ಬುಧವಾರ, ಮಾರ್ಚ್ 31, 2021

ಬಸರೀ ಭಾಗ್ಯವೂ ಬಾಣಂತನದ ಅನುಭವವೂ

 ನಮ್ಮ ಮಗಳು ಅಕ್ಷರಿ, ಅಳಿಯ ಮಹೇಶ ಅಮೇರಿಕಾವಾಸಿಗಳಾಗಿದ್ದಾಗ ನಾವಿಬ್ಬರೂ (೨೦೧೯) ಅಲ್ಲಿಗೆ ಹೋಗಿದ್ದೆವು. ಆಗ ಅಕ್ಷರಿ ಚೊಚ್ಚಲ ಗರ್ಭ ಹೊತ್ತಿದ್ದಳು. ಅಲ್ಲಿ ನಾವು ಸಾಕಷ್ಟು ತಿರುಗಿದ್ದೆವು. ಗರ್ಭಿಣಿಯಾಗಿದ್ದಾಗ ಪ್ರಯಾಣ ಮಾಡಬಾರದು ಎಂದೇನೂ ಅಮೇರಿಕಾದಲ್ಲಿ ಹೇಳುವುದಿಲ್ಲ. ನಮ್ಮಲ್ಲಾದರೆ ಅಷ್ಟೆಲ್ಲ ಪ್ರಯಾಣ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ರಸ್ತೆಗಳ ಸ್ಥಿತಿ ಏರು ತಗ್ಗು ದಿಣ್ಣೆ ಇತ್ಯಾದಿ ಜಾಸ್ತಿ. ಅಲ್ಲಾದರೆ ಹಾಗಲ್ಲ. ಸಪಾಟು ರಸ್ತೆ. ಪ್ರಯಾಣದ ಆಯಾಸ ಇಲ್ಲವೇ ಇಲ್ಲ.  ಕಾರಿನಿಂದ ಆಗಾಗ ಇಳಿದು ಕಾಲಿಗೆ ವ್ಯಾಯಾಮ ಕೊಡಿ ಎಂದಿದ್ದರು. ಹಾಗೆ ನಾವೂ ಧೈರ್ಯದಿಂದ ಪ್ರಯಾಣ ಬೆಳೆಸಿದ್ದೆವು.

ಆರನೆಯ ತಿಂಗಳು ತುಂಬುತ್ತಿದ್ದಂತೆ   ಅಕ್ಷರಿ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದಳು. ಮೈಸೂರಿನಲ್ಲೇ ಹೆರಿಗೆಯಾಗಬೇಕು, ಮಗು  ಭಾರತದ ಪ್ರಜೆಯಾಗಿಯೇ ಜನುಮ ತಾಳಬೇಕು ಎಂದು ನಮ್ಮೆಲ್ಲರ ಇಚ್ಛೆಯಾಗಿತ್ತು.  ಅಮೇರಿಕಾದಲ್ಲೇ ಹೆರಿಗೆಯಾಗಲಿ, ಇಲ್ಲಿಯ ಪೌರತ್ತ್ವ ಸಿಗುತ್ತದೆ. ಮುಂದೆ ಓದಲು ಇಲ್ಲಿ ಬರಬೇಕಾದರೆ ಸುಲಭವಾಗುತ್ತದೆ ಎಂದು ಸಲಹೆ ಕೊಟ್ಟವರಿದ್ದರು. ಮಗು ಮುಂದೆ ಸ್ವಂತ ಬಲದಿಂದ ಬೇಕಾದರೆ ಅಮೇರಿಕಾಗೆ ಹೋಗಿ ಓದಲಿ. ಅವರೆಲ್ಲರ ಸಲಹೆಗೆ ಅವಳದೊಂದೇ ದೃಢ ಉತ್ತರ.

  ಅಕ್ಷರಿ ಮೈಸೂರಿಗೆ ಬಂದ ಬಳಿಕ ನೆಂಟರಿಷ್ಟರು ಆಗಾಗ ಮನೆಗೆ ಬಂದು ಅವಳ ಯೋಗಕ್ಷೇಮ ವಿಚಾರಿಸಿ ಹೋಗುತ್ತಿದ್ದರು. ಬರುವಾಗ ಅಕ್ಷರಿಗೆ ಇಷ್ಟವೆಂದು ಸಿಹಿತಿಂಡಿ, ಕುರುಕುಲು ತಿಂಡಿ ಯಥೇಚ್ಛವಾಗಿ ತರುತ್ತಿದ್ದರು. ಡಬ್ಬಗಳಲ್ಲಿ ತಿಂಡಿ ಕಾಲಿಯಾದದ್ದೇ ಇಲ್ಲ. ಒಬ್ಬರಾದ ಮೇಲೆ ಒಬ್ಬರು ಬರುತ್ತ ತಿಂಡಿ ತರುತ್ತಲೇ ಇದ್ದರು. ಅಜ್ಜಿ ಮನೆ, ದೊಡ್ಡಮ್ಮಂದಿರ ಮನೆ, ಚಿಕ್ಕಮ್ಮನ ಮನೆ, ಅತ್ತೆ ಮನೆಯಿಂದ ಎಂದು ತಿಂಡಿ ತಪ್ಪುತ್ತಲೇ ಇರಲಿಲ್ಲ. ಅನಂತನೋ ಸಿಹಿಪ್ರಿಯ. (ಊಟಕ್ಕೆ ಏನಾದರೂ ಸಿಹಿ ಇದ್ದರೆ ಅವನಿಗಿಷ್ಟ. ಏನಿಲ್ಲವೆಂದರೆ ಚಾಕಲೇಟ್, ಕಡ್ಲೆಚಿಕ್ಕಿ ಅದೂ ಆಗುತ್ತದೆ!) ಆ ಸಮಯದಲ್ಲಿ ಸಿಹಿತಿಂಡಿಗೆ ಬಸರೀ ಭಾಗ್ಯ ಎಂದು ಅನಂತ ಹೆಸರಿಟ್ಟಿದ್ದ. ಊಟಕ್ಕೆ ಕೂತಾಗಲೆಲ್ಲ, ನಾವು ಸಿಹಿ ಇಡಲು ಮರೆತರೂ, ಬಸರೀ ಭಾಗ್ಯ ಹೊರ ಬರಲಿ. ಇಲ್ಲಾಂದರೆ ಕಸಂಟೀತು.  ಎಂದು ಹೇಳಲು ಮರೆಯುತ್ತಿರಲಿಲ್ಲ! ಅಮೃತ ಫಲ, ಬರ್ಫಿ, ಬಾಳೆಹಣ್ಣು ಹಲ್ವ, ಗೋಧಿ ಹಲ್ವ, ಬೇಸನ್ ಲಾಡು, ಮೈಸೂರು ಪಾಕು, ಇತ್ಯಾದಿ ಸಿಹಿತಿಂಡಿಗಳು. ಅಕ್ಷರಿ ಎಷ್ಟು ತಿಂದಳೋ ಗೊತ್ತಿಲ್ಲ. ಅನಂತನಿಗಂತೂ ಪ್ರತಿದಿನ ಹಬ್ಬ. ಅವನಂತೂ ಸಿಹಿತಿಂಡಿಗೆ ನ್ಯಾಯ ಸಲ್ಲಿಸಿದ. ಹಾಗೆ ನಿರಂತರ ಸಿಹಿ ತಿಂದು ಅವನ ತೂಕವೂ ಏರಿತು. ಪ್ಯಾಂಟಿಗೆ ಗುಂಡಿ ಇನ್ನೊಂದು ಹೊಲಿಯಬೇಕಾಯಿತು. ಇತ್ತ ಕರಿದ ತಿಂಡಿ ತಿಂದು ನನ್ನ ತೂಕವನ್ನೂ ಏರಿಸಿಕೊಂಡೇ ಮಗಳ ಬಾಣಂತನ ಮಾಡಲು ಸಜ್ಜಾದೆ! ಅತ್ತೆ ಮನೆಯಲ್ಲಿ ಸೀಮಂತ ಶಾಸ್ತ್ರವೂ ಆಯಿತು, ಬರುತ್ತ, ಇನ್ನಷ್ಟು ಸಿಹಿತಿಂಡಿ ಕಪ್ಪಕಾಣಿಕೆಗಳೊಂದಿಗೆ ಹಿಂದಿರುಗಿದೆವು!  ಅಳಿಯ ಸೀಮಂತ ಶಾಸ್ತ್ರ ಮುಗಿಸಿ ಅಮೇರಿಕಾಗೆ ವಾಪಾಸು ಹೋದ.

  ಸಿದ್ದಮ್ಮಳಿಗೆ ಸಡಗರವೋ ಸಡಗರ. ಅಕ್ಷರವ್ವ, ನೀವು ಹೆರಿಗೆ ಬಾಣಂತನಕ್ಕೆ ಇಲ್ಲಿ ಬಂದು ಒಳ್ಳೆಯ ಕೆಲಸ ಮಾಡಿದ್ರಿ. ಎಂದು ದಿನಕ್ಕೆ ಒಂದೆರಡು ಸಲಾವಾದರೂ ಹೇಳಿದರೇ ಸಮಾಧಾನ ಅವಳಿಗೆ. ಆಗ ಅಕ್ಷರಿಯೂ, ಹೌದು, ಆ ಚಳಿಯಲ್ಲಿ ಮನೆಯೊಳಗೆ ಅಬ್ಬ, ಸಾಧ್ಯವಿಲ್ಲವಪ್ಪ ಅಲ್ಲಿ. ಸ್ನಾನ ಕೂಡ ಟಬ್ಬಲ್ಲಿ ಮಾಡಬೇಕಿತ್ತು. ಇಲ್ಲಾದರೆ ಸ್ನಾನ ಮಾಡಿಸಲು ನೀನಿದ್ದೀಯ. ಎನ್ನುತ್ತಿದ್ದಳು. ಆಗ ಸಿದ್ದಮ್ಮನಿಗೆ ಸಂತಸ ಉಕ್ಕಿ ಹರಿಯುತ್ತಲಿತ್ತು.

   ನೀನು ಅಕ್ಷರಿಗೆ  ಸ್ನಾನ ಮಾಡಿಸುತ್ತೇನೆಂದು ಹೇಳಿದ್ದೆ. ಆದರೆ ಮಗುವಿಗೆ ಸ್ನಾನ ಮಾಡಿಸಲು ನಿನಗೆ ಬರುವುದಿಲ್ಲವಲ್ಲ. ಏನು ಮಾಡುವುದು ಈಗ? ಎಂದು ಒಂದು ದಿನ ಕೇಳಿದೆ ಸಿದ್ದಮ್ಮಳನ್ನು. ನೀವ್ಯಾಕೆ ಚಿಂತೆ ಮಾಡುತ್ತೀರ? ಯಾರನ್ನಾದರೂ ಕರೆ ತರುತ್ತೇನೆ. ನಮ್ಮ ಮಗಳು ಛಾಯಾಳ ಅತ್ತೆ ಪುಟ್ಟಮ್ಮ ಮಗುವಿಗೆ ಚೆನ್ನಾಗಿ ನೀರು ಹಾಕುತ್ತಾಳೆ. ಅವಳಿಗೆ ಹೇಳ್ತೇನೆ ಎಂದು ಅಭಯವನ್ನಿತ್ತಳು. ಆ ಸಮಸ್ಯೆ ನಿವಾರಣೆ ಆದ ಖುಷಿಯಿಂದ ಗೋಣಾಡಿಸಿ, ನೀನಿರುವಾಗ ನನಗೇಕೆ ಚಿಂತೆ ಎಂದು ಹೇಳಿ ಚಿಂತ್ಯಾಕೆ ಮಾಡುತ್ತಿದ್ದಿ ಸಿದ್ದಮ್ಮಳಿದ್ದಾಳೆ ಎಂದು ಹಾಡು ಗೊಣಗಿದೆ!

    ಆ ಸಮಯದಲ್ಲಿ ಅಕ್ಷರಿಯೂ ನಾನು ದಿನಾ ಸಂಜೆ ಒಂದೊಂದು ಉದ್ಯಾನವನಕ್ಕೆ ವಾಯುವಿಹಾರಕ್ಕೆ ಹೋಗುತ್ತಿದ್ದೆವು. ಮೂರು ನಾಲ್ಕು ಕಿಮೀ ನಡೆಯುತ್ತಿದ್ದೆವು.  ಸಿಹಿ ತಿಂಡಿ, ಕುರುಕು ತಿಂದದ್ದನ್ನು ಸ್ವಲ್ಪವಾದರೂ ಅರಗಿಸಿಕೊಳ್ಳಬೇಕಲ್ಲ!

  ಈ ಮಧ್ಯೆ ಅಕ್ಷರಿಗೆ ಒಣಕೆಮ್ಮು ಬಾಧಿಸಿತು. ಬೇರೆ ಔಷಧಿ ತೆಗೆದುಕೊಳ್ಳುವಂತಿಲ್ಲ. ಕಾಕೆಮಾಚಿ (ಗಿಣಿಕೆ) ಸೊಪ್ಪಿನ ಪಲ್ಯ ಮಾಡಿಕೊಡಿ ಎಂದಿದ್ದರು ಸಿದ್ದಮ್ಮ ಹಾಗೂ ನಾಗರತ್ನ. ಆದರೆ ಸೊಪ್ಪು ಸಿಗಬೇಕಲ್ಲ. ನಮ್ಮಲ್ಲಿ ಒಂದೇ ಒಂದು ಗಿಡವಿತ್ತು. ಒಂದು ದಿನ ತಂಬುಳಿ ತಿಂದದ್ದಾಯಿತು. ಸೊಪ್ಪು ಖಾಲಿ. ಅನಂತನ ಗುರುತಿನವರಾದ ರವೀಶ ಮನೆಗೆ ಬಂದಾಗ ಅಕ್ಷರಿ ಕೆಮ್ಮುವುದನ್ನು ನೋಡಿ, ಕಾಕೆಮಾಚಿ ಸೊಪ್ಪಿನ ಪಲ್ಯ ಸ್ವಲ್ಪ ದಿನ ತಿನ್ನಿ. ಕೆಮ್ಮು ಹೋಗುತ್ತೆ ಎಂದು ನುಡಿದು ಅವರು ಕೆಲಸಕ್ಕಿದ್ದ ತೋಟದಿಂದ ಆಗಾಗ ಸೊಪ್ಪು ಕಳುಹಿಸಿಕೊಟ್ಟಿದ್ದರು. ಏನಾಶ್ಚರ್ಯ! ಆ ಸೊಪ್ಪಿನ ಪಲ್ಯ, ತಂಬುಳಿ ಸೇವಿಸಿದ್ದೇ ಕೆಮ್ಮು ಮಾಯವಾಗಿತ್ತು. ಅವರೆಲ್ಲರ ಈ ಕಾಳಜಿಗೆ ಎಷ್ಟು ಧನ್ಯವಾದ ಅರ್ಪಿಸಿದರೂ ಸಾಲದು.

 ಬಸರಿಯಲ್ಲಿ ಯಾವ ತರಕಾರಿ ತಿನ್ನಬಹುದು ತಿನ್ನಬಾರದು ಎಂದು ಒಬ್ಬೊಬ್ಬರು ಒಂದೊಂದು ಸಲಹೆ ಕೊಡುತ್ತಿದ್ದರು. ಹಸಿಮೆಣಸು ತಿನ್ನಲೇಬೇಡಿ, ಕೆಂಪುಮೆಣಸು ತಿನ್ನಿ ಒಳ್ಳೆಯದು.  ಬಾಳೆದಿಂಡು ತಿನ್ನಬೇಡಿ ಅದು ಉಷ್ಣ ಎಂದು ಒಬ್ಬರೆಂದರೆ, ಬಾಳೆದಿಂಡು ತಿನ್ನಬಹುದು ಏನಾಗಲ್ಲ ಎಂದು ಒಬ್ಬರು. ಹೀಗೆ ಸಂದಿಗ್ಧ ಪರಿಸ್ಥಿತಿ ಬಂದಿತ್ತು. ನಾವೇನೂ ಅಂಥ ಮಾತುಗಳಿಗೆ ಹೆಚ್ಚು ಮಹತ್ತ್ವ ಕೊಟ್ಟಿರಲಿಲ್ಲ. ಅಕ್ಷರಿ ಬಾಳೆದಿಂಡು ತಿಂದಿದ್ದಳು.

   ನಮ್ಮ ಅತ್ತೆಯ ತಂಗಿ ಸೀತಾ. ಅವರ ಮನೆಗೆ ನಾವು ಹೋದಾಗಲೆಲ್ಲ ನೀರು ಮಾವಿನಕಾಯಿ ಚಟ್ನಿ ಮಾಡಿಡುತ್ತಿದ್ದರು. ಅದು ಅಕ್ಷರಿಗೆ ಬಹಳ ಇಷ್ಟ. ಹಾಗೆ ಒಮ್ಮೆ ಸೀತತ್ತೆ ಫೋನ್ ಮಾಡಿ ಬಸರಿಗೆ ಏನು ತಿನ್ನಬೇಕೆಂದು ಬಯಕೆ ಆಗುತ್ತದೆ ಎಂದು ಅವಳನ್ನು ಕೇಳಿದ್ದರು. ನೀವು ಮಾಡುವ ನೀರು ಮಾವಿನಕಾಯಿ ಚಟ್ನಿ ತಿನ್ನಬೇಕೆಂದು ಆಸೆ ಆಗುತ್ತದೆ. ನೀವು ಇಲ್ಲಿಗೆ ಬರುವಾಗ ಮಾವಿನಕಾಯಿ ತಂದು ಇಲ್ಲಿ ಮಾಡಿಕೊಡಿ ಎಂದು ಅವಳು ತಮಾಷೆಗೆ ಹೇಳಿದ್ದಳು. ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡು, ಅವರಿಗೆ ಬರಲು ಆರೋಗ್ಯದ ತೊಂದರೆ ಎಂದು, ಒಂದಷ್ಟು ನೆಂಟರಿಷ್ಟರಿಗೆ ಫೋನ್ ಮಾಡಿ ನಿಮ್ಮಲ್ಲಿ ನೀರು ಮಾವಿನಕಾಯಿ ಇದೆಯಾ ಎಂದು ಕೇಳಿ, ಅವರ ಒಬ್ಬ ತಂಗಿ ಮನೆಯಲ್ಲಿ ಇದೆ ಎಂದು ತಿಳಿದು, ಅಲ್ಲಿಂದ ಇಲ್ಲಿಗೆ ಬರುವವರೊಡನೆ ಕಳುಹಿಸಲು ಏರ್ಪಾಡು ಮಾಡಿ ನೀರು ಮಾವಿನಕಾಯಿ ಕಳುಹಿಸಿಕೊಟ್ಟಿದ್ದರು! ನೀರು ಮಾವಿನಕಾಯಿ ತಲಪಿತು. ಆದರೆ ನೀವು ಮಾಡಿಕೊಟ್ಟರೆ ನನ್ನ ಬಯಕೆ ತೀರುವುದು ಎಂದು ಅಕ್ಷರಿ ಅವರ ಕಾಲೆಳೆದಿದ್ದಳು!

    ನಮ್ಮ ಅತ್ತೆಯ ಸ್ನೇಹಿತೆ ನಾಗಮ್ಮನವರು ದೂರವಾಣಿಸಿ, ಅಕ್ಷರಿಗೆ ಹೆರಿಗೆಗೆ ದಿನ ಸಮೀಪಿಸಿತಾ? ಯಾರು ಸಹಾಯಕ್ಕೆ ಬರುತ್ತಾರೆ? ನಿಮ್ಮ ಅಮ್ಮ ಬರುತ್ತಾರ? ಏಕೆ ಕೇಳಿದೆ ಅಂದರೆ ನಿನಗೆ ಹೊಸದಲ್ವೆ? ಅನುಭವ ಬೇಕಲ್ಲ. ನಿಭಾಯಿಸುವುದು ಕಷ್ಟ. ಸಹಾಯ ಬೇಕಾದರೆ ಹೇಳು ಎಂದಿದ್ದರು. ನಮ್ಮ ವಾರಗಿತ್ತಿ ಮಂಗಳೂರಿಂದ ಬರುತ್ತೇನೆಂದಿದ್ದಾಳೆ. ನಿಮ್ಮ ಈ ಪ್ರೀತಿಯೇ ಸಾಕು. ಬೇಕಿದ್ದರೆ ಖಂಡಿತಾ ನಿಮಗೆ ದೂರವಾಣಿಸುತ್ತೇನೆ ಎಂದು ಹೇಳಿದಾಗ ಅವರಿಗೆ ಸಮಾಧಾನವಾಯಿತು.

 ನಾಲ್ಕಾರು ಮನೆ ಕೆಲಸ ಮಾಡುವ ಭಾಗ್ಯ, ನಾಗರತ್ನ, ಚಿಕ್ಕತಾಯಮ್ಮ ಮನೆಗೆ ಬಂದು, ಬಾಣಂತಿ, ಮಗುವಿನ ಬಟ್ಟೆ ಒಗೆಯಲು, ಇತ್ಯಾದಿ ನಿಮಗೆ ಏನಾದರೂ ಸಹಾಯ ಬೇಕಾದರೆ ಫೋನ್ ಮಾಡಿ. ಸಂಕೋಚ ಮಾಡಿಕೊಳ್ಳಬೇಡಿ ಎಂದು ಹೇಳಿ ಹೋಗಿದ್ದರು.  ಎಷ್ಟೆಲ್ಲ ಜನ ಸಹಾಯ ಹಸ್ತ ಚಾಚಿದ್ದಾರಲ್ಲ ಎಂದು ಅವರಿಗೆಲ್ಲ ಮನ ಧನ್ಯವಾದ ಅರ್ಪಿಸಿತು. 

  ಅಕ್ಷರಿಗೆ ತಿಂಗಳು ತುಂಬಿ ಹೆರಿಗೆಗೆ ದಿನ ಸಮೀಸಿದಾಗ ಮಹೇಶ ವಿದೇಶದಿಂದ ಆಗಮಿಸಿದ. ಹೆರಿಗೆ ಸಮಯದಲ್ಲಿ ನಾನು ಬರುವೆ ಎಂದು ದೇವಕ್ಕಿ ಅಕ್ಕ ಹೇಳಿದ್ದವಳು ಮಂಗಳೂರಿನಿಂದ ಬಂದದ್ದು ನಮಗೆ ನಿರಾಳವಾಯಿತು. ಜಯಶ್ರೀ ಅಮೇರಿಕಾದಿಂದ ತವರಿಗೆ ಬಂದವಳಿದ್ದಳು. ಅವಳೂ ಆ ಸಮಯದಲ್ಲಿ ಬಂದಳು. ಇಬ್ಬರು ವಾರಗಿತ್ತಿಯರೂ ಬಂದದ್ದು ಮನೆ ಮನ ತುಂಬಿತು. ೪ ಜನವರಿ ೨೦೧೯ರಂದು ಅಕ್ಷರಿಗೆ ಹೆರಿಗೆಯಾಯಿತು. ಗಂಡು ಮಗು ಧರೆಗೆ ಇಳಿದ. ಆಸ್ಪತ್ರೆಯಲ್ಲಿ ನಾಲ್ಕು ದಿನ ಇದ್ದೆವು. ಮನೆ ಕಡೆ ಯಾವ ಚಿಂತೆಯೂ ಇರಲಿಲ್ಲ. ಎಲ್ಲ ಕೆಲಸ ದೇವಕ್ಕಿ ಅಕ್ಕ, ಜಯಶ್ರೀ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಅವರ ಈ ಸಹಾಯ ಲಭಿಸಿದ್ದು ನಮಗೆ ಬಹಳ ಉಪಕಾರವಾಯಿತು.



   ಇತ್ತ ಬಾಣಂತನದ ಕೆಲಸ ಸುರುವಾಯಿತು. ಮಗುವಿಗೆ ಸ್ನಾನ ಮಾಡಿಸಲು ಪುಟ್ಟಮ್ಮ ಬಂದಳು. ಒಂದು ತಿಂಗಳು ಗಂಧ ಚಂದನ ಮೈಗೆ ಹಚ್ಚಿ ಸ್ನಾನ. ೨ನೇ ತಿಂಗಳಿನಿಂದ ತುಪ್ಪ ಹಚ್ಚಿ ಸ್ನಾನ. ೨ ತಿಂಗಳು ಬಹಳ ಚೆನ್ನಾಗಿ ಸ್ನಾನ ಮಾಡಿಸಿದಳು. ಮಗುವಿಗೆ ಬಿಸಿನೀರು ಸುರಿದದ್ದೇ ಸುರಿದದ್ದು. ಅವರು ಹಾಕುವ ಬಿಸಿ ನೋಡಿ ನಾವು ಹೌಹಾರಿ ಇಷ್ಟು ಬಿಸಿ ಬೇಡ ಎಂದದ್ದಕ್ಕೆ, ನಿಮಗೆ ಗೊತ್ತಿಲ್ಲ. ಇಷ್ಟು ಬಿಸಿ ಹಾಕಬೇಕು. ಬಿಸಿ ನೀರು ಹಾಕಿ ಸ್ನಾನ ಮಾಡಿಸಿದರೇ ಮೈ ಬರುವುದು ಎಂದಿದ್ದರು. ಆಗ ಸಿದ್ದಮ್ಮನೂ ಹೌದವ್ವ, ಪುಟ್ಟಮ್ಮ ಸ್ನಾನ ಮಾಡಿಸಿದ ಮಕ್ಕಳೆಲ್ಲರೂ ಮೈಕೈ ತುಂಬಿ ಚೆನ್ನಾಗಿ ಬೆಳೆದಿದ್ದಾರವ್ವ ಎಂದು ಶಿಫಾರಿಸಿದಳು. ಆದರೂ ನಮಗೆ ಧೈರ್ಯ ಬರಲೇ ಇಲ್ಲ, ಡಾಕ್ಟ್ರು ಹೇಳಿದ್ದಾರೆ. ಇವನಿಗೆ ಇಷ್ಟು ಬಿಸಿನೀರು ಸ್ನಾನ ಮಾಡಿಸಬಾರದೆಂದು. ಎಂದು ಹೇಳಿದ್ದೆವು. ಆಗ ಮನಸ್ಸಿಲ್ಲದ ಮನಸ್ಸಿನಿಂದ ಸ್ವಲ್ಪ ಬಿಸಿ ಕಡಿಮೆ ಮಾಡಿದಳು. (ನಾವು ಬಿಸಿ ಬಿಸಿ ನೀರು ಹಾಕಲು ಬಿಡದೆ ಇದ್ದ ಕಾರಣ ಅವನು ಮೈತುಂಬಿ ಬೆಳೆಯಲಿಲ್ಲ. ಕಡ್ಡಿ ಪೈಲ್ವಾನನಾಗಿ ಬೆಳೆದದ್ದಿರಬೇಕು ಎಂದು ಈಗ ಅನಿಸುತ್ತದೆ!)  ಅವನಿಗೋ ತಲೆಗೆ ಸ್ನಾನ ಮಾಡಿಸಲೇ ಬಾರದು. ಮೈಗೆ ಎಷ್ಟು ನೀರು ಹಾಕಿದರೂ ಸೊಲ್ಲಿಲ್ಲ. ತಲೆಗೆ ನೀರು ಹಾಕಿದ ಕೂಡಲೇ ಸ್ವರ ತಾರವೇರುತ್ತಿತ್ತು. ನಿಲ್ಲಿಸುತ್ತಲೇ ಇರಲಿಲ್ಲ. ಸಾಕು ಸಾಕಾಗುತ್ತಿತ್ತು ಪುಟ್ಟಮ್ಮಳಿಗೆ.  ನನ್ನ ರಾಜ, ಚಿನ್ನು, ಆಯಿತು ಪುಟ್ಟ ಎಂದು ಎಷ್ಟು ರಮಿಸಿದರೂ ಅವನೇನೂ ಸುಮ್ಮನಾಗುತ್ತಿರಲಿಲ್ಲ. ಈಗಲೂ ಅಷ್ಟೆ ತಲೆಗೆ ನೀರು ಸುರಿದಾಕ್ಷಣ ಬೊಬ್ಬೆಯೇ. ಪುಟ್ಟಮ್ಮ ಮೈ ತಿಕ್ಕುವುದು, ಸಿದ್ದಮ್ಮ ನೀರು ಹಾಕುವುದು. ಮಗುವಿಗೆ ಒಬ್ಬರೇ ನೀರು ಹಾಕಿ ಸ್ನಾನ ಮಾಡಿಸಲು ಅವರಿಗೆ ಆಗುವುದಿಲ್ಲವಂತೆ. ನೀರು ಹಾಕಲು ಇನ್ನೊಬ್ಬರು ಇರಲೇಬೇಕಂತೆ. ನಮ್ಮಲ್ಲೆಲ್ಲ ಮಗುವನ್ನು ಕಾಲಲ್ಲಿ ಮಲಗಿಸಿ ಒಬ್ಬರೇ ನೀರು ಹಾಕಿ ಸ್ನಾನ ಮಾಡಿಸುತ್ತಿದ್ದುದು.

  ಮಗುವಿಗೆ ತುಪ್ಪ ಹಚ್ಚಿ ಕೈ ಕಾಲು ವ್ಯಾಯಾಮ ಮಾಡಿಸಬೇಕು ಎಂದು ತಿಳಿಸಿಕೊಟ್ಟಿದ್ದೆ ಪುಟ್ಟಮ್ಮಳಿಗೆ. ಅವಳು ತುಪ್ಪ ಮೆಲ್ಲಗೆ ಸವರಿ, (ಉಜ್ಜಿದರೆ ನೋವಾಗಬಾರದಲ್ಲ!) ಕೈ ಕಾಲನ್ನು ಮೇಲೆ ಕೆಳಗೆ ಒಮ್ಮೆ ಮಾಡಿ ಸಾಕು ಎನ್ನುತ್ತಿದ್ದಳು! ಅದನ್ನು ನೋಡಿ, ಇನ್ನು ಇವಳಿಗೆ ಈ ಕೆಲಸ ಹೇಳಬಾರದು ಎಂದು ನಾನೇ ತುಪ್ಪಹಚ್ಚಿ ಕೈಕಾಲು ವ್ಯಾಯಾಮ ಮಾಡಿಸುತ್ತಿದ್ದೆ.  ಕೈ ಕಟ್ಟಿ ಬಿಗಿದು ಮಾಡಿದರೆ ಅವನಿಗೆ ಬಹಳ ಸಂತೋಷ ಆಗುತ್ತಿತ್ತು.



  ಅವರು ಹೇಗೆ ಸ್ನಾನ ಮಾಡಿಸುತ್ತಾರೆ ಎಂದು ನಾವು ಹೋಗಿ ನೋಡುತ್ತಿದ್ದೆವು. ಅದು ಅವರಿಗೆ ಸರಿ ಬರುತ್ತಿರಲಿಲ್ಲ. ನೀವು ನೋಡ ಬಾರದು. ಕಣ್ಣೆಸರು ಆಗುತ್ತೆ ಮಗುವಿಗೆ ಎನ್ನುತ್ತಿದ್ದರು!  ನಾವು ಕಲಿತುಕೊಳ್ಳಬೇಕಲ್ಲ ಅದಕ್ಕೆ ನೋಡುವುದು ಎಂದು ಸಮಜಾಯಿಸಿ ಕೊಟ್ಟಿದ್ದೆವು! ಮಗಳು ವೀಡಿಯೋ ಕೂಡ ಮಾಡಿದಳು. ಅಕ್ಷರಿ ಊಟ ಮಾಡುವಾಗ ಅಪ್ಪಿತಪ್ಪಿಯೂ ಸಿದ್ದಮ್ಮ ಅಲ್ಲಿ ಕಾಲಿಡುತ್ತಿರಲಿಲ್ಲ. ಬಾಣಂತಿ ಊಟ ಮಾಡುವುದನ್ನು ನೋಡಬಾರದಂತೆ!

     ಅಕ್ಷರಿಗೆ ಸರಿಯಾಗಿ ಎಣ್ಣೆ ಮಸಾಜು ಮಾಡಿ ಬಿಸಿ ಬಿಸಿ ನೀರು ಒಂದು ಹಂಡೆ ಸ್ನಾನ ಮಾಡಿಸುತ್ತಿದ್ದಳು ಸಿದ್ದಮ್ಮ. ನಮ್ಮಲ್ಲಿ ಸೋಲಾರ್ ಇದ್ದರೂ ಅದು ಒಳ್ಳೆಯದಲ್ಲ ಮಗು ಬಾಣಂತಿಗೆ ಎಂದು ಸಿದ್ದಮ್ಮ ಒಲೆ ಉರಿ ಹಾಕಿ ಬಿಸಿ ನೀರು ಕಾಯಿಸುತ್ತಿದ್ದುದು! ಸಿದ್ದಮ್ಮ ತನ್ನ ಮಗಳಿಗಿಂತಲೂ ಹೆಚ್ಚಿನ ಮಮತೆಯಿಂದ ನೀರು ಹಾಕಿದ್ದಳು. ಸ್ನಾನದ ಸಮಯದಲ್ಲಿ ಅಕ್ಷರಿಗೂ ಅವಳಿಗೂ ಪುಂಖಾನುಪುಂಖವಾಗಿ ಮಾತಿನ ಲಹರಿ ನಡೆಯುತ್ತಲೇ ಇತ್ತು. ಇಬ್ಬರಿಗೂ ಮಾತು ಬಲು ಖುಷಿ. ಮಾತಿನ ಭರದಲ್ಲಿ ಸಲುಗೆಯಿಂದ ಏಕವಚನವೇ ಬರುತ್ತಿತ್ತಂತೆ. ಅದು ಸ್ನಾನದ ಮನೆಯಲ್ಲಿ ಮಾತ್ರ!  ಸ್ನಾನವಾದ ಮೇಲೆ ಅಕ್ಷರಿ ಹೊಟ್ಟೆಗೆ ಬಟ್ಟೆ ಬಿಗಿದು, ರಗ್ಗು ಹೊದ್ದು ಮಲಕ್ಕೊಳ್ಳಿ ಎನ್ನುತ್ತಿದ್ದಳು. ಇವಳು ಅವಳು ಇರುವಲ್ಲಿವರೆಗೆ ಹೊದ್ದಂತೆ ಮಾಡಿ ಆಚೆ ಹೋದ ಕೂಡಲೇ ಅಬ್ಬ ಸೆಖೆ ಎಂದು ರಗ್ಗು ಆಚೆ ಹಾಕುತ್ತಿದ್ದಳು. ಫ್ಯಾನ್ ಹಾಕಬಾರದು ಎಂದು ಉಪದೇಶಿಸಿದ್ದಳು. ಫ್ಯಾನ್ ಹಾಕಿದರೆ ಏನಾಗಲ್ಲ ಎಂದು ಅವಳಿಗೆ ಅಕ್ಷರಿ ಪಾಟ ಮಾಡಿದ್ದಳು. ಪಾಟ ಕೇಳಿ ಪ್ರಭಾವಿತಳಾದ ಸಿದ್ದಮ್ಮನೂ ಫ್ಯಾನ್ ಹಾಕಲು ಒಪ್ಪಿಗೆ ಕೊಟ್ಟಿದ್ದಳು!

   ಸಿದ್ದಮ್ಮ, ಅವಳ ಮಗಳು ಛಾಯಾ, ಅವಳತ್ತೆ ಪುಟ್ಟಮ್ಮ ಸೇರಿ್ಕೊಂಡು ಮಗು ಬಾಣಂತಿಯ ಎಲ್ಲ ಕೆಲಸವನ್ನೂ ಬಹಳ ಶ್ರದ್ಧೆ, ಪ್ರೀತಿಯಿಂದ ಮಾಡಿಕೊಟ್ಟಿದ್ದರು.

ಸಿದ್ದಮ್ಮ, ಛಾಯಾ
     ಸ್ನಾನವಾದಮೇಲೆ ಮಗು ಮಲಗುತ್ತಿದ್ದ. ಅವನನ್ನು ನಿದ್ದೆ ಮಾಡಿಸಲು ನಾವು ತೆಗೆದುಕೊಂಡಷ್ಟು ಸಮಯ ಕೂಡ ಅವನು ನಿದ್ದೆ ಮಾಡುತ್ತಿರಲಿಲ್ಲ! ಅಬ್ಬ ಇನ್ನೇನು ನಿದ್ದೆ ಮಾಡಿದ ಎಂದು ಮಲಗಿಸಿ ಬೇರೆ ಕೆಲಸಕ್ಕೆ ಹೋದರೆ ಹಿಂದಿನಿಂದಲೇ ಅಳು ಕೇಳಿಸುತ್ತಿತ್ತು! ಈಗಿನ ಮಕ್ಕಳಿಗೆ ನಿದ್ದೆ ಬಹಳ ಕಮ್ಮಿ ಎಂದು ನನ್ನನುಭವಕ್ಕೆ ಬಂದಿದೆ.  ರಾತ್ರೆ ಮಲಗಲು ಬಹಳ ಹೊತ್ತು ಮಾಡುತ್ತಾನೆ.  ಹೆತ್ತವರು ತಡ ರಾತ್ರೆ ಮಲಗಲು ತೆರಳಿದರೆ ಮಕ್ಕಳು ಕೂಡ ನಿಮ್ಮನ್ನು ಅನುಸರಿಸುತ್ತಾರೆ ಎಂದು ನಾನು ಮಗಳಿಗೆ ಹೇಳುತ್ತಿದ್ದೆ.

    ಮಗು ರಾತ್ರೆ ರಚ್ಚೆಕಟ್ಟಿ ಒಂದೆರಡು ಸಲ ಅತ್ತದ್ದಿತ್ತು. ಮಗು ಏಕೆ ಹಾಗೆ ಅಳುತ್ತಿದೆ ಎಂದು ತಿಳಿಯಲು ಈಗ ಅಜ್ಜಿ, ಅಮ್ಮನ ಅವಶ್ಯವಿಲ್ಲ.  ಗೂಗಲಮ್ಮನ ಒಳ ಹೊಕ್ಕು, ಓ ಅದು ಹೊಟ್ಟೆ ನೋವಿಗೆ ಅಳುತ್ತಿರುವುದು. ಹೊಕ್ಕುಳ ಸುತ್ತ ಇಂಗು ಹಚ್ಚಿದರೆ ಹೊಟ್ಟೆ ನೋವು ಕಡಿಮೆ ಆಗುತ್ತದೆ ಎಂದು ತಿಳಿದುಕೊಂಡು ಆ ಚಿಕಿತ್ಸೆ ಮಾಡಿದ್ದಳು! ಮಗು ಕೂಡ ಅಳು ನಿಲ್ಲಿಸಿ ನಿದ್ರಿಸಿತ್ತು! ಗ್ರೈಪ್ ವಾಟರ್ ಕೊಡು, ನಿನಗೆ ನಾನು ಅದೇ ಕೊಟ್ಟಿದ್ದೆ ಎಂದು ತಾಯಿ, ಅಜ್ಜಿ ಹೇಳುವ ದೃಶ್ಯ ಅವಶ್ಯವಿಲ್ಲ ಈಗ!

 ಮಗುವಿಗೆ ಮಾತ್ರವಲ್ಲ ಅವಳಿಗೂ ಏನಾದರೂ ಅಸೌಖ್ಯವಾದರೆ ಗೂಗಲಮ್ಮ ಪರಿಹಾರ ಸೂಚಿಸುತ್ತಿದ್ದಳು! ಅವಳು ದಶಮೂಲ ಅರಿಷ್ಟವನ್ನು ದಿನಕ್ಕೆ ಒಮ್ಮೆ ತೆಗೆದುಕೊಂಡಿದ್ದಳು. ಬೇರೆ ಔಷಧಿ ಲೇಹ್ಯ ಯಾವುದೂ ಇಲ್ಲ. ಪೌಷ್ಟಿಕ ಲಡ್ಡು (ಒಣಹಣ್ಣುಗಳನ್ನು ಹಾಕಿ) ಒಮ್ಮೆ ಮಹೇಶ ರುಚಿಯಾಗಿ  ಮಾಡಿದ್ದ. ಎರಡು ಸಲ ಮಾಡಿದ್ದೆವು ಅಷ್ಟೆ.  


 ಬಾಣಂತನ ಮಾಡುವ ಅನುಭವ ಸ್ವಲ್ಪ ಈ ಮೊದಲೇ ನನಗೆ ಇತ್ತು. ನನ್ನ ಅಕ್ಕಂದಿರ ಬಾಣಂತನ, ನನ್ನ ಬಾಣಂತನದ ನೆನಪಿನಿಂದ ಹಾಗೂ ಅಮ್ಮ, ಅಕ್ಕನಿಗೆ ದೂರವಾಣಿಸಿ ಸಲಹೆ ಪಡೆದು ಅಕ್ಷರಿಯ ಬಾಣಂತನ ಮಾಡಲು ಏನೂ ಕಷ್ಟವಾಗಲಿಲ್ಲ. ಹೆರಿಗೆಯಾಗಿ ಹತ್ತು ದಿನ ಬೆಳಗ್ಗೆ ಕುಚ್ಚಿಲಕ್ಕಿ ಗಂಜಿ, ಮತ್ತೆ ಬೆಳಗ್ಗೆ ನೀರುದೋಸೆ, ಅಕ್ಕಿ ಮುದ್ದೆ, ಅಕ್ಕಿ ರೊಟ್ಟಿ ಇತ್ಯಾದಿ, ಮಧ್ಯಾಹ್ನ ತಂಬುಳಿ, ಪಲ್ಯ, ಸೋರೆಕಾಯಿ ಬೋಳುಹುಳಿ, ಸಾಂಬಾರು, ಮಜ್ಜಿಗೆಹುಳಿ ನಮಗೆ ನಿತ್ಯ ಏನು ಮಾಡುತ್ತದೋ ಅದೇ ಅವಳ ಆಹಾರದ ಸೇವನೆ. ಮಗುವಿಗೆ ಆರು ತಿಂಗಳ ತನಕ ತಾಯಿಹಾಲು ಬಿಟ್ಟು ಬೇರೇನೂ ಕೊಡಲಿಲ್ಲ. ನೀರು ಸಹಿತ ಕುಡಿಸಲಿಲ್ಲ. ಆರು ತಿಂಗಳನಂತರ ೧೦ ತಿಂಗಳವರೆಗೂ ಕೂವೆಹುಡಿ ಮಣ್ಣಿ, ರಾಗಿ ಮಣ್ಣಿ. ಒಮ್ಮೊಮ್ಮೆ ಗಿವುಚಿದ ಅನ್ನ ಬೇಳೆ ತರಕಾರಿ.  ೧೦ ತಿಂಗಳನಂತರ   ಬೆಳಗ್ಗೆ ದೋಸೆ, ಇಡ್ಲಿ ಇತ್ಯಾದಿ. ಮದ್ಯಾಹ್ನ ಅನ್ನ ಸಾರು ತರಕಾರಿ ಇತ್ಯಾದಿ. ಊಟ. ಊಟ ತಿಂಡಿಯಲ್ಲಿ ಬಹಳ ರುಚಿ ಆಸ್ವಾದಿಸುವ ಕಲೆ ಈಗಿನಿಂದಲೇ ಬಂದಿದೆ ಅವನಿಗೆ! ರುಚಿ ಇಲ್ಲಾಂದರೆ ಹಾಕಿದ ತುತ್ತನ್ನು ಮುಲಾಜಿಲ್ಲದೆ ಉಗಿಯುತ್ತಿದ್ದ.

   ಮಗುವಿನ ಆರೈಕೆ, ಮಗಳ ಬಾಣಂತನ ಪಾಲನೆಯಲ್ಲಿ ದಿನ ಸರಿದದ್ದೇ ತಿಳಿಯಲಿಲ್ಲ. ಇಂದು ಯಾವ ದಿನ? ಯಾವ ತಿಂಗಳು ಎಂದೂ ತಿಳಿಯಲು ಸಮಯವಿಲ್ಲ! ಮಗು ಬಾಣಂತಿ ನೋಡಲೆಂದು ನೆಂಟರಿಷ್ಟರ ಆಗಮನ, ಹೀಗೆಯೇ ಮನೆಯಲ್ಲಿರುವ ನಾವು ಸಂಭ್ರಮದಿಂದ ದಿನ ಕಳೆದೆವು.




        ಮಗುವಿಗೆ ಆರು ತಿಂಗಳು ಕಳೆದಾಗ ನಾಮಕರಣವೂ ಅದ್ದೂರಿಯಾಗಿ ನೆರವೇರಿತು. ಮಗುವಿಗೆ  ಆರುಷ್ ಎಂದು ನಾಮಾಂಕುರ ಮಾಡಲಾಯಿತು.  ಆರುಷನ ಬಾಲಲೀಲೆಗಳನ್ನು ನೋಡುತ್ತ ದಿನ ಸರಿದದ್ದು ಬಲು ಬೇಗ ಎನಿಸಿತ್ತು.

  ಆರುಷನಿಗೆ ಬಲು ಚಂದದ ಮರದ ತೊಟ್ಟಿಲು ಮಾಡಿಸಿದ್ದೆವು. ಅದರಲ್ಲಿ ಅವನು ಮಲಗಿದ್ದೇ ಬಲು ಕಡಿಮೆ. ಆಟಕ್ಕೆ ಮಾತ್ರ ಅದರಲ್ಲಿ ಮಲಗುತ್ತಿದ್ದ. ಮಂಗಳೂರಿನ ದೇವಕ್ಕಿ ಅಜ್ಜಿ ಅವನಿಗೆ ಒಂದು ಜೋಲಿ ಕೊಟ್ಟಿದ್ದರು. ಅದರಲ್ಲಿ ಮಲಗುವುದೆಂದರೆ ಅವನಿಗೆ ಬಲು ಖುಷಿ. ಒಂದು ವರ್ಷದ ತನಕವೂ ಅದರಲ್ಲೆ ಮುದುಡಿ ಮಲಗಿ ಖುಷಿಯಿಂದ ನಿದ್ರಿಸಿದ್ದ. ಆರುಷನಿಗೆ ಪ್ರೀತಿ ತೋರಿಸಿದವರು ಅದೆಷ್ಟು ಮಂದಿ. ಡಜನುಗಟ್ಟಲೆ ಅಂಗಿ, ಚಡ್ಡಿ, ಆಟದ ಸಾಮಾನು ಉಡುಗೊರೆಯಾಗಿ ಬಂದಿತ್ತು. ನಮ್ಮ ಸಿದ್ದಮ್ಮ ಆರುಷನಿಗೆ (ಅವಳು ಕರೆಯುವುದು ನಮ್ಮ ಚಿನ್ನು) ಚಿನ್ನದ ಉಂಗುರ ಮಾಡಿಸಿ ತಂದು, ಅವ್ವ, ನೀವು ಬೈಬೇಡಿ. ರವಿ (ಅವಳ ಮಗ) ಮಾಡಿಸಿ ತಂದದ್ದು ಇದು ನಮ್ಮ ಚಿನ್ನುಗೆ ಎಂದು ಕೊಟ್ಟಿದ್ದಳು! ಛಾಯಾ ಪುಟ್ಟಮ್ಮ ತೊಟ್ಟಿಲಿಗೆ ಕಟ್ಟಲು ಗಿರಗಟ್ಲೆ ಗೊಂಬೆ ತಂದಿದ್ದರು. ನಾಗರತ್ನ ರೂ ೫೦೦ ಕೊಟ್ಟು ಹರಸಿದ್ದಳು.  ವರೆಲ್ಲರ ಪ್ರೀತಿಗೆ ನಮೋ ನಮಃ  

ಕೃಷ್ಟಾಷ್ಟಮಿ ದಿನ ಆರುಷನಿಗೆ ಕೃಷ್ಣನ ವೇಷ ಹಾಕಿ ನಾವು ಸಂಭ್ರಮಿಸಿದೆವು.


       ಆರುಷನಿಗೆ ಮೊದಲ ಜನುಮದಿನದ ಸಂಭ್ರಮವೂ ಕಳೆಯಿತು. ಕೆಲವೇ ಮಂದಿ ನೆಂಟರಿಷ್ಟರೊಡನೆ ಸರಳವಾಗಿ ಆಚರಿಸಿದೆವು. ಆರುಷ ಬುಗ್ಗೆ ನೋಡಿ ಬಹಳ ಖುಷಿ ಪಟ್ಟ. ಅವನಮ್ಮ ಮನೆಯಲ್ಲೇ ಕೇಕ್ ತಯಾರಿಸಿದ್ದನ್ನು ಖುಷಿಯಿಂದ ಕೈಯಲ್ಲಿ ಹಿಚುಕಿ ಮುಖಕ್ಕೆ ಅವನೇ ಮೆತ್ತಿಕೊಂಡು ಖುಷಿಪಟ್ಟ. ಅವನ ಅವತಾರ, ಖುಷಿ ನೋಡಿ ನಾವೂ ನಕ್ಕು ನಲಿದೆವು.


   ಮಕ್ಕಳನ್ನು ಬೆಳೆಸುವ ಬಗೆ ಹೇಗೆ ಎಂದು ನಮ್ಮ ಅತ್ತೆಯ ಸ್ನೇಹಿತೆ ಸುಂದರೀಮಣಿ  ಅಕ್ಷರಿಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದರು. ನೀನು ಅಡುಗೆ ಮಾಡುವ ಸಮಯದಲ್ಲಿ ಮಗುವಿಗೆ ಒಂದು ತಟ್ಟೆಯಲ್ಲಿ ಪುರಿ ಹಾಕಿ ಕೊಡು. ಅವನು ಅದನ್ನು ನೆಲಕ್ಕೆ ಚೆಲ್ಲಿ ಒಂದೊಂದೆ ಹೆಕ್ಕಿ ತಿನ್ನುವಾಗ ನಿನ್ನ ಕೆಲಸ ಮುಗಿಯುತ್ತದೆ. ಮಗುವಿಗೆ ಸಂಗೀತ ಹಾಕು. ಕೇಳಿ ಖುಷಿ ಪಡುತ್ತವೆ ಎಂದಿದ್ದರು. ಮಗಳು ಅವರ ಈ ಸಲಹೆಯನ್ನು ಚಾಚೂ ತಪ್ಪದೆ ಅನುಸರಿಸಿ ಗೆದ್ದಿದ್ದಳು.

    
ಈಗ ಆರುಷ್ ನಮಗೆ ಶಿಸ್ತಿನ ಪಾಟ ಕಲಿಸುವಷ್ಟು ತಯಾರಾದ. ಪೇಪರ್ ಓದುತ್ತ ಕಾಫಿ ಹೀರಿ, ಲೋಟ ಅಲ್ಲೇ ಕೆಳಗೆ ಇಟ್ಟು ಬಿಡುವ ಸ್ವಭಾವ ನನ್ನದು. ಆರುಷ್ ಅದನ್ನು ನೋಡಿ ಕೈ ತೋರಿಸಿ ಅಲ್ಲಿಂದ ಅದನ್ನು ತೆಗೆಯುವವರೆಗೂ ಬಿಡುವುದಿಲ್ಲ! ಅವನೇ ಲೋಟ ಎತ್ತಿ ಅಡುಗೆ ಮನೆಯಲ್ಲಿಟ್ಟು ಬರುತ್ತಾನೆ. ನೀರು ಚೆಲ್ಲಿದ್ದು ಕಂಡರೆ ಅದನ್ನು ಆ ಕೂಡಲೇ ಒರೆಸಬೇಕು. ಅಲ್ಲೆ ಯಾವ ಬಟ್ಟೆಯಾದರೂ ಕಂಡರೆ ಅವನೇ ಹೋಗಿ ಬಟ್ಟೆ ತಂದು ಒರೆಸುತ್ತಾನೆ. ಅವನು ಮೂತ್ರ ಮಾಡಿದರೂ ಅಷ್ಟೆ. ಅವನ ಚಡ್ಡಿ ಅಲ್ಲೆ ಇದ್ದರೆ ಅದರಲ್ಲೇ ಒರೆಸುತ್ತಾನೆ. ನನ್ನ ಚೂಡಿದಾರದ ಶಾಲು ಇದ್ದರೆ ಅದನ್ನೇ ವರೆಸಲು ಉಪಯೋಗಿಸುತ್ತಾನೆ! ಅನ್ನದ ಮುಚ್ಚಳ, ತುಪ್ಪದ ಮುಚ್ಚಳ, ಮೇಲೋಗರದ ಮುಚ್ಚಳ ತೆಗೆದಿಟ್ಟರೆ, ಮುಚ್ಚುವಲ್ಲಿವರೆಗೂ ಬಿಡುವುದಿಲ್ಲ. ಕೋಪ ಬಂದರೆ ನಮ್ಮ ಕೂದಲೂ ಎಳೆಯುತ್ತಾನೆ. ಆಗ ಅದೇನು ಶಕ್ತಿ, ಕಣ್ಣಲ್ಲಿ ನೀರೇ ಬಂದೀತು ನಮಗೆ. ನೀನು ಕೂದಲು ಎಳೆಯುವುದು ತಪ್ಪಲ್ವಾ? ಎಂದು ಜೋರು ಮಾಡಿದರೆ ಕೂಡಲೇ ತನ್ನ ಪುಟ್ಟ ಕೈಯನ್ನು ನಮ್ಮ ಮುಖಕ್ಕೆ ಸವರಿ ತಲೆ ಕೆಳಗೆ ಹಾಕಿ ಕ್ಷಮೆ ಕೋರುತ್ತಾನೆ. ಆಗ ನಮಗೆ ಬಂದ ಸಿಟ್ಟೆಲ್ಲ ಕರಗಿ ಮಾಯವಾಗಿ ಅವನನ್ನು ಮುದ್ದಿಸುವಂತಾಗುತ್ತದೆ. ಅಲ್ಲಿಗೆ ಅವನು ಸಂತುಷ್ಟ.


   ಕೊರೊನಾ ಹಾವಳಿಯಿಂದಾಗಿ ಆರುಷ್ ಒಡನಾಟ ಲಭಿಸಿದ್ದು ಲಾಭವಾಯಿತು. 










  ಆರುಷನಿಗೆ ಎರಡು ವರ್ಷವೂ ತುಂಬಿ ಜನುಮದಿನಾಚರಣೆಯೂ ನಡೆಯಿತು.




    ಮಕ್ಕಳು ಈ ಪ್ರಾಯದಲ್ಲಿ ನಮ್ಮನ್ನು ನೋಡಿ ಕಲಿಯುತ್ತವೆ. ಹಾಗಾಗಿ ನಾವು ಒಳ್ಳೆಯ ಮಾತನ್ನೇ ಆಡಬೇಕು. ನಮ್ಮ ಸದ್ವರ್ತನೆಯಿಂದ ಮಕ್ಕಳೂ ಒಳ್ಳೆಯ ಬುದ್ಧಿ ಕಲಿಯುತ್ತಾರೆ. ಮಕ್ಕಳು ಹಟ ಮಾಡಿ ಅತ್ತು ರಂಪ ಮಾಡಿದರೆ ಅವರ ಗಮನ ಬೇರೆಡೆಗೆ ಸೆಳೆಯಬೇಕು, ಇಲ್ಲವೆ ಅವರನ್ನು ಅಲ್ಲೇ ಬಿಟ್ಟು ಅವರ ಸುದ್ದಿಗೇ ಹೋಗಬಾರದು. ಆಗ ಸರಿಯಾಗುತ್ತಾರೆ ಎಂದಿದ್ದೆ ಮಗಳಿಗೆ. ಅವಳೇನೂ ನನ್ನ ಮಾತನ್ನು ಒಪ್ಪಿರಲಿಲ್ಲ ಆಗ. ಗೂಗಲಮ್ಮನ ಮೊರೆ ಹೊಕ್ಕು ಪರಿಶೀಲಿಸಿದಾಗ ನೀನು ಹೇಳಿದ್ದು ಸರಿ. ಹಾಗೆಯೇ ಮಾಡಬೇಕೆಂದು ಗೂಗಲಿನಲ್ಲಿತ್ತು ಎಂದಿದ್ದಳು! ಗೂಗಲಮ್ಮನ ಶಂಖದಿಂದ ಬಂದರೇ ತೀರ್ಥ! ಗೂಗಲಮ್ಮನಿಗೆ ಜೈ. ಅಕ್ಷರಿಯ ಬಾಣಂತನದ ಸಮಯದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದವರಿಗೆಲ್ಲ ತುಂಬು ಹೃದಯದಿಂದ ಧನ್ಯವಾದ ಅರ್ಪಿಸುತ್ತೇವೆ. ಇಲ್ಲಿಗೆ ಬಾಣಂತಿ ಪುರಾಣವನ್ನು ಕೊನೆಗಾಣಿಸುತ್ತೇನೆ.






8 ಕಾಮೆಂಟ್‌ಗಳು:

  1. ಬಹಳ ಚೆಂದವಾಗಿ ಬರೆದ್ದಿದೀರ . ಅಕ್ಷರಿಗೂ ಮೊದಲು ೬ ತಿಂಗಳ ಮುಂಚೆ ನಾನು ನನ್ನ ಮಗಳು ನಮಿತಾಳ ಬಾಣನತನ ಮಾಡಿದ್ದೆ . ಹಾಗಿದ್ದರೂ ನೀವು ಮಾಡಿರುವ ಬಾಣಂತನದ ಬಗ್ಗೆ ಓದಲು ಕುತೂಹಲಕಾರಿಯಾಗಿತ್ತು .ನಿಮ್ಮ ಲೇಖನ ಬಹಳ ಇಷ್ಟವಾಯ್ತು .

    ಪ್ರತ್ಯುತ್ತರಅಳಿಸಿ
  2. ಸೊಗಸಾದ ಬರಹ. ಅರುಷನ ಬಾಲಲೀಲೆ ಓದಿ ಖುಷಿ ಆಯಿತು.

    ಪ್ರತ್ಯುತ್ತರಅಳಿಸಿ