ಶುಕ್ರವಾರ, ಜುಲೈ 23, 2021

ನೆನಪಿನೊಳಗಿದ್ದ ಸ್ಥಿರ ದೂರವಾಣಿಯ ಕಥೆ

 ದಕ್ಷಿಣಕನ್ನಡ ಜಿಲ್ಲೆಯ ಅಪ್ಪಟ ಹಳ್ಳಿ ಪರಿಸರದಲ್ಲಿ ೧೮ ವರ್ಷ ನಲಿದು ಬೆಳೆದ ನಾನು ಇಸವಿ ೧೯೮೭ರಲ್ಲಿ ವಿವಾಹಾನಂತರ ಮೈಸೂರಿನ ನಗರ ಜೀವನಕ್ಕೆ ಕಾಲಿಡಬೇಕಾಯಿತು. ಅತ್ತೆಮಾವರಿದ್ದ ಮನೆ. ಹೊಸ ಪರಿಸರ. ಮಾವ ಜಿಟಿ. ನಾರಾಯಣರಾವ್ ವಿಜ್ಞಾನ ಲೇಖಕರಾಗಿ, ಶಿಸ್ತಿಗೆ ಇನ್ನೊಂದು ಹೆಸರೇ ಜಿಟಿ.ಎನ್ (ಎನ್. ಸಿಸಿ. ಅಧಿಕಾರಿಗಳಾಗಿದ್ದಾಗ,) ಎಂದು ಹೆಸರು ಗಳಿಸಿದ್ದವರು.

  ಭಾರತೀಯ ಸಂಚಾರಿ ನಿಗಮದ ದೂರವಾಣಿ ಅದಾಗಲೇ ಮನೆಯಲ್ಲಿತ್ತು. (ಸರಿಸುಮಾರು ೧೯೭೫ನೇ ಇಸವಿಯಲ್ಲಿ ಮಾವ ಬರೆದ ಬಲವಿಜ್ಞಾನದ ತತ್ತ್ವಗಳು ಎಂಬ ಪುಸ್ತಕಕ್ಕೆ ಸಾವಿರ ರೂಪಾಯಿ ಗೌರವಧನ ಬಂದಾಗ ದೂರವಾಣಿ ಹಾಕಿಸಿದ್ದೆಂದು ಅನಂತನ ನೆನಪು) ನನಗೋ ದೂರವಾಣಿಯಲ್ಲಿ ಮಾತಾಡುವುದು ಬಿಡಿ, ನೋಡುವುದೇ ಹೊಸದು. ಒಂದು ಸಂಜೆ ಅತ್ತೆ ಮಾವ ಹೊರಗೆ ಹೋಗಿದ್ದರು. ಒಬ್ಬಳೇ ಮನೆಯಲ್ಲಿದ್ದೆ. ಆಗ ನಮ್ಮ ಅದಿತಿ ಅತ್ತಿಗೆಯ ಆಗಮನವಾಯಿತು. ಆಗ ಅವರ ಮನೆ ನಾಲ್ಕು ಬೀದಿ ಆಚೆಗೆ ಇತ್ತು. (ಈಗ ಆ ಮನೆ ಮಾರಾಟ ಮಾಡಿ ಬೇರೆ ಕಡೆ ಮನೆ ಕಟ್ಟಿಸಿದ್ದಾರೆ.) ನಾನೂ ಅವಳೂ ಮಾತಾಡುತ್ತ ಕೂತಿದ್ದಾಗ, ದೂರವಾಣಿ ಕರೆ ರಿಂಗಣಿಸಿತು. ನಾನು ಅದನ್ನು ತೆಗೆಯಲು ಹೋಗಲಿಲ್ಲ. ತೆಗೆದು ಮಾತಾಡು ಎಂದು ಅತ್ತಿಗೆ ಒತ್ತಾಯಿಸಿದಾಗ ತೆಗೆದುಕೊಂಡೆ. ಯಾರು ಮಾತಾಡುವುದು ಎಂದು  ಅತ್ತಲಿಂದ ಕೇಳಿದರು. ನನ್ನ ಹೆಸರು ಹೇಳಿದೆ. ಅವರಿಗೆ ಗೊತ್ತಾಗಲಿಲ್ಲ. ಏನು ಹೇಳುವುದು ಎಂದು ತೋಚದಿದ್ದಾಗ, ಅನಂತನ ಹೆಂಡತಿ ಎಂದು ಹೇಳು ಎಂದು ಅತ್ತಿಗೆಯೇ ಹೇಳಿಕೊಟ್ಟಳು. ಅತ್ತಲಿಂದ ನಾನು ಅನಂತನಾರಾಯಣರ ಹೆಂಡತಿ ವಸಂತ ಮಾತಾಡುವುದು ಎಂದರು. ಹೀಗೆ ಮೊತ್ತ ಮೊದಲು ದೂರವಾಣಿಯಲ್ಲಿ ಮಾತಾಡಿದ್ದು ಅನಂತನಾರಾಯಣರ ಪತ್ನಿ ಜೊತೆ! ಅನಂತನ ಹೆಂಡತಿ ಅನಂತನಾರಾಯಣರ ಹೆಂಡತಿ ಜೊತೆ ಮಾತಾಡಿದಳು ಎಂದು ಅತ್ತಿಗೆ ತಮಾಷೆ ಮಾಡಿದ್ದಳು.

ಮಾವ ಅತ್ತೆ ಮನೆಯಲ್ಲಿದ್ದರೆ ದೂರವಾಣಿಯಲ್ಲಿ ಮಾತಾಡುವ ಪ್ರಮೇಯ ನನಗೆ ಬರುತ್ತಿರಲಿಲ್ಲ. ನಮ್ಮ ತವರಿನಲ್ಲಿ ದೂರವಾಣಿ ಇರಲಿಲ್ಲ. ಹಾಗಾಗಿ ನನಗೆಂದು ಯಾರೂ ಕರೆ ಮಾಡುವ ಪ್ರಸಂಗವೇ ಇರಲಿಲ್ಲ. ಮಾವನಿಗೆ ನಿತ್ಯ ಹತ್ತಾರು ಕರೆಗಳು ಬರುತ್ತಿದ್ದುವು. ಕರೆ ಸ್ವೀಕರಿಸಿದ ಕೂಡಲೇ, ‘ನಮಸ್ಕಾರ ನಾರಾಯಣ ರಾವ್’ ಎಂದು ಕಂಚಿನ ಕಂಠದಿಂದ ಹೇಳುತ್ತಿದ್ದರು. ಅತ್ತಲಿಂದ ಹಲೋ ಎಂದರೆ ಅವರಿಗೆ ಕೋಪ ಬರುತ್ತಲಿತ್ತು. ಆ ಕೋಪ ಶಮನಗೊಳಿಸಲು ನನಗೆ ಪಾಠ ಮಾಡುತ್ತಿದ್ದರು. ಆದರೆ ಈ ಪಾಠ ಕೇಳಿ ಪಾಲಿಸಲು ನನ್ನ ಮನ ಒಪ್ಪಲಿಲ್ಲ. ನಾನು ಹೆಸರು ಹೇಳಿದರೆ ಉಪಯೋಗವಾಗುತ್ತಿರಲಿಲ್ಲ.  ನಾನು ಯಾರೆಂದೇ ಗೊತ್ತಿಲ್ಲವಲ್ಲ ಎಂದೇನೋ ನಾನು ಇದುವರೆಗೂ ಆ ಪಾಠವನ್ನು ಮಾತ್ರ ಕಲಿಯಲೇ ಇಲ್ಲ. ಮಾವ ಸುಮಾರು ಸಲ ಹೇಳುತ್ತಲೇ ಇದ್ದರು. ಹೇಳಿದರೂ ಪ್ರಯೋಜನ ನಾಸ್ತಿ. ಇದು ಕಲಿಯುವ ಪ್ರಾಣಿಯಲ್ಲ ಎಂದನಿಸಿತೋ ಏನೋ ಮಾವ ಮತ್ತೆ ಪಾಠ ಕಲಿಸುವ ಪ್ರಯತ್ನ ಮಾಡಿರಲಿಲ್ಲ! ಅತ್ತೆ, ಅನಂತ ಕರೆ ಸ್ವೀಕರಿಸುವಾಗ ಹೆಸರು ಹೇಳಿಕೊಳ್ಳುತ್ತಿದ್ದರು. ಅವರು ವಿಧೇಯ ಶಿಷ್ಯರು!

   
   ಮಾವ ಪ್ರತಿ ನಿತ್ಯ ಸಂಜೆ ವಾಯುವಿಹಾರಕ್ಕೋ, ಸಂಗೀತ ಕಚೇರಿಗೋ ಹೋಗುತ್ತಿದ್ದರು. ಮನೆಯೊಳಗೆ ಕಾಲಿಟ್ಟೊಡನೆ, ಮೊದಲ ಪ್ರಶ್ನೆ ಯಾರಾದರೂ ಫೋನ್ ಮಾಡಿದ್ದಾರ? ಎಂದಾಗಿತ್ತು. ಹೌದು ಎಂದು ಉತ್ತರಿಸಿದರೆ, ಯಾರು ಮಾಡಿದ್ದರು? ಏನು ಹೇಳಿದರು? ಎಂಬ ಮರು ಪ್ರಶ್ನೆ. ಯಾರೆಂದು ಹೇಳಲಿಲ್ಲ ಅವರು ಎಂದುತ್ತರ ಕೊಟ್ಟರೆ, ಯಾರು ಎಂದು ನೀನೇ ಕೇಳಬೇಕು. ಅವರ ಫೋನ್ ನಂ ಕೇಳಿ ಬರೆದಿಟ್ಟುಕೊಳ್ಳಬೇಕು ಎಂಬ ಉಪದೇಶ. ಹೇಳಿಕೇಳಿ ಉಪನ್ಯಾಸಕರಾಗಿದ್ದವರು, ವಿಧೇಯ?! ಶಿಷ್ಯೆ ಸಿಕ್ಕಿದಾಗ ಪಾಠ ಮಾಡುವ ಅವಕಾಶವನ್ನು ಬಿಡುವುದುಂಟೆ?  ಒಮ್ಮೊಮ್ಮೆ ಅತ್ತಲಿಂದ ಹೆಸರು ಹೇಳಿದ್ದರೂ ಗಮನ ಕೊಡದ ಕಾರಣ ಅವರ್ಯಾರು ಫೋನ್ ಮಾಡಿದ್ದೆಂದು ಮಾವನಿಗೆ ಹೇಳಲು ಮರೆತಿರುತ್ತಿದ್ದೆ. ಮತ್ತೆ ಮರುದಿನ ಅವರೇ ಫೊನ್ ಮಾಡಿ, ನಿನ್ನೆ ಮಾಡಿದ್ದೆ ಎಂದರೆ, ಅವರು ಕರೆ ಕೈದುಗೊಳಿಸಿದ ಕೂಡಲೇ ನಾರಾಯಣರ ಹರಿಕಥೆ ಸುರು! ನಿನ್ನೆ ಇಂಥವರು ಫೋನ್ ಮಾಡಿದ್ದರೂ ಕೂಡ ನೀನು ಹೇಳಲೇ ಇಲ್ಲವೆಂದು ದೂರು. ಇದು ಒಳ್ಳೆಯ ಫಚೀತಿಯಾಯಿತಲ್ಲ. ಇನ್ನು ಮುಂದೆ ಇಂಥ ಪ್ರಶ್ನೆ ಎದುರಾಗಬಾರದೆಂದು ಒಂದು ಉಪಾಯ ಕಂಡುಕೊಂಡೆ. ನಮ್ಮಲ್ಲಿ ಒಂದು ಬದಿ ಬರೆದ ಕಾಗದಗಳಿಗೆ ಬರವಿಲ್ಲ. ಅವನ್ನೆಲ್ಲ ಕತ್ತರಿಸಿ ಒಂದು ಪುಸ್ತಕ ಮಾಡಿದೆ. ಅದರಲ್ಲಿ ಆಯಾ ದಿನದ ತಾರೀಕು ಬರೆದು ಇಂಥವರು ಕರೆ ಮಾಡಿದರೆಂದು ಬರೆದಿಡುತ್ತಿದ್ದೆ. ಮಾವ ಕೆಲವಾರು ವಾರ ಊರಲ್ಲಿಲ್ಲದಿದ್ದರೂ ಆ ಸಮಯದಲ್ಲಿ ಯಾರಾದರೂ ಫೋನ್ ಮಾಡಿದ್ದನ್ನು ಬರೆದಿಡುತ್ತಿದ್ದೆ. ಏಕೆಂದರೆ, ಮಾವ ಹೋಗಿದ್ದ ಊರಿನಿಂದ ಮನೆಗೆ ಕರೆ ಮಾಡಿ, ಕುಶಲ ಪ್ರಶ್ನೆಗಳಾದ ಮೇಲೆ ಯಾರಾದರೂ ಫೋನ್ ಮಾಡಿದ್ದರೆ? ಟಪಾಲು ಏನಾದರೂ ಬಂದಿದೆಯೇ ಎಂಬುದಾಗಿತ್ತು! ಬರೆದಿಟ್ಟದ್ದನ್ನು ಓದಿ ವರದಿ ಒಪ್ಪಿಸುತ್ತಿದ್ದೆ. ಈ ಶಿಸ್ತು ನೋಡಿ ಮಾವ ಸಂಪ್ರೀತಗೊಳ್ಳುತ್ತಿದ್ದರು. ಹಾಗೆ ದೂರವಾಣಿ ಕರೆಗಳ ದೆಸೆಯಿಂದ ಮಾವನಿಂದ ನಾನು ಸಾಕಷ್ಟು ಪಾಠವನ್ನೂ ಶಿಸ್ತನ್ನೂ ಕಲಿತಿದ್ದೆ. ಈ ಪಾಠದ ಸಮಯದಲ್ಲಿ ಎಲ್ಲಾದರೂ ಅತ್ತೆ ನನ್ನ ರಕ್ಷಣೆಗೆ ಬಂದರೆ ಮಾವ ಸುಮ್ಮನಿರುತ್ತಿರಲಿಲ್ಲ. ನನಗೆ ಸರಿಯಾಗಿ ಮನದಟ್ಟು ಆಗಿದೆ ಎಂದು ಖಾತ್ರಿ ಆದಮೇಲೇಯೇ ಅವರು ಅವರ ಕೆಲಸದೆಡೆಗೆ ತೆರಳುತ್ತಿದ್ದುದು!

  ದೂರವಾಣಿ  ಕರೆ ಬಂದಾಗ, ಅದನ್ನು ಕೇಳಿಸಿಕೊಳ್ಳಲು ಮಾವ, ಅತ್ತೆ, ಅಕ್ಷರಿಗೆ ಇದ್ದಷ್ಟು ಉಮೇದು ನಮಗಿಬ್ಬರಿಗೂ ಇರಲಿಲ್ಲ. ಕರೆ ಬಂದಾಗ ಅನಂತ ತೆಗೆದುಕೊಳ್ಳುತ್ತಾನೆ ಎಂದು ನಾನು ಸುಮ್ಮನಾದರೆ, ನಾನು ತೆಗೆದುಕೊಳ್ಳಲಿ ಎಂದು ಅವನೂ ಅದರ ತಂಟೆಗೆ ಹೋಗದೆ ನಾವಿಬ್ಬರೂ ತೆಗೆದುಕೊಳ್ಳದೆ ಕರೆ ಕೈದುಗೊಂಡ ಪ್ರಸಂಗವೂ ಎಷ್ಟೋ ಸಲ ನಡೆದಿದೆ.  ಮಗಳು ತುಸು ದೊಡ್ಡವಳಾದ ಬಳಿಕ, ಕರೆ ಬಂದ ಕೂಡಲೇ ಓಡಿ ಹೋಗಿ ಅವಳೇ ತೆಗೆದುಕೊಳ್ಳುತ್ತಿದ್ದುದು. ಅದರಲ್ಲಿ ಅಜ್ಜನಿಗೂ ಮೊಮ್ಮಗಳಿಗೂ ಪೈಪೋಟಿ ಏರ್ಪಡುತ್ತಿತ್ತು! ನಿನಗಲ್ಲ, ಸುಮ್ಮನೆ ಸಮಯ ವ್ಯರ್ಥಮಾಡುತ್ತಿ ಎಂದು ಅಜ್ಜ, ಇರಜ್ಜ, ಯಾರೆಂದು ಕೇಳಿ ನಿನಗೆ ಕೊಡುತ್ತೇನೆ ಎಂದು ಇವಳು ಹೀಗೆ ಪ್ರೀತಿಯ ಕಲಹ ಸದಾ ನಡೆಯುತ್ತಲಿತ್ತು.

     ನಮ್ಮ ಮದುವೆಯ ಬಳಿಕ, ಮಾವನ ಓದು ಬರವಣಿಗೆಗೆ ಕೆಳಗಿನ ಕೋಣೆಯಲ್ಲಿದ್ದವರು ಮಹಡಿ ಕೋಣೆಗೆ ಸ್ಥಳಾಂತರಗೊಂಡರು. ಆಗ ಮಹಡಿಗೆ ಹೊರಗಿನಿಂದ ಮಾತ್ರ ಮೆಟ್ಟಲು ಇದ್ದದ್ದು.  ಬೆಳಗ್ಗೆ ತಿಂಡಿ, ಸ್ನಾನಾನಂತರ ಮಾವ ಮಹಡಿಗೆ ಹೋದರೆ, ೧೧ ಗಂಟೆಗೆ ಚಹಾ ಕುಡಿಯಲು ಕೆಳಗೆ ಬರುತ್ತಿದ್ದರು. ಹೆಚ್ಚಿನ ಸಮಯವೂ ಅಲ್ಲಿಯೇ ಓದು ಬರವಣಿಗೆ ಸಾಗುತ್ತಿತ್ತು. ಯಾರಾದರೂ ಮಾವನ ಭೇಟಿಗೆ ಬಂದರೆ ಮಹಡಿಗೇ ಹೋಗುತ್ತಿದ್ದುದು.  ಮಾವ ಮಹಡಿಯಲ್ಲಿದ್ದಾಗ ದೂರವಾಣಿ ಕರೆ ಬಂದಾಗ, ಅತ್ತೆ ಕರೆ ಸ್ವೀಕರಿಸುತ್ತಿದ್ದರು, ನಾನು ಮಹಡಿಗೆ ಓಡಿ ಹೋಗಿ ತಿಳಿಸುತ್ತಿದ್ದೆ. ಹೀಗೆ ನನ್ನ ಸವಾರಿ ನಾಲ್ಕೈದು ಸಲವಾದರೂ ಮೇಲೆ ಕೆಳಗೆ ಹೋಗಿ ಬರುತ್ತಿತ್ತು. ಮಾವನೂ ಯಾವ ಬೇಸರವಿಲ್ಲದೆ ಅಷ್ಟು ಸಲ ಮಹಡಿ ಇಳಿದು ಬರುತ್ತಿದ್ದರು! ಒಮ್ಮೊಮ್ಮೆ ಮಾವ ಕೆಳಗೆ ಬರುವಷ್ಟರಲ್ಲಿ ಕರೆ ಕೈದಾಗಿರುತ್ತಿತ್ತು. (ಅಷ್ಟರಲ್ಲಿ ಅತ್ತೆ ರಿಸೀವರನ್ನು ಕೆಳಗಿಟ್ಟು ಅವರ ಕೆಲಸಕ್ಕೆ ಹೋಗಿರುತ್ತಿದ್ದರು.) ಆಗ ಮಾವನಿಂದ ಪ್ರಶ್ನೋತ್ತರ ಕಾರ್ಯಕ್ರಮ. ಯಾರು ಕರೆ ಮಾಡಿದ್ದು? ಎಂದು ನನ್ನನ್ನು ಕೇಳಿದರೆ, ಗೊತ್ತಿಲ್ಲ, ಅತ್ತೆ ತೆಗೆದುಕೊಂಡಿರುವುದು ಎಂದರೆ, ಪ್ರಶ್ನೆ ಅತ್ತೆಗೆ ವರ್ಗಾವಣೆ. ನಾನು ಕೇಳಲಿಲ್ಲ ಎಂದು ಅವರಂದರೆ, ನಮಗಿಬ್ಬರಿಗೂ ಶಿಸ್ತಿನ ಪಾಠ ಸುರುವಾಗುತ್ತಿತ್ತು! ತಿರುಗಿ ಕರೆ ಬರಬಹುದೆಂದು ೧೦ ನಿಮಿಷ ಕೆಳಗೇ ಕೂತು, ಕರೆ ಬಂದಿಲ್ಲವೆಂದು ಮಹಡಿಗೆ ಹೋದ ಹತ್ತು ನಿಮಿಷದಲ್ಲಿ ಮತ್ತೆ ಕರೆ ಬರುತ್ತಿತ್ತು! ಆಗ ನಾನು ಮಹಡಿಗೆ ದೌಡು! ಹೀಗೆ ಆದರೆ ಮಾವನಿಗೂ ಕಷ್ಟ ಎಂದು ಅನಂತ ದೂರವಾಣಿ ಇಲಾಖೆಗೆ ಅರ್ಜಿ ಬರೆದು, ಮಹಡಿ ಕೋಣೆಗೆ ಇನ್ನೊಂದು ಫೋನನ್ನು ತಂತಿ ಎಳೆದು ಹಾಕಿಸಿಕೊಂಡದ್ದಾಯಿತು. ಅನಂತರ ನಮ್ಮ ಕೆಲಸ ಹಗುರಗೊಂಡಿತು. ಮಾವನಿಗೆ ಕೆಲಸ ಹೆಚ್ಚಾಯಿತು. ಅಪರೂಪದಲ್ಲಿ ಅತ್ತೆಗೋ ನನಗೋ ಕರೆ ಬಂದರೆ ಮಾವ ನಮಗೆ ಹೇಳಬೇಕಾಗುತ್ತಿತ್ತು! (ಇದರಿಂದ ಕೆಲವೊಮ್ಮೆ ನಾವು ಕರೆ ಬಂದದ್ದು ನಮಗಿರಬಹುದು ಎಂದು ಕೆಳಗೆ ಎತ್ತಿಕೊಂಡು, ಅಲ್ಲದಿದ್ದರೂ ಸ್ವಾರಸ್ಯವಿದ್ದರೆ ಕದ್ದು ಕೇಳುವಿಕೆ) ಕದ್ದಾಲಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಿತ್ತು! ಅಜ್ಜನಿಗೆ ಕರೆ ಬಂದದ್ದನ್ನು ಕದ್ದಾಲಿಕೆಯಿಂದ ಮೊಮ್ಮಗಳು ಕೇಳಿಸಿಕೊಂಡು ಅಜ್ಜಿಗೆ ಗೂಢಾಚಾರಿಣಿಯಾಗಿ  ವರದಿ ಒಪ್ಪಿಸಿದ್ದೂ ಇತ್ತು. ಆಗ ಅಜ್ಜನನ್ನು ಅಜ್ಜಿಯ ನ್ಯಾಯಾಲಯದ ಕಟಕಟೆಗೆ ಏರಿಸಿ ವಿಚಾರಣೆಯೂ ನಡೆಸಿದ್ದಿತ್ತು!

  ಮೇಲೆ ಕೆಳಗೆ ಎರಡೂ ಕಡೆ ಫೋನ್ ಇದ್ದ ಕಾರಣ ಮೊಮ್ಮಕ್ಕಳು ಅಜ್ಜಂದಿರನ್ನು ಕೆಲವು ಸಲ ಬೇಸ್ತು ಬೀಳಿಸಿದ ಘಟನೆಯೂ ನಡೆದಿತ್ತು. ಯಾವುದೋ ಸಂಖ್ಯೆಯನ್ನು (ಈಗ ಯಾವ ಸಂಖ್ಯೆ ಎಂಬುದು ಮರೆತು ಹೋಗಿದೆ) ಒತ್ತಿ ಇಟ್ಟರೆ, ನಮ್ಮ ಫೋನ್ ರಿಂಗಾಗುತ್ತದೆ. ಈ ವಿಷಯ ಅದು ಹೇಗೋ ಮೊಮ್ಮಗ ಅಭಯಸಿಂಹನಿಗೆ ತಿಳಿದಿತ್ತು. ಅಕ್ಷರಿಯೂ ಅವನೂ ಸೇರಿಕೊಂಡು ಅಜ್ಜನನ್ನು ಏಪ್ರಿಲ್ ಫೂಲ್ ಮಾಡಲು ಈ ಉಪಾಯವನ್ನು ಮಾಡುತ್ತಿದ್ದರು. ಅಜ್ಜ ಮಹಡಿಯಲ್ಲಿರುವುದು ಖಾತ್ರಿ ಮಾಡಿಕೊಂಡು ಕೆಳಗೆ ಆ ಸಂಖ್ಯೆ ಒತ್ತಿ ಇಡುತ್ತಿದ್ದರು. ಫೋನ್ ರಿಂಗಣಿಸಿದಾಗ ಅಜ್ಜ ಫೋನ್ ಎತ್ತಿದ್ದು ಖಾತ್ರಿ ಆದಬಳಿಕ ಇಲ್ಲಿಂದ ಅವನು ಎತ್ತಿಕೊಂಡು ಏಪ್ರಿಲ್ ಫೂಲ್ ಎನ್ನುತ್ತಿದ್ದ. ಆಗ ಅಜ್ಜ ಮೊಮ್ಮಕ್ಕಳೊಂದಿಗೆ ಸೇರಿ ಗಹಗಹಿಸಿ ನಗುತ್ತಿದ್ದರು!  ಮಾವನ ತಮ್ಮ ಈಶ್ವರಮಾವ ಇಲ್ಲಿ ಬಂದಾಗ, ಈ ಮೊಮ್ಮಕ್ಕಳು ಅವರನ್ನು ಗೋಳುಹೊಯ್ದುಕೊಳ್ಳುತ್ತಿದ್ದರು. ಅಜ್ಜ ಇಲ್ಲದ ಸಮಯದಲ್ಲಿ ಮಹಡಿ ಮೇಲೆ ಹೋಗಿ ಮ್ಯಾಜಿಕ್ ಸಂಖ್ಯೆ ಒತ್ತಿ ಇಡುತ್ತಿದ್ದರು. ಫೋನ್ ರಿಂಗಣಿಸಿದಾಗ, ಕೆಳಗೆ ನಾನೇ ಕರೆ ಸ್ವಿಕರಿಸಬೇಕು, ಹೋಗಿ ಈಶ್ವರ ಮಾವನಿಗೆ ಫೋನ್ ಕರೆ ಇದೆ ಎನ್ನಬೇಕು ಎಂದು ಮೊದಲೇ ಒಪ್ಪಂದವಾಗಿರುತ್ತಿತ್ತು. ಅದರಂತೆ ಈಶ್ವರಮಾವನಿಗೆ ಫೋನ್ ತೆಗೆದುಕೊಳ್ಳಲು ಹೇಳಿದಾಗ, ಮೇಲಿಂದ ಅಭಯ, ಸಾರ್, ನಾವು ಮನೆಗೆ ಬಂದಿದ್ದೇವೆ. ಮನೆ ಕೀಲಿ ಬೇಕಾಗಿತ್ತು ಎನ್ನುತ್ತಿದ್ದ. ಅವರಿಗೋ ಗಡಿಬಿಡಿ ಜಾಸ್ತಿ. ಈಗ  ಬಂದೆ ಎಂದು ಫೋನ್ ಇಟ್ಟು ಸೈಕಲ್ ಏರಿ ಹೊರಡಲನುವಾಗುವಾಗ ಇವರಿಬ್ಬರೂ ಈಶ್ವರಜ್ಜ ಏಪ್ರಿಲ್ ಫೂಲ್ ಎಂದು ಕೇಕೆ ಹಾಕುತ್ತಿದ್ದರು. ಅವರೂ ನಗುವಿನೊಂದಿಗೆ ಜೊತೆಗೂಡುತ್ತಿದ್ದರು. ಈಶ್ವರ ಮಾವ ಮಿಲಿಟರಿಯಲ್ಲಿದ್ದು, ಅನಂತರ ಮೈಸೂರಿನ ಎನ್.ಸಿ.ಸಿ ಕಛೇರಿಯಲ್ಲಿ ಬೆರಳಚ್ಚುಗಾರರಾಗಿ ನಿವೃತ್ತಿ ಹೊಂದಿದ್ದರು. ಬ್ರಹ್ಮಚಾರಿ. ನಾವು ಎಲ್ಲರೂ ಊರಿಗೆ ಹೋಗಬೇಕಾದ ಸಂದರ್ಭ ಬಂದರೆ ಈಶ್ವರ ಮಾವ ಮನೆಪಾರಕ್ಕೆಂದು ಇಲ್ಲಿ ಇರುತ್ತಿದ್ದರು. ಹಾಗೆಯೇ ಅವರ ಸ್ನೇಹಿತ ವಲಯದಲ್ಲಿದ್ದವರ ಮನೆಯವರೂ ಊರಲ್ಲಿಲ್ಲದಾಗ ಅವರ ಮನೆಯಲ್ಲಿ ರಾತ್ರಿ ಮಲಗುತ್ತಿದ್ದರು. ಅವರ ನಿವೃತ್ತ ಜೀವನದಲ್ಲಿ ಹೆಚ್ಚಿನ ಸಮಯವೂ ಪರೋಪಕಾರದಲ್ಲೇ ಕಳೆಯುತ್ತಿದ್ದುದು. ನಾನು ವಾಚ್ ಎಂಡ್ ವಾರ್ಡ್ ಎಂದು ಹೇಳುತ್ತಿದ್ದರು. ಈ ವಿಷಯ ಅಭಯನಿಗೆ ಗೊತ್ತಿತ್ತು. ಹಾಗಾಗಿ ಅವನು ಅವರನ್ನು ಬೇಸ್ತು ಬೀಳಿಸಲು  ಆ ತಂತ್ರ ಬಳಸಿದ್ದು.

   
   ಕೆಲವಾರು ವರ್ಷಗಳನಂತರ ನನ್ನ ತವರಿನಲ್ಲೂ ದೂರವಾಣಿ ಬಂದಿತ್ತು. ನನಗೂ ಕೆಲವೊಮ್ಮೆ ಕರೆ ಬರುತ್ತಲಿತ್ತು. ಅಮ್ಮ  ನನಗೆ ಏನು ಹೇಳಿದರು ಎಂಬ ವಿಷಯವನ್ನು ಸವಿಸ್ತಾರವಾಗಿ ಅನಂತರ ಮಗಳಿಗೆ ವಿವರಿಸಬೇಕಿತ್ತು. ಅದು ನನಗೆ ಬಹಳ ಕಷ್ಟದ ಕೆಲಸ. ಏನೋ ಒಂದೆರಡು ವಿಷಯ ಹೇಳಿ ಸುಮ್ಮನಾದರೆ ಅವಳು ಕೇಳುವವಳಲ್ಲ. ಅಷ್ಟು ಹೊತ್ತು ಮಾತಾಡಿದೆ. ಇಷ್ಟೇ ಸುದ್ದಿಯ ಎಂಬ ರಾಗ ಸುರುವಾಗುತ್ತಿತ್ತು. ಈ ಗಲಾಟೆಯೇ ಬೇಡವೆಂದು ಅವಳಿಗೆ ಫೋನ್ ಕದ್ದಾಲಿಕೆಗೆ ಅನುಮತಿ ಕೊಡುತ್ತಿದ್ದೆ! ನಮ್ಮ ಮನೆಯಲ್ಲಿ ಕಡಿಮೆ ಮಾತಿನವಳೆಂಬ ಬಿರುದು ನನಗೆ ಅನಾಯಾಸವಾಗಿ ಲಭಿಸಿತ್ತು! ಅದಕ್ಕೆ ಚ್ಯುತಿ ಬರದಂತೆ ಈಗಲೂ ಕಾಪಾಡಿಕೊಂಡು ಬಂದಿದ್ದೇನೆ.! ಅದೇನೋ ಫೋನಲ್ಲಿ ಮಾತಾಡುವುದೆಂದರೆ ನನಗೆ (ಈಗಲೂ, ಒಮ್ಮೆ ದುಡ್ದು ಹಾಕಿದರೆ ಎಷ್ಟು ಬೇಕಾದರೂ ಮಾತಾಡಿ ಎಂಬ ಆಯ್ಕೆ ಸಂಚಾರಿಯಲ್ಲಿ ಇದ್ದರೂ) ಬಲು ಉದಾಸೀನದ ಕೆಲಸ.  ಈ ಬುದ್ಧಿ ಗೊತ್ತಿದ್ದ ನನ್ನ ಅಮ್ಮ, ತಮ್ಮ, ಅಕ್ಕ, ತಂಗಿ ಅವರಾಗಿಯೇ ಫೋನ್ ಮಾಡುತ್ತಿರುತ್ತಾರೆ.

      ಯಾವ ವಸ್ತುವಾದರೂ ಸರಿಯೆ. ರಿಪೇರಿ ಮಾಡುವುದೆಂದರೆ ನನಗೆ ಬಲು ಆಸಕ್ತಿ. ನಮ್ಮಲ್ಲಿ ದೂರವಾಣಿ ಸ್ತಬ್ಧವಾದರೆ  ಮೊದಲು ಮಾವ ನನಗೇ ಹೇಳುತ್ತಿದ್ದರು. ನೋಡು, ನಿನ್ನ ಕೈಯ ಸ್ಪರ್ಶಮಣಿಯಿಂದ ಸರಿ ಮಾಡು ಎಂದು. ಹೆಚ್ಚಿನಸಲವೂ, ಎರಡು ತಂತಿ ಜೋಡಿಸಿದಲ್ಲಿ ಮಳೆಗೋ, ಬಿಸಿಲಿಗೋ ಒಳಗಿನ ತಾಮ್ರದ ತಂತಿ ತುಂಡಾಗಿರುತ್ತಿತ್ತು. ಅದನ್ನು ಪುನಃ ಜೋಡಿಸಿದಾಗ ಸರಿ ಹೋಗುತ್ತಿತ್ತು. ಹಾಗಾಗಿ ನನಗೆ ಮಾವನಿಂದ ಮ್ಯಾಜಿಕ್ ಮಾಡಿದೆ ಎಂಬ ಪ್ರಶಂಸೆ ಸಿಗುತ್ತಿತ್ತು! ಅಲ್ಲಿ ಆ ಸಮಸ್ಯೆಯಲ್ಲದಿದ್ದರೆ ಮಾತ್ರ ಇಲಾಖೆಗೇ ದೂರು ಕೊಡುತ್ತಿದ್ದೆವು.

   ಮಾವ ಟೈಪ್ ರೈಟರಿನಲ್ಲಿ ಲೇಖನ ಟೈಪಿಸಿ ಅದನ್ನು ಅಂಚೆಯಲ್ಲಿ ಪತ್ರಿಕೆಗೆ ಕಳುಹಿಸುತ್ತಿದ್ದರು. ಮಾವನ ಕೆಲಸ ಸುಲಭಗೊಳಿಸಲು ಅನಂತ ಮನೆಗೆ ಗಣಕಯಂತ್ರ ಕೊಂಡು ತಂದಾಗ, ಮಾವ ಬಲು ಬೇಗ ಕಲಿತು ಅದರಲ್ಲಿ ಲೇಖನ ಟೈಪಿಸಿ ಅದನ್ನು ಮಿಂಚಂಚೆ ಮೂಲಕ ಪತ್ರಿಕೆಗಳಿಗೆ ಕಳುಹಿಸುತ್ತಿದ್ದರು. ಮಿಂಚಂಚೆ ಕಳುಹಿಸುವ ಕೆಲಸ ನನ್ನದು. ನಾನು ಕಳುಹಿಸಿಯಾದ ಕೂಡಲೇ ಆಯಾ ಪತ್ರಿಕಾ ಕಚೇರಿಗೆ ದೂರವಾಣಿ ಮೂಲಕ ಕೇಳಿ ತಲಪಿತ ಎಂದು ಖಾತ್ರಿಗೊಳಿಸಿದಮೇಲೆಯೇ ಅವರಿಗೆ ತೃಪ್ತಿಯಾಗುತ್ತಿದ್ದುದು. 

      ಮಾವನ ಕಾಲಾನಂತರ, ಸ್ಥಿರ ದೂರವಾಣಿಗೆ ಕರೆ ಬರುವುದು ಕಡಿಮೆಯಾಯಿತು. ಅತ್ತೆಯ ತಂಗಿಯಂದಿರು, ಅಣ್ಣ ತಮ್ಮಂದಿರು, ಸ್ನೇಹಿತೆಯರು ಕರೆ ಮಾಡುತ್ತಿದ್ದರು. ಹೀಗೆ ಕರೆ ಬಂದಾಗ ಅನಂತ ಕರೆ ಸ್ವೀಕರಿಸಿದರೆ, ಆಚೆ ಬದಿಯಿಂದ ನಮ್ಮತ್ತೆಯ ತಂಗಿಯರು ಮಾಡಿದ್ದೆಂದು ಗೊತ್ತಾದರೆ, ನಮಸ್ಕಾರ, ನಾರಾಯಣ ರಾವ್ ಎಂದು ಹೇಳುತ್ತಿದ್ದ. ಆಗ ಅವರು ಆ ಕ್ಷಣದಲ್ಲಿ ಗಾಬರಿಬಿದ್ದ ಪ್ರಸಂಗವೂ ನಡೆದಿತ್ತು! ನಾವು ಮನೆಯಲ್ಲಿದ್ದರೆ ಅತ್ತೆಗೆ ಅವರೇ ಕರೆ ಮಾಡಿ ಮಾತಾಡಲು ಏನೋ ಹಿಂಜರಿಕೆ. ನಾವು ಮನೆಯಲ್ಲಿಲ್ಲದ ಸಮಯ ನೋಡಿ ಅವರು ಫೋನ್ ಮಾಡುತ್ತಿದ್ದುದು, ಮತ್ತೆ ನಮ್ಮೊಡನೆ ಇಂಥವರು ಫೋನ್ ಮಾಡಿದ್ದರು ಎಂದು ಹೇಳುತ್ತಿದ್ದರು! ಹಾಗೂ ಅವರು ಮಾತಾಡಿದ ವಿಷಯವನ್ನು ಸವಿಸ್ತಾರವಾಗಿ ನನಗೆ ವಿವರಿಸುತ್ತಿದ್ದರು. ನಾನೂ ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದೆ. ಅತ್ತೆಗೆ ೫ ಮಂದಿ ತಂಗಿಯರು. ಅವರು ಫೋನ್ ಮಾಡಿದರೆ, ಇಂಥವರಿಗೆ ಮದುವೆ ನಿಶ್ಚಯ ಆಯಿತೆಂದೋ, ಇಂಥವರು ಸಣ್ಣ ಬಸರಿ ಎಂದೋ, ಎಂಬ  ವಿಷಯ ಅವರು ಅರುಹಿದ್ದನ್ನು, ಅತ್ತೆ ನನ್ನಲ್ಲಿ ಹೇಳುತ್ತ, ಗುಟ್ಟು, ಯಾರಿಗೂ ಹೇಳಬೇಡ. ಗುಟ್ಟು ಹೇಳಬೇಡ ಅಕ್ಕ ಎಂದು ಸೀತೆ ಹೇಳಿದ್ದಳು, ನಾನು ನಿನಗೆ ಮಾತ್ರ ಹೇಳಿದ್ದು ಎನ್ನುತ್ತಿದ್ದರು. ಅವರ ಈ ಗುಟ್ಟಿನ ಸುದ್ದಿ ನನಗೆ ಬಲು ಚೋದ್ಯ. ಅತ್ತೆ ಹೇಳಿದ್ದು ಇದು ಗುಟ್ಟು ಎಂದೇ ನಾನೂ ಹೇಳಬಹುದೆ? ಎಂದು ಹಾಸ್ಯ ಮಾಡುತ್ತಿದ್ದೆ. ಬಸರಿ ವಿಷಯ ಗುಟ್ಟು ಮಾಡಲು ಸಾಧ್ಯ ಇಲ್ಲ ೯ ತಿಂಗಳು ತುಂಬಿದಾಗ ಹೆರಿಗೆಯಾಗಲೇ ಬೇಕು ಎಂದು ಹೇಳುತ್ತಿದ್ದೆ. ಅವರೂ ನಕ್ಕು ಅದು ಹೌದು ಎನ್ನುತ್ತಿದ್ದರು.


   ಅತ್ತೆಯ ನಿರ್ಗಮನಾನಂತರ ಸ್ಥಿರ ದೂರವಾಣಿ ಅನಾಥವಾಯಿತು. ನಮ್ಮಲ್ಲಿ ಸಂಚಾರಿವಾಣಿ ಇರುವ ಕಾರಣ ಅದಕ್ಕೆ ಕರೆ ಬರುವುದೇ ಅಪರೂಪವಾಯಿತು. ಅನಂತನ ಕಕ್ಷಿಗಾರರೊಬ್ಬರು ಮಾತ್ರ ಅದಕ್ಕೇ ಕರೆ ಮಡುವುದು, ಅತ್ತೆಯ ತಂಗಿ ಮೀನಾಕ್ಷಿ ಅತ್ತೆ ಒಮ್ಮೊಮ್ಮೆ ಕರೆ ಮಾಡುತ್ತಾರೆ. ಕೆಲವೊಮ್ಮೆ ದೂರವಾಣಿ ಹಾಳಾಗಿರುವುದೂ ನಮ್ಮ ಗಮನಕ್ಕೆ ಬರುವುದಿಲ್ಲ. ಹೀಗೆ ಯಾರಾದರೂ ಸಂಚಾರಿಗೆ ಕರೆ ಮಾಡಿ ಸ್ಥಿರ ದೂರವಾಣಿಗೆ ಕರೆ ಹೋಗುವುದಿಲ್ಲ ಎಂದಾಗಲೇ ನಮ್ಮ ಗಮನಕ್ಕೆ ಬರುತ್ತಿದ್ದುದು. ಅದನ್ನು ತೆಗೆಸಿಬಿಡುವ ಎಂದು ಅನಂತ ಹೇಳಿದ. ಇರಲಿ, ಎಷ್ಟು ಹಳೆಯದು ಅದು. ನಮ್ಮಲ್ಲಿರುವ ಸಂಚಾರಿ ಸಂಖ್ಯೆಗಿಂತ ಈ ದೂರವಾಣಿಯ ಸಂಖ್ಯೆಯೇ ಹೆಚ್ಚು ಮಂದಿಗೆ ಗೊತ್ತಿರುವುದು. ನಾನು ಊರಿಗೆ ಹೋಗಿ  ವಾಪಾಸು ಬರುವಾಗ ಬಸ್ ನಿಲ್ದಾಣದಿಂದ ನನ್ನನ್ನು ಕರೆ ತರುವುದಕ್ಕೆ  ನಿನಗೆ ಕರೆ ಮಾಡಲಾದರೂ ಬೇಕಾಗುತ್ತದೆ ಎಂದೂ ಸೇರಿಸಿದೆ. ಒಮ್ಮೆ ಹೀಗೆ ನಾನು ಊರಿಂದ ಬರುವಾಗ, ಅವನ ಸಂಚಾರಿಗೆ ಎಷ್ಟು ಸಲ ಕರೆ ಮಾಡಿದರೂ ಬೇರೆ ಕರೆಯಲ್ಲಿ ನಿರತರಾಗಿದ್ದಾರೆ ಎಂದೇ ಬರುತ್ತಲಿತ್ತು. ಮತ್ತೆ ಸ್ಥಿರ ದೂರವಾಣಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ್ದ. ಅಷ್ಟು ಹೊತ್ತಿನಲ್ಲಿ ನಾನು ಬಸ್ಸಿಳಿದು ಹತ್ತು ನಿಮಿಷವಾಗಿತ್ತು! ಸಂದರ್ಭ ಸಿಕ್ಕಾಗಲೆಲ್ಲ ಹೀಗೆ ಮಾತಿನಲ್ಲಾದರೂ ಹೇಳಿಕೊಂಡು ಆ ಕೋಪವನ್ನು ತಣಿಸಬೇಕಲ್ಲ!  ಅನಂತ ಅವನ ಕಚೇರಿಯಲ್ಲಿದ್ದ ಸ್ಥಿರದೂರವಾಣಿಯನ್ನು ತೆಗೆಸಿ ಇಲಾಖೆಗೆ ಹಿಂದಕ್ಕೆ ಕೊಟ್ಟಿದ್ದ. ತಿಂಗಳಾನುಗಟ್ಟಲೆ ಹಾಳಾಗಿ, ಒಮ್ಮೆ ರಿಪೇರಿಯಾದರೂ ಮತ್ತೆ ಪದೇ ಪದೇ ಕೆಟ್ಟು, ಅದರಿಂದ ರೋಸಿಹೋಗಿ ಈ ತೀರ್ಮಾನಕ್ಕೆ ಬಂದದ್ದು. ಅವನು ಇಂಥ ವಿಷಯದಲ್ಲಿ ನಿರ್ಮೋಹಿ. ಬೇಡದ ಚರಾಚರ ವಿಷಯದಲ್ಲಿ  ವಾಂಛೆ ನನಗೆ!

  ಮೊಮ್ಮಗನಿಗೆ ಆಡಲು ಈ ದೂರವಾಣಿಯೇ ಬೇಕು.  ಒಂದು ವರ್ಷದವನಿದ್ದಾಗ, ಕುರ್ಚಿ ಹತ್ತಿ ಅದನ್ನು ತೆಗೆದು ಕಿವಿಗಿಟ್ಟು ಬಾಲಭಾಷೆಯಲ್ಲಿ  ಬಹಳ ಚೆನ್ನಾಗಿ ಮಾತಾಡುತ್ತಿದ್ದ. ಅನಂತರ ಅವನಿಗೂ ಮೊಬೈಲೇ ಬೇಕೆನಿಸಿತು 

    
   ಈಗ ನಾವು ಸ್ಥಿರದೂರವಾಣಿಗೆ ಒಳಬರುವ ಕರೆಯನ್ನು ಮಾತ್ರ ಉಳಿಸಿಕೊಂಡಿದ್ದೇವೆ. ಇದರಿಂದ ಒಂದು ತೊಂದರೆ ಎಂದರೆ ಎಲ್ಲೋ ಇಟ್ಟ ನಮ್ಮ ಮೊಬೈಲ್ ಹುಡುಕಲು ಸಾಧ್ಯವಾಗುವುದಿಲ್ಲ! ತಿಂಗಳಿಗೆ ರೂ. ೨೦೦ರ ಒಳಗೆ ಶುಲ್ಕ ಕಟ್ಟಲು ಬರುತ್ತದೆ. ಇಡೀ ವರ್ಷದ್ದು ಮುಂಗಡವಾಗಿ ಒಟ್ಟಿಗೆ ಕಟ್ಟಿದರೆ ಒಂದು ತಿಂಗಳ ಶುಲ್ಕ ರಿಯಾಯಿತಿ ಇದೆಯೆಂದು ಅನಂತನ ಸ್ನೇಹಿತರು ಹೇಳಿದ್ದರು.

   ಇಂತಿಪ್ಪ ಸ್ಥಿರ ದೂರವಾಣಿಯ ಬಗ್ಗೆ ಇಷ್ಟೆಲ್ಲ ನೆನಪುಗಳು ಒಳಗೆ ಹುದುಗಿದ್ದದ್ದು  ಸರಮಾಲೆಯಂತೆ ಹೊರಬರಲು ಕಾರಣ ಫೇಸ್ ಬುಕ್. ರೇಣುಕ ಮಂಜುನಾಥ್ ಅವರು ಫೇಸ್ ಬುಕ್ ನಲ್ಲಿ ದೂರವಾಣಿಯ ಬಗ್ಗೆ ಬರೆದ ಲೇಖನ ಓದಿದಾಗ ನನಗೂ ಬರೆಯಲು ಪ್ರೇರಣೆಯಾಯಿತು. ಅವರಿಗೆ ಧನ್ಯವಾದ. ಇನ್ನಷ್ಟು ವಿಷಯ ಇದ್ದರೂ ಸದ್ಯಕ್ಕೆ  ಮುಕ್ತಾಯಗೊಳಿಸಿದೆ.

6 ಕಾಮೆಂಟ್‌ಗಳು:

  1. ಬ್ರಾಡ್ ಬ್ಯಾಂಡ್ ಅಂತರ್ಜಾಲ ಕೊಂಡದ್ದಕ್ಕೆ ಉಚಿತವಾಗಿ ಸ್ಥಿರವಾಣಿ ವ್ಯವಸ್ಥೆಯಿದೆ. ಹಾಗಾಗಿ ನಮ್ಮ ಹಳೆಯ ಸ್ವತಂತ್ರ ಸ್ಥಿರವಾಣಿಯನ್ನು ಅದಕ್ಕೆ ಪರಿವರ್ತಿಸಿಕೊಂಡಿದ್ದೇವೆ. ಮತ್ತೆ ಜೈಲು ಸಮೀಪವಿರುವುದರಿಂದ ಚರವಾಣಿಗಳೆಲ್ಲ ಈ ವಲಯದಲ್ಲಿ ಅಸ್ಥಿರವಾಗುವಾಗ ಅಚರವಾಣಿ ಅರ್ಥಾತ್ ದೂರವಾಣಿ ಕೇಳುಗರ ರಾಣಿಯೇ ಆಗುತ್ತಾಳೆ :-)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಜಿಯೊ ಬ್ರಾಡ್ ಬ್ಯಾಂಡಿಗೆ ಉಚಿತ ? ಸ್ಥಿರದೂರವಾಣಿ ಸೌಲಭ್ಯ ಇದೆ. ಅದರಿಂದ ಉಪಯೋಗಿಸಲು ಕೈಯಲ್ಲೇ ಸೌಲಭ್ಯ ಇರುವಾಗ ನೆನಪೇ ಆಗುವುದಿಲ್ಲ.

      ಅಳಿಸಿ
  2. ನಮ್ಮದೂ BSNL ಸ್ಥಿರವಾಣಿಯ ಜೊತೆ 25 ವರ್ಷಗಳ ಸಂಬಂಧ ಈ ಜನವರಿಗೆ ಕೊನೆಯಾಯಿತು. ಅದನ್ನು ಬಿಡುವಾಗ ನನಗಾದ ಬೇಸರದ ಒಂದಂಶವೂ ಅಲ್ಲಿದ್ದ ನೌಕರಾರಿಗಗದ್ದೆ ಆಶ್ಚರ್ಯ!

    ಪ್ರತ್ಯುತ್ತರಅಳಿಸಿ
  3. ಬಾರಿ ಲಾಯಕಿದ್ದು. ರಜ್ಜ ಓದಿದೆ, ನಂತ್ರ ಪೂರ್ಣ ಓದುತ್ತೆ. ಅನಂತ/ಅನಂತನಾರಯಣ ಗಮ್ಮತಿತ್ತು.

    ಪ್ರತ್ಯುತ್ತರಅಳಿಸಿ