ರೆ, ಗಣಗಳೊಂದು ತಿಳಿಯೆ
ಗತಿಯ ಸೂತ್ರ ಮೊದಲೆ ಅರಿಯೆ
ಯಾವುದನ್ನು ತಿಳಿಯದೀಗ
ಹೇಗೆ ಏನ ಬರೆಯಲೀ
ಅಣ್ಣ ನೀವೆ ತಿಳಿಸಿರಿ!
ನಾನು ಏನು ಬರೆಯಲೀ?
ಸ್ವಾಮಿ ಹೋದಿರೆಲ್ಲಿಗೆ ಕವನ ಓದಿ ನಮ್ಮ ಮಾವ (ಜಿ.ಟಿ. ನಾರಾಯಣ ರಾವ್)ಮೆಚ್ಚಿ ದೊಡ್ಡಮ್ಮನಿಗೆ ಒಂದು ಪತ್ರವನ್ನು ಕವನ ರೂಪದಲ್ಲೇ ಬರೆದು ಕೊಟ್ಟಿದ್ದರು ಎಂದು ನನ್ನ ನೆನಪು. ಆ ಪತ್ರಕ್ಕೆ ಪ್ರತಿಯಾಗಿ ದೊಡ್ಡಮ್ಮ ಈ ಕವನ ಬರೆದು ಮಾವನಿಗೆ ಕೊಟ್ಟಿದ್ದರು. ೨೦೦೨ನೇ ಇಸವಿಯಲ್ಲಿ.
ದೊಡ್ಡಮ್ಮ ರಚಿಸಿದ ೧೬ ಕವನಗಳ ಸಂಗ್ರಹ ನನ್ನಲ್ಲಿತ್ತು. ಅದನ್ನು ಇಲ್ಲಿ ಹಾಕಿರುವೆ.
ಅವರಿಗೆ ಸಾಹಿತ್ಯ ರಚನೆಯಲ್ಲಿ ಸಾಕಷ್ಟು ಪ್ರೋತ್ಸಾಹ ದೊರೆತಿದ್ದರೆ ಅವರ ಲೇಖನಿಯಿಂದ ಇನ್ನಷ್ಟು ಕವನ, ಲೇಖನಗಳು ಹೊರಬರುತ್ತಿದ್ದುವು ಎಂದೇ ನಾನು ಎಷ್ಟೋ ಸಲ ಹೇಳಿಕೊಂಡದ್ದಿದೆ. ಸೇಡಿಯಾಪು ಕೃಷ್ಟಭಟ್ಟರ ಸೋದರ ಸೊಸೆ ನಮ್ಮ ದೊಡ್ಡಮ್ಮ .
ದೊಡ್ಡಮ್ಮ ಎರಡು ವರ್ಷಗಳಿಂದ ಬೆಂಗಳೂರಲ್ಲಿ ದೊಡ್ಡಮಗಳು ಲಕ್ಷ್ಮೀ ಜೊತೆ ವಾಸವಾಗಿದ್ದರು. ಇತ್ತೀಚೆಗೆ ಮೂರು ನಾಲ್ಕು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ದೇಹ ಕೃಶವಾಗಿದ್ದರೂ ಮನಸ್ಸು ಬಲು ಚೂಟಿಯಾಗಿಯೇ ಇತ್ತು. ಮಾತುಕತೆ ಎಲ್ಲ ಸರಿಯಾಗಿಯೇ ಇತ್ತು. ನಾನು ಹಾಗೂ ಅಮ್ಮ ೨೦೧೮ ಫೆಬ್ರವರಿ ತಿಂಗಳಲ್ಲಿ ಹೋಗಿ ಅವರನ್ನು ಮಾತಾಡಿಸಿಕೊಂಡು ಬಂದಿದ್ದೆವು. ಖುಷಿಯಲ್ಲಿ ಸುಮಾರು ಹೊತ್ತು ನಮ್ಮೊಡನೆ ಮಾತಾಡಿದ್ದರು.
೨೦೧೮ ಜೂನ್ ನಾಲ್ಕರಂದು ನಾನು ಅಕ್ಕನೊಡನೆ ಮಾತಾಡಿ ದೊಡ್ಡಮ್ಮನ ಆರೋಗ್ಯ ವಿಚಾರಿಸಿದ್ದೆ. ಇನ್ನು ಎಷ್ಟು ದಿನ ಎಂದು ಗೊತ್ತಿಲ್ಲ. ಊಟ ಮಾಡುತ್ತಿಲ್ಲ ಎಂದಿದ್ದಳು. ಜೂನ್ ೫ರಂದು ಬೆಳಗ್ಗೆ ದೊಡ್ಡಮ್ಮ ಇಹಲೋಕ ತ್ಯಜಿಸಿದ್ದರು. ಕೊನೆಗೆ ನನಗೆ ದೊಡ್ಡಮ್ಮನ ಮುಖ ನೋಡುವ ಭಾಗ್ಯ ಸಿಗಲಿಲ್ಲ. ಆಗ ನಾನು ದೂರದ ಅಮೇರಿಕಾದಲ್ಲಿದ್ದೆ. ದೊಡ್ಡಮ್ಮ ತುಂಬುಜೀವನ ನಡೆಸಿ ತೃಪ್ತಿಯಿಂದಲೇ ಇಲ್ಲಿಯ ಜೀವನದ ಆಟ ಮುಗಿಸಿ ಕಾಣದ ಲೋಕಕ್ಕೆ ತೆರಳಿದ್ದಾರೆ. ದೊಡ್ಡಮ್ಮ ಈ ಲೋಕದಲ್ಲಿ ಇಲ್ಲದೆ ಇದ್ದರೂ ನಮ್ಮ ಮನಸ್ಸಿನ ಲೋಕದಲ್ಲಿ ಇನ್ನೂ ಚಿರಾಯುವಾಗಿಯೇ ಇದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ