‘೨೮-೧-೧೮ರಂದು
ಬೆಳಗ್ಗೆ ೨.೩೦ಗೆ ಏಳಬೇಕು. ನಾನು ಬಂದು ಬಾಗಿಲು ತಟ್ಟುವೆ’ ಎಂದು ನಾಗೇಂದ್ರಪ್ರಸಾದ್ ಹೇಳಿದ್ದರು.
ನಾವು ಎರಡು ಗಂಟೆಗೇ ಎದ್ದು, ನಿತ್ಯಕರ್ಮಗಳನ್ನು ಪೂರೈಸಿದೆವು. ಹೇಳಿದ ಸಮಯಕ್ಕೆ ಸರಿಯಾಗಿ ತಯಾರಾಗಿ
ಕೋಣೆಯಿಂದ ಹೊರಬಂದು ಬಸ್ಸೇರಿದೆವು. ನಮ್ಮಿಂದಾಗಿ ಚಾಲಕನಿಗೂ ಸರಿಯಾಗಿ ನಿದ್ರೆ ಇಲ್ಲ. ಸುಮಾರು ೩-೪
ಕಿಮೀ ದೂರ ಸಾಗಿ ನಾವು ಮಾಕಳಿದುರ್ಗ ರೈಲ್ವೇ ನಿಲ್ದಾಣ ಸಮೀಪ ಹೋದೆವು. ಅಲ್ಲಿ ನಮ್ಮ ಗೈಡ್ ರಾಜಣ್ಣ
ನಮ್ಮ ಬರುವನ್ನೇ ಕಾಯುತ್ತಲಿದ್ದರು. ನಮ್ಮ ತಂಡದ ಹಿರಿಯಕ್ಕ ಗೋಪಕ್ಕನ ಕಾಲಿಗೆ ರಾಜಣ್ಣ ನಮಸ್ಕರಿಸಿ,
‘ಅಮ್ಮ, ನಿಮ್ಮಾಶೀರ್ವಾದ ನನ್ನ ಮೇಲಿರಲಿ. ನಿಮ್ಮನ್ನು ಕೈಹಿಡಿದು ಕರೆದುಕೊಂಡು ಹೋಗುವೆ’ ಎಂದಾಗಲೇ
ಏನೋ ಸರಿ ಇಲ್ಲ ಈ ಮನುಜ ಎಂದು ಅರಿವಾಯಿತು. ಪರಮಾತ್ಮ ಸರಿಯಾಗಿ ಆಟ ಆಡಿಸುತ್ತಿದ್ದಾನೆ. ರಾಜಣ್ಣನ
ಬಳಿ ಹೋದರೆ ಸಾಕು, ಗಬ್ಬು ನಾಥ. ಸರಿಯಾಗಿ ಕುಡಿದಿದ್ದರು. ರೈಲ್ವೇ ಹಳಿ ದಾಟಿ ಮಾಕಳಿಬೆಟ್ಟ ಹತ್ತಬೇಕಿತ್ತು.
ಅಲ್ಲಿ ಅರಣ್ಯ ಇಲಾಖೆಯವರು ಕಾದು ನಿಂತಿದ್ದರು. ಅಲ್ಲಿ
ಅವರೊಡನೆ ರಾಜಣ್ಣ ಮಾತುಕತೆಯಾಡಿ ನಮಗೆ ಮುಂದೆ ಹೋಗಲು ಅನುಮತಿ ಸಿಕ್ಕಿತು. ದುರ್ಗಕ್ಕೆ ಪ್ರವೇಶಿಸಲು
ಇಲ್ಲೂ ಕೂಡ ಒಬ್ಬರಿಗೆ ತಲಾ ೪೫೦ ರೂ. ಅರಣ್ಯ ಇಲಾಖೆಗೆ ಕಟ್ಟಬೇಕು.
ರಾಜಣ್ಣ ಅವರ ಸಂಪರ್ಕ ಸಂಖ್ಯೆ:
೯೯೬೪೩೬೧೯೪೪.
ಬೆಂಗಳೂರಿನಿಂದ
೬೦ಕಿಮೀ, ದೊಡ್ಡಬಳ್ಳಾಪುರದಿಂದ ೧೦ಕಿಮೀ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಿಂದ ೩-೪ಕಿಮೀ ದೂರವಿರುವ ಬೆಟ್ಟ ಮಾಕಳಿದುರ್ಗ. ೧೧೧೭ಮೀ ಎತ್ತರವಿರುವ ಮಾಕಳಿದುರ್ಗದ ಮೇಲೆ ಪುರಾತನ ಕೋಟೆ ಇದ್ದು, ಕೋಟೆಯನ್ನು ಸೊಂಡೂರು ಮಹಾರಾಜರು ಕಟ್ಟಿದರು ಎಂದು ಸ್ಥಳೀಯರು ಹೇಳುತ್ತಾರೆ. ಕೋಟೆಯ ಮಧ್ಯಭಾಗದಲ್ಲಿ ಮಾಕಳಿ ಮಲ್ಲೇಶ್ವರ ದೇವಾಲಯವಿದೆ. ಸುಮಾರು ೬೦೦ ವರ್ಷಗಳ ಇತಿಹಾಸವಿರುವ ಈ ದೇವಾಲಯವು ಪುರಾತತ್ತ್ವ ಇಲಾಖೆಯ ದಿವ್ಯನಿರ್ಲಕ್ಷ್ಯದಿಂದ ಅವನತಿಯತ್ತ ಸಾಗಿದೆ.
ನಾವು ನಾಲ್ಕು ಗಂಟೆಗೆ ಬೆಟ್ಟ ಹತ್ತಲು ಪ್ರಾರಂಭಿಸಿದೆವು.
ಮುಂದೆ ರಾಜಣ್ಣ, ಹಿಂದೆ ನಾಗೇಂದ್ರಪ್ರಸಾದ್. ಮಧ್ಯೆ ನಾವುಗಳು ನಡೆಯತಕ್ಕದ್ದು ಎಂದು ಆಯೋಜಕರು ನಮಗೆ
ಹೇಳಿದ್ದರು. ನಮಗಿಂತ ಮೊದಲು ಹತ್ತಾರು ಮಂದಿ ಬೆಟ್ಟ ಹತ್ತುತ್ತಲಿದ್ದದ್ದು ಅವರ ಮಾತು, ಟಾರ್ಚ್ ಬೆಳಕಿನಿಂದ
ಕಂಡಿತು. ಗವ್ವೆನ್ನುವ ಕತ್ತಲೆ. ನಮ್ಮ ಟಾರ್ಚ್ ಬೆಳಕೇ ನಮಗೆ ದಾರಿದೀಪ. ದಾರಿಯೋ ಬಂಡೆಗಲ್ಲುಗಳೇ ತುಂಬಿದ
ಇಕ್ಕಟ್ಟು ಹಾದಿ. ಬಂಡೆಯ ಸಂದಿಗೊಂದಿಗಳಲ್ಲಿ ಸಾಗಬೇಕು. ದಾರಿಗೆ ಸ್ಥಳೀಯರು ಇಲ್ಲದೆ ಹೋದರೆ ದಾರಿ
ತಪ್ಪುವುದರಲ್ಲಿ ಅನುಮಾನವಿಲ್ಲ. ನಮ್ಮ ಮುಂದಿದ್ದವರು ದಾರಿ ತಪ್ಪಿ ದೊಡ್ಡ ಬೊಬ್ಬೆ ಹೊಡೆಯುತ್ತಲಿದ್ದರು.
ಅವರು ಸರಿದಾರಿ ಸೇರಲು ರಾಜಣ್ಣ ನೆರವಾದರು. ರಾಜಣ್ಣನ ಬಳಿ ಹೆಚ್ಚು ಮಾತಾಡಲು ಹೋಗಲಿಲ್ಲ ನಾವು. ಏಕೆಂದರೆ
ನಾವು ಕೇಳಿದ್ದ ಪ್ರಶ್ನೆಗಷ್ಟೇ ಉತ್ತರ ಕೊಡದೆ ಏನೇನೋ ಉತ್ತರಗಳು ಬರಲು ಸುರುವಾಗಿತ್ತು. ‘ಇಷ್ಟು ವಯಸ್ಸಾದ
ಅಮ್ಮಂದಿರು ನಿಜವಾಗಿ ಈ ಬೆಟ್ಟ ಹತ್ತುತ್ತಾರ? ಅವರಿಗೆ ಹತ್ತಲು ಆಗುತ್ತ? ಎಂದು ಪ್ರಶ್ನೆ ಕೇಳುತ್ತ
ರಾಜಣ್ಣ ಅಲ್ಲೇ ನಿಂತು ಬಿಡುತ್ತಿದ್ದರು! ಈ ವಿಚಾರ ರಾಜಣ್ಣನಿಗೆ ಬಲು ಸೋಜಿಗದ ಸಂಗತಿ. ನಮ್ಮ ತಂಡದಲ್ಲಿ
೬೦ ದಾಟಿದವರು ಮೂರು ನಾಲ್ಕು ಮಂದಿ ಇದ್ದರು. ಅವರೆಲ್ಲ
ಇಂಥ ಹತ್ತರಷ್ಟು, ಮತ್ತು ಇದಕ್ಕಿಂತ ಎತ್ತರದ ಬೆಟ್ಟ ಹತ್ತಿ ಇಳಿದು ಅಭ್ಯಾಸ ಇರುವವರು. ಅವರಿಗೆ ಆಗುತ್ತದೆ.
ಆದರೆ ಸ್ವಲ್ಪ ನಿಧಾನ ಆಗಬಹುದು ಅಷ್ಟೆ. ನೀವೇನೂ ಚಿಂತೆ ಮಾಡಬೇಡಿ ನಡೆಯಿರಿ ಮುಂದೆ ಎಂದು ಹೇಳುತ್ತಲಿದ್ದೆವು.
ನಮ್ಮ ಗುರಿ ದೃಷ್ಟಿ ಇದ್ದದ್ದು ಟಾರ್ಚ್ ಬೆಳಕಿನತ್ತ ಮತ್ತು ಮುಂದೆ ರಾಜಣ್ಣನ ಕಡೆಗೆ. ಬೇರೆಲ್ಲೂ ನಮ್ಮ ನೋಟ ಹರಿಯಲಿಲ್ಲ!
ಕಲ್ಲು ಬಂಡೆಗಳ ನಡುವೆ, ಬಂಡೆಗಲ್ಲು ಏರಿ ನಡೆದೆವು. ಅಲ್ಲಲ್ಲಿ ವಿಶ್ರಮಿಸಿದೆವು. ಹಿಂದಿನವರ ತಲೆ
ಕಾಣುವ ವರೆಗೆ ನಿಂತು ಮುಂದೆ ಸಾಗುತ್ತಲಿದ್ದೆವು. ಏಕೆಂದರೆ ದಾರಿ ಗೊತ್ತಿರುವವರು ರಾಜಣ್ಣ ಒಬ್ಬರೆ.
ಈ ಕತ್ತಲೆಯಲ್ಲಿ ದಾರಿ ತಪ್ಪಿದರೆ ಬಲು ಕಷ್ಟ ಎಂಬ ಅರಿವು ನಮಗಿತ್ತು. ಒಂದು ಕಡೆ ರಾಜಣ್ಣನೇ ದಾರಿ
ತಪ್ಪಿದಾಗ ನಾವೇ ಸರಿ ದಾರಿ ತೋರಿಸಬೇಕಾಯಿತು! ಹೀಗೆ ಸಾಗುತ್ತಿರಬೇಕಾದರೆ ರಾಜಣ್ಣನ ಚಪ್ಪಲಿ ತುಂಡಾಯಿತು.
ಅದನ್ನು ಅತ್ತ ಎಸೆದು ಬರಿಗಾಲಿನಲ್ಲಿ ಆ ಕಲ್ಲುದಾರಿಯಲ್ಲಿ ಲೀಲಾಜಾಲವಾಗಿ ನಡೆದರು! ರಾಜಣ್ಣ ನೋಡಲು
ವಯಸ್ಸಾದವರಂತೆ ಕಾಣುತ್ತಲಿದ್ದರು. ಆದರೆ ಅವರಿಗೆ ವಯಸ್ಸು ೫೭ ಎಂದಾಗ, ಕುಡಿತ ಹಾಗೂ ಬೀಡಿಯಿಂದ ಈ
ಸ್ಥಿತಿ ಎಂದು ಭಾವಿಸಿದೆವು. ದಿನಕ್ಕೆ ೪೦ ಬೀಡಿ ಸೇದುತ್ತಾರಂತೆ! ನಾನಂತೂ ನಮ್ಮ ಬಳಿ ಇದ್ದಾಗ ಬೀಡಿ
ಸೇದಲು ಬಿಡಲಿಲ್ಲ. ಆದರೆ, ಹಿಂದಿನವರು ಬರುವಲ್ಲಿವರೆಗೆ
ನಾವು ಕಾಯುತ್ತಲಿದ್ದಾಗ, ರಾಜಣ್ಣ ಕತ್ತಲೆಯಲ್ಲಿ ಮಾಯವಾಗಿ ಬೀಡಿ ಸೇದಿ ಬಂದು ನಮ್ಮೆದುರು ಪ್ರತ್ಯಕ್ಷವಾಗುತ್ತಿದ್ದರು!
ಹೀಗೆ ಸುಮಾರು
ಎರಡು ಮೂರು ಕಿಮೀ ಸಾಗಿದಾಗ ಕೋಟೆ ಎದುರಾಯಿತು. ಶಿಥಿಲಗೊಂಡ ಕೋಟೆ ದಾಟಿ ಮುಂದುವರಿದು ಮಾಕಳಿದುರ್ಗ
ತಲಪಿದಾಗ ಬೆಳಗ್ಗೆ ಆರು ಗಂಟೆಯಾಗಿತ್ತು. ಬೆಟ್ಟದಮೇಲೆ ಚಳಿ ಇರಲಿಲ್ಲ. ಕತ್ತಲು ಕರಗಿ ಬೆಳಕು ಅರೆಪ್ರಜ್ಞಾವಸ್ಥೆಯಲ್ಲಿತ್ತು.
ಮೇಲೆ ಶಿಥಿಲಗೊಂಡ ಮಾಕಳಿ ದೇವಾಲಯವಿದೆ. ವಿಶಾಲವಾದ ಕೋಟೆ
ಬಹುತೇಕ ಪಾಳುಬಿದ್ದಿವೆ. ಕೋಟೆಯ ಸುತ್ತ ಹೆಜ್ಜೆ ಹಾಕಿದೆವು. ಕೋಟೆಯ ಮೇಲೆ ನಿಂತು ಕೆಳಗೆ
ಹಳಿಗಳ ಮೇಲೆ ರೈಲು ಚಲಿಸುವುದನ್ನು ನೋಡುವುದೇ ಬಲು ಸೊಗಸು. ಸೂರ್ಯನ ಉದಯಕ್ಕಾಗಿ ಕಾದು ಕುಳಿತೆವು.
ಬಾಲಭಾಸ್ಕರ ಮೋಡದ ಮರೆಯಿಂದ ನಸುಕೆಂಪು ಚೆಂಡಿನಂತೆ ಮೆಲ್ಲ ಮೆಲ್ಲನೆ ಮೇಲೆ ಬಂದು ಆಕಾಶಕ್ಕೆ ಮುದ್ದುಕೊಟ್ಟಂತೆ
ಕಂಡಿತು! ಎಂಥ ಸುಂದರ ದೃಶ್ಯವದು. ‘ಏ ಬೇಗ ಬಾರೋ. ಸನ್ ರೈಸ್ ಆಗ್ತಾ ಇದೆ. ಈಗ ತೆಗೆಯೋ ಫೋಟೋ. ಹಿಂದೆ
ಸನ್ ರೈಸಾಗಿರುವುದೂ ಬರಬೇಕು ಹಾಗೆ ತೆಗಿ. ಫೋಟೋ ಸೂಪಾರಾಗಿ ಬರಬೇಕು. ಸನ್ ರೈಸಾಗುವುದು ಬರದಿದ್ದರೆ
ಏನು ಮಾಡ್ತೀಯಾ?’ ಹೀಗೆ ಅಲ್ಲಿ ನೆರೆದಿದ್ದ ಕಾಲೇಜು ಹುಡುಗ ಹುಡುಗಿಯರು ಒಬ್ಬರಿಗೊಬ್ಬರು ಮಾತಾಡುತ್ತಲೇ
ಭಾಸ್ಕರನಿಗೆ ಬೆನ್ನು ಹಾಕಿ ಫೋಟೋಗೆ ಫೋಸು ಕೊಡುತ್ತ
ನಿಂತು ಫೋಟೋ ತೆಗೆಸಿಕೊಳ್ಳುತಿದ್ದರು! ಬೆಟ್ಟದ ಮೇಲಿಂದ ಸುತ್ತ ನೋಡುವಾಗ ದೂರದಲ್ಲಿ ಎರಡು ಟೆಂಟುಗಳು
ಕಾಣುತ್ತಲಿತ್ತು. ಟೆಂಟು ಹಾಕಿ ಉಳಿಯಲು ಅರಣ್ಯ ಇಲಾಖೆ ಅನುಮತಿ ಕೊಡುವುದಿಲ್ಲ ಎಂದು ಹೇಳುತ್ತಾರೆ.
ಆದರೆ ಟೆಂಟು ಹಾಕಿ ಉಳಿಯುವವರು ಬಹುಶಃ ಅನುಮತಿ ನಿರಾಕರಿಸುವವರ ಕೈಬೆಚ್ಚಗೆ ಮಾಡುತ್ತಾರೋ ಏನೋ? ಗೊತ್ತಿಲ್ಲ!
ಸೂರ್ಯ ಹಂತಹಂತವಾಗಿ ಮೇಲೇರಿ ಬರುವ ಸೌಂದರ್ಯವನ್ನು ಕಣ್ಣಿನಲ್ಲಿ
ತುಂಬಿಕೊಳ್ಳುವುದಲ್ಲದೆ, ಕ್ಯಾಮರಾ ಕಣ್ಣಲ್ಲೂ ಸೆರೆಹಿಡಿಯುತ್ತ ನಿಂತೆವು. ಸೂರ್ಯ ಪೂರ್ಣ ಮೇಲೇರಿ ಬರುವಲ್ಲೀವರೆಗೂ ಅಲ್ಲಿಂದ ಕದಲಲು
ಯಾರಿಗೂ ಮನಸ್ಸಿಲ್ಲ. ಆದರೆ ಆದಷ್ಟು ಬೇಗ ವಾಪಾಸು ಹೋಗಲೇಬೇಕಿತ್ತು. ಘಾಟಿಯಲ್ಲಿ ಗುರುನಾಥರು ನಮಗಾಗಿ
ತಿಂಡಿ ತಯಾರಿಸಿಟ್ಟು ಕಾಯುತ್ತಲಿದ್ದರು. ೭.೩೦ ಗಂಟೆಗೆ ನಾವು ಕೆಳಗೆ ಇಳಿಯಲು ತೊಡಗಿದೆವು. ಆಗ ಪೂರ್ಣ
ಬೆಳಕಿನಲ್ಲಿ ಇಳಿಯುವಾಗ ದೊಡ್ಡ ದೊಡ್ಡ ಬಂಡೆಗಲ್ಲುಗಳು ಕಾಣಿಸಿದವು. ಬೃಹತ್ ಪಾದೆಗಳನ್ನು ದಾಟಿ ಕೆಳಗೆ
ಇಳಿದೆವು. ಎಲ್ಲಿ ನೋಡಿದರೂ ಬಂಡೆಗಲ್ಲುಗಳೇ ತುಂಬಿದ್ದುವು. ಬೆಳಕಿನಲ್ಲಿ ರಾಜಣ್ಣನಿಗೇ ಒಂದು ಕಡೆ ದಾರಿ ತಪ್ಪಿತ್ತು.
ಅಂತೂ ಅಲ್ಲಿ ಇಲ್ಲಿ ಸುತ್ತಿ ಸರಿ ದಾರಿ ಹುಡುಕಿ ನಮ್ಮನ್ನು ಕೆಳಗೆ ಕರೆದೊಯ್ದರು. ಇಳಿಯಲಾಗದವರನ್ನು
ಕೈಹಿಡಿದು ಕೆಲಗೆ ಇಳಿಸಲು ನೆರವಾದರು. ನಾವು ಕೆಳಗೆ ಬರುತ್ತಲಿರುವಾಗ ಡೆಕತ್ಲಾನ್ ಕಡೆಯವರ ನೇತೃತ್ತ್ವದಲ್ಲಿ
ಸುಮಾರು ೯೦ಕ್ಕೂ ಹೆಚ್ಚು ಮಂದಿ ಕೈಯಲ್ಲಿ ನೀರೂ ಹಿಡಿಯದೆ ಒಂಬತ್ತು ಗಂಟೆಗೆ ಬೆಟ್ಟ ಹತ್ತಲು ಹೊರಟಿದ್ದರು.
ಆ ಬಿಸಿಲಿನಲ್ಲಿ ಬೆಟ್ಟ ಹತ್ತುವಾಗ ನೀರೂ ಇಲ್ಲದೆ ಆಯಿತು ಇವರ ಕಥೆ ಎಂದುಕೊಂಡೆವು ಮನಸ್ಸಿನಲ್ಲಿ.
ಹೀಗೂ ಹೊರಡಿಸುವುದು ಉಂಟೆ? ಎಂದು ಮಾತಾಡಿಕೊಂಡೆವು.
ನಾವು ರೈಲ್ವೇ
ಹಳಿ ಬಳಿ ಬರುವಾಗ ಹಳಿಮೇಲೆ ಒಂದು ಚಕ್ರವಿಲ್ಲದ ಲಾರಿ ಬರುತ್ತಲಿತ್ತು! ಈ ಲಾರಿ ಜಲ್ಲಿ ತುಂಬಿಕೊಂಡು
ಹಳಿಮೇಲೆ ಸವಾರಿ ಹೊರಟಿತ್ತು. ಆ ಸೋಜಿಗವನ್ನು ನೋಡುತ್ತ ನಿಂತೆವು. ಬೆಟ್ಟ ಇಳಿಯಲು ನಾವು ಕೆಲವರು
ಒಂದೂವರೆಗಂಟೆ ತೆಗೆದುಕೊಂಡೆವು. ಎಲ್ಲರೂ ಬಂದು ಸೇರಿದಮೇಲೆ ರಾಜಣ್ಣನಿಗೆ ವಿದಾಯ ಹೇಳಿ, ಇನ್ನುಮುಂದೆ
ಕುಡಿತ, ಬೀಡಿಚಟ ಬಿಡಿ ಎಂದು ಬಿಟ್ಟಿ ಸಲಹೆಯನ್ನೂ ಕೊಟ್ಟು ನಾವು ಘಾಟಿಯತ್ತ ಸಾಗಿದೆವು. ಕುಡಿದರೂ
ಅಸಭ್ಯವಾಗಿ ವರ್ತಿಸದೆ ಸೌಜನ್ಯವಾಗಿಯೇ ನಮ್ಮನ್ನು ಸಲೀಸಾಗಿ ಬೆಟ್ಟ ಹತ್ತಿಸಿ ಇಳಿಸಿ ಕರೆತಂದಿದ್ದರು.
ಕುಡುಕನಾದರೂ ಸಭ್ಯ ಎಂಬ ಬಿರುದನ್ನು ರಾಜಣ್ಣನಿಗೆ ಕೊಡಲು ಅಡ್ಡಿ ಇಲ್ಲ!
ದೇವರಬೆಟ್ಟ ಶ್ರೀ ವಿಶ್ವ ಶನೇಶ್ವರ ದೇವಾಲಯ
ಗುರುನಾಥರ ಮನೆಗೆ ಹೋಗಿ ಇಡ್ಲಿ ಚಟ್ನಿ ತಿಂದು ಕಾಫಿ ಕುಡಿದು
ನಾವು ಘಾಟಿಯಿಂದ ಬಂಡೇಪಾಳ್ಯದ ಕೆಳಗಿನಜಾಗಾನಹಳ್ಳಿ ತೂಬಗೆರೆಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕಿನ
ವಿಶ್ವ ಶನೇಶ್ವರ ದೇವಾಲಯಕ್ಕೆ ಹೋದೆವು. ನಮಗೆ ದಾರಿ ತೋರಲೆಂದು ಸುಪ್ರಿಯ ಹಾಗೂ ರಚಿತಾ ನಮ್ಮೊಡನೆ
ಬಂದಿದ್ದರು. ಮೂವತ್ತು ಅಡಿ ಎತ್ತರದ ಭವ್ಯ ಶನೇಶ್ವರ
ಮೂರ್ತಿಯ ಎದುರು ನಿಂತೆವು. ಅಲ್ಲಿ ರಸೀತಿ ಹಾಕಲು ಕೂತವರೊಬ್ಬರು, ‘ಹೋಗಿ ಪೂಜೆ ಮಾಡಿಸಿ. ಇಂತಿಷ್ಟು
ರೂಪಾಯಿ’ ಎಂದೆಲ್ಲ ಜಬರದಸ್ತು ಮಾಡಿದರು. ಅವರ ಜೋರು ನೋಡಿ ಬೇಸತ್ತು ನಾವು ಯಾರೂ ಪೂಜೆ ಮಾಡಿಸಲು ಮುಂದಾಗಲಿಲ್ಲ. ಆಗ ಅರ್ಚಕರು ನಯವಾಗಿ ನಮ್ಮನ್ನು ಕರೆದು, ದುಡ್ಡೂ ಮುಖ್ಯವಲ್ಲ,
ಬನ್ನಿ ಈ ಲಿಂಗಕ್ಕೆ ಎಳ್ಳೆಣ್ಣೆಯಲ್ಲಿ ದಾರೆ ಎರೆಯಿರಿ ಎಂದರು. ನಮ್ಮಲ್ಲಿ ಒಬ್ಬರು ಎಣ್ಣೆ ತೆಗೆದು
ಅಭಿಷೇಕ ಮಾಡಿದರು. ನೋಡಿ ಅಲ್ಲಿ ಕಾಣುವ ಎಳ್ಳುಬತ್ತಿ ದೀಪ ಹಿಡಿದು ದೇವರಿಗೆ ಮೂರು ಸುತ್ತು ಬಂದು
ಅಲ್ಲಿ ಕಾಣುವ ಹೋಮಕ್ಕೆ ಹಾಕಿ. ಎಂದಾಗ ಎಲ್ಲರೂ ಅವರು ಹೇಳಿದಂತೆಯೇ ಮಾಡಿದೆವು. ಮತ್ತೆ ದೇವರ ಪೂಜೆ
ಮಾಡಿ ತೀರ್ಥ ಕೊಟ್ಟು, ಎಳ್ಳುಬತ್ತಿಯ ಬಾಬ್ತು ಹತ್ತು ರೂಪಾಯಿ ಕಟ್ಟಿ, ಇಷ್ಟ ಉಳ್ಳವರು ಅನ್ನಸಂತರ್ಪಣೆ
ಸೇವೆ ಬಾಬ್ತು ರೂ. ೧೦೧ ಕೊಡಬಹುದು ಎಂದರು. ನಾವು ಕೆಲವರು ೧೦೧ ರೂ. ಕೊಟ್ಟು ರಸೀತಿ ಪಡೆದೆವು. ಅರ್ಚಕರಿಗೆ
ಜೀವನಾನುಭವ ಇದೆ. ಮೃದುವಾಗಿ ಹೇಳಿ ನಮ್ಮ ಮನಸ್ಸನ್ನು ಗೆದ್ದು, ಪೂಜೆಯನ್ನೂ ಮಾಡಿಸಿದರು. ದೇವಾಲಯಕ್ಕೆ
ದುಡ್ಡು ಸಂಗ್ರಹಕ್ಕೂ ದಾರಿ ಮಾಡಿದರು. ನಮಗೆ ಹಿಡಿದಿದ್ದ ಶನಿ ಮತ್ತೆ ಅಲ್ಲೆ ನೆಲೆನಿಂತಿರಬಹುದು!
ಎಂದು ಮಾತಾಡಿಕೊಳ್ಳುತ್ತ ಬಸ್ಸೇರಿದೆವು.
ವಿಶ್ವೇಶ್ವರಯ್ಯ
ಪಿಕಪ್ ಡ್ಯಾಮ್
ಶನೇಶ್ವರನ ಅರ್ಚಕರ ಗುಣಗಾನ ಮಾಡುತ್ತ, ನಾವು ಅಲ್ಲಿಂದ
ಕೆಲವು ಕಿಮೀ ದೂರದಲ್ಲಿದ್ದ ವಿಶ್ವೇಶ್ವರಯ್ಯ ಪಿಕಪ್ ಅಣೆಕಟ್ಟೆ ನೋಡಲು ಹೋದೆವು. ಸರ್ .ಎಂ. ವಿಶ್ವೇಶ್ವರಯ್ಯನವರು
೧೯೧೭ರಲ್ಲಿ ಈ ಅಣೆಕಟ್ಟೆಯನ್ನು ನಿರ್ಮಿಸಿದರು. ಬೆಟ್ಟದಿಂದ ಹರಿಯುವ ಮಳೆನೀರನ್ನು ಅಣೆಕಟ್ಟೆಯಲ್ಲಿ
ಸಂಗ್ರಹಿಸಿ, ಆ ಊರಿನ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುತ್ತಾರಂತೆ. ನಾವು ಅಣೆಕಟ್ಟೆಯ ಮೇಲೆ ನಡೆದು
ಇನ್ನೊಂದು ತುದಿಗೆ ಹೋಗಿ ಬಂದೆವು. ಈಗ ಈ ಅಣೆಕಟ್ಟೆಗೆ ಶತಮಾನೋತ್ಸವ ದಾಟಿದೆ.
ರಾಷ್ಟ್ರೋತ್ಥಾನ
ಪರಿಷತ್ ಗೋಶಾಲೆ
ಅಣೆಕಟ್ಟು ನೋಡಿ ಅಲ್ಲಿಂದ ಕೆಲವುಕಿಮೀ ದೂರವಿರುವ ರಾಷ್ಟ್ರೋತ್ಥಾನ
ಗೋಶಾಲೆಗೆ ಹೋದೆವು. ಅಲ್ಲಿ ೬೦೦ಕ್ಕೂ ಹೆಚ್ಚು ಗೋವುಗಳು ಇದ್ದುವು. ಹಲವು ತಳಿಗಳ ಗೋವುಗಳು ಅಲ್ಲಿ
ಮೇಯುತ್ತಿದ್ದುವು. ನಮ್ಮಲ್ಲಿದ್ದ ಸೌತೆಕಾಯಿಗಳನ್ನು ಗೋವುಗಳಿಗೆ ತಿನ್ನಿಸಿದೆವು. ವಿವಿಧ ಗೋವುಗಳನ್ನು
ನೋಡಿ ಖುಷಿಪಟ್ಟೆವು.
ಬೀಳ್ಕೊಡುಗೆ
ಗೋವುಗಳನ್ನು ನೋಡಿ ನಾವು ಘಾಟಿಯ ನಮ್ಮ ಕೋಣೆಗೆ ಹೋದೆವು. ಅಲ್ಲಿದ್ದ ನಮ್ಮ ಲಗೇಜು ಬಸ್ಸಿಗೆ
ತುಂಬಿಸಿ, ಅಲ್ಲಿಂದ ಗುರುನಾಥರ ಮನೆಗೆ ಹೋದೆವು. ಅಲ್ಲಿ ನಮಗೆ ಊಟ ಸಿದ್ಧವಾಗಿತ್ತು. ಬಿಸಿಬೇಳೆಭಾತ್,
ಗೊಜ್ಜು, ಹಪ್ಪಳ, ಕೋಸು ಪಲ್ಯ, ಪಾಯಸ, ಮೊಸರನ್ನ. ೧೨.೪೫ಕ್ಕೆ ಊಟ ಮಾಡಿ ಗುರುನಾಥರಿಗೆ ಧನ್ಯವಾದವನ್ನರ್ಪಿಸಿದೆವು.
ಹೊಟ್ಟೆತುಂಬ ಎರಡು ಹೊತ್ತು ಊಟ, ಒಂದು ಹೊತ್ತು ತಿಂಡಿಗೆ ಒಬ್ಬರಿಗೆ ರೂ. ೨೫೦ ತೆಗೆದುಕೊಂಡಿದ್ದರಂತೆ. ಅವರು ನಮಗೆ ತೋರಿಸಿದ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು.
ಲೀಲಾ ಅವರು ನಮ್ಮ ಎಂಟು ಮಹಿಳೆಯರನ್ನು ಮನೆಗೆ ಬರಮಾಡಿಕೊಂಡು ಅಷ್ಟ ಲಕ್ಷ್ಮಿಯರು ಮನೆಗೆ ಬಂದಷ್ಟು
ಖುಷಿಯಾಯಿತೆಂದು ನಮಗೆ ರವಿಕೆ ಕಣ ತಾಂಬೂಲ ಕೊಟ್ಟು ಸತ್ಕರಿಸಿದರು. ಘಾಟಿಗೆ ಬಂದಾಗ ನಮ್ಮ ಮನೆಗೂ ಬರುತ್ತಿರಿ
ಎಂದು ನಮ್ಮನ್ನು ಬೀಳ್ಕೊಂಡರು. ಅವರ ಈ ಆತ್ಮೀಯ ಪ್ರೀತಿಗೆ ನಾವು ಶರಣಾದೆವು. ಲೀಲಾ ಅವರು ಮಗಳಿಗೆ
ಉನ್ನತ ಸಂಸ್ಕಾರವನ್ನು ಧಾರೆ ಎರೆದು ಬೆಳೆಸಿದ್ದಾರೆಂದು ೧೫ರ ಬಾಲೆ ಅಚ್ಚುಕಟ್ಟಾಗಿ ಊಟ ಬಡಿಸಿದ್ದನ್ನು
ನೋಡಿದಾಗಲೇ ಗೊತ್ತಾಯಿತು. ಅವಳ ವಿದ್ಯಾಭ್ಯಾಸಕ್ಕೋಸ್ಕರ ನಾವು ಕೆಲವರು ಕಿರು ಮೊತ್ತದ ಕಾಣಿಕೆ ನೀಡಿದೆವು.
ಮರಳಿ ಮೈಸೂರಿಗೆ
ನಮ್ಮ ಚಾಲಕ ಸುರೇಶ ಊಟವಾಗಿ ಮರದಡಿ ಚಾಪೆ ಹಾಸಿ ಮಲಗಿದರು.
ನಾವೆಲ್ಲ ಬಸ್ ಹತ್ತಿ ಕೂತೆವು. ನಾಗೇಂದ್ರಪ್ರಸಾದ್, ವೈದ್ಯನಾಥ್ ಗುರುನಾಥರ ಲೆಕ್ಕ ಚುಕ್ತಾ ಮಾಡಿ
ಬಂದು ಬಸ್ಸೇರಿದರು. ಸುರೇಶ್ ಎದ್ದು ಬಸ್ ಹೊರಡಿಸಿದರು. ದೊಡ್ಡಬಳ್ಳಾಪುರದಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ
ರಸ್ತೆಬದಿ ತರಕಾರಿ ವ್ಯಾಪಾರ ಜೋರಾಗಿ ಇತ್ತು. ಅಲ್ಲಿ ಬಸ್ ನಿಲ್ಲಿಸಿ ಯತೇಚ್ಛ ತಾಜಾ ತರಕಾರಿಗಳನ್ನು
ಕೊಂಡೆವು.
ದಾರಿ ಮಧ್ಯೆ ಮೂರು ಗಂಟೆಗೆ ಕಾಫಿ ಸೇವನೆಯಾಯಿತು. ಮುಂದೆ ಮದ್ದೂರಲ್ಲಿ ಕಾಫಿ ತಿಂಡಿ ಸೇವಿಸಿ,
ಮುಂದುವರಿದು ಮೈಸೂರು ತಲಪುವಾಗ ರಾತ್ರೆ ಗಂಟೆ ೯ ಆಗಿತ್ತು. ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ನಾಗೇಂದ್ರಪ್ರಸಾದ್
ಹಾಗೂ ವೈದ್ಯನಾಥ್ ಅವರು ಬಹಳ ಚೆನ್ನಾಗಿ ಅಚ್ಚುಕಟ್ಟಾಗಿ ರೂ. ೨೧೫೦ಕ್ಕೆ ಈ ಎರಡು ದಿನದ ಚಾರಣವನ್ನು
ಯಶಸ್ವಿಯಾಗಿಸಿದ್ದರು. ಅವರಿಗೆ ಸಹಚಾರಣಿಗರೆಲ್ಲರ ಪರವಾಗಿ ಧನ್ಯವಾದ ಅರ್ಪಿಸುವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ