ಬುಧವಾರ, ಮೇ 2, 2018

ಲಕ್ಕವಳ್ಳಿ ವೈದ್ಯಕೀಯ ಶಿಬಿರ



ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರು, ಮತ್ತು ಜಿಲ್ಲಾ ಕುಟುಂಬ ವೈದ್ಯರ ಸಂಘ ಮೈಸೂರು (ರಿ) ಜಂಟಿಯಾಗಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗಾಗಿ ಅರಣ್ಯದ ಅಂಚಿನಲ್ಲಿ ವೈದ್ಯಕೀಯ ಶಿಬಿರವನ್ನು ಉಚಿತವಾಗಿ ಕಳೆದ ಕೆಲವು ವರ್ಷಗಳಿಂದ   ನಡೆಸುತ್ತಿದೆ. ಈ ಭಾರಿ ಚಿಕ್ಕಮಂಗಳೂರು ಅರಣ್ಯ ಇಲಾಖೆ ಇವರ ಸಹಯೋಗದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿವರ್ಗ ಮತ್ತು ಸುತ್ತಮುತ್ತಲಿನಲ್ಲಿ ವಾಸಿಸುವ ಗ್ರಾಮಸ್ಥರಿಗಾಗಿ ತಾರೀಕು ೧೫-೪-೧೮ರಂದು ವೈದ್ಯಕೀಯ ಶಿಬಿರವನ್ನು ಉಚಿತವಾಗಿ  ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಲಕ್ಕವಳ್ಳಿಯಲ್ಲಿ   ಹಮ್ಮಿಕೊಳ್ಳಲಾಗಿತ್ತು.  ಅದರಲ್ಲಿ ಸ್ವಯಂಸೇವಕಿಯಾಗಿ ಭಾಗಿಯಾಗುವ ಅವಕಾಶ ನನಗೆ ಲಭಿಸಿತ್ತು.

   ನಾವು ಮೈಸೂರಿನಿಂದ ಒಟ್ಟು ೨೧ ಮಂದಿ (೫ ಮಂದಿ ವೈದ್ಯರು, ಮೂರು ಮಂದಿ ತಾಂತ್ರಿಕ ಪರಿಣಿತರು, ಒಬ್ಬರು ಔಷಧೀಯ ಪರಿಣಿತರು, ಇಬ್ಬರು ನರ್ಸಿಂಗ್ ಪರಿಣಿತರು.  ಮತ್ತು ಹತ್ತು ಮಂದಿ ಸ್ವಯಂಸೇವಕರು) ೧೪-೪-೧೮ರಂದು ಔಷಧಿಯ ಡಬ್ಬಗಳನ್ನು ಹೊತ್ತು ಬೆಳಗ್ಗೆ ಆರು ಗಂಟೆಯ ಶಿವಮೊಗ್ಗ ರೈಲನ್ನೇರಿದೆವು. ಡಬ್ಬಗಳನ್ನೆಲ್ಲ ಮೇಲೆ ಜೋಡಿಸಿ ಕುಳಿತೆವು. ಮಾತು, ನಗುವಿನಲ್ಲಿ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ.  ಇಡ್ಲಿ ವಡೆ ತಿಂದೆವು. ೧೦.೧೫ಕ್ಕೆ ತರೀಕೆರೆ ತಲಪಿದಾಗ ರೈಲಿಳಿದೆವು. ‘ಅಮೃತೇಶ್ವರ ದೇವಾಲಯ ನೋಡಿ ಬನ್ನಿ. ನಾನು ಸುಮಾರು ಸಲ ನೋಡಿದ್ದೇನೆ. ಲಗೇಜು ಕಾಯುತ್ತ ನಾನಿಲ್ಲಿ ಕೂರುವೆ’ ಎಂದು ಗೋಪಕ್ಕ ಸಲಹೆ ಕೊಟ್ಟರು. ನಾವಲ್ಲ ಲಗೇಜು ಗೋಪಕ್ಕನಿಗೆ ಒಪ್ಪಿಸಿದೆವು. ಗೋಪಕ್ಕನ ಜೊತೆಗೆ ಚಂದ್ರಣ್ಣನೂ ನಿಂತರು. ಅಲ್ಲಿ ಹೂ ಮಾರುವಾಕೆಯ ಜೊತೆ ಗೋಪಕ್ಕ ಮಾತಾಡುತ್ತ ಕೂತರು.
ಅಮೃತೇಶ್ವರ ದೇವಾಲಯ
ತರೀಕೆರೆಯಿಂದ ಸುಮಾರು ೭ ಕಿಮೀ ದೂರದಲ್ಲಿರುವ ಅಮೃತಪುರದ ಅಮೃತೇಶ್ವರ ದೇವಾಲಯಕ್ಕೆ ಹೋಗಲು ಖಾಸಗಿ ಬಸ್ಸುಗಳು ಇವೆ. ಬಸ್ ದರ ರೂ. ಹತ್ತು . ನಾವು ೧೧ ಗಂಟೆಗೆ ಬಸ್ ಏರಿ ಅಮೃತಪುರದ ೯೦೦ ವರ್ಷ ಹಳೆಯ ಅಮೃತೇಶ್ವರ ದೇವಾಲಯ ತಲಪಿದೆವು.   ವಿಶಾಲವಾದ ಸ್ಥಳದಲ್ಲಿರುವ ಈ ಪ್ರಾಚೀನ ದೇಗುಲ ಗಮನ ಸೆಳೆಯುತ್ತದೆ.


     ಕ್ರಿ.ಶ.೧೧೯೬ರಲ್ಲಿ ಹೊಯ್ಸಳರ ಎರಡನೆಯ ವೀರಬಲ್ಲಾಳನ ಕಾಲದಲ್ಲಿ ಅಮೃತೇಶ್ವರ ದಂಡನಾಯಕ ಕಟ್ಟಿಸಿದ ಈ ದೇವಾಲಯ ಅಭೂತಪೂರ್ವ ಕೆತ್ತನೆಗಳಿಂದ ಕಂಗೊಳಿಸುತ್ತದೆ. ೯೦೦ ವರ್ಷಗಳ ಹಿಂದೆ ಹಚ್ಚಿದ ದೀಪವೊಂದು ಈಗಲೂ ಉರಿಯುತ್ತಿದೆ. ದೀಪಕ್ಕೆ ದಿನಾ  ಲೀಟರುಗಟ್ಟಲೆ ಎಣ್ಣೆ ಹಾಕುತ್ತಾರೆ. ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಅಮೃತೇಶ್ವರ ಲಿಂಗದಮೇಲೆ ಬೀಳುತ್ತದೆ ಎಂದು ಅರ್ಚಕರು ತಿಳಿಸಿದರು. 
     ದೇವಾಲಯವು ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖಮಂಟಪದಿಂದ ಕೂಡಿದೆ. ಗರ್ಭಗುಡಿಯಲ್ಲಿ ಅಮೃತೇಶ್ವರ ಲಿಂಗವಿದ್ದರೆ, ನವರಂಗದಲ್ಲಿ ಸರಸ್ವತೀ, ಸಪ್ತಮಾತೃಕಾ ಮೊದಲಾದ ಶಿಲ್ಪಗಳಿವೆ. ಸುಮಾರು ಐದು ಅಡಿ ಎತ್ತರವಿರುವ ಶಾರದೆಯ ಶಿಲ್ಪವಂತೂ ಅತ್ಯಂತ ಸುಂದರವಾಗಿದೆ. ನವರಂಗದ ದಕ್ಷಿಣದ್ವಾರದ ಮುಖಾಂತರ ಹೊರಕ್ಕೆ ಬಂದರೆ ಇನ್ನೊಂದು ಮಂಟಪವಿದೆ. ಅದನ್ನು ಸರಸ್ವತೀ ಮಂಟಪವೆಂದು ಹೇಳುತ್ತಾರೆ.





   ಈ ದೇವಾಲಯದ ವಿಶೇಷತೆ ಎಂದರೆ ವಿಶಾಲವಾದ ಮುಖಮಂಟಪ. ಸುಮಾರು ನಲವತ್ತು- ಐವತ್ತಕ್ಕೂ ಹೆಚ್ಚು ವಿವಿಧ ವಿನ್ಯಾಸದ ಆಕರ್ಷಕ ಕಂಬಗಳಿಂದ ಕೂಡಿದ ಮಂಟಪ ೧೨೦೬ರಲ್ಲಿ ರಚಿತವಾಗಿದೆಯೆಂದು ಅಲ್ಲಿಯ ಮಾರ್ಗದರ್ಶಕರು ತಿಳಿಸಿದರು. ಮೂವತ್ತಕ್ಕೂ ಹೆಚ್ಚು ಅಂಕಣಗಳಿದ್ದು, ಪ್ರತೀ ಅಂಕಣಕ್ಕೂ ಪ್ರತ್ಯೇಕ ಭುವನೇಶ್ವರಿಗಳಿವೆ. ಅದರ ವಿಶೇಷವೆಂದರೆ ಒಂದರಂತೆ ಇನ್ನೊಂದಿಲ್ಲ.  ಭುವನೇಶ್ವರಿಗಳಲ್ಲಿ ಗಣೇಶ, ಶಿವ, ಷಣ್ಮುಖ, ಬ್ರಹ್ಮ, ಸರಸ್ವತೀ, ವೇಣುಗೋಪಾಲ ಮೊದಲಾದ ಶಿಲ್ಪಗಳಿವೆ. ಶಿಲ್ಪಗಳ ಸಾಲಿನಮೇಲೆ ಅಷ್ಟದಿಕ್ಪಾಲಕರನ್ನೂ ಕೆತ್ತಿರುವುದನ್ನು ನೋಡಬಹುದು. ಮಂಟಪದ ನಡುವೆ ಸುಂದರ ಕೆತ್ತನೆಯ ನಂದಿಯಿದೆ.

ದೇಗುಲದ ಹೊರಭಾಗದ ಗೋಡೆಗಳಲ್ಲಿ ಶಿಲ್ಪಕಲೆಯ ಮನೋಜ್ಞ ವೈಭವವನ್ನು ನೋಡಬಹುದು. ಕುಸುರಿ ಕೆತ್ತನೆಗಳನ್ನು ಒಳಗೊಂಡ ಶಿಖರಗಳ ಸಣ್ಣ ಸಣ್ಣ ಮಾದರಿಗಳು ಕಣ್ಮನ ಸೆಳೆಯುತ್ತವೆ. ಇವುಗಳ ಮಧ್ಯದಲ್ಲಿ ಆನೆ, ನವಿಲು, ಕಪಿ, ಸಿಂಹ, ಹಂಸ, ಮಿಥುನ ಶಿಲ್ಪಗಳಿವೆ. ಗೋಡೆಗಳ ಸುತ್ತಲೂ ಭಾಗವತ, ರಾಮಾಯಣ ಮತ್ತು ಮಹಾಭಾರತದ ಕಥಾನಕಗಳನ್ನು  ವಿಗ್ರಹರೂಪದಲ್ಲಿ ಕೆತ್ತಲಾಗಿದೆ. ಇವುಗಳನ್ನು ಮಾರ್ಗದರ್ಶಕರ ವಿವರಣೆಯೊಡನೆ ನೋಡಿದರೆ ಮಾತ್ರ ಚೆನ್ನಾಗಿ ಅರ್ಥವಾದೀತು. ಎಲ್ಲವನ್ನೂ ನೋಡಲು ಕನಿಷ್ಟ ಮೂರು ನಾಲ್ಕು   ಗಂಟೆಗಳದರೂ ಬೇಕೇಬೇಕು.
     ಭಾಗವತ ಕಥಾ ಪ್ರಸಂಗದ ಕೃಷ್ಣನ ಜನನ, ವಸುದೇವ ಯಮುನಾ ನದಿ ದಾಟುವುದು, ಗೋಕುಲದಲ್ಲಿ ಕೃಷ್ಣನ ಬಾಲಲೀಲೆ ತುಂಟಾಟ, ಕಾಳಿಂಗಮರ್ಧನ, ಗೋವರ್ಧನಧಾರಿ, ವೇಣುಗೋಪಾಲ, ಕಂಸ ವಧೆಯ ಪ್ರಸಂಗಗಳನ್ನು ವಿವರವಾಗಿ ಬಿಡಿಸಲಾಗಿದೆ . ಈ ಎಲ್ಲಾ ಕೆತ್ತನೆಗಳನ್ನು ನೋಡುತ್ತ ಹೋದಂತೆ ಅಬ್ಬ ಎಂಥ ಕುಶಲಕರ್ಮಿಗಳು, ಅದೇನು ನಾಜೂಕಿನಿಂದ ಈ ಶಿಲ್ಪಗಳನ್ನು ಕೆತ್ತಿದ್ದಾರೆ ಎಂಬ ಉದ್ಗಾರ ನಮ್ಮಿಂದ ಹೊರಡುತ್ತದೆ.
      ಮಹಾಭಾರತದ ಕಥೆಯ ಪಾಂಡವರ ಜನನದಿಂದಾರಂಭಿಸಿ ಭೀಮನು ಕೌರವರನ್ನು ಮರದಿಂದ ಬೀಳಿಸುವುದು, ದ್ರುಪದನ ಗರ್ವಭಂಗ, ಅರಗಿನ ಮನೆ ಭಸ್ಮ, ಬಕಾಸುರ ವಧೆ, ಮತ್ಸ್ಯಯಂತ್ರ ಛೇದನ, ದ್ರೌಪದೀ ಸ್ವಯಂವರ, ರಾಜಸೂಯಯಾಗ, ಕೌರವರ ಪಾಂಡವರ ಪಗಡೆಯಾಟ, ದ್ರೌಪದೀ ವಸ್ತ್ರಾಪಹರಣ, ವನವಾಸ,  ಕಿರಾತಾರ್ಜುನವಿಜಯ ಮುಂತಾದ ಪ್ರಸಂಗಗಳು ಕಲ್ಲಿನಲ್ಲಿ ಚಿತ್ರಿತವಾದದ್ದನ್ನು ನೋಡಲು ನಮ್ಮ ಎರಡು ಕಣ್ಣು ಸಾಲದು. ಹಾಗಾಗಿ ಮೂರನೇ ಕಣ್ಣಾದ ಕ್ಯಾಮರಾದಲ್ಲೂ  ನೋಡಿ ಸೆರೆಹಿಡಿದದ್ದಾಯಿತು!
  ರಾಮಾಯಣದ ಕಥೆಯಲ್ಲಿ ಬರುವ ದಶರಥನ ಪುತ್ರಕಾಮೇಷ್ಠಿ ಯಾಗ, ಮೂವರು ರಾಣಿಯರು, ನಾಲ್ವರು ಮಕ್ಕಳು, ರಾಮಲಕ್ಷ್ಮಣರು ವಿಶ್ವಾಮಿತ್ರನೊಡನೆ ಹೋಗುತ್ತಿರುವುದು, ತಾಟಕಿಯ ವಧೆ, ವನವಾಸದ ದೃಶ್ಯಗಳು, ಸ್ವರ್ಣಮೃಗದ ಬೇಡಿಕೆ, ಸೀತಾಪಹರಣ, ವಾಲಿ-ಸುಗ್ರೀವರ ಯುದ್ಧ, ಸೇತುಬಂಧ, ಕುಂಭಕರ್ಣನನ್ನು ಎಬ್ಬಿಸುವುದು, ಯುದ್ಧದ ಪ್ರಸಂಗಗಳು ಇತ್ಯಾದಿ ಶಿಲ್ಪ ಕೆತ್ತನೆಗಳಿವೆ. ಯಾರಾದರೂ ಕೆತ್ತನೆ ಮುಂದುವರಿಸುವುದಾದರೆ ಮುಂದುವರಿಸಲಿ ಎಂಬ ಉದ್ದೇಶದಿಂದ ಕೆಲವೆಡೆ ಖಾಲಿ ಸ್ಥಳ ಬಿಟ್ಟಿದ್ದಾರೆ. ಇದುವರೆಗೂ ಅಂತ ಪ್ರತಿಭಾಶಾಲಿಗಳು  ಕಂಡು ಬಂದಿಲ್ಲ.






  ಚಿಕ್ಕಮಂಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಮೃತಾಪುರದಲ್ಲಿ ಹತ್ತು ಶಾಸನಗಳು ದೊರೆತಿವೆ. ಕನ್ನಡ ಸಾಹಿತ್ಯಲೋಕದ ಮೇರುಕವಿ ಜನ್ನ ರಚಿಸಿರುವ ಎರಡು ಶಾಸನಗಳಲ್ಲಿ ಒಂದು ಶಾಸನ ಇಲ್ಲಿದೆ. ಕ್ರಿ.ಶ. ೧೧೯೮ ಜನವರಿ ಒಂದಕ್ಕೆ ಸರಿಹೊಂದುವ ಈ ಶಾಸನದ ರಚನೆ ಜನ್ನನದು. ಕಲ್ಲಿನಲ್ಲಿ ಕೆತ್ತಿದವನು  ಮಲ್ಲೋಜ. ಪುಟ್ಟ ಚಂಪೂ ಕಾವ್ಯವೆನಿಸಿರುವ ಈ ಶಾಸನದಲ್ಲಿ ಚೈತ್ರಪರ್ವ ಹಬ್ಬದ ಬಗ್ಗೆ ವಿವರಗಳಿವೆಯಂತೆ. ಅಮೃತೇಶ್ವರ ದೇವಾಲಯವನ್ನು ಕಟ್ಟಿಸಿದ ಹೊಯ್ಸಳ ವೀರಬಲ್ಲಾಳನ ದಂಡನಾಯಕ ಅಮಿತ ಎಂಬುವವನು ಬಿಟ್ಟ ದಾನ-ದತ್ತಿ ವಿಚಾರಗಳನ್ನು ಶಾಸನ ತಿಳಿಸುತ್ತದೆ.    ದೇವಾಲಯಕ್ಕೆ ದೊಡ್ಡ ಪ್ರಾಕಾರವಿದೆ. ಎದುರು ಅಂಗಳದಲ್ಲಿ ಹುಲ್ಲುಹಾಸು, ಹೂವಿನಗಿಡಗಳನ್ನು ಬೆಳೆಸಿದ್ದಾರೆ. ಈ ದೇವಾಲಯದ ಉಸ್ತುವಾರಿ ಪುರಾತತ್ತ್ವ ಪ್ರಾಚ್ಯ ಇಲಾಖೆಯವರದು.

.  ದಾಸೋಹ
ದೇವಾಲಯದ ಪಾರ್ಶ್ವದಲ್ಲಿ ಅನ್ನ ದಾಸೋಹಕ್ಕಾಗಿ ಕಟ್ಟಡವಿದೆ. ಅಲ್ಲಿ ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ನಿತ್ಯ ಅನ್ನ ದಾಸೋಹವಿದೆ. ಅಲ್ಲಿ ನಾವು ಅನ್ನ ಸಾಂಬಾರು, ಪಾಯಸ, ಮಜ್ಜಿಗೆ ಊಟ ಮಾಡಿ ಯತಾನುಶಕ್ತಿ ದೇಣಿಗೆ ಸಲ್ಲಿಸಿದೆವು.


 ಊಟವಾಗಿ ನಾವು ೧.೪೫ಕ್ಕೆ ಬಸ್ಸೇರಿ ತರೀಕೆರೆಗೆ ೨.೩೫ಕ್ಕೆ ತಲಪಿದೆವು. ತರೀಕೆರೆ- ಅಮೃತಪುರ  ಖಾಸಗಿ ಬಸ್ಸುಗಳ ಸೇವೆ ಸಾಕಷ್ಟು ಇದೆ. ಹಾಗಾಗಿ ದೇವಾಲಯ  ವೀಕ್ಷಣೆಗೆ ತೆರಳಲು ಪ್ರವಾಸಿಗರಿಗೆ ತೊಂದರೆಯಿಲ್ಲ.
ಲಕ್ಕವಳ್ಳಿಯೆಡೆಗೆ ಪಯಣ
ಅರಣ್ಯ ಇಲಾಖೆಯ ಜೀಪ್ ಹಾಗೂ ಲಾರಿಯಲ್ಲಿ ನಾವು ೩ ಗಂಟೆಗೆ ತರೀಕೆರೆಯಿಂದ ಹೊರಟು ಸುಮಾರು ೨೦ಕಿಮೀ ದೂರದ  ಲಕ್ಕವಳ್ಳಿಗೆ ೩.೩೦ಕ್ಕೆ ತಲಪಿದೆವು. ಅಲ್ಲಿಂದ ೩.೪೫ಕ್ಕೆ  ಒಂದು ಜೀಪಿನಲ್ಲಿ ೧೧ ಮಂದಿಯನ್ನು (ಹೆಂಗಸರು ಮಾತ್ರ) ಸಫಾರಿ ಕರೆದುಕೊಂಡು ಹೋದರು. ಸುಮಾರು ೧೮ಸಾವಿರ ಎಕರೆ ಅರಣ್ಯವು ಪ್ರಾಣಿಗಳಿಗೆ ಮೀಸಲಾಗಿದೆ. ಒಂದು ಗಂಟೆ ಕಾಲ ಅರಣ್ಯದಲ್ಲಿ ಒಂದು ಸುತ್ತು ಪಯಣಿಸಿದೆವು. ಮೂರು ಆನೆ, ಜಿಂಕೆ, ನವಿಲು, ಕಾಡುಹಂದಿ ಪ್ರಾಣಿಗಳು ನಮಗೆ ದರ್ಶನವಿತ್ತುವು. ಅರಣ್ಯದಲ್ಲಿ ಮರಗಳೆಲ್ಲ ಒಣಗಿ ಎಲೆ ಉದುರಿ ಬೋಳಾಗಿವೆ. ನೋಡುವಾಗ ಅದೇನೋ ಸಂಕಟವಾಗುತ್ತದೆ. ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿಲ್ಲದೆ, ಹಸುರಿಲ್ಲದೆ ಅರಣ್ಯ ವಾಸ ಕಷ್ಟ.








ಶಿವಮೊಗ್ಗ ಜಿಲ್ಲೆಗೆ ಸೇರಿದ ಅರಣ್ಯ ಇಲಾಖೆಯ ಅತಿಥಿಗೃಹ ಭದ್ರಾ ಜಲಾಶಯದ ಪಕ್ಕದಲ್ಲೇ ಎತ್ತರದ ಸ್ಥಳದಲ್ಲಿದೆ. ಎಂಥ ಚಂದದ ಸ್ಥಳವದು. ಅಲ್ಲಿ ನಮ್ಮ ವಾಸ್ತವ್ಯ.  ನಾವು ಚಹಾ ಕುಡಿದು, ಪಕ್ಕದಲ್ಲೇ ಇದ್ದ ಭದ್ರಾ ಜಲಾಶಯಕ್ಕೆ ಹೋದೆವು. ಗಂಡಸರಾಗಲೇ ಅಲ್ಲಿ ನೀರಲ್ಲಿಳಿದಿದ್ದರು. ಕೆಲವರು ಈಜು ಹೊಡೆದರು. ನಾವು ಅಲ್ಲಿ ಒಂದು ಗಂಟೆ ಕಾಲ ಜಲಾಶಯದ ಬಳಿ ಕುಳಿತು ಸೂರ್ಯಾಸ್ತದ ಸುಂದರ ದೃಶ್ಯವನ್ನು ನೋಡಿದೆವು. ಬಳಿಕ ಜಲಾಶಯದ ದಂಡೆಯಲ್ಲೇ  ನಡೆದು ಹೋಗಿ ಅತಿಥಿ ಗೃಹ ಸೇರಿಕೊಂಡೆವು. ಅಲ್ಲಿ ಪುರಿ ಸೇವನೆಯಾಯಿತು.











ಗಾನಕಾಲಕ್ಷೇಪ
ವೈದ್ಯರಾದ ಪ್ರಹ್ಲಾದ ರಾವ್, ನಾಗೇಂದ್ರಪ್ರಸಾದ್ ವೈದ್ಯೆಯರಾದ ರಮಾ, ಗಾಯತ್ರಿ ಮತ್ತು ಸ್ವಯಂಸೇವಕರಾದ ಪೂರ್ಣಿಮಾ, ಗೋಪಕ್ಕ ಸಂಗೀತ ಕಛೇರಿ ನಡೆಸಿದರು. ಉಳಿದ ನಾವು ತಾಳತಟ್ಟುತ್ತ, ಕೇಳುತ್ತ ತಲೆದೂಗಿದೆವು.
 ರಾತ್ರೆ ೯ ಗಂಟೆಗೆ ಚಪಾತಿ, ಕೂಟು, ಪಲ್ಯ, ಅನ್ನ ಸಾಂಬಾರು, ಮಜ್ಜಿಗೆ ಹಪ್ಪಳ ಇವಿಷ್ಟು ಬಗೆಯಿದ್ದ ಊಟ ಮಾಡಿ ಮಲಗಿದೆವು. ಕೆಳಗೆ ಎರಡು ಕೋಣೆಗಳಲ್ಲಿ ನಾಲ್ಕು ಮಂಚ, ಉಪ್ಪರಿಗೆಯಲ್ಲಿ ದೊಡ್ಡ ಹಾಲಿನಲ್ಲಿ ೧೪ ಮಂಚಗಳಿದ್ದುವು. ನೆಲದಲ್ಲಿ ಪ್ರತ್ಯೇಕ ಹಾಸಿಗೆ ಹಾಕಿ ಮಲಗಲು ಅನುಕೂಲವಾಗಿತ್ತು.  
 ವಾಯುವಿಹಾರ
೧೫.೪.೧೮ರಂದು ಬೆಳಗ್ಗೆ ೬.೩೦ಗೆ ನಾವು (ರಮಾ, ಪೂರ್ಣಿಮಾ, ಗಾಯತ್ರಿ, ಹಾಗೂ ನಾನು) ಒಂದು ಗಂಟೆಗಳ ಕಾಲ ಅಲ್ಲೇ ಸುತ್ತಮುತ್ತ ವಾಯುವಿಹಾರ ನಡೆಸಿದೆವು. ಮೈನಾ, ಬಾಬ್ಲರ್, ಚಂದ್ರಮುಖಿ, ಪಿಕಳಾರ ಇತ್ಯಾದಿ ಹಕ್ಕಿಗಳನ್ನು ನೋಡಿದೆವು. ಇನ್ನು ಕೆಲವು ಹಕ್ಕಿಗಳ ಗಾನವನ್ನು ಕೇಳಿ ಸಂತಸಪಟ್ಟೆವು.






 ತಿಂಡಿಯ ಸಮಯ
ಅಡುಗೆ ಮನೆಯಲ್ಲಿ ಅರಣ್ಯ ಇಲಾಖೆಯ ಬಾಣಸಿಗರಿಂದ ಬಿಸಿಬಿಸಿ ಉಪ್ಪಿಟ್ಟು ತಯಾರಿ ನಡೆಯುತ್ತಿದ್ದುದನ್ನು ಕ್ಲಿಕ್ಕಿಸಿದೆ. ತರಕಾರಿ ಹಾಕಿ ಮಾಡಿದ ಉಪ್ಪಿಟ್ಟು ಬಲು ರುಚಿಯಾಗಿತ್ತು. ೮.೩೦ಗೆ ನಮ್ಮ ಕಾಫಿ ಚಹಾ ಸೇವನೆಯಾಗುವಾಗ ಬೆಳಗ್ಗೆ ೬.೩೦ಗೆ ಸಫಾರಿಗೆಂದು ಹೋಗಿದ್ದ ಗಂಡಸರೆಲ್ಲ ವಾಪಾಸಾದರು.

ವೈದ್ಯಕೀಯ ಶಿಬಿರ.
ನಾವು ೯ ಗಂಟೆಗೆ ಅರಣ್ಯ ಇಲಾಖೆಯ ಲಕ್ಕವಳ್ಳಿ ಕಛೇರಿಗೆ  ಹೋದೆವು. ಅಲ್ಲಿ ವೈದ್ಯಕೀಯ ಶಿಬಿರಕ್ಕೆ ಶಾಮಿಯಾನ ಹಾಕಿ ತಯಾರು  ಮಾಡಿದ್ದರು. ನಮಗೆ ಬೇಕಾದ ಕಡೆ ಬೆಂಚು ಕುರ್ಚಿಗಳನ್ನು ಜೋಡಿಸಿದೆವು. ಔಷಧಿ ಮಾತ್ರೆಗಳನ್ನು ಡಬ್ಬದಿಂದ ಹೊರಗೆ ಜೋಡಿಸಿಟ್ಟೆವು. ಬಂದವರ ದಾಖಲಾತಿಗಾಗಿ ನಾವು ಮೂವರು (ಲತಾ, ಸುಮತಿ, ನಾನು) ಪೆನ್ನು ಕಾಗದ ಜೋಡಿಸಿಕೊಂಡು ಕಾರ್ಯೋನ್ಮುಖರಾದೆವು. ರೋಗಿಗಳ ತಪಾಸಣೆಗಾಗಿ ೫ ಮಂದಿ ವೈದ್ಯರು ಸಜ್ಜಾದರು. ಔಷಧಿ, ಇಸಿಜಿ, ರಕ್ತಪರೀಕ್ಷೆಗಾಗಿ, ಮೂರು ಮಂದಿ ನುರಿತವರು ಸಿದ್ಧತೆ ನಡೆಸಿದರು. ೯.೩೦ಗೆ ಶಿಬಿರ ಸುರುವಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಒಬ್ಬೊಬ್ಬರಾಗಿ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸ್ಠಳೀಯ ಗ್ರಾಮಸ್ಥರು ಬರಲು ಪ್ರಾರಂಭಿಸಿದರು. ಅಲ್ಲೇ ವಸತಿಗೃಹದಲ್ಲಿದ್ದ ಆರೇಳು ಮಕ್ಕಳೂ ಬಂದರು. ನಮ್ಮ ತಂಡದ ಸೋಮಶೇಖರ್ ಆ ಮಕ್ಕಳಿಗೆ ಸಣ್ಣಪುಟ್ಟ ಲೆಕ್ಕ, ಜೋಕು, ಕಥೆ,  ಮ್ಯಾಜಿಕ್ ಎಲ್ಲ ಮಾಡಿ ತೋರಿಸಿದರು. ಆ ಮಕ್ಕಳು  ಖುಷಿಯಾಗಿ ಅಂಕಲ್ ನಾವೂ ನಿಮಗೆ ಪ್ರಶ್ನೆ ಕೇಳುತ್ತೇವೆ ಎಂದು ಅವರ ಸುತ್ತ ನೆರೆದರು. ಅವರಿಗೆ ಚಾಕಲೆಟ್ ಕೊಟ್ಟೆವು. ಕೆಲವು ಮಕ್ಕಳು ಬೆಂಗಳೂರಿನಿಂದ ಇಲ್ಲಿ ದೊಡ್ಡಪ್ಪ, ಮಾವನ ಮನೆ ಎಂದು ರಜದಲ್ಲಿ ಬಂದವರು. ಅವರಿಗೆ ಈ ಊರು ಇಷ್ಟವ?ಅಲ್ಲ ಬೆಂಗಳೂರ? ಎಂದು ಕೇಳಿದೆ. ಅವರೆಲ್ಲ ಕೂಡಲೇ ಇದೇ ಊರು ಇಷ್ಟ ಎಂದುತ್ತರಿಸಿದರು.



ಕನ್ನಡಪ್ರಭ ಪತ್ರಿಕೆಯ ಪತ್ರಕರ್ತರಾದ ಅನಂತ ನಾಡಿಗ್ ಬಂದು  ಆರೋಗ್ಯ ತಪಾಸಣೆ ಮಾಡಿಸಿಕೊಂಡು ವರದಿ  ಬರೆದುಕೊಂಡು ಹೋದರು.
ಡಾ. ಶೈಲಾಜಾ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೆಲಸದ ಸಮಯದಲ್ಲಿ ಬರುವ ಒತ್ತಡವನ್ನು ಹೇಗೆ ಎದುರಿಸಿ ನಿಭಾಯಿಸಬೇಕು? ಎಂಬುದನ್ನು ವಿವರಿಸಿದರು. ಕೆಲವು ಪ್ರಾಣಾಯಾಮಗಳನ್ನು ಹೇಳಿಕೊಟ್ಟರು.






ಗಾಯತ್ರಿ  ದಂತವೈದ್ಯೆ

    ಸುಮಾರು ೨ ಗಂಟೆವರೆಗೂ ಜನ  ಆರೋಗ್ಯ ತಪಾಸಣೆಗಾಗಿ ಬರುತ್ತಲಿದ್ದರು. ಸುಮಾರು ೧೫೦ಕ್ಕೂ ಹೆಚ್ಚುಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅವರಿಗೆಲ್ಲ ಅಂಥಾ ಗಂಭೀರ ರೋಗಗಳೇನೂ ಇರಲಿಲ್ಲ. ಸಣ್ಣಪುಟ್ಟ ಸಮಸ್ಯೆಗಳಷ್ಟೇ ಇದ್ದುದು ನಮಗೆ ಸಮಾಧಾನವಾಯಿತು. ರಕ್ತದೊತ್ತಡ, ರಕ್ತಪರೀಕ್ಷೆ, ಇಸಿಜಿ ನಾವೂ ಕೆಲವರು ಮಾಡಿಸಿಕೊಂಡೆವು.
ಊಟಕ್ಕೆ  ಪಲಾವ್, ಗೊಜ್ಜು, ಮೊಸರನ್ನ ಏರ್ಪಾಡು ಮಾಡಿದ್ದರು. ಮೂರು ಗಂಟೆಗೆ ವೈದ್ಯಕೀಯ ಶಿಬಿರ ಕೊನೆಗೊಂಡಿತು. ಆಗ ಜೋರಾಗಿ ಗಾಳಿ ಬೀಸಿ ಮಳೆ ಬರುವ ಲಕ್ಷಣ ಕಂಡಿತು. ಆದರೆ ಮಳೆ ಬರಲಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಧನ್ಯವಾದ ಸಮರ್ಪಿಸಿದೆವು. ವೈದ್ಯಕೀಯ ಶಿಬಿರದ ಉದ್ದೇಶ, ಇಲ್ಲಿ ನಡೆದ ಶಿಬಿರದ ಬಗ್ಗೆ ಒಂದೆರಡು ಮಾತುಗಳನ್ನು ಡಾ. ನಾಗೇಂದ್ರಪ್ರಸಾದ್ ಹೇಳಿದರು. ಅರಣ್ಯ ಇಲಾಖೆಯ ಬಸವರಾಜ್ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕಕ್ಕೂ, ಹಾಗೂ ವೈದ್ಯರಿಗೂ  ಧನ್ಯವಾದವನ್ನರ್ಪಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳಾದ ಪುನೀತ್ ಹಾಗೂ ರಾಘವೇಂದ್ರ ನಮಗೆ ಸಂಪೂರ್ಣ ಸಹಕಾರ ನೀಡಿ ಸಕಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಿದ್ದರು. ಅವರಿಗೆ ಧನ್ಯವಾದ ಹೇಳಿದೆವು. ಚಹಾಸೇವನೆಯಾಗಿ ಬೀಳ್ಕೊಂಡೆವು.



ಮರಳಿ ಮೈಸೂರು
 ಇಲಾಖೆಯ ಲಾರಿಯಲ್ಲಿ ನಮ್ಮನ್ನು ತರೀಕೆರೆಗೆ ಬಿಟ್ಟರು. ನಮಗೆ ಕೆಲವರಿಗೆ ಶ್ರೀಕಾಂತ ಅವರು ಚಹಾ ಕಾಫಿ ಕೊಡಿಸಿದರು. ತರೀಕೆರೆಯಿಂದ ಸಂಜೆ ೫.೧೫ರ ರೈಲಿನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದೆವು. ಹೊಟ್ಟೆತುಂಬ ಪುರಿ ತಿಂದೆವು. ಪುರಿ ತೆಗೆಸಿಕೊಟ್ಟ ಮಂಜು ತಂಡಕ್ಕೆ ಧನ್ಯವಾದ. ರಾತ್ರೆ ೧೦ ಗಂಟೆಗೆ ಮೈಸೂರು ತಲಪಿದೆವು.
ಈ ಶಿಬಿರದಲ್ಲಿ ಭಾಗವಹಿಸಿ, ಅಳಿಲು ಸೇವೆ ಸಲ್ಲಿಸಲು ಅವಕಾಶವಾದದ್ದು ನನಗೆ ಅತೀವ ಸಂತಸ ನೀಡಿತ್ತು. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರು, ಕುಟುಂಬ ವೈದ್ಯರ ಸಂಘ ಮೈಸೂರು ಇದರ ಹಿಂದಿರುವ ಎಲ್ಲ ರೂವಾರಿಗಳಿಗೂ ನನ್ನ ನಮನಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ