ಸುಭಾಷ್
ಚಂದ್ರ ಬೋಸ್ ದ್ವೀಪ (ರಾಸ್ ದ್ವೀಪ ROSS ISLAND)
ತಾರೀಕು ೨೯-೨-೨೦೨೦ರಂದು
ಬೆಳಗ್ಗೆ ಸೆಟ್ ದೋಸೆ, ಅವಲಕ್ಕಿ ತಿಂದು ೮.೩೦ ಗಂಟೆಗೆ ಹೊರಟು ಮರಿನಾ ಪಾರ್ಕ್ ಬಳಿ ಹೋದೆವು. ಅಲ್ಲಿ
ನಮಗೆ ಸ್ಕೂಬಾ ಡೈವಿಂಗ್ ಬಗ್ಗೆ ಮಾಹಿತಿ ಕೊಟ್ಟರು. ಹಾಗೂ ಸ್ಕೂಬಾ ಮಾಡುವವರಿಂದ ಹಣ (ರೂ.೩೫೦೦) ಪಡೆದು
ಹೆಸರು ಬರೆಸಿಕೊಂಡರು. ವಯಸ್ಸು ೬೦ ದಾಟಿದವರಿಗೆ ಸ್ಕೂಬಾ ಡೈವಿಂಗ್ ಮಾಡಲು ಅವಕಾಶವಿಲ್ಲ ಎಂದಾಗ ಸುಮಾರು
ಜನಕ್ಕೆ ನಿರಾಶೆಯಾಯಿತು.
ನಾವು ಸರೋಜ ಹೆಸರಿನ ದೋಣಿಯಲ್ಲಿ ಸುಭಾಷ್ ಚಂದ್ರ ಬೋಸ್ ದ್ವೀಪಕ್ಕೆ
ಪಯಣಿಸಿದೆವು. ೨೦೧೮ರಲ್ಲಿ ಪ್ರಧಾನಮಂತ್ರಿ ಮೋದಿಯವರು ರಾಸ್ ದ್ವೀಪಕ್ಕೆ ಸುಭಾಷ್ ಚಂದ್ರ ಬೋಸ್ ದ್ವೀಪವೆಂದು
ಮರುನಾಮಕರಣ ಮಾಡಿದರು. ಹೆಸರು ಉದ್ದವಿದ್ದರೂ ಈ ಹೆಸರು ಹೇಳಲು ಭಾರತೀಯರಿಗೆ ಹೆಮ್ಮೆಯೆನಿಸುತ್ತದೆ.
ಕೇವಲ ೧ ಗಂಟೆ
ಸಮಯ ಮಾತ್ರ ದ್ವೀಪ ನೋಡಲು ಎಂದು ದೋಣಿ ಇಳಿಯುವಾಗಲೆ ಹೇಳಿದ್ದರು. ಹಾಗಾಗಿ ಬೇಗ ಬೇಗ ನಡೆದೆವು. ಈ
ದ್ವೀಪದಲ್ಲಿ ಜನವಸತಿ ಇಲ್ಲ. ಹತ್ತಾರು ತೆಂಗಿನಮರಗಳು
ಇವೆ. ಬ್ರಿಟಿಷರ ಕಾಲದ ಕಛೇರಿಗಳು, ಬಜಾರ್, ಬೇಕರಿ,
ಚರ್ಚ್, ಪ್ರಿಂಟಿಂಗ್ ಪ್ರೆಸ್, ಆಸ್ಪತ್ರೆ, ಟೆನಿಸ್
ಕೋರ್ಟ್, ವಾಟರ್ ಟ್ರೀಟ್ಮೆಂಟ್ ಪ್ಲಾಂಟ್, ಈಜುಕೊಳ, ಉದ್ಯಾನವನ, ಆಯುಕ್ತರ ನಿವಾಸ, ಸ್ಮಶಾನ ಇತ್ಯಾದಿ
ಕಟ್ಟಡಗಳ ಅವಶೇಷಗಳು ಶಿಥಿಲಾವಸ್ಥೆಯಲ್ಲಿವೆ. ಕಟ್ಟಡಗಳಿಗೆ ಮರದ ಬೇರು ಬೆಸೆದುಕೊಂಡಿವೆ. ಈಗ ಆ ಕಟ್ಟಡಗಳ
ಅವಶೇಷಗಳು ಮೂಕಸಾಕ್ಷಿಯಾಗಿ ಬ್ರಿಟೀಷರ ಆಡಳಿತದ ಕಥೆ ಹೇಳುತ್ತವೆ. ಈಗ ನಮ್ಮದೇ ಸಾಮ್ರಾಜ್ಯ ಎಂದು ಮರಗಳು
ಸೊಂಪಾಗಿ ಬೆಳೆದು ನಿಂತಿವೆ. ಬಿರು ನಡಿಗೆಯಲ್ಲಿ ಎಲ್ಲ ನೋಡಿ ಹಿಂತಿರುಗಿ ಜಹಜು ಹತ್ತಲು ದೌಡಾಯಿಸಿದೆವು.
ಸವಿಸ್ತಾರವಾಗಿ ನೋಡಲು ಒಂದೂ ಕಾಲು ಗಂಟೆ ಏನೇನೂ ಸಾಲದು ಎನಿಸಿತು. ೧೦.೧೫ರಿಂದ ೧೧.೩೦ ವರೆಗೆ ಅಲ್ಲಿ
ಸುತ್ತಿದೆವು.
ನಾರ್ಥ್ ಬೇ ದ್ವೀಪ
ದೋಣಿ ಹತ್ತುವಾಗ
ರಕ್ಷಣಾ ನಿಲುವಂಗಿ ಧರಿಸಿಯೇ ಹತ್ತಬೆಕು. ಹತ್ತಿದ ಮೇಲೆ ಬಿಚ್ಚಿ ಇಡುವಂತಿಲ್ಲ. ದುರ್ಬೀನು ಹಾಕಿ ನೋಡುತ್ತಿರುತ್ತಾರಂತೆ.
ರಕ್ಷಣಾ ಕವಚ ಹಾಕದೆ ಇದ್ದರೆ ದೋಣಿ ಮಾಲಿಕರಿಗೆ ದಂಡ ವಿಧಿಸುತ್ತಾರಂತೆ. ದಯವಿಟ್ಟು ಕಳಚಬೇಡಿ ಎಂದು ಭಿನ್ನವಿಸಿಕೊಂಡರು. ರಕ್ಷಣಾ ಕವಚದ ಬೆವರಿನ ದುರ್ವಾಸನೆ ಮೂಸಿಕೊಂಡೇ ದೋಣಿಯಲ್ಲಿ
ಅಷ್ಟು ಹೊತ್ತು ಕೂರುವ ಶಿಕ್ಷೆ ನಮಗೆ! ದೋಣಿ ಸಾಗಿತು. ಮುಂದೆ ಒಂದೆಡೆ ನಿಂತಿತು ದೋಣಿ. ಸ್ಕೂಬಾ ಡೈವಿಂಗ್
ಮಾಡದವರು ಒಂದಷ್ಟು ಮಂದಿ ಗಾಜಿನ ದೋಣಿಗೆ ಹತ್ತಿದರು. ದೋಣಿಯಲ್ಲೇ ಕೂತು ನೀರಿನಾಳದಲ್ಲಿರುವ ಹವಳ, ಮೀನು ಇತ್ಯಾದಿ
ನೋಡಲು ಒಬ್ಬರಿಂದ ರೂ. ೧೭೦೦ ಪಡೆದುಕೊಂಡರು. ಸ್ಕೂಬಾ ಡೈವಿಂಗ್ ಮಾಡುವವರು ನಾವು ೧೦-೧೨ ಮಂದಿ ಇನ್ನೊಂದು
ದೋಣಿ ಹತ್ತಿ ನಾರ್ಥ್ ಬೇ ದ್ವೀಪಕ್ಕೆ ಹೋದೆವು.
ಈ ದ್ವೀಪದಲ್ಲಿರುವ
ಲೈಟ್ ಹೌಸಿನ ಚಿತ್ರವೇ ೨೦ ರೂ. ನೋಟಿನಲ್ಲಿ ಮುದ್ರಿತವಾಗಿರುವುದು.
ಸ್ಕೂಬಾ ಡೈವಿಂಗಿನ
ರೋಚಕ ಅನುಭವ
ಸ್ಕೂಬಾ ಡೈವಿಂಗ್ (ಅಂತರ್ಜಲ ಶ್ವಾಸೋಪಕರಣ ಬಳಸಿ ನೀರೊಳಗೆ ಈಜುವುದು)
ಮಾಡಲು ನನಗೆ ಕೂಡಿತ? ಎಂಬ ಅಧೈರ್ಯ ಒಮ್ಮೆ ಕಾಡಿತ್ತು. ಒಂದು ಕೈ ನೋಡಿಯೇ ಬಿಡುವ ಎಂಬ ಭಂಡ ಧೈರ್ಯವೂ
ಮನದಲ್ಲಿತ್ತು. ಸಾಧ್ಯವೋ ಇಲ್ಲವೋ ಎಂದು ನಮ್ಮ ತರಬೇತಿಯಲ್ಲೇ ಗೊತ್ತಾಗುತ್ತದೆ. ೫೦೦ ರೂ. ಹಿಡಿದುಕೊಂಡು
ಬಾಕಿ ಹಣ ವಾಪಾಸು ಕೊಡುತ್ತಾರೆ. ಎಂದು ಹೇಳಿದ್ದರು. ಹಾಗಾಗಿ ಮುನ್ನುಗ್ಗಿದೆ. ಮೊದಲಿಗೆ ಒಂದು ಅರ್ಜಿ
ನಮೂನೆ ತುಂಬಿಸಬೇಕು. ನಮ್ಮ ವಿವರ, ಯಾವುದೇ ಖಾಯಿಲೆಗಳಿಲ್ಲ ಎಂದು ದೃಢೀಕರಿಸಿ ಸಹಿ ಹಾಕಬೇಕು. ಆಮೇಲೆ
ನಾವು ಛದ್ಮವೇಷ (ಈಜುಡುಗೆ, ಕಾಲಿಗೆ ಬೂಟು) ಹಾಕಿಕೊಳ್ಳಬೇಕು.
ಅವನ್ನೆಲ್ಲ ಧರಿಸಿ ಬಂದಮೇಲೆ ನೀರಿಗಿಳಿಯಬೇಕು. ಅಲ್ಲಿ ನಮ್ಮ ಸೊಂಟಕ್ಕೆ ೫ಕಿಲೋ ಭಾರದ ಕಲ್ಲುಗಳಿರುವ
ಬೆಲ್ಟ್ ಕಟ್ಟುತ್ತಾರೆ. ನೀರೊಳಗೆ ಕಾಲಿಟ್ಟು ಮುಂದೆ ಹೋಗುವಾಗ ಸಮತೋಲ ತಪ್ಪುತ್ತದೆ. ಸಾವರಿಸಿಕೊಂಡು
ಮುಂದೆ ಸಾಗಿದಾಗ ನುರಿತ ಸ್ಕೂಬಾ ತರಬೇತುದಾರರು ನಾಲ್ಕೈದು ಮಂದಿ ನೀರಲ್ಲಿ ಇರುತ್ತಾರೆ. ನಮಗೆ ನಿಗದಿಯಾಗಿದ್ದ
ತರಬೇತುದಾರರ ಮುಂದೆ ನಾವು ಹೋದಾಗ ನಮಗೆ ಹೇಗೆ ಸ್ಕೂಬಾ ಡೈವಿಂಗ್ ಮಾಡುವುದೆಂದು ತರಬೇತಿ ಕೊಡುತ್ತಾರೆ.
ಆಮ್ಲಜನಕ ಸಿಲಿಂಡರ್ ನಮ್ಮ ಬೆನ್ನಿಗೆ ಕಟ್ಟುತ್ತಾರೆ. ಉಸಿರಾಡಲು ಒಂದು ಪೈಪ್ ಕೊಡುತ್ತಾರೆ. ಅದನ್ನು
ಬಾಯಿಗೆ ಸಿಕ್ಕಿಸಿದ ಮೇಲೆ ನಮ್ಮನ್ನು ನಿಧಾನವಾಗಿ ನೀರೊಳಗೆ ಮುಳುಗಿಸುತ್ತಾರೆ. ನಾಲ್ಕೈದು ಸಲ ನೀರೊಳಗೆ
ಮುಳುಗಿಸಿದಾಗ ನಮಗೆ ಏನೂ ಆಗದೆ ಇದ್ದರೆ ಮುಂದೆ ಆಳವಾದ ನೀರೊಳಗೆ ಕರೆದೊಯ್ಯುತ್ತಾರೆ. ನಾವು ಸ್ಕೂಬಾ
ಡೈವಿಂಗ್ ಪರೀಕ್ಷೆಯಲ್ಲಿ ಪಾಸಾದಂತೆ ಲೆಕ್ಕ!
ನೀರೊಳಗೆ ಮೀನಿನಂತೆ ನಾವೂ ಅದರ ಜೊತೆ ಈಜಾಡುವುದು ಒಂದು ರೋಚಕ ಅನುಭವ.
ಒಳಗೆ ಬಣ್ಣಬಣ್ಣದ ಸಸ್ಯಗಳು, ವರ್ಣರಂಜಿತ ಮೀನುಗಳು, ಹವಳಗಳು ನೋಡಿದಷ್ಟೂ ಮನ ತಣಿಯದು. ನೀರೊಳಗೆ ನಮ್ಮ
ಪಟ, ವೀಡಿಯೋ ಚಿತ್ರೀಕರಿಸಲು ಒಬ್ಬರು ಕ್ಯಾಮರಾ ಸಮೇತ ಸಜ್ಜಾಗಿರುತ್ತಾರೆ. ನೀರೊಳಗಿನ ಅದ್ಭುತ ಪ್ರಪಂಚವನ್ನು
ನೋಡುತ್ತ ಆನಂದಿಸುತ್ತಿರುವಾಗಲೇ ಒಮ್ಮೆಲೆ ನಮ್ಮನ್ನು ನೀರಮೇಲೆ ತರುತ್ತಾರೆ. ಛೇ! ಇಷ್ಟು ಬೇಗ ಮುಗಿಯಿತೆ
ನಮ್ಮ ಸಮಯ ಎಂಬ ಉದ್ಗಾರ ಹೊರಡುತ್ತದೆ.
ನೀರಿನಿಂದ ಹೊರಬಂದು
ಮೈಗಂಟಿದ ಈಜುಡುಗೆಯನ್ನು ಹರಸಾಹಸದಿಂದ ಬಿಚ್ಚಿ ಹೊರಬರಲು ಸ್ಕೂಬಾ ಡೈವಿಂಗಿಗಿಂತ ಹೆಚ್ಚು ಸಮಯ ಹಿಡಿಯಿತು! ನೀರೊಳಗೆ ನಮ್ಮ ವೀಡಿಯೋ ಚಿತ್ರೀಕರಿಸಿದ್ದನ್ನು ಆಮೇಲೆ ಅವರು
ತೋರಿಸಿದಾಗ, ಚಂದದ ಮೀನುಗಳಿರುವಲ್ಲಿ, ಸಸ್ಯಗಳಿರುವಲ್ಲಿ ಪಟ ತೆಗೆಯದೆ ಇದ್ದದ್ದು ನಿರಾಶೆ ಎನಿಸಿತು.
ಒಟ್ಟಿನಲ್ಲಿ ಸ್ಕೂಬಾ ಡೈವಿಂಗ್ ಒಂದು ವಿನೂತನ ಅನುಭವ. ಅದು ತೃಪ್ತಿ ಕೊಟ್ಟಿತು. ವೇದಾ ಅವರಿಗೆ ಈ
ಸಮಯ ತೃಪ್ತಿಯಾಗದೆ ಹೆಚ್ಚುವರಿ ದುಡ್ಡು ಕಟ್ಟುವ ಆಶ್ವಾಸನೆ
ಕೊಟ್ಟು ಮತ್ತೂ ೧೫ ನಿಮಿಷ ಹೆಚ್ಚು ಹೊತ್ತು ನೀರೊಳಗೆ ಈಜಿದರು. ನಮ್ಮಲ್ಲಿ ಕೆಲವರಿಗೆ ಸ್ಕೂಬಾ ಸಾಧ್ಯವಾಗಲಿಲ್ಲ.
ಕಿವಿನೋವು, ತಲೆನೋವು ಬಾಧಿಸಿತ್ತು.
ಸನಿಹದಲ್ಲೇ ವಿಶ್ರಾಂತಿಗಾಗಿ ಚಪ್ಪರ ಹಾಕಿ ಕೂರಲು ಅಡಿಕೆ ಕಂಬ ಹಾಕಿದ್ದರು. ಅಲ್ಲಿ ಕುಳಿತು ಕಟ್ಟಿ ತಂದಿದ್ದ ಊಟ ಬಿಚ್ಚಿದಾಗ
ಗಂಟೆ ೨.೩೦ ಆಗಿತ್ತು. ಫ್ರೈಡ್ ರೈಸ್ ಹಳಸಿ ನಾರುತ್ತಿತ್ತು. ಚಪಾತಿ ಪಲ್ಯ ಚೆನ್ನಾಗಿತ್ತು. ತಿಂದೆವು.
ಗಾಜಿನ ದೋಣಿಯಲ್ಲಿ
ತೆರಳಿದ್ದವರೂ ಬಂದು ತಲಪಿದರು. ಗೋಪಕ್ಕ ೬೦ ದಾಟಿದವರು. ಅವರಿಗೆ ಅವಕಾಶ ಕೊಟ್ಟಿರಲಿಲ್ಲ. ಪ್ರಭಾಮಣಿಯವರು
ನಮ್ಮ ತರಬೇತುದಾರರಲ್ಲಿ ವಿನಂತಿಸಿಕೊಂಡು ಅವರಿಗೆ ಅವಕಾಶ ಕೊಡಬೇಕು ಎಂದು ಒಪ್ಪಿಸಿ, ಗೋಪಕ್ಕನನ್ನು
ನೀರಿಗೆ ಇಳಿಸಿಯೇಬಿಟ್ಟರು. ಗೋಪಕ್ಕ ಸ್ಕೂಬಾ ಡೈವಿಂಗ್
ಯಶಸ್ವಿಯಾಗಿ ಮಾಡಿ ಮೇಲೆ ಬಂದರು. ಅವರಿಗೆ ಬಹಳ ಖುಷಿಯಾಯಿತು.
ಸಂಜೆ ಮೇಲೆ ಸ್ಕೂಬಾ
ಡೈವಿಂಗ್ ಇಲ್ಲ. ಮೂರು ಗಂಟೆಗೆ ಕೈದುಗೊಳಿಸುತ್ತಾರಂತೆ.
ಅಲ್ಲಿಂದ ನಾವೆಲ್ಲ
೪ ಗಂಟೆಗೆ ದೋಣಿ ಹತ್ತಲು ಹೊರಟಾಗ ಕರು ಹಾಲು ಕುಡಿಯುತ್ತಿರುವ ಸುಂದರ ದೃಶ್ಯ ಕಂಡಿತು.
ಹೊರಟು ಮುಂದೆ ಒಂದು ಕಡೆ ನೀರಿನಲ್ಲೇ ಲಂಗರು ಹಾಕಿದ್ದ ಸರೋಜ ಜಹುಜು ಹತ್ತಿದೆವು.
ಹಡಗಿನಲ್ಲಿ ನಾಗೇಶ್ ಎಂಬವರು ಅಂಡಮಾನಿನ ಇತಿಹಾಸವನ್ನು ಹಿಂದಿಯಲ್ಲಿ ನಿರರ್ಗಳವಾಗಿ ಹೇಳಿದರು. ರೂ.
೧೨೦ಕ್ಕೆ ಅಂಡಮಾನಿನ ಇತಿಹಾಸ ವರ್ಣಿಸಿರುವ ಸಿಡಿಯನ್ನು ಮಾರಾಟಕ್ಕೆ ಇಟ್ಟಿದ್ದರು. ಕೆಲವರು ಕೊಂಡರು.
ಅಂಡಮಾನಿನಲ್ಲಿ ೫೨೭
ದ್ವೀಪಗಳಿವೆಯಂತೆ. ೧೯೪೩ರಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸರು ಭಾರತದ ರಾಷ್ಟ್ರ ಧ್ವಜ ಮೇಲೇರಿಸಿದರಂತೆ.
ಈಗಲೂ ಮರೀನಾ ಬೀಚ್ ಬಳಿ ರಾಷ್ಟ್ರಧ್ವಜ ಹಾರಾಡುವುದನ್ನು ಕಾಣುತ್ತೇವೆ. ಬ್ರಿಟಿಷರು ತೊಲಗಿ ಜಪಾನಿನವರ
ಆಕ್ರಮಣ, ಕೊನೆಗೆ ಅಂಡಮಾನ್ ಭಾರತದ ವಶಕ್ಕೆ ಬಂತು.
ಅಂಡಮಾನಿನಲ್ಲಿ ಯಾರೂ ಭಿಕ್ಷುಕರಿಲ್ಲವಂತೆ. ಭಿಕ್ಷೆ ಹಾಕುವುದೂ ಅಲ್ಲಿ ಅಪರಾಧವಂತೆ. ಭಿಕ್ಷೆ
ಹಾಕಿದವರನ್ನು ಜೈಲಿಗೆ ಕಳುಹಿಸುವರಂತೆ. ಇವಿಷ್ಟು ನನಗೆ ಅರ್ಥವಾದಂತೆ ನಾಗೇಶ ಅವರ ವಿವರಣೆಯ ಸಾರಾಂಶ.
ಮರೀನಾದಲ್ಲಿ ದೋಣಿ ಇಳಿದು ನಾವು ಸಂಜೆ ಆರು
ಗಂಟೆಗೆ ಹೊಟೇಲ್ ಕೋಣೆ ತಲಪಿದೆವು.
ಕೋಣೆಯಲ್ಲಿ
ಹರಟುತ್ತ ಕೂತೆವು. ನಾನೂ ಹಾಗೂ ವೇದಾ ಸ್ಕೂಬಾ ಅನುಭವವನ್ನು ಸ್ಕೂಬಾ ಕೈಗೊಳ್ಳದ ಮೀನಾಕ್ಷಿಯವರಿಗೆ
ಹೇಳುವ ನೆಪದಲ್ಲಿ ಮೆಲುಕು ಹಾಕಿಕೊಂಡೆವು. ನೀಲ್ ದ್ವೀಪ ಬಹಳ ಚೆನ್ನಾಗಿದೆಯಂತೆ. ಅಲ್ಲಿಗೇಕೆ ನಮ್ಮನ್ನು
ಕರೆದೊಯ್ಯುವುದಿಲ್ಲ? ಎಂದೇ ಮೀನಾಕ್ಷಿಯವರ ಯಕ್ಷ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಲು ವಿಜಯೇಂದ್ರ,
ಅಥವಾ ದರ್ಶನ್ ಅವರೇ ಸರಿಯಾದ ವ್ಯಕ್ತಿ ಎಂದು ನಾವು ಹೇಳಿ ನಾವು ಪಾರಾದೆವು. ನಿದ್ದೆಯಲ್ಲಿ ನಡೆಯುವವರ
ಬಗ್ಗೆ ಮಾತು ಬಂತು. ಎಲ್ಲಾದರೂ ನೀವು ನಿದ್ದೆಯಲ್ಲಿ ನಡೆದು ನೀಲ್ ದ್ವೀಪಕ್ಕೆ ಹೋಗಬೇಡಿ ಮತ್ತೆ ಎಂದು
ಮೀನಾಕ್ಷಿಯವರ ಕಾಲೆಳೆಯುತ್ತ ತಮಾಷೆಯಾಗಿ ಮಾತಾಡುತ್ತ ಕೂತಿರುವಾಗ ಊಟಕ್ಕೆ ಕರೆ ಬಂತು. ಅನ್ನ ದಾಲ್,
ಚಪಾತಿ , ಪಲ್ಯ, ಸಾಂಬಾರು, ಸಿಹಿ ಸಜ್ಜಿಗೆ.
ಸ್ವರಾಜ್ ದ್ವೀಪ
(ಹ್ಯಾವ್ಲಾಕ್ ದ್ವೀಪ)
ತಾರೀಕು ೧.೩.೨೦೨೦ರಂದು
ಬೆಳಗ್ಗೆ ೪ ಗಂಟೆಗೆದ್ದು ೪.೪೫ಕ್ಕೆ ಹೊರಟು ಜೆಟ್ಟಿಗೆ ಹೋದೆವು. ನಾವು ಬೇಗ ಹೊರಟರೂ ನಮ್ಮ ಪ್ರವಾಸೀ
ಸಚಿವರಾದ ದರ್ಶನ್ ಬರಲೇ ಇಲ್ಲ. ಹಾಗಾಗಿ ಹೊರಗೆ ಕಾಯುತ್ತ ಕುಳಿತೆವು. ಅಂತೂ ೫.೩೦ಗೆ ನಮ್ಮ ೭೧ ಜನರಿಗೆ
ತಿಂಡಿ ಪೊಟ್ಟಣ ಸಮೇತ ಹಾಜರಾದರು. ಒಳಗೆ ಹೋಗಲು ನಮ್ಮ ಹೆಸರಿನ ಲಿಸ್ಟ್ ದರ್ಶನ್ ಅವರ ಬಳಿಯೇ ಇತ್ತು.
ನಮ್ಮ ಆಧಾರ ಕಾರ್ಡ್ ತಪಾಸಣೆಯಾಗಿ ನಾವು ಒಳ ಹೋದೆವು. ನಮ್ಮ ಬ್ಯಾಗ್ ತಪಾಸಣೆಯಾಗಿ ನಾವು ೬.೩೦ಗೆ ಜೆಟ್ಟಿ
ಹತ್ತಿದೆವು. ಜೆಟ್ಟಿ ಹೊರಡುವ ವೇಳೆಯಲ್ಲಿ ಒಬ್ಬರು ಬಂದು ಅನಾಹುತವಾದರೆ ಹೇಗೆ ಪಾರಾಗಬೇಕೆಂದು (ವಿಮಾನ
ಪ್ರಯಾಣದಲ್ಲಿ ವಿವರಿಸುವಂತೆಯೇ) ಹಾವಭಾವದಿಂದ ವಿವರಿಸಿದರು. ಜೆಟ್ಟಿ ಹೊರಡುವ ವೇಳೆಯಲ್ಲಿ ಮತ್ತು
ತಲಪುವ ಸಮಯದಲ್ಲಿ ಯಾರೂ ಡೆಕ್ಕಿನಲ್ಲಿ ನಿಲ್ಲಬಾರದು. ಬಾಕಿ ಸಮಯ ಎಲ್ಲಿ ಬೇಕಾದರೂ ಓಡಾಡಬಹುದು) ಜೆಟ್ಟಿಯಲ್ಲಿ
ಹವಾನಿಯಂತ್ರಿತ ಕೋಣೆಯೊಳಗೆ ಮೆತ್ತನೆ ಸೋಪಾ, ಟಿವಿ ಎಲ್ಲ ಇತ್ತು. ಅದರೊಳಗೆ ಕೂರಲು ಮನಸ್ಸೇ ಬರುವುದಿಲ್ಲ.
ಹೊರಗೆ ಬಂದು ಸಮುದ್ರ ನೋಡುತ್ತ ನಿಲ್ಲುವುದೇ ಪರಮ ಸುಖವೆನಿಸಿತ್ತು.
ನೀಲ ಕಡಲಿನಲ್ಲಿ
ಜೆಟ್ಟಿ ಚಲಿಸುತ್ತಲಿದ್ದಾಗ ಅಗಾದ ನೀರಿನಲ್ಲಿ ಬುಳಕ್ಕನೆದ್ದು ಒಂದು ಹಕ್ಕಿ ಚಲಿಸುವುದು ಕಂಡಿತು.
ಅರೆ ಹಕ್ಕಿ ನೀರಲ್ಲಿ ಮುಳುಗುತ್ತ? ಏನಿದು ಎಂದು ಪರಾಂಬರಿಸಿ ನೋಡಿದಾಗ ಇದು ಹಾರುವ ಮೀನು ಎಂದರಿವಾಯಿತು. ಹತ್ತಾರು ಹಾರುವ ಮೀನುಗಳು
ನೀರಿನಿಂದ ಮೇಲಕ್ಕೆ ಹಾರುವುದನ್ನು ದೂರ ಸಾಗಿ ಬುಳಕ್ಕನೆ ನೀರಿನಲ್ಲಿ ಮುಳುಗುವುದನ್ನು ಮನದಣಿಯೆ ನೋಡಿದೆವು.
ಕಣ್ಣು ದೃಷ್ಟಿಗೆ ನಿಲುಕದಷ್ಟು ದೂರ ಕಡಲ ನೀಲ ನೀರನ್ನು ನೋಡಿದಷ್ಟೂ ಸಾಕೆನಿಸುವುದಿಲ್ಲ. ಸೃಷ್ಟಿಯ
ಈ ಅದ್ಭುತ ದೃಶ್ಯ ವೈಭವವನ್ನು ವರ್ಣಿಸಲು ನನಗೆ ಪದಗಳ ಕೊರತೆ ಎದುರಾಯಿತು. ಅತ್ತ ಡೆಕ್ಕಿನಲ್ಲಿ ಅಬ್ಬರದ
ಸಂಗೀತಕ್ಕೆ ಜನ ಹುಚ್ಚೆದ್ದು ಕುಣಿಯುತ್ತಲಿದ್ದರು. ಒಮ್ಮೆ ಅತ್ತ ನಡೆದು ಕಣ್ಣು ಹಾಯಿಸಿ ವೀಡಿಯೋ ಮಾಡಿದೆ.
ಅವರೆಲ್ಲರ ಈ ಪರಿಯ ಉತ್ಸಾಹ ಕಂಡು ಹರುಷವೆನಿಸಿತು.
ಅದೇನೂ ಅಷ್ಟು ಸ್ವಾರಸ್ಯವೆನಿಸದೆ ಹಾರುವ ಮೀನು ಹಾಗೂ ಕಡಲಿನ
ನೀರೇ ನನಗೆ ಹೆಚ್ಚು ಆಕರ್ಷಣೀಯವೆನಿಸಿತು. ಒಂದು ಗಂಟೆಗೂ ಹೆಚ್ಚು ಕಾಲ ನಾವು ಕೆಲವರು ನಿಂತೇ ಸಮುದ್ರ
ಸೌಂದರ್ಯವನ್ನು ನೋಡಿದೆವು. ನಮ್ಮ ತಂಡದ ಮುಖ್ಯಸ್ಥರಾದ ವಿಜಯೇಂದ್ರರವರು ಹಾಗೂ ಇತರರು ಒಂದು ಗಂಟೆಗೂ
ಹೆಚ್ಚು ಹೊತ್ತು ಸೊಗಸಾಗಿ ಕುಣಿದು ಕುಪ್ಪಳಿಸಿ ಸುಸ್ತಾಗಿ ಷರಬತ್ತು ಕುಡಿಯುವುದು ಕಂಡಿತು!
ಜೆಟ್ಟಿಯಲ್ಲಿ ಸಾಗುವಾಗ ಸುಭಾಷ್ ಚಂದ್ರ ಬೋಸ್ ದ್ವೀಪ, ನಾರ್ಥ್
ಬೇ ದ್ವೀಪ ಎಲ್ಲ ದೂರದಿಂದ ಕಂಡಿತು. ಸುಮಾರು ೯ ಗಂಟೆಗೆ ನಾವು ಸ್ವರಾಜ್ ಯಾನೆ ಹ್ಯಾವ್ಲಾಕ್ ದ್ವೀಪ
ತಲಪಿದೆವು. ಜೆಟ್ಟಿ ಇಳಿದು ಹೊರಬಂದೆವು.
ರಾಧಾನಗರ ಬೀಚ್
ಸ್ವರಾಜ್ ದ್ವೀಪದಿಂದ ೧೨ ಕಿಮೀ ದೂರದ ರಾಧಾನಗರ ಬೀಚಿಗೆ ಬಸ್ಸಿನಲ್ಲಿ
ಹೋದೆವು. ೧೦ಗಂಟೆಯಿಂದ ೧೨.೩೦ ಗಂಟೆವರೆಗೆ ಸಮುದ್ರ ಸ್ನಾನ, ಆಟಕ್ಕೆ ಸಮಯ ಕೊಟ್ಟದ್ದು ಎಲ್ಲರಿಗೂ ಬಹಳ
ಖುಷಿ ನೀಡಿತು.
ನಾವು ೫ ಮಂದಿ
ಸಮುದ್ರಕ್ಕೆ ಇಳಿಯಲಿಲ್ಲ. ದಂಡೆಯಲ್ಲೇ ಸಾಗಿದೆವು. ಆಗ ಅಲ್ಲಿ ಎರಡು ದೇವಸ್ಥಾನ ಇರುವುದನ್ನು ಪತ್ತೆ
ಹಚ್ಚಿ ಅಲ್ಲಿಗೆ ಭೇಟಿ ಕೊಟ್ಟೆವು. ಶಿವನ ದೇವಾಲಯ, ಅನತಿದೂರದಲ್ಲೇ ರಾಧಾಕೃಷ್ಣ ಮಂದಿರ.
ಸಮುದ್ರದ ನೀರಿಗೆ
ಇಳಿದೆವು. ಚಪ್ಪಲಿ ಕೈಯಲ್ಲಿ ಹಿಡಿದು ಸಮುದ್ರ ನೀರಿನಲ್ಲಿ ೨ಕಿಮೀ ನಡೆದೆವು. ಚಂದದ ಕಲ್ಲು ಹೆಕ್ಕಿ
ಈ ಕಲ್ಲು ಎಷ್ಟು ಚೆನ್ನಾಗಿದೆ. ಕೊಂಡೋಗಲು ಸಾಧ್ಯವಿಲ್ಲವಲ್ಲ ಎಂದು ವಾಪಾಸು ಅಲ್ಲೇ ಹಾಕಿದೆವು. ಜೇಡ,
ಕೀಟ ನೆಲದಿಂದ ಮೇಲೆದ್ದು ಬಂದು ಮನುಜರ ಕಾಲ ಸಪ್ಪಳವಾದ ಕೂಡಲೇ ಒಳ ಹೋಗುವ ಚಂದವನ್ನು, ಕೀಟ ನೆಲದಲ್ಲಿ
ಚಿತ್ತಾರ ಬಿಡಿಸಿದ್ದನ್ನು ನೋಡಿದೆವು. ಚಿಪ್ಪು ಹೆಕ್ಕಿದೆವು.
ಶೋಭಾ, ಪ್ರಭಾ ಮೀನು ನೋಡಲೆಂದು ಸ್ವಲ್ಪ ಮುಂದಕ್ಕೆ ನೀರಿಗೆ ಹೋದರು. ಹೇ ಬನ್ನಿ ಇಲ್ಲಿ, ಮುಂದೆ ಹೋಗಬೇಡಿ.
ಮೀನು ತಿನ್ನದವರು ಮೀನನ್ನೇನು ನೋಡುವುದು? ಎಂದು ಗೌರಮ್ಮ ಹೇಳಿದಾಗ ಅವರ ಮಾತಿಗೆ ನಮಗೆ ನಗು ತಡೆಯಲಾಗಲಿಲ್ಲ.
ಸಮುದ್ರದಲ್ಲಿ ಒದ್ದೆಯಾಗುವುದಕ್ಕಿಂತ ಹೆಚ್ಚು ಖುಷಿ ನೀರಲ್ಲಿ ಉದ್ದಕ್ಕೂ ನಡೆಯುವುದು. ನೀರು ಬಹಳ
ಸ್ವಚ್ಛವಾಗಿತ್ತು.
ಬಿಸಿಲಲ್ಲಿ ಬೀಚಿನಲ್ಲಿ
ಓಡಾಡಿ ಬಳಲಿದಾಗ ಎಳನೀರು ಕುಡಿಯಲೆಂದು ಹೊರಬಂದೆವು. ಗೌರಮ್ಮ ನಮಗೆ ಎಳನೀರು ಕೊಡಿಸಿದರು. ದೇವಸ್ಥಾನದ ಬಳಿ ತೆಂಗಿನ ತೋಪಿನಲ್ಲಿ ನಾವು ಬರುತ್ತಿದ್ದಾಗ,
ತೆಂಗು ಬಿದ್ದದ್ದು ನೋಡಿ ಇದನ್ನು ಸುಲಿದು ಕಾಯಿ ತಿನ್ನಬೇಕು
ಎಂದು ಶೋಭಾ ಹೇಳಿದ್ದರು. ಅದೇ ನೆನಪಿನಲ್ಲಿ ಅವರು ಒಳಗೆ ಬಲಿತ ಕಾಯಿ ಇರುವಂಥ ಎಳನೀರು ಕೊಡಿ ಎಂದು
ದೊಡ್ಡ ಎಳನೀರನ್ನು ತೋರಿಸಿ ಕೆತ್ತಿಸಿಕೊಂಡರು. ಬೇಡ ಅದು, ಅದು ಎಳನೀರಲ್ಲ. ಬಲಿತ ಕಾಯಿ, ಕುಡಿಯಲು
ಚೆನ್ನಾಗಿರಲ್ಲ ಎಂದು ಗೌರಮ್ಮ ಹೇಳಿದರೂ ಶೋಭಾ ಕೇಳಲಿಲ್ಲ. ಅದನ್ನು ಕುಡಿದು ಶೋಭಾ ಮುಖ ಹುಳಿ ಮಾಡಿಕೊಂಡರು.
ನೀರು ಚೆನ್ನಾಗೇ ಇಲ್ಲ ಎಂದಾಗ, ನನ್ನ ಮಾತು ಕೇಳಲಿಲ್ಲ ನೀವು. ನಾವು ಮಂಡ್ಯದವರು, ಎಳನೀರು ತೋಟ ಇಟ್ಟುಕೊಂಡವರು
ಎಷ್ಟು ಎಳನೀರು ನೋಡಿ ಕೆತ್ತಿದ್ದೇವೋ ಲೆಕ್ಕವಿಲ್ಲ ಎಂದು ಗೌರಮ್ಮನೆಂದಾಗ ಎಳನೀರು ಕುಡಿಯುತ್ತಲೇ ಇದ್ದ
ಪ್ರಭಾಮಣಿಯವರ ನಗು ಸ್ಫೋಟಗೊಂಡು ನೀರೆಲ್ಲ ಹೊರಚೆಲ್ಲಿತು!
ಮತ್ತೆ ಶೋಭಾ ನೀರು ಇರುವ ಎಳನೀರು ಕುಡಿದು ಸಂತೃಪ್ತರಾದರು. ತೆಂಗಿನ ಕಾಯಿ ಎಲ್ಲವನ್ನು ಬಿಡಿಸಿಕೊಂಡು
ನಮಗೆಲ್ಲ ಹಂಚಿದರು.
ಹಾಗೆ ಬೀದಿಯಲ್ಲಿ
ಸುತ್ತುವಾಗ ಶಿವಮೊಗ್ಗ ತಂಡದ ೭೦ ವರ್ಷದ ಸಿದ್ದಪ್ಪನವರು ಸಿಕ್ಕಿದರು. (ಅವರು ಮಂಗಳೂರಿನಲ್ಲಿ ಆದಾಯ
ಇಲಾಖೆಯಲ್ಲಿ ಕೆಲಸದಲ್ಲಿದ್ದಾಗ ನಮ್ಮ ಭಾವನ ಅತ್ರಿ ಬುಕ್ ಸೆಂಟರ್ ಪುಸ್ತಕದ ಅಂಗಡಿಗೆ ಹೋಗುತ್ತಿದ್ದದ್ದು,
ನಮ್ಮ ಮಾವ ಜಿಟಿ. ನಾರಾಯಣರಾಯರನ್ನು ನೆನಪಿಸಿಕೊಂಡರು) ಇಲ್ಲಿರುವ ಹಣ್ಣನ್ನು ತಿನ್ನಬೇಕು. ಬಹಳ ಚೆನ್ನಾಗಿರುತ್ತೆ.
ಎಂದು ಹೇಳಿ, ನಾವು ಎಷ್ಟು ಬೇಡವೆಂದರೂ ಕೇಳದೆ ನಮಗೆ ಹಣ್ಣು ಕೊಡಿಸಿಯೇ ಬಿಟ್ಟರು. ೬-೭ ಬಗೆಯ ಹಣ್ಣುಗಳನ್ನು
(ದಾರೆಹುಳಿಯೂ ಇತ್ತು) ಹೆಚ್ಚಿ ಒಂದು ಹಾಳೆ ತಟ್ಟೆಗೆ ಹಾಕಿ ಕೊಡುತ್ತಾರೆ. ಒಂದು ತಟ್ಟೆಗೆ ರೂ.೧೦೦.
೨ ತಟ್ಟೆ ಹಣ್ಣು ಕೊಡಿಸಿದರು. ನಮಗೆ ಬಹಳ ಸಂಕೋಚವಾಯಿತು. ಆದರೂ ಅವರ ಪ್ರೀತಿಗೆ ಮನಸೋತು ಹಣ್ಣು ತಿಂದೆವು.
ರುಚಿಯಾಗಿತ್ತು. ಹಾಗೆ ಅಂಗಡಿ ಬೀದಿ ಸುತ್ತುತ್ತಿರುವಾಗ ಹಣ್ಣು ಅಡಿಕೆ ಮಾರಾಟಕ್ಕೆ ಇಟ್ಟಿರುವುದು
ಕಂಡಿತು. ಎಷ್ಟು ದರ ಎಂದು ವಿಚಾರಿಸಿದಾಗ ಒಂದು ಅಡಿಕೆಗೆ ರೂ. ೫ ಎಂದರು. ಅಲ್ಲಿ ಅಡಿಕೆ ಬೆಳೆಯುತ್ತಾರೆ.
ಹಾಗೆಯೇ ಅಲ್ಲಿಯ ಜನ ಅದನ್ನು ತಿನ್ನುವುದೂ ಜಾಸ್ತಿಯೇ.
ಅಂಗಡಿ ಬೀದಿ ಸುತ್ತಾಡಿ
ಮೊಮ್ಮಗನಿಗೆ ಅಂಡಮಾನ್ ಎಂದು ಬರೆದಿರುವ ಅಂಗಿಚಡ್ಡಿ ಕೊಂಡು ವಾಪಾಸು ಬೀಚಿನ ಬಳಿ ಬಂದೆವು. ಅಲ್ಲಿ
ಮರಗಳ ಅಡಿಯಲ್ಲಿ ದೊಡ್ಡ ದೊಡ್ಡ ಮರದ ದಿಮ್ಮಿಯನ್ನೇ ಬೆಂಚಾಗಿ ಪರಿವರ್ತಿಸಿ ಹಾಕಿದ್ದರು. ಅಲ್ಲಿ ತಂಪಾಗಿ
ಕುಳಿತು ಹರಟಿದೆವು. ನಮ್ಮ ೭೧ ಜನರ ತಂಡದಲ್ಲಿ ನಾವು ಐದಾರು ಮಂದಿ ಮಾತ್ರ ನೀರಿಗೆ ಇಳಿಯಲಿಲ್ಲ. ಮತ್ತೆಲ್ಲರೂ
ನೀರಿಗೆ ಇಳಿದು ಸ್ನಾನ ಆಟ ಆಡಿ ಮೇಲೆ ಬರಲೇ ಮನಸ್ಸಿಲ್ಲದವರಂತೆ ಖುಷಿಪಟ್ಟಿದ್ದರು. ಅಂತೂ ೧೨.೩೦ ಗೆ
ಎಲ್ಲರೂ ನೀರಿನಿಂದ ಮೇಲೆ ಬಂದು ಧಿರಿಸು ಬದಲಾಯಿಸಲು ನಡೆದರು. ಸ್ನಾನಕ್ಕೆ ನೀರು ಸಮೇತ ಅಲ್ಲಿ ವ್ಯವಸ್ಥೆ
ಚೆನ್ನಾಗಿತ್ತಂತೆ. ಅಷ್ಟರಲ್ಲಿ ಊಟವೂ ತಯಾರಾಗಿತ್ತು. ಅನ್ನ ದಾಲ್, ತಿಳಿಸಾರು, ಚಪಾತಿ ಪಲ್ಯ, ಪಾಯಸ,
ಹಪ್ಪಳ ಊಟ ಪೊಗದಸ್ತಾಗಿತ್ತು. ಅದರಲ್ಲೂ ತಿಳಿಸಾರು ರುಚಿ ಹೆಚ್ಚಿದ್ದರಿಂದ ಎರಡು ಕಪ್ ಕುಡಿಯದೆ ಇರಲು
ಸಾಧ್ಯವೇ ಇಲ್ಲವೆಂದೆನಿಸಿತ್ತು!
ಊಟವಾಗಿ ೨ ಗಂಟೆಗೆ ನಾವು ಹೊರಟು ಸ್ವರಾಜ್ ದ್ವೀಪಕ್ಕೆ ವಾಪಾಸಾದೆವು.
ಬಂದ ದಾರಿಗೆ
ಸುಂಕವಿಲ್ಲದೆ ಮರಳಿ ಪೋರ್ಟ್ ಬ್ಲೇರಿಗೆ ಸಂಚಾರ
೩ ಗಂಟೆಗೆ ಜೆಟ್ಟಿ
ಹತ್ತಿದೆವು. ಈ ಬಾರಿ ಜೆಟ್ಟಿಯಲ್ಲಿ ಕೆಳಗಿನ ಕೋಣೆಯಲ್ಲಿ ಸೀಟು. ಸಣ್ಣ ನಿದ್ದೆಯಾಯಿತು. ಸ್ವಲ್ಪ ಹೊತ್ತು
ಸಿನೆಮಾ ನೋಡಿದೆ.
ಮತ್ತೆ ಮೇಲೆ ಡೆಕ್ಕಿಗೆ ಹೋಗಿ ಸಮುದ್ರ ವೀಕ್ಷಣೆ. ಡೆಕ್ಕಿನಲ್ಲಿ ಸಂಗೀತವೇನೋ ಮೊಳಗುತ್ತಿತ್ತು.
ಆದರೆ ಬರುವಾಗ ಇದ್ದ ಉತ್ಸಾಹ ಯಾರಲ್ಲೂ ಕಂಡು ಬರಲಿಲ್ಲ. ಹತ್ತಾರು ಮಂದಿ ಹಾಡಿಗೆ ಸಣ್ಣಗೆ ಹೆಜ್ಜೆ
ಹಾಕುತ್ತಿದ್ದದ್ದು ಕಂಡಿತು. ಸಂಜೆ ೫.೧೫ಕ್ಕೆ ಪೋರ್ಟ್
ಬ್ಲೇರ್ ತಲಪಿದೆವು.
ಶಾಪಿಂಗ್ ಸಮಯ ಎಂದು
ಪೇಟೆಯಲ್ಲಿ ಬಿಟ್ಟರು. ಆ ದಿನ ಭಾನುವಾರವಾದ್ದರಿಂದ ಹೆಚ್ಚಿನ ಅಂಗಡಿಗಳೂ ಬಾಗಿಲು ಹಾಕಿದ್ದುವು. ಸುಮ್ಮನೆ
ರಸ್ತೆ ಬದಿ ಸುತ್ತಾಡಿ ವಾಪಾಸದೆವು.
ರೇವತಿ ಗೂಡಂಗಡಿ
ರೇವತಿ ಗೂಡಂಗಡಿಯನ್ನು
ತಮಿಳುನಾಡಿನ ರೇವತಿ ದಂಪತಿ ನಡೆಸುತ್ತಿದ್ದಾರೆ. ಅಲ್ಲಿ ಬೆಳಗ್ಗೆ ಇಡ್ಲಿ, ವಡೆ, ಕಾಫಿ ಚಹಾ, ಸಂಜೆ ಎರಡು ಮೂರು ಬಗೆಯ ವಡೆ ಕಾಫಿ ಚಹಾ ಸಿಗುತ್ತದೆ. ಇಲ್ಲಿಗೆ
ನಾವು ೫ ದಿನದಲ್ಲಿ ಸುಮಾರು ಸಲ ಭೇಟಿ ಇತ್ತಿದ್ದೆವು. ಅವರು ಅಂಗಡಿ ತೆರೆದು ಸರಿಯಾಗಿ ೨ ವರ್ಷ ಆಯಿತಂತೆ.
ವ್ಯಾಪಾರ ಚೆನ್ನಾಗಿ ಆಗುತ್ತದೆ ಎಂದರು. ಕಾಫಿಗೆ ೧೫ ರೂ. ಚಹಾಕ್ಕೆ ೧೦ ರೂ. ಗಾಜಿನ ಲೋಟದಲ್ಲಿ ತುಂಬ ಕೊಡುತ್ತಿದ್ದರು. ವಡೆಗೆ ೧೦ರೂ. ವಡೆ ಕಾಫಿ
ಬಹಳ ಚೆನ್ನಾಗಿತ್ತು. ರಾಜು, ಶ್ರೀನಾಥ, ಸುರೇಶ ಹೀಗೆ
ಸುಮಾರು ಮಂದಿ ಅಲ್ಲಿ ನಮಗೆ ಕಾಫಿ ವಡೆ ಕೊಡಿಸಿದ್ದರು.
ಬಿಳ್ಕೊಡುಗೆ,
ಧನ್ಯವಾದ ಸಮರ್ಪಣೆ
ರಾತ್ರೆ ೭.೩೦ಕ್ಕೆ
ಎಲ್ಲರೂ ಊಟದ ಹಾಲಿನಲ್ಲಿ ಸೇರಿದೆವು. ಬಿಳ್ಕೊಡುಗೆ, ಪರಸ್ಪರ ಒಟ್ಟಾರೆ ಪ್ರವಾಸದ ಬಗ್ಗೆ ಒಂದೊಂದು
ಊರಿನಿಂದ ಒಬ್ಬೊಬ್ಬರಿಂದ ಅಭಿಪ್ರಾಯ ಹಂಚಿಕೆಯಾಯಿತು. ಶಿವಮೊಗ್ಗದ ಸಿದ್ದಪ್ಪ ಮಾತಾಡಿ,‘ಈ ವಯಸ್ಸಿನಲ್ಲಿ
ನಾನೂ ನನ್ನ ಹೆಂಡತಿಯೂ ಈ ಪ್ರವಾಸವನ್ನು ಬಹಳ ಚೆನ್ನಾಗಿ
ಅನುಭವಿಸಿದೆವು. ನನ್ನ ಹೆಂಡತಿಗೆ ಒಂದು ತಿಂಗಳನಂತರ
ಮಂಡಿ ಶಸ್ತ್ರಚಿಕಿತ್ಸೆ ಎಂದು ನಿಗದಿಯಾಗಿದೆ. ಈಗ ನೋಡುವಾಗ ಈ ಬೆಳಗ್ಗೆ ಹಡಗಿನಲ್ಲಿ ಅವಳು ಉತ್ಸಾಹದಿಂದ
ಹೆಜ್ಜೆ ಹಾಕಿದ್ದು ನೋಡಿ ಅದರ ಅವಶ್ಯಕತೆ ಇಲ್ಲವೇನೋ ಎಂದು ಅನಿಸುತ್ತದೆ ಎಂದು ವಿನೋದದಿಂದ ಹೇಳಿದರು.
ಹೊಟೇಲ್ ಮಾಲಿಕರಿಗೆ ಹಾಗೂ ನಮ್ಮ ತಂಡಕ್ಕೆ ಪ್ರವಾಸಿ ಮಾರ್ಗದರ್ಶಿಯಾಗಿದ್ದ ದರ್ಶನ್ ಅವರಿಗೆ ಶಾಲು
ಹೊದೆಸಿ ಗೌರವ ಅರ್ಪಿಸಿದರು. ಪ್ರವಾಸದ ಮೊದಲ ದಿನ ಒಟ್ಟು ಸೇರಿದ್ಡಾಗ ಶಿವಮೊಗ್ಗದ ವಾಗೀಶ್ ಒಂದು ಸವಾಲು
ಹಾಕಿದ್ದರು. ನಮ್ಮ ತಂಡದ ೭೧ ಜನರೆಲ್ಲರ ಹೆಸರು ಯಾರೆಲ್ಲ ಹೇಳುತ್ತಾರೋ ಅವರಿಗೆಲ್ಲ ಒಂದು ಸಾವಿರದ
ಒಂದು ರೂಪಾಯಿ ಬಹುಮಾನ ಕೊಡುತ್ತೇನೆ. ಹಾಗಾದರೂ ಎಲ್ಲರೂ ೫ ದಿನ ಪರಸ್ಪರ ಬೆರೆತು ಮಾತುಕತೆ ಹಂಚಿಕೊಳ್ಳಬೇಕು
ಎಂಬುದು ಅವರ ಅಪೇಕ್ಷೆಯಾಗಿತ್ತು. ನಮ್ಮ ಮೈಸೂರು ತಂಡದಲ್ಲಿದ್ದ ಸುಷ್ಮಿತ್ ಎಂಬ ಹುಡುಗಿ ಇಂಜಿನಿಯರ್
ವ್ಯಾಸಂಗ ಮಾಡುತ್ತಿರುವಾಕೆ ೭೧ ಜನರನ್ನು ಗುರುತಿಸಿ ಹೆಸರು ಹೇಳಿದ್ದಳು. ನಿಜಕ್ಕೂ ಅವಳ ಈ ಪ್ರತಿಭೆಗೆ
ಶಹಭಾಸ್ ಎಂದು ಚಪ್ಪಳೆ ತಟ್ಟಿ ಪ್ರೋತ್ಸಾಹಿಸಿದೆವು. ಮಾತಿಗೆ ತಪ್ಪದೆ ವಾಗೀಶ್ ಸಾವಿರದೊಂದು ರೂಪಾಯಿ
ಕೊಟ್ಟು ಬೆನ್ನು ತಟ್ಟಿದರು. ನಿಮಗೆ ದುಡ್ಡು ಉಳಿಸುವ ಸಲುವಾಗಿ ನಾವು ಯಾರೂ ಪ್ರಯತ್ನ ಮಾಡಲಿಲ್ಲ ಎಂದು
ಒಂದಿಬ್ಬರು ಸಣ್ಣದಾಗಿ ಗೊಣಗಿಕೊಂಡರು!
ರಾತ್ರಿ ೮ ಗಂಟೆಗೆ
ಊಟವಾಯಿತು. ಸಸ್ಯಾಹಾರಿಗಳು ಮೊದಲು ಊಟ ಮಾಡಿ ಜಾಗ ಖಾಲಿ ಮಾಡಿ ಹೋಗಿ ಎಂದು ಮೊದಲೇ ಹೇಳಿದ್ದರು. ನಾವು
ಊಟ ಮುಗಿಸಿ ಕೆಳಗೆ ಹೋಗಿದ್ದೆವು. ಅವರಿಗೆಲ್ಲ ಮೀನಿನ ಖಾದ್ಯದ ವಿಶೇಷ ಊಟ ಇತ್ತಂತೆ. ಹೇಗಿತ್ತು ಮೀನು
ಊಟ? ಮಂಡ್ಯದ ಮೀನು ಒಳ್ಳೆಯದೋ? ಅಲ್ಲ ಅಂಡಮಾನ್ ಮೀನು ರುಚಿಯೋ? ಎಂದು ನಮ್ಮ ಗೌರಮ್ಮನವರ ಬಾಯಿಗೆ ಕೋಲು
ಹಾಕಿದೆ. ಅಲ್ಲಿಯದು ಒಂದುರೀತಿಯ ರುಚಿ, ಇಲ್ಲಿಯದು ಮತ್ತೊಂದು ರೀತಿಯ ರುಚಿ. ಇಲ್ಲಿಯ ಮೀನಿನಲ್ಲಿ
ಮುಳ್ಳು ಇರಲಿಲ್ಲ ಎಂದುತ್ತರ ಕೊಟ್ಟರು. ಮೀನಿನಲ್ಲಿ ಮುಳ್ಳು ಇರುತ್ತದೆ, ಇರುವುದಿಲ್ಲ ಎಂದು ಇದರಿಂದಾಗಿ
ನನ್ನ ಜ್ಞಾನ ವೃದ್ಧಿಯಾಯಿತು.
ಕೋಣೆಯಲ್ಲಿ ನಾನೂ
ವೇದಾ ಮೀನಾಕ್ಷಿಯವರೊಡನೆ ಒಂದಷ್ಟು ಹೊತ್ತು ಪ್ರೇಮಕಲಹ
ನಡೆಸಿದೆವು. ಮೀನಾಕ್ಷಿಯವರಿಗೆ ನೀಲ್ ದ್ವೀಪ ತೋರಿಸದೆ ಇದ್ದದ್ದು ಕೊರತೆ ಬಿಟ್ಟರೆ ಬೇರೆ ಪ್ರವಾಸ ಪ್ರಯಾಸವಾಗದೆ
ಬಹಳ ಚೆನ್ನಾಗಿಯೇ ಆಗಿತ್ತು ಎಂದು ಮಾತಾಡಿಕೊಂಡೆವು! ಬ್ಯಾಗಿಗೆ ಸಾಮಾನೆಲ್ಲ ತುಂಬಿಸಿ ನಿದ್ದೆಗೆ ಜಾರಿದೆವು.
ಹವಾನಿಯಂತ್ರಿತ ಕೋಣೆ, ಸ್ನಾನಕ್ಕೆ ಬಿಸಿನೀರು ಇದ್ದು ಅನುಕೂಲಕರವಾಗಿತ್ತು.
ಮರಳಿ ಚೆನ್ನೈಗೆ ಪಯಣ
ತಾರೀಕು ೨-೩-೨೦೨೦ರಂದು ಬೆಳಗ್ಗೆ ೭ ಗಂಟೆಗೆ ತಯಾರಾಗಿ ಪೂರಿ ಪಲ್ಯ
ತಿಂದೆವು. ಪಾಕ ಪ್ರವೀಣ ತರುಣ ಸನಿ
ಗಣೇಶ. (suwny Ganesh) ರುಚಿಯಾಗಿ ಅಡುಗೆ ಮಾಡಿದ್ದರು. ನಾವಿದ್ದಷ್ಟು ದಿನವೂ ಅಡುಗೆ ಎಲ್ಲವೂ ಬಹಳ ಶುಚಿ ರುಚಿಯಾಗಿತ್ತು. ಅವನಿಗೆ ಧನ್ಯವಾದವನ್ನರ್ಪಿಸಿದೆ. ಬಡಿಸಿದ ಒಂದೆರಡು ಹುಡುಗರು ಅಷ್ಟೆ ವಿನಯವಂತರು.
೭.೩೦ಗೆ ಎಲ್ಲರೂ ನಿರ್ಗಮಿಸಿದರು. ನಾವು ೭ ಮಂದಿ ಹಾಗೂ ಶಿವಮೊಗ್ಗದ ೫ ಮಂದಿಗೆ ಮಾತ್ರ ೧೦.೪೦ಕ್ಕೆ
ವಿಮಾನವಿದ್ದುದು. ನಾವು ೯ ಗಂತೆಗೆ ಹೊರಟು ವಿಮಾನ ನಿಲ್ದಾಣಕ್ಕೆ ಹೋದೆವು. ನಮ್ಮ ವಿಮಾನ ತಾಂತ್ರಿಕ
ದೋಷದಿಂದಾಗಿ ತಡವಾಗಿ ಮಧ್ಯಾಹ್ನ ೩ ಗಂಟೆಗೆ ಬರಲಿದೆ
ಎಂದು ತಿಳಿಯಿತು. ಅಯ್ಯೊ ಎಂತ ಮಾಡುವುದು ಇನ್ನು ಎಂದು ಚಿಂತಿಸಿ ಸಂಬಂಧಪಟ್ಟವರಿಗೆ ಬೆಂಗಳೂರಿಗೆ ವಿಮಾನದಲ್ಲಿ
ಸೀಟು ಇದ್ದರೆ ಕೊಡಿಸಿ ಎಂದು ವಿನಂತಿಸಿಕೊಂಡೆವು. ಇಲ್ಲ ಎಲ್ಲ ವಿಮಾನಗಳೂ ಭರ್ತಿ. ಎಂದು ಉತ್ತರ ಬಂತು.
ಕಾಯುವಿಕೆಗಿಂತ ಅನ್ಯ ತಪವು ಇಲ್ಲ ಎಂದು ಮನವರಿಕೆ ಆಯಿತು. ವಿಸ್ತಾರದ ಸಿಬ್ಬಂದಿ ಬಹಳ ಚೆನ್ನಾಗಿ ಎಲ್ಲರ
ಯೋಗಕ್ಷೇಮ ವಿಚಾರಿಸಿಕೊಂಡರು. ಕೇಳಿದ ಪ್ರಶ್ನೆಗಳಿಗೆಲ್ಲ ತಾಳ್ಮೆಯಿಮ್ದ ನಗುಮೊಗದಿಂದಲೇ ಉತ್ತರಿಸಿದ್ದರು.
ಆಗ ಗಂಟೆ ೯.೩೦.
ನಾವು ಹೋಗಬೇಕಿದ್ದ ವಿಸ್ತಾರ ವಿಮಾನದ ಸಿಬ್ಬಂದಿಗಳಿಂದ ಹೊರಗೆ ಹೋಗಲು ಅನುಮತಿ ಪಡೆದು ನಾವು ೩ ಮಾಂದಿ
ರಿಕ್ಷದಲ್ಲಿ ಒಂದೆರಡು ಅಂಗಡಿಗೆ ಹೋದೆವು. ಹುಡುಗಿಯರಿಗೆ ಕಿವಿಯೋಲೆ ತೆಗೆಯಲಿತ್ತು. ನಾವು ಹೊರಡುವ
ಮೊದಲು ನಮ್ಮ ಹೊಟೇಲ್ ಕೋಣೆಯ ಬಳಿ ಇರುವ ಅಂಗಡಿಯಿಂದ ಮುತ್ತಿನ ಕಿವಿಯೋಲೆ ತರಬೇಕು ಎಂದು ಮೊದಲ ವಿಮಾನಕ್ಕೆ
ಹೋದವರೊಬ್ಬರು ನನ್ನಲ್ಲಿ ದುಡ್ಡು ಕೊಟ್ಟಿದ್ದರು. ನಾವು ಹೊರಟಾಗ ಆ ಅಂಗಡಿ ಬಾಗಿಲು ತೆರೆದಿರಲಿಲ್ಲ.
ಹಾಗಾಗಿ ಅವರಿಗಾಗಿ ನಾನೂ ಹುಡುಗಿಯರ ಜೊತೆ ಹೊರಟೆ! ಸರ ಕಿವಿಯೋಲೆ ಕೊಂಡು ನಾವು ವಾಪಾಸು ವಿಮಾನ ನಿಲ್ದಾಣಕ್ಕೆ
೧೦.೩೦ಗೆ ಹೋದೆವು.
ಮಧ್ಯಾಹ್ನದ ಊಟ
ನಮಗೆ ವಿಮಾನದ ಸಿಬ್ಬಂದಿಯೇ ಏರ್ಪಾಡು ಮಾಡಿದರು. ಸಸ್ಯಾಹಾರವೇ ಎಂದು ಖಾತರಿಪಡಿಸಿಕೊಂಡೆ. ಹೌದು. ಮಾಂಸಾಹಾರ
ವಿಮಾನ ನಿಲ್ದಾಣದೊಳಗೆ ತರಲು ಅನುಮತಿ ಇಲ್ಲ ಎಂಬುದು ತಿಳಿಯಿತು. ಧೈರ್ಯದಿಂದ ಊಟದ ಪೊಟ್ಟಣ ಬಿಚ್ಚಿದೆ.
ಪಲಾವ್ ರುಚಿಯಾಗಿತ್ತು. ಮಾತಾಡುತ್ತ, ಅತ್ತಿತ್ತ ಅಡ್ಡಾಡುತ್ತ ಕಾಲ ಕೊಂದೆವು. ಅಂತೂ ವಿಮಾನ ಮುಂಬೈಯಿಂದ ಬಂತು. ನಾವು ವಿಮಾನ ಹತ್ತಿದೆವು.
ಸಂಜೆ ೫.೩೦ಕ್ಕೆ ಚೆನ್ನೈನಲ್ಲಿ ಇಳಿದೆವು.
ಶಿವಮೊಗ್ಗದವರಿಗೆ
ಚೆನ್ನೈಯಿಂದ ಸಂಜೆ ೫ ಗಂಟೆಗೆ ಹೊರಡುವ ರೈಲಿಗೆ ಟಿಕೆಟ್ ಕಾದಿರಿಸಲಾಗಿತ್ತು. ಅದು ತಪ್ಪಿ ಹೋಯಿತು.
ನಮಗೆ ರಾತ್ರಿ ೯.೧೫ಕ್ಕೆ ಹೊರಡುವ ರೈಲಾದ ಕಾರಣ ತೊಂದರೆಯಾಗಲಿಲ್ಲ. ನಾವು ವಿಮಾನ ನಿಲ್ದಾಣದಿಂದ ನೇರವಾಗಿ
ಮೆಟ್ರೋ ರೈಲು ಹತ್ತಿ ರಾಮಚಂದ್ರನ್ ರೈಲು ನಿಲ್ದಾಣದಲ್ಲಿಳಿದೆವು. ಆಗ ಗಂಟೆ ೮.೧೫.
ನಮ್ಮೂರು ಚಂದವೋ ಮೈಸೂರಿಗೆ ರೈಲು ಪ್ರಯಾಣ
ನಾವು ರೈಲು ಪ್ಲಾಟ್ ಫಾರ್ಮ್ ೧೧ ಹುಡುಕಿಕೊಂಡು ಹೋಗಿ ರೈಲು ಹತ್ತಿ
ಕುಳಿತೆವು. ನಮ್ಮ ಮೈಸೂರು ತಂಡದ ಇತರರು ಬೆಳಗ್ಗೆಯೇ ಚೆನ್ನೈ ತಲಪಿ, ಮಹಾಬಲಿಪುರಂಗೆ ಹೋಗಿ ವಾಪಾಸು
ಬರುತ್ತ ದಾರಿಯಲ್ಲಿ ವಾಹನದಟ್ಟಣೆಯಲ್ಲಿ ಸಿಲುಕಿ, ರಾತ್ರಿ ಯೂಥ್ ಹಾಸ್ಟೆಲಿಗೆ ಮರಳಿ, ಅಲ್ಲಿ ಊಟ ಮಾಡಿ
ನಮಗೆ ಊಟ ಕಟ್ಟಿಕೊಂಡು ರೈಲು ನಿಲ್ದಾಣಕ್ಕೆ ತಲಪಿದಾಗ ಗಂಟೆ ೯ ದಾಟಿತ್ತು. ಹೆಚ್ಚಿನ ಮಂದಿ ೬೦ ದಾಟಿದವರೇ
ಇದ್ದರು. ೯.೧೫ಕ್ಕೆ ರೈಲು ಹೊರಟಾಗಲು ಇನ್ನೂ ಕೆಲವರು ನಮ್ಮ ಬೋಗಿಗೆ ಬಂದು ತಲಪಿರಲೇ ಇಲ್ಲ. ನಮ್ಮ ತಂಡದ ಎಲ್ಲರೂ ಹತ್ತಿರಬಹುದೇ? ಎಂದು ಯೋಚಿಸುವಂತಾಗಿತ್ತು.
ಕರೆ ಮಾಡಲು ಅದು ಸಮಯವಲ್ಲ. ಹತ್ತುವಾಗ ಮೊಬೈಲು ಗಡಿಬಿಡಿಯಲ್ಲಿ ಕೈಯಿಂದ ಕೆಳಬಿದ್ದರೆ ಕಷ್ಟ ಎಂದು
ಸುಮ್ಮನಾದೆವು. ಟಿಕೆಟ್ ಎಲ್ಲ ಅವರ ಬಳಿಯೇ ಇತ್ತು. ಅಂತೂ ಎಲ್ಲರೂ ರೈಲು ಹತ್ತುವಲ್ಲಿ ಯಶ ಸಾಧಿಸಿದರು.
ಒಬ್ಬರನ್ನು ಮಾತ್ರ ರೈಲು ಹೊರಟಮೇಲೆ ಮೇಲಕ್ಕೆಳೆದದ್ದಂತೆ. ಅವರಿಗಂತೂ ಕುಳಿತ ಬಳಿಕವೂ ಕೈ ಕಾಲು ನಡುಗುತ್ತಲಿತ್ತು.
ಅಬ್ಬ ನೆನೆಸಿಕೊಂಡರೆ ಮೈ ನಡುಕ ಬರುತ್ತದೆ. ಅಪಾಯದ ಕ್ಷಣವದು. ಮರೆಯಲಾರದ ಕ್ಷಣವೂ ಹೌದು. ನಮ್ಮನ್ನೂ
ವಿಮಾನ ಇಳಿದು ಯೂಥ್ ಹಾಸ್ಟೆಲಿಗೆ ಬರಹೇಳಿದ್ದರು. ಚೆನ್ನೈ ಯ ವಾಹನ ದಟ್ಟಣೆ ತಿಳಿದು ನಾವು ಹೋಗದೆ ಸೀದಾ ರೈಲು ನಿಲ್ದಾಣಕ್ಕೆ ಹೋಗಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದೆವು.
ನಾವು ಹೋಗಿದ್ದರೆ ವಾಪಾಸು ರೈಲು ಸಮಯಕ್ಕೆ ತಲಪಲು ಸಾಧ್ಯ ಆಗುತ್ತಲೇ ಇರಲಿಲ್ಲ. ಚೆನ್ನೈಯಲ್ಲಿ ಎಲ್ಲ
ಪ್ಲಾಟ್ ಫಾರ್ಮ್ಗಳೂ ನೆಲಮಟ್ಟದಲ್ಲೇ ಇರುವ ಕಾರಣ ಅವರೆಲ್ಲ ರೈಲು ಹತ್ತಲು ಸಾಧ್ಯವಾದದ್ದು ಎಂದು ಮಾತಾಡಿಕೊಂಡೆವು.
ಎಲ್ಲರೂ ಬಂದು
ಕುಳಿತ ಬಳಿಕ ನಮಗಾಗಿ ತಂದಿದ್ದ ಊಟ ಮಾಡಿದೆವು. ಮರೆಯದೆ ಊಟ ಕಟ್ಟಿ ತಂದಿದ್ದ ಗೋಪಕ್ಕನಿಗೆ ಧನ್ಯವಾದ
ಸಮರ್ಪಿಸಿದೆವು. ಸಾರು, ಪಲ್ಯ ಸಾಂಬಾರು ಊಟ ಚೆನ್ನಾಗಿತ್ತು. ಶಿವಮೊಗ್ಗದ ೫ ಮಂದಿಯೂ ನಮ್ಮ ರೈಲಿಗೇ
ಟಿಕೆಟ್ ಪಡೆದು ಹತ್ತಿ ಮಹಿಳಾ ಬೋಗಿಯಲ್ಲಿ ಕೂತು ಬೆಂಗಳೂರು ತಲಪಿ ಅಲ್ಲಿಂದ ಬಸ್ಸಿನಲ್ಲಿ ಶಿವಮೊಗ್ಗ
ತಲಪಿದರಂತೆ. ಅವರಿಗೆ ಈ ಪಯಣ ಬಲು ಪ್ರಯಾಸವಾಗಿತ್ತು.
ಮರಳಿ ಮನೆಗೆ
ತಾರೀಕು ೩.೩.೨೦೨೦ರಂದು
ಬೆಳಗ್ಗೆ ೭.೩೦ಗೆ ಮೈಸೂರು ರೈಲು ನಿಲ್ದಾಣದಲ್ಲಿ ಇಳಿದು ಮನೆ ತಲಪಿದೆ. ಅಲ್ಲಿಗೆ ನಮ್ಮ ಅಂಡಮಾನ್ ಪ್ರವಾಸಕ್ಕೆ
ತೆರೆ ಬಿತ್ತು. ನಮ್ಮ ಪ್ರವಾಸ ಪ್ರಯಾಸವಾಗದೆ ಚೆನ್ನಾಗಿಯೇ ಆಗಿತ್ತು
ಧನ್ಯವಾದ ಸಮರ್ಪಣೆ
ಈ ಪ್ರವಾಸಕ್ಕಾಗಿ ನಮಗೆ ರೈಲು ವಿಮಾನ ಟಿಕೆಟ್ ಎಲ್ಲ ಕಾದಿರಿಸಿ ಪೂರ್ವ ತಯಾರಿ ಕೆಲಸ ಅಚ್ಚುಕಟ್ಟಾಗಿ ಮಾಡಿ ಪ್ರಯಾಸವಿಲ್ಲದೆ ಪ್ರವಾಸ
ಮಾಡಿಸಿದ ಮೈಸೂರು ತಂಡದ ಗೋಪಕ್ಕ ಹಾಗೂ ಶಿವಮೊಗ್ಗ ತಂಡದ ವಿಜಯೇಂದ್ರ ಮತ್ತು ಬಳಗದವರಿಗೆ ನಮ್ಮತಂಡದ
ಎಲ್ಲರ ಪರವಾಗಿ ಧನ್ಯವಾದ. ೭೧ ಜನರನ್ನು ಒಟ್ಟುಗೂಡಿಸಿ ಕರೆದೊಯ್ಯುವುದು ಸಾಮಾನ್ಯದ ಮಾತಲ್ಲ. ತಂಡದ
ಎಲ್ಲರ ಸಹಕಾರವೂ ಇದ್ದದ್ದರಿಂದ ಏನೂ ತೊಂದರೆಯಾಗಲಿಲ್ಲ. ಎಲ್ಲರೂ ಸಮಯಕ್ಕೆ ಸರಿಯಾಗಿ ಹೊರಟು ತಯಾರಾಗುತ್ತಿದ್ದರು,
ಹಾಗೂ ಯಾರಿಂದಲೂ ವ್ಯವಸ್ಥೆ ಸರಿ ಇಲ್ಲ ಎಂಬ ಗೊಣಗಾಟ ಇರಲಿಲ್ಲ. ಎಲ್ಲರೂ ಒಂದೇ ಮನೆಯವರಂತೆ ೫ ದಿನವೂ
ಮಾತುಕತೆಯಾಡುತ್ತ ಬಹಳ ಖುಷಿಯಿಂದ ಇದ್ದೆವು.
ರೈಲು, ವಿಮಾನ ಟಿಕೆಟ್,
ಅಲ್ಲಿ ಸ್ಕೂಬಾ ಡೈವಿಂಗ್, ಸಣ್ಣಪುಟ್ಟ ಸಾಮಾನು ಖರೀದಿ ಸೇರಿ ನನಗೆ ಸರಿ ಸುಮಾರು ರೂ. ೩೦೪೦೦ ಖರ್ಚಾಗಿತ್ತು.
ಬಹಳ ಸೊಗಸಾದ ವಿವರಣೆ. 2011 ರಲ್ಲಿ ನಾವು ಹೋಗಿದ್ದೆವು. ನೆನಪು ಮರುಕಳಿಸಿತು.
ಪ್ರತ್ಯುತ್ತರಅಳಿಸಿVivarane thumba channagide naanu yhai nida 2002 Andaman ge hogidde ..nivu scuba diving madidra ????
ಪ್ರತ್ಯುತ್ತರಅಳಿಸಿಧನ್ಯವಾದ.
ಅಳಿಸಿ