ಮಂಗಳವಾರ, ಡಿಸೆಂಬರ್ 3, 2019

ಅಮೇರಿಕಾ ಪರ್ಯಟನ ಭಾಗ ೬

    ಅಮೃತಾನಂದಮಯೀ ಆಶ್ರಮ  (M.A. CENTER 41w501, keslinger Rd, Elburn. IL 60119 USA phone +16303875077
 ೨೪-೬-೧೮ರಂದು ಬೆಳಗ್ಗೆ ೭ ಗಂಟೆಗೆ ಎದ್ದು ತಯಾರಾಗಿ, ಹೊಟೇಲ್ ವತಿಯಿಂದ ಸಿಕ್ಕ ಉಪಾಹಾರ ಹೊಟ್ಟೆಗೆ ಹಾಕಿಕೊಂಡು ೧೦ಗಂಟೆಗೆ ಅಲ್ಲಿಂದ ಹೊರಟು ಅರೋರದಿಂದ ೮ಕಿಮೀ ದೂರವಿದ್ದ ಅಮೃತಾನಂದಮಯೀ ಆಶ್ರಮಕ್ಕೆ ಹೋದೆವು. ದೂರದಿಂದಲೇ ಎಂಎ ಸೆಂಟರ್ ಎಂಬ ನೀಲಿ ಗೋಪುರ ಕಾಣುತ್ತಲಿತ್ತು. ಅಮೇರಿಕಾದಲ್ಲಿ ಹೆಚ್ಚಿನ ಊರುಗಳಲ್ಲೂ ಆಯಾ ಊರಿನ ಹೆಸರಿನ ಇಂಥ ಗೋಪುರ ಗಮನಿಸಿರುವೆ. ಸುಂದರ ಪ್ರಶಾಂತ ಪರಿಸರದಲ್ಲಿ ಆಶ್ರಮವಿದೆ.  ಆ ಸಮಯದಲ್ಲಿ ಅಮೃತಾನಂದಮಯೀ ದೇವಿಯವರು ಅಲ್ಲಿ ಬಂದಿದ್ದರು. ವೇದಿಕೆಗೆ ಬಂದು ೧ ಗಂಟೆ ಧ್ಯಾನಕ್ಕೆ ಕುಳಿತರು. ಭಕ್ತರೂ ಧ್ಯಾನ ಮಗ್ನರಾದರು. ನಾವೂ ಸ್ವಲ್ಪ ಹೊತ್ತು ಕಣ್ಣುಮುಚ್ಚಿ ಕೂತೆವು. ಧ್ಯಾನಕ್ಕೆ ಕೂರುವುದೆಂದರೆ ನನಗೆ ಬಹಳ ಕಷ್ಟ.   ಮತ್ತು ಬಲು ದೀರ್ಘಸಮಯವದು.   ಯಾರೆಲ್ಲ ಧ್ಯಾನಮಗ್ನರಾಗಿದ್ದಾರೆಂದು ನೋಡುವ ಹಂಬಲ ತಡೆಯಲಾರದೆ ಆಗಾಗ ಒಂದು ಕಣ್ಣು ತೆರೆದು ನೋಡುತ್ತಲಿದ್ದೆ!  ಎಲ್ಲರೂ ಧ್ಯಾನಮಗ್ನರಾಗಿದ್ದಾರೆ ನಮ್ಮನ್ನು ನೋಡಲು ಸಾಧ್ಯವಿಲ್ಲವೆಂದು (ಕನಕದಾಸರು ಬಾಳೆಹಣ್ಣು ತಿನ್ನದ ಕಥೆ ನೆನಪಾದರೂ!)  ಮೆಲ್ಲನೆ ಎದ್ದು ನಾವು  ೧೧.೪೫ಕ್ಕೆ ಹೊರಬಂದೆವು. ನಮಗೆ ಸಮಯದ ಅಭಾವವಿದ್ದುದರಿಂದ ಅಲ್ಲಿ ಹೆಚ್ಚು ಹೊತ್ತು ಇರಲು ಸಾಧ್ಯವಾಗಲಿಲ್ಲ. ಅದೇ ದಿನ ಮುಂದೆ ಕೆಲವು ಸ್ಥಳಗಳಿಗೆ ಹೋಗಿ ರಾತ್ರೆಯೊಳಗೆ ಮನೆ ತಲಪಲೇಬೇಕಿತ್ತು. ವಿದೇಶದಲ್ಲಿ ಅಮ್ಮನ ಭೇಟಿ ಕಾರ್ಯಕ್ರಮ ಯಾವ ರೀತಿ ಇರುತ್ತದೆ ಎಂದು ತಿಳಿದು ಖುಷಿ ಪಟ್ಟೆವು.
  ಸಭಾಂಗಣದೊಳಗೇ ಒಂದು ಬದಿಯಲ್ಲಿ ವಸ್ತು ಮಾರಾಟ, ತಿಂಡಿ ತಿನಿಸು ಮಾರಾಟ ಹಾಗೂ ತಿನ್ನುವ ಸ್ಥಳ ಇತ್ತು .









  ಅಮೃತಾನಂದಮಯೀ ದೇವಿ ಅಮ್ಮನ ಬಗ್ಗೆ ಸ್ಥೂಲ ಪರಿಚಯ ಕೊಡಲೇಬೇಕು. (ಇದು ಎ.ಪಿ ಮಾಲತಿಯವರ ಲೇಖನಿಯಿಂದ ಹಾಗೂ ಸಹಕಾರ ಎಪಿ ಲಲಿತಾ):  ನಮ್ಮ ನೆಲದ ಸ೦ಸ್ಕೃತಿಯ ಪುನರೋತ್ಥಾನಕ್ಕೆ ಮನುಕುಲದ ಉದ್ಧಾರಕ್ಕಾಗಿ ಆಗಾಗ ಜನ್ಮವೆತ್ತುವ ಸ೦ತರು, ಮಹಾತ್ಮರು, ಅವತಾರಪುರುಷರ೦ತೆ ಮಾತಾ ಅಮೃತಾನ೦ದಮಯಿ ಅವರೂ ಕೇರಳದ ವಳ್ಳಿಕಾವ್ ನಲ್ಲಿ ಜನ್ಮವೆತ್ತಿ ಬಂದಿದ್ದಾರೆ.  ಅವರ ಪ್ರೀತಿ, ಪ್ರೇಮ, ಕರುಣೆಗಳ ಪರಿಯನ್ನು, ಲೋಕಕಲ್ಯಾಣದ ಕಾರ್ಯವನ್ನು ಶಬ್ದಗಳಲ್ಲಿ ವಿವರಿಸುವುದು ಕಷ್ಟ ಸಾಧ್ಯ. ಅವರ ಕರುಣೆ ತು೦ಬಿದ ಕಣ್ಣುಗಳಲ್ಲಿ ಪ್ರೀತಿ, ವಿಶ್ವಾಸದ ಧಾರೆ, ನಗುವಿನಲ್ಲಿ ವಾತ್ಸಲ್ಯದ ಅಮೃತ ವರ್ಷ, ಸ್ಪರ್ಶದಲ್ಲಿ ಹೊಸ ಚೇತನ, ಆಲಿ೦ಗನದಲ್ಲಿ ಇಹವನ್ನು ಮರೆಯುವ ಭಾವ. ಆರ್ತರಾಗಿ ಬ೦ದವರಿಗೆ ತಮ್ಮ ಅಭಯಹಸ್ತವೀಯುವ ಕರುಣಾಮಯಿ. “ಪ್ರೇಮದಿ೦ದ ಮಾಡುವ ಸೇವೆಗೆ ಜಾತಿ ಮತ ಭೇದವಿಲ್ಲ. ಪರಿಶುದ್ದ ಹೃದಯದಲ್ಲಿ ಸೇವೆ, ತ್ಯಾಗದ ಮಹತ್ತ್ವ ಅರಿಯಿರಿ. ನಾವೆಲ್ಲರೂ ಒ೦ದೇ ಸೂತ್ರದಲ್ಲಿ ಬ೦ಧಿಸಿದ ಮಣಿಗಳು” ಎನ್ನುತ್ತಾರೆ ಅವರು. ಇನ್ನೂ ಅರುವತ್ತಾರರ ಹರಯದ ಅಮ್ಮ ಆಗಲೇ ತಮ್ಮ ಅಗಾಧ ಜನಸೇವಾ ಕಾರ್ಯಕ್ರಮಗಳಿಂದ ಮಹಾವೃಕ್ಷದ೦ತೆ ಬೆಳೆದು ಜಗತ್ತಿನಾದ್ಯ೦ತ ಪ್ರೀತಿ, ಕರುಣೆ ಎಂಬ ರೆ೦ಬೆ ಕೊ೦ಬೆಗಳ ಕೈ ಚಾಚಿದ್ದಾರೆ. ಒಬ್ಬ ವ್ಯಕ್ತಿ ಅಥವಾ ಒ೦ದು ಸ೦ಘ ಹಲವು ಜನ್ಮವೆತ್ತಿ ಬ೦ದರೂ ಮಾಡಲಾಗದಷ್ಟು ಸಮಾಜ ಕಲ್ಯಾಣ ಸೇವೆಗಳನ್ನು ಅಮ್ಮ ತಮ್ಮ ಜೀವನದಲ್ಲಿ ಮಾಡಿದ್ದಾರೆ, ಹಾಗೂ ಈಗಲೂ ಮಾಡುತ್ತಿದ್ದಾರೆ. 
       ಪ್ರಚಲಿತ ದಿನಗಳಲ್ಲಿ ಧರ್ಮ- ಸ೦ಸ್ಕೃತಿಗಳ ಪ್ರಚಾರದೊ೦ದಿಗೆ ಲೋಕ ಕಲ್ಯಾಣಕ್ಕಾಗಿಯೇ ತಮ್ಮನ್ನು ತೆರೆದುಕೊ೦ಡ ಅವರ ಭಗವದ್ಭಕ್ತಿಯಲ್ಲಿ ವಿಪುಲವಾದ ಆಧ್ಯಾತ್ಮಿಕ ಚಿ೦ತನೆಗಳಿವೆ. ಭಗವ೦ತನ ಇರುವಿಕೆ ಎಷ್ಟು ಸತ್ಯವೋ ಅಷ್ಟೇ ಬಡ, ದೀನ ದಲಿತರ, ನೋವು, ಕಷ್ಟ ಅಸಹಾಯ ಸ್ಥಿತಿಯಲ್ಲಿರುವವರ ಸೇವಾಕಾರ್ಯ ಮಾಡುವುದೂ ಜೀವನದ ಪರಮ ಶ್ರೇಷ್ಟ ಸತ್ಯವೆ೦ದು ನ೦ಬಿದವರು.  ಅವರೊಬ್ಬ ಉತ್ತಮ ಸಮಾಜ ಸ೦ಘಟಕಿ, ನಿಷ್ಟಾವ೦ತ ಸಮಾಜಸೇವಕಿ! ಅವರಲ್ಲಿ  ಶ್ರೀರಾಮಕೃಷ್ಣ ಪರಮಹ೦ಸರ ಅದ್ವೈತ ಭಾವ, ಭಕ್ತಿಯ ಪರಾಕಾಷ್ಠೆ; ಸ್ವಾಮಿ ವಿವೇಕಾನಂದರ ಧೀ:ಶಕ್ತಿ, ಧಮ೯ ಪ್ರಚಾರದ ಚಾತುರ್ಯ; ಶಾರದಾಮಾತೆಯವರ ತ್ಯಾಗ, ಅಪಾರ ಕರುಣೆ-ವಾತ್ಸಲ್ಯದಿಂದ ಈ ಮೂವರು ಮಹಾ ಚೇತನದ ಸಂಗಮವಾಗಿ ದೀನ ದಲಿತರ ಸೇವೆಗಾಗಿ ವ್ಯಾಕುಲಗೊಳ್ಳುವ ಹೃದಯವಿದೆ. ಅಮ್ಮ ಎಂದರೆ  ಪ್ರೀತಿ, ದಯೆ, ಪ್ರೇಮಗಳ ಅನಂತ ಆಕಾಶ.
ಅಮ್ಮನ ಹೃದಯ ಕರುಣೆಯ ಕಡಲು, ಪ್ರೀತಿಯ ಮಡಿಲು.  ತಮ್ಮ ದರ್ಶನ ಆಲಿ೦ಗನಕ್ಕೆ ಯಾರೇ ಬರಲಿ, ಜಾತಿ, ಮತ, ಬಡವ ಶ್ರೀಮ೦ತ, ರೋಗಿಷ್ಟ, ಕೊಳಕ, ಅಲೆಮಾರಿ ಎನ್ನುವ ಭೇದವಿಲ್ಲದೆ ಅವರಿಗೆಲ್ಲ ಪ್ರೀತಿ, ನೆಮ್ಮದಿಯಿತ್ತು ಕಳುಹಿಸುತ್ತಾರೆ. ಜನದರ್ಶನ ಇರುವ ಸಮಯದಲ್ಲಿ ದಿನದ ೧೮-೨೦ ಗ೦ಟೆಗಳ ಕಾಲ, ಕೆಲವೊಮ್ಮೆ ಪೂರಾ ಇಪ್ಪತ್ನಾಲ್ಕು ಗ೦ಟೆ ಕುಳಿತ ಭ೦ಗಿ ಬದಲಿಸದೆ ನಗುಮೊಗದಲ್ಲಿ ಭಕ್ತರನ್ನು ತಮ್ಮ ಮಡಿಲಿಗೆ ಎಳೆದುಕೊ೦ಡು, ಅವರ ಧ್ವನಿಗೆ ತಮ್ಮ ಧ್ವನಿ ಸೇರಿಸಿ, ಅವರ ಕಣ್ಣುಗಳಲ್ಲಿ ತಮ್ಮ ಕಣ್ಣುಗಳನ್ನಿರಿಸಿ, ಅವರ ನೋವನ್ನು ಮರೆಸಿ, ಹೊಸ ಚೈತನ್ಯ ತು೦ಬಿಸುತ್ತಾರೆ. ಇದು ನೋಡುಗರಿಗೆ ವಿಸ್ಮಯವೆನಿಸುತ್ತದೆ. ಜನಸಾಮನ್ಯರಿಂದ ಸಾಧ್ಯವಾಗುವ ಕೆಲಸವಲ್ಲ ಇದು. ಅಮ್ಮನವರಿಗಷ್ಟೇ ಇದು ಸಾಧ್ಯವಾಗುವಂಥದು. 
ಅಮ್ಮ ಜಗತ್ತಿನಾದ್ಯ೦ತ ನಿರಂತರ ಸತ್ಸಂಗ ಭಜನೆ  ಸನಾತನ ಧರ್ಮ-ಸ೦ಸ್ಕೃತಿ, ಉನ್ನತ ಜೀವನ ಮೌಲ್ಯಗಳನ್ನು ಪ್ರಸರಿಸಲು ಧರ್ಮ ಪ್ರವರ್ತಕರಾಗಿ ಸದಾ ಕಾರ್ಯಶೀಲರಾಗಿರುತ್ತಾರೆ. ಎಲ್ಲ ಕಡೆಯೂ ಲಕ್ಷೋಪಲಕ್ಷ ಜನರು ಅವರ ಸತ್ಸಂಗ ಭಜನೆಯಲ್ಲಿ ಪಾಲ್ಗೊಂಡು, ಅವರ ದಿವ್ಯಾಲಿ೦ಗನದ ಅನುಭವ ಪಡೆದು ಕೃತಾರ್ಥರಾಗುತ್ತಾರೆ. ಅಮ್ಮನ ಮಾನವೀಯ ಅ೦ತಃಕರಣದ ಸೇವೆ ನಿಜಕ್ಕೂ ಅನುಕರಣೀಯ. ಅವರ ಸ೦ಸ್ಥೆಯಾದ ಮಾತಾ ಅಮೃತಾನ೦ದಮಯಿ ಮಠದ ಸೇವಾಕಾರ್ಯಗಳು, ಬೃಹತ್ ಯೋಜನೆಗಳು ಬಹು ದೊಡ್ಡ ವೃಕ್ಷವಾಗಿ ಬೆಳೆಯುತ್ತಿದ್ದು ದೇಶ ವಿದೇಶದ ಲಕ್ಷಾ೦ತರ ಮ೦ದಿ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಮುಖ್ಯವಾಗಿ ದುರ್ಬಲರು, ಬಡವರಿಗಾಗಿ ಉಚಿತ ಅಮೃತ ಕುಟೀರಗಳ ನಿರ್ಮಾಣ. ಅಮೃತ ಆಸ್ಪತ್ರೆಗಳು, ವ್ಶೆದ್ಯಕೀಯ ನೆರವು, ರೋಗಿಗಳಿಗೆ ಉಚಿತ ಚಿಕಿತ್ಸೆ, ಅಮೃತ ಮೆಡಿಕಲ್ ಸೆ೦ಟರ್ಸ್, ಕ್ಯಾನ್ಸರ್ ಪೀಡಿತರಿಗೆ ಅಮೃತ ಕೃಪಾಸಾಗರ, ಅಮೃತ ಸೇವಾಶ್ರಮ, ಅಮೃತ ವೃದ್ಧಾಶ್ರಮ, ಅಮೃತ ಅನಾಥಾಶ್ರಮ, ಅಮೃತನಿಧಿಯಿ೦ದ ಬಡ ಮತ್ತು ವಿಶೇಷ ಬುಡಕಟ್ಟು ಜನಾ೦ಗದವರಿಗಾಗಿ ಸೌಲಭ್ಯಗಳು ಮತ್ತು ದುರ್ಬಲ ವರ್ಗದ ಲಕ್ಷ ಲಕ್ಷ  ಮಹಿಳೆಯರಿಗೆ, ವಿಕಲ ಚೇತನರಿಗೆ ಜೀವಾವಧಿ ಪಿಂಚಣಿ ವ್ಯವಸ್ಥೆ; ಮಹಾರಾಷ್ಟ್ರ, ಆ೦ಧ್ರ, ಹೈದರಾಬಾದ್ ಮು೦ತಾದ ದೊಡ್ಡ ನಗರಗಳ ಸ್ಲಮ್‌ನಲ್ಲಿ ಸ್ವಚ್ಛತಾ ಕಾರ್ಯ, ಮನೆಗಳ ನಿರ್ಮಾಣದ ಯೋಜನೆ; ಅಮೃತಶ್ರೀ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ, ಕರಕುಶಲ ವಸ್ತುಗಳ ತಯಾರಿಕೆ, ಪ್ಲಂಬಿಂಗ್. ಮೇಸ್ತ್ರೀಕೆಲಸ, ಇಲೆಕ್ಟ್ರಿಶಿಯನ್, ಕಂಪ್ಯೂಟರ್ ಮುಂತಾದ ವೃತ್ತಿ ಕೌಶಲ್ಯದ ಆಧುನಿಕ ಶಿಕ್ಷಣ ತರಬೇತಿ ನೀಡಲಾಗುತ್ತಿದೆ.  ವಳ್ಳಿಕಾವು, ಕೊಚ್ಚಿ, ಮೈಸೂರು ಮುಂತಾದ ಕಡೆ ಅಮೃತ ಹೈಟೆಕ್ ಆಸ್ಪತ್ರೆಗಳಿದ್ದು ಬಡವರಿಗೆ ಉಚಿತ ವೈದ್ಯಕೀಯ ನೆರವು, ವಿಮಾ ಯೋಜನೆಯ ವ್ಯವಸ್ಥೆ ಇರುವುದು ಅಮ್ಮನ ಕಾರುಣ್ಯಕ್ಕೆ ಸಾಕ್ಷಿ. ಮದ್ಯವ್ಯಸನಿಗಳು ಅಮ್ಮನ ಕರುಣೆಯ ಸ್ಪರ್ಶದಿಂದಲೇ ಗುಣಮುಖರಾದ ಅಸಂಖ್ಯ ಉದಾಹರಣೆಗಳಿವೆ. 
   ದೇಶದ ಯಾವುದೇ ಭಾಗದಲ್ಲಿ ಬರಗಾಲ, ಪ್ರವಾಹ, ಭೂಕ೦ಪ, ಅತಿವೃಷ್ಟಿ ಸ೦ಭವಿಸಲಿ ಅಲ್ಲಿ ಅಮ್ಮನ ಮಠವು ಮಾಡಿದ ಸೇವಾಕಾರ್ಯ ಅನನ್ಯವಾದದ್ದು. ೨೦೦೫ರಲ್ಲಿ ಸುನಾಮಿ ದುರ್ಘಟನೆಯಲ್ಲಿ ಅಪಾರ ಆಸ್ತಿಪಾಸ್ತಿ ಹಾನಿ, ಸಾವು ನೋವು ಸ೦ಭವಿಸಿದಾಗ ನೂರುಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ವಸಿತರಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿಯವರ ಸ್ವಚ್ಚ ಭಾರತ ಮತ್ತು ನಮಾಮಿ ಗಂಗೆ ಸ್ವಚ್ಚತಾ ಆಂದೋಲನಕ್ಕೆ ನೂರುಕೋಟಿಯ ನೆರವು  ನೀಡಿದ್ದಾರೆ. ಕೇರಳದಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಶೌಚಾಲಯ ನಿರ್ಮಿಸಿ ಕೊಟ್ಟಿದ್ದಾರೆ. 
    ಅಮೃತ ಯುವ ಧರ್ಮಧಾರಾ ಯೋಜನೆಯ ಮೂಲಕ ೧೫-೩೫ ವರ್ಷಗಳ ಒಳಗಿನ ಯುವಜನತೆ ನಮ್ಮ ಧರ್ಮ, ಸಂಸ್ಕೃತಿ, ದೇಶ. ಪ್ರಕೃತಿ, ಪರಿಸರ ಉಳಿಯುವಂತೆ, ಶಾಂತಿ, ಸೌಹಾರ್ದ, ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದು, ಪ್ರೀತಿ, ಕರುಣೆಯಲ್ಲಿ ಬಾಳುವಂತೆ ಮಾಡುವುದು ಮುಖ್ಯ ಗುರಿ. ವಿದ್ಯೆಯ ನಿಜ ಅರ್ಥವೆಂದರೆ ಹೃದಯ ಪರಿವರ್ತನೆ. ಆಧ್ಯಾತ್ಮಿಕ ತಿಳುವಳಿಕೆ. ಸಂಸ್ಕೃತಿ, ಸಂಸ್ಕಾರಗಳ  ಬೋಧನೆ, ಧೈರ್ಯ, ಭರವಸೆಯ ಚಿಂತನೆ, ಯುವ ಜನತೆ ತಮ್ಮ ಜೀವನದ ಉದ್ದೇಶ ಅರ್ಥ ಮಾಡಿಕೊಳ್ಳಲು ಪ್ರೇರಣೆ ಈ ಸಂಘದಲ್ಲಿ ಲಭಿಸುತ್ತದೆ. 
    ಶಿಕ್ಷಣ ಕ್ಷೇತ್ರದಲ್ಲೂ ಅವಿರತ ಸಾಧನೆ ಸಾಧಿಸಿದ್ದಾರೆ. ಅಮೃತ ವಿಶ್ವ ವಿದ್ಯಾಲಯ೦ನಲ್ಲಿ ಬಾಲವಿಕಾಸದಿ೦ದ ಉನ್ನತ ಶಿಕ್ಷಣದ ತನಕ ಅಧ್ಯಯನಕ್ಕೆ ಅವಕಾಶಗಳಿವೆ. ವಿಶ್ವವಿದ್ಯಾಲಯ ಸ್ಥಾಪನೆಯಾದ ಹದಿನೈದೇ ವರ್ಷಗಳಲ್ಲಿ ಈ ಬಾರಿ ಭಾರತದ ಎಂಟನೆಯ ಶ್ರೇಷ್ಠ ವಿಶ್ವವಿದ್ಯಾಲಯ ಎಂಬ ಮಾನ್ಯತೆ ಪಡೆದಿರುವುದು ಮತ್ತು ಸ್ವಚ್ಛ ಕ್ಯಾಂಪಸ್ಸಿನಲ್ಲಿ ಮೊದಲ ಸ್ಥಾನ ಗಳಿಸಿರುವುದು ಅಮ್ಮನ ದೂರದೃಷ್ಟಿಗೆ ಸಾಕ್ಷಿ. ನ್ಯಾನೋ ಟೆಕ್ನಾಲಜಿ ವಿಷಯದ ಉತ್ಕೃಷ್ಟ ಸಂಶೋಧನೆಯಲ್ಲಿ ವಿಶ್ವದಲ್ಲಿ ಮುಂಚೂಣಿಯಲ್ಲಿದೆ. ಅಮೃತ ವಿಶ್ವವಿದ್ಯಾಪೀಠವು ಹಾರ್ವರ್ಡ್, ಪ್ರಿನ್ಸ್‌ಟನ್, ಬಫಲ್ಲೋ, ಕ್ಯಾಲಿಫ಼ೋರ್ನಿಯಾ ಇತ್ಯಾದಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಉನ್ನತ ಶಿPಣ, ಸಂಶೋಧನಾ ಕಾರ್ಯಕ್ರಮಗಳನ್ನು ಆರಂಭಿಸಿದೆ. 
  ತಮ್ಮ ನಿಸ್ವಾರ್ಥಸೇವೆಗೆ ರಾಷ್ಟ್ರೀಯ-ಅ೦ತರಾಷ್ಟ್ರೀಯ ಮನ್ನಣೆಗೂ ಪಾತ್ರರಾದ  ಅಮ್ಮನವರಿಗೆ  ಜಿನೀವಾದ  ಗಾ೦ಧೀ -ಕಿ೦ಗ್ ಪ್ರಶಸ್ತಿ, ಹಿ೦ದೂ ಪುನರೋತ್ಥಾನ ಪ್ರಶಸ್ತಿ, ನ್ಯೂಯಾರ್ಕ್‌ನ ಜೇಮ್ಸ್ ಪಾರ್ಕ್ಸ್ ಮಾರ್ಟಿನ್ ಇ೦ಟರ್‌ಫ಼ೇತ್  ಪ್ರಶಸ್ತಿ ಇತ್ಯಾದಿಗಳು ಲಭಿಸಿವೆ. ಅಮ್ಮನ ಮಾನವ ಸೇವಾಕಾರ್ಯಗಳಿಗೆ ಪಾರಿತೋಷಕವಾಗಿ ಬಫ಼ಲ್ಲೊ ಯೂನಿವರ್ಸಿಟಿ ಅಮ್ಮನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಸರ್ವಧರ್ಮ ಸಮ್ಮೇಳನ, ಶಾ೦ತಿಸಮ್ಮೇಳನಗಳಲ್ಲಿ ಅವರು ಧರ್ಮ- ಶಾ೦ತಿ-ಸಾಮರಸ್ಯ ಕುರಿತು ವಿಶ್ವಕ್ಕೇ ಬೋಧಿಸುವ ಉಪನ್ಯಾಸ ನೀಡಿದ್ದು ಭಾರತಕ್ಕೇ ಹೆಮ್ಮೆಯ ಸ೦ಗತಿ. “ವಿವಿಧತೆಯನ್ನು ಮಾನ್ಯ ಮಾಡಿ, ಪರಸ್ಪರ ಗೌರವಿಸಿರಿ” ಇದು ಅಮ್ಮನ ತತ್ತ್ವ ಸಂದೇಶ. 
     ೨೦೦೨ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಸಹಸ್ರಮಾನ ವಿಶ್ವಶಾ೦ತಿ ಸಮ್ಮೇಳನದಲ್ಲಿ  ಅಮ್ಮ ಹೇಳಿದ್ದು, “ಪರಿವರ್ತನೆಯ ಆಕಾ೦ಕ್ಷೆ  ಹೊತ್ತ ನಾವು ಹೊಸ ಸಹಸ್ರಮಾನಕ್ಕೆ ಕಾಲಿಡುತ್ತಿದ್ದೇವೆ. ಇಸವಿಯ ಅ೦ಕೆ ಬದಲಾಗಿದೆಯೇ ಹೊರತು ಇನ್ನೇನೂ ಇಲ್ಲ. ನಿಜವಾದ ಬದಲಾವಣೆ ನಮ್ಮ  ಅ೦ತರ೦ಗದಲ್ಲಿ ಆಗಬೇಕು. ನಮ್ಮೊಳಗಿನ ಸ೦ಘರ್ಷ, ವಿನಾಶಕಾರಿ ವಿಚಾರಗಳ ನಿವಾರಣೆಯಾದರೆ ನಾವು ಶಾ೦ತಿಯತ್ತ ಸಾಗಬಲ್ಲೆವು.” ಅಮ್ಮ ಬಯಸುವುದು ವಿಶ್ವಸಮರವನ್ನಲ್ಲ. ವಿಶ್ವಶಾ೦ತಿಯನ್ನು. 

ಬಾಲಾಜಿ ದೇವಾಲಯ (sri venkateshwara Swami (balaji) temple, 1145, Sullivan Rd, Aurora, IL 60506, USA 
ಅಮೃತಾನಂದಮಯೀ ಆಶ್ರಮದಿಂದ ಸುಮಾರು ೬ ಮೈಲಿ ದೂರದಲ್ಲೇ ಇದ್ದ ಅರೋರದ ಬಾಲಾಜಿ ದೇವಾಲಯಕ್ಕೆ ಹೋದೆವು. ಭವ್ಯವಾದ   ಬೃಹತ್ ದೇವಾಲಯ. ಅಲ್ಲಿ ಶಿವ, ಬಾಲಾಜಿ ದೇವರಿಗೆ ಪೂಜೆ ನಡೆಯುತ್ತಲಿತ್ತು. ನಾವು ತೀರ್ಥ ಪ್ರಸಾದ ತೆಗೆದುಕೊಂಡು ಅಲ್ಲಿಯ ಕೆಫೆಟೇರಿಯಾಗೆ ಹೋದೆವು. ಪೊಂಗಲ್, ಉಪ್ಪಿಟ್ಟು, ದೋಸೆ, ವಡೆ ತಿಂದೆವು. ಅಲ್ಲಿ ಬಹಳ ಕಡಿಮೆ ದರದಲ್ಲಿ ಉತ್ಕೃಷ್ಟ ತಿಂಡಿ ಊಟ ದೊರೆಯುತ್ತದೆ. ದೇವರನ್ನು ನೋಡಿ ನಮ್ಮ ಹೊಟ್ಟೆಯೊಳಗಿನ ಪರಮಾತ್ಮನನ್ನೂ ತೃಪ್ತಿಪಡಿಸಿಕೊಂಡು ಅಲ್ಲಿಂದ ೧.೩೦ಗೆ ಹೊರಟೆವು.




ಶೆಡ್ ಅಕ್ವೇರಿಯಂ (shed aquarium 1200 South Lake Shore Dr. Chicago,IL, 60605 USA 
ನಾವು ಶಿಕಾಗೊ ಡೌನ್ ಟೌನ್‌ನಲ್ಲಿ ಕಾರ್ ಪಾರ್ಕ್ ಮಾಡಿ ಉಬರ್ ಬಾಡಿಗೆ ಕಾರಿನಲ್ಲಿ ಶೆಡ್ ಅಕ್ವೇರಿಯಂ ಗೆ ಹೋದೆವು. ೩ಗಂಟೆಯಿಂದ ೫ ಗಂಟೆವರೆಗೆ ನಾವು ಅಕ್ವೇರಿಯಂ ಸುತ್ತಿದೆವು. ೪ಡಿ ಶೋ, ತಿಮಿಂಗಿಲದ ಆಟ ನೋಡಿದೆವು. ವಿವಿಧ ಬಗೆಯ ಮೀನುಗಳನ್ನು ನೋಡಿದೆವು. ಅಲ್ಲಿ ಒಬ್ಬಳು ಮರ ಹಾವನ್ನು ಕೈಯಲ್ಲಿ ಹಿಡಿದು ಕೂತಿದ್ದಳು.
 ಶೆಡ್ ಅಕ್ವೇರಿಯಂ ಹೊರಗೆ ಮೀನಿನ ಪ್ರತಿಕೃತಿಯನ್ನು ಪ್ಲಾಸ್ಟಿಕ್  ಕಸದಿಂದ ತಯಾರಿಸಿದ್ದನ್ನು ಇಟ್ಟಿದ್ದರು. ಒಳಗೆ ಅಲ್ಲಲ್ಲಿ ಬೇಡದ ಕಸದಿಂದ ಸುಮಾರು ಪ್ರತಿಕೃತಿಗಳನ್ನು ಮಾಡಿ ಇಟ್ಟು, ಪ್ಲಾಸ್ಟಿಕ್ ಉಪಯೋಗದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು.












  ವಿಶಾಲವಾದ ಒಳಾಂಗಣದಲ್ಲಿ ೩೦ಮೇ ೧೯೩೦ರಂದು ಶೆಡ್ ಅಕ್ವೇರಿಯಂ ತೆರೆಯಲ್ಪಟ್ಟಿತು. ಇದು ೫೦೦೦೦೦೦ ಗ್ಯಾಲನ್ಗಳಷ್ಟು ನೀರು ಹೊಂದಿರುವ ಅತಿ ದೊಡ್ಡ ಅಕ್ವೇರಿಯಂ. ಇಲ್ಲಿ, ಕಡಲ ಸಸ್ತನಿಗಳು, ಮೀನು, ಪಕ್ಷಿಗಳು, ಹಾವುಗಳು, ಉಭಯಚರಗಳು, ಕೀಟಗಳು ಸೇರಿದಂತೆ ೧೫೦೦ ಪ್ರಭೇದಗಳಿವೆ.  ಗ್ರಹಾಮ್, ಅಂರ್ಡರ್ಸನ್, ಪ್ರೊಟ್ಸ್ಟ್, ವೈಟ್ ವಾಸ್ತುಶಿಲ್ಪ ತಜ್ಞರು . ಇದರ ನಿರ್ಮಾತೃ  ಜಾನ್ ಜಿ. ಶೆಡ್. ಇದು ವಿಶ್ವದ ಮೊದಲ ಒಳನಾಡಿನ ಅಕ್ವೇರಿಯಂ ಎಂದು ಪ್ರಸಿದ್ಧಿ ಹೊಂದಿತ್ತು. 
  ಈ ಅಕ್ವೇರಿಯಂನ್ನು ಸರಿಯಾಗಿ ನೋಡಲು ೪ರಿಂದ ೫ ಗಂಟೆ ಸಮಯ ಬೇಕು. ಪ್ರವೇಶ ವಿವರ: ಶನಿವಾರ- ಭಾನುವಾರ ಬೆಳಗ್ಗೆ ೯ರಿಂದ ೬ ಗಂಟೆವರೆಗೆ, ಸೋಮವಾರ- ಮಂಗಳವಾರ ಗುರುವಾರ ಶುಕ್ರವಾರ ಬೆಳಗ್ಗೆ ೯ರಿಂದ ೫ ಗಂಟೆವರೆಗೆ, ಬುಧವಾರ ಬೆಳಗ್ಗೆ ೯ರಿಂದ ಸಂಜೆ ೪ ಗಂಟೆವರೆಗೆ, ಪ್ರವೇಶಧನವಿದೆ.




   ಪಿಯರ್ ಪಾರ್ಕ್ pior park 
ಅಕ್ವೇರಿಯಂ ಸುತ್ತಿ ಬಸವಳಿದು ನಾವು ಕಾಫಿ ಕುಡಿದೆವು! ಕಾರು ಪಾರ್ಕ್ ಮಾಡಿದ ಸ್ಥಳಕ್ಕೆ ನಾವು ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಪಿಯರ್ ಪಾರ್ಕಿನಲ್ಲಿ ಹತ್ತಾರು ಕಬ್ಬಿಣದ ಪ್ರತಿಮೆಗಳು ಗಮನಸೆಳೆದುವು.  ಅಲ್ಲಿ ಪ್ರತಿಮೆಗಳ ಎದುರು ನಿಂತು ಪಟ ಕ್ಲಿಕ್ಕಿಸಿಕೊಂಡು ಸಾಗಿದೆವು. ಕಾರು ಹತ್ತಿ ಮಿಲ್ವಾಕಿಯ ಓಕ್ ಕ್ರೀಕ್ ಮನೆ ತಲಪಿದಾಗ ಗಂಟೆ ೯ ದಾಟಿತ್ತು.




  ಒಹಿಯೊ 
   ೨೯.೬.೧೮ರಂದು ಬೆಳಗ್ಗಿನಿಂದ ಮಗಳೂ ನಾನೂ ಅಡುಗೆ ಕೆಲಸದಲ್ಲಿ ಮಗ್ನರಾದೆವು. ಚಪಾತಿ, ಪಲಾವ್, ಎರಡು ರೀತಿಯ ಗೊಜ್ಜುಗಳು ಇತ್ಯಾದಿ ವ್ಯಂಜನಗಳನ್ನು ತಯಾರಿಸಿದೆವು. ನಾವು ವಿವಿಧ ಊರುಗಳಿಗೆ ೭ ದಿನದ ತಿರುಗಾಟಕ್ಕೆ ಹೋಗಲು ತಯಾರಿ ನಡೆಸಿದೆವು.  ಸಂಜೆ ಮಹೇಶ ಕೆಲಸ ಮುಗಿಸಿ ಮನೆಗೆ ಬಂದಮೇಲೆ ೫ ಗಂಟೆಗೆ ಹೊರಟೆವು. ಓಕ್ ಕ್ರೀಕ್‌ನಿಂದ ಹೊರಟು ಶಿಕಾಗೊ ದಾಟಿ ದಾರಿಮಧ್ಯೆ ವಿಶ್ರಾಂತಿಧಾಮದಲ್ಲಿ ಪಲಾವ್ ತಿಂದು ಮುಂದುವರಿದು ಒಹಿಯೊ ಎಂಬ ಊರನ್ನು ರಾತ್ರೆ ೧೨ ಗಂಟೆಗೆ (ಅಲ್ಲಿಯ ಸಮಯ ಮಿಲ್ವಾಕಿಯಿಂದ ಒಂದು ಗಂಟೆ ಮುಂದಿದೆ) ತಲಪಿದೆವು. ಅಮೇರಿಕಾಸ್ ಬೆಸ್ಟ್ ವ್ಯಾಲ್ಯೂ ಇನ್ ಎಂಬ ಹೊಟೇಲಿನಲ್ಲಿ ನಾವು ಮೊದಲೆ ಕಾದಿರಿಸಿದ ಕೋಣೆಗೆ ಹೋಗಿ ನಿದ್ರಿಸಿದೆವು.  ಓಕ್ ಕ್ರೀಕ್‌ನಿಂದ ಒಹಿಯೊಗೆ ೩೯೬ ಮೈಲಿಯಿದೆ.

ವೆಂಕಟೇಶ್ವರ ದೇಗುಲ  ಪಿಟ್ಸ್ ಬರ್ಗ್ (sri venkateswara Swamy temple, 1230 S McCully Dr. Pittsburg, Pennsylvania 15235 USA
    ೩೦.೬.೧೮ರಂದು ಬೆಳಗ್ಗೆ ಎದ್ದು ತಯಾರಾಗಿ ಹೊಟೇಲ್ ವತಿಯ ತಿಂಡಿ (ಬ್ರೆಡ್, ಕಾಫಿ, ಹಣ್ಣು) ತಿಂದು ನಾವು ೯.೩೦ಗೆ ಹೊರಟು ೧೫೦ ಮೈಲಿ ಸಾಗಿ ಪಿಟ್ಸ್ ಬರ್ಗ್‌ನ ಸ್ವಾಮಿ ವೆಂಕಟೇಶ್ವರ ದೇಗುಲಕ್ಕೆ ಮಧ್ಯಾಹ್ನ ೨ ಗಂಟೆಗೆ ತಲಪಿದೆವು. ಮೊದಲು ನಮ್ಮ ಉದರ ಪೋಷಣೆ ಮುಗಿಸಿ ಅದು ಸಂತೃಪ್ತಗೊಂಡಮೇಲೆ ದೇವರ ದರ್ಶನ ಮಾಡೋಣವೆಂದು ಅಲ್ಲಿಯ ಕೆಫೆಟೇರಿಯಾಗೆ ನುಗ್ಗಿದೆವು.  ಅಲ್ಲಿ ಸಣ್ಣ ಸರತಿ ಸಾಲಿತ್ತು. ಉಪ್ಪಿಟ್ಟು, ಮೊಸರನ್ನ, ಪುಳಿಯೋಗರೆ, ಸಾಂಬಾರನ್ನ ಹೊಟ್ಟೆಗೆ ಇಳಿಸಿದೆವು.  ಸಾವಕಾಶವಾಗಿ ಸರತಿ ಸಾಲಿನಲ್ಲಿ ನಿಂತು ಸಾಗಿ ದೇವರಿಗೆ ಅಡ್ಡ ಬಿದ್ದೆವು. ಪ್ರವೇಶ: ಬೆಳಗ್ಗೆ ೯ರಿಂದ ರಾತ್ರಿ ೮.೩೦ ವರೆಗೆ.
 ಎಸ್.ವಿ ದೇವಾಲಯ ಎಂದೂ ಕರೆಯಲ್ಪಡುವ ಶ್ರೀ ವೆಂಕಟೇಶ್ವರ ದೇವಾಲಯವು ಅಮೇರಿಕಾ ದೇಶದ ಪೆನ್ಸಿಲ್ವೇನಿಯಾದ ಪಿಟ್ಸ್ ಬರ್ಗ್ ನ  ಉಪನಗರವಾದ ಪೆನ್ ಹಿಲ್ಸ್ ನಲ್ಲಿದೆ. ಅಮೇರಿಕಾದಲ್ಲಿ ನಿರ್ಮಿಸಲಾದ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯದಲ್ಲಿ ಇದೂ ಒಂದು.
   ಈ ದೇವಾಲಯವನ್ನು ನಿರ್ಮಿಸಲು  ೧೯೭೫ ಆಗಸ್ಟ್ ೭ ರಂದುಸಮಿತಿ ರಚಿಸಲಾಯಿತು.  ನಿರ್ಮಾಣದ ಸಮಯದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ನ ಆಡಳಿತಮಂಡಳಿಯ ಸಹಾಯ ಪಡೆಯಲಾಗಿತ್ತು. ಜೂನ್ ೧೯೭೬ರಲ್ಲಿ ನಿರ್ಮಿಸಲು ತೊಡಗಿ ನವೆಂಬರ ೧೭ರಂದು ಪ್ರತಿಷ್ಟಾಪನೆ ಮಾಡಲಾಯಿತು. ೮ ಜೂನ್ ೧೯೭೭ರಲ್ಲಿ ಕುಂಭಾಭಿಷೇಕ, ೨೨ ಅಕ್ಟೋಬರ ೧೯೭೮ರಂದು ರಾಜಗೋಪುರ ಸ್ಥಾಪನೆ.


  ಅಮೇರಿಕಾ ದೇಶದಲ್ಲಿ ನಾವು ಭೇಟಿ ಇತ್ತ ದೇವಾಲಯ ಎಲ್ಲವೂ ಬಲು ಚೆನ್ನಾಗಿದ್ದುವು. ಮತ್ತು ವಿಶಾಲವಾಗಿದ್ದುವು. ಅದಕ್ಕಿಂತ ಹೆಚ್ಚು ಖುಷಿಯಾದದ್ದು ಅಲ್ಲಿಯ ಕೆಫೆಟೇರಿಯಾಗಳು. ರುಚಿ ಶುಚಿಯಾದ ಸಸ್ಯಾಹಾರ ತಿಂಡಿ ತಿನಿಸುಗಳು ಅದೂ ರಿಯಾಯತಿ ದರದಲ್ಲಿ ಯಥೇಚ್ಛವಾಗಿ ಸಿಗುತ್ತವೆ. ದೇವರ ದರ್ಶನವಾಗದಿದ್ದರೂ ಕೆಫೆಟೇರಿಯಾ ದರ್ಶನ ಸಾಂಗವಾಗಿ ಆದರೆ ಜನ್ಮ ಸಾರ್ಥಕ!








 ಡ್ಯುಕೆಸ್ನೆ ಇಂಕ್ಲೈನ್ ರೈಲ್ವೆ (Duquesne Incline, 1107, W.Cason St, pittsburg  Pennsylvania 15210, phone 4123811665
  ದೇವಾಲಯದಿಂದ ೩.೩೦ಗೆ ಹೊರಟು ರೈಲುಕಾರು ಸವಾರಿಗೆ ವಾಷಿಂಗ್ಟನ್ ಹಿಲ್‌ಗೆ ಹೋದೆವು.  ಪಿಟ್ಸ್ ಬರ್ಗ್ ಡೌನ್‌ಟೌನ್‌ಗೆ ರೈಲುಕಾರಲ್ಲಿ ಹೋಗಬಹುದು. ನಾವು ರೈಲಲ್ಲಿ ಮೇಲೆ ಹೋಗಿ ಅಲ್ಲಿ ಪೇಟೆಯಲ್ಲಿ ಸುತ್ತು ಹಾಕಿ ವಾಪಾಸು ರೈಲಲ್ಲಿ ಕೆಳಗೆ ಬಂದೆವು. ಓಹಿಯೋ ನದಿಯ ಪಶ್ಚಿಮದಂಡೆಯಲ್ಲಿರುವ ಈ ಸವಾರಿಯು ಬಲು ಮುದ ನೀಡುತ್ತದೆ. ಮೊಂಗೊಂಗೇಲಾ ನದಿ, ಕ್ರೀಡಾಂಗಣ, ಅಲ್ಲೆಘೆನಿ ನದಿ, ಪಿಟ್ಸ್‌ಬರ್ಗ್ ಸ್ಕೈಲೈನ್ ಇತ್ಯಾದಿ ಸುಂದರ ನೋಟವನ್ನು ರೈಲುಕಾರಿನ ಒಳಗಿನಿಂದ ಮತ್ತು ಮೇಲೆ ನಿಲ್ದಾಣದಿಂದ ನೋಡಬಹುದು. ವಯಸ್ಕರಿಗೆ ಟಿಕೆಟ್ ದರ ಮೇಲೆ ಕೆಳಗೆ ಎರಡೂ ಕಡೆಗೆ ೫ ಡಾಲರ್, ಆರರಿಂದ ೧೧ ವರ್ಷದ ಮಕ್ಕಳಿಗೆ ೨.೫೦ ಡಾಲರ್, ಆರರ ಒಳಗಿನ ಮಕ್ಕಳಿಗೆ ಹಾಗೂ ೬೫ವರ್ಷದ ಮೇಲ್ಪಟ್ಟವರಿಗೆ ಉಚಿತ. ರೈಲು ಬೆಳಗ್ಗೆ ೫.೩೦ರಿಂದ ಬೆಳಗಿನ ಝಾವ ೧೨.೪೫ರವಗೆ ನಿರಂತರ ಸಾಗುತ್ತಿರುತ್ತದೆ. ಭಾನುವಾರ ಹಾಗೂ ರಜಾದಿನಗಳಂದು ಬೆಳಗ್ಗೆ ೭ರಿಂದ ಬೆಳಗ್ಗೆ ೧೨.೪೫ರವರೆಗೆ 
  ೧೮೭೭ರಲ್ಲಿ ಡ್ಯುಕ್ವೆಸ್ನೆ ಇಂಕ್ಲೈನ್ ಪಶ್ಚಿಮ ಕಾರ್ಸನ್ ಸ್ಟ್ರೀಟ್ ನ ಕೆಳ ನಿಲ್ದಾಣದ ನಡುವೆ ಮೌಂಟ್ ವಾಷಿಂಗ್ಟನ್ ಗ್ರಾಂಡ್ಯೂ ಅವೆನ್ಯೂ ಮೇಲಿನ ನಿಲ್ದಾಣದ ನಡುವೆ ಸರಕು ಸಾಗಣೆಗಾಗಿ ಈ ರೈಲು ಕಾರ್ಯ ನಿರ್ವಹಿಸಲು ಪ್ರಾರಂಭಗೊಂಡಿತು. ೪೦೦ಅಡಿ ಎತ್ತರ, ೩.೬ ಮೈಲುಗಳು. ಒಂದು ರೈಲು ಕಾರಿನಲ್ಲಿ ೨೫ ಜನ ಪ್ರಯಾಣಿಸಬಹುದು.













 ವರ್ಜೀನಿಯಾ 
  ನಮ್ಮ ಮುಂದಿನ ನಿಲ್ದಾಣ ವರ್ಜೀನಿಯಾ. ದಾರಿಯಲ್ಲಿ ಒಂದು ಕಾರು ಅಪಘಾತವಾಗಿ ನಾವು ಅರ್ಧ ಗಂಟೆ ನಿಲ್ಲಬೇಕಾಯಿತು. ಸಾಲು ಸಾಲು ಕಾರುಗಳು ಅತ್ತ ಇತ್ತ ಕಡೆ ಸಾಲಾಗಿ ನಿಂತದ್ದು ನೋಡಿ ಬೆರಗಾದೆವು. ಪೊಲೀಸ್, ಅಂಬುಲೆನ್ಸ್ ವಾಹನ ತುರ್ತಾಗಿ ತೆರಳಿ ದಾರಿ ಸುಗಮಗೊಳಿಸಿದರು. ವಾಹನ ಸವಾರರು ಯಾರೂ ಸ್ಥಳ ಸಿಕ್ಕಲ್ಲಿ ನುಸುಳಿ ಮುನ್ನುಗ್ಗಲಿಲ್ಲ! ವರ್ಜೀನಿಯಾದ ಫಾಲ್ಸ್ ಚರ್ಚ್ ಊರಿನಲ್ಲಿ ಗವರ್ನರ್ ಹೌಸ್ ಇನ್ ಹೊಟೇಲ್ ತಲಪಿದಾಗ ರಾತ್ರೆ ಗಂಟೆ ೧೦.೩೦.

      ಶ್ರೀವತ್ಸ ಜೋಶಿ ಮನೆಗೆ ಸವಾರಿ
೧.೭.೧೮ರಂದು ನಾವು ಬೆಳಗ್ಗೆ ಹೊಟೇಲಿನಿಂದ ೧೫ ಮೈಲಿ ದೂರದಲ್ಲಿದ್ದ ಶ್ರೀವತ್ಸ ಜೋಶಿ (ವಿಶ್ವವಾಣಿ ಪತ್ರಿಕೆಯ ಅಂಕಣಕಾರರು) ಮನೆಗೆ ಹೋದೆವು. ಹೊಟೇಲ್ನಲ್ಲಿ ಸಿಗುವ ಒಣ ಬ್ರೆಡ್ ಬಿಟ್ಟು ನಮ್ಮಲ್ಲಿಗೇ ತಿಂಡಿಗೆ ಬರಬೇಕು ಎಂದು ಅವರು ಅಹ್ವಾನಿಸಿದ್ದರು. ಅವರ ಆಹ್ವಾನದಮೆರೆಗೆ ಸಂಕೋಚವಾದರೂ ಹೊದೆವು.  ಅವರು ರವೆ ಇಡ್ಲಿ, ಚಟ್ನಿ, ಶ್ಯಾವಿಗೆ ಚಿತ್ರಾನ್ನ ತಯಾರಿಸಿದ್ದರು. (ಅವರ ಪತ್ನಿ ಆಗ ಬೆಂಗಳೂರಿನಲ್ಲಿದ್ದರು.) ಮಾವು ಹಲಸಿನ ಸೋಂಟೆ, ಕಾಫಿ ಇಷ್ಟು ಬಗೆ ಇತ್ತು. ಮಾತಿನೊಂದಿಗೆ ತಿಂಡಿ ತಿಂದೆವು.




  ವಾಷಿಂಗ್ಟನ್ ಡಿಸಿಯಲ್ಲಿ ಏನೇನು ನೋಡಬಹುದು, ಎಲ್ಲಿ ಕಾರು ಪಾರ್ಕ್ ಮಾಡಬಹುದು, ಹೋಗುವ ದಾರಿ ಇತ್ಯಾದಿ ನೀಲನಕ್ಷೆ ಹಾಕಿ ಕೊಟ್ಟರು. ಅವರೊಂದಿಗೆ ಪಟ ಕ್ಲಿಕ್ಕಿಸಿಕೊಂಡು, ನಾನು ಬರೆದ ಮಂದಹಾಸ ಪುಸ್ತಕ ಕೊಟ್ಟು ಆದರದ ಆತಿಥ್ಯಕ್ಕೆ ಧನ್ಯವಾದ ಅರ್ಪಿಸಿ ಬೀಳ್ಕೊಂಡು ಹೊರಟೆವು. 
 ವಾಷಿಂಗ್ಟನ್ ಡಿ.ಸಿ. (ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ) 
 ಅಮೇರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನ ನಿರ್ವಹಿಸಲು ಜುಲೈ ೧೬ ೧೭೯೦ರಂದು ಸ್ಥಾಪಿನೆಗೊಂಡಿತು. 
  ಕ್ಯಾಪಿಟಲ್ ಹೌಸ್ (United States Capitol  First St Se, Washington, DC, 20004 USA)
    ನಾವು ಕಾರ್ ಪಾರ್ಕ್ ಮಾಡಿ ಕ್ಯಾಪಿಟಲ್ ಹೌಸ್‌ಗೆ ಹೋದೆವು. ಆ ದಿನ ಭಾನುವಾರವಾದ ಕಾರಣ ನಮಗೆ ಅಲ್ಲೇ ಕಾರು ಪಾರ್ಕಿಂಗಿಗೆ ಸ್ಥಳ ದೊರೆಯಿತು. ಆದರೆ ಕ್ಯಾಪಿಟಲ್ ಹೌಸ್ ಒಳಗೆ ಹೋಗಲಾಗಲಿಲ್ಲ. ಆ ದಿನ ರಜಾ ದಿನವಾಗಿತ್ತು. ಹಾಗಾಗಿ ನಾವು ಆ ಕಟ್ಟಡ ದೂರದಿಂದಲೆ ನೋಡಿ ತೃಪ್ತಿಪಟ್ಟೆವು.
   ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ತಾಣವಿದು. ೧೮ ಸೆಪ್ಟೆಂಬರ ೧೭೦೩ರಲ್ಲಿ ನಿರ್ಮಾಣಗೊಂಡು ೧೮೦೦ರಲ್ಲಿ ಪೂರ್ಣಗೊಂಡಿತು.  ಕ್ಯಾಪಿಟಲ್ ಹೌಸ್‌ನ ಗುಮ್ಮಟವನ್ನು ೧೮೫೫-೧೮೬೬ರ ನಡುವೆ ನಿರ್ಮಿಸಲಾಯಿತು. ಫಿಲಿಡೆಲ್ಫಿಯಾದ ವಾಸ್ತುತಜ್ಞ ಥಾಮಸ್ ಯು. ವಾಲ್ಟರ್ ಇದನ್ನು ವಿನ್ಯಾಸಗೊಳಿಸಿದರು. ಗುಮ್ಮಟದ ಮೇಲೆ ಥಾಮಸ್ ಕ್ರಾಫರ್ಡ್ ಪ್ರತಿಮೆ ಇದೆ. ಈ ಪ್ರತಿಮೆ ೧೯ ಅಡಿ ೬ ಅಂಗುಲ ಎತ್ತರದಲ್ಲಿದೆ. ಸುಮಾರು ೧೫ಸಾವಿರ ಪೌಂಡ್ ತೂಕವಿದೆ.



 ಪ್ರವಾಸಿಗರಿಗೆ ಪ್ರವೇಶ ಸಮಯ: ಸೋಮಾವಾರದಿಂದ ಶನಿವಾರದವರೆಗೆ ಬೆಳಗ್ಗೆ ೮.೩೦ರಿಂದ ೪.೩೦ರವರೆಗೆ.  ಪ್ರವೇಶ ಉಚಿತ. 
  ಬೊಟಾನಿಕಲ್ ಗಾರ್ಡನ್ (united states botanical Garden, 100, Maryland Ave, SW, Washington DC 20001, USA
  ಉತ್ತರ ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿರುವ ಯು.ಎಸ್. ಕಾಂಗ್ರೆಸ್ ೧೮೨೦ರಲ್ಲಿ ಸ್ಥಾಪಿಸಿದ ಬೊಟನಿಕಲ್ ಗಾರ್ಡನ್ ಪ್ರವೇಶಿಸಿದೆವು. ಈ ಗಾರ್ಡನ್ ಅತ್ಯಂತ ಪುರಾತನವಾದುದು.. ಗುಲಾಬಿ, ಆರ್ಕಿಡ್ ಸಸ್ಯಗಳು, ಮಳೆಕಾಡುಗಳು, ಕ್ಯಕ್ಟಸ್, ಅಳಿವಿನಂಚಿನಲ್ಲಿರುವ ಅಪರೂಪದ ಸಸ್ಯಗಳು, ಮನೆಯ ಗಾರ್ಡನಿನಲ್ಲಿ ಬೆಳೆಸುವ ಸಸ್ಯಗಳು ಇತ್ಯಾದಿ ನಾನಾ ನಮೂನೆಯ ಹೂ ಗಿಡ, ಮರಗಳನ್ನು ನೋಡಬಹುದು.
ಸುಮಾರು ೧೩ ಎಕರೆ ಪ್ರದೇಶದಲ್ಲಿರುವ ಈ ಗಾರ್ಡನ್ ನೋಡಲು ಕನಿಷ್ಟ ಒಂದು ಗಂಟೆಯಾದರೂ ಬೇಕೇಬೇಕು. ಬಾಳೆಗಿಡ, ನಿಂಬೆ, ಅರಿಶಿನ, ಕೆಸವಿನಗಿಡ, ತಿಮರೆ (ಒಂದೆಲಗ) ಇತ್ಯಾದಿ ನೋಡಿ ಖುಷಿಪಟ್ಟೆವು.





ಪ್ರವೇಶ ಸಮಯ ಬೆಳಗ್ಗೆ ೧೦ರಿಂದ ಸಂಜೆ ೫ ಗಂಟೆವರೆಗೆ. ವರ್ಷದ ಎಲ್ಲಾ ದಿನಗಳಂದು ಉಚಿತ ಪ್ರವೇಶ. 
ನೇಟಿವ್ ಅಮೇರಿಕನ್ ಇಂಡಿಯನ್ ಮ್ಯೂಸಿಯಂ
 ವಾಷಿಂಗ್ಟನ್ ಡಿಸಿಯಲ್ಲಿ ಸಾಕಷ್ಟು ಮ್ಯೂಸಿಯಂಗಳಿವೆ. ಹೆಚ್ಚಿನವುಗಳಿಗೂ ಉಚಿತ ಪ್ರವೇಶ. ಎಲ್ಲಾ ಮ್ಯೂಸಿಯಂ ನೋಡಲೇ ಎರಡು ದಿನವಾದರೂ ಬೇಕಾದೀತು. 
   ೧೯೬೪ರಲ್ಲಿ ಮ್ಯೂಸಿಯಂ ಆಫ್ ಹಿಸ್ಟರಿ ಅಂಡ್ ಟೆಕ್ನಾಲಜಿ ಎಂಬ ಮ್ಯೂಸಿಯಂ ಸ್ಥಾಪನೆಗೊಂಡಿತು. ಪ್ರಸಿದ್ಧ ವಾಸ್ತುಶಿಲ್ಪ ತಜ್ಞ ಮ್ಯಾಕಿಮ್ ಮೀಡ್ ಅಂಡ್ ವೈಟ್ ವಿನ್ಯಾಸಗೊಳಿಸಿದರು. ೧೯೮೦ರಲ್ಲಿ ಈ ವಸ್ತು ಸಂಗ್ರಹಾಲಯವನ್ನು ಅಮೇರಿಕನ್ ಹಿಸ್ಟರಿ ನ್ಯಾಷನಲ್ ಮ್ಯೂಸಿಯಂ ಎಂದು ಮರುನಾಮಕರಣ ಮಾಡಲಾಯಿತು. ಇಲ್ಲಿ ಮೂಲ ಅಮೇರಿಕನ್ನರ ಅನುಭವ, ಅವರು ಉಪಯೋಗಿಸುತ್ತಿದ್ದ ವಸ್ತುಗಳು, ಅವರ ಕಲೆ ಸಂಸ್ಕೃತಿಯ ಅನಾವರಣವನ್ನು ನೋಡಬಹುದು. ಒಟ್ಟು ಮೂರು ಮಹಡಿಗಳಲ್ಲಿ ವಸ್ತು ಸಂಗ್ರಹಗಳಿವೆ. ೨೦೦೬-೨೦೦೮ರಲ್ಲಿ ೮೫ ಮಿಲಿಯನ್ ಡಾಲರ್ ವೆಚ್ಚದಲ್ಲಿ ನವೀಕರಿಸಲ್ಪಟ್ಟಿತು. ಎರಡನೇ ಮಹಡಿಯಲ್ಲಿ ಜಾರ್ಜ್ ವಾಷಿಂಗ್ಟನ್ ಪ್ರತಿಮೆ ಇದೆ.




   ಪ್ರವೇಶ ಸಮಯ ಬೆಳಗ್ಗೆ ೧೦ರಿಂದ ಸಂಜೆ ೫.೩೦ . ಉಚಿತ ಪ್ರವೇಶ.
   ನ್ಯಾಷನಲ್ ಏರ್ ಅಂಡ್ ಸ್ಪೇಸ್ ಮ್ಯೂಸಿಯಂ (Nationala Air and Space museum Washington DC )
೧೯೪೬ರಲ್ಲಿ ಈ ಮ್ಯೂಸಿಯಂ ಸ್ಥಾಪಿಸಲಾಯಿತು. ಇಲ್ಲಿ ವಿಮಾನ ತಂತ್ರಜ್ಞಾನಕ್ಕೆ, ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ಎಲ್ಲಾ ವಿವರಗಳೂ, ಪ್ರತಿಕೃತಿಗಳೂ ಇವೆ. ವಿಮಾನ ಆವಿಷ್ಕರಿಸಿದ ಜಾನ್ ರೈಟ್ ಸಹೋದರರ ಜೀವನ ವೃತ್ತಾಂತವಿದೆ. ಮೂರು ಮಹಡಿಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಅಮೂಲಾಗ್ರವನ್ನು ನೋಡಿ ತಣಿಯಬಹುದು. ಈ ಮ್ಯೂಸಿಯಂ ವಿಜ್ಞಾನ ವಿದ್ಯಾರ್ಥಿಗಳಿಗೆ ಅದ್ಭುತ ಜ್ಞಾನಾರ್ಜನೆಯ ತಾಣವಾಗಿದೆ. ನಾವು ಸಮಯದ ಮಿತಿಯಲ್ಲಿದ್ದುದರಿಂದ ಮೇಲಿಂದಮೇಲೆ ನೋಡಿದ ಶಾಸ್ತ್ರ ಮಾಡಿ ಹೊರಬಂದೆವು.










 ವಾರದ ಏಳೂದಿನವೂ ಉಚಿತ ಪ್ರವೇಶವಿದೆ. ಬೆಳಗ್ಗೆ ೧೦ರಿಂದ ೫.೩೦ರ ತನಕ. ಡಿಸೆಂಬರ ೨೫ ರಜಾದಿನ.

ವಾಷಿಂಗ್ಟನ್ ಸ್ಮಾರಕ (Washington Monument 2, 15th St NW Washington, Dc 20024, US
  ಈ ಸ್ಮಾರಕದ ನಿರ್ಮಾಣ ೧೮೪೮ರಲ್ಲಿ ಪ್ರಾರಂಭವಾಗಿ ೧೮೫೪ರಿಂದ ೧೮೭೭ರ ವರೆಗೆ ಕೆಲಸ ಸ್ಥಗಿತಗೊಂಡು, ೧೮೮೪ರಲ್ಲಿ ಪೂರ್ಣಗೊಂಡಿತು. ಆದರೂ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಳ್ಳಲು ಸಮಯ ಹಿಡಿದು, ೯ ಅಕ್ಟೋಬರ ೧೮೮೮ರಲ್ಲಿ ಅದು ನೆರವೇರಿತು.  ೫೦೦ ಅಡಿ ಎತ್ತರವಿದೆ. ಸ್ಮಾರಕವನ್ನು ನೋಡಿ ನಾವು ಅಲ್ಲಿಂದ ನಿರ್ಗಮಿಸಿದೆವು. ಪ್ರವೇಶ: ಬೆಳಗ್ಗೆ ೯ರಿಂದ ರಾತ್ರೆ ೧೦ರವರೆಗೆ 


 ವೈಟ್ ಹೌಸ್ ಶ್ವೇತಭವನ 1600,pennsylvania avenue NW Washington, Dc 20500, US 
ನಾವು ವಾಷಿಂಗ್ಟನ್ ಸ್ಮಾರಕ ನೋಡಿ ನಡೆಯುತ್ತಲೇ ಶ್ವೇತಭವನದ ಬಳಿ ಬಂದೆವು. ಸಾರ್ವಜನಿಕರಿಗೆ ಪ್ರವೇಶವಿಲ್ಲ. ಬೇಲಿಯ ಹೊರಗಿನಿಂದಲೇ ದೂರದಿಂದ ಕಟ್ಟಡ ನೋಡಲಷ್ಟೇ ಅವಕಾಶ. ಪೊಲೀಸ್ ಪಡೆ ಅಲ್ಲಲ್ಲಿ ನಿಂತು ಪಹರೆ ಕಾಯುತ್ತಲಿದ್ದರು. ನಾವು ಬೇಲಿ ಹೊರಗಿಂದಲೇ ಶ್ವೇತಭವನದ ಎದುರು ನಿಂತು ಪಟ ಕ್ಲಿಕ್ಕಿಸಿಕೊಂಡು ಅದನ್ನು ನೋಡಿದ್ದಕ್ಕೆ ಸಾಕ್ಷಿ ಉಳಿಸಿಕೊಂಡೆವು! 
  ಈ ಕಟ್ಟಡ ಕಟ್ಟಲು ೧೭೯೨ರಲ್ಲಿ ಪ್ರಾರಂಭಿಸಿ, ೧೮೦೦ರಲ್ಲಿ ಪೂರ್ಣಗೊಂಡಿತು. ಜೇಮ್ಸ್ ಹೋಬನ್ ವಾಸ್ತು ಶಿಲ್ಪ ತಜ್ಞ. ಶ್ವೇತಭವನದಲ್ಲಿ ಅಮೇರಿಕಾದ ಅಧ್ಯಕ್ಷರಾದವರು ವಾಸ ಮಾಡುತ್ತಾರೆ.  ೧೮೦೦ರಲ್ಲಿ ಮೊದಲಬಾರಿಗೆ ಶ್ವೇತಭವನ ಪ್ರವೇಶಿಸಿದವರು ಜಾನ್ ಆಡಮ್ಸ್.



ವರ್ಲ್ಡ್ ವಾರ್ 11 ಮೆಮೊರಿಯಲ್ ಮ್ಯೂಸಿಯಂ   
ಸುತ್ತಲೂ ೧೭ ಅಡಿ ಎತ್ತರದ ೫೬ ಗ್ರನೈಟ್ ಕಂಬಗಳು. ಒಂದೊಂದು  ಕಂಬದಲ್ಲೂ ಅಮೇರಿಕಾ ದೇಶದ ೪೮ ರಾಜ್ಯಗಳ ಹೆಸರುಗಳಿವೆ. ನಡುವೆ ಕಾರಂಜಿ ಇದೆ. ಸೆಪ್ಟೆಂಬರ ೨೦೦೧ರಲ್ಲಿ ಕಟ್ಟಲು ಸುರುಮಾಡಿ ೨೯ ಮೇ ೨೦೦೪ರಂದು ಪೂರ್ಣಗೊಳಿಸಲಾಯಿತು. 
ಈ ಮ್ಯೂಸಿಯಂನ ಎದುರು ಬದಿಯಿಂದ ಕಣ್ಣು ಹಾಯಿಸಿದರೆ ಲಿಂಕನ್ ಮೆಮೊರಿಯಲ್ ಕಾಣುತ್ತದೆ. (ನಾವು ಲಿಂಕನ್ ಮೆಮೋರಿಯಲ್ ನೋಡಲು ಹೋಗಲಿಲ್ಲ) ಹಿಂಬದಿ ಮಾನ್ಯುಮೆಂಟ್ ಕಾಣುತ್ತದೆ. ಮ್ಯೂಸಿಯಂನಲ್ಲಿ ಸ್ವಲ್ಪ ಹೊತ್ತು ಕುಳಿತು ಅಲ್ಲಿಂದ ಕ್ವಾಲಿಟಿ ಇನ್ ಹೊಟೇಲ್ ತಲಪಿ ವಿಶ್ರಾಂತಿಗೈದೆವು.





    ನ್ಯೂಜೆರ್ಸಿಯೆಡೆಗೆ ಪಯಣ
 ಬೆಳಗ್ಗೆ ೨-೭-೨೦೧೮ರಂದು ನಾವು ತಿಂಡಿ ತಿಂದು ೧೦ ಗಂಟೆಗೆ ಹೊಟೇಲ್ ಬಿಟ್ಟು ವಾಷಿಂಗ್ಟನ್ ಡಿಸಿಯಿಂದ ಕಾರಿನಲ್ಲಿ ಹೊರಟೆವು. ಸುಮಾರು ೨೦೦ ಮೈಲಿ ದೂರ ಸಾಗಿ ನ್ಯೂಜೆರ್ಸಿ ತಲಪಿದೆವು. ಅಲ್ಲಿ ಮಹೇಶನ ಸೋದರತ್ತೆ ಮಗ ದೀಪಕ್ ಮನೆಗೆ ೧೨.೪೦ಕ್ಕೆ ತಲಪಿದೆವು.  ಅಲ್ಲಿ ಮಹೇಶನ ಅತ್ತೆ  ಸರೋಜ  ಮಾವ ರಾಮಕೃಷ್ಣ ಭಟ್ ಹುಬ್ಬಳ್ಳಿಯಿಂದ ಮಗನ ಮನೆಗೆ ಬಂದವರಿದ್ದರು. ಅವರಿಗಂತೂ ಬಹಳ ಖುಷಿಯಾಯಿತು. ನಮಗೂ ಅವರನ್ನು ಭೇಟಿಯಾಗಿ ಸಂತೋಷವಾಯಿತು. ಅಲ್ಲಿ ಊಟವಾಗಿ ಮಾತಾಡುತ್ತ ಕೂತೆವು. ದೀಪಕ್ ಹಾಗೂ ಆಶಿಕಾ ದಂಪತಿ ಕೆಲಸಕ್ಕೆ ಹೋಗಿದ್ದರು. ಅವರಿಗಿಬ್ಬರು ಪುಟ್ಟ ಮಕ್ಕಳು. ಐರಾ ಹಾಗೂ ರಿಯಾ. ತುಂಬ ಮುದ್ದಾಗಿದ್ದರು.


  ಅಮೇರಿಕಾದಲ್ಲಿ ಮಕ್ಕಳನ್ನು ಬೆಳೆಸುವ ಬಗೆ
 ಅಮೇರಿಕಾ ದೇಶದಲ್ಲಿ ಹೆಚ್ಚಿನವರು ಅಪ್ಪ ಅಮ್ಮನ ಜೊತೆ ಪುಟ್ಟ ಮಕ್ಕಳನ್ನು  ಒಂದೇ ಕೋಣೆಯಲ್ಲಿ ಮಲಗಿಸಿಕೊಳ್ಳುವುದಿಲ್ಲವಂತೆ . ಅವರಿಗಾಗಿಯೇ ಪ್ರತ್ಯೇಕ ಕೋಣೆ ಇರುತ್ತದೆ. ೭-೮ ತಿಂಗಳ ಮಗುವನ್ನು ಕೂಡ ಬೇರೆಯೇ ಕೋಣೆಯಲ್ಲಿ ಮಲಗಿಸುವುದು ಪರಿಪಾಟವಂತೆ. ಮಕ್ಕಳು ಎದ್ದರೆ, ಅತ್ತರೆ ಇತ್ಯಾದಿ ನೋಡಲು ಅಪ್ಪ ಅಮ್ಮನ ಕೋಣೆಯಲ್ಲಿ ಸಿಸಿ ಟಿವಿಯಿಂದ ನೋಡುತ್ತಾರಂತೆ.  ಅವಶ್ಯ ಬಿದ್ದರೆ ಮಾತ್ರ ಎದ್ದು ಹೋಗುತ್ತಾರಂತೆ. ಆ ಮಕ್ಕಳು ಕೂಡ ಅವರ ಊಟದ ಸಮಯಕ್ಕೆ ಎದ್ದು ಅಳುತ್ತವಂತೆ. ನಿದ್ದೆ ಸಮಯಕ್ಕೆ ಸರಿಯಾಗಿ ಅವರ ಕೋಣೆಯೊಳಗೆ ಮಂಚದಲ್ಲಿ ಮಲಗಿಸಿ ಬಂದರೆ ಒಂದರೆಡು ನಿಮಿಷದಲ್ಲೇ ನಿದ್ರಿಸುತ್ತವಂತೆ. ಹಾಗೆ ಮಕ್ಕಳಿಗೆ ತರಬೇತಿ ಕೊಡುತ್ತಾರಂತೆ. ಇದನ್ನು ಕೇಳಿ (ನೋಡಿ ಕೂಡ) ಅಬ್ಬ ಎಂಬ ಬೆರಗು, ಹಾಗೂ ಪಾಪ ಆ ಮಕ್ಕಳು ಅಮ್ಮನ ಬೆಚ್ಚನೆಯ ಸ್ಪರ್ಷದಿಂದ ವಂಚಿತರಾಗುತ್ತಾರಲ್ಲ ಎಂದೆನಿಸಿತು.  ನಮ್ಮ ಇಲ್ಲಿಯ ಮಕ್ಕಳನ್ನು ಮಲಗಿಸಬೇಕಾದರೆ ನೂರು ಬಾರಿ ತೂಗಿದರೂ ಅವು ಪಿಳಿಪಿಳಿ ಕಣ್ಣುಬಿಟ್ಟುಗೊಂಡೇ ಇರುತ್ತವಪ್ಪ. ತೂಗಿದ ನಮಗೇ (ಸ್ವಾನುಭವ!) ನಿದ್ರೆ ಬರುವಂತಾಗುತ್ತದೆ! ಅಂತೂ ನಿದ್ರೆ ಮಾಡಿದೆ ಎಂದು ಮಲಗಿಸಿ ನಿಟ್ಟುಸಿರು ಬಿಟ್ಟು ಬೆರೆ ಕೆಲಸಕ್ಕೆ ಹೋಗಿ ಹತ್ತು ನಿಮಿಷದಲ್ಲೆ ಮಗು ಎದ್ದ ಸೂಚನೆ ಸಿಕ್ಕಿ ಮಗುವಿನ ಅಳು ಕೇಳುತ್ತದೆ! 
  ಸ್ವಾಮಿ ನಾರಾಯಣ ಮಂದಿರ (112,N Main Street, Windsor, Robbinsville, NJ, 08561 USA)
  ನೀವು ಸ್ವಾಮಿ ನಾರಾಯಣ ಮಂದಿರ ನೋಡಲೇಬೇಕು ಇಲ್ಲಿಂದ ತುಂಬ ದೂರವಿಲ್ಲ ಎಂದು ಸರೋಜತ್ತೆ ಹೇಳಿದ್ದರು. ನಾವು ಚಹಾ ಕುಡಿದು ಅಲ್ಲಿಂದ ಹೊರಟು ೧೦-೧೫ ಮೈಲಿ ದೂರದಲ್ಲಿದ್ದ ಸ್ವಾಮಿ ನಾರಾಯಣ ಮಂದಿರ ತಲಪಿದೆವು. ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿರುವ ಅಮೃತಶಿಲೆಯಲ್ಲಿ ಕೆತ್ತಲಾಗಿರುವ ಸುಂದರ ದೇವಾಲಯ. ವಿಶಾಲವಾದ ಸ್ಥಳದಲ್ಲಿ ಭವ್ಯವಾಗಿ ಬೃಹತ್ತಾಗಿದೆ. ಮಂದಿರ ಕ್ಯಾಂಪಸ್ ಪ್ರವೇಶ ಬೆಳಗ್ಗೆ ೯ರಿಂದ ಸಂಜೆ ೭.೩೦ರವರೆಗೆ. ದೇವಾಲಯ ಪ್ರವೇಶ: ಬೆಳಗ್ಗೆ ೯ರಿಂದ ೧೦.೩೦, ೧೧.೧೫ರಿಂದ ೧೨ಗಂಟೆವರೆಗೆ. ಸಂಜೆ ೪.೩೦ರಿಂದ ೬.೧೫, ೭.೧೦ರಿಂದ ೭.೩೦ರವರೆಗೆ. ಶಾಯೋನಾ ಸ್ವೀಟ್ಸ್ ಮತ್ತು ಸ್ನ್ಯಾಕ್ ಸೆಂಟರಿನಲ್ಲಿ ಬೇಕಾದ ಕರಿದ ತಿಂಡಿ, ಸಿಹಿತಿಂಡಿಗಳು ನ್ಯಾಯಯುತ ಬೆಲೆಯಲ್ಲಿ ಸಿಗುತ್ತವೆ. ಅವನ್ನು ನೋಡಿಯೇ ಬಾಯಲ್ಲಿ ನೀರೂರಿತು!
  ಮಹೇಶನ ಸೋದರತ್ತೆಗೆ ಕೃತಜ್ಞತೆ ಹೇಳಬೇಕು. ಅವರು ಹೇಳಿದ್ದರಿಂದ ನಾವು ಅಲ್ಲಿಗೆ ಭೇಟಿ ಕೊಟ್ಟೆವು.  ದೇವಾಲಯ ತುಂಬ ಚೆನ್ನಾಗಿತ್ತು. ಅಲ್ಲಿ ಪಟ ಕ್ಲಿಕ್ಕಿಸಿಕೊಂಡೆವು.






  ಹೊಟೇಲ್ ಫ಼ೆಯರ್‌ಫೀಲ್ಡ್ ಇನ್ ಬೈ ಮ್ಯಾರಿಯೆಟ್ ನ್ಯೂಜೆರ್ಸಿ (Fairfield Inn by Marriott East Rutherford NJ) 
  ದೇವಾಲಯ ನೋಡಿ ಹೊರಡುವ ವೇಳೆಯಲ್ಲಿ ಸರೋಜತ್ತೆ ಮಹೇಶನಿಗೆ ಫೋನ್ ಮಾಡಿದರು.  ನೀವು ಪುನಃ ಬನ್ನಿ ಮಗ ಸೊಸೆಗೆ ನಿಮ್ಮನ್ನು ಭೇಟಿ ಆಗಲೇಬೇಕಂತೆ ಎಂದು. ನಾವು ವಾಪಾಸು ಅವರ ಮನೆಗೆ ಹೋಗಿ ಅವರೊಂದಿಗೆ ಮಾತಾಡಿ ಪಟ ಕ್ಲಿಕ್ಕಿಸಿಕೊಂಡು ೭ ಗಂಟೆಗೆ ಅಲ್ಲಿಂದ ಹೊರಟು ಹೊಟೇಲ್ ಮ್ಯಾರಿಯೆಟ್‌ಗೆ ತಲಪಿದೆವು. ಮೊದಲೇ ಕೋಣೆ ಕಾದಿರಿಸಿದ್ದೆವು. ರೈಸ್ ಕುಕ್ಕರ್, ಅಕ್ಕಿ, ರೆಡಿ ಟು ಈಟ್ ದಾಲ್ ಎಲ್ಲ ಕೊಂಡೋಗಿದ್ದೆವು. ಅನ್ನ ಮಾಡಿ ದಾಲ್ ಹಾಕಿ ಸಂಭ್ರಮದಿಂದ ಊಟ ಮಾಡಿದೆವು.

 ರಾತ್ರೆ ರೆಡ್ಲೂಪ್ (redloop)  Meadowlands ) ನದಿ ದಡದಲ್ಲಿ ಸುತ್ತಾಡಿದೆವು. ಕಾರು ಪಾರ್ಕ್ ಮಾಡಲು ಸ್ಥಳ ಸಿಗದೆ ಮಹೇಶ ರಸ್ತೆಯಲ್ಲಿ ಸುತ್ತು ಹೊಡೆದ. ನಾವು ಒಂದಷ್ಟು ದೂರ ನದಿ ದಂಡೆಯಲ್ಲಿ ಸುತ್ತಾಡಿ ರಾತ್ರೆಯ ಲೈಟಿನ ಸೊಬಗಿನಲ್ಲಿ ನದಿಯ ಆಚೆ ಇರುವ ನ್ಯೂಯಾರ್ಕ್ ಸಿಟಿಯ ಸೊಬಗನ್ನು ನೋಡಿ ಕಾರು ಹತ್ತಿ ವಾಪಾಸು ಹೊಟೇಲಿಗೆ ಮರಳಿ ವಿಶ್ರಾಂತಿ.

  ನ್ಯೂಯಾರ್ಕ್ ಸುತ್ತಾಟ
  ತಾರೀಕು ೩-೭.೨೦೧೮ರಂದು ಬೆಳಗ್ಗೆ ಎದ್ದು ತಿಂಡಿ ತಿಂದು (ಹೊಟೇಲು ವತಿಯಿಂದ ತಿಂಡಿ ಇದೆ. ನಮಗೆ ತಿನ್ನಲಾಗುವಂತದ್ದು ಎಂದರೆ ಬ್ರೆಡ್, ಹಣ್ಣು ಮಾತ್ರ) ೯ ಗಂಟೆಗೆ ಹೊರಟು ಹೊಟೇಲ್ ಎದುರುಗಡೆ ಇರುವ ಬಸ್ ನಿಲ್ದಾಣದಿಂದ ಬಸ್  ಹತ್ತಿದೆವು.
  ಟೈಮ್ ಸ್ಕ್ವೇರ್ 
ಬಸ್ ಇಳಿದು ಡೌನ್ ಟೌನ್ ಮ್ಯಾನ್‌ಹಟನ್‌ಗೆ ಬಂದೆವು. ಜಗತ್ತಿನಲ್ಲೇ ಜಾಸ್ತಿ ಪ್ರವಾಸಿಗರು ಬರುವ ಸ್ಥಳ ಟೈಮ್ ಸ್ಕ್ವೇರ್. ಪ್ರವಾಸಿಗರ ಬಹು ಆಕರ್ಷಣೆಯ ಸ್ಥಳ. ಪ್ರತೀ ವರ್ಷ ಒಂದು ಮಿಲಿಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ೨೦೧೮ರಲ್ಲಿ ಭೇಟಿ ಇತ್ತ ಮಿಲಿಯ ಪ್ರವಾಸಿಗಳಲ್ಲಿ ನಾವೂ ಸೇರಿಕೊಂಡೆವು!  ಅಲ್ಲಿ ಬೀದಿಯುದ್ದಕ್ಕೂ ಸುತ್ತಾಡಿದೆವು. 
  ಬಿಗ್ ಬಸ್ ಟೂರ್ (HOP-ON DISCOVER HOP_OFF EXPLORE) red loop
    ಬಿಗ್ ಬಸ್ ಗೆ ಟಿಕೆಟ್ ಖರೀದಿಸಿದೆವು. ರೆಡ್ ಲೂಪ್ ಬಸ್ಸಿನಲ್ಲಿ ನ್ಯೂಯಾರ್ಕ್ ಪೇಟೆ ಇಡೀ ದಿನ ಸುತ್ತಬಹುದು. ಬಸ್ ಹತ್ತಿ ಒಂದೊಂದು ಪ್ರೇಕ್ಷಣೀಯ ಸ್ಥಳ ಬಂದಾಗ ಅಲ್ಲಿ ಇಳಿದು ನೋಡಿ ಮತ್ತೊಂದು ಬಿಗ್ ಬಸ್ ಬಂದಾಗ ಹತ್ತಿ ಮುಂದಿನ ಸ್ಥಳಕ್ಕೆ ಹೋಗಬಹುದು. ಟಾಪ್ ಲೆಸ್ ಬಸ್ ನಲ್ಲಿ ಮೇಲೆ ಹತ್ತಿ ಕೂತೆವು. ವೈಫೈ, ಕಿವಿಗೆ ಸಿಕ್ಕಿಸಲು ಇಯರ್ಫೋನ್, ಮಳೆ ಅಂಗಿ ಉಚಿತ ಸೌಲಭ್ಯವಿದೆ. ಪ್ರತಿಯೊಂದು ಸ್ಥಳದ ಬಗ್ಗೆಯೂ ವೀಕ್ಷಕ ವಿವರಣೆ ಇದೆ. ೭೦ ವಯಸ್ಸು ಮೀರಿದ ಒಬ್ಬರು ನಿರರ್ಗಳವಾಗಿ ವಿವರಣೆ ನೀಡಿದ್ದರು. ಅವರ ಆ ಉತ್ಸಾಹವನ್ನು ಬಲು ಮೆಚ್ಚಿದೆವು. ಎಂಪಾಯರ್ ಕಟ್ಟಡವನ್ನು ಬಸ್ಸಿನಿಂದಲೇ ನೋಡಿದೆವು.











  ಬ್ರೂಕ್ಲಿನ್ ಬ್ರಿಡ್ಜ್ (BROOKLYN BRIDGE) 
ಮೊದಲಿಗೆ ನಾವು ಬ್ರೂಕ್ ಲಿನ್ ಬ್ರಿಡ್ಜ್ ಬಳಿ ಬಸ್ಸಿಳಿದೆವು. ಸೇತುವೆ ಮೇಲೆ ೧ ಮೈಲಿ ನಡೆದು ನದಿ, ಸುತ್ತ ಇರುವ ದೊಡ್ಡ ದೊಡ್ಡ ಕಟ್ಟಡ ನೋಡಿ, ನಮ್ಮ ಪಟ ಕ್ಲಿಕ್ಕಿಸಿಕೊಂಡು ವಾಪಾಸಾದೆವು. ೧೩೫ ವರ್ಷವಾದರೂ ಸೇತುವೆ ಗಟ್ಟಿಮುಟ್ಟಾಗಿ ಬಹಳ ಚೆನ್ನಾಗಿದೆ. 
   ಈ ಸೇತುವೆ ಕಟ್ಟಲು ೧೮೬೯ರಲ್ಲಿ ಸುರು ಮಾಡಿ ೧೪ ವರ್ಷಗಳ ತರುವಾಯ ೧೮೮೩ರಲ್ಲಿ ಮುಗಿಸಿದರು. ೧೫೯೫.೫ ಅಡಿ ಉದ್ದ, ೨೭೬.೫ ಅಡಿ ಎತ್ತರ, ೮೫ ಅಡಿ ಅಗಲವಿರುವ ಈ ಸೇತುವೆಯಲ್ಲಿ ೬ ಲೈನಿನಲ್ಲಿ ವಾಹನ ಸಂಚಾರವಿದೆ. ನಡೆಯುವವರಿಗೆ ಹಾಗೂ ಸೈಕಲಿಗರಿಗೆ ಪ್ರತ್ಯೇಕ ದಾರಿಯಿದೆ. ಈ ಸೇತುವೆಯ ವಿನ್ಯಾಸಗಾರ ಜಾನ್ ಅಗಸ್ಟಸ್ ರೊಯಿಬ್ಲಿಂಗ್.


 ವೆಸ್ಟ್ ಫೀಲ್ಡ್ ವರ್ಲ್ಡ್ ಟ್ರೇಡ್ ಸೆಂಟರ್
   ಬ್ರೂಕ್ಲಿನ್ ಬ್ರಿಡ್ಜ್ ನೋಡಿ ಅಲ್ಲಿಂದ ಬಸ್ ಹತ್ತಿ ವರ್ಲ್ಡ್ ಟ್ರೇಡ್ ಸೆಂಟರ್ ಗೆ ಹೋದೆವು. ಮ್ಯಾನ್ ಹಟನ್ ನಲ್ಲಿ ಅತ್ಯಂತ ದೊಡ್ಡ ಮಾಲ್ ಇದು. ವಿಶಿಷ್ಟಾಕೃತಿಯ ಈ ಕಟ್ಟಡ ನೋಡಲು ಚೆನ್ನಾಗಿದೆ. ಅಲ್ಲಿ ಕಟ್ಟಡದೊಳಗೆ ಇಡೀ ಸುತ್ತಾಡಿದೆವು. ೧೬ ಆಗಸ್ಟ್ ೨೦೧೬ರಲ್ಲಿ ಸ್ಥಾಪಿಸಲ್ಪಟ್ಟ ಈ ಕಟ್ಟಡದಲ್ಲಿ ೧೧೬ ಅಂಗಡಿ ಮಳಿಗೆಗಳಿವೆ.




  ೯/೧೧ ಮೆಮೋರಿಯಲ್ ಮ್ಯೂಸಿಯಂ
೧೧ ಸೆಪ್ಟೆಂಬರ ೨೦೦೧ರಂದು ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡಕ್ಕೆ ಬಾಂಬ್ ಬಿದ್ದು ೨೯೭೭ ಮಂದಿ ಸಾವಿಗೀಡಾಗಿದ್ದರು.  ಆ ಕಟ್ಟಡ ನೆಲಸಮವಾಗಿತ್ತು. ಅದೇ ಸ್ಥಳದಲ್ಲಿ ಮಡಿದವರೆಲ್ಲರ ನೆನಪಿಗಾಗಿ ಈಗ ಒಂದು ಮ್ಯೂಸಿಯಂ ಮಾಡಿದ್ದಾರೆ. ಮಧ್ಯೆ ನೀರಿನ ಚಿಲುಮೆ. ಸುತ್ತಲೂ ಬಾಂಬ್ ಸ್ಫೋಟದಲ್ಲಿ ಮಡಿದವರೆಲ್ಲರ ಹೆಸರನ್ನು ಕಂಚಿನ ಪ್ರತಿಮೆಯಲ್ಲಿ ಕೆತ್ತಿದ್ದಾರೆ.  ೨೦೦೬ ಮಾರ್ಚಿ ತಿಂಗಳಲ್ಲಿ ಕಟ್ಟಲು ಸುರುವಾಗಿ ೧೨ ಸೆಪ್ಟೆಂಬರ ೨೦೧೧ರಂದು ಅಲ್ಲಿ ಮಡಿದ ಜನರ ಕುಟುಂಬದ ಸದಸ್ಯರಿಂದ ಲೋಕಾರ್ಪಣೆಗೊಳಿಸಲಾಯಿತು. ಅಲ್ಲಿ ಒಂದೊಂದು ಹೆಸರು ಓದುತ್ತ ಹೋದಂತೆ ಮನಸ್ಸು ಆರ್ದ್ರಗೊಂಡಿತು. ಮನುಜರು ಎಂಥ ಕ್ರೂರಿಗಳು ಎಂದು ಚಿಂತಿಸುವಂತಾಯಿತು. ನಾವು ಮ್ಯೂಸಿಯಂ ಒಳಗೆ ಹೋಗಲಿಲ್ಲ.




 ಅಲ್ಲಿಂದ ನಾವು ಭಾರತೀಯರ ಹೊಟೇಲು ಎಲ್ಲಿದೆ ಎಂದು ಹುಡುಕಿ ಅನತಿ ದೂರದಲ್ಲೇ ಇದ್ದ ರುಚಿ ರೆಸ್ಟೋರೆಂಟ್ ಹೊಕ್ಕು ಊಟ ಮಾಡಿದೆವು. 
  ಸ್ಟೇಟನ್ ದ್ವೀಪ (STATEN ISLAND) 
   ಮ್ಯಾನ್ ಹಟನಿನಿಂದ ನಾವು ಫೆರ್ರಿಯಲ್ಲಿ ಸ್ಟೇಟನ್ ದ್ವೀಪಕ್ಕೆ ಹೋದೆವು. ನ್ಯೂಯಾರ್ಕ್ ಸಿಟಿಯಿಂದ ಸ್ಟೇಟನ್ ದ್ವೀಪಕ್ಕೆ ಫೆರ್ರಿಯಲ್ಲಿ ಉಚಿತ ಪ್ರಯಾಣ. ೩೬೫ ದಿನವೂ ೨೪ ಗಂಟೆಯೂ ಫೆರ್ರಿ ಲಭ್ಯ. ೫.೨ ಮೈಲಿ ಸಮುದ್ರದಲ್ಲಿ ಚಲಿಸುತ್ತದೆ. ಪ್ರತೀ ೧೫ರಿಂದ ೨೦ ನಿಮಿಷಕ್ಕೆ ಫೆರ್ರಿ ಆ ಕಡೆಯಿಂದ ಈ ಕಡೆಗೆ ಲಭ್ಯವಿದೆ. ಪಯಣದ ಅವಧಿ ಮೂವತ್ತು ನಿಮಿಷ. ಅಟ್ಲಾಂಟಿಕ್ ಬೇ ನ್ಯೂಯಾರ್ಕ್ ಸಿಟಿ ಡಿಪಾರ್ಟ್ಮೆಂಟ್ ಆಫ್ ಟ್ರಾನ್ಸಪರೇಶನ್ ಈ ಫೆರ್ರಿ ಸೇವೆ ಸಲ್ಲಿಸುತ್ತಿದೆ. ದಿನಕ್ಕೆ ಸುಮಾರು ೬೫ಸಾವಿರ ಮಂದಿ ಫೆರ್ರಿಯಲ್ಲಿ ಪ್ರಯಾಣಿಸುತ್ತಾರೆ. ಒಂದು ಫೆರ್ರಿಯಲ್ಲಿ ಒಮ್ಮೆಗೇ ೬ ಸಾವಿರ ಮಂದಿ ಪ್ರಯಾಣಿಸಬಹುದು. 
  ನಾವು ಫೆರ್ರಿಯಲ್ಲಿ ಮೇಲ್ಭಾಗ ಹತ್ತಿ ನಿಂತು ಪ್ರಯಾಣಿಸಿದೆವು. ಫೆರ್ರಿ ಪಯಣ ತುಂಬ ಖುಷಿ ಕೊಡುತ್ತದೆ. ಸಮುದ್ರದ ನೀರನ್ನು ಸೀಳಿಕೊಂಡು ಪಯಣಿಸುವುದನ್ನು ನೋಡುವುದೇ ಆನಂದ. ದೂರದಲ್ಲಿ ಸ್ಟಾಚ್ಯೂ ಆಫ್ ಲಿಬರ್ಟಿ ಪ್ರತಿಮೆ ಕಾಣುತ್ತದೆ. (ನಾವು ಅಲ್ಲಿಗೆ ಹೋಗಲಿಲ್ಲ. ದೂರದಿಂದಲೆ ನೋಡಿ ತೃಪ್ತಿ ಹೊಂದಿದೆವು. ಅಲ್ಲಿಗೆ ಹೋಗಬೇಕಾದರೆ ಮುಂಗಡ (ಸುಮಾರು ತಿಂಗಳು ಮೊದಲೇ) ಟಿಕೆಟ್ ಕಾದಿರಿಸಬೇಕಂತೆ.)











  ಫೆರ್ರಿ ಇಳಿದು ನಾವು ಸ್ಟೇಟನ್ ದ್ವೀಪದಲ್ಲಿ ಒಂದು ಸುತ್ತು ಅಡ್ಡಾಡಿ ಪುನಃ ಫೆರ್ರಿ ಹತ್ತಿ ಮ್ಯಾನ್ ಹಟನಿಗೆ ಬಂದೆವು. 
ಬ್ಯಾಟರಿ ಪಾರ್ಕ್
 ನಾವು ನಡೆಯುತ್ತ ಬ್ಯಾಟರಿ ಪಾರ್ಕಿಗೆ ಹೋದೆವು. ಈ ಸಾರ್ವಜನಿಕ ಉದ್ಯಾನವನ ೨೫ ಎಕರೆ ಪ್ರದೇಶದಲ್ಲಿ ೧೮೨೩ರಲ್ಲಿ  ಸ್ಥಾಪಿಸಲ್ಪಟ್ಟಿದೆ.  ಇಲ್ಲಿ ಸುಮಾರು ಸ್ಮಾರಕಗಳು, ದೋಣಿ ಟರ್ಮಿನಲ್ಗಳನ್ನು ನೋಡಬಹುದು.  ಇಲ್ಲಿಂದ ಸ್ಟಾಚ್ಯೂ ಆಫ್ ಲಿಬರ್ಟಿ ಚೆನ್ನಾಗಿ ಕಾಣುತ್ತದೆ. ಅಲ್ಲಿಗೆ ಹೋಗಲು ಅಲ್ಲಿಂದ ಫೆರ್ರಿ ಸರ್ವಿಸ್ ಇದೆ. ಪ್ರವೇಶ ಸಮಯ: ಬೆಳಗ್ಗೆ ೬ರಿಂದ ಬೆಳಗಿನ ಝಾವ ೧ ಗಂಟೆವರೆಗೆ
ಕಾಯುವಿಕೆಗಿಂತ ಅನ್ಯ ತಪವು ಇಲ್ಲ. 
  ಹೋಪ್ ಆನ್ ಹೋಪ್ ಆಫ್ ಬಸ್‌ಗೆ ಕಾದು ನಿಂತೆವು. ಈ ಬಸ್ಸಿಗೆ ಅವರು ನಿಗದಿಪಡಿಸಿದ ನಿರ್ದಿಷ್ಟ ಸ್ಥಳಗಳಲ್ಲಿ ಎಲ್ಲಿ ಬೇಕಾದರೂ ಬಸ್ ಹತ್ತಿ ಇಳಿಯಬಹುದು. ಬಸ್ಸಿಗೆ ಗಂಟೆಗಟ್ಟಲೆ ಕಾದುನಿಲ್ಲಬೇಕಾಯಿತು. ನೀಲಿ ಬಸ್ ಒಂದರ ಹಿಂದೆ ಒಂದು ಸಾಗುತ್ತಲೆ ಇತ್ತು. ಛೆ! ನಾವು ನೀಲಿ ಬಸ್ಸಿಗೆ ಟಿಕೆಟ್ ಮಾಡಬೇಕಿತ್ತು ಎಂಬ ಹಾಪಾಹಪಿ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸರಿಯುವುದೇ ಜೀವನ!  ಆಗ ಮಳೆ ಹನಿಯಿತು. ಬಿಗ್ ಬಸ್ಸಿನವರು ಕೊಟ್ಟ ಮಳೆ ಅಂಗಿ ಆಗ ಪ್ರಯೋಜನಕ್ಕೆ ಬಂತು. ಮೇಲ್ಚಾವಣಿ ಇಲ್ಲದ ಬಸ್ ಆದ ಕಾರಣ ನಮಗೆ ಮಳೆ ಅಂಗಿ ಕೊಡುತ್ತಾರೆ. ಅಂತೂ ಕಾದು ಕಾದು  ನಮ್ಮ ಸಹನೆಯ ಕಟ್ಟೆ ಒಡೆಯುವ ಮೊದಲೇ ಬಸ್ ಬಂತು. ಹತ್ತಿ ನಾವು ಟೈಮ್ ಸ್ಕ್ವೇರ್‌ನಲ್ಲಿ ಇಳಿದು ರಾತ್ರಿ ಟೂರಿನ ಬಸ್ ಹತ್ತಲು ಸರದಿ ಸಾಲಿನಲ್ಲಿ ನಿಂತೆವು. ಬಸ್ ಬರಲು  ಅಲ್ಲೂ ಒಂದು ಗಂಟೆ ನಿಲ್ಲಬೇಕಾಯಿತು.

 ನ್ಯೂಯಾರ್ಕ್ ರಾತ್ರಿ ಸುತ್ತಾಟ
   ಮೇಲ್ಚಾವಣಿಯಿಲ್ಲದ ಬಸ್ ಹತ್ತಿ ಕೂತು ನ್ಯೂಯಾರ್ಕ್ ಸಿಟಿ ಸುತ್ತಾಟ. ಟೈಮ್ ಸ್ಕ್ವೇರಿನಲ್ಲಿ ಜನಸಂದಣಿ ವಿಪರೀತವಾಗಿತ್ತು. ವಿದ್ಯುತ್ ದೀಪದ ಬೆಳಕಿನಲ್ಲಿ ಪಟ್ಟಣ ಕಂಗೊಳಿಸುತ್ತಿತ್ತು. ಮ್ಯಾನ್ ಹಟನ್ ಸೇತುವೆ ಮೇಲೆ ಬಸ್ ಸಾಗಿದಾಗ ಬ್ರೂಕ್ ಲಿನ್ ಸೇತುವೆ ದೀಪದಿಂದ ಜಗಮಗ ಕಾಣಿಸುತ್ತಿತ್ತು. ಒಂದು ಗಂಟೆ ಸುತ್ತಾಟದಲ್ಲಿ ಬಸ್ಸಿನಲ್ಲಿದ್ದ ವೀಕ್ಷಕ ವಿವರಣೆಗಾರ ಒಂದು ನಿಮಿಷ ಮಾತು ನಿಲ್ಲಿಸದೆ ಪ್ರತಿಯೊಂದು ಕಟ್ಟಡವನ್ನೂ ಅದರ ಇತಿಹಾಸವನ್ನೂ ಇರುವುದಕ್ಕಿಂತ ಹೆಚ್ಚು ಉಪಮೆಯಿಂದ ವಿವರಿಸುತ್ತಿದ್ದರು. ಕೇಳಲು ತಮಾಷೆಯಾಗಿತ್ತು. ನಾವು ಸುರುವಿಗೆ ಇಯರ್ ಪೋನ್ ವಯರನ್ನು ಕಿವಿಗೆ ಸಿಕ್ಕಿಸಿ ಉಮೇದಿನಿಮ್ದ ವೀಕ್ಷಕ ವಿವರಣೆ ಕೇಳುತ್ತಿದ್ದೆವು. ಮುಂದೆ ಸಾಗುತ್ತ ಹೋದಂತೆ ಕೇಳದೆಯೇ ದೃಶ್ಯ ನೋಡುವುದೇ ಹಿತವೆನಿಸಿತು! ಅದರನಂತರ ಅನಂತನೂ ಪ್ರತಿಯೊಂದು ಕಟ್ಟಡ ನೋಡಿ ಅವರು ವಿವರಿಸಿದಂತೆ ಉತ್ಪ್ರೇಕ್ಷೆ ಬಳಸಿ ಮಿಮಿಕ್ರಿ ಮಾಡುತ್ತಲಿದ್ದ! ಒಂದು ಗಂಟೆಯ  ರಾತ್ರಿಯ ತಂಪಾದ ಹವೆಯಿಂದ ಕೂಡಿದ ಈ ಪಟ್ಟಣ ಸುತ್ತಾಟ ಆಹ್ಲಾದಕರವಾಗಿತ್ತು.










  ನಾವು ಸಿಟಿ ಬಸ್ ಹತ್ತಿ  ಮರಳಿ ನಮ್ಮ ಹೊಟೇಲ್ ಕೋಣೆಗೆ  ರಾತ್ರಿ ಹತ್ತು ಗಂಟೆಗೆ  ತಲಪಿದೆವು.

  ಬ್ಲೂ ಲೂಪ್ ಟೂರ್ ಬಸ್ 
ತಾರೀಕು ೪. ೭.೧೮ರಂದು ಬೆಳಗ್ಗೆ ಬೇಗ ಹೊರಟು ಸಿಟಿ ಬಸ್ ಹತ್ತಿ ಟೈಮ್ ಸ್ಕ್ವೇರ್ ಗೆ ಹೋದೆವು. ಅಲ್ಲಿಂದ ಬ್ಲೂ ಟೂರ್ ಬಸ್ ಹತ್ತಿದೆವು. ರೆಡ್ ಲೂಪ್ ಬಸ್ಸಿನಲ್ಲಿ ಡೌನ್ ಟೌನ್ ನೋಡಲು ಹೋಗಬಹುದು. ಬ್ಲೂ ಲೂಪ್ ಬಸ್ಸಿನಲ್ಲಿ ಅಪ್ ಟೌನ್ ನೋಡಬಹುದು. ನಾವು ಎರಡು ದಿನಕ್ಕೆ ಟಿಕೆಟ್ ಕೊಂಡಿದ್ದೆವು. 




ಸೆಂಟ್ರಲ್ ಪಾರ್ಕ್ 
 ನಾವು ಸೆಂಟ್ರಲ್ ಪಾರ್ಕಿಗೆ ಹೋದೆವು. ೮೪೩ ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಹಬ್ಬಿದೆ. ಒಂದು ದಿನದಲ್ಲಿ ಈ ಪಾರ್ಕ್ ಇಡೀ ಸುತ್ತಲು ಸಾಧ್ಯವಿಲ್ಲ. ದಾರಿ ತಪ್ಪಬಹುದು. ನ್ಯೂಯಾರ್ಕಿನಲ್ಲಿರುವ ಉದ್ಯಾನವನಗಳಲ್ಲಿ ಇದು ೫ನೇ ಬೃಹತ್ ಪಾರ್ಕ್. ೧೮೫೭ರಿಂದ ೧೮೭೬ರಲ್ಲಿ ಈ ಪಾರ್ಕ್ ನಿರ್ಮಾಣಗೊಂಡಿತು. 
   ನಾವು ಸ್ವಲ್ಪ ದೂರ ನಡೆದೆವು. ಕೆಲವರು ಸೈಕಲಿನಲ್ಲಿ ಸುತ್ತುತ್ತಿದ್ದರು. ಅಲ್ಲಿ ವಾದ್ಯದಲ್ಲಿ ಹಾಡು ನುಡಿಸುತ್ತಿದ್ದರು. ಅದಕ್ಕೆ ಕೆಲವರು ನರ್ತಿಸುತ್ತಿದ್ದರು. ಅದು ಹಣ ಗಳಿಕೆಗೆ ಒಂದು ದಾರಿ. ಹಾಗೇ ಸುತ್ತಾಡುತ್ತ ಹೊರಭಾಗದಿಂದ ನ್ಯೂಯಾರ್ಕ್ ಯೂನಿವರ್ಸಿಟಿ ನೋಡಿದೆವು.






  ವಾಷಿಂಗ್ಟನ್ ಸ್ಕೇರ್ ಪಾರ್ಕ್  

ವಾಷಿಂಗ್ಟನ್ ಸ್ಕ್ವೇರ್ ಪಾರ್ಕ್ ಒಳಗೆ ಹೋದೆವು. ಅಲ್ಲಿ ಟ್ರಂಪ್ ವಿರೋಧಿ ಎಂದು ಫಲಕ ಹಾಕಿಕೊಂಡು ಕೂತಿದ್ದವರು, ಸಂಗೀತ ವಾದ್ಯ ನುಡಿಸುತ್ತಿದ್ದವರು, ಕಸರತ್ತು ನಡೆಸುತ್ತಿದ್ದವರನ್ನು ನೋಡುತ್ತ ಪಾರ್ಕಿನಲ್ಲಿ ಒಂದು ಸುತ್ತು ಹಾಕಿದೆವು. .




( NYದೋಸಾ)
   ವಾಷಿಂಗ್ಟನ್ ಸ್ಕ್ವೇರ್ ಪಾರ್ಕ್ ಹತ್ತಿರವಿರುವ ತಿರುಕುಮಾರ ಕಂದಸ್ವಾಮಿಯವರ ಗಾಡಿ ಹೊಟೇಲ್ ಬಳಿ ಮಧ್ಯಾಹ್ನ ಹೋದೆವು. NY dosas ಎಂದು ಅವರ ಗಾಡಿಯ ಹೆಸರು.  ಶೀಲಂಕಾ ಮೂಲದ ಇವರು ೧೭ ವರ್ಷಗಳಿಂದ ಇಲ್ಲಿ ಗಾಡಿ ಹೊಟೇಲ್ ನಡೆಸುತ್ತಿದ್ದಾರಂತೆ. ಅಲ್ಲಿ ಮಸಾಲೆ ದೋಸೆ ತಿಂದೆವು. ವಾಷಿಂಗ್ಟನ್ ಸ್ಕ್ವೇರ್ ಪಾರ್ಕ್ ದೋಸಾ ಎಂದು ಗೂಗಲಿನಲ್ಲಿ ಹುಡುಕಿದರೆ ಅವರ ಬಗ್ಗೆ ಎಲ್ಲ ವಿವರ ಸಿಗುತ್ತದೆ. ಅವರಿಗೆ ದೋಸಾ ಮ್ಯಾನ್ ಎಂದೇ ಹೆಸರಂತೆ! ಸಸ್ಯಾಹಾರವನ್ನು ಪ್ರಚಾರ ಮಾಡಿ ಉತ್ತೇಜಿಸುತ್ತಾರೆ. ತುಂಬ ಮಂದಿ ಅಮೇರಿಕನ್ನರು ಅವರು ಮಾಡುವ ದೋಸೆಯ ರುಚಿಗೆ ಮನಸೋತಿದ್ದಾರಂತೆ. ವೀಗನ್ ಆಹಾರಕ್ಕೆ ಪ್ರಸಿದ್ಧಿ ಪಡೆದಿದೆಯಂತೆ. ಆಪ್ನಾ ಲಂಚ್ ಗೆ ಹಸಿ ತರಕಾರಿ ಚಟ್ನಿಪುಡಿ ಹಾಕಿ ಕೊಡುತ್ತಾರೆ. ಅದಕ್ಕೆ ವಿಶಿಷ್ಟ ರುಚಿ ಇದೆ.








ನ್ಯೂಯಾರ್ಕ್ ಗ್ರಂಥಾಲಯ
  ನಾವು ದೋಸೆ ತಿಂದು ಬಾಡಿಗೆ ಕಾರು ಹತ್ತಿ ಲೈಬ್ರೆರಿ ಬಳಿ ಬಂದೆವು. ಅಮೇರಿಕಾದಲ್ಲೇ ಎರಡನೇ ಬೃಹತ್ ಗ್ರಂಥಾಲಯವದು. ಜಗತ್ತಿನ ಮೂರನೇ ಬೃಹತ್ ಗ್ರಂಥಾಲಯವಂತೆ. ಆದರೆ ಅದನ್ನು ನೋಡುವ ಅದೃಷ್ಟ ನಮಗಿರಲಿಲ್ಲ. ಆ ದಿನ ರಜಾದಿನವಾಗಿತ್ತು. ೧೮೯೫ರಲ್ಲಿ ಈ ಗ್ರಂಥಾಲಯ ಸ್ಥಾಪನೆಯಾಗಿದೆ. ಅದಕ್ಕೆ ೧೨೪ ವರ್ಷವೀಗ.

  ಬ್ರಯಂಟ್ ಪಾರ್ಕ್ 
ನಾವು ಬ್ರಯಂಟ್ ಪಾರ್ಕಿಗೆ ಹೋದೆವು. ಅಲ್ಲಿ ಗುಬ್ಬಚ್ಚಿಗಳ ಹಿಂಡು ನೋಡುತ್ತ ಸ್ವಲ್ಪ ಹೊತ್ತು ಕುಳಿತೆವು. ೯ ಎಕರೆ ಪ್ರದೇಶದಲ್ಲಿ ಈ ಉದ್ಯಾನವನವಿದೆ. ಅಲ್ಲಿ ಓಪನ್ ಲೈಬ್ರೆರಿ ಕಂಡು ಬಹಳ ಸಂತೋಷವಾಯಿತು. ಅಲ್ಲಿ ಕೂತು ಜನ ಓದುತ್ತಿದ್ದರು. ಅಂಡ್ರಾಯ್ಡ್ ಪೋನ್ ಕಾಲದಲ್ಲಿ ಪುಸ್ತಕ ಓದುವವರೂ ಇದ್ದಾರಲ್ಲ ಎಂದು ಖುಷಿಯಾಯಿತು. ಏನಿದ್ದರೂ ಪುಸ್ತಕ ಓದುವ ಸುಖ, ಗಣಕ, ಮೊಬೈಲಿನಲ್ಲಿ,   ಅಂತರ್ಜಾಲದಲ್ಲಿ ಓದಿದರೆ ಸಿಗದು. ಅಲ್ಲಿ ಬುಕ್ ಕ್ಲಬ್ ಇದೆ. ವಿಲಿಯಂ ಕುಲೆನ್ ಬ್ರ್ಯಾಂಟ್ ಅವರ ಕಂಚಿನ ಪ್ರತಿಮೆ ಇದೆ.






   ಅಮೇರಿಕಾ ದೇಶದಲ್ಲಿ ಸಾಕಷ್ಟು ಉದ್ಯಾನವನಗಳಿವೆ. ಎಲ್ಲಾ ಉದ್ಯಾನವನಗಳೂ, ವಿಸ್ತ್ರೀಣದಲ್ಲಿ ಬಲು ದೊಡ್ಡದೇ ಇದ್ದು, ಬಹಳ ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ನಡೆದಾಡಲು ಸಾಕಷ್ಟು ಕಾಲುದಾರಿಗಳು ಇವೆ. ಎಷ್ಟು ಬೇಕಾದರೂ ನಡೆದು ದಣಿಯಬಹುದು. 
  ಅಲ್ಲಿಂದ ನಾವು ಪೇಟೆಯಲ್ಲಿ ಸುತ್ತಾಡಿದೆವು. ಪೇಟೆ ಬೀದಿಯಲ್ಲಿ ಹೊಟ್ಟೆಪಾಡಿಗಾಗಿ ನಾನಾ ಕಲೆಯಲ್ಲಿ ಪರಿಣತರು ತಮ್ಮ ಕಲೆಯನ್ನು ಪ್ರದರ್ಶಿಸುವವರು ಬೀದಿಯುದ್ದಕ್ಕೂ ಕಂಡೆವು.




 ಬಸ್ ಹತ್ತಿ ಹೊಟೇಲ್ ಮೇರಿಯೆಟ್‌ಗೆ ಸಂಜೆ ೪.೩೦ಗೆ ತಲಪಿದೆವು. ತುಸು ವಿಶ್ರಮಿಸಿದೆವು.
  ಹೊಬೇಕನ್ ರಿವರ್ (Hoboken Hudson)
  ನಾವು ನಮ್ಮ ಕಾರಿನಲ್ಲಿ ಸಂಜೆ ೫.೩೦ಕ್ಕೆ ಹೊರಟು ಆರೇಳು ಮೈಲಿ ದೂರದಲ್ಲಿದ್ದ ನ್ಯೂಜೆರ್ಸಿಯ ಹೊಬೆಕನ್ ರಿವರ್‌ಗೆ ಹೋದೆವು. ಮಹೇಶ ಅಲ್ಲಿಗೆ ಹಿಂದೆ ಕೆಲಸದ ಮೇಲೆ ಬಂದಿದ್ದಾಗ ಅದನ್ನು ನೋಡಿದ್ದನಂತೆ. ಅಲ್ಲಿಗೆ ಹೋಗುವ ಚೆನ್ನಾಗಿದೆ ಸ್ಥಳ ಎಂದು ನಮಗೆ ತೋರಿಸುವ ಸಲುವಾಗಿ ಇಡೀ ದಿನದ ಸುತ್ತಾಟದಿಂದ ಅವನಿಗೆ ಸುಸ್ತಾದರೂ ಉಮೇದಿನಿಂದ ಹೊರಡಿಸಿದ. ಅಲ್ಲಿ ಕಾರು ಪಾರ್ಕ್ ಮಾಡಲು ಸ್ಥಳ ಸಿಗಲಿಲ್ಲ. ನಮ್ಮನ್ನು ಇಳಿಸಿ ಮಹೇಶ ಅಲ್ಲೇ ಸುತ್ತು ಹೊಡೆದ. ನಾವಿಳಿದು ಸರೋವರದ ಬಳಿ ನಡೆದು ಅಲ್ಲಿಂದ ಪಿಯರ್ ಸಿ ಪಾರ್ಕ್, ಹಡ್ಸನ್ ರಿವರ್, ನ್ಯೂಯಾರ್ಕಿನ ಮಾನ್ ಹಟನಿನ ಸ್ಕೈಲೈನ್ ಎಲ್ಲ ಸುಂದರವಾಗಿ ಕಾಣುತ್ತದೆ. ಪಾರ್ಕಿನಲ್ಲಿ ತುಂಬ ಜನರಿದ್ದರು. ನದಿಯ ಎದುರು ಭಾಗದಲ್ಲಿ ಅಡ್ಡಾಡಿದೆವು. ನದಿಯ ಆಚೆ ಬದಿ ನ್ಯೂಯಾರ್ಕ್ ನಗರ. ನಗರದ ಸೌಂದರ್ಯ ನೋಡಿಯಾಗುವಾಗ ಮಹೇಶ ಬಂದ. ನಾವು ಹತ್ತಿ ಹೊಟೇಲಿಗೆ ಹೋದೆವು. ಅಲ್ಲಿ ಅನ್ನ ಸಾರು ಮಾಡಿ ಊಟ ಮಾಡಿದೆವು.


  ಬಫೆಲೋಗೆ ಪಯಣ 
ತಾರೀಕು ೫.೭.೧೮ರಂದು ತಿಂಡಿಗೆ ನೂಡಲ್ಸ್, ಕುಟ್ಟವಲಕ್ಕಿ ಮಾಡಿದೆವು. ಹೊಟೇಲಲ್ಲಿ ಸಿಗುವ ಬ್ರೆಡ್ ತಿ ಸಾಕಾಗಿತ್ತು! ಮಧ್ಯಾಹ್ನಕ್ಕೆಂದು ಟೊಮೊಟೋ ಭಾತ್ ಮಾಡಿ ಬುತ್ತಿಗೆ ತುಂಬಿಟ್ಟಳು ಅಕ್ಷರಿ. ೧೦ ಗಂಟೆಗೆ ನಾವು ನ್ಯೂಜೆರ್ಸಿಯ ಹೊಟೇಲ್ ಬಿಟ್ಟೆವು. ಮುಂದಿನ ಪಯಣ ಬಫೆಲೋ. ಅಲ್ಲಿ ನನ್ನ ಸೋದರತ್ತೆ ಮಗ ಶಂಭು ಉಪಾಧ್ಯಾಯ ಇದ್ದಾನೆ. ಅವನು ಬಫೆಲೊ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್. ಅವನ ಹೆಂಡತಿ ವಿನೋದ. ಅವರಿಗೆ ಇಬ್ಬರು ಮಕ್ಕಳು. ಮಗ ಕೃಷ್ಣ, ಮಗಳು ಭಾವನಾ. ನ್ಯೂಜೆರ್ಸಿಯಿಂದ ಬಫೆಲೋ ಸುಮಾರು ೩೦೩ ಮೈಲಿ. ರೆಸ್ಟ್ ಏರಿಯಾದಲ್ಲಿ ನಾವು ಟೊಮೊಟೋ ಭಾತ್ ತಿಂದೆವು. ಅಲ್ಲಿ ನಮಗೆ ಸುಳ್ಯದ ಬಳಿ ಮನೆ ಇರುವ ಉದಯ ಎಂಬವರು ಸಿಕ್ಕಿ ಮಾತಾಡಿದರು. ನಾವು ಹವ್ಯಕ ಭಾಷೆ ಮಾತಾಡುವುದು ಕೇಳಿ ನಮ್ಮನ್ನು ಮಾತಾಡಿಸಿದ್ದಂತೆ ಅವರು. 
  ಅಲ್ಲಿ ಐ ಲವ್ ನ್ಯೂಯಾರ್ಕ್ ಎಂಬ ಫಲಕ ಇತ್ತು. ಅದರೆದುರು ಪಟ ಕ್ಲಿಕ್ಕಿಸಿಕೊಂಡು ಹೊರಟೆವು.

   ರಸ್ತೆಯಲ್ಲಿ ಉದ್ದಕ್ಕೂ ಸಾಗಿದೆವು. ಇಕ್ಕೆಲಗಳಲ್ಲಿ ಕೆಲವೆಡೆ ಗದ್ದೆಯಲ್ಲಿ ಜೋಳ ಬೆಳೆದದ್ದು ಕಾಣುತ್ತಲಿತ್ತು. ಎಕರೆಗಟ್ಟಲೆ ಗದ್ದೆಗಳು. ಆ ಗದ್ದೆಗಳಿಗೆ ಹೋಗಲು ಮೇಲ್ಸೇತುವೆ. ರೈತರು ಮುಖ್ಯ ರಸ್ತೆಗೆ ಬರಬೇಕಾಗುವುದಿಲ್ಲ. ರಸ್ತೆ ದಾಟಲೂ ಸಾಧ್ಯವಿಲ್ಲ. ಅಷ್ಟು ವಾಹನ ಸಂಚಾರವಿರುತ್ತದಲ್ಲ. ಹಾಗಾಗಿ ಬೇರೆಯೇ ರಸ್ತೆ ಅವರಿಗೆ. ಅಚ್ಚುಕಟ್ಟಾದ ವ್ಯವಸ್ಥೆ ಅದು.







  ಸಂಜೆ ೬.೧೫ಕ್ಕೆ ನಾವು ಶಂಭುಭಾವನ ಮನೆ ತಲಪಿದೆವು. ಗೂಗಲಣ್ಣನ ಸಹಾಯದಿಂದ ಯಾವುದೇ ರಾಜ್ಯದ ಯಾವ ಊರಿಗಾದರೂ ಸುಲಲಿತವಾಗಿ ತಲಪಬಹುದು. ಅಲ್ಲಿ ನಾವು ೭ ಗಂಟೆಗೇ ಊಟ ಮಾಡಿದೆವು. ಪಾವ್ ಬಾಜಿ, ಅನ್ನ ಸಾರು ಪಲ್ಯ, ಪಾಯಸ. ಭರ್ಜರಿ ಊಟವನ್ನು ವಿನೋದಕ್ಕ ಬಡಿಸಿ ಉಪಚರಿಸಿದಳು. ಅವರ ಮಕ್ಕಳು  ವ್ಯಾಸಂಗದ ಪ್ರಯುಕ್ತ ಬೇರೆ ಊರಲ್ಲಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ