ತಲಕಾಡಿಗೆ ಸುಮಾರು ೨೫ ವರ್ಷದ ಹಿಂದೆ ಹೋಗಿದ್ದೆವು. ಅದು ಈಗ ಅಸ್ಪಷ್ಟ
ನೆನಪು ಅಷ್ಟೆ. ಮರಳಿ ತಲಕಾಡಿಗೆ ಹೋಗಬೇಕೆಂದು
ಮನಸು ಬಯಸುತ್ತಲಿತ್ತು. ನನ್ನ ಮನದಲ್ಲಿದ್ದ ಆಸೆ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರು
ಸಂಸ್ಥೆಯ ವೈದ್ಯನಾಥನ್ ಹಾಗೂ ನಾಗೇಂದ್ರ ಪ್ರಸಾದ್ ಅವರಿಗೆ ಹೇಗೆ ತಿಳಿಯಿತೊ ನಾ ಕಾಣೆ! ಆ ಆಸೆ ೧೮.೮.೨೦೧೯ರಂದು ಈಡೇರಿತು.
ಆ ದಿನ
ಮೈಸೂರಿನಿಂದ ಬೆಳಗ್ಗೆ ೬.೧೫ಕ್ಕೆಸುಮಾರು ೨೧ ಮಂದಿ ಹೊರಟೆವು. ಬಹಳ ಸಂತಸದ ವಿಚಾರವೆಂದರೆ ಹೇಳಿದ ಸಮಯಕ್ಕಿಂತ ೫ ನಿಮಿಷ
ಮೊದಲೆ ಗಾಡಿ ಬಂದಿರುವುದು. ಇಂಥ ಸಮಯಪಾಲನೆ ಖುಷಿ ಕೊಡುತ್ತದೆ. ನಮಗೂ ಸಮಯಕ್ಕೆ ಹೊರಡಲು ಹುರುಪು ಬರುತ್ತದೆ.
ಸಮಯಕ್ಕೆ ಬೆಲೆಕೊಟ್ಟ ಅವರಿಗೆ ನಮ್ಮ ಸಲಾಮ್.
೮ ಗಂಟೆಗೆ
ನಾವು ತಲಕಾಡು ತಲಪಿದೆವು. ವೈದ್ಯನಾಥ ದೇವಾಲಯ ಬಳಿ ಇರುವ ಉಡುಪಿ ಮೆಸ್ಸಿನಲ್ಲಿ ಇಡ್ಲಿ ವಡೆ ಕಾಫಿ
ಸೇವನೆಯಾಯಿತು.
ಮೊದಲು ನಾವು
ಕಾವೇರಿ ನದಿ ತೀರಕ್ಕೆ ಹೋದೆವು. ತೆಪ್ಪದಲ್ಲಿ ಸವಾರಿ ಮಾಡಿ ಎಂದು ತೆಪ್ಪದವರು ದುಂಬಾಲುಬಿದ್ದರು.
ನಾವು ಮನಸು ಮಾಡಲಿಲ್ಲಿ. ಹಿಂದೆ ನೋಡಿದ್ದ ಮರಳದಿಬ್ಬ ಬಹಳಷ್ಟು ಕಡಿಮೆಯಾಗಿದೆ. ದೂರದಲ್ಲಿದ್ದ
ಮಾಲಂಗಿಮಡು ಅಲ್ಲಿಂದಲೆ ನೋಡಿದೆವು.
ಮಾಲಂಗಿಮಡು
ಎಂದಾಗ ಇದಕ್ಕೆ ತಳುಕು ಹಾಕಿಕೊಂಡಿದ್ದ ‘ತಲಕಾಡು ಮರಳಾಗಿ, ಮಾಲಂಗಿಮಡುವಾಗಿ ಮೈಸೂರು ಅರಸರಿಗೆ
ಮಕ್ಕಳಾಗದೆ ಹೋಗಲಿ’ ಎಂಬ ಶಾಪದ ಹಳೆಯ ಕಥೆ ನೆನಪಿಗೆ ಬರುತ್ತದೆ.
ಗಂಗರಸರ ರಾಜಧಾನಿಯಾಗಿದ್ದ
ತಲಕಾಡು ಒಂದು ಐತಿಹಾಸಿಕ ಸ್ಥಳ. ಅಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನ ಆಳ್ವಿಕೆ ಇತ್ತು ಎಂದು
ಚರಿತ್ರೆಯಲ್ಲಿ ದಾಖಲಾಗಿದೆ. ಮುಂದೆ ಮೈಸೂರಿನ ಒಡೆಯರು ಹಾಗೂ ಶ್ರೀರಂಗಪಟ್ಟಣದ ರಾಜರ ಆಳ್ವಿಕೆಗೂ
ಒಳಪಟ್ಟಿತ್ತು ಎಂಬುದು ಇತಿಹಾಸ. ಇಲ್ಲಿಯ ವಿಶೇಷವೆಂದರೆ ದೇವಸ್ಥಾನಗಳನ್ನು ತನ್ನ ಗರ್ಭದಲ್ಲಿ
ಅಡಗಿಸಿಕೊಂಡಿರುವ ಮರಳುದಿಬ್ಬಗಳು. ಕ್ರಮೇಣ ಮರಳದಿಬ್ಬ ಬಗೆದು ಕೆಲವು ದೇವಸ್ಥಾನಗಳಿಗೆ
ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಸುಮಾರು
ನಾಲ್ಕುನೂರು ವರ್ಷಗಳ ಹಿಂದಿನ ಕಥೆ. ಮೈಸೂರು ಸೀಮೆಯ ರಾಜಧಾನಿ ಶ್ರೀರಂಗಪಟ್ಟಣ ವಿಜಯನಗರದ
ಅರಸರಿಗೆ ಸೇರಿತ್ತು. ಶ್ರೀರಂಗರಾಯ ಅಲ್ಲಿ ರಾಜ್ಯಭಾರ ಮಾಡುತ್ತಿದ್ದ. ಆತನ ಮಡದಿ
ಅಲಮೇಲಮ್ಮ.ಶ್ರೀರಂಗರಾಯ ಅಸೌಖ್ಯದಿಂದ ಬಳಲಿದಾಗ ತಲಕಾಡಿನ ವೈದ್ಯನಾಥೇಶ್ವರ ದೇವರನ್ನು ಪೂಜಿಸಿದರೂ
ರೋಗ ವಾಸಿಯಾಗದೆ ಮರಣ ಹೊಂದಿದ.
ಮುಂದೆ ಅಲಮೇಲಮ್ಮ ತಲಕಾಡಿನ ಕಾವೇರಿನದಿಯ ಎದುರು
ದಂಡೆಯಲ್ಲಿದ್ದ ಮಾಲಂಗಿ ಗ್ರಾಮದಲ್ಲಿ ನೆಲೆಸಿದಳು. ಶ್ರೀರಂಗಪಟ್ಟಣ ಮೈಸೂರು ಒಡೆಯರ ಕೈವಶವಾಯಿತು.
ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಪ್ರತೀ ಮಂಗಳವಾರ,
ಶುಕ್ರವಾರದಂದು ಶ್ರೀರಂಗನಾಯಕಮ್ಮನವರಿಗೆ ವಿಶೇಷ ಪೂಜೆ ನಡೆಯುತ್ತಲಿತ್ತು. ಆ ಸಂದರ್ಭದಲ್ಲಿ
ಅಲಮೇಲಮ್ಮ ತಮ್ಮಲ್ಲಿದ್ದ ಮುತ್ತಿನ ಮೂಗುತಿ ಮತ್ತು ಇತರೆ ಆಭರಣಗಳನ್ನು ದೇವಿಯ ಅಲಂಕಾರಕ್ಕೆ
ಕೊಟ್ಟು ಮತ್ತೆ ಹಿಂದೆ ತೆಗೆದುಕೊಳ್ಳುವುದು ರೂಢಿಯಲ್ಲಿತ್ತು. ಆಕೆ ಮಾಲಂಗಿಗೆ ಹೋಗಿ ನೆಲೆಸಿದ ಮೇಲೆ ದೇವಾಲಯದ ಅಧಿಕಾರಿಗಳು
ಆಭರಣದ ವಿಷಯ ಒಡೆಯರ್ ಅವರ ಗಮನಕ್ಕೆ ತಂದರು. ಆಭರಣ ಕಳುಹಿಸಿಕೊಡಬೇಕೆಂಬ ಒಡೆಯರ್ ಅವರ ಆಜ್ಞೆಗೆ
ಅಲಮೇಲಮ್ಮ ಒಪ್ಪಲಿಲ್ಲ. ಕೊಡದಿದ್ದರೆ ಬಲಾತ್ಕಾರವಾಗಿ ಆಭರಣ ತನ್ನಿ ಎಂದು ತಿಳಿಸಿದರು.
ಅಲಮೇಲಮ್ಮನಿಗೆ
ಸಂಕಟವಾಯಿತು. ಆಭರಣಗಳನ್ನು ತನ್ನೊಂದಿಗೇ ಇಟ್ಟುಕೊಳ್ಳಬೇಕೆಂಬ ಹಂಬಲ ಈಡೇರುವುದಿಲ್ಲವೆಂದು ತಿಳಿದು,
ಮೂಗುತಿಯನ್ನು ಹಾಕಿಕೊಂಡು, ಮಿಕ್ಕ ಒಡವೆಗಳನ್ನು ಮಡಿಲಲ್ಲಿ ಕಟ್ಟಿಕೊಂಡು ‘ತಲಕಾಡು ಮರಳಾಗಿ,
ಮಾಲಂಗಿಮಡುವಾಗಿ ಮೈಸೂರು ದೊರೆಗಳಿಗೆ ಮಕ್ಕಳಾಗದಿರಲಿ’ ಎಂದು ಶಾಪ ಕೊಟ್ಟು ಹೊಳೆಗೆ ಹಾರಿದಳು.
ಈ ವಿಚಾರ
ತಿಳಿದು ಒಡೆಯರ್ ಅವರಿಗೆ ಬಹಳ ಸಂಕಟವಾಯಿತು. ಅಲಮೇಲಮ್ಮನ ಚಿನ್ನದ ಪ್ರತಿಮೆ ಮಾಡಿಸಿ ನಿತ್ಯ ಪೂಜೆ
ಮಾಡಿಸಿದ್ದಲ್ಲದೆ ಪ್ರತೀ ವರ್ಷ ನವರಾತ್ರಿಯ ಮಹಾನವಮಿ ದಿನ ಅಲಮೇಲಮ್ಮನ ಪ್ರತಿಮೆಗೆ ಆಭರಣಗಳಿಂದ
ಅಲಂಕರಿಸಿ ಪೂಜೆ ಮಾಡಿಸಿದರು. ಮುಂದೆಯೂ ವಂಶಪರಂಪರೆಯಾಗಿ ಪೂಜೆ ನಡೆಸುವಂತೆ ಆದೇಶ ಹೊರಡಿಸಿದರು.
ಅಲಮೇಲಮ್ಮನ ಶಾಪದ
ಕಥೆ ಹೀಗಿದ್ದರೆ, ಈಗ, ಮರಳು ದಂಧೆಯಿಂದಲೋ ಏನೋ ತಲಕಾಡಿನ ಮರಳ ದಿಬ್ಬ ಕರಗಿ ಹೋಗಿದೆ.
ಪಾತಾಳೇಶ್ವರ ದೇವಾಲಯ
ನಾವು ಮೊದಲು
ಪಾತಾಳೇಶ್ವರ ದೇವಾಲಯಕ್ಕೆ ಹೋದೆವು. ಆದಿಶೇಷ ತನ್ನ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು
ಶಿವನನ್ನು ಪೂಜಿಸಿದ. ಹಾಗಾಗಿ ಈ ಲಿಂಗಕ್ಕೆ ವಾಸುಕೀಶ್ವರ ಎಂಬ ಹೆಸರು ಬಂತು. ಆದಿಶೇಷನ ವಾಸಸ್ಥಾನ
ಪಾತಾಳವಾದುದರಿಂದ ಈ ದೇವಾಲಯಕ್ಕೆ ಕ್ರಮೇಣ ಜನರು ಪಾತಾಳೇಶ್ವರ ಎಂದು ಕರೆಯಲು ತೊಡಗಿದರು. ಪಾತಾಳಕ್ಕೆ ಇಳಿಯಬೇಕು ಎಂಬಂತೆ ಈ ದೇವಾಲಯ
ಗುಂಡಿಯಲ್ಲಿದೆ. ಕೆಲವು ಮೆಟ್ಟಲು ಇಳಿದು ಹೋಗಬೇಕು. ನಮ್ಮ ತಂಡದ ವೈದ್ಯನಾಥನ್ ಬಾಲ್ಯದಲ್ಲಿ ಈ
ದೇವಾಲಯದಲ್ಲಿ ಪೂಜಾ ಕೈಂಕರ್ಯ ನಡೆಸಿದ್ದರಂತೆ. ಆಗ ಒಂದು ಸಂದರ್ಭದಲ್ಲಿ ಹಾವು ಗರ್ಭಗುಡಿಯೊಳಗೆ ಕುಳಿತಿದ್ದುದನ್ನು
ನೋಡಿದ ನೆನಪನ್ನು ನಮ್ಮೊಂದಿಗೆ ಹಂಚಿಕೊಂಡರು.
ಮರಳೇಶ್ವರ (ಸೈಕತೇಶ್ವರ) ದೇವಾಲಯ
ಅಲ್ಲಿಂದ ನಾವು ಮರಳಿನಲ್ಲಿ ನಡೆಯುತ್ತ ಮರಳೇಶ್ವರ ದೇವಾಲಯಕ್ಕೆ
ಸಾಗಿದೆವು. ಈಗ ದೇವಾಲಯದಿಂದ ದೇವಾಲಯಕ್ಕೆ ನಡೆಯಲು ಕಾಲುದಾರಿಗೆ ಮೇಲೆ ಚಾವಣಿ ಹಾಕಿದ್ದಾರೆ. ಹಾಗಾಗಿ
ಮರಳು ಸುಡುವುದಿಲ್ಲ. ಮರಳು ಕೂಡ ಈಗ ಕಾಲು ಹೂತು ಹೋಗುವಷ್ಟಿಲ್ಲ. ಮರಳಿನಲ್ಲಿ ನಡೆಯುತ್ತ
ಅಕ್ಕಪಕ್ಕ ಇದ್ದ ವಿಚಿತ್ರಾಕಾರದಲ್ಲಿ ಬೆಳೆದ ಮರಗಳ ಬೇರು ನೋಡುತ್ತ, ಅವುಗಳ ಪಟ ತೆಗೆಯುತ್ತ
ಸಾಗಿದೆವು.
ಈ ದೇವಾಲಯದ
ಮೂಲ ಹೆಸರು ಸೈಕತೇಶ್ವರ. ಸೈಕತ ಎಂದರೆ ಬ್ರಹ್ಮ. ಬ್ರಹ್ಮ ತನ್ನ ಸೃಷ್ಟಿ ಕಾರ್ಯವನ್ನು
ನಿರ್ವಿಘ್ನವಾಗಿ ನಡೆಸುವ ಸಲುವಾಗಿ ಶಿವನನ್ನು ಪೂಜಿಸಿದ್ದರಿಂದ ಈ ಲಿಂಗಕ್ಕೆ ಸೈಕತೇಶ್ವರ ಎಂದು
ಹೆಸರು ಬಂತು. ಸೈಕತ ಎಂಬ ಪದಕ್ಕೆ ಮರಳು ಎಂಬ ಅರ್ಥವೂ ಇದೆ. ಕ್ರಮೇಣ ಜನರು ಆಡುಮಾತಿನಲ್ಲಿ ಸೈಕತೇಶ್ವರದ
ಬದಲಾಗಿ ಮರಳೇಶ್ವರ ಎನ್ನುವುದು ರೂಢಿಗೆ ಬಂತು.
ಈ ದೇವಾಲಯದ
ಎದುರು ಸಿದ್ದಬಸವಯ್ಯ ಮರದಚೆಕ್ಕೆಗಳನ್ನು ರಾಶಿ ಹಾಕಿ ಕೂತಿದ್ದನ್ನು ಕಂಡೆವು. ಮರದ ಚೆಕ್ಕೆ
ಕೊಂಡು ಧೂಪ ಹಾಕಿ ದೇವಾಲಯ ಪ್ರವೇಶಿಸಿ ಎಂದು ಅವರು ಕೇಳಿಕೊಳ್ಳುತ್ತಾರೆ. ಅವರನ್ನು ಮಾತಾಡಿಸಿದೆ. ಸುಮಾರು ೪೧ ವರ್ಷಗಳಿಂದಲೂ ಪ್ರತೀ
ವರ್ಷ ನಡೆಯುವ ಹರಾಜಿನಲ್ಲಿ ಭಾಗಿಯಾಗಿ ದೇವಾಲಯದ ಎದುರು ಧೂಪ ಹಾಕುವ ಕಾಯಕ ಮಾಡುತ್ತಿರುವರಂತೆ. ಈ
ವರ್ಷ ೫೧ ಸಾವಿರಕ್ಕೆ ಮರಳೇಶ್ವರನ ಎದುರು ಧೂಪ ಸೇವೆ ಸಲ್ಲಿಸುವ ಭಾಗ್ಯ ದೊರೆಯಿತಂತೆ. ಹೆಚ್ಚಾಗಿ
ಮರಳೇಶ್ವರನ ಎದುರೇ ಅವಕಾಶ ಲಭಿಸುತ್ತದಂತೆ. ನಾವು ಎಲ್ಲರೂ ಮರದ ಚೆಕ್ಕೆಗಳನ್ನು ಧೂಪಕ್ಕೆ ಹಾಕಿ
ದೇವಾಲಯ ಪ್ರವೇಶಿಸಿದೆವು. ದೇವಾಲಯದಲ್ಲಿ ಪೂಜೆಯಾಗಿ ಮಂಗಳಾರತಿ ನೋಡಿ ತೀರ್ಥ ಪಡೆದು ಅಲ್ಲಿ ನಮ್ಮ
ತಂಡದ ಭಾವಚಿತ್ರ ತೆಗೆಸಿಕೊಂಡು ನಿರ್ಗಮಿಸಿದೆವು.
ಚೌಡೇಶ್ವರೀ ದೇವಾಲಯ
ಮುಂದೆ ಮರಳಿನಲ್ಲಿ ನಡೆಯುತ್ತ ನಾವು ಚಾಮುಂಡೇಶ್ವರಿ
ಸನ್ನಿಧಾನಕ್ಕೆ ಹೋದೆವು. ಅಲ್ಲಿ ದೇವಾಲಯ ನೋಡಿ ಸ್ವಲ್ಪ ಹೊತ್ತು ಕುಳಿತು ನಿರ್ಗಮಿಸಿದೆವು.
ಕೀರ್ತಿನಾರಾಯಣ ದೇಗುಲ
ನಾವು ಕೀರ್ತಿನಾರಾಯಣ ದೇಗುಲ ಪ್ರವೇಶಿಸಿದೆವು. ಈ ದೇವಾಲಯ
ಪೂರ್ತಿ ಮರಳಿನಲ್ಲಿ ಮುಚ್ಚಿ ಹೋಗಿತ್ತಂತೆ. ಕೆಲವು ವರ್ಷಗಳ ಹಿಂದೆ ಮರಳು ಬಗೆದು ದೇವಾಲಯವನ್ನು
ಜೀರ್ಣೋದ್ಧಾರಗೊಳಿಸಿದ್ದಾರೆ. ದೇಗುಲ ಭವ್ಯವಾಗಿದೆ. ೪ ಅಡಿ ಎತ್ತರದ ಈ ವಿಗ್ರಹದ ಬಲಗೈಯಲ್ಲಿ
ಶಂಖ, ಎಡಗೈಯಲ್ಲಿ ಚಕ್ರವಿದೆ. ವಿಗ್ರಹದ ಸುತ್ತಲೂ ಇರುವ ಕಲ್ಲಿನ ಪ್ರಭಾವಳಿಯಲ್ಲಿ ದಶಾವತಾರ
ವಿಗ್ರಹಗಳು ಸುಂದರವಾಗಿ ಕೆತ್ತಲ್ಪಟ್ಟಿವೆ.
ಮರಳ
ದಿಬ್ಬದಲ್ಲಿ ಕೂತು ವಿರಮಿಸಿದೆವು. ಇಲ್ಲಿ ಕೆಲವು ಸಿನಿಮಾಗಳ ಶೂಟಿಂಗ್ ನಡೆದದ್ದನ್ನು ಅವರು ಕಣ್ಣಾರೆ
ನೋಡಿದ್ದನ್ನೂ ವೈದ್ಯನಾಥನ್ ನೆನಪಿಸಿಕೊಂಡು ಆ ಸಿನೆಮಾ ಹಾಡುಗಳನ್ನು ಹಾಡಿದರು. ಅಲ್ಲಿಂದ ಏಳಲು
ಯಾರಿಗೂ ಮನವಿರಲಿಲ್ಲ. ಮುಂದೆ ಇನ್ನೂ ಕೆಲವು ದೇವಾಲಯಗಳ ದರ್ಶನ ಆಗಬೇಕಾದುದರಿಂದ ಅಲ್ಲಿಂದ
ಹೊರಟೆವು.
ವೈದ್ಯನಾಥೇಶ್ವರ ದೇವಾಲಯ
ನಾವು
ನಡೆಯುತ್ತ ವೈದ್ಯನಾಥೇಶ್ವರ ದೇಗುಲಕ್ಕೆ ಹೋದೆವು. ದಾರಿಯುದ್ದಕ್ಕೂ ವೈದ್ಯನಾಥನ್ ಅವರ ಪರಿಚಿತರು ಮಾತಾಡಿಸಿದರು.
ವೈದ್ಯನಾಥನ್ ಅವರು ಕೆಲವಾರು ವರ್ಷ ತಲಕಾಡಿನಲ್ಲಿದ್ದರು. ಹೆಚ್ಚಿನವರೂ ವೈದ್ಯಪ್ಪ ಹೇಗಿದ್ದಿರಿ?
ನಿಮ್ಮ ಅಕ್ಕ ಹೇಗಿದ್ದಾರೆ? ಅಕ್ಕನನ್ನು ಒಮ್ಮೆ ಕರೆದುಕೊಂಡು ಇಲ್ಲಿಗೆ ಬನ್ನಿ ಎಂದು ಮಾತಾಡಿಸಿ ಖುಷಿಪಟ್ಟರು.
ವೈದ್ಯ ಅವರೂ ನಮ್ಮೊಡನೆ ಖುಷಿಯಿಂದಲೇ ಅವರ ಬಾಲ್ಯವನ್ನು ನೆನಪಿಸಿಕೊಂಡರು. ಅವರು ಕಲಿತ ಶಾಲೆ
ತೋರಿಸಿ ಸಂಭ್ರಮಿಸಿದರು.
ವೈದ್ಯನಾಥೇಶ್ವರ ದೇಗುಲದ ದ್ವಾರದ ಅಕ್ಕಪಕ್ಕ ೧೦ ಅಡಿ ಎತ್ತರದ
ದ್ವಾರಪಾಲಕರ ವಿಗ್ರಹ ಬಹಳ ಚೆನ್ನಾಗಿವೆ. ಎಡಭಾಗದ ದ್ವಾರಪಾಲಕ ವಿಗ್ರಹದ ಬಳಿ ವಿಜಯಗಣಪತಿ ವಿಗ್ರಹ
ಇದೆ. ಮನೋನ್ಮನೀದೇವಿ ದೇವಾಲಯದ ಮುಂಭಾಗ ಕಲ್ಲಿನ ಎರಡು ಬಳೆಗಳು ಶಿಲ್ಪಕಲೆಯ ಸೊಬಗಿಗೆ
ಸಾಕ್ಷಿಯಾಗಿವೆ. ಶಿಲ್ಪಕಲೆಯ ಸೊಬಗನ್ನು ನೋಡಿ ಅಚ್ಚರಿ ಪಡುತ್ತ ದೇವಾಲಯಕ್ಕೆ ಸುತ್ತು ಬಂದೆವು.
ಅಲ್ಲಿ ಸ್ವಲ್ಪ ಹೊತ್ತು ಕುಳಿತೆವು. ನಮ್ಮ ತಂಡದ ಕೆಲವರು ಅಲ್ಲಿ ಭಕ್ತಿಗೀತೆಗಳನ್ನು
ಹಾಡಿದರು.
ತಲಕಾಡಿನ ಪೌರಾಣಿಕ ಕಥೆ ಹೀಗಿದೆ:
ಕಾಶಿಯಲ್ಲಿದ್ದ ಸೋಮದತ್ತ ಮುನಿ
ಸಂಸಾರದಲ್ಲಿ ಜಿಗುಪ್ಸೆಗೊಂಡು ತಾನು ಮೋಕ್ಷ ಹೊಂದಬೇಕೆಂದು ಕಾಶಿ ವಿಶ್ವೇಶ್ವರನನ್ನು ಕುರಿತು
ತಪಸ್ಸು ಮಾಡುತ್ತಾನೆ. ಅವನ ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ, ‘ನೀನು ಮತ್ತು ನಿನ್ನ ಶಿಷ್ಯರು
ಕಾಶಿಯಷ್ಟೇ ಪವಿತ್ರವಾಗಿರುವ ದಕ್ಷಿಣಗಂಗೆ ಎಂದು ಪ್ರಸಿದ್ಧಿ ಹೊಂದಿದ ಕಾವೇರಿತೀರದ ದಕ್ಷಿಣಕಾಶಿಯ
ಗಜಾರಣ್ಯ ಕ್ಷೇತ್ರದಲ್ಲಿ ನನ್ನನ್ನು ಕುರಿತು ಪುನಃ ತಪಸ್ಸು ಮಾಡು. ಆಗ ನಿನಗೆ ಮತ್ತು ಶಿಷ್ಯರಿಗೆ
ಮೋಕ್ಷ ಲಭಿಸುತ್ತದೆ’ ಎಂದು ನುಡಿಯುತ್ತಾನೆ.
ಸೋಮದತ್ತ ತನ್ನ ಶಿಷ್ಯರನ್ನೊಡಗೂಡಿ ಉತ್ತರದ ಕಾಶಿಯಿಂದ ದಕ್ಷಿಣದ ಕಾಶಿ ಗಜಾರಣ್ಯಕ್ಕೆ
ಹೊರಟು ಬರುತ್ತಿರಬೇಕಾದರೆ, ವಿಂಧ್ಯಪರ್ವತ ದಾಟಿ ದಟ್ಟ ಅರಣ್ಯದಲ್ಲಿ ಬರುವಾಗ ಆನೆಗಳ ಹಿಂಡಿನ
ಧಾಳಿಗೆ ಬಲಿಯಾಗುತ್ತಾರೆ. ಆನೆ ದಾಳಿಗೆ ಸಿಲುಕಿದಾಗ ಸೋಮದತ್ತರು, ಆನೆ ಆನೆ ಕಾಪಾಡಿ ಎಂದು
ಕೂಗುತ್ತಾರೆ. ಆನೆ ದಾಳಿಯಿಂದ ಹತರಾದ ಮೇಲೆ ಅವರೆಲ್ಲ ಆನೆಗಳಾಗಿಯೇ ಮರು ಜನ್ಮ ಪಡೆಯುತ್ತಾರೆ.
ದಕ್ಷಿಣ ಕಾಶಿ ಗಜಾರಣ್ಯ ಕ್ಷೇತ್ರದಲ್ಲಿ ಋಚೀಕ
ಮುನಿಗಳ ಆಶ್ರಮದ ಪಕ್ಕದಲ್ಲಿ ಈ ಆನೆಗಳ ಬೀಡು. ಅಲ್ಲಿಯ ಸರೋವರದಲ್ಲಿ ಸ್ನಾನ ಮಾಡಿ ಕಮಲದ ಹೂವು
ಕಿತ್ತು, ಸೊಂಡಿಲಲ್ಲಿ ನೀರು ತುಂಬಿ ಅಲ್ಲೇ ಹತ್ತಿರವಿದ್ದ ಬೂರುಗದ ಮರದ ಬುಡದಲ್ಲಿದ್ದ
ಹುತ್ತಕ್ಕೆ ನೀರು ಸುರಿದು ಹೂವು ಹಾಕಿ ನಮಸ್ಕರಿಸಿ ಹೋಗುವ ಅಭ್ಯಾಸವನ್ನು ಆನೆಯ ರೂಪದಲ್ಲಿದ್ದ
ಸೋಮದತ್ತ ಮುನಿ ಪ್ರತೀದಿನ ನಡೆಸುತ್ತಿರುತ್ತಾರೆ. ಆ ಹುತ್ತದೊಳಗೆ ಶಿವನಿದ್ದಾನೆ ಎಂದು ಆನೆಗೆ
ಪೂರ್ವಜನ್ಮ ಸ್ಮರಣೆಯಿಂದ ತಿಳಿದಿರುತ್ತದೆ.
ಆನೆಯ ಈ ಕ್ರಮವನ್ನು ಅಲ್ಲಿದ್ದ ತಲ
ಮತ್ತು ಕಾಡ ಎಂಬ ಬೇಡರು ನೋಡಿ, ಮರದ ಬುಡದಲ್ಲಿ ಏನಿದೆ ಎಂದು ತಿಳಿಯುವ ಕುತೂಹಲದಿಂದ ಬೂರುಗದ ಮರದ
ಬುಡ ಹಾಗೂ ಹುತ್ತಕ್ಕೆ ಕೊಡಲಿಯಿಂದ ಹೊಡೆದಾಗ, ಹುತ್ತದೊಳಗಿದ್ದ ಶಿವಲಿಂಗಕ್ಕೆ ಕೊಡಲಿ ಏಟು
ಬಿದ್ದು, ರಕ್ತ ಚಿಮ್ಮುತ್ತದೆ. ರಕ್ತ ನೋಡಿದ ಬೇಡರು ಮೂರ್ಛೆ ತಪ್ಪುತ್ತಾರೆ. ಮೂರ್ಛೆ ತಪ್ಪಿದ ಅವರಿಗೆ
ಕೇಳುವಂತೆಯೇ ಶಿವನು, ಹೆದರಬೇಡಿ! ನಿಮ್ಮನ್ನು ಅನುಗ್ರಹಿಸುವುದಕ್ಕಾಗಿ ನಾನು
ಪ್ರತ್ಯಕ್ಷನಾಗಿದ್ದೇನೆ. ಈ ಬೂರುಗದ ಮರದ ಎಲೆಯನ್ನು, ಹಣ್ಣನ್ನು ಅರೆದು ನನ್ನ ತಲೆಗೆ ಲೇಪ
ಹಾಕಿದರೆ ರಕ್ತ ನಿಲ್ಲುತ್ತದೆ. ನನ್ನ ತಲೆಯಿಂದ ಹರಿದ ರಕ್ತವೆಲ್ಲ ಹಾಲಾಗಿ ಮಾರ್ಪಡುತ್ತದೆ. ಆ
ಹಾಲನ್ನು ನೀವು ಸೇವಿಸಿ. ಇನ್ನು ಮುಂದೆ ನಿಮ್ಮ ಹೆಸರಿನಿಂದಲೆ ಈ ಊರು ಪ್ರಖ್ಯಾತಿ ಹೊಂದುತ್ತದೆ’
ಎಂದು ಹೇಳಿದಾಗ ಮೂರ್ಛೆಹೋಗಿದ್ದ ಬೇಡರಿಗೆ ಎಚ್ಚರವಾಗುತ್ತದೆ.
ಎಚ್ಚೆತ್ತ ಬೇಡರು ಶಿವ ಹೇಳಿದಂತೆಯೇ
ಬೂರುಗದ ಹಣ್ಣು ಎಲೆ ಅರೆದು ಲೇಪ ಹಚ್ಚಿದಾಗ ಗಾಯ ಮಾಯವಾಗಿ ಹರಿದ ರಕ್ತ ಹಾಲಾಗಿ ಗೋಚರಿಸಿತು. ಆ
ಹಾಲನ್ನು ಕುಡಿದ ಬೇಡರು ಸದ್ಗತಿ ಹೊಂದುತ್ತಾರೆ. ಗಜರೂಪದಲ್ಲಿದ್ದ ಸೋಮದತ್ತ ಹಾಗೂ ಅವರ
ಶಿಷ್ಯರೆಲ್ಲರೂ ಹಾಲನ್ನು ಸೇವಿಸಿದಾಗ ಆನೆಯ ಜನ್ಮ ಹೋಗಿ ಮಾನವ ಜನ್ಮ ಹೊಂದಿ ಶಿವನನ್ನು ಧ್ಯಾನಿಸುತ್ತ ಮೋಕ್ಷವನ್ನು
ಹೊಂದುತ್ತಾರೆ.
ತನ್ನ ತಲೆಯ ಗಾಯಕ್ಕೆ ತಾನೇ ಔಷಧಿ
ಹೇಳಿದ್ದರಿಂದ ಆ ಶಿವಲಿಂಗಕ್ಕೆ ವೈದ್ಯೇಶ್ವರನೆಂದು ಹೆಸರಾಯಿತು. ತಲ ಕಾಡ ಬೇಡರಿಗೆ ಪ್ರಮಥ ಗಣಾಧಿಪತ್ಯ
ಸಿಕ್ಕಿದ್ದರಿಂದ ಆ ಊರಿಗೆ ತಲಕಾಡು ಎಂದು ಹೆಸರು ಬಂತು. (ಮಾಹಿತಿ ಕೃಪೆ: ವೈದ್ಯನಾಥನ್)
ತಲ ಕಾಡ ಬೇಡರ ವಿಗ್ರಹಗಳು ದೇವಾಲಯದ
ಎದುರು ಇರುವುದನ್ನು ಕಾಣಬಹುದು. ಅಲ್ಲಿಂದ
ನಾವು ಉಡುಪಿ ಮೆಸ್ಸಿಗೆ ಬಂದು ಸೊಗಸಾದ ಪಾಯಸದ ಊಟ ಮಾಡಿದೆವು. ಊಟವಾಗಿ ಅಲ್ಲೆ ಪಕ್ಕದಲ್ಲಿದ್ದ ಭಜನಾಮಂದಿರದಲ್ಲಿ
ವಿರಮಿಸಿದೆವು. ವೈದ್ಯನಾಥನ್ ಎರಡು ಭಜನೆ ಹಾಡಿದ ಬಳಿಕ ನಾವು ಅಲ್ಲಿಂದ ನಿರ್ಗಮಿಸಿದೆವು.
ಅರ್ಚಕರ ಮನೆಗೆ ಭೇಟಿ ನೀಡಿದೆವು. ಹಳೆಯದಾದ ಸುಂದರ ತೊಟ್ಟಿಮನೆ ಅವರದು.
ಮುಡುಕುತೊರೆ
ಮಲ್ಲಿಕಾರ್ಜುನ ಬೆಟ್ಟ
ತಲಕಾಡಿನಿಂದ ೩ ಮೈಲಿ ದೂರದಲ್ಲಿರುವ
ಮಲ್ಲಿಕಾರ್ಜುನ ಬೆಟ್ಟಕ್ಕೆ ಹೋದೆವು. ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ೩೦೦ ಅಡಿ ಎತ್ತರದಲ್ಲಿದೆ.
ಕಾವೇರಿನದಿಯ ಪೂರ್ವದಡದಲ್ಲಿ ಸುಮಾರು ೩೦೦ ಮೆಟ್ಟಲು ಹತ್ತಿ ಮೇಲೆ ಹೋಗಬೇಕು. ಡಾಂಬರು ರಸ್ತೆ
ಸೌಕರ್ಯವೂ ಇದೆ. ನಾವು ಮೆಟ್ಟಲು ಹತ್ತಿ ಹೋದೆವು. ನಮ್ಮನ್ನು ದಾರಿಯುದ್ದಕ್ಕೂ ನಮ್ಮ ಪೂರ್ವಜರು
ಸಾಕಷ್ಟು ಸಂಖ್ಯೆಯಲ್ಲಿ ಸ್ವಾಗತಿಸಿದರು!
ಇಲ್ಲಿ ಈಶ್ವರನ ತಲೆಯಮೇಲೆ ಕಾಮಧೇನುವಿನ
ಪಾದದ ಚಿಹ್ನೆಯು ಇದೆ. ಭ್ರಮರಾಂಬಿಕ ವಿಗ್ರಹ ಸುಂದರವಾಗಿದೆ. ಶ್ರೀ ಶಂಕರಾಚಾರ್ಯರಿಂದ
ಪ್ರತಿಷ್ಠಾಪಿಸಲ್ಪಟ್ಟಿದೆ ಎಂಬುದು ಪ್ರತೀತಿ. ಮಹಾದ್ವಾರದ ಎರಡೂ ಕಡೆಗಳಲ್ಲಿ ಇಟ್ಟಿಗೆ ಗಾರೆಯಿಂದ
ಮಾಡಿರುವ ವೃಷಭಗಳು, ದ್ವಾರದ ಮೇಲಿನ ಗೋಪುರಗಳು ನೋಡಲು ಬಹಳ ಅಂದವಾಗಿವೆ.
ದೇವಾಲಯ ನೋಡಿ ಅಲ್ಲಿ ವಿರಮಿಸಿದೆವು. ಕೆಲವರು ಭಕ್ತಿ ಗೀತೆ ಹಾಡಿದರು.
ಮುಂದೆ ನಾವು ಹೊಸಕೇರಿಯಲ್ಲಿರುವ ಗ್ರಾಮದೇವತೆ ಭಂಡರಸಮ್ಮನ ದೇವಾಲಯಕ್ಕೆ ಹೋದೆವು. ತಲಕಾಡಿನ ಶಕ್ತಿದೇವತೆ ಎಂದೇ ಪ್ರಸಿದ್ಧಿ ಹೊಂದಿದ ಈ ದೇವಾಲಯದ ಭಂಡರಸಮ್ಮ ಗ್ರಾಮದೇವತೆಯಾಗಿ ತಲಕಾಡಿನ ರಕ್ಷಣೆ ಮಾಡುತ್ತಾಳೆ ಎಂಬುದು ಅಲ್ಲಿಯವರ ನಂಬಿಕೆ.
ಮಾಧವಮಂತ್ರಿ ಅಣೆಕಟ್ಟೆ
ಮಾಧವ ಮಂತ್ರಿ ಅಣೆಕಟ್ಟು ಕ್ರಿಶ.
೧೧೪೦ರಲ್ಲಿ ನಿರ್ಮಾಣವಾಗಿದೆ. ೧೦೭೬ ಮೀಟರ್ ಉದ್ದವಿದೆ. ಮಾಧವ ಮಂತ್ರಿ ನಾಲೆ ೧೮ ಮೈಲಿ
ಉದ್ದವಿದ್ದು, ೧೭೦ ಕ್ಯೂಸೆಕ್ಸ್ ನೀರು ಹರಿಯುತ್ತದೆ. ೫೮೨೮ ಎಕರೆ ಪ್ರದೇಶಕ್ಕೆ ನೀರಾವರಿ
ಒದಗಿಸುತ್ತದೆ. ಅಲ್ಲಿ ಇನ್ನೊಂದು ಅಣೆಕಟ್ಟು ಕಟ್ಟಲು ತಯಾರಿ ನಡೆಯುತ್ತಲಿತ್ತು. ಈಗ ನೀರು
ಜಾಸ್ತಿ ಇರುವ ಕಾರಣ ತತ್ಕಾಲೀನವಾಗಿ ಕೆಲಸ ಸ್ಥಗಿತಗೊಂಡಿತ್ತು.
ಮಳೆ ಚೆನ್ನಾಗಿ ಆಗಿರುವುದರಿಂದ ನೀರಿನ
ಹರಿವು ನೋಡಲು ಬಲು ಚೆನ್ನಾಗಿತ್ತು. ಅಲ್ಲಿ ನಾವು ೪.೩೦ರಿಂದ ೫.೧೫ರವರೆಗೆ ಇದ್ದು ಅಣೆಕಟ್ಟು
ನೋಡಿದೆವು. ಕೆಲವರು ನೀರಿಗೆ ಇಳಿದು ನೀರಾಟವಾಡಿದರು. ನೀರು ನೋಡುತ್ತ ಕೂತರೆ ಕಾಲ ಸರಿದದ್ದೇ
ತಿಳಿಯುವುದಿಲ್ಲ. ನಾವು ಬಸ್ಸು ನಿಲ್ಲಿಸಿದಲ್ಲಿ ಗಾಡಿಯಲ್ಲಿ ಚುರುಮುರಿ ಗಾಡಿ ಇತ್ತು. ಗಿರಾಕಿಗಳಿಲ್ಲದೆ ನೊಣಕ್ಕೆ ಆಹಾರ ಸಿಕ್ಕಿದ್ದನ್ನು ಕ್ಯಾಮರಾಕಣ್ಣು ಗುರುತಿಸಿತು!
ಅಲ್ಲಿಂದ ಹೊರಟು ಮೈಸೂರಿಗೆ ೭ ಗಂಟೆಗೆ ತಲಪಿದೆವು. ಇಳಿಯುವಾಗ ಮಳೆ ನಮ್ಮನ್ನು
ಸ್ವಾಗತಿಸಿತು.
ಮೈಸೂರಿನ ಯೂಥ್
ಹಾಸ್ಟೆಲ್ ಗಂಗೋತ್ರಿ
ಘಟಕದ ಸದಸ್ಯರಾದ
ನಾಗೇಂದ್ರಪ್ರಸಾದ್ ಮತ್ತು
ವೈದ್ಯನಾಥನ್ ತಲಕಾಡು ದೇಗುಲ ದರ್ಶನ ಕಾರ್ಯಕ್ರಮ
ಹಮ್ಮಿಕೊಂಡು ಅದನ್ನು
ಯಶಸ್ವಿಯಾಗಿ ನೆರವೇರಿಸಿದ್ದರು. ಅವರಿಗೆ
ಸಹಚಾರಣಿಗರಾದ ನಮ್ಮೆಲ್ಲರ
ಧನ್ಯವಾದ.
👌👌
ಪ್ರತ್ಯುತ್ತರಅಳಿಸಿ