ಗುರುವಾರ, ನವೆಂಬರ್ 28, 2019

ಅಮೇರಿಕಾ ಪರ್ಯಟನ ಭಾಗ ೫

   ಸ್ಟ್ರಾಬೆರಿ ಹಣ್ಣು ಕೊಯ್ಯುವ ಸಂಭ್ರಮ (hoffman farms store, 22242SSW scholls Ferry Rd, Beaverton, OR 97007 USA
   ೧೨.೬-೧೮ರಂದು ಮಧ್ಯಾಹ್ನ ೧೨ ಗಂಟೆಗೆ ಜಯಶ್ರೀ ನಮ್ಮನ್ನು ಹಾಫ್ ಮ್ಯಾನ್ ಫಾರ್ಮ್  ಸ್ಟ್ರಾಬೆರಿ ತೋಟಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಸ್ಟ್ರಾಬೆರಿ ಬೆಳೆದ ಹೊಲ ಸಾಕಷ್ಟು ವಿಸ್ತಾರವಾಗಿತ್ತು. ಜೇನು ಕೃಷಿಯೂ ಅಲ್ಲಿದ್ದದ್ದು ಕಂಡೆವು.ಹಣ್ಣು ಕೊಯಿದು ಎಷ್ಟು ಬೇಕಾದರೂ ಉಚಿತವಾಗಿ ಅಲ್ಲೇ ತಿನ್ನಬಹುದು.


 ನಾವು ಹೊಟ್ಟೆಬಿರಿಯ ತಿಂದೆವು.  ನಮಗೆ ಬೇಕಾದಷ್ಟು ಕೊಯ್ಯಬಹುದು. ನಾವು ೨೦ ಪೌಂಡ್ ಸ್ಟ್ರಾಬೆರಿ ಕೊಯಿದು ಅದಕ್ಕೆ ೨೦ ಡಾಲರ್ ಕೊಟ್ಟೆವು.


 ಅದೊಂದು ವಿಶಿಷ್ಟ ಅನುಭವ ನಮಗೆ. ಕಡಿಮೆ ಬೆಲೆಗೆ ತಾಜಾ ಹಣ್ಣು ಲಾಭ.  ತುಂಬ ಮಂದಿ ಅಲ್ಲಿಗೆ ಹಣ್ಣು ಕೊಯ್ಯಲು ಬಂದಿದ್ದರು. ಹೀಗೆ ಕೊಯಿದ ಹಣ್ಣುಗಳನ್ನು ಜಾಮ್ ಮಾಡುತ್ತಾರಂತೆ. ಫಲ್ಪ್ ಮಾಡಿ ಫ್ರೀಜರಿನಲ್ಲಿ ಇಟ್ಟುಕೊಳ್ಳುತ್ತಾರಂತೆ. ಅಲ್ಲಿ ಒಬ್ಬರದೇ ಎಕರೆಗಟ್ಟಲೆ ಹೊಲವಿರುತ್ತದೆ. ಅಲ್ಲಿ ಕೆಲಸಗಾರರು ಡೆನ್ಮಾರ್ಕಿನವರು. ಸ್ಟ್ರಾಬೆರಿಯಲ್ಲೇ ಎರಡು ಮೂರು ನಮೂನೆಯವು ಇವೆ.  ಆ  ತೋಟದಲ್ಲಿ  ಸುಮಾರು ವಿಧದ ಸ್ಟ್ರಾಬೆರಿ ಹಣ್ಣು ಬೆಳೆದಿದ್ದರು. ನಾನಾ ನಮೂನೆಯ ಹಣ್ಣಿನ ಗಿಡಗಳನ್ನು ಅಲ್ಲಿ ಕಂಡೆವು. ಅಲ್ಲಿ  ಅವರದೇ ಅಂಗಡಿಯಲ್ಲಿ ಹಣ್ಣಿನ ಜಾಮ್, ಜ್ಯೂಸ್ ಮಾರಾಟಕ್ಕೆ ಲಭ್ಯ.









ಎಷ್ಟೊಂದು ಹಣ್ಣುಗಳು ಅಮೇರಿಕಾದಲ್ಲಿ ಸಿಗುತ್ತವೆ ಎಂದು ನಾನು ಪಟ್ಟಿ ಮಾಡಿರುವುದು ಇಷ್ಟು Nectarine, Apricot, peach,Cherry, Plum, Strawberry, Rasberry, Blackberry,  Blueberry, Boysenberry, Marionberry, Huckleberry ಇವುಗಳಲ್ಲಿ ಏಳೆಂಟು ಬಗೆಯ ಹಣ್ಣುಗಳನ್ನು ತಿಂದಿರುವೆ.
    ಅಮೇರಿಕಾ ದೇಶದಲ್ಲಿ ಆಯಾ ಹಣ್ಣಿನ ಬೆಳೆ ಬೆಳೆಯುವ ಕಾಲದಲ್ಲಿ ಹೀಗೆ ಅಂಥ ತೋಟಕ್ಕೆ ಹೋಗಿ ಹಣ್ಣು ಕೊಯಿದು ಹೊಟ್ಟೆಬಿರಿಯ ಉಚಿತವಾಗಿ ತಿನ್ನಬಹುದಂತೆ. ಮನೆಗೆ ಒಯ್ಯಲು ಮಾತ್ರ ದುಡ್ಡು ಕೊಟ್ಟು ಕೊಳ್ಳಬೇಕು. ಮೊದಲ ಒಂದನೆ ಎರಡನೆ ಫಸಲನ್ನು ಕೊಯಿದು ಮಾರಾಟ ಮಾಡುತ್ತಾರಂತೆ. ಮತ್ತೆ ಸಿಗುವ ಕೊಯಿಲಿಗೆ ಹೀಗೆ ಜನರಿಗೆ ಬಿಡುತ್ತಾರಂತೆ.  
   ಸೈಕಲ್ ಸವಾರಿ
     ಸೈಕಲ್ ಸವಾರಿಯ ಸುಖ ನಾವು ಸರಿಯಾಗಿ  ಅನುಭವಿಸಲಿಲ್ಲ ಎಂದು ಆನಂದಭಾವನ ಅಂಬೋಣ. ಅದಕ್ಕಾಗಿ  ಸಂಜೆ ೫.೪೫ಕ್ಕೆ ಕಾರಿನಲ್ಲಿ ೩ ಸೈಕಲ್ (ಒಂದು ಟ್ಯಾಂಡಮ್) ಹಾಕಿಕೊಂಡು ಮರೀನ್ ಡ್ರೈವ್‌ಗೆ ಹೋದೆವು.

 ಮನೆಯಿಂದ ಸುಮಾರು ೧೮ ಮೈಲಿ ದೂರ. ಅಲ್ಲಿ ಕಾರು ಪಾರ್ಕ್ ಮಾಡಿ ಸೈಕಲ್ ಇಳಿಸಿ ಅಲ್ಲಿಂದ ಸೈಕಲ್ ಹತ್ತಿದೆವು. ಸಂಜೆ ೬.೩೦ರಿಂದ ೮.೧೫ರವರೆಗೆ ಕೊಲಂಬಿಯಾ ಹೊಳೆ ಸುತ್ತ, ಪೋರ್ಟ್‌ಲ್ಯಾಂಡ್ ವಿಮಾನ ನಿಲ್ದಾಣದ ಬಳಿ ಸವಾರಿ ನಡೆಸಿದೆವು. ಒರೆಗಾನ್, ಪೋರ್ಟ್ ಲ್ಯಾಂಡ್, ವಾಷಿಂಗ್ಟನ್ ಇಷ್ಟು ಊರಲ್ಲಿ ಸೈಕಲ್ ಸವಾರಿ ನಡೆಸಿದೆವು.





    ಒಂದು ಕಡೆ ಪ್ಯಾರಾಚೂಟ್ ಕಟ್ಟಿಕೊಂಡು ಮೇಲೆ ಹಾರಲು ಪ್ರಯತ್ನಿಸುತ್ತಿದ್ದರೊಬ್ಬರು. ಅದನ್ನು ನೋಡುತ್ತ ಸ್ವಲ್ಪ ಹೊತ್ತು ನಿಂತೆವು. ಗಾಳಿಯಿಂದಲೋ ಅಥವಾ ಬೇರೆ ಕಾರಣಗಳಿಂದಲೋ ನಾವು ಅಲ್ಲಿ ನಿಂತ ಸಮಯದಲ್ಲಿ ಪ್ಯಾರಾಚೂಟ್ ಜಾಸ್ತಿ ಮೇಲೇಳಲೇ ಇಲ್ಲ.

 ವಾಹನ ಸಂಚಾರ ದಟ್ಟವಾಗಿ ಇತ್ತು. ಸೈಕಲ್ ಸವಾರರಿಗೆ ಪ್ರತ್ಯೇಕ ರಸ್ತೆ ಇರುವ ಕಾರಣ ಆರಾಮವಾಗಿ ಸೈಕಲ್ ಸವಾರಿ ನಡೆಸಬಹುದು. ವಾಹನ ಸವಾರರು ಎಷ್ಟೊಂದು ವೇಗವಾಗಿ ಹೋಗುತ್ತಾರೆ ಎಂದು ಸೈಕಲ್ ಸವಾರಿ ಮಾಡುವಾಗ ಅನುಭವಕ್ಕೆ ಬಂತು. ಕಾರಲ್ಲಿ ಕೂತಾಗ ವೇಗ ಎಂದು ಅನಿಸುವುದೇ ಇಲ್ಲ. ಸುಮಾರು ೨೦ಕಿಮೀ ಸೈಕಲ್ ಸವಾರಿ ಬಲು ಖುಷಿ ಕೊಟ್ಟಿತು. ಎರಡು ಒಂಟಿ ಸೈಕಲುಗಳಲ್ಲಿ ಅನಂತ, ಜಯಶ್ರೀ. ಟ್ಯಾಂಡಮಿನಲ್ಲಿ ಆನಂದಭಾವ ಹಾಗೂ ನಾನು ಸವಾರಿ ನಡೆಸಿದೆವು. ನನಗೆ ಹೆಚ್ಚಿನ ಜವಾಬ್ದಾರಿ ಇಲ್ಲ. ಸುಮ್ಮನೆ ಪೆಡಲ್ ತುಳಿದರಾಯಿತು. ಹಾಗಾಗಿ ಒಂದು ಕೈಯಲ್ಲಿ ಮೊಬೈಲಿಂದ ಪಟ, ವೀಡಿಯೋ ಮಾಡುತ್ತಲಿದ್ದೆ. ಸಂಜೆಯ ಸೊಬಗಿನಲ್ಲಿ ಸೈಕಲ್ ಸವಾರಿ ಚೇತೋಹಾರಿಯಾಗಿತ್ತು. ಆಕಾಶ ನೋಡುತ್ತ, ಆಕಾಶದ ಚಂದವನ್ನು ಪಟ ಕ್ಲಿಕ್ಕಿಸುತ್ತ, ಆಗಸದಲ್ಲಿ ವಿಮಾನ ಹಾರುವುದನ್ನು ಸೆರೆ ಹಿಡಿಯುತ್ತ ಸೈಕಲ್ ತುಳಿಯುತ್ತಲಿದ್ದೆ.














 ವಾಪಾಸು ನಾವು ಕಾರು ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ಸೈಕಲ್ ಕಾರಿಗೆ ಪೇರಿಸಿದೆವು.  ಸೈಕಲ್ ಸವಾರಿ ವಿಶಿಷ್ಟ ಅನುಭವ ಕೊಟ್ಟಿತು. ಅದಕ್ಕಾಗಿ ಆನಂದಭಾವನಿಗೆ ಕೃತಜ್ಞತೆ ಹೇಳಲೇಬೇಕು. 
  ಇಂಟೆಲ್ ಕಚೇರಿ
   ಇಂಟೆಲ್ ಕಚೇರಿಗೆ ಹೋದೆವು. ಆನಂದಭಾವನ ಕಾರ್ಯಾಗಾರವನ್ನು ನೋಡಿದೆವು.  ಅಲ್ಲಿ ಕೆಲವು ಮಂದಿ ಕೆಲಸ ಮಾಡುತ್ತಿದ್ದರು. ಇನ್ನು ಕೆಲವರು ವ್ಯಾಯಾಮ ಮಾಡುತ್ತಿದ್ದರು. ೧೯೭೪ರಲ್ಲಿ ಈ ಇಂಟೆಲ್ ಕಚೇರಿ ನಿರ್ಮಾಣಗೊಂಡಿದೆಯಂತೆ. ೨೦ ಸಾವಿರ ಮಂದಿ ಅಲ್ಲಿ ಕೆಲಸ ಮಾಡುತ್ತಾರಂತೆ.  ಅಲ್ಲಿಂದ ರಾತ್ರೆ ಹತ್ತು ಗಂಟೆಗೆ ಮನೆಗೆ ಹೋದೆವು.


   ಪೋರ್ಟ್‌ಲ್ಯಾಂಡ್‌ಗೆ ವಿದಾಯ 
   ೧೩.೬.೧೮ರಂದು ಬೆಳಗ್ಗೆ ೪ ಗಂಟೆಗೆದ್ದು ೪.೪೦ಕ್ಕೆ ಬೇವರ್ಟನಿಂದ ಹೊರಟು ಪೋರ್ಟ್‌ಲ್ಯಾಂಡ್ ವಿಮಾನ ನಿಲ್ದಾಣ ತಲಪಿದೆವು. ಅಲ್ಲಿ ಜಯಶ್ರೀ ಆನಂದಭಾವನವರಿಗೆ ವಿದಾಯ ಹೇಳಿದೆವು. ಆನಂದಭಾವ ಜಯಶ್ರೀ ಅವರಲ್ಲಿಗೆ ಬಂದು ಹೋಗುವ ನಮ್ಮ ವಿಮಾನ ಟಿಕೆಟ್ ವೆಚ್ಚವನ್ನು ಭರಿಸಿದ್ದರು. ಅವರ ಈ ಪ್ರೀತಿಗೆ ನಮೋನಮಃ.  ನಾವು ಒಳಗೆ ಹೋದೆವು. ತಪಾಸಣೆಯಾಗಿ ನಾವು ವಿಮಾನ ಏರಿದೆವು. ೬.೨೫ಕ್ಕೆ ವಿಮಾನ ಹೊರಟು ೧೦.೩೦ಕ್ಕೆ ಷಿಕಾಗೋ ಮಿಡ್ ವೇ ವಿಮಾನ ನಿಲ್ದಾಣದಲ್ಲಿ ಇಳಿದೆವು. (ಶಿಕಾಗೋ ಸಮಯ ಆಗ ೧೨.೩೫) ಅಕ್ಷರಿ ಮಹೇಶ ಬಂದು ನಮ್ಮನ್ನು ಕರೆದುಕೊಂಡು ಇಂಡಿಯನ್ ರೆಸ್ಟೋರೆಂಟಿಗೆ ಕರೆದುಕೊಂಡು ಹೋದರು. ಅಲ್ಲಿ ನಾವು ಊಟ ಮಾಡಿದೆವು. 
    ಹಿಂದೂ ಟೆಂಪಲ್ ಆಫ್ ಗ್ರೇಟರ್ ಷಿಕಾಗೊ, ಲೆಮೆಂಟ್ (10915 lemont Rd, lemont,IL 60439, USA)
೧೯೭೭ರಲ್ಲಿ ನಿರ್ಮಾಣ ಪ್ರಾರಂಭಗೊಂಡು ೧೯೮೬ರಲ್ಲಿ ಪೂರ್ಣಗೊಂಡಿತು. ಇಲ್ಲಿ ಎರಡು ದೇವಾಲಯಗಳಿವೆ. ರಾಮ ದೇವಾಸ್ಥಾನದಲ್ಲಿ  ರಾಮ, ಸೀತಾ, ಲಕ್ಷ್ಮಣ, ಗಣೇಶ, ಹನುಮ, ವೆಂಕಟರಮಣ, ಮಹಾಲಕ್ಷ್ಮಿ, ಶ್ರೀಕೃಷ್ಣ, ರಾಧೆ ಮೂರ್ತಿಗಳಿವೆ. ೮೦ ಅಡಿಯ ಗೋಪುರವಿದೆ. ಗಣೇಶ ಶಿವ ದುರ್ಗಾ ದೇವಾಲಯದಲ್ಲಿ ಶಿವ, ಗಣೆಶ, ದುರ್ಗಾದೇವೆ, ಸುಬ್ರಹ್ಮಣ್ಯ, ಪಾರ್ವತಿ, ನಟರಾಜ, ಅಯ್ಯಪ್ಪಸ್ವಾಮಿ ಮತ್ತು ನವಗ್ರಹಗಳಿವೆ.  ಈ ದೇವಾಲಯ ಬಲು ದೊಡ್ದದಾಗಿದೆ. ರಾಮ ದೇವಾಲಯ ಚೋಳ ರಾ ಜವಂಶದ ಮತ್ತು ಗಣೇಶ ದೇವಾಲಯ ಕಳಿಂಗ ರಾಜವಂಶದ ಮಾದರಿಯಲ್ಲಿ ನಿರ್ಮಿಸಲಾಗಿದೆ.   ದೇವಾಲಯಕ್ಕೆ ಒಂದು ಸುತ್ತು ಬಂದು ಅಲ್ಲಿಂದ ನಾವು ಹೊರಟೆವು.  ಪ್ರವೇಶ ಸಮಯ: ಬೆಳಗ್ಗೆ ೯ರಿಂದ ರಾತ್ರೆ ೯ರ ವರೆಗೆ.






 ಕೆಳಗೆ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಅಧ್ಯಾತ್ಮಿಕ ಕೇಂದ್ರವಿದೆ. ದೇವಾಲಯದಿಂದ ಅಲ್ಲಿಗೆ  ಮೆಟ್ಟಲಿನ ಮೂಲಕ ಇಳಿದು ಬರಬಹುದು. ಅಲ್ಲಿ  ವಿವೇಕಾನಂದರ  ೧೦ ಅಡಿ ಎತ್ತರದ ಕಂಚಿನ ಪ್ರತಿಮೆ  ಇದೆ. ಅಮೇರಿಕಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಿದ ವಿವೇಕಾನಂದರ ಮೊದಲ ಪ್ರತಿಮೆಯಂತೆ ಇದು.  ಅದನ್ನು ನೋಡಿ ಮುಂದೆ ಸಾಗಿದೆವು.




 ಬಾಪ್ಸ್ (Baps)shri swaminarayana mandira 1851 pramukh swami road, Bartlett,  ILLINOIS60103 USA

  ನಾವು ಬಾರ್ಲೆಟ್ಟಿನಲ್ಲಿರುವ ಸ್ವಾಮಿ ನಾರಾಯಣ ಮಂದಿರಕ್ಕೆ ಹೋದೆವು. ವಿಶಾಲವಾದ ಸ್ಥಳದಲ್ಲಿ ಕಾರು ಪಾರ್ಕಿಂಗ್ ಸಹಿತ ದೇವಾಲಯ ಬೃಹತ್ತಾಗಿದೆ. ೨೦೦೦ನೇ ಇಸವಿಯಲ್ಲಿ ಪ್ರಮುಖ್ ಸ್ವಾಮಿ ಮಹಾರಾಜರಿಂದ ಉದ್ಘಾಟನೆಗೊಂಡಿತು.  ಅಮೃತಶಿಲೆಯಿಂದ ಕಟ್ಟಿದ ಈ ದೇವಾಲಯ ೭ ಆಗಸ್ಟ್ ೨೦೦೪ರಲ್ಲಿ ಲೋಕಾರ್ಪಣೆಗೊಂಡಿತು. ಇಟಲಿ, ಟರ್ಕಿ, ಗುಜರಾತಿನಿಂದ ಮಾರ್ಬಲ್ ಗಳನ್ನು ಹಡಗಿನಲ್ಲಿ ತರಿಸಿದರು. ಈ ಮಂದಿರ ೨೭ ಎಕರೆ ಸ್ಥಳದಲ್ಲಿ ೨೨ಸಾವಿರ ಚದರಡಿ ಕಟ್ಟಡ, ೭೮ ಅಡಿ ಎತ್ತರ, ೧೧೨ ಅಡಿ ಅಗಲ, ೨೧೫ ಅಡಿ ಉದ್ದವಿದೆ. ಮೇಲೆ ೧೬(ಡೂಮು) ಗುಮಟಗಳಿವೆ. ೧೫೧ ಕಂಬಗಳಿವೆ. ೧೧೭ ಕಮಾನು (ಆರ್ಚ್)ಗಳಿವೆ, ೫ ಶಿಖರಗಳು, ನಾಲ್ಕು ಬಾಲ್ಕನಿಗಳಿವೆ. ನೋಡಲು ಭವ್ಯವಾಗಿದೆ. ೧೬ ತಿಂಗಳಲ್ಲಿ ಈ ಮಂದಿರ ನಿರ್ಮಾಣವಾಗಿದೆ. ಒಂದೊಂದು ಕೆತ್ತನೆಗಳೂ ಬಹಳ ಚೆನ್ನಾಗಿವೆ. ನೋಡಿ ಕಣ್ಣು ಪಾವನವಾಯಿತು. ಮರದ ಬಾಲ್ಕನಿಯಂತೂ ಕಲಾತ್ಮಕವಾಗಿದೆ. ನೀರಿನ ಕಾರಂಜಿ ಇದೆ. ಪಕ್ಕದಲ್ಲಿ ನವಿಲುಗಳು ಹಾರುತ್ತಿದ್ದುವು. ನಾವು ಅಲ್ಲಿ ಸುಮಾರು ಹೊತ್ತು ಕಾಲ ಕಳೆದೆವು. ಅಲ್ಲಿ ಎರಡು ನವಿಲುಗಳು ಇದ್ದುವು.








   ಅಲ್ಲಿ ಅವರ ಅಂಗಡಿಯಲ್ಲಿ ಗುಣಮಟ್ಟದ ನಾನಾ ವಿಧದ ಕರಿದ ತಿಂಡಿಗಳು, ಸಿಹಿತಿಂಡಿಗಳು, ಬಹಳ ಕಡಿಮೆ ದರದಲ್ಲಿ ಸಿಗುತ್ತವೆ.

   ಪಟೇಲ್ ಬ್ರದರ್ಸ್
ಷಿಕಾಗೋದಲ್ಲಿ ಭಾರತೀಯರಿಗೆ ಬೇಕಾಗುವ ದಿನಸಿ ಸಾಮಾನುಗಳು ಸಿಗುವ ಅಂಗಡಿ ಪಟೇಲ್ ಬ್ರದರ್ಸ್. ಬೃಹತ್ ಅಂಗಡಿಯದು. ಅಲ್ಲಿ ಸಿಗದ ವಸ್ತುಗಳಿಲ್ಲ. ಅಲ್ಲಿ ಹೋಗಿ ನಮಗೆ ಮನೆಗೆ ಅವಶ್ಯವಾದ (ಅವಶ್ಯವಲ್ಲದವನ್ನೂ ಮುಂದೆ ಬೇಕಾಗಬಹುದು! ಎಂದು) ಸಾಮಾನು ಕೊಂಡೆವು.



   ಅಲ್ಲಿಂದ ಅಕ್ಷರಿ ದೋಸ್ತಿ ಶ್ರುತಿ ಮನೆಗೆ ಹೋದೆವು. ಶ್ರೀಕಾಂತ್ ಶ್ರುತಿ ದಂಪತಿ ಮೂಲತಃ ತಮಿಳುನಾಡಿನವರು. ತುಂಬ ಆತ್ಮೀಯವಾಗಿ ನಮ್ಮೊಡನೆ ಬೆರೆತರು. ಅಲ್ಲಿ ಚಿತ್ರಾನ್ನ ಅನ್ನ ಸಾರು ಪಲ್ಯ ಗೋಭಿಮಂಚೂರಿ ತಿಂದು ನಾವು ಹೊರಟು ಮಿಲ್ವಾಕಿಯ ಓಕ್ ಶೋರ್ ನ ಟ್ಯಾಂಗಲ್ ವುಡ್ ಮನೆ ತಲಪಿದಾಗ ರಾತ್ರಿ ೧೦.೩೦ ದಾಟಿತ್ತು.

     ಲೇಕ್ ಫ್ರಂಟ್ (lakefront, Milwaukee, Wisconsin)
  ೧೫.೬.೧೮ರಂದು ಸಂಜೆ ೬.೩೦ ಗಂಟೆಗೆ ಓಕ್ ಕ್ರೀಕ್ ಮನೆಯಿಂದ ಹೊರಟು ವಿಸ್ಕಾನ್‌ಸಿನ್‌ನ ಮಿಲ್ವಾಕಿಯ ಮಿಷಿಗನ್ ಲೇಕ್ ನ ಇನ್ನೊಂದು ಭಾಗವಾದ ಲೇಕ್ ಫ್ರಂಟ್ ಗೆ ಹೋದೆವು.ಸುಮಾರು ೧೫ ಮೈಲಿ ದೂರ.  ಅಲ್ಲಿ ಮೂರು ಮೈಲಿ ಲೇಕ್ ಉದ್ದಕ್ಕೂ ನಡೆದೆವು. ನಡೆಯಲು ಕಾಲುದಾರಿ ಚೆನ್ನಾಗಿ ಮಾಡಿದ್ದಾರೆ.  ಸುಂದರ ಸರೋವರ ನೋಡುತ್ತ ಸಂಜೆ ಹೊತ್ತಲ್ಲಿ ನಡೆಯುವುದು ಅಹ್ಲಾದಕರವಾಗಿತ್ತು. ಸುಂಆರು ೬೦೦ಕ್ಕೂ ಹೆಚ್ಚು ಬೋಟ್ ಇವೆಯಂತೆ ಅಲ್ಲಿ. ಮೀನುಗಾರಿಕೆ ಮುಖ್ಯ ಕಸುಬು. ಜೆಟ್ ಸ್ಕೀ ಬಾಡಿಗೆಗೆ ಲಭ್ಯ. ಒಂದು ದಿನ ಇಡೀ ಅಲ್ಲಿ ವಿಹರಿಸಬಹುದು.
 ಸರೋವರದ ಇನ್ನೊಂದು ಭಾಗದಲ್ಲಿ ಏನೋ ಉತ್ಸವ ನಡೆಯುತ್ತಲಿತ್ತು. ಮತ್ತೊಂದು ಕಡೆ ಮ್ಯಾರಥಾನ್ ಓಟ ನಡೆಯುತ್ತಲಿತ್ತು. ವಯಸ್ಸಾದವರು ಉತ್ಸಾಹದಿಂದ ಓಡಿ ಗುರಿಮುಟ್ಟುತ್ತಿದ್ದುದನ್ನು ನೋಡಲು ಬಲು ಖುಷಿಯಾಯಿತು. ಕೆಲವು ತಾಯಂದಿರು ತಮ್ಮ ವಿಕಲಚೇತನ ಮಕ್ಕಳನ್ನು ವೀಲ್ ಚೇರಿನಲ್ಲಿ ಕೂರಿಸಿಕೊಂಡು ನೂಕಿಕೊಂಡು ಓಡುತ್ತಲಿದ್ದರು. ನಾವು ಸಂತಸದಿಂದ ಎಲ್ಲವನ್ನೂ ನೋಡಿ ಮನೆಗೆ ಹಿಂದಿರುಗಿದೆವು.









    ಡೆವಿಲ್ ಲೇಕ್ (Devil lake state park sauk country, Barboo, WI 53913 USA)
 ೧೬-೬-೧೮ರಂದು ಪುಳಿಯೋಗರೆ ಮೊಸರನ್ನ ಬುತ್ತಿ ಕಟ್ಟಿಕೊಂಡು ನಾವು ೧೦ಗಂಟೆಗೆ ಮನೆಯಿಂದ ಹೊರಟೆವು. (ಅಮೇರಿಕಾದಲ್ಲಿ ಹೊರಗೆ ಎಲ್ಲಿಗಾದರೂ ಹೋಗಬೇಕಾದರೂ ನಾವು ನಮ್ಮ ಹೊಟ್ಟೆ ಚಿಂತೆಯನ್ನು ಪೂರ್ವಭಾವಿಯಾಗಿಯೇ ಮಾಡಿಕೊಂಡು ಏನಾದರೂ ಕಟ್ಟಿ ತೆಗೆದುಕೊಂಡು ಹೋಗಬೇಕು. ಹೆಚ್ಚಿನ ಸ್ಥಳಗಳಲ್ಲೂ ನಮ್ಮ ಭಾರತದ ಹಾಗೆ ಊಟ ತಿಂಡಿ ಸಿಗುವ ಅಂಗಡಿ ಹೊಟೇಲುಗಳಿರುವುದಿಲ್ಲ. ಕೆಲವೆಡೆ ಇದ್ದರೂ ನಮ್ಮಂಥ ಪುಳಿಚಾರಿಗಳಿಗೆ ಅಲ್ಲಿ ತಿನ್ನಲು ಸೇರುವುದಿಲ್ಲ.) ಎರಡೂವರೆ ಗಂಟೆ ಕಾರು ಪ್ರಯಾಣವಾಗಿ ನಾವು ವಿಸ್ಕಾನ್‌ಸಿನ್ ಸಾಕ್ ಕೌಂಟಿಯಲ್ಲಿರುವ ಡೆವಿಲ್ ಲೇಕ್ ಸ್ಟೇಟ್ ಪಾರ್ಕಿಗೆ ತಲಪಿದೆವು. ಅಲ್ಲಿ ವಿಸ್ತಾರವಾದ ಉದ್ಯಾನವನವಿದೆ.  ಎದುರು ಭಾಗದಲ್ಲಿ ಚಂದದ ಸರೋವರವಿದೆ. ಸುತ್ತಲೂ ಮರಗಳು ಬೆಟ್ಟಗಳು ಇವೆ. ಉದ್ಯಾನವನದಲ್ಲಿ ಅದಾಗಲೆ ಸಾಕಷ್ಟು ಜನ ನೆರೆದಿದ್ದರು. ಕೆಲವರು ನೀರಿಗೆ ಇಳಿದು ಆಟವಾಡುತ್ತಿದ್ದರು, ಒಂದಷ್ಟು ಮಂದಿ ಅಲ್ಲೇ ಅಡುಗೆ ಮಾಡಿ ಊಟದ ತಯಾರಿಯಲ್ಲಿದ್ದರು. ಇನ್ನು ಕೆಲವರು ಪಾರ್ಕಿನಲ್ಲಿ ಕೂತು ಮಲಗಿ ರಜೆಯ ಮಜವನ್ನು ಅನುಭವಿಸುತ್ತಿದ್ದರು. ನಾವು ಮರದಡಿ ಕುಳಿತು ತಂದ ಬುತ್ತಿ ತೆರೆದು ಊಟ ಮಾಡಿದೆವು. 
   ಬೆಳಗ್ಗೆ ೬ರಿಂದ ರಾತ್ರೆ ೧೧ರವರೆಗೆ ಪಾರ್ಕಿಗೆ ಪ್ರವೇಶಾವಕಾಶವಿದೆ. ವಿಸ್ಕಾನ್‌ಸಿನ್‌ನ ಅತಿ ದೊಡ್ಡ ಪಾರ್ಕ್ ಇದು. ೩೫ ಮೈಲಿ ವಿಸ್ತಾರವಾಗಿದೆ. ಸುತ್ತಮುತ್ತ  ೧೬ ಕಡೆ ಚಾರಣ ಮಾಡತಕ್ಕ ದಾರಿಗಳಿವೆ. 



   ಬ್ಯಾಲೆನ್ಸ್‌ಡ್ ರಾಕ್ ಚಾರಣ (balanced rock hiking) 
  ನಾವು ಊಟಮಾಡಿ ೧.೪೫ಕ್ಕೆ ಬ್ಯಾಲೆನ್ಸ್‌ಡ್ ರಾಕ್ ಎಂಬ ಗುಡ್ಡವನ್ನು ಹತ್ತಲು ಹೊರಟೆವು. ಕಲ್ಲುಬಂಡೆಗಳಿರುವ ಸ್ಥಳ. ಸ್ವಲ್ಪ ಕಠಿಣವಾದ ಚಾರಣದಾರಿ. ಕೆಲವೆಡೆ ಬಂಡೆಗಲ್ಲು ಏರಿ ಮುಂದೆ ಹೋಗಬೇಕಿತ್ತು. ಉಸ್ ಬುಸ್ ಎಂದು ಬಂಡೆ ಏರಿ ಮುಂದೆ ನಡೆದೆವು. ಮೇಲಿನಿಂದ ಲೇಕ್ ಬಹಳ ಸೊಗಸಾಗಿ ಕಾಣುತ್ತಲಿತ್ತು. ಎತ್ತ ಕಡೆ ಹೋಗಬೇಕೆಂದು ಅಲ್ಲಲ್ಲಿ ಫಲಕ ಹಾಕಿದ್ದರು.ಕೆಲವರು ಹಗ್ಗದ ಸಹಾಯದಿಂದ ಬಂಡೆ ಏರುವ ಸಾಹಸ ಮಾಡುತ್ತಲಿದ್ದರು. ನಾವು ಎಲಿಫೆಂಟ್ ರಾಕ್ ವರೆಗೆ ಹೋಗಿ ಹಿಂದಕ್ಕೆ ಹೊರಟೆವು. ಬರುವಾಗ ಪಿರಿಪಿರಿ ಮಳೆಯಲ್ಲಿ ನೆನೆಯುತ್ತಲೇ ೩.೪೫ಕ್ಕೆ ವಾಪಾಸಾದೆವು.  ೪೫ನಿಮಿಷ ಬೇಕು ಬ್ಯಾಲೆನ್ಸೆದ್ ರಾಕ್ ಚಾರಣಕ್ಕೆ. 





  ಫೆರ್ರಿಯಲ್ಲಿ ಪಯಣ 
ನಾವು ಡೆವಿಲ್ ಲೇಕ್ ನಿಂದ ಹೊರಟು ಫೆರ್ರಿ ಇರುವ ಸ್ಥಳಕ್ಕೆ ಹೋಗಿ ಕಾರನ್ನು ಫೆರ್ರಿ ಒಳಗೆ ಹಾಕಿ ನಾವು ಹತ್ತಿ ಇನ್ನೊಂದು ದಡಕ್ಕೆ ಹೋದೆವು. ಫೆರ್ರಿ ಕಾಯುವ ಸಮಯದಲ್ಲಿ ಅಲ್ಲಿ ಐಸ್ಕ್ರೀಮ್ ತಿಂದೆವು. ಒಂದು ಫೆರ್ರಿ ಹಡಗಿನಲ್ಲಿ ೬ ಕಾರುಗಳನ್ನು ಹಾಕಬಹುದು. ಫೆರ್ರಿ ಪಯಣದ ಅನುಭವಕ್ಕಾಗಿ ನಾವು ಹಡಗು ಏರಿದ್ದೆವು.  ಈ ಪಯಣ ಖುಷಿಕೊಟ್ಟಿತು. ಮನೆಗೆ ೬.೩೦ಗೆ ತಲಪಿದೆವು.




   ಸ್ವಾಮಿ ವೇದಾಂತ ಮಂದಿರ
ಮಿಲ್ವಾಕಿಯಿಂದ ೧೭.೬.೧೮ರಂದು ಬೆಳಗ್ಗೆ ೧೦ಗಂಟೆಗೆ ಹೊರಟು ೧೨ಗಂಟೆಗೆ ಶಿಕಾಗೋದಲ್ಲಿರುವ ಸ್ವಾಮಿ ವೇದಾಂತ ಮಂದಿರಕ್ಕೆ ಮಹೇಶ ನಮ್ಮನ್ನು ಕರೆದುಕೊಂಡು ಹೋದ. ಸ್ವಾಮಿ ವಿವೇಕಾನಂದರು ಎಲ್ಲೆಲ್ಲಿ ಭಾಷಣ ಮಾಡಿದ್ದರು ಎಂಬ ವಿವರಗಳು, ಭಾಷಣ ಮಾಡುತ್ತಿರುವ ಚಿತ್ರಗಳನ್ನು ಅಲ್ಲಿ ಹಾಕಿದ್ದಾರೆ. ಅಲ್ಲಿರುವ ಗ್ರಂಥಾಲಯದಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಇರುವ ಕನ್ನಡ ಪುಸ್ತಕವನ್ನು ನೋಡಿದೆವು.






  ಅಲ್ಲಿಂದ ಹೊರಟು ಹಿಂದೂ ದೇವಾಲಯಕ್ಕೆ ಊಟ ಮಾಡುವ ಸಲುವಾಗಿಯೇ ಹೋದೆವು. ಅಲ್ಲಿಯ ಕೆಫೆಟೇರಿಯಾದಲ್ಲಿ ಊಟಮಾಡಿದೆವು. ಮಸಾಲೆದೋಸೆ, ಪೊಂಗಲ್, ವಡೆ ರುಚಿಕಟ್ಟಾಗಿತ್ತು. ಹೊಟ್ಟೆದೇವರು ತೃಪ್ತಿಹೊಂದಿದಮೇಲೆ ಅಲ್ಲಿಂದ ಹೊರಟೆವು. ಅಮೇರಿಕಾದಲ್ಲಿ ಹೆಚ್ಚಿನ ದೇವಾಲಯಗಳಲ್ಲೂ ಕೆಫೆಟೇರಿಯಾದಲ್ಲಿ ರುಚಿಕಟ್ಟಾದ ಸಸ್ಯಾಹಾರ ಆಹಾರ ಸಿಗುತ್ತದೆ. ಆ ದೇವನಿಗೆ ಗೊತ್ತು. ಮನುಜರ ಹೊಟ್ಟೆದೇವ ತೃಪ್ತಿಗೊಂಡಾಗ ಮಾತ್ರ ಈ ದೇವರಿಗೆ ಪೂಜೆ ಸಲ್ಲುತ್ತದೆ ಎಂದು!


 ಬಹಾಯ್ ಮಂದಿರ (Bahai House of worship, 100Linden Ave, Wilmette , Illinios 60091 USA, phone 8478532300 email. how@usbne.org)
    ನಾವು ಬಹಾಯ್ ಮಂದಿರಕ್ಕೆ ಹೋದೆವು. ಅತ್ಯಂತ ದೊಡ್ಡದಾದ ಮಂದಿರವಿದು. ನೋಡಲು ಚಂದವಾಗಿದೆ. ೧೯೧೨ನೇ ಇಸವಿಯಲ್ಲಿ ಶಿಲಾನ್ಯಾಸವಾಗಿ, ೧೯೨೧ರಲ್ಲಿ ಕಟ್ಟಡ ಕಟ್ಟಲು ಪ್ರಾರಂಭಿಸಿ, ಪೂರ್ಣಗೊಂಡದ್ದು ೧೯೫೩ರಲ್ಲಿ. ಸಭಾಭವನದಲ್ಲಿ ೧೧೯೨ ಮಂದಿ ಕೂರಬಹುದು. ಸಭಾಭವನದ ಎತ್ತರ ೧೩೮ ಅಡಿ, ಡೂಮ್ ವ್ಯಾಸ ೯೦ ಆಡಿ.  ಇದರ ವಿನ್ಯಾಸಕಾರ ಫ್ರೆಂಚ್ ಕೆನಡಿಯನ್ ಲೂಯಿಸ್ ಬರ್ಜಿಯಸ್. ವಿನ್ಯಾಸಕ್ಕಾಗಿ ೮ ವರ್ಷ ಬೇಕಾಯಿತಂತೆ. ಇದರ ಚಿತ್ರ ಬರೆಯಲು ೧೦೯ ಅಡಿ ಉದ್ದದ ಕಾಗದದ ಹಾಳೆ ಉಪಯೋಗಿಸಿದ್ದರಂತೆ!  ವಾರದ ಏಳೂ ದಿನ ಉಚಿತ ಪ್ರವೇಶವಿರುತ್ತದೆ. ಬೆಳಗ್ಗೆ ೬ರಿಂದ ರಾತ್ರಿ ಹತ್ತು ಗಂಟೆವರೆಗೆ, ಬೇಸಗೆ ಕಾಲದಲ್ಲಿ ಮೇ ೧೫ರಿಂದ ಸೆಪ್ಟೆಂಬರ್ ೧೫ರ ವರೆಗೆ ಬೆಳಗ್ಗೆ ಗಂಟೆ ೧೦ರಿಂದ ರಾತ್ರೆ ೮ರವರೆಗೆ. ಜಗತ್ತಿನಲ್ಲಿ ಕೇವಲ ೮ ಬಹಾಯಿ ಮಂದಿರಗಳಿವೆ. 
  ಮಂದಿರದ ಅಂದಚಂದ ನೋಡಿ ಬೆರಗಾಗಿ ಪಟ ಕ್ಲಿಕ್ಕಿಸಿಕೊಂಡು ನಾವು ಅಲ್ಲಿಂದ ನಿರ್ಗಮಿಸಿದೆವು.

   ಜಿನಿವಾ ಲೇಕ್ Lake Geneva wisconsin
   ನಾವು ಬಹಾಯ್ಗೆ ಬಾಯ್ ಮಾಡಿ ಜಿನಿವಾ ಲೇಕ್‌ಗೆ ಹೋದೆವು. ದೊಡ್ಡದಾದ ಸರೋವರ. ಲೇಕ್ ಸುತ್ತ ಅಡ್ಡಾಡಿ, ಒಂದಷ್ಟು ಹೊತ್ತು ಅಲ್ಲಿ ಕುಳಿತೆವು. ಅಲ್ಲಿ ಬೀದಿ ದೀಪದ ಕಂಬದಲ್ಲಿ ಛಟ್ಟಿಯಲ್ಲಿ ಹೂ ಬೆಳೆಸಿರುವುದು ಕಂಡೆ. ಅಲ್ಲಿಂದ ಹೊರಟು ಸಂಜೆ ೬.೩೦ಗೆ ಮನೆ ತಲಪಿದೆವು. 




 ಗುರುಮೂರ್ತಿ ಮನೆಗೆ ಭೇಟಿ
  ಅಕ್ಷರಿಯ ನೆರೆಯವರಾದ ಗುರುಮೂರ್ತಿ ಸಂಧ್ಯಾ ದಂಪತಿ ಮನೆಗೆ ಸಂಜೆ ೭ ಗಂಟೆಗೆ ಹೋದೆವು. ಅವರು ಮೂಲತಃ ಕಾಸರಗೋಡಿನವರು. ಅಲ್ಲಿ ರಾತ್ರಿ ಭೋಜನ ನಮಗೆ. ಚಪಾತಿ, ಪಲ್ಯ, ಪತ್ರಡೆ, ಅನ್ನ, ಸಾರು, ಮಜ್ಜಿಗೆಹುಳಿ, ಇತ್ಯಾದಿ ಭೂರೀ ಭೋಜನ ಪೂರೈಸಿ ಅವರ ಪುಟಾಣಿ ಮಕ್ಕಳಾದ ಮೇದ ಮೇಘ ಜೊತೆ ಆಟವಾಡಿ ಮನೆಗೆ ವಾಪಾಸಾದೆವು.


   ಅಕ್ಷರಿ ಜನುಮದಿನ
೧೮.೬.೧೮ರಂದು ಅಕ್ಷರಿ ಜನುಮದಿನ. ಬೆಳಗ್ಗೆದ್ದು ಹೊರ ಬಾಗಿಲು ತೆರೆದಾಗ ಅಕ್ಷರಿಗಾಗಿ ಸ್ಯಾಂಡಿ ಉಡುಗೊರೆ ಇಟ್ಟಿದ್ದರು.  ಮನೆಯಲ್ಲೇ ಎದುರು ಮನೆಯ ಸ್ಯಾಂಡಿಯವರೂ ಜೊತೆಗೂಡಿ ಮಹೇಶ ತಂದ ಕೇಕ್ ಕತ್ತರಿಸಿ ಅವಳ ಜನುಮದಿನದ ಸಂಭ್ರಮವನ್ನಾಚರಿಸಿದೆವು. ಮಹೇಶ ರುಚಿಕರವಾದ ಗೋಭಿಮಂಚೂರಿ ಮಾಡಿದ್ದ. ಅದನ್ನು ತಿಂದು ಹರಟುತ್ತ ಕಾಲ ಕಳೆದೆವು.





   ಸಾರ್ವಜನಿಕ ಗ್ರಂಥಾಲಯ 
      ವಿಸ್ಕಾನ್‌ಸಿನ್ ಜಿಲ್ಲೆಯ ಓಕ್ ಕ್ರೀಕಿನಲ್ಲಿರುವ ಪಬ್ಲಿಕ್ ಲೈಬ್ರೆರಿಗೆ ಹೋದೆವು. ಅಲ್ಲಿ ವಿಶಾಲವಾದ ಕಟ್ಟಡದಲ್ಲಿ ಪುಟ್ಟ ಮಕ್ಕಳಿಗೆ ಆಡಲು ಸ್ಥಳವಿದೆ. ಅಲ್ಲಿ ಮಕ್ಕಳನ್ನು ಆಟ ಆಡಿಸುತ್ತ ಕೂರಬಹುದು. ಸ್ವಲ್ಪ ದೊಡ್ಡ ಮಕ್ಕಳಿಗೆ ಪುಸ್ತಕಗಳು, ಗಣಕಗಳು ಪ್ರತ್ಯೇಕವಾಗಿ ಇವೆ. ಸಿನೆಮಾ ಸಿಡಿ ತಟ್ಟೆಗಳೂ ಇವೆ. ಸದಸ್ಯರಾದವರಿಗೆ ಎಲ್ಲವೂ ಉಚಿತ. ಪುಸ್ತಕ ಮನೆಗೆ ತೆಗೆದುಕೊಂಡು ಹೋಗಬಹುದು. ೧೫ ದಿನದಲ್ಲಿ ವಾಪಾಸು ಒಪ್ಪಿಸಬೇಕು. ಸಿಡಿ ತಟ್ಟೆ ಒಂದು ವಾರ ಇಟ್ಟುಕೊಳ್ಳಬಹುದು. ಅಬಾಲರಿಂದ ಹಿಡಿದು ವೃದ್ಧರ ವರೆಗೆ ಅನ್ವಯಿಸುವಂತೆ ಎಲ್ಲರಿಗೂ ಬೇಕಾಗುವಂಥ ಆಟದ ಸಾಮಾನು, ಪುಸ್ತಕಗಳು ಇವೆ.  ನಮ್ಮದೇ ಲ್ಯಾಪ್ ಟಾಪ್ ಕೊಂಡೋಗಿ ಅಲ್ಲಿ ಕೆಲಸ ಮಾಡಬಹುದು. ಅದಕ್ಕೂ ಪ್ರತ್ಯೇಕ ಕೊಟಡಿಗಳಿವೆ. ಎಲ್ಲ ಪುಸ್ತಕಗಳನ್ನೂ ವ್ಯವಸ್ಥಿತವಾಗಿ ಜೋಡಿಸಿಟ್ಟಿದ್ದಾರೆ. ಅಕ್ಷರಿ ಗ್ರಂಥಾಲಯದ ಸದಸ್ಯಳಾದ್ದರಿಂದ ನಾವೂ ಕೆಲವು ಸಿನೆಮಾ ಸಿಡಿ, ಪುಸ್ತಕಗಳನ್ನು ತಂದೆವು.





ಪಕ್ಕದಲ್ಲೇ ಇದ್ದ ವಾಕಿಂಗ್ ದಾರಿಯಲ್ಲಿ ನಡೆದೆವು.



    ಫ್ರಾಂಕ್ಲಿನ್ ವುಡ್ಸ್ ನೇಚರ್ ಸೆಂಟರ್ 
      ೨೦.೬.೧೮ರಂದು ನಾವು ಮಿಲ್ವಾಕಿಯ ಫ್ರಾಂಕ್ಲಿನ್ ವುಡ್ ನೇಚರ್ ಸೆಂಟರ್‌ಗೆ ಸಂಜೆ ಹೋದೆವು. ಪುಟ್ಟದಾದ ಕಾಡು. ಅದರೊಳಗೆ ನಡೆಯಲು ಕಾಲುದಾರಿ. ಅಲ್ಲಿ ನಡೆದೆವು. ಅಲ್ಲಿ ಕೆಲ್ಲಾ ಎಂಬ ಬಾಲಕಿಯ ಹೆಸರಿನಲ್ಲಿ ಸಣ್ಣಮಕ್ಕಳಿಗೆ ಪುಟ್ಟದಾದ ಆಟದ ಪಾರ್ಕ್ ಸ್ಥಾಪನೆ ಮಾಡಿದ್ದಾರೆ. ಕೆಲ್ಲಾ ಕ್ಯಾನ್ಸರಿನಿಂದ ಮೃತಪಟ್ಟಿರುವಳು. ಅಲ್ಲಿ ನಾಯಿಯನ್ನೂ ವಿಹಾರಕ್ಕೆ ಕರೆತರುವರು. ನಾಯಿಗೂ ಕುಡಿಯುವ ನೀರಿನ ವ್ಯವಸ್ಥೆ ಇದೆ. ಅಲ್ಲಿ ಒಂದಷ್ಟು ಹೊತ್ತು ಅಡ್ಡಾಡಿ ಮನೆಗೆ ವಾಪಾಸಾದೆವು.


    ಸೌತ್ ರಿಡ್ಜ್ ಮಾಲ್ south ridge mall , 5300,S 76thSt,Greendale, WI,53129 USA
   ೨೧.೬.೧೮ರಂದು ನಾವು ಸಂಜೆ ಸೌತ್ ರಿಡ್ಜ್ ಮಾಲ್‌ಗೆ ಹೋದೆವು. ಮಳೆ ಬರುತ್ತಲಿತ್ತು. ಹಾಗಾಗಿ ಮಾಲ್ ಒಳಗೆ ವಾಕ್ ಹೋದೆವು. ೧೯೭೦ರಲ್ಲಿ ಈ ಕಟ್ಟಡ ಕಟ್ಟಲ್ಪಟ್ಟಿತು. ೧.೨ ಮಿಲಿಯನ್ ಚದರಡಿ ಸ್ಥಳದಲ್ಲಿ ಈ ಕಟ್ಟಡವಿದೆ. ಒಟ್ಟು ೧೨೫ ಅಂಗಡಿ ಮಳಿಗೆಗಳಿವೆ. ಅಲ್ಲಿ ಸುತ್ತಾಡಿ ಮನೆಗೆ ಮರಳಿದೆವು. ಬೆಳಗ್ಗೆ ೧೦ರಿಂದ ರಾತ್ರೆ ೯ಗಂಟೆವರೆಗೆ ಪ್ರವೇಶ. ಭಾನುವಾರ ಮಾತ್ರ ಬೆಳಗ್ಗೆ ೧೧ರಿಂದ ಸಂಜೆ ೬ರವರೆಗೆ


   ಆರ್ಟ್ ಇನ್‌ಸ್ಟಿಟ್ಯೂಟ್ Art institute of chicago 111,south Michigan Av,Chicago Il,60603 USA
      ೨೩.೬.೧೮ರಂದು ನಾವು ೯.೪೫ಕ್ಕೆ ಮನೆಯಿಂದ ಹೊರಟು ೧೧.೩೦ಗೆ ಶಿಕಾಗೊ ಡೌನ್ ಟೌನ್‌ಗೆ ಹೋದೆವು. ಒಂದೆಡೆ ಕಾರು ಪಾರ್ಕ್ ಮಾಡಿ ಪೇಟೆ ಸುತ್ತಿದೆವು.  ಮುಂದೆ ನಾವು ಆರ್ಟ್ ಇನ್ಟಿಟ್ಯೂಟ್ ಗೆ ಹೋದೆವು. ಬೃಹತ್ತಾದ ಅದ್ಭುತ ಮ್ಯೂಸಿಯಂ ಅದು. ನೆಲ ಅಂತಸ್ತು, ಒಂದನೆ, ಎರಡನೆ ಮಹಡಿ ಮೂರನೇ ಮಹಡಿಗಳಲ್ಲಿ ಶಿಲ್ಪಕಲೆಯಿಂದ ಹಿಡಿದು ಚಿತ್ರಕಲೆಗಳವರೆಗೆ ನಾನಾ ವೈವಿಧ್ಯಗಳನ್ನು ನೋಡಿದೆವು. ಎಲ್ಲ ದೇಶಗಳ ಕಲೆಗಳು ಅಲ್ಲಿ ಅನಾವರಣಗೊಂಡಿವೆ. 
 ಕೆಳಮಹಡಿಯಲ್ಲಿ ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ ಸಭಾಂಗಣ ನೋಡಿದೆವು. ಸಭಾಂಗಣ ಬಾಗಿಲು ಹಾಕಿತ್ತು. ನಮ್ಮ ಆಸಕ್ತಿ ಕಂಡು ಅಲ್ಲಿಯ ಸಿಬ್ಬಂದಿ ಬಾಗಿಲು ತೆರೆದು ತೋರಿಸಿದರು. ಅಲ್ಲಿ ನಡೆದಾಡುತ್ತ, ೧೮೯೩ರಲ್ಲಿ ೧೫೦ ವರ್ಷದ ಹಿಂದೆ ವಿವೇಕಾನಂದರು ಅಲ್ಲಿ ಭಾಷಣ ಮಾಡಿದ್ದನ್ನು ಮನದಲ್ಲಿ ಕಲ್ಪಿಸಿಕೊಳ್ಳುತ್ತಲೇ ಅದೇ ಸ್ಥಳದಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆಂದು ಪುಳಕಿತರಾದೆವು.


  ೧೨ಗಂಟೆಯಿಂದ ೨ಗಂಟೆಗಳವರೆಗೆ ೪ ಮಹಡಿ ಸುತ್ತಿ ಕಲೆಗಳ ವೈವಿಧ್ಯ ಅಗಾಧತೆ ಕಂಡು ಬೆರಗಾದೆವು. ನಮಗೆ ಮ್ಯೂಸಿಯಂ ಪೂರ್ತಿ ನೋಡಲು ಸಮಯವಾಗಲಿಲ್ಲ. ಮ್ಯೂಸಿಯಂ ಪೂರ್ತಿಯಾಗಿ ಸರಿಯಾಗಿ ನೋಡಲು ಕನಿಷ್ಟ ಒಂದು ದಿನ ಬೇಕೇಬೇಕು. ಬೆಳಗ್ಗೆ ೧೦-೩೦ರಿಂದ ಸಂಜೆ ೫ ಗಂಟೆ ತನಕ ಪ್ರವೇಶ. ಪ್ರವೇಶಧನ ಒಬ್ಬರಿಗೆ ೨೫ ಡಾಲರ್. ಆರ್ಟ್ ಇನ್ಟಿಟ್ಯೂಟ್ ಆಫ್ ಶಿಕಾಗೊ ೧೮೭೯ರಲ್ಲಿ ಸ್ಥಾಪನೆಗೊಂಡಿತು. ಅಮೆರಿಕಾದ ಅತ್ಯಂತ ಹಳೆಯ ಹಾಗೂ ಅತೀ ಬೃಹತ್ತಾದ ಮ್ಯೂಸಿಯಂ ಎಂದು ಹೆಸರುವಾಸಿಯಾಗಿದೆ. ೨೬೪೦೦ ಚದರಡಿ ಕಟ್ಟಡವಿದು.  ವರ್ಷದಲ್ಲಿ ಸರಿಸುಮಾರು ೧.೫ ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ.  ಪ್ರವೇಶ ಸಮಯ: ಸೋಮ-ಬುಧ-ಶುಕ್ರ-ಭಾನುವಾರ ಬೆಳಗ್ಗೆ ೧೦.೩೦ರಿಂದ ಸಂಜೆ ೫, ಗುರುವಾರ ಬೆಳಗ್ಗೆ ೧೦.೩೦ರಿಂದ ರಾತ್ರಿ ೮ ಗಂಟೆವರೆಗೆ. ವರ್ಷದಲ್ಲಿ ರಜಾ ದಿನಗಳು: ಹೊಸ ವರ್ಷ, ಥ್ಯಾಂಕ್ಸ್ ಗಿವಿಂಗ್, ಕ್ರಿಸ್ಮಸ್ ದಿನ







   ಮ್ಯೂಸಿಯಂ ನೋಡಿ ಕಟ್ಟಿ ತಂದಿದ್ದ ಗೋಭಿ ಪರೋಟವನ್ನು ನಾವು ಎದುರು ಪಾರ್ಕಿನಲ್ಲಿ ಕೂತು ತಿಂದೆವು. 
   ಮಿಲೇನಿಯಂ ಪಾರ್ಕ್ 201, F Randolph St, Chicago, IL, 60602 , USA
ನಾವು ನಡೆದುಕೊಂಡು ಮಿಲೇನಿಯಂ ಪಾರ್ಕಿಗೆ ಹೋದೆವು. ೧೯೯೮ ಅಕ್ಟೋಬರದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಿ ೧೬ ಜುಲೈ ೨೦೦೪ರಂದು ಲೋಕಾರ್ಪಣೆಗೊಂಡಿತು.

ಕ್ರೌನ್ ಫೌಂಟೇನ್
ಅಲ್ಲಿ ಕ್ರೌನ್ ಫೌಂಟೇನ್ ನಲ್ಲಿ ನೀರು ಚಿಮ್ಮುವುದನ್ನು ನೋಡಿದೆವು. ಅಲ್ಲಿಯೇ ಪಕ್ಕದಲ್ಲಿದ್ದ ಕ್ಲೌಡ್ ಗೇಟ್ ಬೀನ್ ನೋಡಿದೆವು. ಅದರ ಎದುರು ನಿಂತರೆ ನಾವು ಕಾಣುತ್ತೇವೆ. ಒಂದು ಬದಿಯಿಂದ ದಪ್ಪ, ವಿಕಾರಿಗಳಾಗಿಯೂ ಕಾಣುತ್ತೇವೆ. ದೊಡ್ಡ ದೊಡ್ಡ ಕಟ್ಟಡಗಳು ಅದರ ಕನ್ನಡಿಯಲ್ಲಿ ಬಲು ಚೆನ್ನಾಗಿ ಕಾಣುತ್ತದೆ. ಪ್ರವೇಶ ಉಚಿತ. ಅಲ್ಲಿ ಪಟ ಕ್ಲಿಕ್ಕಿಸಿ ನಾವು ಹೊರಟೆವು.











   ಲೂರಿ ಗಾರ್ಡನ್ 
  ನಾವು ಲೂರಿ ಗಾರ್ಡನಿಗೆ ಹೋದೆವು. ೨೦೦೪ನೇ ಇಸವಿಯಲ್ಲಿ ಸ್ಥಾಪಿಸಲ್ಪಟ್ಟ, ೨.೫ ಎಕರೆ ಪ್ರದೇಶದಲ್ಲಿರುವ ಈ ಉದ್ಯಾನವನ ಮಿಲೇನಿಯಂ ಪಾರ್ಕಿನ ದಕ್ಷಿಣ ದಿಕ್ಕಿನಲ್ಲಿದೆ. ಹಸಿರು ವಿನ್ಯಾಸಕ್ಕಾಗಿ ಪ್ರಶಸ್ತಿ ಪಡೆದಿದೆ.  ಅಲ್ಲಿ ನಾನಾ ರೀತಿಯ ಹೂಗಿಡಗಳು, ಮರಗಳಿವೆ. ಉಚಿತ ಪ್ರವೇಶ.




  ಬಕಿಂಗ್ ಹ್ಯಾಮ್ ಫೌಂಟೇನ್  (Buckingham fountain 301, S Columbus Dr, Chicago, IL,606o5 USA 
 ನಾವು ಗ್ರಾಂಟ್ ಪಾರ್ಕಿಗೆ ಹೋದೆವು. ೩೧೯ ಎಕರೆ ಪ್ರದೇಶದಲ್ಲಿದೆ. ಪಕ್ಕದಲ್ಲೆ ಬಕ್ಕಿಂಗ್ ಹ್ಯಾಮ್ ಕಾರಂಜಿ ಇರುವಲ್ಲಿಗೆ ಹೋದೆವು. ಆಗಸ್ಟ್ ೨೬ ೧೯೨೭ರಲ್ಲಿ ಸ್ಥಾಪಿಸಲಾದ ಈ ಕಾರಂಜಿ ಜಗತ್ತಿನಲ್ಲೆ ಅತ್ಯಂತ ದೊಡ್ಡದಂತೆ. ವಾಸ್ತುಶಿಲ್ಪಿ ಬರ್ನ್‌ಹ್ಯಾಮ್‌ಎಡ್ವರ್ಡ್ ಹೆಚ್. ಡೇನಿಯಲ್ ಹೆಚ್ ಬೆನೆಟ್  ಈ ಕಾರಂಜಿಯ ವಿನ್ಯಾಸಗಾರರು. ಇಲ್ಲಿಯ ಮೂರ್ತಿಗಳನ್ನು ಫ್ರೆಂಚ್ ಶಿಲ್ಪಿ ಮಾರ್ಸೆಲ್ ಎಫ್.  ಲೊಯ್ ಅವರು ನಿಮಿಸಿದರು. ಇದನ್ನು ನಿರ್ಮಿಸಲು ೭೫೦೦೦೦ ಡಾಲರ್ ವೆಚ್ಚ ಮಾಡಲಾಗಿದೆ. ಈ ಕಾರಂಜಿಯ ಅಧಿಕೃತ ಹೆಸರು ಕ್ಲಾರೆನ್ಸ್ ಬಕ್ಕಿಂಗ್‌ಹ್ಯಾಮ್ ಮೆಮೊರಿಯಲ್ ಫೌಂಟೇನ್. ಏಪ್ರಿಲಿನಿಂದ ಅಕ್ಟೋಬರದವರೆಗೆ ಪ್ರವೇಶಾವಕಾಶ.



 ಅಲ್ಲೇ ಅಡ್ಡಾಡುತ್ತ ಸರೋವರದ ಬಳಿ ಹೋಗಿ ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು. ಬೃಹತ್ ಸರೋವರ. ಅದರ ಚಂದ ನೋಡುತ್ತ ಕೂತರೆ ಸಮಯ ಸರಿಯುವುದೇ ತಿಳಿಯುವುದಿಲ್ಲ.



 ಪ್ರವಾಸಿಗರ ಮಾಹಿತಿಗಾಗಿ: ಒಬ್ಬರಿಗೆ ರೂ. ೧೦೬ ಡಾಲರ್ ಬೆಲೆಯ ಸಿಟಿ ಪಾಸ್ ತೆಗೆದುಕೊಂಡರೆ ಶೆಡ್ ಅಕ್ವೇರಿಯಂ, ಸ್ಕೈಡೆಕ್ ಚಿಕಾಗೊ, ಫೀಲ್ಡ್ ಮ್ಯೂಸಿಯಂ, ಅಡ್ಲರ್ ಪ್ಲಾನೆಟೇರಿಯಂ ಅಥವಾ ಆರ್ಟ್ ಇನ್ಟಿಟ್ಯೂಟ್ ಆಫ್ ಚಿಕಾಗೊ, ಮ್ಯೂಸಿಯಂ ಆಫ್ ಸಯನ್ಸ್ ಆಂಡ್ ಇಂಡಸ್ಟ್ರೀ ಅಥವಾ ೩೬೦ ಚಿಕಾಗೊ ಅಬ್ಸರ್ವೇಷನ್ ಡೆಕ್ ನೋಡಬಹುದು. ನಾವು ಸಿಟಿ ಪಾಸ್ ತೆಗೆದುಕೊಂಡಿರುವುದು. ನಮಗೆ ಒಂದೆರಡು ಸ್ಥಳ ನೋಡಲು ಸಮಯವಾಗಲಿಲ್ಲ. ವರ್ಷ ಸಂದಂತೆ ಡಾಲರ್ ಮೊತ್ತದಲ್ಲಿ ಏರುಪೇರಾಗಬಹುದು. ನಾವು ೧೦೬ ಡಾಲರ್ ಕೊಟ್ಟು ಪಾಸ್ ತೆಗೆದುಕೊಂಡಿದ್ದೆವು.


   ಸ್ಕೈ ಡೆಕ್ ಚಿಕಾಗೊ 
  ವಿಲ್ಲೀಸ್ ಟವರ್ ವರ್ಷದ ಎಲ್ಲಾ ಕಾಲದಲ್ಲೂ ಪ್ರವೇಶವಿರುವ ಗಗನಚುಂಬಿ ಕಟ್ಟಡ. ಇದರ ಕಾಮಗಾರಿ ಆಗಸ್ಟ್ ೧೯೭೦ರಲ್ಲಿ ಪ್ರಾರಂಭವಾಗಿ ೧೯೭೩ರಲ್ಲಿ ಪೂರ್ಣಗೊಂಡಿತು. ೧೯೭೩ರಿಂದ ೧೯೯೮ರವರೆಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡವೆಂದು ಪ್ರಸಿದ್ಧಿ ಪಡೆದಿತ್ತು. ೧೧೦ ಮಹಡಿಯನ್ನು ಒಳಗೊಂಡಿದೆ. ನೆಲದಿಂದ ಚಾವಣಿವರೆಗೆ ೧,೪೫೦ ಅಡಿ ಎತ್ತರವಿದೆ. 
 ೧೬ ಜುಲೈ ೨೦೦೯ರ ವರೆಗೆ ಈ ಕಟ್ಟಡವನ್ನು ಸಿಯರ್ಸ್ ಟವರ್ ಎಂದು ಕರೆಯಲಾಗುತ್ತಿತ್ತು. ೧೯೬೯ರಲ್ಲಿ ಸಿಯರ್ಸ್ ರೋಬಕ್ ಅಂಡ್ ಕಂಪನಿ ವಿಶ್ವದಲ್ಲೇ ಅತಿ ದೊಡ್ದ ಕಂಪನಿಯಾಗಿತ್ತು. ಚಿಕಾಗೊದಲ್ಲಿ ಸಾವಿರಾರು ಕಚೇರಿಗಳನ್ನು ಹೊಂದಿತ್ತು. ಸಿಯರ್ಸ್ ಕಂಪನಿಯ ಕೆಲಸಗಾರರನ್ನು ಒಂದೇ ಕಟ್ಟಡದಲ್ಲಿ ಕೆಲಸ ನಿರ್ವಹಿಸಲು ೩೦೦೦೦೦೦ ಚದರ ಅಡಿ ಸ್ಥಳದಲ್ಲಿ ಕಟ್ಟಡ ಕಟ್ಟಲು ಮುಂದಾದರು. ಸಿಯರ್ಸಿನ ವಾಸ್ತು ಶಿಲ್ಪಿಗಳು ಸ್ಕಿಡ್ಕೋರ್, ಓವಿಂಗ್ಸ್ ಮತ್ತು ಮೆರಿಲ್ ಈ ಕಟ್ಟಡವನ್ನು ವಿನ್ಯಾಸಗೊಳಿಸಿದವರು. ಇಂಜಿನಿಯರ್ ಫಾಜ್ಲೂರ್ ಖಾನ್ ಹಾಗೂ ಬ್ರೂಸ್ ಗ್ರಹಾಮ್. ೧೫೦ಮಿಲಿಯನ್ ಡಾಲರ್ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದೆ. ವಿಲ್ಲೀಸ್ ಗ್ರೂಫ್ ಈ ಕಟ್ಟಡವನ್ನು ಖರೀದಿಸಿದನಂತರ ವಿಲ್ಲೀಸ್ ಟವರ್ ಎಂದು ಮರುನಾಮಕರಣ ಮಾಡಲಾಯಿತು. ವಿಶ್ವದಲ್ಲೇ ಎಂಟನೆಯ ಅತಿ ಎತ್ತರದ ಫ್ರೀ ಸ್ಟಾಂಡಿಂಗ್ ರಚನೆಯಾಗಿದೆ. ಅಮೇರಿಕಾದ ೧೨ನೇ ಎತ್ತರದ ಗಗನಚುಂಬಿ ಕಟ್ಟಡವಿದು. 
   ನಾವು ೧೦೩ನೇ ಮಹಡಿಗೆ ಹೋಗಲು ಸರತಿ ಸಾಲಿನಲ್ಲಿ ೧ ಗಂಟೆ ನಿಂತಿದ್ದೆವು. ಅಷ್ಟೂ ಜನ . ಜನ ಮರುಳೋ ೧೦೩ನೇ ಮಹಡಿಯ ಗಾಜಿನ ಬಾಗಿಲು ಮರುಳೋ ಎಂದು ಗೊಣಗಿಕೊಂಡೆ! ಕಟ್ಟಡದ ಹೊರಭಾಗದಲ್ಲಿರುವ ಗಾಜಿನ ಬಾಗಿಲಲ್ಲಿ ಹೊರಹೋಗಿ ನಿಂತು ಫೋಟೋ ತೆಗೆಸಿಕೊಂಡೆವು. ಈ ಕಟ್ಟಡಕ್ಕೆ ಪ್ರವೇಶ ಧನವಿದೆ.





    ೩೬೦ ಚಿಕಾಗೊ ಅಬ್ಸರ್ವೇಷನ್ ಡೆಕ್ (875,North Michigan Av, 94th floor, Chicago)
ಹ್ಯಾನ್ಕಾಕ್ ಕಟ್ಟಡ ಬಳಿ ಬರುವಾಗ ಪೇಟೆ ಬೀದಿಯಲ್ಲಿ ಉದರ ನಿಮಿತ್ತಂ ಬಹುಕೃತ ವೇಷಂ ಕಾಣಲು ಸಿಕ್ಕಿತು. ಮೈಗೆ ಬಣ್ಣ ಬಳಿದು ನಿಂತವರು, ಬಕೆಟಿನಲ್ಲಿ ಸಂಗೀತ , ನಾಟಕ ಇತ್ಯಾದಿ.





೧೦೦ ಮಹಡಿ ಇರುವ ಈ ಹ್ಯಾನ್ಕಾಕ್ ಕಟ್ಟಡದ ೯೪ನೇ ಮಹಡಿಗೆ ಹತ್ತಿ ನಿಂತರೆ ೩೬೦ ಡಿಗ್ರಿ ಕೋನದಲ್ಲಿ ಸುತ್ತಲೂ ನಮಗೆ ನಾಲ್ಕು ರಾಜ್ಯಗಳು ಕಾಣುತ್ತವೆ. ಮಿಷಿಗನ್ ಲೇಕ್ ಬಹಳ ಚಂದವಾಗಿ ಕಾಣುತ್ತದೆ. ಸುತ್ತ ಗಾಜಿನ ಗೋಡೆ. ಅಲ್ಲಿಂದ ರಾತ್ರಿ ಹೊತ್ತಲ್ಲಿ ಹೊರಗೆ ನೋಡುವುದು ಅದ್ಭುತ ಅನುಭವ. ಅಲ್ಲಿ ಸುಮಾರು ಹೊತ್ತು ಇದ್ದು ರಾತ್ರೆಯಾಗುವುದನ್ನೆ ಕಾದುಕೂತೆವು. ವಿದ್ಯುತ್ ಬೆಳಕಿನಲ್ಲಿ ರಾತ್ರಿಯಂತೂ ಇಂದ್ರನ ಅಮರಾವತಿಯನ್ನು ಮೀರಿಸುವಂಥ ಕಲ್ಪನೆಯಲ್ಲಿದ್ದ ದೃಶ್ಯ ನೋಡಬಹುದು.  ಹೊರಗಿನ ಬೀದಿಯ ವಿದ್ಯುತ್ ದೀಪಗಳು ಹೊತ್ತಿಕೊಂಡು ಕಂಗೊಳಿಸುವುದನ್ನು ನೋಡಿದೆವು. ಬೆಳಗ್ಗೆ ೯ರಿಂದ ರಾತ್ರೆ ೧೧ರವರೆಗೆ ಪ್ರವೇಶ. ದಿನದ ಕೊನೆಯ ಪ್ರವೇಶ ರಾತ್ರಿ ೧೦.೩೦. ಪ್ರವೇಶಧನವಿದೆ. ಮೂರು ವರ್ಷದೊಳಗಿನ ಮಕ್ಕಳಿಗೆ ಉಚಿತ, ೩ರಿಂದ ೧೧ ವರ್ಷದವರಿಗೆ ೧೫ ಡಾಲರ್, ವಯಸ್ಕರಿಗೆ ೨೨ ಡಾಲರ್.






    ಊಬರ್ ಕಾರಿನಲ್ಲಿನಾವು ಕಾರು ಪಾರ್ಕ್ ಮಾಡಿದ ಸ್ಥಳಕ್ಕೆ ಹೋದೆವು. ಚಾಲಕ ಮೊಹಮ್ಮದ್ ಅಲಿ ಪಾಕಿಸ್ತಾನದವರು. ನಿವೃತ್ತಿಯ ಬಳಿಕ ಸುಮ್ಮನೆ ಕುಳಿತು ಸಮಯ ವ್ಯರ್ಥಮಾಡಲು ಬಯಸದೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರಂತೆ. ನೆರೆ ರಾಜ್ಯದವರಾದ ನಮ್ಮನ್ನು ಕಂಡು ಖುಷಿಯಾಗಿ ಕಾರು ಇಳಿಯುವತನಕವೂ ಮಹೇಶನೊಡನೆ ಮಾತು ಹಿಂದಿಯಲ್ಲಿ ಸರಾಗವಾಗಿ ಸಾಗಿತು. 
 ನಾವು ಕಾರು ಪಾರ್ಕ್ ಮಾಡಿದ ಬಳಿ ಇಳಿದು ನಮ್ಮ ಕಾರು ಹತ್ತಿ ಹೊಟೇಲ್ ೬ (ಹೊಟೇಲ್ ಹೆಸರು ೬)  ಗೆ ಹೋದೆವು. ಮೊದಲೇ ಬುಕ್ ಮಾಡಿದ್ದೆವು. ಅಲ್ಲಿ ಹೋದಾಗ ರೂಮ್ ಇಲ್ಲ ಎಂದು ಹೇಳಿದರು. ಆಗಲೇ ಗಂಟೆ ೧೦ ದಾಟಿತ್ತು. ದಾರಿಯಲ್ಲಿ ಸಬ್ ವೇಯಲ್ಲಿ ಸ್ಯಾಂಡ್ವಿಚ್ ತಿಂದು ಅಂತರ್ಜಾಲದಲ್ಲಿ ಜಾಲಾಡಿ ಬೇರೆ ಹೊಟೇಲ್ ಬುಕ್ ಮಾಡಿ ಅರೋರದಲ್ಲಿರುವ ಹೊಟೇಲ್ ೮ ಸೇರುವಾಗ ಗಂಟೆ ೧೨.೩೦ ದಾಟಿತ್ತು. ಹೊಟೇಲ್ ವ್ಯವಸ್ಥಾಪಕರಾದ ಜಯೇಶ್ ಪಟೇಲ್ ನಮಗೆ ರೂಮ್ ಕೊಟ್ಟು ಸಹಕರಿಸಿದರು.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ