ಏಸೊಂದು ಮುದವಿತ್ತು ಆ ಕಾಲ. ಸುಮಾರು ೧೯೭೫ರ ದಶಕ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಿತ್ತನಡ್ಕದಲ್ಲಿ ಒಂದರಿಂದ ಏಳನೇ ಈಯತ್ತೆ ವರೆಗೆ ನಮ್ಮ ವಿದ್ಯಾಭ್ಯಾಸ ನಡೆದಿತ್ತು. ಶಾಲೆಗೆ ನಮ್ಮ ಮನೆಯಿಂದ ಒಂದು ಮೈಲಿ ದೂರವಿತ್ತು. ಶಾಲೆಗೆ ಹೋಗಲು ಎರಡು ದಾರಿಯಿತ್ತು. ಒಂದು ವಾಹನ ಹೋಗುವಂಥ ರಸ್ತೆ ಮಾರ್ಗ. ಇನ್ನೊಂದು ಗದ್ದೆ ಬದು, ತೋಡು ಸಂಕದಲ್ಲಿ ದಾಟಿ, ತೋಟದ ಬದಿ ನಡೆದು ಹೋಗುವಂಥ ಕಿರು ದಾರಿ. ಈ ದಾರಿ ಸ್ವಲ್ಪ ಹತ್ತಿರ. ಆದರೆ ಈ ದಾರಿಯಲ್ಲಿ ಹೋಗಲು ನಮಗೆ ಅನುಮತಿ ಇರಲಿಲ್ಲ. ಮಕ್ಕಳು ಮಳೆಗಾಲದಲ್ಲಿ ತುಂಬಿ ಹರಿಯುವ ತೋಡಿನ ಬಳಿ ಹೋಗುವುದು, ಗದ್ದೆಬದುವಿನಲ್ಲಿ ನಡೆಯುವುದು ಬೇಡವೆಂದು ಹಿರಿಯರ ತೀರ್ಮಾನ. ಅವರ ತೀರ್ಮಾನಕ್ಕೆ ನಾವು ಬದ್ಧರು. ಹಾಗಾಗಿ ನಾವು ಹೋಗುತ್ತಿದ್ದುದು ರಸ್ತೆ ದಾರಿಯಲ್ಲಿ. ಅರ್ಧ ಭಾಗ ರಸ್ತೆ, ಇನ್ನರ್ಧ ದಾರಿ ಗುಡ್ಡ ಹತ್ತಿ (ದೂರವನ್ನು ಕಡಿಮೆಗೊಳಿಸಲು ಕಂಡುಕೊಂಡ ಉಪಾಯ) ಗುಡ್ಡದ ದಾರಿಯಲ್ಲಿ ಸಾಗುತ್ತಿದ್ದೆವು. ರಸ್ತೆ ದಾರಿಯಲ್ಲಿ ಸಾಗುವಾಗ ಐದಾರು ಮಂದಿ ಜೊತೆಗೂಡುತ್ತಿದ್ದರು. ಮಾತಾಡಿಕೊಂಡು ನಡೆಯುತ್ತ ಸಾಗುತ್ತಿದ್ದೆವು. ಆಗ ಬಸ್ಸಿನ ಸೌಕರ್ಯ, ಸ್ವಂತ ವಾಹನ, ರಿಕ್ಷಾವಾಗಲಿ ಇರಲಿಲ್ಲ. ನಡೆದೇ ಹೋಗಬೇಕಿತ್ತು.
ನಮ್ಮ ಶಾಲೆಯಲ್ಲಿ
ಮಧ್ಯಾಹ್ನ ೧೨.೪೫ರಿಂದ ೨ ಗಂಟೆವರೆಗೆ ಊಟದ ವಿರಾಮ. ಬಾವಿಯಿಂದ ನೀರು ಸೇದಿ ಕೈ ತೊಳೆದು ನಾವು ಬುತ್ತಿಯೂಟ
ಮಾಡುತ್ತಿದ್ದುದು. ಊಟದ ನಂತರ ಕೂಡ ನೀರು ಸೇದಿ ಕೈ ತೊಳೆದು ಬೇಕಷ್ಟು ನೀರು ಕುಡಿದು ಬುತ್ತಿ ತೊಳೆಯುತ್ತಿದ್ದೆವು.
ಸಣ್ಣ ಮಕ್ಕಳಿಗೆ ದೊಡ್ದವರು ನೀರು ಸೇದಿ ಕೊಡುತ್ತಿದ್ದರು. ಊಟವಾದನಂತರ ಕೈ ತೊಳೆಯಲು ಒಂದು ಕೊಡ ನೀರು
ಸೇದಿ ಮೊದಲೇ ಇಡುತ್ತಿದ್ದರು. ಎಷ್ಟೋ ಸಲ ಕೊಡದ ಕುಣಿಕೆ
ಬಿಗುವಾಗಿರದೆ ನೀರು ಸೇದುವಾಗ ಕೊಡ ಬಾವಿಗೆ ಬಿದ್ದುದೂ ಇತ್ತು. ಏಳನೆ ತರಗತಿಯ ಹುಡುಗರಲ್ಲಿ ಯಾರಾದರೊಬ್ಬರು
ಬಾವಿಗೆ ಇಳಿದು ಕೊಡ ಹೊರ ತೆಗೆಯುತ್ತಿದ್ದರು. ಈ ಸಾಹಸವನ್ನು ನೋಡಲು ಕಿಕ್ಕಿರಿದು ನಾವು ಮಕ್ಕಳು ಬಾವಿಯ
ಸುತ್ತ ನಿಲ್ಲುತ್ತಿದ್ದೆವು!
ಶಾಲೆಯ ಸಮೀಪದಲ್ಲೇ
ಇದ್ದ ಪುಟ್ಟ ಕಾಡಿಗೆ ಊಟವಾಗಿ ನಮ್ಮ ಸವಾರಿ ಹೊರಡುತ್ತಿತ್ತು. ಕೈಯಲ್ಲಿ ತೊಳೆದ ಬುತ್ತಿ ಡಬ್ಬ. ಆ
ಕಾಡೊಳಗೆ ಎರಡು ಮೂರು ಸರಳಿಮರ ಇದ್ದುವು. ಸರಳೀಹಣ್ಣು ಬಿಡುವ ಕಾಲದಲ್ಲಿ ಪ್ರತೀದಿನ ಅಲ್ಲಿ ಹೋಗಿ ಬಿದ್ದ
ಸರಳೀಹಣ್ಣನ್ನು ಹೆಕ್ಕಿ ಒಂದಷ್ಟು ಬಾಯಿಗೆ ಹಾಕಿಕೊಂಡು, ಮಿಕ್ಕವನ್ನು ಬುತ್ತಿಡಬ್ಬದೊಳಗೆ ತುಂಬುತ್ತಿದ್ದೆವು.
ಯಾರ್ಯಾರಿಗೆ ಎಷ್ಟು ಹಣ್ಣು ಸಿಕ್ಕಿತು ಎಂದು ಲೆಕ್ಕ ಮಾಡುತ್ತಿದ್ದೆವು! ಆಗ ಸರಿಯಾಗಿ ಶಾಲೆಯ ಘಂಟೆ ಬಾರಿಸಿದ ಸದ್ದು ಕೇಳಿದಾಗ ಅಲ್ಲಿಂದ
ದೌಡಾಯಿಸಿ ಕೊಟಡಿಗೆ ಮರಳುತ್ತಿದ್ದೆವು. ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಿದ ಸಹಪಾಟಿಗಳಿಗೆ ಉದಾರವಾಗಿ
ಸರಳೀಹಣ್ಣು ಕೊಡುತ್ತಿದ್ದೆವು. ಅವರು ರುಚಿಯಾದ ಸರಳೀಹಣ್ಣು ತಿನ್ನುವುದರಿಂದ ವಂಚಿತರಾಗಬಾರದಲ್ಲ.
ಹುಳಿಸಿಹಿ ಮಿಶ್ರಿತ ಸರಳಿಹಣ್ಣು ತಿಂದವರೇ ಬಲ್ಲರು ಆ ರುಚಿಯ. ಈಗ ಸೇಬು ಎದುರಿಗಿದ್ದರೂ ಅಂದು ತಿಂದ
ಸರಳೀಹಣ್ಣಿನ ರುಚಿಗೆ ಸಮ ಇಲ್ಲವೆಂದೇ ನಮ್ಮ ಅಭಿಪ್ರಾಯ! ಕಂಪಾಸು ಪೆಟ್ಟಿಗೆಯೊಳಗೆ ಸಾಂತಾಣಿ (ಹಲಸಿನ
ಬೀಜ), ಪುಳಿಂಕೊಟೆ (ಹುಣಸೆಬೀಜ)ಜೊತೆಗೆ ಈ ಸರಳೀಹಣ್ಣಿಗೂ ಸ್ಥಳವಿತ್ತು! ಸರಳಿಹಣ್ಣು ಮನೆವರೆಗೂ ತಲಪಿ
ಅಮ್ಮನಿಗೂ ಪಾಲು ಕೊಡುವ ಕ್ರಮವಿತ್ತು. ಉಳಿದ ಹಣ್ಣನ್ನು ಕೋಪಿ ಬರೆಯುತ್ತ ಒಂದೊಂದೇ ಬಾಯಿಗೆ ಹಾಕಿಗೊಳ್ಳುತ್ತಿದ್ದೆವು!
ಕಾಡುಹಣ್ಣುಗಳು ಬೆಳೆಯುವ ಸಮಯದಲ್ಲಿ ಸಂಜೆ ಶಾಲೆಯಿಂದ ಮನೆಗೆ ಬರುವಾಗ ಗುಡ್ಡೆ ಗುಡ್ಡೆ ಸುತ್ತಿ ಮುಳ್ಳಣ್ಣು, ಕೇಪುಳಹಣ್ಣು,
ಕುಂಟಾಲಹಣ್ಣು, ಮಡಕೆಹಣ್ಣು, ಅಬ್ಲುಕ್ಕಹಣ್ಣು ಎಲ್ಲವನ್ನೂ ಕೊಯಿದು ತಿನ್ನುತ್ತ ಮನೆ ಸೇರುವಾಗ ಎಂದಿಗಿಂತ
ಅರ್ಧ ಗಂಟೆ ತಡವಾಗುತ್ತಿತ್ತು. ನಮ್ಮ ಮನೆಗೆ ತಿರುಗುವ ರಸ್ತೆಯಿಂದ ಅರ್ಧ ಫರ್ಲಾಂಗು ದೂರದಲ್ಲಿ ಒಂದು
ಅಬ್ಲುಕ್ಕ ಹಣ್ಣಿನ ಮರವಿತ್ತು. ಮರದಲ್ಲಿ ತುಂಬ ಹಣ್ಣುಗಳು. ಮರಹತ್ತಲು ನಿಪುಣಳಾದ ನಾನು ಒಂದು ದಿನ ಮರಹತ್ತಿ ಹಣ್ಣು
ಕೊಯ್ಯುತ್ತಿದ್ದೆ. (ಆಗ ನಡೆದ ಘಟನೆ ಮರೆಯಲು ಸಾಧ್ಯವೇ ಇಲ್ಲ.) ಆಗ ಆ ಮನೆಯವರು ಅವರ ನಾಯಿಯನ್ನು ಬಿಟ್ಟರು.
ನಾಯಿ ಬೊಗಳಿದ್ದು ಕೇಳಿದ್ದೇ ಮರದ ಮೇಲಿದ್ದ ನಾನು ಗಡಿಬಿಡಿಯಿಂದ ಮರ ಇಳಿಯುವಾಗ ನನ್ನ ಅಂಗಿ ಮುಳ್ಳಿಗೆ
ಸಿಕ್ಕಿ ಹರಿದಿತ್ತು. ಅಬ್ಲುಕ್ಕ ಮರದಲ್ಲಿ ಅಲ್ಲಲ್ಲಿ ಮುಳ್ಳುಗಳಿವೆ. ಅಷ್ಟು ಹಣ್ಣುಗಳಿದ್ದು, ಮಕ್ಕಳು ತಿನ್ನದೆ ಯಾರು ತಿನ್ನುವುದು
ಅವುಗಳನ್ನು? ಸುಮ್ಮನೆ ಬಿದ್ದು ಹಾಳಗಿ ಹೋಗುತ್ತವಷ್ಟೆ. ನಾಯಿ ಬಿಟ್ಟು ನಮ್ಮನ್ನು ಓಡಿಸಿದ್ದು ಬಹಳ
ತಪ್ಪು! ನಾವು ಈಗಲೂ ಅವರ ಈ ತಪ್ಪನ್ನು ಕ್ಷಮಿಸುವುದಿಲ್ಲ!
ನೆರವಾದ ಮಹೇಂದ್ರ ಹೆಗಡೆಯವರಿಗೆ ಧನ್ಯವಾದ. ಅಬ್ಲುಕ್ಕ ಹಣ್ಣಿನ, ಮರದ ಪಟ ಕಳುಹಿಸಿಕೊಟ್ಟ ಅತ್ತಿಗೆ ರುಕ್ಮಿಣೀದೇವಿಗೆ ಧನ್ಯವಾದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ