ಮಂಗಳವಾರ, ಮಾರ್ಚ್ 16, 2021

ದಾಂಡೇಲಿಗೆ ದೌಡು

            ಶಿರ್ವೆ ಗುಡ್ಡದ ಬೆರಗು, ಕೌತುಕದ ಮಾಹಾಮನೆ ಗುಹೆ

ದಾಂಡೇಲಿಗೆ ಚಾರಣ ಹಮ್ಮಿಕೊಂಡಿದ್ದಾರೆ ಎಂಬುದು ತಿಳಿದು ಹುಮ್ಮಸ್ಸು ಗರಿಗೆದರಿತು. ಹೆಸರು ಕೊಟ್ಟು ರೂ.೨೩೦೦ ಕಟ್ಟಿ ನೋಂದಾಯಿಸಿದೆ.  ತಾರೀಕು ೫-೩-೨೦೨೧ರಂದು ರಾತ್ರೆ ೧೦.೩೦ಗೆ ಮೈಸೂರು ಧಾರವಾಡ ಎಕ್ಸ್ ಪ್ರೆಸ್ ರೈಲಿನಲ್ಲಿ ನಾವು ೫೩ ಮಂದಿ ಹುಬ್ಬಳ್ಳಿಗೆ ಹೊರಟೆವು.  ನಾವು ೨೧ ಮಂದಿ ಮಹಿಳೆಯರಿದ್ದೆವು. ಸಮಯಕ್ಕೆ ಸರಿಯಾಗಿ ರೈಲು ಹೊರಟಿತು.

 ಎಂಟರ ನಂಟು

ನಮ್ಮ ಮನೆ ಸಂಖ್ಯೆ ೮, ಅಡ್ಡರಸ್ತೆ, ಮುಖ್ಯ ರಸ್ತೆ ಕೂಡ ೮. ರೈಲಲ್ಲಿ ಸೀಟ್ ಸಂಖ್ಯೆಯೂ ೮ ಸಿಕ್ಕಿರುವುದು ಕಾಕತಾಳೀಯ! ಪಾಯಿಖಾನೆ ಹತ್ತಿರವೇ ಸೀಟ್. ರಾತ್ರಿಯಿಡೀ ವಾಸನೆಯಿಂದ ಬಹಳ ಕಷ್ಟವಾಗಬಹುದು ಎಂದು ಭಾವಿಸಿದ್ದೆ. ಆದರೆ ವಾಸನೆ ಬಂದಿರಲಿಲ್ಲ. ಈಗ ರೈಲು ಬಹಳ ಚೊಕ್ಕವಾಗಿದೆ. ಶೌಚಾಲಯದಲ್ಲಿ ಸದಾ ನೀರು ಇರುತ್ತದೆ. ಕಸದ ಬುಟ್ಟಿಯೂ ಇದೆ. ನಮ್ಮ ಪ್ರಧಾನಿಯವರ ಸ್ವಚ್ಛ ಭಾರತ ಕನಸು ರೈಲಲ್ಲಿ ಸಾಕಾರಗೊಂಡದ್ದನ್ನು ನೋಡಿ ಖುಷಿ ಪಟ್ಟೆವು.

      ರಮಾ  ರೈಲಲ್ಲಿ ಅವರು ಮಲಗುವ  ಸ್ಥಳವನ್ನು ಸ್ಯಾನಿಟೈಸ್ ಮಾಡಿ  ಕೋವಿಡ್ ನಿಯಮವನ್ನು ಸರಿಯಾಗಿ ಪಾಲಿಸಿದರು! ಬೇರೆ ಯಾರೂ ಕೋವಿಡ್ ನಿಯಮ ಪಾಲಿಸಲಿಲ್ಲ!

   ನಮ್ಮ ತಂಡದಲ್ಲಿ ೫೦+ ಅದರಲ್ಲೂ ೭೦+ ವಯಸ್ಸಿನ ಯೂಥ್ಗಳು ಇದ್ದರು. ಅವರ ಉತ್ಸಾಹವೇ ನಮಗೆ ಉಲ್ಲಾಸ. 

ಯಲವಗಿ ನಿಲ್ದಾಣದಲ್ಲಿ ಮೂಡಿದ ಆತಂಕ

 ಬೆಳಗ್ಗೆ ಯಲವಗಿ ನಿಲ್ದಾಣದಲ್ಲಿ ರೈಲು ತಲಪಿದಾಗ, ನಮ್ಮ ಪಕ್ಕದ ಬೋಗಿಯಿಂದ ದಡ್ ಎಂಬ ಶಬ್ದ, ಕುಮಾರ ಎದ್ದೇಳು ಎಂಬ ಆತಂಕದ ಸ್ವರ ಗದ್ದಲ ಕೇಳಿಸಿತು. ಒಬ್ಬಾತ ಸೀಟಿನಿಂದ ಕೆಳಗೆ ಬಿದ್ದಿದ್ದ. ಅವನಿಗೆ ಅಪಸ್ಮಾರ ರೋಗ (ಪಿಟ್ಸ್) ಇದೆಯಂತೆ. ಅದಲ್ಲಿ ಬಾಧಿಸಿತ್ತು. ಅವರು ಯಲವಗಿ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು. ಅವನೊಂದಿಗಿದ್ದ ಹೆಂಗಸು ಆತಂಕದಿಂದ ರೈಲಿನಿಂದ ಕೆಳಗಿಳಿದು ರೈಲ್ವೇ ಗಾರ್ಡಿಗೆ ಮನವಿ ಸಲ್ಲಿಸಿ ರೈಲು ನಿಲ್ಲಿಸಲು ಹೇಳಿ ಅವನನ್ನು ಒಳಗೆ ಕರೆತಂದಳು. ಎಲ್ಲರೂ ಸೇರಿ ಅವನನ್ನು ಎತ್ತಿ ರೈಲಿನಿಂದ ಕೆಳಗಿಳಿಸಿದರು. ಆ ಸಮಯದಲ್ಲಿ ಆ ಹೆಂಗಸಿಗೆ ಅದೆಷ್ಟು ಸಂಕಟ, ಗಾಬರಿ ಆಗಿರಬಹುದೆಂದು ಗ್ರಹಿಸಿಯೇ ಮನ ನೊಂದಿತು. ರೈಲು ಹೊರಟಾಗ ಆ ಯುವಕ ಎದ್ದು ನಿಂತದ್ದು ಕಂಡು ಮನಸು ಸಮಾಧಾನ ಹೊಂದಿತು. ಅಪಸ್ಮಾರ ರೋಗ ಬಹಳ ಕಷ್ಟ. ಯಾವ ಪರಿಸ್ಥಿತಿಯಲ್ಲಿ ಎಲ್ಲೆಂದರಲ್ಲಿ ಯಾವಾಗ ಬರಬಹುದೆಂಬ ಸುಳಿವು ಇಲ್ಲದೆಯೇ ಕಾಣಿಸಿಕೊಳ್ಳುತ್ತದೆ. ಆ ಪರಿಸ್ಥಿತಿಯಲ್ಲಿ ಆ ಹೆಂಗಸು ಧೈರ್ಯದಿಂದ ಸನ್ನಿವೇಶವನ್ನು ನಿಭಾಯಿಸಿದ ರೀತಿ ಮೆಚ್ಚುಗೆಯಾಯಿತು.

 ಬಾಲಭಾಸ್ಕರನ ಹೊಂಗಿರಣ

ತಾರೀಕು ೬-೩-೨೦೨೧ರಂದು ೬.೪೦ಕ್ಕೆ ಬಾಲಭಾಸ್ಕರ ಮೆಲ್ಲನೆ ಕುಡಿನೋಟ ಬೀರುತ್ತ ಮೇಲೆ ಬರುತ್ತಿರುವ ದೃಶ್ಯ ಕಣ್ಣಿಗೆ ಬಹಳ ಹಿತವಾಗಿತ್ತು. ಯಾವಾಗಲೂ ಇಂಥ ಸುಂದರ ದೃಶ್ಯ ಕಾಣಲು ಸಿಗುವುದಿಲ್ಲ. (ಕಾರಣ-ನಾನು ಸೂರ್ಯವಂಶಿ!. ಸೂರ್ಯ ಮೂಡಿ ಮೇಲೆ ಬಂದ ಬಳಿಕವೇ ಎದ್ದೇಳುವುದು)


   ೭.೨೦ಕ್ಕೆ ಸರಿಯಾಗಿ ಹುಬ್ಬಳ್ಳಿ ತಲಪಿ, ರೈಲಿಳಿದು ಹೊರ ಬಂದೆವು. ಅಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಬಸ್ ಹತ್ತಿದೆವು. ೭.೪೫ಕ್ಕೆ ಬಸ್ ಹೊರಟಿತು. ಪಾಂಡುರಂಗ ಕಿಣಿಯವರ ಸ್ನೇಹಿತರು ರೈಲು ನಿಲ್ದಾಣಕ್ಕೆ ಬಂದು ತಿಂಡಿ ಡಬ್ಬ ಕೊಟ್ಟಿದ್ದರು. (ಒಂದು ಡಬ್ಬದಲ್ಲಿ ಪೊಂಗಲ್, ಇನ್ನೊಂದು ಡಬ್ಬದಲ್ಲಿ ಉಪ್ಪಿಟ್ಟು, ಕವರಿನೊಳಗೆ ಎರಡು ಮಸಾಲೆ ವಡೆ) ಬಸ್ಸಿನಲ್ಲಿ ನಮಗೆ ಸರಬರಾಜು ಮಾಡಿದರು.  ತಿಂಡಿ ಬಹಳ ರುಚಿಯಾಗಿತ್ತು. ಮುಂದೆ ದಾರಿಯಲ್ಲಿ ಒಂದು ಪುಟ್ಟ ಹೊಟೇಲಿನ ಬಳಿ ನಿಲ್ಲಿಸಿ ಕಾಫಿ ಚಹಾ ಸೇವನೆ ಆಯಿತು.

ದಾರಿಯುದ್ದಕ್ಕೂ ಅರಣ್ಯ ಕೆಲವೆಡೆ ದಟ್ಟವಾಗಿದ್ದರೆ ಇನ್ನು ಕೆಲವೆಡೆ ಹರಡಿದಂತೆ ಎಲೆ ಉದುರಿಸುವ ಮರಗಳು. ನೋಡಲು ಬಲು ಸೊಗಸು.

  ಬಸ್ಸಲ್ಲಿ ರವಿ ಬಾಹುಸಾರ್ ಅವರ ಹಾಸ್ಯ ರಸಾಯನ ಸವಿಯುತ್ತ ಇದ್ದದ್ದರಿಂದ ದಾರಿ ಸವೆದದ್ದೇ ಗೊತ್ತಾಗಲಿಲ್ಲ. ಚಿಕ್ಕಮ್ಮ ತುಪ್ಪದಲ್ಲಿ ಕರಿದ ಚಕ್ಕುಲಿ ಎಂದು ರವಿ ಚಕ್ಕುಲಿ ಹಂಚಿದರು. ಚಿಕ್ಕಮ್ಮ ಮಾಡಿದ್ದಾದ ಕಾರಣ ಚಕ್ಕುಲಿ ಹಲ್ಲಿನ ಸೆರೆಗೂ ಸಿಕ್ಕದಷ್ಟು ಚಿಕ್ಕದಾಗಿತ್ತು. ದೊಡ್ಡಮ್ಮ ಮಾಡಿದ್ದರೆ ಚಕ್ಕುಲಿ ದೊಡ್ಡದಾಗಿರುತ್ತಿತ್ತು ಎಂದು ನುಡಿದೆ!  ಇನ್ನು ಕೆಲವರು ಕೋಡುಬಳೆ ಬಿಸ್ಕೆಟ್ ಇತ್ಯಾದಿ ಹಂಚಿದರು.

ನಮಗೆ ಶಿರ್ವೆ ಗುಡ್ಡಕ್ಕೆ ದಾರಿ ತೋರಲು ಮಾರ್ಗದರ್ಶಕರು   ಅಣಶಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ ಅಣಶಿ ಊರು ದಾಟಿ ಬಸ್ ಸಾಕಷ್ಟು ಮುಂದೆ ಹೋದಾಗಲೇ ಅರಿವಾಗಿದ್ದು.   ಬಸ್ ನಿಲ್ದಾಣ ಸಿಕ್ಕಲಿಲ್ಲ ಎಂದು! ಊರು ದೊಡ್ಡದಾಗಿದ್ದು ಬಸ್ ನಿಲ್ದಾಣವೂ ಎದ್ದು ಕಾಣುವಂತಿರಬಹುದು ಎಂದು ಭಾವಿಸಿದ್ದು ತಪ್ಪಾಗಿತ್ತು. ಬಸ್ ತಿರುಗಿಸಲು ಅಲ್ಲಿ ಸ್ಥಳಾವಕಾಶವಿರದೆ ಇನ್ನೂ ಮುಂದಕ್ಕೆ ಹೋಗಬೇಕಾಯಿತು. ಕೆಲವರು ಬಸ್ಸಿಳಿದು ಅಣಶಿಯತ್ತ ಹೋಗುತ್ತಿದ್ದ ಜೀಪ್ ನಿಲ್ಲಿಸಿ ಹತ್ತಿ ಹೋದರು. ಅಂತೂ ಮಾರ್ಗದರ್ಶಕರು ಸಿಕ್ಕಿ ಊಟದ ಡಬರಿಯನ್ನೂ ಹಾಕಿಕೊಂಡು ಇನ್ನೊಂದು ಜೀಪಿನಲ್ಲಿ ಬಂದರು. ಪುನಃ ನಮ್ಮ ಬಸ್ ತಿರುಗಿಸಲು ಇನ್ನೂ ಸ್ವಲ್ಪ ಹಿಂದಕ್ಕೆ ಹೋಗಬೇಕಾಯಿತು. ಊಟಡ ಡಬರಿ ಬಸ್ಸಿಗೆ ತುಂಬಿಸಿ ಮಾರ್ಗದರ್ಶಕರೂ ೪ ಮಂದಿ ಹತ್ತಿ ಮೂಮ್ದೆ ಸಾಗಿದೆವು. ಇಷ್ಟೆಲ್ಲ ರಾಮಾಯಣಕ್ಕೆ ಕಾರಣ ಅಲ್ಲಿ ಯಾವ ಮೊಬೈಲ್ ಕಂಪನಿಯದೂ ಸಂಪರ್ಕ ಜಾಲ ಇಲ್ಲದೆ ಇರುವುದು ದೊಡ್ಡ ಕೊರತೆಯಾಗಿತ್ತು.

     ಶಿರ್ವೆಗುಡ್ಡದ ಬೆರಗು

   ನಾವು ಕದ್ರಾ ಅಣೆಕಟ್ಟು ದಾಟಿ, ಮುಂದೆ ಕೈಗಾ ಹಾದು, ಕಾರವಾರ ವಲಯದತ್ತ ಸಾಗಿ ಶಿರ್ವೆ ತಲಪಿದಾಗ ಗಂಟೆ ೨ ದಾಟಿತ್ತು. ಅವರು ಬಿಸಿಬಿಸಿ ಜೋಳದ ರೊಟ್ಟಿ, ಬದನೆ ಎಣ್ಣೆಗಾಯಿ, ಹೆಸರುಕಾಳು ಪಲ್ಯ, ಅನ್ನ ಸಾಂಬಾರು ಎಲ್ಲ ತಂದಿದ್ದರು. ಊಟ್ ಮಾಡಲು ನಮಗೆ ಸಮಯವಿಲ್ಲ. ಗುಡ್ಡ ಹತ್ತಬೇಕು. ಊಟ ಮಾಡಿದರೆ ಗುಡ್ಡ ಹತ್ತುವುದು ಕಷ್ಟ. ಹಾಗಾಗಿ ಜೋಳದ ರೊಟ್ಟಿ ಪಲ್ಯ ಡಬ್ಬಕ್ಕೆ ತುಂಬಿಕೊಂದೆವು. ಅನ್ನ ಸಾರು ಅಲ್ಲೇ ಉಳಿಯಿತು.

ನಾವು ಸಾಗಿದ ದಾರಿ: ಹುಬ್ಬಳ್ಳಿ-ಧಾರವಾಡ-ದಾಂಡೇಲಿ-ಅಣಶಿ-ಕದ್ರಾ-ಕೈಗಾ-ಮಲ್ಲಪುರ-ಶಿರ್ವೆ

ಹುಬ್ಬಳ್ಳಿ- ದಾಂಡೇಲಿ- ೭೩ಕಿಮೀ. ದಾಂಡೇಲಿ-ಅಣಶಿ ೫೪ಕಿಮೀ. ಅಣಶಿ-ಶಿರ್ವೆ ೫೩ಕಿಮೀ. ಕಾರವಾರದಿಂದ ಶಿರ್ವೆಗೆ ೪೦ಕಿಮೀ.

   ನಾವು ಗುಡ್ಡದತ್ತ ಹೊರಟಾಗ ಗಂಟೆ ೨.೩೦ ದಾಟಿತ್ತು. ಬಿಸಿಲ ಕಾವು ಜೋರಾಗಿತ್ತು. ಬೆಟ್ಟ ಇಳಿಯುವ ಹೊತ್ತಲ್ಲಿ ನಾವು ಏರಲು ಹೊರಟಿದ್ದೆವು. ಔಷಧೀಯ ಸಸ್ಯಗಳ ಸಂರಕ್ಷಣಾ ಕ್ಷೇತ್ರ ಶಿರ್ವೆ ಎಂಬ  ಕಮಾನು ಫಲಕವಿರುವ ಸ್ಥಳದಿಂದ ನಮ್ಮ ಪಯಣ ಸಾಗಿತು. ಕಲ್ಲುಮಣ್ಣಿನ ರಸ್ತೆ. ರಸ್ತೆಯ ಎರಡೂ ಬದಿ ದಟ್ಟ ಮರಗಳು. ಆದರೂ ಬಿಸಿಲು ಜೋರಾಗಿಯೇ ಪ್ರಭಾವ ಬೀರಿತ್ತು. ಮುಂದೆ ಸಾಗಿದಂತೇ ಸುಸ್ತೂ ಏರಿತ್ತು. ಬೆವರೂ ಹರಿದಿತ್ತು. ಎಷ್ಟು ನೀರು ಕುಡಿದರೂ ದಾಹ ಇಂಗದು. ಜಾಸ್ತಿ ಕುಡಿಯಲು ನೀರು ಮುಗಿದರೆ ಎಂಬ ಭಯ. ಸುಮಾರು ೩ಕಿಮೀ ಸಾಗಿದಾಗ ಸಿದ್ದರಾಮೇಶ್ವರ ದೇವಾಲಯ ಸಿಗುತ್ತದೆ. ಅಲ್ಲಿವರೆಗೂ ಸಾಧಾರಣ ಏರು ದಾರಿಯೇ ಇತ್ತು. ದೇವಾಲಯದ ಎದುರು ಪೈಪಿನಲ್ಲಿ ನೀರು ಹರಿಯುತ್ತಲಿತ್ತು.  ನೀರು ಕಂಡದ್ದೇ ಮುಖಕ್ಕೆ ಹಾಕಿ, ಹೊಟ್ಟೆತುಂಬ ನೀರು ಕುಡಿದಾಗ ಸುಸ್ತೆಲ್ಲ ಮಾಯವಾಗಿ ಶಕ್ತಿ ಸಂಚಯನಗೊಂಡಿತು.



   




 ಮುಂದೆ ಹೋಗದೆ ಇಲ್ಲೇ ಸ್ವಲ್ಪ ಕೂತು ವಿರಮಿಸಿ ಹಿಂದಕ್ಕೆ ಹೋಗುವುದು ಎಂದು ತೀರ್ಮಾನಿಸಿದ್ದೆ. ಕಳೆದ ಹತ್ತು ವರ್ಷದಲ್ಲಿ ಸುಮಾರು ಚಾರಣ ಕೈಗೊಂಡಿದ್ದೆ. ಆದರೆ ಇದುವರೆಗೆ ಇಷ್ಟು ಸುಸ್ತು ಯಾವತ್ತೂ ಆಗಿರಲಿಲ್ಲ. ಒಮ್ಮೆ ನಿರಾಸೆ, ಮತ್ತೊಮ್ಮೆ ಛಲ ಬಿಡದೆ ಸಾಗು ಎಂಬ ದ್ವಂದ್ವ ನಿಲುವು ಸಾಕಷ್ಟು ಸಲ ಆವರಿಸಿದ ಕ್ಷಣಗಳವು.  ನೀರು ಕುಡಿದು ತುಸು ವಿರಮಿಸಿದಾಗ, ಇಲ್ಲೀವರೆಗೂ ಬಂದಿದಿದ್ದೀಯ. ಮುಂದೆ ಸಾಗು ಎಂದು ಒಳಮನಸು ನುಡಿದಾಗ ಎದ್ದು ಮುಂದೆ ನಡೆದೇಬಿಟ್ಟೆ.   


                            ಅಲ್ಲಿಂದ ಶಿರ್ವೆ ಗುಡ್ಡ ಚಂದವಾಗಿ ಕಾಣುತ್ತಲಿತ್ತು. ಬನ್ನಿ ಬನ್ನಿ ನನ್ನ ಬಳಿ ಎಂದು ಕೈಬೀಸಿ ಕರೆಯುತ್ತಲಿತ್ತು. ಮುಂದಕ್ಕೆ ದಟ್ಟಕಾಡಿನ ಒಳಗೆ ಸಾಗಿದೆವು. ಅಲ್ಲಿಂದ ಏರುಮುಖ ಇನ್ನೂ ಜಾಸ್ತಿ ಆಯಿತು. ಹತ್ತೆಜ್ಜೆ ಮುಂದಕ್ಕೆ ಹಾಕಿದಮೇಲೆ ಒಂದೆರಡು ನಿಮಿಷ ನಿಲ್ಲದೆ ಮುಂದೆ ಕಾಲೇ ಚಲಿಸದು. ಅಷ್ಟೂ ಏದುಸಿರು. ಅಲ್ಲಲ್ಲಿ ನಿಂತು ಮುಂದೆ ಸಾಗಿದಷ್ಟು ಶಿರ್ವೆಗುಡ್ಡದ ಸುಳಿವೇ ಇಲ್ಲ. ಎತ್ತರ, ಅಗಲ ಗಾತ್ರದ ಮರಗಳು ಸಾಕಷ್ಟು ಇದ್ದುವು.  ಸುಸ್ತಾದಾಗಲೆಲ್ಲ ನಿಂತು ಮರದೆತ್ತರಕ್ಕೆ ಕಣ್ಣು ಹಾಯಿಸಿ ಅದರ ಚೆಲುವನ್ನು ನೋಡುತ್ತ, ದಣಿವು ಮರೆಯುತ್ತಿದ್ದೆ.


    ಅಬ್ಬ, ಮುಂದೆ ಹೋದಂತೆ ಏರು ಜಾಸ್ತಿಯಾಗುತ್ತ ಹೋಗುತ್ತದೆಯಲ್ಲ, ಇನ್ನು ಮುಂದೆ ನಡೆಯಲು ನನ್ನಿಂದ ಸಾಧ್ಯ ಇಲ್ಲ. ಇಲ್ಲಿಂದ ವಾಪಾಸಾಗಲೇ ಎಂದು ನಿಂತು ನೀರು ಕುಡಿದು ಯೋಚಿಸಿದಾಗ, ಹೆ, ಛಲ ಬಿಡಬೇಡ, ಗುರಿ ತಲಪುವವರೆಗೆ ನಿಲ್ಲಬೇಡ. ಮುಂದೆ ಸಾಗು ಎಂದು ಮನಸು ಹುರಿದುಂಬಿಸಿದಾಗ, ಮುಂದುವರಿಯಲೇ, ಅಲ್ಲ, ವಾಪಾಸಾಗಲೇ ಎಂಬ ಎರಡು ಮನಸ್ಸು. ಆದದ್ದಾಗಲಿ ಎಂದು ಒಳಮನಸಿನ ಮಾತು ಕೇಳಿ ಮುಂದೆ ಹೆಜ್ಜೆ ಹಾಕಿದೆ.

ಮುಂದೆ ಹೋದವರು ಇಷ್ಟೊತ್ತಿಗಾಗಲೇ ತಲಪಿ ಹಿಂದಕ್ಕೆ ಬಂದರೆ ಅಲ್ಲಿಂದಲೇ ಹಿಂದುರುಗುವೆ ಎಂಬ ದೃಢ ಮನಸು ಮಾಡಿ ಮುಂದುವರಿದೆ. ದಾರಿಯಲ್ಲಿ ವಾಯು ಎಲ್ಲಿ ಮಾಯವಾಗಿದ್ದನೋ? ನಮ್ಮನ್ನು ಬಹಳ ಸುಸ್ತುಗೊಳಿಸಿಬಿಟ್ಟ. ಎಲೆಗಳ ಅಲುಗಾಟವೇ ಇಲ್ಲ. ದಾಹ ಹೇಳತೀರದು. ನೀರು ಗುಟುಕರಿಸಿ ಶಕ್ತಿ ಬರಿಸಿಕೊಳ್ಳುತ್ತ ಸಾಗಿದೆ. ಗುಡ್ಡದ ತುದಿಗೇರಲು ಒಂದೆಡೆ ಕಬ್ಬಿಣದ ಏಣಿ ಇಟ್ಟಿದ್ದಾರೆ. ಅದನ್ನೇರಿ ಮುಂದೆ ಸಾಗಿದಾಗ ಶಿರ್ವೆ ಗುಡ್ಡ ಕಂಡಿತು. ಅಂತೂ ಗುರಿ ತಲಪಿದೆ ಎಂದು ಬಹಳ ಹರ್ಷವಾಯಿತು.  ಶಿರ್ವೆಗುಡ್ಡದ ಶಿರ ತಲಪಲು ಸಾಕಷ್ಟು ಬೆವರು ಹರಿಸಬೇಕಾಯಿತು. ಸಂಜೆ ೫-೧೫ಕ್ಕೆ ಅಲ್ಲಿ ತಲಪಿದ್ದೆ. ಸುಮಾರು ೭ ಕಿಮೀ ನಡೆದು ಗುಡ್ಡ ತಲಪಿದ್ದೆವು.






     ನನ್ನ ಹಿಂದೆ ಯಾರಿರಲಿಲ್ಲ ಎಂದು ತಿಳಿದುಕೊಂಡಿದ್ದೆ. ಆದರೆ ಹತ್ತನ್ನೆರಡು ಮಂದಿ ಮತ್ತೆ ಬಂದು ತಲಪಿದಾಗ ಇಷ್ಟು ಮಂದಿ ಹಿಂದೆ ಇದ್ದರೆ?  ಎಂದು ಆಶ್ಚರ್ಯಗೊಂಡೆ. ತೀರ ಹಿಂದುಳಿದವಳಲ್ಲ ಎಂದು ಸಮಾಧಾನವಾಯಿತು!  ಅಲ್ಲಿ ತುಸು ವಿರಮಿಸಿ, ಎತ್ತರದ ಬಂಡೆಗಲ್ಲಿಗೆ ಏಣಿ ಏರಿ ನಿಂತಾಗ, ಆಹಾ ಇಷ್ಟು ಕಷ್ಟಪಟ್ಟು ಹತ್ತಿ ಬಂದದ್ದೂ ಸಾರ್ಥಕ ಕ್ಷಣಗಳಿವು ಎನಿಸಿತು. ಇದುವರೆಗೆ ಆಗಿದ್ದ ಸುಸ್ತೆಲ್ಲ ಕ್ಷಣಮಾತ್ರದಲ್ಲಿ ಮಾಯವಾಗಿತ್ತು. ಬಂಡೆಗಲ್ಲಿನಮೇಲೆ ನಿತ್ತಾಗ ತಂಗಾಳಿ ಬಂದು ಮುಖ ಸವರಿದಾಗ ಆಹಾ ಇದುವೆ ಸ್ವರ್ಗ ಎನಿಸಿಬಿಟ್ಟಿತು.  ಗುಡ್ಡದ ಶಿರದಮೇಲೆ ನಿಂತು ಸುತ್ತಲೂ ದಿಟ್ಟಿ ಹಾಯಿಸಿದಾಗ, ಓಹ್! ಎಂಥ ಸುಂದರ ಕ್ಷಣವದು, ಪ್ರಕೃತಿಯ ಈ ಸೃಷ್ಟಿ. ಸುತ್ತಲೂ ಹಸುರು ಮರಗಳು, ಒಂದೆಡೆ ಬೃಹತ್ ಬೆಟ್ಟಗಳು, ಮತ್ತೊಂದೆಡೆ ಮಾನವ ನಿರ್ಮಿತ ಕದ್ರಾ ಅಣೆಕಟ್ಟು, ಕೈಗಾದ ಬೃಹತ್ ಕಟ್ಟಡಗಳು, ಮಗದೊಂದೆಡೆ ಮಂಜುಮುಸುಕಿ, ಕಣ್ಣಾಮುಚ್ಚಾಲೆ ಯಾಡುವ ಮೋಡಗಳು. ಈ ಜಗವೇ ವಿಸ್ಮಯವಲ್ಲದೆ ಬೇರೆ ಏನು? ಎಂದು ಅನಿಸುವ ಭಾವಗಳವು. ಈ ಪ್ರಕೃತಿಯ ಚಮತ್ಕಾರದಾಟವನ್ನು ನೋಡುತ್ತ ಅಲ್ಲೇ ಕುಳಿತು ಇದ್ದು ಬಿಡೋಣ ಎನಿಸುವಂತಾಗಿತ್ತು. ಆದರೆ ಅಲ್ಲಿ ಕೆಲವೇ ಸಮಯಗಳಿರಬೇಕಷ್ಟೇ. ವಾಸ್ತವ ಸ್ಥಿತಿ ಬೇರೆಯೇ ಇದೆಯಲ್ಲ ಎಂಬ ಎಚ್ಚರವೂ ಸದಾ ನಮ್ಮನ್ನು ಜಾಗೃತಗೊಳಿಸುತ್ತದೆ.






   ಅಲ್ಲಿ ಕುಳಿತು ಬುತ್ತಿ ತೆರೆದು ಜೋಳದ ರೊಟ್ಟಿ ತಿಂದೆವು. ಹಸಿವು ಮಾಯವಾಗಿತ್ತು. ನೀರು ಮಾತ್ರ ಬೇಕೆನಿಸಿತ್ತು. ಅಲ್ಲಿ ತಂಡದ ಪಟ ತೆಗೆಸಿಕೊಂಡೆವು. ಕೆಲವರು ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ತೆರಳಲು ಮನಸ್ಸು ಇಲ್ಲದೆ ಇದ್ದರೂ, ಇನ್ನು ಹೊರಡದೆ ಇದ್ದರೆ ಕೆಳಗೆ ತಲಪಲು ರಾತ್ರಿಯಾದೀತೆಂಬ ಜಾಗರೂಕತೆ ಅಲ್ಲಿಂದ ಹೊರಡುವಂತೆ ಮಾಡಿತು. ಆರು ಗಂಟೆಗೆ ಅಲ್ಲಿಂದ ಇಳಿಮುಖರಾದೆವು.



   
ಬೇಗ ಬೇಗ ಇಳಿದರೆ ಕತ್ತಲಾಗುವ ಮುನ್ನ ತಲಪಲು ಸಾಧ್ಯ ಎಂದು ನಡಿಗೆಗೆ ವೇಗ ಹೆಚ್ಚಿಸಿದೆವು. ಇಳಿಯುವಾಗ ಎಷ್ಟೊಂದು ಸುಲಭವಿದೆ. ಅದೇ ಏರುವಾಗ ಏಸೊಂದು ಕಷ್ಟವಾಗಿತ್ತು. ಸುಸ್ತಾಗಿ ಬಸವಳಿದಿದ್ದೆ. ಎಂದು ಆಶ್ಚರ್ಯ ಪಡುತ್ತ ಸಾಗಿದೆ. ಏರುವಾಗ ಹಿಂದುಳಿಯುವ ನಾನು ಇಳಿಯುವಾಗ ಮುಂದೆ ಇರುತ್ತೇನೆ. ಸೂರಪ್ಪ ಎಂದಿನ ಕೆಲಸ ಮುಗಿಸಿ ಅಂತರ್ಧಾನದತ್ತ ಸಾಗುವ ತಯಾರಿಯಲ್ಲಿದ್ದ.





  
ಕೆಳಗೆ ದೇವಾಲಯದ ಬಳಿ ತಲಪಿದೆವು. ಅಲ್ಲಿ ಬುತ್ತಿ ತೊಳೆದು, ನೀರು ಕುಡಿದು ಮುಂದೆ ಸಾಗಿದೆವು. ನಾವು ಆರು ಮಂದಿ ಮಾತಾಡುತ್ತಲೇ ಸಾಗುತ್ತ ವೇಗ ಹೆಚ್ಚಿಸಿದೆವು. ಆದರೂ ಟಾರ್ಚ್ ಬೆಳಕು ಇಲ್ಲದೆ ಗುರಿ ಸೇರಲು ಸಾಧ್ಯವಾಗಲಿಲ್ಲ. ೭.೩೦ಗೆ ನಾವು ಕೆಳಗೆ ತಲಪಿದೆವು. ಅಲ್ಲಿ ಕಲ್ಲುಬೆಂಚಿನಲ್ಲಿ ಕುಳಿತು ಉಳಿದವರು ಬರಲು ದಾರಿ ಕಾದೆವು. ೮.೩೦ ಗಂಟೆಗೆ ಎಲ್ಲರೂ ಕ್ಷೇಮದಿಂದ ಹಿಂದಿರುಗಿದರು. ಸುಮಾರು ಹತ್ತಕ್ಕೂ ಹೆಚ್ಚು ಮಂದಿ ದೇವಾಲಯದವರೆಗೆ ಬಂದು ಕತ್ತಾಲಾದರೆ ಹಿಂದೆ ಬರುವುದು ಕಷ್ಟ ಎಂದು ಮೊದಲೇ ಹಿಂತಿರುಗಿ ಬಂದಿದ್ದರು. ಒಂದಿಬ್ಬರಿಗೆ ಊಟದ ಸಮಯ ಏರುಪೇರಾದದ್ದರಿಂದಲೋ ವಾಂತಿಯಾಗಿತ್ತು. ಶಿರ್ವೆಗುಡ್ಡ ಹತ್ತಿಳಿದು ಅಲ್ಲಿಂದ ಬಸ್ಸೇರಿ ಹೊರಟಾಗ ರಾತ್ರೆ ೮.೪೫ ಆಗಿತ್ತು. 

ಉಳಿದುಕೊಳ್ಳುವ ಸ್ಥಳ ಉಳವಿ ಶಿವಪುರದ ಬಸವಧಾಮ

 ಉಳವಿ ತಲಪಿದಾಗ ರಾತ್ರೆ ೧೧ ಗಂಟೆ ಆಗಿತ್ತು. ಅಲ್ಲಿ ಬಸ್ಸಿಳಿದು ಜೀಪ್, ಟೆಂಪೊ ಹತ್ತಿದೆವು. ನಾವು ಉಳವಿಯ ಶಿವಪುರದ ಬಸವಧಾಮಕ್ಕೆ ಹೊರಟೆವು. ಟೆಂಪೋ ಮೊದಲು ಹೊರಡುತ್ತದೆ ಎಂದು ನಾವು ಒಂದಷ್ಟು ಮಂದಿ ಅದನ್ನೇರಿ ನಿಂತೆವು. ನಮ್ಮ ಲಗೇಜುಗಳನ್ನೆಲ್ಲ ಅದರಲ್ಲೇ ಹಾಕಿದರು. ಮುಂದೆ ಮೂರು ಜೀಪ್ ಹೊರಟರೂ ಈ ಟೆಂಪೊ ಹೊರಡಲಿಲ್ಲ! ಅಲ್ಲಿಂದ ೮ ಕಿಮೀ ತೆರೆದ ಟೆಂಪೋದಲ್ಲಿ ನೀರವ ಕತ್ತಲೆಯಲ್ಲಿಯ ಪಯಣ ಬಲು ಚೆನ್ನಾಗಿತ್ತು! ಶಿವಪುರದ ಬಸವಧಾಮಕ್ಕೆ ತೆರಳುವ ಮಾರ್ಗವನ್ನು ರಾತ್ರೆ ನೋಡಿದಾಗ  ಪಾತಾಳ ಎಂದರೆ ಹೇಗಿದ್ದಿರಬಹುದು ಎಂಬ ಕಲ್ಪನೆ ಸರಿಯಾಗಿ ಮನವರಿಕೆ ಆಯಿತು! ಉಳವಿಯಿಂದ ಬಸವಧಾಮಕ್ಕೆ ಸುಮಾರು ೮ಕಿಮೀ. ಜೀಪ್ ಟೆಂಪೋ ಅಲ್ಲದೆ ಬೇರೆ ವಾಹನ (ದ್ವಿಚಕ್ರ ಬಿಟ್ಟು) ಅಲ್ಲಿ ಹೋಗಲು ಸಾಧ್ಯವಿಲ್ಲ. ಪಾತಾಳದಂಥ ರಸ್ತೆ. ಕತ್ತಲೆಯಲ್ಲಿ ಮರಗಳೆಲ್ಲ ಹೆಬ್ಬಾವಿನಂತೆ ತೋರುತ್ತಿದ್ದುವು! ಮರದ ಕೊಂಬೆಗಳು ನಮ್ಮನ್ನು ನುಂಗಲು ಬಂದಂತೆ ಭಾಸವಾಗಿತ್ತು! ಮರದ ರೆಂಬೆಗಳು ರಸ್ತೆಗೆ ಚಾಚಿದ್ದು ಕಾಣುವಾಗ, ಆ ಸಂದರ್ಭದಲ್ಲಿ ನಾವು ಬಗ್ಗಿ ಕೂರುವ ಸಾಹಸ ಮಾಡಬೇಕಾಗಿತ್ತು. ಇತ್ತ ಕಾಲು ಅಲುಗಾಡಿಸಲಾಗದ ಪರಿಸ್ಥಿತಿ. ಟೆಂಪೋ ಪಾತಾಳಕ್ಕೆ ಇಳಿಯುತ್ತಿದ್ದಾಗ ನಮ್ಮ ಬ್ಯಾಗ್ ಗಳೆಲ್ಲ ಕಾಲಿನಮೇಲೆ ಬೋರಲಾಗಿದ್ದುವು! ಸಾಂಬಾರ್ ಇದ್ದ ಡಬರಿಯಿಂದ ಸಾಂಬಾರ್ ಹೊರಚೆಲ್ಲಿ ಘಮ್ ಎಂದಾಗ ಹಸಿವು ಕೆರಳಿತ್ತು! ಗಣೇಶ ನಮ್ಮ ಟೆಂಪೋದಲ್ಲಿದ್ದರು. ಗಣೇಶನ ಮೆರವಣಿಗೆ ಎಂದು ನಾವು ತಮಾಷೆ ಮಾಡಿದೆವು. ಅವರೂ ಪದ್ಯ ಹೇಳುತ್ತಲೇ ನೀರಿಗೆ ಹಾಕ್ಬೇಡ್ರಪ್ಪೊ ಎಂದು ರಾಗವೆಳೆದರು! ಅಂತೂ ನಾವು ಬಸವಧಾಮ ತಲಪಿದಾಗ ೧೧.೩೦ ದಾಟಿತ್ತು.

      ಅಲ್ಲಿ ಜೋಳದ ಖಡಕ್ ರೊಟ್ಟಿ ಬದನೆ ಎಣ್ಣೆಗಾಯಿ, ಪಾಯಸ, ಅನ್ನ, ಸಾಂಬಾರ್ ಊಟ ಮಾಡಿದೆವು. ಬಿಸಿನೀರಿನಲ್ಲಿ ಸ್ನಾನ ಮಾಡಿ ಮಲಗಿದಾಗ ಗಂಟೆ ರಾತ್ರೆ ಒಂದು ದಾಟಿತ್ತು. ಮಠದ ಆವರಣದಲ್ಲಿ ಹೊರ ಅಂಗಳದಲ್ಲಿ ಚಾಪೆ ಹಾಸಿ ಮಲಗಿ ನಿದ್ರಿಸಿದೆವು. ಸೊಳ್ಳೆ ಕಾಟವಿಲ್ಲದೆ, ಚಳಿಯೂ, ಸೆಖೆಯೂ ಇಲ್ಲದೆ ಹಿತವಾಗಿತ್ತು.

ತೂಗುಸೇತುವೆ

ತಾರೀಕು ೭-೩-೨೦೨೧ರಂದು ಬೆಳಗ್ಗೆ ೫.೪೫ಕ್ಕೆ ಎದ್ದು ತಯಾರಾದೆವು. ಆರು ಗಂಟೆಗೆ ಹೊರಡುವುದೆಂದು ತೀರ್ಮಾನವಾಗಿತ್ತು. ಆದರೆ ತಿಂಡಿ ತಯಾರಿ ಆಗದ ಕಾರಣ ೨ಕಿಮೀ. ದೂರದಲ್ಲಿರುವ ತೂಗು ಸೇತುವೆ ನೋಡಲು ಅವಕಾಶ ಕಲ್ಪಿಸಿದರು. ಜೀಪಲ್ಲಿ ಅಲ್ಲಿಗೆ ಹೋದೆವು.      ಮುಂಜಾವಿನ ತಣ್ಣನೆಯ ಹವೆಯಲ್ಲಿ ತೂಗುಸೇತುವೆಯಲ್ಲಿ ನಡೆಯುತ್ತ ಕಾಳಿನದಿಯ ಸೌಂದರ್ಯವನ್ನು ಕಣ್ಣು ತುಂಬಿಸಿಕೊಂಡೆವು.




  ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಶಿವಪುರ ನಡುಗುಡ್ಡೆಗೆ ಹೋಗಲು ೨೦೧೫ರಲ್ಲಿ ೨೩೪ ಮೀಟರ್ ಉದ್ದ, ೧೫೦ ಮೀಟರು ಅಗಲವಿರುವ ತೂಗು ಸೇತುವೆ ನಿರ್ಮಾಣ ಮಾಡಿದರು.

   ಅಲ್ಲಿಂದ ಬಸವಧಾಮಕ್ಕೆ ಹಿಂತಿರುಗಿದೆವು. ತಿಂಡಿ ಆಗಿರಲಿಲ್ಲ. ಹಿಂದಿನದಿನ ನಾವು ಮಠಕ್ಕೆ ಬರುವುದು ತಡವಾದ್ದರಿಂದಲೂ, ಹೊತ್ತುಮೀರಿ ಊಟದ ಕಲಾಪ ನಡೆದದ್ದರಿಂದ ಅಲ್ಲಿಯ ಕೆಲಸಗಾರರು ಮಲಗುವಾಗ ತಡವಾಗಿತ್ತು. ಬಸವಾನಂದ ಸ್ವಾಮಿಗಳು ಆರು ಗಂಟೆಗೆ ಅಲ್ಲಿಯ ಸಿಬ್ಬಂದಿಗಳು ಮಲಗಿದಲ್ಲಿಗೆ ಬಂದು, ಬೇಗ ಬೇಗ ತಿಂಡಿ ತಯಾರು ಮಾಡಿ, ಅವರಿಗೆ ಬೇಗ ಹೋಗಲಿದೆ ಎಂದು ಹೇಳಿ ಎಬ್ಬಿಸುವುದು ಕಂಡಿತು. ನಮ್ಮ ತಂಡದ ಚಂದ್ರಣ್ಣ, ಮಂಜುಳಾ, ಶೈಲಾ ಇತರರು ತಿಂಡಿ ತಯಾರಿಸಲು ನೆರವಾದರು. ೭.೧೫ಕ್ಕೆ ಪುಳಿಯೋಗರೆ ಸಿದ್ಧಗೊಂಡಿತು. ಬುತ್ತಿಗೆ ತುಂಬಿಸಿಕೊಂಡು ಹೊರಟೆವು.


  ಕೌತುಕದ ಮಹಾಮನೆ ಗುಹೆ

ಬೆಳಗ್ಗೆ ೭.೩೦ಕ್ಕೆ ಜೀಪ್ ಹತ್ತಿ ೨ಕಿಮೀ ಸಾಗಿದಾಗ ಮಹಾಮನೆ ಗುಹೆಗೆ ಹೋಗುವ ದಾರಿಗೆ ತಲಪಿದೆವು. ಅಲ್ಲಿ ಜೀಪಿಳಿದು ಹಳ್ಳ ದಾಟಿ ಮುಂದೆ ನಡೆದೆವು. ನಮ್ಮೊಂದಿಗೆ ಒಂದು ನಾಯಿಯೂ ಸೇರಿಕೊಂಡಿತು. ಕಾಡಿನ ದಾರಿಯಲ್ಲಿ ಸುಮಾರು ೪ಕಿಮೀ ಸಾಗಬೇಕು. ಮಧ್ಯೆ ಎರಡು ಕಡೆ ಹಳ್ಳ ದಾಟಬೇಕು. ಹಳ್ಳದಲ್ಲಿ ಹೆಚ್ಚು ನೀರಿರಲಿಲ್ಲ. ಕೆಲವೆಡೆ ಮೊಣಕಾಲಿನವರೆಗೆ ನೀರಿತ್ತು. ಶುಭ್ರ ನೀರು ಕಾಲಿಗೆ ಸೋಕಿದಾಗ ಮಹದಾನಂದವಾಯಿತು. ಒಂದು ಕಡೆ ಹಳ್ಳದ ಬುಡದಲ್ಲಿ ಕೂತು ಪುಳಿಯೋಗರೆ ತಿಂದು ಮುನ್ನಡೆದೆವು.

 ನಾವು ನಿಂತರೆ ನಾಯಿ ಕುಯಿಗುಡುತ್ತಿತ್ತು. ನಾವು ಸಾಗಿದರೆ ಸುಮ್ಮನಾಗಿ ಮುಂದೆ ನಡೆಯುತ್ತಲಿತ್ತು! ಗುಹೆ ತನಕ ನಮ್ಮ ಜೊತೆ ಬಂದು ವಾಪಾಸು ಒಂದಿಗೇ ಹಿಂತಿರುಗಿತ್ತು!

  


 ಕೆಲವೆಡೆ ಬಂಡೆ ಬದಿಯಲ್ಲಿ ಸಾಗಬೇಕು. ಹಿಡಿದುಕೊಳ್ಳಲು ತಂತಿ ಕಟ್ಟಿದ್ದರು. ಇನ್ನು ಕೆಲವು ದಾರಿಯಲ್ಲಿ ಬಂಡೆಯಲ್ಲಿ ತೆವಳುತ್ತ ಸಾಗಬೇಕು. ತೊರೆ ದಾಟಿ ಬಂಡೆಮೇಲೆ ಸಾಗಿ, ಎತ್ತರದ ಬಂಡೆಯನೇರಿದಾಗ ಮಹಾಮನೆ ಗುಹೆ ಕಂಡಿತು. ನೋಡಿ ಒಮ್ಮೆ ಎದೆ ಧಸಕ್ ಎಂದಿತು. ಬೃಹತ್ ಬಂಡೆ, ಅದರ ಕೆಳಗೆ ನೀರು ಹರಿಯುತ್ತಲಿತ್ತು. ಆ ಬಂಡೆ ಇಳಿದು ಗುಹೆಗೆ ಹೋಗಬೇಕು.  ಬಂಡೆ ಇಳಿಯಲು ಹಿಡಿದುಕೊಳ್ಳಲು ಹಗ್ಗ ಇಳಿ ಬಿಟ್ಟಿದ್ದರು. ಇಳಿಯಲು ಆದೀತೆ? ಇಳಿದರೆ ಹತ್ತಲು ಸಾಧ್ಯವಾದೀತೆ? ಎಂಬ ಪ್ರಶ್ನೆ ಮನದಲ್ಲಿ ಒಮ್ಮೆ ಎದ್ದಿತು. ಒಂದು ಕೈ ನೋಡಿಯೇ ಬಿಡುವ. ಇಲ್ಲೀವರೆಗೂ ಬಂದಾಯಿತು. ಇನ್ನು ಇಳಿಯದೆ ಹೋದರೆ ಹೇಗೆ? ಎಂದು ಧೈರ್ಯ ಮಾಡಿ ಇಳಿದೆ. ಇಳಿಯುವಾಗ ಹೆದರಿಕೆಯಾಗಲಿಲ್ಲ.














   ಗುಹೆಯ ಚರಿತ್ರೆ

ಚೆನ್ನಬಸವೇಶ್ವರಾದಿ ಅಸಂಖ್ಯ ಶರಣರು ಈ ಗುಹೆಯಲ್ಲಿದ್ದರಂತೆ. ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣ ಮಂತ್ರಿಯಾಗಿದ್ದಾಗ, ಅವನನ್ನು ಸಹಿಸದ ಇತರರು ದೊರೆಯ ಮನಸ್ಸು ಕೆಡಿಸಿ ಬಸವಣ್ಣ ಅಲ್ಲಿಂದ ತೆರಳುವಂತೆ ಮಾಡುವಲ್ಲಿ ಸಫಲರಾಗುತ್ತಾರೆ. ಆಗ ಬಸವಣ್ಣನ ಅನುಯಾಯಿಗಳು, ಅವರಲ್ಲಿ ಮುಖ್ಯವಾಗಿ ಬಸವಣ್ಣನ ಸೋದರಳಿಯ ಚೆನ್ನಬಸವಣ್ಣ ಹಾಗೂ ಅವನ ತಾಯಿ ಅಕ್ಕ ನಾಗಮ್ಮ ಬಿಜ್ಜಳನ ಸೈನಿಕರ ಕಣ್ಣು ತಪ್ಪಿಸಿ ವಚನಗಳ ಕಟ್ಟನ್ನು ಹೊತ್ತು ಕಾಡು ಮೇಡು ಅಲೆದು ಈ ಮಹಾಮನೆ ಗುಹೆಯಲ್ಲಿ ಸಂರಕ್ಷಿಸಿಟ್ಟಿದ್ದರು ಎಂಬುದು ಪ್ರತೀತಿ. 

 ಅಲ್ಲಿ ಬಸವಣ್ಣನ ಪುಟ್ಟ  ಪ್ರತಿಮೆ ಇಟ್ಟಿದ್ದರು.  ಗುಹೆಯ ಒಳಗೆ ಸ್ವಲ್ಪ ದೂರ ಮಾತ್ರ ಹೋದೆವು. ಮುಂದೆ ಹೋಗಲು ಸಾಧ್ಯವಿಲ್ಲ. ಆಮ್ಲಜನಕದ ಕೊರತೆ ಎದುರಾಗುತ್ತದೆ. ಬಾವಲಿಗಳು ಅಲ್ಲಿ ಮನೆ ಮಾಡಿದ್ದವು. ಮನುಷ್ಯರ ಆಗಮನದ ಸದ್ದು ಕೇಳಿ ಬಾವಲಿಗಳು ಹಾರಾಡುತ್ತ ಚೀರ್ಗುಟ್ಟುತ್ತಿದ್ದುವು.  ಮನುಜರೇ ನಮಗೇಕೆ ತೊಂದರೆ ಕೊಡುವಿರಿ? ಈಗ ನಮಗೆ ನಿದ್ರಾ ಸಮಯ. ಅಷ್ತೂ ಗೊತ್ತಾಗುವುದಿಲ್ಲವೆ? ಎಂದು ನುಡಿಯುತ್ತಿದ್ದುವೋ ಏನೋ? ಅಲ್ಲಿ ನಾವು ತಂಡದ ಪಟ ತೆಗೆಸಿಕೊಂಡು ಹೊರಟೆವು. ಬಾವಲಿಗಳ ಹಿಕ್ಕೆ ಅಲ್ಲಿ ಸುಮಾರಾಗಿ ಬಿದ್ದಿತ್ತು. ಈಗ ಎಷ್ಟೋ ವಾಸಿ. ಹಿಂದೆ ನಾವು ಬಂದಿದ್ದಾಗ, ಕಾಲು ಹಾಕಲು ಸಾಧ್ಯವಿಲ್ಲದಷ್ಟು ಹಿಕ್ಕೆ ಇತ್ತು ಎಂದು ಮಂಜುಳ ಹೇಳಿದಳು.


   ಹಗ್ಗ ಹಿಡಿದು ಮೇಲೆ ಹತ್ತಿ ಬಂದೆವು. ಮಹಾಮನೆ ಗುಹೆಗೆ ಹೋದ ಅನುಭವ ಮಾತ್ರ ಅನಿರ್ವಚನೀಯ.

  ಬರುತ್ತ, ದಾರಿಯಲ್ಲಿ ಸಿಕ್ಕ ತೊರೆ ಬಳಿ ಹೆಚ್ಚಿನ ಮಂದಿಯೂ ನೀರಿಗೆ ಇಳಿದರು. ನಾವು ಕೆಲವಾರು ಮಂದಿ ಮಾತ್ರ ವಾಪಾಸಾದೆವು. ಕಾಡು ದಾರಿಯಲ್ಲಿ ಒಬ್ಬಾಕೆ ಸೌದೆ ಪೇರಿಸಿ ಕುಳಿತಿರುವುದು ಕಂಡು ಮಾತಾಡಿಸಿದೆ. ಗೀತಾ ಎಂದು ಅವರ ಹೆಸರು. ಅವರಿಗೆ ಅಲ್ಲಿ ಒಂದೆಕರೆ ಅಡಿಕೆ ತೋಟವಿದೆ. ಮಕ್ಕಳಿಬ್ಬರು ಬೆಂಗಳೂರಿನಲ್ಲಿದ್ದಾರೆ. ಅವರಿಗೆ ಇಲ್ಲಿ ಸರಿ ಬರುವುದಿಲ್ಲ. ಮೊಬೈಲ್ ಉಪಯೋಗಿಸಲು ಸಾಧ್ಯವಾಗದೆ ಇಲ್ಲಿರಲು ಮನಸ್ಸಿಲ್ಲ. ನಾವು ಹೋಗಿ ೧೫ ದಿನ ಇದ್ದು ಬರುತ್ತೇವೆ. ಆಗ ಪಕ್ಕದ ತೋಟದವರಿಗೆ ತೋಟ ಮನೆ ನೋಡಿಕೊಳ್ಳಲು ಹೇಳುತ್ತೇವೆ ಎಂದಳು ಗೀತ.

ನಿಮಗೆ ತೋಟದ ಆದಾಯ ಸಾಕಾಗುತ್ತದ?

ಸಾಕಾಗುವುದಿಲ್ಲ. ಆಕೂಲಿ ಕೆಲಸಕ್ಕೆ ಹೋಗುತ್ತೇವೆ.

ಇಷ್ಟು ಸೌದೆ ಹೊರಲು ಆಗುತ್ತದ ನಿಮಗೆ?

ನಾನು ಒಟ್ಟುಗೂಡಿಸಿ ಇಡುತ್ತೇನೆ. ಗಂಡ ಬಂದು ಹೊತ್ತು ಸಾಗಿಸುತ್ತಾರೆ

ಹೀಗೆ ಅವಳು ಹೇಳುತ್ತಿರುವಂತೆಯೇ ಅವಳ ಗಂಡನ ಆಗಮನವಾಯಿತು. ಅವರ ಹೆಸರು ಸದಾನಂದ? ಶಿವಾನಂದ? (ಹೆಸರು ಮರೆತೆ)

ನೀವು ಮಹಾಮನೆ ಗುಹೆಗೆ ಇಳಿದ್ರಾ?

ಹೌದು. ನೀವು ಹೋಗಿದ್ದೀರ?

ನಾನು ಒಂದೆರಡು ಸಲ ಕೆಲಸಕ್ಕೆ ಹೋಗಿದ್ದೇನೆ. ಎರಡು ದ್ವಾರದ ತನಕ ಹೋಗಿದ್ದೇನೆ. ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಮಹಾ ಕಾರಣಿಕ ಇರುವ ಗುಹೆ ಅದು. ಬಹಳ ಶಕ್ತಿ ಇದೆ ಆ ಜಾಗಕ್ಕೆ. ಒಟ್ಟು ೭ ದ್ವಾರ ಇದೆ. ಒಳಗೆಲ್ಲ ದೊಡ್ಡದಾದ ಬಾವಲಿಗಳಿವೆ. ಹೊರಗೆ ಮಾತ್ರ ಚಿಕ್ಕ ಬಾವಲಿಗಳಿರುವುದು. ಎಲ್ಲರಿಗೂ ಒಳಗೆ ಹೋಗಲೇ ಆಗುವುದಿಲ್ಲ. ಬೈಲಹೊಂಗಲದಿಂದ ಒಂದು ಲಾರಿ ಮಂದಿ ಪ್ರತೀವರ್ಷ ಮಾರ್ಚ್ ತಿಂಗಳಲ್ಲಿ ಬಂದು ಗುಹೆಯೊಳಗೆ ಹೋಗಿ ಬಾವಲಿ ಹಿಕ್ಕೆ ತೆಗೆದು ಚೊಕ್ಕಗೊಳಿಸುತ್ತಾರೆ. ಅದು ಅವರಿಗೆ ಒಂದು ವ್ರತ. ಭಕ್ತಿಯಿಂದ ಕೆಲಸ ಮಾಡುತ್ತಾರೆ. ಟಾರ್ಚ್ ಲೈಟ್ ಹಾಕಿ, ಸಿಡಿಮದ್ದು ಹಾಕಿ ಬಾವಲಿ ಓಡಿಸಿ, ಆಮ್ಲಜನಕ ಕಟ್ಟಿಕೊಂಡು ಏಳು ದ್ವಾರಗಳಿಗೂ ಹೋಗುತ್ತಾರೆ. ಎಂದರು.

 ನಿಮ್ಮ ಪತ್ನಿಯನ್ನೂ ಒಮ್ಮೆ ಗುಹೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಅವರಿಂದ ಬೀಳ್ಕೊಂಡು ಮುಂದುವರಿದೆವು. ನಾಲ್ಕು ಹೆಜ್ಜೆ ಮುಂದೆ ಹೋಗಿರಬಹುದಷ್ಟೆ ನಾವು. ಸದಾನಂದ? ಸೌದೆ ಹೊರೆ ಹೊತ್ತು ಸರಸರ ನಡೆದು ನಮ್ಮ ಕಣ್ಣು ಮುಂದೆಯೇ ಅದೃಶ್ಯರಾದರು! ಅವರ ಸೊಂಟದಲ್ಲಿ ಕತ್ತಿ ನೇತಾಡುತ್ತಿತ್ತು. ಕತ್ತಿ ಸಿಕ್ಕಿಸಲು ಏರ್ಪಡಿಸಿದ ಸಾಧನ ಬಲು ಚೆನ್ನಾಗಿತ್ತು. ನಾನು ಹಾಗೂ ಸುಷ್ಮಾ ಮಾತಾಡುತ್ತ ಸಾಗಿದೆವು. ಕೊನೆಗೆ ಸಿಕ್ಕ ಹಳ್ಳದಲ್ಲಿ ಕಾಲು ಇಳಿಬಿಟ್ಟು ಕೂತು ಬಾಕಿದ್ದವರು ಬರಲು ಕಾದೆವು.

  ಜೀಪಿನಲ್ಲಿ ಬಸವಧಾಮಕ್ಕೆ ಹೋದೆವು. ಊಟ ಸಿದ್ಧವಾಗಿತ್ತು. ಜೋಳದ ಖಡಕ್ ರೊಟ್ಟಿ, ದೊಡ್ಡಮೆಣಸು ಎಣ್ಣೆಗಾಯಿ, ಚಿತ್ರಾನ್ನ, ಪಾಯಸ, ಅನ್ನ ಸಾಂಬಾರು ಮಜ್ಜಿಗೆ. ಊಟವಾಗಿ ತುಸು ವಿರಮಿಸಿದೆವು.

 ಬಸವಧಾಮದ ಬಗ್ಗೆ ಮಾಹಿತಿ

   ೨೮ ವರ್ಷಗಳ ಹಿಂದೆ ಚನ್ನಬಸವಾನಂದ ಸ್ವಾಮಿಗಳು  ಬಸವಧಾಮವನ್ನುಕಟ್ಟಿಸಿದರು. ಅವರು ಸುಮಾರು ೩೦ ವರ್ಷಗಳ ಹಿಂದೆ ಉಳವಿಗೆ ಬಂದವರು ವಾಪಾಸು ಹೋಗಲಿಲ್ಲವಂತೆ.   ಉಳವಿ ಎಂದರೆ ಅರ್ಥ ಉಳಿಯುವಂತಾದ್ದು. ಹಾಗೆ ಉಳವಿಯಲ್ಲೇ ಉಳಿದೆ ಎಂದರು.! ಇಲ್ಲೇ ಆಶ್ರಮ ಸ್ಥಾಪಿಸಿ, ವಚನಗಳ ಮಹತ್ತನ್ನು ಜನರಿಗೆ ಹಂಚುತ್ತ ಇದ್ದಾರೆ. ಇಲ್ಲಿ ಬರುವ ಭಕ್ತಾದಿಗಳಿಗೆ ಊಟ, ವಸತಿ ಉಚಿತ. ಆದರೆ ಭಕ್ತಾದಿಗಳು ಅವರ ಇಷ್ಟಾನುಸಾರ ಹಣ, ಧವಸ, ಧಾನ್ಯ ತರಕಾರಿ ಕೊಟ್ಟರೆ ಸ್ವೀಕರಿಸುತ್ತಾರೆ. ಅಲ್ಲಿ ಯಾವ ಸಂಪರ್ಕ ಸಾಧನಗಳೂ ಇಲ್ಲ. ಮೊಬೈಲಿಗೆ ನೆಟ್ವರ್ಕೇ ಇಲ್ಲ. ಹಾಗಾಗಿ ಮಠದ ಸಂಪರ್ಕಕ್ಕಾಗಿ ಉಳವಿಯಲ್ಲಿರುವ ಜೀಪ್ ಚಾಲಕರನ್ನು ಸಂರ್ಪರ್ಕಿಸಬೇಕು.  ನಾವು ಅಡ್ಡಾಡಿದ ಜೀಪಿನ ಚಾಲಕ ವಿಶ್ವ. ಅವರ ಸಂಪರ್ಕ ಸಂಖ್ಯೆ ೯೫೯೧೬೦೪೬೧೩. ಮಹಾಮನೆ ಗುಹೆಗೆ ತೆರಳುವವರು ಹೆಚ್ಚಾಗಿ ಬಸವಧಾಮದಲ್ಲಿ ಉಳಿದು ಬೆಳಗ್ಗೆ ಅಲ್ಲಿಂದ ತೆರಳುತ್ತಾರಂತೆ.



     ಚನ್ನಬಸವಾನಂದ ಸ್ವಾಮೀಜಿಗೆ ಹಾರ ಹಾಕಿ, ಶಾಲು ಹೊದೆಸಿ ಗೌರವ ಸಮರ್ಪಿಸಿ, ನಾವು ಅಲ್ಲಿಂದ ೨.೩೦ ಗಂಟೆಗೆ ಜೀಪಿನಲ್ಲಿ ನಿರ್ಗಮಿಸಿದೆವು. ೨ ಜೀಪ್ ಮಾತ್ರ ಇದ್ದುದರಿಂದ ೨ ಟ್ರಿಪ್ ಮಾಡಬೇಕಾಯಿತು.

 ಚೆನ್ನಬಸವೇಶ್ವರ ದೇವಾಲಯ

 ಉಳವಿ ಕ್ಷೇತ್ರದ ಚೆನ್ನಬಸವೇಶ್ವರ ದೇವಾಲಯಕ್ಕೆ ಹೋದೆವು. ಉಳವಿಗೆ ಬಂದವರು ಈ ದೇವಾಲಯಕ್ಕೆ ಭೇಟಿ  ಕೊಡಲೇಬೇಕಂಬುದು ಪ್ರತೀತಿಯಂತೆ.

  ೧೨ನೆಯ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಾದಮೇಲೆ, ದೊರೆ ಬಿಜ್ಜಳನ ಸೈನಿಕರಿಂದ ತಪ್ಪಿಸಿಕೊಂಡು ಬಸವೆಶ್ವರರ (ಬಸವಣ್ಣ) ಸೋದರಳಿಯ ಚೆನ್ನಬಸವ ಹಾಗೂ ಅಕ್ಕ ನಾಗಮ್ಮ ಹಾಗೂ  ಅನೇಕ ಶರಣರು ಹಾಗೂ ವಚನಕಾರರು ಅಮೂಲ್ಯವಾದ ವಚನಗಳ ಕಟ್ಟನ್ನು ರಕ್ಷಿಸಿಕೊಂಡು ಇತರೆ ಭಕ್ತರೊಡಗೂಡಿ ಕಾಡುಮೇಡು ಅಲೆದು ಕೊನೆಗೆ ಅವರು ಉಳವಿಗೆ ಬಂದು ಅಲ್ಲೆ ನೆಲೆನಿಂತರು.  ಉಳವಿಯಲ್ಲಿ ಜನಸಾಮಾನ್ಯರಿಗೆ ವಚನಗಳನ್ನು ಬೋಧಿಸುತ್ತ ಸರಳ ಜೀವನ ನಡೆಸಿ ಚೆನ್ನಬಸವೇಶ್ವರರೆಂದು ಪೂಜ್ಯರಾದರು. ಅಲ್ಲಿಯೇ ಲಿಂಗೈಕ್ಯರಾದರು. ಅವರ ಸಮಾಧಿ ಅಲ್ಲಿದೆ.  ಅದೇ ಉಳವಿ ಕ್ಷೇತ್ರವೀಗ ಚೆನ್ನಬಸವೇಶ್ವರ ದೇವಾಲಯದಿಂದ ಪ್ರಸಿದ್ಧಿ ಹೊಂದಿದೆ. ನಾಡಿನಾದ್ಯಂತ ಭಕ್ತರು ಈ ದೇವಾಲಯಕ್ಕೆ ಭೇಟಿ ಕೊಡುತ್ತಾರೆ. ಪ್ರತೀವರ್ಷ ಫೆಬ್ರವರಿ ತಿಂಗಳಲ್ಲಿ ವೈಭವವಾಗಿ ಜಾತ್ರೆ ನಡೆಯುತ್ತದೆ.

    ದೇವಾಲಯದ ಹೊರ ಭಾಗದಲ್ಲಿ ಉದ್ದಕ್ಕೂ ಅಂಗಡಿಸಾಲುಗಳಿವೆ. ಅಲ್ಲಿ ಗಾಜಿನ ಬಳೆಗಳು ಪೇರಿಸಿಟ್ಟ ಪರಿ, ಅವುಗಳ ಮುಂದೆ ವ್ಯಾಪಾರಕ್ಕೆ ಕುಳಿತ ಜನರನ್ನು ನೋಡುವುದೇ ಸೊಗಸು. ಈ ಕ್ಷೇತ್ರದಲ್ಲಿ ಗಾಜಿನ ಬಳೆ ಜನಪ್ರಿಯವಾಗಿದೆಯಂತೆ.






ಕಾನೇರಿ ನದಿಯ ಸಿಂಥೇರಿ ಬಂಡೆ

  ಸಂಜೆ ೫ ಗಂಟೆಗೆ ನಾವು ಉಳವಿಯಿಂದ ಬಸ್ ಹತ್ತಿದೆವು. ಹುಬ್ಬಳ್ಳಿಗೆ ಹೋಗುವ ದಾರಿಯಲ್ಲಿ ಸಿಂಥೇರಿ ಬಂಡೆಯನ್ನು ನೋಡೋಣ. ಸುಮಾರು ೩೦೦ ಮೆಟ್ಟಲು ಇಳಿದು ಹೋಗಬೇಕು. ಅರ್ಧ ಗಂಟೆಯೊಳಗೆ ಇಳಿದು ಹತ್ತಲು ಸಾಧ್ಯವಾದವರು ಮಾತ್ರ ಬಸ್ ಇಳಿಯಿರಿ. ನಮಗೆ ಹೆಚ್ಚು ಸಮಯ ಇಲ್ಲ. ರಾತ್ರೆ ೮.೩೦ರೊಳಗೆ ಹುಬ್ಬಳ್ಳಿ ತಲಪಬೇಕು  ಎಂದು ಆಶೀಶ್ ಹೇಳಿದ್ದರು. ಒಂದಷ್ಟು ಮಂದಿ ಸಿಂಥೇರಿ ಬಂಡೆ ನೋಡಲು ದೌಡಾಯಿಸಿದೆವು.

  ಸುಮಾರು ೩೦೦ ಮೆಟ್ಟಲಿಳಿದಾಗ ಸಿಂಥೇರಿ ಬಂಡೆಯ ಜಲಪಾತ ಕಾಣುತ್ತದೆ. ನಾವು ಹೋದಾಗ ಸಣ್ಣದಾಗಿ ನೀರು ಹರಿಯುತ್ತಲಿತ್ತು. ಮಳೆಗಾಲದಲ್ಲಿ ಬಹುಶಃ ಬಹಳ ಸುಂದರವಾಗಿ ಕಾಣಬಹುದು.  ತುಂಬ ಜನ ಇಲ್ಲಿ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರಂತೆ. ಹಾಗಾಗಿ ಈಗ ನೀರಿನ ಬಳಿ ಸಾಗದಂತೆ ಬಂದೋಬಸ್ತಾಗಿ ಬೇಲಿ ಹಾಕಿದ್ದಾರೆ. ಮೆಟ್ಟಿಲಮೇಲಿಂದಲೇ ಬಂಡೆ ಕಾಣುತ್ತದೆ. ಬಂಡೆಗಳಲ್ಲಿ ಜೇನುಗೂಡುಗಳು ಕಾಣಿಸಿದುವು. ಮೆಟ್ಟಲಿನ ಉದ್ದಕ್ಕೂ ಅಲ್ಲಲ್ಲಿ ಆ ಪ್ರದೇಶದಲ್ಲಿ ಲಭಿಸುವ ಶಿಲೆಯ ಮಾದರಿ, ಅವುಗಳ ಪರಿಚಯ, ಮಾಹಿತಿ ಇರುವ ಫಲಕ ಹಾಗೂ ಕಲ್ಲುಗಳನ್ನು ಇಟ್ಟಿದ್ದಾರೆ.

   ಸಿಂಥೇರಿ ಬಂಡೆ ದಾಂಡೇಲಿ ಅಭಯಾರಣ್ಯದ ಮಧ್ಯಭಾಗದಲ್ಲಿ ರುವ, ಕಾಳಿನದಿಯ ಉಪನದಿಯಾದ ಕಾನೇರಿನದಿಯ ದಡದಲ್ಲಿದೆ. ಈ ಬಂಡೆಯ ಮೇಲಿನಿಂದ ಬೀಳುವ ನೀರು ಕಾಳಿನದಿಯನ್ನು ಸೇರುತ್ತದೆ. ಸಿಂಥೇರಿ ಎಂಬುದು ಒಂದು ಶಿಲೆಯ ಹೆಸರು. ಸಿಂಥೇರಿ ಪ್ರಬೇಧಕ್ಕೆ ಸೇರಿದ ಈ ಬೃಹತ್ ಬಂಡೆಯಿಂದ ಈ ಪ್ರದೇಶಕ್ಕೆ ಸಿಂಥೇರಿ ರಾಕ್ಸ್ ಎಂದು ಹೆಸರು ಬಂದಿರಬಹುದು.





 ಇದನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ಧಿಗೊಳಿಸಿದ್ದಾರೆ. ಮೂತ್ರಾಲಯ, ಕುಡಿಯುವ ನೀರು, ವಾಹನ ನಿಲ್ಲಿಸಲು ಸ್ಥಳ ಎಲ್ಲ ಅನುಕೂಲಗಳನ್ನೂಅರಣ್ಯ ಇಲಾಖೆಯ ವತಿಯಿಂದ ಅಚ್ಚುಕಟ್ಟಾಗಿ ಮಾಡಿದ್ದಾರೆ. ಅಲ್ಲಿಗೆ ತೆರಳಲು ಪ್ರವೇಶ ಶುಲ್ಕ ರೂ. ೧೦ 

ದಾಂಡೇಲಿಯಿಂದ ಉಳವಿಗೆ ಹೋಗುವ ಮಾರ್ಗದಲ್ಲಿ ೩೦ಕಿಮೀ ಕ್ರಮಿಸಿದಾಗ ಎಡಭಾಗಕ್ಕೆ ಸಿಂಥೇರಿ ರಾಕ್ಸ್ ಸ್ವಾಗತ ಕಮಾನು ಕಾಣುತ್ತದೆ. ಅಲ್ಲಿಂದ ೨ಕಿಮೀ ಮುಂದೆ ಸಾಗಿದರೆ ಸಿಂಥೇರಿ ಬಂಡೆ ನೋಡಬಹುದು.

   ಮರಳಿ ಹುಬ್ಬಳಿಗೆ

ಸಿಂಥೇರಿ ಬಂಡೆಯ ಗುಂಗಿನಿಂದ ಹೊರಬಂದು  ಲಗುಬಗೆಯಿಂದ ಓಡಿ ಬಸ್ ಹತ್ತಿದೆವು. ಬಸ್ಸಿನಲ್ಲಿ ಅಂತ್ಯಾಕ್ಷರಿ ಪ್ರಾರಂಭವಾಯಿತು. ನಮ್ಮಲ್ಲಿ ಜ್ಯೂನಿಯರ್ ಕಾಳಿಂಗರಾವ್, ಜ್ಯೂನಿಯರ್ ಜಾನಕಿ, ಜ್ಯೂನಿಯರ್ ಬಾಲಸುಬ್ರಹ್ಮಣ್ಯಮ್, ಜ್ಯೂನಿಯರ್ ಸುಶೀಲ ಎಂಬ ಪ್ರತಿಭೆಗಳಿದ್ದರು. ಪುಂಖಾನುಪುಂಖವಾಗಿ ಹಾಡು ಹರಿಯಿತು. ಕೇಳುವುದೇ ಸೊಗಸು. ಹಾಗಾಗಿ ದಾರಿ ಸಾಗಿದ್ದೇ ತಿಳಿಯಲಿಲ್ಲ.  ಹುಬ್ಬಳ್ಳಿ ತಲಪಿದಾಗ ರಾತ್ರೆ ೮.೩೦ ಆಗಿತ್ತು.

  ಚಾಲಕ ಶಿವಕುಮಾರ್ ಪಲ್ಲದ್ ಅವರಿಗೆ ಧನ್ಯವಾದ ಅರ್ಪಿಸಿದೆವು. ನಮ್ಮನ್ನು ಇಳಿಸಿ, ಅವರು ತಮ್ಮಪತ್ನಿಯ ತವರೂರಾದ ಐಹೊಳೆಗೆ ಹೋಗಲು ಕಾತರದಿಂದ ಇದ್ದರು. 

ನಮ್ಮ ನೆಲೆ ಮೈಸೂರು

   ಬಸ್ಸಿಳಿದು ನಾವು ರೈಲು ನಿಲ್ದಾಣಕ್ಕೆ ಹೋದೆವು. ಅಲ್ಲಿ ಕಿಣಿಯವರ ಸ್ನೇಹಿತರು ಊಟದ ಡಬ್ಬಗಳೊಂದಿಗೆ ಕಾಯುತ್ತಿದ್ದರು. ಅಲ್ಲಿಯೆ ಎಲ್ಲರಿಗೂ ಒಂದೊಂದು ಡಬ್ಬ ಕೊಟ್ಟರು. ರೈಲು ಮೂರನೇ ಪ್ಲಾಟ್ ಫಾರ್ಮಿಗೆ ಬರುತ್ತದೆ ಎಂಬ ಮಾಹಿತಿಯಂತೆ ನಾವು ಅಲ್ಲಿಗೆ ಹೋದೆವು. ಅಲ್ಲಿ ಕಾಯುತ್ತ ನಿಂತಾಗ, ರೈಲು ಬರುವ ಸಮಯವಾದಾಗ, ಧಾರವಾಡ ಮೈಸೂರು ಎಕ್ಸ್ಪ್ರೆಸ್ ರೈಲು ಆರನೆ ಪ್ಲಾಟ್ ಫಾರ್ಮಿಗೆ ಆಗಮಿಸಲಿದೆ ಎಂಬ ವಾಣಿ ಕೇಳಿಸಿತು. ರೈಲು ಬರುತ್ತಿರುವುದು ಕಂಡಿತು. ನಾವು ಅಲ್ಲಿಗೆ ಓಡಿದೆವು. ಅಂತೂ ಎಲ್ಲರೂ  ಸರಿಯಾಗಿ ರೈಲು ಹತ್ತಿದೆವು. ಅಲ್ಲಿ ಕೇವಲ ಹತ್ತು ನಿಮಿಷ ಮಾತ್ರ ರೈಲು ನಿಲ್ಲುವುದು.

  ನಮ್ಮ ನಮ್ಮ ಸೀಟಿನಲ್ಲಿ ಕೂತು ಪಲಾವ್ ತಿಂದು ಒಂದಷ್ಟು ಹೊತ್ತು ಮಾತಾಡುತ್ತ ಕಾಲ ಕಳೆದು ನಿದ್ರೆಗೆ ತಲೆಕೊಟ್ಟೆವು. ೮-೩-೨೦೨೧ರಂದು ಬೆಳಗ್ಗೆ ೬ ಗಂಟೆಗೆ ಎಚ್ಚರವಾಯಿತು. ಆ ದಿನ ಮಹಿಳಾದಿನಾಚರಣೆ. ಪುರುಷರು ನಮಗೆ ಶುಭಾಶಯ ಹೇಳಿದ್ದನ್ನು ಸ್ವೀಕರಿಸಿ, ಮಹಿಳೆಯರು ಪರಸ್ಪರ ಶುಭ ಹಾರೈಸಿಕೊಂಡೆವು!  ೭ ಗಂಟೆಗೆ ಸರಿಯಾಗಿ ಮೈಸೂರು ತಲಪಿ ಇಳಿದು ಮನೆ ಸೇರಿಕೊಂಡೆವು.

ಅಲ್ಲಿಗೆ ೨ ದಿನದ ದಾಂಡೇಲಿ ಚಾರಣಕ್ಕೆ ತೆರೆಬಿತ್ತು. ಎಲ್ಲ ಚಾರಣಿಗರು ಇರುವ ವ್ಯವಸ್ಥೆಗೆ ಚಕಾರವೆತ್ತದೆ ಹೊಂದಿಕೊಂಡು, ಸಮಯಕ್ಕೆ ಸರಿಯಾಗಿ ಹೊರಟು ಸಂಪೂರ್ಣ ಸಹಕಾರವಿತ್ತಿದ್ದರು. ಈ ಚಾರಣದ ರೂವಾರಿಗಳು, ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರು ಇದರ ಸದಸ್ಯರಾದ ಆಶೀಶ್, ಪರಶಿವಮೂರ್ತಿ ಹಾಗೂ ಪ್ರಶಾಂತ. ಇವರಿಗೆ ಸಾಥ್ ನೀಡಿದವರು ಪಾಂಡುರಂಗಕಿಣಿ. ಇವರೆಲ್ಲರಿಗೂ ನಮ್ಮ ಸಹ ಚಾರಣಿಗಳೆಲ್ಲರ ಪರವಾಗಿ ಧನ್ಯವಾದ.

ಈ ಚಾರಣದಲ್ಲಿ ನನ್ನ ಅಚಾತುರ್ಯದಿಂದ ಒಳ್ಳೆಯ ಶೂ ಕಳೆದುಕೊಂಡದ್ದು ಕಹಿನೆನಪು.

 ಸಹಚಾರಣಿಗರು ತೆಗೆದ ಕೆಲವು ಪಟಗಳನ್ನು ಇಲ್ಲಿ  ಬಳಸಿ್ಕೊಂಡಿದ್ದೇನೆ. ಅವರಿಗೆ ಧನ್ಯವಾದ.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ