ಬುಧವಾರ, ಡಿಸೆಂಬರ್ 28, 2022

ಕೇರಳದ ನಾಡಿನಲ್ಲಿ ಎರಡು ದಿನ

            ಎಡಕಲ್ಲು ಗುಡ್ಡಕರಾಪುಳ ಅಣೆಕಟ್ಟು, ತಿರುನೆಲ್ಲಿ, ಬ್ರಹ್ಮಗಿರಿ ಬೆಟ್ಟ

    ಮೈಸೂರಿನಿಂದ ನಾವು ೩೦ ಮಂದಿ ತಾರೀಕು ೨೪.೧೨.೨೨ರಂದು ಬೆಳಗ್ಗೆ .೪೦ಕ್ಕೆ ಕೇರಳದ ವಯನಾಡು ಜಿಲ್ಲೆಯ ಎಡಕಲ್ಲು ಗುಡ್ಡದ ಕಡೆಗೆ ಹೊರಟೆವು. ಗುಂಡ್ಲುಪೇಟೆಯ ಸಿಎಂಎಸ್ ಕಲ್ಯಾಣಮಂಟಪದಲ್ಲಿ ಗಂಟೆಗೆ ತಿಂಡಿ (ಇಡ್ಲಿ, ಚಟ್ನಿ, ವಡೆ) ತಿಂದೆವು. (ಮೈಸೂರಿನಿಂದ ಹೊರಡುವಾಗಲೇ ತಿಂಡಿ ಊಟ ಬಿಸಿ ಡಬ್ಬಗಳಲ್ಲಿ ಹಾಕಿ ತಂದಿದ್ದರು) ನಮ್ಮ ತಂಡದ ಉಮಾ ಅವರ ಪರಿಚಿತರ ಕಲ್ಯಾಣ ಮಂಟಪವದು. ಹಾಗಾಗಿ ಅಲ್ಲಿ ತಿಂಡಿಗೆ ಅನುಕೂಲಿಸಿದ್ದರು. ಅಲ್ಲಿ ಪರಸ್ಪರ ಪರಿಚಯ ಮಾಡಿಕೊಂಡೆವು.

 ಚಹಾಕಾಫಿ ತಿಂಡಿಯಾಗಿ ಮುಂದುವರಿದು ಮುತಂಗ(Muthanga)ದಲ್ಲಿ ತನಿಖಾ ಠಾಣೆಯಲ್ಲಿ ಮುಂದೆ ಕೇರಳ ಪ್ರವೇಶಿಸಲು ಗಾಡಿಗೆ ಅನುಮತಿ ಪಡೆದು  ನಾವು ಮುಂದುವರಿದೆವು. ಎಲ್ಲರೂ ನಿದ್ದೆಯ ಗುಂಗಿನಲ್ಲಿ ಇದ್ದೆವು. ಆದರೆ ಉಮಾ ಅವರಿಗೆ ನಮ್ಮನ್ನು ನಿದ್ದೆಗಿಳಿಸಲು ಮನವಾಗದೆ, ನಿದ್ದೆ ಮಾಡುವುದು ಇದ್ದೇ ಇದೆ. ಈಗ ಏನಾದರೂ ಮಾಡೋಣ ಎಂದರು. ಯಾರೂ ಆಸಕ್ತಿ ತೋರಲಿಲ್ಲ. ಆದರೂ ಅವರ ಉತ್ಸಾಹವೇನೂ ಕಮ್ಮಿಯಾಗಲಿಲ್ಲ. ತನ್ನ ಜೀವನ ವಿಧಾನ, ಮದುವೆಯ ಸ್ವಾರಸ್ಯ ಘಟನೆಗಳನ್ನು ಹೇಳುತ್ತ ಹೋದಂತೆ ನಮ್ಮ ನಿದ್ದೆಯ ಮಂಪರು ಹಾರಿ ಹೋಗಿ ಅವರ ಮಾತಿಗೆ ಕಿವಿಯಾದೆವು. ಅವರು ಮನೆಯಲ್ಲಿಟ್ಟೆ ವಿನ್ಯಾಸ ಮಾಡುವ ಅಂಗಡಿ (ಬೊಟಿಕ್) ಇಟ್ಟುಕೊಂಡಿದ್ದಾರೆ. ಅವರ ಸ್ವಂತ ದುಡಿಮೆಯಿಂದ ನ್ಯಾನೋ ಕಾರು ಕೊಂಡಿದ್ದಾರೆ. ಅವರ ಈ ಸ್ವಾವಲಂಬೀ ಛಲ ಮೆಚ್ಚುವಂತದು. ನಾವೆಲ್ಲರೂ ಚಪ್ಪಾಳೆ ಮೂಲಕ ಅವರಿಗೆ ಮೆಚ್ಚುಗೆ ಸೂಚಿಸಿದೆವು.  ಅವರ ಪುಟಿದೇಳುವ ಉತ್ಸಾಹಕ್ಕೆ ತಕ್ಕನಾಗಿ ನಾವ್ಯಾರು ಸ್ಪಂದಿಸದೆ ಇದ್ದದ್ದು ಅವರಿಗೆ ತುಸು ಬೇಸರ ತರಿಸಿರಬಹುದು. ಹಾಗೆ ಅವರು ಚಾಲಕನ ಪಕ್ಕದ ಸೀಟಿಗೆ ಹೋಗಿ ಕೂತು ಅವನು ನಿದ್ದೆ ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡರು!
   ಎಡಕಲ್ಲು ತಲಪಿದಾಗ ೧೦ ಗಂಟೆ ದಾಟಿತ್ತು.. ವಾಹನವಿಳಿದು ನಡೆದು ಎಡಕಲ್ಲು ಗುಡ್ಡ ಪ್ರವೇಶ ದ್ವಾರಕ್ಕೆ ಬಂದು ಟಿಕೆಟ್ (ಒಬ್ಬರಿಗೆ ರೂ.೫೦, ಮಕ್ಕಳಿಗೆ ರೂ.೩೦) ಪಡೆದು ಮುನ್ನಡೆದೆವು
ಸೋಮಾವಾರ ರಜಾ ದಿನ, ಗಣರಾಜ್ಯ ದಿನ,  ಮೇ ದಿನ, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ, ತಿರು ಓಣಮ್ ದಿನಗಳು ರಜಾ. ಟಿಕೆಟ್ ದರ ವಯಸ್ಕರಿಗೆ ರೂ.೨೦, ಮಕ್ಕಳಿಗೆ ರೂ.೧೦

ದಾರಿಯಲ್ಲಿ ಕರಕುಶಲ ವಸ್ತುಗಳು, ಪುಟ್ಟು ಮಾಡಲು ಬಿದಿರ ಅಂಡೆ, ಆಟಿಕೆಗಳು, ಉಪ್ಪುನೀರಲ್ಲಿ ಹಾಕಿಟ್ಟ ನೆಲ್ಲಿ, ಮಾವು, ಅನನಸು, ಬಿದಿರಕ್ಕಿ ಪಾಯಸ, ತಾಜಾ ಕಾಫಿ ಪುಡಿ ಜನರ ಗಮನ ಒಮ್ಮೆ ಅತ್ತ ಸರಿದು ಏನಾದರೂ ಕೊಳ್ಳಲು ಧಾವಿಸುವಂತಾಗುತ್ತದೆ. (ನಾನೂ ಕರಟದ ಸೌಟು, ಪುಟ್ಟು ಬಿದಿರಂಡೆ ಕಾಫಿಪುಡಿ ತೆಗೆದುಕೊಂಡೆ). ಅವೆಲ್ಲ ದಾತಿ ಮುಂದೆ ಸಾಗಿದಂತೆ ದಾರಿಯೂ ಕಿರಿದಾಗುತ್ತದೆ. ಮೆಟ್ಟಲು ಪ್ರಾರಂಭವಾಗುತ್ತದೆ.  ಗುಡ್ಡ ಏರಲು ಈಗ ವ್ಯವಸ್ಥಿತ ಮೆಟ್ಟಲು ಮಾಡಿದ್ದಾರೆ. ಸುಮಾರು ಎರಡು ಕಿಮೀ ನಡೆದು ಮೆಟ್ಟಲು ಹತ್ತಿ ಎಡಕಲ್ಲು ಗುಹೆ ಪ್ರವೇಶಿಸಿದೆವು. ಗುಹೆಯ ಮೇಲೆ ಎರಡು ಬಂಡೆಗಳ ಮಧ್ಯೆ ಒಂದು ಬಂಡೆಗಲ್ಲು ನಿಂತಿದೆ. ಬೆಳಕು ಅಲ್ಲಿಂದ ಬರುತ್ತದೆ.  ಅದಾಗಲೇ ಅಲ್ಲಿ ಪ್ರವಾಸಿಗರ ದಂಡೇ ಇತ್ತು.


  ಭಾರತೀಸುತರ ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯನ್ನು ಪುಟ್ಟಣ್ಣಕಣಗಾಲ್ ೧೯೭೩ರಲ್ಲಿ ಸಿನೆಮಾ ಮಾಡ್ದರು. ಅದರಲ್ಲಿ ಮುಖ್ಯ ಪಾತ್ರದಲ್ಲಿ ಜಯಂತಿ, ಚಂದರಶೇಖರ, ಆರತಿ, ರಂಗ, ಶಿವರಾಂ ಅಭಿನಯಿಸಿದ್ದರು. ಎದಕಲ್ಲು ಗುಡ್ದದಲ್ಲಿ ಚಿತ್ರೀಕರಣ ನಡೆದಿತ್ತು.

   ಈ ಗುಹೆಯನ್ನು ೧೮೯೫ರಲ್ಲಿ ಮೊದಲು ಪತ್ತೆ ಹಚ್ಚಿದವರು ಮಲಬಾರಿನ ಪೊಲೀಸ್ ಅಧಿಕಾರಿ ಫ್ರೆಡ್ ಫೌಸೆಟ್. ಗುಹೆಯ ಒಳಗೆ ಬಂಡೆಗಳಲ್ಲಿ ಶಿಲಾಯುಗದ ನಾಗರಿಕತೆಯ ಕುರುಹಾಗಿ ನಾನಾ ಚಿತ್ರಗಳನ್ನು ಕಾಣುತ್ತೇವೆ. ಇದು ೭೦೦೦ ವರ್ಷಗಳಷ್ಟು ಹಳೆಯದಂತೆ.   ಈಗ ಬಂಡೆಯ ಬುಡಕ್ಕೆ ಹೋಗದಂತೆ ತಡೆ ಬೇಲಿ ಹಾಕಿದ್ದಾರೆ. ಅಲ್ಲಿ ನಮ್ಮ ತಂಡದ ಪಟ ತೆಗೆಸಿಕೊಂಡು ನಿರ್ಗಮಿಸಿದೆವು.
ವಾಹನ ನಿಲ್ಲಿಸಿದ ಸ್ಥಳಕ್ಕೆ ಬಂದಾಗ ಮಧ್ಯಾಹ್ನ ಗಂಟೆ . ಅಲ್ಲೇ ಊಟ (ವಾಂಗೀಭಾತ್, ಮೊಸರನ್ನ ಉಪ್ಪಿನಕಾಯಿ) ಪೂರೈಸಿದೆವು. ವಾಹನ ನಿಲ್ಲಿಸಲು ಮೂರು ಕಡೆ ಸ್ಥಳಾವಕಾಶ ಇದೆ.


ಕರಾಪುಳ() (karapuzha) ಅಣೆಕಟ್ಟು, ಸಾಹಸೀ ಉದ್ಯಾನವನ

.೫೦ಕ್ಕೆ ಎಡಕಲ್ಲಿನಿಂದ ಹೊರಟು ನಾವು ಮುಟ್ಟಿಲ್ ಕಲ್ಪೆಟ್ಟದಲ್ಲಿರುವ ಕಾರಾಪುರ ಅಣೆಕಟ್ಟು ಪ್ರದೇಶಕ್ಕೆ ಬಂದೆವು. ತಾಣದಲ್ಲಿ ಪ್ರವಾಸೋದ್ಯಮದ ಭಾಗವಾಗಿ ಸುಂದರ ಉದ್ಯಾನವನ ನಿರ್ಮಿಸಿದ್ದಾರೆ.‌ ಅಲ್ಲಿಅತ್ಯಂತ ಉದ್ದದ ಝಿಪ್ ಲೈನ್ ಕೂಡ ಇದೆ. ಪ್ರವೇಶ ಸಮಯ: ಬೆಳಗ್ಗೆ ೯ರಿಂದ ಸಂಜೆ ೬ ರ ತನಕ, ಸಂಜೆ ೪.೩೦ರ ನಂತರ ಪ್ರವೇಶವಿಲ್ಲ.






ಕರಾಪುಳ ಅಣೆಕಟ್ಟು ಕರಾಪುಳ ನದಿಯ ಎರಡೂ ಬದಿಗಳಲ್ಲಿದೆ. ಈ ಅಣೆಕಟ್ಟು ಭಾರತದ ಅತಿದೊಡ್ಡ ಮಣ್ಣಿನ ಅಣೆಕಟ್ಟುಗಳಲ್ಲಿ ಒಂದೆಂದು ಹೆಸರು ಪಡೆದಿದೆ. ಕರಾಪುಳ ಅಣೆಕಟ್ಟಿನ ನಿರ್ಮಾಣ ೧೯೭೭ರಲ್ಲಿ ಪ್ರಾರಂಭವಾಗಿ ೨೦೦೪ರಲ್ಲಿ ಪೂರ್ಣಗೊಂಡಿತು. ಇದು ೧೫೮ ಅಡಿ ಆಳವಿದೆ.  .

ತಿರುನೆಲ್ಲಿ ಮಹಾವಿಷ್ಣುದೇವಾಲಯ

   ನಾವು ತಿರುನೆಲ್ಲಿಗೆ ತಲಪಿದಾಗ ೫.೩೦ ದಾಟಿತ್ತು. ದೇವಾಲಯದ ವತಿಯಿಂದ ನಡೆಸಲ್ಪಡುವ ಪಂಚತೀರ್ಥಮ್ ವಿಶ್ರಾಮ ಮಂದಿರದಲ್ಲಿ ತಂಗಲು ನಮಗೆ ವ್ಯವಸ್ಥೆ ಮಾಡಿದ್ದರು. (ದಿನಕ್ಕೆ ರೂ.೪೦೦. ಇಬ್ಬರು ಇರಬಹುದು) ಮಲಗು ಕೋಣೆಯಲ್ಲಿ ಎರಡು ಮಂಚವಿತ್ತು. ಸ್ನಾನಕ್ಕೆ ಬಿಸಿನೀರು ವ್ಯವಸ್ಥೆ ಇರಲಿಲ್ಲ. ಒಂದೆರಡು ಕೋಣೆಯಲ್ಲಿ ಇತ್ತು. ಅವಶ್ಯಪಟ್ಟವರು ಅಲ್ಲಿಂದ ಬಿಸಿನೀರು ತಂದು ಸ್ನಾನ ಮಾಡಿದರು. ಇಲ್ಲಿ ಸುಮಾರು ೫೪ ಕೋಣೆಗಳು, ಮೂರು ಆಧುನಿಕ ವ್ಯವಸ್ಥೆಯ ಕೋಣೆಗಳು, ಮತ್ತು ಒಂದು ಡಾರ್ಮೆಟರಿ ಇದೆ. ಸಂಪರ್ಕ ಸಂಖ್ಯೆ: ೦೪೯೩೫೨೧೦೦೫೫. ಮೈಸೂರಿನಿಂದ ಇಲ್ಲಿಗೆ ೧೨೧ ಕಿಮೀ ದೂರವಿದೆ.  

    ನಾವೆಲ್ಲರೂ ಶುಚೀರ್ಭೂತರಾಗಿ ಮಹಾವಿಷ್ಣು ದೇಗುಲಕ್ಕೆ ಹೋದೆವು.‌ ಬ್ರಹ್ಮಗಿರಿಯ ತಪ್ಪಲಲ್ಲಿರುವ ಪ್ರಾಚೀನ ದೇಗುಲ. ಸುಮಾರು ೫೦೦೦ ವರ್ಷದ ಇತಿಹಾಸವಿದೆಯಂತೆ. ದಂತಕತೆಯ ಪ್ರಕಾರ, ಬ್ರಹ್ಮ ತಪಸ್ಸು ಮಾಡಿ ವಿಷ್ಣು ದೇವರನ್ನು ಪ್ರತಿಷ್ಠಾಪನೆ ಮಾಡಿರುವುದಂತೆ. ಹಂಸದ ಮೇಲೆ ಕುಳಿತು ಬ್ರಹ್ಮಭುಮಿಯನ್ನು ಸುತ್ತುತ್ತಿದ್ದಾಗ, ಬ್ರಹ್ಮಗಿರಿ ಬೆಟ್ಟದ ಸೌಂದರ್ಯಕ್ಕೆ ಮಾರು ಹೋದನು. ಅಲ್ಲಿ ಇಳಿದು ನೋಡಿದಾಗ ಆಮಲಕ ಮರದ ಕೆಳಗೆ ವಿಷ್ಣುವಿನ ವಿಗ್ರಹ ಕಂಡಿತು. ಬ್ರಹ್ಮ ಆ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಿದನು. ಬ್ರಹ್ಮನ ಕೋರಿಕೆಯಂತೆ ವಿಷ್ಣುದೇವ ಈ ಪ್ರದೇಶದ ನೀರನ್ನು ಪವಿತ್ರಗೊಳಿಸಿದನು. ಮತ್ತು ಎಲ್ಲ ಪಾಪಗಳನ್ನು ತೊಳೆಯುವ ಸಾಮರ್ಥ್ಯವನ್ನು ಅನುಗ್ರಹಿಸಿದನು. ಹಾಗಾಗಿ ಅಲ್ಲಿರುವ ನದಿಗೆ ಪಾಪನಾಶಿನಿ ಎಂಬ ಹೆಸರು ಬಂತು.   ತರುವಾಯಚೋಳ ರಾಜ (ಕ್ರಿ.ಶ. ೯೬೨-೧೦೧೯) ಭಾಸ್ಕರ ರವಿವರ್ಮ ಆಳ್ವಿಕೆಯಲ್ಲಿ ದೇವಾಲಯ ಅಭಿವೃದ್ಧಿಗೊಂಡಿತು. ತದನಂತರದಲ್ಲಿ ಮೈಸೂರಿನ ಒಡೆಯರ್ ಅವರ ಸುಪರ್ದಿಯಲ್ಲಿ ದೇಗುಲ ಅಭಿವೃದ್ಧಿ ಹೊಂದಿದೆ ಎಂದು ಅರ್ಚಕರು ತಿಳಿಸಿದರುದೇಗುಲಕ್ಕೆ ನೀರು ಬ್ರಹ್ಮಗಿರಿ ಬೆಟ್ಟದ ಬಳಿಯ ಪಾಪನಾಶಿನಿಯಿಂದ ಹರಿದು ಬರುವುದಂತೆ.




 ಪ್ರಸ್ತುತ ದೇಗುಲದ ಜೀರ್ಣೋದ್ಧಾರ ನಡೆಯುವ ಕುರುಹಾಗಿ ಹೊರ ಪ್ರಾಂಗಣದ ಕಲ್ಲು ಕಂಬಗಳೆಲ್ಲ ತೆಗೆದು ಹೊಸದಾಗಿ ನಿರ್ಮಾಣ ಮಾಡುವ ತಯಾರಿ ನಡೆಯುತ್ತಲಿರುವುದು ಕಂಡಿತು. ಹಳೆಯದು ಹೇಗಿತ್ತೆಂಬುದು ತಿಳಿಯಲು ಕೆಲವು ಕಂಬಗಳನ್ನು ತೆಗೆಯದೆ ಉಳಿಸಿದ್ದಾರೆ. ಸುತ್ತು ಪೌಳಿಗೆ ನೆಲಕ್ಕೆಲ್ಲ ಈಗಿರುವ ಕಲ್ಲು ತೆಗೆಸಿ ಗ್ರಾನೈಟ್ ಶಿಲೆ ಹಾಕುವರಂತೆ. ಹಾಗೆ ಅಲ್ಲಿ ಒಬ್ಬರು ವಿವರಿಸುತ್ತಿದ್ದರು. ಕಲ್ಲು ಹಾಸಿದರೆ ಎಷ್ಟು ಚೆನ್ನ ಎಂದೆನಿಸಿತು.

ಬಹಳ ಮಂದಿ ದೇಗುಲಕ್ಕೆ ಬರುವರೆಂಬುದಕ್ಕೆ ಸಾಕ್ಷಿ ಪಕ್ಕದಲ್ಲೇ ಇರುವ ಯಾತ್ರಿ ಮಂದಿರ ಸಾಕಷ್ಟು ದೊಡ್ಡದಾಗಿದೆ. ಬಹುಮಹಡಿ ಕಟ್ಟಡದಲ್ಲಿ ನೂರಾರು ಕೋಣೆಗಳಿವೆ. ಎಲ್ಲವೂ ಭರ್ತಿಯಾಗಿವೆ. ನಮ್ಮ ತಂಡದ ಮೂರು ಜನರಿಗೆ ಭಟ್ಟರ ಮನೆಯಲ್ಲಿ ತಂಗಲು ವ್ಯವಸ್ಥೆ ಮಾಡಿದರು. ಅವರದೂ ಹೋಮ್ ಸ್ಟೇ ಇದೆ. ಕನ್ನಡಿಗರು. ನಾಲ್ಕು ಮಂದಿ ತಂಗುವಂಥ ಕೋಣೆ, ಬಿಸಿನೀರು ಸೌಲಭ್ಯ,, ಕಾಫಿ ತಿಂಡಿ ಊಟದ ವ್ಯವಸ್ಥೆಯೂ ಇದೆ. (ಕೆ.ಎಲ್.ಎಸ್.ಎನ್. ಶರ್ಮ, ಶ್ರೀ ದುರ್ಗಾ ಹೋಂಸ್ಟೇ, ಸಂಪರ್ಕ ಸಂಖ್ಯೆ: +೯೧೯೬೦೫೧೩೧೨೯೦, +೯೧೯೪೪೭೩೪೦೮೫೨, ಕೋಣೆಗೆ ದಿನವೊಂದರ ರೂ.೯೦೦)

 ರಾತ್ರೆ ಸನಿಹದಲ್ಲೇ ಇರುವ ವಿಷ್ಣುಪಾದ ಖಾನಾವಳಿಯಲ್ಲಿ ಊಟ ಮಾಡಿದೆವು.

ಬ್ರಹ್ಮಗಿರಿ

ಬೆಳಗ್ಗೆ ಗಂಟೆಗೇ ಎಲ್ಲರೂ ತಯಾರಾದೆವು. ವಿಷ್ಣುಪಾದದಲ್ಲೇ ತಿಂಡಿ ತಿಂದೆವು. ಕೇರಳದ ಖ್ಯಾತ ತಿಂಡಿ ಪುಟ್ಟು, ಕಡ್ಲೆ ಗಸಿ. ಅದನ್ನೇ ತಿಂದುಮಧ್ಯಾಹ್ನಕ್ಕೆ ಡಬ್ಬಕ್ಕೂ ತುಂಬಿಕೊಂಡೆವು ಗಂಟೆಗೆ ನಾವು ಅಲ್ಲಿಂದ ಹೊರಟು ಬ್ರಹ್ಮಗಿರಿ ಹತ್ತಲು ಅರಣ್ಯ ಭವನದ ಬಳಿಗೆ ಹೋದೆವು. ೭.೩೦ ದಾಟಿದರೂ ಅರಣ್ಯ ಕಚೇರಿ ಇನ್ನೂ ಬಾಗಿಲು ತೆರೆದಿರಲಿಲ್ಲ. (ನಮ್ಮ ತಂಡದಲ್ಲಿ ಇಬ್ಬರು ಉಮಾ ಇದ್ದರು.  ಒಬ್ಬ ಉಮಾ ಅವರು ರೀಲ್ ಮಾಡುವುದರಲ್ಲಿ ನಿಸ್ಸೀಮರು. ಅವಕಾಶ ಸಿಕ್ಕಿದಲ್ಲೆಲ್ಲ ಹೀಗೆ ಮಾಡಿ ಹಾಗೆ ಮಾಡಿ ಎಂದು ಕಾಲು ಕುಣಿಸಿಸಿ ವೀಡಿಯೋ ಮಾಡುತ್ತಲಿದ್ದರು. ಹಾಗಾಗಿ ಅವರಿಗೆ ರೀಲ್ ಉಮಾ ಎಂಬ ಅಡ್ಡ ಹೆಸರನ್ನಿಟ್ಟೆವು)  ಹೊತ್ತು ಕಳೆಯಲು ಉಮಾ ಅವರು ರೀಲ್ ಮಾಡಿಸುತ್ತಿದ್ದರು. ಉದಾಹರಣೆಗೆ ಇಲ್ಲಿ ಒಂದು ರೀಲ್ ಇದೆ ನೋಡಿ. ಬಿಳಿ ಬಣ್ಣದ ದೊಡ್ಡ ಟೊಪ್ಪಿ ದೊರೆಸಾನಿಯೇ ಉಮಾ. 

 ಬ್ರಹ್ಮಗಿರಿ  ಪ್ರವೇಶ: .೩೦ರಿಂದ .೩೦ತನಕ. ರಜಾ ದಿನ ಸೋಮಾವಾರ ಹಾಗೂ ಶುಕ್ರವಾರ. ಪ್ರವೇಶ ದರ: ೧ರಿಂದ ಮಂದಿಗೆ ರೂ. ೨೩೫೫, ಹೆಚ್ಚುವರಿ ತಲಾ ರೂ. ೩೭೫. ಹಾಗಾಗಿ ಗುಂಪಿನಲ್ಲಿ ಹೋಗುವುದೇ ಒಳ್ಳೆಯದು. ಮಾರ್ಗದರ್ಶಿ ಇಲ್ಲದೆ ಹೋಗಲು ಬಿಡುವುದಿಲ್ಲ. ಅವರಿಗೆ ರೂ. ೨೦೦ ಕೊಡಬೇಕು. ಬ್ರಹ್ಮಗಿರಿ  ಹತ್ತುವವರೆಲ್ಲರೂ ಅರಣ್ಯ ಕಛೇರಿಯಲ್ಲಿ ಕೊಡುವ ಪತ್ರದಲ್ಲಿ ಹೆಸರು ವಯಸ್ಸು ಬರೆದು ಸಹಿ ಹಾಕಬೇಕು. ಎಲ್ಲ ಪ್ರಕ್ರಿಯೆ ಮುಗಿಸಿ .೨೦ಕ್ಕೆ ನಾವು ನಾಲ್ಕು ಮಂದಿ ಮಾರ್ಗದರ್ಶಿ ಗಳೊಡನೆ ಬ್ರಹ್ಮಗಿರಿ ಹತ್ತಲು ಹೊರಟೆವು. ಸುತ್ತ ಕಾಡು ಮಧ್ಯೆ ರಸ್ತೆ . ಕಾಡಿನ ದಾರಿಯಲ್ಲಿ ಅಲ್ಲಲ್ಲಿ ಆನೆ ಲದ್ದಿ ಕಂಡೆವು.‌ ಹುಲಿ, ಆನೆ, ಜಿಂಕೆ, ಇತ್ಯಾದಿ ಪ್ರಾಣಿಗಳು ಅಲ್ಲಿಯ ಕಾಡಿನಲ್ಲಿ ಇವೆಯಂತೆ. ಸದ್ದು ಮಾಡದೆ ಬನ್ನಿ. ದೂರದಲ್ಲಿ ಆನೆ ಇರುವ  ಹಾಗಿದೆ ಎಂದು ನಮ್ಮ ಮಾರ್ಗದರ್ಶಿ ಹೇಳಿದರುಪ್ರಾಣಿಗಳು ಹತ್ತಿರದಲ್ಲೇ ಎಲ್ಲೇ ಇದ್ದರೂ  ಅವುಗಳ ವಾಸನೆಯಲ್ಲೇ ಅವರಿಗೆ ಗೊತ್ತಾಗಿ ಬಿಡುತ್ತದಂತೆಅವರಿಗೆ ಕನ್ನಡ ಬರುತ್ತಲಿತ್ತು. ಅವರು ಮೈಸೂರು, ಗೋಣಿಕೊಪ್ಪ ಇತ್ಯಾದಿ ಕರ್ನಾಟಕದಲ್ಲಿ ಕೆಲಸ ಮಾಡಿದ್ದರಂತೆ. ಹಾಗಾಗಿ ಕನ್ನಡ ಗೊತ್ತು ಎಂದರು.

ಬ್ರಹ್ಮಗಿರಿ ಸಮುದ್ರಮಟ್ಟದಿಂದ ೧೬೦೭ಮೀಟರ್ ಎತ್ತರದಲ್ಲಿದೆ. ಬ್ರಹ್ಮಗಿರಿಯನ್ನು ೧೯೭೪ ಜೂನ್ ೫ರಂದು ಅಭಯಾರಣ್ಯವೆಂದು ಘೋಷಿಸಲಾಯಿತು. ಈ ಪ್ರದೇಶದಲ್ಲಿ ನಿತ್ಯಹರಿದ್ವರ್ಣ ಮತ್ತು ಅರೆ ನಿತ್ಯಹರಿದ್ವರ್ಣ ಅರಣ್ಯ ಹೊಂದಿದೆ. ಎತ್ತರದಲ್ಲಿ ಶೋಲಾ ಕಾಡು, ಹುಲ್ಲುಗಾವಲನ್ನು ಕಾಣಬಹುದು. ಬ್ರಹ್ಮಗಿರಿ ಬೆಟ್ತದ ಮೇಲ್ಭಾಗ ೧೮೧ ಚದರ ಕಿಮೀ ವಿಸ್ತೀರ್ಣ ಹೊಂದಿದೆ.  ಬ್ರಹ್ಮಗಿರಿ ಉತ್ತರದಲ್ಲಿ ಕರ್ನಾಟಕರಾಜ್ಯದ ಕೊಡಗು ಜಿಲ್ಲೆ ಮತ್ತು ದಕ್ಷಿಣದಲ್ಲಿ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಗಡಿಯಲ್ಲಿದೆ. ದಶಂಬರದಿಂದ ಫೆಬ್ರವರಿ ವರೆಗೆ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತ ಸಮಯ. ಆಗ ಜಿಗಣೆ ಕಾಟ ಇರುವುದಿಲ್ಲ.

     ಹೀಗೆಯೇ ನಾಲ್ಕು ಕಿಮೀ ಸಾಗಿದಾಗ  ಕಾವಲು ಗೋಪುರ ಸಿಗುತ್ತದೆ. ಅಲ್ಲೀವರೆಗೆ ರಸ್ತೆ ಇದೆ. ಅಲ್ಲಿ ಅರಣ್ಯ ಇಲಾಖೆಯವರ ಒಂದು ಕಟ್ಟಡ ಕೂಡ ಇದೆ. ಅಲ್ಲಿಂದ   ಬೆಟ್ಟದ ತುದಿಗೇರಲು ಏರುಗತಿಯಲ್ಲಿ ೨ಕಿಮೀ ಸಾಗಬೇಕು

  ನಾವು ನಿಧಾನವಾಗಿಯೇ ಸಾಗಿದೆವು. ಅಲ್ಲಿಂದ ಮತ್ತೆ ಮರಗಳಿಲ್ಲ. ಹುಲ್ಲುಗಾವಲಿನ ಪ್ರದೇಶ. ನೆಲ್ಲಿಗಿಡಗಳು ಸಾಕಷ್ಟು ಕಂಡೆವು. ಗುಡ್ಡ ಹತ್ತುವಾಗ, ಕೆಲವು ಪ್ರಾಣಿಗಳ ಉತ್ತಿಷ್ಠ  ಕಂಡೆವು. ಮುಳ್ಳುಹಂದಿ, ಕಾಡು ಬೆಕ್ಕು ಇವುಗಳದ್ದಾಗಿರಬಹುದು ಎಂದು ತಿಳಿದವರು ಹೇಳಿದರು. ಅಲ್ಲಿ ಚಿತರೆ, ಹುಲಿ, ಆನೆ, ಜಿಂಕೆ, ಮುಳ್ಳುಹಂದಿ, ಕಾಡುಬೆಕ್ಕು, ಕಾಡು ಮೊಲ, ವನ್ಯ ಪ್ರಾಣಿಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆಯಂತೆ.   





ಒಟ್ಟು ಮೂರು ಗುಡ್ಡ ಹತ್ತಿದಾಗ ಬ್ರಹ್ಮಗಿರಿ ತುದಿ ತಲಪಿದೆವು. ಮಂಜು ಸಾಕಷ್ಟಿತ್ತು. ಆಗಾಗ ನಮ್ಮನ್ನು ಮುತ್ತಿಕ್ಕಿ ಚದುರುತ್ತಲಿತ್ತು. ಬ್ರಹ್ಮಗಿರಿ ತುದಿಯಿಂದ  ಒಂದು ಬದಿ ಕೇರಳ, ಇನ್ನೊಂದು ಬದಿ ಕರ್ನಾಟಕಕ್ಕೆ ಸೇರಿದೆ. ಕರ್ನಾಟಕದಿಂದ ಸೋಮವಾರಪೇಟೆಯ ಇರ್ಪು ಕಡೆಯಿಂದ ದಾರಿ. ಕೇರಳದಿಂದ ತಿರುನೆಲ್ಲಿ ಕಡೆಯಿಂದ ಪ್ರವೇಶ. ಈಗ ಕರ್ನಾಟಕದಿಂದ ಪ್ರವೇಶ ನಿಷೇಧಿಸಿದ್ದಾರಂತೆನಾವು ೨೦೧೬ ರಲ್ಲಿ ಹೋಗಿದ್ದೆವು. ಕೊಡಗಿನ ಕಡೆಯಿಂದ ದಟ್ಟ ಅರಣ್ಯ (ಹಳೆಯ ಪಟ ನೋಡಿದಾಗ ಅನಿಸಿತು.)  ಇದೆ. 
ದಾರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಂಬಳಿ ಹುಳಗಳು ಕಂಡುವು. ಕಾಲಡಿಗೆ ಸಿಗದಂತೆ ನೋಡುತ್ತ ಹೆಜ್ಜೆ ಇಟ್ಟೆವು. ಕಾಡು ಹೂಗಳ ಸಂಖ್ಯೆ ವಿರಳವಾಗಿತ್ತು



.೨೦ಕ್ಕೆ ಹೊರಟವರು ೧೧.೩೦ಗೆ ಬ್ರಹ್ಮಗಿರಿ ತುದಿ ತಲಪಿದ್ದೆವು. ಅಲ್ಲಿ ಒಂದು ಗಂಟೆಗಳ ಕಾಲ ಪ್ರಕೃತಿಯ ಮಂಜಿನ ಕಣ್ಣಾಮುಚ್ಚಾಲೆ ಆಟವನ್ನು ಮನದಣಿಯೆ ನೋಡಿ ಆನಂದಪಟ್ಟೆವುಕಟ್ಟಿ ತಂದಿದ್ದ ತಿಂಡಿ ತಿಂದು ಪಟ ತೆಗೆಸಿಕೊಂಡು ೧೨.೩೦ಗೆ ಇಳಿಯಲು ತೊಡಗಿದೆವು.


ಇಳಿಜಾರಲ್ಲಿ ಅವರೋಹಣವನ್ನು ಬಲು ಎಚ್ಚರದಿಂದ ಕೈಗೊಳ್ಳಬೇಕುಕಾವಲು ಗೋಪುರದ ಬಳಿ ತಲಪಿದೆವು. ೮೨ ಮೆಟ್ಟಲು ಹತ್ತಿ ಕಾವಲು ಗೋಪುರದ ತುದಿಗೆ ಹತ್ತಿ ಕುಳಿತೆವು.    ಬಿಸಿಲು ಮೋಡಗಳ ಕಣ್ಣಾ ಮುಚ್ಚಾಲೆ ಆಟದಲ್ಲಿ ಗೋಪುರದ ಮೇಲಿಂದ ಬ್ರಹ್ಮಗಿರಿ ಬಹಳ ಚೆನ್ನಾಗಿ ಕಾಣುತ್ತಲಿತ್ತು. ತಂಗಾಳಿಯೂ ಬೀಸುತ್ತಲಿತ್ತು.‌ ಎಲ್ಲರೂ ಇಳಿಯುವವರೆಗೆ ನಾವು ಕೆಲವರು ಅಲ್ಲೇ ಕೂತಿದ್ದೆವು.

ಅಲ್ಲಿ ನೀರು ಪೈಪಿನಲ್ಲಿ ಬರುತ್ತಲಿತ್ತು. ಅದನ್ನು ಕುಡಿದೆವು. ವಿಷ್ಣು ದೇವಾಲಯಕ್ಕೆ ಇದೇ ನೀರಂತೆ. ಯಾರೂ ಅಲ್ಲೇ ಮುಖ ತೊಳೆದುಕೊಳ್ಳಬೇಡಿ. ನೀರು ಬಾಟಲಿಯಲ್ಲಿ ತೆಗೆದುಕೊಂಡು ಈಚೆ ಬಂದು ಮುಖ ತೊಳೆಯಿರಿ. ದೇವರ ಅಭಿಷೇಕಕ್ಕೆ ಕೂಡ ಬಳಸುತ್ತಾರೆ. ಯಾರೂ ನೀರನ್ನು ಮಲಿನಗೊಳಿಸಬೇಡಿ ಎಂದು ಮಾರ್ಗದರ್ಶಿಯೊಬ್ಬ ಹೇಳಿದ. 

ಎಲ್ಲರೂ ಇಳಿದ ಬಳಿಕ ಅಲ್ಲಿ ತಂಡದ ಪಟ ತೆಗೆಸಿಕೊಂಡು ಬೇಗನೆ ಹೊರಟೆವು. ಮಳೆಯ ಸೂಚನೆ ಕಾಣುತ್ತಲಿತ್ತು. ಎರಡು ಹನಿ ಹಾಕಿ ಮಾಯವಾಯಿತು. ಕಾಡು ಪ್ರಾಣಿಗಳು ಹತ್ತಿರದಲ್ಲಿ ಇವೆಯೋ ಎಂದು ಮೈಯೆಲ್ಲ ಕಣ್ಣಾಗಿ ನೋಡಿ  ನಾಲ್ವರು ಮಾರ್ಗದರ್ಶಿಗಳು ಎಚ್ಚರದಿಂದ  ಸುರಕ್ಷಿತವಾಗಿ ನಮ್ಮನ್ನು ಗಿರಿ ಇಳಿಸಿ ಗಮ್ಯ ಸ್ಥಾನಕ್ಕೆ ಕರೆತಂದರು. .೩೦ಗೆ ನಾವು ಕೆಳಗೆ ಇಳಿದಿದ್ದೆವು.  ಅಲ್ಲಿ ದೈತ್ಯ ಅಳಿಲು ಕೆಂದಳಿಲನ್ನು ಕಂಡೆವು. ನಾಲ್ಕೈದು ಅಳಿಲುಗಳು ಮರದಿಂದ ಮರಕ್ಕೆ ನೆಗೆಯುತ್ತಲಿದ್ದುವು. 

ಮರಳಿ ಮೈಸೂರು

ಅಲ್ಲಿಂದ ಹೊರಟವರು ದಾರಿಯಲ್ಲಿ ಚಾಕಾಫಿ, ಪಕೋಡ ಸೇವಿಸಿ ಸೀದ ಮೈಸೂರಾಭಿಮುಖರಾದೆವು. ಗಂಟೆಗೆ ಮನೆ ತಲಪಿದೆವುಪ್ರಕೃತಿ ದಂಪತಿ ವ್ಯಾನ್ ಇಳಿದಲ್ಲಿಂದ ಮನೆ ತನಕ ಬಿಟ್ಟರು. ಅವರಿಗೆ ಧನ್ಯವಾದ.
ಎರಡು ದಿನದ ಚಾರಣವನ್ನು ಯೂಥ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದ ಆಯೋಜಿಸಿ, ಯಶಸ್ವಿಯಾಗಿ ಸಂಪನ್ನಗೊಳಿಸಿದವರು ಆನಂದಗುಪ್ತ ಹಾಗೂ ಕೃಷ್ಣ ಹೆಬ್ಬಾರರು. ಅವರಿಗೆ ನಮ್ಮ ಎಲ್ಲ ಸಹಚಾರಣಿಗರ ಪರವಾಗಿ ಧನ್ಯವಾದ.

 ‌ ಚಾರಣದಲ್ಲಿ ಸುಮಾರು ಮಂದಿ ಹೊಸಬರ ಪರಿಚಯ ಸ್ನೇಹ ಲಭಿಸಿತು

ಕೊಲಾಜಿನಲ್ಲಿ ಬಳಸಿದ ಕೆಲವು ಚಿತ್ರಗಳ ಕೃಪೆ ಸಹಚಾರಣಿಗರದು. ಅವರೆಲ್ಲರಿಗೂ ಧನ್ಯವಾದ.