ಗುರುವಾರ, ಅಕ್ಟೋಬರ್ 31, 2019

ಮೂರು ಜಲಾಶಯಗಳಿಗೆ ಭೇಟಿ (ನುಗು, ಕಬಿನಿ, ತಾರಕ)


  ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ವ್ಯಾಪ್ತಿಯಲ್ಲಿರುವ ನುಗು, ತಾರಕ, ಕಬಿನಿ ಎಂಬ ಮೂರು ಜಲಾಶಯಗಳಿಗೆ ನಾವು ೧೫-೯-೨೦೧೯ರಂದು ಭೇಟಿ ಕೊಟ್ಟೆವು. (ಈಗ ಜಲಾಶಯ ವೀಕ್ಷಣೆಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಗೊಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಂದ  ವಿಶೇಷ ಅನುಮತಿ ಪಡೆದು ಪ್ರವೇಶ ಮಾಡಬೇಕಾದ ಪರಿಸ್ಠಿತಿಯನ್ನು ನಾವು ತಂದುಕೊಂಡಿದ್ದೇವೆ. ಜಲಾಶಯ ಪ್ರವೇಶಿಸಿ ಹೆಂಡ ಕುಡಿದು, ಅಲ್ಲೇ ಬಾಟಲು, ಪ್ಲಾಸ್ಟಿಕ್ ಇತ್ಯಾದಿ ಕಸ ಬೀಸಾಡಿ ಗಲೀಜುಗೊಳಿಸಿದರೆ ಜೀವನ ಸಾರ್ಥಕ ಎಂಬ ಸ್ಥಿತಿಯಾಗಿದೆ ಈಗ.)
  ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರು ವತಿಯಿಂದ ಉಮಾಶಂಕರರು ಅವರ ಸ್ನೇಹಿತ ಅಧಿಕಾರಿಯವರಿಂದ ೩ ಜಲಾಶಯ ವೀಕ್ಷಣೆಗೆ  ಪ್ರವೇಶಿಸಲು ಅನುಮತಿ ಪತ್ರ ಪಡೆದುಕೊಂಡಿದ್ದರು.  
  ದಿನ ಬೆಳಗ್ಗೆ ನಾವು ೨೧ ಮಂದಿ ೬.೩೦ಗೆ ಮೈಸೂರಿನಿಂದ ಹೊರಟು ಹೆಚ್ ಡಿ ಕೋಟೆ ರಸ್ತೆಯಲ್ಲಿ ಸಾಗಿ ೭.೫೦ಕ್ಕೆ ಸರಗೂರು ತಲಪಿದೆವು. ಅನುಪಮ ಖಾನಾವಳಿಯಲ್ಲಿ ಮೊದಲು ಹೊಟ್ಟೆಪೂಜೆ ಮುಗಿಸಿದೆವು.
  ಚಿಕ್ಕದೇವಮ್ಮ ಬೆಟ್ಟಕ್ಕೆ ಪಯಣ
    ಪ್ರಕೃತಿ ಸೌಂದರ್ಯವನ್ನು ನೋಡಲು ನಾವು ತುಂಬ ದೂರ ಪ್ರಯಾಣಿಸಬೇಕಾಗಿಲ್ಲ. ಮೈಸೂರಿನಿಂದ ೬೫ ಕಿಮೀ ಹೆಗ್ಗಡದೇವನಕೋಟೆ ದಾರಿಯಲ್ಲಿ ಸರಗೂರು ದಾಟಿದರೆ ಈ ಬೆಟ್ಟ ತಲಪಬಹುದು. ಬೆಟ್ಟದ ಬುಡದಿಂದ ಸುಮಾರು ೫ಕಿಮೀ. ರಸ್ತೆಯಲ್ಲಿ ಸಾಗಿದರೆ ದೇವಾಲಯ ತಲಪಬಹುದು. ಚಾರಣ ಮಾಡಬೇಕೆಂಬ ಆಸೆ ಇರುವವರು ನಡೆದೂ ತಲಪಬಹುದು.  ವಾಹನ ನಿಲ್ಲಿಸಲು ವಿಶಾಲ ಸ್ಥಳವಿದೆ. ಅಲ್ಲಿ ಸಿಹಿ ಖಾರ ತಿಂಡಿ, ಪೂಜಾ ಸಾಮಾಗ್ರಿ ಕಬ್ಬಿನ ಹಾಲು ದೊರೆಯುತ್ತದೆ. ತಿಂಡಿ ಊಟ ಸಿಗುವುದಿಲ್ಲ. ನಾವೇ ಕೊಂಡೋಗಬೇಕು. ಅಲ್ಲಿಗೆ ಬಸ್ ಸೌಕರ್ಯವಿಲ್ಲ. ಸ್ವಂತ ವಾಹನ ಅಥವಾ ಬಾಡಿಗೆಗೆ ಮಾಡಿಕೊಂಡು ಹೋಗಬೇಕು. 





 ಸರಗೂರಿನಿಂದ ನಾವು ಚಿಕ್ಕದೇವಮ್ಮ ಬೆಟ್ಟದ ಪಾದಕ್ಕೆ ಹೋದೆವು. ಅಲ್ಲಿ ವಾಹನದಿಂದ ಇಳಿದು ನಮ್ಮ ನಮ್ಮ ಪರಿಚಯ ಮಾಡಿಕೊಂಡೆವು.. ಚಿಕ್ಕದೇವಮ್ಮ ಬೆಟ್ಟಕ್ಕೆ ರಸ್ತೆ ಬದಲಾಗಿ ನಾವು ನಡೆದು ಹತ್ತುವುದೆಂದು ತೀರ್ಮಾನಿಸಿದೆವು. ಅಲ್ಲಿಂದ ಬೆಟ್ಟ ಹತ್ತಲು ಸುರುಮಾಡಿದೆವು. ಮೊದಲು ಮೆಟ್ಟಲು ಇದ್ದಿರಬಹುದು. ಅದಕ್ಕೆ ಪುರಾವೆಯಾಗಿ ಅಲ್ಲಲ್ಲಿ ಕಲ್ಲಿನ ಕುರುಹು ಕಂಡಿತು. ಈಗ ಮಳೆನೀರ ಹೊಡೆತಕ್ಕೆ ಸಿಕ್ಕಿ ಎಲ್ಲ ನಾಶವಾಗಿವೆ. ಈಗ ಯಾರೂ ನಡೆದು ಬೆಟ್ಟದ ದೇವಾಲಯಕ್ಕೆ ಹೋಗುವುದಿಲ್ಲ. ಹಾಗಾಗಿ ದಾರಿಯೂ ಚೆನ್ನಾಗಿಲ್ಲ. ಬೆಟ್ಟದ ಮೇಲಕ್ಕೆ ನೀರು ಹರಿಸುವ ಪೈಪ್ ನಮಗೆ ದಾರಿ ತಪ್ಪದಂತೆ  ಗೈಡ್.






ಮಾತಾಡುತ್ತಲೇ ನಿಧಾನಕ್ಕೆ ಬೆಟ್ಟ ಹತ್ತುತ್ತ ಸಾಗಿದೆವು.   ಮುಂದೆ ಸಾಗಿದಂತೆ ನಮ್ಮ ೨೧ ಜನರಿದ್ದ ತಂಡ ಎರಡು ಮೂರು ಗುಂಪುಗಳಾಗಿ ಬೇರ್ಪಟ್ಟಿತು. ಗಂಗೋತ್ರಿ ಘಟಕಕ್ಕೆ ಹೊಸದಾಗಿ ವಾಕಿಟಾಕಿ ಬಂದ ಸಂಭ್ರಮ. ಗುಂಪಿನ ಮುಂದಾಳತ್ವ ವಹಿಸಿ ಮೊದಲು ಸಾಗಿದವರ ಬಳಿ ಒಂದು ಹಾಗೂ ಎಲ್ಲರಿಂದ  ಹಿಂದೆ ಇರುವವರಲ್ಲಿ ಒಂದು ವಾಕಿಟಾಕಿ. ಮಧ್ಯೆ ಮಧ್ಯೆ ವಾಕಿಟಾಕಿ ಸರಿಯಾಗಿದೆಯೋ ಎಂದು ಪರೀಕ್ಷಿಸಲು ಇಬ್ಬರೂ ಮಾತಾಡಿಕೊಳ್ಳುತ್ತಿದ್ದರು. ಅವರಿಬ್ಬರ ಮಾತೂ ನಮಗೆ ಕೇಳಿಸುತ್ತಿತ್ತು! ಅವರು ಅಷ್ಟೇ ದೂರದಲ್ಲಿದ್ದರು! 
   ಬೆಟ್ಟದುದ್ದಕ್ಕೂ ಕುರುಚಲು ಗಿಡವಷ್ಟೇ ಇದ್ದುದು. ಕಲ್ಲುಮಣ್ಣು ಇರುವ ದಾರಿ.  ಕಾಡು ಹೂಗಳು ಕಾಣಸಿಕ್ಕವು. ನಿಲ್ಲುತ್ತ, ಹಿಂದಿನ ಗುಂಪು ಬರುವ ಗಮನವಾದಾಗ ಮುಂದುವರಿಯುತ್ತಿದ್ದೆವು.  ರಸ್ತೆ ದಾರಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಹೋಗುವಂತೆಯೇ ಇದೆ. ಆದರೆ ನಡೆಯುವ ದಾರಿ ಮಾತ್ರ ಹಾಳಾಗಿದೆ. ಯಾರೂ ನಡೆದು ಹತ್ತದ ಕಾರಣ ಅದನ್ನು ರಿಪೇರಿ ಮಾಡುವ ಗೋಜಿಗೇ ಹೋಗಿರಲಿಕ್ಕಿಲ್ಲ. ನಾವು ಅರ್ಧ ದಾರಿ ಬೆಟ್ಟ ಹತ್ತಿದಾಗ ನುಗು ಜಲಾಶಯ ಸೊಗಸಾಗಿ ಕಾಣುತ್ತಲಿತ್ತು. ನಾವು ಒಂದಷ್ಟು ಮಂದಿ ಬೆಟ್ಟದ ಮೇಲೆ ತಲಪಿ ದೇವಾಲಯ ಆವರಣದಲ್ಲಿ ಕುಳಿತೆವು. ಅಲ್ಲಿಂದ ವಾಕಿಟಾಕಿಯಲ್ಲಿ ಹಿಂದೆ ಇದ್ದವರ ಬಳಿ ಮಾತಾಡಿ ನಾವು ತಲಪಿದೆವು ಎಂದು ಹೇಳಿದರು! ೯ ಗಂಟೆಗೆ ಹೊರಟ ನಾವು ೯.೪೫ಕ್ಕೆ ತಲಪಿದೆವು.
  ಬೆಟ್ಟ ಹತ್ತಿ ದೇವಾಲಯ ಆವರಣ ಪ್ರವೇಶಿಸಿ ಸುತ್ತ ನೋಡಿದಾಗ ಹತ್ತಿ ಬಂದ ಸುಸ್ತೆಲ್ಲ ಮಾಯ.  ಬೆಟ್ಟದ ಮೇಲಿಂದ ಕಾಣುವ ದೃಶ್ಯ ಬಲು ಚೆನ್ನ. ಹಸಿರಿನಿಂದ ಕೂಡಿದ ಪರ್ವತಗಳು, ನೀರಿನಿಂದ ತುಂಬಿದ ನುಗು ಜಲಾಶಯ ನೋಡುತ್ತ ನಿಂತರೆ ಸಮಯ ಸರಿದದ್ದೇ ಗಮನಕ್ಕೆ ಬರುವುದಿಲ್ಲ. ದೇವರ ದರ್ಶನ ಮಾಡಿದೆವು. ಅಲ್ಲಿ ಚಾಮುಂಡೇಶ್ವರಿಯ ತಂಗಿ ಚಿಕ್ಕದೇವಮ್ಮ ತಾಯಿಯ ಮೂರ್ತಿ ಇದೆ.  ದೇವಾಲಯದ ಆವರಣದಲ್ಲಿ ಅರ್ಧ ಗಂಟೆ ಕುಳಿತೆವು. ವೈದ್ಯನಾಥನ್ ತಂಡ ಭಾವಗೀತೆ, ಭಕ್ತಿಗೀತೆ ಹಳೆ ಸಿನಿಮಾ ಹಾಡು ಹಾಡಿದರು. ಪ್ರಕೃತಿ ಸೌಂದರ್ಯವನ್ನು ಮನದಣಿಯೆ ನೋಡಿ  ಅಲ್ಲಿಂದ ಕೆಳಗೆ ಇಳಿಯಲು ಹೊರಟೆವು.





  ಉಮಾಶಂಕರರ ಸ್ನೇಹಿತರು ನಮಗೆಲ್ಲ ಕಬ್ಬಿನ ಹಾಲು ಕೊಡಿಸಿದರು. ೧೧.೨೦ಕ್ಕೆ ಹೊರಟ ನಾವು ಕೆಲವರು ೧೧.೫೦ಕ್ಕೆ ಬೆಟ್ಟದ ಪಾದ ತಲಪಿದೆವು. ಬೆಟ್ಟ ಇಳಿಯಲು ಮೆಟ್ಟಲಿನ  ಹಾದಿ ಕಠಿಣವೆಂದು ಕೆಲವರು ರಸ್ತೆಯಲ್ಲೇ ನಡೆದು ಬರಬೇಕಾದರೆ ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ನಾವು ಕೆಳಗೆ ಕುಳಿತು ಹರಟೆ ಹೊಡೆಯುತ್ತ ಕಾಲ ಕಳೆದೆವು. ೨ ಹುಡುಗರು ಪಂಚೆ ಶಲ್ಯ ಧರಿಸಿ ಶಿಸ್ತಿನಿಂದ ಬೆಟ್ಟಕ್ಕೆ ಹೋಗಲು ಬಂದಿದ್ದರು. ಅವರ ಪಟ ಕ್ಲಿಕ್ಕಿಸಲು ಮುಂದಾದಾಗ ಚಂದದ ಫೋಸ್ ಕೊಟ್ಟರು.


    ನುಗು ಜಲಾಶಯ
 ಎಲ್ಲರೂ ಬಂದಬಳಿಕ ನಾವು ಬಸ್ ಹತ್ತಿ ಅಲ್ಲಿಂದ  ಬೀರವಾಳ ಗ್ರಾಮದಲ್ಲಿರುವ ನುಗು ಜಲಾಶಯಕ್ಕೆ ಹೋದೆವು. ಪುಟ್ಟದಾದ ಜಲಾಶಯ ಬಹಳ ಚೆನ್ನಾಗಿದೆ. ಅಣೆಕಟ್ಟು ಉದ್ದಕ್ಕೂ ನಡೆಯುತ್ತ ಕೊನೆ ತಲಪಿದಾಗ ಅಲ್ಲಿ ಅಶೋಕ ಸ್ಥಂಭ ಕಂಡೆವು. ಅಲ್ಲಿ ಪಟ ಕ್ಲಿಕ್ಕಿಸಿಕೊಂಡು ಜಲಾಶಯದ ಸೌಂದರ್ಯವನ್ನು ಕಣ್ಣು ಹಾಗೂ ಕ್ಯಾಮಾರಾದಲ್ಲಿ ತುಂಬಿಕೊಂಡೆವು. ಜಲಾಶಯದ ಸುತ್ತ ಹಸುರಿನ ಗುಡ್ಡ ನೋಡಲು ಬಲು ಖುಷಿಯಾಗುತ್ತದೆ. ನೀರು ಹರಿಸುವ ಗೇಟ್ ಮುಚ್ಚಿದ್ದರು. ನೀರು ಹರಿಯುತ್ತಿರಲಿಲ್ಲ. ಅಶೋಕಸ್ಥಂಭದ ಬಳಿ ಹೆಂಡದ ಬಾಟಲುಗಳ ರಾಶಿಯೇ ಇತ್ತು.
   ಹೆಗ್ಗಡದೇವನಕೋಟೆ ತಾಲೂಕಿನ ಬೀರವಾಳ ಗ್ರಾಮದಲ್ಲಿರುವ ನುಗು ಜಲಾಶಯವನ್ನು ಎಂ. ವಿಶ್ವೇಶ್ವರಯ್ಯನವರ ಉಸ್ತುವಾರಿಯಲ್ಲಿ ೧೯೫೬-೫೭ರಲ್ಲಿ ಕಟ್ಟಲು ತೊಡಗಿ, ೧೯೫೯ರಲ್ಲಿ ಪೂರ್ಣಗೊಳಿಸಲಾಯಿತು. ಜಲಾಶಯದ ಉದ್ದ ೨೧೨೨ ಅಡಿ, ಎತ್ತರ ೧೪೫ ಅಡಿ. ೨೯೧೩ ಎಕರೆ ಪ್ರದೇಶದಷ್ಟು ವಿಸ್ತಾರವಾದ ಈ ಜಲಾಶಯಕ್ಕೆ ೨+೨ ಗೇಟ್ ಇದೆ. ಸಾಮರ್ಥ್ಯ ೬ ಟಿ.ಎಂ.ಸಿ. ೨೫ ಸಾವಿರ ಎಕರೆ ಪ್ರದೇಶಕ್ಕೆ ಈ ಜಲಾಶಯದ ನೀರು ಉಪಯೋಗವಾಗುತ್ತದೆ. ಅಲ್ಲಿ ಸಣ್ಣದಾದ ವಿದ್ಯುತ್ ಉತ್ಪಾದನಾ ಕಾರ್ಯಾಗಾರವೂ ಇದೆ. ಎಂ.ವಿಶ್ವೇಶ್ವರಯ್ಯನವರ ಮುಂದಾಲೋಚನೆಗೆ ದೊಡ್ಡ ಸೆಲ್ಯೂಟ್ ಸಲ್ಲಬೇಕು. 







   ಅಲ್ಲಿಂದ ನಾವು ಸರಗೂರಿನ ಅನುಪಮ ಹೊಟೇಲಿಗೆ ಹೋದೆವು. ಅಲ್ಲಿ ರಾಗಿಮುದ್ದೆ, ಚಪಾತಿ ಅನ್ನ ಊಟ. ಊಟವಾಗಿ ಇನ್ನೇನು ಬಸ್ ಹತ್ತಬೇಕು ಎನ್ನುವಾಗ ಜೋರು ಮಳೆ ಸುರಿಯಿತು.
   ಕಬಿನಿ ಜಲಾಶಯ
ಹೊಟ್ಟೆದೇವರನ್ನು ಸಂತೃಪ್ತಿಪಡಿಸಿಕೊಂಡು ನಾವು ಕಬಿನಿ ಜಲಾಶಯದೆಡೆಗೆ ಸಾಗಿದೆವು. ಅಲ್ಲಿಅನುಮತಿ ಪತ್ರ ಪರಿಶೀಲಿಸಿ ನಮ್ಮನ್ನು ಒಳಗೆ ಬಿಟ್ಟರು. ಜಲಾಶಯದ ಗೇಟ್ ಇರುವೆಡೆಗೆ ಹೋಗಲು ಸುಮಾರು ದೂರ ನಡೆಯಬೇಕು. ಯಾರೂ ಪಟ ತೆಗೆಯಬಾರದು ಎಂದು ಗೋಪಕ್ಕ ಗರಂ ಆಗಿ ಹೇಳಿದರು. ಕೈಯಲ್ಲಿ ಕ್ಯಾಮರಾ ಇದ್ದಲ್ಲಿ ಪಟ ತೆಗೆಯದೆ ಇರಲು ಹೇಗೆ ಸಾಧ್ಯ? ಗೋಪಕ್ಕನ ಗರಂಗೆ ನಾವು ಕ್ಯಾರೆ ಮಾಡದೆ ಕದ್ದುಮುಚ್ಚಿ ಪಟ ಕ್ಲಿಕ್ಕಿಸಿದೆವು.  ವಿಶಾಲವಾದ ನೀರು ತುಂಬಿದ ಜಲಾಶಯ ನೋಡುತ್ತ, ಗುಂಪಿನಲ್ಲಿ ಮಾತಾಡುತ್ತ ನಡೆಯುವುದೇ ಬಲು ಮುದ. ಸೂರ್ಯನ ಬಿಂಬ ಜಲಾಶಯದಲ್ಲಿ ತೇಲುವುದನ್ನು ನೋಡಲು ಎರಡು ಕಣ್ಣು ಸಾಲದು. ಮೂರನೆ ಕಣ್ಣು ಕ್ಯಾಮರಾ ಬೇಕೇಬೇಕು!
  ಜಲಾಶಯದ ಗೇಟ್ ವರೆಗೆ ನಡೆದು ಅಲ್ಲಿ ನಮ್ಮ ಭಾವಚಿತ್ರ ತೆಗೆಸಿಕೊಂಡೆವು. ಗೇಟಿನಲ್ಲಿ ನೀರು ತುಂಬಿ ಜಲಾಶಯದಿಂದ ಸ್ವಲ್ಪವೇ ನೀರು ಹೊರಗೆ ಹರಿಯುತ್ತಲಿತ್ತು. ಅದರ ಚಂದ ನೋಡುತ್ತ ನಿಂತೆವು. ಗೇಟ್ ಎಲ್ಲವನ್ನೂ ಮುಚ್ಚಿದ್ದರು.  ಗೇಟ್ ತೆರೆದಾಗ ನೀರು ಹರಿಯುವ ಚಂದ ನೋಡುವುದೇ ಒಂದು ಅನುಭವ. ಆ ದೃಶ್ಯ ನೋಡಲು ಸಿಕ್ಕಲಿಲ್ಲ. ತುಂಬಿದ ಜಲಾಶಯ ನೋಡಲಷ್ಟೇ ತೃಪ್ತಿ ಹೊಂದಿದೆವು. ಮನದಣಿಯೆ ಜಲಾಶಯ ನೋಡಿ ಹಿಂದಿರುಗಿದೆವು.













 ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ನಿರ್ಮಾಣ ೧೯೭೪ರಲ್ಲಾಯಿತು. ೬೯೬ ಮೀಟರು ಉದ್ದವಿದೆ. ೧೬೬ ಅಡಿ ಎತ್ತರವಿದೆ. ೧೫೨೧೬ ಎಕರೆ ಪ್ರದೇಶದಷ್ಟು ವಿಸ್ತಾರವಿರುವ ಈ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ೨೮ ಟಿ.ಎಂ.ಸಿ. ೧೫೦೦೦೦ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ. ೪+೨ ಗೇಟ್ ಇದೆ. ಸಣ್ಣದಾದ ವಿದ್ಯುತ್ ಉತ್ಪಾದನಾ ಘಟಕವಿದೆ.
 ತಾರಕ ಜಲಾಶಯ
   ಕಬಿನಿ ಜಲಾಶಯದ ಸುಂದರ ನೋಟವನ್ನು ಕಣ್ಣು ತುಂಬಿಸಿಕೊಂಡು ನಾವು ಅಲ್ಲಿಂದ ತಾರಕ ಜಲಾಶಯಕ್ಕೆ ಹೋದೆವು.
ಪುಟ್ಟದಾದರೂ ನೋಡಲು ಚಂದವಾಗಿದೆ. ನೀರೊಳಗೆ ಬಿದುರಿನ ಕಡ್ಡಿಗಳು ಸಾಕಷ್ಟು ಇದ್ದುವು. ಸಂಜೆ ೫.೪೫ ಆಗಿತ್ತು. ಸೂರ್ಯ ಅಸ್ತಮಿಸುವ ತಯಾರಿ ನಡೆಸಿದ್ದ.  ಸಂಜೆಯ ಸೂರ್ಯನ ಹಿತ ಶಾಖದಲ್ಲಿ ಜಲಾಶಯದ ದಂಡೆಮೇಲೆ ನಡೆಯುವುದೇ ಒಂದು ಸುಂದರ ಅನುಭವ. ಜಲಾಶಯದ ಗೇಟ್ ಇರುವಲ್ಲಿ ದೊಡ್ಡದಾದ ತಾರಕ ಜಲಾಶಯ ಎಂಬ ಫಲಕ ಗಮನ ಸೆಳೆಯುತ್ತದೆ. ಎತ್ತರದಲ್ಲಿ ಜೇನುಗೂಡು ಸಾಕಷ್ಟು ಇತ್ತು. ಇಲ್ಲಿ ಅವು ಕಷ್ಟಪಟ್ಟು ಕಟ್ಟಿದ ಜೇನುತುಪ್ಪ ಬಹಳ ಸುರಕ್ಷೆಯಲ್ಲಿರುತ್ತದೆ ಹಾಗೂ ಅದು ತಮಗೇ ಲಭಿಸುತ್ತದೆ ಎಂದು  ಜೇನುಹುಳಗಳಿಗೆ ಗೊತ್ತು. ಅದಕ್ಕೇ ಅವು ಬಹಳಷ್ಟು ಎತರದ ಕಟ್ಟಡಗಳಲ್ಲಿ ಗೂಡು ಕಟ್ಟುವುದು. ಸಾಕಷ್ಟು ಕೋತಿಗಳೂ ನಿರ್ಭಿಡೆಯಿಂದ ಅಲ್ಲಿ ಆಟದಲ್ಲಿದ್ದುವು.








ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಪೆಂಜಹಳ್ಳಿ ಗಾಮದಲ್ಲಿರುವ ತಾರಕ ಜಲಾಶಯವನ್ನು ೧೯೭೩ರಲ್ಲಿ ನಿರ್ಮಿಸಲಾಯಿತು. ೪೧೭೫ ಅಡಿ ಉದ್ದ, ೧೦೫ ಅಡಿ ಎತ್ತರವಿರುವ ೨+೨ ಗೇಟ್ ಇರುವ ೧೩೪೪ಎಕರೆ ಪ್ರದೇಶದಷ್ಟು ವಿಸ್ತಾರವಾದ ಈ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ೩ ಟಿ.ಎಂ.ಸಿ. ಇದರಿಂದ ೧೮ ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಅನುಕೂಲವಾಗಿದೆ.  (ಮಾಹಿತಿ ಕೃಪೆ: ನಾಗೇಂದ್ರಪ್ರಸಾದ್)
  ತಾರಕ ಜಲಾಶಯ ನೋಡಿ ನಾವು ಅಲ್ಲಿಂದ ೬ ಗಂಟೆಗೆ ಹೊರಟೆವು.   ಮೈಸೂರು ತಲಪುವಾಗ ೭.೩೦ ಗಂಟೆ ದಾಟಿತ್ತು. ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರಾದ ಭಲೇಜೋಡಿ ಎಂದೇ ಹೆಸರಾದ ನಾಗೇಂದ್ರಪ್ರಸಾದ್ ಮತ್ತು ವೈದ್ಯನಾಥನ್ ಹಾಗೂ ಉಮಾಶಂಕರರು ಜಲಾಶಯ ಭೇಟಿ  ಕಾರ್ಯಕ್ರಮ ಹಮ್ಮಿಕೊಂಡು ಅದನ್ನು ಯಶಸ್ವಿಯಾಗಿ ನೆರವೇರಿಸಿದ್ದರು. ಅವರಿಗೆ ಸಹಚಾರಣಿಗರಾದ ನಮ್ಮೆಲ್ಲರ ಧನ್ಯವಾದತುಂಬಿದ ೩ ಜಲಾಶಯವನ್ನು ಒಂದೇ ದಿನ ನೋಡುವುದೇ ಬಹಳ ಸಂತಸದ ವಿಷಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ