ಅಂಡಮಾನಿಗೆ ಹೋಗಬೇಕೆಂಬುದು ಬಹಳ ವರ್ಷಗಳಿಂದ ಮನದಲ್ಲಿದ್ದ ಆಸೆ. ಮೈಸೂರು
ಹಾಗೂ ಶಿವಮೊಗ್ಗ ಯೂಥ್ ಹಾಸ್ಟೆಲಿನ ಸದಸ್ಯರು ಅಂಡಮಾನಿಗೆ ಹೋಗುತ್ತಾರೆಂಬ ಸುದ್ದಿ ತಿಳಿಯಿತು. ನಾನೂ
ದುಡ್ಡು ಕಟ್ಟಿ ಹೆಸರು ನೋಂದಾಯಿಸಿದೆ. ಅಂಡಮಾನಿನಲ್ಲಿ ಯಾವ ಸ್ಥಳಕ್ಕೆ ಹೋಗುವುದು?ಎಷ್ಟು ಜನ ಇತ್ಯಾದಿ
ವಿವರ ಕೇಳದೆಯೇ ಅಂಡಮಾನ್ ಎಂಬ ಹೆಸರಿನ ಆಕರ್ಷಣೆಯಿಂದ ಹೆಸರು ನೋಂದಾಯಿಸಿದೆ!
ಮೈಸೂರಿನಿಂದ ೨೮
ಮಂದಿ ಸದಸ್ಯರು ಹೋಗುವುದೆಂದು, ಅವರೆಲ್ಲ ಒಟ್ಟು ಸೇರಿ ಈ ಪ್ರವಾಸದ ಬಗ್ಗೆ ಚರ್ಚಿಸಿದ ದಿನ ನಾನು ಊರಲ್ಲಿ
ಇರಲಿಲ್ಲ. ಹಾಗಾಗಿ ಯಾವ ಮಾಹಿತಿಯೂ ನನಗೆ ಸಿಕ್ಕಿರಲಿಲ್ಲ. ೭೧ ಜನ ಈ ಅಂಡಮಾನ್ ಪ್ರವಾಸಕ್ಕೆ ಹೊರಟಿರುವುದೆಂದು
ಹೊರಡುವ ಒಂದು ವಾರಕ್ಕೆ ಮೊದಲು ತಿಳಿದಾಗ ಹೇಗಾಗುತ್ತದೋ ಈ ಪ್ರವಾಸ ಪ್ರಯಾಸವಾಗದಿದ್ದರೆ ಸಾಕು ಎಂದು
ಮನದಲ್ಲೇ ಯೋಚಿಸಿದ್ದೆ.
ಚೆನ್ನೈಗೆ
ಪಯಣ
ತಾರೀಕು ೨೫.೨.೨೦೨೦
ರಂದು ನಾವು ೨೮ ಮಂದಿ (೭೧ ಜನರ ಪಟ್ಟಿ
ಮಧ್ಯಾಹ್ನ ೨.೧೫ರ ಶತಾಬ್ಧಿ ರೈಲಿನಲ್ಲಿ ಮೈಸೂರಿನಿಂದ ಚೆನ್ನೈಗೆ
ಹೊರಟೆವು. ಶತಾಬ್ಧಿಯ ಪಯಣದಲ್ಲಿ ಕೈಗೂ ಬಾಯಿಗೂ ಕೆಲಸ ಜಾಸ್ತಿ. ಹೊರಟ ಸ್ವಲ್ಪ ಹೊತ್ತಿನಲ್ಲಿ ಕಾಫಿ,
ಬಿಸ್ಕೆಟ್ ಕೊಟ್ಟರು. ನಮ್ಮ ತಂಡದವರಿಬ್ಬರು ನಿಪ್ಪಟ್ಟು ಕೊಟ್ಟರು. ಬೆಂಗಳೂರು ತಲಪಿ ತುಸು ಸಮಯದಲ್ಲಿ
ಸಮೋಸ, ಬೇಲ್ಪುರಿ, ಕೇಕ್ ಕಾಫಿ ಕೊಟ್ಟರು. ರಾತ್ರೆ ಊಟಕ್ಕೆ ಚಪಾತಿ ಪಲ್ಯ, ಐಸ್ಕ್ರೀಂ.
ಎಲ್ಲರಿಗೂ ಒಂದೇ
ಬೋಗಿಯಲ್ಲಿ ಸೀಟು ದೊರೆತಿರಲಿಲ್ಲ. ಕೂತು ಬೇಜಾರಾದಾಗಲೆಲ್ಲ ನಾವು ಕೆಲವರು ಹತ್ತು ಬೋಗಿ ದಾಟಿ ನಮ್ಮ
ಇತರ ಮಂದಿ ಕೂತ ಕಡೆಗೆ ಹೋಗಿ ಅಲ್ಲಿ ಹರಟೆ ಹೊಡೆದು ಬರುತ್ತಿದ್ದೆವು. ಬೋಗಿ ದಾಟುತ್ತ ಹೋಗುವಾಗ ಜನ
ಬಹಳ ಕಮ್ಮಿ ಇದ್ದದ್ದು ಕಂಡಿತು. ರೈಲ್ವೆ ಇಲಾಖೆಗೆ ಎಷ್ಟು ನಷ್ಟ ಎಂದು ಖೇದವಾಯಿತು. ಅಂತೂ ರಾತ್ರೆ
೯.೩೦ಗೆ ಎಂ.ಜಿ. ರಾಮಚಂದ್ರನ್ ರೈಲು ನಿಲ್ದಾಣದಲ್ಲಿ ಇಳಿದೆವು.
ಚೆನ್ನೈ ಯೂಥ್ ಹಾಸ್ಟೆಲ್
ನಾವು ವ್ಯಾನಿನಲ್ಲಿ
ಇಂದಿರಾನಗರದಲ್ಲಿರುವ ಯೂಥ ಹಾಸ್ಟೆಲ್ ತಲಪಿದಾಗ ೧೦.೩೦ ಆಗಿತ್ತು. ಅಲ್ಲಿಯ ಡಾರ್ಮೆಟರಿಯಲ್ಲಿ ನಮಗೆ
ಒಂದು ರಾತ್ರೆ ಕಳೆಯಲು ವ್ಯವಸ್ಥೆಯಾಗಿತ್ತು. ತಲೆಗೆ ತಲಾ ರೂ. ೩೦೦ . ನಮಗೆ ಒಂದು ಹಾಗೂ ಎರಡನೆ ಮಹಡಿಯಲ್ಲಿ
ಕೋಣೆ ಸಿಕ್ಕಿತ್ತು. ನಮ್ಮಲ್ಲಿ ಯಮಭಾರದ ಸೂಟ್ಕೇಸ್ ಬ್ಯಾಗ್ ಇದ್ದುವು. ಹೆಚ್ಚಿನವರೂ ೬೦+ ನವರರು.
ಅವರಿಗೆ ಎರಡನೆ ಮಹಡಿ ಹತ್ತುವುದೇ ಕಷ್ಟ. ಬ್ಯಾಗ್ ಹೊರಲಂತೂ ಕಷ್ಟ ಪಡುತ್ತಿದ್ದರು. ಮತ್ತೆ ನಾವು ಕೆಲವರು
ಅವರ ಬ್ಯಾಗ್ ಹೊತ್ತು ಮೇಲೆ ಸಾಗಿಸಿ ಕೊಟ್ಟೆವು.
ನಾವು ಸೊಳ್ಳೆಗಳ
ಸಂಗೀತದಲ್ಲಿ ಆಮೇಲೆ ಅದರ ಕಡಿತದಲ್ಲಿ ಅಲ್ಲಿ ನಾವು ಅರೆ ನಿದ್ದೆ ಮಾಡಿದೆವು ಎನ್ನಬಹುದು.
ಚೆನ್ನೈ- ಪೋರ್ಟ್ ಬ್ಲೇರಿಗೆ ಹಾರಾಟ
ತಾರೀಕು ೨೬-೨-೨೦೨೦ರಂದು
ಬೆಳಗ್ಗೆ ೪ ಗಂಟೆಗೆದ್ದು ೫ ಗಂಟೆಯೊಳಗೆ ಹೊರಟು ತಯಾರಾಗಿ. ಚೆನ್ನೈ ವಿಮಾನ ನಿಲ್ದಾಣಕ್ಕೆ ಹೋದೆವು.
ನಮ್ಮ ತಂಡದ ೨೧ ಮಂದಿಗೆ ೭ ಗಂಟೆಗೆ ವಿಮಾನ. ನಾವು ೭ ಮಂದಿಗೆ ೯ ಗಂಟೆಗೆ ವಿಮಾನವಿದ್ದುದು. ನಮ್ಮ ವಿಸ್ತಾರ
ವಿಮಾನ ೯ ಗಂಟೆಗೆ ಹೊರಟಿತು. ಕಾಫಿ ಉಚಿತವಾಗಿ ಕೊಟ್ಟರು. ೧೧ ಗಂಟೆಗೆ ಪೋರ್ಟ್ ಬ್ಲೇರಿನ ವೀರ ಸಾವರ್ಕರ್
ವಿಮಾನ ನಿಲ್ದಾಣದಲ್ಲಿ ಇಳಿದೆವು. ಅಲ್ಲಿಂದ ಅನತಿ ದೂರದಲ್ಲೆ ಇದ್ದ ಮ್ಯಾಗ್ ಪೈ ರೆಸಿಡೆನ್ಸಿ ಎಂಬ
ಹೊಟೇಲಿನಲ್ಲಿ ನಮಗೆ ವಾಸ್ತವ್ಯಕ್ಕೆ ಅನುಕೂಲ ಮಾಡಿದ್ದರು.ಉದಿತ್
ಮೋಹನ್ ಎಂಬ ಯುವಕ ಈ ಹೊಟೇಲ್ ಒಡೆಯ. ಬಹಳ ಸಮಾಧಾನಿ, ಸ್ನೇಹವಂತ. ಅಂಡಮಾನಿಗೆ ಹೋಗುವವರು ಸಂಪರ್ಕಿಸಿ: ೯೫೩೧೮೮೮೪೧೮, ೦೯೫೩೧೮೧೭೦೩೦,
೭೪೦೭೪೧೮೯೫೭, email: hotelmagpieresidency@gmail.com.)
ಆ ಹೊಟೇಲಿನ ಕೆಳ ಅಂತಸ್ತು, ಒಂದನೇ ಎರಡನೇ ಮಹಡಿಗಳಲ್ಲಿರುವ ಎಲ್ಲ ಕೋಣೆಗಳನ್ನೂ ನಮ್ಮ ೭೧ ಜನರಿಗೆ ಕಾದಿರಿಸಿದ್ದರು. ೧೦೩ ಸಂಖ್ಯೆಯ ಕೆಳ ಅಂತಸ್ತಿನಲ್ಲಿರುವ ಕೋಣೆಯಲ್ಲಿ ವೇದಾ ಅವರ ಚಿಕ್ಕಮ್ಮ ಮೀನಾಕ್ಷಿ ಅದಾಗಲೇ ಹೊಕ್ಕಿದ್ದರು, ಅವರೊಂದಿಗೆ ನಾನೂ ಸೇರಿಕೊಂಡೆ.
ಆ ಹೊಟೇಲಿನ ಕೆಳ ಅಂತಸ್ತು, ಒಂದನೇ ಎರಡನೇ ಮಹಡಿಗಳಲ್ಲಿರುವ ಎಲ್ಲ ಕೋಣೆಗಳನ್ನೂ ನಮ್ಮ ೭೧ ಜನರಿಗೆ ಕಾದಿರಿಸಿದ್ದರು. ೧೦೩ ಸಂಖ್ಯೆಯ ಕೆಳ ಅಂತಸ್ತಿನಲ್ಲಿರುವ ಕೋಣೆಯಲ್ಲಿ ವೇದಾ ಅವರ ಚಿಕ್ಕಮ್ಮ ಮೀನಾಕ್ಷಿ ಅದಾಗಲೇ ಹೊಕ್ಕಿದ್ದರು, ಅವರೊಂದಿಗೆ ನಾನೂ ಸೇರಿಕೊಂಡೆ.
ಸ್ನಾನವಾಗಿ ತಯಾರಾದಾಗ
ತಿಂಡಿ ಪೂರಿ ಪಲ್ಯ ಇದೆ. ಮೇಲೆ ಹತ್ತಿ ಹೋಗಿ ಊಟದ ಕೋಣೆಯಲ್ಲಿದೆ ಎಂದರು. ೧೨ ಗಂಟೆಗೆ ಬೆಳಗಿನ ತಿಂಡಿ
ಸೇವನೆ! ಚೆನ್ನೈ ವಿಮಾನ ನಿಲ್ದಾಣದಲ್ಲಿ ಮೈಸೂರಿನಿಂದ ಕಟ್ಟಿ ತಂದಿದ್ದ ಚಪಾತಿ ತಿಂದು ಆಗಿತ್ತು.
ಒಂದು ಗಂಟೆಗೆ ಊಟದ
ಕೋಣೆಯಲ್ಲಿ ೭೧ ಜನ ಸೇರಿದೆವು. ಈ ಪ್ರವಾಸದ ರೂವಾರಿ ವಿಜಯೇಂದ್ರ. ಅವರು ದರ್ಶನ್ ಟೂರ್ ಅಂಡ್ ಟ್ರಾವಲ್ಸ್
ನ ರಘು ಅವರ ಮೂಲಕ ೫ ದಿನದ ಅಂಡಮಾನ್ ಪ್ರವಾಸದ ರೂಪುರೇಖೆಗಳನ್ನು ನಿಗದಿಗೊಳಿಸಿದ್ದರು. ರಘು
ಮೂಲತಃ ಕನ್ನಡಿಗರು. ಅವರ ಮಗ ದರ್ಶನ್. ನಮ್ಮ ಪ್ರವಾಸದ ಹೊಣೆ ಹೊತ್ತಿದ್ದ ಯುವಕ. ದರ್ಶನ್ ವಿನಯವಂತ,
ಅವನ ನಡೆ ನುಡಿ ನಮಗೆ ಬಹಳ ಇಷ್ಟವಾಯಿತು. (ಅವರ ಸಂಪರ್ಕ ಸಂಖ್ಯೆ ೯೫೩೧೮೭೦೬೫೦, ೯೯೩೨೦೮೩೧೬೬. ಅಂದಮಾನಿಗೆ
ಹೋಗುವವರು ದರ್ಶನನನ್ನು ಸಂಪರ್ಕಿಸಬಹುದು. ಬಹಳ ಚೆನ್ನಾಗಿ ಮಿತವ್ಯಯದಿಂದ ಒಳ್ಳೆಯ ಊಟ ಕೊಟ್ಟು ಅಂಡಮಾನ್ ಸುತ್ತಾಡಿಸುತ್ತಾರೆ.)
ಮೈಸೂರು, ಶಿವಮೊಗ್ಗ,
ಬೆಂಗಳೂರು, ಸಾಗರ ಇಷ್ಟು ಕಡೆಯಿಂದ ಬಂದ ಎಲ್ಲರ ಪರಸ್ಪರ ಪರಿಚಯ ಕಾರ್ಯಕ್ರಮ ನಡೆಯಿತು. ೧.೪೫ಕ್ಕೆ ಊಟವಾಯಿತು. (ಅನ್ನ ದಾಲ್, ಚಪಾತಿ ಪಲ್ಯ, ಪಾಯಸ,
ಮಜ್ಜಿಗೆ)
ಸೆಲ್ಯುಲರ್ ಜೈಲು
ನಾವು ೩ ಗಂಟೆಗೆ ಸೆಲ್ಯುಲರ್ ಸೆರೆಮನೆ ವೀಕ್ಷಣೆಗೆ ಹೊರಟೆವು. ಸೆಲ್ಯುಲರ್
ಜೈಲು ಎಂಬ ಹೆಸರು ಕೇಳಿದಾಗ ನಮ್ಮ ಮನಪಟಲದಲ್ಲಿ ಸ್ವಾತಂತ್ರ್ಯ
ಹೋರಾಟಗಾರರನ್ನು ಬ್ರಿಟೀಷರು ಹಿಡಿದು ಹಿಂಸಿಸಿದ ವಿಷಯವೇ ಹಾದು ಹೋಗುತ್ತದೆ. ಹಾಗೂ ವೀರ ಸಾವರ್ಕರ್
ಹೆಸರು ನೆನಪಿಗೆ ಬರುತ್ತದೆ. ಈ ಜೈಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ನೋವು ತ್ಯಾಗವನ್ನು ಪ್ರತಿಬಿಂಬಿಸುತ್ತದೆ.
ನಮ್ಮ ಹೊಟೇಲಿನಿಂದ ಹೆಚ್ಚು ದೂರವಿರಲಿಲ್ಲ. ಮೊದಲಿಗೆ ಮ್ಯೂಸಿಯಂ ನೋಡಿದೆವು. ಜೈಲು ಕೊಟಡಿಗಳನ್ನು
ನೋಡಿದೆವು. ಅಲ್ಲಿ ೨ ಭಾಗದಲ್ಲಿ ನೆಲ ಅಂತಸ್ತು, ಮೊದಲ ಮಹಡಿ, ಹಾಗೂ ಎರಡನೆ ಮಹಡಿಗಳಲ್ಲಿ ಜೈಲು ಕೊಟಡಿಗಳಿವೆ.
ಎರಡನೆ ಮಹಡಿಯ ಕೊನೆಯ ಕತ್ತಲೆ ಕೋಣೆಯಲ್ಲಿ ವೀರ ಸಾವರ್ಕರ್ ಇದ್ದುದು. ಮೂತ್ರ ಮಲ ವಿಸರ್ಜನೆಗಾಗಿ ಒಂದು
ಮಡಕೆಯಂತೆ. ಅವರು ಗೋಡೆಗಳಲ್ಲೇ ಪದ್ಯ ಬರೆಯುತ್ತಿದ್ದರಂತೆ. ಆ ಕೋಣೆಗೆ ಹೊಕ್ಕಾಗ ಅಲ್ಲಿ ಅವರ ಪಟ ನೋಡಿದಾಗ ಒಮ್ಮೆ ಮೈ
ನವಿರೆದ್ದಿತು. ಅವರಿಗೆ ಗೌರವದಿಂದ ಸೆಲ್ಯೂಟ್ ಹಾಕಿದೆವು. ಅವರು ಕಾಲ ಕಳೆದ ಈ ಕತ್ತಲ ಕೋಣೆ ಈಗ ಪ್ರವಾಸಿಗರನ್ನು
ಸೆಳೆಯುತ್ತಿದೆ. ಈಗ ಏನೂ ಕತ್ತಲಿಲ್ಲ.
ನೇಣು ಹಾಕುತ್ತಿದ್ದ ಕೋಣೆಯಲ್ಲಿ ಮೂರು ಕುಣಿಕೆಗಳಿದ್ದುವು. ಒಟ್ಟಿಗೆ ಮೂರು ಮಂದಿ ಕುತ್ತಿಗೆಗೆ ಕುಣಿಕೆ ಬೀಳುತ್ತಿತ್ತಂತೆ.
ಜೈಲು ಕಟ್ಟಡದ
ರಿಪೇರಿ ಕೆಲಸ ನಡೆಯುತ್ತಲಿತ್ತು. ಸುಣ್ಣ ಬಣ್ಣ ಆಗುತ್ತಲಿತ್ತು. ಸಂಜೆ ೫ ಗಂಟೆಗೆ ನಮ್ಮ ತಂಡದವರು
ಸಮುದ್ರ ತೀರಕ್ಕೆ ಹೋದರು. ನಾವು ನಾಲ್ಕೈದು ಮಂದಿಗೆ ಮೊದಲಿಗೆ ವೀರ ಸಾವರ್ಕರ್ ಇದ್ದ ಕೋಣೆ ನೋಡಲು
ತಪ್ಪಿ ಹೋಗಿತ್ತು. ಹಾಗಾಗಿ ಕೇಳಿಕೊಂಡು ನೋಡಿ ಬರುವ ವೇಳೆಯಲ್ಲಾಗಲೆ ಅವರೆಲ್ಲ ಸಮುದ್ರ ದಂಡೆಗೆ ಹೋಗಿ
ಆಗಿತ್ತು. ನಮಗೆ ಸಮುದ್ರ ದಂಡೆಗಿಂತಲೂ ಇಲ್ಲಿವರೆಗೆ ಬಂದು ಸಾವರ್ಕರ್ ಇದ್ದ ಕೋಣೆ ನೋಡದೆ ಇದ್ದಿದ್ದರೆ
ಬಲು ನಷ್ಟ ವೆನಿಸಿತ್ತು.
ನೇಣು ಹಾಕುತ್ತಿದ್ದ ಕೋಣೆಯಲ್ಲಿ ಮೂರು ಕುಣಿಕೆಗಳಿದ್ದುವು. ಒಟ್ಟಿಗೆ ಮೂರು ಮಂದಿ ಕುತ್ತಿಗೆಗೆ ಕುಣಿಕೆ ಬೀಳುತ್ತಿತ್ತಂತೆ.
ಸೆಲ್ಯುಲರ್ ಜೈಲಿನ
ನಿರ್ಮಾಣ ೧೮೯೬ರಲ್ಲಿ ಪ್ರಾರಂಭವಾಗಿ ೧೯೦೬ರಲ್ಲಿ ಪೂರ್ಣಗೊಂಡಿತು. ಜೈಲಿನ ಕಟ್ಟಡಗಳನ್ನು ಒಟ್ಟು ೭
ರೆಕ್ಕೆಗಳಂತೆ ರಚಿಸಲಾಗಿತ್ತು. ಮುಖ್ಯ ಗೋಪುರದಿಂದ ಪ್ರತಿಯೊಂದು ಭಾಗವೂ ಕಾಣುವಂತೆ ಕಟ್ಟಿದ್ದಾರೆ. ಒಟ್ಟು ೬೯೩ ಜೈಲು ಕೊಟಡಿಗಳಿವೆ. (ಈಗ ಬರೀ ಮೂರು ರೆಕ್ಕೆಗಳ ಕಟ್ಟಡ ಮಾತ್ರವಿದೆ.) ಪ್ರತೀ
ಕೋಣೆಯನ್ನು ೧೫*೮ ಅಳತೆಯಲ್ಲಿ ಕಟ್ಟಲ್ಪಟ್ಟಿದೆ. ಮೂರು ಮೀಟರ್ ಎತ್ತರದಲ್ಲಿ ಗಾಳಿಕಿಂಡಿ ಇದೆ. ಕಟ್ಟಡ
ಕಟ್ಟಲು ಬರ್ಮಾದಿಂದ ಇಟ್ಟಿಗೆ ತರಿಸಲಾಗಿತ್ತಂತೆ.
೧೭೯೮ರಲ್ಲಿ ಬ್ರಿಟೀಷರು
ಅಂಡಮಾನಿನಲ್ಲಿ ನೌಕಾನೆಲೆ ಮತ್ತು ಕೈದಿಗಳಿಗಾಗಿ ವಸಾಹತನ್ನು ಸ್ಥಾಪಿಸಿದರು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೆರೆಸಿಕ್ಕ
ಕೈದಿಗಳಿಗಾಗಿ ಪೋರ್ಟ್ ಬ್ಲೇರಿನಲ್ಲಿ ಸೆಲ್ಯುಲರ್ ಜೈಲನ್ನು ನಿರ್ಮಿಸಿದರು. ಎರಡನೆ ಮಹಾಯುದ್ಧದಲ್ಲಿ
ಈ ದ್ವೀಪ ಸಮೂಹ ಜಪಾನ್ ದೇಶದ ಸೇನೆಯ ವಶವಾಯಿತು.
ವಿನಾಯಕ ದಾಮೋದರ್
ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರಾಗಿದ್ದವರು. ಈ ಜೈಲಿನಲ್ಲಿ ಅವರು ೬ತಿಂಗಳ ಏಕಾಂತ
ಸೆರೆವಾಸ ಎದುರಿಸಿದರು. ಸಾವರ್ಕರ್ ದೀರ್ಘ ೨೭ ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು.. ಸೆಲ್ಯುಲರ್
ಜೈಲಿನಲ್ಲಿ ೧೦ ವರ್ಷ ಇದ್ದರು. ಅಲ್ಲಿ ಅವರು ಗ್ರಂಥಾಲಯವನ್ನು ಸ್ಥಾಪಿಸಿದರು. ಅನಕ್ಷರಸ್ಥ ಕೈದಿಗಳಿಗೆ
ಶಿಕ್ಷಣ ನೀಡುತ್ತಿದ್ದರಂತೆ.
೧೯೭೯ರಲ್ಲಿ ಭಾರತದ ಪ್ರಧಾನಮಂತ್ರಿಗಳಾಗಿದ್ದ ಮೊರಾರ್ಜಿ ದೇಸಾಯಿಯವರು ಸೆಲ್ಯುಲರ್ ಜೈಲನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದರು.
ಜೈಲು ನೋಡಿ ಹೊರಬರುವಾಗ ಸಾಗರಿಕಾ ಅಂಗಡಿ ಹೊಕ್ಕೆ. ಕೆಲವು ಕಿವಿಯೋಲೆ ಕೊಂಡೆ. ಬಹಳ ಚೆನ್ನಾಗಿದ್ದುವು.
೧೯೭೯ರಲ್ಲಿ ಭಾರತದ ಪ್ರಧಾನಮಂತ್ರಿಗಳಾಗಿದ್ದ ಮೊರಾರ್ಜಿ ದೇಸಾಯಿಯವರು ಸೆಲ್ಯುಲರ್ ಜೈಲನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದರು.
ಜೈಲು ನೋಡಿ ಹೊರಬರುವಾಗ ಸಾಗರಿಕಾ ಅಂಗಡಿ ಹೊಕ್ಕೆ. ಕೆಲವು ಕಿವಿಯೋಲೆ ಕೊಂಡೆ. ಬಹಳ ಚೆನ್ನಾಗಿದ್ದುವು.
ಪ್ರವೇಶ ಶುಲ್ಕ: ರೂ. ೩೦ ಸೋಮಾವಾರ ರಜಾದಿನ. ಕೆಚ್ಚೆದೆಯ ಹುತಾತ್ಮರ
ನೆನಪಿಗಾಗಿ ಪ್ರತಿ ಮಂಗಳಾವಾರ ಗುರುವಾರ, ಶನಿವಾರ ಮತ್ತು ಭಾನುವಾರದಂದು ಧ್ವನಿ ಮತ್ತು ಬೆಳಕಿನ ಪ್ರದರ್ಶನ ಸಂಜೆ ೬ರಿಂದ ೭.೧೫. ಹಿಂದಿಯಲ್ಲಿ,
೭.೧೫ರಿಂದ ಇಂಗ್ಲೀಷಿನಲ್ಲಿ ಬ್ರಿಟೀಷರ ಕಾಲದಲ್ಲಿ ಕೈದಿಗಳ ಜೀವನದ ಜೊತೆಗೆ ಸ್ವಾತಂತ್ರ್ಯ ಚಳುವಳಿಯ
ಇತಿಹಾಸವನ್ನು ವಿವರಿತ್ತಾರೆ. ಶುಲ್ಕ: ರೂ. ೫೦. ಸೋಮವಾರ, ಬುಧವಾರ ಶುಕ್ರವಾರ ಹೊರತುಪಡಿಸಿ.
ನಾವು ೫ ಮಂದಿ ವೀರ ಸಾವರ್ಕರ್ ಉದ್ಯಾನವನದಲ್ಲಿ ಕುಳಿತೆವು. ಶೋಭಾ ಚರುಮುರಿ ಕೊಂಡು ತಂದರು. ತಿನ್ನುತ್ತ ಹರಟುತ್ತ ಕಾಲ ಕಳೆದೆವು.
ನಾವು ೫ ಮಂದಿ ವೀರ ಸಾವರ್ಕರ್ ಉದ್ಯಾನವನದಲ್ಲಿ ಕುಳಿತೆವು. ಶೋಭಾ ಚರುಮುರಿ ಕೊಂಡು ತಂದರು. ತಿನ್ನುತ್ತ ಹರಟುತ್ತ ಕಾಲ ಕಳೆದೆವು.
ಅವರೆಲ್ಲ ೬ ಗಂಟೆಗೆ ಬಂದರು. ಧ್ವನಿ ಬೆಳಕು ಪ್ರದರ್ಶನ ನೋಡಲು ಸರತಿ ಸಾಲಿನಲ್ಲಿ ನಿಂತೆವು. ನಮ್ಮ ಟಿಕೆಟಿನಲ್ಲಿ ಸೀಟು ನಂ. ಇರುತ್ತದೆ. ೬.೧೫ರಿಂದ ೭.೧೫ರವರೆಗೆ ನೋಡಿ ಕೇಳಿ ಭಾರವಾದ ಮನದಿಂದ ಹೊಟೇಲ್ ಕೋಣೆಗೆ ಹೋದೆವು.
ಊಟಕ್ಕೆ ವಿಶೇಷವಾಗಿ
ಪಾಯಸ ಮತ್ತೆ ಚಪಾತಿ ತರಕಾರಿ ಕೂಟು, ಅನ್ನ ಸಾರು ಪಲ್ಯ. ಅಲ್ಲಿಗೆ ಆ ದಿನದ ಕಾರ್ಯ ಮುಗಿಯಿತು!
ಮ್ಯೂಸಿಯಂಗಳಿಗೆ ಭೇಟಿ
ತಾರೀಕು ೨೭.೨.೨೦೨೦ರಂದು ಬೆಳಗ್ಗೆ ತಿಂಡಿ ತಿಂದು ರಾಸ್ ದ್ವೀಪಕ್ಕೆ
ಹೋಗುವುದೆಂದು ಹಡಗು ಹತ್ತಲು ಹೋದೆವು. ಅಲ್ಲಿ ಯಾವ ಹಡಗೂ ಹೊರಡಲಿಲ್ಲ. ಹಿಂದಿನ ದಿನ ರಕ್ಷಣಾಕವಚ ಹಾಕದೆ
ಪ್ರಯಾಣಿಕರನ್ನು ಕರೆದೊಯಿದಿದ್ದರಂತೆ. ಹಾಗಾಗಿ ಹಡಗು ಪಯಣಕ್ಕೆ ಅವಕಾಶ ಕೊಟ್ಟಿರಲಿಲ್ಲವಂತೆ. ಅವರಿಗೆ
ಒಂದು ದಿನ ಹಡಗು ಚಲಿಸದಂತೆ ಶಿಕ್ಷೆಯಂತೆ! ಎಂದು ಮಾತಾಡಿಕೊಳ್ಳುತ್ತಿದ್ದುದು ಕೇಳಿಸಿತು! ನಮಗೂ ಅಲ್ಲಿ
ಒಂದು ಗಂಟೆ ಕಾದದ್ದೇ ಶಿಕ್ಷೆಯೆನಿಸಿತು!.
ಮಾನವ ಶಾಸ್ತ್ರೀಯ
ವಸ್ತು ಸಂಗ್ರಹಾಲಯ (Anthropological museum)
ನಾವು ಅಲ್ಲಿ ಕಾದು
ಪ್ರಯೊಜನ ಇಲ್ಲವೆಂದು ತಿಳಿದು ಅಲ್ಲಿಂದ ಮಾನವ ಶಾಸ್ತ್ರೀಯ ವಸ್ತು ಸಂಗ್ರಹಾಲಯಕ್ಕೆ ಹೋದೆವು.
ಅಂಡಮಾನ್ ದ್ವೀಪಗಳ
ಇತಿಹಾಸ, ಅಲ್ಲಿಯ ಜನರು, ಅವರ ಸಂಸ್ಕೃತಿಯ ಬಗ್ಗೆ, ಕೆಲವು ಕಲಾಕೃತಿಗಳು, ಪಟಗಳಿಂದ ತಿಳಿಯಬಹುದು.
ಬುಡಕಟ್ಟು ಜನಾಂಗದ ಜಾರ್ವಾ ಬುಡಕಟ್ಟು ಜನರ ಬಗ್ಗೆ
ಅವರು ವಾಸಿಸುವ ಮನೆಗಳ ಮಾದರಿ, ಅವರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಇತ್ಯಾದಿ ಅಲ್ಲಿ ನೋಡಬಹುದು..
ಪ್ರವೇಶ ಶುಲ್ಕ:
ವಯಸ್ಕರಿಗೆ ರೂ. ೨೦, ಮಕ್ಕಳಿಗೆ ರೂ ೧೦, ವಿದೇಶಿಗಳಿಗೆ ರೂ ೧೫೦,
ಚಥಮ್
ಸಾ ಮಿಲ್ (chatham Saw Mill, Haddo, portblair, Andamon and nicobar , Island, 744102)
ಸರ್ಕಾರಿ ಒಡೆತನದಲ್ಲಿರುವ ಹಳೆಯ ಮರದ ಕಾರ್ಖನೆ ನೋಡಲು ನಾವು ಹೋದೆವು.
ಎದುರು ಸುಂದರ ಮರದ ಗೇಟ್ ಗಮನ ಸೆಳೆಯುತ್ತದೆ. ಮೊದಲಿಗೆ ಮ್ಯೂಸಿಯಂ ನೋಡಿದೆವು.
ಅರಣ್ಯ ವಸ್ತು ಸಂಗ್ರಹಾಲಯವನ್ನು
ಸೆಪ್ಟೆಂಬರ ೨೦೦೬ರಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆ ಸ್ಥಾಪಿಸಿತು. ಸ್ಮಾರಕ ಉತ್ಪನ್ನಗಳು ಮತ್ತು
ಮರದಿಂದ ಮಾಡಿದ ವಿವಿಧ ಕರಕುಶಲ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಗಣೇಶ ವಿಗ್ರಹ,
ಬ್ಯಾಲೆನ್ಸ್ ಗೊಂಬೆ ಅದರ ವಿನ್ಯಾಸಕ್ಕೆ ಗಮನ ಸೆಳೆಯುತ್ತವೆ.
ಮರದ ಕಾರ್ಖಾನೆ ಒಳಗೆ ಹೋಗಿ ನೋಡಿದೆವು. ಮರದ ದಿಮ್ಮಿಗಳು, ಹಲಗೆಗಳಾಗಿ, ರೀಪುಗಳಾಗಿ ಕತ್ತರಿಸುವುದನ್ನು ನೋಡಿದೆವು. ಗೋದಾಮಿನಲ್ಲಿ ಮರದ ರಾಶಿಯೇ ಇತ್ತು.
ಮರದ ಕಾರ್ಖಾನೆ ಒಳಗೆ ಹೋಗಿ ನೋಡಿದೆವು. ಮರದ ದಿಮ್ಮಿಗಳು, ಹಲಗೆಗಳಾಗಿ, ರೀಪುಗಳಾಗಿ ಕತ್ತರಿಸುವುದನ್ನು ನೋಡಿದೆವು. ಗೋದಾಮಿನಲ್ಲಿ ಮರದ ರಾಶಿಯೇ ಇತ್ತು.
ಕಾರ್ಖಾನೆ ಸುತ್ತ ಒಂದು ಸುತ್ತು ಬಂದಾಗ ಪಕ್ಕದಲ್ಲೇ ಸಮುದ್ರ ಬಂದರಿನಲ್ಲಿ ಹಡಗಿನಲ್ಲಿ ಮರಳು ಬಂದದ್ದನ್ನು ಲಾರಿಗೆ ತುಂಬುತ್ತಿದ್ದ ದೃಶ್ಯ ಕಂಡಿತು. ನೀಲ ಸಮುದ್ರ ಎಷ್ಟು ನೋಡಿದರೂ ಸಾಕೆನಿಸುವುದಿಲ್ಲ.
ಎರಡನೆಯ ಮಹಾಯುದ್ಧದಲ್ಲಿ
ಜಪಾನಿಯರು ಚಥಮ್ ದ್ವೀಪಕ್ಕೆ ಬಾಂಬ್ ಹಾಕಿದಾಗ ಈ ಮಿಲ್ ಭಾಗಶಃ ನಾಶವಾಗಿತ್ತು. ಜಪಾನೀಯರ ಬಂಕರ್ ಈಗಲೂ
ಅಲ್ಲಿ ನೋಡಬಹುದು. ಮುಂದೆ ೧೯೪೬ರಲ್ಲಿ ಬ್ರಿಟಿಷರು ಮತ್ತೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಿದರು.
ಈ ಗಿರಣಿಯಲ್ಲಿ
ಸಂಸ್ಕರಿಸಿದ ಮರವನ್ನು ಸೆಲ್ಯುಲರ್ ಜೈಲು ನಿರ್ಮಾಣಕ್ಕೆ ಹಾಗೂ ರಾಸ್ ದ್ವೀಪದಲ್ಲಿ ಕಟ್ಟಡ ನಿರ್ಮಾಣಕ್ಕೆ
ಬಳಸಲಾಗಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿ ಇಲ್ಲಿ ಸಂಸ್ಕರಿಸಿದ ಮರಗಳನ್ನು ಹಲವಾರು ದೇಶಗಳಿಗೆ ರಫ್ತು
ಮಾಡಲಾಗುತ್ತಿತ್ತು. ಲಂಡನಿನ ಬಂಕಿಂಗ್ ಹ್ಯಾಮ್ ಅರಮನೆಯಲ್ಲೂ ಈ ಗಿರಣಿಯ ಮರ ಬಳಸಲಾಗಿತ್ತಂತೆ. ಎಲ್ಲವನ್ನೂ
ಸಾವಕಾಶವಾಗಿ ನೋಡಿ ಅಲ್ಲಿಂದ ೧.೩೦ ಗಂಟೆಗೆ ಹೊರಟೆವು.
ಪ್ರವೇಶ ಸಮಯ: ೮.೩೦ರಿಂದ ೨.೩೦. ಪ್ರವೇಶ ಶುಲ್ಕ ರೂ.೧೦. ಗೈಡು ಶುಲ್ಕ
ರೂ.೫೦. ಸೋಮವಾರ ರಜಾದಿನ.
ವಿಜ್ಞಾನ
ಕೇಂದ್ರ (Science centre)
ನಾವು ವಿಜ್ಞಾನ ಕೇಂದ್ರಕ್ಕೆ ಹೋದೆವು. ಆಗ ಊಟದ ಸಮಯವಾಗಿತ್ತು. ನಮಗೆ
ಎಲ್ಲರಿಗೂ ಊಟದ ಪೊಟ್ಟಣ ಕೊಟ್ಟರು. ಅದರಲ್ಲಿ ಚಪಾತಿ, ಪಲ್ಯ, ಫ಼್ರೈಡ್ರೈಸ್ ಸಲಾಡ್ ಇತ್ತು. ಹಸಿದ
ಹೊಟ್ಟೆಗೆ ಅದು ಮೃಷ್ಟಾನ್ನವೇ ಆಗಿತ್ತು. ರಸ್ತೆ ಮೇಲೆ ದಿಬ್ಬದಲ್ಲಿ ಕೂತು ಊಟ ಮಾಡಿದೆವು. ಕೆಳಗೆ ಸಮುದ್ರ ಕಾಣುತ್ತಲಿತ್ತು. ಸಮುದ್ರದ ಕಲ್ಲುಗಳು ಗಮನ ಸೆಳೆಯಿತು.
ಊಟವಾಗಿ ನಾವು ವಿಜ್ಞಾನ
ಕೇಂದ್ರಕ್ಕೆ ಹೋದೆವು. ಗುಡ್ ವಿಲ್ ಎಸ್ಟೇಟಿನಲ್ಲಿರುವ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ವಿಷಯಗಳು
ವಿನೂತನ ರೀತಿಯಲ್ಲಿ ಪ್ರದರ್ಶನಗೊಂಡಿವೆ. ದ್ರವವರ್ಣ ಚಿತ್ರದಂಥ ಹಲವಾರು ಸರಳ ಪ್ರಯೋಗಗಳೊಂದಿಗೆ ಇದು ದ್ರವದ ವೇಗವನ್ನು ತೋರಿಸುತ್ತದೆ.
ವಿಭಿನ್ನ ವೈಜ್ಞಾನಿಕ ಪ್ರಕ್ರಿಯೆಗಳನ್ನು ಆಸಕ್ತಿಯುತವಾಗಿ ವಿವರಿಸುವ ಮಾದರಿಗಳಿವೆ. ಜ್ವಾಲಾಮುಖಿ
ಚಂಡಮಾರುತ ಭೂಕಂಪಗಳಂಥ ನೈಸರ್ಗಿಕ ಬೌಗೋಳಿಕ ವಿಪತ್ತುಗಳು, ಅಂಡಮಾನ್ ನಿಕೋಬಾರ್ ದ್ವೀಪಗಳ ಜಲಚರಗಳು,
ಇತ್ಯಾದಿ ಬಗ್ಗೆ ವರ್ಣರಂಜಿತ ಚಿತ್ರಗಳು ಮತ್ತು ಮಾದರಿಗಳನ್ನು ಬಳಸಿ ವಿವರಿಸಲಾಗಿದೆ. ವಿದ್ಯಾರ್ಥಿಗಳಿಗೆ
ಉಪಯುಕ್ತ ಮಾಹಿತಿಗಳಿವೆ. ವಿಜ್ಞಾನ ಕೇಂದ್ರ ನೋಡಿ ನನಗೆ ಬಹಳ ಖುಷಿಯಾಯಿತು.
ರೂ. ಹತ್ತು ಕೊಟ್ಟು ಹವಾನಿಯಂತ್ರಿತ ಕೊಟಡಿಯಲ್ಲಿ ಕೂತು ೩ ಗಂಟೆಗೆ ೩ಡಿ ಮೀನಿನ ಚಿತ್ರ ನೋಡಿದೆವು. ಸೆಖೆಗೆ ಅರ್ಧ ಗಂಟೆ ಕೊಟಡಿಯ ತಂಪೂ, ಹಾಗೂ ಚಿತ್ರವೂ ಬಹಳ ಚೆನ್ನಾಗಿತ್ತು.
ರೂ. ಹತ್ತು ಕೊಟ್ಟು ಹವಾನಿಯಂತ್ರಿತ ಕೊಟಡಿಯಲ್ಲಿ ಕೂತು ೩ ಗಂಟೆಗೆ ೩ಡಿ ಮೀನಿನ ಚಿತ್ರ ನೋಡಿದೆವು. ಸೆಖೆಗೆ ಅರ್ಧ ಗಂಟೆ ಕೊಟಡಿಯ ತಂಪೂ, ಹಾಗೂ ಚಿತ್ರವೂ ಬಹಳ ಚೆನ್ನಾಗಿತ್ತು.
ಅಕ್ವೇರಿಯಂ (ರಾಜೀವಗಾಂಧಿನಗರ, ಪೋರ್ಟ್ ಬ್ಲೇರ್)
ಒಳಗೆ ಪ್ರವೇಶಿಸುತ್ತಿದ್ದಂತೆ ದೊಡ್ಡ ತಿಮಿಂಗಿಲದ ಅಸ್ಥಿಪಂಜರ ಎದುರಾಗುತ್ತದೆ.
ಗಾಜಿನ ಜಾಡಿಗಳಲ್ಲಿ ವಿವಿಧ ಜಾತಿಯ ಸಮುದ್ರ ಪ್ರಾಣಿಗಳು, ಚಿಪ್ಪುಗಳು, ಹವಳಗಳು, ಏಡಿಗಳು ಇವೆ. ಶಾರ್ಕ್,
ಸ್ಟಾರ್, ಇತ್ಯಾದಿ ವಿವಿಧ ಜಾತಿಯ ಮೀನುಗಳ ಸಂಗ್ರಹವಿದೆ.
ಕ್ಯಾಮರಾ ಒಯ್ಯುವಂತಿಲ್ಲ.
ಆದರೆ ವೀಡಿಯೋಗ್ರಫಿಗೆ ಶುಲ್ಕ ಸಹಿತ ಅವಕಾಶವಿದೆ.
ಪ್ರವೇಶ ಸಮಯ: ಬೆಳಗ್ಗೆ ಗಂಟೆ ೯ರಿಂದ ಸಂಜೆ ೪ ರವರೆಗೆ. ಭಾನುವಾರ
ರಜಾದಿನ.
ಮರೀನಾ ಬೀಚ್
ಮರೀನಾ ಬೀಚ್
ಸಂಜೆ ಬೀಚಿನಲ್ಲಿ ಒಂದು ಗಂಟೆ ಕಾಲ ಕಳೆದೆವು. ನೀರಿನಲ್ಲಿ ನಡೆದೆವು. ಸೂರ್ಯಾಸ್ತವನ್ನು ಕಣ್ಣುತುಂಬಿಕೊಂಡೆವು. ಕೀಟಗಳು ದಡದಲ್ಲಿ ಹೊರಬರುವುದನ್ನು, ಅವುಗಳು ಗೂಡುಕಟ್ಟಿರುವುದನ್ನು ನೋಡಿದೆವು. ಕಾಲಿಟ್ಟರೆ ಎಲ್ಲಿ ಅವುಗಳಿಗೆ ನೋವಾಗುವುದೋ ಎಂಬ ಕಾಳಜಿಯಿಂದ ನಡೆದೆವು. ಸಮುದ್ರದ ದಡದಲ್ಲಿ ಸೂರ್ಯ ಅಸ್ತಮಿಸುವುದನ್ನು ನೋಡುವುದು ಒಂದು ಸುಂದರ ಅನುಭವ.
ತಾರೀಕು ೨೮-೨-೨೦೨೦ರಂದು
ಬೆಳಗ್ಗೆ ೩ ಗಂಟೆಗೆ ಎದ್ದು ತಯಾರಾಗಿ ೩.೪೦ಕ್ಕೆ ನಾವು ಬಾರಾಟಂಗಿಗೆ ಹೊರಟೆವು. ಪೋರ್ಟ್ಬ್ಲೇರಿನಿಂದ
ಬಾರಾಟಂಗಿಗೆ ೧೧೦ಕಿಮೀ. ಜಿರ್ಕಾಟಾಂಗ್ ತನಿಖಾಠಾಣೆ ತಲಪಿದಾಗ ಗಂಟೆ ೪.೩೦. ಅಲ್ಲಿ ಗೇಟ್ ತೆರೆಯುವುದು
೬ ಗಂಟೆಗೆ. ಅಲ್ಲೇ ಒಂದೂವರೆ ಗಂಟೆ ಅಲ್ಲಿ ಕಾದೆವು. ಬೇಗ ಹೊರಟ ಉದ್ದೇಶ ಸರತಿ ಸಾಲು ವಾಹನಗಳು ಇರುತ್ತವೆ.
ಬೇಗ ಹೊರಟರೆ ಸಾಲಿನಲ್ಲಿ ಮುಂದಿರಬಹುದು. ನಮ್ಮ ವ್ಯಾನಿನ ಮುಂದೆ ಅದಾಗಲೇ ೭-೮ ವಾಹನಗಳು ನಿಂತಿದ್ದುವು!
ನಮ್ಮ ಹಿಂದೆ ವಾಹನಗಳ ಸಾಲು ಕಣ್ಣಿಗೆ ಕಾಣದಷ್ಟು ದೂರವೂ ಇತ್ತು. ಆಯಾ ವಾಹನದಲ್ಲಿದ್ದವರ ಹೆಸರು ಆಧಾರ
ಸಂಖ್ಯೆ ಮೊಬೈಲು ಸಂಖ್ಯೆ ಬರೆದು ನಮ್ಮ ನಮ್ಮ ಗಾಡಿಯ ಚಾಲಕನಿಗೆ ಕೊಡಬೇಕು. ಅದನ್ನು ಅವನು ತನಿಖಾ ಠಾಣೆಯಲ್ಲಿ
ಕೊಟ್ಟರೆ ಮುಂದೆ ಹೋಗಲು ಅನುಮತಿ. ನಮ್ಮ ವ್ಯಾನಿನಲ್ಲಿದ್ದವರ
ಹೆಸರು ಬರೆಯುವ ಕೆಲಸ ಮಾಡಿದೆವು. ವ್ಯಾನ್ ಇಳಿದು ಇಡ್ಲಿ ವಡೆ ತಿಂದೆವು. ಅಲ್ಲಿ ಮೂರು ನಾಲ್ಕು ಪೆಟ್ಟಿಗೆ
ಅಂಗಡಿ ಇದೆ. ಅವರಿಗೆಲ್ಲ ನಿತ್ಯ ಸುಗ್ಗಿ. ಎಲ್ಲರೂ ಅಲ್ಲಿ ಚಹಾ, ಇಡ್ಲಿ ವಡೆ ಸೇವನೆ ಮಾಡಿಯೇ ಮುಂದುವರಿಯುವುದು.
ರಸ್ತೆಯಲ್ಲಿ ಅಡ್ಡಾಡಿದೆವು. ಅಂತೂ ೬ ಗಂಟೆಯಾಯಿತು. ಗೇಟ್ ತೆರೆಯಲ್ಪಟ್ಟಿತು. ವಾಹನ ಮುಂದೆ ಸಾಗಿತು.
ಜಾರ್ವಾನ್ ಬುಡಕಟ್ಟು ಮೀಸಲು ಅರಣ್ಯ ಪ್ರದೇಶದ ಮಧ್ಯೆ ರಸ್ತೆಯಲ್ಲಿ ನಾವು ಸಾಗಿದೆವು. ದಟ್ಟ ಅರಣ್ಯ. ಬೆಳಗಿನ ಹೊತ್ತು ವಾತಾವರಣ ಬಲು ಚೆನ್ನಾಗಿತ್ತು. ಗೇಟ್ ದಾಟಿ ಬಾರಾಟಂಗ್ ತಲಪುವ ವರೆಗೆ ಎಲ್ಲೂ ದಾರಿಯಲ್ಲಿ ಪಟ ತೆಗೆಯುವಂತಿಲ್ಲ ಎಂದು ಮೊದಲೇ ಎಚ್ಚರ ಹೇಳಿದ್ದರು.
ಜಾರ್ವಾನ್ ಬುಡಕಟ್ಟು ಮೀಸಲು ಅರಣ್ಯ ಪ್ರದೇಶದ ಮಧ್ಯೆ ರಸ್ತೆಯಲ್ಲಿ ನಾವು ಸಾಗಿದೆವು. ದಟ್ಟ ಅರಣ್ಯ. ಬೆಳಗಿನ ಹೊತ್ತು ವಾತಾವರಣ ಬಲು ಚೆನ್ನಾಗಿತ್ತು. ಗೇಟ್ ದಾಟಿ ಬಾರಾಟಂಗ್ ತಲಪುವ ವರೆಗೆ ಎಲ್ಲೂ ದಾರಿಯಲ್ಲಿ ಪಟ ತೆಗೆಯುವಂತಿಲ್ಲ ಎಂದು ಮೊದಲೇ ಎಚ್ಚರ ಹೇಳಿದ್ದರು.
ಒಂದೂವರೆ ಗಂಟೆ
ಪಯಣಿಸಿ ನಾವು ೭.೩೦ಗೆ ಬಾರಾಟಂಗ್ ತಲಪಿದೆವು. ಅಲ್ಲಿ ನಮಗೆ ಇಡ್ಲಿ ಪೊಟ್ಟಣ ಕೊಟ್ಟರು. ಒಂದು ಇಡ್ಲಿ
ತಿಂದು, ಉಳಿದದ್ದನ್ನು ನಾಯಿಗೆ ಹಾಕಿದೆ. ಹಸಿದ ನಾಯಿ ಇಡ್ಲಿಯನ್ನು ಬಗಬಗನೆ ತಿಂದಿತು.
ಮಾಯಾಬಂದರು
ನಾವು ಬಾರಾಟಂಗಿನಿಂದ ಲಾಂಚ್ ಹತ್ತಿ ಮಾಯಾಬಂದರಿಗೆ ಹೋದೆವು. ಲಾಂಚಿನಲ್ಲಿ
ಬಸ್ ಕಾರು ಎಲ್ಲ ಹತ್ತಿತು. ಕಾಲು ಗಂಟೆ ಸವಾರಿಯಲ್ಲಿ ಮಾಯಾಬಂದರು ತಲಪಿದೆವು.
ಮಣ್ಣಿನ
ಜ್ಲಾಲಾಮುಖಿ (Mud Valcono)
ನಾವು ಜೀಪಿನಲ್ಲಿ ಅರ್ಧ ಗಂಟೆ ಸಾಗಿ ಮಣ್ಣಿನ ಜ್ವಾಲಾಮುಖಿ ನೋಡಲು
ಹೋದೆವು. ಜೀಪಿಳಿದು ೧ಕಿಮೀ ನಡೆದು ಸಾಗಿದೆವು. ಪ್ರವೇಶ ದ್ವಾರದಲ್ಲಿ ಇರುವ ತಂಗುದಾಣದ ವಿನ್ಯಾಸ ನೋಡಿ ಬಹಳ ಖುಷಿ ಪಟ್ಟೆವು.
ಚೌಕಾಕಾರದ ಸ್ಥಳದಲ್ಲಿ ಕೆಲವೆಡೆ ಮಣ್ಣು ನೀರ ಗುಳ್ಳೆಗಳು ಬುಳಕ್ಕನೆ ಸಣ್ಣಗೆ ಮೇಲೆಳುತ್ತಿದ್ದುದನ್ನು ನೋಡಿದೆವು. ಮಣ್ಣಿನ ಜ್ವಾಲಾಮುಖಿ ನೋಡಲು ಸಿಕ್ಕುವುದು ಬಲು ಅಪರೂಪ.
ಚೌಕಾಕಾರದ ಸ್ಥಳದಲ್ಲಿ ಕೆಲವೆಡೆ ಮಣ್ಣು ನೀರ ಗುಳ್ಳೆಗಳು ಬುಳಕ್ಕನೆ ಸಣ್ಣಗೆ ಮೇಲೆಳುತ್ತಿದ್ದುದನ್ನು ನೋಡಿದೆವು. ಮಣ್ಣಿನ ಜ್ವಾಲಾಮುಖಿ ನೋಡಲು ಸಿಕ್ಕುವುದು ಬಲು ಅಪರೂಪ.
ಭೂಗರ್ಭದಲ್ಲಿ ಕೊಳೆಯುವ ಸಾವಯವ ಪದಾರ್ಥಗಳಿಂದ ಹೊರಸೂಸುವ ನೈಸರ್ಗಿಕ ಅನಿಲದಿಂದ ಮಣ್ಣಿನ ಕುಳಿಗಳು ಉತ್ಪತ್ತಿಯಾಗುತ್ತವೆ. ಅದು ಮಣ್ಣು ನೀರನ್ನು
ಮೇಲಕ್ಕೆ ಚಿಮ್ಮಿಸುವುದನ್ನು ನೋಡಬಹುದು. ಮಣ್ಣಿನ ಜ್ವಾಲಾಮುಖಿ ವಿಶ್ವದ ಕೆಲವೇ ಸ್ಥಳಗಳಲ್ಲಿ ಮಾತ್ರ
ಕಂಡು ಬರುತ್ತವಂತೆ. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ೧೧ ಮಣ್ಣಿನ ಜ್ವಾಲಾಮುಖಿ ಇರುವುದನ್ನು ಪತ್ತೆ
ಹಚ್ಚಿದ್ದಾರಂತೆ. ನೈಸರ್ಗಿಕ ಚೋದ್ಯವನ್ನು ಸ್ವಲ್ಪ
ಹೊತ್ತು ನೋಡಿ ಪಟ ತೆಗೆದು ಅಲ್ಲಿಂದ ಹೊರಟೆವು.
ಸುಣ್ಣದ ಕಲ್ಲಿನ
ಗುಹೆ
ಮಣ್ಣಿನ
ಜ್ವಾಲಾಮುಖಿ ನೋಡಿ ಸಂತೃಪ್ತರಾಗಿ ನಾವು ಸುಣ್ಣದಕಲ್ಲಿನ ಗುಹೆ ನೋಡಲು ದೋಣಿ ಹತ್ತಿದೆವು. ಒಂದು ದೋಣಿಯಲ್ಲಿ
ಹತ್ತು ಮಂದಿಗೆ ಅವಕಾಶ. ಸಮುದ್ರದಲ್ಲಿ ೨೫ ನಿಮಿಷಗಳ ಪಯಣ. ನೀಲ ನೀರಿನಲ್ಲಿ ದೋಣಿಪಯಣ ಬಲು ಆಪ್ಯಾಯಮಾನ.
ಕಾಂಡ್ಲಾ ಅರಣ್ಯದಂಚಿನಲ್ಲಿ ನೀರಲ್ಲಿ ಬೇರಿಳಿಬಿಟ್ಟು ಬೆಳೆದ ಕಾಂಡ್ಲಾ ಮರಗಳ ಬಳಿ ದೋಣಿ ಸಾಗಿತು.
ಹೀಗೆ ಸಾಗಿ ಎರಡು ಬದಿ ಕಾಂಡ್ಲಾ ಮರಗಳ ಮಧ್ಯೆ ನೀರಿನಲ್ಲಿ ದೋಣಿ ಸಾಗಿದಾಗ ಅದರ ಸೌಂದರ್ಯ ನೋಡಿದಷ್ಟೂ
ತಣಿಯದು ಮನ. ಹೀಗೆ ಸಾಗಿ ಒಂದು ಕಡೆ ದೋಣಿ ನಿಂತಿತು. ಅಲ್ಲಿ ಇಳಿದೆವು.
ನಮ್ಮ ದೋಣಿಯಲ್ಲೇ ಇದ್ದ ರೋಹಿತ್ (ಪ್ರತೀ ದೋಣಿಯಲ್ಲೂ ದೋಣಿ ನಡೆಸುವವ ಮತ್ತು ಒಬ್ಬ ಗೈಡ್ ಇರುತ್ತಾರೆ) ನಮಗೆ ಮಾರ್ಗದರ್ಶನ ನೀಡಿದರು. ಅರ್ಧ ಗಂಟೆ ಊರೊಳಗೆ ಗದ್ದೆ ಬದುವಿನಲ್ಲಿ ನಡೆದು ಸುಮಾರು ಒಂದೂವರೆ ಕಿಮೀ ಸಾಗಿ ಸುಣ್ಣದಕಲ್ಲಿನ ಗುಹೆಗೆ ಹೋದೆವು.
ನಮ್ಮ ದೋಣಿಯಲ್ಲೇ ಇದ್ದ ರೋಹಿತ್ (ಪ್ರತೀ ದೋಣಿಯಲ್ಲೂ ದೋಣಿ ನಡೆಸುವವ ಮತ್ತು ಒಬ್ಬ ಗೈಡ್ ಇರುತ್ತಾರೆ) ನಮಗೆ ಮಾರ್ಗದರ್ಶನ ನೀಡಿದರು. ಅರ್ಧ ಗಂಟೆ ಊರೊಳಗೆ ಗದ್ದೆ ಬದುವಿನಲ್ಲಿ ನಡೆದು ಸುಮಾರು ಒಂದೂವರೆ ಕಿಮೀ ಸಾಗಿ ಸುಣ್ಣದಕಲ್ಲಿನ ಗುಹೆಗೆ ಹೋದೆವು.
ಖನಿಜ ಕ್ಯಾಲ್ಸೈಟಿನಿಂದ ಆದ ನೈಸರ್ಗಿಕ ರಚನೆಗಳು ಬಹಳ ಚೆನ್ನಾಗಿದ್ದುವು. ಒಳಗೆ ಕತ್ತಲು. ಟಾರ್ಚ್ ಬೆಳಕಿನಲ್ಲಿ ನಾವು ಸಾಗಿದೆವು. ರೋಹಿತ್ ವಿವರಣೆ ಕೇಳುತ್ತ, ನಿಸರ್ಗದ ಸುಂದರ ರಚನೆಗಳನ್ನು ನೋಡುತ್ತ ನಡೆದೆವು. ಗುಹೆಯ ಮೇಲ್ಭಾಗ ಒಂದೆಡೆ ಬಿರುಕು ಬಿಟ್ಟಿದೆ. ಅದು ಸುನಾಮಿಯಿಂದಾದ ಹಾನಿಯಂತೆ. ಬಿರುಕುಬಿಟ್ಟ ಸ್ಥಳದಲ್ಲಿ ಬೆಳಕು ಒಳನುಗ್ಗುತ್ತದೆ, ಕೆಲವೆಡೆ ಮೇಲಿನ ಜಮೀನಿನಲ್ಲಿರುವ ಮರಗಳ ಬೇರು ಕೆಳಗೆ ಹಾವಿನಂತೆ ಇಳಿದದ್ದು ಕಂಡಿತು. ಗುಹೆ ನೋಡಿ ವಾಪಾಸಾದೆವು.
ರೋಹಿತ್ ಡಿಗ್ರಿ ಮುಗಿಸಿ ಈ ಕೆಲಸ ಹಿಡಿದದ್ದಂತೆ. ನೇವಿ ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿರುವನಂತೆ. ದಿನಗೂಲಿ ರೂ. ೫೦೦ ಅದೂ ದಿನಕ್ಕೆ ೧೦ ದೋಣಿ ಸವಾರಿ ಲಭಿಸಿದರೆ ಮಾತ್ರವಂತೆ. ಪ್ರವಾಸಿಗರು ಬೇಗ ಬೇಗ ನಡೆದು ಗುಹೆ ನೋಡಿ ಹಿಂದಿರುಗಿದರೆ ಅವರಿಗೆ ಹೆಚ್ಚು ದೋಣಿ ಸವಾರಿ ಲಭಿಸಲು ಸಾಧ್ಯ.
ದೋಣಿ ಹತ್ತಿ ಮಾಯಾಬಂದರಿಗೆ
ಬಂದೆವು. ಮಾಯಾಬಂದರಿನ ಒಂದು ಹೊಟೇಲಿನಲ್ಲಿ ನಮಗೆ ಊಟ. ಅನ್ನ ಸಾರು, ಸಾಂಬಾರು, ಪಲ್ಯ, ಹಪ್ಪಳ. ಸಾರು
ರುಚಿಕಟ್ಟಾಗಿತ್ತು. ಊಟ ಮುಗಿಸಿ ಲಾಂಚ್ ಕಾದೆವು. ಸಮುದ್ರದ ಮೇಲೆ ಕಟ್ಟಿರುವ ತಂಗುದಾಣ ಬಹಳ ಚೆನ್ನಾಗಿದೆ. ೨.೩೦ ಗಂಟೆಗೆ ಲಾಂಚ್ ಹತ್ತಿ ಬಾರಾಟಂಗಿಗೆ ಹೊರಟೆವು.
ಮರಳಿ ಪೋರ್ಟ್ ಬ್ಲೇರಿಗೆ ಪಯಣ
ಮರಳಿ ಪೋರ್ಟ್ ಬ್ಲೇರಿಗೆ ಪಯಣ
ಬಾರಾಟಂಗಿನಿಂದ
೩ ಗಂಟೆಗೆ ನಮ್ಮ ವ್ಯಾನ್ ಹತ್ತಿದೆವು. ಅಂತ್ಯಾಕ್ಷರಿ ಬಲು ಜೋರಾಗಿ ನಡೆಯಿತು. ಸಂಜೆ ೬ ಗಂಟೆಗೆ ಹೊಟೇಲ್
ಕೋಣೆ ತಲಪಿದೆವು.
ಸಾಯಿಬಾಬಾ ಮಂದಿರ
ಸಂಜೆ ನಾವು ೫ ಮಂದಿ ಹೊಟೇಲ್ ಬೀದಿಯಲ್ಲೆ ಇದ್ದ ಸಾಯಿಬಾಬಾ ಮಂದಿರಕ್ಕೆ ಹೋದೆವು. ಶಿವಲಿಂಗ, ದುರ್ಗೆ ಗಣಪತಿ ವಿಗ್ರಹವಿದೆ. ಅಲ್ಲಿ ಶೋಭಾ ಹಾಗೂ ಗೋಪಕ್ಕ ದೇವರನಾಮ ಹಾಡಿದರು. ಅರ್ಧ ಗಂಟೆ ಕೂತು ಮರಳಿದೆವು.
ರಾತ್ರೆ ಊಟ ೮ ಗಂಟೆಗೆ. ಅನ್ನ ದಾಲ್, ಪಲ್ಯ, ಚಪಾತಿ ರಾಜ್ಮಾ ಕೂಟು, ಸಿಹಿಸಜ್ಜಿಗೆ. ಸಜ್ಜಿಗೆ ಬಡಿಸುವವನು ಡಯಾಬಿಟಿಸ್ ಇದೆಯೇ? ಎಂದು ಕೇಳಿಯೇ ತಟ್ಟೆಗೆ ಸಿಹಿ ಹಾಕುತ್ತಲಿದ್ದ! ಎಷ್ಟು ಮುತುವರ್ಜಿ ಅವನಿಗೆ ಎಂದು ಶಹಭಾಸ್ ಹೇಳಿದೆ! ಮಧುಮೇಹ ಇದ್ದವರೂ ಈ ಸಿಹಿ ತಿನ್ನಬಹುದು. ಸಕ್ಕರೆ ತೋರಿಸಿದ್ದರಷ್ಟೆ!.
ಮುಂದುವರಿಯುವುದು
ರಾತ್ರೆ ಊಟ ೮ ಗಂಟೆಗೆ. ಅನ್ನ ದಾಲ್, ಪಲ್ಯ, ಚಪಾತಿ ರಾಜ್ಮಾ ಕೂಟು, ಸಿಹಿಸಜ್ಜಿಗೆ. ಸಜ್ಜಿಗೆ ಬಡಿಸುವವನು ಡಯಾಬಿಟಿಸ್ ಇದೆಯೇ? ಎಂದು ಕೇಳಿಯೇ ತಟ್ಟೆಗೆ ಸಿಹಿ ಹಾಕುತ್ತಲಿದ್ದ! ಎಷ್ಟು ಮುತುವರ್ಜಿ ಅವನಿಗೆ ಎಂದು ಶಹಭಾಸ್ ಹೇಳಿದೆ! ಮಧುಮೇಹ ಇದ್ದವರೂ ಈ ಸಿಹಿ ತಿನ್ನಬಹುದು. ಸಕ್ಕರೆ ತೋರಿಸಿದ್ದರಷ್ಟೆ!.
ಮುಂದುವರಿಯುವುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ