ಸೋಮವಾರ, ಜುಲೈ 20, 2020

ಲಕ್ಷ್ಮೀ ಸ್ವಪ್ನಲಹರಿ (ಕನಸು ಮೇಲೋಗರ)


ನಮ್ಮ ಅತ್ತೆಗೆ ಕನಸು ಬೀಳುವುದು ಜಾಸ್ತಿ. ಅವರಿಗೆ ಬಿದ್ದ ಕನಸಿನ ಬಗ್ಗೆ ನಾನು ದಿನಾ ಬೆಳಗ್ಗೆ ತಿಂಡಿ ತಿನ್ನುವಾಗ ಇಲ್ಲವೇ ಮಧ್ಯಾಹ್ನ ಊಟ ಮಾಡುವಾಗ ಅಥವಾ ಪತ್ರಿಕೆ ಓದುವಾಗಲೋ ಕೇಳುತ್ತಿದ್ದೆ. ಅವರ ಕನಸು ಕೇಳುವುದು, ಅವರು ಅತಿ ಉತ್ಸಾಹದಿಂದ ಅದನ್ನು ಸ್ವಾರಸ್ಯವಾಗಿ ಹೇಳುವುದು ನನಗೆ ಬಹಳ ಇಷ್ಟದ ಕಾರ್ಯ.  ಒಮ್ಮೊಮ್ಮೆ ಉತ್ಸಾಹದಿಂದ ಬಿದ್ದ ಕನಸನ್ನು ಹೇಳುತ್ತಿದ್ದರು. ಕೆಲವೊಮ್ಮೆ, ಎಲ್ಲ ಅರ್ಧಂಬರ್ಧ ಕನಸು, ಇಲ್ಲವೇ ಕೆಟ್ಟ ಕನಸು, ಹೇಳುವಂತದ್ದಲ್ಲ ಎನ್ನುತ್ತಿದ್ದರು..  ಲೆಕ್ಕವಿಲ್ಲದಷ್ಟು ಕನಸು ಅವರಿಗೆ ಬಿದ್ದಿತ್ತು. ಅವುಗಳಲ್ಲಿ ಎಷ್ಟೋ ಕನಸನ್ನು ಹೇಳಿದ್ದರು. ಕನಸು ಬಹಳ ಸ್ವಾರಸ್ಯವಾಗಿರುತ್ತಿದ್ದುವು. ಅವನ್ನೆಲ್ಲ ದಾಖಲಿಸಿದ್ದರೆ ಪುಟಗಟ್ಟಲೆ ಆಗಿರುತ್ತಿತ್ತು. ಇಷ್ಟು ಕನಸುಗಳನ್ನು ನಾನು ಒಂದು ಡೈರಿಯಲ್ಲಿ ಬರೆದಿಟ್ಟಿದ್ದೆ . ಇತ್ತೀಚೆಗೆ ಆ ಡೈರಿ ತೆರೆದಾಗ ಕನಸು ಮೇಲೋಗರ ಓದಿದೆ. ಓದಿ ಖುಷಿಯಾಗಿ ಅದನ್ನು ಇಲ್ಲಿ ಹಾಕಿದೆ.

೧) ಡೆಂಗ್ಯೂ ಜ್ವರ ಹರಡಲು ಕಾರಣರಾರು?

 ಈ ಡೆಂಗ್ಯೂ ಭಾರತದಲ್ಲಿ ಹೇಗೆ ಹರಡುತ್ತದೆ ಎಂದು ನನಗೆ ಗೊತ್ತಾಯಿತು.

 ಹೌದಾ? ಹೇಗೆ ಹರಡುತ್ತದೆ ಇದು ಎಂದು ಕುತೂಹಲದಿಂದ ಕೇಳಿದೆ.

  ವೈರಾಣು ಹರಡಲು ಕಾರಣಕರ್ತರು ಪರದೇಶದವರು. ಪರದೇಶದವರು ಔಷಧಿ ಎಲ್ಲ ಕಂಡು ಹಿಡಿಯುತ್ತಾರಲ್ಲ. ಡೆಂಗ್ಯೂಗೆ ಕಾರಣವಾಗುವ ವೈರಸ್ಸನ್ನು ಭಾರತಕ್ಕೆ ಬರುವವರಲ್ಲಿ ಹೇಗೋ ಕಳುಹಿಸುತ್ತಾರೆ. ಮತ್ತೆ ಅವರು ಕಂಡು ಹಿಡಿದ ಔಷಧಿ ವ್ಯಾಪಾರವಾಗಲು ಕಂಡುಕೊಂಡ ದಾರಿ ಇದು. ಇಲ್ಲಾಂದರೆ ಮೊದಲೆಲ್ಲ ಈ ಡೆಂಗ್ಯೂ ಚಿಕನ್ ಗುನ್ಯ ಇತ್ಯಾದಿ ಏನೇನೋ ಹೆಸರಿನ ಜ್ವರ ಇರಲೇ ಇಲ್ಲ. ೧೪.೯ ೨೦೧೫ರಂದು ಬೆಳಗ್ಗೆ ನಮ್ಮತ್ತೆ ಹೇಳಿದರು.

 ಈ ಕನಸು ಓದಿದಾಗ ನನಗೆ ಪರಮಾಶ್ಚರ್ಯವಾಯಿತು. ಈಗ ಚೀನದಿಂದ ಬಳುವಳಿಯಾಗಿ ಬಂದ ಕೊರೊನಾ ವೈರಾಣು  ಹೀಗೆಯೇ ನುಸುಳಿದ್ದು ತಾನೆ!

೨) ಅಡೆತಡೆ

ಮೇಲೆ ಮೇಲೆ ಹೋಗುತ್ತಿದ್ದೆ. ಆಗ ಏನೋ ತಡೆ ಎದುರಾಯಿತು.

ಮೇಲಾ? ಹೇಗೆ ಎಲ್ಲಿಗೆ ಹೋಗುತ್ತಿದ್ದಿರಿ? ತಡೆ ಏನು?

ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೆ. ಆಗ ಕೆಳಗಿನಿಂದ ಬಾಂಬ್ ಹಾಕಿದರು. ಹೊಗೆ ಮೇಲೇರಿ ಬಂತು. ನಾನು ಇಳಿಯಲು ಪ್ರಯತ್ನಿಸುತ್ತೇನೆ. ಆಗುತ್ತಿಲ್ಲ. ಕೂಗಲೂ ಆಗುತ್ತಿಲ್ಲ.

ಹೌದಾ? ಮುಂದೆ ಏನಾಯಿತು?

ಎಚ್ಚರ ಆಗೋಯಿತು. ಇಳಿಯಲು ಪ್ರಯತ್ನಿಸುವ ಭರದಲ್ಲಿ ಮಂಚದಿಂದ ಬೀಳದೆ ಇದ್ದದ್ದು ಪುಣ್ಯ!

೧೪.೫.೨೦೧೫ರಂದು ಬೆಳಗ್ಗೆ ನಮ್ಮತ್ತೆ ಹೇಳಿದರು.

 

೩) ಬಂದಿಳಿದ ಮೊಮ್ಮಗಳು

ಬೆಳಗ್ಗೆ ೪.೩೦ಕ್ಕೆ ಮನೆಯ ಕರೆಗಂಟೆ ಸದ್ದಾಯಿತು. ಓಹೋ ಯಾರು ಬಂದದ್ದು? ನಮಗೆ ಕೇಳಲೇ ಇಲ್ಲ.

ಎದ್ದು ಹೋಗಿ ಬಾಗಿಲು ತೆರೆದರೆ ಮೊಮ್ಮಗಳು ಅಕ್ಷರಿ ಹಲ್ಲು ಕಿರಿಯುತ್ತ ನಿಂತದ್ದು ಕಾಣಿಸಿತು. ಪರಮಾಶ್ಚರ್ಯವಾಗಿ ನೀನು ಹೇಗೆ ಬಂದೆ? ಎಂದು ಕೇಳಿದೆ. ಯಾರಿಗೂ ಹೇಳದೆ ಸರ್ಪ್ರೈಸ್ ಮಾಡಬೇಕೆಂದು ಅವಳು ಅಮೇರಿಕಾದಿಂದ ಬಂದದ್ದಂತೆ. ಒಳ ಬಂದವಳೇ ಅಜ್ಜಿ, ನಾನು ನಿನ್ನ ಕೋಣೆಯಲ್ಲೇ ನಿನ್ನ ಪಕ್ಕವೇ ಮಲಗುತ್ತೇನೆ. ಸುಸ್ತಾಗಿದೆ ಎಂದು ಮಲಗಿದಳು.

ಬೆಳಗ್ಗೆದ್ದು ನೋಡುತ್ತೇನೆ. ಮೊಮ್ಮಗಳು ನನ್ನ ಬಳಿ ಮಲಗಿದ್ದು ಕಾಣಲೇ ಇಲ್ಲ!

ಇಸವಿ ೨೦೧೫. ತಾರೀಕು ನಮೂದಿಸಿರಲಿಲ್ಲ.

 

೪) ಅಮ್ಮನ ಕರೆ

ಒಂದೇ ಸಮನೆ ನನ್ನನ್ನು ಕರೆದದ್ದು ಕೇಳಿತು. ಹೋಗಿ ಬಾಗಿಲು ತೆರೆದರೆ ಏನಾಶ್ಚರ್ಯ! ಬಾಗಿಲ ಬಳಿ ನನ್ನಮ್ಮ ನಿಂತಿದ್ದಳು. ಬಾಗಿಲು ತೆರೆದೆ. ಒಳಗೆ ಬಾ ಎಂದು ಕರೆದರೆ, ನಾನು ಬರವುದಿಲ್ಲ, ನೀನೇ ಬಾ ಎಂದು ಕರೆದಳು. ಎಷ್ಟು ಒತ್ತಾಯಿಸಿದರೂ ಒಳಗೆ ಬರಲೇ ಇಲ್ಲ. ಬಾ ನೀನು ಎಂದು ಒತ್ತಾಯದಿಂದ ಅವಳ ಕೈ ಹಿಡಿಯಲು ಹೋದೆ. ಆಗ ಎಚ್ಚರವಾಗಿ ಹೋಯಿತು! ಇದು ೧೨.೧.೨೦೧೬ರಂದು ಬೆಳಗ್ಗೆ ಎದ್ದು ನಮ್ಮತ್ತೆ ಹೇಳಿದ ಸ್ವಪ್ನಲಹರಿ 

೫) ಅಡುಗೆ ತಯಾರಿ

ನಿನ್ನ ರಾತ್ರೆ ಸರಿಯಾಗಿ ನಿದ್ದೆಯೇ ಬರಲಿಲ್ಲ. ನೆಂಟರು ಬರುತ್ತಾರೆ, ಅಡುಗೆಯಾಗಬೇಕಲ್ಲ ಎಂದು ಬೆಳಗ್ಗೆ ಬೇಗ ಎದ್ದು ಎರಡೆರಡು ಬಗೆಯ ತರಕಾರಿ ಹೆಚ್ಚಿ ಬೇಯಿಸಿಟ್ಟೆ. ತೆಂಗಿನ ಕಾಯಿ ಹೆರೆದು ರುಬ್ಬುವ ಕಲ್ಲಲ್ಲಿ ಬೀಸಿಟ್ಟೆ. ಒಂದು ಒಲೆಯಲ್ಲಿ ಸಾಂಬಾರು, ಇನ್ನೊಂದು ಒಲೆಯಲ್ಲಿ ಮಜ್ಜಿಗೆಹುಳಿ ಕುದಿಯಲಿಟ್ಟೆ. ಎಷ್ಟು ಹೊತ್ತಾದರೂ ಮಜ್ಜಿಗೆ ಹುಳಿ ಕುದಿಯುತ್ತಿಲ್ಲವೇಕೆ? ಏನಾಯಿತು? ಗ್ಯಾಸ್ ಮುಗಿಯಿತೆ? ಎಂದು ಚಿಂತಿಸುತ್ತಿರಬೇಕಾದರೆ ಗಡಿಯಾರ ಟಣ್ ಎಂದು ಬಾರಿಸಿದ ಸದ್ದಿಗೆ ಎಚ್ಚರವಾಯಿತು.

 ೧೬.೧೨.೨೦೧೫ರಂದು ಬೆಳಗ್ಗೆ ೮೬ರ ಹರೆಯದ ನಮ್ಮತ್ತೆ ಹೇಳಿದ ಅವರಿಗೆ ಬಿದ್ದ ಕನಸು ಇದು! 

೬) ಸುಸ್ತು

ಅಬ್ಬ ಸಾಕೋ ಸಾಕಾಯಿತು. ನಡೆದೂ ನಡೆದೂ ಸುಸ್ತಾಯಿತು. ಎಷ್ಟು ನಡೆಸಿದರು ಬೀದಿ ಬೀದಿಯಲ್ಲಿ. ಅಲ್ಲಿ ಹೋಗೋಣ, ಇಲ್ಲಿ ಹೋಗೋಣ ಎಂದು. ಕಾಲು ನೋವು ಎಂದರೂ ಕೇಳಲಿಲ್ಲ. ಇನ್ನು ನಡೆಯಲು ಸಾಧ್ಯವಿಲ್ಲವೆಂದು ಒಂದೆಡೆ ಕುಳಿತೇ ಬಿಟ್ಟೆ. ಇನ್ನು ಎಷ್ಟು ಹೊತ್ತು ಇಲ್ಲೇ ಕುಳಿತಿರುವುದು ಎಂದು ಏಳಲು ಹೋದೆ. ಆಗ ಸೊಳ್ಳೆಪರದೆ ಅಡ್ಡ ಬಂದು ಪೂರ್ಣ ಎಚ್ಚರವಾಯಿತು! ಇದು ೧೬-೧೨-೨೦೧೫ರಂದು ದಾಖಲಿಸಿರುವುದು.

೭) ಅರೆಸ್ಟ್

ಪೊಲೀಸರು ನನ್ನ ಮೊಮ್ಮಗನನ್ನು ಅರೆಸ್ಟ್ ಮಾಡಿದರು. ಅವನಲ್ಲಿ ತುಂಬ ಹಣವಿದೆ ಎಂದು ಆಪಾದಿಸಿ ಅರೆಸ್ಟ್ ಮಾಡಿದರು. ಆ ವಿಷಯ ನನಗೆ ಗೊತ್ತಾಯಿತು. ನಾನು ಹೋಗಿ ಹೇಳಿದೆ. ಅವನು ಇಂಥವರ ಮೊಮ್ಮಗ, ಸುಮ್ಮನೆ ಅವನನ್ನು ಬಂಧಿಸಬೇಡಿ.

ಓ ನಮಗೆ ಗೊತ್ತಾಗಲಿಲ್ಲ. ನೀನು ಇಂಥವರ ಮೊಮ್ಮಗನೋ? ನಮ್ಮಿಂದ ತಪ್ಪಾಯಿತು. ಎಂದು ನುಡಿದು ಅವನನ್ನು ಬಿಡುಗಡೆ ಮಾಡಿದರು. ಅವನಲ್ಲಿದ್ದ ಹಣವನ್ನು ಬ್ಯಾಂಕಿಗೆ ಕಟ್ಟಿದ. ಅಬ್ಬ ಬಿಡುಗಡೆಯಾಯಿತಲ್ಲ ಎಂದು ನೆಮ್ಮದಿಯಿಂದ ಮನೆಗೆ ಹೊರಡಲು ತಿರುಗಿದಾಗ ಗೋಡೆ ಬಡಿದು ಎಚ್ಚರವಾಯಿತು!

ಈ ಕನಸನ್ನು ದಾಖಲಿಸಿರುವುದು ೧೬.೧೨.೨೦೧೫


 (ಸುರಹೊನ್ನೆ ೨೦೨೦ ಜುಲಾಯಿ)

http://surahonne.com/?p=28343


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ