ಮೇಘಾಲಯದ ಚಳಿಯಲಿ ಚಾರಣ ಸಾಹಸ ೧
ಈಶಾನ್ಯ ರಾಜ್ಯಗಳಾದ ಅಸ್ಸಾಂ,
ಮೇಘಾಲಯ, ನಾಗಾಲ್ಯಾಂಡ್ ತ್ರಿಪುರ, ಮಣಿಪುರ, ಅರುಣಾಚಲ, ಸಿಕ್ಕಿಂ ಇವುಗಳನ್ನು ಸೆವೆನ್ ಸಿಸ್ಟರ್ಸ್
ಎಂದು ಕರೆಯುತ್ತಾರೆ. ಕೆಲವು ವರ್ಷಗಳ ಹಿಂದೆ ಆಕಾಶವಾಣಿಯಲ್ಲಿ ಪ್ರತೀದಿನ ಈ ಈಶಾನ್ಯ ರಾಜ್ಯಗಳ ಚೆಲುವಿನ
ಬಗ್ಗೆ ಹೇಳುವುದು ಕೇಳುತ್ತಿದ್ದಾಗ ಇಲ್ಲಿಗೆಲ್ಲ ಅದರಲ್ಲೂ ಮೇಘಾಲಯಕ್ಕಾದರೂ ಒಮ್ಮೆ ಹೋಗಬೇಕು ಎಂದು
ಕನಸಿನ ಅರಮನೆಯೊಳಗೆ ಮಂಥನ ನಡೆಸುತ್ತಿದ್ದೆ. ಆ ಕನಸು ನನಸಾಗುವ ದಿನ ಬಂದೇ ಬಂತು.
ಮೇಘಾಲಯದ ಶಿಲ್ಲಾಂಗಿನಲ್ಲಿ ೫ ದಿನದ ಚಾರಣ ಇದೆ ಬರುವಿರಾ
ಎಂದು ೨೦೧೯ ಆಗಷ್ಟ್ ತಿಂಗಳಲ್ಲಿ ಗೆಳತಿ ಸರೋಜ ಕೇಳಿದಾಗ ಮನಸು ನಲಿಯಿತು. ಅದು ನವೆಂಬರ್ ತಿಂಗಳಲ್ಲಿ
ಎಂದು ತಿಳಿದಾಗ ನಲಿದ ಮನಸು ಮುದುಡಿತು. ಅದೇ ಸಮಯದಲ್ಲಿ ತಂಗಿ ಮಗನ ಮದುವೆ ಇತ್ತು. ಮೈಸೂರಿನಿಂದ ಈ
ಚಾರಣಕ್ಕೆ ಸುಮಾರು ಮಂದಿ ಹೋಗಿ ಬಂದರು. ಆದರೆ ಈ ವಿಷಯ ತಿಳಿಸಿದ ಸರೋಜಳಿಗೆ ಅನಾರೋಗ್ಯದ ಕಾರಣ ಹೋಗಲಾಗಲಿಲ್ಲ. ಫೆಬ್ರವರಿ ೨೦೨೦ರಲ್ಲಿ ಪುನಃ ಮೆಘಾಲಯ ಚಾರಣ ಕಾರ್ಯಕ್ರಮವಿದೆ
ಎಂದು ಸರೋಜ ತಿಳಿಸಿ, ಮೇಘಾಲಯ ಯೂಥ್ ಹಾಸ್ಟೆಲಿನ ಸಿಬ್ಬಂದಿ ದೇಬಶಿಶ್ ಚಕ್ರವರ್ತಿ ಅವರ ದೂರವಾಣಿ ಸಂಖ್ಯೆ
ಕೊಟ್ಟರು. ಅದೇ ಸಮಯದಲ್ಲಿ ಭಾವ ಅಶೋಕವರ್ಧನ ನಮ್ಮಲ್ಲಿಗೆ
ಬಂದಿದ್ದರು. ಅವರ ಕಿವಿಗೂ ಈ ಸುದ್ದಿ ಹಾಕಿದೆ. ಹೆಂಡತಿ ದೇವಕಿ ಸಮೇತ ಬರುತ್ತೇನೆಂದು ಸೂಚನೆ ಕೊಟ್ಟರು.
ತಂಗಿ ಸವಿತಳ ಕಿವಿಗೂ ಸುದ್ದಿ ಊದಿದೆ. ಅವಳೂ ಜೈ ಎಂದಳು. ಅವಳು ಗೆಳತಿ ಸಾವಿತ್ರಿ ಕಿವಿಗೆ ಸುದ್ದಿ
ರವಾನಿಸಿದಾಗ ಸಾವಿತ್ರಿ ತಾನೂ ತಯಾರು ಎಂದರು. ಹೀಗೆ ನಾವು ಐದು ಜನ ಹೋಗುವುದೆಂದು ತಲಾ ರೂ. ೭೧೦೦
ನ್ನು ಯೂಥ್ ಹಾಸ್ಟೆಲ್ ಮೇಘಾಲಯ ಶಾಖೆಗೆ (ಅಂಗೈಯಲ್ಲೇ) ಒಂದು ಸೆಕೆಂಡಿನಲ್ಲಿ ಗೂಗಲ್ ಪೇ ಮೂಲಕ ಕಳುಹಿಸಿದೆ.
ಒಟ್ಟು ಎಂಟು ಬ್ಯಾಚ್ ಇರುವ ಈ ಚಾರಣ ಕಾರ್ಯಕ್ರಮಕ್ಕೆ ನಾವು ಫೆಬ್ರವರಿ ೮ರ ಗುಂಪಿಗೆ ಹೆಸರು ನೋಂದಾಯಿಸಿಕೊಂಡೆವು. ಪತಿ ಅನಂತ ಬರುವುದಿಲ್ಲವೆಂದವನು ಅವರಣ್ಣ ಗಾಳಿ ಹಾಕಿದಾಗ
ಸೈ ಎಂದೊಪ್ಪಿದ! ಹಾಗೆ ಅನಂತವರ್ಧನನನ್ನೂ ಸೇರಿಸಿಕೊಳ್ಳಲು ಹೇಳಿದ್ದಾಯಿತು.
ತಾರೀಕು ೮-೨-೨೦೨೦ರಂದು ಬೆಂಗಳೂರು- ಗೌಹಾತಿಗೆ, ೧೬-೨-೨೦೨೦ರಂದು
ಗೌಹಾತಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಮುಂಗಡ ಟಿಕೆಟನ್ನು ೨೮.೯.೨೦೧೯ರಂದು ಅಭಯಸಿಂಹ ಕಾದಿರಿಸಿ
ಕೊಟ್ಟ. ಈ ಮಧ್ಯೆ ಮೈಸೂರಿನ ಯೂಥ್ ಹಾಸ್ಟೆಲ್ ಸದಸ್ಯರಾದ ಕೃಷ್ಣ ಹೆಬ್ಬಾರ್ ೨೦೧೯ರ ಮೇಘಾಲಯ ಚಾರಣ ವಾಟ್ಸಪ್
ಗುಂಪಿಗೆ ನನ್ನನ್ನೂ ಸೇರಿಸಿದರು. ಹಾಗಾಗಿ ಎಲ್ಲ ಮಾಹಿತಿಗಳು ತಿಳಿಯಲು ಅನುಕೂಲವಾಯಿತು. ಮೇಘಾಲಯ ಚಾರಣ
ಮುಗಿಸಿ ಬಂದ ಮೈಸೂರಿನ ಯೂಥ್ ಹಾಸ್ಟೆಲ್ ಸದಸ್ಯರಾದ ರಾಮನಾಥ, ಹೇಮಮಾಲಾ ಅಲ್ಲಿಯ ಚಾರಣಾನುಭವದ ಬಗ್ಗೆ
ಮಾಹಿತಿ ನೀಡಿ ಉಪಕರಿಸಿದರು.
ತಂಗಿ ಸವಿತಳಿಗೆ ನಮ್ಮೊಡನೆ ಮೇಘಾಲಯಕ್ಕೆ ಬರಲು ಸಾಧ್ಯವಾಗುವುದಿಲ್ಲ,
ಅದೇ ದಿನ ಮಗ ಶರತನ ವೈದ್ಯಕೀಯ ಪದವೀದಾನ ಸಮಾರಂಭ ಇದೆಯೆಂದೂ ತಿಳಿಯಿತು. ಹಾಗಾಗಿ ಅವಳು ಹಿಂದೆ ಸರಿದಳು.
ಅವಳ ಸ್ಥಾನಕ್ಕೆ ಸಾವಿತ್ರಿ ಪತಿ ಗಣಪತಿ ಭಟ್ ಸೇರಿಕೊಂಡು ನೋಂದಾವಣೆ ಮಾಡಿಕೊಂಡರು.
ಪೂರ್ವ ತಯಾರಿ
ಮೇಘಾಲಯಕ್ಕೆ ಹೊರಡುವ ಮೊದಲು ಅಗತ್ಯ ಬಟ್ಟೆಗಳನ್ನು ೨ ಬ್ಯಾಗಿನಲ್ಲಿ
ತುಂಬಿದ್ದಾಯಿತು. ಅಲ್ಲಿ ಚಳಿ ಇದೆಯೆಂದು ತಿಳಿದು ಸ್ವೆಟರ್ ಇತ್ಯಾದಿ ತುಂಬಿದೆವು. ಮೆಡಿಕಲ್ ಸರ್ಟಿಫಿಕೆಟಿಗೆ
ನಮ್ಮ ಕುಟುಂಬ ವೈದ್ಯ ಶ್ರೀನಿವಾಸ ಶರ್ಮರು ಸೀಲು ಸಹಿ ಹಾಕಿ ಕೊಟ್ಟರು. ಜ್ವರ, ತಲೆನೋವು, ಬೇಧಿ, ಇತ್ಯಾದಿಗೆಂದು ಅತ್ಯಗತ್ಯ ಔಷಧಿ
ಮಾತ್ರೆ ಬರೆದುಕೊಟ್ಟದ್ದನ್ನು ತಂದು ಚೀಲಕ್ಕೆ ಹಾಕಿಕೊಂಡೆ. ಚಪ್ಪಲಿ ಶೂ ಕಚ್ಚಿ ಗಾಯವಾದರೆಂದು ಬ್ಯಾಂಡ್ಏಡ್
ಹಾಕಿಕೊಂಡೆ
ರೈಲು ಪ್ರಯಾಣ
೨೦೨೦ ಫೆಬ್ರವರಿ ೭ರಂದು ಸಂಜೆ ನಾನೂ ಅನಂತನೂ ೩.೩೦ರ ಮೈಲಾಡುದೊರೈ
ರೈಲಿನಲ್ಲಿ ಮೈಸೂರಿನಿಂದ ಹೊರಟು ಬೆಂಗಳೂರಿನ ಕೆಂಗೇರಿಯಲ್ಲಿ ಇಳಿದು ರಿಕ್ಷಾದಲ್ಲಿ ಉತ್ತರಹಳ್ಳಿಯಲ್ಲಿರುವ
ಅಭಯಸಿಂಹ ರಶ್ಮಿ ಆಭಾ ಮನೆಗೆ ಸಂಜೆ ೬.೩೦ಕ್ಕೆ ತಲಪಿದೆವು. ೩ರ ಬಾಲೆ ಆಭಾಳಿಗೆ ಖುಷಿಯೋ ಖುಷಿ. ಅವಳು
೨ ಅಜ್ಜಂದಿರು, ೨ ಅಜ್ಜಿಯಂದಿರನ್ನು ಕುಣಿಸಿದ್ದೇ ಕುಣಿಸಿದ್ದು. (ಅಶೋಕಭಾವ ಹಾಗೂ ದೇವಕಿ ಅಕ್ಕ ಹಿಂದಿನ
ದಿನವೇ ಅಲ್ಲಿಗೆ ಬಂದಿದ್ದರು.) ಅಜ್ಜಿ ಅಜ್ಜಂದಿರೊಡನೆ ಮಾತು ಆಟದಲ್ಲಿ ರಾತ್ರೆ ಅವಳಿಗೆ ಮಲಗಲೇ ಮನಸ್ಸಿಲ್ಲ.
ದೀಪ ನಂದಿಸಿ ಮಲಗಲು ಅವಳನ್ನು ಬಲವಂತದಿಂದ ಕರೆದುಕೊಂಡು ಹೋದರು! ಅಲ್ಲಿಂದ ಅಮ್ಮ ಹಸಿವು ಎಂದು ಹೇಳುವುದು
ಕೇಳುತ್ತಲಿತ್ತು. ಹಸಿವು ಎಂದರೆ ಅಮ್ಮ ದೀಪ ಉರಿಸಿ ಕರೆದುಕೊಂಡು ಹೋದಾಳು ಅಷ್ಟು ಹೊತ್ತು ಆಟ ಆಡಲು
ಸಮಯ ಸಿಕ್ಕೀತು ಎಂದು ಅವಳು ಭಾವಿಸಿರಬೇಕು!
ಗೌಹಾತಿಗೆ ವಿಮಾನ ಪಯಣ
ಬೆಳಗ್ಗೆ ೮.೨.೨೦೨೦ರಂದು ಬೆಳಗ್ಗೆ ೪ ಗಂಟೆಗೆ ನಾವು ಹೊರಟು
ತಯಾರಾಗಿ ಉಬರ್ ಕಾರಿನಲ್ಲಿ (ಅಭಯನ ಕೊಡುಗೆ) ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋದೆವು. ಅಲ್ಲಿ ನಮ್ಮ
ಹಾಗೂ ಬ್ಯಾಗ್ ತಪಾಸಣೆಯಾಗಿ ನಾವು ಗೇಟ್ ೯ರ ಬಳಿ ಕುಳಿತೆವು. ಸಾವಿತ್ರಿ ಗಣಪತಿ ಭಟ್ ಬಂದು ಸೇರಿದರು. ಗಣಪತಿ ಭಟ್ ಅವರದು ಇಂಡಿಯನ್ ಏರ್ಲೈನ್ಸ್ ತುಸು ತಡವಾಗಿ. ಮೈಸೂರಿನಿಂದ ತಂದಿದ್ದ ಚಪಾತಿಗೆ ಬೆಂಡೆ
ಚಟ್ನಿ ಸೇರಿಸಿ ತಿಂದೆವು. ೬.೩೦ಗೆ ಇಂಡಿಗೊ ವಿಮಾನ
ಏರಿದೆವು. ೬.೫೫ಕ್ಕೆ ಹೊರಟು ೯.೪೫ಕ್ಕೆ ಗೌಹಾತಿ ವಿಮಾನ ನಿಲ್ದಾಣದಲ್ಲಿಳಿದು ಹೊರಗೆ ಬಂದೆವು. (ಆಭಾ
ಬೆಳಗ್ಗೆ ಎದ್ದು ನೋಡಿದಾಗ ಅಜ್ಜಿ ಅಜ್ಜಂದಿರು ಮಾಯವಾದದ್ದು ಕಂಡು ಅವಳಿಗೆ ಬಹಳ ಬೇಸರವಾಯಿತಂತೆ. ಹಾಗೆಲ್ಲ
ಹೇಳದೆ ಹೋಗಬಾರದಲ್ಲ. ಎಲ್ಲ ಆಭಾ ಮನೆಗೆ ಬನ್ನಿ ಎಂದು ವಾಟ್ಸಪಿನಲ್ಲಿ ವಾಯ್ಸ್ ಮೆಸೆಜು ರವಾನಿಸಿದಳು!)
ಚಿತ್ರ ಕೃಪೆ:ಅಶೋಕವರ್ಧನ |
ಕಾರು ಬಾಡಿಗೆ
ಚೌಕಾಸಿ
ಹೊರಗೆ ಬಂದಾಗ ಕಾರು ಚಾಲಕರು
ಸಾಲು ಸಾಲಾಗಿ ನಿಂತಿದ್ದರು. ಒಬ್ಬರಿಗೆ ರೂ. ೫೦೦
ದರ ಎಂದು ಹಿಂದೆ ಹೋದವರು ನಮಗೆ ತಿಳಿಸಿದ್ದರು. ಆದರೆ ಟ್ಯಾಕ್ಸಿ ವಿಚಾರಿಸಿದರೆ ಯಾರೂ ರೂ. ೫೦೦ಕ್ಕೆ
ಬರಲು ತಯಾರಿಲ್ಲ. ಕೆಲವರು ರೂ. ೫೦೦ಕ್ಕೆ ಒಪ್ಪಿ ಕರೆದರೂ ವಿಮಾನ ನಿಲ್ದಾಣದ ಟ್ಯಾಕ್ಸಿ ಮಾಫಿಯಾ ಚಾಲಕರು
ಅವರನ್ನು ಬೈದು ಅಟ್ಟಿದರು. ಬಹುಶಃ ಅವರು ಬೇರೆ ಊರಿಂದ ಪ್ರಯಾಣಿಕರನ್ನು ಕರೆತಂದವರಿರಬೇಕು. ಎಷ್ಟು
ದರ ಹೇಳಿದರೂ ಬರುತ್ತಾರೆ ನಮಗೆ ಅನಿವಾರ್ಯ ಎಂದು ಅವರಿಗೆ ಗೊತ್ತು. ಅಂತೂ ಇಂತೂ ರೂ. ೪೦೦೦ಕ್ಕೆ
ಇನ್ನೋವಾ ಟ್ಯಾಕ್ಸಿಗೆ ನಮ್ಮನ್ನು ಹತ್ತಿಸಿದರು.
ಶಿಲ್ಲಾಂಗ್ ಕಡೆ ಪಯಣ
ಗಂಟೆ ೧೧ಕ್ಕೆ
ಗೌಹಾತಿಯಿಂದ ಶಿಲ್ಲಾಂಗ್ ಕಡೆಗೆ ಕಾರು ಹೊರಟಿತು. ಮದನದಾಸ್ ಎಂಬ ಚಾಲಕ ಹೆಚ್ಚೇನೂ ಮಾತುಗಾರನಲ್ಲ.
ನಾವು ಕೇಳಿದ್ದಕ್ಕಷ್ಟೇ ಉತ್ತರ. ಗಂಡು ಹೆಸರಿನ ಏಕೈಕ ನದಿ ಬ್ರಹ್ಮಪುತ್ರದ ಪಕ್ಕದ ರಸ್ತೆ ಗಲ್ಲಿಯಲ್ಲಿ
ಹಾದು ಬುರ್ನಿಹಟ್ ಎಂಬಲ್ಲಿ ರಾಜಸ್ಥಾನ ಭೋಜನಾಲಯದಲ್ಲಿ ಊಟಕ್ಕೆ ನಿಲ್ಲಿಸಿದ. (ಚಪಾತಿ ದಾಲ್, ಮಿಶ್ರ
ತರಕಾರಿ ಕೂಟು, ಪರೋಟ, ಅನ್ನ ಮೊಸರು)
ಊಟ ಮಾಡಿ ಆರು ಜನರ ಊಟಕ್ಕೆ ರೂ. ೭೪೦ ಪಾವತಿಸಿ, ಚಪಾತಿ ಮಾಡುವುದನ್ನು
ಹಾಗೂ ಅದನ್ನು ಕೆಂಡದಲ್ಲಿ ಸುಡುವುದನ್ನು ನೋಡಿ ಹೊರಟೆವು.
ಗೌಹಾತಿಯಿಂದ ಶಿಲ್ಲಾಂಗ್ ಸುಮಾರು ೧೧೫ ಕಿಮೀ ಅಷ್ಟೇ ಆದರೂ ಅಂಕುಡೊಂಕಿನ ತಿರುವಿನ ಹಾದಿಯಿಂದಾಗಿ ಹಾಗೂ ವಾಹನ ದಟ್ಟಣೆ
ಅಧಿಕವಿರುವುದರಿಂದಾಗಿ ಪಯಣಕ್ಕೆ ೩.೩೦ ಗಂಟೆ ಬೇಕಾಗುತ್ತದೆ. ದಾರಿಯುದ್ದಕ್ಕೂ ಅನಾನಸು ಮಾರಾಟಕ್ಕೆ ಇಟ್ಟದ್ದನ್ನು ನೋಡಿದೆವು.
ಆಗಷ್ಟೇ ಊಟ ಮಾಡಿರುವುದರಿಂದ ಕೊಳ್ಳಲು ಹೋಗಲಿಲ್ಲ. ಪಯಣ ಮುಂದುವರಿಯುತ್ತ ದಾರಿಯಲ್ಲಿ ಬೆಟ್ಟ ಗುಡ್ಡಗಳಲ್ಲಿ
ಅಡಿಕೆ ಮರ ನೋಡಿ ಅರೆ ನಮ್ಮೂರೇ ಇದು ಎಂಬ ಆಪ್ಯಾಯನಭಾವ ಬಂದಿತು. ಅಲ್ಲಿಯೂ ವಾಣಿಜ್ಯ ಬೆಳೆ ಅಡಿಕೆ
ಎಂದು ಭಾವಿಸಿಕೊಂಡೆವು. ನಮ್ಮೂರಲ್ಲಿಯಂತೆ ಅಡಿಕೆ ಮರದ ಬುಡಕ್ಕೆ ಗೊಬ್ಬರವಾಗಲಿ ತರಗಾಗಲಿ ನೀರು ಏನೂ
ಹಾಕಿ ಆರೈಕೆ ಮಾಡಿದಂತಿಲ್ಲ. ಆದರೂ ಫಸಲು ಚೆನ್ನಾಗಿಯೇ ಇತ್ತು. ವರ್ಷದ ಆರು ತಿಂಗಳು ಮಳೆನೀರೇ ಅವಕ್ಕೆ
ಜೀವಾಧಾರವಿರಬೇಕು.
ಉಮಿಯಮ್
ಸರೋವರ (UMIAM
LAKE)
ಇನ್ನು ಶಿಲ್ಲಾಂಗಿಗೆ ೧೫ ಕಿಮೀ
ಇರುವಾಗ ಉಮಿಯಮ್ ಸರೋವರ ಕಾಣುತ್ತದೆ. ಅಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ಸರೋವರದ ಸೌಂದರ್ಯವನ್ನು
ನೋಡಲು ಇಳಿದೆವು. ಆ ಸ್ಥಳದಿಂದ ಸರೋವರದ ಅಂದ ನೋಡಲು
ರಸ್ತೆ ಬದಿ ಸಾಲಾಗಿ ಹಾಕಿರುವ ಅಂಗಡಿಗಳು ಅಡ್ಡಿಯಾಯಿತು. ಅಲ್ಲಿ ಕಾರು ನಿಲ್ಲಿಸಿದ್ದಕೆ ಪಾರ್ಕಿಂಗ್
ಶುಲ್ಕ ಬೇರೆ ವಸೂಲು ಮಾಡಿದರು!
ಅಂಗಡಿಗಳ ಸೆರೆಯಿಂದ ಸರೋವರ ನೋಡಿ
ನಾಲ್ಕಾರು ಪಟ ಕ್ಲಿಕ್ಕಿಸಿದೆ. ಅಲ್ಲಿ ಅನಾನಸು ತಿಂದೆವು.
ಉಮಿಯಮ್ ಅಣೆಕಟ್ಟನ್ನು ಜಲವಿದ್ಯುತ್
ಉತ್ಪಾದನೆಯ ಉದ್ದೇಶದಿಂದ ನೀರನ್ನು ಸಂಗ್ರಹಿಸಲು ೧೯೬೦ರಲ್ಲಿ ಅಸ್ಸಾಂ ರಾಜ್ಯ ವಿದ್ಯುತ್ ಮಂಡಳಿಯು
ನಿರ್ಮಿಸಿತು. ಭಾರತದ ಈಶಾನ್ಯ ರಾಜ್ಯದಲ್ಲಿ ಜಲವಿದ್ಯುತ್ ಯೋಜನೆಗಾಗಿ ನಿಯೋಜಿಸಲಾದ ಮೊದಲ ಜಲಾಶಯವಿದು.
ಉಮಿಯಮ್ ಸರೋವರ ಮೇಘಾಲಯದ ಪ್ರಮುಖ ಪ್ರವಾಸೀ ತಾಣ. ಇಲ್ಲಿ
ಪ್ರವಾಸಿಗರಿಗೆ ಕಯಾಕಿಂಗ್, ವಾಟರ್ ಸೈಕ್ಲಿಂಗ್, ಸ್ಕೂಟಿಂಗ್, ಬೋಟಿಂಗ್ ಇತ್ಯಾದಿ ಜಲಕ್ರೀಡಾ ಚಟುವಟಿಕೆಗಳಿಗೆ
ಬೆಳಗ್ಗೆ ೯ರಿಂದ ಸಂಜೆ ೫ ಗಂಟೆವರೆಗೆ ಅವಕಾಶಗಳಿವೆ.
ಅಶೋಕಭಾವ ಈ ಸರೋವರ ನೋಡಿದ್ದೇ ೧೯೭೧ರ ದಶಕಕ್ಕೆ ಚಿಮ್ಮಿದರು.
ಅವರು ಎನ್.ಸಿ.ಸಿ ಶಿಬಿರಕ್ಕಾಗಿ ಅಲ್ಲಿಗೆ ಹೋದದ್ದು, ಈ ಉಮಿಯಂ ಸರೋವರವನ್ನು ಆಗ ಬಾರಾಪಾನಿ ಎಂದು ಹೇಳುತ್ತಿದ್ದರು ಎಂಬ ನೆನಪನ್ನು ನಮ್ಮೊಡನೆ ಹಂಚಿಕೊಂಡರು.
ಬಾರಾಪಾನಿ ಎಂದರೆ ವಿಶಾಲ, ದೊಡ್ಡ ನೀರು ಎಂದು ಅರ್ಥ.
ಯೂಥ್ ಹಾಸ್ಟೆಲ್
ಶಿಲ್ಲಾಂಗ್
ಸಂಜೆ ೩.೩೦ಕ್ಕೆ ನಾವು ಶಿಲ್ಲಾಂಗಿನ
ಯೂಥ್ ಹಾಸ್ಟೆಲ್ ತಲಪಿದೆವು. ಅಲ್ಲಿ ದೇಬಶಿಶ್ ಹಾಗೂ ಇನ್ನಿಬ್ಬರು ಯುವಕರು ಇದ್ದರು. ಅವರಿಗೆ ನಮ್ಮ
ಅರ್ಜಿ ನಮೂನೆ, ವೈದ್ಯಕೀಯ ಪ್ರಮಾಣ ಪತ್ರ ಕೊಟ್ಟು ಬ್ಯಾಡ್ಜ್ ಪಡೆದೆವು. ಗಂಡಸರಿಗೆ ಹೆಂಗಸರಿಗೆ ಪ್ರತ್ಯೇಕ
ಡಾರ್ಮಿಟರಿ ವ್ಯವಸ್ಥೆ ಮಾಡಿದ್ದರು. ಅಲ್ಲಿ ನಮ್ಮ ವಾಸ್ತವ್ಯ. ನಮ್ಮ ಕೋಣೆಯಲ್ಲಿ ೧೯ ಮಂಚ ಹಾಗೂ ಹಾಸಿಗೆ
ಇದ್ದುವು.
ಶಿಲ್ಲಾಂಗ್ ಬೀದಿಯಲ್ಲಿ ಸುಮಾರು ೨ಕಿಮೀ ಸುತ್ತಿದೆವು. ರಸ್ತೆಬೀದಿಯುದ್ದಕ್ಕೂ ಸಾಗುವಾಗ ಗುಲಾಬಿಮರ ಗಮನ ಸೆಳೆಯಿತು. ಅಲ್ಲಿ ರಿಕ್ಷಾ ಕಂಡು ಬರಲಿಲ್ಲ. ಮಾರುತಿ ೮೦೦ ಕಾರು ರಿಕ್ಷಾದಂತೆ ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಯಲ್ಲಿ ಸಂಚರಿಸುವುದು ಕಂಡಿತು.
ಚಿತ್ರ ಕೃಪೆ:ಅಶೋಕವರ್ಧನ |
ಚಹಾ ಬಿಸ್ಕೆಟ್ ಕೊಟ್ಟರು. ೮ನೇ ತಾರೀಕಿನ ತಂಡದ ೫೧ ಸದಸ್ಯರು
ಬೇರೆ ಬೇರೆ ಊರುಗಳಿಂದ ಬಂದು ಸೇರಿದರು. ಸಂಜೆ ಆರು ಗಂಟೆಗೆ ಎಲ್ಲರನ್ನೂ ಒಂದುಗೂಡಿಸಿದರು. ಪ್ರತಿಯೊಬ್ಬರೂ
ತಮ್ಮತಮ್ಮ ಪರಿಚಯ ಹೇಳಿಕೊಂಡೆವು. ಶಿಲ್ಲಾಂಗ್ ಯೂಥ್
ಹಾಸ್ಟೆಲಿನ ಅಧ್ಯಕ್ಷರು ಮರುದಿನದಿಂದ ೫ ದಿನಗಳವರೆಗೆ ಏನೇನು ಎಲ್ಲಿಗೆ ಹೋಗುವುದು, ಚಾರಣದಲ್ಲಿ ಅನುಸರಿಸಬೇಕಾದ
ನಿಯಮಗಳನ್ನು ಹೇಳಿ ಮುಗಿಸುವುದರೊಂದಿಗೆ ಸಭೆ ಬರ್ಖಾಸ್ತು.
ರಾತ್ರೆ ೭.೩೦ಗೆ ಊಟ. ದೊಡ್ಡದಾದ ಊಟದ ಹಾಲ್ ಇದೆ. ಅಲ್ಲಿ
ಸಾಲಾಗಿ ಹೋಗಿ ಹಸಿ ತರಕಾರಿ, ಚಪಾತಿ ಆಲೂ ಪಲ್ಯ, ಮಿಶ್ರ ತರಕಾರಿ ಕೂಟು (ಮಿಶ್ರ ತರಕಾರಿಗಳಲ್ಲೂ ಆಲೂಗಡ್ಡೆಯೇ
ಪ್ರಧಾನ!) ಅನ್ನ ದಾಲ್, ರಸಗುಲ್ಲ ಪಡೆದು ಊಟ ಮಾಡಿದೆವು.
ಹೊಟ್ಟೆತುಂಬ ಊಟ. ಇಷ್ಟೇ ಎಂಬ ನಿಗದಿ ಇಲ್ಲ. ಯಾರು ಎಷ್ಟು ಬೇಕಾದರೂ ಹಾಕಿಸಿಕೊಳ್ಳಬಹುದು. ಇಷ್ಟೇ
ಸಾಕು ಎಂದು ನಮ್ಮ ಹೊಟ್ಟೆಯೇ ನಿಗದಿಪಡಿಸುತ್ತದೆ! ತರಕಾರಿ ಕೂಟು, ಪಲ್ಯ, ದಾಲ್ ಖಾರ ಉಪ್ಪು ಮಸಾಲೆ
ಎಲ್ಲವೂ ಹದವಾಗಿ ಬೆರೆತು ಬಹಳ ರುಚಿಯಾಗಿತ್ತು.
ಡಾರ್ಮಿಟರಿಯಲ್ಲಿ ಸ್ನಾನಕ್ಕೆ
ಬಿಸಿನೀರು ವ್ಯವಸ್ಥೆ ಇತ್ತು. ೨ ಕಕ್ಕೂಸು, ಒಂದು ಬಚ್ಚಲು ಇತ್ತು. ಕೋಣೆಯಲ್ಲಿ ನಾವು ೧೯ ಮಂದಿ ಹೆಂಗಸರು
ಸೇರಿದ್ದೆವು. ಪೂನ, ಮಹಾರಾಷ್ಟ್ರ, ಗುಜರಾತ್ ಇತ್ಯಾದಿ ಕಡೆಗಳಿಂದ ಬಂದವರಿದ್ದರು. ಆ ದಿನ ೬ಡಿಗ್ರಿ
ತಾಪಮಾನ. ಚಳಿ ಇತ್ತು.
ಚಾರಣಕ್ಕೆ ಬಿಳ್ಕೊಡುಗೆ
ತಾರೀಕು ೯-೨-೨೦೨೦ರಂದು ಬೆಳಗ್ಗೆ
೫ ಗಂಟೆಗೆ ಎದ್ದು ನಿತ್ಯವಿಧಿ ಪೂರೈಸಿ ೬.೩೦ ಗಂಟೆಗೆ ಹೊರಟು ತಯಾರಾದೆವು. ನಾಲ್ಕು ದಿನಕ್ಕೆ ಬೇಕಾಗುವ
ಬಟ್ಟೆಗಳನ್ನು ಒಂದು ಚೀಲಕ್ಕೆ ತುಂಬಿ ವ್ಯಾನಿಗೇರಿಸಿದೆವು. ನಾವು ಹೋಗುವ ಸ್ಥಳಗಳಿಗೆ ನಮ್ಮ ಚೀಲವನ್ನು
ತಲಪಿಸುವ ವ್ಯವಸ್ಥೆ ಮಾಡಿದ್ದರು. ಲಗೇಜು ಹೊತ್ತು ಚಾರಣ ಕೈಗೊಳ್ಳುವ ಪ್ರಮೇಯ ಬರಲಿಲ್ಲ. ಸಣ್ಣ ಚೀಲದಲ್ಲಿ
ನೀರು ಹಾಗೂ ಊಟದ ಡಬ್ಬಿ ಮಾತ್ರ ಒಯ್ದರೆ ಸಾಕಿತ್ತು. ಉಳಿದ ಬಟ್ಟೆ ಚೀಲವನ್ನು ಅಲ್ಲೇ ಲಾಕರ್ ಕೋಣೆಯಲ್ಲಿ
ಇಟ್ಟೆವು.
ಬೆಳಗ್ಗೆ ೬.೩೦ಗೆ ಕುಡಿಯಲು ಬಿಸಿನೀರು, ಚಹಾ ತಯಾರು. ೭.೧೫ಕ್ಕೆ
ತಿಂಡಿ ಮಸಾಲೆ ವಡೆ ರೀತಿಯದು ಕೊಟ್ಟರು. ಅದು ನಾಲಗೆಗೆ ಹಿತವೆನಿಸಲಿಲ್ಲ. ಬುತ್ತಿಗೆ ಹುರಿದನ್ನ (ಫ್ರೈಡ್
ರೈಸ್,), ಪಕೋಡ ತುಂಬಿಸಿಕೊಂಡೆವು. ೮ ಗಂಟೆಗೆ ಹೊರಟು ಹೊರಗೆ ಸೇರಿದೆವು. ಅಲ್ಲಿ ೮.೧೫ಕ್ಕೆ ರಾಷ್ಟ್ರಗೀತೆ
ಹಾಡಿ ಧ್ವಜ ಹಾಯಿಸಿ ನಮ್ಮನ್ನು ಚಾರಣಕ್ಕೆ ಬೀಳ್ಕೊಡಲಾಯಿತು.
ಇವತ್ತಿನ ದಿನ ಗುಹೆಗಳಿಗೆ ಭೇಟಿ. (ಮೇಘಾಲಯದಲ್ಲಿ
ಗುಹೆಗಳ ಸಂಖ್ಯೆ ೧೫೮೦ಕ್ಕೂ ಹೆಚ್ಚಿವೆಯಂತೆ. ಅದರಲ್ಲಿ
೯೮೦ ಗುಹೆಗಳನ್ನು ಸಂಪೂರ್ಣವಾಗಿ ಪರಿಶೋಧಿಸಲಾಗಿದೆಯೆಂದು ಗೂಗಲಕ್ಕನ ಮಾಹಿತಿ.)
ನಾವು ೫೧ ಮಂದಿ ಹಾಗೂ ೪ ಮಂದಿ ಮಾರ್ಗದರ್ಶಕರು ಒಂದು ಬಸ್
ಹಾಗೂ ಟಾಟಾ ಸುಮೊ ಹತ್ತಿದೆವು. ಲಟಾರಿ ಬಸ್. ಮೊದಲು ಮುನ್ನುಗ್ಗಿ ಬಸ್ ಹತ್ತುವಲ್ಲಿ ನಾವು ಸೋತೆವು.
ಹಾಗಾಗಿ ನಮಗೆ ಹಿಂದಿನ ಸೀಟು ಲಭಿಸಿತು. ೩ ಗಂಟೆಗಳ ಕಾಲ ದೀರ್ಘ ಪಯಣ. ರಸ್ತೆ ಚೆನ್ನಾಗಿರಲಿಲ್ಲ. ಹಾಗಾಗಿ
ಸೊಂಟ ಕಾಪಾಡಿಕೊಳ್ಳಲು ಹರಸಾಹಸಪಟ್ಟೆವು. ಅಂತೂ ೩ ಗಂಟೆ ಪಯಣಿಸಿ ವಿಶ್ವದ ಉದ್ದದ ಗುಹೆಗೆ ಹೋಗುವ ದಾರಿಗೆ
ತಲಪಿ ಬಸ್ಸಿಳಿದೆವು.
ಕ್ರೆಮ್ ಪುರಿ ಗುಹೆ (Nonglwai krempuri)
ಮೇಘಾಲಯದ ಮಾಸಿನ್ರಾಮ್ನ ಲೈತ್ಸೋಮ್
ಗ್ರಾಮದ ವಿಶ್ವದ ಅತ್ಯಂತ ಉದ್ದದ ಕ್ರೆಮ್ ಪುರಿ ಗುಹೆಗೆ ಹೋಗಲು ಬಸ್ಸಿಳಿದೆವು. ರಸ್ತೆ ಬದಿಯಿಂದ ಮೇಲೆ
ದಿಬ್ಬ ಹತ್ತಿ ನಡೆದೆವು. ದಾರಿ ತುಸು ಕಷ್ಟದ್ದೇ ಆಗಿತ್ತು. ಕೆಲವೆಡೆ ಮೇಲೆ ಹತ್ತಿ ಕೆಳಗೆ ಏಣಿ ಇಳಿದು, ಮುಂದೆ ಕೂತು
ಇಳಿದು ಅಂತೂ ಅರ್ಧ ಗಂಟೆ ನಡೆದು ಗುಹೆ ಇರುವ ಸ್ಥಳ ತಲಪಿದೆವು. ಪ್ರವೇಶಶುಲ್ಕವಿದೆ. (ನಮ್ಮ ನಾಲ್ಕು ದಿನದ ಚಾರಣದಲ್ಲಿ ಎಲ್ಲೆಲ್ಲಿ
ಪ್ರವೇಶ ಶುಲ್ಕ ಕಟ್ಟಬೇಕಿತ್ತೋ ಅಲ್ಲೆಲ್ಲ ಯೂಥ್ ಹಾಸ್ಟೆಲ್ ಮೇಘಾಲಯ ಘಟಕವೇ ಭರಿಸಿತ್ತು). ೨೪೫೮೩ ಮೀಟರು ಉದ್ದದ ಈ ಕ್ರೆಮ್ ಪುರಿ ಮರಳುಗಲ್ಲಿನ ಗುಹೆಯನ್ನು
೨೦೧೬ರಲ್ಲಿ ಪತ್ತೆ ಮಾಡಿದರು.
ಒಂದಿಬ್ಬರು ಮಾರ್ಗದರ್ಶಕರು ಟಾರ್ಚ್ ಹಿಡಿದು ಗುಹೆ ಬಾಗಿಲಲ್ಲಿ
ನಿಂತಿದ್ದರು. ಪ್ರತಿಯೊಬ್ಬರಿಗೂ ಟಾರ್ಚ್ ಕೈಯಲ್ಲಿ ಬೇಕೇಬೇಕು. ಅಷ್ಟು ಕತ್ತಲು ಒಳಗಡೆ. ಗುಹೆಯೊಳಗೆ
ಒಬ್ಬೊಬ್ಬರಾಗಿ ಹೋಗಬೇಕು. ಬೆನ್ನಚೀಲ ಇಲ್ಲೇ ಬಿಟ್ಟು ಹೋಗಿ ಎಂದದ್ದಕ್ಕೆ ನಾವು ಕೆಲವರು ಚೀಲ ಇಟ್ಟು
ಒಳಗೆ ನಡೆದೆವು. ತಲೆಯಲ್ಲಿ ಟೊಪ್ಪಿ, ಸ್ವೆಟರ್ ಎಲ್ಲ ಹಾಕಿಗೊಂಡೇ ಒಳ ಪ್ರವೇಶಿಸಿದೆವು. ಕತ್ತಲೆಗೆ
ಕಣ್ಣು ಹೊಂದಿಕೊಳ್ಳಲು ತುಸು ಸಮಯ ಹಿಡಿಯಿತು. ಗುಹೆಯೊಳಗೆ
ದಾರಿಯೂ ಸಾಹಸಮಯವಾಗಿಯೇ ಇತ್ತು. ಕೆಲವೆಡೆ ಬೆನ್ನು ಬಾಗಿಸಿ ನುಸುಳಬೇಕಿತ್ತು. ಗುಹೆಯೊಳಗೆ ೨ಕಿಮೀ
ದೂರ ನಡೆದು ಶಿಲಾ ರಚನೆಗಳ ಅಂದಚಂದ ನೋಡಿ ಬೆರಗಾದೆವು. ಮರಳುಗಲ್ಲು ಕೆಲವೆಡೆ ತೇವಾಂಶದಿಂದ ಕೂಡಿತ್ತು.
ಕೈ ಮುಟ್ಟಿದಲ್ಲೆಲ್ಲ ಮಣ್ಣು ಕೈಗೆ ಮೆತ್ತಿಕೊಳ್ಳುತ್ತಿತ್ತು. ದಾರಿಯ ಎರಡೂ ಬದಿ ಮಣ್ಣು ಕಲ್ಲುಗಳ
ಪದರದಿಂದ ಮೈಬಟ್ಟೆ ಕಲ್ಲಿಗೆ ತಾಗುತ್ತಿತ್ತು. ನಾನು ಬಿಳಿಬಣ್ಣದ ಸ್ವೆಟರ್ ಹಾಕಿದ್ದೆ! ಗುಹೆಯಿಂದ
ಹೊರಬರುವಾಗ ಅದು ಕೆಂಬಣ್ಣಕ್ಕೆ ತಿರುಗಿತ್ತು! (ನಾಳೆ ಅದನ್ನು ಹಾಕಲು ಸಾಧ್ಯವೇ ಇಲ್ಲದಂತಾಗಿತ್ತು.
ಪುಣ್ಯಕ್ಕೆ ಹೆಚ್ಚುವರಿ ಸ್ವೆಟರ್ ತಂದಿದ್ದೆ. ಹಾಗಾಗಿ ಬಚಾವಾದೆ.) ಗುಹೆಯೊಳಗೆ ಗಾಳಿಯಾಡದ ಕಾರಣದಿಂದಲೋ
ಜನರ ದಟ್ಟಣೆಯಿಂದಲೋ ಒಳಗೆ ಸೆಖೆ ಬೇರೆ. ಸ್ವೆಟರ್ ತೆಗೆದು ಬರಬೇಕಿತ್ತು ಎಂದು ಪರಿತಪಿಸಿದೆ. ಗೈಡ್
ಮೊದಲೇ ಸೂಚನೆ ಕೊಡಬೇಕಿತ್ತು ಎಂದು ಅವನಿಗೆ ಹಿಡಿಶಾಪ ಹಾಕಿದೆ!
ಚಿತ್ರ ಕೃಪೆ:ಅಶೋಕವರ್ಧನ |
ಗುಹೆಯೊಳಗೆ ದಾರಿಗಳು ಸುಮಾರಿದ್ದುವು. ಗೈಡ್ ಇಲ್ಲದೆ ಹೋದರೆ
ದಾರಿ ತಪ್ಪುವುದು ಖಂಡಿತ. ಕೆಲವೆಡೆ ಕವಲು ದಾರಿ ಕಂಡಾಗ ಗೈಡ್ ಮುಖ ಕಂಡಮೇಲೆಯೇ ನಾವು ಮುಂದುವರಿದದ್ದು.
ಗುಹೆಯೊಳಗೆ ಸುಮಾರು ೨೭ಕಿಮೀ ಇದೆಯಂತೆ. ಆದರೆ ನಮ್ಮನ್ನು ಅಷ್ಟೆಲ್ಲ ದೂರ ಕರೆದುಕೊಂಡು ಹೋಗುವುದಿಲ್ಲ.
ನಮ್ಮನ್ನು ಕರೆದೊಯ್ಯುವ ಗುಹೆಯ ಕೊನೆ ಹಂತದಲ್ಲಿ ನೀರು ಜಿನುಗುತ್ತಿತ್ತು. ಅಲ್ಲಿ ನಿಲ್ಲಿಸಿ ನಮ್ಮ
ಪೋಟೋ ಕ್ಲಿಕ್ಕಿಸಿದರು ಗೈಡ್. ಮತ್ತೆ ಅಲ್ಲಿಂದ ಹೊರಗೆ
ಹೊರಟೆವು. ಅಂತೂ ಅಲ್ಲಲ್ಲಿ ನಿಂತು ಕೇಳಿ ಕೇಳಿ ಹೊರಗೆ
ಬಂದುಬಿಟ್ಟೆವು. ೧೧.೩೦ ಗಂಟೆಗೆ ಗುಹೆಯೊಳಗೆ ಹೋಗಿ ೧.೪೫ಕ್ಕೆ ಹೊರಬಂದೆವು. ಅಷ್ಟು ಜನರಿಗೆ ಗೈಡ್
ಸಂಖ್ಯೆ ಸಾಲದು ಎಂದು ಗುಹೆಯೊಳಗೆ ಅನಿಸಿತು!
ಹೊರಗೆ ಒಂದು ಪೈಪಿನಲ್ಲಿ ನೀರು ಬರುತ್ತಲಿತ್ತು. ಮಣ್ಣಾದ
ಕೈ ಚೆನ್ನಾಗಿ ತೊಳೆದು ತಂದಿದ್ದ ಬುತ್ತಿ ಬಿಚ್ಚಿ ಊಟ ಮಾಡಿದೆವು. ಅಷ್ಟರಲ್ಲಿ ಗುಹೆಯಿಂದ ಒಬ್ಬೊಬ್ಬರಾಗಿ
ಹೊರಗೆ ಬರುತ್ತಲಿದ್ದರು.
ನಾವು ಊಟ
ಮಾಡಿ ಅಲ್ಲಿಂದ ಹೊರಟು ಬಂದು ಬಸ್ ಹತ್ತಿದೆವು. ಎದುರು ಸೀಟಿನಲ್ಲಿ ಜಾಗ ಹಿಡಿದು ಈ ಸಲ ನಾವು ಜಾಣರಾದೆವು!
ಒಬ್ಬೊಬ್ಬರಾಗಿ ಬಂದು ಬಸ್ ಹತ್ತಿ ಅಲ್ಲಿಂದ ಹೊರಡುವಾಗಲೇ ಗಂಟೆ ೩.೩೦ ಆಗಿತ್ತು.
ಮಾವ್ಜಿಂಬುಯಿನ್
ಗುಹೆ (MAWJYMBUIN
CAVE, Mawjymbuin Rd,mawsynram Meghalaya 793113)
ಸ್ವಲ್ಪ ದೂರ ಪಯಣಿಸಿ ಮಾವ್ಜಿಂಬುಯಿನ್
ಗುಹೆಯೆಡೆಗೆ ಬಂದೆವು. ಗುಹೆಗೆ ಹೋಗಲು ರಸ್ತೆಯಿಂದ ಕೆಳಗೆ ಇಳಿಯಬೇಕು. ಈ ಗುಹೆ ಮೇಘಾಲಯದ ಖಾಸಿಬೆಟ್ಟಗಳ
ಮೇಲಿರುವ ಮಾವ್ಸಿನ್ರಾಮ್ ಗ್ರಾಮದಲ್ಲಿದೆ. ಪ್ರವೇಶ:
ಬೆಳಗ್ಗೆ ೯ರಿಂದ ಸಂಜೆ ೫ . ಪ್ರವೇಶ ದರ ರೂ. ೧೦.
ಸುಣ್ಣದ ಮರಳುಗಲ್ಲುಗಳಿಂದ ಕೂಡಿದ ಈ ಗುಹೆ ೨೦೯ ಮೀಟರು
ಎತ್ತರವಿದೆ. ಅತ್ಯಂತ ತೇವವಾದ ಸ್ಥಳವಿದು. ಇಲ್ಲಿ ಶಿವಲಿಂಗಾಕೃತಿಯ ಬಂಡೆಯಿದ್ದು, ಮೇಲೆ ಇನ್ನೊಂದು
ಕಲ್ಲಿನಿಂದ ಈ ಬಂಡೆಗೆ ನೀರು ತೊಟ್ಟಿಕ್ಕುತ್ತದೆ. ಅದೇ ಸೋಜಿಗ. ಜನ ಭಕ್ತಿಭಾವದಿಂದ ಈ ಲಿಂಗಾಕೃತಿಯನ್ನು
ಪೂಜಿಸುತ್ತಾರೆ.
ಮೇಘಾಲಯದಲ್ಲಿ ಸ್ವಚ್ಛತೆಗೆ ಬಹಳ ಆದ್ಯತೆ ವಹಿಸುವುದು ಕಂಡು ಬಹಳ ಖುಷಿ ಆಯಿತು. ಅಲ್ಲಲ್ಲಿ ಬೀದಿಯಲ್ಲಿ, ರಸ್ತೆ ಬದಿಗಳಲ್ಲಿ, ಪ್ರವಾಸೀ ತಾಣಗಳ ಬಳಿ ಬಿದಿರಿನ ಚಂದದ ಬುಟ್ಟಿಯನ್ನು ಕಸ ಹಾಕಲು ಇಟ್ಟಿರುವುದು ಕಂಡಿತು.
ನಾವು ಅಲ್ಲಿ ಪಟ ಕ್ಲಿಕ್ಕಿಸಿಕೊಂಡು ಹೊರಟು ಬಸ್ ಹತ್ತಿದೆವು.
ಸನ್ನಿಫೀಲ್ಡ್
ಸೆಕಂಡರಿ ಸ್ಕೂಲ್ (Sunnyfield
secondary school laitryngew shella bholagani C& RD block East khasihill
dist Meghalaya)
ಸುದೀರ್ಘ ಬಸ್ ಪಯಣದಲ್ಲಿ ದಾರಿಯಲ್ಲಿ
ಒಮ್ಮೆ ಚಹಾಕ್ಕೆ ನಿಲ್ಲಿಸಿ ಹೊರಟು ರಾತ್ರೆ ೮.೪೫ಕ್ಕೆ ಸೊಹ್ರದ ಸನ್ನಿಫೀಲ್ಡ್ ಸೆಕಂಡರಿ ಶಾಲೆ ತಲಪಿದೆವು.
ಅಲ್ಲಿ ನಮ್ಮ ಮೊಕ್ಕಾಂ. ಈ ಶಾಲಾ ಕಟ್ಟಡ ೨೦೦೭ರಲ್ಲಿ ಕಟ್ಟಲ್ಪಟ್ಟಿದೆ.
ಶಾಲಾ ಕೊಟಡಿಯಲ್ಲಿ ನಮಗೆ ಮಲಗಲು ವ್ಯವಸ್ಥೆ ಮಾಡಿದ್ದರು.
ಚಾಪೆ ಹಾಗೂ ಸ್ಲೀಪಿಂಗ್ ಬ್ಯಾಗ್ ಕೊಟ್ಟಿದ್ದರು. ಅಲ್ಲಿಗೆ ನಮ್ಮ ಲಗೇಜು ಮೊದಲೇ ಜೀಪಲ್ಲಿ ಬಂದಿತ್ತು.
ಅದನ್ನು ಪಡೆದು ಕೊಟಡಿ ಸೇರಿದೆವು. ಅಷ್ಟರಲ್ಲಿ ಊಟಕ್ಕೆ ಕರೆ ಬಂತು. ಶಾಲೆಯ ಹಿಂಬದಿ ಊಟ ಮಾಡಲು ಸಣ್ಣ
ಚಪ್ಪರ ಹಾಕಿದ್ದರು. ಅಡುಗೆಗೆಂದು ಪ್ರತ್ಯೇಕ ಚಪ್ಪರವಿತ್ತು. ಊಟ ಕ್ಕೆ ಅನ್ನ ಸಾರು ಪಲ್ಯ, ಹಪ್ಪಳ,
ಬನ್ಸ್ ಹಾಗಿರುವ ಒಂದು ಸಿಹಿತಿಂಡಿ ಇತ್ತು. ಇರುವ ಸ್ಥಳದಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.
ಕುಡಿಯಲು ಬಿಸಿನೀರು ಲಭ್ಯವಿತ್ತು.
ಗುಹೆಯೊಳಗೆ ಹೋಗಿದ್ದರಿಂದ ಮಣ್ಣಾದ ಬಟ್ಟೆ ಬದಲಿಸಿದೆವು.
ತಣ್ಣಗೆ ನೀರಿನಲ್ಲಿ ಕೈಕಾಲು ಮುಖ ತೊಳೆದೆ. ಸ್ನಾನಕ್ಕೆಡೆಯಿರಲಿಲ್ಲ. ಶಾಲೆಯಾದ ಕಾರಣ ಸ್ನಾನಗೃಹವಿರಲಿಲ್ಲ.
ಅದು ಸಣ್ಣ ಕೊರತೆಯೆನಿಸಿತು. ಕಕ್ಕೂಸು ಮೂರೋ ನಾಲ್ಕು ಮಾತ್ರವಿತ್ತು.
ಚಳಿ ಬಹಳ ಜೋರಾಗಿತ್ತು. ಬಹುಶಃ ತಾಪಮಾನ ೪ ಡಿಗ್ರಿ ಇತ್ತೆಂದು
ಕಾಣುತ್ತದೆ. ತಣ್ಣಗೆ ಕೊರೆಯುವ ನಿದ್ದೆಚೀಲದೊಳಗೆ (ಸ್ಲೀಪಿಂಗ್ ಬ್ಯಾಗ್) ನಮ್ಮ ದೇಹ ತೂರಿಸಿ ಮಲಗಿದೆವು.
ಮುಂದುವರಿಯುವುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ