ಮಂಗಳವಾರ, ನವೆಂಬರ್ 19, 2019

ಅಮೇರಿಕಾ ಪರ್ಯಟನ ಭಾಗ ೧

 
(ಟಿಪ್ಪಣಿ: ಅಮೇರಿಕಾ ಪ್ರವಾಸ ಕೈಗೊಂಡು ಒಂದೂವರೆ ವರ್ಷ ಕಳೆಯಿತು. ಪ್ರವಾಸ ಕಥನವನ್ನು ಇನ್ನಾದರೂ ಹಾಕದಿದ್ದರೆ ಹೇಗೆ? ನಾವು ಅಮೆರಿಕಾದಿಂದ ಹಿಂತಿರುಗಿದ ಬಳಿಕ  ಅದಿತಿ  ಅತ್ತಿಗೆಯನ್ನು ಮಾತಾಡಿಸಲು ಅವರ ಮನೆಗೆ ಹೋಗಿದ್ದಾಗ ‘ ಅಮೇರಿಕಾ ಪ್ರವಾಸದ ಬಗ್ಗೆ ಬೇಗ ಬರಿ. ತಡ ಆದರೆ ಮತ್ತೆ ಸ್ವಾರಸ್ಯ ಇರುವುದಿಲ್ಲ ಎಂದು ಎಚ್ಚರಿಸಿದ್ದಳು. ಆದರೆ ನನಗೆ ಬರೆದು ಮುಗಿಸಲು ಆಗಿರಲೇ ಇಲ್ಲ. ಅತ್ತಿಗೆ ಹೇಳಿದಂತೆ ಸ್ವಾರಸ್ಯ ಇಲ್ಲದೆ ಇದ್ದರೂ ಅಲ್ಲಿಗೆ ಹೋದ ನೆನಪನ್ನು ಶಾಶ್ವತಗೊಳಿಸಲು ಕಥನವನ್ನಿಲ್ಲಿ ಕಂತಿನ ಮೂಲಕ ಹಾಕುವೆ. ಈಗ ಅತ್ತಿಗೆ ನಮ್ಮೊಡನಿಲ್ಲ. ತೀರಿ ತಿಂಗಳೇ ಕಳೆಯಿತು. ಅವಳ ನೆನಪಿನೊಡನೆ  ಅವಳಿಗೆ ಈ ಕಥನ ಅರ್ಪಣೆ. )

 ಅಮೇರಿಕಾ ದೇಶ ನೋಡಬೇಕು ಎಂಬ ಆಸೆ ನಮಗಿಬ್ಬರಿಗೂ ಯಾವತ್ತೂ ಬಂದಿರಲಿಲ್ಲ. ಅನಂತನ ಅಣ್ಣ ಆನಂದವರ್ಧನ ಕುಟುಂಬ ಅಮೇರಿಕಾದಲ್ಲಿ ನೆಲೆಯಾಗಿ ಮೂವತ್ತಕ್ಕೂ ಅಧಿಕ ವರ್ಷಗಳು ಸಂದುವು. ಅವರು ನಮ್ಮನ್ನು ಅಲ್ಲಿಗೆ ಕರೆಯುತ್ತಲೇ ಇದ್ದರು. ನಾವು ಹೋಗಲು ಮನಸ್ಸು ಮಾಡಿರಲಿಲ್ಲ. ಇತ್ತೀಚಿನ ೬ ವರ್ಷಗಳಲ್ಲಿ ಮಗಳು ಅಕ್ಷರಿ ಅಳಿಯ ಮಹೇಶ ಕೂಡ ಅಮೇರಿಕಾ ವಾಸಿಗಳಾಗಿದ್ದರು. ಅವರೂ ಅಲ್ಲಿಗೆ ನಮ್ಮನ್ನು ಕರೆಯಲು ಸುರುಮಾಡಿದ್ದರು. ಮನೆಯಲ್ಲಿ ನಮ್ಮ ಅತ್ತೆ ಇದ್ದರು. ನಾವು ತಿಂಗಳಾನುಗಟ್ಟಲೆ ಪರದೇಶಕ್ಕೆ ಹೋಗಿ ಇದ್ದು, ಇಲ್ಲಿ ಅವರ ಈ ಇಳಿ ವಯಸ್ಸಿನಲ್ಲಿ ಅವರಿಗೆ ಅನಾಥಪ್ರಜ್ಞೆ ಮೂಡಿಸಲು ನಮಗಿಷ್ಟವಿರಲಿಲ್ಲ. ಆ ಕಾರಣಕ್ಕೆ ನಾವು ಅಮೇರಿಕಾಗೆ ಹೊರಡುವುದನ್ನು ಮುಂದೂಡುತ್ತಲೇ ಇದ್ದೆವು. ಅವರು ನಮ್ಮನ್ನು ಕರೆದಾಗಲೆಲ್ಲ ನಮ್ಮತ್ತೆಯೇ, ’ಅನಂತನಿಗೆ ಆಫೀಸ್ ಬಿಟ್ಟು ಹೋಗಲು ಎಷ್ಟು ಕಷ್ಟ. ನಿಮಗೇನು ಗೊತ್ತು? ಇಲ್ಲಿ ಅವನ ಆಫೀಸಿನಲ್ಲಿ ಎಷ್ಟು ಜನರಿದ್ದಾರೆ. ತಿಂಗಳಾನುಗಟ್ಟಲೆ ಆಫೀಸ್ ಬಿಟ್ಟು ಹೋಗುವುದೆಂದರೆ ಅಷ್ಟು ಸುಲಭವೆ? ಎಂದೆಲ್ಲ ಅವರ ಬಾಯಿ ಮುಚ್ಚಿಸುತ್ತಿದ್ದರು. ನಾವೂ ಖುಷಿಯಾಗಿ ಅಲ್ವೆ ಮತ್ತೆ? ಎಂದು ಅವರ ಮಾತಿಗೆ ಸಹಮತ ಸೂಚಿಸುತ್ತಿದ್ದೆವು! 
 ೨೦೧೭ ನವೆಂಬರ ತಿಂಗಳಿನಲ್ಲಿ ಅಕ್ಷರಿ ಇಲ್ಲಿಗೆ ಬಂದಿದ್ದಳು. ಆಗ ನಮ್ಮನ್ನು ಅಲ್ಲಿಗೆ ಕರೆದಾಗ, ‘ಅಜ್ಜಿ ನೀನೇ ಹೇಳು. ನಾವು ವಾಪಾಸು ಇಲ್ಲಿಗೆ ಬರುವ ಮೊದಲು ಅಮ್ಮ ಅಪ್ಪ ಅಲ್ಲಿಗೆ ಬರಬೇಡವೇ?’ ಎಂದು ಕೇಳಿದಾಗ, ‘ಹೌದು, ಒಮ್ಮೆ ಹೋಗಿ ಎಲ್ಲ ನೋಡಿ ಬರಬೇಕು. ಅವರು ಬರುವ ಮೊದಲು ಹೋಗಿಬನ್ನಿ’ ಎಂದು ಅಜ್ಜಿ ಹೇಳಿದ್ದರು. ಅವರು ಹಾಗೆ ಹೇಳಿದ್ದು ನನಗೆ ಆಶ್ಚರ್ಯವಾಗಿತ್ತು.  ಅಜ್ಜಿ ಇರುವವರೆಗೆ ನಾವು ಅಮೇರಿಕಾಗೆ ಬರುವುದಿಲ್ಲ. ನೀನು ಕರೆಯಲೇಬೇಡ ಎಂದು ಖಡಾಖಂಡಿತವಾಗಿ ಮಗಳಿಗೆ ಹೇಳಿದ್ದೆ. ಅವಳೂ ಸುಮ್ಮನಾಗಿದ್ದಳು. ವೃದ್ಧಾಪ್ಯದ ಅಜ್ಜಿಯ ಕಷ್ಟ ಅವಳಿಗರ್ಥವಾಗಿತ್ತು. 
   ನಮ್ಮ ಅತ್ತೆ ೧ ಜನವರಿ ೨೦೧೮ರಂದು ಬೆಳಗಿನ ಜಾವದಲ್ಲಿ ನಿದ್ದೆಯಲ್ಲೇ ಪರಲೋಕದೆಡೆಗೆ ಸಾಗಿಬಿಟ್ಟಿದ್ದರು. ನೀವು ಅಮೇರಿಕಾಗೆ ಹೋಗಿ ಇನ್ನು ತಡಮಾಡಬೇಡಿ ಎಂದು ಅವರು ಭಾವಿಸಿದ್ದರೋ ಏನೋ? ಅಜ್ಜಿಯೇ ಹೋದಮೇಲೆ ಮಗಳು ಸುಮ್ಮನಿರಲಿಲ್ಲ. ವೀಸಾ ಮಾಡಿಸಲು ಅರ್ಜಿ ತುಂಬಿ ಕಳಿಸಿಯೇಬಿಟ್ಟಳು. ‘ನೀವು ಅವರನ್ನು ಯಾವಾಗ ಬರುತ್ತೀರಿ ಎಂದು ಕೇಳಬೇಡಿ.  ಬನ್ನಿ ಬನ್ನಿ ಎಂದು ಕರೆಯವುದೂ ಬೇಡ. ಟಿಕೆಟ್ ಮಾಡಿ ಕಳುಹಿಸಿಬಿಡಿ. ಆಗ ಮಾತ್ರ ನಿಮ್ಮ ಅಪ್ಪ ಅಮ್ಮ ಹೊರಟಾರಷ್ಟೆ' ಎಂದು ನಮ್ಮ ಬಲಗೈ ಬಂಟಿ ಸಿದ್ದಮ್ಮ ಅವಳಿಗೆ ಕುಮ್ಮಕ್ಕು ಕೊಟ್ಟಳು. 'ನೀನೇ ಸರಿಯಾಗಿ ಅರ್ಥ ಮಾಡಿಕೊಂಡಿದ್ದೀಯ. ಹಾಗೇ ಮಾಡುತ್ತೇನೆ ಸಿದ್ದಮ್ಮ' ಎಂದು ಹೇಳಿದ್ದಳು ಮಗಳು ಗೆಲುವಾಗಿ.
 ವೀಸಾ ತಯಾರಿ: 
ನಮಗೆ ಖುಷಿ ಬಂದಾಗ ಎದ್ದು ಅಮೇರಿಕಾಗೆ ಹಾರಲು ಸಾಧ್ಯವಿಲ್ಲವಲ್ಲ. ವೀಸಾ ಪರವಾನಿಗೆ ಆಗಲೇಬೇಕು. ಅದರ ತಯಾರಿಯಲ್ಲಿ ಅಕ್ಷರಿ ತೊಡಗಿದಳು. ಮೂರು ವರ್ಷದ ಹಿಂದೆಯೇ ಪಾಸ್ಪೋರ್ಟ್ ಮಾಡಿಸಿದ್ದೆವು. 
೧) ವಿಸಿಟರ್ ವೀಸಾದಲ್ಲಿ ೨ ಬಗೆ . ಒಂದು,) ಸೆಲ್ಫ್ ಸ್ಪಾನ್ಸರ್ (ನಾವೇ ಪ್ರಾಯೋಜಿಸುವುದು) ನಮ್ಮ ಬ್ಯಾಂಕ್ ಖಾತೆಯಲ್ಲಿ   ಸಾಕಷ್ಟು ದುಡ್ಡಿದ್ದು, ಅಲ್ಲಿಯ ಖರ್ಚು ತೂಗಿಸಲು ನಾವು ಸಮರ್ಥರಾಗಿದ್ದರೆ, ಸ್ಥಿರ ಆಸ್ತಿಗಳಿದ್ದು ಆರ್ಥಿಕವಾಗಿ ಸಬಲರಾಗಿದ್ದರೆ  ಸೆಲ್ಫ್ ಸ್ಪಾನ್ಸರ್ ಅತ್ಯಂತ ಸುಲಭ ವಿಧಾನ. ಎರಡು) ಅಮೇರಿಕಾದಲ್ಲಿ ವಾಸಿಸುತ್ತಿರುವ ಮಕ್ಕಳು,  ಸಂಬಂಧಿಗಳು ಅಥವಾ, ಸ್ನೇಹಿತರು ಯಾರಾದರೊಬ್ಬರು ಪ್ರಾಯೋಜಿಸುವುದು. ಅಮೆರಿಕಾದಲ್ಲಿರುವವರು ಪ್ರಾಯೋಜಿಸಲು ಅವರ ಬ್ಯಾಂಕ್ ಖಾತೆಯಲ್ಲಿ ೧೦ ಸಾವಿರ ಡಾಲರಿಗಿಂತ ಹೆಚ್ಚು ಇದ್ದರೆ ಒಳ್ಳೆಯದಂತೆ. ಮತ್ತು ಅದಕ್ಕೆ ತುಂಬ ದಾಖಲೆಗಳು ಬೇಕು. ಎಲ್ಲ ದಾಖಲೆಗಳಿಗೂ ಅಫಿಡವಿಟ್ ಮಾಡಿಸಬೇಕೆಂದು ಕಾಣುತ್ತದೆ.  
 ವೀಸಾ ತಯಾರಿ ಹೇಗೆ? 
೧) ಡಿ. ಎಸ್ ೧೬೦ ಎಂಬ ಅರ್ಜಿ ನಮೂನೆ (DS 160 Form --- https://ceac.state.gov/genniv/)
ಅಲ್ಲಿ ಹೋಗಿ ಡಿ.ಎಸ್. ೧೬೦ ಅರ್ಜಿ ನಮೂನೆಯನ್ನು ತುಂಬಿಸುವಾಗ ನಮ್ಮ ಪಾಸ್ಪೋರ್ಟಿನಲ್ಲಿ ಇರುವಂತೆಯೇ (ಉದಾಹರಣೆಗೆ: ಹೆಸರು ವಿಳಾಸ ಇತ್ಯಾದಿ) ಎಲ್ಲ ಮಾಹಿತಿಯನ್ನು ತುಂಬಿಸಬೇಕು. ಅದನ್ನು ಕಳುಹಿಸಿದನಂತರ ನಮಗೆ ದೃಢೀಕರಣ ಪತ್ರ ಮಿಂಚಂಚೆಯಲ್ಲಿ ಬರುತ್ತದೆ. 

ಡಿಎಸ್ ೧೬೦ ಅರ್ಜಿ ನಮೂನೆ ತುಂಬಿಸಲು ಮಾದರಿಗಾಗಿ ಈ  ಕೆಳಗಿನ ಕೊಂಡಿ ಬಳಸಿ ನೋಡಿ.


ನಾವು ಮಧ್ಯವರ್ತಿಗಳ ಮುಖಾಂತರ ವೀಸಾ ಅರ್ಜಿ ಹಾಕಲಿಲ್ಲ. ಅಕ್ಷರಿಯೇ ಅರ್ಜಿ ತುಂಬಿ ಕಳುಹಿಸಿದಳು. ಆನ್ಲೈನಿನಲ್ಲಿ ನನಗೂ ಅನಂತನಿಗೂ ಪ್ರತ್ಯೇಕವಾಗಿ ಡಿ.ಎಸ್. ೧೬೦ ಅರ್ಜಿ ನಮೂನೆಯನ್ನು ತುಂಬಿಸಿದಳು. ಅರ್ಜಿ ತುಂಬಿಸಿದನಂತರ ಯಾರು ತುಂಬಿಸಿದ್ದು ಎಂದು ಇರುವ ಕಡೆ ಅಕ್ಷರಿ ಅವಳ ವಿವರ ತುಂಬಿಸಿದಳು. ಅರ್ಜಿ ಸಲ್ಲಿಸುವ ಮೊದಲು ಅವಳು ತುಂಬಿಸಿದ್ದು ಸರಿ ಇದೆಯೇ ಎಂದು ಪರೀಕ್ಷಿಸಲು ನಮಗೂ ಕಳುಹಿಸಿದ್ದಳು. ಸರಿ ಇದೆ ಎಂದಾದಮೇಲೆ ಅದನ್ನು ಸಲ್ಲಿಸಿ ವೀಸಾ ಶುಲ್ಕ ಆನ್ಲೈನಿನಲ್ಲೇ ಕಟ್ಟಿ ಅದರ ರಶೀದಿ ಪಡೆದಳು. ಯು ಎಸ್ ಕೌನ್ಸುಲೇಟ್, ಮದ್ರಾಸಿನಲ್ಲಿ ಸಂದರ್ಶನಕ್ಕೆ ದಿನ ಗೊತ್ತು ಪಡಿಸುವಾಗ ಕುಟುಂಬದ ಸದಸ್ಯರನ್ನು ಸೇರಿಸುವ ಮೂಲಕ ನಮಗಿಬ್ಬರಿಗೂ ಒಂದೇ ಸಂದರ್ಶನ ಸಮಯವನ್ನು ನಿಗದಿಪಡಿಸಿದ್ದಳು. 
ಅಮೇರಿಕಾ ವೀಸಾ ಪಡೆಯುವ ವಿಧಾನ  ತಿಳಿಯಲು ಈ ಕೆಳಗಿನ ವೆಬ್ಸೈಟನ್ನು ನೋಡಿದರೆ  ಸುಲಭ. 

https://www.immihelp.com/india/usa-visa-application-procedure.html


https://redbus2us.com/process-and-documents-needed-for-parents-visa-to-visit-usa-b2-visa-tourist-visa-sample-documents/
ಡಿ.ಎಸ್. ೧೬೦ ಅರ್ಜಿನಮೂನೆ ಭರ್ತಿ ಮಾಡಿ ಸಲ್ಲಿಸಿದನಂತರ ವೀಸಾ ಸಂದರ್ಶನಕ್ಕಾಗಿ ನಾವು ದಿನಾಂಕ ಗೊತ್ತುಪಡಿಸಿಕೊಳ್ಳಬೇಕು. ಮತ್ತು ಬೆರಳಚ್ಚು ಬಯೋಮೆಟ್ರಿಕ್‌ಗಾಗಿ ಅದರ ವಿವರಣೆಗಾಗಿ ಈ ವೆಬ್ಸೈಟನ್ನು ನೋಡಿ.( https://www.immihelp.com/india/usa-visa-appointment/ )

 ವೀಸಾ ಶುಲ್ಕ ಓನ್ಲೈನ್‌ನಲ್ಲೇ ಕಟ್ಟಬಹುದು. ಅದರ ವಿವರಕ್ಕೆ ಈ ಕೊಂಡಿ ನೋಡಿ.(https://www.immihelp.com/india/usa-visa-fee/payment-options.html) ಸಂದರ್ಶನ ದಿನಾಂಕ ಗೊತ್ತುಪಡಿಸುವ ಮೊದಲೇ ವೀಸಾ ಶುಲ್ಕ ಕಟ್ಟಬೇಕು. ನಾವು ವೀಸಾಗೆ ಮದ್ರಾಸಿಗೆ ಹೋದದ್ದು. 

ವೀಸಾ ಸಂದರ್ಶನಕ್ಕೆ ಸಿದ್ಧತೆ
೨೦.೩.೨೦೧೮ರಂದು ೧೨ ಗಂಟೆಗೆ ನಾವು ಮನೆಯಿಂದ ಹೊರಟೆವು. ಮೈಸೂರು ವಿಮಾನ ನಿಲ್ದಾಣಕ್ಕೆ ಕಾರು ಚಾಲಕ ರವಿಕುಮಾರ್ ನಮ್ಮನ್ನು ಬಿಟ್ಟರು. ರೂ.೫೦೦ ಬಾಡಿಗೆ. ಅಲ್ಲಿ ತಪಾಸಣೆಯಾಗಿ ವಿಮಾನ ಕಾಯುತ್ತ ಕೂತೆವು. ಕೊಂಡುಹೋದ ಚಿತ್ರಾನ್ನ ತಿಂದೆವು.  ೧.೧೦ಕ್ಕೆ ವಿಮಾನ ಹೈದರಾಬಾದಿನಿಂದ ಬಂತು. ಸುಮಾರು ೩೦ಕ್ಕೂ ಹೆಚ್ಚುಮಂದಿ ಇಳಿದರು. ಪರವಾಗಿಲ್ಲ ಮೈಸೂರಿಗೆ ವಿಮಾನದಲ್ಲಿ ಜನ ಬರುತ್ತಾರೆ. ವಿಮಾನ ನಷ್ಟದಲ್ಲಿ ಹಾರುತ್ತಿಲ್ಲ ಎಂದು ಸಮಾಧಾನವಾಯಿತು! ನಾವು ವಿಮಾನ ಏರಿದೆವು. ೨೦ಕ್ಕೂ ಹೆಚ್ಚು ಮಂದಿ ಇದ್ದೆವು. ಟ್ರೂಜೆಟ್ ವಿಮಾನ. ಸಾಕಷ್ಟು ದೊಡ್ಡದಾಗಿತ್ತು.ಹತ್ತಿ ಕುಳಿತಾದಮೇಲೆ  ಒಂದು ದೊಡ್ಡ ರಟ್ಟಿನ ಡಬ್ಬ ಹಾಗೂ ಒಂದು ಲೋಟ ನೀರು ಕೊಟ್ಟರು. ಡಬ್ಬ ಬಿಚ್ಚಿದಾಗ ಕಂಡದ್ದು  ಒಂದು ರುಮಾಲಿ ರೊಟ್ಟಿ, ಅದರೊಳಗೆ ಸ್ವಲ್ಪ ಪಲ್ಯ! ಮದ್ರಾಸ್ ವಿಮಾನ ನಿಲ್ದಾಣದಲ್ಲಿ  ೨.೨೫ಕ್ಕೆ  ವಿಮಾನ ಸರಿಯಾಗಿ ಇಳಿಯಿತು. ನಾವು ಇಳಿದು ಬ್ಯಾಗ್ ತೆಗೆದುಕೊಂಡು ಹೊರಬಂದಾಗ ಮೂರು ಗಂಟೆಯಾಗಿತ್ತು. ನಾವು ಬಾಡಿಗೆ ಕಾರಿನಲ್ಲಿ ಕೋಡಂಬಾಕಂನಲ್ಲಿರುವ ಪಾಮ್ ಗ್ರೋವ್ ಹೊಟೇಲ್ (ಮೊದಲೇ ದೂರವಾಣಿಯಲ್ಲಿ ಮಾತಾಡಿ ಕೊಟಡಿ ಕಾದಿರಿಸಿದ್ದೆವು)  ತಲಪಿದೆವು. ಕೋಣೆ ಬಾಡಿಗೆ ದಿನಕ್ಕೆ ರೂ. ೨೫೦೦. ಹವಾನಿಯಂತ್ರಿತವಲ್ಲ. ೩೨ ಡಿಗ್ರಿ ತಾಪಮಾನವನ್ನು ವಿದ್ಯುತ್ ಪಂಕದ ಸಹಾಯದಿಂದ ಸುಧಾರಿಸಬಹುದೆಂಬ ಖಾತ್ರಿ ನಮಗಿತ್ತು!  ಕೊಟಡಿ ಅನುಕೂಲವಾಗಿತ್ತು. ಸಂಜೆ ೫ ಗಂಟೆಗೆ ನಮ್ಮ ಕೋಣೆಯ ಕೆಳಗಡೆಯೇ ಇದ್ದ ಹೊಟೇಲ್ ಮೇನಾಕಾ ಒಳಹೊಕ್ಕೆವು. ಅಲ್ಲಿ ತಲಾ ಒಂದೊಂದು ಬೋಂಡಾ ಸಾಂಬಾರ್ (ಸಾಂಬಾರಿನೊಳಗೆ ಮುಳುಗೆದ್ದ ಬೋಂಡಾ) ಮೆದ್ದು ಕಾಫಿ ಕುಡಿದೆವು. ಕೇವಲ ರೂ. ೧೭೪ ಪಾವತಿಸಿದೆವು! 
   ಪಾಮ್ ಗ್ರೋವ್ ಹೊಟೇಲ್ ಮೂಡಬಿದ್ರೆಯ ಜಯವರ್ಮ ಬಲ್ಲಾಳರದು. (ದೂರವಾಣಿ ಸಂಖ್ಯೆ ೦೪೪೨೮೨೭೧೮೮೧. ಮಿಂಚಂಚೆ ವಿಳಾಸ: kmballal@vsnl.com , website: www.ballalgrouphotels.com )  ಕನ್ನಡಿಗರದು ಎಂದು ತಿಳಿದು ಬಹಳ ಸಂತಸವಾಯಿತು. ಅಲ್ಲಿ ಮ್ಯಾನೇಜರರಾಗಿರುವವರೂ ಕನ್ನಡಿಗರೇ.  ಮೇನಕೆಯ ಕ್ಯಾಷಿಯರ್ ಧನಕೀರ್ತಿ ಅವರೂ ಕನ್ನಡಿಗರು. 
   ಮರುದಿನದ ವೀಸಾ ಪ್ರಕ್ರಿಯೆಗೆ ಬಯೋಮೆಟ್ರಿಕ್ ಮಾಡುವ ತಾಣದ ಹುಡುಕಾಟಕ್ಕೆ ರಸ್ತೆಗಿಳಿದೆವು. ಮೊದಲೇ ನೋಡಿ ಖಾತ್ರಿ ಪಡಿಸಿದರೆ ಬೆಳಗ್ಗೆ ಹೋಗಲು ಅನುಕೂಲ. ದಾರಿಯ ಚಿತ್ರವನ್ನು ಅಕ್ಷರಿ ಕೈಯಲ್ಲಿ ಬರೆದು ಅದನ್ನು ವಾಟ್ಸಾಪಿನಲ್ಲಿ ಕಳುಹಿಸಿದ್ದಳು.

ನಾವು ತಂಗಿದ ಹೊಟೇಲಿನಿಂದ ಎಡಕ್ಕೆ ಹೊರಳಿ ಕೇವಲ ೭೦೦ ಮೀಟರ್ ದೂರ ಸಾಗಿ (ಅವಳು ಹಾಕಿದ ದಾರಿಯಂತೆಯೇ ಹೋದಾಗ) ಆ ಸ್ಥಳ ಪತ್ತೆ ಮಾಡಿದೆವು. ಅಲ್ಲಿಂದ ಅನತಿ ದೂರದಲ್ಲೇ ಇರುವ ಸಿ‌ಎ ಭವನಕ್ಕೆ ಹೋದೆವು. ಮೂವತ್ತೈದು ದಶಕದ ಹಿಂದೆ ಅನಂತ ಅಲ್ಲಿ ಓಡಾಡಿದ್ದನ್ನು ನೆನಪಿಸಿಕೊಂಡು ಹಿಗ್ಗಿದ. ಅಲ್ಲಿಂದ ಹೊರಟು ಬರುವಾಗ ರಾಜಭವನ ಹೊಟೇಲ್ ಕಂಡಿತು. ಓ ಇಲ್ಲಿಗೆ ಸುಮಾರುಸಲ ಊಟಕ್ಕೆ ಬರುತ್ತಲಿದ್ದೆ. ಎಂದು ಅನಂತ ಹಳೆನೆನಪುಗಳನ್ನು ತೆರೆದಿಟ್ಟ. ಮರಳಿ ನಾವು ಪಾಮ್ಗ್ರೋವ್ ಕೋಣೆಗೇ ಹೋದೆವು. 
     ರಾತ್ರಿ ಊಟಕ್ಕೆ ನಾವು ಮೇನಕೆಗೆ ಮರುಳಾಗದೆ (ಬಲು ದುಬಾರಿ ಒಂದು ಊಟಕ್ಕೆ ಕನಿಷ್ಟ ರೂ. ೧೬೨. ದುಡ್ಡಿನ ಪ್ರಶ್ನೆ ಅಲ್ಲ. ಅದೇನೋ ಅಷ್ಟು ದುಡ್ದು ಕೊಟ್ಟು ತಿನ್ನಲು ಮನಸು ಒಪ್ಪುವುದಿಲ್ಲ.) ನಾವು ರಾಜಭವನಕ್ಕೆ ನಡೆದೆವು. ಅಲ್ಲಿ ಇಡಿಯಪ್ಪ, ಚಪಾತಿ, ಮೊಸರನ್ನಕ್ಕೆ ರೂ ೨೦೦ ಆದದ್ದಷ್ಟೆ! (ತಮಿಳುನಾಡಿನಲ್ಲಿ ಹೆಚ್ಚಿನ ಹೊಟೇಲಿನಲ್ಲಿ ರಾತ್ರಿ ಊಟ ಇರುವುದಿಲ್ಲ. ತಿಂಡಿಯೇ ಇರುವುದು)
   ಬಯೋಮೆಟ್ರಿಕ್ ಪ್ರಹಸನ
 ೩೧.೩.೨೦೧೮ರಂದು ಬೆಳಗ್ಗೆ ಎದ್ದು ತಯಾರಾದೆವು. ರಾತ್ರಿ ಸೊಳ್ಳೆ ಸಂಗೀತವಿತ್ತು. ೭.೩೫ಕ್ಕೆ ನಾವು ಮೇನಕಾ ಹೊಕ್ಕೆವು. ನಮ್ಮ ಕೋಣೆ ಬಾಡಿಗೆಯಲ್ಲೇ ತಿಂಡಿ ಚಾರ್ಜು ಸೇರಿತ್ತು. ಇಡ್ಲಿ ವಡಾ, ಪೊಂಗಲ್, ಉಪ್ಪಿಟ್ಟು, ಕೇಸರಿಭಾತ್, ದೋಸೆ, ಕಾರ್ನ್‌ಪ್ಲೇಕ್, ಹಾಲು, ಬ್ರೆಡ್, ಬೆಣ್ಣೆ, ಜಾಮ್, ಪಪ್ಪಾಯಿ, ಅನಾನಸು, ಕಾಫಿ, ಚಹಾ. ಇಷ್ಟು ಬಗೆ ತಿಂಡಿಗಳು. ಯಾವುದನ್ನು ಎಷ್ಟು ಬೇಕಾದರೂ ಹಾಕಿಸಿಕೊಳ್ಳಬಹುದಿತ್ತು. ಆದರೆ ನಮ್ಮ ಹೊಟ್ಟೆ ಒಮ್ಮೆ ತುಂಬಿದರೆ ಮತ್ತೆ ತುಂಬಿಸಿಕೊಳ್ಳಲು ಬಿಡುವುದಿಲ್ಲ! ಹಾಗಾಗಿ ಹೊಟೇಲ್ ಮಾಲಕರು ಬಚಾವ್! ಆದರೂ ದುಡ್ಡು ಕೊಟ್ಟು ತಿನ್ನುವುದಕ್ಕಿಂತ ತುಸು ಹೆಚ್ಚು ತುಂಬಿಸಿಕೊಳ್ಳಲು ನಮ್ಮ ಹೊಟ್ಟೆ ಸಹಕರಿಸುವುದು ಸುಳ್ಳಲ್ಲ! 
ನುಂಗಂಬಾಕಂ ಸುಬ್ರಹ್ಮಣ್ಯ ಸ್ಟ್ರೀಟಿನಲ್ಲಿ ಬಯೋಮೆಟ್ರಿಕ್ ಮಾಡುವ ಕಟ್ಟಡಕ್ಕೆ ನಾವು ೯.೩೦ಕ್ಕೆ ತಲಪಿದೆವು. ಅಲ್ಲಿ ಹೋಗಿ ಸರದಿ ಸಾಲಿನಲ್ಲಿ ನಿಂತೆವು. ನಮ್ಮೊಡನೆ ಪಾಸ್ಪೋರ್ಟ್, ನಾನ್ ಇಮಿಗ್ರೆಂಟ್ ವೀಸಾ ಅರ್ಜಿ ನಮೂನೆ ಡಿ‌ಎಸ್ ೧೬೦ ಮತ್ತು ಸಂದರ್ಶನ ಅನುಮತಿ ಪತ್ರ ಇವಿಷ್ಟು ಮಾತ್ರ ಇದ್ದರೆ ಸಾಕು. ವಾಚ್, ಮೊಬೈಲು, ಚೀಲ ಎಲ್ಲ ತೆಗೆದುಕೊಂಡು ಹೋಗಬಹುದು. ಅವೆಲ್ಲ ಕೊಂಡೋಗಬಾರದು ಎಂಬ ತಪ್ಪು ಮಾಹಿತಿ ನಮಗೆ ಸಿಕ್ಕಿತ್ತು.  ನಮ್ಮ ಸರದಿ ಬಂದಾಗ ಪಾಸ್ಪೋರ್ಟ್ ಸಮೇತ ದಾಖಲೆ ಸಲ್ಲಿಸಿದಾಗ ಹೆಸರು ಹಾಗೂ ಹುಟ್ಟಿದ ದಿನಾಂಕ ಕೇಳಿದರು. ಮೊದಲಿಗೆ ನಮ್ಮ ಪಟ ಕ್ಲಿಕ್ಕಿಸುತ್ತಾರೆ. ಮತ್ತೆ ಎಡ ಹಾಗೂ ಬಲಕೈ ನಾಲ್ಕು+ನಾಲ್ಕು ಬೆರಳುಗಳ ಅಚ್ಚು ತೆಗೆದು, ಹೆಬ್ಬೆರಳು ಅಚ್ಚು ತೆಗೆಯುತ್ತಾರೆ. ನಾವು ಕೊಟ್ಟ ಪಾಸ್ಪೋರ್ಟ್, ದಾಖಲೆ ಪತ್ರ ಎಲ್ಲ ಹಿಂದೆ ಕೊಡುತ್ತಾರೆ. ಅಲ್ಲಿಗೆ ಆ ದಿನದ ಕೆಲಸ ಮುಗಿಯಿತು. ನಾವು ವಾಪಾಸು ವಸತಿ ಕೋಣೆಗೆ ೧೨ ಗಂಟೆಗೆ ಬಂದೆವು . ಅನಂತ ಗಣಕದಲ್ಲಿ ಕೆಲಸ ಮಾಡುತ್ತಲಿದ್ದ. ನಾನು ಪುಸ್ತಕ ಓದುತ್ತ ಕುಳಿತೆ. 
ಊಟದ ಸಮಯ
  ಒಂದು ಗಂಟೆಗೆ ನಾವು ಹತ್ತಿರದಲ್ಲೇ ಇದ್ದ ಹರಿಭವನಕ್ಕೆ ಹೋದೆವು. ರೂ೮೦ಕ್ಕೆ ಮಿನಿಮೀಲ್. ಟೊಮೆಟೋ ಭಾತ್, ಬಿಸಿಬೆಳೆಭಾತ್, ಚಪಾತಿ, ಪಲ್ಯ, ಸಾಂಬಾರ್, ಮೊಸರನ್ನ, ಹಪ್ಪಳ, ಕೇಸರಿಭಾತ್. ಎಲ್ಲವೂ ಮಿನಿ! ಊಟವಾಗಿ ವಾಪಾಸಾದೆವು.  ಸಂಜೆ ಸಿ‌ಎ ಇನ್ಸ್ಟಿಟ್ಯೂಟಿಗೆ ಹೋಗಿ ಅಲ್ಲಿಯ ಕಟ್ಟಡಕ್ಕೆ ಒಂದುಸುತ್ತು ಹಾಕಿದೆವು. ವೀಸಾ ಸಂದರ್ಶನ ಆಗುವ ಸ್ಥಳವನ್ನೂ ನೋಡಿ ಬಂದೆವು.  ರಾತ್ರಿ ರಾಜಭವನದಲ್ಲಿ ತಿಂಡಿ ತಿಂದು ಮರಳಿದೆವು. 
 ವೀಸಾ ಸಂದರ್ಶನ
   ೧.೪.೨೦೧೮ರಂದು ಬೆಳಗ್ಗೆ ಎದ್ದು ನಿತ್ಯಕರ್ಮಾದಿಗಳನ್ನು ಮುಗಿಸಿ, ಮೇನಕೆಯ ದರ್ಶನಕ್ಕೆ ಇಳಿದೆವು. ಅಲ್ಲಿ ತಿಂಡಿ ತಿಂದೆವು. ನಿನ್ನೆಯಂತೆಯೇ ತರಾವರಿ ತಿಂಡಿಗಳಿದ್ದುವು. ಅಲ್ಲಿ ನಮ್ಮಂತೆಯೇ ವೀಸಾ ಪ್ರಕ್ರಿಯೆಗೆ ಬಂದವರು ಸುಮಾರು ಮಂದಿ ಕೈಯಲ್ಲಿ ಕಡತ ಹಿಡಿದು ಬಂದವರಿದ್ದರು. ಎಲ್ಲರ ಮೊಗದಲ್ಲೂ ಆತಂಕ ಎದ್ದು ಕಾಣುತ್ತಲಿತ್ತು. ನನ್ನ ಮಗ, ಮಗಳು ಹೀಗೆ ಮಾಡಿ, ಹಾಗೆ ಮಾಡಿ, ಅಲ್ಲಿ ಆ ಪ್ರಶ್ನೆ, ಈ ಪ್ರಶ್ನೆ ಕೇಳುತ್ತಾರೆ. ಅದನ್ನು ನೆನಪಿಟ್ಟುಕೊಳ್ಳಿ ಎಂದು ಹೇಳಿದ್ದಾರೆ ಎಂದೆಲ್ಲ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತ ಆತಂಕ ಪಡುತ್ತಲೇ ತಿಂಡಿ ಮೆಲ್ಲುತ್ತಿದ್ದರು. ಪರೀಕ್ಷೆ ಬರೆಯುವ ಮೊದಲು, ಆ ಪ್ರಶ್ನೆ ಬರಬಹುದಾ? ಈ ಪ್ರಶ್ನೆ ಬರಬಹುದಾ? ಎಂದು  ವಿದ್ಯಾರ್ಥಿಗಳು ಆತಂಕದಲ್ಲಿರುತ್ತಾರಲ್ಲ ಹಾಗೆಯೇ ಈ ವೀಸಾ ಆಕಾಂಕ್ಷಿಗಳ ಮೊಗದಲ್ಲೂ ಅಂತದೇ ಗೊಂದಲ ಕಂಡಾಗೆ ಆಯಿತು! ನಾವು ಆರಾಮವಾಗಿ ಇದ್ದೆವು. ವೀಸಾ ಕೊಟ್ಟರೆ ಕೊಡಲಿ. ಕೊಡದಿದ್ದರೆ ನಮಗೇನೂ ಬೇಸರವಿರಲಿಲ್ಲ. 
  ನಾವು ೯.೧೫ಕ್ಕೆ ವೀಸಾ ಸಂದರ್ಶನ ಸ್ಥಳಕ್ಕೆ  ತಲಪಿದೆವು. ನಮಗೆ ನಿಗದಿಗೊಳಿಸಿದ್ದ ಸಮಯ ಬೆಳಗ್ಗೆ ೧೦ ಗಂಟೆ. ನಮ್ಮ ವಸತಿ ಕೋಣೆಯಿಂದ ಅಲ್ಲಿಗೆ ನಡೆಯಲು ೧೫ ನಿಮಿಷದ ಹಾದಿ. ಅಲ್ಲಿ ಸರದಿ ಸಾಲಿನಲ್ಲಿ ಉದ್ದಕ್ಕೂ ಜನ ಹನುಮಂತನ ಬಾಲದಂತೆ ನಿಂತಿದ್ದರು. ೮.೩೦, ೯, ೯.೧೫ ಹೀಗೆ ಗಂಟೆಗೆ ಸರಿಯಾಗಿ ಬೇರೆ ಬೇರೆ ಸರದಿ ಸಾಲುಗಳು. ನಮ್ಮ ಸರದಿಸಾಲಿನಲ್ಲಿ ನಿಂತೆವು. ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿಗೆ ಒಂದೇ ಸಮಯ ನಿಗದಿಗೊಳಿಸುತ್ತಾರೆ. ಬೇಗ ಹೋದರೆ ಆ ಸರದಿಯಲ್ಲಿ ಮುಂದೆ ನಿಲ್ಲಬಹುದು.  ಅಲ್ಲಿ ಚಕ್ರವರ್ತಿ ಸೂಲಿಬೆಲೆ ಸಿಕ್ಕಿದರು.  ಸುಮಾರು ಅರ್ಧಕಿಮೀ ಸರದಿ ಸಾಲಿನಲ್ಲಿ ಸಾಗಿ ವೀಸಾ ಕಚೇರಿ ಪ್ರವೇಶಿಸಿದೆವು. ನಮ್ಮ ಜೊತೆ ಸಂಬಂಧಪಟ್ಟ ಕಡತ ಮಾತ್ರ ಇರಬೇಕು. ಮೊಬೈಲ್ ಒಳಗೆ ಕೊಂಡೋಗುವಂತಿಲ್ಲ. ವೀಸಾ ಸಂದರ್ಶನಕ್ಕೆ ೧೦-೧೫ ಮಂದಿ ಕೂತಿರುತ್ತಾರೆ. ನಮ್ಮ ಸರದಿ ಬಂದಾಗ ಹೋಗಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಬೇಕು. ನಮಗೆ ೧೧ ಗಂಟೆಗೆ  ಕರೆ ಬಂತು. ಅನಂತನಿಗೆ ಮೂರು ಪ್ರಶ್ನೆ. ಅಮೇರಿಕಾದಲ್ಲಿ ಯಾರಿದ್ದಾರೆ?  ನೀವು ಏನು ಕೆಲಸ ಮಾಡುತ್ತಿರುವುದು? ಆಫೀಸಿನಲ್ಲಿ ಎಷ್ಟು ಜನ ಕೆಲಸಕ್ಕೆ ಇದ್ದಾರೆ? ನನಗೆ ಒಂದೇ ಒಂದು ಪ್ರಶ್ನೆ. ನೀವು ಕೆಲಸದಲ್ಲಿದ್ದೀರ? ಪ್ರಶ್ನೆ ಪತ್ರಿಕೆ ಬಹಳ ಸುಲಭವಾಗಿತ್ತು! ಎಷ್ಟು ಸುಲಭ ಅಂದರೆ ಸುಲಿದುಕೊಟ್ಟ ಬಾಳೆಹಣ್ಣನ್ನು ಬಾಯಿಗೆ ಹಾಕಿದಷ್ಟು! ಈ ಪರೀಕ್ಷೆಗೆ ನಮ್ಮನ್ನು ಮಗಳು ದಿನಾ ದೂರವಾಣಿಸಿ ಇಂಥ ಪ್ರಶ್ನೆ ಕೇಳುತ್ತಾರೆ ಎಂದೆಲ್ಲ ತಯಾರಿ ಮಾಡಿದ್ದಳು. ಅವಳ ಮನೆ ವಿಳಾಸ, ಫೋನ್ ಸಂಖ್ಯೆ. ಎಲ್ಲ ಬಾಯಿಪಾಟ ಮಾಡಿಕೊಳ್ಳಲು ಹೇಳಿದ್ದಳು. ಯಾವ ವೀಸಾದಲ್ಲಿ ನಾವು ತೆರಳುತ್ತಿರುವುದು ಎಂದೆಲ್ಲ ನಾವು ಕಷ್ಟಪಟ್ಟು ಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ ತಯಾರಾದದ್ದು ಇಲ್ಲಿ ಉಪಯೋಗಕ್ಕೆ ಬರಲಿಲ್ಲ!  ಅವಳ ಮನೆ ವಿಳಾಸ, ಫೋನ್ ಸಂಖ್ಯೆ ಎಲ್ಲ ಒಂದು ಚೀಟಿಯಲ್ಲಿ ಬರೆದಿಟ್ಟು ಅನಂತ ಕಿಸೆಯಲ್ಲಿ ಇಟ್ಟುಕೊಂಡಿದ್ದ! ಪರೀಕ್ಷಕರು ತಪಾಸಣೆ ಮಾಡುವ ಪ್ರಮೇಯ ಎದುರಾಗಲಿಲ್ಲ!  ವೀಸಾ ಸಂದರ್ಶನ ಸುಲಭದಲ್ಲೇ ಆಯಿತು. ಪಾಸ್ಪೋರ್ಟ್ ಅವರಿಗೊಪ್ಪಿಸಿ  ಖುಷಿಯಿಂದ ವಸತಿಕೋಣೆಗೆ ಬಂದೆವು.
  ಮರಳಿ ಮೈಸೂರು
   ಬೇರೆಡೆ ಹೋಗಲು ಸಮಯವಿಲ್ಲದೆ ಊಟಕ್ಕೆ ಮೇನಾಕಾಗೆ ಹೋದೆವು. ಊಟವಾಗಿ ಕೋಣೆ ಖಾಲಿ ಮಾಡಿ ಬಾಡಿಗೆ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋದೆವು. ಹೊಟೇಲಿನವರದೇ ಬಾಡಿಗೆಗೆ ಕಾರು ಇದೆ. ಆದರೆ ಬೇರೆ ಬಾಡಿಗೆ ಕಾರಿಗಿಂತ ರೂ.೫೦ ಜಾಸ್ತಿ. ವಿಮಾನ ನಿಲ್ದಾಣ ತಲಪಿದಾಗ ನಾವು ಹೋಗಬೇಕಾದ ಏರ್ ಏಷಿಯಾ ವಿಮಾನ ಸೇವೆ ರದ್ದುಗೊಂಡಿದೆ ಎಂಬ ಮಾಹಿತಿ ಸಿಕ್ಕಿತು. ಇನ್ನೊಂದು ವಿಮಾನ ಸಂಜೆಮೇಲೆ ಇರುವುದು ಎಂದರು. ಎಂತ ಮಾಡುವುದು? ಅತ್ತ ಬೆಂಗಳೂರಿನಿಂದ ಮೈಸೂರಿಗೆ ಬಸ್ ಟಿಕೆಟ್ ಆಗಿತ್ತು. ನಿಮ್ಮ ದುಡ್ಡು ವಾಪಾಸು ಬರುತ್ತದೆ ಎಂದು ಏರ್ ಏಷಿಯಾದವರು ಹೇಳಿದರು. (ಆ ದುಡ್ಡು ಹಿಂದೆ ಬರಬೇಕಾದರೆ ಫೋನ್, ಮಿಂಚಂಚೆ ಮೂಲಕ ಅಕ್ಷರಿ ಸುಮಾರು ಹೋರಾಡಬೇಕಾಯಿತು. ಅಂತೂ ಕೆಲವು ತಿಂಗಳಾನಂತರ ದುಡ್ಡು ವಾಪಾಸು ಬಂತು.) ಏನು ಮಾಡುವುದೆಂದು ತೋಚದಿದ್ದಾಗ ಇಂಡಿಗೋ ವಿಮಾನದವರೇ ಈಗ ಬೆಂಗಳೂರಿಗೆ ವಿಮಾನವಿದೆ. ಎಂದು ತರಾತುರಿಯಲ್ಲಿ ಅವರೇ ಟಿಕೆಟ್ ಬುಕ್ ಮಾಡಿ ಕೊಟ್ಟರು. ವಿಮಾನ ಟಿಕೆಟ್ ದುಬಾರಿಯಾಗಿತ್ತು. ವಿಧಿ ಇಲ್ಲದೆ ದುಡ್ಡು ಕಟ್ಟಿದೆವು. ಸಮಯ ಬಹಳ ಕಡಿಮೆ ಇತ್ತು. ಒಳಗೆ ಬಿಡುವಾಗ ತಪಾಸಣಾ ವಿಧಿ ಕ್ಷಿಪ್ರವಾಗಿ ಮುಗಿಸಿದರು. ಅಂತೂ ವಿಮಾನ ಏರಿದೆವು. ವಿಮಾನದಲ್ಲಿ ಜನ ಭರ್ತಿ. ಇಂಡಿಗೊ ಹಾಗೂ  ಏರ್ ಏಷಿಯಾ ವಿಮಾನಗಳಲ್ಲಿ ಒಳಗೊಳಗೇ ಒಪ್ಪಂದವೇನೋ ಎಂಬ ಸಂಶಯ ನಮಗೆ ಆಯಿತು.  ಅಂತೂ ಬೆಂಗಳೂರು ವಿಮಾನ ನಿಲ್ದಾಣ ತಲಪಿ ನಾವು ಇಳಿದು ವೋಲ್ವೋ ಬಸ್ ಹತ್ತಿ ಮೈಸೂರಿಗೆ ಬಂದೆವು. 
  ಮೊಬೈಲ್ ಫೋನ್ ಇಲ್ಲ, ಮನೆಗೆ ಒಂದು ಕಾಲ್ ಮಾಡ್ಬೇಕಿತ್ತು. ಪೋನ್ ಕೊಡುತ್ತೀರ? ಎಂದು  ಬಸ್ ಹತ್ತುವವರೊಬ್ಬರು ಕೇಳಿದರು. ನನ್ನ ಫೋನನ್ನು ಏನಾದರೂ ದುರುಪಯೋಗಗೊಳಿಸಿದರೆ ಎಂದು ಒಂದು ಮೂಲೆಯಲ್ಲಿ ಸಂಶಯ ಕಾಡಿದರೂ ಫೋನ್ ಕೊಟ್ಟೆ! ಮಾತಾಡಿ ಫೋನ್ ನನಗೆ ಹಿಂದಿರುಗಿಸಿದರು. ಕೂಡಲೇ ಅವರು ಮಾಡಿದ ಸಂಖ್ಯೆಯನ್ನು ಅಳಿಸಿ ಹಾಕಿದೆ! 
                 ಅಮೇರಿಕಾಗೆ ಹೊರಡುವ ತಯಾರಿ
ಅಮೇರಿಕಾಗೆ ವಿಮಾನ ಟಿಕೆಟ್ ಕಾದಿರಿಸಿ ಆಯಿತು. ಇನ್ಶೂರೆನ್ಸ್ ಆಯಿತು. ವೀಸಾ ಮುದ್ರೆ ಹಾಕಿದ ಪಾಸ್ಪೋರ್ಟ್ ಕೊರಿಯರಿನಲ್ಲಿ ಮನೆಗೆ ಬಂತು.  ಸೂಟ್ಕೇಸ್ ತೆಗೆಯಬೇಡಿ. ಮತ್ತೆ ಉಪಯೋಗ ಕಡಿಮೆ ಅದರದು. ಇಡುವುದೂ ಸಮಸ್ಯೆ. ನಾವೇ ಕೊಡುತ್ತೇವೆ ಎಂದು ಸ್ನೇಹಿತರಾದ ಕಮಲಾಕ್ಷಿ ಹೇಳಿದ್ದರು. ಅವರ ಮನೆಯಿಂದ ನಾಲ್ಕು ಸೂಟ್‌ಕೇಸ್ ತಂದೆವು. ಆ ಸಾಮಾನು ಈ ಸಾಮಾನು ಎಂದು ನಾಲ್ಕೂ ಭರ್ತಿ ಆಯಿತು. ಒಂದರಲ್ಲಿ ೨೩ ಕಿಲೋ ತುಂಬಿ ಕೊಡೋಗಬಹುದು. ಒಬ್ಬರಿಗೆ ೨ ಸೂಟ್ ಕೇಸ್ ಮತ್ತು ಇನ್ನೊಂದು ಸಣ್ಣ ಬ್ಯಾಗ್ ಅಥವಾ ಸೂಟ್ಕೇಸ್ ೭ಕಿಲೋ ಮಿತಿ. ಅದನ್ನು ನಮ್ಮ ಜೊತೆಯೇ ಇಟ್ಟುಕೊಳ್ಳಬಹುದು.  ೨ ದೊಡ್ಡ ಸೂಟ್ಕೇಸ್ ಅವರೇ ಲಗೇಜು ವಿಭಾಗಕ್ಕೆ ಹಾಕುತ್ತಾರೆ. 
   ವಿಮಾನಯಾನ ಬೆಂಗಳೂರು- ಅಬುದಾಭಿ 
  ೨೨.೫.೨೦೧೮ರಂದು ಮಧ್ಯಾಹ್ನ ೨.೩೫ಕ್ಕೆ ನಾವು ಮೈಸೂರಿನಿಂದ ಹೊರಟು ೬.೩೦ಕ್ಕೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ತಲಪಿದೆವು. ನಮ್ಮ ಕಾರಿಗೆ ಸಾರಥಿ ರವಿಕುಮಾರ್. ಕಾರನ್ನು ರವಿಕುಮಾರ್ ಮೈಸೂರು ಮನೆಗೆ ಹಿಂತಿರುಗಿಸಿದರು. ಅವರಿಗೆ ಸಂಭಾವನೆ ರೂ. ೧೦೦೦. 
   ನಾವು ಸೂಟ್ಕೇಸ್ ನೂಕುತ್ತ ವಿಮಾನ ನಿಲ್ದಾಣದೊಳಗೆ ಹೋದೆವು. ಅಲ್ಲಿ ನಮ್ಮ ಸೂಟ್ಕೇಸ್ ತೂಕ ಪರಿಶೀಲಿಸಿ, ಬೋರ್ಡಿಂಗ್ ಪಾಸ್ ಕೊಟ್ಟ ಬಳಿಕ ನಾವು ಮೇಲೆ ಹೋಗಿ ನಮ್ಮ ವಿಮಾನ ಹೊರಡುವ ಗೇಟ್ ಬಳಿ ೭.೩೦ಕ್ಕೆ ಕೂತೆವು. ಅಲ್ಲಿ ನಾಲ್ಕು ಮಂದಿಯ ಪರಿಚಯ ಆಯಿತು. ಲಕ್ಷ್ಮೀ, ಸುಮತಿ ಬೆಂಗಳೂರಿನವರು. ಗೋಪಾಲಕೃಷ್ಣ ಪೈ ಮತ್ತು ಗೀತಾ ದಂಪತಿ ಮಣಿಪಾಲದವರು. ಅಮೇರಿಕಾದಲ್ಲಿ ಮಗಳ ಮನೆಗೆ ಹೋಗುವವರು. ಇದು ಎರಡನೇಸಲವಂತೆ.  ಲಕ್ಷ್ಮೀ ಇಂಗ್ಲೆಂಡಿಗೆ ಮಗನ ಮನೆಗೆ ಹೋಗುವುದು. ಸುಮತಿ ಹೆಚ್ಚು ಮಾತಾಡಲಿಲ್ಲ. ನಾವು ಮಾತಾಡುತ್ತ ಕೂತೆವು. ಕೊಂಡೋಗಿದ್ದ ಚಪಾತಿ ತಿಂದೆವು. ಲಕ್ಷ್ಮೀಯವರಿಗೂ ಚಪಾತಿ ಕೊಟ್ಟೆ. ಅವರು ಏನೂ ತಂದಿರಲಿಲ್ಲ. ವಿಮಾನ ನಿಲ್ದಾಣದೊಳಗೆ ಏನೂ ತಿಂಡಿ ತರುವ ಹಾಗಿಲ್ಲ ಎಂದೇ ತಿಳಿದಿದ್ದರಂತೆ. 
   ೯.೩೦ಕ್ಕೆ ನಾವು ವಿಮಾನ ಏರಿ ಕಾದಿರಿಸಿದ ಆಸನದಲ್ಲಿ ಆಸೀನರಾದೆವು. ೧೦.೧೫ಕ್ಕೆ ವಿಮಾನ ಹೊರಟಿತು. ೧೧ ಗಂಟೆಗೆ ಅನ್ನ, ದಾಲ್, ಪಲ್ಯ, ಬನ್, ಬೆಣ್ಣೆ, ಪಾಯಸ ಕೊಟ್ಟರು. ಆಕಾಶಮಾರ್ಗವಾಗಿ  ಬೆಂಗಳೂರಿನಿಂದ ಅಬುದಾಭಿಗೆ ೨೭೨೬ಕಿಮೀ. ೨೩-೫-೧೮ರಂದು ಬೆಳಗ್ಗೆ (ನಮ್ಮ ಸಮಯ ೨ಗಂಟೆಗೆ) ಅಲ್ಲಿಯ ಅವಧಿ ೧೨.೩೦ ಗೆ ತಲಪಿದೆವು. ಅಬುದಾಭಿಯ ವಿಮಾನ ನಿಲ್ದಾಣ ಬಲು ವಿಸ್ತಾರವಾಗಿ ಸೊಗಸಾಗಿದೆ.

   ಅಬುದಾಬಿಯಿಂದ ಶಿಕಾಗೊಗೆ ಪಯಣ
 ೨೩.೫.೧೮ರಂದು ನಾವು ಶಿಕಾಗೋಗೆ ಹೋಗಲು ಹತ್ತಬೇಕಾಗಿದ್ದ ವಿಮಾನಕ್ಕೆ ಹೋಗಲು ನಿಲ್ದಾಣದೊಳಗೆ ಒಂದು ಕಿಮೀ ನಡೆದು ೫೯ನೇ ಗೇಟ್ ಬಳಿ ತಲಪಿದೆವು. ಅಲ್ಲಿ ನಮ್ಮ ತಪಾಸಣೆಯಾಗಿ ಫೋಟೋ ತೆಗೆದರು. ನಿಮ್ಮಲ್ಲಿ ಡಾಲರ್ ಇದೆಯೇ? ಗಣಕದಲ್ಲಿ ಕೆಲ ಸೂಟ್ ಕೇಸ್ ಚಿತ್ರ ತೋರಿಸಿ ಇದು ನಿಮ್ಮದೆ? ಅದರೊಳಗೆ ಏನಿದೆ? ಎಂದೆಲ್ಲ ಒಂದೆರಡು ಪ್ರಶ್ನೆ ಕೇಳಿದರು. ನಮ್ಮ ಉತ್ತರ ಅವರಿಗೆ ತೃಪ್ತಿದಾಯಕವಾಗಿ ನಮ್ಮನ್ನು ಒಳಗೆ ಬಿಟ್ಟರು. ವಿಮಾನವಿದ್ದುದು ೩.೩೦ಗೆ (ನಮ್ಮ ಸಮಯ ಬೆಳಗ್ಗೆ ೫ಗಂಟೆಗೆ). ಅಬುದಾಭಿಯಲ್ಲಿ ನಮ್ಮ ಸಮಯಕ್ಕಿಂತ ೧.೩೦ ಗಂಟೆ ಹಿಂದೆ.  ಮುಖಮಾರ್ಜನ ಮುಗಿಸಿ ಅಲ್ಲಿ ಕೂತೆವು. ೨.೩೦ಗೆ ಯೆತಿಹಾಡ್ ವಿಮಾನ ಏರಿದೆವು. 
  ಕಿಟಕಿ ಪಕ್ಕವೇ ಸಿಕ್ಕಿತು. ಖುಷಿಯಲ್ಲಿ ಹೊರಗೆ ಇಣುಕಿದಾಗ  ಹೊರಗೆ ಬೃಹತ್ ರೆಕ್ಕೆ ಕಂಡಿತು! ಅಬುದಾಭಿಯಿಂದ ಶಿಕಾಗೋಗೆ ಆಕಾಶಮಾರ್ಗದಲ್ಲಿ ೭೨೫೭ಮೈಲಿ (೧೧೬೮೦ಕಿಮೀ) ಒಟ್ಟು ೧೪ ಗಂಟೆ ದೀರ್ಘ ಪ್ರಯಾಣ. ಬೆಳಗ್ಗೆ ೭.೩೦ ಗಂಟೆಗೆ ಮೂರು ಪುಟ್ಟದಾದ ಇಡ್ಲಿ. ಸಾಂಬಾರ್, ಉಪ್ಪಿಟ್ಟು, ಹಣ್ಣು, ಮೂಸಂಬಿರಸ, ಕಾಫಿ ಕೊಟ್ಟರು. ಕಿಟಕಿ ಪಕ್ಕ ಕೂತರೂ ಉಪಯೋಗವಿಲ್ಲ. ಕಿಟಕಿ ಬಾಗಿಲನ್ನು ಹಾಕಲು ಹೇಳುತ್ತಾರೆ. ವಿಮಾನದೊಳಗೆ ಕತ್ತಲು. ನಿದ್ದೆ ಮಾಡುವುದೇ ಒಳ್ಳೆಯದೆಂದು ನಿದ್ದೆಗೆ ಜಾರಿದೆವು. ಸಂಜೆ ೫ ಗಂಟೆಗೆ ಅನ್ನ, ದಾಲ್, ಕರಿ, ಪಲ್ಯ, ಪಾಯಸ, ಬ್ರೆಡ್ ಬೆಣ್ಣೆ, ತರಕಾರಿ ಇತ್ಯಾದಿ ಕೊಟ್ಟರು. ಮಧ್ಯೆ ಮಧ್ಯೆ ಕಾಫಿ, ಟೀ, ಹಣ್ಣಿನ ರಸ ಯಾವುದು ಬೇಕೋ ಅದನ್ನು ಕುಡಿಯಬಹುದು.  ವೈನ್ ಕೂಡ ಬೇಕಾದರೆ ಕುಡಿಯಬಹುದು! ಕೂತು, ಟಿವಿ ನೋಡಿ, ನಿದ್ದೆ ಮಾಡಿ, ೧೪ ಗಂಟೆ ಕಾಲ ಕಳೆದೆವು. ಅಂತೂ ೨೩ರಂದು ಬೆಳಗ್ಗೆ (ನಮ್ಮ ೨೪ರಂದು ರಾತ್ರೆ) ೮.೧೫ಕ್ಕೆ ಷಿಕಾಗೋ ತಲಪಿದೆವು. (೧೨ ಗಂಟೆ ಲಾಭ!) ಮೌತ್ ಎಂಬ ಪೈಲೆಟ್ ನಮ್ಮನ್ನು ಸುರಕ್ಷಿತವಾಗಿ ಇಳಿಸಿದರು.  ವಿಮಾನವಿಳಿದು ಹೊರಗೆ ಬಂದು ನಮ್ಮ ಸೂಟ್ಕೇಸ್ ಬರುವಿಗಾಗಿ ಕಾಯುತ್ತಿರುವ ಸ್ಥಳಕ್ಕೆ ಬಂದಾಗ ಅಲ್ಲಿ ನಗುಮುಖದೊಡೆಯ ಮಹೇಶ್ ನಿಂತದ್ದು ಕಂಡಿತು.



ಸೂಟ್ ಕೇಸ್ ಬರಲು ಅರ್ಧ ಗಂಟೆ ಕಾಯಬೇಕಾಯಿತು. ಸೂಟ್ಕೇಸ್ ಸಿಕ್ಕಿ ಅಲ್ಲಿಂದ ಹೊರಡುವಾಗ ಸಮಯ ೯.೧೫. ಕಾರೇರಿ ೧.೪೫ ಗಂಟೆ ಪಯಣಿಸಿದೆವು. ದಾರಿಯಲ್ಲಿ ವಾಹನಗಳ ಸಾಲೋ ಸಾಲು.  ಅಕ್ಷರಿ ಪರೋಟ ಮಾಡಿ ಕಳುಹಿಸಿದ್ದಳು. ಅದನ್ನು ತಿಂದೆವು. ವಿಸ್ಕಾನ್‌ಸಿನ್ ರಾಜ್ಯದ ಮಿಲ್‌ವಾಕಿ ಜಿಲ್ಲೆಯ ಓಕ್‌ಶೋರ್ ಗ್ರಾಮದಲ್ಲಿ ಟ್ಯಾಂಗಲ್‌ವುಡ್ ಬಹುಮಹಡಿ ಕಟ್ಟಡದಲ್ಲಿ ೨ನೇ ಮಹಡಿಯಲ್ಲಿ ಅಕ್ಷರಿ ಮಹೇಶರ ಮನೆ. ಮನೆ ಹಿಂದೆ ವಿಶಾಲವಾದ ಹುಲ್ಲುಹಾಸಿನ ಜಾಗವಿದೆ.  ೧೧ ಗಂಟೆಗೆ ಮನೆ ತಲಪಿದೆವು. ಮಹೇಶ ಬೇಗ ಊಟ ಮಾಡಿ ಕಚೇರಿಗೆ ಹೋದ.

  ಮನೆ ಸೇರಿ ಸ್ನಾನಾದಿ ಮುಗಿಸಿದೆವು.  ಸ್ನಾನಕ್ಕೆ ಬಾತ್ ಟಬ್, ಅದರಲ್ಲಿ ನಲ್ಲಿ ಉಪಯೋಗಿಸುವ ಕ್ರಮವನ್ನು ಅಕ್ಷರಿ ತೋರಿಸಿದಳು. ನಾವು ಒಂದು ಗಂಟೆಗೆ ಊಟ ಮಾಡಿದೆವು. ಅನಂತ ಗಡದ್ದು ನಿದ್ದೆ ಮಾಡಿದ. ನಾನು ಅಕ್ಷರಿ ಮಾತಾಡುತ್ತ ಕುಳಿತೆವು. ಸೂಟ್ ಕೇಸ್ ತೆರೆದು ತಂದ ಸಾಮಾನುಗಳನ್ನು ತೆಗೆದು ಜೋಡಿಸಿದೆವು. ಬೇರೆಯವರಿಗೆ ಕೊಡಲು ತಂದ ವಸ್ತುಗಳನ್ನು ತೊಟ್ಟೆಗೆ ತುಂಬಿಸಿ ಪ್ರತ್ಯೇಕ ತೆಗೆದಿಟ್ಟೆವು. 
  ಎದುರು ಮನೆಯ ಸ್ಯಾಂಡಿಯ ಕತೆ
ಅಕ್ಷರಿ ಮನೆಯ ಎದುರು ಭಾಗದಲ್ಲಿ ಅಮೇರಿಕನ್ನರಾದ ಸ್ಟೀವ್ ಹಾಗೂ ಸ್ಯಾಂಡಿ ದಂಪತಿ ವಾಸವಾಗಿದ್ದಾರೆ. ಸ್ಯಾಂಡಿ ನಮ್ಮ ಮನೆಗೆ ಬಂದು ನಮ್ಮನ್ನು ಮಾತಾಡಿಸಿದರು. ಒಂದೆರಡು ಕನ್ನಡ ಶಬ್ದ ಕಲಿತಿದ್ದರು! ಸ್ವಾಗತ, ಧನ್ಯವಾದ ಎಂದರು! ನಮ್ಮ ಹೆಸರನ್ನು ಬರೆದುಕೊಂಡು ಬಾಯಿಪಾಟ ಮಾಡಿದ್ದರಂತೆ. ಅಕ್ಷರಿ ಮಹೇಶರನ್ನು ಕಂಡರೆ ಅವರಿಗೆ ಬಲು ಪ್ರೀತಿ. ಇವರಿಬ್ಬರಿಗೂ ಸ್ಯಾಂಡಿ ದಂಪತಿ ಸಹವಾಸ ಬಲು ಖುಷಿ. 
  ಈ ದಂಪತಿ ಸಸ್ಯಾಹಾರಿಗಳಾಗಿ ಮಾರ್ಪಟ್ಟ ಕತೆ ಬಲು ಸ್ವಾರಸ್ಯವಾಗಿದೆ. ಅವರಿಗೆ ಪ್ರಾಣಿಗಳೆಂದರೆ ಬಲು ಅಕ್ಕರೆ. ಮನೆಯಲ್ಲಿ ಒಂದು ಬೆಕ್ಕು ಸಾಕಿದ್ದಾರೆ. ಬಾಲ್ಕನಿಯಲ್ಲಿ ಹಕ್ಕಿಗಳಿಗೆ ಕಾಳುಗಳನ್ನಿಟ್ಟಿದ್ದಾರೆ. ಹೊರಗೆ ಕೊಳದ ಬಳಿ ಇರುವ ಬಾತುಕೋಳಿಗಳಿಗೆ ಪ್ರತಿವಾರ ಬ್ರೆಡ್ ಹಾಕುತ್ತಾರೆ. ಹೀಗೆ ಬ್ರೆಡ್ ಹಾಕುತ್ತಿರಬೇಕಾದರೆ ಒಂದು ದಿವಸ ಅವರಿಗೆ ಒಂದು ಪ್ರಶ್ನೆ ತೀವ್ರವಾಗಿ ಕಾಡಿತಂತೆ. ‘ನಮ್ಮ ಕಸಿನ್‌ಗಳನ್ನು (ಕೋಳಿ, ಇತ್ಯಾದಿ) ಇವರು ತಿನ್ನುತ್ತಾರೆ. ಇವರು ಹಾಕುವ ಬ್ರೆಡ್ ನಾವು ತಿನ್ನಬೇಕಾ?’ ಎಂದು  ಬಾತುಕೋಳಿಗಳಿಗೆ ಅನಿಸಿರಬಹುದು ಎಂದು ಇಬ್ಬರೂ ಚಿಂತಿಸಿದರಂತೆ. ಅಂದಿನಿಂದ ಅವರು ಮಾಂಸಾಹಾರ ತ್ಯಜಿಸಿಯೇಬಿಟ್ಟರಂತೆ. ಸ್ಯಾಂಡಿಗೆ ಭಾರತೀಯ ಅಡುಗೆ ಖಾದ್ಯಗಳು ಬಲು ಇಷ್ಟ. ಅಕ್ಷರಿ ಮಾಡುವ ದೋಸೆ, ಇಡ್ಲಿ, ಚಪಾತಿ, ಪಲ್ಯ, ಮಜ್ಜಿಗೆಹುಳಿ ಎಲ್ಲವನ್ನೂ ಇಷ್ಟಪಟ್ಟು ತಿನ್ನುತ್ತಾರೆ. ಮಹೇಶ್ ತಯಾರಿಸುವ ಗೋಭಿಮಂಚೂರಿಗೆ ಸ್ಯಾಂಡಿ ಫಿದಾ. ನೀವಿಬ್ಬರೂ ಸೇರಿ ಇಲ್ಲಿ ಇಂಡಿಯನ್ ರೆಸ್ಟೋರೆಂಟ್ ತೆರೆಯಿರಿ ಎಂದು ಅವರಿಗೆ ಸಲಹೆ ಕೊಟ್ಟಿದ್ದರಂತೆ! ಅಕ್ಷರಿ ಮಹೇಶ ತಯಾರಿಸುವ ತಿಂಡಿಯನ್ನು  ಆಗಾಗ ಸ್ಯಾಂಡಿಗೆ ಕೊಟ್ಟು ಅವರು ಅದನ್ನು ಇಷ್ಟಪಟ್ಟು ತಿನ್ನುವ ಪರಿಗೆ ಇವರು ಖುಷಿಪಡುತ್ತಿದ್ದಾರೆ.    ಸ್ಟೀವ್ ಗೆ ಭಾರತೀಯ ಅಡುಗೆ ಇಷ್ಟವಿಲ್ಲ. ಅವರು ಬ್ರೆಡ್, ತರಕಾರಿಗಳ ಸಂಗದಲ್ಲೇ ಸುಖಿಯಾಗಿದ್ದಾರೆ.


   ಮಿಷಿಗನ್ ಲೇಕ್ 
ಸಂಜೆ ಮಹೇಶ ಮನೆಗೆ ಬಂದ ಬಳಿಕ ನಾವು ಆರೇಳು ಮೈಲಿ ದೂರದಲ್ಲಿರುವ ಮಿಷಿಗನ್ ಲೇಕಿನ ಬೆಂಡರ್ ಪಾರ್ಕ್ ಬೀಚಿಗೆ ಹೋದೆವು. ಮಿಷಿಗನ್ ಲೇಕ್ ಬಹಳ ಚೆನ್ನಾಗಿದೆ. ನೀರು ತುಂಬಿದ ಸರೋವರ ನೋಡುವುದೇ ಸೊಗಸು. ನೋಡುತ್ತ ನಿಂತರೆ ಹೊತ್ತು ಸರಿಯುವುದೇ ಗೊತ್ತಾಗುವುದಿಲ್ಲ. ನೀರು ತಣ್ಣಗೆ ಕೊರೆಯುತ್ತಿತ್ತು. ಅಲ್ಲಿ ಸ್ವಲ್ಪ ಅಡ್ಡಾಡಿದೆವು.

ಲೇಕ್ ವಿಸ್ತಾ ಪಾರ್ಕ್
   ಅಲ್ಲಿಂದ ನಾವು ಕೆಲವು ಕಿಮೀ ದೂರದಲ್ಲಿರುವ ಲೇಕಿನ ಇನ್ನೊಂದು ಭಾಗದಲ್ಲಿರುವ ಪಾರ್ಕಿಗೆ ಬಂದೆವು. ಅಲ್ಲಿ ವಿಸ್ತಾರವಾದ ಪಾರ್ಕ್ ಇದೆ. ನಡೆಯಲು ವಾಕಿಂಗ್ ಪಾತ್ ಇದೆ. ಮಕ್ಕಳಿಗೆ ಆಟವಾಡಲು ಹತ್ತಿಳಿಯಲು ಹತ್ತಾರು ಕಬ್ಬಿಣದ ಸರಳುಗಳಿವೆ. ಅದರ ಕೆಳಗೆ ರಬ್ಬರ್ ಮ್ಯಾಟ್ ಹಾಸಿದ್ದರು. ಬಿದ್ದರೂ ಮಕ್ಕಳಿಗೆ ಏಟಾಗದು. ಅಷ್ಟು ಮೆತ್ತನೆ ಹಾಸು. ಅಲ್ಲಿ ನಡೆಯುವಾಗ ಖಾಲಿಗೆ ಮೆತ್ತನೆಯ ಅನುಭವವಾಗಿ ಹಿತವಾಗುತ್ತದೆ. ಅಚ್ಚುಕಟ್ಟಾದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ಸೂಸಿ ನಾವು ಅಲ್ಲಿಂದ ಹೊರಟೆವು.


  ವಾಲ್ಮಾರ್ಟ್ ಅಂಗಡಿ
ಅನಂತನ ಲ್ಯಾಪ್ ಟಾಪ್ ಪ್ಲಗ್ ಇಲ್ಲಿಯ ಸಾಕೆಟಿಗೆ ಹೋಗುವುದಿಲ್ಲ. ಹಾಗಾಗಿ ಅಂತ ಸಾಕೇಟನ್ನು ಹುಡುಕಿ ರೂ.೬೦೦ ಕೊಟ್ಟು ತೆಗೆದದ್ದಾಯಿತು. ಭಾರತದಲ್ಲಾದರೆ ನೂರು ರೂಪಾಯಿ ಒಳಗೆ ಸಿಗುವ ವಸ್ತು ಅದು!  
    ನಿದ್ದೆ ಸಮಯದ ಗೊಂದಲ 
  ೨೪.೫.೧೮ರಂದು ಬೆಳಗ್ಗೆ ೪ ಗಂಟೆಗೇ ಎಚ್ಚರವಾಯಿತು. ಭಾರತದ ಸಮಯ ಮಧ್ಯಾಹ್ನ ೨.೩೦. ಮತ್ತೆ ನಿದ್ದೆ ಬರದೆ ೫ ಗಂಟೆಗೇ ಎದ್ದು ಕುಳಿತೆವು. ಏಕಾಗ್ರತೆಯಿಂದ ವಾಟ್ಸಪ್ ವೀಕ್ಷಣೆ ಮಾಡುತ್ತ ಕುಳಿತೆವು! ಅಲ್ಲಿ ಬೆಳಗ್ಗೆ ೫.೩೦ಕ್ಕೇ ಸೂರ್ಯ ದರ್ಶನ. ರಾತ್ರಿ ೮.೩೦ ವರೆಗೆ ಭಾಸ್ಕರ ಕಾರ್ಯನಿರತ. ಕತ್ತಲೆ ಕವಿಯುವಾಗ ರಾತ್ರೆ ೯ ಗಂಟೆ ಆಗುತ್ತದೆ. 
    ಮಧ್ಯಾಹ್ನ ೨ ಗಂಟೆಗೆ ಮಿಷಿಗನ್ ಲೇಕ್ ಬೀಚಿಗೆ ಹೋಗುವ ಬರುತ್ತೀರ ಎಂದು ಸ್ಯಾಂಡಿಯವರ ಕ್ಷಿಪ್ರ ಸಂದೇಶ ಬಂತು. ಊಟದನಂತರ ನಿದ್ದೆ ಗೊಂದಲ ಬೇಡವೆಂದು ಬರುತ್ತೇವೆ ಎಂದು ಉತ್ತರ ಕೊಟ್ಟೆವು.  
 ಮಿಷಿಗನ್ ಬೀಚ್ (ಗ್ರಾಂಟ್ ಪಾರ್ಕ್ ಬೀಚ್)
  ಓಕ್‌ಶೋರ್ ಮನೆಯಿಂದ ಸುಮಾರು ನಾಲ್ಕೈದು ಮೈಲಿ ದೂರದಲ್ಲಿರುವ ಗ್ರಾಂಟ್ ಪಾರ್ಕ್ ಬೀಚಿಗೆ ಸ್ಯಾಂಡಿ ಜೊತೆ ನಾವು ಮೂವರು ಹೋದೆವು.  ನದಿಯ ಸುತ್ತ ಮರಳಿನಲ್ಲಿ ೨ ಮೈಲು ನಡೆದೆವು. ಜೋರಾದ ಬಿಸಿಲಿದ್ದರೂ ನೀರಿನ ಬಳಿಯಾದ ಕಾರಣ ಸೆಖೆಯೆನಿಸಲಿಲ್ಲ. ನೀರಿಗೆ ಕಾಲು ಹಾಕಿದಾಗ ಚಳಿಯಿಂದ ಕಾಲು ಹೊರಗೆ ಎಳೆದುಕೊಳ್ಳುವಂತಾಯಿತು.  ಅಷ್ಟು ತಂಪು ನೀರು. ಸ್ವಲ್ಪಹೊತ್ತು ನೀರೊಳಗೆ ಕಾಲು ಹಾಕಿ ಕೂತಾಗ ಆ ಚಳಿಗೆ ಹೊಂದಿಕೊಂಡು ಸುಖವೆನಿಸಿತು. ತೀರದಲ್ಲಿ ಚಂದ ಚಂದದ ಕಲ್ಲು ಹೆಕ್ಕಿದೆವು. ದೊಡ್ಡದಾದ ಸರೋವರ. ನೀರು ಸ್ವಚ್ಛ ಶುಭ್ರ ನೀಲಿ ಬಣ್ಣ. ಎಷ್ಟು ನೋಡಿದರೂ ಕಣ್ಣು ತಣಿಯದು. ಕೆಲವರು ಸ್ವಂತ ಬೋಟಿನಲ್ಲಿ ವಿಹಾರ ನಡೆಸುತ್ತಿದ್ದರು. ಇನ್ನು ಕೆಲವರು ನೀರಲ್ಲಿ ಈಜುತ್ತಿದ್ದರು. 
ನಾಲ್ಕು ಗಂಟೆಗೆ ನಾವು ಹೊರಟೆವು. ಕಾರು ಹತ್ತುವ ಮುನ್ನ ಕಾಲು ಹಾಗೂ ಚಪ್ಪಲಿಯಲ್ಲಿದ್ದ ಮರಳನ್ನೆಲ್ಲ ಕೊಡವಿದೆವು. ಕೊಡವಿದರೂ ಹೋಗದೆ ಇದ್ದ ಮರಳನ್ನು ಟಿಷ್ಯೂಪೇಪರ್ ಬಳಸಿ ಚೊಕ್ಕಗೊಳಿಸಿ ಕಾರು ಹತ್ತಿದೆವು.



   ಸಂಜೆ ಅಕ್ಕಿ ರೊಟ್ಟಿ ಮಾಡಿದೆ. ಸ್ಯಾಂಡಿಗೂ ಕೊಟ್ಟೆವು. ಅವರಿಗೆ ಬಹಳ ಇಷ್ಟವಾಯಿತು.  ರಾತ್ರೆ ಮಹೇಶ ಚಿತ್ರಾನ್ನ ಮಾಡಿದ. ಅವನಿಗೆ ಅಡುಗೆ ಮಾಡಲು ಉತ್ಸಾಹ. ಹಾಗೂ ಅಡುಗೆ ಮಾಡುವುದನ್ನು ಕ್ರಮಪ್ರಕಾರವಾಗಿ ಬಲು ರುಚಿಯಾಗಿ ಮಾಡುತ್ತಾನೆ.

ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ