ಚಾರಣ ಎಂಬ ಪದ ಉಚ್ಚರಿಸುವುದೇ ಮನಕ್ಕೆ ಮುದ ಕೊಡುತ್ತದೆ. ಇನ್ನು ಚಾರಣ ಕೈಗೊಡರಂತೂ ಮೈ ಮನ ಉಲ್ಲಾಸಗೊಳ್ಳುತ್ತದೆ. ಯೂಥ್ ಹಾಸ್ಟೆಲ್ ಮೈಸೂರಿನ ಗಂಗೋತ್ರಿ ಘಟಕದಿಂದ ಈ ಬಾರಿ ಯಾವ ಸ್ಥಳಗಳಿಗೆಲ್ಲ ಚಾರಣ ಹಮ್ಮಿಕೊಂಡಿದ್ದಾರೆ ಎಂದು ಪ್ರತೀ ತಿಂಗಳ ಮೊದಲ ದಿನ ಚಾತಕ ಪಕ್ಷಿಗಳಂತೆ ಕಾಯುವುದರಲ್ಲಿ ಏನೋ ಸುಖವಿದೆ.
ತಾರೀಕು ೩೧-೧-೨೦೨೧ರಂದು ನಾವು ಮೈಸೂರಿನಿಂದ ಶಕುನಗಿರಿಗೆ ಹೊರಟೆವು. ಬೆಳಗ್ಗೆ ೫.೧೫ರಿಂದ ೫.೩೦ ಒಳಗೆ ಎಲ್ಲರೂ ವಾರ್ತಾಭವನದೆದುರು ಹಾಜರಾಗಬೇಕೆಂದು ಸೂಚನೆ ಕೊಟ್ಟಿದ್ದರು. ಆದರೆ ನಾಲ್ಕೈದು ಮಂದಿ ಆ ಸೂಚನೆ ಪಾಲಿಸದೆ ಇದ್ದದ್ದರಿಂದ ೫.೩೦ಕ್ಕೆ ಹೊರಡಬೇಕಾದದ್ದು ೫.೫೫ ದಾಟಿತ್ತು.
ಸಮಯಕ್ಕೆ ಬೆಲೆ ಕೊಡುವುದನ್ನು ನಾವು ಕಲಿಯಲು ಇನ್ನೆಷ್ಟು ಸಮಯ ಹಿಡಿಯಬಹುದೊ? ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಲ್ಲಿ ಒಪ್ಪಂದದ ಮೇರೆಗೆ ನಾವು ೫೩ ಮಂದಿ, ಸಾರಥಿ ಅಂತೋಣಿಯ ನೇತೃತ್ತ್ವದಲ್ಲಿ ಹೊರಟೆವು. ೩೧ ಮಂದಿ ಹೆಣ್ಣುಮಕ್ಕಳು, ೨೨ ಮಂದಿ ಗಂಡುಮಕ್ಕಳು. ಹೆಣ್ಣು ಮಕ್ಕಳೇ ಸ್ಟ್ರಾಂಗು!
ಚನ್ನಪಟ್ಟಣದಲ್ಲಿ ಬಸ್ಸಲ್ಲೇ ಉಪ್ಪಿಟ್ಟು, ಪುಳಿಯೋಗರೆ ಇದ್ದ ಎರಡು ಡಬ್ಬಿ ನಮಗೆ ಸರಬರಾಜಾಯಿತು. ತಿಂಡಿ ಬಹಳ ರುಚಿಯಾಗಿತ್ತು. ಅರಸೀಕೆರೆಯಲ್ಲಿ ಬಸ್ ನಿಲ್ದಾಣದ ಹೊಟೇಲಿನಲ್ಲಿ ಚಹಾ,ಕಾಫಿ. ೪.೩೦ ಗಂಟೆ ಪಯಣಿಸಿ ನಾವು ಚಿಕ್ಕಮಗಳೂರು
ಜಿಲ್ಲೆಯ ಸಖರಾಯಪಟ್ಟಣದ ಅಯ್ಯನಕೆರೆ ಹಿಂಭಾಗ ತಲಪಿದೆವು. ಬಸ್ಸಿಳಿದು, ಪರಸ್ಪರ ಪರಿಚಯ ವಿನಿಮಯವಾಗಿ, ಕಿತ್ತಳೆ, ಚಿಕ್ಕಿ ಪಡೆದು ೧೧.೧೫ಕ್ಕೆ ಶಕುನಾದ್ರಿಯೆಡೆಗೆ ಮುನ್ನಡೆದೆವು. ಅರುಣ ನಮ್ಮ ಮಾರ್ಗದರ್ಶಕ. ಅರುಣ ಪಿಯಿಸಿವರೆಗೆ ವಿದ್ಯಾಭ್ಯಾಸ ಮಾಡಿ ಮುಂದೆ ಓದಲಿಚ್ಛಿಸದೆ ಇರುವ ಎರಡೆಕ್ರೆ ಜಮೀನಿನಲ್ಲಿ ಕೃಷಿ ಮಾಡುತ್ತಿರುವನಂತೆ.
ಮುಂದೆ ಸಾಗುತ್ತಿದ್ದಂತೆ ಕೆಲವೆಡೆ ಕೈತಾಂಗು ಹಾಕಿದ್ದು ಕಂಡು ಬಂತು. ಕುರುಚಲು ಸಸ್ಯ, ಮುಳಿ ಹುಲ್ಲು, ಅಲ್ಲಲ್ಲಿ ಸಣ್ಣ ಮರಗಳು ಕಂಡುವು. ಗಾಳಿ ತಣ್ಣಗೆ ಬೀಸುತ್ತಿದ್ದುದರಿಂದ ಸೂರಪ್ಪನ ತಾಪ ತಡೆದುಕೊಳ್ಳಲು ಸಾಧ್ಯವಾಗಿತ್ತು. ನಿಧಾನವಾಗಿಯೇ ಬೆಟ್ಟ ಏರುತ್ತ ಸಾಗಿದೆವು. ಕೆಲವೆಡೆ ಏರು ಚೆನ್ನಾಗಿಯೇ ಇತ್ತು. ಹಾಗಾಗಿ ಅಲ್ಲಲ್ಲಿ ನಿಲ್ಲದೆ ಗತ್ಯಂತರವಿರಲಿಲ್ಲ. ಕೆಲವೆಡೆ ಸಮತಟ್ಟು ದಾರಿ. ಆಗ ಏರಿದ ಏದುಸಿರು ಸರಿಯಾದ ಸ್ಠಿತಿಗೆ ಮರಳಿ, ನಡಿಗೆ ವೇಗ ಪಡೆದುಕೊಳ್ಳಲು ಸಹಾಯವಾಗುತ್ತಿತ್ತು. ಅರ್ಧ ಬೆಟ್ಟ ಹತ್ತಿ ಹಿಂದೆ ತಿರುಗಿ ನೋಡಿದಾಗ ವಿಶಾಲವಾದ ಅಯ್ಯನ ಕೆರೆ ಬಹಳ ಸುಂದರವಾಗಿ ಕಾಣುತ್ತಲಿತ್ತು.
ಅರ್ಢ ದಾರಿ ಕ್ರಮಿಸಿದಾಗ ನೀರಿನ ಹೊಂಡ ಕಾಣಿಸಿತು. ಅಲ್ಲಿ ಭಕ್ತಾದಿಗಳು ಆನೀರನ್ನು ತಲೆಮೇಲೆ ಸುರುದುಕೊಂಡು ಮುಂದೆ ಹೋಗುವುದು ಕಂಡಿತು. ದೇವರ ತೀರ್ಥವಂತೆ ಅದು. ಅಲ್ಲಿರುವ ಮರಕ್ಕೆ ಬಟ್ಟೆ ಕಟ್ಟಿರುವುದು ಕಂಡಿತು. ಏನೆಲ್ಲ ಹರಕೆಗಳಿವೆಯೋ?
ಹಾಸನ ಜಿಲ್ಲೆಯಿಂದ ಬಂದ ಕೆಲವು ಭಕ್ತಾದಿಗಳು ಅಲ್ಲಿದ್ದರು. ಅವರ ಮನೆದೇವರಂತೆ. ಹಾಗಾಗಿ ಅವರು ಅಲ್ಲಿಗೆ ಬರುತ್ತಿರುತ್ತಾರಂತೆ. ಅದೂ ಚಪ್ಪಲಿ ಹಾಕದೆ ಬರಿಗಾಲಿನಲ್ಲಿ ಬರಬೇಕಂತೆ. ಅವರ ಭಕ್ತಿ ದೊಡ್ಡದು.
ಈ
ದೇವಾಸ್ಥಾನದ ಬಗ್ಗೆ ಇರುವ ಕಥೆ ಹೀಗಿದೆ: ಆಂಜನೇಯನು ಸಂಜೀವಿನಿ ತರಲು ಚಂದ್ರದ್ರೋಣ ಪರ್ವತಕ್ಕೆ
ಹೋಗುವಾಗ, ದಾರಿ ಮಧ್ಯೆ ನೇಮಿ ರಾಕ್ಷಸನ ಮಾಯಾಜಾಲಕ್ಕೆ ಸಿಲುಕಿಕೊಳ್ಳುತ್ತಾನೆ. ಇದನ್ನು ರಾಮನು
ತನ್ನ ದಿವ್ಯದೃಷ್ಟಿಯಿಂದ ತಿಳಿದು, ಆಂಜನೇಯನಿಗೂ ತಿಳಿಸುತ್ತಾನೆ. ರಾಮ ಶಕುನ ಹೇಳಿದ ಸ್ಥಳವೇ ಈ
ಶಕುನಾದ್ರಿ ಎಂಬುದು ಪ್ರಚಲಿತವಾಯಿತು. ಜಂಗಮರು
ಇಲ್ಲಿ ಶಕುನ ಹೇಳುತ್ತಿದ್ದರೆಂಬುದು ಪ್ರತೀತಿ.
ದೇವಾಲಯ ನೋಡಿ ನಾವು ಬೆಟ್ಟದ ತುದಿಗೆ ಮುನ್ನಡೆದೆವು. ಬೆಟ್ಟದ ಮೇಲೆ ನಿಂತು ಸುತ್ತಲೂ ನೋಡಿದಾಗ ಓಹ್, ನಾವು ಎಷ್ಟು ಎತ್ತರದಲ್ಲಿದ್ದೇವೆ. ನಮ್ಮ ನಾಡು ಅದೆಂತ ಸೊಗಸು. ಪ್ರಕೃತಿಯ ಈ ವೈವಿಧ್ಯ ಅದೆಷ್ಟು ವಿಸ್ಮಯ ಎಂಬ ಭಾವನೆ ಮನದಲ್ಲಿ ಬಂತು. ಮೂರು ಕೆರೆಗಳು ಅಲ್ಲಿಂದ ಕಾಣುತ್ತವೆ. ಎಡಕ್ಕೆ ಬುಕ್ಕರಾಯನ ಕೆರೆ, ಮಧ್ಯದಲ್ಲಿ ಅಯ್ಯನ ಕೆರೆ, ಬಲಭಾಗಕ್ಕೆ ಮದಗದ ಕೆರೆ. ಈ ದೃಶ್ಯ ಬಲು ರಮಣೀಯ. ಸುತ್ತಲೂ ಬೆಟ್ಟಗಳು, ಮಧ್ಯ ವಿಶಾಲವಾದ ಕೆರೆ, ಹಸುರುಡುಗೆ ಹೊದ್ದ ಮರಗಳು ನೋಡುತ್ತ ನಿಂತರೆ ಹೊತ್ತು ಸರಿಯುವುದು ಗಮನಕ್ಕೇ ಬರಲೊಲ್ಲದು.
ಅಲ್ಲಿ ಕುಳಿತು ಕಿತ್ತಳೆ ತಿಂದು, ನೀರು ಕುಡಿದು, ಪಟ ತೆಗೆಸಿಕೊಂಡು ೨.೧೫ಕ್ಕೆಕೆಳಗೆ ಇಳಿಯಲು ತೊಡಗಿದೆವು. ನಾವು ಹತ್ತಿಪತ್ತು ಮಂದಿ ಬಂದಿದ್ದೆವಷ್ಟೆ. ಬಾಕಿದ್ದವರು ಇನ್ನೂ ಬಂದಿರಲಿಲ್ಲ. ನಾವು ಇಳಿದು ಬರುವಾಗ ದೇವಾಲಯದ ಬಳಿ ಇತರರು ಬರುವುದು ಕಂಡಿತು. ಇನ್ನು ಇವರೆಲ್ಲ ಹಿಂದಕ್ಕೆ ಬರಲು ಸಾಕಷ್ಟು ಸಮಯ ಹಿಡಿಯಬಹುದು ಎಂದು ಆತಂಕವಾಯಿತು.
ಬೆಂಕಿಯ ಕೆನ್ನಾಲಗೆ ವ್ಯಾಪಿಸಿದಾಗ
ನಾವು ಇಳಿದು ಬರುತ್ತಿದ್ದಾಗ, ಅಂತರಗಂಗೆ ಕಡೆ ಹೋದ ಸ್ಥಳೀಯರು,
ಅರ್ಚಕರು, ಬೆಂಕಿ ಈ ಗುಡ್ಡಕ್ಕೂ ವ್ಯಾಪಿಸುತ್ತ, ಇದೆ, ಉಶಾರಾಗಿ ಬನ್ನಿ, ಬೆಂಕಿ ಇದ್ದ ಕಡೆ ದೂರ
ನಿಲ್ಲಿ ಎಂದು ಹೇಳಿದರು. ಅಯ್ಯೊ, ಮೇಲಿದ್ದವರ ಕತೆ ಏನು? ಎಂದು ಮೊಬೈಲ್ ಕರೆ ಮಾಡಿ ವಿಷಯ
ತಿಳಿಸಿದೆವು. ನಾವು ಬೆಟ್ಟದ ಮೇಲಿದ್ದಾಗ ಎದುರು ಭಾಗದ ಬೆಟ್ಟದಲ್ಲಿ ಹೊಗೆ ಕಾಣಿಸಿತ್ತು. ಯಾರೋ
ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಎಂತ ಹೃದಯಹೀನರಿರವರು ಎಂದು ಬೈದುಕೊಂಡಿದ್ದೆವು. ಎಷ್ಟು ಬೇಗ
ಬೆಂಕಿಯ ಕೆನ್ನಾಲಿಗೆ ಇಲ್ಲಿಗೂ ಕೂಡ ವ್ಯಾಪಿಸಿತು ಎಂದು ಹೇಳಿಕೊಳ್ಳುತ್ತ, ಲಗುಬಗೆಯಿಂದ ಬೆಟ್ಟ
ಇಳಿದೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ನಮ್ಮ ಕಣ್ಣೆದುರೇ ಹುಲ್ಲು ಸುಡುತ್ತ ಬೆಂಕಿ ಹರಡುತ್ತ
ಮುಂದೆ ಮುಂದೆ ಹೋಗುವುದನ್ನು ನೋಡಿದೆವು. ಬೆಂಕಿ ತನ್ನ ಒಡಲೊಳಗೆ ಎಲ್ಲವನ್ನೂ ನುಂಗುವುದನ್ನು
ಭಯದಿಂದ ನೋಡಿದೆವು. ಬೆಟ್ಟದ ದಾರಿಗೆ ಕಲ್ಲುಗಳು ಹಾಕಿದ್ದರಿಂದಲೂ, ಕಲ್ಲಿನ ಎರಡೂ ಕಡೆ ಹುಲ್ಲು
ಹೆಚ್ಚಾಗಿ ಹರಡಿರದೆ ಇದ್ದ ಕಾರಣ ಬೆಂಕಿ ಬಲು ಬೇಗ ಆರಿತ್ತು. ಹಾಗಾಗಿ ನಮಗೆ ನಡೆಯಲು
ಸಾಧ್ಯವಾಯಿತು. ಉದ್ದ ಹುಲ್ಲು ಇರುವ ಕಡೆ ಬೆಂಕಿ ಹರಡುವುದನ್ನು ನೋಡಿ, ಅಯ್ಯೊ, ಚರಾಚರಜೀವಿಗಳು ಪ್ರಾಣ
ಕಳೆದುಕೊಳ್ಳುತ್ತವಲ್ಲ, ನಮ್ಮ ಕಣ್ಣೆದುರೇ ಅವುಗಳು ವಿಲವಿಲನೆ ಒದ್ದಾಡುವುದನ್ನು ನೋಡಿ
ಸಂಕಟಪಟ್ಟೆವು. ದಾರಿಯಲ್ಲಿ ಸೊಪ್ಪಿನಿಂದ ಬೆಂಕಿ ನಂದಿಸಲು ಕೈಜೋಡಿಸಿದೆವು. ಗಾಳಿ ಜೋರಾಗಿ
ಇಲ್ಲದಿದ್ದರಿಂದಲೂ, ಹುಲ್ಲು ಎತ್ತರ ಬೆಳೆದಿಲ್ಲವಾದ್ದರಿಂದಲೂ ನಮಗೆ ಬೆಂಕಿ ಮಧ್ಯೆ ಹಿಂದಕ್ಕೆ
ಬರಲು ಏನೂ ತೊಂದರೆಯಾಗಲಿಲ್ಲ. ಅರಣ್ಯ ಪಾಲಕರು ಅಲ್ಲಲ್ಲಿ ನಿಂತು ಬೆಂಕಿ ನಂದಿಸುವ ಹರಸಾಹಸ ಮಾಡುತ್ತಿದ್ದರು.
ಮನುಜನಷ್ಟು ಕ್ರೂರ ಪ್ರಾಣಿಗಳು ಬೇರೆ ಇಲ್ಲ ಎಂದು ಪದೇ ಪದೇ ನಿರೂಪಿಸುತ್ತಲೇ ಇರುತ್ತವೆ ಇಂಥ ಹೀನ
ಘಟನಾವಳಿಗಳು. ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬಿದ್ದ ಘಟನೆಗಳನ್ನು ಪತ್ರಿಕೆಗಳಲ್ಲಿ ಓದಿದ್ದೆವು.
ಇಲ್ಲಿ ಅದನ್ನು ಪ್ರತ್ಯಕ್ಷ ಕಂಡು ನಾವೇ ಸಾಕ್ಷಿಯಾದದ್ದು ವಿಪರ್ಯಾಸ. ಪ್ರಕೃತಿಯಲ್ಲಿ ನೀರು ಗಾಳಿ
ಬೆಂಕಿ ಈ ಮೂರು ಜೋರಾಗಿ ವಿಕೋಪಗೊಂಡರೆ ಮನುಜನಿಂದ ಏನೂ ಮಾಡಲಾಗದು. ಪ್ರಕೃತಿ ಮುಂದೆ ಮಾನವ ಸಣ್ಣ
ಕ್ರಿಮಿ ಅಷ್ಟೇ ಎಂದು ಆಗಾಗ ಪ್ರಕೃತಿ ಎಚ್ಚರಿಸುತ್ತಲೇ ಇರುತ್ತದೆ. ಆದರೆ ಮಾನವ ಮಾತ್ರ ಪಾಟ
ಕಲಿಯುವುದೇ ಇಲ್ಲ. ಪ್ರತೀ ವರ್ಷವೂ ಈ ಬೆಟ್ಟಕ್ಕೆ ಬೆಂಕಿ ತಪ್ಪಿದ್ದಲ್ಲ, ಅದೇನೋ ಹರಕೆ ಅಂತ
ಭಕ್ತಾದಿಗಳೇ ಬೆಂಕಿ ಹಾಕುತ್ತಾರೆ ಎಂದು ಊರವರು ಮಾತಾಡುವುದು ಕೇಳಿಸಿತು.
ಜೀವನಾಡಿ ಅಯ್ಯನಕೆರೆ
ಬಸ್ಸೇರಿ ನಾವು ಅಲ್ಲಿಂದ ಸುಮಾರು ಏಳೆಂಟು ಕಿಮೀ ಬಳಸಿಕೊಂಡು ಅಯ್ಯನಕೆರೆಯ
ಮುಂಭಾಗಕ್ಕೆ ಬಂದೆವು. ಆಗ ತಾನೆ ದಿನಕರ ತನ್ನ ಎಂದಿನ ಕಲಾಪ ಮುಗಿಸಿ ವಿಶ್ರಾಂತಿಯತ್ತ ಸಾಗಲು
ತಯಾರಾಗಿದ್ದ. ಅವನು ಹೊರಡುವ ಸುಂದರ ದೃಶ್ಯವನ್ನು
ಕಣ್ಣುತುಂಬಿಕೊಂಡೆವು. ಕೆರೆತುಂಬ ನೀರು,
ನೀರಲ್ಲಿ ಅವನ ತಂಪಾದ ಕಿರಣ ನೀರಿಗೆ ಓಕುಳಿಚೆಲ್ಲಿದಂತೆ ಕಾಣುತ್ತಲಿತ್ತು.
ಸ್ಥಳೀಯ ಯುವಕರು ಈಜುತ್ತಿದ್ದರು. ನಾವು ಪಟ ತೆಗೆಯುತ್ತಿದ್ದೇವೆಂದಾಗ ಡೈವ್ ಹೊಡೆದರು.
ಪ್ರಕೃತಿಯಲ್ಲಿಯ ಈ ಸುಂದರ ಕೆರೆ ಸುತ್ತ ಗುಡ್ಡಗಳನ್ನು ಒಳಗೊಂಡಿದೆ. ೩೬ ಅಡಿ ಇರುವ ಈ
ಕೆರೆ ರಾಜ್ಯದಲ್ಲೇ ಎರಡನೇ ದೊಡ್ಡ ಕೆರೆಯೆಂದು ಹೆಸರು ಗಳಿಸಿದೆ.
ಈ ಕೆರೆ ಬಗ್ಗೆ
ಒಂದು ದಂತಕತೆಯಿದೆ. ಕೆರೆ ಕಟ್ಟಿದಾಗ, ಕೆರೆ ಏರಿ ಎಷ್ಟು ಸಲ ಕಟ್ಟಿದರೂ ಒಡೆದು ಹೋಗುತ್ತಿತ್ತು. ಇದಕ್ಕೆ
ಪರಿಹಾರವೇನು ಎಂದು ಚಿಂತಿಸಿದಾಗ, ಅಲ್ಲಿ ಬಂದ ಜಂಗಮ, ನಾನು ಕೆರೆ ಏರಿಗೆ ಅಡ್ಡಲಾಗಿ
ಕೂರುತ್ತೇನೆ. ನನ್ನ ಮೇಲೆ ಏರಿ ಕಟ್ಟಿ ಎಂದನಂತೆ. ಹಾಗೆ ಏರಿಕಟ್ಟಿದಾಗ, ಕೆರೆ ಏರಿ ಒಡೆಯದೆ
ಭದ್ರವಾಗಿ ನಿಂತಿತಂತೆ. ಕೆರೆಗೆ ಏನು ಹೆಸರಿಡುವುದು ಎಂಬ ಪ್ರಶ್ನೆ ಬಂದಾಗ, ಅಲ್ಲಿ
ಪ್ರತ್ಯಕ್ಷನಾದ ಆ ಜಂಗಮ, ‘ಅಯ್ಯ’ ಎಂದು ಹೆಸರಿಡಿ ಎಂದನಂತೆ.
ಈ ಕೆರೆಯ
ಹಿನ್ನೆಲೆಯಲ್ಲಿ ಕಾಣುವ ಶಕುನಗಿರಿ ಇನ್ನೂ ಹೊತ್ತಿ ಉರಿಯುತ್ತಲೇ ಇರುವುದು ಕಂಡಿತು. ಭವ್ಯ ಬೆಟ್ಟ
ನೋಡಿ, ಈ ಬೆಟ್ಟವನ್ನೇ ನಾವು ಏರಿ ಇಳಿದಿರುವುದ? ಎಂಬ ಉದ್ಗಾರ ಎಲ್ಲರಿಂದ ಕೇಳಿ ಬಂತು.
ಕೆರೆ ನೋಡಿ
ತಣಿದು, ಅಲ್ಲಿಂದ ನಾವು ಬಸ್ ಹತ್ತಿ ಕಲ್ಮರಡಿ ಮಠಕ್ಕೆ ಹೋದೆವು. ಆಗಲೇ ಕತ್ತಲಾವರಿಸಿತ್ತು. ಶಿವನ
ದೇವಾಲಯವಿದೆ. ಅಜ್ಜಯ್ಯ ಎಂಬ ಸಂತನ ಸಮಾದಿ ಮೇಲೆ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಶಿವಲಿಂಗವನ್ನು
ಕಲ್ಮರುದ್ರೇಶ್ವರ ಎಂದು ಹೆಸರಿಸಲಾಗಿದೆ. ಪುಟ್ಟ ದೇಗುಲ, ವಿಮಾನಾದಾಕಾರದಲ್ಲಿದ್ದು ಆಕರ್ಷಣೀಯವಾಗಿದೆ.
ದೇವಾಲಯದ
ವಿಶೇಷತೆಯೆಂದರೆ ಅಲ್ಲಿ ೧೦೦ಕ್ಕೂ ಹೆಚ್ಚು ಬಿಲ್ವಪತ್ರೆ ಗಿಡ ಬೆಳೆಸಿದ್ದಾರೆ. ರಸ್ತೆಯ
ಇಕ್ಕೆಲಗಳಲ್ಲಿ ವಿಶಾಲವಾದ ಬಿಲ್ವಪತ್ರೆ ವನವಿದೆ. ರಾತ್ರಿಯಾದ್ದರಿಂದ ಅದರ ಸೌಂದರ್ಯವನ್ನು
ನೋಡಲಾಗಲಿಲ್ಲ.
ಈ ಚಾರಣ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಿದ ಪರಶಿವಮೂರ್ತಿ ಹಾಗೂ ಆಶೀಶ್ ಅವರಿಗೆ ಎಲ್ಲ ಸಹ ಚಾರಣಿಗರ ಪರವಾಗಿ ಧನ್ಯವಾದ.
ಶಕುನಗಿರಿಗೆ ಹೋಗುವ ದಾರಿ:ಮೈಸೂರು-ಶ್ರೀರಂಗಪಟ್ಟಣ-ಕೆ.ಆರ್.ಪೇಟೆ-ಚನ್ನರಾಯಪಟ್ಟಣ-ಅರಸೀಕೆರೆ-ಬಾಣಾವರ-ಸಖರಾಯಪಟ್ಟಣ-ಶಕುನಗಿರಿ. ಸರಿಸುಮಾರು ೧೮೦ ಕಿಮೀ ಕ್ರಮಿಸಬೇಕು.
ಓದಿ ಖುಷಿ/ ಬೇಸರ ಆತು.
ಪ್ರತ್ಯುತ್ತರಅಳಿಸಿಹೊಸ ವಿಷಯ ಸಿಕ್ಕಿದ್ದಕ್ಕೆ ಖುಷಿ, ಮನುಷ್ಯನ ಕೆಟ್ಟ ಬುದ್ಧಿಗೆ ಬೇಸರ.
ನಾಗಮಲೆ ದಾರಿಲಿ ಕಸದ ರಾಶಿ ನೋಡಿ ಎನಗೂ ಬೇಸರ ಆಗಿತ್ತು.
ತುಂಬಾ ಸುಂದರವಾಗಿ, ಸರಳವಾಗಿ, ಮಾಹಿತಿಗಳೊಂದಿಗೆ ಬರೆದಿರುವಿರಿ. ಧನ್ಯವಾದಗಳು. 'ಚನ್ನಪಟ್ಟಣ' ಬದಲು 'ಚನ್ನರಾಯಪಟ್ಟಣ' ಎಂದು ಹೇಳಬೇಕಿತ್ತಲ್ಲವೇ ?
ಪ್ರತ್ಯುತ್ತರಅಳಿಸಿಸರಿಪಡಿಸಿದೆ. ಧನ್ಯವಾದ
ಅಳಿಸಿ