ಭಾನುವಾರ, ಜುಲೈ 4, 2021

 ೧) ಬಗದ್ದು ತಪ್ಪ

ಬಯಸಿದ್ದು ಸಿಕ್ಕ

 ‘ಜೊಂಕೆ ಈರುಳ್ಳಿ ಬೇಕಾ?’ ಎಂದು ಇತ್ತೀಚಿನ ಕೆಲವು ವರ್ಷಗಳಿಂದ ತಪ್ಪದೆ ಎಪ್ರಿಲ್ ಮೇ ತಿಂಗಳಲ್ಲಿ ತಮ್ಮ ವಿಟ್ಲ ಪುತ್ತೂರು ಪೇಟೆಗೆ ಹೋದವನು  ಕರೆ ಮಾಡುತ್ತಾನೆ. ಹಾಗೆಯೇ ಈ ವರ್ಷವೂ ಮಾಡಿದಾಗ ,  ಈ ಕೊರೊನಾ ಕಾಲದಲ್ಲಿ ಯಾವಾಗ ಬರಲಾಗುತ್ತದೋ ಗೊತ್ತಿಲ್ಲ, ಹಾಗಾಗಿ ಬೇಡ  ಎಂದಿದ್ದೆ. ಜೊಂಕೆ ಈರುಳ್ಳಿ ಹಸಿ ತಿನ್ನಲು ಬಹಳ ರುಚಿ. ನನಗೆ ಬಲು ಇಷ್ಟವಿದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಶಃ ಕುಂದಾಪುರದ ಕಡೆ ಈ ತಳಿಯ ಈರುಳ್ಳಿಯನ್ನು ಜಾಸ್ತಿ ಬೆಳೆಯಲಾಗುತ್ತದೆ ಎಂದು ಕಾಣುತ್ತದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು, ವಿಟ್ಲದಲ್ಲಿ ಅಂಗಡಿಗಳಲ್ಲಿ ಆ  ಸಮಯದಲ್ಲಿ ಕಾಣುತ್ತದೆ. 

 ಬೆಂಗಳೂರಲ್ಲಿರುವ ತಂಗಿ ಎಪ್ರಿಲ್ ತಿಂಗಳಲ್ಲಿ ಊರಿಗೆ ಹೋಗಲಿದೆ ಎಂದು ಈರುಳ್ಳಿ ತೆಗೆದಿಡಲು ತಮ್ಮನಿಗೆ ಹೇಳಿದ್ದಳು. ಆದರೆ ಕೊರೊನಾ ಹಾವಳಿಯಿಂದಾಗಿ ಅವಳು ಊರಿಗೆ ಹೋಗಲಿಲ್ಲ.  ದೊಡ್ಡಣ್ಣ ಊರಿಗೆ ಹೋದವನು ಬರುತ್ತ ಅವಳಿಗಿರುವ ಈರುಳ್ಳಿಯನ್ನು ಮೈಸೂರಿಗೆ ತಂದಿದ್ದ. ಬೆಂಗಳೂರಲ್ಲಿರುವ ಅಕ್ಕ ಮೈಸೂರಿಗೆ ಬಂದವಳು ಹೋಗುವಾಗ ಅದನ್ನು ಕೊಂಡೋಗುವುದೆಂದು ತೀರ್ಮಾನವಾಗಿತ್ತು. ಆಗ ಸರಿಯಾಗಿ ಲಾಕ್ ಡೌನ್ ಸುರುವಾಗಿತ್ತು. ಹೇಗೋ ಹರಸಾಹಸ ಮಾಡಿ ಅವಳು ಬೆಂಗಳೂರು ಮನೆ ತಲಪಿದ್ದಳು. ಆದರೆ ಈರುಳ್ಳಿ ಕೊಂಡೋಗಲು ಅವಳಿಂದ ಸಾಧ್ಯವಾಗಿರಲಿಲ್ಲ!  ಹಾಗಾಗಿ ಆ ಈರುಳ್ಳಿ ನನಗೆ ಲಭಿಸಿತು!

   ಈ ಸುದ್ದಿಯನ್ನು ತಂಗಿಗೆ ತಿಳಿಸಿದಾಗ, ನಿನಗೆ ಬಗದ್ದು ಎಂದಳು. ಈ ಬಗದ್ದು ಎಂಬ ಶಬ್ದ ನನಗೆ ತಿಳಿದದ್ದು ಸುಮಾರು ೨೦ ವರ್ಷಗಳ ಕೆಳಗೆ. ನಾವು ಉತ್ತರಕನ್ನಡದ ಕಡೆ ಪ್ರವಾಸ ಹೋಗಿದ್ದಾಗ, ದಾರಿಯಲ್ಲಿ ಯಾಣಕ್ಕೆ ೧೫ಕಿಮೀ ಎಂಬ ಫಲಕ ಕಂಡು, ಅಲ್ಲಿಗೆ ಹೋಗೋಣ ಎಂಬ ಮಗಳ ಆಸೆಗೆ ಅಲ್ಲಿಗೆ ಗಾಡಿ ತಿರುಗಿಸಿದೆವು. ಒಂದು ಕಡೆ ಗಾಡಿ ನಿಲ್ಲಿಸಿ, ಕಾಲ್ನಡಿಗೆಯಲ್ಲಿ ಮುಂದುವರಿದೆವು. ನಮಗೆ ದಾರಿ ಗೊತ್ತಿಲ್ಲ. ಯಾಣದ ಬಂಡೆ ಹೇಗಿರುತ್ತದೆ ಎಂದು ಚಿತ್ರ ನೋಡಿ ಗೊತ್ತಿತ್ತು. ಸುಮಾರು ದೂರ ಮುಂದುವರಿದೆವು. ನಮಗೆ ಯಾಣದ ಬಂಡೆ ಸಿಗಲಿಲ್ಲ. ಮೋಹಿನಿ ಬಂಡೆಯನ್ನಷ್ಟೇ ನೋಡಿ ಹಿಂದಿರುಗಿದೆವು. ಅಮ್ಮ ಕಾರಿನಲ್ಲಿ ಕಾಯುತ್ತಲಿದ್ದರು. ಹಾಗಾಗಿ ಮುಂದೆ ಹೋಗಿ ಹುಡುಕಲು ಮುಂದಾಗಲಿಲ್ಲ. ಅದಾಗಲೇ ಮಧ್ಯಾಹ್ನ ಊಟದ ಹೊತ್ತು. ನಾವು ಕಾರು ನಿಲ್ಲಿಸಿದ ಕಡೆ ಒಬ್ಬಳ ಮನೆಯಲ್ಲಿ ನಮಗೆ ಅನ್ನ ಸಾಂಬಾರು ಪಲ್ಯ ಮಾಡಿ ಹಸಿದ ಹೊಟ್ಟೆಗೆ ಬಡಿಸಿದಳು. ಬಹಳ ರುಚಿಯಾಗಿತ್ತು. ಆಗ ಅಮ್ಮ, ನಮಗೆ ಇಲ್ಲಿ ಇಂದು ಊಟ ಬಗದ್ದು ಎಂದು ಹೇಳಿದ್ದರು. ಆವಾಗಲೇ ನಾನು ಆ ಶಬ್ದ ಕೇಳಿದ್ದು. ಅದರನಂತರ ನಾವು ಮಕ್ಕಳು, ಈ ಶಬ್ದವನ್ನು ಆಗಾಗ ಉಪಯೋಗಿಸುತ್ತಲಿದ್ದೇವೆ.

  ಅಕ್ಕ ಮೊನ್ನೆ ದೂರವಾಣಿಯಲ್ಲಿ ಮಾತಾಡುತ್ತ, ಈರುಳ್ಳಿ ನನಗೆ ಸಿಕ್ಕ ಸಂದರ್ಭವನ್ನು, ಬಗದ್ದು ತಪ್ಪ ಬಯಸಿದ್ದು ಸಿಕ್ಕ ಎಂಬ ಹವ್ಯಕ ಗಾದೆ ಹೇಳುವ ಮೂಲಕ ವಿವರಿಸಿದಳು! ನನ್ನ ತಂಗಿ ಆಸೆಪಟ್ಟು ನೀರುಳ್ಳಿ ತೆಗೆಸಿಟ್ಟಿದ್ದಳು. ನಾನು ಬೇಡವೆಂದವಳಿಗೆ ಅದು ಸಿಕ್ಕಿತ್ತು. ಕಳೆದ ವರ್ಷವೂ ಕೊರೊನಾ ಕಾರಣದಿಂದ ಅವಳಿಗೆ ಈರುಳ್ಳಿ ಲಭಿಸಿರಲಿಲ್ಲ.

 ೨) ಫಲ ಕೊಟ್ಟು ಪಾಪ ಕಳೆದುಕೊ

ಸರಸರ ಮರ ಏರಿ ತೆಂಗಿನಕಾಯಿ ಕೊಯಿದುಹಾಕಿ, ಅದನ್ನು ಚೀಲಕ್ಕೆ ತುಂಬಿಟ್ಟ ಮಹೇಶ. ಇದೆಲ್ಲ ಕೆಲವೇ ನಿಮಿಷಗಳ ಕೆಲಸ ಅಷ್ಟೆ ಅವನಿಗೆ.

ಹೇಗಿದೆ ತೋಟ? ಏನು ಬೆಳೆ ಹಾಕಿದೆ? ದುಡ್ದು ಕೊಡುತ್ತ ಪ್ರಶ್ನೆ ಕೇಳಿದೆ.

ತೋಟ ಚೆನ್ನಾಗಿದೆ. ನೂರು ನೇಂದ್ರ  ಬಾಳೆ ಹಾಕಿದ್ದೇನೆ. ತೊಗರಿಕಾಳು ಫಲ ಬಿಟ್ಟಿದೆ. ಟೊಮೆಟೊದಿಂದ ೨ ಲಕ್ಷ ಬಂತು. ಈಗ ಪಪ್ಪಾಯಿ ಗಿಡ ಹಾಕಿದ್ದೇನೆ.    ಸಿಹಿಗುಂಬಳ ದೊಡ್ಡಗಾತ್ರದ್ದು ಮಸ್ತಾಗಿ ಬಿಟ್ಟಿವೆ. ಎಂದು ವರ್ಣಿಸಿದ.

 ಸಿಹಿಗುಂಬಳ ಮಾರಿ ಎಷ್ಟು ದುಡ್ಡು ಬಂತು? ಕುತೂಹಲದಿಂದ ಕೇಳಿದೆ.

ಅವನ್ನು ಮಾರುವ ಹಾಗಿಲ್ಲ. ನಿಮ್ಮಂತವರಿಗೆ ಕೊಡುತ್ತೇವೆ. ಇವತ್ತು ನಾಲ್ಕು ತಂದು ನಿಮ್ಮಂತವರಿಗೆ (ಅಂದರೆ ಬ್ರಾಹ್ಮಣರಿಗೆಂದರ್ಥ!) ಕೊಟ್ಟು ಬಂದೆ. ಎಂದ.

ಮಾರುವುದಿಲ್ಲವೆ ಏಕೆ? ಪರಮಾಶ್ಚರ್ಯದಿಂದ ಪ್ರಶ್ನಿಸಿದೆ.

ನಾವು ಲಿಂಗಾಯತರು. ಸಿಹಿಗುಂಬಳ ಮಾರುವಂತಿಲ್ಲ. ಅದನ್ನು ಏನಿದ್ದರೂ ‘ಫಲಕೊಟ್ಟು ಪಾಪ ಕಳಿ’ ಎಂದು ಬ್ರಾಹ್ಮಣರಿಗೆ ದಾನ ಕೊಡಬೇಕು ಎಂದು ಹೇಳುತ್ತಲೇ ಸೈಕಲ್ ಏರಿ ಹೊರಟೇ ಹೋದ.

ಹೀಗೂ ಉಂಟೆ?! ಎಂದು ಯೋಚಿಸುತ್ತ ನಾನು ಬೆಪ್ಪುತಕ್ಕಡಿಯಂತೆ ಅವನು ಹೋಗುವುದನ್ನೇ ನೋಡುತ್ತ ನಿಂತೇ ಇದ್ದೆ. ಸದ್ಯ ಅವನು ನಮಗೆ ಸಿಹಿಗುಂಬಳ ಇದುವರೆಗೂ ತಂದು ಕೊಟ್ಟಿಲ್ಲ. ಅವನ ಪಾಪ ನಾವು ಪಡೆದುಕೊಂಡಿಲ್ಲ ಎಂಬುದೇ ಸಮಾಧಾನದ ವಿಷಯ!

ರುಕ್ಮಿಣಿಮಾಲಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ