ಮೈಸೂರಿನ ವರ್ತುಲ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಬೇಕೆಂಬುದು ಬಹಳ ದಿನಗಳಿಂದ ನನ್ನ ಮನದಲ್ಲಿತ್ತು. ಅದು ೧೮.೧೦.೨೦೨೦ ರಂದು ಈಡೇ ರಿತು. ಮೈಸೂರು ವರ್ತುಲ ರಸ್ತೆ ೨೦೧೨ರಲ್ಲಿ ಪ್ರವೇಶಕ್ಕೆ ಮುಕ್ತಗೊಂಡಿತು. ೪೨.೫ ಕಿಲೋಮೀಟರ್ ಉದ್ದವಿರುವ ಈ ರಸ್ತೆ ಆರು ಪಥಗಳನ್ನೊಳಗೊಂಡಿದೆ. ಒಟ್ಟು ನಾಲ್ಕು ರೈಲ್ವೇ ಸೇತುವೆ, ಒಂದು ವಾಹನ ಮೇಲು ಸೇತುವೆಗಳಿವೆ. ಎಕರೆಗಟ್ಟಲೆ ಭೂಮಿ ಇದಕ್ಕೆ ಬಳಕೆಯಾಗಿದೆ. ನಗರದೊಳಗಿನ ವಾಹನ ದಟ್ಟಣೆ ಇದರಿಂದ ಬಹುತೇಕ ಕಡಿಮೆಗೊಳ್ಳಲು ಕಾರಣವಾಗಿದೆ. ಬೆಳಗ್ಗೆ ೬.೧೫ಕ್ಕೆ ಮನೆಯಿಂದ ಹೊರಟು ೨.೫ ಕಿಮೀ ದೂರದಲ್ಲಿರುವ ನಿವೇದಿತಾ ಉದ್ಯಾನವನದ ಬಳಿಗೆ ಹೋದೆ. ಅಲ್ಲಿ ಎಲ್ಲರೂ ಬಂದು ಸೇರಿ ಪರಸ್ಪರ ಪರಿಚಯ ವಿನಿಮಯ ಮಾಡಿಕೊಂಡು ಪಟ ತೆಗೆಸಿಕೊಂಡು ೭ ಗಂಟೆಗೆ ಹೊರಟೆವು.
ಇದು ನಿಸರ್ಗದ ಸೊಬಗನ್ನು ವೀಕ್ಷಿಸಲು ತೆರೆದಿರುವ ಬ್ಲಾಗ್. ನಿಸರ್ಗದ ಸೊಬಗು ಬಲು ಮನೋಹರ. ಅವನ್ನು ನೋಡಲು ಎರಡು ಕಣ್ಣು ಸಾಲದು. ಅದಕ್ಕೆ ೩ನೇ ಕಣ್ಣಿಂದ ನೋಡಿದ ಅಂಥ ಕೆಲವು ಚಿತ್ರಗಳನ್ನು ಹಾಕಲೆಂದೇ ಈ ಬ್ಲಾಗ್ ತೆರೆದಿರುವೆ. ಎಲ್ಲೇ ಹೋಗಲಿ ಕೈಯಲ್ಲಿ ಕ್ಯಾಮರ ಇದ್ದರೆ ನಿಸರ್ಗದ ಚಿತ್ರಗಳನ್ನು ಸೆರೆ ಹಿಡಿಯುವ ದುರಾಭ್ಯಾಸ ಇದೆ! ಅದರಲ್ಲಿ ಕೆಲವನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಲ್ಲಿ ಹಾಕಲು ಉದ್ದೇಶಿಸಿದ್ದೇನೆ. ಇದರಲ್ಲಿ ಚಾರಣ ಲೇಖನ, ಪ್ರವಾಸ ಕಥನ, ಇತ್ಯಾದಿ ಲೇಖನಗಳನ್ನು ಚಿತ್ರಸಹಿತ ಹಾಕಲಾಗುತ್ತದೆ.
ಸೋಮವಾರ, ಅಕ್ಟೋಬರ್ 19, 2020
ವರ್ತುಲ ರಸ್ತೆಯಲ್ಲಿ ಸೈಕಲ್ ಸವಾರಿ
ಜಗದೀಶ, ಆನಂದ, ಸತೀಶಬಾಬು ಮೂರು ಮಂದಿ ಸ್ಕೂಟರಿನಲ್ಲಿ ತಿಂಡಿ, ನೀರಿನ ಕ್ಯಾನ್ ಹಾಕಿಕೊಂಡು ಹಿಂಬಾಲಿಸಿದರು. ಭೋಗಾದಿ ಕಡೆಯಿಂದ
ಹೊರಟು ಎಡಕ್ಕೆ ತಿರುಗಿ ಶ್ರೀರಾಂಪುರ, ಜೆಪಿನಗರ, ಲಲಿತಾದ್ರಿಪುರ, ಇತ್ಯಾದಿ ಸ್ಥಳ ದಾಟಿ, ಚಾಮುಂಡಿಬೆಟ್ಟದ ಹಿಂಭಾಗ ಸಾಗಿದೆವು. ಬೆಟ್ಟವಂತೂ ಹಸುರಾಗಿ ಕಂಗೊಳಿಸುತ್ತಿದೆ. ತ್ರಿಪುರ ಸುಂದರಿ ದೇವಾಲಯಕ್ಕೆ ಹೋಗುವ ದಾರಿ ಬಳಿ ಬಂದಾಗ ಸುಮಾರು ೧೫ ಕಿಮೀ. ಆಗ ಗಂಟೆ ೮.೨೦. ಹಾಗೆ ತಿಂಡಿಗಾಗಿ ರಸ್ತೆ ಬದಿ ಸುಮಾರು ೨೫ ನಿಮಿಷ ಅಲ್ಲಿ ಕಳೆದೆವು. ಪೊಂಗಲ್, ಕೇಸರಿಭಾತ್. ಬಿಸಿಬಿಸಿ ಪೊಂಗಲನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ತಂದಿರುವುದು, ಅದನ್ನು ನಾವು ತಿಂದು ರಾಸಾಯನಿಕವನ್ನು ಸೇವಿಸಿರುವುದು ಅಷ್ಟು ಸರಿ ಎನಿಸಲಿಲ್ಲ.
ತಿಂಡಿಯಾಗಿ ಹೊರಟು ಟಿ ನರಸೀಪುರ ರಸ್ತೆ, ಅಲ್ಲಿಂದ ಮುಂದೆ ಕೆ.ಆರ್ ಎಸ್ ರಸ್ತೆ, ಬೆಂಗಳೂರು ರಸ್ತೆ, ಹೆಬ್ಬಾಳ, ವಿಜಯನಗರ, ಹುಣಸೂರು ರಸ್ತೆ, ಭೋಗಾದಿಗೆ ೧೧.೪೫ಕ್ಕೆ ತಲಪಿದೆವು. ಸೂರ್ಯದೇವ ಅವನ ಕೆಲಸವನ್ನು ಬಹಳ ಚುರುಕುಗೊಳಿಸಿದ್ದ. ಅವನ ಕಿರಣ ಪಡೆದ ನಾವುಗಳು ಕೆಂಪು ಕೆಂಪಾಗಿ ಕಂಗೊಳಿಸುತ್ತ ಬೆಳಗ್ಗೆ ಸೇರಿದ್ದ ಸ್ಥಳ ತಲಪಿದೆವು. ನಾವು ೨೩ ಮಂದಿ ಸೈಕಲಿಗರು, ಅವರಲ್ಲಿ, ೭- ೮ನೇ ತರಗತಿ ಓದುವ ನಾಲ್ಕೈದು ಮಕ್ಕಳು, ಇಬ್ಬರು ಹುಡುಗಿಯರು, ನಾವು ಮೂವರು ಮಹಿಳೆಯರು, ೭೦ ವರ್ಷ ಮೇಲ್ಪಟ್ಟ ಒಬ್ಬರು ಹಿರಿಯರು, ಮಧ್ಯ ವಯಸ್ಸಿನ, ಜವ್ವನಿಗ ಗಂಡಸರು ಇದ್ದರು. ರಸ್ತೆ ಬಹಳ ಚೆನ್ನಾಗಿದೆ. ಎಲ್ಲಾ ಕಡೆ ಸರ್ವಿಸ್ ರಸ್ತೆ ಇಲ್ಲ. ವಾಹನ ದಟ್ಟಣೆ ಇದ್ದ ಕಡೆಗಳಲ್ಲಿ ಮಾತ್ರ ನಾವು ಸರ್ವಿಸ್ ರಸ್ತೆಯಲ್ಲಿ ಸಾಗಿದೆವು.
ಸುಮಾರು ನಾಲ್ಕು ಕಡೆ ಏರು, ಕೆಲವೆಡೆ ಇಳಿಜಾರು, ಮತ್ತೆ ಸಮತಟ್ಟಾದ ರಸ್ತೆ ಹೀಗೆ ಸೈಕಲ್ ತುಳಿಯಲು ಎಲ್ಲ ಅವಕಾಶಗಳೂ ದೊರೆತಿದೆ. ಗೇರ್ ಸೈಕಲಿನ ಲಾಭವೆಂದರೆ ಏರುದಾರಿಯಲ್ಲೂ ಕುಳಿತೇ ಸೈಕಲ್ ತುಳಿಯುತ್ತಲೇ ಸಾಗಬಹುದು. ನಾನಂತೂ ಎಲ್ಲೂ ಇಳಿದು ನೂಕದೆ ಏರು ಹತ್ತಿಸಿದೆ. ೧*೨ ಗೇರಿನಲ್ಲಿ ಆರಾಮವಾಗಿ ಕೂತು ತುಳಿಯಬಹುದು. ಹೆಬ್ಬಾಳದಿಂದ ವಿಜಯನಗರದ ಏರು ಮಾತ್ರ ಅಲ್ಲಲ್ಲಿ ನಿಂತು ಸುಧಾರಿಸಿಕೊಳ್ಳುತ್ತ ಮುನ್ನಡೆಯಬೇಕಾಯಿತು. ಮಕ್ಕಳ ಉತ್ಸಾಹವಂತೂ ಸೂಪರ್. ದಾರಿ ಮಧ್ಯೆ ಬಿಸ್ಕೆಟ್ ಹಂಚಿದರು. ಬಿಸ್ಕೆಟ್ ತಿಂದರೆ ದಾಹ ಜಾಸ್ತಿ. ಸೈಕಲ್ ಸವಾರರಿಗೆ ಬಿಸ್ಕೆಟ್ ಬದಲು ಕಿತ್ತಳೆ ಅಥವಾ ಷರಬತ್ತು ಕೊಟ್ಟರೆ ಬಹಳ ಒಳ್ಳೆಯದು. ಬಿಸಿಲಿಗೆ ಬಸವಳಿದ ದೇಹಕ್ಕೆ ಅದು ಬಹಳ ಶಕ್ತಿ ಕೊಡುತ್ತದೆ.
ನಾವು ವಿಶ್ರಾಂತಿಗಾಗಿ ಹೆಚ್ಚು ನಿಲ್ಲಲಿಲ್ಲ. ಸಿಗ್ನಲ್ ದೀಪ ಇರುವೆಡೆ ೫ ನಿಮಿಷವಷ್ಟೇ ನಿಂತು ನೀರು ಕುಡಿದು ಸುಧಾರಿಸಿಕೊಂಡು ಮುಂದುವರಿದೆವು. ಹಾಗಾಗಿ ಅಂದುಕೊಂಡದ್ದಕ್ಕಿಂತ ಬೇಗನೆ ವಾಪಾಸಾದೆವು. ಒಟ್ಟು ೪೨. ೫ ಹಾಗೂ ಮನೆಯಿಂದ ಕ್ರಮಿಸಿದ ದೂರ ೨.೫+೨.೫ ಲೆಕ್ಕಹಾಕಿದರೆ ೪೭.೫ ಕಿಮೀ ಸೈಕಲ್ ತುಳಿದ ಸಂತೃಪ್ತಿ ಲಭಿಸಿತು.
ಕೆಲವೆಡೆ ರಸ್ತೆ ಬದಿ ಕಸದ ರಾಶಿ ನೋಡಿ ಇದುವಾ ಸ್ವಚ್ಛ ಮೈಸೂರು ಎಂದು ವಿಷಾದವೆನಿಸಿತು. ನಮ್ಮ ಮಂದಿಗೆ ಸ್ವಚ್ಛತೆ ಬಗ್ಗೆ ಅವರ ಮನಸಿನಲ್ಲಿ ಬರುವವರೆಗೆ ಇಂಥ ದೃಶ್ಯ ತಪ್ಪಿದ್ದಲ್ಲ.
ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ (ಭಾಗವಹಿಸಲು ಪ್ರವೇಶಧನ ರೂ.೨೦೦) ಸತೀಶಬಾಬು, ರಾಣಿ ತ್ರಿಯಂಬಿಕೆ ದಂಪತಿ ಈ ಸವಾರಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅವರಿಗೆ ಮತ್ತು ಜಗದೀಶ, ಆನಂದ ಅವರಿಗೂ ಎಲ್ಲ ಸೈಕಲಿಗರ ಪರವಾಗಿ ಧನ್ಯವಾದ. ವಿಜಯನಗರದ ರೋಟರಿ ಕ್ಲಬ್ ಕೈ ಜೋಡಿಸಿದ್ದರು.
ವಾಪಾಸು ಬಂದು ಸೇರುವುದು ಸುಮಾರು ೧೨.೩೦ ಆಗಬಹುದೆಂದು ಊಟ ಕೊಡಲು ತೀರ್ಮಾನಿಸಿದ್ದರು. ನಾನು ಊಟಕ್ಕೆ ನಿಲ್ಲದೆ ಹೊರಟು, ದಾರಿಯಲ್ಲಿ ಎಳನೀರು ಕುಡಿದು ಮನೆ ಸೇರಿದಾಗ ೧೨. ೧೦.
ಇಲ್ಲಿ ಬಳಸಿದ ಕೆಲವು ಪಟಗಳ ಕೃಪೆ: ಪ್ರಹ್ಲಾದ ರಾವ್, ಸತೀಶಬಾಬು ಅವರದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ