ಭಾನುವಾರ, ಡಿಸೆಂಬರ್ 11, 2022

ಅಂತರಂಗದ ಮಿಡಿತ

 ಕಾದಂಬರಿ: ಅಂತರಂಗದ ಮೃದಂಗ

ಲೇಖಿಕೆ: ಸಿ.ಎನ್ ಮುಕ್ತಾ

ಪ್ರಕಾಶನ: ರಾಜಲಕ್ಷ್ಮಿ ಪ್ರಕಾಶನ, ಬಳೇಪೇಟೆ ಚೌಕ, ಬೆಂಗಳೂರು ೫೬೦೦೫೩

ಪ್ರಥಮ ಮುದ್ರಣ: ೧೯೯೪

ಪುಟಗಳು: ೧೫೨

ಬೆಲೆ:ರೂ. ೨೫

ಕಾದಂಬರಿಯಲ್ಲಿ ಬರುವ ಪ್ರಧಾನ ಪಾತ್ರಗಳು, ಕಥಾನಾಯಕ ಮಹೇಶಚಂದ್ರ, ಅವನ ತಂದೆ ರಾಜಾರಾವ್, ತಾಯಿ ರಾಜಲಕ್ಷ್ಮಿ, ಕಥಾನಾಯಕಿ ಸಹನಾ, ಅವಳ ತಾಯಿ ಕೌಸಲ್ಯಾ, ತಂದೆ ಭೀಮರಾವ್, ಮಹೇಶಚಂದ್ರನ ಕಾಲೇಜಿನಲ್ಲಿ ಅಧ್ಯಾಪಿಕೆಯಾಗಿರುವ ಪ್ರಮೀಳಾ. ಹಾಗೂ ಡಾ ವಿಭಾ ಇವರನ್ನೊಳಗೊಂಡ ಕಥಾ ಸಾರಾಂಶ ಹೀಗಿದೆ: ಕೌಸಲ್ಯಾ ಭೀಮರಾವ್ ಅವರ ಮೂರನೇ ಮಗಳು ಸಹನಾಳ ಮದುವೆ  ರಾಜಾರಾವ್, ರಾಜಲಕ್ಷ್ಮಿಯವರ ಎರಡನೇ ಮಗ ಮಹೇಶಚಂದ್ರನೊಂದಿಗೆ ಆಗಿ ಅವರಿಬ್ಬರು ತುಮಕೂರಿನಲ್ಲಿ ಸಂಸಾರ ಹೂಡುತ್ತಾರೆ. ಮಹೇಶಚಂದ್ರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಜೊತೆಗೆ ಒಳ್ಳೆಯ ಬರಹಗಾರ, ಭಾಷಣಗಾರ ಎಂಬ ಹೆಸರು ಗಳಿಸಿದ್ದ.  ಸಹನಾಳಿಗೆ ಮನೆಯ ಅಕ್ಕಪಕ್ಕದಲ್ಲಿ ಯಾರೂ ಪರಿಚಿತರಿಲ್ಲದೆ, ಆ ಊರಿನಲ್ಲಿ ಸ್ನೇಹಿತೆಯರೂ ಇಲ್ಲದೆ  ಬಹಳ ಬೇಸರಗೊಂಡಿದ್ದಳು.

 ಪದವೀಧರೆಯಾಗಿದ್ದರೂ ವಿಶೇಷ ಬುದ್ಧಿವಂತೆಯಲ್ಲಸಾಮಾನ್ಯ ಹೆಣ್ಣು ಸಹನಾ. ಮದುವೆಗೂ ಮೊದಲು ತನ್ನ ಗಂಡ ತನ್ನನ್ನು ತುಂಬ ಪ್ರೀತಿಸಬೇಕು, ಸುತ್ತಾಡಲು ಕರೆದೊಯ್ಯಬೇಕು ಎಂದೆಲ್ಲಾ ಹೆಚ್ಚಿನ ಹೆಣ್ಣು ಮಕ್ಕಳು ಬಯಸುವಂತಯೇ.ಕನಸು ಕಂಡಿದ್ದಳು. ಆದರೆ ಮದುವೆಯನಂತರ ಕನಸುಗಳು ಯಾವುದೂ ಈಡೇರದೆ ಅವಳು ಹತಾಶಳಾಗುತ್ತಾಳೆ. ತಾನು ಬಯಸಿದ ಜೀವನಸುಖ ಸಿಗುವುದಿಲ್ಲ. ತನ್ನ ಗಂಡ ಅರಸಿಕ ಎನ್ನುವುದು ಅವಳಿಗೆ ಅರ್ಥವಾಗುತ್ತದೆ. ಹಾಗೂ ಅವನಿಗೆ ಹೊಂದಿಕೊಂಡು ಜೀವನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾಳೆ.   ಇತ್ತ, ಮಹೇಶಚಂದ್ರನೂತನ್ನ ಹೆಂಡತಿಯಾದವಳು ವಿದ್ಯಾವಂತಳಾಗಿದ್ದು, ತನ್ನ ಬರವಣಿಗೆಗೆ ಸಹಾಯ ಮಾಡಬೇಕು, ತಾನು ಬರೆದುದನ್ನು ಅವಳು ಓದಿ ಚರ್ಚಿಸಬೇಕು ಎಂದೆಲ್ಲಾ ಭಾವಿಸಿದ್ದ. ಆದರೆ ಮಹೇಶಚಂದ್ರ ಮದುವೆಗೆ ಒಪ್ಪಿಗೆ ಕೊಡುವಾಗ ತನ್ನ ಕೈ ಹಿಡಿಯುವವಳ ಆಸೆ ಅಭಿರುಚಿಗಳೇನು ಎಂಬುದನ್ನು  ತಿಳಿಯಬೇಕಿತ್ತು. ಮದುವೆಯನಂತರ, ಸಹನಾ ಸಿನಿಮಾ, ಅಲಂಕಾರ, ಕಥೆ ಕಾದಂಬರಿ ಓದುವುದರಲ್ಲೇ ಹೆಚ್ಚು ಸಮಯ ವಿನಿಯೋಗಿಸಿ, ಸಮಯ ವ್ಯರ್ಥ ಮಾಡುತ್ತಾಳೆ ಎಂದು ಅವನ ಅಂಬೋಣಸಿನಿಮಾ ನೋಡಿ  ಮೂರು ಗಂಟೆ ಹಾಳು ಮಾಡಲು ಅವನಿಗೆ ಮನಸ್ಸಿಲ್ಲ. ಹೀಗೆ ಸಂಸಾರದಲ್ಲಿ ರಸವಿಲ್ಲದೆ ನೀರಸವಾಗಿಯೇ ಅವರ ದಾಂಪತ್ಯದ ದೋಣಿ ಸಾಗುತ್ತಲಿರುತ್ತದೆ. ಹೀಗಿರುವಾಗ, ಅವರಿಗೆ ಗಂಡು ಮಗುವಿನ ಜನನವಾಗುತ್ತದೆ. ಮುಂದೆಯೂ ಮಹೇಶಚಂದ್ರ ತನ್ನ ಬರವಣಿಗೆ, ಕಾಲೇಜು ಕೆಲಸದಲ್ಲೇ  ಮಗ್ನನಾಗಿರುತ್ತಾನೆ ಹೊರತು ಹೆಂಡತಿ ಮಗನ ಕಡೆಗೆ ಗಮನವೀಯುವುದಿಲ್ಲಅವನ ಈ ವರ್ತನೆಯಿಂದ ಸಹನಾ ಮನದಲ್ಲೇ ಕೊರಗುತ್ತಿರುತ್ತಾಳೆ.

  ಮಹೇಶಚಂದ್ರನ ಕಾಲೇಜಿಗೆ ಪ್ರಮೀಳಾಳ ಪ್ರವೇಶವಾಗುತ್ತದೆ. ಅವಳೂ ಮಹೇಶಚಂದ್ರ ಒಳ್ಲೆಯ ಸ್ನೇಹಿತರಾಗಿರುತ್ಟಾರೆ. ಅವನ ಬರವಣಿಗೆಗೆ ಪ್ರಮೀಳಾ ಸಹಕಾರವೀಯುತ್ತಾಳೆ.ಪ್ರತೀ ಭಾನುವಾರ ಪ್ರಮೀಳಾ ಮನೆಗೇ ಬಂದು ಅವನು ಹೇಳಿದ್ದನ್ನು ಟೈಪ್ಾಡಿ ಅವನ ಕೆಲಸ ಹಗುರ ಮಾಡುತ್ತಾಳೆ. ಇದರಿಂದ ಭಾನುವಾರವೂ ಮಹೇಶ ಹೆಂದತಿ ಮಕ್ಕಳ ಕಡೆಗೆ ಗಮನ್ವೀಯಲು ಸಾಧ್ಯವಾಗುವುದಿಲ್ಲ. ಇದನ್ನು ಸಹಿಸಲು ಸಹನಾಳಿಗೆ ಬಹಳ ಕಷ್ಟವಾಗುತ್ತದೆ. ಅವರಿಬ್ಬರದು ಬರೀ ಸ್ನೇಹಾಚಾರ ಮಾತ್ರವಾಗಿದ್ದರೂ ಅಲ್ಪ ಸ್ವಲ್ಪ ಹೊಗೆ ಹರಡಿ, ಅದು ಸಹನಾಳ ನೆಮ್ಮದಿ ಕದಡುವಲ್ಲಿ ಯಶಸ್ವಿಯಾಗುತ್ತದೆ. ಇತ್ತಪ್ರಮೀಳಾ ತುಮಕೂರಿನ ಕೆಲಸ ತೊರೆದು, ಸಹನಾಳ ಬಾಳಿಗೆ ಮುಳ್ಳಾಗದೆಅವಿನಾಶನನ್ನು ಮದುವೆಯಾಗಿ ದೆಹಲಿಗೆ ತೆರಳುತ್ತಾಳೆ

ಹೀಗಿರುವಾಗ ಸಹನಾಳ ಗರ್ಭದಲ್ಲಿ ಎರಡನೇ ಮಗು ಬೆಳೆಯುತ್ತಿರುತ್ತದೆ. ಅವಳು ಗರ್ಭಿಣಿಯಾದದ್ದೇ ತಪ್ಪು ಎನ್ನುವಂತೆ ಮಹೇಶ ಮಾತಾಡುತ್ತಾನೆ. ಅದು ಅವಳ ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸುತ್ತದೆ. ನೋವು ಸಾಲದೆಂಬಂತೆ ಅತ್ತ ತಾಯಿಯ ಅನಿರೀಕ್ಷಿತ ಮರಣ ಎದುರಾಗುತ್ತದೆ. ಇದರಿಂದ   ಸಹನಾ ಇನ್ನಷ್ಟು ಕುಗ್ಗಿ ಹೋಗುತ್ತಾಳೆ.ಮಹೇಶಚಂದ್ರ ಅವಳ ಹೆರಿಗೆಯ ಸಮಯದಲ್ಲೇ ಪುಸ್ತಕ ಬರೆಯುವ ಸಲುವಾಗಿ, ಸಹನಾಳ ವಿರೋಧದ ನಡುವೆಯೇ ಕಾಶ್ಮೀರಕ್ಕೆ ತೆರಳುತ್ತಾನೆ. ಸಂಸಾರದ ಜವಾಬ್ದಾರಿ ವಹಿಸಿಕೊಳ್ಳದೆ ಪಲಾಯನ ವಾಗಿರುವುದು ಜೀವನದ ದೊಡ್ಡ ಸೋಲು.  ಹೆಣ್ಣು ಮಗುವಿನ ನಿರೀಕ್ಷೆ ಯಲ್ಲಿದ್ದ ಸಹನಾಳಿಗೆ ಪುನಃ ಗಂಡು ಮಗುವೇ ಜನಿಸುತ್ತದೆ. ಅದೂ ಅವಳಿಗೆ ದೊಡ್ಡ ಆಘಾತವನ್ನೇ ಉಂಟುಮಾಡುತ್ತದೆ. ತಾಯಿ ಇಲ್ಲದ್ದರಿಂದ ಸಹನಾಳ ಅತ್ತೆಯೇ ಬಾಣಂತನದ ಜವಾಬ್ದಾರಿ ಹೊರುತ್ತಾಳೆ. ಇತ್ತ, ಎಷ್ಟು ಪತ್ರ ಬರೆದರೂ ಮಹೇಶಚಂದ್ರನಿಂದ ಒಂದೇ ಒಂದು ಪತ್ರವೂ ಬರುವುದಿಲ್ಲ.ಇದೂ ಕೂಡ ಸಹನಾ ಮನಸ್ಸಿಗೆ ಕೆಟ್ಟ ಪರಿಣಾಮ ಬೀರುತ್ತದೆ.

ಸಹನಾ ಕ್ರಮೇಣ ಮಗುವಿನ ಬಗ್ಗೆ ಯಾವ ಮಮಕಾರವೂ ಇಲ್ಲದೆ ಮಾನಸಿಕ ನೆಮ್ಮದಿ ಕಳೆದುಕೊಂಡು ಭ್ರಮಾಲೋಕದಲ್ಲಿ ವಿಹರಿಸುತ್ತಿರುತ್ತಾಳೆ. ತಾನೇ ಪತ್ರ ಬರೆದುಕೊಂಡು ಗಂಡನಿಂದ ಪತ್ರ ಬಂದಿದೆ ಎಂದು ಸಂಭ್ರಮ ಪಟ್ಟುಕೊಳ್ಳುತ್ತಿರುತ್ತಾಳೆ. ಸಹನಾ ಭ್ರಮೆಯಲ್ಲಿ ಬದುಕಿರುವಾಗ ನೆಮ್ಮದಿಯಿಂದ ಇದ್ದಳು. ಬದುಕಿನಲ್ಲಿ ಆ ನೆಮ್ಮದಿಯನ್ನೇ ಅವಳು ಬಯಸಿದ್ದಳು. ಅದು ಸಿಗದೆ ಮರೀಚಿಕೆಯಾಗಿತ್ತು. ಸೊಸೆಯ ಮಾನಸಿಕ ಸ್ಥಿತಿ ಹದಗೆಟ್ಟಾಗ ಅತ್ತೆ ಮಾವ ಎಚ್ಚತ್ತುಗೊಂಡು ಸಹನಾ ತಂದೆಗೆ ಪತ್ರ ಬರೆದು ಕರೆಸಿಕೊಂಡು, ಸಹನಾಳನ್ನು ಮನೋವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತಾರೆಸಹನಾಳ ಮನಸ್ಸಿನ ನೋವಿನ ಚಿಕಿತ್ಸೆಗೆ ಅಲ್ಲಿ ಡಾ. ವಿಭಾ ಅವರು ಸಜ್ಜಾಗುತ್ತಾರೆ. ಮನೆಯವರೊಡನೆ ಮಾತುಕತೆ ನಡೆಸುತ್ತಾರೆ, ಸಹನಾಳನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ. ಮಹೇಶಚಂದ್ರನೂ ಕಾಶ್ಮೀರದಿಂದ ಬರುತ್ತಾನೆ. ತನ್ನಿಂದಲೇ ಸಹನಾಳಿಗೆ ಸ್ಥಿತಿ  ಬಂತೆಂದು ಪಶ್ಚಾತ್ತಾಪ ಪಡುತ್ತಾನೆ. ಆಸ್ಪತ್ರೆಗೆ ಬಂದು ವೈದ್ಯರ ಬಳಿ ಮಾತಾಡಿ, ತಾನು ನಡೆದುಕೊಂಡ ದಾರಿ ಸರಿಯಿಲ್ಲ ಎಂಬುದನ್ನು ಒಪ್ಪಿಕೊಂಡು ಮುಂದೆ  ಸಹನಾಳ ಮಾನಸಿಕ ಸ್ಥಿತಿ ಸುಧಾರಣೆಗೆ ತನ್ನ ಸಂಪೂರ್ಣ ಸಹಕಾರ ಕೊಡುತ್ತಾನೆ ಎಂಬಲ್ಲಿಗೆ ಕಾದಂಬರಿ ಮುಕ್ತಾಯಗೊಳ್ಳುತ್ತದೆ.

   ಸಹನಾಳ ಪಾತ್ರ ವಿಶ್ಲೇಷಣೆಯನ್ನು ಓದುತ್ತ ಸಾಗುವಾಗ, ಹೌದು ಮಹೇಶಚಂದ್ರನ ವರ್ತನೆ ಬಹಳ ತಪ್ಪು. ಹೀಗಿರುವವನು ಮದುವೆಯೇ ಆಗಬಾರದಿತ್ತು.  ಸಹನಾಳಿಗೂ ಭಾವನೆಗಳಿವೆ, ಅವಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ಅಸಮರ್ಥ ನಾದವ ಏನು ಬರೆದಾನು? ಪುಸ್ತಕದ ಬದನೆಕಾಯಿ  ಎಂದು ಅವನ ಬಗ್ಗೆ ಕೋಪ ತೋರುವಂತಾಗುತ್ತದೆ. ಅದೇ ಮಹೇಶಚಂದ್ರನ ಪಾತ್ರದೊಳಕ್ಕಿಳಿದಾಗ, ಇಲ್ಲಿ ಸಹನಾಳದೇ ತಪ್ಪು. ಮಹೇಶ ಸರಿಯಾದ ದಾರಿಯಲ್ಲಿದ್ದಾನೆ. ಜೀವನವೆಂದರೆ ಕಥೆ ಕಾದಂಬರಿಯಲ್ಲಿ ಬರುವ ಪಾತ್ರಗಳಂತಲ್ಲ. ಜೀವನವೇ ಬೇರೆ. ಅವನ ಭಾವನೆಗಳನ್ನು ತುಸು ಅರ್ಥ್ಯೆಸಿಕೊಂಡು ಎರಡು ಮಕ್ಕಳನ್ನು  ನೋಡಿಕೊಂಡು ಸಹನಾ ಚೆನ್ನಾಗಿ ಸಂಸಾರ ನಡೆಸಬಹುದಿತ್ತುಮನೋವಿಕಾರಕ್ಕೆ ತುತ್ತಾಗಬೇಕಾಗಿರಲಿಲ್ಲ ಎನಿಸುವಂತೆ ಭಾಸವಾಗುತ್ತದೆ. ಓದುಗರಲ್ಲಿ ದ್ವಂದ್ವ ಮನದೊಳಕ್ಕೆ ಇಳಿಯುವಂತೆ ಪಾತ್ರ ವಿಶ್ಲೇಷಣೆ ಮಾಡುವಲ್ಲಿ ಲೇಖಿಕೆ ಯಶಸ್ವಿಯಾಗಿದ್ದಾರೆ

   ಮಹೇಶಚಂದ್ರನ ತಂದೆತಾಯಿಗಳ ಪಾತ್ರ ಇಲ್ಲಿ ಮೇಲುಗೈ ಸಾಧಿಸುತ್ತದೆ. ನಮ್ಮ ಸಮಾಜದಲ್ಲಿ ಹೆಚ್ಚಾಗಿ ತನ್ನ ಮಗನದೇ ತಪ್ಪು ನಡೆದರೂ ಅದನ್ನು ಸೊಸೆಯ ತಲೆಗೆ ಕಟ್ಟಿ, ಮಗನಿಗೆ ಇನ್ನೊಂದು ಮದುವೆ ಮಾಡಲು ಹೇಸುವುದಿಲ್ಲ. ಈ ಕಥೆಯಲ್ಲಿ ಮಗನ ಬೇಜವ್ದಾರಿಯಿಂದ ಬೇಸತ್ತುಅತ್ತೆ ಹಾಗೂ ಮಾವ ಜವಾಬ್ದಾರಿಯಿಂದ ವಿಮುಖರಾಗಾದೆ   ಸೊಸೆಯ ಮಾನಸಿಕ ಅಸ್ವಸ್ಥತೆಯನ್ನು ಅರ್ಥಮಾಡಿಕೊಂಡು, ಕೂಡಲೇ ಸೊಸೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಸೊಸೆ ಮಗನ ಬಾಳನ್ನು ನೇರ್ಪುಗೊಳಿಸುವ ಕೆಲಸ ಮಾಡುತ್ತಾರೆ.  ಇಂಥ ಪಾತ್ರಗಳೇ ಇಂದಿಗೂ ಎಂದಿಗೂ ಸಮಾಜದ ಆರೋಗ್ಯಕ್ಕೆ ಪೂರಕ. ಸಹನಾ ಮಾನಸಿಕ ಅಸ್ವಸ್ಥತೆಯಿಂದ ಸ್ವಸ್ಥಳಾಗಿ ಸುಖೀ ಸಂಸಾರ ನಡೆಸುವಳಾ? ಮಹೇಶಚಂದ್ರ ತನ್ನ ತಪ್ಪನ್ನು ಒಪ್ಪಿಕೊಂಡು ಮುಂದೆ ಹೆಂಡತಿ ಮಕ್ಕಳೊಡನೆ ಸುಖಮಯವಾಗಿ ಇರುವನಾ ಎಂಬ ಕಲ್ಪನೆಯನ್ನು ಓದುಗರಿಗೇ ಬಿಟ್ಟು, ಅಂತರಂಗದ ಮೃದಂಗವನ್ನು ಲಯಬದ್ಧವಾಗಿ ನುಡಿಸಿ, ಕೊನೆಗೆ ಎದೆಯ ಮಿಡಿತವನ್ನು ಸಿ.ಎನ್. ಮುಕ್ತಾ ಸುಖಾಂತ್ಯಗೊಳಿಸಿದ್ದಾರೆ

ಇದು ಸಿ.ಎನ್ ಮುಕ್ತಾ ಅವರು ೧೯೯೪ನೇ ಇಸವಿಯಲ್ಲಿ  ಬರೆದಂಥ ಕಾದಂಬರಿಯಾದರೂ ಇದರಲ್ಲಿ ಬರುವಂತಹ ಪಾತ್ರಗಳು  ಪ್ರಸ್ತುತ ಇಂದಿನ ಸಮಾಜದಲ್ಲೂ ಕಾಣುತ್ತಲೇ ಇರುತ್ತೇವೆ. ಜೀವನವೆಂದರೆ ತಾನಾಯಿತು ತನ್ನ ಕೆಲಸವಾಯಿತು, ತನ್ನದೇ ಮೂಗಿನ ನೇರಕ್ಕೆ ಆಲೋಚನೆ ಮಾಡುವುದಲ್ಲ, ಪತ್ನಿ ಮಕ್ಕಳ ಕಡೆಗೂ ತುಸುವಾದರೂ ಗಮನ ಹರಿಸಬೇಕು, ಗಂಡನಾದವ ಕಥೆಯಲ್ಲಿ ಬರುವ ಪಾತ್ರದಂತಿರಬೇಕು, ಹೊರಜಗತ್ತಿಗೆ ಪ್ರೀತಿಯನ್ನು ಜಾಹೀರುಪಡಿಸಬೇಕು ಎಂದು ಭಾವಿಸುವುದಲ್ಲ. ಸಂಸಾರವೆಂದರೆ ಎರಡು ಚಕ್ರಗಳು ಸಮವಾಗಿ ಚಲಿಸುತ್ತಲಿರಬೇಕು ಹಾಗೂ ಮನೋವಿಕಾರಕ್ಕೆ ಕೂಡಲೇ ಮಾನಸಿಕ ಚಿಕಿತ್ಸೆ ಎಷ್ಟು ಅವಶ್ಯ ಎಂಬುದನ್ನು ಕಾದಂಬರಿಯಲ್ಲಿ ಸಿ.ಎನ್ ಮುಕ್ತಾ ಅವರು ವಿವರವಾಗಿ ದಾಖಲಿಸಿದ್ದಾರೆ.

 

ರುಕ್ಮಿಣಿಮಾಲಾ

ಮನೆ ಸಂಖ್ಯೆ ೮ ಅತ್ರಿ

ಕಾಮಾಕ್ಷೀ ಆಸ್ಪತ್ರೆ ರಸ್ತೆ

ಸರಸ್ವತೀಪುರ, ಮೈಸೂರು ೫೭೦೦೦೯

ಸಂಚಾರಿ: ೭೪೧೧೪೭೪೬೨೪

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ