ಭಾನುವಾರ, ಮೇ 24, 2020

ಸುಂದರೀಮಣಿ ಎಂಬ ಬೆರಗು

 ಸುಂದರೀಮಣಿ ಹೆಸರಿಗೆ ತಕ್ಕಂತೆ ಸುಂದರ ವರ್ಚಸ್ಸುಳ್ಳ ಮಹಿಳೆ. ನಮ್ಮ ಅತ್ತೆಯ ಸ್ನೇಹಿತರು.  ಗಾನಭಾರತಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಜಿ.ಲಕ್ಷ್ಮೀನರಸಿಂಹಯ್ಯನವರ ಪತ್ನಿ. ನಮ್ಮ ಮಾವ ಜಿ.ಟಿ. ನಾರಾಯಣರಾಯರಿಗೆ ಅಯ್ಯ ಅತ್ಯಂತ ಆಪ್ತ ಸ್ನೇಹಿತರು. ಹಾಗೆ ಅವರ ಬಾಂಧವ್ಯ ನಮಗೆ ಲಭಿಸಿತು.
  ನಮ್ಮ ಅತ್ತೆ ಸಂಗೀತ ಕಾರ್ಯಕ್ರಮಗಳಿಗೆ ಹೋಗುವುದು (ಅನಾರೋಗ್ಯದ ತೊಂದರೆಯಿಂದ) ಬಿಟ್ಟ ಮೇಲೆ ಒಮ್ಮೊಮ್ಮೆ ಸುಂದರೀಮಣಿ ಅವರು ಮನೆಗೆ ಬಂದು ಅತ್ತೆಯೊಡನೆ ಪಟ್ಟಾಂಗ ನಡೆಸುವುದಿತ್ತು. ಬರುವಾಗ  ಡೈರಿ ಮಿಲ್ಕ್  ಪರ್ಕ್ ಚಾಕಲೆಟ್ ತಪ್ಪದೆ ತರುತ್ತಿದ್ದರು. ನಮ್ಮತ್ತೆಗೆ ಬಲು ಖುಷಿ ಆಗುತ್ತಿತ್ತು. ಅವರು ಹೆಚ್ಚಾಗಿ ಬೆಳಗಿನ ೧೧ ಗಂಟೆಯ ಸಮಯದಲ್ಲಿ ಬರುತ್ತಿದ್ದರು. ಅತ್ತೆಯೂ ಅವರೂ ಮಾತಿಗೆ ಕುಳಿತಾಗ ಇತ್ತ ನಾನು ಅಡುಗೆ ಮನೆಯಿಂದಲೇ ಅವರ ಮಾತಿಗೆ ಕಿವಿ ನಿಮಿರಿಸುತ್ತಿದ್ದೆ. ಬೇಗ ಬೇಗ ಅಡುಗೆ ಕೆಲಸ ಮುಗಿಸಿ ಅವರೆದುರು ಕುಳಿತು ಬಿಡುತ್ತಿದ್ದೆ. ಅವರ ಮಾತು ಅಷ್ಟು ಸ್ವಾರಸ್ಯವಾಗಿರುತ್ತಿತ್ತು. ಕಂಚಿನಕಂಠ ಎಂದರೆ ಹೇಗಿರುತ್ತೆ ಎಂದು ಅವರ ಮಾತಿನಿಂದಲೆ ನನಗೆ ಗೊತ್ತಾದದ್ದು. ಅವರ ಮಾತಿನಲ್ಲಿ ರಾಜಕೀಯದ ವಿದ್ಯಮಾನ, ಮನೆ ಕೆಲಸದವರ ಹಿರಿತನ, ಸಣ್ಣತನ, ಅಮೇರಿಕಾ ದೇಶದ ಬಗ್ಗೆ, ಅಡುಗೆ ಬಗ್ಗೆ, ಮಕ್ಕಳನ್ನು ಬೆಳೆಸುವ ಬಗ್ಗೆ ಹೀಗೆ ಕೌತುಕ, ವೈವಿಧ್ಯಮಯ, ಕಲಿಯುವಂಥ ವಿಷಯಗಳ ಹರವು ಇರುತ್ತಲಿತ್ತು. ಅವರೊಂದು ಬೆರಗು ನಮಗೆ.
   ಅವರ ಮಗಳು ಪರದೇಶದಲ್ಲಿರುವುದು. ನಾಲ್ಕೈದು ಸಲ ಅವರು ಅಲ್ಲಿಗೆ ಹೋಗಿ ಬಂದಿದ್ದರು. ಬಂದಮೆಲೆ ಅಲ್ಲಿಯ ವಿಷಯ ಕೇಳಲು ಎರಡು ಕಿವಿ ಸಾಲದು. ಅಷ್ಟೂ ಸ್ವಾರಸ್ಯವಾಗಿ ವಿವರಿಸುತ್ತಿದ್ದರು. ಇನ್ನು ಅಲ್ಲಿಗೆ ಹೋಗಲ್ಲ. ನಮಗೆ ನಮ್ಮ ಮೈಸೂರೇ ಚೆನ್ನ. ನೋಡಿ ಲಕ್ಷ್ಮೀ, ಈಗ ನನಗೆ ನಿಮ್ಮೊಡನೆ ಮಾತಾಡಬೇಕೆನಿಸಿತು. ಸೀದಾ ಬಂದೆ ಇಲ್ಲಿಗೆ. ಆದರೆ ಅಲ್ಲಾಗಿದ್ದರೆ, ಈಗ ಬರಬಹುದೆ? ಎಷ್ಟು ಗಂಟೆಗೆ ಬಂದರೆ ಆದೀತು? ಇತ್ಯಾದಿ ಕೇಳಿಕೊಂಡು ಹೋಗಬೇಕು. ಮತ್ತೆ ಆತ್ಮೀಯತೆ ನಿರೀಕ್ಷಿಸುವಂತೆಯೇ ಇಲ್ಲ. ಯಂತ್ರದ ಹಾಗೆ ಇರಬೇಕು. ಅಯ್ಯೋ ವಿಮಾನ ನಿಲ್ದಾಣಗಳಲ್ಲಿ ಪಡುವ ಪಾಡು ಯಾರಿಗೂ ಬೇಡ. ಮುಂಡೇವು ಕರಿಮಣಿ ಸರವನ್ನೂ ತೆಗೆಯಲು ಹೇಳುತ್ತವೆ. ಯಾರಿಗೆ ಬೇಕು ಅಲ್ಲಿಗೆ ಹೋಗುವ ಚಂದ?
   ಸರ್ಕಾರದ ಬಾಣಂತಿ ಭಾಗ್ಯದ ಬಗ್ಗೆ ಮಾತು ಬಂತು. ಈಗಿನವರಿಗೆ ಮಕ್ಕಳನ್ನು ಬೆಳೆಸಲೇ ಬರುವುದಿಲ್ಲ. ನಮ್ಮ ಕಾಲದಲ್ಲಿ ೮-೧೦ ಮಕ್ಕಳನ್ನು ಬೆಳೆಸುತ್ತಿದ್ದರಲ್ಲ, ಅವಕ್ಕೆಲ್ಲ ಊಟ ಮಾಡಿಸುತ್ತಿದ್ದರಲ್ಲ. ಸುಮ್ಮನೆ ಉಂಡು ಹೋಗಿ ಮಲಗುತ್ತಿದ್ದುವು. ಈಗಿನವು ಹೊರಗೆ ಒಳಗೆ ಓಡಾಡುತ್ತ, ಟಿವಿ ತೋರಿಸುತ್ತ, ಗಂಟೆಗಟ್ಟಲೆ ಊಟ ಮಾಡಿಸುತ್ತಾರೆ. ಒಂದೆರಡು ದಿನ ನಮ್ಮಲ್ಲಿ ಬಿಡಲಿ. ಸರಿಯಾಗಿ ಕಲಿಸುತ್ತೇನೆ. ಒಂದಿನ ಊಟ ಕೊಡದೆ ಕೂರಿಸಬೇಕು. ಆಗ ತನ್ನಿಂದ ತಾನೆ ಹಸಿವಾಗಿ ಊಟ ಮಾಡುತ್ತವೆ ಎನ್ನುತ್ತಿದ್ದರು. ನಾವು ಅವರ ಮಾತಿಗೆ ತಲೆದೂಗುತ್ತಿದ್ದೆವು.  ಹೀಗೆ ಮಾತು ಸಾಗುತ್ತಿದ್ದಾಗಲೇ ಕುಂಕುಮ ಕೊಡಮ್ಮ, ಹೊತ್ತಾಯಿತು. ಹೊರಟೆ ಎಂದಾಗ ಅಯ್ಯೋ ಇಷ್ಟು ಬೇಗ ಮುಗಿಯಿತೆ ಎಂಬ ನಿರಾಸೆ ನನಗಾಗುತ್ತಲಿತ್ತು.
ನಮ್ಮ ಮಗಳು ಅಕ್ಷರಿಯ ಮಗುವಿನ ನಾಮಕರಣಕ್ಕೆ ಅವರಿಗೆ ಬರಲಾಗಿರಲಿಲ್ಲ. ಮತ್ತೊಂದು ದಿನ ದಂಪತಿ ಸಮೇತ ಅವರ ಫಿಯೆಟ್ ಕಾರಿನಲ್ಲಿ ಮನೆಗೆ ಬಂದು ಮಗುವನ್ನು ಹರಸಿ ಹೋಗಿದ್ದರು. ಮಗಳಿಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದರು. ನೀನು ಅಡುಗೆ ಮಾಡುವ ಸಮಯದಲ್ಲಿ ಮಗುವಿಗೆ ಒಂದು ತಟ್ಟೆಯಲ್ಲಿ ಪುರಿ ಹಾಕಿ ಕೊಡು. ಅವನು ಅದನ್ನು ನೆಲಕ್ಕೆ ಚೆಲ್ಲಿ ಒಂದೊಂದೆ ಹೆಕ್ಕಿ ತಿನ್ನುವಾಗ ನಿನ್ನ ಕೆಲಸ ಮುಗಿಯುತ್ತದೆ. ಮಗುವಿಗೆ ಸಂಗೀತ ಹಾಕು. ಕೇಳಿ ಖುಷಿ ಪಡುತ್ತವೆ ಎಂದಿದ್ದರು. ಮಗಳು ಅವರ ಈ ಸಲಹೆಯನ್ನು ಚಾಚೂ ತಪ್ಪದೆ ಅನುಸರಿಸಿ ಗೆದ್ದಿದ್ದಳು.


 ಅಯ್ಯ ಬಳಸುತ್ತಿರುವ ಫಿಯೆಟ್ ಕಾರಿಗೆ ಸುಮಾರು ೪೦ ವರ್ಷ ಆಗಿರಬಹುದು. ಈಗಲೂ ಸುಸ್ಥಿತಿಯಲ್ಲಿದೆ. ಅವರ ಕಾರು ಒಬ್ಬ ಮಹನೀಯರಿಗೆ ಬಹಳ ಇಷ್ಟವಾಗಿತ್ತಂತೆ. ಮಾರುವಾಗ ಅವರಿಗೇ ಕೊಡಬೇಕೆಂದು ಹೇಳಿದ್ದಾರಂತೆ.  ಅವರು ಆಗಾಗ ಮನೆಗೆ ಬಂದು ಇವರನ್ನು ಮಾತಾಡಿಸಿಕೊಂಡು ಹೋಗುತ್ತಿರುತ್ತಾರಂತೆ. ಅವರೇನೂ ನಮ್ಮ ಯೋಗಕ್ಷೇಮ ವಿಚಾರಿಸಲು ಬರುವುದಲ್ಲ,  ಕಾರು ಹೇಗಿದೆ? ಇವರು ಇನ್ನೂ ಬದುಕಿದ್ದಾರೋ? ಕಾರು ನನಗೆ ಯಾವಾಗ ಸಿಗುತ್ತದೋ? ಎಂದು ನೋಡಲು ಬರುವುದು ಎಂದು ಸುಂದರೀಮಣಿಯವರು ಹೇಳಿ ನಗುತ್ತಿದ್ದರು.  

  ಅಯ್ಯನವರು ಅಸ್ಸಾಂನಲ್ಲಿ ಕೆಲಸದಲ್ಲಿದ್ದು, ನಿವೃತ್ತಿನಂತರ ಮೈಸೂರಿಗೆ ಬಂದು ನೆಲೆಸಿದವರು.   ಆನಂದಭಾವ ಕೂಡ ಅಸ್ಸಾಂನಲ್ಲಿ ಕೆಲಸದಲ್ಲಿದ್ದರು. ಆಗ ಅಯ್ಯ ದಂಪತಿ ಪರಿಚಯ ಆಗಿತ್ತು. ಆನಂದಭಾವನ ಪತ್ನಿ ಜಯಶ್ರೀಗೆ ಸುಂದರೀಮಣಿಯವರೇ ಹೆಚ್ಚಿನ ಅಡುಗೆ ಕಲಿಸಿದ್ದರಂತೆ. ಅವರ ನಂಟು ಆಗಲೇ ಬೆಳೆದದ್ದು, ಮೈಸೂರಿಗೆ ಬಂದಮೇಲೂ ಮುಂದುವರಿಯಿತು. ಆನಂದ ಭಾವ ಅಲ್ಲಿ ಕೆಲಸ ಬಿಟ್ಟು ಅಮೇರಿಕಾವಾಸಿಯಾದಮೇಲೆ ಮೈಸೂರಿಗೆ ಬಂದಾಗಲೆಲ್ಲ ಜಯಶ್ರೀ ಸಮೇತ ಅವರಲ್ಲಿಗೆ ಭೇಟಿ ಕೊಡದೆ ಹೋಗುತ್ತಿರಲಿಲ್ಲ.  ಜಯಶ್ರೀ ಹೋಗುವಾಗಲೆಲ್ಲ ನಾನು ಕೂಡ ಹೋಗುತ್ತಿದ್ದೆ. ಅವರ ಮಾತು ಕೇಳಲು ಸಿಗುವ ಅವಕಾಶವನ್ನು ನಾನು ತಪ್ಪಿಸುತ್ತಿರಲಿಲ್ಲ. ಏನಮ್ಮ, ನೀನು ಜಯಶ್ರೀ ಬಂದಾಗ ಮಾತ್ರ ಬರ್ತೀಯಲ್ಲ, ಆಗಾಗ ಬರುತ್ತಿರು ಎನ್ನುತ್ತಿದ್ದರು ನನಗೆ. ಹೌದು ಒಮ್ಮೊಮ್ಮೆ ಹೋಗಬೇಕು ಎಂದು ಆಗ ಯೋಚಿಸುತ್ತಿದ್ದೆ. ಮತ್ತೆ ಕಾಲ ಓಡುತ್ತಲೇ ಇರುವುದು ಗೊತ್ತೇ ಆಗುತ್ತಿರಲಿಲ್ಲ. ಹೋಗಲು ಅದೇಕೋ  ಸಂಕೋಚವೋ ನಾನರಿಯೆ. ಮತ್ತೆ ಮರುವರ್ಷ ಜಯಶ್ರೀ ಜೊತೆಯೇ ಅಲ್ಲಿಗೆ ಹೋಗಲಾಗುತ್ತಲಿದ್ದುದು!
  ಇತ್ತೀಚೆಗೆ ನಾನು ಅಕ್ಷರಿ, ಮೊಮ್ಮಗ ಆರುಷನನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದೆವು. ಅವರಿಗೆ ಬಹಳ ಖುಷಿಯಾಗಿತ್ತು. ಅವರೇ ಅವನಿಗೆ ಮಾರಿ ಬಿಸ್ಕತ್ ತಿನ್ನಿಸಲು ಕಲಿಸಿದ್ದು. ಈಗ ಮಾರಿ ಬಿಸ್ಕತ್ ಬಹಳ ಇಷ್ಟ ಅವನಿಗೆ.



 ಸುಂದರೀಮಣಿಯವರು ಆರೋಗ್ಯವಾಗಿಯೇ ಇದ್ದರು. ಇತ್ತೀಚೆಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ರಾತ್ರೆ ಹೊತ್ತು ಕಣ್ಣು ಮಂಜಾಗಿ ಬಿಡುತ್ತಿತ್ತಂತೆ. ಮಗ ಬೆಂಗಳೂರಿಗೆ ಕರೆಯುತ್ತಲೇ ಇದ್ದನಂತೆ. ಅವರಿಗೆ ಮೈಸೂರು ಬಿಡಲು ಮನಸ್ಸೇ ಇರಲಿಲ್ಲ. ಕೈಯಲ್ಲಿ  ಆದಷ್ಟು  ಸಮಯ ಮೈಸೂರಲ್ಲಿರುವುದು. ಮತ್ತೆ ಆಗುವುದಿಲ್ಲವೆಂದಾಗ ಬೆಂಗಳೂರಿಗೆ ಹೋಗುವುದು ಇದ್ದೇ ಇದೆ ಎನ್ನುತ್ತಿದ್ದರು. ಕೆಲಸಕ್ಕೆ ಒಳ್ಳೆಯ ಹೆಂಗಸು ದೊರೆತ ಕಾರಣ ಹೇಗೋ ಸುಧಾರಿಸಿದ್ದರು. ಬೆಂಗಳೂರಿನಲ್ಲಿ ಮಗನ ಮನೆಗೆ ಹೋಗಿದ್ದಾಗ ೨೦೨೦ ಜನವರಿ ೨೪ರಂದು ರಾತ್ರೆ ಬಟ್ಟೆ ಬದಲಿಸಲೆಂದು ಕೋಣೆಗೆ ಹೋದವರು ಎಷ್ಟು ಹೊತ್ತಾದರೂ ಹೊರ ಬರದಿರುವುದು ಕಂಡು ಹೋಗಿ ನೋಡಿದರೆ ಅಲ್ಲೆ ಪ್ರಾಣ ಹೋಗಿತ್ತಂತೆ. ಅವರಿಗೆ ೯೦ ವರ್ಷ ಇರಬಹುದು. ಆ ಸಮಯದಲ್ಲಿ ಮಗಳು ಕೂಡ ಅಲ್ಲೇ ಇದ್ದಳಂತೆ.   ಸುಖ ಮರಣ. ಯಾರಿಗೂ ಹೊರೆಯಾಗದೆ ಕಾಲನ ಕರೆಗೆ ಓಗೊಟ್ಟು ಅಯ್ಯನವರನ್ನು ಒಂಟಿಯಾಗಿಸಿ ಎದ್ದು ನಡೆದೇ ಬಿಟ್ಟಿದ್ದರು. ಅಲ್ಲೀಗ ನಮ್ಮ ಅತ್ತೆ ಜೊತೆ ನಿತ್ಯ ಪಟ್ಟಾಂಗದಲ್ಲಿರಬಹುದು. ಅವರ ಕಂಚಿನ ಕಂಠ ಆಗಾಗ ಮೊಳಗುವುದು ಕೇಳುತ್ತಲೇ ಇರುತ್ತದೆ. ಅವರು ನಮ್ಮ ಮನದಲ್ಲಿ ಸದಾ ವಿಸ್ಮಯವಾಗಿಯೇ ಇರುತ್ತಾರೆ. ಅವರಿಗಿದೋ ನಮ್ಮ ಎರಡಕ್ಷರದ ನುಡಿನಮನ.
*****************
ಇದಕ್ಕೆ ಉತ್ತರವಾಗಿ ಆನಂದಭಾವ ಬರೆದದ್ದು

5 ಕಾಮೆಂಟ್‌ಗಳು:

  1. ಬಾರಿ ಲಾಯಕಿತ್ತು. ಈ FB ಕಾಮೇಂಟು ಹಾಕಲು ಬಿಡ್ತಿಲ್ಲೆ. ಆದಕ್ಕೆ ಪೊಸ್ಟಿಂಗ್ ಮಾಡಿದೆ. ಲೇಕನ ಬಾರಿ ಲಾಯಕಿದ್ದು. ಆನೊಂದ ಭಾವ

    ಪ್ರತ್ಯುತ್ತರಅಳಿಸಿ
  2. Thank you, what a wonderful write up on my dodamma, sundri aunty and ayya uncle. Her sisters and we all miss her a lot😢

    ಪ್ರತ್ಯುತ್ತರಅಳಿಸಿ
  3. Thank you so much for the writeup.
    Sundari atthe was such a talented and dynamic lady. She has been an inspiration to all of us. Miss her a lot.

    ಪ್ರತ್ಯುತ್ತರಅಳಿಸಿ