ಭಾನುವಾರ, ಮಾರ್ಚ್ 15, 2020

ಮೇಘಾಲಯದ ಅಲೆಯಲಿ ತೇಲುತ ದೂರ ದೂರ ಭಾಗ ೨

ಮೇಘಾಲಯದ ಚಳಿಯಲಿ ಚಾರಣ ಸಾಹಸ ಭಾಗ ೨
೧೫ಕಿಮೀ ಚಾರಣಕ್ಕೆ ತಯಾರಿ
ತಾರೀಕು ೧೦-೨-೨೦೨೦ ಬೆಳಗ್ಗೆ ೬.೩೦ಗೆ ಚಹಾ ತಯಾರು. ದೊಡ್ಡ ಪಾತ್ರೆಯಲ್ಲಿ ಬಿಸಿನೀರು ಕುದಿಯುತ್ತಲಿತ್ತು.  ಹಲ್ಲುಜ್ಜಿ ಮುಖ ತೊಳೆಯಲು ಆ ಬಿಸಿನೀರು ಉಪಯೋಗಕ್ಕೆ ಬಂತು! ೭. ಗಂಟೆಗೇ ತಿಂಡಿ ತಯಾರು. ಪೂರಿ, ಆಲೂಗಡ್ಡೆ ಕಾಬೂಲಿಕಡ್ಲೆ ಹಾಕಿದ ಕೂಟಕ. ಬಾಳೆಹಣ್ಣು, ಮೊಟ್ಟೆ. ಮೊಟ್ಟೆ ಸಸ್ಯಾಹಾರಿಯೋ ಮಾಂಸಾಹಾರಿಯೋ ಎಂಬ ಪ್ರಶ್ನೆಗೆ ಉತ್ತರ ಸಸ್ಯಾಹಾರಿ ಎನ್ನಬೇಕು! ಏಕೆಂದರೆ ಯೂಥ್ ಹಾಸ್ಟೆಲ್ ವತಿಯಿಂದ ಸಸ್ಯಾಹಾರ ಮಾತ್ರ ಕೊಡಲಾಗುವುದು ಎಂದು ಹೇಳಿದ್ದರು! ಅವರ ಪ್ರಕಾರ ಅದು ಸಸ್ಯಾಹಾರವಾದರೂ ನಾವು ಮುಟ್ಟಲಿಲ್ಲ. ಬುತ್ತಿಗೆ ಚಪಾತಿ ಆಲೂ ತರಕಾರಿ ಸಾಗು ಕೊಟ್ಟಿದ್ದರು.


 ನಾವು ಹೊರಟು ತಯಾರಾದೆವು. ಬಾಕಿದ್ದವರು ಇನ್ನೂ ಹೊರಟಿರಲಿಲ್ಲ. ಸೂರ್ಯಪ್ಪ ಕೆಲಸಕ್ಕೆ ಹೊರಟ ದೃಶ್ಯ ಬಲು ಸುಂದರವಾಗಿತ್ತು. ಅಲ್ಲೇ ಅಡ್ಡಾಡುತ್ತಿದ್ದೆವು.  ಶಾಲೆಯ ಹೊರಗೆ ಅಲ್ಲಿ ಗುಡಿಸಲು ಹಾಕಿದ್ದ ಕಡೆ ಹೋದ ಅನಂತ ಎರಡು ಮಕ್ಕಳನ್ನು ಕರೆತಂದ ಅವರಿಗೆ ಚಾಕಲೆಟ್ ಕೊಟ್ಟು ಫೋಟೊ ಕ್ಲಿಕ್ಕಿಸಿದೆವು. ಮತ್ತೆ ಅವರು ಇನ್ನೊಂದು ಪುಟಾಣಿಯನ್ನು ಕರೆತಂದರು. ಅವಳಿಗೂ ಚಾಕಲೆಟ್ ಕೊಟ್ಟೆವು. ಆಗ ಎಂಥ ಖುಷಿ ಮಕ್ಕಳ ಮೊಗದಲ್ಲಿ.

 ಎಲ್ಲರೂ ಹೊರಟು ಶಾಲೆ ಹೊರಗೆ ಸಾಲಾಗಿ ನಿಂತೆವು. ನಾವು ಒಟ್ಟು ೫೧ ಮಂದಿ. ೨೧ ಮಂದಿ ಹೆಂಗಸರು, ೩೦ ಮಂದಿ ಗಂಡಸರು.  ಆ ದಿನದ ಚಾರಣ ಹೋಗುವ ಸ್ಥಳಗಳ ಬಗ್ಗೆ ಮಾಹಿತಿ ಕೊಟ್ಟರು. ನಮ್ಮೊಡನೆ ಬರುವ ಇಬ್ಬರು ಮಾರ್ಗದರ್ಶಕರ ಪರಿಚಯ ಮಾಡಿದರು. ಈ ದಿನ ಒಟ್ಟು ೧೫ ಕಿಲೋಮೀಟರು ನಡೆದು ಹೋಗಿ ೩  ಜಲಪಾತಗಳ ವೀಕ್ಷಣೆ ಎಂದು ಹೇಳಿದರು.  ನಮ್ಮ ಬ್ಯಾಗ್ ಹೊರಗೆ ತಂದಿಟ್ಟೆವು.  ಜೀಪಿನಲ್ಲಿ ನಾವು ವಾಸ್ತವ್ಯ ಮಾಡುವ ಸ್ಥಳಕ್ಕೆ ಅದನ್ನು ತಲಪಿಸುತ್ತಾರೆ.  ನಾವು ಅಲ್ಲಿಂದ ಹೊರಡುವಾಗ ಗಂಟೆ ೮.೩೦ ಆಗಿತ್ತು. 


ಒಬ್ಬ ಗೈಡ್ ಮುಂದೆ ಇನ್ನೊಬ್ಬ ಎಲ್ಲರಿಂದ ಹಿಂದೆ. ಗೈಡ್ ದಾಟಿ ಯಾರೂ ಮುಂದೆ ಹೋಗತಕ್ಕದ್ದಲ್ಲ ಎಂದು ಎಚ್ಚರ ಹೇಳಿದರು. ಶಾಲೆ ಹಿಂಬದಿಯಿಂದ ನಡೆದು ಅಲ್ಲಿಂದ ಕೆಲವು ಮೆಟ್ಟಲು ಇಳಿದು ಬಯಲು ಪ್ರದೇಶದಲ್ಲಿ ನಡೆದೆವು. ಅಲ್ಲಿ ನಡೆಯುತ್ತ ಸಾಗಿದಂತೆ ಮಣ್ಣು ಕಲ್ಲು ಬೇರೆ ಬೇರೆ ಬಣ್ಣಗಳಲ್ಲಿ ಕಾಣಿಸಿತು. ಸುಣ್ಣದ ಕಲ್ಲು, ರಂಗೋಲಿ ಪುಡಿ ಮಾಡುವಂಥ ಕಲ್ಲು ನೋಡಿ ನಮ್ಮೂರಿಗೆ ರಂಗೋಲಿ ಪುಡಿ ಇಲ್ಲಿಂದಲೇ ಬರುವುದಾ ಎಂದು ಭಾವಿಸಿಕೊಂಡೆ!  ಎತ್ತರದ ದಿಬ್ಬಗಳು, ನಡೆಯುವ ದಾರಿ ಬಳಿ ಮುಳಿಹುಲ್ಲಿನಿಂದ ಆವೃತವಾಗಿತ್ತು. ನಡೆಯುತ್ತ ಸಾಗಿದಂತೆ ಮೈ ಬಿಸಿ ಏರಿ ಹಾಕಿಕೊಂಡಿದ್ದ ಸ್ವೆಟರ್ ಬಿಚ್ಚದೆ ಗತ್ಯಂತರವಿಲ್ಲ ಎಂದು ಅದು ಚೀಲ ಸೇರಿತು.






 ಸುಮಾರು ೨ಕಿಮೀ ನಡೆದಾಗುವಾಗ ಒಂದು ಕೆರೆ ಎದುರಾಯಿತು. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಲು ಅನುವು ಮಾಡಿಕೊಟ್ಟರು. ಅಲ್ಲಿ ಬಂಡೆಗಲ್ಲುಗಳು ನೀರ ಹೊಡೆತಕ್ಕೆ ಚಿತ್ರವಿಚಿತ್ರ ಆಕಾರದಲ್ಲಿ ಕೊರೆದದ್ದು ಕಂಡಿತು. ನೀರು ಸ್ವಚ್ಛ ಸ್ಫಟಿಕದಂತೆ ಇತ್ತು. ಅಲ್ಲಿ ಮುಖಕ್ಕೆ ನೀರು ಹಾಕಿದಾಗ ತಣ್ಣಗೆ ಕೊರೆಯುತ್ತಲಿತ್ತು. ಊರಿನ ಕುಡಿಯುವ ನೀರಿನ ಉದ್ದೇಶದಿಂದ ಹಾಕಿದ ಕಬ್ಬಿಣದ ಪೈಪ್ ಸಾಗಿದ್ದು ಕಂಡಿತು. ಹಳೆ ಪೈಪ್ ಬದಲು ಹೊಸ ನೀಲಿ ಪೈಪ್ ಹಾಕುವ ತಯಾರಿ ನಡೆದಿತ್ತು. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ತಂಡದ ಎಲ್ಲರೂ ಆಗಮಿಸಿದ ಬಳಿಕ ನಾವು ಮುಂದುವರಿಯಲು ಅನುಮತಿ ದೊರೆಯಿತು.


 ಲಿಂಗ್ ಕ್ಸಿಯಾರ್ ಜಲಪಾತ Lyngksiar waterfall cherapunji Meghalaya 793111
ಸುಮಾರು ನಾಲ್ಕು ಕಿಮೀ ನಡೆದು ಸಾಗಿದಾಗ ಲಿಂಗ್ ಕ್ಸಿಯಾರ್  ಜಲಪಾತಕ್ಕೆ ತೆರಳಲುಸಿಮೆಂಟ್ ಕಾಲುದಾರಿ ಮೂಲಕ ಸಾಗಿ  ನೂರು ಮೆಟ್ಟಲು ಇಳಿದು ಸಾಗಿದೆವು. ಅಲ್ಲಿ ಸ್ವಚ್ಛ ಮನಮೋಹಕ ನೀರಿನ ಸುಂದರ ಜಲಪಾತ ಕಂಡಿತು. ನೀರು ಮೂರು ಹಂತದಲ್ಲಿ ಕೆಳಗೆ ಬೀಳುತ್ತದೆ. ಈ ಜಲಪಾತವು ಲಿಂಗ್ ಕ್ಸಿಯಾರ್ ನದಿ ಮೂಲಕ ಹರಿದು ಮುಂದೆ ಸಾಗಿ ಡೈನ್ ಥ್ಲೆನ್ ಜಲಪಾತದಲ್ಲಿ ಕೊನೆಗೊಳ್ಳುತ್ತದೆ. ಟೈವ್ ಲಿಂಗ್ ಕ್ಸಿಯಾರ್ ಎಂದು ಕರೆಯಲ್ಪಡುವ ಅಪರೂಪದ ಆರ್ಕಿಡ್ ಸಸ್ಯದಿಂದ ಈ ಹೆಸರು ಪಡೆದಿದೆ.
   ಅಲ್ಲಿ ಸ್ವಲ್ಪ ಹೊತ್ತು ಕುಳಿತು ಜಲಪಾತವನ್ನು ನೋಡಿದೆವು.  ಇದು ಮಳೆಗಾಲದಲ್ಲಿ ಬಹಳ ಚಂದವಾಗಿ ಕಾಣಬಹುದು ಎಂದು ಭಾವಿಸಿಕೊಂಡೆ. ಮನದಣಿಯೆ ನೋಡಿ ಅಲ್ಲಿಂದ ನಾವು ಹೊರಟೆವು.










ಡೆನ್ ಥ್ಲೆನ್ ಜಲಪಾತ (Dainthlen falls , dainthlen road, cherapunji, Meghalaya 793111
ನಮ್ಮ ನಡಿಗೆ ರಸ್ತೆಯಲ್ಲೇ ಸಾಗಿತು. ವಾಹನ ಸಂಚಾರ ವಿರಳವಾಗಿತ್ತು. ರಸ್ತೆ ಬದಿ ಕಂಬಗಳನ್ನು ಹುಗಿದದ್ದು ಕಂಡಿತು. ರಸ್ತೆ ದೀಪಕ್ಕೆ ಇರಬಹುದಾ? ಅಲ್ಲ ಗಾಳಿಪಂಕ ಹಾಕುವುದಕ್ಕಾ? ಯಾವುದಕ್ಕೆ ಇರಬಹುದು ಎಂಬ ಸಂಶಯ ಕಾಡಿತು. ಇದರ ಬಗ್ಗೆ ನಮ್ಮ ಗೈಡ್ ಬಳಿ ಕೇಳಿದಾಗ ಮಾಹಿತಿ ಲಭ್ಯವಾಗಲಿಲ್ಲ. ಅನತಿ ದೂರದಲ್ಲಿ ಗುಡ್ಡಗಳಲ್ಲಿ  ಗಾಳಿಪಂಕಗಳು ಕಂಡು ಅದಕ್ಕೇ ಇರಬಹುದು ಎಂದು ಭಾವಿಸಿಕೊಂಡು ನಿರಾಳವಾದೆವು! ಕಾಡಿನ ದಾರಿಯಲ್ಲಿ ನಡೆಯುವ ಖುಷಿ ರಸ್ತೆಯಲ್ಲಿ ನಡೆಯುವಾಗ ಇನ್ನು ಸಾಕು ಎನಿಸುತ್ತದೆ. ಎಷ್ಟು ದೂರವಪ್ಪ ಇನ್ನು ಎನ್ನುವಂತಾಗುತ್ತದೆ. ಸುಮಾರು ೬-೭ ಕಿಮೀ ರಸ್ತೆಯಲ್ಲೆ ನಡೆದೆವು.

ಹೀಗೆ ಸಾಗುತ್ತಿದ್ದಂತೆ  ದೂರದಲ್ಲಿ ಸೇತುವೆ ಕಂಡಿತು. ಕೆಳಪಾತ್ರದಲ್ಲಿ ನದಿಯೂ ಕಾಣಿಸಿತು. ಅಲ್ಲಿ ಸ್ಥಳೀಯರು ಬಟ್ಟೆ ಒಗೆಯುತ್ತಲಿದ್ದರು. ಇಲ್ಲಿಯ ಮಂದಿ ವಾರಕ್ಕೊಮ್ಮೆ ವಾಹನದಲ್ಲಿ ಬಂದು ಹೀಗೆ ಬಟ್ಟೆ ಒಗೆಯುತ್ತಾರಿರಬಹುದು ಎಂದು ನಾನೂ ದೇವಕ್ಕಿ ಅಕ್ಕನೂ ತೀರ್ಮಾನಿಸಿದೆವು! ಅಲ್ಲಿ ನೀರು ಹರಿದು ಬಂಡೆಗಳ ಕೊರೆತವಂತೂ ಒಮ್ಮೆ ನಿಂತು ನೋಡುವಂತೆ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಬ್ರಿಟೀಷರ ಕಾಲದಲ್ಲಿ ಕಟ್ಟಲ್ಪಟ್ಟ್ ಈ ಸೇತುವೆ ಭರ್ಜರಿ ಗಟ್ಟಿಯಾಗಿದೆ. ಸೇತುವೆ ದಾಟಿ ಮುಂದೆ ಸಾಗಿದಾಗ ನಾವು ಡೈನ್ ಥ್ಲೆನ್ ಜಲಪಾತದ ಬಳಿ ಬಂದದ್ದೆಂದು ತಿಳಿಯಿತು.




  ಚುರುಮುರಿ ಸವಿ
ಅಲ್ಲಿ ವಿಶಾಲವಾದ ಸ್ಥಳದಲ್ಲಿ ನಾಲ್ಕೈದು ಅಂಗಡಿ ಮಳಿಗೆಗಳು ಹರಡಿದ್ದುವು. ಒಬ್ಬಾಕೆ ಚುರುಮುರಿ ಮಾಡುತ್ತಲಿದ್ದಳು. ಯಾರಿಗೆ ಬೇಕು ಚುರುಮುರಿ ಎಂದು ಅಶೋಕಭಾವ ಕೇಳಿದಾಗ ಬೇಕು ಎಂದು ಹೇಳುವ ಧೈರ್ಯ ಯಾರೂ ಮಾಡಲಿಲ್ಲ! ಬೇಡವೇ ಎಂದು ಪುನಃ ಕೇಳಿದಾಗ ನಾನು ಇರಲಿ ಎಂದೆ! ೨ ಚುರುಮುರಿ ಪೊಟ್ಟಣ ಕೊಂಡರು. ಮುದ್ರಣವಿಲ್ಲದ ಖಾಲೀ ಹಾಳೆಯಲ್ಲಿ ಪೊಟ್ಟಣ ಕಟ್ಟಿರುವುದು ಖುಷಿಯೆನಿಸಿತು. ಚುರುಮುರಿ ನೋಡಲು ಕಪ್ಪಾಗಿದ್ದರೂ (ಕರಿಜೀರಿಗೆಪುಡಿ ಹಾಕಿದ್ದಳು) ರುಚಿಗೆ ಮೋಸವಿರಲಿಲ್ಲ. ಚುರುಮುರಿ ತಯಾರಿಸುವಾಕೆಯ ಬೆನ್ನಲ್ಲಿ ಒಂದು ಮಗು ಮುಖ ಅರಳಿಸುತ್ತ ನೋಡುವುದು ಕಂಡಿತು. ಮಗುವನ್ನು ಮಾತಾಡಿಸಿದೆವು. ಪೋಟೋ ಕ್ಲಿಕ್ಕಿಸಿದೆವು.




 ಚುರುಮುರಿ ತಿನ್ನುತ್ತ ಜಲಪಾತದೆಡೆಗೆ ನಡೆದೆವು. ಜಲಪಾತದ  ಮೇಲ್ಮೈಯಲ್ಲಿ ವಿಶಾಲವಾದ ಬಂಡೆಗಳು ನೀರಿನ ಕೊರೆತದಿಂದಾದ ನೈಸರ್ಗಿಕ ಶಿಲಾ ಕೆತ್ತನೆಗಳು ಧಾರಾಳವಾಗಿವೆ. ಅಲ್ಲಲ್ಲಿ ನೀರು, ಅವನ್ನು ದಾಟಲು ಮರದ ಸೇತುವೆ ಹಾದು ಸಾಗಿದೆವು. ಜಲಪಾತವೆಂದು ಗೋಚರಿಸಲು ಸಣ್ಣದಾಗಿ ನೀರು ಬೀಳುತ್ತಲಿತ್ತು. ಕೆಳಗೆ ಪ್ರಪಾತ. ಹಾಗಾಗಿ ಸುತ್ತಲೂ ಕಂಬಿ ಹಾಕಿದ್ದರು. ಜಲಪಾತಕ್ಕಿಂತಲೂ ಅದರ ಎದುರಿರುವ ಸುಂದರ ಕಣಿವೆ ನೋಡಿ ಬಹಳ ಖುಷಿಯಾಯಿತು. ಅದರ ಸುತ್ತಲೂ ಮರಗಳು ಒತ್ತೊತ್ತಾಗಿ  ಹಸುರಿನಿಂದ ಕಂಗೊಳಿಸುತ್ತಿದ್ದುವು.


ಚಿರಾಪುಂಜಿ ಬಸ್ ನಿಲ್ದಾಣದಿಂದ ಸುಮಾರು ೧೧ ಕಿಮೀ ದೂರದಲ್ಲಿರುವ ಡೈನ್ ಥ್ಲೆನ್ ಜಲಪಾತ ಮೇಘಾಲಯದ ಜಲಪಾತಗಳಲ್ಲಿ ಪ್ರಮುಖವೆನಿಸಿದೆ. ಸುಮಾರು ೯೦ ಮೀಟರ್ ಎತ್ತರದಿಂದ ಕೆಳಗೆ ಧುಮುಕುವ ಈ ಜಲಪಾತ ಮಳೆಗಾಲದಲ್ಲಿ ನಯನ ಮನೋಹರವಾಗಿರಬಹುದು. ಸಮಯ: ಬೆಳಗ್ಗೆ ೬ರಿಂದ ಸಂಜೆ ೫ರವರೆಗೆ. ಉಚಿತ ಪ್ರವೇಶ. ವಾಹನ ನಿಲ್ಲಿಸಲು ಶುಲ್ಕ ರೂ.೨೦ ಪಾವತಿ ಅಲ್ಲಿ ಶುಲ್ಕ ಪಾವತಿಸುವ ಸ್ವಚ್ಛ ಪಾಯಿಖಾನೆಯೂ ಇತ್ತು.
ಜಲಪಾತದ ಎದುರು ಭಾಗದಲ್ಲಿ ಕೂತು ಚಪಾತಿ ಪಲ್ಯ ತಿಂದು ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು. ಆಗ ಮಾರ್ಗದರ್ಶಕರಿಂದ ಹೊರಡಲು ಸೂಚನೆ ಬಂತು. ಆಗ ಗಂಟೆ ೧.೪೫.

  ವೀ ಸಾಡಾಂಗ್ ಜಲಪಾತ (Wei sawdong cherapunji, Meghalaya 793108)
  ನಾವು ಡೆನ್ ಥ್ಲೆನ್ ಜಲಪಾತದ ಗುಂಗಿನಿಂದ ಹೊರಬಂದು ರಸ್ತೆಯಲ್ಲೇ ೨ಕಿಮೀ ನಡೆದು ಎಡಭಾಗದ ಕಾಡಿನ ದಾರಿಯಲ್ಲಿ ಕೆಳಗೆ ಇಳಿದೆವು. ಸ್ವಲ್ಪ ದೂರ ಮೆಟ್ಟಲುಗಳಿದ್ದುವು. ಮುಂದೆ ಸರಿಯಾದ ಮೆಟ್ಟಲುಗಳಿಲ್ಲದೆ ಕೆಳಗೆ ಕಡಿದಾದ ದಾರಿಯಲ್ಲಿ ಸುಮಾರು ೨ಕಿಮೀ ದೂರ ನಡೆಯಬೇಕು. ಅಲ್ಲಲ್ಲಿ ಪ್ರಪಾತಕ್ಕೆ ಏಣಿ ಇಳಿಯಬೇಕು. ಹಾಗೂ ಕೆಲವೆಡೆ ಬಿದಿರ ಏಣಿಯಲ್ಲಿ ಹತ್ತಬೇಕು. ನಾವು ಏಣಿ ಇಳಿಯುವಾಗ, ಒಬ್ಬ ವಯಸ್ಸಾದಾಕೆ ಏಣಿ ಹತ್ತಿ ಮೇಲೆ ಬಂದಾಗ ನಾವು ದಂಗು.  


ಈ ದುರ್ಗಮ ದಾರಿಯಲ್ಲಿ ನಡೆದು ಹೋಗಿ ಜಲಪಾತ ವೀಕ್ಷಿಸಿ ಬಂದ ಆಕೆಯ ಉತ್ಸಾಹ ಕಂಡು ನಾವು ಷಹಭಾಸ್ ಎಂದೆವು. ದಾರಿಯೇನೂ ಸುಗಮವಾಗಿರಲಿಲ್ಲ. ಕಷ್ಟದ್ದೇ ಆಗಿತ್ತು. ಕಾಡಿನ ದಾರಿಯಲ್ಲಿ ಮುಂದೆ ಸಾಗಿದಂತೆ ಇನ್ನೇನು ಜಲಪಾತ ಕಾಣಬಹುದು ಎಂಬ ಊಹೆಯಲ್ಲಿ ಮುನ್ನಡೆದರೆ ಆಗ ದುತ್ತನೆ ಒಂದಷ್ಟು ಮೆಟ್ಟಲುಗಳು ಪ್ರತ್ಯಕ್ಷ!


 ಅಂತೂ ನಡೆದು ಜಲಪಾತದೆಡೆಗೆ ಬಂದಾಗ ಓಹ್ ಎಷ್ಟು ಚಂದ ಇದೆ ಈ ಜಲಪಾತ. ಅಲ್ಲಿಯ ಪರಿಸರ ನೋಡುವಾಗ ನಡೆದು ಬಂದ ಸುಸ್ತೆಲ್ಲ ಮಾಯ! ಮೂರು ಹಂತಗಳಲ್ಲಿ ನೀರು ಹರಿದು ಕೆಳ ಧುಮುಕುವ ಜಲಪಾತದ ಸೌಂದರ್ಯ ಬಣ್ಣಿಸಲು ಪದದ ಕೊರತೆ. ಜಲಪಾತದ ಸುತ್ತ ಬಂಡೆಯ ವಿನ್ಯಾಸವಂತೂ ಬಲು ಸುಂದರವಾಗಿತ್ತು. ಮೇಘಾಲಯದ ಜಲಪಾತ ವೀಕ್ಷಣೆಗೆ ಈ ಸಮಯ ಸಕಾಲವಲ್ಲ. ಆದರೂ ನಮಗೆ ಹೆಚ್ಚೇನೂ ನಿರಾಶೆಯಾಗಲಿಲ್ಲ. ಮಳೆಗಾಲದಲ್ಲಿ ಇನ್ನೂ ಸುಂದರ ಇರಬಹುದು. ಆದರೆ ದಾರಿ ಮಾತ್ರ ಹೋಗಲು ಇದಕ್ಕಿಂತಲೂ ಕಷ್ಟಕರವಾಗಿರಬಹುದು. ಕೆಲವರು ಕೆಳಗೆ ಬರದೆ ವ್ಯೂ ಪಾಯಿಂಟಿನಿಂದ ಜಲಪಾತ ನೋಡಿ ಆನಂದಿಸಿದರಂತೆ.
   ಅಲ್ಲಿಯ ಕಲ್ಲುಗಳ ರಚನೆಗಳ ಬೆರಗನ್ನು ನೋಡುತ್ತ, ಪಟ ಕ್ಲಿಕ್ಕಿಸುತ್ತ ಜಲಪಾತದ ಸೌಂದರ್ಯ ನೋಡುತ್ತ ಸ್ವಲ್ಪ ಹೊತ್ತು ಕುಳಿತೆವು. ಸಮಯವಿದ್ದರೆ ಎಷ್ಟು ಹೊತ್ತು ಬೇಕಾದರೂ ಕೂತರೂ ಕಣ್ಣು ತಣಿಯದು. 









ಇನ್ನು ಇಲ್ಲಿಂದ ಹೊರಡದೆ ಇದ್ದರೆ ೩೦೦ಕ್ಕೂ ಹೆಚ್ಚು ಮೆಟ್ಟಲು ಹತ್ತಿ ಏರು ದಾರಿಯಲ್ಲಿ ಸಾಗಬೇಕಲ್ಲ ಎಂದು ಲಗುಬಗೆಯಿಂದ ಹೊರಟೆವು. ನಾವು ಹೊರಟಾಗ ಕೆಲವರು ಬರುತ್ತಲಿದ್ದರಷ್ಟೆ. ಮಿನಿ ಬಸ್ಸಿನಲ್ಲಿ ಎರಡು ಸಲ ಜನರನ್ನು ಕರೆದೊಯ್ಯಲಾಗುತ್ತದೆ. ೩ ಗಂಟೆಗೆ ಬಸ್ ಬರುತ್ತದೆ. ರಸ್ತೆ ಕಡೆ ಹೋಗಿ ನಿಲ್ಲಿ ಎಂದು ಮಾರ್ಗದರ್ಶಕರು ಸೂಚನೆ ಕೊಟ್ಟರು. ದೇವಕ್ಕಿ ಅಕ್ಕ ನಾನು ಹಾಗೂ ಅನಂತ ನಡೆಯುತ್ತ, ಏದುಸಿರು ಬಿಡುತ್ತ, ಅಲ್ಲಲ್ಲಿ ನಿಂತು ಸುಧಾರಿಸಿಕೊಳ್ಳುತ್ತ, ಕಾಡಿನ ಸೌಂದರ್ಯ ನೋಡುತ್ತ ನಿಧಾನವಾಗಿ ಮುಂದುವರಿದೆವು. ಅಂತೂ ಮೇಲೆ ಹತ್ತಿ ರಸ್ತೆಗೆ ಬಂದು ಬಸ್ ಬರುವ ಸ್ಥಳಕ್ಕೆ ಬಂದಾಗ ಗಂಟೆ ೨.೪೫. ಕಾಲು ಗಂಟೆ ಅಲ್ಲಿ ಕುಳಿತೆವು.


 ೩.೧೦ ಗಂಟೆಗೆ ಬಂದ ಡಾನ್ ಬಾಸ್ಕೋ ಶಾಲೆ ಬಸ್ಸಿನಲ್ಲಿ ನಾವು ೨೫ ಮಂದಿ ಹತ್ತಿದೆವು. ಬಸ್ ಹೊರಟು ಅರ್ಧ ಗಂಟೆಯಲ್ಲಿ ನಮ್ಮನ್ನು ಡಾನ್ ಬಾಸ್ಕೋ ಶಾಲಾ ಆವರಣದೊಳಗೆ ಇಳಿಸಿ ಉಳಿದ ಮಂದಿಯನ್ನು ಕರೆತರಲು ಹೋಯಿತು. 
    ಡಾನ್ ಬಾಸ್ಕೋ ಶಾಲೆ
ಚಿರಾಪುಂಜಿ (ಸೊಹ್ರ)ಯ ಡಾನ್ ಬಾಸ್ಕೊ ಶಾಲಾ ಆವರಣ ಬಹಳ ವಿಸ್ತಾರವಾದ ಜಾಗದಲ್ಲಿದೆ. ಶಾಲಾ ಕಟ್ಟಡ ಬಹಳ ದೊಡ್ದದಾಗಿದೆ. (ಶಾಲಾ ಮಕ್ಕಳಿಗೆ ಈ ಸಮಯದಲ್ಲಿ ಚಳಿಗಾಲದ ರಜೆ ಕೊಟ್ಟಿದ್ದರಂತೆ.)  ಎದುರು ಭಾಗದಲ್ಲಿ ಚರ್ಚ್ ಸಭಾಂಗಣವಿದೆ.






 ಶಾಲಾ ಉಸ್ತುವಾರಿ ಹಾಗೂ ಚರ್ಚ್ ನೋಡಿಕೊಳ್ಳುವವರು ನಮ್ಮನ್ನು ಸ್ವಾಗತಿಸಿದರು. ನಮಗೆ ಶಾಲೆಯ ಒಂದು ಕೊಟಡಿಯಲ್ಲಿ ವಾಸ್ತವ್ಯಕ್ಕೆ ಚಾಪೆ ಹಾಗೂ ಮಲಗುಚೀಲಗಳನ್ನು ಸಾಲಾಗಿ ಇಟ್ಟಿದ್ದರು. ಕೊಟಡಿ ಪಕ್ಕದಲ್ಲೇ ೪ ಪಾಯಿಖಾನೆ ಇತ್ತು. ಒಂದು ಬಾಗಿಲಿಗೆ ಮಾತ್ರ ಚಿಲಕವಿತ್ತು.ಅಲ್ಲಿಯ ಉಸ್ತುವಾರಿ ಸಚಿವರಿಗೆ ಹೇಳಿದ್ದಕ್ಕೆ ಇದು ಹೆಣ್ಣುಮಕ್ಕಳ ಶಾಲೆ. ನೀವೂ ಹೆಂಗಸರೇ ತಾನೆ ಉಪಯೋಗಿಸುವುದು. ಗಂಡಸರು ಯಾರೂ ಬರಲ್ಲ ಹೊಂದಿಕೊಳ್ಳಿ ಎಂದುತ್ತರಿಸಿದರು! ಒಳಗೆ ಹೋದವರಿಗೆ ನಾವು ಹೊರಗಿನಿಂದ ಬಾಗಿಲು ನೂಕಿ ಹಿಡಿದು ಇರುವ ವ್ಯವಸ್ಥೆಗೆ ಹೊಂದಿಕೊಂಡೆವು! ಈ ದಿನ ಒಟ್ಟು ಸು್ಮಾರು ೧೫ ಕಿಮೀ ನಡೆದು ಬಂದಿದ್ದೆವು. ಅಷ್ಟೇನೂ ಕಷ್ಟವೆನಿಸಿರಲಿಲ್ಲ. ಚಹಾ ಬಿಸ್ಕೆಟ್ ತಯಾರಾಗಿತ್ತು. ನಾವು ಕೊಟಡಿಯಲ್ಲಿ ಕುಳಿತು ಮಾಡುವುದೇನು ಎಂದು ಚಿರಾಪುಂಜಿ ಬೀದಿಯಲ್ಲಿ ಸುತ್ತಾಡಲು ಹೊರಟೆವು.


  ನೀರಿನ ಸಮಸ್ಯೆ
ನಾವು ರಸ್ತೆಯಲ್ಲಿ ನಡೆಯುತ್ತ ಸಾಗಿದಾಗ ರಾಮಕೃಷ್ಣ ಮಿಶನ್ನಿನ ಶಾಲೆ ಕಂಡೆವು. ದಾರಿಯಲ್ಲಿ ಸುಮಾರು ಹೋಂ ಸ್ಟೇಗಳು ಕಾಣಿಸಿತು. ಹೆಚ್ಚಿನ ಮನೆಗಳಿಗೆ ನೀರಿನ ವ್ಯವಸ್ಥೆ ಇರಲಿಲ್ಲವೆನಿಸಿತು. ಇಲ್ಲಿ ನೀರು ದಾರಾಳ ಇದ್ದರೂ ನಲ್ಲಿ ವ್ಯವಸ್ಥೆ ಕಾಣಲಿಲ್ಲ. ನೀರು ಕೆಳಗಿನಿಂದ ಹೊತ್ತು ಮನೆಗೆ ಸಾಗಿಸುವುದು ಕಂಡಿತು. ಸಿರಿವಂತರು ವಾಹನದಲ್ಲಿ ಡ್ರಮ್ಮಿನಲ್ಲಿ ತರಿಸಿ ಅವರ ಮನೆಯ ಟ್ಯಾಂಕಿಗೆ ಪಂಪಿನಲ್ಲಿ ನೀರು ತುಂಬಿಸುವುದನ್ನು ನೋಡಿದೆವು. ಒಂದೆರಡು ಕಿಮೀ ಸಾಗಿ ವಾಪಾಸಾಗಿ ಶಾಲೆಗೆ ಬಂದಾಗ ಬಿಸಿಬಿಸಿ ಸೂಪ್ ತಯಾರಾಗಿತ್ತು. ಅದನ್ನು ಕುಡಿದು ಕೋಣೆ ಸೇರಿದೆವು. ಕೋಣೆಯಲ್ಲಿ ಮೊಬೈಲ್ ಚಾರ್ಜಿಂಗಿಗೆಂದು ಮಲ್ಟಿಪಲ್ ಪ್ಲಗ್ ವಯರ್ ಇಟ್ಟಿದ್ದರು.
ಚರ್ಚೆಯ ಪರಾಕಾಷ್ಠೆ
 ಎಲ್ಲರೂ ೭ ಗಂಟೆಗೆ ಗಂಡಸರ ಕೊಟಡಿಗೆ ಬರಬೇಕೆಂದು ನಮಗೆ ಬುಲಾವ್ ಬಂತು. ಅಲ್ಲಿ ಹೋದೆವು. ನಾಳಿನ ಕಾರ್ಯಕ್ರಮದ ಬಗ್ಗೆ ಚರ್ಚಿಸಲು ಕರೆದಿದ್ದರು. ಸುಮಾರು ೧೫-೧೬ಕಿಮೀ ನಡಿಗೆಯಲ್ಲಿ ೩೫೦೦ ಮೆಟ್ಟಲು ಹತ್ತಬೇಕು, ಇಳಿಯಬೇಕು ಎಂದು ಮಾರ್ಗದರ್ಶಕರಾದ ನಿಯೊಮ್ ಹಾಗೂ ವಾನ್ಬಟ್ಸ್ಕೆಮ್ ಚಿತ್ರ ಸಹಿತ ವಿವರಣೆ ಕೊಟ್ಟರು. ಆಗ ಸುರುವಾಯಿತು ಮಹಾರಾಷ್ಟ್ರ ಪೂನಾ ಕಡೆಯವರಿಂದ ಕಾಕಾ ಕಾಕಾ ಎಂಬ ಚರ್ಚೆ. ಅಷ್ಟು ನಡೆಯಲು ಸಾಧ್ಯವಿಲ್ಲ, ಇತ್ಯಾದಿ. ಆಗ ಜೋರುಬಾಯಿಯ ಪಾರು ಎಂಬಾಕೆ ಸೀಮೆ ಸುಣ್ಣ ಪಡೆದು ಹೀಗೆ ಎಂದು ವಿವರಿಸಲು ಹೊರಟಳು. ಆಗ ಕಾಕಾ ಸದ್ದು ಇನ್ನೂ ಜೋರಾಯಿತು. ನಮಗಂತೂ ನಾಳಿನ ಕಾರ್ಯಕ್ರಮದ ಪಕ್ಷಿನೋಟ ಲಭಿಸಿತ್ತು. ಇನ್ನು ಈ ಗದ್ದಲದಲ್ಲಿ ಕೂತು ಪ್ರಯೋಜನವಿಲ್ಲ ಎಂದು ಎದ್ದು ಊಟಕ್ಕೆ ನಡೆದೆವು. ಚಪಾತಿ ಪಲ್ಯ, ತರಕಾರಿಗಳ ಕೂಟು, ಹಸಿ ತರಕಾರಿ, ಅನ್ನ ದಾಲ್, ಹಪ್ಪಳ ಸಮೃದ್ಧ ಊಟ ರುಚಿಯಾಗಿತ್ತು. ಅನಂತ ಮಾತ್ರ ಅವರ ಚರ್ಚಾಕೂಟಕ್ಕೆ ಕಿವಿಯಾಗಿ ಅದು ಮುಗಿದಬಳಿಕವೇ ಊಟಕ್ಕೆ ಎದ್ದದ್ದು! ಕೇಳಲು ನೋಡಲು ಭಾರೀ ತಮಾಷೆಯಾಗಿತ್ತು ಎಂದ. ನಾವು ೧೦ ಗಂಟೆಗೆ ಮಲಗಿದೆವು. ಚಳಿ ಜೋರಾಗಿಯೇ ಇತ್ತು. ಗಣಪತಿ ಭಟ್ ಸಾವಿತ್ರಿ ಹತ್ತಿರದ ಹೋಂಸ್ಟೇಗೆ ಸಂಬಂಧಪಟ್ಟವರಿಗೆ ತಿಳಿಸಿಯೇ ಹೋಗಿದ್ದರು. ಬಾಡಿಗೆ ಶುಲ್ಕ ರೂ.೬೦೦ ಎಂದರು.







  ನೊಹ್ಕಾಲಿಕೈ ಜಲಪಾತ (Nohkalikai Falls)  
  ತಾರೀಕು ೧೧-೨-೨೦೨೦ರಂದು ಬೆಳಗ್ಗೆ ೫.೪೫ಕ್ಕೆ ಕುಡಿಯಲು ಬಿಸಿನೀರು ಇಟ್ಟಿದ್ದರು. ಸ್ನಾನಕ್ಕೆ ವ್ಯವಸ್ಥೆ ಇರಲಿಲ್ಲ. ೭.೧೫ಕ್ಕೆ ತಿಂಡಿ ತಯಾರು. ಪೂರಿ, ಸಾಗು. ಬಾಳೆಹಣ್ಣು ಮೊಟ್ಟೆ. ತಿಂಡಿ ತಿಂದು ಬುತ್ತಿಗೆ ಫ್ರೈಡ್ರೈಸ್ ತುಂಬಿಕೊಂಡೆವು. ೭.೫೦ಕ್ಕೆ ಶಾಲಾ ಬಸ್ ಮೊದಲಿಗೆ ೨೫ ಮಂದಿಯನ್ನು ನೊಹ್ಕಾಲಿಕೈ ಜಲಪಾತದೆಡೆಗೆ ಹೊತ್ತು ಸಾಗಿಸಿತು. ನಾವು ಮೊದಲ ಬಸ್ಸಿಗೇ ಹೊರಟಿದ್ದೆವು.
  ಜಲಪಾತದ ಸುತ್ತಲೂ ಹಸಿರು ಪರ್ವತಗಳ ಸಾಲು. ಕೆಳಗೆ ಹಸುರು ಕಣಿವೆ. ಬೆಳಗಿನ ಬಿಸಿಲಿಗೆ ತಂಪುನೋಟ. ಮೇಘಾಲಯದ ಖಾಸೀ ಬೆಟ್ಟದಲ್ಲಿರುವ ಅತ್ಯಂತ ಹೆಚ್ಚು ಮಳೆ ಬೀಳುವ ಚಿರಾಪುಂಜಿ (ಈಗ ಅತಿ ಹೆಚ್ಚು ಮಳೆಯಾಗುವುದು ಮಾಸಿನ್ರಾಮ್ ಗ್ರಾಮದಲ್ಲಿಯಂತೆ) ಯಲ್ಲಿರುವ ನೊಹ್ಕಾಲಿಕೈ ಜಲಪಾತ ೧೧೧೫ ಅಡಿ ಎತ್ತರದಿಂದ ಧುಮುಕುತ್ತದೆ. ಈ ಜಲಪಾತ ಭಾರತದ ಅತಿ ದೊಡ್ಡ ಜಲಪಾತವೆಂದು ಹೆಸರು ಪಡೆದಿದೆಯಂತೆ.











 ಈ ಜಲಪಾತದ ಹಿಂದೆ ಒಂದು ದುರಂತ ದಂತಕಥೆ ತಳುಕುಹಾಕಿಕೊಂಡಿದೆ. ಕಾ ಲಿಕೈ ಎಂಬ ಮಹಿಳೆ ರಂಗ್ ಜೈರ್ತೆ ಗ್ರಾಮದಲ್ಲಿ ವಾಸವಾಗಿದ್ದಳು. ಅವಳಿಗೆ ಒಂದು ಹೆಣ್ಣುಮಗುವಿತ್ತು. ಪತಿಯ ಮರಣಾನಂತರ ಕಾ ಲಿಕೈ  ಇನ್ನೊಂದು ಮದುವೆಯಾದಳು. ಅವಳು ತನ್ನ ಗಂಡನಿಗಿಂತ ಹೆಚ್ಚಾಗಿ ಮಗು ಬಗ್ಗೆ ಕಾಳಜಿ ವಹಿಸುತ್ತಿದ್ದದ್ದು ಮಲತಂದೆಯಾದವನಿಗೆ ಹಿಡಿಸಲಿಲ್ಲ. ಮಗುವನ್ನು ಕಂಡರೆ ಅಸೂಯೆ ಪಡುತ್ತಿದ್ದ. ಹಾಗೂ ಅದನ್ನು ಹಿಂಸಿಸುತ್ತಿದ್ದ. ಒಂದು ದಿನ ಅವನು ಆ ಮಗುವನ್ನು ಕೊಂದು ಮಗುವಿನ ಮಾಂಸದಿಂದ ಅಡುಗೆ ತಯಾರಿಸಿದ.
  ಕೆಲಸದಿಂದ ಹಿಂತಿರುಗಿದ ಕಾ ಲಿಕೈ ಗೆ ಅಡುಗೆ ಬಡಿಸಿದ. ಅವಳು ಊಟ ಮಾಡಿದಳು. ತದನಂತರ ಅವಳು ಉಂಡ ಅಡುಗೆ ತನ್ನ ಮಗುವಿನ ಮಾಂಸದ್ದೇ ಎಂದು ತಿಳಿದಾಗ ಬಲು ದುಃಖಗೊಂಡು ಈ ಜಲಪಾತದ ಬಳಿ ಹಾರಿ ಪ್ರಾಣ ಕಳೆದುಕೊಂಡಳು. ಅದಕ್ಕೆ ಈ ಜಲಪಾತಕ್ಕೆ ಅವಳ ಹೆಸರು ತಳುಕುಹಾಕಿಕೊಂಡಿದೆ. ಖಾಸಿಭಾಷೆಯ ‘ನೊಹ್’ ಕನ್ನಡದಲ್ಲಿ ಹಾರು ಎಂದರ್ಥವಂತೆ.
 ತಂಡದ ಉಳಿದ ಮಂದಿ ಬರುವಲ್ಲಿವರೆಗೆ ನಾವು ಜಲಪಾತದ ಇಂಚು ಇಂಚು ವೀಕ್ಷಣೆ ಮಾಡಿದ್ದೇ ಮಾಡಿದ್ದು!
ಚಿರಾಪುಂಜಿ ಬಸ್ ನಿಲ್ದಾಣದಿಂದ ಸುಮಾರು ೭.೫ಕಿಮೀ ದೂರದಲ್ಲಿದೆ. ಪ್ರವೇಶ ಶುಲ್ಕ ರೂ. ೨೦, ಕ್ಯಾಮರಾ ಶುಲ್ಕ ರೂ ೨೦ ಸಮಯ: ಬೆಳಗ್ಗೆ ೯ರಿಂದ ಸಂಜೆ ೫
   ರೈನ್ ಬೋ ಜಲಪಾತ ಯಾನೆ ಮಳೆಬಿಲ್ಲು ಜಲಪಾತ (Rainbow Falls Nohkalikai rd, cherapunji Meghalaya 793111)
    ಎಲ್ಲರೂ ಬಂದ ಬಳಿಕ ಅಲ್ಲಿಂದ ನಾವು ೮.೩೦ ಗಂಟೆಗೆ ನಡೆಯಲು ಹೊರಟೆವು. ಮುಂದಿನ ಗುರಿ ರೈನ್ ಬೋ ಫಾಲ್ಸ್. ೪ ಮಂದಿ ಮಾತ್ರ ಅಲ್ಲಿಂದ ವಾಹನದಲ್ಲಿ ತಿರ್ನಾ ಪೇಟೆಗೆ ಹೋಗಿ ಅಲ್ಲಿಂದ ೩೫೦೦ ಮೆಟ್ಟಲು ಇಳಿದು ರೈನ್ ಬೋ ಜಲಪಾತಕ್ಕೆ ಬರದೆಯೇ ದಾರಿಯಲ್ಲೇ ಸಿಗುವ ಜೀವಂತ ಮರದ ಡಬ್ಬಲ್ ಡೆಕ್ಕರ್ ಸೇತುವೆ (ಲಿವಿಂಗ್ ರೂಟ್ ಡಬಲ್ ಡೆಕ್ಕರ್ ಬ್ರಿಡ್ಜ್) ನೋಡಲು ಹೋಗುವುದೆಂದು ತೀರ್ಮಾನಿಸಿದರು. ನಾಲ್ಕು ಮಂದಿಯಲ್ಲಿ ನಮ್ಮ ಸಾವಿತ್ರಿಯೂ ಸೇರಿದ್ದರು. ಇತ್ತೀಚೆಗೆ ಡೆಂಗ್ಯೂ ಬಂದು ಮೊಣಕಾಲು ನೋವು ಇತ್ತಾದ್ದರಿಂದ ಅವರು ೧೫ಕಿಮೀ ನಡೆಯುವ ಧೈರ್ಯ ಮಾಡಲಿಲ್ಲ. ನಾನ್ಸಿಯಟ್ ಗ್ರಾಮದಲ್ಲಿರುವ ಈ ಜಲಪಾತಕ್ಕೆ ನಡೆದೇ ಹೋಗಬೇಕು. ವಾಹನ ಸೌಕರ್ಯವಿಲ್ಲ.
   ಕಾಡಿನ ದಾರಿಯಲ್ಲಿ ಕೆಳಗೆ ಇಳಿಯಲು ತೊಡಗಿದೆವು. ಇಳಿಯಲು ಕಲ್ಲಿನ ಕೊರಕಲು ಮೆಟ್ಟಲುಗಳು. ಅವನ್ನು ಮೆಟ್ಟಲುಗಳೆಂದು ಕರೆಯಬಹುದು! ದಾರಿಯಲ್ಲಿ ನಡೆಯುತ್ತ, ದೈತ್ಯ ಮರಗಳನ್ನು ನೋಡುತ್ತ, ಪ್ರತಿಯೊಂದು ಗಿಡಮರಗಳನ್ನು ಅವಲೋಕಿಸುತ್ತ ಆನಂದದಿಂದ ನಡೆದೆವು. ಹಿಪ್ಪಲಿ ಗಿಡ, ಹೂಗಿಡಗಳು, ಹಲಸಿನ ಮರ, ಬಾಳೆಗಿಡ ಅದರಲ್ಲಿ ಬಾಳೆಗೊನೆ ಬಿಟ್ಟದ್ದು ನೋಡಿ ಖುಷಿಪಟ್ಟೆವು. 











ದಾರಿಯಲ್ಲಿ ಸಾಗುತ್ತಿದ್ದಂತೆ ನೀರಿನ ಭೋರ್ಗರೆತ ಆಗಾಗ ಕೇಳುತ್ತಲಿತ್ತು. ಆಗ ಓಹೋ ಜಲಪಾತ ಸಮೀಪದಲ್ಲೇ ಇದೆ ಎಂಬ ಸುಳಿವು ದೊರೆತು ಸಮಾಧಾನವಾಗುತ್ತಿತ್ತು. ಹಾಗೆಯೇ ಮುಂದುವರಿದಂತೆ ನೀರಿನ ಸದ್ದೇ ಇಲ್ಲ. ಹುಸಿ ಭರವಸೆ ಇದು ಎಂದು ಮುಂದೆ ಸಾಗುತ್ತಿದ್ದೆವು. ಒಮ್ಮೆ ಇಳಿಜಾರು ಸಿಕ್ಕರೆ ಮತ್ತೆ ಕಠಿಣ ಏರುದಾರಿ. ಹೀಗೆಯೇ ೫ ಮೈಲಿ ಸಾಗಿದೆವು. ಆಗ ಮೂರು ದಾರಿ ಸೇರುವ ಸ್ಥಳದಲ್ಲಿ ಒಂದು ಫಲಕ ಕಂಡಿತು. ಬಲಕ್ಕೆ ತಿರುಗಿ ನಡೆದರೆ ರೈನ್ ಬೋ ಜಲಪಾತ. ಎಡಕ್ಕೆ ತಿರುಗಿದರೆ  ಡಬ್ಬಲ್ ಡೆಕ್ಕರ್ ಸೇತುವೆ ದಾರಿ. ನಿನ್ನೆ ಗೈಡ್ ವಿವರಿಸಿದ್ದು ಇದೇ ದಾರಿ ಬಗ್ಗೆ. ಇಲ್ಲಿಂದ ಒಂದೂವರೆ ಗಂಟೆ ದಾರಿ ನಡೆದು ರೈನ್ಬೋ ಜಲಪಾತಕ್ಕೆ ಹೋಗಿ ಅದೇ ದಾರಿಯಲ್ಲಿ ಹಿಂತಿರುಗಿ ಬಂದು ಜೀವಂತ ಮರದ ಸೇತುವೆ ನೋಡಲು ಸಾಗಬೇಕು. (ಅಲ್ಲಿ ದಾರಿಗೆ ನಮ್ಮಒಬ್ಬ ಗೈಡ್ ಬಾಣದ ಗುರ್ತಿನ ಚೀಟಿ ಹಾಕಿದ್ದ. ಅದನ್ನು ಹಿಂದೆ ಇರುವ ಇನ್ನೊಬ್ಬ ಗೈಡ್ ಹೆಕ್ಕಿ ತರುತ್ತಲಿದ್ದ.) ಹಾಗಾಗಿ ಎಲ್ಲಿಯೂ ದಾರಿ ತಪ್ಪುವ ಸಂಭವ ಇಲ್ಲ. ಬಿಸಿಲಿನ ಬೇಗೆ ಕಾಡಿನ ದಾರಿಯಲ್ಲಿ ಸ್ವಲ್ಪವೂ ಒಳ ಸುಳಿಯಲಿಲ್ಲವಾದ್ದರಿಂದ ನಡೆಯಲು ಕಷ್ಟವೆನಿಸಲಿಲ್ಲ. ಮರದ ನೆರಳಿನ ತಂಪಿನಲ್ಲಿ ನಡೆದೇ ನಡೆದೆವು. ನಡೆಯುತ್ತ ನಮ್ಮೂರನ್ನು ನೆನಪಿಸಿಕೊಂಡೆವು. ಅಲ್ಲಾದರೆ ಇಷ್ಟು ನಡೆದಾಗುವಾಗ ಸುಸ್ತಲ್ಲಿ ಎಷ್ಟು ನೀರು ಕುಡಿದರೂ ಸಾಕಾಗಲಿಕ್ಕಿಲ್ಲ, ನಡೆಯಲು ಸಾಧ್ಯವೂ ಆಗುತ್ತಿರಲಿಲ್ಲ ಎಂದು ಹೇಳಿಕೊಂಡೆವು
   ಹಾಗೆಯೇ ಮುಮ್ದೆ ಸಾಗುತ್ತಿರಬೇಕಾದರೆ ಒಂದು ಪುಟ್ಟ ಅಂಗಡಿ ಕಂಡಿತು. ಅದರ ವಿನ್ಯಾಸ ಬಹಳ ಚೆನ್ನಾಗಿತ್ತು. ಆಗ ಗಂಟೆ ಸರಿಯಾಗಿ ೧೧. ಒಹೋ ಚಹಾದ ಸಮಯವಿದು ಎಂದು ಅಶೋಕಭಾವ ಅಂಗಡಿ ಬಳಿ ಹೋಗಿ ಚಹಾ ಇದೆಯೇ ಎಂದು ಕೇಳಿದರು. ಇದೆ ಎಂದು ಒಬ್ಬ ಹುಡುಗ ಕಟ್ಟಿಗೆ ಒಲೆಯಲ್ಲಿ ನೀರಿಟ್ಟು ಚಹಾ ತಯಾರಿಸಿ ನೀಡಿದ. ಒಂದು ಕಪ್ ಚಹಾ ಕೇವಲ ರೂ. ೧೦. ಎಲ್ಲರೂ ಚಹಾ ಎಂಬ ಬಿಸಿನೀರನ್ನು ಕುಡಿದು ಹುರುಪುಗೊಂಡರು. ಅವರೆಲ್ಲ ಚಹಾ ಹೀರುವುದನ್ನು ನೋಡಿ ನಾನು ಚಹಾ ಕುಡಿಯದೆಯೇ ಉತ್ಸಾಹಗೊಂಡೆ! ಕಾಲೇಜ್ ಓದುವ ತರುಣ ಪರೀಕ್ಷೆಗೆ ಓದುವ ರಜಾದಿನಗಳಲ್ಲಿ ಇಲ್ಲಿ ವ್ಯಾಪಾರ ಮಾಡುತ್ತಾನಂತೆ. ಗಿರಾಕಿಗಳು ಅತ್ತ ನಡೆದಾಗ ಇತಿಹಾಸ ಪುಸ್ತಕ ತೆರೆದು ಓದುತ್ತಲಿರುವುದು ಕಂಡಿತು. ಭಾರೀ ಸಾಹಸವಿದು. ಅವನ ಮನೆಯಿಂದ ಕಡಿಮೆ ಎಂದರೂ ೬-೭ ಕಿಮೀ ನಡೆದು ಬಂದು ಅಂಗಡಿ ನಡೆಸುತ್ತಿದ್ದಾನಲ್ಲ.  ಅಲ್ಲಿ ತಂಪು ಪಾನೀಯ, ಬಿಸ್ಕೆಟ್, ಚಿಪ್ಸ್ ಎಲ್ಲ ಇತ್ತು. ದರವೂ ಪ್ಯಾಕೆಟಿನಲ್ಲಿ ನಮೂದಿಸಿದಷ್ಟೇ ಪಡೆಯುತ್ತಿದ್ದದ್ದು ಕಂಡು ಭಲೇ ಈ ದುರ್ಗಮ ಸ್ಥಳದಲ್ಲಿ ದುರಾಸೆ ಪಡದೆ ವ್ಯಾಪಾರ ಮಾಡುವ ಅವನ ಛಲಕ್ಕೆ ಒಂದು ಸಲಾಮ್ ಸಲ್ಲಲೇಬೇಕು.  




 ಅಲ್ಲಿಂದ ಮುಂದೆ ಹೊರಟಾಗ ಪೈಪಿನಲ್ಲಿ ನೀರು ಹರಿದು ಬರುತ್ತಲಿತ್ತು. ಆ ನೀರು ಕುಡಿದಾಗ (ಕಲ್ಪನೆಯ) ಅಮೃತದಷ್ಟು ರುಚಿಯೆನಿಸಿತು. ಅಲ್ಲಿಂದ ಮುಂದೆ ಏರು ಮತ್ತೊಮ್ಮೆ ಇಳಿ ಹೀಗೆ ಒಂದೂವರೆ ಗಂಟೆ ಸಾಗಿದಾಗ ಜಲಪಾತದ ದರ್ಶನವಾಯಿತು. ಮೇಲಿನಿಂದ ಮುರುಕು ಏಣಿಯಲ್ಲಿ ಜಲಪಾತದೆಡೆಗೆ ಇಳಿದೆವು. ಎತ್ತರದಿಂದ ನೀರು ಧುಮುಕುವುದು ಸೊಗಸಾಗಿ ಕಾಣುತ್ತಲಿತ್ತು.














  ಚಿರಾಪುಂಜಿಯಿಂದ ಸುಮಾರು ೧೮ಕಿಮೀ ದೂರದಲ್ಲಿರುವ ಕಾಲ್ನಡಿಗೆಯಲ್ಲೇ ತೆರಳಬೇಕಾದ ಪೇಟೆಯ ಸೋಂಕು ತಗಲದ ಪ್ರಶಾಂತ ವಾತಾವರಣವಿರುವ ನೊಗ್ರಿಯಂಟ್ ಗ್ರಾಮದ ಬಳಿಯಿರುವ ಮಳೆಬಿಲ್ಲು ಯಾನೆ ರೈನ್ ಬೋ ಜಲಪಾತ ಬಹಳ ಸುಂದರವಾಗಿ ಕಾಣುತ್ತದೆ. ಸೂರ್ಯನ ಕಿರಣಗಳಿಂದ ಜಲಪಾತದ ಕೆಳಪಾರ್ಶ್ವದಲ್ಲಿ ಮಳೆಬಿಲ್ಲು ಕಾಣುತ್ತದೆ.  ಜಲಪಾತದ ಸ್ಥಳಕ್ಕೆ ಇಳಿದರೆ ಮಳೆಬಿಲ್ಲು ಕಾಣುವುದಿಲ್ಲ. ಮೇಲ್ಭಾಗದಲ್ಲಿ ನಿಂತು ನೋಡಿದರೆ ಮಾತ್ರ ಕಾಣುತ್ತದೆ.
  ಬಂಡೆಮೇಲೆ ಸರ್ಕಸ್ ಮಾಡಿ ಜಲಪಾತದ ಬಳಿ ತೆರಳಿದೆ. ನಾವು ಅಲ್ಲಿ ತಲಪಿದಾಗ ಗಂಟೆ ೧೨.೧೫.  ಅಲ್ಲಿ ಕುಳಿತು ಬುತ್ತಿಯೂಟ ಮಾಡಿದೆವು. ಯಾರೊ ಒಬ್ಬರು ನೀರಿಗಿಳಿದು ಸ್ನಾನ ಮಾಡಿಯೇಬಿಟ್ಟರು. ಮೂರು ದಿನ ಸ್ನಾನವಿಲ್ಲದೆ ಇದ್ದದ್ದು, ನೀರುಕಂಡಾಗ ಮೈತೊಳೆಯದೆ ಸಾಧ್ಯವೇ ಇಲ್ಲ ಎಂದು ಅನಿಸಿರಬೇಕು! 
ಸಮಯ : ಬೆಳಗ್ಗೆ ೮ರಿಂದ ಸಂಜೆ ೫ರವರೆಗೆ. ಪ್ರವೇಶ ಶುಲ್ಕ ರೂ. ೨೦. ಗೈಡ್ ರೂ.೨೦೦ ರಿಂದ ಪ್ರಾರಂಭ.
   ಗಂಟೆ ೧.೩೦ ಆದಾಗ ಇನ್ನು ಹೊರಡದೆ ಇದ್ದರೆ ೬-೭ ಕಿಮೀ ನಡೆದು ೩೫೦೦ ಮೆಟ್ತಲು ಹತ್ತಿ ಕತ್ತಲಾಗುವ ಮೊದಲು ತಿರ್ನಾ ತಲಪಲು ಸಾಧ್ಯವಿಲ್ಲವೆಂದು ಹೊರಡಲು ಎದ್ದೆವು. ಬರುತ್ತ ಜಾಸ್ತಿ ಇಳಿಯಲಿದ್ದರೆ ಹೋಗುತ್ತ ಅದೇ ದಾರಿ ಹತ್ತಲೇಬೇಕಲ್ಲ! ಧೈರ್ಯದಿಂದ ಬಂಡೆ ದಾಟಿ ಬಂದವಳಿಗೆ ವಾಪಾಸು ಬಂಡೆ ದಾಟಲು ಧೈರ್ಯ ಸಾಲದೆ ಶೂ ಬಿಚ್ಚಿ ನೀರಿಗೆ ಇಳಿದು ದಾಟಿದೆ! ಬಂದ ದಾರಿಗೆ ಸುಂಕವಿಲ್ಲ ಎಂದು ಅದೇ ದಾರಿಯಲ್ಲಿ ಒಂದೂವರೆ ಗಂಟೆ ನಡೆದೆವು.
ಸಿಂಗಲ್ ರೂಟ್ ಬ್ರಿಡ್ಜ್
   ಮೊದಲಿಗೆ ಒಂಟಿ ಜೀವಂತಮರದ ಸೇತುವೆ ಕಂಡಿತು. ಅದನ್ನು ದಾಟಿ ಮುಂದೆ ಹೋದಾಗ ಕಬ್ಬಿಣದ ಉದ್ದದ ತೂಗು ಸೇತುವೆ ಕಂಡಿತು. ಕೆಳಗೆ ಉಮ್ಮಿಯಾಂಗ್ ನದಿ ಹರಿಯುತ್ತಲಿತ್ತು.  ಸುಳ್ಯದ ಗಿರೀಶ್ ಭಾರಧ್ವಾಜ್ ಅವರೇ ಕಟ್ಟಿದ್ದಿರಬಹುದೇ ಎಂದು ಮಾತಾಡಿಕೊಂಡೆವು. 






   ಮುಂದೆ ಸಾಗಿದಾಗ ಅಡಿಕೆಮರಗಳ ತೋಟ ಕಂಡಿತು. ಬಯಲಿನಲ್ಲಿ ಮಕ್ಕಳು ಕಾಲ್ಚೆಂಡು ಆಟವಾಡುವುದು ಕಂಡು ಖುಷಿಯಾಗಿ ಆಟಕ್ಕೆ ಸೇರಬೇಕೆಂಬ ಆಸೆಯಾಯಿತು.  ತುಸು ಹೊತ್ತು ಆಟ ನೋಡಿ ಮುಂದೆ ಸಾಗಿದೆ.  




  ಡಬ್ಬಲ್ ಡೆಕ್ಕರ್ ಲಿವಿಂಗ್ ರೂಟ್ ಬ್ರಿಡ್ಜ್ (Double Decker Living Root Bridge , Nongriat, Tyrna, cherapunji, Meghalaya 793111)
  ಒಂದೆರಡು ಕೀಮೀ ದೂರ ಸಾಗಿದಂತೆಯೇ ಒಂದರ ಕೆಳಗೊಂದು ಎರಡು ಜೀವಂತ ಮರದ ಬೇರಿನಿಂದ ಮಾಡಿದ ಸೇತುವೆಗಳು ಕಾಣಿಸಿದುವು. ನಿಜಕ್ಕೂ ಇದು ನೋಡಲು ಬಹಳ ಕಲಾತ್ಮಕವಾಗಿ ಸುಂದರವಾಗಿವೆ. ಒಮ್ಮೆಗೇ ೫ ಮಂದಿ ಮಾತ್ರ ಈ ಸೇತುವೆಮೇಲೆ ಒಟ್ಟಿಗೆ ನಿಲ್ಲಬಹುದಂತೆ. ಕೆಳಗೆ ನದಿಯಲ್ಲಿ ಸ್ವಲ್ಪ ನೀರು ಹರಿಯುತ್ತಲಿತ್ತು. ಸ್ಥಳೀಯರು ಮಳೆಗಾಲದಲ್ಲಿ ಈ ಸೇತುವೆ ದಾಟಿಯೇ ತಿರ್ನಾ ಪೇಟೆಗೆ ಸಾಗಬೇಕು. 
ನೊಂಗ್ರಿಯಾಟ್ ಹಳ್ಳಿಯ ಸ್ಥಳೀಯ ಖಾಸಿ ಬುಡಕಟ್ಟು ಜನಾಂಗದವರು ರಚಿಸಿದ ಈ ಜೀವಂತ ಸೇತುವೆ ಫಿಕಸ್ ಎಲಾಸ್ಟಿಕ್  ಮರದ ಬಾಗಿದ ಬೇರುಗಳಿಂದ ತಯಾರಿಸಿದ್ದಾರೆ. ಈ ಸೇತುವೆ ತಯಾರಿಸಿ ಬಹಳ ವರ್ಷಗಳೇ ಕಳೆದುವಂತೆ. ಬೇರುಗಳು ಬೆಳೆದು ಕಾಂಡವನ್ನು ಸುತ್ತುವರಿಯುತ್ತವೆ. ಕಾಲ ಕಳೆದಂತೇ ಬೇರುಗಳು ದಪ್ಪವಾಗಿ ಬೆಳೆಯುತ್ತವೆ. ಸೇತುವೆಯ ಕಾಲು ದಾರಿಗೆ ದಪ್ಪ ಹಲಗೆಗಳನ್ನು ಹಾಕಿದ್ದಾರೆ.  ಕೆಳಗೊಂದು ಮೇಲೊಂದು  ಸೇತುವೆ ನೋಡಿದಾಗ ಇಲ್ಲಿಯವರ ಕೌಶಲದ ಕೈಚಳಕದ ಬಗ್ಗೆ ಹೆಮ್ಮೆಯೆನಿಸಿತು. ಇಂಥ ಸೇತುವೆ ಬಹುಶಃ ಭಾರತದಲ್ಲಿ ಮೇಘಾಲಯದಲ್ಲಿ ಮಾತ್ರ  ಕಾಣಲು ಸಾಧ್ಯ. ಮೇಘಾಲಯದಲ್ಲಿ ಮೂರು ನಾಲ್ಕು ಕಡೆ (ಸಿಂಗಲ್ ರೂಟ್) ಇಂಥ ಜೀವಂತ ಸೇತುವೆಗಳಿವೆಯಂತೆ.




 ನಾವು ಕೆಳಸೇತುವೆ, ಮೆಲ್ಸೇತುವೆ ಎರಡರಲ್ಲೂ ನಡೆದು ನೋಡಿ ಖುಷಿಪಟ್ಟೆವು. ಪಟ ಕ್ಲಿಕ್ಕಿಸಿಕೊಂಡೆವು.

ಒಬ್ಬರಿಗೆ ತಲಾ ರೂ. ೨೦ ಪ್ರವೇಶ ಶುಲ್ಕ. ಕ್ಯಾಮರದಲ್ಲಿ ಫೋಟೋ ತೆಗೆದರೆ ರೂ. ೫೦ ಕೊಡಬೇಕು. ಮೊಬೈಲ್ ಕ್ಯಾಮರಾದಲ್ಲಿ ಪಟ ತೆಗೆದರೆ ಶುಲ್ಕವಿಲ್ಲ!
 ತಿರ್ನಾ ಗ್ರಾಮದಿಂದ ಚಾರಣದ ಮೂಲಕ ೩ಕಿಮೀ ನಡೆದು ೩೫೦೦ ಮೆಟ್ಟಲು ಇಳಿದು ಬಂದು ಈ ಸೇತುವೆ ನೋಡಲು  ಸಾಧ್ಯವಿದೆ.
   ನಾವು ಸೇತುವೆ ನೋಡಿ ಅವರ ಕೌಶಲವನ್ನು ಮೆಚ್ಚಿಕೊಂಡು ಅಲ್ಲಿಂದ ಹೊರಟೆವು. ಹಳ್ಳಿದಾರಿಯಲ್ಲಿ ನಾಲ್ಕಾರು ಮನೆಗಳನ್ನು ದಾಟಿ ಮುಂದುವರಿದೆವು. ಎಲ್ಲ ಮನೆಗಳಲ್ಲೂ ಹೆಂಗಸರು ಲಿಪ್ಸ್ಟಿಕ್ ಬಳಿದುಕೊಂಡು ಕುಳಿತದ್ದು ಕಂಡಿತು. ಹೋಂಸ್ಟೇ ಬಳಿ ವಿದೇಶೀಯರು ಕುಳಿತಿರುವುದು ಹಾಗೂ ಅವರ ಬಳಿ ಹೋಂಸ್ಟೇ ಮಾಲಕಿ ಹೆಂಗಸರು ಆಂಗ್ಲ ಭಾಷೆಯಲ್ಲಿ ಮಾತಾಡುವುದು ಕಂಡಿತು.  ಹೆಚ್ಚಿನ ಮನೆಗಳ ಎದುರೂ ಹೋಂಸ್ಟೇ ಎಂಬ ಫಲಕವಿತ್ತು. ಹೋಂಸ್ಟೇಗೆಂದು ಕೆಲವು ಕಟ್ಟಡ ನಿರ್ಮಾಣ ಹಂತದಲ್ಲಿದ್ದುವು.




 ತಿರ್ನಾಗೆ ಸ್ವರ್ಗದ ಬಾಗಿಲು!
  ಹೀಗೆಯೇ ಹಳ್ಳಿದಾರಿಯಲ್ಲಿ ಸಾಗುತ್ತಿದ್ದಂತೆಯೇ ದಾರಿಯಲ್ಲಿ ಹಿಪ್ಪಲಿ, ಹಲಸು ದಾಲ್ಚಿನ್ನಿ ಮರಗಳು ಕಂಡುವು. ದಾಲ್ಚಿನ್ನಿ, ಹಿಪ್ಪಲಿ ಅವರ ವಾಣಿಜ್ಯ ಬೆಳೆಗಳಾಗಿರಬಹುದೆನಿಸಿತು. ಮುಂದೆ ನದಿಯೊಂದು ಎದುರಾಯಿತು. ಸೇತುವೆ ದಾಟಲು ಬಿದಿರ ಸೇತುವೆ, ಕಬ್ಬಿಣದ್ದು ತೂಗು ಸೇತುವೆ ಇತ್ತು. ಯಾವುದೂ ಸರಿ ಇರಲಿಲ್ಲ. ಹೋಗದಂತೆ ಮುಳ್ಳು ಹರಡಿದ್ದರು. ನದಿ ಇಳಿದೇ ದಾಟಿದೆವು. ನದಿ ದಾಟುತ್ತಿದ್ದಂತೆಯೇ ಮುಂದೆ ಸಾಗಿದಾಗ ದುತ್ತನೇ ಸ್ವರ್ಗದ ಬಾಗಿಲು ತೆರೆದುಕೊಂಡಿತು! 








೯೦ ಡಿಗ್ರಿ ಪರ್ವತಾಕಾರದ ಏರುಗತಿಯ ಸಿಮೆಂಟುಮೆಟ್ಟಿಲು ಸಾಲು! ಒಹೋ ಇದೇ ೩೫೦೦ ಮೆಟ್ಟಲುಗಳ ಸಾಲು ಎಂದು ಅರಿವಾಯಿತು. ಅದನ್ನು ನೋಡಿ ಉಸ್ಸಪ್ಪ ಎಂಬ ಉಸಿರು ಹೊರಹೊಮ್ಮಿತು. ಹತ್ತದೆ ಬೇರೆ ದಾರಿಯಿಲ್ಲ. ನಿಧಾನಕ್ಕೆ ಒಂದೊಂದೇ ಮೆಟ್ಟಲು ಏರುತ್ತ ಸಾಗಿದೆವು. ಹೀಗೆ ಸಾಗಿ ಅರ್ಧ ದಾರಿ ಸಾಗಿದ್ದೆವಷ್ಟೆ. ಆಗಲೇ ದಿನಮಣಿ ತನ್ನ ಪಾಲಿನ ಕೆಲಸ ಮುಗಿಸಿ ಹೊರಡುವ ತವಕದಲ್ಲಿದ್ದ ಸುಂದರ ನೋಟ ಕಂಡಿತು. ಉಸ್ ಇನ್ನೂ ಹತ್ತಬೇಕಲ್ಲ. ಕತ್ತಲು ಬೇರೆ ಆಗುತ್ತದೆ ಎಂದು ಅನಿಸಿ ಮುಂದೆ ಸಾಗಿದೆವು. ಹೊಟ್ಟೆ ತಾಳ ಹಾಕಲು ಹೊರಟಿತ್ತು.
ಊರ ಮಂದಿ ಅಲ್ಲೊಬ್ಬರು ಇಲ್ಲೊಬ್ಬರು ಸಿಗುತ್ತಿದ್ದರು.  ನಮಗಾದರೋ ಇದು ಒಂದೇ ದಿನದ   ಹತ್ತಾಟ. ಇವರೆಲ್ಲರೂ ನಿತ್ಯ ಈ ದಾರಿಯಲ್ಲಿ ಸಾಗಬೇಕು. ನಿಜಕ್ಕೂ ಗಟ್ಟಿಗರೇ ಸೈ . 







     ಅಶೋಕಭಾವ ಮುಂದೆ ಹೋಗಿದ್ದರು. ಒಂದು ಅಂಗಡಿಯಲ್ಲಿ ಸೌತೆಕಾಯಿ ಕೊಂಡು ನಮ್ಮ ದಾರಿ ಕಾಯುತ್ತಲಿದ್ದರು.  ಹೊಟ್ಟೆ ಹಸಿವು ಭುಗಿಲೆದ್ದದ್ದು ಸೌತೆ ಒಳಸೇರುತ್ತಲೇ ತಣ್ಣಗಾಯಿತು. ಸೌತೆಕಾಯಿ ಸರಿಯಾದ ಸಮಯಕ್ಕೆ ಲಭಿಸಿ ಅಮೃತಸಮಾನವೆನಿಸಿತು. ನಮ್ಮ ಕಾಲು ಗಾಡಿಗೆ ಹುರುಪು ಬಂದು ಸರಾಗವಾಗಿ ಮುನ್ನಡೆಯಿತು!  ಒಂದು ಸೌತೆಗೆ ರೂ.೨೦. ನಮ್ಮ ಹಿಂದೆ ಸಾಕಷ್ಟು ಜನ ಬರುವವರಿದ್ದರು, ನಮ್ಮಿಂದ  ಮುಂದೆ ನಮ್ಮ ತಂಡದವರು ಹೋಗಿದ್ದರು. ಗಣಪತಿ ಭಟ್ ನಮ್ಮಿಂದ ಸಾಕಷ್ಟು ಮುಂದಿದ್ದರು. 
  ಉಸ್ ಬುಸ್ ಎನ್ನುತ್ತಲೇ ಮುಂದೆ ಸಾಗಿದಾಗ ಕತ್ತಲು ಆವರಿಸಿತು. ಗಮನಿಸಿ ಆಗ ಗಂಟೆ ೫.೧೫ ಅಷ್ಟೆ! ಅನಂತ ಒಂದು ಮನೆಯೆದುರು ಅನಾನಸು ಹೆಚ್ಚಿಸುತ್ತ ನಿಂತಿದ್ದ.  ಆ ಮನೆಯಾಕೆ ವ್ಯಾಪಾರವೇ ಆಗಿಲ್ಲ ಎಂದು ಗೋಳು ತೋಡಿಕೊಂಡಳಂತೆ. ಅದಕ್ಕೆ ಕನಿಕರಿಸಿ ಇಡೀ ಅನಾನಸು ಹೆಚ್ಚಿಕೊಡು ಎಂದನಂತೆ! ದಾರಿಯಲ್ಲಿ ಬರುತ್ತಿದ್ದ ಕೆಲವಾರು ಜನರಿಗೆ ಹಂಚಿ ನಾವು ಅನಾನಸು ತಿಂದು (ರೂ ೧೦೦) ಮುನ್ನಡೆದೆವು. ಟಾರ್ಚ್ ಹೊರಗೆ ತೆಗೆದೆವು. ಅಂತೂ ಮೆಟ್ಟಲು ಸಾಲು ಮುಗಿದು ನಾವು ತಿರ್ನಾ ಗ್ರಾಮ ತಲಪಿದೆವು. ಆಗ ಗಂಟೆ ೬ ಆಗಿತ್ತು. 
 ಬಿ. ಆರ್ ಸೈಮ್ಲೆಹ್ ಹೋಂಸ್ಟೇ (B.R. Syiemlieh Homestay)
ನಾವು ಉಳಿಯುವ ಸ್ಥಳದ ಮಾಹಿತಿ ಬಗ್ಗೆ ಸ್ವಲ್ಪ ಗೊಂದಲವಾಯಿತು. ಕತ್ತಲಾದ್ದರಿಂದ ದಾರಿಯೂ ಗೋಚರಿಸದು. ದಾರಿ ಕೇಳುತ್ತ ರಸ್ತೆಯಲ್ಲಿ ಒಂದುಕಿಮೀ ನಡೆದು ಗಮ್ಯ ಸ್ಥಾನ ತಲಪಿದೆವು. ರೋಸ್ ಮೇರಿ ಡಾಭಾದಲ್ಲಿ ಬಿಸಿಬಿಸಿ ಸೂಫ್ ಚಹಾ ತಯಾರಿಸಿಟ್ಟಿದ್ದರು. ಸೂಪ್ ಕುಡಿದು, ನಮ್ಮ ಬ್ಯಾಗ್ ಪಡೆದು ಹೋಂಸ್ಟೇ ತಲಪಿ ಉಸ್ಸಪ್ಪ ಎಂದು ಕೂತೆವು.







ಬಿಸಿನೀರು ಪ್ರಹಸನ
 ಗಂಡಸರಿಗೆ ಶಾಲೆಯೊಂದರಲ್ಲಿ ಹಾಗೂ ಹೆಂಗಸರಿಗೆ ಬಿ. ಆರ್ ಸೈಮ್ಲೆಹ್ ಹೋಂ ಸ್ಟೇಯೊಂದರಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು.  ಆ ದಿನ ೧೫-೧೬ಕಿಮೀ ನಡೆದು ಬೆವರಿ ಸ್ನಾನ ಮಾಡದೆ ಸಾಧ್ಯವೇ ಇಲ್ಲ ಎನ್ನುವಂತಾಗಿತ್ತು. ಧಾರಾಳ ತಣ್ಣೀರಿನ ವ್ಯವಸ್ಥೆಯೊಂದಿಗೆ ಸ್ನಾನ ಗೃಹವೇನೋ ಚೆನ್ನಾಗಿಯೇ ಇತ್ತು. ಆದರೆ ಈ ಚಳಿಗೆ ಸ್ನಾನಕ್ಕೆ ಬಿಸಿನೀರು ಇಲ್ಲದೆ ಇದ್ದರೆ ಸಾಧ್ಯವಿಲ್ಲವೆಂದು ನಮ್ಮ ಗೈಡ್ ಬಳಿ ಒಂದು ಬಕೆಟ್ ಬಿಸಿನೀರು ಸಿಗಬಹುದೆ ಎಂದು ಕೇಳಿದೆ. ಹೋಂಸ್ಟೇ ಒಡತಿ ರೂ೫೦ಕ್ಕೆ ಒಂದು ಬಕೆಟ್ ನೀರು ಕೊಡುವೆನೆಂದೂ,  ಬೇರೆ ಯಾರಿಗೂ ಹೇಳಬೇಡಿ ಎಂಬ ಷರತ್ತಿನೊಂದಿಗೆ ಹೇಳಿದಾಗ ಆದೀತೆಂದೊಪ್ಪಿದೆ. ಹೀಗೆಯೇ ಅವರು ಎಲ್ಲರಿಗೂ ಹೇಳಿ ಬಿಸಿನೀರು ಒದಗಿಸಿದ್ದು ಮಾತ್ರ ಗುಟ್ಟು! ತಲಾ ೫೦ ರೂವಿನಂತೆ ಸಂಪಾದನೆ ಜೋರಾಗಿಯೇ ನಡೆಯಿತು! ಎರಡು ದಿನದಿಂದ ಸ್ನಾನ ಕಾಣದ ಮೈಗೆ ಬಿಸಿನೀರು ಬಿದ್ದದ್ದೇ ಪರಮಾನಂದವಾಯಿತು! ಬಯಲಲ್ಲಿ ಒಲೆಹೂಡಿ ದೊಡ್ಡ ತಪಲೆಯಲ್ಲಿ ನೀರು ಕಾಯಿಸಿ ಗಂಡಸರಿಗೆ ಉಚಿತವಾಗಿಯೇ ಕೊಟ್ಟಿದ್ದರಂತೆ.

  ಎಂಟು ಗಂಟೆಗೆ ಚಪಾತಿ, ಪಲ್ಯ, ಕೂಟು, ಅನ್ನ ದಾಲ್, ಹಪ್ಪಳ ಹಸಿ ಈರುಳ್ಳಿ ಊಟ ತಯಾರಾಗಿತ್ತು. ನಾವು ಊಟ ಮಾಡುತ್ತಿರುವಾಗ ಕೊನೆಯ ಬ್ಯಾಚಿನಲ್ಲಿ ಅಂತೂ ಇಂತೂ ಎಲ್ಲರೂ ಬಂದು ತಲಪಿದರು. ಟಾರ್ಚ್ ಬೆಳಕಲ್ಲಿ ಅವರನ್ನು ನಡೆಸಿಕೊಂಡು ಗಮ್ಯ ತಲಪಿಸಿದ ನಮ್ಮ ಮಾರ್ಗದರ್ಶಕರನ್ನು ಮೆಚ್ಚಬೇಕು. 
  ನಮ್ಮ ಕೋಣೆಯಲ್ಲಿ ನಾವು ಮೂವರೇ (ನಾನು, ಸಾವಿತ್ರಿ, ದೇವಕಿ,) ಆದುದರಿಂದ ೯.೩೦ಗೆ  ನಿದ್ದೆಗೆ ಶರಣಾದೆವು.   
ತಿರ್ನಾಗೆ ವಿದಾಯ
ತಾರೀಕು ೧೨.೨.೨೦೨೦ರಂದು ಬೆಳಗ್ಗೆ ಎದ್ದು ಸಾವಿತ್ರಿ ಹಾಗೂ ನಾನು ಹೋಂಸ್ಟೇ ಎದುರಿನ ರಸ್ತೆಯಲ್ಲೇ ಒಂದಷ್ಟು ದೂರ ನಡೆದೆವು. ಸುಮಾರು ಮನೆಗಳಿದ್ದುವು ಅಲ್ಲಿ. ಮನೆ ಎದುರು ದಾಲ್ಚಿನ್ನಿ ಎಲೆಗಳ ರಾಶಿ. ಅವನ್ನೆಲ್ಲ ಚೀಲಕ್ಕೆ ಒತ್ತಿ ಒತ್ತಿ ತುಂಬಿಸುತ್ತಿದ್ದರು. ಮನೆ ಬಳಿ ಕೆಸವಿನ ಗಿಡಗಳನ್ನೂ ನೋಡಿದಾಗ, ಇವರಿಗೆ ಇದರ ಉಪಯೋಗ ಗೊತ್ತಿರಬಹುದಾ ಎಂದು ಮಾತಾಡಿಕೊಂಡೆವು. ಅಷ್ಟರಲ್ಲಿ ತಿಂಡಿ ತಯಾರಾಗಿತ್ತು. ಪೂರಿ, ಸಾಗು, ಮೊಟ್ಟೆ, ಬಾಳೆಹಣ್ಣು. ಈ ಐದು ದಿನಗಳಲ್ಲಿ ನಾವು ಪೂರಿ, ಚಪಾತಿ ಆಲೂಗಡ್ಡೆ ತಿಂದದ್ದಕ್ಕೆ ಲೆಕ್ಕವಿಲ್ಲ. ಇನ್ನು ಒಂದು ವರ್ಷ ಅವನ್ನು ತಿನ್ನದೇ ಇದ್ದರೂ ತೊಂದರೆ ಇಲ್ಲ! ನನಗೆ ಆಲೂಗಡ್ಡೆ ,ಪೂರಿ, ಚಪಾತಿ ಇಷ್ಟವೇ ಆದ್ದರಿಂದ ದಿನಾ ಅದೇ ಆದರೂ ತೊಂದರೆ ಎನಿಸಿರಲಿಲ್ಲ.

 ಇವತ್ತಿನ ದಿನ ಚಾರಣವಿಲ್ಲ. ಬಸ್ಸಲ್ಲಿ ಗುಹಾಲಯ ವೀಕ್ಷಣೆಗೆ ತೆರಳುವುದು ಎಂದಿದ್ದರು.   ಹಾಗೆ ಬಸ್ ಕಾಯುತ್ತಾ ಕೂತೆವು. ಶಾಲೆಗೆ ಮಕ್ಕಳು ಹೋಗುವುದು ಕಂಡಿತು. ಮೂರು ಬಾಲೆಯರ ಅವರ ಅನುಮತಿ ಕೇಳಿ ಪಟ ಕ್ಲಿಕ್ಕಿಸಿದೆ. ನಮ್ಮ ಡಾಬಾದ ಎದುರು ಡಾಭಾದವರೇ ತಯಾರಿಸಿದ ಆಟಿಕೆ ಕೀ ಚೈನ್ ಮುಂತಾದ ವಸ್ತುಗಳನ್ನು ಮಾರಾಟಕ್ಕೆ ಜೋಡಿಸಿಟ್ಟರು. ಒಂದಿಬ್ಬರು ಕೊಂಡರು. 




ಮಾರ್ಗದರ್ಶಕರೊಡನೆ

 ಅಂತೂ ತಡವಾಗಿ ೯.೩೦ಗೆ ಅದೇ ಲಟಾರಿ ಬಸ್ ಬಂತು.  ಒಳ್ಳೆಯ ಸ್ಥಳದಲ್ಲಿ ಸೀಟು ಲಭಿಸಲಿಲ್ಲ. ಆದರೂ ಹಿಂದೆ ಅಲ್ಲ ಎಂಬುದಷ್ಟೇ ತೃಪ್ತಿ. ತಿರ್ನಾಗೆ ವಿದಾಯ ಹೇಳಿ ಹೊರಟು ೧೦.೧೫ಕ್ಕೆ ನಾವು ಚಿರಾಪುಂಜಿ ತಲಪಿದೆವು.
  ೧೮೯೭ರಲ್ಲಿ ಭೂ ಕುಸಿತದಲ್ಲಿ ತಿರ್ನಾ  ನಾಶವಾಗಿತ್ತಂತೆ. ಅಂದು ಬದುಕಿಳಿದವರು ಪುನಃ ತಿರ್ನಾ ಊರನ್ನು ಮತ್ತೆ ಕಟ್ಟಿ ಬೆಳೆಸಿದರಂತೆ. 


   
   ಮಾವ್ಮ್ಲುಹ್ ಗುಹೆ Mawmluh Cave
ಸಿಮೆಂಟ್ ಕಾರ್ಖಾನೆ ಬಳಿ ಬಸ್ ಇಳಿದು ನಾವು ೧೦ ನಿಮಿಷ ನಡೆದು ಮಾವ್ಮ್ಲುಹ್ ಗುಹೆ ದ್ವಾರಕ್ಕೆ ಹೋದೆವು. ಇದು ಬಹಳ ಪ್ರಾಚೀನವಾದ ಗುಹೆಯಂತೆ. ಟಾರ್ಚ್ ಕಡ್ಡಾಯವಾಗಿ ಬೇಕು. ಹೊರಡುವ ಮೊದಲು ಸರಿಯಾಗಿ ಮಾಹಿತಿ ಕೊಡದೆ ಇದ್ದದ್ದರಿಂದ ಟಾರ್ಚ್ ತರದೆ ಕೆಲವರಿಗೆ ತೊಂದರೆಯಾಯಿತು. ಗುಹೆ ಒಳಹೊಕ್ಕು ಮುಂದೆ ನಡೆದಾಗ ನೀರು ಕಂಡಿತು. ಮೊಣಕಾಲು ಮೇಲೆವರೆಗೆ ನೀರು ಇರುತ್ತದೆ. ಅದನ್ನು ದಾಟಿಯೇ ಮುಂದೆ ಹೋಗಬೇಕಾಗುತ್ತದೆ ಎಂದು ಹಿಂದಿನದಿನವೇ ಸೂಚನೆ ಕೊಟ್ಟಿದ್ದರು. ಪ್ಯಾಂಟ್ ಮೇಲೆ ಮಾಡಿ ನೀರಿಗೆ ಇಳಿದೇಬಿಟ್ಟೆ. ಇಳಿದಷ್ಟೇ ವೇಗವಾಗಿ ಕಾಲು ನೀರಿನಿಂದ ಹಿಂದಕ್ಕೆ ಹಾಕಿದೆ. ನೀರು ಅತೀ ಶೀತಲದಿಂದ ಕಾಲು ಮರಗಟ್ಟುವಂತಾಯಿತು.  ನನ್ನಲ್ಲಿದ್ದ ಟಾರ್ಚ್ ಬೆಳಕಲ್ಲಿ ಮುಂದೆ ಕಾಲಿಡಲು ಭಯವಾಯಿತು. ನೀರು ಮೂಮ್ದೆ ಆಳವಾಗಿದೆಯೋ ಇಲ್ಲವೋ ತಿಳಿಯಲಿಲ್ಲ. ಹಾಗಾಗಿ ಮುಂದೆ ಹೋಗುವುದಾ ಬೇಡವಾ ಎಂಬ ಜಿಜ್ಞಾಸೆ ಕಾಡಿ ಅಲ್ಲೇ ನಿಂತೆ. ಮತ್ತೆ ನೀರಿಗೆ ಕಾಲು ಹಾಕಿದೆ. ಸ್ವಲ್ಪ ಹೊತ್ತು ನೀರಲ್ಲೇ ನಿಂತಾಗ ಅಷ್ಟು ಕಷ್ಟವಾಗಲಿಲ್ಲ. ಆಗ ಅಲ್ಲಿ ಗೈಡ್ ಮುಖ ಕಂಡಿತು. ಅವನು ಟಾರ್ಚ್ ಬೆಳಕು ಬೀರಿದಾಗ ಮುಂದೆ ಹೋಗುವುದೇ ಸೈ ಎಂದು ನಿರ್ಧರಿಸಿದೆ. ನಾನು ಹೋಗುತ್ತೇನೆಂದಾಗ ೭೪ರ ಹರಯದ ಸುಚಿತ್ರ ಅವರೂ ಧೈರ್ಯ ಮಾಡಿ ನನ್ನೊಂದಿಗೆ ಹೆಜ್ಜೆ ಹಾಕಿದರು. ಗೈಡ್ ಹಾಕಿದ  ಟಾರ್ಚ್ ಬೆಳಕಲ್ಲಿ ನೀರಲ್ಲಿ ನಿಧಾನವಾಗಿ ಮುಂದೆ ಸಾಗಿದೆವು.







 ಎಚ್ಚರದಿಂದ ಕಾಲಿಡಬೇಕಿತ್ತು. ಜಾರುವ ಸಂಭವವೂ ಇತ್ತು. ನೀರು ಆಳವಾಗಿತ್ತು. ಆಳ ಇಲ್ಲದ ಕಡೆ ಕಾಲಿಡಬೇಕಿತ್ತು. ಮುಂದೆ ಹೋದಂತೆ ವಿಶಾಲವಾದ ಬಂಡೆ. ಅಲ್ಲಿ ಹತ್ತಿಪ್ಪತ್ತು ಮಂದಿ ಕೂರಬಹುದು. ಅನಂತ ಆಗಲೇ ಅಲ್ಲಿ ತಲಪಿ ಕೂತಿದ್ದವ, ಬನ್ನಿ ಬನ್ನಿ, ಇದು ಹಜಾರ, ಇದು ಅಡುಗೆ ಕೋಣೆ, ಇದು ಮಲಗುವ ಕೋಣೆ ಎಂದು ಮನೆಯ ಪರಿಚಯಕ್ಕೆ ತೊಡಗಿದ!   ಅಲ್ಲಿ ಸ್ವಲ್ಪ ಹೊತ್ತು ನಿಂತು ಗುಹೆಯ ಒಳಗನ್ನು ಅವಲೋಕಿಸಿ ಪ್ರಕೃತಿಯ ಈ ಅದ್ಭುತ ರಚನೆಯನ್ನು ಕಂಡು ಬೆರಗಾದೆವು. 






 ಅಲ್ಲಿಂದ ವಾಪಾಸು ನೀರಲ್ಲೆ ನಡೆದು, ಮುಂದೆ ಬಂಡೆಬದಿಯಲ್ಲೇ ಸಾಗಿ ಹೊರಬಂದೆವು. ಒಳಗೆ ಸುಮಾರು ೭ಕಿಮೀ ಹೋಗಲು ಸಾಧ್ಯವಿದೆಯಂತೆ. ನಮಗೆ ಅಷ್ಟೆಲ್ಲ ಹೋಗಲು ಸಮಯವಿಲ್ಲ, ಹಾಗೂ ಅನುಮತಿಯೂ ಇರಲಿಲ್ಲ. ಪ್ಯಾಂಟ್ ಮೇಲೆ ಮಾಡಿದರೂ ನೀರು ತೊಡೆವರೆಗೆ ಇದ್ದದ್ದರಿಂದ ಒದ್ದೆಯಾಗಿತ್ತು. ಒಳ ಹೋಗಿ ಬಂದದ್ದು ಒಂದು ಅದ್ಭುತ ಅನುಭವವೆನಿಸಿತು.   ಈ ಗುಹೆ ೭೧೯೪ ಮೀಟರ್ ಉದ್ದ, ೪,೫೦೩ ಮೀಟರ್ ಎತ್ತರದಲ್ಲಿದೆಯಂತೆ. ಗುಹೆಯೊಳಗೆ ಸ್ಟಾಲಾಗ್ಮೈಟ್ ಶಿಲಾರಚನೆಗಳನ್ನು ನೋಡಬಹುದು.
  ಹೊರಬಂದು ಬಸ್ ಇರುವಲ್ಲಿಗೆ ನಡೆದು ಬಸ್ ಹತ್ತಿದೆವು. ನೀರಲ್ಲಿ ಅಷ್ಟು ನಡೆದದ್ದು ಹಿಂದಿನ ದಿನ ನಡೆದದ್ದರ ಪರಿಣಾಮ ಬಂದ ಪಾದನೋವು ಮಾಯವಾಗಿತ್ತು.
ಪ್ರವೇಶ ಸಮಯ: ಬೆಳಗ್ಗೆ ೭.೩೦ರಿಂದ ಸಂಜೆ ೪ರವರೆಗೆ. ಪ್ರವೇಶ ಉಚಿತ, ಗೈಡ್ ಇಲ್ಲದೆ ಒಳಹೋಗುವುದು ಅಪಾಯ. ಗೈಡ್ ರೂ.೨೦೦ ಮೇಲ್ಪಟ್ಟು.  
ಮಾವ್ಸ್ಮೈ ಗುಹೆ Mawsmai Cave
ಚಿರಾಪುಂಜಿ ಬಸ್ ನಿಲ್ದಾಣದಿಂದ ೪ಕಿಮೀ ದೂರದಲ್ಲಿರುವ ಮಾವ್ಸ್ಮೈ ಸುಣ್ಣದ ಗುಹೆಗೆ ಹೋದೆವು. ಇದನ್ನು ಸುಸಜ್ಜಿತ ಗುಹೆ ಎನ್ನಬಹುದು. ಒಳಗೆ ವಿದ್ಯುತ್ ದೀಪದ ವ್ಯವಸ್ಥೆ ಇದೆ. ಕೆಲವೆಡೆ ಚಾವಣಿಯಿಂದ ನೀರು ತೊಟ್ಟಿಕ್ಕುತ್ತಿತ್ತು. ಇಲ್ಲಿ ಅಸಂಖ್ಯ ಸ್ಟ್ಯಾಲಗ್ಮೈಟ್ ಮತ್ತು ಸ್ಟ್ಯಾಲ್ಯಾಕ್ಮೈಟ್ ಶಿಲಾರಚನೆಗಳನ್ನು ನೋಡಬಹುದು.  ಈ ಗುಹೆ ಸಾಕಷ್ಟು ಉದ್ದವಾಗಿದ್ದರೂ ಪ್ರವಾಸಿಗರಿಗೆ ೧೫೦ ಮೀಟರ್ ದೂರ ಮಾತ್ರ ಹೋಗಲು ಅವಕಾಶ.   ಪ್ರವೇಶ ಸಮಯ: ಬೆಳಗ್ಗೆ ೯ರಿಂದ ಸಂಜೆ ೫ರವರೆಗೆ. ಶುಲ್ಕ: ವಯಸ್ಕರಿಗೆ ರೂ.೨೦, ಮಕ್ಕಳಿಗೆ ರೂ.೫ ಕ್ಯಾಮರಾ ರೂ. ೨೦, ವೀಡಿಯೋ ರೂ. ೫೦ 












ಗುಹೆ ನೋಡಿ ಹೊರಬಂದಾಗ ಪಕ್ಕದಲ್ಲೇ ಇನ್ನೊಂದು ಗುಹೆ ಇರುವುದು ತಿಳಿಯಿತು. ಅದನ್ನು ನೋಡಲು ಯೂಥ್ ಹಾಸ್ಟೆಲ್ ಅವಕಾಶ ಕಲ್ಪಿಸಿರಲಿಲ್ಲ.
ನಾವೇ ಟಿಕೆಟ್ ಶುಲ್ಕ ರೂ. ೨೦ ಪಾವತಿಸಿ ಒಳ ಹೋದೆವು. ಇಲ್ಲೂ ಕೂಡ ವಿದ್ಯುತ್ ದೀಪ ಅಳವಡಿಸಿದ್ದರು. ಈ ಗುಹೆಯಲ್ಲೂ ಕಲ್ಲಿನ ರಚನೆಗಳು  ಬಹಳ ಚೆನ್ನಾಗಿತ್ತು.













ಅಲ್ಲಿಂದ ಹೊರಬಂದಾಗ ಪಕ್ಕದ ಪಾರ್ಕಿನಲ್ಲಿ ಊಟ ಬಂದಿತ್ತು. ಚಪಾತಿ ಪಲ್ಯ, ಕೂಟು, ಅನ್ನ ದಾಲ್, ಹಪ್ಪಳ, ಹಸಿತರಕಾರಿ, ಪಾಯಸ ಎಲ್ಲ ದಿವಸಗಳಲ್ಲೂ ಯೂಥ್ ಹಾಸ್ಟೆಲ್ ವತಿಯಿಂದ ಊಟ ಭರ್ಜರಿಯಾಗಿಯೇ ಇತ್ತು.



  ಅರ್ವಾ ಲುಮ್ಶೈನ್ನಾ ಗುಹೆ Arwah Lumshynna Cave
   ನಾವು ಬಸ್ ಹತ್ತಿ ೧.೧೫ಕ್ಕೆ ಹೊರಟು ಚಿರಾಪುಂಜಿಯ ಖ್ಲೀಹ್ನ್ಯಾಂಗ್ ಪ್ರದೇಶದಲ್ಲಿರುವ ಅರ್ವಾ ಗುಹೆಗೆ ಹೋದೆವು. ಬಸ್ಸಿಳಿದು ೨೦ ನಿಮಿಷದ ನಡಿಗೆಯಲ್ಲಿ ಗುಹೆ ದ್ವಾರ ತಲಪಿದೆವು. ಈ ನಡಿಗೆಯಲ್ಲಿ ಕೆಳಗೆ ಕಣಿವೆಗಳು, ಪರ್ವತಗಳ ಸುಂದರ ನೋಟ ಗಮನಸೆಳೆಯುತ್ತದೆ.


 ಮೇಘಾಲಯದ ಲಾ ಶಿನ್ನ ದಟ್ಟ ಅರಣ್ಯದಿಂದ ಸುತ್ತುವರಿದಿರುವ ಅರ್ವಾ ಗುಹೆಯೊಳಗೆ ವಿದ್ಯುತ್ ದೀಪದ ವ್ಯವಸ್ಥೆ ಇತ್ತು. ಒಳಗೆ ಶಿಲಾರಚನೆಗಳು ಬಹಳ ಚೆನ್ನಾಗಿದ್ದುವು. ಕಲ್ಲುಗಳು ನಯವಾಗಿದ್ದುವು. ಬಹುಶಃ ಜನ ಮುಟ್ಟಿ ಮುಟ್ಟಿಯೇ ಕಲ್ಲು ನಯವಾದದ್ದಿರಬಹುದು.  ದೊಡ್ದ ಗುಹೆಯಾದರೂ ಪ್ರವಾಸಿಗರಿಗೆ ೩೦೦ ಮೀಟರು ದೂರ ಮಾತ್ರ ಹೋಗಲು ಅವಕಾಶ.
 ಪ್ರವೇಶಶುಲ್ಕ ವಯಸ್ಕರಿಗೆ ರೂ. ೨೦. ಮಕ್ಕಳಿಗೆ ರೂ.೧೦ ಕ್ಯಾಮರಾ ರೂ ೫೦ ಗೈಡ್ ರೂ.೧೦೦ ಸಮಯ: ಬೆಳಗ್ಗೆ ೯.೩೦ರಿಂದ ಸಂಜೆ ೫.೩೦ರವರೆಗೆ





   ಬರುತ್ತ ದಾರಿಯಲ್ಲಿ ವ್ಯೂ ಪಾಯಿಂಟ್ ಕಟಕಟೆಯಲ್ಲಿ ನಿಂತು ಪರ್ವತ ಕಣಿವೆಗಳ ಸೌಂದರ್ಯವನ್ನು ಕಣ್ಣುಮನ ತುಂಬಿಕೊಂಡು ಕೃತಾರ್ಥರಾದೆವು. 






  ಮರಳಿ ಶಿಲ್ಲಾಂಗ್
ನಾವು ಬಸ್ ಹತ್ತಿ ೩.೩೦ಕ್ಕೆ ಹೊರಟವರು ಶಿಲ್ಲಾಂಗ್ ಯೂಥ ಹಾಸ್ಟೆಲಿಗೆ ಸಂಜೆ ೬.೧೫ಕ್ಕೆ ತಲಪಿದೆವು. ದಾರಿಹೇಗಿದೆ ಎಂದು ನೋಡಲು ಕೆಳಗಿನ ವೀಡಿಯೋ ನೋಡಿ.  ದೀರ್ಘಪಯಣವದು. ಸಂಜೆ ಚಹಾ ಬಿಸ್ಕೆಟ್ ಕೊಟ್ಟರು.

ಸಂಜೆ ೭ ಗಂಟೆಗೆ ಸಭೆ ಸೇರಿದೆವು. ಚಾರಣ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ಕೊಟ್ಟರು. ಒಂದೆರಡು ಮಂದಿ ಒಟ್ಟು ಚಾರಣದ ಬಗ್ಗೆ ಅಭಿಪ್ರಾಯ ಮಂಡಿಸಿದರು.


೮ ಗಂಟೆಗೆ ಸರಿಯಾಗಿ ಊಟ. ರಸಗುಲ್ಲ, ಚಪಾತಿ, ಪಲ್ಯ, ಕೂಟಕ, ಅನ್ನ ದಾಲ್. 





  ಸ್ನಾನ ಮುಗಿಸಿ ನಿದ್ದೆಗೆ ಅಣಿಯಾದೆವು. ಆದರೆ ನಿದ್ದೆ ಮಾಡಲು ಸಹಯಾನಿಗಳು ಅಡ್ದಿಯಾದರು. ಲೈಟ್ ಹಾಕಿ ತಾರಕ ಸ್ವರದಲ್ಲಿ ಮಾತಾಡುತ್ತಲೇ ಇದ್ದರು. ೧೦ ಗಂಟೆವರೆಗೆ ಹೇಗೋ ತಡೆದುಕೊಂಡೆ. ಅನಂತರ ನನ್ನ ತಾಳ್ಮೆಯ ಕಟ್ಟೆ ಒಡೆಯಿತು. ಇದೇನು ಫಿಶ್ ಮಾರ್ಕೆಟಾ ಎಂದುಕೇಳಿದೆ! ಆಗ ಒಮ್ಮೆ ಸ್ತಬ್ಧವಾದದ್ದು ಸ್ವಲ್ಪ ಹೊತ್ತಿನ ಬಳಿಕ ತರಕಾರಿ ಮಾರುಕಟ್ಟೆಯಂತಾಯಿತಷ್ಟೆ! ದೊಡ್ಡ ಸ್ವರದಲ್ಲಿ ಮಾತಾಡುವವರಿಗೆ, ವಾಚಾಳಿಗಳಿಗೆ  ಬಾಯಿ ಬೊಂಬಾಯಿ ಎಂದು ನಮ್ಮೂರಲ್ಲಿ ಹೇಳುತ್ತಿದ್ದದ್ದು ಈ ಬಾಯಿ ಬೊಂಬಾಯಿ ಎಂಬುದರ ಅರ್ಥ ಇಲ್ಲಿ ಪೂರ್ಣವಾಗಿ ತಿಳಿಯಿತು! ಅವರ ಈ ಉತ್ಸಾಹವನ್ನು ಮನದಲ್ಲೇ ಮೆಚ್ಚಿಕೊಂಡೆ ಕೂಡ!  


ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ