ಶನಿವಾರ, ಮೇ 2, 2020

ಮರೆತೇನಂದ್ರೂ ಮರೆಯಲಾಗದ ಅತ್ತಿಗೆಯ ನೆನಪು

   ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಒಡಿಯೂರು ಎಂಬ ಊರಿನಲ್ಲಿ ದೊಡ್ಡದಾದ ವಿಶಾಲವಾದ ಅಂಗಳವಿರುವ  ಮನೆಯಲ್ಲಿ, ದೊಡ್ಡಪ್ಪ ದೊಡ್ಡಮ್ಮ, ಅವರ ಮೂರು ಮಕ್ಕಳು, ಅಪ್ಪ ಅಮ್ಮ ನಾವು ೫ ಮಕ್ಕಳು ಒಟ್ಟು ಕುಟುಂಬದಲ್ಲಿ ಬಹಳ ಅನ್ಯೋನ್ಯವಾಗಿ ಬೆಳೆದವರು.
    ೧೯೮೨ನೇ ಇಸವಿ ಯಲ್ಲಿ ದೊಡ್ಡಪ್ಪನ ಮಗ ನಮ್ಮ ದೊಡ್ಡಣ್ಣ (ಶಾಮ ಭಟ್)ನ ಮದುವೆ ಅದಿತಿ ಅತ್ತಿಗೆಯೊಡನೆ ನೆರವೇರಿತು. ಅತ್ತಿಗೆ ನಮ್ಮ ಮನೆ್ಗೂ, ಮನದೊಳಗೂ ಪ್ರವೇಶಿಸಿದಳು. 
ನನಗಾಗ ೧೩ ವರ್ಷ. ನಮ್ಮದು ವಿಶಾಲವಾದ ಮನೆಯಾದರೂ ಅನುಕೂಲಕರವಾದ ಕೋಣೆಗಳಿರಲಿಲ್ಲ. ಎಲ್ಲ ಕಡೆಯೂ ದಾರಿಯೇ! ನಮ್ಮಲ್ಲಿ ರಾತ್ರೆ ಉಪ್ಪರಿಗೆಗೆ ಹೋಗಲು ಅತ್ತಿಗೆಗೆ ಹೆದರಿಕೆ. ಬಟ್ಟೆ ಎಲ್ಲ ಹರಗುತ್ತಿದ್ದುದು ಉಪ್ಪರಿಗೆಯಲ್ಲೆ. ಅತ್ತಿಗೆ ನಮ್ಮಲ್ಲಿ ಯಾರಾದರೊಬ್ಬರ ಜೊತೆಗೇ ಉಪ್ಪರಿಗೆಗೆ ಹೋಗುತ್ತಿದ್ದುದು. ನಾನಾಗ ಒಬ್ಬಳೇ ಉಪ್ಪರಿಗೆಯಲ್ಲಿ ಮಲಗುತ್ತಿದ್ದೆ. ಅವಳು ಆಶ್ಚರ್ಯದಿಂದ ನಿನಗೆ ಹೆದರಿಕೆ ಆಗುವುದಿಲ್ಲವೆ? ಎಂದು ಕೇಳಿದ್ದು ಈಗಲೂ ನೆನಪಿನಲ್ಲಿದೆ.
  ದೊಡ್ಡಣ್ಣ ವಕೀಲಿ ವೃತ್ತಿ ಹಿಡಿದು ಮೈಸೂರಲ್ಲಿ ನೆಲೆ ಕಂಡುಕೊಂಡಿದ್ದ. ದೊಡ್ಡಣ್ಣ ಅತ್ತಿಗೆ ಮನೆಗೆ ಬರುವುದೆಂದರೆ ನಮಗೆಲ್ಲ ಬಹಳ ಹಿಗ್ಗು. ಅತ್ತಿಗೆಯ ಬಳಿ ಆಗ ಬಣ್ಣದ ಕೊಡೆ ಇತ್ತು. ಮಳೆಗಾಲದಲ್ಲಿ ಆ ಕೊಡೆಯನ್ನು ನಾನು ಶಾಲೆಗೆ ಹೋಗುವಾಗ ಕೊಂಡೋಗಿದ್ದೆ. ಒಂದು ಸಲ ಹೀಗೆ ಕೊಡೋಗಿದ್ದಾಗ ಆಟಿ ಕಳೆಂಜ ಎಂದು ಹುಡುಗರು ತಮಾಷೆ ಮಾಡಿದ್ದರು. ನಮ್ಮ ಊರಲ್ಲಿ ಆಗ ಬಣ್ಣ ಬಣ್ಣದ ಕೊಡೆ ಚಾಲ್ತಿಯಲ್ಲಿರಲಿಲ್ಲ. ಅತ್ತಿಗೆಯ ಚಪ್ಪಲಿ, ಕೈಗಡಿಯಾರ  ಹೀಗೆ ಒಂದಲ್ಲ ಒಂದು ವಸ್ತು ಪಡೆದು ನಾನೂ ಅಕ್ಕನೂ ಬಳಸಿಕೊಳ್ಳುತ್ತಿದ್ದೆವು. ಅವಳೂ ಖುಷಿಯಿಂದಲೇ ಕೊಟ್ಟಿದ್ದಳು.
    ನಾನು ಮದುವೆಯಾಗಿ ಮೈಸೂರಿಗೇ ಬಂದು ಸೇರಿದೆ. ಮದುವೆಗೆ ಮೊದಲು ಹುಡುಗಿ ನೋಡುವ ಶಾಸ್ತ್ರ ಅವರ ಮನೆಯಲ್ಲೆ ಆಗಿದ್ದುದು. ನನಗೆ ಮೊದಲ ಸೀರೆ ತಂದು ರವಕೆ ಹೊಲಿಸಿ ಕೊಟ್ಟು ಸೀರೆ ಉಡಿಸಿದವಳೂ ಅವಳೇ. ನಮ್ಮ ಮನೆಯಿಂದ ೫ ನಿಮಿಷದ ನಡಿಗೆಯಷ್ಟೇ ಸಮೀಪದಲ್ಲಿ ಅವಳ ಮನೆಯಿತ್ತು. ಆ ದಿನಗಳಲ್ಲಿ ದಿನಕ್ಕೊಮ್ಮೆ ಸಂಜೆ ಅಲ್ಲಿಗೆ ಹೋಗಿ, ಅವಳೊಡನೆ ಹರಟಿ ಬಂದರೇ ಅದೇನೋ ಖುಷಿ.

ನಾವು ೫ ಮಂದಿ ನಾದಿನಿಯರೂ ಅವಳೊಡನೆ ಬಹಳ ಆತ್ಮೀಯವಾಗಿದ್ದೆವು.

   ಅತ್ತಿಗೆಯದು ಸರಳ ಸ್ವಭಾವದ ಜೊತೆಗೆ ನಿಷ್ಟುರ ಸ್ವಭಾವವೂ ಮೈಗೂಡಿತ್ತು. ಕಂಡದ್ದನ್ನು ನೇರ ನುಡಿದು ಬಿಡುತ್ತಿದ್ದಳು. ಅದು ಗಂಡನೇ ಆಗಿರಲಿ, ಯಾರೇ ಆಗಿರಲಿ. ನೇರ ದಿಟ್ಟ ನಿರಂತರ. ಅವರಿವರು ಎಂದು ಭೇದ ಎಣಿಸಿದವಳೇ ಅಲ್ಲ.  ಬಹಳ ಉದಾರಿಯಾಗಿದ್ದಳು. ಅವಳಿಗೆ ನಾವು ನಾದಿನಿಯಂದಿರು ೫ ಮಂದಿ. ಪ್ರತೀವರ್ಷ ನಮಗೆಲ್ಲರಿಗೂ ಹೊಸ ಸೀರೆ ಕೊಡುವ ಪದ್ಧತಿ ಇತ್ತು. ಯಾರ್ಯಾರಿಗೆ ಯಾವ ನಮೂನೆಯ ಸೀರೆ, ಯಾವ್ಯಾವ ಬಣ್ಣ ಖುಷಿ ಎಂದು ತಿಳಿದುಕೊಂಡು ಅಂಗಡಿಗೆ ಹೋಗಿ ಅಂತದ್ದನ್ನೇ ಆರಿಸಿ ತಂದು ಕೊಡುತ್ತಿದ್ದಳು. ಸಂಭ್ರಮದಿಂದ ಕೊಟ್ಟು ಇದು ನಿಮಗೆ ಹಿಡಿಸಿತೆ? ಎಂದೂ ಕೇಳುತ್ತಿದ್ದಳು.
     ಮುಂದೆ ನಮ್ಮ ಮಗಳು ಅಕ್ಷರಿಯ ಬಾಲ್ಯದಲ್ಲಿ ಸಂಜೆ ಹೊತ್ತು ಪಾರ್ಕಿಗೆ ಹೋದಾಗ ಅಲ್ಲಿ ಆಟ ಮುಗಿದ ಬಳಿಕ, ಅವಳು ದಿನಾ ಅತ್ತೆ ಮನೆಗೆ ಹೋಗುವ ಎಂದು ಅತ್ತಲೇ ಕೈ ಹಿಡಿದು ಎಳೆಯುತ್ತಿದ್ದಳು. ಹಾಗೆ ಅಲ್ಲಿಗೆ ಹೋಗಿ ಅರ್ಧ ಗಂಟೆ ಕೂತು ಅವಳು ಅತ್ತೆಯೊಡನೆ ಮಾತಾಡಿ ಮುಗಿದ ಮೇಲೆಯೇ ನಾವು ಮನೆಗೆ ಮರಳುತ್ತಿದ್ದುದು.
  ಸರಸ್ವತೀಪುರದ ಮನೆ ಮಾರಾಟ ಮಾಡಿ ಅವರು ಕುವೆಂಪುನಗರಕ್ಕೆ ಹೋದರು.  ಅಲ್ಲಿ ಹೋದ ಬಳಿಕವೂ ನಾವು ಅಲ್ಲಿಗೆ ಹೋಗುವುದು ತಪ್ಪಿಸಿರಲಿಲ್ಲ. ಅವರ ಮನೆ ಎದುರು ಶಾಲೆ ಇದೆ. ಆ ಶಾಲೆ ನೋಡಿ ಇದೆ ಶಾಲೆಗೆ ಹೋಗುವುದು ನಾನು, ಏಕೆಂದರೆ ಹತ್ತಿರ ಅತ್ತೆ ಮನೆ ಇದೆ ಎಂದು ಅಕ್ಷರಿ . ಹೇಳುತ್ತಿದ್ದಳು. ಹಾಗೆ ಅದೇ ಶಾಲೆಗೆ ಸೇರಿ ಹನ್ನೆರಡು ವರ್ಷ ಅತ್ತೆ ಮನೆ ಸುಖ ಅನುಭವಿಸಿದ್ದಳು. ಅಕ್ಷರಿಗೆ ಅತ್ತೆ ಹೇಳಿದ್ದೇ ವೇದ ವಾಕ್ಯ. ಮಾವ ಏನಾದರೂ ವಿಷಯ ಹೇಳಿದರೆ,  ಹೌದಾ ಅತ್ತೆ? ಎಂದು ಅತ್ತೆಯನ್ನು ಕೇಳಿ, ಅತ್ತೆ ಹೌದೆಂದು ಹೇಳಿದರೆ ಮಾತ್ರ  ಅದನ್ನು ಒಪ್ಪುತ್ತಿದ್ದುದು! ಕೋರ್ಟಿನಲ್ಲಿ ಸುಳ್ಳು ವಾದ ಮಾಡಿ ಮಾಡಿ ಇಲ್ಲೂ ಸುಳ್ಳು ಹೇಳುತ್ತಾರೆಂದು ಅವಳು ಭಾವಿಸಿರಬೇಕು ಎಂದು ಗಂಡನನ್ನು ತಮಾಷೆ ಮಾಡುತ್ತಿದ್ದುದು ಇನ್ನೂ ನನ್ನ ನೆನಪಿನ ಭಂಡಾರದಲ್ಲಿದೆ.
೧೯೯೫ನೇ ಇಸವಿ ಎಂದು ನೆನಪು.   ನಾನೂ ಅವಳೂ  ಡ್ರೈವಿಂಗ್ ಶಾಲೆಗೆ ಹೋಗಿ ಕಾರು  ಕಲಿತಿದ್ದೆವು. ಅವಳಿಗೆ ಮನೆಯಲ್ಲಿ ಪ್ರೋತ್ಸಾಹ ಸಿಗದೆ ಇದ್ದದ್ದರಿಂದ ಪ್ರಯೋಜನಕ್ಕೆ ಬರಲಿಲ್ಲ. ಮನೆಯಲ್ಲಿ ಗಂಡನ ಪ್ರೋತ್ಸಾಹ ಇಲ್ಲದೆ ಹೋದರೆ ಹೆಂಡತಿಯ ಪ್ರತಿಭೆ ಮೂಲೆಗುಂಪಾಗುತ್ತದೆ ಎಂದು ವಿಷಾದದಿಂದ ಹೇಳಬೇಕಾಗಿದೆ. 
   ಯಾವುದೇ ಹಬ್ಬ ಬರಲಿ, ಅಕ್ಷರಿ ಜರಿಲಂಗ ಧರಿಸಿ ಬೆಳಗ್ಗೆಯೇ ಅತ್ತೆ ಮನೆಗೆ ದೌಡಯಿಸುತ್ತಿದ್ದುದು, ಅಲ್ಲಿ ಹಬ್ಬ ಆಚರಿಸಿದರೇ ಅವಳಿಗೆ ಸಮಾಧಾನ, ಎಷ್ಟೋ ಸಲ ನಾವು ಒಟ್ಟಿಗೇ ಹಬ್ಬ ಆಚರಿಸಿ ಅಲ್ಲೇ ಊಟ ಮಾಡಿ ಬರುತ್ತಿದ್ದುದು ಇನ್ನೂ ಹಸುರಾಗಿದೆ. 
  ಅಕ್ಷರಿಗೆ ಬಳೆ ಸರ ತೆಗೆಸಿಕೊಟ್ಟದ್ದಕ್ಕೆ ಲೆಕ್ಕವಿಲ್ಲ. ಒಂದು ಅಂಗಡಿ ಇಡಬಹುದು ಎಂದು ನಾನು ತಮಾಷೆ ಮಾಡುತ್ತಿದ್ದೆ. ಅಂಗಡಿಗೆ ಹೋದಾಗಲೆಲ್ಲ ಚಂದದ ಅಂಗಿ ಕಂಡರೆ, ಇದು ಅಕ್ಷರಿಗೆ ಚಂದವಾಗಿ ಒಪ್ಪೀತು ಎಂದು ಕೊಂಡು ಅವಳಿಗೆ ಕೊಟ್ಟರೇ ಸಮಾಧಾನ.
  ಅಡುಗೆ ತಿಂಡಿ ಮಾಡುವುದರಲ್ಲಿ ಅತ್ತಿಗೆ ನಿಸ್ಸೀಮೆ. ದೊಡ್ಡಣ್ಣನೋ ಸಿಹಿಪ್ರಿಯ. ಅವಳು ಎಷ್ಟು ಬಗೆಯ ತಿಂಡಿ ಮಾಡಿ ಕೊಟ್ಟರೂ ಸಾಲದೆಂಬ ಭಾವ. ಅವರ ಮದುವೆಯಾದ ಹೊಸತರಲ್ಲಿ, ವಕೀಲಿ ವೃತ್ತಿ ಇನ್ನೂ ಪಳಗಿರದ ಸಮಯದಲ್ಲಿ, ಅಣ್ಣ ಸ್ನೇಹಿತರನ್ನು ಊಟಕ್ಕೆ ಕರೆತರುತ್ತಿದ್ದನಂತೆ. ಮನೆಯಲ್ಲಿ ಸಾಮಾನು ಏನಿದೆ ಎಂದೂ ನೋಡದೆ ಆ ತಿಂಡಿ ಮಾಡು, ಈ ತಿಂಡಿ ಮಾಡು ಎಂದು ಹೇಳುತ್ತಿದ್ದನಂತೆ. ಅತ್ತಿಗೆ ಇರುವ ಸಾಮಾನಿನಲ್ಲೆ ಅಚ್ಚುಕಟ್ಟಾಗಿ ಅಡುಗೆ  ಮಾಡಿ ಬಡಿಸುತ್ತಿದ್ದಳಂತೆ.
 ಯಾವುದೇ ವಸ್ತು ಹೊಸದಾಗಿ ಅಂಗಡಿಯಲ್ಲಿ ಕಂಡರೆ ಅವಳ ಉಪಯೋಗಕ್ಕೊಂದು ಕೊಂಡು, ಮರೆಯದೆ ನನಗೂ ಒಂದು ತೆಗೆದಿಡುತ್ತಿದ್ದಳು. ನಾನು ಹಾಗೆ ತೆಗೆದುಕೊಳ್ಳುವುದಿಲ್ಲವೆಂದು ಜಾಣತನದಿಂದ ಗೌರಿ ಹಬ್ಬಕ್ಕೆ ನನ್ನನ್ನು ಮನೆಗೆ ಕರೆಸಿ ಕುಂಕುಮದೊಡನೆ ಕೊಡುತ್ತಿದ್ದಳು. ಹಾಗೆ ಅವಳು ಕೊಟ್ಟ ಈರುಳ್ಳಿ ಕತ್ತರಿಸುವ ಯಂತ್ರ ನನ್ನ ಅಚ್ಚುಮೆಚ್ಚಿನದು. ಈರುಳ್ಳಿ ಕತ್ತರಿಸಲು ನಾನು ಪಡುವ ಪಾಡು ನೋಡಿ ಆಕೆ ನನ್ನ ಕಷ್ಟ ೨೦೧೫ರಲ್ಲಿ ಪರಿಹರಿಸಿದ್ದಳು. ಈಗ ಈರುಳ್ಳಿ ಹೆಚ್ಚುವಾಗ ನಾನು ಬಹುತೇಕ ಕಣ್ಣಿರು ಹಾಕುವುದು ನಿಂತಿದೆ. ಯಂತ್ರ ಹೊರ ತೆಗೆದೊಡನೆ ಯಾವಾಗಲೂ ಅತ್ತಿಗೆಯದೇ ಮಧುರ ನೆನಪು. 

  ಅಮೃತಾನಂದಮಯೀ ಅಮ್ಮನವರ ಸಾನ್ನಿಧ್ಯ ಲಭಿಸಿದ್ದು ಅತ್ತಿಗೆಗೆ ಬಹಳ ಖುಷಿಯಾಗಿತ್ತು. ಅಮ್ಮನ ಊರು ಕೇರಳದ  ವಳ್ಳಿಕಾವಿಗೆ ನಾನೂ ಅಕ್ಷರಿಯೂ ಅಣ್ಣ ಅತ್ತಿಗೆಯರ ಜೊತೆ ಹೋಗಿ ಬಂದಿದ್ದೆವು. ಬೋಗಾದಿ ಆಶ್ರಮಕ್ಕೆ ಅಮ್ಮ ಬರುವ ಸಮಯದಲ್ಲಿ ಅತ್ತಿಗೆ ಆಶ್ರಮದ ಕೆಲಸ ಕಾರ್ಯಗಳಲ್ಲಿ ಶ್ರದ್ಧೆಯಿಂದ ನಿರತಳಾಗುತ್ತಿದ್ದುದು, ಅದು ಅವಳಿಗೆ ನೀಡುವ ಸಂತೋಷ ಅಸದಳ. ಶರೀರದ ಆರೋಗ್ಯದ ಏರುಪೇರು ಇದ್ದರೂ ಆ ಸಮಯದಲ್ಲಿ ಅಮ್ಮ ಬಹಳ ಶಕ್ತಿ ಕೊಡುತ್ತಾಳೆ ಎಂದು ಹೇಳುತ್ತಿದ್ದಳು.
  ಕುವೆಂಪುನಗರದ ಮನೆ ಬಿಟ್ಟು, ಬೋಗಾಧಿ ಅಮ್ಮನ ಆಶ್ರಮದ ಬಳಿಯೇ ಮನೆ ಕಟ್ಟಿ ಅಲ್ಲಿಗೆ ಹೋದಬಳಿಕವೂ ನಾವು ಅವರ ಮನೆಗೆ ಹೋಗುವುದು ಏನೂ ತಪ್ಪಿರಲಿಲ್ಲ. ಅಕ್ಷರಿಯ ಮದುವೆಯ ಬಳಿಕವೂ ತಿಂಗಳಿಗೆ ಎರಡು ಸಲವಾದರೂ ಹೋಗುತ್ತಿದ್ದೆ.
  ಇಸವಿ  ೨೦೧೫-೧೬ರಲ್ಲಿ ದೊಡ್ಡಣ್ಣ ಅತ್ತಿಗೆ ದಕ್ಷಿಣಕನ್ನಡ ಜಿಲ್ಲೆಯ ಆನೇಕಲ್ಲಿನಲ್ಲಿ ಜಲದುರ್ಗೆ ದೇವಸ್ಥಾನ ಕಟ್ಟಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದರು.  ಆ ಕೆಲಸದಲ್ಲಿ ಮೈಸೂರು ಆನೆಕಲ್ಲು ಓಡಾಟ ನಡೆಸಿದ್ದರು.
 


ದೇವಾಲಯದ ಕೆಲಸ ಪೂರ್ಣಗೊಂಡು ೨೦೧೭ ಏಪ್ರಿಲಲ್ಲಿ ಪ್ರತಿಷ್ಟಾಪನೆಯ ಸಮಯದಲ್ಲೇ ಅತ್ತಿಗೆಗೆ ಮಿದುಳಾಘಾತವಾಯಿತು. ಆಘಾತವಾಗಿ ಎರಡು ಗಂಟೆಯೊಳಗೆ ಯುಕ್ತ ಔಷಧೋಪಚಾರ ಲಭಿಸಿದ್ದರಿಂದ ಚೇತರಿಸಿಕೊಂಡಳು. ಆದರೆ ದೇವಾಲಯದ ಕಲಾಪಗಳಲ್ಲಿ ಭಾಗಿಯಾಗಲು ಸಾಧ್ಯವಾಗದೆ ಇದ್ದುದು ವಿಧಿಯ ಕ್ರೂರತೆ ಎಂದೇ ನನಗನಿಸಿತ್ತು.
  ಅತ್ತಿಗೆ ತಕ್ಕಮಟ್ಟಿಗೆ ಚೇತರಿಸಿ ಮೈಸೂರಿಗೆ ಮನೆಗೆ ಬಂದಳು. ಅತ್ತಿಗೆಯನ್ನು ದೊಡ್ಡಣ್ಣ ಬಹಳ ಚೆನ್ನಾಗಿ ಆರೈಕೆ ಮಾಡಿದ. ಅವಳ ಎಲ್ಲ ಕೆಲಸವನ್ನೂ ಅವನೇ ಪ್ರೀತಿಯಿಂದಲೇ ಮಾಡಿದ್ದ. ಅತ್ತಿಗೆ ಕ್ರಮೆಣ ಚೇತರಿಸಿ ಹೊರಗೆ ವಾಯುವಿಹಾರ ಮಾಡುವಷ್ಟಾಗಿದ್ದಳು. ನಮ್ಮ ಮನೆಗೂ ಬಂದಿದ್ದಳು.

   ನಾವು ೨೦೧೮ರಲ್ಲಿ ಅಮೇರಿಕಾ ಪ್ರವಾಸ ಮಾಡಿ ಹಿಂದಿರುಗಿ ಅವಳ ಮನೆಗೆ ಹೋಗಿದ್ದಾಗ, ಮೊದಲಿಗೆ ಅವಳು ನನಗೆ ಸಲಹೆ ಕೊಟ್ಟದ್ದು, ಅಮೇರಿಕಾ ಅನುಭವವನ್ನು ಬೇಗ ಬರೆ. ಮತ್ತೆ ಸಮಯ ಮೀರಿದರೆ ಸ್ವಾರಸ್ಯ ಇರುವುದಿಲ್ಲಎಂದಿದ್ದಳು.  ಅವಳಿದ್ದಾಗ ನನಗೆ ಬರೆದು ಮುಗಿಸಲು ಸಾಧ್ಯವಾಗಿರಲಿಲ್ಲ. ಆ ಅನುಭವ ಬರೆಯುವಾಗಲೆಲ್ಲ ಅವಳ ಮಾತೇ ನೆನಪಿಗೆ ಬರುತ್ತಲಿತ್ತು. ಬರೆದು ಮುಗಿಸಿ ಅದನ್ನು ಅವಳಿಗೇ ಅರ್ಪಿಸಿದೆ.
  ಅಕ್ಷರಿ ಗರ್ಭಿಣಿಯಾಗಿದ್ದಾಗ ಮನೆಗೆ ಕರೆಸಿ ಆರತಿ ಮಾಡಿಸಿ, ಸೀರೆ ಉಡುಗೊರೆ ಕೊಟ್ಟು ಹರಸಿದ್ದಳು. 

   ಜನವರಿ ೨೦೧೯ರಲ್ಲಿ ಅಕ್ಷರಿಗೆ ಮಗು ಜನಿಸಿದಾಗ ಆಸ್ಪತ್ರೆಗೂ ಬಂದು ನೋಡಿ ಹೋಗಿದ್ದಳು.  ಆಗಸ್ಟಿನಲ್ಲಿ ಮಗುವಿನ ನಾಮಕರಣಕ್ಕೂ ಬಂದು ಆಶೀರ್ವದಿಸಿದ್ದಳು.





    ಮಿದುಳಾಘಾತವಾದನಂತರ ಅತ್ತಿಗೆಗೆ ಬದುಕುವ ಆಸೆ ಕ್ಷೀಣಿಸಿತ್ತು. ದೊಡ್ಡಣ್ಣನಿಗೆ ಎಲ್ಲ ಕೆಲಸ ಅಡುಗೆ ಇತ್ಯಾದಿ (ಅವನಿಗೆ ಚಹಾ ಮಾಡಲಷ್ಟೇ ಬರುತ್ತಿದ್ದದ್ದು,) ಮಾಡಲು ಸರಿಯಾಗಿ ಕಲಿತ ಮೇಲೇ ಅವನು ಇನ್ನು ಒಬ್ಬನೇ ಜೀವಿಸಲು ತೊಂದರೆ ಇಲ್ಲ ಎನಿಸಿದಮೇಲೆ ಅತ್ತಿಗೆ ಇಹಬಂಧನವನ್ನು ದಿನೇ ದಿನೇ ಕಳಚಿಕೊಳ್ಳುತ್ತಲೇ ಮನಸ್ಸು ಮಾಡುತ್ತಿದ್ದಿರಬೇಕು ಎಂದು ಈಗ ಯೋಚಿಸುವಾಗ ಹಾಗೆ ಅನಿಸುತ್ತದೆ.  ಅತ್ತಿಗೆ ಎದ್ದು ಓಡಾಡಿ ಅಡುಗೆ ಮಾಡಿ ನಿತ್ಯದ ಕೆಲಸ ಮಾಡಿದ್ದರೆ ಆಗುತ್ತಿತ್ತು ಎಂದು ನಾವು ಭಾವಿಸಿದ್ದೆವು. ಆದರೆ ಅತ್ತಿಗೆಯ ಮನದಲ್ಲಿ ಏನಿತ್ತೊ? ಅವಳೆದ್ದರೆ ದೊಡ್ಡಣ್ಣ ಯಾವ ಕೆಲಸವೂ ಮಾಡುವುದಿಲ್ಲ. ಅವಳು ಕುಳಿತು, ಮಲಗಿದಲ್ಲೆ, ಅಡುಗೆ ಕೆಲಸ, ಅವನ ಕೆಲಸವನ್ನು ಅವನೇ ಮಾಡುವಂತೆ ಮಾಡುವಲ್ಲಿ ಸಫಲಳಾಗಿದ್ದಳು. ಇನ್ನು ತಾನಿರದಿದ್ದರೂ ತೊಂದರೆ ಇಲ್ಲ ಎಂದು ಅನಿಸಿರಬಹುದು ಎಂಬುದು ನಮ್ಮ ಊಹೆ.
  ಅತ್ತಿಗೆಗೆ ಕ್ರಮೆಣ ಆಸ್ಪತ್ರೆ ವಾಸ ಆಗಾಗ ಆಗುತ್ತಲಿತ್ತು. ಕಿಡ್ನಿಯಲ್ಲಿ ನೀರು ತುಂಬಿತು. ಅದರ ಚಿಕಿತ್ಸೆ ಆಯಿತು. ಅತ್ತಿಗೆ ಹುಷಾರಾಗುತ್ತಾಳೆ, ಎಂದಿನಂತೆ ಓಡಾಡುವಂತೆ ಆಗುತ್ತಾಳೆ ಎಂಬ ಭರವಸೆಯನ್ನು ನಾವು ಕಳೆದುಕೊಳ್ಳಲೇ ಇಲ್ಲ.  ಆದರೆ ೨೦೧೯ ಅಕ್ಟೋಬರ ೯ರಂದು ಬೆಳಗ್ಗೆ ಅತ್ತಿಗೆ ಇನ್ನಿಲ್ಲ(೧೯೬೨-೨೦೧೯)
 ಎಂಬ ಸುದ್ದಿ ಬಂದಪ್ಪಳಿಸಿದಾಗ ನಂಬಲು ಸಾಧ್ಯ ಆಗಲೇ ಇಲ್ಲ. 
   ೭ನೇ ತಾರೀಕು ನಾವು ಅಕ್ಷರಿ ಮಗು ಸಮೇತ ಹೋಗಿ ಅವಳನ್ನು ಮಾತಾಡಿಸಿಕೊಂಡು ಬಂದಿದ್ದೆವು. ಈಗಲೂ ಅತ್ತಿಗೆ ನಮ್ಮೊಡನೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಬಹಳ ಕಷ್ಟವೇ. ನುಡಿನಮನ ಬರೆಯಬೇಕೆಂದು ಎಷ್ಟೆಲ್ಲ ಪ್ರಯತ್ನಪಟ್ಟಿದ್ದೆ. ಈ ಮೊದಲು ಮನಸ್ಸು ಕೈ ಮುಷ್ಕರ ಹೂಡಿತ್ತು. ಬರೆಯಲು ಇಷ್ಟು ಸಮಯ ಬೇಕಾಯಿತು. ಕಾಲ ಕಾಯುವುದಿಲ್ಲ. ಈಗಾಗಲೇ ಅವಳು ಗತಿಸಿ ೬ ತಿಂಗಳು ಕಳೆಯಿತು.  ಅತ್ತಿಗೆ ಭಾಹ್ಯವಾಗಿ ನಮ್ಮೊಂದಿಗಿಲ್ಲ ಎಂಬುದನ್ನು ಅರಗಿಸಿಕೊಂಡು ಅವಳ ನೆನಪು ಚಿರನೂತನವಾಗಿ ಸದಾ ನಮ್ಮೊಂದಿಗಿರುತ್ತದೆ. ನಮ್ಮ ಅತ್ತಿಗೆಗೊಂದು ಪುಟ್ಟ ನುಡಿನಮನ.
++++++++++++++++
ಈ ಕೆಳಗಿನ ನುಡಿನಮನ ಅಕ್ಷರಿ ಅವಳ ಅತ್ತೆಗೆ ಸಲ್ಲಿಸಿರುವುದು.  

ಅದಿತಿ ಅತ್ತೆಯೊಡನಾಟದ ಸವಿನೆನಪುಗಳು

 ಅತ್ತೆ ಮತ್ತು ನನ್ನ  ನಡುವಿನ ೩೧ ವರ್ಷಗಳ ಒಡನಾಟ, ಸಂಬಂಧ ಎಂದೂ ಮರೆಯಲಾಗದ್ದು. ನನ್ನ ಅಮ್ಮನ ಅಣ್ಣನ ಹೆಂಡತಿ ಅದಿತಿ ಅತ್ತೆ. ಅತ್ತೆ ಮಾವ ಇಬ್ಬರನ್ನೂ ಏಕವಚನದಲ್ಲಿ ಸಂಬೋಧಿಸುವಷ್ಟು ಸಲುಗೆ, ಪ್ರೀತಿ. ಅವರು ಮೊದಲ ಕೆಲವು ವರ್ಷ ನಮ್ಮ ಸರಸ್ವತೀಪುರದ ಮನೆಯ ಬಳಿ ವಾಸವಿದ್ದರು. ನಾನು ಚಿಕ್ಕವಳಿದ್ದಾಗಿನಿಂದಲೂ ಹೇಳುತ್ತಿದ್ದುದೇ ಅತ್ತೆ ಮನೆ ಎಂದು. ನನಗೆ ಒಂದು ವರ್ಷ ಇರಬಹುದು. ಅತ್ತೆ ಮನೆಗೆ ಹೋಗುವುದೆಂದರೆ ಬಹಳ ಇಷ್ಟದ ಪ್ರೀತಿಯ ವಿಷಯ ಆಗಿತ್ತಂತೆ. ಮನೆ ಹತ್ತಿರವಿರುವ ಪಾರ್ಕ್ ಗೆ ಹೋಗಿ ಅಲ್ಲಿಂದ ಅತ್ತೆ ಮನೆಗೆ ಹೋಗಲೇಬೇಕೆಂದು ಹಠ ಹಿಡಿಯುತ್ತಿದ್ದೆನಂತೆ. ಮುಂದೆ ಅವರು ಕುವೆಂಪುನಗರದಲ್ಲಿ ವಾಸ ಮಾಡಿದ ಮೇಲೆ ಕೂಡ ನಾನು ಅವರ ಮನೆಗೆ ಹೋಗುವುದು ತಪ್ಪುತ್ತಿರಲಿಲ್ಲ. ಅವರ ಮನೆಯ ಎದುರು ಇದ್ದ ವಿದ್ಯಾವರ್ಧಕ ಶಾಲೆಗೆ ಸೇರಬೇಕೆಂದು ಹಠ ಮಾಡಿ ಶಾಲೆಗೆ ಸೇರಿದ್ದೆ. ಅತ್ತೆ ಮನೆ ಹತ್ತಿರವೇ ಶಾಲೆ ಇದೆ, ಅಲ್ಲಿಂದಲೇ ಶಾಲೆಗೆ ಹೋಗುವೆ ಎಂದು ಹಠ ಹಿಡಿದಿದ್ದೆನಂತೆ. ಪ್ರತಿ ಶನಿವಾರ ಶಾಲೆ ಮುಗಿಸಿ ಖಾಯಂ ಆಗಿ ಅರ್ಧ ದಿನ ಅತ್ತೆ ಮನೆಗೆ ಧಾಳಿ ಇಡುತ್ತಿದ್ದೆ.ನನಗಾಗಿ ಏನಾದರೊಂದು ನನ್ನ ಇಷ್ಟದ ತಿನಿಸು ಕಾದಿರುತಿತ್ತು. ಒಮ್ಮೊಮ್ಮೆ ಬುತ್ತಿ ತರದೇ ಅತ್ತೆ ಮನೆಯಲ್ಲಿ ಊಟ ಮಾಡುತ್ತಿದ್ದದ್ದೂ ಇತ್ತು.. ಕೆಲವೊಮ್ಮೆ ಮೊದಲೇ ಅತ್ತೆ ಫೋನ್ ಮಾಡಿ ನನ್ನ ಇಷ್ಟದ ಅಡಿಗೆ ಇವತ್ತು ಬುತ್ತಿ ತರಬೇಡ ಇಲ್ಲಿಗೆ ಊಟಕ್ಕೆ ಬಾ ಎಂದು ಕರೆಯುತ್ತಿದ್ದಳು. ನನಗೋ ಮಧ್ಯಾಹ್ನ ಅತ್ತೆ ಮನೆಗೆ ಊಟಕ್ಕೆ ಹೋಗುವುದೆಂದರೆ ಬಹಳ ಹೆಮ್ಮೆಯ ವಿಷಯ. ಏಕೆಂದರೆ ಸ್ನೇಹಿತರ ಬಳಿ ಎಲ್ಲಾ ಅತ್ತೆ ಮನೆಗೆ ಊಟಕ್ಕೆ ಹೋಗಿ ಬರುವೆ ಇವತ್ತು ಬುತ್ತಿ ಊಟ ಇಲ್ಲ ಎಂದು ಹೇಳಿ ಅತ್ತೆಮನೆಯ ಗೇಟ್ ಎದುರು  ನಿಂತು ಇದೇ ನಮ್ಮತ್ತೆ ಮನೆ ಎಂದು ಜಂಬದಿಂದ ಹೇಳುತ್ತಿದ್ದೆ. ಅತ್ತೆ ಮನೆಗೆ ಯಾರಾದರೂ ನೆಂಟರು ಬಂದರೆ  ಅವರೊಡನೆ ನನ್ನ ಠಿಕಾಣಿ ಅತ್ತೆ ಮನೆಯಲ್ಲೇ ಆಗಿರುತಿತ್ತುನನ್ನ ಬಟ್ಟೆಬರೆ, ಶಾಲಾ ಬ್ಯಾಗು ಸಮೇತ ಅಲ್ಲಿ ತಂಗುತ್ತಿದ್ದೆ. ಶಾಲೆ ಹತ್ತಿರ ಮನೆ ಎಂದು ಬಹಳ ಖುಷಿ ನನಗೆ. ಅಲ್ಲಿಂದಲೇ ಶಾಲೆಗೆ ಹೋಗಿ ಮಧ್ಯಾಹ್ನ ಊಟವೂ ಅಲ್ಲಿಯೇ. ಮಜವೋ ಮಜ ನನಗೆ. ಅತ್ತೆಗೆ ನಾನು ಹೇಳುತ್ತಿದ್ದೆನಂತೆ ನಾವಿಬ್ಬರೂ ಮನೆ ಅದಲು ಬದಲು ಮಾಡೋಣ. ಮನೆ ಶಾಲೆ ಹತ್ತಿರ ಇದೆ, ಎಷ್ಟು ಚೆನ್ನಾಗಿರುತ್ತದೆ. ನಿನಗೆ ಸರಸ್ವತೀಪುರದ ಮನೆ ಕೊಡುವೆ, ನಾನು ಮನೆಯಲ್ಲಿ ಇರುವೆ ಎಂದು.
   ಸಂಕ್ರಾಂತಿ ಹಬ್ಬಕ್ಕೆ ಎಳ್ಳುಬೆಲ್ಲ ಕೊಡಲು ಮೊದಲ ಮನೆ ಅತ್ತೆ ಮನೆಯಾಗಿರುತ್ತಿತ್ತು. ಹೊಸ ಬಟ್ಟೆ ಹಾಕಿ ಸೈಕಲ್ ಏರಿ ಅತ್ತೆಮನೆಗೆ ಸವಾರಿ ಹೊರಡುತ್ತಿದ್ದೆ. ಹೆಚ್ಚಾಗಿ ಹಬ್ಬದ ಊಟವೂ ಅಲ್ಲಿಯೇ ಮಾಡುತ್ತಿದ್ದೆ. ಗಣೇಶ ಹಬ್ಬಕ್ಕಂತೂ ತಪ್ಪಿಸುತ್ತಲೇ ಇರಲಿಲ್ಲ. ಬೆಳಗ್ಗೆ ಮನೆಯಲ್ಲಿ ತಿಂಡಿಯಾಗಿ ಅತ್ತೆ ಮನೆಯಲ್ಲಿ ಹಾಜರ್. ಲೆಕ್ಕವಿಲ್ಲದಷ್ಟು ತಿಂಡಿ, ತಿನಿಸುಗಳನ್ನು ಅತ್ತೆ ತನ್ನ ಕೈಯಾರೆ ಮಾಡುತ್ತಿದ್ದಳು. ಹಬ್ಬಕ್ಕೆ ಎರಡು ದಿನ ಇರುವಾಗಲೇ ಅವಳ ತಯಾರಿ ಶುರುವಾಗುತ್ತಿತ್ತು. ಅತ್ತೆ ಮಾಡುತ್ತಿದ್ದ ಕೋಸಂಬರಿ, ಚಿತ್ರಾನ್ನ, ಮೈಸೂರ್ ಪಾಕ್ ನನಗೆ ಅತ್ಯಂತ ಪ್ರಿಯ. ಅತ್ತೆ ಮಾಡುವ ಮೈಸೂರ್ ಪಾಕ್ ಮಾತ್ರ ನಾನು ಇಷ್ಟ ಪಟ್ಟು ತಿನ್ನುತ್ತಿದ್ದುದು. ಬೇರೆ ಮೈಸೂರ್ ಪಾಕ್ ಸೇರುತ್ತಲೇ ಇರಲಿಲ್ಲ. ಬೇರೆ ಕಡೆ ಅಪ್ಪಿತಪ್ಪಿ ತಿಂದರೆ ಇದು ಅತ್ತೆ ಮಾಡಿದಂತೆ ಇಲ್ಲ ಎಂದು ಹೇಳುತ್ತಿದ್ದೆ. ನನ್ನ ಅಮ್ಮನಿಗೂ ಅತ್ತೆ ಮಾಡುವ ಮೈಸೂರ್ ಪಾಕ್ ಇಷ್ಟ. ಅಮ್ಮನಿಗೆ ಇಷ್ಟವಾಗುವ ತುಸು ಕೆಂಪಾದ ತುಂಡುಗಳನ್ನು ಪ್ರತ್ಯೇಕ ತೆಗೆದಿಡುತ್ತಿದ್ದಳು. ಗಡದ್ದಾಗಿ ಅಲ್ಲಿ ಊಟ ಮಾಡಿ ರಾತ್ರಿ ಹೊರಡುವಾಗ ಎಲ್ಲಾ ತಿಂಡಿಗಳನ್ನು ಕಟ್ಟಿಕೊಡಲು ಮರೆಯುತ್ತಿರಲಿಲ್ಲ. ಸಂಜೆ ಮನೆಗೆ ಬಂದವರಿಗೆಲ್ಲಾ ಅರಿಶಿನ ಕುಂಕುಮ ಕೊಡುವುದೆಂದರೆ ನನಗೆ ಬಹಳ ಇಷ್ಟದ ಕೆಲಸ. ಪಂಚಕಜ್ಜಾಯವನ್ನು ನಾನೂ ಮಾವನೂ ಪ್ಯಾಕೆಟ್ ಗಳಲ್ಲಿ ತುಂಬಿಡುತ್ತಿದ್ದೆವು. ಅತ್ತೆಗೆ ಸಹಾಯ ಮಾಡುವೆ ಎಂದು ಅವಳ ಹಿಂದೆ ಮುಂದೆ ಸುತ್ತುತ್ತಾ ಇರುತ್ತಿದ್ದೆ
ನನ್ನ ಪ್ರಿಯವಾದ ತಿನಿಸು ಗೋಬಿ ಮಂಚೂರಿಯನ್ನು ಅತ್ತೆ ಬಹಳ ರುಚಿಯಾಗಿ ಮಾಡುತ್ತಿದ್ದಳು. ನೀನು ಗೋಬಿ ಮಂಚೂರಿ ಮಾಡದೆ ತುಂಬಾ ದಿನವಾಯಿತು ಎಂದು ಆಗಾಗ ನೆನಪಿಸುತ್ತಿದ್ದೆ.ಹೆಚ್ಚಾಗಿ ಶನಿವಾರ ಗೋಬಿ ಮಂಚೂರಿ  ಮಾಡುವ ಕಾರ್ಯಕ್ರಮ. ಶಾಲೆಯಿಂದ ನೇರವಾಗಿ ಅತ್ತೆ ಮನೆಗೆ ನನ್ನ ಗಾಡಿ. ಮಧ್ಯಾಹ್ನ ಊಟವಾಗಿ ಸಂಜೆಗೆ ಗೋಬಿ ಮಾಡಲು ತಯಾರಿ ನಡೆಸುತ್ತಿದ್ದಳು. ನಾನು ಸಹಾಯ ಮಾಡುವೆ ಎಂದು ಈರುಳ್ಳಿ ಅರ್ಧ ಹೆಚ್ಚಿ ಕಣ್ಣಲ್ಲಿ ಮೂಗಲ್ಲಿ ನೀರು ಸುರಿಸುವುದನ್ನು ನೋಡಿ ನನ್ನ ಕಷ್ಟ ನೋಡಲಾರದೆ ನನ್ನ ಹೊರಗೆ ಕಳಿಸುತ್ತಿದ್ದಳು., ಕಾರ್ ಶೆಡ್ಡ್ ನಲ್ಲಿ ನಾವು ಗೋಬಿ ಮಂಚೂರಿ ಅಂಗಡಿ ತೆರೆಯುವ ಎಂದು. ಮಾವ ಯಾವತ್ತೂ ಹಾಸ್ಯ ಮಾಡುತ್ತಿದ್ದನು.  ಮಾವ ನನಗೆ ಏನೇ ವಿಷಯ ಹೇಳಿದರು ನಾನು ನಂಬುತ್ತಲೇ ಇರಲಿಲ್ಲ. ಪ್ರತೀ ಬಾರಿಯೂ ಹೌದಾ ಅತ್ತೆ ಎಂದು ಕೇಳಿ ಅತ್ತೆ ಹೌದು ಎಂದರೆ ಮಾತ್ರ ನಂಬುತ್ತಿದ್ದೆ. ನಿನಗೆ ನನ್ನ ಮಾತಲ್ಲಿ ನಂಬಿಕೆಯೇ ಇಲ್ಲ, ಪ್ರತೀಬಾರಿ ಅತ್ತೆಯನ್ನೇ ಕೇಳುತ್ತೀಯ ಎಂದು. ಮಾವ ಹೇಳುತ್ತಲಿದ್ದ. ನಮಗಿಬ್ಬರಿಗೂ ಮಾವ  ನ್ಯಾಯಾಲಯದಲ್ಲಿ ಹೇಗೆ ವಾದ ಮಾಡುತ್ತಾನೆ ಎಂದು ನೋಡುವ ಕುತೂಹಲ ಇತ್ತು. ನಮ್ಮನ್ನು ಕರೆದುಕೊಂಡು ಹೋಗು ಎಂದರೆ ಮಾವ ನಿಮ್ಮಿಬ್ಬರನ್ನು ನೋಡಿದರೆ ನನಗೆ ವಾದ ಮಾಡಲು ಆಗುವುದಿಲ್ಲ, ನೀನು ಇನ್ನು ಅಲ್ಲಿಯೇ ಹೌದಾ ಅತ್ತೆ ಎಂದು ಕೇಳಿಬಿಟ್ಟರೆ ಎನ್ನುತ್ತಿದ್ದ. ನಾವು ಬುರ್ಖ ಹಾಕಿ ಹೋಗುವ ಎಂದು ನಾನು ಅತ್ತೆಯೂ ಪ್ಲಾನ್ ಮಾಡಿದ್ದೆವು. ಮಾವ ಬೇರೆ ಊರಿಗೆ ಹೋಗುವ ಸಂದರ್ಭ ಬಂದರೆ ನಾನು ಅತ್ತೆ ಮನೆಯಲ್ಲಿ ಇರುತ್ತಿದ್ದೆ. ಸಂಜೆ ಪೇಟೆ ತಿರುಗಿ, ಹೋಟೇಲ್ ಗೆ ಹೋಗಿ ಬಂದು ರಾತ್ರಿ ಸುಮಾರು ಹೊತ್ತು ನಮ್ಮ ಪಟ್ಟಾಂಗ. ಅತ್ತೆ ಆಪ್ತ ಗೆಳತಿಯಂತೆ ಇದ್ದಳು. ನಾವು ಮಾತನಾಡದ ವಿಷಯಗಳಿರಲಿಲ್ಲ. ನನ್ನ ಶಾಲಾ ಕಾಲೇಜು ಸುದ್ದಿ, ಸ್ನೇಹಿತರ ಸುದ್ದಿ, ಮಾತಾ ಅಮೃತಾನಂದಮಯಿ ಅಮ್ಮನ ಕಥೆಗಳು, ಆಧ್ಯಾತ್ಮಿಕ ವಿಚಾರಗಳು ಹೀಗೆ ಲೆಕ್ಕವಿಲ್ಲದಷ್ಟು ವಿಚಾರ ವಿನಿಮಯ ಮಾಡುತ್ತಿದ್ದೆವು. ನಾವು ಫೋನ್ ನಲ್ಲಿ ಮಾತನಾಡಲು ಶುರು ಮಾಡಿದರೆ ಒಂದರಿಂದ ಎರಡು ಗಂಟೆವರೆಗೆ ಸಾಗುತ್ತಿತ್ತು.ಮನೆಗೆ ಹೋದಾಗ ಮನೆಯಲ್ಲಿ ಮಾತುಕತೆಯಾಗಿ ಗೇಟ್ ಬಳಿ ಇನ್ನೊಂದಷ್ಟು ಹೊತ್ತು ಸಾಗುತ್ತಿತ್ತುಅಮೃತಾನಂದಮಯಿ ಅಮ್ಮನ ಬಗ್ಗೆ ಅನೇಕ ವಿಷಯಗಳನ್ನು ಹೇಳಿ ಅವರ ಬಗ್ಗೆ ಅರಿವು ಮೂಡಿಸಿದವಳು ಅತ್ತೆ. ಅತ್ತೆ ಮಾವನ ಜೊತೆ ವಳ್ಳಿಕಾವ್ ಗೂ ಹೋಗಿದ್ದೆ. ನನ್ನ ತಲೆಗೆ ಸ್ವಲ್ಪವಾದರೂ ದೇವರು, ಹಬ್ಬ ಹರಿದಿನಗಳ ಬಗ್ಗೆ, ಆಧ್ಯಾತ್ಮಿಕತೆಯ ಬಗ್ಗೆ ಜ್ಣಾನ ತುಂಬಿಸಿದವರು ನನ್ನ ಅಜ್ಜಿ ಮತ್ತು ನನ್ನ ಅತ್ತೆ. ಮೈಸೂರಿಗೆ ಅಮ್ಮ ಬಂದ ಸಂದರ್ಭದಲ್ಲಿ ಅತ್ತೆಯೊಡನೆ ನಾನು ಆಶ್ರಮಕ್ಕೆ ಹೋಗುತ್ತಿದ್ದೆ. ಅತ್ತೆ ಭಕ್ತಿಯಿಂದ ಕಣ್ಣುಗಳನ್ನು ಮುಚ್ಚಿ ತಲ್ಲಿನಳಾಗಿ ಹಾಡುತ್ತಿದ್ದ ಅಮ್ಮನ ಭಜನೆಗಳು ನೆನಪಾಗುತ್ತವೆ. ಅತ್ತೆ ಪ್ರತಿದಿನ ದೇವರ ಮನೆಯಲ್ಲಿ ಕುಳಿತು ಪೂಜೆ ಮಾಡುತ್ತಿದ್ದುದು ಕಣ್ಣಿಗೆ ಕಟ್ಟುತ್ತದೆ. ಪ್ರತಿದಿನ ನಿರರ್ಗಳವಾಗಿ ಪುಸ್ತಕ ನೋಡದೆಯೇ ಲಲಿತಾಸಹಸ್ರನಾಮ ಹೇಳುತ್ತಿದ್ದಳು. ಒಮ್ಮೆ ಪೂಜೆಗೆ ಕುಳಿತರೆ ಮುಗಿವಲ್ಲಿವರೆಗೂ ಏಳುತ್ತಿರಲಿಲ್ಲ. ಪ್ರತಿ ಶುಕ್ರವಾರ ಸಂಜೆ ವಿಶೇಷ ಪೂಜೆ ಮಾಡುತ್ತಿದ್ದಳು. ನೈವೇದ್ಯಕಾಗಿ ಏನಾದರೊಂದು ಸಿಹಿ ಇದ್ದೇ ಇರುತ್ತಿತ್ತು. ಅದನ್ನು ಶನಿವಾರ ನನಗಾಗಿ ತೆಗೆದಿಡುತ್ತಿದ್ದಳು. ನನಗೆ ಲಲಿತಾಸಹಸ್ರನಾಮದ ಪುಸ್ತಕ ಕೊಟ್ಟು ಪ್ರತಿ ದಿನ ಓದು ನೆನಪಿನ ಶಕ್ತಿಗೆ, ವಿದ್ಯಾಭ್ಯಾಸಕ್ಕೆ ಎಲ್ಲ ಸಹಾಯವಾಗುತ್ತದೆ ಎಂದಿದ್ದಳು. ನನ್ನ ಬಾಯಿ ಸ್ವಲ್ಪಮಟ್ಟಿಗಾದರೂ ಲಲಿತಾಸಹಸ್ರನಾಮ ಓದಲು ತೊಳಚಲು ಕಾರಣ ಅತ್ತೆ
 .

ಅತ್ತೆ ಮತ್ತು ನಾನು ಹೋಗದ ವಸ್ತುಪ್ರದರ್ಶನಗಳಿರಲಿಲ್ಲ. ದಸರಾ ವಸ್ತುಪ್ರದರ್ಶನಕ್ಕಂತೂ ಕನಿಷ್ಠ ಎರಡು ಸಲವಾದರೂ ಇರುತ್ತಿತ್ತು. ಮಾವ ಮತ್ತು ನನ್ನಮ್ಮ ಬಂದರೆ ಅವರು ಮುಂದೆ ಮುಂದೆ ಇರುತ್ತಿದ್ದರು. ನಾವಿಬ್ಬರು ಬಳೆ, ಸರ, ಕ್ಲಿಪ್ಪು, ಬ್ಯಾಗು, ಬಟ್ಟೆ ಎಂದು ಅಂಗಡಿಗಳಲ್ಲಿ ಕಳೆದುಹೋಗುತ್ತಿದ್ದೆವು. ಎಷ್ಟು ಬೇಡವೆಂದು ಹೇಳಿದರೂ ಕೇಳದೆ ಇದು ಹೊಸ ನಮೂನೆಯದು ನಿನ್ನ ಬಳಿ ಇಲ್ಲ ಇದನ್ನು ನಿನಗೆ ತೆಗೆಯೋಣ ಎಂದು ಹೇಳಿತ್ತಿದ್ದಳು. ನನಗೆ ಎಷ್ಟು ತೆಗೆದು ಕೊಟ್ಟರೂ ತೃಪ್ತಿಯಿರುತ್ತಿರಲಿಲ್ಲ. ಅಂತಹ ಪ್ರೀತಿ. ಅತ್ತೆ ನನ್ನ ಶಾಲಾಕಾಲೇಜಿನಲ್ಲಿ ನನ್ನ ಮಿತ್ರರಿಗೂ ಪರಿಚಿತಳಾಗಿದ್ದಳು.ನಿಮ್ಮತ್ತೆ ಆಯ್ಕೆ ಬಹಳ ಚೆನ್ನಾಗಿರುತ್ತದೆ ಎಂದು ಸದಾ ಹೇಳುತ್ತಿದ್ದರು. ವಿಷಯವಾಗಿ ಎರಡು ಮಾತಿಲ್ಲ. ಅವಳ ಆಯ್ಕೆಯ ಬಟ್ಟೆ ಬರೆ ಬಹಳ ವಿಶಿಷ್ಟವಾಗಿ ಚೆನ್ನಾಗಿರುತ್ತಿತ್ತು. ಯಾರಿಗೇ ಆದರೂ ಏನೇ ವಸ್ತು ಅಥವಾ ಬಟ್ಟೆ ಉಡುಗೊರೆ ಕೊಡುವಾಗ ಅವರವರ ಇಷ್ಟಕ್ಕೆ ಅನುಗುಣವಾಗಿರುತ್ತಿತ್ತು. ಅತ್ತೆ ಉಡುತ್ತಿದ್ದ ಸೀರೆಗಳೂ ಹಾಗೆಯೇ ತುಂಬಾ ಚೆನ್ನಾಗಿ ವಿಭಿನ್ನವಾಗಿರುತ್ತಿದ್ದುವು. ನನ್ನ ಮತ್ತು ಅತ್ತೆಯ ಪ್ರೀತಿಯ ಬಣ್ಣ ಪಿಂಕ್. ಅತ್ತೆ ಪಿಂಕ್ ಸೀರೆ ಉಟ್ಟಾಗಲೆಲ್ಲ ನಾನು ಸೀರೆ ಎಷ್ಟು ಚೆನ್ನಾಗಿದೆ, ನನಗೂ ಒಮ್ಮೆ ಉಡಲು ಕೊಡು ಎಂದು ನಾಚಿಕೆ ಬಿಟ್ಟು ಕೇಳುತ್ತಿದ್ದೆ. ಕಾಲೇಜಿನ ಸಮಾರಂಭಕ್ಕೆ ಇಂತದ್ದೇ ಬಣ್ಣದ ಸೀರೆ ಉಡಬೇಕು ಎಂದು ಹೇಳಿದ ಸಂದರ್ಭದಲ್ಲಿ ಅತ್ತೆಯ ಸೀರೆ ಎರವಲು ಪಡೆದು ಉಟ್ಟಿದ್ದೆ. ಬಟ್ಟೆ ಆರಿಸಲು ಅಂಗಡಿಗೆ ಹೋದರೆ ನನ್ನ ಕಣ್ಣು ಪಿಂಕ್ ಮೇಲೆ. ಸುಮಾರು ಪಿಂಕ್ ಇದೆ ನಿನ್ನ ಬಳಿ ಬೇರೆ ಆರಿಸು ಎಂದು ಅತ್ತೆ ಹೇಳಿ ಕೊನೆಗೆ ಇಬ್ಬರಿಗೂ ಎಲ್ಲಕ್ಕಿಂತ ಪಿಂಕ್ ಹೆಚ್ಚು ಚಂದ ಮತ್ತು ನನ್ನ ಬಳಿ ಇಲ್ಲದ ಬೇರೆ ಶೇಡ್ ಪಿಂಕ್ ಎಂದು ಅದನ್ನೇ ತೆಗೆಯುತ್ತಿದ್ದುದು. ನನ್ನ ಮದುವೆಯಲ್ಲಿ ಅತ್ತೆ ಮಾವ ಕೊಟ್ಟ ಪಿಂಕ್ ಸೀರೆ ಯಾವತ್ತಿಗೂ ನನ್ನ ಅಚ್ಚುಮೆಚ್ಚಾದ ಸೀರೆ. ಸೀರೆಯನ್ನು ನನಗಾಗಿ ಆರಿಸಲು ಅತ್ತೆ ಗಂಟೆಗಟ್ಲೆ ಸುಮಾರು ಮಳಿಗೆಗಳಲ್ಲಿ ಹುಡುಕಿದ್ದಳು ಮತ್ತು ಎಲ್ಲಾ ಪಿಂಕ್ ಸೀರೆಗಳನ್ನು ನೋಡಿದ್ದಳು ಎಂದು ಮಾವ ತಮಾಷೆ ಮಾಡಿದ್ದ





ಅತ್ತೆ ಮಾವನ ಜೊತೆ ಸುಮಾರು ಕಡೆ ಪ್ರವಾಸ ಹೋಗಿದ್ದೆ. ಅದರಲ್ಲಿ ಗುರುವಾಯೂರಿಗೆ ಹೋದದ್ದು ಮರೆಯಲಾಗದ್ದು. ಚೂಡಿದಾರ್ ಹಾಕಿ ದೇವಾಸ್ಥಾನಕ್ಕೆ ಪ್ರವೇಶವಿಲ್ಲ ಎಂದು ಫಲಕ ಹಾಕಿದ್ದರು. ಹಾಗೆ ನನಗೆ ಅತ್ತೆ ಅಲ್ಲಿಯೇ ಒಂದು ಸೀರೆ ತೆಗೆದು ಚೂಡಿದಾರ್ ಮೇಲೆ ಉಡಿಸಿದ್ದಳು. ಅತ್ತೆ ಮಾವ ಎಲ್ಲಿಯೇ ಪ್ರವಾಸ ಹೋದರೂ ಅತ್ತೆ ನನಗಾಗಿ  ಏನಾದರೊಂದು ಉಡುಗೊರೆ ತರದೆ ಇರುತ್ತಿರಲಿಲ್ಲ.ಈಗ ಉಡುಗೊರೆಗಳನ್ನು ನೋಡಿದಾಗ ಅವಳ ನೆನಪು ಇನ್ನಷ್ಟು ಕಾಡುತ್ತದೆ

ಒಮ್ಮೆ ನನ್ನ ಹುಟಿದ ಹಬ್ಬಕ್ಕೆ ಐಸ್ಕ್ರೀಮ್ ತಿನ್ನಿಸಿದ ಹಾಗೆ ಕನಸು ಬಿದ್ದಿತ್ತಂತೆ. ಹಾಗೆ ಮಾರನೆಯ ದಿನ ನನ್ನ ಹುಟ್ಟಿದ ಹಬ್ಬಕ್ಕೆ ಐಸ್ಕ್ರೀಮ್ ತಯಾರಾಗಿತ್ತು. ಮಾವ ತಮಾಷೆ ಮಾಡಿದ್ದ ದಿನಾಗಲೂ ನೀನು ಅತ್ತೆ ಕನಸಲ್ಲಿ ಬಂದು ತಿಂಡಿ ಸ್ವೀಟು ಮಾಡಿಕೊಡತ್ತೆ ಎಂದು ಹೇಳು ಆಗ ನಮಗೆ ತಿಂಡಿಗಳೋ ತಿಂಡಿಗಳು ಎಂದು! ನಾನು ಗರ್ಭಿಣಿಯಾಗಿದ್ದಾಗ ನನ್ನ ನೋಡಲು ತನ್ನ ಅನಾರೋಗ್ಯದ ನಡುವೆ ನಮ್ಮ ಮನೆಗೆ ಬಂದಿದ್ದಳು, ಮತ್ತು ಹೆತ್ತದಿನವೂ ಆಸ್ಪತ್ರೆಗೆ ಬಂದುದು ಮರೆಯಲಾಗದ್ದು. ನಮ್ಮ ಮಗನ ನಾಮಕರಣಕ್ಕೆ ಬರಲೇಬೇಕೆಂದು ಹಠ ಹಿಡಿದಿದ್ದೆ. ಅದಕ್ಕೂ ಅತ್ಯಂತ ಪ್ರೀತಿಯಿಂದ ಬಂದಿದ್ದಳು. ಇತ್ತೀಚೆಗೆ ಅವಳನ್ನು ನೋಡಲು ಮನೆಗೆ ಹೋದಾಗ ಅನಾರೋಗ್ಯದ ಕಾರಣ ತಿನ್ನಲು ಕುಡಿಯಲು ಏನಾದರೂ ಕೊಡಲಾಗುವುದಿಲ್ಲವಲ್ಲ ಎಂದು ಬೇಸರಿಸಿದ್ದಳು. ನಾನು ಗರ್ಭಿಣಿಯಾಗಿದ್ದಾಗ ಮಾವನನ್ನು ಅಂಗಡಿಗೆ ಕಳಿಸಿ ಪಿಂಕ್ ಸೀರೆಯನ್ನೇ ತರಬೇಕೆಂದು ಹೇಳಿ ತರಿಸಿ ಅದನ್ನು ಉಡುಗೊರೆ ನೀಡಿದ್ದಳು.ಅವಳ ಪೀತಿಯನ್ನು ಏನೆಂದು ಬಣ್ಣಿಸಲಿ.ಅವಳು ತೋರಿಸುತ್ತಿದ್ದ ಪ್ರೀತಿ, ಕಾಳಜಿಯನ್ನು ವಿವರಿಸಲು ಪದಗಳ ಕೊರತೆ.ಇನ್ನು ಅವಳು ನೆನಪು ಮಾತ್ರ ಎಂದು ಮನಸ್ಸಿಗೆ ಬಹಳ ಕಷ್ಟವಾಗುತ್ತದೆ. ಹೃದಯ ಭಾರವಾಗುತ್ತದೆ. ಅವಳು ಇನ್ನಿಲ್ಲ ಎಂದು ಜೀರ್ಣಿಸಲು ಬಹಳ ಹಿಂಸೆಯಾಗುತ್ತದೆ. ಸದಾ ನೆನಪಿನಲ್ಲಿ ಉಳಿಯುವ ವ್ಯಕ್ತಿತ್ವ ಅತ್ತೆಯದು. ಕೊಡುಗೈ ದಾನಿಯಾದ ಅತ್ತೆ, ಮಾವನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಬೆನ್ನೆಲುಬಾಗಿದ್ದಳೆಂದರೆ ತಪ್ಪಾಗಲಾರದು. ಅವಳೊಂದಿಗೆ ಕಳೆದ ಕ್ಷಣಗಳು ಚಿತ್ರಪಟದಂತೆ ಹಾದುಹೋಗುತ್ತದೆ. ಅತ್ತೆ ಇನ್ನಿಲ್ಲ ಎಂಬುದು ಕೇವಲ ಕನಸೇನೋ  ಎಂದು ಕೆಲವೊಮ್ಮೆ ಅನಿಸುತ್ತದೆ. ಅತ್ತೆ ನಮ್ಮನ್ನು ಬಿಟ್ಟು ನೀನು ಬಹು ಬೇಗ ಯಾಕೆ ಹೋದೆ ಎಂದು ಕೇಳುವ ಮನಸ್ಸಾಗುತ್ತದೆ. ಇನ್ನೊಂದಷ್ಟು ವರ್ಷ ಇರಬಹುದಿತ್ತಲ್ಲವೇ. ಆಗ ನಾವು ಮೊದಲಿನಂತೆ ಪಟ್ಟಾಂಗ ಹೊಡೆದು, ವಸ್ತುಪ್ರದರ್ಶನ ಸುತ್ತಿ ಬರೋಣ ಎಂದು ಹೇಳುವ ಮನಸ್ಸಾಗುತ್ತದೆ. ನನ್ನ ಪ್ರೀತಿಯ ಅತ್ತೆಗೆ ನನ್ನ ಮನಃಪೂರ್ವಕ ಶ್ರದ್ಧಾಂಜಲಿ.






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ