ಶುಕ್ರವಾರ, ಜೂನ್ 26, 2020

ಬದಲಾಗಿದ್ದ ಜಿ.ಟಿ.ಎನ್


   ಇಂದಿಗೆ (೨೭-೬-೨೦೨೦) ಮಾವ ಇಹಲೋಕ ತ್ಯಜಿಸಿ ಸರಿಯಾಗಿ ೧೨ವರ್ಷ. ಅವರ ನೆನಪು ನಮ್ಮ ಮನದಲ್ಲಿ ಭದ್ರವಾಗಿ ತಳ ಊರಿದೆ. ಬದಲಾಗದ ಜಿ.ಟಿ.ಎನ್. ಎಂದು ನಮ್ಮ ಮಾವ ಜಿ.ಟಿ. ನಾರಾಯಣರಾಯರ ಬಗ್ಗೆ ನಿಸಾರ್ ಅಹಮ್ಮದ್ ಅವರು ಒಂದು ಕವನವನ್ನೇ ಬರೆದಿದ್ದರು. ಅದು ಅವರ ಯೌವನದ ಕಾಲ. ನನಗೆ ಅವರ ಒಡನಾಟ ಲಭಿಸಿದ ಬಳಿಕದ ಬದಲಾಗಿದ್ದ ಜಿ.ಟಿ.ಎನ್ ವ್ಯಕ್ತಿತ್ತ್ವವನ್ನು ನನಗೆ ಕಂಡಂತೆ ಇಲ್ಲಿ ಕೆಲವು ಉದಾಹರಣೆ ಸಹಿತ ವಿವರಿಸಲು ಪ್ರಯತ್ನಿಸುವೆ.

ಜಿ.ಟಿ. ನಾರಾಯಣ ರಾಯರ ಮೂರನೇ ಮಗ ಅನಂತವರ್ಧನನ ಜೊತೆ    ಇಸವಿ ೧೯೮೭ರಲ್ಲಿ ನನ್ನ ಮದುವೆಯಾಗಿ ಮೈಸೂರಿನ ಈ ಅತ್ರಿ ಮನೆಗೆ ಕಾಲಿಟ್ಟೆ. ಆಗ ನನಗೆ ವಯಸ್ಸು ೧೮. ಪೇಟೆ ಬಗ್ಗೆ, ಅಡುಗೆ ಬಗ್ಗೆ, ಸಂಸಾರದ ಬಗ್ಗೆಯಾಗಲಿ ಲವಲೇಶದ ಅನುಭವವೂ ಇರಲಿಲ್ಲ. ನಾನು ಸುಂದರ ಹಳ್ಳಿಮನೆಯಲ್ಲಿ ಬೆಳೆದವಳು. ಮನೆಯಲ್ಲಿ ಅತ್ತೆ ಇದ್ದರು. ಹಾಗಾಗಿ ನನಗೆ ಅಡುಗೆ ಬಗ್ಗೆ ಚಿಂತೆ ಇರಲಿಲ್ಲ. ಆದರೆ ಅತ್ತೆ ತವರಿಗೋ ಅಥವಾ ಅವರ ತಂಗಿ ಮನೆಗೋ, ಪ್ರವಾಸವೋ ಹೋದಾಗ ಮಾತ್ರ ಅಡುಗೆ ಪಾರುಪತ್ಯ ನಾನು ವಹಿಸಿಕೊಳ್ಳದೆ ಗತ್ಯಂತರವಿರಲಿಲ್ಲ. ಆ ಬಗ್ಗೆ ನಾನು ಚಿಂತಿಸಬೇಕಾಗುತ್ತಿತ್ತು. ಮದುವೆ ಸಮಯದಲ್ಲಿ ನಮ್ಮಪ್ಪ ನನಗೆ ಕಡೆಂಬಿಲ ಸರಸ್ವತಿ ಬರೆದ ಅಡುಗೆ ಪುಸ್ತಕ ಕೊಟ್ಟಿದ್ದರು. ಅದನ್ನು ನೋಡಿ ಹೇಗೋ ಅಡುಗೆ ಮಾಡುತ್ತಿದ್ದೆ. ಕೆಲವೊಮ್ಮೆ ಅದರಲ್ಲಿ ಬರೆದ ಅತಿ ಸುಲಭದ ತಿಂಡಿ ಮಾಡುವ ಉಮೇದು ಬರುವುದಿತ್ತು. (ನನಗೆ ಅಡುಗೆ ಮಾಡಲು ಅಂಥ ಆಸಕ್ತಿ ಆಗಲೂ ಇರಲಿಲ್ಲ, ಈಗಲೂ ಇಲ್ಲ) ಹಾಗೆ ಅದನ್ನು ನೋಡಿ ನಾನು ಮಾಡಿದ ತಿಂಡಿ ಅಧ್ವಾನವಾಗಿದ್ದರೂ ಮಾವ ತಿನ್ನುತ್ತ, ಆಹಾ, ಬಲು ರುಚಿಯಾಗಿದೆ ಎನ್ನುತ್ತ ಪ್ರೋತ್ಸಾಹದ ನುಡಿಯಾಡುತ್ತಿದ್ದರು. ಅತ್ತೆ ನನಗೆ ಹೇಳಿದ ಪ್ರಕಾರ, ಮಾವನಿಗೆ ಅಡುಗೆ ಬಹಳ ರುಚಿ ರುಚಿಯಾಗಿರಬೇಕಿತ್ತಂತೆ. ಚೆನ್ನಾಗಿಲ್ಲದಿದ್ದರೆ ನೇರವಾಗಿ ಹೇಳುತ್ತಿದ್ದರಂತೆ. ಆದರೆ ನಮ್ಮ ಕಾಲಕ್ಕಾಗುವಾಗ ಮಾವ ಬದಲಾಗಿದ್ದರು. ನೀನು ಏನು ಬೇಕಾದರೂ ಹೊಸರುಚಿ ಪ್ರಯೋಗ ಮಾಡು. ಪ್ರಯೋಗಪಶುವಾಗಲು ನಾನು ಸಿದ್ದನಿದ್ದೇನೆ ಎಂದು ಬಹಳ ಉತ್ತೇಜನ ಕೊಟ್ಟಿದ್ದರು. ನಂದಿನಿ ಹಾಲಿನ ಪ್ಯಾಕೆಟನ್ನು ಹೇಗೆ ಕತ್ತರಿಸಿ (ಪ್ಯಾಕೆಟಿನ ತುದಿ ಕತ್ತರಿಸದೆ, ಅಡ್ಡಕ್ಕೆ ಕತ್ತರಿಸಬೇಕು. ಪ್ಲಾಸ್ಟಿಕ್ ತುಂಡು ಬೀಳಬಾರದೆಂದು) ಪಾತ್ರೆಗೆ ಹಾಲು ಸುರಿಯಬೇಕು ಎಂದು ನನಗೆ ಕಲಿಸಿಕೊಟ್ಟದ್ದೇ ಮಾವ. ಕಾಫಿ ಡಿಕಾಕ್ಷನ್ ಹಾಕುವುದರಿಂದ ಹಿಡಿದು ಕಾಫಿಗೆ ಹಾಲು ಹಾಕಿ ಹೇಗೆ ಮಾಡಬೇಕೆಂದು ಕಲಿಸಿದ್ದರು. ಕಾಫಿ ಮಾತ್ರ ಉತ್ಕೃಷ್ಟವಾಗಿಯೇ ಇರಬೇಕಿತ್ತು ಅವರಿಗೆ. ಡಿಕಾಕ್ಷನ್ ನೀರಾದರೆ ಇದು ಕಲಗಚ್ಚು ಎನ್ನುತ್ತಿದ್ದರು.

   ಸ್ವಲ್ಪ ಸಮಯದಲ್ಲೆ ಬ್ಯಾಂಕ್ ಖಾತೆ ನನ್ನ ಹೆಸರಿನಲ್ಲಿ ತೆಗೆಸಿ, ಕಡ್ಡಾಯವಾಗಿ ತಿಂಗಳ ಸುರುವಿಗೆ ಅದಕ್ಕೆ ದುಡ್ಡು ಹಾಕುವಂತೆ ಮಗನಿಗೆ ತಾಕೀತು ಮಾಡಿದ್ದರು. ಅಪ್ಪನ ಮಾತನ್ನು ಮಗ (ಆಗಷ್ಟೆ ಪ್ರಾಕ್ಟೀಸ್ ಸುರು ಮಾಡಿದ್ದಷ್ಟೇ. ಆದಾಯ ಹೆಚ್ಚೇನೂ ಇರದ ಕಾಲವದು) ಚಾಚೂ ತಪ್ಪದೆ ಪಾಲಿಸಿದ್ದ! ಖರ್ಚಿಗೆ ಹಣಕ್ಕಾಗಿ ಗಂಡನ ಮುಂದೆ ಪತ್ನಿ ಕೈ ಚಾಚಬಾರದು ಎಂದಿದ್ದರು. ಬ್ಯಾಂಕ್ ವ್ಯವಹಾರ ಹೇಗೆ ಮಾಡಬೇಕೆಂದು ಕಲಿಸಿಕೊಟ್ಟಿದ್ದರು. ಎಷ್ಟು ಹೇಳಿದರೂ ನನಗೆ ಬ್ಯಾಂಕ್ ವ್ಯವಹಾರ ಕಲಿಸಿರಲೇ ಇಲ್ಲ ನಿನ್ನ ಮಾವ. ಸದ್ಯ ನಿನಗಾದರೂ ಕಲಿಸಿದರಲ್ಲ ಎಂದು ನಮ್ಮ ಅತ್ತೆ ಯಾವಾಗಲೂ ವಿಷಾದದಿಂದ ಹೇಳುವುದಿತ್ತು. ಒಮ್ಮೆ ನೋಂದಾಯಿತ ಅಂಚೆಯನ್ನು ಕಳುಹಿಸಲು ನನಗೆ ಕೊಟ್ಟಿದ್ದರು. ನಾನು ಉತ್ಸಾಹದಿಂದ ಸೈಕಲ್ ಹತ್ತಿ ಅಂಚೆ ಕಛೇರಿಗೆ ಹೋಗಿ, ಬೇಕಷ್ಟು ಅಂಚೆ ಚೀಟಿ ಅಂಟಿಸಿ ಅದನ್ನು ಡಬ್ಬಕ್ಕೆ ಹಾಕಿ ಮನೆಗೆ ಬಂದೆ. ಎಲ್ಲಿ ರಸೀದಿ ಎಂದು ಮಾವ ಕೇಳಿದಾಗ, ನಾನು ತಬ್ಬಿಬ್ಬು. ನಾನು ಏನು ಮಾಡಿದೆ ಎಂದು ಸವಿಸ್ತಾರವಾಗಿ ವಿವರಿಸಿದೆ. ಹಾಗಲ್ಲ, ನೋಂದಾಯಿತ ಅಂಚೆ ಕಳುಹಿಸುವುದು ಎಂದು ನನಗೆ ಸರಿಯಾದ ಪಾಟ ಮಾಡಿದ್ದರು.  

     ಮಾವನಿಗೆ ಟಿವಿ ಬಗ್ಗೆ ಒಲವಿರಲಿಲ್ಲ. ಅದನ್ನು ನೋಡುತ್ತ ಕೂರುವುದು ಸಮಯ ಹಾಳು ಎಂದವರ ಅಭಿಪ್ರಾಯವಾಗಿತ್ತು. ಅತ್ತೆ ಟಿವಿ ತರಬೇಕು ಎಂದು ಹೇಳಿದರೂ ಕೇಳಿರಲಿಲ್ಲ. ಕೊನೆಗೆ ನನ್ನ ಅಭಿಪ್ರಾಯ ಕೇಳಿದರು. ನಿನಗೆ ಟಿವಿ ಬೇಕಾ? ಎಂದು. ನಾನು ಅತ್ತೆಯ ಆಸೆ ನೋಡಿ ಬೇಕು ಎಂದೆ. ಮಾವ ಖುದ್ದಾಗಿ ಪೇಟೆಗೆ ಹೋಗಿ  ೧೯೮೭ರಲ್ಲಿ ನಮ್ಮಲ್ಲಿಗೆ ಕಪ್ಪುಬಿಳುಪಿನ ಟಿವಿ ತಂದಿದ್ದರು. ಮುಂದೆ, ನಾನೂ ಅತ್ತೆಯೂ ಸಂಜೆ ಹೊತ್ತಲ್ಲಿ ಕೂತು ಧಾರಾವಾಹಿ ನೋಡುತ್ತಿದ್ದೆವು. ಮಾಯಾಮೃಗ ಧಾರಾವಾಹಿ ನೋಡಲು ಮಗಳೂ ಜೊತೆಗೂಡುತ್ತಿದ್ದಳು. ನನಗೆ ಕ್ರಿಕೆಟ್ ಆಟವೆಂದರೆ ಆಡಲೂ ಅಷ್ಟೇ ನೋಡಲೂ ಅಷ್ಟೇ ಬಲು ಪ್ರಿಯ. ದೂರದರ್ಶನದಲ್ಲಿ ಕ್ರಿಕೆಟ್ ಪ್ರಸಾರವಾದಾಗಲೆಲ್ಲ ಪಟ್ಟಾಗಿ ಕೂತು ನೋಡುತ್ತಿದ್ದೆ. ಮಾವನಿಗೋ ಕ್ರಿಕೆಟ್ ಆಟವೆಂದರೆ ಅಷ್ಟಕ್ಕಷ್ಟೆ. ನಾನು ನೋಡುತ್ತಿದ್ದಾಗ ಆಗಾಗ ಬಂದು ೧೧ ಜನ ಮೂರ್ಖರು ಆಡುವುದನ್ನು ೧೧ ಸಾವಿರ ಮಂದಿ ಶತಮೂರ್ಖರು ಕೂತು ನೋಡುತ್ತಾರೆ ಎಂದು ಜರೆಯುತ್ತಿದ್ದರು! ನಾನು ಕೂತು ನೋಡುತ್ತಿರುವುದು ಅವರಿಗೆ ಇರಿಸು ಮುರುಸಾಗುತ್ತಿತ್ತು. ನಾನು ಅವರ ಮಾತಿಗೇನೂ ಜಗ್ಗಲಿಲ್ಲ. ನೋಡುವುದನ್ನು ಬಿಡಲೂ ಇಲ್ಲ. ಹೇಳಿದ್ದು ಕೇಳದ ನನ್ನನ್ನು ನೋಡಿ ತಡೆಯಲಾರದೆ, ಸಮಯ ಹಾಳು, ಪುಸ್ತಕ ಓದು ಎಂದೆಲ್ಲ ಹೇಳಿ ನೋಡಿದರು. ಮೂರು ನಾಲ್ಕು ಸಲ ಹೇಳಿದಾಗ ಇನ್ನು ಮಾತಾಡದಿದ್ದರೆ ಸರಿ ಅಲ್ಲ ಎಂದು, ಹಾಗಾದರೆ ನೀವು ಪ್ರತೀದಿನ ಸಂಗೀತ ಕಛೇರಿಗೆ ಹೋಗುವುದೂ ಸಮಯ ಹಾಳಲ್ಲವೆ? ಎಂದೆ.  ಸಂಗೀತ ಕೇಳುವುದು ಒಳ್ಳೆಯ ಹವ್ಯಾಸ ಎಂದರು. ನಿಮಗೆ ಸಂಗೀತ ಕೇಳಿದಾಗ ಎಷ್ಟು ಆನಂದವಾಗುತ್ತದೋ ಅಷ್ಟೇ ಆನಂದ ನನಗೆ ಈ ಕ್ರಿಕೆಟ್ ಆಟ ನೋಡಿದರೆ ಆಗುತ್ತದೆ. ನಾನೇ ಕ್ರಿಕೆಟ್ ಆಡುತ್ತಿದ್ದಷ್ಟು ಖುಷಿಯಾಗುತ್ತದೆ ಎಂದೆ. ಒಬ್ಬೊಬ್ಬರ ಆಸಕ್ತಿ ಭಿನ್ನವಾಗಿರುತ್ತದಲ್ಲ ಎಂದು ಪ್ರತಿವಾದ ಹೂಡಿದೆ. ನನ್ನ ವಾದ ಕೇಳಿದ ಅತ್ತೆ ಖುಷಿಯಿಂದ ಮಧ್ಯೆ ಬಂದು ನನ್ನ ಸಹಾಯಕ್ಕೆ ನಿಂತರು. ಅವಳಣ್ಣಂದಿರಿಬ್ಬರು ವಕೀಲರು.  ಅವಳಿಗೆ ವಾದ ಮಾಡುವ ಕಲೆ ಒಲಿದಿದೆ ಎಂದು ನನಗೆ ಬೆಂಬಲವಿತ್ತರು! ಮಾವ ನನ್ನ ವಾದಸರಣಿಗೆ ಮನಸೋತು, ಹೌದೌದು ಎಂದು ತಲೆದೂಗಿ ಅಲ್ಲಿಂದ ಸರಿದರು. ಅದರಿಂದ ಮತ್ತೆ ಕ್ರಿಕೆಟ್ ನಾನು ನೋಡಿದಾಗಲೆಲ್ಲ ಕೊಂಕು ನುಡಿಯುತ್ತಿರಲಿಲ್ಲ.  ಈಗ ಯಾರು ಆಡುತ್ತಿರುವುದು? ಭಾರತ ಗೆಲ್ಲಬಹುದಾ? ಎಷ್ಟು ರನ್ ಆಯಿತು? ವಿಕೆಟ್ ಎಷ್ಟು ಉಂಟು ಇನ್ನು? ಎಂದು ಪ್ರಶ್ನೆ ಕೇಳುತ್ತ ಸ್ವಲ್ಪ ಹೊತ್ತು ಕೂತು ಆಟ ನೋಡುತ್ತಿದ್ದರು. ನಾನೂ ಅತಿ ಉತ್ಸಾಹದಿಂದ ಅವರ ಪ್ರಶ್ನೆಗೆ ಉತ್ತರ ಕೊಡುತ್ತಿದ್ದೆ. ಅವರಿಗೆ ಸುತರಾಂ ಇಷ್ಟ ಇಲ್ಲ, ಇದು ನನ್ನ ಖುಷಿಗೆ ಕೇಳುವ ಪ್ರಶ್ನೆಗಳು ಎಂದು ನನಗೆ ಗೊತ್ತಾಗುತ್ತಲಿತ್ತು! ಆಟ ಕೊನೆಯಾಗುವಾಗ ಮತ್ತೆ ಬರುತ್ತೇನೆ ಎಂದು ಎದ್ದು ಅವರ ಕೊಟಡಿಗೆ ಹಿಂದಿರುಗುತ್ತಿದ್ದರು!

    ಅತ್ತೆಯ ತಮ್ಮ (ಗೋವಿಂದ ಭಟ್ಟ)ನ ಮಗಳು ಲಲಿತಾ ಹಾಗೂ ನಾನು ಆಗಾಗ ಒಳ್ಳೆಯ ಸಿನೆಮಾ ನೋಡಲು ಥಿಯೇಟರಿಗೆ ಹೋಗುವುದಿತ್ತು. ಹೀಗೆ ಒಮ್ಮೆ ಅತ್ತೆಯ ಇನ್ನೊಬ್ಬ ತಮ್ಮ(ರಾಮನಾಥ)ನ ಮಗಳು ಕುಸುಮಳೂ ನಮ್ಮೊಡನೆ ಸಿನೆಮಾಗೆ ಹೋಗುವ ಸಲುವಾಗಿ ನಮ್ಮಲ್ಲಿಗೆ ಬಂದಿದ್ದಳು ಬೆಳಗ್ಗೆ. ಅವಳಿಗೆ ಬಾಗಿಲು ತೆರೆದವರು ಮಾವ. ಓ. ಕುಸುಮ, ಬಾ. ಏನು ಬಂದದ್ದು ಬೆಳಗ್ಗೆಯೇ? ಎಂದು ಪ್ರಶ್ನಿಸಿದಾಗ, ಸಿನೆಮಾ ನೋಡಲು ಹೋಗಲಿದೆ ಎಂದು ಅವಳಂದಾಗ, ಮಾವನ ಕೋಪ ಏರಿತು. ಏನು ನೀನು ಸಿನೆಮಾ ನೋಡಲು ಹೋಗ್ತೀಯ? ಎಂ.ಎಸ್ಸಿ. ಮಾಡಿದ್ದೀಯ. ಸಿನೆಮಾ ನೋಡಿ ಸಮಯ ಹಾಳು ಮಾಡುತ್ತೀಯಲ್ಲ, ನಾನು ಒಂದಷ್ಟು ಪುಸ್ತಕ ಕೊಡುತ್ತೇನೆ. ಅದನ್ನು ಅನುವಾದ ಮಾಡಿ ಕೊಡು ಎಂದಾಗ ಅವಳಿಗೆ ಕೈಕಾಲು ನಡುಕ ಸುರುವಾಯಿತು. ಮಾವನ ಇಂಥ ಪ್ರಶ್ನೆಗಳಿಂದ ಬಚಾವಾಗಲು ಅವಳು ಅತ್ತೆಯ ಮೊರೆ ಹೋದಳು. ಅತ್ತೆ ಹಿತ್ತಲಲ್ಲಿ ಬಟ್ಟೆ ತೊಳೆಯುತ್ತಲಿದ್ದರು. ಕುಸುಮ ಅಲ್ಲಿಗೆ ಓಡಿ ಅತ್ತೆಯ ಹಿಂದೆ ನಿಂತಳು. ಅತ್ತೆಗೆ ಕುಸುಮಳನ್ನು ನೋಡಿ ಬಲು ಖುಷಿಯಾಗಿ ಮಾತಿಗೆ ತೊಡಗಿದಾಗ, ಅಲ್ಲಿ ಪ್ರತ್ಯಕ್ಷರಾದ ಮಾವ, ಅಲ್ಲಿಗೂ ಬಂದು ತರಾಟೆಗೆ ತೊಡಗಿದಾಗ, ಅತ್ತೆ ಎಷ್ಟೇ ಸಮಜಾಯಿಸಿ ಕೊಟ್ಟರೂ ಕೇಳದೆ  ಅತ್ತೆಗೇ ಬೈದು, ಅವಳಿಗೆ ಉಪದೇಶ ಕೊಡುತ್ತಲೇ ಇದ್ದರು. ಈ ಸನ್ನಿವೇಶವನ್ನು ನಾನು ಬಲು ಮೋಜಿನಿಂದಲೇ ನೋಡುತ್ತಿದ್ದವಳು, ಇನ್ನು ರಂಗಪ್ರವೇಶ ಮಾಡದೆ ಇದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆನಿಸಿತು. ಮಾವನಿಗೆ ಒಂದೇ ಒಂದು ಪ್ರಶ್ನೆ ಹಾಕಿದೆ. ಹಾಗಾದರೆ ನೀವು ಆಗಾಗ ನಾಟಕ ನೋಡಲು ಹೋಗುತ್ತೀರಲ್ಲ? ಅದು ಸರಿಯೇ? ಈ ಪ್ರಶ್ನೆ ಕೇಳಿದ್ದೇ ಮಾವ ಕುಸುಮನಿಗೆ ಬೈಯುವುದನ್ನು ನಿಲ್ಲಿಸಿದರು. ಯಾವ ಸಿನೆಮಾ? ಇತ್ಯಾದಿ ನಯದಿಂದ ಕೇಳಿ, ಅವಳಿಗೂ ಒಂದೆರಡು ಒಳ್ಳೆಯ ಮಾತಾಡಿ ಸಿನೆಮಾ ನೋಡಲು ಶುಭ ಹಾರೈಸಿ ಅವರ ಕೆಲಸಕ್ಕೆ ಹೋದರು! ಬರವಣಿಗೆ, ಓದು ಎಂದು ದಿನದ ೨೪ ಗಂಟೆಯೂ ಸಾಲದು ಎಂಬಂಥ ಮನೋಭಾವ ಮಾವನದು.  ಅವರಂತಿರಲು ಬಹಳ ಕಷ್ಟಸಾಧ್ಯ!  

  ಈ ಹಿಂದೆ ಲಲಿತಳೂ ನಾನೂ ಸಿನೆಮಾಗೆ ಎಷ್ಟೋಸಲ ಹೋದಾಗಲೂ ಮಾವ ನಮಗೆ ಏನೂ ಹೇಳಿರಲಿಲ್ಲ. ಈ ಎರಡು ಮೊಂಡರಿಗೆ ಹೇಳಿ ಪ್ರಯೋಜನವಿಲ್ಲ ಎನಿಸಿರಬೇಕು! ಇವರೊಡನೆ ಸೇರಿ ಮುಗ್ಧೆ ಕುಸುಮಾ ಹಾಳಾಗುತ್ತಿದ್ದಾಳಲ್ಲ ಎಂದು ಅನಿಸಿ ಅವಳಿಗೆ ಬುದ್ಧಿ ಹೇಳಿದ್ದಾಗಿರಬಹುದು! ಈ ಘಟನೆಯ ಬಳಿಕ ಕುಸುಮ ಅಪ್ಪಿತಪ್ಪಿಯೂ ನಮ್ಮೊಡನೆ ಸಿನೆಮಾಗೆ ಬರಲಿಲ್ಲ! ಎಲ್ಲಾದರೂ ಅಪರೂಪಕ್ಕೆ ಬಂದರೂ ನೇರ ಟಾಕೀಸಿಗೇ ಬರುತ್ತಲಿದ್ದಳು! ನಾವು ಸಿನೆಮಾಗೆ ಹೋಗಿ ಬಂದಮೇಲೆ, ಹೇಗಿತ್ತು ಸಿನೆಮಾ?  ಕಥೆ ಏನು? ಎಂಬ ಪ್ರಶ್ನೆ ಕೇಳಲು ಮಾವ ಮರೆಯುತ್ತಿರಲಿಲ್ಲ!

   ಮಾವನಿಗೆ ದೇವರ ಪೂಜೆ ಖುಷಿ ಇರಲಿಲ್ಲ. ಅತ್ತೆ ದೇವರಿಗೆ ನಿತ್ಯ ಪೂಜೆ ಮಾಡುತ್ತಲಿದ್ದರು. ಆದರೆ ಅತ್ತೆ ಪೂಜೆ ಮಾಡುವುದನ್ನು ಮಾವ ವಿರೋಧಿಸುತ್ತಿರಲಿಲ್ಲ. ನನ್ನ ಸೀಮಂತ ಶಾಸ್ಥ್ರದ ದಿನ ಹೋಮ ಮಾಡಿಸಬೇಕೆಂದು ಅತ್ತೆಗೆ ಅನಿಸಿತ್ತು. ನನಗೂ ಮಾವನಿಗೂ ಹೋಮ ಇಷ್ಟವಿರಲಿಲ್ಲ. ಹೊಗೆ ಎಂದರೇ ನನಗಾಗದು. ಅನಂತನದು ಆ ವಿಷಯದಲ್ಲಿ ತಟಸ್ಥ ನಿಲುವು. ಅತ್ತೆಗೇಕೆ ಬೇಸರ ಮಾಡುವುದೆಂದು ನಾವೂ ಒಪ್ಪಿದೆವು. ಹೋಮ ಕಾರ್ಯ ಆಗುತ್ತಿರುವಾಗ ಮನೆಯಿಡೀ ಹೋಮದ ಹೊಗೆಯಿಂದ ಆವರಿಸಿತು. ಮಾವನ ಚಡಪಡಿಕೆ ನೋಡಲು ಬಲು ಮೋಜು. ಶತಪಥ ಹಾಕುತ್ತ, ಇನ್ನು ಎಷ್ಟು ಹೊತ್ತು ಇದೆ ಇದು? ಎಂದು ಪದೇಪದೇ ಕೇಳುತ್ತಲಿದ್ದರು! ಹೋಮದ ಹೊಗೆಗೆ ಕಣ್ಣು ಮೂಗಿನಿಂದ ಧಾರೆ ಇಳಿಯುವುದನ್ನು ಒರೆಸಿಕೊಳ್ಳುತ್ತ, ಇಷ್ಟವಿಲ್ಲದಿದ್ದರೂ ಅತ್ತೆಗೋಸ್ಕರ ಭಾಗಿಯಾಗಿ ಕೂತಿದ್ದೆ. ನನ್ನ ಅವಸ್ಥೆ ನೋಡಿ ಮಾವನಿಗೆ ಸಂಕಟ. ಇದೆಲ್ಲ ಬೇಕಿತ್ತ ಎಂಬ ಭಾವ ಮುಖದಲ್ಲಿ ಎದ್ದು ಕಾಣುತ್ತಲಿತ್ತು. ಇನ್ನೊಬ್ಬರ ಭಾವನೆಗೆ ಬೆಲೆ ಕೊಡುವ ಮನಸ್ಸು ಅವರಿಗೆ ಇತ್ತು. ಅವರ ಯೌವನದಲಿ ಮಾತ್ರ ಕೇಳುತ್ತಿದ್ದಿರಲಿಲ್ಲವಂತೆ. ಕೌಟುಂಬಿಕ ನೆಮ್ಮದಿಗೋಸ್ಕರ ಇದರಲ್ಲಿ ಭಾಗಿಯಾಗುತ್ತೇನೆ ಎಂದಿದ್ದರು.

    ಯಾರ ಮನೆ, ಛತ್ರ ಅಥವಾ ಹೊಟೇಲಿಗೆ ಊಟಕ್ಕೆ ಹೋದಾಗಲೆಲ್ಲ,  ಊಟವಾದ ಅನಂತರ ಅಲ್ಲಿಯ ಮುಖ್ಯಸ್ಥರನ್ನು ಭೇಟಿಯಾಗಿ, ಊಟ ಬಹಳ ಚೆನ್ನಾಗಿತ್ತು ಎಂದು ಹೇಳಿಯೇ ಮಾವ ಅಲ್ಲಿಂದ ನಿರ್ಗಮಿಸುತ್ತಿದ್ದುದು. ಊಟ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಊಟ ಚೆನ್ನಾಗಿತ್ತು ಎಂದು ಹೇಳುವ ಅವರ ಈ ಗುಣ ನನಗೆ ಬಹಳ ಖುಷಿ ತಂದಿತ್ತು. ಮನೆಯಲ್ಲೂ ಅಷ್ಟೇ. ಊಟ ಮಾಡುವಾಗಲೆಲ್ಲ ಪ್ರತಿಯೊಂದು ಅಡುಗೆಯನ್ನೂ ಬಹಳ ಚೆನ್ನಾಗಿದೆ ಎಂದು ಹೇಳುತ್ತಲಿದ್ದರು. ಹೊಗಳಿಕೆ ಕಲೆ ಅವರಿಗೆ ಬಹಳ ಚೆನ್ನಾಗಿ ಸಿದ್ಧಿಸಿತ್ತು!  ಹೌದು. ಎಂದೂ ಯಾವ ಅಡುಗೆಯನ್ನೂ ಚೆನ್ನಾಗಿಲ್ಲ ಎಂದು ಹೀಗಳೆಯಬಾರದು. ಚೆನ್ನಾಗಿಲ್ಲದಿದ್ದರೆ ಕಡಿಮೆ ತಿಂದರಾಯಿತು ಎಂಬುದು ನನ್ನ ನಿಲುವು.    ಅಜ್ಜ ತೀರಿದ ಬಳಿಕ, ಈಗ ನನ್ನನ್ನು ಹೊಗಳುವವರು ಯಾರೂ ಇಲ್ಲ, ಅಜ್ಜ ಮಾತ್ರ ನನ್ನನ್ನು ಹೊಗಳುತ್ತಿದ್ದುದು ಎಂದು ಅಕ್ಷರಿ ಕೊರಗುತ್ತ ಹೇಳುತ್ತಲಿದ್ದಳು. ಆಗ ಅಜ್ಜಿ ಎಚ್ಚೆತ್ತುಕೊಂಡು, ನೀನು ಬಲು ಜಾಣೆ ಎಂದು ಹೊಗಳಿಕೆ ಸುರುಮಾಡುತ್ತಿದ್ದರು! 

 ೨೦೦೦ ಇಸವಿಯಲ್ಲಿ ನಮ್ಮಲ್ಲಿಗೆ ಗಣಕಯಂತ್ರ ಬಂತು. ಗಣಕ ಯಂತ್ರ ಎಂದರೆ ಏನು? ಅದನ್ನು ತೆರೆಯುವುದು ಮುಚ್ಚುವುದು ಹೇಗೆ ಎಂದೇ ಗೊತ್ತಿಲ್ಲದಿದ್ದರೆ ಹೇಗೆಂದು ನಾನು ಕಲಿಯಲು ಹೋದೆ.  ಸುಮಾರು ೬ ತಿಂಗಳು ಕಲಿತಿದ್ದೆ. ಮುಖ್ಯವಾಗಿ ಕನ್ನಡ ಟೈಪ್ ಕಲಿಯಬೇಕಿತ್ತು ನನಗೆ. ಆದರೆ ನಮ್ಮ ಗುರುಗಳಿಗೇ ಗೊತ್ತಿರಲಿಲ್ಲ. ಮತ್ತೆ ನಾನೇ ಗುರುಟಿ ಗುರುಟಿ ಕಲಿತೆ. ಮುಂದೆ ಮಾವನಿಗೆ ಕನ್ನಡ ಟೈಪ್ ಗಣಕದಲ್ಲಿ ಹೇಗೆ ಕುಟ್ಟುವುದೆಂದು ನನಗೆ ತಿಳಿದದ್ದನ್ನು ಹೇಳಿಕೊಟ್ಟೆ. ಗಣಕದಲ್ಲಿ ಕನ್ನಡ ಟೈಪ್ ಕಲಿಯಲು ನನ್ನ ಗುರು ಸೊಸೆ ರುಕ್ಮಿಣಿ ಎಂದು ಎಲ್ಲರ ಬಳಿ ಹೇಳುತ್ತಿದ್ದರು! ಅವರೋ ಗುರುವನ್ನು ಮೀರಿಸುವ ಶಿಷ್ಯ. ಮುಂದೆ ಸಾವಿರಾರು ಪುಟ ಕನ್ನಡದಲ್ಲಿ ಲೇಖನ ಟೈಪ್ ಮಾಡಿದ್ದರು. ಆಂಗ್ಲದಲ್ಲು ಕೂಡ.  


  ಮಾವನ ಲೇಖನಗಳು, ಪುಸ್ತಕ ಪ್ರಕಣೆಗಳಲ್ಲಿ ಕರಡು ಪ್ರತಿಯನ್ನು ಓದಿ ತಿದ್ದಲು ನನಗೂ ಕಲಿಸಿದ್ದರು. ಒಂದು ವಾಕ್ಯ ಹೇಗೆ ಬರೆದರೆ ಚೆನ್ನ? ವಾಕ್ಯದ ಪ್ರಾರಂಭದಲ್ಲಿ ನಾನು ಎಂಬುದು ಬರದಂತೆ ನೋಡಿಕೊಳ್ಳಬೇಕು, ಒಂದೇ ವಾಕ್ಯದಲ್ಲಿ ಒಮ್ಮೆ ಬಂದ ಶಬ್ಧ ಬರದಿದ್ದರೆ ಒಳ್ಳೆಯದು, ಎಂದೆಲ್ಲ ನನಗೆ ಪಾಟ ಮಾಡಿದ್ದರು. ಅವರ ಪುಸ್ತಕ ಕರಡು ಓದುತ್ತಲೆ ನಾನು ವಾಕ್ಯ ರಚನೆ ಕಲಿತೆ.  ಅವರು ಬರೆದ ವಾಕ್ಯದಲ್ಲಿ ಇದು ಹೀಗಿರುವುದಕ್ಕಿಂತ ಹೀಗಿದ್ದರೆ ಸರಿಯಾ ಎಂದು ನಾನು ತೋರಿಸಿದರೆ, ಭಲೇ, ಬೇಷ್, ಹೌದು, ಎಂದು ಅದನ್ನೇ ಅನುಮೋದಿಸುತ್ತಿದ್ದರು. ಇನ್ನೊಬ್ಬರು ಒಳ್ಳೆಯದನ್ನು ಹೇಳಿದ್ದನ್ನು ಮೆಚ್ಚಿಕೊಂಡು ಒಪ್ಪಿಕೊಳ್ಳುವ ದೊಡ್ಡಗುಣ ಅವರಲ್ಲಿತ್ತು. ಹೀಗೆ ಪಟ್ಟಿ ಮಾಡುತ್ತ ಹೋದರೆ ಬೇಕಾದಷ್ಟು ಇದೆ. ಇಲ್ಲಿಗೆ ನಿಲ್ಲಿಸುವೆ. ಇದು ಬದಲಾಗಿದ್ದ ಜಿ,ಟಿ.ಎನ್. ಅವರ ಬಗ್ಗೆ ನನ್ನ ಅನಿಸಿಕೆ.   











13 ಕಾಮೆಂಟ್‌ಗಳು:

  1. ಓಹ್ ತುಂಬಾ ಚೆನ್ನಾದ ನಿರೂಪಣೆ.... ಕ್ರಿಕೆಟ್ ಆಟ ವೀಕ್ಷಣೆಯ ತರ್ಕ ತುಂಬಾ ಇಷ್ಟವಾಯ್ತು.

    ಪ್ರತ್ಯುತ್ತರಅಳಿಸಿ
  2. ಬರಹ ಚೆನ್ನಾಗಿದೆ.ನಿನ್ನ ಮಾವ ಬಂದವರಲ್ಲಿ ಯಾವ ಪ್ರತಿಭೆ ಇದೆ ಎಂದು ಗುರುತಿಸಿ,ಅವರನ್ನು ಪ್ರೋತ್ಸಾಹಿಸುತಿದ್ದುದು ನೆನಪಾಗುತಿದೆ,ನನ್ನ ಮಗಳು ಅವರ ದೊಡ್ಡ ಅಭಿಮಾನಿಯಾಗಿದ್ದಳು.ಪ್ರಾಥಮಿಕ ಶಾಲೆಯಲ್ಲಿ"ನಾನು ಮೆಚ್ಚಿದ ವ್ಯಕ್ತಿ"ಪ್ರಬಂಧ ಬರೆಯಲು ಹೇಳಿದಾಗ G.T.N.ಅಜ್ಜನ ಬಗ್ಗೆಯೇ ಬರೆದಿದ್ದಳು.

    ಪ್ರತ್ಯುತ್ತರಅಳಿಸಿ
  3. ಮಗಂದರಿಗೆ ಬದಲಾಗದ ಜೀ.ಟಿ.ಎನ್. ಮಗಳಿಗೆ ಬದಲಾದರು .... :). ತುಂಬಾ ಚೆನ್ನಾಗಿತ್ತು, ಓದಿ ನೆಗಾಡಿ ನೆಗಾಡಿ ಸಾಕಾಯಿತು. ಒಬ್ಬರಾದರೂ ಬುದ್ದಿ ಕಲಿಸುವವರು ಇದ್ದಾರಲ್ಲಾ ಎಂದು :). ನನ್ನ ವೈಯಕ್ತಿಕ ಅನುಭವದ ಪ್ರಕಾರ ಸ್ವಲ್ಪವಾದರೂ ಬುದ್ದಿ ಪೌಡಿಮೆ ಬರುವುದು ೬೦ರ ನಂತರ ... ಸಾನುಕ್ರೋಶ ಬರಬೇಕಾದರೆ ಇನ್ನೋಬ್ಬರ ಮಾತು ಕೆಳುವ ತಾಳ್ಮೆ ಇರಬೇಕು, ಅವರ ಮನೋ ಸ್ಥಿತಿ, ಸಾಂದರ್ಬಿಕ ಸ್ಥಿತಿ ಬಗ್ಗೆ ಪೂರ್ತಿ ಅರಿತಿರಬೇಕು, ಅನುಕಂಪ ಒಳ್ಳೇ ರೀತಿಯಲ್ಲಿ ಇರಬೇಕು ...

    ಪ್ರತ್ಯುತ್ತರಅಳಿಸಿ
  4. ಬಹಳ ಆಪ್ತವಾದ, ಆತ್ಮೀಯವಾದ ಬರಹ. ಜಿಟಿಎನ್ ಅವರಿಗೆ "ಹೇಳಿ ಮಾಡಿಸಿದಂಥದ್ದು". ಓದಿ ಖುಷಿಯಾಯ್ತು, ಅವರ ಬಗ್ಗೆಯೂ, ನಿಮ್ಮೆಲ್ಲರ (ಜಿಟಿಎನ್ ಕುಟುಂಬಸ್ಥರ) ಬಗ್ಗೆಯೂ ವಿಶೇಷ ಹೆಮ್ಮೆಯೆನಿಸಿತು. ಒಂದೊಂದೇ ಘಟನಾವಳಿಗೆಗಳ ಚಿತ್ರಣ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. ಹಠಾತ್ತಾಗಿ ಮುಗಿದುಬಿಟ್ಟಿತು ಇನ್ನೊಂಚೂರು ಇರಬೇಕಿತ್ತು ಎಂದೆನಿಸಿತು (ಬರಹವಾಗಲೀ, ತಿಂಡಿಯಾಗಲೀ ಹಾಗಿದ್ದರೇನೇ ಹೆಚ್ಚು ರುಚಿಸುವುದು ಎನ್ನುವುದೂ ಸತ್ಯವೇ). ವಂದನೆಗಳು.

    ಪ್ರತ್ಯುತ್ತರಅಳಿಸಿ