ಗುರುವಾರ, ಜುಲೈ 9, 2020

ಈ ಜಗದಲಿ ಜಡ ವಸ್ತುಗಳಿಗೆ ಮರುಳಾಗದವರುಂಟೇ!?


‘ಕಂಡದ್ದೆಲ್ಲ ಬೇಕು ಕುಂಡಿಭಟ್ಟನಿಗೆ’ ಎಂಬುದು ನಮ್ಮೂರಲ್ಲಿ ಪ್ರಚಲಿತದಲ್ಲಿರುವ ಗಾದೆ. ಈ ಗಾದೆ ಒಮ್ಮೊಮ್ಮೆ ನನಗೂ ಅನ್ವಯಿಸುವುದೂ ಇದೆ. ನಮ್ಮ ಮೈಸೂರಿನಲ್ಲಿ ವಸ್ತುಪ್ರದರ್ಶನಗಳಿಗೆ ಬರವಿಲ್ಲ. ಸಹರ, ಗೃಹಶೋಭೆ, ದಸರ ಸಮಯದಲ್ಲಿ ವಸ್ತುಪ್ರದರ್ಶನ ಎಂದು ಸರಿ ಸುಮಾರು ವರ್ಷವಿಡೀ ಏನಾದರೊಂದು ಇದ್ದೇ ಇರುತ್ತದೆ. ಹೀಗೆ ಪ್ರದರ್ಶನ ಏರ್ಪಡಿಸಿದ ಮೇಲೆ ನಾವು ಹೋಗದಿದ್ದರೆ ಅದು ನ್ಯಾಯವೇ? ಜನರು ಬಂದು ವಸ್ತುಗಳನ್ನು ನೋಡಿ ಕೊಳ್ಳಲಿ ಎಂದೇ ತಾನೆ ಅವರು ಪ್ರದರ್ಶನ ಏರ್ಪಡಿಸುವುದು? ಸಹರ ವಸ್ತು ಪ್ರದರ್ಶನ ಪ್ರತೀವರ್ಷ ಮೈಸೂರಿನ ಸ್ಕೌಟ್ ಮತ್ತು ಗೈಡ್ ಮೈದಾನದಲ್ಲಿ ಮೂರು ವಾರಗಳಿಗೂ ಹೆಚ್ಚು ದಿನ ಇರುತ್ತದೆ. ಪ್ರತಿ ವರ್ಷವೂ ನನಗೂ ಮಗಳಿಗೂ ಒಂದೆರಡು ಸಲವಾದರೂ  ಅಲ್ಲಿ ತಿರುಗಿ ಬರುವುದೆಂದರೆ ಅದೇನೋ ಸಂಭ್ರಮ. ಅವಳು ಇಡೀ ಸುತ್ತಿ ಬಳೆ, ಕ್ಲಿಪ್, ಚಪ್ಪಲಿ ಅಂಗಡಿ ಎದುರು ಸುಮಾರು ಕಾಲುಗಂಟೆಯಾದರೂ ನಿಂತು ನೋಡಿ ಒಂದೆರಡು ಕ್ಲಿಪ್, ಬಳೆ, ಚಪ್ಪಲಿ ಖರೀದಿಸಿದಮೇಲೆಯೇ ಅಲ್ಲಿಂದ ಕದಲುತ್ತಿದ್ದುದು ಸಾಮಾನ್ಯವಾಗಿತ್ತು! ಚಪ್ಪಲಿ ಬಗ್ಗೆ ಒಲವು ಜಾಸ್ತಿ ಅವಳಿಗೆ. ಪ್ರತೀವರ್ಷ ಒಂದೆರಡು ಜೊತೆ ಚಪ್ಪಲಿ ಖರೀದಿಸಿದರೇ ಅವಳಿಗೆ ಸಮಾಧಾನ. ಅವಳ ಪಾದದ ಅಳತೆಯೂ ನನ್ನ ಪಾದದ ಅಳತೆಯೂ ಸಮವಾಗಿರುವ ಕಾರಣ ನನಗೆ ಕಳೆದ ಹತ್ತು ವರ್ಷಗಳಿಂದ ಚಪ್ಪಲಿ ಕೊಳ್ಳುವ ಪ್ರಮೇಯ ಬರಲಿಲ್ಲ. ಅವಳು ವರ್ಷಕ್ಕೆ ಎರಡು ಮೂರು ಜೊತೆ ಕೊಳ್ಳುತ್ತಾಳೆ. ಅವನ್ನು ಆರು ತಿಂಗಳು ಹಾಕಿದರೆ ಹೆಚ್ಚು. ಮತ್ತೆ ಆ ಚಪ್ಪಲಿಗಳು ನನ್ನ ಪಾದಸೇವೆಗೆ ಮುಡಿಪು! ಹಾಗಾಗಿ ನನಗೆ ಈಗ ವಾಯುಸೇವನೆಗೆ ತೆರಳಲು, ಮದುವೆಗಳಿಗೆ ಹೋಗುವಾಗ ಹಾಕಲು, ಅಂಗಳದಲ್ಲಿ ಸುತ್ತಲು, ಹೀಗೆ ತರಹೇವಾರಿ ಚಪ್ಪಲಿಗಳಿವೆ! ಮಗಳು ಕಾಲೇಜಿನ ಮೆಟ್ಟಲು ಹತ್ತಿದಮೇಲೆ (ನಾನು ಅದು ತೆಗೆಯಬೇಡ ಇದು ತೆಗೆಯಬೇಡ ಎಂದು ಕಡಿವಾಣ ಹಾಕುತ್ತೇನೆಂದು) ವಸ್ತು ಪ್ರದರ್ಶನಗಳಿಗೆ ಅವಳ ಗೆಳತಿಯರೊಡನೆ ಹೋಗಲು ಪ್ರಾರಂಭಿಸಿದ್ದಳು. ಗೆಳತಿಯರೊಡನೆ ಹೋದರೂ ನನ್ನೊಡನೆಯೂ ಒಮ್ಮೆ ಸುತ್ತಲು ಖುಷಿಯಿಂದಲೇ ಬರುತ್ತಾಳೆ. 
   ವಸ್ತು ಪ್ರದರ್ಶನಗಳಲ್ಲಿ ಈರುಳ್ಳಿ ಕತ್ತರಿಸುವ ಯಂತ್ರ ಪರಿಕರಗಳನ್ನು ನೋಡಿ ಅವರು ಚಕಚಕ ಕತ್ತರಿಸುವ ಪರಿಗೆ ಮಾರು ಹೋಗಿ ನಾನು ನಾಲ್ಕಾರು ಯಂತ್ರ ಕೊಂಡದ್ದಿದೆ. ಆದರೆ ಮನೆಗೆ ಬಂದು ನಾನು ಕತ್ತರಿಸಲು ನೋಡಿದರೆ ನನಗೆ ಅಷ್ಟು ಸುಲಭವಾಗಿ ಆಗದೆ ಇದರಿಂದ ಚೂರಿಯಲ್ಲಿ ಹೆಚ್ಚುವುದೇ ಸುಲಭವೆಂದು ಅವೆಲ್ಲ ಈಗ ಅಟ್ಟ ಸೇರಿವೆ. ಈಗ ಈರುಳ್ಳಿ ಕತ್ತರಿಸುವ ನಾನಾ ವಿಧಗಳ ಯಂತ್ರಗಳು ವಸ್ತು ಪ್ರದರ್ಶನಗಳಲ್ಲಿ ಕಂಡರೂ ಅವರು ಸಲೀಸಾಗಿ ಹೆಚ್ಚುವ ಪರಿಗೆ ಮಾರು ಹೋಗಿ, ಒಂದು ಕ್ಷಣ ನೋಡುತ್ತ ನಿಂತು ಅವನ್ನು ಕೊಳ್ಳದೆಯೇ ಇರಲು ಗಟ್ಟಿ ಮನಸ್ಸು ಮಾಡಿ ಹಿಂತಿರುಗುವುದರಲ್ಲಿ ಯಶ ಸಾಧಿಸಿದ್ದೇನೆ! ಕಳೆದ ವರ್ಷ ನನ್ನ ಅತ್ತಿಗೆ ತರಕಾರಿ, ಈರುಳ್ಳಿ ಕತ್ತರಿಸುವ ಪುಟ್ಟ ಯಂತ್ರವೊಂದನ್ನು ಉಡುಗೊರೆ ನೀಡಿದ್ದಾಳೆ. ಅದು ಬಹಳ ಚೆನ್ನಾಗಿ ತರಕಾರಿ, ಈರುಳ್ಳಿ, ಇತ್ಯಾದಿಗಳನ್ನು ಕತ್ತರಿಸಿ ಕೊಟ್ಟು ನನ್ನ ಶ್ರಮ ಹಗುರಗೊಳಿಸಿದೆ. ಹಾಗಾಗಿ ಈಗ ಈರುಳ್ಳಿ ಹೆಚ್ಚಲು ಕಣ್ಣೀರು ಸುರಿಸುವ ಪ್ರಸಂಗದಿಂದ ವಿಮುಕ್ತಿ ದೊರೆತಿದೆ. 
  ಕಳೆದ ವರ್ಷ ಸುತ್ತೂರು ಜಾತ್ರೆಗೆ ಹೋಗಿದ್ದಾಗ ಮರದಲ್ಲಿ ತಯಾರಿಸಿದ ಪುಟ್ಟದಾದ ಒತ್ತು ಶ್ಯಾವಿಗೆ ಮಣೆ ಸಂತೆಯಲ್ಲಿ ಕಂಡದ್ದೇ ಪ್ರೀತಿ ಉಕ್ಕಿ ಹರಿದು ಅದು ನಮ್ಮ ಮನೆಯಲ್ಲಿ ಇರದಿದ್ದರೆ ಹೇಗೆ ಎಂದು ಅದನ್ನು  ರೂ. ೧೫೦ಕ್ಕೆ (ಹೆಚ್ಚು ಚೌಕಾಸಿ ಮಾಡದೆಯೇ) ಕೊಂಡುಕೊಂಡೆ. ಎಲ್ಲಾದರೂ ಶ್ಯಾವಿಗೆ ಮಾಡಲಾಗದಿದ್ದರೂ ಪರವಾಗಿಲ್ಲ. ಅಲಂಕಾರಕ್ಕಾದರು ಇರಲಿ ಎಂದು ಅದರ ಅಂದಚಂದ ನೋಡಿ ಮರುಳಾಗಿ ಕೊಳ್ಳದೆ ಇರಲು ಸಾಧ್ಯವಾಗಲಿಲ್ಲ!  ತಂದಮೇಲೆ ಅದರಲ್ಲಿ ಶ್ಯಾವಿಗೆ ಪ್ರಯೋಗ ಮಾಡದಿದ್ದರೆ ಹೇಗೆ? ಒಂದು ಬೆಳಗ್ಗೆ ಪ್ರಯೋಗಿಸಿದ್ದಾಯಿತು. ಪರವಾಗಿಲ್ಲ ಒತ್ತಲು ಸುಲಭವಾಗುತ್ತದೆ ಎಂದು ತಿಳಿಯಿತು. ಅದರ ಚಿತ್ರವನ್ನು ಫೇಸ್ಬುಕ್ಕಿಗೆ ಹಾಕಿದ್ದಾಯಿತು. ದೂರದ ಊರಲ್ಲಿರುವ ಮಗಳು ಅದನ್ನು ನೋಡಿ ನನಗೂ ಬೇಕು ಎಂಬ ಬೇಡಿಕೆ ಇಟ್ಟಳು. ಸಂತೆಯಲ್ಲಿ ಖರ್ಚಾಗಿ ಹೋಗಿ ಮಗಳಿಗೆ ಸಿಕ್ಕದಿದ್ದರೆ ಎಂದು ಮಾರನೇದಿನವೇ ಪುನಃ ಸುತ್ತೂರಿಗೆ ದೌಡಾಯಿಸಿ ಹೋಗಿ ಇನ್ನೊಂದು ಶ್ಯಾವಿಗೆಮಣೆ ತಂದೆ! ನಮ್ಮ ನೆಂಟರು ಫೇಸ್ಬುಕ್ ಗೋಡೆ ಮೇಲೆ ನೋಡಿ ಅವರಿಗೂ ಬೇಕು ಎಂದು ಬೇಡಿಕೆ ಇಟ್ಟರು. ಅನಂತ ಮತ್ತು ಅಣ್ಣನ ಮಗ ಅಕ್ಷಯ ಹಾಗೂ ಅವರ ಸ್ನೇಹಿತ ಈಶ್ವರ ಮಾರನೆದಿನ ಸುತ್ತೂರಿಗೆ ಹೋಗುವವರಿದ್ದರು. ಮೂವರನ್ನೂ ಕೂರಿಸಿ ಶ್ಯಾವಿಗೆ ಮಣೆ ತೋರಿಸಿ ಹೀಗೀಗೆ ಇರಬೇಕು ಮಣೆ. ಒಳಗೆ ಕೈ ಹಾಕಿ ನೋಡಬೇಕು. ನಯವಾಗಿ ಇರಬೇಕು ಎಂದೆಲ್ಲ ಪಾಟ ಮಾಡಿ ಎರಡು ಮಣೆ ತನ್ನಿ ಎಂದು ಕಳುಹಿಸಿದೆ. (ಇನ್ಯಾರಾದರೂ ನೋಡಿ ನಮಗೂ ಬೇಕು ಅಂದರೆ ಇರಲಿ ಎಂದು ಒಂದು ಹೆಚ್ಚೇ ತರಲು ಹೇಳಿದ್ದೆ!) ನನ್ನ ಪಾಟ ಕೇಳಿದ ಅವರು ಎರಡು ಶ್ಯಾವಿಗೆ ಮಣೆಯನ್ನೇನೋ ತಂದರು. ಆದರೆ ನಾನು ಮಾಡಿದ ಪಾಟ ಸಮುದ್ರದಲ್ಲಿ ಮಾಡಿದ ಹೋಮದಂತಾಗಿದ್ದು ಮಾತ್ರ ವಿಪರ್ಯಾಸ! ಪಾಟ ಒಂದು ಚೂರೂ ಪ್ರಯೋಜನಕ್ಕೆ ಬರದೆ, ಪರಿಣಾಮಕಾರಿಯಾಗಿ ಪಾಟ ಮಾಡಲು ನಾನು ಶಕ್ತಳಾಗಲಿಲ್ಲವಲ್ಲ ಎಂದು ತಿಳಿದು ನನ್ನಮೇಲೆಯೇ ಸಿಟ್ಟು ಬಂತು! ಅವರು ತಂದ ಶ್ಯಾವಿಗೆ ಮಣೆ ಒಂದರಲ್ಲಿ ಮರ ಕಳಪೆಯಾಗಿ ಬಣ್ಣ ಬಿಡುತ್ತಿತ್ತು! ಇನ್ನೊಂದರದ್ದು ಕೈ ಸೀಳುಬಿಟ್ಟಿತ್ತು, ಹಿಟ್ಟು ಹಾಕುವಲ್ಲಿ ಒಳಗೆ ಟೊಳ್ಳಾಗಿ ಪೊಟರೆ ಇತ್ತು! ಅದರೊಳಗೆ ಹಿಟ್ಟು ಹಾಕಿದರೆ ಕೆಳಗೆ ಶ್ಯಾವಿಗೆ ಇಳಿಯಲಿಕ್ಕಿಲ್ಲ. ಹಿಟ್ಟೆಲ್ಲ ಪೊಟರೆಯೊಳಗೆ ಹೋಗಿ ನಿಂತೀತು! ಈಶ್ವರ ಅವರು ನೋಡಿ ಕೂಲಂಕಷವಾಗಿ ಪರೀಕ್ಷೆ ಮಾಡಿಯೇ ತಂದದ್ದಂತೆ ಎಂದು ಅಕ್ಷಯ ಹೇಳಿದ. ಯಾವುದೇ ಒಂದು ವಸ್ತು ಖರೀದಿ ಮಾಡಿ ವ್ಯಾಪಾರ ಮಾಡುವಲ್ಲಿ ಸಾಮಾನ್ಯವಾಗಿ ಹೆಂಗಸರಿಗೆ ಇರುವ ಜಾಣ್ಮೆ ಗಂಡಸರಿಗೆಲ್ಲಿ ಬರಬೇಕು ಎಂದು ಮನವರಿಕೆಯಾಯಿತು! (ಗಂಡಸರು ಸಿಟ್ಟಾಗಬೇಡಿ. ಇದು ನನಗಾದ ಅನುಭವ!) ಅವರು ತಂದ ಶ್ಯಾವಿಗೆ ಮಣೆ ಶೋಕೇಸಿನಲ್ಲಿ ಕೂರಲು ಲಾಯಕ್ಕು. ಪರವಾಗಿಲ್ಲ, ಶ್ಯಾವಿಗೆಮಣೆ ತಯಾರಿಸಿದವರಿಗೆ ಅವರ ಸರಕು ಮಾರಾಟವಾಗಿ ಜೀವನಕ್ಕೆ ದಾರಿಯಾಯಿತಲ್ಲ ಎಂದು ದುಡ್ಡು ದಂಡ ಮಾಡಿದ ನನ್ನನ್ನು ನಾನೇ ಸಂತೈಸಿಕೊಂಡೆ! 
   ಈ ವರ್ಷವೂ ಸಹರ ವಸ್ತು ಪ್ರದರ್ಶನಕ್ಕೆ ಎಂದಿನಂತೆಯೇ ಹೋದೆ. ಎಲ್ಲ ಒಂದು ಸುತ್ತು ನೋಡಿ ಏನೂ ಕೊಳ್ಳದೆಯೇ ಹೊರಗೆ ಬಂದೆ. ಪಿಂಗಾಣಿ ಜಾಡಿಗಳು ಪುಟ್ಟದು ದೊಡ್ಡದು ಎಂದು ಎಲ್ಲವೂ ಚಂದವಾಗಿದ್ದುವು. ನೋಡಿ ಕೈಯಲ್ಲಿ ಮುಟ್ಟಿ ತೃಪ್ತಿ ಪಟ್ಟು ಹಾಗೆಯೇ ಇಟ್ಟು ಹಿಂದಕ್ಕೆ ಬಂದಾಗ ಅಲ್ಲಿ ಮಣ್ಣಿನ ಮಡಕೆಗಳು ಗಮನ ಸೆಳೆದುವು. ಅವನ್ನೂ ನೋಡಿ ಆಹಾ ಚಂದವೇ ಒಂದಕ್ಕಿಂದ ಒಂದು ಚಂದ ಎಂದು ನೋಡಿ ತೃಪ್ತಿಪಟ್ಟು,  ಅದರ ವಾರಾಸುದಾರನಿಗೆ ಅವನು ತಂದ ಮಾಲಿನ ಬಗ್ಗೆ ಹೊಗಳಿದೆ. ಕೊಳ್ಳುವ ಮನಸ್ಸಾದರೂ ಕೊಳ್ಳದೆ ಇರಲು ಮನೋನಿಗ್ರಹಗೊಳಿಸಿ ಮನೆಗೆ ಬಂದೆ. ಮನೆಗೆ ಬಂದಮೇಲೆ ಛೇ! ಒಂದಾದರೂ ಮಡಕೆ ಕೊಳ್ಳಬೇಕಿತ್ತು ಎಂದು ಪರಿತಪಿಸಿದೆ. 
   ರಾತ್ರೆಯೆಲ್ಲ ಮಡಕೆಗಳೇ ಕಣ್ಣಮುಂದೆ ಬಂದು ನರ್ತಿಸಿದ ಪರಿಣಾಮ ಸರಿ ನಿದ್ರೆ ಬರದೆ ಇನ್ನು ಮಡಕೆ ಕೊಳ್ಳದೆ ವಿಧಿಯಿಲ್ಲ ಎನ್ನುವಂತಾಯಿತು. ಬೆಳಗ್ಗೆ ಎದ್ದು ಕೆಲಸವೆಲ್ಲ ಮುಗಿದಬಳಿಕ ಸಹರಕ್ಕೆ ಗಾಡಿ ಓಡಿಸಿದೆ. ಅಲ್ಲಿ ಆ ಮಡಕೆ ಈ ಮಡಕೆ ಎಂದು ಕೈಗೆತ್ತಿ ಅಳೆದು ಸುರಿದು ಒಂದು ದೊಡ್ಡದು ಮಗದೊಂದು ಚಿಕ್ಕ ಮಡಕೆ ರೂ. ೩೫೦ಕ್ಕೆ ಅವರು ಹೇಳಿದ ಬೆಲೆಗಿಂತ ಇಪ್ಪತ್ತು ರೂ. ಕಡಿಮೆ ಕೊಟ್ಟು ಕೊಂಡುಕೊಂಡೆ. ಹೆಚ್ಚು ಚೌಕಾಸಿ ಮಾಡಲು ನನಗೆ ಮನಸ್ಸು ಬರುವುದಿಲ್ಲ. ಚೌಕಾಸಿ ಮಾಡಿದರೆ ಎಲ್ಲಿ ಅವರಿಗೆ ನಷ್ಟವಾದೀತೋ ಎಂದೇ ಕಾಣುತ್ತದೆ. ‘ಮಡಕೆಯಲ್ಲಿ ಅಡುಗೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಮ್ಮ, ಇವು ಅಂತಿಂತ ಮಡಕೆಗಳಲ್ಲ ಇದನ್ನು ನಾವು ಸ್ಪೆಷಲ್ಲಾಗಿ ಗ್ಯಾಸ್ ಮೇಲೆ ಇಡಲು ತಯಾರು ಮಾಡಿರುವುದು. ಆಂಧ್ರದಿಂದ ತರಿಸುವುದು. ತರುವಾಗ ಡ್ಯಾಮೇಜು ಆಗುತ್ತವೆ. ನಷ್ಟವೂ ಆಗುತ್ತದೆ’ ಎಂದು ಅಂಗಡಿಯವ ಹೇಳಿದ. ಒಬ್ಬ ಮಹಿಳೆ ಮೂರು ನಾಲ್ಕು ಮಡಕೆ ಚೌಕಾಸಿ ಮಾಡಿ ಕೊಂಡುಕೊಂಡರು. 
      ಮಾರನೇ ದಿನವೇ ಮಡಕೆ ತೊಳೆದು ಅದರಲ್ಲಿ ಬೆಂಡೆಕಾಯಿ ಸಾಂಬಾರು ಮಾಡಿದೆ. ಸಾಂಬಾರು ಎಂದಿಗಿಂತ ರುಚಿಯಾಗಿದೆಯಲ್ಲ ಎನಿಸಿತು. ಅರೆ ನಾನು ಮಾಡಿದ ಅಡುಗೆಯೂ ರುಚಿಯಾಗಿರುತ್ತದೆ ಎಂದು ಮನವರಿಕೆಯಾಯಿತು. ಗೆಳತಿ ಲಲಿತಾ ಬಂದವಳು ಊಟಮಾಡಿ ಸಾಂಬಾರು ಅದ್ಭುತ ರುಚಿಯಾಗಿದೆ ಎಂದಾಗ ಅದೆಲ್ಲ ಮಡಕೆ ಮಹಿಮೆ ಎಂದೆ. ಮತ್ತೊಂದು ದಿನ ಎಳೆಹಲಸಿನ ಕಾಯಿಯ ಪಲ್ಯ ಮಾಡಿದೆ. ಅದೂ ಉತ್ಕೃಷ್ಟ ಮಟ್ಟದಲ್ಲಿ ರುಚಿಯಾಗಿತ್ತು. ಮಡಕೆ ಕೊಂಡದ್ದೂ ಸಾರ್ಥಕ ಎನಿಸಿತು! ಮೊಸರು ನಾನು ತಿನ್ನುವುದಿಲ್ಲ. ಹಾಗಾಗಿ ನನಗೆ ಮೊಸರು ಮಾಡಲು ಬರುವುದಿಲ್ಲ ಎಂಬ ಅಪವಾದ ನನಗಂಟಿತ್ತು. ಮಡಕೆಯಲ್ಲಿ ಹಾಲು ಹಾಕಿ ಹೆಪ್ಪು ಹಾಕಿದೆ. ಆ ದಿನ ಬಲು ರುಚಿ ಇತ್ತಂತೆ ಮೊಸರು. ಆಹಾ ನನ್ನ ಮೇಲಿದ್ದ ಅಪವಾದವನ್ನು ಮಡಕೆ ಹೋಗಲಾಡಿಸಿತು. ಮಡಕೆಗೆ ಜೈ. ಬಲಗೈಬಂಟಿ ಸಿದ್ದಮ್ಮ ಮಾತ್ರ ನನ್ನ ಈ ಹುಚ್ಚಿಗೆ ಬೈದುಕೊಂಡಿರಬಹುದು. ಒಡೆಯದಂತೆ ಜೋಪಾನವಾಗಿ ಮಡಕೆ ಹಿಡಿದು ಉಜ್ಜಬೇಕಲ್ಲ. ಮಡಕೆ ಎಷ್ಟು ತೊಳೆದರೂ ಉಜ್ಜಿದರೂ ಬೇಗ ಚೊಕ್ಕವಾಗುವುದಿಲ್ಲ. ಮೊಸರು ಪಾತ್ರೆಗೆ ಬಿಸಿನೀರು ಹಾಕದೆ ಇದ್ದರೆ ಚೊಕ್ಕವಾಗುವುದೇ ಇಲ್ಲ!  

   ಮಡಕೆಯಲ್ಲಿ ಮಾಡಿದ ಅಡುಗೆ ನಮ್ಮ ಮನೆಯವರಿಗೆ ಮಾತ್ರ ರುಚಿಯಾದರೆ ಸಾಕೆ? ಮಾಡಿದ ಅಡುಗೆಯನ್ನು ಮಡಕೆ ಸಮೇತ ಚಿತ್ರ ಕ್ಲಿಕ್ಕಿಸಿ ಫೇಸ್ಬುಕ್ಕಿಗೆ ಹಾಕಿದೆ. ಅದನ್ನು ನೋಡಿದ ಹಳ್ಳಿಯಲ್ಲಿರುವ ನಮ್ಮ ನೆಂಟರು ಅಟ್ಟದಿಂದ ಮಡಕೆ ಇಳಿಸಿಕೊಳ್ಳಬೇಕು ಎಂಬ ಮನಸ್ಸಾಗಿದೆ ಎಂದು ಉತ್ತರ ಕೊಟ್ಟರು. ಮೈಸೂರಲ್ಲಿರುವ ಒಬ್ಬ ಗೆಳತಿ ನೋಡಿ, ಸಹರಕ್ಕೆ ಹೋಗಿ ಎರಡು ಮಡಕೆ ತಂದು ಅದರಲ್ಲಿ ಅಡುಗೆ ಮಾಡಿ ವಾಟ್ಸಪಿನಲ್ಲಿ ಅದರ ಚಿತ್ರ ಕಳುಹಿಸಿ ಆಹಾ ಎಷ್ಟು ಚೆನ್ನ ಅದರ ರುಚಿ ಎಂದು ಹಾಕಿದರು! 
     ಆಂಧ್ರದಿಂದ ಮಡಕೆಗಳನ್ನು ಮೈಸೂರಿಗೆ ತರಿಸಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅದನ್ನು ಇಲ್ಲಿ ಮಾರಾಟ ಮಾಡಿ ಅವನ ಜೀವನದ ದಾರಿ ಕಂಡುಕೊಂಡ ವ್ಯಾಪಾರಿಗೆ ನಮೋನಮಃ! ನಾನು ಮಡಕೆ ಕೊಂಡು ಅದರ ಚಿತ್ರ ಫೇಸ್ಬುಕ್ಕಿಗೆ ಹಾಕಿದಾಗ ಅದನ್ನು ನೋಡಿದ ನನ್ನ ಗೆಳತಿ ಮಡಕೆ ಕೊಂಡು ಅವರು ಅದನ್ನು ಫೇಸ್ಬುಕ್ಕಿಗೆ ಹಾಕಿ ಅವರ ಗೆಳತಿಯರು ಮೆಚ್ಚಿ ಅವರು ಮಡಕೆ ಕೊಂಡು ತಂದು ಹೀಗೆಯೇ ಸರಪಳಿ ಮುಂದುವರಿದು ಮಡಕೆ ತಯಾರಿಸಿದವರ ಜೀವನ, ಅದನ್ನು ಮಾರಿದವರ ಜೀವನ ಸುಖಮಯವಾಗಿ ನಡೆಯುತ್ತ, ಈ ಕೊಂಡಿ ಹೀಗೆಯೇ ಸಾಗುತ್ತ ಸಮಾಜದಲ್ಲಿರುವ ಜನರು ಸುಖೀ ಜೀವನ ನಡೆಸುವಂತಾಗಲಿ ಎಂದೇ ನಮ್ಮ ಹಾರೈಕೆ. ಜಡವಸ್ತುಗಳ ಮೋಹ ಹೀಗೆಯೇ ಮುಂದುವರಿಯುತ್ತಿರಲಿ! ಜೈ ಜಡವಸ್ತುಗಳಿಗೆ ಮಾರಾಟಮಾಡುವವರ ಬಾಳ್ಗೆ! 













1 ಕಾಮೆಂಟ್‌: